Tag: Coronavirus

  • ಮನೆಯಿಂದ ಹೊರಬಂದವರಿಗೆ ಕಸಗುಡಿಸೋ ಶಿಕ್ಷೆ

    ಮನೆಯಿಂದ ಹೊರಬಂದವರಿಗೆ ಕಸಗುಡಿಸೋ ಶಿಕ್ಷೆ

    ಕಲಬುರಗಿ: ದೇಶಾದ್ಯಂತ ಲಾಕ್‍ಡೌನ್ ಘೋಷಣೆ ಮಾಡಿದ್ದರೂ ಜನರು ಮನೆಯಿಂದ ಹೊರ ಬರುತ್ತಿದ್ದಾರೆ. ಅಂತವರಿಗೆ ಪೊಲೀಸರು ಕೂಡ ಬಸ್ಕಿ ಹೊಡಿಸುವ ಮೂಲಕ ಶಿಕ್ಷೆ ಕೊಟ್ಟಿದ್ದರು. ಇದೀಗ ಜಿಲ್ಲೆಯಲ್ಲಿ ಮನೆಯಿಂದ ಹೊರಬಂದವರಿಗೆ ಕಸಗುಡಿಸುವ ಶಿಕ್ಷೆ ಕೊಟ್ಟಿದ್ದಾರೆ.

    ಕೊರೊನಾ ಭೀತಿಯಿಂದ ಲಾಕ್‍ಡೌನ್ ಮಧ್ಯೆಯೂ ಕಲಬುರಗಿಯಲ್ಲಿ ನಿಯಮವನ್ನು ಬ್ರೇಕ್ ಮಾಡಿ ವಾಹನ ಸವಾರರು ಓಡಾಡುತ್ತಿದ್ದರು. ಅಂತವರಿಗೆ ಖಾಕಿ ಪಡೆ ಸಖತ್ ಟ್ರೀಟ್ ಮೆಂಟ್ ಕೊಟ್ಟಿದೆ. ಮನೆಯಿಂದ ಹೊರ ಬಂದ ಬೈಕ್ ಸವಾರರಿಗೆ ರಸ್ತೆ ಕುಸಗುಡಿಸಿ ಶಿಕ್ಷೆಯನ್ನು ಪೊಲೀಸರು ನೀಡಿದ್ದಾರೆ.

    ನಗರದ ಪ್ರಕಾಶ್ ಏಶಿಯನ್ ಮಾಲ್ ವೃತ್ತದಲ್ಲಿ ಮನೆಯಿಂದ ಹೊರಬಂದವರಿಗೆ ಪೊಲೀಸರು ಲಾಠಿ ಏಟು ಕೊಟ್ಟಿದ್ದಾರೆ. ಜೊತೆಗೆ ವಿವಿಧ ಬಡಾವಣೆಗಳಲ್ಲಿ ಪುಂಡಪೋಕರಿಗಳನ್ನು ಕರೆದುಕೊಂಡು ಹೋಗಿ ಸ್ವಚ್ಛತೆ ಇಲ್ಲದಿರುವ ಏರಿಯಾಗಳಲ್ಲಿ ಕಸ ಗುಡಿಸಿದ್ದಾರೆ.

    ಕಲಬುರಗಿಯ ಚೌಕ್ ಠಾಣಾ ಸಿಪಿಐ ಶಕೀಲ್ ಚೌಧರಿ ಅವರು ಈ ರೀತಿಯ ಕಸಗುಡಿಸುವ ಶಿಕ್ಷೆಯನ್ನು ನೀಡಿದ್ದರು. ಅಲ್ಲದೇ ಮತ್ತೆ ಮನೆಯಿಂದ ಹೊರ ಬಂದರೆ ಕ್ರಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಿಕ್ಷೆ ನೀಡಿ ಎಚ್ಚರಿಗೆ ನೀಡಿದ್ದಾರೆ.

  • ಕೈಯಲ್ಲಿ ಲಾಠಿ ಹಿಡಿದು ಬೀದಿ ಬೀದಿಗೆ ತೆರಳಿದ ವೈದ್ಯರು

    ಕೈಯಲ್ಲಿ ಲಾಠಿ ಹಿಡಿದು ಬೀದಿ ಬೀದಿಗೆ ತೆರಳಿದ ವೈದ್ಯರು

    ಬೆಂಗಳೂರು: ದೇಶಾದ್ಯಂತ ಲಾಕ್‍ಡೌನ್ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಹಿಡಿದು ಅನಗತ್ಯವಾಗಿ ಮನೆಯಿಂದ ಹೊರ ಬಂದವರಿಗೆ ಲಾಠಿ ಏಟು ಕೊಡುತ್ತಿದ್ದಾರೆ. ಇತ್ತ ವೈದ್ಯರು ಕೂಡ ಲಾಠಿ ಹಿಡಿದು ಜಾಗೃತಿ ಮೂಡಿಸಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲುವಿನಲ್ಲಿ ವೈದ್ಯರು ಲಾಠಿ ಹಿಡಿದು ಜಾಗೃತಿ ಮೂಡಿಸಿದ್ದಾರೆ. ಕೈಯಲ್ಲಿ ಲಾಠಿ ಹಿಡಿದು ಜನರಿಗೆ ಅರಿವು ಮೂಡಿಸಲು ಬೀದಿ ಬೀದಿಗೆ ವೈದ್ಯರು ತೆರಳಿದ್ದರು.

    ತ್ಯಾಮಗೊಂಡ್ಲು ಪೊಲೀಸ್ ಇಲಾಖೆಯ ಜೊತೆಗೆ ಮುಖ್ಯ ವೈದ್ಯಾಧಿಕಾರಿ ಡಾ. ಲಕ್ಷ್ಮೀಕಾಂತ್ ಸೇರಿದಂತೆ ವೈದ್ಯರ ತಂಡ ಕೈಯಲ್ಲಿ ಲಾಠಿ ಹಿಡಿದು ತ್ಯಾಮಗೊಂಡ್ಲುವಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ್ದಾರೆ. ಅಲ್ಲದೇ ಪ್ರತಿಯೊಂದು ಮನೆಗೂ ತೆರಳಿ ಜನರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ತ್ಯಾಮಗೊಂಡ್ಲು ಪೊಲೀಸರ ಜೊತೆ ವೈದ್ಯರ ಜಂಟಿ ಕಾರ್ಯಾಚರಣೆ ಮಾಡಿದ್ದು, ವಿಶೇಷವಾಗಿತ್ತು.

  • ಸಿಕ್ಕ ಸಿಕ್ಕ ವಾಹನ, ಕಾಲ್ನಡಿಗೆ ಮೂಲಕ ತಮ್ಮೂರಿಗೆ ಹೊರಟ ಜನ

    ಸಿಕ್ಕ ಸಿಕ್ಕ ವಾಹನ, ಕಾಲ್ನಡಿಗೆ ಮೂಲಕ ತಮ್ಮೂರಿಗೆ ಹೊರಟ ಜನ

    – ಜೀವನೋಪಾಯದ ಬಿಕ್ಕಟ್ಟಿಗೆ ಸಿಲುಕಿದ ಕಾರ್ಮಿಕರು

    ಅಹಮದಾಬಾದ್: ಕೊರೊನಾ ವೈರಸ್ ಹಿನ್ನೆಲೆ ದೇಶದಲ್ಲಿ ಲಾಕ್‍ಡೌನ್ ಘೋಷಿಸಿದ್ದರಿಂದ ಗುಜರಾತ್‍ನಲ್ಲಿ ಕೆಲಸ ಮಾಡುತ್ತಿದ್ದ ರಾಜಸ್ಥಾನದ ಸಾವಿರಾರು ಕಾರ್ಮಿಕರಿಗೆ ಜೀವನೋಪಾಯದ ಬಿಕ್ಕಟ್ಟು ಉಂಟಾಗಿದೆ.

    ಗುಜರಾತ್‍ನ ವಿವಿಧ ಭಾಗಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಬಸ್, ರೈಲು ಸಂಚಾರ ಸ್ಥಗಿತಗೊಂಡಿದ್ದರಿಂದ ಕಾಲ್ನಡಿಗೆಯಲ್ಲೇ ತಮ್ಮ ಮನೆಗಳಿಗೆ ತೆರಳಿದ್ದಾರೆ. ಕೆಲವರು ಪತ್ನಿ ಮತ್ತು ಮಕ್ಕಳೊಂದಿಗೆ ಸೈಕಲ್‍ಗಳಲ್ಲಿ ಹೋಗುತ್ತಿದ್ದಾರೆ. ಕೆಲವರಂತೂ ಸಿಕ್ಕ ಸಿಕ್ಕ ಲಾರಿ ಏರಿ ತಮ್ಮೂರಿಗೆ ತೆರಳುತ್ತಿದ್ದಾರೆ.

    ಲಾಕ್‍ಡೌನ್‍ನಿಂದಾಗಿ ಗುಜರಾತ್‍ನಲ್ಲಿ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಕಾರ್ಖಾನೆಗಳು ಸ್ತಬ್ಧವಾಗಿವೆ. ಪರಿಣಾಮ ಕಾರ್ಮಿಕರು ಭಾರೀ ಕಷ್ಟಕ್ಕೆ ಸಿಲುಕಿ, ತಮ್ಮೂರಿಗೆ ಮರಳುತ್ತಿದ್ದಾರೆ.

    ಕೆಲಸವಿಲ್ಲ, ಹಣವಿಲ್ಲ:
    ನಾನು ನನ್ನ ಸಹೋದರನೊಂದಿಗೆ ಅಹಮದಾಬಾದ್‍ನ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದೇವು. ನಮ್ಮ ಕುಟುಂಬ ಒಟ್ಟಿಗೆ ಇದೆ. ಆದರೆ ಲಾಕ್‍ಡೌನ್‍ನಿಂದಾಗಿ ಕೆಲಸವಿಲ್ಲದಿದ್ದರೆ ಹಣವಿಲ್ಲ ಎಂದು ಗುತ್ತಿಗೆದಾರ ಹೇಳಿದರು. ಹೀಗಾಗಿ ಜೀವನ ನಡೆಸುವುದು ಕಷ್ಟವಾಗಿ ಊರಿಗೆ ಮರಳುತ್ತಿದ್ದೇವೆ ಎಂದು ರಾಜಸ್ಥಾನದ ವ್ಯಕ್ತಿಯೊಬ್ಬರು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.

    ಪ್ರತಿ ತಿಂಗಳು 9ರಿಂದ 10 ಸಾವಿರ ರೂ. ಗಳಿಸುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ ಇಲ್ಲೇ ಉಳಿದರೆ ಇಲ್ಲಿಯವರೆಗೂ ಗಳಿಸಿದ ಹಣ ಖರ್ಚಾಗುತ್ತದೆ. ಕೊರೊನಾ ನಮ್ಮ ಜೀವನೋಪಾಯದ ಮೇಲೆ ಭಾರೀ ಹೊಡೆತ ಕೊಟ್ಟಿದೆ ಎಂದು ಗೂಳೆ ಹೊರಟ ಜನರು ಕಣ್ಣೀರಿಟ್ಟಿದ್ದಾರೆ.

    ರಾಜಸ್ಥಾನದ ಕೆಲವರು ಚಹಾ ಅಂಗಡಿಗಳು ಮತ್ತು ಆಹಾರ ಮಳಿಗೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಗ್ರಾಮಗಳಿಗೆ ಹೋಗುತ್ತಿರುವ ಜನರಿಗೆ ಮಾರ್ಗ ಮಧ್ಯದಲ್ಲಿ ಪೊಲೀಸರು ಆಹಾರ ಹಾಗೂ ಪಾನೀಯ ವಿತರಿಸಿ ಮಾನವೀಯತೆ ಮೆರೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

  • ಕೇಂದ್ರದಿಂದ 1.70 ಲಕ್ಷ ಕೋಟಿ ರೂ. ಪ್ಯಾಕೇಜ್ ಪ್ರಕಟ – ಬಡವರಿಗೆ 3 ತಿಂಗಳು 5 ಕೆಜಿ ಅಕ್ಕಿ ಉಚಿತ

    ಕೇಂದ್ರದಿಂದ 1.70 ಲಕ್ಷ ಕೋಟಿ ರೂ. ಪ್ಯಾಕೇಜ್ ಪ್ರಕಟ – ಬಡವರಿಗೆ 3 ತಿಂಗಳು 5 ಕೆಜಿ ಅಕ್ಕಿ ಉಚಿತ

    ನವದೆಹಲಿ: ಕೊರೊನಾದಿಂದ ಕಂಗೆಟ್ಟವರಿಗೆ ಪ್ರಧಾನಿ ಮಂತ್ರಿ ನಿಧಿಯಿಂದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 1.70 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.

    ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ 21 ದಿನಗಳ ಕಾಲ ಲಾಕ್‍ಡೌನ್ ಘೋಷಿಸಿದ್ದಾರೆ. ಇದು ಜನರ ಜೀವನ ಮತ್ತು ಆರ್ಥಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆ. ಹೀಗಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೆಹಲಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಕೊರೊನಾ ವೈರಸ್ ಬಿಕ್ಕಟ್ಟಿನಿಂದ ಹೊರಬರಲು 1.70 ಲಕ್ಷ ಕೋಟಿ ರೂ. ಪರಿಹಾರದ ಪ್ಯಾಕೇಜ್ ಘೋಷಿಸಿದ್ದಾರೆ.

    ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅಕ್ಕಿ ಯೋಜನೆ ಅಡಿ ಈಗಾಗಲೇ 5 ಕೆಜಿ ಅಕ್ಕಿ/ ಗೋಧಿ ನೀಡಲಾಗುತ್ತಿದೆ. ಇದರ ಜೊತೆ ಹೆಚ್ಚುವರಿಯಾಗಿ ಮೂರು ತಿಂಗಳ ಕಾಲ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ತಿಳಿಸಿದರು.

    ವಲಸೆ ಕಾರ್ಮಿಕರು, ನಗರ ಮತ್ತು ಗ್ರಾಮೀಣ ಬಡವವರಿಗೆ, ತಕ್ಷಣದ ಸಹಾಯದ ಅಗತ್ಯವಿರುವ ಬಡವರಿಗೆ ಪ್ಯಾಕೇಜ್ ಸಿದ್ಧವಾಗಿದೆ. ಯಾರೂ ಹಸಿವಿನಿಂದ ಬಳಲಬಾರದು ಎನ್ನುವುದು ನಮ್ಮ ಸರ್ಕಾರ ಉದ್ದೇಶ. ಹೀಗಾಗಿ 1.7 ಲಕ್ಷ ಕೋಟಿ ರೂ. ಮೌಲ್ಯದ ಪ್ಯಾಕೇಜ್ ಘೋಷಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

    8.69 ಕೋಟಿ ರೂ. ರೈತರ ಖಾತೆಗೆ ಈ ಕೂಡಲೇ ಏಪ್ರಿಲ್ ತಿಂಗಳ 2 ಸಾವಿರ ರೂ. ಹಣವನ್ನು ಹಾಕಲಾಗುವುದು. ನರೇಗಾ ಯೋಜನೆ ಅಡಿ ಕೆಲಸ ಮಾಡುವ ಪ್ರತಿ ಕಾರ್ಮಿಕರಿಗೆ 2 ಸಾವಿರ ರೂ. ಹೆಚ್ಚುವರಿಯಾಗಿ ನೀಡಲಾಗುವುದು ಎಂದರು.

    ಸುದ್ದಿಗೋಷ್ಠಿಯ ಮುಖ್ಯಾಂಶಗಳು
    – ಕೊರೊನಾ ವೈರಸ್ ಸೊಂಕಿತರಿಗೆ ಚಿಕಿತ್ಸೆ ನೀಡುತ್ತಿರುವವರು, ಸೋಂಕಿನ ಅಪಾಯ ಇರುವವರಿಗೆ ಆರೋಗ್ಯ ವಿಮೆ. ಆರೋಗ್ಯ ಕಾರ್ಯಕರ್ತರಿಗೆ 50 ಲಕ್ಷ ವಿಮೆ.
    – ವಿಧವೆಯರು, ಹಿರಿಯ ನಾಗರಿಕರು, ದಿವ್ಯಾಂಗರು ಅಂಗವಿಕರಿಗೆ ಒಂದು ಬಾರಿಯ ಪರಿಹಾರ ಮೊತ್ತ 1,000 ರೂ. ಸಿಗಲಿದೆ. ಎರಡು ಕಂತುಗಳಲ್ಲಿ ಹಣ ಬಿಡುಗಡೆಯಾಗಲಿದ್ದು, ಸುಮಾರು 3 ಕೋಟಿ ಜನರಿಗೆ ಇದರಿಂದ ಅನುಕೂಲ.
    – 3 ತಿಂಗಳ ಕಾಲ ಮಹಿಳಾ ಜನ ಧನ್ ಖಾತೆಗೆ 500 ರೂ. ಹಾಕಲಾಗುವುದು. ಉಜ್ವಲ ಯೋಜನೆ ಅಡಿಯಲ್ಲಿ ಅಡುಗೆ ಅನಿಲ ಸಿಲಿಂಡರ್ ಸಂಪರ್ಕ ಪಡೆದಿರುವ ಮಹಿಳೆಯರಿಗೆ 3 ತಿಂಗಳ ವರೆಗೂ ಮೂರು ಅನಿಲ ಸಿಲಿಂಡರ್‍ಗಳು ಉಚಿತ ವಿತರಣೆ. ಈ ನಿರ್ಧಾರದಿಂಧ 8 ಕೋಟಿ ಮಹಿಳೆಯರು ಲಾಭ.

    – ಮುಂದಿನ ತಿಂಗಳ ಸಂಸ್ಥೆಗಳು ಮತ್ತು ಉದ್ಯೋಗಿಗಳ ಇಪಿಎಫ್ ಮೊತ್ತವನ್ನು ಸರ್ಕಾರವೇ ತುಂಬಲಿದೆ. 100 ಉದ್ಯೋಗಿಗಳು ಇರುವ ಸಂಸ್ಥೆ ಹಾಗೂ ತಿಂಗಳಿಗೆ 15,000 ರೂ.ವರೆಗೂ ವೇತನ ಪಡೆಯುತ್ತಿರುವ ಉದ್ಯೋಗಿಗಳಿರುವ ಸಂಸ್ಥೆಗಳಿಗೆ ಇದರ ಲಾಭ ಸಿಗಲಿದೆ.

    – ಇಪಿಎಫ್ ಯೋಜನೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಮೂಲಕ ಮರು ಪಾವತಿ ಮಾಡದಿರದ ವ್ಯವಸ್ಥೆಯಡಿ ಶೇ.75ರಷ್ಟು ಇಪಿಎಫ್ ಮುಂಗಡ ಮೊತ್ತ ಪಡೆಯಲು ಅವಕಾಶ ಸಿಗುತ್ತದೆ. ಕಾರ್ಮಿಕರು 3 ತಿಂಗಳ ಸಂಬಳ ಅಥವಾ ಶೇ.75ರಷ್ಟು ಮುಂಗಡ ಮೊತ್ತ;, ಇದರಲ್ಲಿ ಯಾವುದು ಕಡಿಮೆಯೋ ಅದನ್ನು ಪಡೆಯಬಹುದಾಗಿದೆ. ಇದರಿಂದ ಇಪಿಎಫ್ ನೋಂದಾಯಿಸಿರುವ ಸುಮಾರು 4.8 ಕೋಟಿ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.

    https://www.youtube.com/watch?v=15Y8lx-A4wA&feature=emb_title

  • ನಿಮಗಾಗಿ ತಾಯಿ ನನ್ನಿಂದ ದೂರವಿದ್ದಾಳೆ, ಅವಳಿಗಾಗಿ ದಯಮಾಡಿ ಮನೆಯಲ್ಲಿರಿ – ಬಾಲಕ ಮನವಿ

    ನಿಮಗಾಗಿ ತಾಯಿ ನನ್ನಿಂದ ದೂರವಿದ್ದಾಳೆ, ಅವಳಿಗಾಗಿ ದಯಮಾಡಿ ಮನೆಯಲ್ಲಿರಿ – ಬಾಲಕ ಮನವಿ

    ಬೆಂಗಳೂರು: ಕೊರೊನಾ ವೈರಸ್ ಬಗ್ಗೆ ಸರ್ಕಾರ, ನಟ, ನಟಿಯರು, ಕ್ರೀಡಾಪಟುಗಳು ಸೇರಿದಂತೆ ಅನೇಕ ಜಾಗೃತಿ ಮೂಡಿಸುತ್ತಿದ್ದಾರೆ. ಇದೀಗ ಬೆಂಗಳೂರಿನ ಬಾಲಕನೊಬ್ಬ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ನೂತನ ಪ್ರಯತ್ನ ಮಾಡಿದ್ದಾನೆ.

    ಬಾಲಕನ ನೂತನ ಪ್ರಯತ್ನಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾರಕ್ ಕೂಡ ಸಾಥ್ ನೀಡಿದ್ದಾರೆ. ಬಾಲಕನೊಬ್ಬ “ನನ್ನ ಅಮ್ಮ ವೈದ್ಯೆ. ಅವಳು ನಿಮಗೆ ಸಹಾಯ ಮಾಡಲು ನನ್ನಿಂದ ದೂರವಿದ್ದಾಳೆ. ದಯವಿಟ್ಟು ನೀವು ಮನೆಯಲ್ಲಿದ್ದು, ಅವಳಿಗೆ ಸಹಾಯ ಮಾಡುತ್ತೀರಾ?” ಎಂದು ಬರೆದುಕೊಂಡು ಮನವಿ ಮಾಡಿಕೊಂಡಿದ್ದಾನೆ.

    ಸುಧಾಕರ್ ಅವರು ಬಾಲಕನ ಫೋಟೋವನ್ನು ಟ್ವಿಟ್ಟರಿನಲ್ಲಿ ಪೋಸ್ಟ್ ಮಾಡಿ, “ಕನಿಷ್ಠ ಪಕ್ಷ ನಮಗೋಸ್ಕರ ಇದನ್ನೂ ಮಾಡಲು ಸಾಧ್ಯವಿಲ್ಲವೇ?” ಎಂದು ಪ್ರಶ್ನೆ ಮಾಡಿದ್ದಾರೆ. ಬಾಲಕನ ಜಾಗೃತಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಕೊರೊನಾ ವೈರಸ್ ಹರಡದಂತೆ ಪ್ರಧಾನಿ ಮೋದಿ ಅವರು 21 ದಿನ ದೇಶವನ್ನೇ ಲಾಕ್‍ಡೌನ್ ಮಾಡಿದ್ದಾರೆ. ಆದರೂ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗಾಗಲೇ ಕರ್ನಾಟಕದಲ್ಲಿ ಕೊರೊನಾ ವೈರಸ್‍ಗೆ ಇಬ್ಬರು ಸಾವನ್ನಪ್ಪಿದ್ದಾರೆ.

  • ಸೋಂಕಿತನ ಹೇಳಿಕೆ ಮೇಲೆ ಡೌಟ್- ಫೋನ್ ನೆಟ್‌ವರ್ಕ್‌ ಟ್ರ್ಯಾಕ್‍ಗೆ ಉಡುಪಿ ಡಿಸಿ ಆದೇಶ

    ಸೋಂಕಿತನ ಹೇಳಿಕೆ ಮೇಲೆ ಡೌಟ್- ಫೋನ್ ನೆಟ್‌ವರ್ಕ್‌ ಟ್ರ್ಯಾಕ್‍ಗೆ ಉಡುಪಿ ಡಿಸಿ ಆದೇಶ

    ಉಡುಪಿ: ನಗರದಲ್ಲಿ ಪತ್ತೆಯಾದ ಕೊರೊನಾ ಸೋಂಕಿತನ ಫೋನ್ ನೆಟ್‌ವರ್ಕ್‌ ಟ್ರ್ಯಾಕ್ ಮಾಡಲು ಉಡುಪಿ ಜಿಲ್ಲಾಡಳಿತ ನಿರ್ಧರಿಸಿದೆ. ಮಣಿಪಾಲ ಕೆಎಂಸಿಯ ಲ್ಯಾಬ್ ಟೆಕ್ನಿಷನ್ ಆಗಿರುವ ಸೋಂಕಿತ ವ್ಯಕ್ತಿ, ಮಾರ್ಚ್ 18ರಂದು ದುಬೈನಿಂದ ಮಂಗಳೂರಿಗೆ ಬಂದು ಇಳಿದಿದ್ದರು.

    ಮಂಗಳೂರು ವಿಮಾನ ನಿಲ್ದಾಣದಿಂದ ಟ್ಯಾಕ್ಸಿ ಮೂಲಕ ಮಣಿಪಾಲದಲ್ಲಿರುವ ಮನೆ ಸೇರಿಕೊಂಡಿದ್ದಾರೆ. ಆನಂತರ ನಾನು ಎಲ್ಲೂ ಹೋಗಿಲ್ಲ. ಶೀತ ಕೆಮ್ಮು ಜ್ವರ ಶುರುವಾದ ಬಳಿಕ ನೇರವಾಗಿ ಜಿಲ್ಲಾಸ್ಪತ್ರೆಗೆ ಬಂದಿದ್ದಾಗಿ ಹೇಳಿಕೊಂಡಿದ್ದಾರೆ. ಉಡುಪಿ ಡಿಎಚ್‍ಒ ಜಿಲ್ಲಾಡಳಿತದ ಸಿಬ್ಬಂದಿ, ಪೊಲೀಸರು ಸೋಂಕಿತ ವ್ಯಕ್ತಿಯ ಟ್ರಾವೆಲ್ ಹಿಸ್ಟ್ರಿ ಬಗ್ಗೆ ತರತರನಾಗಿ ವಿಚಾರಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸೋಂಕಿತ ಮಾತ್ರ ಇಷ್ಟನ್ನೇ ಹೇಳಿಕೊಂಡಿದ್ದಾರೆ.

    ಕೊರೊನಾ ಸೋಂಕಿತ ವ್ಯಕ್ತಿ ಎಂದು ದೃಢವಾದ ಕೂಡಲೇ ಸೋಂಕಿತನ ಪರಿಚಯಸ್ಥರು, ಸುತ್ತಮುತ್ತಲಿನವರು ಜಿಲ್ಲಾಡಳಿತಕ್ಕೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಐದು ದಿನಗಳಲ್ಲಿ ಸೋಂಕಿತ ವ್ಯಕ್ತಿ ಮಣಿಪಾಲ, ಉಡುಪಿ ಸುತ್ತಮುತ್ತ ಓಡಾಟ ಮಾಡಿದ್ದಾರೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಂಕಿತ ವ್ಯಕ್ತಿಯ ಫೋನ್ ನೆಟ್‌ವರ್ಕ್‌ ಟ್ರ್ಯಾಕ್ ಮಾಡಲು ಜಿಲ್ಲಾಧಿಕಾರಿ ಜಿ.ಜಗದೀಶ್, ಎಸ್‍ಪಿ ವಿಷ್ಣುವರ್ಧನ್ ಅವರಿಗೆ ಆದೇಶಿಸಿದ್ದಾರೆ.

    ದುಬೈನಿಂದ ಮಾರ್ಚ್ 10ರಂದು ಬಂದಿಳಿದಿದ್ದ ಸೋಂಕಿತ ವ್ಯಕ್ತಿಯ ಫೋನ್ ನೆಟ್‌ವರ್ಕ್‌ ಎಲ್ಲೆಲ್ಲಿ ಹರಿದಾಡಿದೆ ಎಂಬ ಬಗ್ಗೆ ಪೊಲೀಸರು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಹೋಂ ಕ್ವಾರಂಟೈನ್‍ನಲ್ಲಿ ಇದ್ದ ಸಂದರ್ಭ ತಾವು ಐದು ದಿನವೂ ಆನ್‍ಲೈನ್ ಮೂಲಕ ಆಹಾರ ತರಿಸಿಕೊಂಡಿರುವುದಾಗಿ ತಿಳಿಸಿದ್ದರು. ಯಾರ ಜೊತೆಯೂ ನೇರವಾಗಿ ಸಂಪರ್ಕ ಮಾಡಿಲ್ಲ ಎಂದು ಹೇಳಿಕೊಂಡಿದ್ದರು. ಆದರೆ ಫೋನ್ ನೆಟ್ವರ್ಕ್ ಟ್ರ್ಯಾಕ್ ಮಾಡಿರುವ ಪೊಲೀಸರಿಗೆ ಸೋಂಕಿತ ವ್ಯಕ್ತಿಯ ಹೇಳಿಕೆ ಮತ್ತು ನೆಟ್ ವರ್ಕ್ ಗೆ ಸಂಬಂಧ ಇದೆಯೋ ಇಲ್ಲವೋ ಎಂದು ಇಂದು ಗೊತ್ತಾಗಲಿದೆ.

    ಮೂಲತಃ ದಾವಣಗೆರೆ ಜಿಲ್ಲೆಯವರಾದ ಸೋಂಕಿತ ವ್ಯಕ್ತಿ ಮಣಿಪಾಲ ಕೆಎಂಸಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದಾರೆ. ಹೋಮ್ ಕ್ವಾರಂಟೈನ್‍ನಲ್ಲಿ ಇದ್ದ ಸಂದರ್ಭದಲ್ಲಿ ಅವರು ಸಾರ್ವಜನಿಕವಾಗಿ ಓಡಾಡಿದ್ದರೆ, ಜನರನ್ನು ಸಂಪರ್ಕಿಸಿದ್ದರೆ, ಅವರಿಗೂ ಸೋಂಕು ತಗಲುವ ಸಾಧ್ಯತೆ ಇದೆ. ಸಂಪರ್ಕ ಮಾಡಿದ ವ್ಯಕ್ತಿಗಳನ್ನು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದು ಗಂಟಲ ದ್ರವ ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ. ಲ್ಯಾಬ್ ಟೆಕ್ನಿಷನ್ ಆಗಿರುವ ಸೋಂಕಿತ ವ್ಯಕ್ತಿ ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದರೆ ದೊಡ್ಡ ಅವಘಡ ತಪ್ಪಿದಂತಾಗುತ್ತದೆ. ಉಡುಪಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಪೊಲೀಸರ ಮಾಹಿತಿಗಾಗಿ ಕಾಯುತ್ತಿದೆ.

  • ದೇಶದಲ್ಲಿ ಇಂದು ಒಂದೇ ದಿನಕ್ಕೆ ಕೊರೊನಾಗೆ ಇಬ್ಬರು ಬಲಿ

    ದೇಶದಲ್ಲಿ ಇಂದು ಒಂದೇ ದಿನಕ್ಕೆ ಕೊರೊನಾಗೆ ಇಬ್ಬರು ಬಲಿ

    – ಸಾವಿನ ಸಂಖ್ಯೆ 15ಕ್ಕೆ ಏರಿಕೆ

    ನವದೆಹಲಿ: ಮಾರಕ ಕೊರೊನಾ ವೈರಸ್ ದೇಶದಲ್ಲಿ ಇಂದು ಒಂದೇ ದಿನಕ್ಕೆ ಇಬ್ಬರನ್ನು ಬಲಿ ಪಡೆದುಕೊಂಡಿದ್ದು, ಈವರೆಗೆ ಕೊರೊನಾ ಸೋಂಕಿತ 15 ಜನರು ಮೃತಪಟ್ಟಿದ್ದಾರೆ.

    ಜಮ್ಮು-ಕಾಶ್ಮೀರದಲ್ಲಿ ಸಿಂಗಪುರ್‌ನ ಹೈದರ್‌ಪೊರಾದಿಂದ ಬಂದಿದ್ದ 65 ವರ್ಷದ ಕೊರೊನಾ ಸೋಂಕಿತ ವೃದ್ಧ ಇಂದು ಮೃತಪಟ್ಟಿದ್ದಾರೆ. ಈ ಮೂಲಕ ಜಮ್ಮು-ಕಾಶ್ಮೀರದಲ್ಲಿ ಕೊರೊನಾಗೆ ಮೊದಲ ಬಲಿ ಇದಾಗಿದೆ. ಅಷ್ಟೇ ಅಲ್ಲದೆ ಅವರ ಜೊತೆಗೆ ಸಂಪರ್ಕ ಹೊಂದಿದ್ದ ನಾಲ್ವರಿಗೆ ಕೊರೊನಾ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.

    ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಕೊರೊನಾ ಸೋಂಕಿತ 65 ವರ್ಷದ ವೃದ್ಧೆ ನಿಧನರಾಗಿದ್ದಾರೆ. ಮುಂಬೈ ಮತ್ತು ಥಾಣೆಗಳಲ್ಲಿ ಹೊಸದಾಗಿ ಎರಡು ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಇಲ್ಲಿಯವರೆಗೆ ಮಹಾರಾಷ್ಟ್ರದಲ್ಲಿ ಒಟ್ಟು 124 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಅಷ್ಟೇ ಅಲ್ಲದೆ ಒಟ್ಟು ಮೂವರು ಮೃತಪಟ್ಟಿದ್ದಾರೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ತಿಳಿಸಿದೆ.

    ವಿಶ್ವದಾದ್ಯಂತ 21,000ಕ್ಕೂ ಹೆಚ್ಚು ಜನರು ಕೊರೊನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇಟಲಿಯಲ್ಲಿ ಅಷ್ಟೇ 7,500ಕ್ಕೂ ಹೆಚ್ಚು ಸಾವುಗಳು ದಾಖಲಾಗಿವೆ. ಸ್ಪೇನ್‍ನಲ್ಲಿ 3,600ಕ್ಕೂ ಹೆಚ್ಚು ಮೃತಪಟ್ಟಿದ್ದು, ಚೀನಾದ ಸಾವಿನ ಸಂಖ್ಯೆಯನ್ನು ದಾಟಿದೆ. ಅಮೆರಿಕದಲ್ಲಿ ಕೊರೊನಾ ಸೋಂಕಿನಿಂದ 900ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 60,000 ಮಂದಿ ಸೋಂಕಿತರಿದ್ದಾರೆ. ಇರಿಂದಾಗಿ ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ದೊಡ್ಡಣ್ಣ ಅಪಾಯಕಾರಿ ಮಟ್ಟವನ್ನು ತಲುಪಿದೆ.

    ಭಾರತದಲ್ಲಿ ಇಲ್ಲಿಯವರೆಗೆ 600ಕ್ಕೂ ಹೆಚ್ಚು ಪ್ರಕರಣಗಳಿದ್ದು, 15 ಜನರು ಮೃತಪಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು 21 ದಿನಗಳ ಕಾಲ ದೇಶವನ್ನು ಸಂಪೂರ್ಣ ಲಾಕ್‍ಡೌನ್ ಮಾಡುವಂತೆ ಆದೇಶ ನೀಡಿದ್ದಾರೆ. ಈ ಮೂಲಕ ಮನೆಯೊಳಗೆ ಇರಲು ಮತ್ತು ಅಗತ್ಯಗಳಿಗಾಗಿ ಮಾತ್ರ ಮನೆಯಿಂದ ಹೊರಗೆ ಬರುವಂತೆ ತಿಳಿಸಲಾಗಿದೆ.

    ಭಾರತದಲ್ಲಿ ಬುಧವಾರ ಒಂದೇ ದಿನಕ್ಕೆ 100ಕ್ಕೂ ಹೆಚ್ಚು ಕೊರೊನಾ ಹೊಸ ಪ್ರಕರಣಗಳು ಹಾಗೂ 3 ಸಾವು ದಾಖಲಿಸಿದೆ. 125 ಪ್ರಕರಣಗಳೊಂದಿಗೆ ಮಹಾರಾಷ್ಟ್ರ ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿದ ರಾಜ್ಯವಾಗಿದೆ.

  • ಕೊರೊನಾ ವಿರುದ್ಧದ ಹೋರಾಟಕ್ಕೆ 2 ಕೋಟಿ ರೂ. ದೇಣಿಗೆ ನೀಡಿದ ಪವನ್ ಕಲ್ಯಾಣ್

    ಕೊರೊನಾ ವಿರುದ್ಧದ ಹೋರಾಟಕ್ಕೆ 2 ಕೋಟಿ ರೂ. ದೇಣಿಗೆ ನೀಡಿದ ಪವನ್ ಕಲ್ಯಾಣ್

    ಹೈದರಾಬಾದ್: ಜನಸೇನಾ ಪಕ್ಷದ ಮುಖ್ಯಸ್ಥ, ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ಕೊರೊನಾ ವಿರುದ್ಧದ ಹೋರಾಟಕ್ಕೆ ಎರಡು ಕೋಟಿ ರೂ. ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ.

    ಕೊರೊನಾ ವೈರಸ್ ದೇಶಾದ್ಯಂತ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಪವನ್ ಕಲ್ಯಾಣ್ ಸಹಾಯಕ್ಕೆ ಮುಂದಾಗಿದ್ದಾರೆ. ಅವರು ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ಕೇಂದ್ರ ಸರ್ಕಾರಕ್ಕೆ ಸೇರಿ ಒಟ್ಟು 2 ಕೋಟಿ ರೂ. ದೇಣಿಗೆ ನೀಡಲಿದ್ದಾರೆ. ಇದನ್ನೂ ಓದಿ: ಕೊರೊನಾ ಪರಿಹಾರ ನಿಧಿಗೆ ತನ್ನ 6 ತಿಂಗ್ಳ ಸಂಬಳ ನೀಡಿದ ಭಾರತದ ಕುಸ್ತಿಪಟು

    ಈ ಕುರಿತು ಟ್ವೀಟ್ ಮಾಡಿವ ಪವನ್ ಕಲ್ಯಾಣ್, ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ ತಲಾ 50 ಲಕ್ಷ ರೂ.ನಂತೆ 1 ಕೋಟಿ ರೂ. ದೇಣಿಗೆ ನೀಡುತ್ತೇನೆ. ಅಷ್ಟೇ ಅಲ್ಲದೆ ಪ್ರಧಾನ ಮಂತ್ರಿ ವಿಪತ್ತು ಪರಿಹಾರ ನಿಧಿಗೆ ಒಂದು ಕೋಟಿ ನೀಡಲು ನಿರ್ಧರಿಸಿರುವೆ ಎಂದು ತಿಳಿಸಿದ್ದಾರೆ

    ಇನ್ನೊಂದೆಡೆ ಪವನ್ ಕಲ್ಯಾಣ್ ಅವರು ಕೇಂದ್ರ ಸರ್ಕಾರದ ಸಂದೇಶ ಮತ್ತು ಸಲಹೆಯನ್ನು ಸ್ವಾಗತಿಸಿದ್ದಾರೆ. ‘ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಪೂರ್ಣ ಬೆಂಬಲ ನೀಡುತ್ತೇನೆ. ಜನಸೇನಾ ಪಕ್ಷದ ಮುಖ್ಯಸ್ಥರು ಹಾಗೂ ದೇಶದ ಪ್ರತಿಯೊಬ್ಬ ಪ್ರಜೆ ಪ್ರಧಾನಿ ಮೋದಿ ಅವರ ಸಲಹೆಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದ್ದಾರೆ. ಜೊತೆಗೆ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿ ಹಾಗೂ ಇತರರ ಸೇವೆಗಳನ್ನು ಪವನ್ ಕಲ್ಯಾಣ್ ಶ್ಲಾಘಿಸಿದ್ದಾರೆ.

    ಪವನ್ ಕಲ್ಯಾಣ್ ಅವರು ಸಿನಿಮಾ ಕ್ಷೇತ್ರಕ್ಕೆ ಪುನರಾಗಮನ ಮಾಡಿದ್ದು, ಮುಂಬರುವ ಅವರ ‘ವಕೀಲ್ ಸಾಬ್’ ಚಿತ್ರವನ್ನು ವೇಣು ಶ್ರೀರಾಮ್ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅಂಜಲಿ ಮತ್ತು ನಿವೇತಾ ಥಾಮಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  • ಒಂದು ಕೆಜಿ ಮಟನ್‍ಗೆ ಎರಡು ಭದ್ರಕೋಟೆ ಭೇದಿಸಬೇಕು

    ಒಂದು ಕೆಜಿ ಮಟನ್‍ಗೆ ಎರಡು ಭದ್ರಕೋಟೆ ಭೇದಿಸಬೇಕು

    ಹಾಸನ: ಕೊರೊನಾ ಎಫೆಕ್ಟ್‌ನಿಂದಾಗಿ ಮಟನ್ ಮಾರಲು ಅವಕಾಶ ಕೊಡುತ್ತಾರೋ ಇಲ್ಲವೋ ಎಂಬ ಅನುಮಾನದಲ್ಲಿ ಹಾಸನದಲ್ಲಿ ಬಹುತೇಕ ಮಟನ್ ಅಂಗಡಿ ಮಾಲೀಕರು ಇಂದು ವ್ಯಾಪರಕ್ಕೆ ಇಳಿಯಲು ಹಿಂದೇಟು ಹಾಕಿದರು. ಇದರಿಂದಾಗಿ ಜನ ಕಿ.ಮೀ.ಗಟ್ಟಲೆ ಕ್ಯೂ ನಿಂತು ಮಟನ್ ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಹಾಸನ ಜಿಲ್ಲಾಡಳಿತ ಇಂದು ಮಧ್ಯಾಹ್ನದವರೆಗೆ ಮಟನ್ ಮಾರಲು ಅವಕಾಶ ನೀಡುವುದಾಗಿ ಬುಧವಾರವೇ ತಿಳಿಸಿತ್ತು. ಆದರೆ ಮಟನ್ ಮಾರ್ಕೆಟ್‍ನಲ್ಲಿ ಕೇವಲ ಮೂರು ಅಂಗಡಿಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಇದರಿಂದಾಗಿ ಏಕಾಏಕಿ ಮಟನ್‍ಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಮಟನ್ ಖರೀದಿಗಾಗಿ ಜನರು ಈಗ ಎರಡು ಕೋಟೆಯನ್ನು ಭೇದಿಸಿ ಯಶಸ್ವಿಯಾಗಬೇಕಿದೆ.

    ಮೊದಲು ಮಟನ್ ಮಾರ್ಕೆಟ್ ಒಳಗೆ ಹೋಗಲು ಗ್ರಾಹಕರು ಕ್ಯೂ ನಿಲ್ಲಬೇಕು. ಈ ಕ್ಯೂ ಸುಮಾರು ಒಂದು ಕಿ.ಮೀ.ನಷ್ಟು ದೂರ ವ್ಯಾಪಿಸಿದೆ. ಕ್ಯೂ ಭೇದಿಸಿ ಬಂದವರು ನಂತರ ಮಟನ್ ಅಂಗಡಿ ಮುಂದೆ ಮತ್ತೊಂದು ಕ್ಯೂನಲ್ಲಿ ನಿಂತು ಮಟನ್ ಖರೀದಿಸಬೇಕು. ಮಟನ್ ಮಾರ್ಕೆಟ್ ಒಳಗೆ ಏಕಾಏಕಿ ನೂಕುನುಗ್ಗಲು ನಿಯಂತ್ರಿಸಲು ನಗರಸಭೆ ಈ ರೀತಿಯ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಇಷ್ಟೆಲ್ಲ ಕಷ್ಟದ ನಡುವೆ ಮಟನ್ ಸಿಗಲು ಹಾಸನದಲ್ಲಿ ಕನಿಷ್ಠ ಒಂದು ಗಂಟೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗೆ ಪ್ರಯತ್ನಿಸಿದರೂ ಮಟನ್ ಸಿಗುವ ಭರವಸೆ ಕೂಡ ಇಲ್ಲದಂತಾಗಿದ್ದು ಜನ ಕೊರೊನಾ ವೈರಸ್‍ಗೆ ಹಿಡಿಶಾಪ ಹಾಕುತ್ತಿದ್ದಾರೆ.

  • ಕೊರೊನಾಗೆ ಜಮ್ಮು-ಕಾಶ್ಮೀರದಲ್ಲಿ ಮೊದಲ ಬಲಿ, ದೇಶದಲ್ಲಿ ಸಾವಿನ ಸಂಖ್ಯೆ 12ಕ್ಕೆ ಏರಿಕೆ

    ಕೊರೊನಾಗೆ ಜಮ್ಮು-ಕಾಶ್ಮೀರದಲ್ಲಿ ಮೊದಲ ಬಲಿ, ದೇಶದಲ್ಲಿ ಸಾವಿನ ಸಂಖ್ಯೆ 12ಕ್ಕೆ ಏರಿಕೆ

    ಶ್ರೀನಗರ: ಮಹಾಮಾರಿ ಕೊರೊನಾ ವೈರಸ್‍ಗೆ ಜಮ್ಮು-ಕಾಶ್ಮೀರದಲ್ಲಿ ಮೊದಲ ಬಲಿಯಾಗಿದೆ. ಈ ಮೂಲಕ ದೇಶದಲ್ಲಿ ಸಾವಿನ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.

    ಸಿಂಗಪುರ್‌ನ ಹೈದರ್‌ಪೊರಾದಿಂದ ಬಂದಿದ್ದ 65 ವರ್ಷದ ಕೊರೊನಾ ಸೋಂಕಿತ ವೃದ್ಧ ಇಂದು ಮೃತಪಟ್ಟಿದ್ದಾರೆ. ಅಷ್ಟೇ ಅಲ್ಲದೆ ಅವರ ಜೊತೆಗೆ ಸಂಪರ್ಕ ಹೊಂದಿದ್ದ ನಾಲ್ವರಿಗೆ ಕೊರೊನಾ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.

    ತಮಿಳುನಾಡಿ ರಾಜ್ಯದ ಮಧುರೈನ ರಾಜಾಜಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೊರೊನಾ ಸೋಂಕಿತ ರೋಗಿ ಬುಧವಾರ ನಿಧನರಾಗಿದ್ದರು. ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದ ತಮಿಳುನಾಡಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಡಾ. ಸಿ.ವಿಜಯಬಾಸ್ಕರ್, ಮೃತ ವ್ಯಕ್ತಿಯು ಶ್ವಾಸಕೋಶ ಸಂಬಂಧಿ ಕಾಯಿಲೆ, ಅಧಿಕ ರಕ್ತದೊತ್ತಡ, ಮಧುಮೇಹದಿಂದಾಗಿ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿಸಿದ್ದರು.

    ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಏಪ್ರಿಲ್ 14ರವರೆಗೂ ಲಾಕ್‍ಡೌನ್ ಘೋಷಿಸಿದ್ದಾರೆ. ಆದರೆ ಕೆಲವರು ಲಾಕ್‍ಡೌನ್ ಉಲ್ಲಂಘಿಸಿ ಉದ್ಧಟತನ ಮೆರೆಯುತ್ತಿದ್ದಾರೆ. ಹೀಗಾಗಿ ಕೊರೊನಾ ದೇಶದಲ್ಲಿ ಮತ್ತಷ್ಟು ಆತಂಕ ಹೆಚ್ಚಿಸುತ್ತಿದೆ. ಭಾರತ ಲಾಕ್‍ಡೌನ್ ಮೊದಲ ದಿನವೇ 70 ಹೊಸ ಪ್ರಕರಣಗಳು ಪತ್ತೆಯಾಗಿವೆ.

    ಗುರುವಾರ ಬೆಳಗ್ಗೆ 9:30 ಗಂಟೆಯ ಮಾಹಿತಿ ಪ್ರಕಾರ ದೇಶದಲ್ಲಿ 664 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಅವರಲ್ಲಿ 12 ಜನರ ಮೃತಪಟ್ಟಿದ್ದಾರೆ. ಉಳಿದಂತೆ 609 ಜನ ಜನ ಚಿಕಿತ್ಸೆ ಪಡೆಯುತ್ತಿದ್ದು, 43 ಮಂದಿ ಗುಣಮುಖರಾಗಿದ್ದಾರೆ.