Tag: Coronavirus

  • ಗ್ರಾಹಕರ ತಿಂಗಳ ಬಡ್ಡಿಯನ್ನು ಬ್ಯಾಂಕ್ ಮನ್ನಾ ಮಾಡಲಿ: ಡಿ.ಕೆ.ಶಿವಕುಮಾರ್

    ಗ್ರಾಹಕರ ತಿಂಗಳ ಬಡ್ಡಿಯನ್ನು ಬ್ಯಾಂಕ್ ಮನ್ನಾ ಮಾಡಲಿ: ಡಿ.ಕೆ.ಶಿವಕುಮಾರ್

    ತುಮಕೂರು: ಸರ್ಕಾರ ಒಂದು ತಿಂಗಳ ಬ್ಯಾಂಕ್ ಗ್ರಾಹಕರ ಬಡ್ಡಿ ಮನ್ನಾ ಮಾಡಲಿ. ಒಂದು ತಿಂಗಳ ಇಎಂಐಗಳನ್ನ ಮುಂದೂಡಬೇಕೆಂದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲೂ ಕೊರೊನಾ ವೈರಸ್ ಮುನ್ನೆಚ್ಚರಿಕೆಯಾಗಿ ನಿರಂತರ ರಜೆ ಘೋಷಣೆ ಮಾಡಲಾಗಿದೆ. ಇದರಿಂದ ಜನರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. 15 ದಿನಗಳ ರಜೆ 1 ತಿಂಗಳು ಆದರೂ ಆಗಬಹುದು. ಹಾಗಾಗಿ ಬ್ಯಾಂಕ್ ಗ್ರಾಹಕರಿಗೆ ಇಎಂಐ ಕಟ್ಟಲು ಕಷ್ಟವಾಗುತ್ತಿದೆ. ಬಡ್ಡಿ ಮನ್ನಾ ಮಾಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಡಿಕೆಶಿ ಮನವಿ ಮಾಡಿದರು.

    ಆರೋಗ್ಯ ವಿಚಾರದಲ್ಲಿ ನಾನು ರಾಜಕೀಯ ಮಾಡೋಕೆ ಹೋಗಲ್ಲ. ಈಗ ನಮ್ಮ ಜನಗಳನ್ನ ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಕೊರೊನಾ ವಿಚಾರದಲ್ಲಿ ಸರ್ಕಾರ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದೆ ಎಂದರು. ಉನ್ನತ ಮಟ್ಟದ ವೈದ್ಯರ ಸಭೆ ಕರೆದು ಹೊಣೆಗಾರಿಕೆಯನ್ನಾಗಿಸಬೇಕು. ಸೇವಾ ಮನೋಭಾವದಿಂದ ಕೆಲಸ ಮಾಡಲು ಖಾಸಗಿ ಅವರಿಗೂ ಸೂಚಿಸಬೇಕು ಅಂತ ಸಲಹೆ ನೀಡಿದ್ದಾರೆ.

    ಇದೇ ವೇಳೆ ಡಿ.ಕೆ.ಶಿವಕುಮಾರ್ ಭೇಟಿಗಾಗಿ ಶ್ರೀಮಠದ ಆವರಣದ ಬಳಿ ನೂರಾರು ಕಾರ್ಯಕರ್ತರು ಜಮಾವಣೆಯಿಂದ ನೂಕುನುಗ್ಗಲು ಉಂಟಾಗಿತ್ತು. ಇದನ್ನ ಸಮರ್ಥಿಸಿಕೊಂಡ ಡಿಕೆಶಿ, ನಾನೇನು ಅವರನ್ನ ಬರಲು ಹೇಳಿಲ್ಲ. ಅಭಿಮಾನದಿಂದ ಬಂದಾಗ ಏನು ಮಾಡೋಕೆ ಆಗಲ್ಲ. ಅವರ ಹುರುಪನ್ನ ಕಡಿಮೆ ಮಾಡಲು ಆಗಲ್ಲ ಎಂದರು.

  • ಕಲಬುರಗಿ ಜಿಲ್ಲೆಯಲ್ಲಿ ಇಂದು ಸಂಜೆಯಿಂದ ನಿಷೇಧಾಜ್ಞೆ ಜಾರಿ

    ಕಲಬುರಗಿ ಜಿಲ್ಲೆಯಲ್ಲಿ ಇಂದು ಸಂಜೆಯಿಂದ ನಿಷೇಧಾಜ್ಞೆ ಜಾರಿ

    ಕಲಬುರಗಿ: ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತ ಕ್ರಮವಾಗಿ ಕಲಬುರಗಿ ನಗರದ ವಾರ್ಡ್ ನಂಬರ್ 30ರ ಜೊತೆ 14ಅನ್ನು ಕೂಡ ಕಂಟೇನ್‍ಮೆಂಟ್ ಝೋನ್ ಎಂದು ಗುರುತಿಸಿ ಎರಡು ವಾರ್ಡ್ ಗಳಲ್ಲಿ ಸ್ಯಾನಿಟೇಷನ್ ಮಾಡಲಾಗಿದೆ.

    ಕೋವಿಡ್-19 ಪರೀಕ್ಷೆಗೆ ನವದೆಹಲಿಯಿಂದ ಈಗಾಗಲೇ ರಿ-ಏಜೆಂಟ್ ಬಂದಿದ್ದು, ಮಾರ್ಚ್ 21ರಿಂದ ಪ್ರಯೋಗಾಲಯ ಆರಂಭವಾಗಲಿದೆ. ಮಹಾರಾಷ್ಟ್ರದಲ್ಲಿ ಹೆಚ್ಚಿನ ಕೊರೊನಾ ಸೋಂಕು ಕಂಡು ಬಂದಿರುವುದರಿಂದ ಜಿಲ್ಲೆಯಿಂದ ಮಹಾರಾಷ್ಟ್ರಕ್ಕೆ ಹೋಗುವ ಮತ್ತು ಅಲ್ಲಿಂದ ಬರುವ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಬಸ್‍ಗಳ ಸೇವೆ ರದ್ದುಗೊಳಿಸಲಾಗಿದೆ.

    ಸಾಮಾಜಿಕ ಜಾಲತಾಣದಲ್ಲಿ ಬರುವ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ. ಸುಳ್ಳು ಸುದ್ದಿ ಹರಿಸಿದರೆ ಅಂತವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕೊರೊನಾ ಸಹಾಯವಾಣಿ ಕೇಂದ್ರಗಳನ್ನು 2ರಿಂದ 4ಕ್ಕೆ ಹೆಚ್ಚಳ ಮಾಡಲಾಗಿದೆ. ಈ ಮೂಲಕ ಯಾವುದೇ ಆತಂಕ ಇದ್ದಲ್ಲಿ ಸಹಾಯವಾಣಿ ಸಂಖ್ಯೆ: 08472-278648, 278698, 278604, 278677 ನಂಬರಿಗೆ ಕರೆ ಮಾಡಬಹುದು ಎಂದು ಜಿಲ್ಲಾಧಿಕಾರಿ ಬಿ.ಶರತ್ ತಿಳಿಸಿದ್ದಾರೆ.

    ಸಹಾಯವಾಣಿಗೆ ಹುಸಿ ಕರೆ ಮಾಡಿದ್ದವರನ್ನು ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ. ಸರ್ಕಾರಿ ವ್ಯವಸ್ಥೆಯಲ್ಲಿ 32 ವೆಂಟಿಲೇಟರ್ ಲಭ್ಯವಿದ್ದು, ಜಿಮ್ಸ್ ಮತ್ತು ಇ.ಎಸ್.ಐ.ಸಿ.ಯ ಐಸೋಲೇಷನ್ ವಾರ್ಡ್ ನಲ್ಲಿ ತಲಾ 2 ವೆಂಟಿಲೇಟರ್ ಗಳು ಕೊರೊನಾ ಸೋಂಕಿತ ರೋಗಿಗಳ ಚಿಕಿತ್ಸೆಗೆ ಮೀಸಲಿರಿಸಲಾಗಿದೆ. ಅಗತ್ಯವಿದ್ದಲ್ಲಿ ಹೆಚ್ಚಿನ ವೆಂಟಿಲೇಟರ್ ಗಳನ್ನು ತರಿಸಲಾಗುವುದು ಎಂದು ಡಿಸಿ ಮಾಹಿತಿ ನೀಡಿದ್ದಾರೆ.

  • ಕೊರೊನಾ ಎಫೆಕ್ಟ್- ಸ್ಯಾನಿಟೈಜರ್‌ಗಿಂತಲೂ ಕಾಂಡೋಮ್‍ಗಳಿಗೆ ಭಾರೀ ಬೇಡಿಕೆ

    ಕೊರೊನಾ ಎಫೆಕ್ಟ್- ಸ್ಯಾನಿಟೈಜರ್‌ಗಿಂತಲೂ ಕಾಂಡೋಮ್‍ಗಳಿಗೆ ಭಾರೀ ಬೇಡಿಕೆ

    – ಮೂರು ತಿಂಗಳು ತಾಯ್ತನ ಮುಂದೂಡಲು ವೈದ್ಯರ ಸಲಹೆ
    – ಕಾಂಡೋಮ್ ಕಂಪನಿಗಳ ಷೇರು ಖರೀದಿಸುತ್ತಿದ್ದಾರೆ ಜನ

    ಲಂಡನ್: ಕೊರೊನಾ ವೈರಸ್ ಪೀಡಿತ ಪ್ರದೇಶಗಳ ಮಳಿಗೆಗಳಲ್ಲಿ ಟಾಯ್ಲೆಟ್ ಪೇಪರ್ ಹಾಗೂ ಹ್ಯಾಂಡ್ ಸ್ಯಾನಿಟೈಜರ್‌ಗಿಂತಲೂ ಕಾಂಡೋಮ್‍ಗಳೇ ಹೆಚ್ಚಾಗಿ ಮಾರಾಟವಾಗುತ್ತಿವೆ. ಚಿಲ್ಲರೆ ವ್ಯಾಪಾರಿಗಳು ಇದ್ದಕ್ಕಿದ್ದಂತೆ ಕಾಂಡೋಮ್ ಕೊರತೆಯನ್ನು ಅನುಭವಿಸುತ್ತಿದ್ದಾರೆ ಎಂದು ಇಂಗ್ಲೆಂಡ್‍ನ ಸ್ಥಳೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

    ಕೆಲವು ಜನರು ಆಹಾರ ಹಾಗೂ ಸ್ವಚ್ಛತೆಗೆ ಬಳಸುವ ಉತ್ಪನ್ನಗಳನ್ನು ಸಂಗ್ರಹಿಸಲು ಪ್ರಾರಂಭಿಸಿದ್ದಾರೆ. ಆದರೆ ಕೆಲವರು ಕಾಂಡೋಮ್‍ಗಳನ್ನು ಸಂಗ್ರಹಿಸುತ್ತಿದ್ದಾರೆ. ವಾಸ್ತವವಾಗಿ ಅಧ್ಯಯನಗಳ ಪ್ರಕಾರ, ಕೊರೊನಾ ಭೀತಿ ಹೀಗೆ ಮುಂದುವರಿದರೆ ಲೈಂಗಿಕ ಸಂಪರ್ಕ ಕಷ್ಟವಾಗುತ್ತದೆ. ಹೀಗಾಗಿ ಹೆಚ್ಚಿನ ದಂಪತಿ ಕಾಂಡೋಮ್‍ಗಳನ್ನು ಹೆಚ್ಚಾಗಿ ಖರೀದಿಸಿ ಸಂಗ್ರಹಿಸಿಕೊಟ್ಟುಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಮಾಸ್ಕ್ ಕೊರತೆ ನೀಗಿಸಲು ಮುಂದಾದ ಮಹಿಳಾ ಸ್ವಸಹಾಯ ಸಂಘ

    ಮಾಧ್ಯಮವೊಂದರ ಪ್ರಕಾರ, ಚೀನಾದಲ್ಲಿ ಮಾಸ್ಕ್, ವೈದ್ಯಕೀಯ ಸಾಮಗ್ರಿಗಳಂತೆ ಕಾಂಡೋಮ್‍ಗಳು ಕೂಡ ಭಾರೀ ಸಂಖ್ಯೆಯಲ್ಲಿ ಮಾರಟವಾಗುತ್ತಿವೆ. ಜಾಗತಿಗ ಮಾರುಕಟ್ಟೆ ಕುಸಿಯುತ್ತಿರುವ ಸಂದರ್ಭದಲ್ಲಿಯೂ ಕಾಂಡೋಮ್ ಕಂಪನಿಗಳು ಆರ್ಥಿಕವಾಗಿ ಭರ್ಜರಿ ಲಾಭ ಗಳಿಸುತ್ತಿವೆ. ಜನರು ಕಾಂಡೋಮ್ ಕಂಪನಿಗಳ ಷೇರನ್ನು ಹೆಚ್ಚು ಖರೀದಿಸುತ್ತಿದ್ದಾರೆ. ಇದನ್ನೂ ಓದಿ: ಕೊರೊನಾ ಎಫೆಕ್ಟ್ – ರಾಜಾಮೌಳಿ ಆರ್‌ಆರ್‌ಆರ್ ಸಿನಿಮಾದಿಂದ ಆಲಿಯಾ ಔಟ್

    ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಡೇಟಿಂಗ್ ವೇಳೆಯೂ ಪ್ರಮುಖ ಕಾಳಜಿವಹಿಸಬೇಕಾಗುತ್ತದೆ. ಡೇಟಿಂಗ್ ಅಪ್ಲಿಕೇಶನ್‍ಗಳು ಈಗ ಬಳಕೆದಾರರಿಗೆ ಜಾಗೃತಿಯ ಬಗ್ಗೆ ಗಮನಹರಿಸಬೇಕು ಎಂದು ತಿಳಿಸುತ್ತಿವೆ. ಜೊತೆಗೆ ಕೊರೊನಾ ಸೋಂಕು ಎಲ್ಲೆಡೆ ಹರಡುತ್ತಿರುವ ಹಿನ್ನೆಲೆ ಮೂರು ತಿಂಗಳುಗಳ ಕಾಲ ತಾಯ್ತನ ಮುಂದೂಡಿಕೆ ಮಾಡಿಕೊಂಡರೆ ಒಳ್ಳೆಯದು ಎಂದು ಅನೇಕ ವೈದ್ಯರು ಸಲಹೆ ನೀಡಿದ್ದಾರೆ.

    ಇಂಗ್ಲೆಂಡ್‍ನಲ್ಲಿ ಜನಿಸಿದ ನವಜಾತ ಶಿಶುವಿಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆ ವೈದ್ಯರು ಮಹಿಳೆಯರಿಗೆ ತಮ್ಮ ತಾಯ್ತನವನ್ನು ಮುಂದೂಡಿಕೆ ಮಾಡಿಕೊಳ್ಳಲು ಸಲಹೆ ನೀಡುತ್ತಿದ್ದಾರೆ. ಇಂಗ್ಲೆಂಡ್‍ನಲ್ಲಿ ತಾಯಿಗೆ ಸೋಂಕು ಇದ್ದ ಕಾರಣ ಅದು ಮಗುವಿಗೂ ತಗುಲಿತ್ತು. ತಾಯಿಗೆ ಹೆರಿಗೆಯ ಮೊದಲು ಕೊರೊನಾ ಸೋಂಕು ತಟ್ಟಿರುವ ಶಂಕೆ ಹಿನ್ನೆಲೆ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿತ್ತು. ಆದರೆ ಅದರ ವರದಿ ತಾಯಿ ಮಗುವಿಗೆ ಜನ್ಮ ಕೊಟ್ಟ ನಂತರ ಬಂದಿತ್ತು. ಹೀಗಾಗಿ ಆಗ ತಾನೆ ಹುಟ್ಟಿದ ಶಿಶುವಿಗೂ ಸೋಂಕು ಹರಡಿತ್ತು. ವಿಶ್ವದಲ್ಲೇ ಅತೀ ಚಿಕ್ಕ ವಯಸ್ಸಿಗೆ ಕೊರೊನಾ ಸೋಂಕು ತಟ್ಟಿದ ಪ್ರಕರಣ ಇದಾಗಿದ್ದು, ಲಂಡನ್‍ನಲ್ಲಿರುವ ಆಸ್ಪತ್ರೆಯಲ್ಲಿ ತಾಯಿ, ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಕೊರೊನಾ ಜೊತೆ ಸೆಲ್ಫಿಗೆ ಮುಂದಾದ ಜನ

    ಈ ಕುರಿತು ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ್ದ ಸ್ತ್ರಿರೋಗ ತಜ್ಞೆ ಡಾ.ಪದ್ಮಿನಿ ಪ್ರಸಾದ್, ತಾಯ್ತನ ಮಹಿಳೆಯರ ಬಾಳಿನ ಪ್ರಮುಖ ಘಟ್ಟ. ಆದರೆ ಸದ್ಯ ಎಲ್ಲೆಡೆ ಕೊರೊನಾ ವೈರಸ್ ಭೀತಿ ಇರುವ ಕಾರಣಕ್ಕೆ ತಾಯ್ತನದ ಪ್ಲಾನ್ ಮಾಡಿದ ದಂಪತಿ ಇನ್ನು ಮೂರು ತಿಂಗಳ ಕಾಲ ಈ ಪ್ಲಾನ್ ಮುಂದೂಡಿಕೆ ಮಾಡಿದರೆ ಉತ್ತಮ ಅಂತ ಪದ್ಮಿನಿ ಅವರು ಸಲಹೆ ನೀಡಿದ್ದಾರೆ. ಗರ್ಭಧಾರಣೆಯಾದರೆ ಆಸ್ಪತ್ರೆಗೆ ಭೇಟಿ ಕೊಡಬೇಕಾಗುತ್ತೆ. ಈ ಸಮಯದಲ್ಲಿ ಸೋಂಕು ತಗುಲುವ ಭೀತಿ ಇರುತ್ತೆ. ಅಲ್ಲದೇ ಗರ್ಭಧಾರಣೆಯ ಸಮಯದಲ್ಲಿ ಮಹಿಳೆಯರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡರೆ ಒಳ್ಳೆಯದು ಎಂದು ಸಲಹೆ ನೀಡಿದ್ದರು.

    ಅಷ್ಟೇ ಅಲ್ಲದೇ ಕೊರೊನಾ ಭೀತಿಯಲ್ಲಿ ರೋಗಿಗಳಿಗೆ ಆಪರೇಷನ್ ಮುಂದೂಡಿಕೆ ಮಾಡಿಕೊಳ್ಳಲು ವೈದ್ಯರು ಸಲಹೆ ನೀಡುತ್ತಿದ್ದಾರೆ. ತೀರಾ ಎಮರ್ಜೆನ್ಸಿ ಅಲ್ಲದ ನಿಗದಿಯಾಗಿರುವ ಆಪರೇಷನ್ ಮುಂದೂಡಿಕೆ ಮಾಡಲು ವೈದ್ಯರು ರೋಗಿಗಳಿಗೆ ಸೂಚಿಸುತ್ತಿದ್ದಾರೆ. ಕೊರೊನಾ ಭೀತಿಯಿಂದ ತಾಯ್ತನದ ಪ್ಲಾನ್ ಮುಂದೂಡಿಕೆ ಮಾಡೋದೋ ಬೇಡ್ವೋ ಅಂತ ಕನ್‍ಫ್ಯೂಷನ್‍ನಲ್ಲಿ ದಂಪತಿಗಳು ವೈದ್ಯರ ಮೊರೆ ಹೋಗುತ್ತಿದ್ದಾರೆ.

  • ಐಪಿಎಲ್‍ಗೆ ಆಸೀಸ್ ಸರ್ಕಾರದಿಂದ ಶಾಕ್

    ಐಪಿಎಲ್‍ಗೆ ಆಸೀಸ್ ಸರ್ಕಾರದಿಂದ ಶಾಕ್

    ಸಿಡ್ನಿ: ಶತಾಯ ಗತಾಯ ಈ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯನ್ನು ನಡೆಸಲೇಬೇಕು ಎಂದು ಬಿಸಿಸಿಐ ಹಾಗೂ ಫ್ರಾಂಚೈಸಿಗಳು ಪಣತೊಟ್ಟಿದೆ. ಆದರೆ ಒಂದಲ್ಲ ಒಂದು ವಿಘ್ನಗಳು ಎದುರಾಗುತ್ತಲೇ ಇವೆ. ಈಗ ಆಸ್ಟ್ರೇಲಿಯಾದ 17 ಆಟಗಾರರು ಐಪಿಎಲ್‍ನಲ್ಲಿ ಭಾಗವಹಿಸದಿರುವ ಸಾಧ್ಯತೆ ಹೆಚ್ಚಾಗಿದೆ.

    ಕೊರೊನಾ ವೈರಸ್ ಭೀತಿಯ ಪರಿಸ್ಥಿತಿಯಲ್ಲಿ ಪ್ರಯಾಣ ಮಾಡುವುದು ಸರಿಯಲ್ಲ ಎಂದು ಆಸ್ಟ್ರೇಲಿಯಾ ಸರ್ಕಾರ ಆಟಗಾರರಿಗೆ ಸ್ಪಷ್ಟಪಡಿಸಿದೆ. ಇದರ ಹೊರತಾಗಿಯೂ ಯಾರಾದರೂ ವಿದೇಶಕ್ಕೆ ಪ್ರಯಾಣಿಸಿದರೆ ಅದು ಸರ್ಕಾರದ ಜವಾಬ್ದಾರಿಯಲ್ಲ ಎಂದು ಪ್ರಧಾನಿ ಸ್ಕಾಟ್ ಮಾರಿಸನ್ ಆಸ್ಟ್ರೇಲಿಯಾದ ನಾಗರಿಕರಿಗೆ ಸೂಚನೆ ನೀಡಿದ್ದಾರೆ. ಮುಂದಿನ ತಿಂಗಳು ಸಹ ಈ ಸೂಚನೆ ಜಾರಿಯಲ್ಲಿರುತ್ತದೆ ಎಂದು ಸರ್ಕಾರ ಹೇಳಿದೆ. ಹೀಗಾಗಿ ಐಪಿಎಲ್‍ನಲ್ಲಿ ಭಾಗವಹಿಸುವ ಆಸ್ಟ್ರೇಲಿಯಾದ 17 ಆಟಗಾರರು ಭಾರತಕ್ಕೆ ಬರುವ ಶಂಕೆ ವ್ಯಕ್ತವಾಗಿದೆ.

    ಇದಕ್ಕೂ ಮೊದಲು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಆಟಗಾರರಿಗೆ ಐಪಿಎಲ್‍ಗಾಗಿ ನಿರಾಕ್ಷೇಪಣಾ ಪತ್ರ (ಎನ್‍ಒಸಿ) ನೀಡಿತ್ತು. ಆದರೆ ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ ಸರ್ಕಾರದ ಸೂಚನೆ ಪಾಲಿಸುವ ಸಾಧ್ಯತೆಗಳಿದೆ. ಹೀಗಾಗಿ ಆಟಗಾರರು ಐಪಿಎಲ್ ಆಡಲು ಬಯಸಿ ಯಾವುದೇ ಅಹಿತಕರ ಘಟನೆ ನಡೆದರೆ ಸರ್ಕಾರ ಜವಾಬ್ದಾರಿಯಲ್ಲ. ಅಷ್ಟೇ ಅಲ್ಲದೆ ಆಟಗಾರರು ವಿಮೆಯ ಲಾಭ ಸಿಗುವುದಿಲ್ಲ.

    ಪ್ಯಾಟ್ ಕಮ್ಮಿನ್ಸ್‌ಗೆ ಅತಿ ಹೆಚ್ಚು ಸಂಭಾವನೆ:
    ಐಪಿಎಲ್‍ನ 13ನೇ ಆವೃತ್ತಿಯಲ್ಲಿ 8 ತಂಡಗಳು ಒಟ್ಟು 64 ವಿದೇಶಿ ಆಟಗಾರರನ್ನು ಹೊಂದಿವೆ. ಈ ಪೈಕಿ ಆಸ್ಟ್ರೇಲಿಯಾ ಗರಿಷ್ಠ 17 ಆಟಗಾರರೇ ಇದ್ದಾರೆ. ಐಪಿಎಲ್‍ನ 13ನೇ ಆವೃತ್ತಿಯ ಹರಾಜಿನಲ್ಲಿ ಆಸ್ಟ್ರೇಲಿಯಾದ ಆಲ್‍ರೌಂಡರ್ ಪ್ಯಾಟ್ ಕಮ್ಮಿನ್ಸ್ ಅವರನ್ನು 15.50 ಕೋಟಿ ರೂ.ಗೆ ಅತ್ಯಂತ ದುಬಾರಿಗೆ ಖರೀದಿಯಾಗಿದ್ದಾರೆ. ಈ ಟೂರ್ನಿಯ ಇತಿಹಾಸದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ವಿದೇಶಿ ಆಟಗಾರ ಎಂಬ ಹೆಗ್ಗಳಿಗೆ ಪ್ಯಾಟ್ ಕಮ್ಮಿನ್ಸ್ ಪಾತ್ರರಾಗಿದ್ದು, ಅವರು ಕೋಲ್ಕತ್ತಾ ಪರ ಆಡಲಿದ್ದಾರೆ.

    ಯಾರಿಗೆ ಎಷ್ಟು ಸಂಭಾವನೆ?
    ಪ್ಯಾಟ್ ಕಮ್ಮಿನ್ಸ್ – ಕೋಲ್ಕತಾ – 15.50 ಕೋಟಿ ರೂ.
    ಸ್ಟೀವ್ ಸ್ಮಿತ್ – ರಾಜಸ್ಥಾನ – 12.50 ಕೋಟಿ ರೂ.
    ಗ್ಲೆನ್ ಮ್ಯಾಕ್ಸ್‌ವೆಲ್ – ಪಂಜಾಬ್ – 10.75 ಕೋಟಿ ರೂ.
    ನಾಥನ್ ಕಲ್ಪರ್ ನೈಲ್ – ಮುಂಬೈ – 8 ಕೋಟಿ ರೂ.
    ಮಾರ್ಕಸ್ ಸ್ಟೋನಿಸ್ – ದೆಹಲಿ – 4.80 ಕೋಟಿ ರೂ.
    ಆರನ್ ಫಿಂಚ್ – ಬೆಂಗಳೂರು – 4.40 ಕೋಟಿ ರೂ.
    ಕೆನ್ ರಿಚಡ್ರ್ಸನ್ – ಬೆಂಗಳೂರು – 4 ಕೋಟಿ ರೂ.
    ಅಲೆಕ್ಸ್ ಕ್ಯಾರಿ – ದೆಹಲಿ – 2.40 ಕೋಟಿ ರೂ.
    ಕ್ರಿಸ್ ಲಿನ್ – ಮುಂಬೈ – 2 ಕೋಟಿ ರೂ.

    ಮಿಚೆಲ್ ಮಾರ್ಷ್ – ಹೈದರಾಬಾದ್ – 2 ಕೋಟಿ ರೂ.
    ಜೋಶ್ ಹೇಜಲ್‍ವುಡ್ – ಚೆನ್ನೈ – 2 ಕೋಟಿ ರೂ.
    ಆಂಡ್ರ್ಯೂ ಟೈ – ರಾಜಸ್ಥಾನ – 1 ಕೋಟಿ ರೂ.
    ಕ್ರಿಸ್ ಗ್ರೀನ್ – ಕೋಲ್ಕತಾ – 20 ಲಕ್ಷ ರೂ.
    ಜೋಶುವಾ ಫಿಲಿಪ್ – ಬೆಂಗಳೂರು – 20 ಲಕ್ಷ ರೂ.
    ಡೇವಿಡ್ ವಾರ್ನರ್ – ಹೈದರಾಬಾದ್ – 12.50 ಕೋಟಿ ರೂ.
    ಬಿಲ್ಲಿ ಸ್ಟಾನ್ಲೇಕ್ – ಹೈದರಾಬಾದ್ – 50 ಲಕ್ಷ ರೂ.
    ಶೇನ್ ವ್ಯಾಟ್ಸನ್ – ಚೆನ್ನೈ – 4 ಕೋಟಿ ರೂ.

    ವೀಸಾ ಮೇಲೆ ನಿರ್ಬಂಧ:
    ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚಾಗುತ್ತಿದ್ದಂತೆ ಕೇಂದ್ರ ಸರ್ಕಾರವು ಕಳೆದ ವಾರ ವೀಸಾಗಳ ಮೇಲೆ ನಿರ್ಬಂಧಗಳನ್ನು ವಿಧಿಸಿತ್ತು. ಈ ಮೂಲಕ ಭಾರತಕ್ಕೆ ಬರುವ ವಿದೇಶಿ ಪ್ರಜೆಗಳ ವೀಸಾವನ್ನು ಮಾರ್ಚ್ 13ರಿಂದ ಏಪ್ರಿಲ್ 15ರವರೆಗೆ ರದ್ದುಗೊಳಿಸಲಾಗಿದೆ. ರಾಜತಾಂತ್ರಿಕ, ಅಧಿಕೃತ, ಯುಎನ್ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು, ಯೋಜನೆ ಮತ್ತು ಉದ್ಯೋಗ ವೀಸಾಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ. ಐಪಿಎಲ್‍ಗೆ ಬರುವ ವಿದೇಶಿ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ಬಿಸಿನೆಸ್ ವೀಸಾ ನೀಡಲಾಗುತ್ತದೆ. ಹೀಗಾಗಿ ಅವರಿಗೆ ಏಪ್ರಿಲ್ 15ರವರೆಗೂ ಭಾರತಕ್ಕೆ ಬರಲು ಅವಕಾಶವಿಲ್ಲ.

  • ಫ್ಯಾಕ್ಟ್ ಚೆಕ್: ಒಂದು ಫೇಕ್ ಮೆಸೇಜಿಗೆ ಭಯಗೊಂಡ ಬೆಂಗಳೂರಿಗರು

    ಫ್ಯಾಕ್ಟ್ ಚೆಕ್: ಒಂದು ಫೇಕ್ ಮೆಸೇಜಿಗೆ ಭಯಗೊಂಡ ಬೆಂಗಳೂರಿಗರು

    ಬೆಂಗಳೂರು: ಕೊರೊನಾ ವೈರಸ್ ವಿಚಾರದಲ್ಲಿ ಸಾಮಾಜಿಕ ಜಾಲತಾಣ ಮತ್ತು ವಾಟ್ಸಪ್‍ನಲ್ಲಿ ಮೆಸೇಜ್‍ವೊಂದು ಹರಿದಾಡುತ್ತಿದ್ದು, ಬೆಂಗಳೂರು ಜನರಲ್ಲಿ ಢವ ಢವ ಶುರುವಾಗಿತ್ತು. ಆದರೆ ಇದು ಸಲಿಗೆ ಸುಳ್ಳು ಸುದ್ದಿ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.

    ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಬೆಂಗಳೂರಿನ ವಿವಿಧೆಡೆ ಇಂದು ರಾತ್ರಿ 10ರಿಂದ ನಾಳೆ ಬೆಳಗ್ಗೆ 5 ಗಂಟೆವರೆಗೆ ರಾಸಾಯನಿಕ ಸಿಂಪಡನೆ ಮಾಡಲಾಗುತ್ತಿದೆ. ಮನೆಯಿಂದ ಯಾರೂ ಹೊರಬರಬೇಡಿ. ಇದು ಬೆಂಗಳೂರಿನಲ್ಲಿ ಮಾತ್ರ. ಎಲ್ಲರಿಗೂ ಶೇರ್ ಮಾಡಿ ಎಂಬ ಮೆಸೇಜ್ ಅನ್ನು ಕಿಡಿಗೇಡಿಗಳು ವಾಟ್ಸಪ್‍ನಲ್ಲಿ ಹರಿಬಿಟ್ಟಿದ್ದಾರೆ.

    ಸುಳ್ಳು ಸಂದೇಶದಿಂದ ಜನರು ಆತಂಕಕ್ಕೆ ಒಳಗಾಗಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಆರೋಗ್ಯ ಇಲಾಖೆಯು, ಜನರು ಆತಂಕಕ್ಕೆ ಒಳಗಾಗಬೇಡಿ. ನಗರದಲ್ಲಿ ಯಾವುದೇ ರೀತಿಯ ಕೆಮಿಕಲ್ ಸಿಂಪಡಣೆಯನ್ನು ಮಾಡುವುದಿಲ್ಲ. ಸುಳ್ಳು ಸಂದೇಶಕ್ಕೆ ಕಿವಿಗೊಡಬೇಡಿ ಎಂದು ಅಭಯ ನೀಡಿದೆ.

    ಬುಧವಾರ ಮಧ್ಯಾಹ್ನ 3 ಗಂಟೆವರೆಗಿನ ಮಾಹಿತಿ ಪ್ರಕಾರ ಭಾರತದಲ್ಲಿ ಒಟ್ಟು 147 ಜನರಿಗೆ ಕೊರೊನಾ ಸೋಂಕು ತಗಲಿದ್ದು, ಈ ಪೈಕಿ 14 ಜನರು ಚೇತರಿಸಿಕೊಂಡರೆ ಮೂರು ಮೃತಪಟ್ಟಿದ್ದಾರೆ. ಉಳಿದಂತೆ 130 ಜನರಿಗೆ ಚಿಕಿತ್ಸೆ ಕೊಡಲಾಗುತ್ತದೆ. ರಾಜ್ಯದಲ್ಲಿ ಮತ್ತೆರಡು ಕೊರೊನಾ ಕೇಸ್ ದಾಖಲಾಗಿದೆ. ಇಬ್ಬರು ಬೆಂಗಳೂರಿನವರಾಗಿದ್ದು ಪ್ರತ್ಯೇಕ ನಿಗಾದಲ್ಲಿ ಇಡಲಾಗಿದೆ. ಈ ಕೇಸ್ ಪತ್ತೆಯಾಗುವ ಮೂಲಕ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.

    56 ವರ್ಷದ ವ್ಯಕ್ತಿ ಮಾರ್ಚ್ 6ರಂದು ಅಮೆರಿಕದಿಂದ ಹಿಂದಿರುಗಿದ್ದರು. 25 ವರ್ಷದ ಮಹಿಳೆ ಸ್ಪೇನ್ ಪ್ರವಾಸದಿಂದ ಹಿಂದಿರುಗಿದ್ದು, ಇಬ್ಬರನ್ನು ಈಗಾಗಲೇ ಪ್ರತ್ಯೇಕಿಸಲ್ಪಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    13 ಕೊರೊನಾ ಪೀಡಿತರ ಪೈಕಿ ಈಗಾಗಲೇ ಮೊದಲ ರೋಗಿಯಾಗಿ ದಾಖಲಾಗಿದ್ದ ಟೆಕ್ಕಿ, ಟೆಕ್ಕಿಯ ಪತ್ನಿ, ಮಗಳು ಗುಣಮುಖರಾಗಿದ್ದಾರೆ. ಕಲಬುರಗಿಯ ವ್ಯಕ್ತಿ ಮೃತಪಟ್ಟಿದ್ದಾರೆ. ಹೀಗಾಗಿ ಒಟ್ಟು ರಾಜ್ಯದಲ್ಲಿ 9 ಮಂದಿ ಕೊರೊನಾ ಪೀಡಿತರಿದ್ದು ಬೆಂಗಳೂರಿನಲ್ಲಿ 7 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರೆ ಕಲಬುರಗಿಯಲ್ಲಿ ಇಬ್ಬರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

    9 ಮಂದಿ ಯಾರೆಲ್ಲ?
    1. ಮೈಂಡ್ ಟ್ರೀ ಕಂಪನಿಯ ಟೆಕ್ಕಿ
    2. ಗೂಗಲ್ ಕಂಪನಿಯ ಟೆಕ್ಕಿ
    3. ಕೊರೊನಾದಿಂದ ಮೃತಪಟ್ಟ ಕಲಬುರಗಿ ವ್ಯಕ್ತಿಯ ಮಗಳು
    4. ಮೈಂಡ್ ಟ್ರೀ ಕಂಪನಿಯ ಟೆಕ್ಕಿ ಜೊತೆ ಪ್ರಯಾಣಿಸಿದ ಸಹೋದ್ಯೋಗಿ
    5. ಯುಕೆ ಪ್ರವಾಸದಿಂದ ಹಿಂದಿರುಗಿದ ವಿದ್ಯಾರ್ಥಿನಿ
    6. ಕೊರೊನಾದಿಂದ ಮೃತಪಟ್ಟ ಕಲಬುರಗಿ ವ್ಯಕ್ತಿಯ ಜೊತೆ ಸಂಪರ್ಕದಲ್ಲಿದ್ದ ವೈದ್ಯ
    7. ದುಬೈನಿಂದ ಮರಳಿದ್ದ 67 ವರ್ಷದ ಮಹಿಳೆ
    8. ಅಮೆರಿಕದಿಂದ ಮರಳಿದ್ದ 56 ವರ್ಷದ ವ್ಯಕ್ತಿ
    9. ಸ್ಪೇನ್ ದೇಶದಿಂದ ಮರಳಿದ್ದ 25 ವರ್ಷದ ಮಹಿಳೆ

  • ‘ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಕಾಣೆಯಾಗಿದ್ದಾರೆ’ – 10 ದಿನಗಳಲ್ಲಿ ಹುಡುಕಿಕೊಡಿ ಎಂದ ಜೆಡಿಎಸ್ ಕಾರ್ಯಕರ್ತರು

    ‘ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಕಾಣೆಯಾಗಿದ್ದಾರೆ’ – 10 ದಿನಗಳಲ್ಲಿ ಹುಡುಕಿಕೊಡಿ ಎಂದ ಜೆಡಿಎಸ್ ಕಾರ್ಯಕರ್ತರು

    – ನ್ಯಾಯಾಲಯದ ಮೊರೆ ಹೋಗುವುದಾಗಿ ಎಚ್ಚರಿಕೆ

    ಮಡಿಕೇರಿ: ಕಳೆದ ಎರಡು ತಿಂಗಳಿಂದ ಜಿಲ್ಲೆಗೆ ಬಾರದಿರುವ ಉಸ್ತುವಾರಿ ಸಚಿವರು ಮತ್ತು ಕೊಡಗು ಸಂಸದರನ್ನು ಹುಡುಕಿಕೊಡುವಂತೆ ಕೊಡಗು ಜೆಡಿಎಸ್ ಜಿಲ್ಲಾ ಘಟಕದ ಮುಖಂಡರು ಎಸ್‍ಪಿಗೆ ದೂರು ನೀಡಿದ್ದಾರೆ.

    ಉಸ್ತುವಾರಿ ಸಚಿವ ವಿ. ಸೋಮಣ್ಣ ಮತ್ತು ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಕಳೆದ ಎರಡು ತಿಂಗಳಿಂದ ಜಿಲ್ಲೆಗೆ ಆಗಮಿಸಿಲ್ಲ. ರಾಜ್ಯದಲ್ಲಿ ಕೊರೊನಾ ಆತಂಕ ತೀವ್ರವಾಗಿದ್ದು, ಜಿಲ್ಲೆಯಲ್ಲಿಯೂ ಈಗಾಗಲೇ ನಾಲ್ಕು ಸೋಂಕಿತ ಪ್ರಕರಣಗಳು ದಾಖಲಾಗಿವೆ. ಮತ್ತೊಂದೆಡೆ ನೆರೆಯ ಕೇರಳದಲ್ಲಿ ಮತ್ತು ಪಕ್ಕದ ಜಿಲ್ಲೆ ಮೈಸೂರಿನಲ್ಲಿ ಹಕ್ಕಿ ಜ್ವರ ಕೂಡ ತೀವ್ರಗೊಂಡಿದೆ. ಇಷ್ಟೆಲ್ಲಾ ಆದರೂ ಉಸ್ತುವಾರಿ ಸಚಿವರು ಮತ್ತು ಸಂಸದರು ಕನಿಷ್ಠ ಸೌಜನ್ಯಕ್ಕಾದರೂ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಜಿಲ್ಲೆಯಲ್ಲಿ ಕೊರೊನಾ ಸೋಂಕು ಎದುರಿಸುವುದಕ್ಕೆ ಅಗತ್ಯ ಔಷಧಿಗಳಿವೆಯಾ? ಅಥವಾ ಸೌಲಭ್ಯಗಳಿವೆಯಾ ಎಂದು ಪರಿಶೀಲನೆಯನ್ನೂ ಮಾಡಿಲ್ಲ. ಈ ಇಬ್ಬರನ್ನು ಯಾರಾದರೂ ಅಪಹರಣ ಮಾಡಿದ್ದಾರಾ? ಇಲ್ಲಾ ಕೊರೊನಾ ರೋಗವೇನಾದರೂ ಬಂದಿದೆಯಾ? ಇವೆಲ್ಲವನ್ನೂ ಪರಿಶೀಲಿಸಿ ಹುಡುಕಿಕೊಡಬೇಕು ಎಂದು ಎಸ್‍ಪಿಗೆ ಜೆಡಿಎಸ್ ಕಾರ್ಯಕರ್ತರು ದೂರು ನೀಡಿದ್ದಾರೆ. 10 ದಿನಗಳಲ್ಲಿ ಉಸ್ತವಾರಿ ಸಚಿವ ಹಾಗೂ ಸಂಸದರನ್ನು ಹುಡುಕಿಕೊಡಬೇಕು ಇಲ್ಲದಿದ್ದರೆ ರಾಜ್ಯ ಉಚ್ಛನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಎಸ್‍ಪಿ ಸುಮನ್ ಡಿ.ಪಿ ಅವರಿಗೆ ಕೊಟ್ಟ ದೂರಿನಲ್ಲಿ ಉಲ್ಲೇಖಿಸಲಾಗಿದೆ.

  • ಕೊರೊನಾ ರಜೆಯಲ್ಲಿ ಕಾಲೇಜು ವಿದ್ಯಾರ್ಥಿಗಳ ಪುಂಡಾಟ

    ಕೊರೊನಾ ರಜೆಯಲ್ಲಿ ಕಾಲೇಜು ವಿದ್ಯಾರ್ಥಿಗಳ ಪುಂಡಾಟ

    ಹಾಸನ: ಮಹಾಮಾರಿ ಕೊರೊನಾ ವೈರಸ್ ಇಡೀ ದೇಶವನ್ನೇ ಬೆಚ್ಚಿಳಿಸಿದೆ. ಆದರೆ ಕಾಲೇಜು ವಿದ್ಯಾರ್ಥಿಗಳು ಮಾತ್ರ ಕೊರೊನಾ ಹಿನ್ನೆಲೆಯಲ್ಲಿ ಸಿಕ್ಕಿರುವ ರಜೆಯಲ್ಲಿ ಮತ್ತೊಬ್ಬರ ಪ್ರಾಣದ ಜೊತೆ ಚೆಲ್ಲಾಟವಾಡಲು ಮುಂದಾಗಿರುವ ಘಟನೆ ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ನಡೆದಿದೆ.

    ರಾಮನಾಥಪುರದ ಸುಬ್ರಹ್ಮಣ್ಯ ದೇವಸ್ಥಾನದ ದರ್ಶನಕ್ಕೆಂದು ರಾಮನಾಥಪುರ ತಾಲೂಕಿನ ಮೂರು ಕುಟುಂಬಗಳು ಮಂಗಳವಾರ ಸಂಜೆ ಬಂದಿದ್ದವು. ಸಮೀಪದಲ್ಲಿರುವ ಕಾವೇರಿ ಹೊಳೆಯಲ್ಲಿ ಸ್ನಾನ ಮಾಡಲು ಮುಂದಾದಾಗ ಅಲ್ಲಿಗೆ ಅದೇ ಸಮಯಕ್ಕೆ ಬಂದ ಕುಶಾಲನಗರ ಮೂಲದ ಸುಮಾರು ಇಪ್ಪತ್ತು ಮಂದಿ ಕಾಲೇಜು ವಿದ್ಯಾರ್ಥಿಗಳು ಕೂಡ ಸ್ನಾನಕ್ಕೆಂದು ನದಿಗೆ ಇಳಿದಿದ್ದರು. ಈ ವೇಳೆ ಪ್ರವಾಸಕ್ಕೆ ಬಂದಿದ್ದ ಯುವಕರು ಮತ್ತು ದೇವಸ್ಥಾನಕ್ಕೆ ಪೂಜೆಗೆ ಬಂದಿದ್ದವರ ನಡುವೆ ಗಲಾಟೆಯಾಗಿದೆ.

    ಯುವಕರ ತಂಡವು ರವಿ, ಪ್ರದೀಪ್, ಬಸವರಾಜ್ ಹಾಗೂ ಕಿರಣ್ ಎಂಬವರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಹಲ್ಲೆಯಿಂದ ಗಾಯಗೊಂಡಿರುವ ಎಲ್ಲರನ್ನೂ ಅರಕಲಗೂಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಇರಾನ್‍ನಲ್ಲಿ 250ಕ್ಕೂ ಹೆಚ್ಚು ಭಾರತೀಯರಿಗೆ ಕೊರೊನಾ

    ಇರಾನ್‍ನಲ್ಲಿ 250ಕ್ಕೂ ಹೆಚ್ಚು ಭಾರತೀಯರಿಗೆ ಕೊರೊನಾ

    ನವದೆಹಲಿ: ಇರಾನ್‍ನಲ್ಲಿ 250ಕ್ಕೂ ಹೆಚ್ಚು ಭಾರತೀಯರಿಗೆ ಕೊರೊನಾ ವೈರಸ್ ತಗುಲಿರುವುದು ವೈದ್ಯಕೀಯ ಪರೀಕ್ಷೆ ದೃಢಪಟ್ಟಿದೆ ಎಂದು ಭಾರತದಿಂದ ಹೋದ ವೈದ್ಯರ ತಂಡವು ತಿಳಿಸಿದೆ.

    ಇರಾನ್‍ಗೆ ತೆರಳಿದ್ದ ಕಾರ್ಗಿಲ್‍ನ 250 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟು 800 ಮಂದಿಯ ಭಾರತೀಯ ನಿಯೋಗ ಇರಾನ್‍ಗೆ ತೆರಳಿತ್ತು. ಎಲ್ಲರೂ ಕೊರೊನಾ ಪೀಡಿತ ಇರಾನ್‍ನ ಖಾಮ್ ಎಂಬಲ್ಲಿದ್ದು, ಭಾರತೀಯರ ಚಿಕಿತ್ಸೆಗೆ ಇರಾನ್ ವೈದ್ಯರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಮಂಗ್ಳೂರು ಏರ್‌ಪೋರ್ಟಿಗೆ ದುಬೈನಿಂದ ಬಂದ ವ್ಯಕ್ತಿಗೆ ಕೊರೊನಾ

    ಇರಾನ್‍ನ ಖಾಮ್‍ನಲ್ಲಿರುವ ಹೋಟೆಲ್ ಹಾಗೂ ವಸತಿ ಸೌಕರ್ಯ ಇರುವಲ್ಲಿ ಭಾರತೀಯರು ಸಿಲುಕಿಕೊಂಡಿದ್ದಾರೆ. ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಬಳಿಕ ಭಾರತಕ್ಕೆ ಕರೆತರಲು ಭಾರತ ಸರ್ಕಾರವು ಪುಣೆಯ ವೈದ್ಯರ ತಂಡವನ್ನು ಕಳುಹಿಸಿದೆ.

    ಕೊರೊನಾ ವೈರಸ್ ಇಲ್ಲದೆ ಇರುವ ವ್ಯಕ್ತಿಗಳನ್ನು ವೈದ್ಯರು ಬ್ಯಾಚ್‍ಗಳನ್ನು ಮಾಡಿ ಕಳೆದ ವಾರದಿಂದ 200ಕ್ಕೂ ಹೆಚ್ಚು ಭಾರತೀಯರನ್ನು ಭಾರತಕ್ಕೆ ಕಳುಹಿಸಿದ್ದಾರೆ. ಅವರಲ್ಲಿ ಹೆಚ್ಚಿನವರು ಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿಗಳು ಇರಾನ್‍ನ ವಿವಿಧ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಓದುತ್ತಿರುವವರೇ ಆಗಿದ್ದಾರೆ.

    ಇರಾನ್‍ನಲ್ಲಿ ಸೋಂಕಿತ ಭಾರತೀಯರಲ್ಲಿ ಅವರ ಸಂಬಂಧಿಕರು ಸೇರಿದ್ದಾರೆ. ಇರಾನ್ ಸರ್ಕಾರದ ನಿರ್ಲಕ್ಷ್ಯದಿಂದಾಗಿಯೇ ಬಿಕ್ಕಟ್ಟು ಉಲ್ಬಣಗೊಳಿಸಿದೆ ಎಂದು ಕಾರ್ಗಿಲ್‍ನ ವಕೀಲ ಹಾಜಿ ಮುಸ್ತಫಾ ಆರೋಪಿಸಿದ್ದಾರೆ.

    ಇರಾನ್‍ನಲ್ಲಿ 700ಕ್ಕೂ ಹೆಚ್ಚು ಜನರು ಕೊರೊನಾ ವೈರಸ್‍ಗೆ ಬಲಿಯಾಗಿದ್ದು, ಸುಮಾರು 14,000 ಪ್ರಕರಣಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವ ಎಸ್.ಜೈಶಂಕರ್, ಒಟ್ಟು 234 ಭಾರತೀಯರನ್ನು ಇರಾನ್‍ನಿಂದ ಸ್ಥಳಾಂತರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಇಟಲಿಯಲ್ಲಿ ನಿನ್ನೆ ಒಂದೇ ದಿನ 349 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 2,158 ದಾಟಿದೆ. ಕಳೆದ ನಾಲ್ಕು ದಿನಗಳಲ್ಲಿ ಮೃತರ ಸಂಖ್ಯೆ ಡಬಲ್ ಆಗಿದೆ. ಮುಂದಿನ 15 ದಿನಗಳ ಕಾಲ ಮನೆಯಿಂದ ಯಾರು ಹೊರಗೆ ಬರಬಾರದು ಎಂದು ಫ್ರಾನ್ಸ್ ಸರ್ಕಾರ ಆದೇಶ ನೀಡಿದೆ.

    ಯುರೋಪ್‍ನ ಬಹುತೇಕ ದೇಶಗಳು ಪ್ರಜೆಗಳಿಗೆ ನಿರ್ಬಂಧ ಹೇರಿದೆ. ಸ್ಪೇನ್‍ನಲ್ಲಿ ಸೋಂಕಿತರ ಸಂಖ್ಯೆ ಕ್ಷಣಕ್ಷಣಕ್ಕೂ ಏರಿಕೆ ಆಗುತ್ತಿದೆ. 10 ಸಾವಿರ ಮಂದಿಗೆ ಸೋಂಕು ತಗುಲಿದೆ. 350 ಮಂದಿ ಬಲಿ ಆಗಿದ್ದಾರೆ. ಅಮೆರಿಕದಲ್ಲಿ 90ಕ್ಕೂ ಹೆಚ್ಚು ಮಂದಿ ಬಲಿ ಆಗಿದ್ದು, ಸೋಂಕಿತರ ಸಂಖ್ಯೆ 5 ಸಾವಿರ ದಾಟಿದೆ. ಪಾಕಿಸ್ತಾನದಲ್ಲಿ ಕೊರೊನಾಗೆ ಒಬ್ಬರು ಬಲಿಯಾಗಿದ್ದು, ಸೋಂಕಿತರ ಸಂಖ್ಯೆ ಇನ್ನೂರು ದಾಟಿದೆ.

    ಕೊರೊನಾ ದೇಶವನ್ನು ಆರ್ಥಿಕ ದುಸ್ಥಿತಿಗೆ ತಳ್ಳಬಹುದು ಎಂಬ ಆತಂಕವನ್ನು ಟ್ರಂಪ್ ಹೊರಹಾಕಿದ್ದಾರೆ. ರಷ್ಯಾದಲ್ಲಿ ಸೋಂಕಿತರ ಸಂಖ್ಯೆ 100 ದಾಟಿದೆ. ರಷ್ಯಾ, ಚಿಲಿ, ಉಕ್ರೇನ್, ಪೆರು ದೇಶಗಳು ವಿದೇಶಿಯರಿಗೆ ಪ್ರವೇಶ ನಿರಾಕರಿಸುತ್ತಿದ್ದಾರೆ. ಆಫ್ರಿಕಾ ಖಂಡದ ಹಲವು ದೇಶಗಳಲ್ಲಿ ಸೋಂಕಿತರು ಕಂಡುಬರುತ್ತಿದ್ದಾರೆ. ಚೀನಾದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಆದರೆ ವಿದೇಶಿಯರಿಂದ ಸೋಂಕು ಹಬ್ಬಬಹುದು ಎಂಬ ಭಯದಲ್ಲಿ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಭದ್ರತಾ ಮಂಡಳಿಗೆ ಸಂಬಂಧಿಸಿದ ಎಲ್ಲಾ ಸಭೆಗಳನ್ನು ರದ್ದು ಮಾಡಲಾಗಿದೆ.

  • ಕೊರೊನಾ ನಿಯಂತ್ರಣಕ್ಕೆ ಕ್ರಮ- ಮೋದಿ ಸರ್ಕಾರಕ್ಕೆ WHO ಮೆಚ್ಚುಗೆ

    ಕೊರೊನಾ ನಿಯಂತ್ರಣಕ್ಕೆ ಕ್ರಮ- ಮೋದಿ ಸರ್ಕಾರಕ್ಕೆ WHO ಮೆಚ್ಚುಗೆ

    ಬೆಂಗಳೂರು: ಭಾರತದಲ್ಲಿ ಕೊರೊನಾ ನಿಯಂತ್ರಣಕ್ಕೆ ಮೋದಿ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಪ್ರಶಂಸೆ ವ್ಯಕ್ತಪಡಿಸಿದೆ.

    ಖುದ್ದು ಪ್ರಧಾನಿ ಮೋದಿಯೇ ಎಲ್ಲವನ್ನು ಪರಿಶೀಲಿಸುತ್ತಿದ್ದಾರೆ. ಸೋಂಕು ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ. ಇನ್ನು ಸಾರ್ಕ್ ರಾಷ್ಟ್ರಗಳಲ್ಲಿ ಕೊರೊನಾ ತಡೆಗೆ ಪ್ರಧಾನಿ ಮೋದಿ ಮುಂದಾಳತ್ವ ವಹಿಸಿರೋದಕ್ಕೆ ಅಮೆರಿಕ ಮತ್ತು ರಷ್ಯಾ ದೇಶಗಳು ಮೆಚ್ಚುಗೆ ವ್ಯಕ್ತಪಡಿಸಿವೆ.

    ಕೊರೊನಾದಂತಹ ಮಾರಕ ಸೋಂಕು ತಡೆ ಸಲುವಾಗಿ ನೆರೆಹೊರೆಯ ದೇಶಗಳ ಜೊತೆಗೂಡಿ ಹೋರಾಟ ಮಾಡಲು ನಿರ್ಧರಿಸಿರುವ ಮೋದಿ ಕ್ರಮ ಸ್ವಾಗತಾರ್ಹ. ಕೊರೋನ ತಡೆಗಾಗಿ 74 ಕೋಟಿ ಪ್ರಾದೇಶಿಕ ನಿಧಿ ಸ್ಥಾಪನೆ ಒಳ್ಳೆಯ ಬೆಳವಣಿಗೆ ಎಂದು ಅಮೆರಿಕ ಶ್ಲಾಘಿಸಿದೆ.

    ರಷ್ಯಾ ಕೂಡ ಮೋದಿ ನಡೆಯನ್ನು ಸ್ವಾಗತಿಸಿದೆ. ಇಂತಹ ಸಂದರ್ಭದಲ್ಲಿ ಮೋದಿ ತೆಗದುಕೊಂಡ ನಿಲುವು ಸರಿಯಾಗಿದೆ ಎಂದು ರಷ್ಯಾ ಶ್ಲಾಘಿಸಿದೆ.

  • ಮಂಗ್ಳೂರು ಏರ್‌ಪೋರ್ಟಿಗೆ ದುಬೈನಿಂದ ಬಂದ ವ್ಯಕ್ತಿಗೆ ಕೊರೊನಾ

    ಮಂಗ್ಳೂರು ಏರ್‌ಪೋರ್ಟಿಗೆ ದುಬೈನಿಂದ ಬಂದ ವ್ಯಕ್ತಿಗೆ ಕೊರೊನಾ

    ಮಂಗಳೂರು: ಮಹಾಮಾರಿ ಕೊರೊನಾ ವೈರಸ್ ಇದೀಗ ಕರಾವಳಿಗೂ ಕಾಲಿಟ್ಟಿದೆ. ದುಬೈನಿಂದ ಮಂಗಳೂರಿಗೆ ಬಂದಿಳಿದ ಕಾಸರಗೋಡು ಮೂಲದ ವ್ಯಕ್ತಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ವ್ಯಕ್ತಿಗೆ ಕೊರೊನಾ ಪಾಸಿಟಿವ್ ವರದಿ ಬಂದಿರುವುದರಿಂದ ಆತನ ಜೊತೆ ಬಂದಿದ್ದ ಸಹಪ್ರಯಾಣಿಕರು ಆತಂಕಗೊಂಡಿದ್ದಾರೆ.

    ಕಾಸರಗೋಡಿನ ಬದಿಯಡ್ಕದ ನೀರ್ಚಾಲು ನಿವಾಸಿ ಮಾರ್ಚ್ 14ರಂದು ಬೆಳಗ್ಗೆ 5:20ಕ್ಕೆ ಏರ್ ಇಂಡಿಯಾ ಐಎಕ್ಸ್ 814 ವಿಮಾನದಲ್ಲಿ ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಿದ್ದರು. ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಸಂದರ್ಭದಲ್ಲಿ ಕೊರೊನಾ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಗಂಟಲಿನ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ವ್ಯಕ್ತಿಯ ವರದಿ ಪಾಸಿಟಿವ್ ಎಂಬುದಾಗಿ ಬಂದಿದೆ. ಹೀಗಾಗಿ ಅವರನ್ನು ಐಸೋಲೇಷನ್ ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    130 ಪ್ರಯಾಣಿಕರಲ್ಲಿ ಆತಂಕ:
    ಕಾಸರಗೋಡು ಮೂಲದ ಕೊರೊನಾ ಶಂಕಿತನ ಪಾಸಿಟಿವ್ ವರದಿ ಹಿನ್ನೆಲೆಯಲ್ಲಿ ಅವರ ಜೊತೆ ಪ್ರಯಾಣಿಸಿದ್ದ ಸಹ ಪ್ರಯಾಣಿಕರು ಆತಂಕಗೊಂಡಿದ್ದಾರೆ. ವಿಮಾನದಲ್ಲಿ ಒಟ್ಟು 130 ಪ್ರಯಾಣಿಕರಿದ್ದರು. ಅದರಲ್ಲಿ 90 ಜನ ಮಂಗಳೂರು ಮೂಲದ ಪ್ರಯಾಣಿಕರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ವಿಮಾನದಲ್ಲಿ ಬಂದವರಿಗೂ ಕೊರೊನಾ ಹರಡಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಕಾಸರಗೋಡು ಜಿಲ್ಲಾಡಳಿತ ಅಲರ್ಟ್ ಆಗಿದೆ.

    ಈ ಬಗ್ಗೆ ಮಂಗಳೂರಿನಲ್ಲಿ ಸಭೆ ನಡೆಸಿದ ಬಳಿಕ ಮಾತನಾಡಿದ ಆರೋಗ್ಯ ಸಚಿವ ಶ್ರೀರಾಮುಲು, ವಿಮಾನದಲ್ಲಿದ್ದ ಎಲ್ಲರ ಮಾಹಿತಿಯನ್ನು ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಪಡೆದುಕೊಳ್ಳುತ್ತಿದ್ದೇವೆ. ಜಿಲ್ಲಾಡಳಿತ ಎಲ್ಲರನ್ನೂ ಸಂಪರ್ಕಿಸಿ ಆರೋಗ್ಯ ತಪಾಸಣೆ ನಡೆಸುತ್ತದೆ ಎಂದು ತಿಳಿಸಿದ್ದಾರೆ.

    ಮಂಗ್ಳೂರಿನಿಂದ ವಿದೇಶಿ ವಿಮಾನಗಳ ಹಾರಾಟ ರದ್ದು:
    ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿ ಬಂದ ವ್ಯಕ್ತಿಯಲ್ಲಿ ಕೊರೊನಾ ಪಾಸಿಟಿವ್ ಬಂದಿರುವುದರಿಂದ ಮಂಗಳೂರಿನಿಂದ ಕುವೈತ್, ಕತಾರ್, ಸೌದಿ ಅರೇಬಿಯಾಕ್ಕೆ ತೆರಳುವ ವಿಮಾನಗಳನ್ನು ಭಾರತ ಸರ್ಕಾರದ ಸೂಚನೆಯಂತೆ ರದ್ದುಗೊಳಿಸಲಾಗಿದೆ. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 34,596 ಜನರ ಸ್ಕ್ರೀನಿಂಗ್ ಮಾಡಲಾಗಿದ್ದು ವಿದೇಶದಿಂದ ಆಗಮಿಸುವವರ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ.