Tag: Coronavirus

  • ತುಮಕೂರಿನಲ್ಲಿ ಕೊರೊನಾಗೆ ಮೊದಲ ಸಾವು

    ತುಮಕೂರಿನಲ್ಲಿ ಕೊರೊನಾಗೆ ಮೊದಲ ಸಾವು

    – ರಾಜ್ಯದಲ್ಲಿ ಕೊರೊನಾಗೆ 3ನೇ ಬಲಿ

    ತುಮಕೂರು: ಜಿಲ್ಲೆಯಲ್ಲಿ ಮೊದಲ ಕೊರೊನಾ ವೈರಸ್ ಸೋಂಕಿತರೊಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

    ಶಿರಾ ಮೂಲದ 65 ವರ್ಷದ ವೃದ್ಧ ಎಂದು ಗುರುತಿಸಲಾಗಿದೆ. ಮೃತರಿಗೆ ಸುಮಾರು ಐದು ದಿನದಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಕೊರೊನಾ ಶಂಕಿತ ಎಂದು ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ  ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ 10.45ಕ್ಕೆ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಕೊರೊನಾದಿಂದ್ಲೇ ಚಿಕ್ಕಬಳ್ಳಾಪುರದ ಮಹಿಳೆ ಸಾವು- ಶ್ರೀರಾಮುಲು ದೃಢ

    ಮೃತ ವೃದ್ಧ ಮಾರ್ಚ್ 5ಕ್ಕೆ ದೆಹಲಿಗೆ ಹೋಗಿದ್ದರು. ಮಾರ್ಚ್ 18 ರಂದು ಜ್ವರ ಕಾಣಿಸಿಕೊಂಡಿದೆ. ತಕ್ಷಣ ಅವರು ಶಿರಾದಿಂದ ಬಸ್ಸಿನಲ್ಲಿ ಬಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಅಲ್ಲಿಂದ 19 ಮತ್ತು 20 ರಂದು ಎಲ್ಲಾ ಕಡೆ ಓಡಾಡಿದ್ದರು. ಆದರೆ ಜ್ವರ ವಾಸಿಯಾಗಿರಲಿಲ್ಲ. ಕೊನೆಗೆ ಮಾರ್ಚ್ 23 ರಂದು ಜಿಲ್ಲಾಸ್ಪತ್ರೆಗೆ ಬಂದು ದಾಖಲಾಗಿದ್ದು. ಅಂದಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಗುರುವಾರದವರೆಗೂ ತುಮಕೂರಿನಲ್ಲಿ ಒಂದೇ ಒಂದು ಕೊರೊನಾ ವೈರಸ್ ಸೋಂಕಿತರು ಇರಲಿಲ್ಲ. ಕಳೆದ ದಿನ ಎರಡು ಕೊರೊನಾದ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿತ್ತು. ತಡರಾತ್ರಿ ಕೊರೊನಾ ವರದಿ ಬಂದಿದ್ದು, ಅದರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಆದರೆ ಕೊರೊನಾ ಪಾಸಿಟಿವ್ ವರದಿ ಬಂದ ಮರುದಿನ ಬೆಳಗ್ಗೆಯೇ ವೃದ್ಧ ಮೃತಪಟ್ಟಿದ್ದಾರೆ.

    ವೃದ್ಧನ ಕುಟುಂಬದಲ್ಲಿ ಮೂವರು ಪತ್ನಿಯರು ಮತ್ತು 16 ಮಕ್ಕಳು ಸೇರಿದಂತೆ 25 ಮಂದಿ ಇದ್ದು, ಅವರನ್ನು ಐಸೋಲೇಶನ್‍ನಲ್ಲಿ ಇರಿಸಲಾಗಿದೆ. ಅಲ್ಲದೇ ವೃದ್ಧ 33 ಮಂದಿ ಜೊತೆ ಸಂಪರ್ಕ ಹೊಂದಿದ್ದರು. ಅವರ ಮೇಲೂ ತೀವ್ರ ನಿಗಾ ವಹಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಟ್ರಾವೆಲ್ ಇಸ್ಟರಿ:
    ಮಾರ್ಚ್ 5ಕ್ಕೆ ತುಮಕೂರಿನಿಂದ ದೆಹಲಿಗೆ ಪ್ರಯಾಣ ಮಾಡಿದ್ದು, ಸಂಪರ್ಕ ಕ್ರಾಂತಿ ರೈಲಿನಲ್ಲಿ 13 ಮಂದಿ ಜೊತೆ ಪ್ರಯಾಣ. ಎಸ್-6 ಬೋಗಿಯಲ್ಲಿ ವೃದ್ಧ ಪ್ರಯಾಣಿಸಿದ್ದ. ಮಾರ್ಚ್ 7 ದೆಹಲಿಗೆ ತಲುಪಿದ್ದು, ಜಾಮೀಯಾ ಮಸೀದಿಗೆ ಟ್ಯಾಕ್ಸಿಯಲ್ಲಿ ಹೋಗಿದ್ದರು. ಮಾರ್ಚ್ 11 ದೆಹಲಿಯಿಂದ ಕಾಂಗೋ ಎಕ್ಸ್ ಪ್ರೆಸ್ ಎಸ್ 9 ಮೂಲಕ ಬೆಂಗಳೂರಿಗೆ ವಾಪಸ್ ಆಗಿದ್ದರು. ಮಾರ್ಚ್ 14 ರಂದು ಬೆಳಗ್ಗೆ ಬೆಂಗಳೂರಿಂದ ಕೆಎಸ್ಆರ್‌ಟಿಸಿ ಬಸ್ಸಿನಲ್ಲಿ ತುಮಕೂರಿನ ಶಿರಾಗೆ ಹೋಗಿದ್ದರು. ಮಾ. 18ರಂದು ಕೆಮ್ಮು, ಜ್ವರ ಕಾಣಿಸಿಕೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಅಲ್ಲದೇ ಮಾಚ್ 21 ರಂದು ಎಕ್ಸ್ ರೇ ಮಾಡಿಸಿದ್ದು, ಜಿಲ್ಲಾಸ್ಪತ್ರೆಗೆ ಬಂದು ದಾಖಲಾಗಿದ್ದರು.

    ಕರ್ನಾಟಕದಲ್ಲಿ ಕೊರೊನಾ ವೈರಸ್‍ಗೆ ಮೊದಲು ಕಲಬುರಗಿಯಲ್ಲಿ ವೃದ್ಧನೊಬ್ಬ ಮೃತಪಟ್ಟಿದ್ದನು. ನಂತರ ಗೌರಿಬಿದನೂರು ಮಹಿಳೆ, ಇಂದು ತುಮಕೂರಿನ ಶಿರಾ ಮೂಲದ ವೃದ್ಧ ಮೃತಪಟ್ಟಿದ್ದಾರೆ. ಈ ಮೂಲಕ ಕೊರೊನಾಗೆ ಕರ್ನಾಟಕದಲ್ಲಿ ಮೂವರು ಸಾವನ್ನಪ್ಪಿದ್ದಾರೆ.

  • ಮಹಾರಾಷ್ಟ್ರದಿಂದ ಬಂದ 51 ಯುವಕರಿಗೆ ಕೊರೊನಾ ತಪಾಸಣೆ

    ಮಹಾರಾಷ್ಟ್ರದಿಂದ ಬಂದ 51 ಯುವಕರಿಗೆ ಕೊರೊನಾ ತಪಾಸಣೆ

    ಶಿವಮೊಗ್ಗ: ಮಹಾರಾಷ್ಟ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಜಿಲ್ಲೆಯ ವಿವಿಧ ಗ್ರಾಮಗಳ ಯುವಕರು ಇಂದು ಬೆಳಗ್ಗೆ ಶಿವಮೊಗ್ಗಕ್ಕೆ ವಾಪಸ್ ಆಗಿದ್ದಾರೆ.

    ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ 21 ದಿನಗಳ ಕಾಲ ಭಾರತ ಲಾಕ್‍ಡೌನ್ ಆಗಿದೆ. ಕೆಲಸ ಇಲ್ಲದ ಕಾರಣ ಜಿಲ್ಲೆಯ 51 ಜನ ಯುವಕರ ತಂಡ ಶಿವಮೊಗ್ಗಕ್ಕೆ ಮರಳಿದೆ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಜಿಲ್ಲಾಡಳಿತ ಎಲ್ಲಾ ಯುವಕರನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿತು.

    ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಾರಣ ಈ ಯುವಕರ ತಂಡ ಗ್ರಾಮೀಣ ಭಾಗಗಳಿಗೆ ತೆರಳುವ ಮುನ್ನ ತಪಾಸಣೆ ನಡೆಸಿದ್ದಾರೆ. ಅಲ್ಲದೇ ಅಗತ್ಯವಿದ್ದರೆ ಆಸ್ಪತ್ರೆಯಲ್ಲಿ ಕ್ವಾರಂಟೈನ್‍ಗೆ ಒಳಪಡಿಸಲಾಗುವುದು ಎಂದು ಸಹ ವೈದ್ಯರು ತಿಳಿಸಿದ್ದಾರೆ.

  • ಕೊರೊನಾ ಬಂದಿದೆ ಎಂದು ಅಪಹಾಸ್ಯ- ಮಚ್ಚು ಹಿಡಿದು ಸ್ನೇಹಿತರನ್ನ ಅಟ್ಟಾಡಿಸಿದ ಯುವಕ

    ಕೊರೊನಾ ಬಂದಿದೆ ಎಂದು ಅಪಹಾಸ್ಯ- ಮಚ್ಚು ಹಿಡಿದು ಸ್ನೇಹಿತರನ್ನ ಅಟ್ಟಾಡಿಸಿದ ಯುವಕ

    ಚಿಕ್ಕಬಳ್ಳಾಪುರ: ಪದೇ ಪದೇ ಕೆಮ್ಮುತ್ತಿದ್ದಕ್ಕೆ ಕೊರೊನಾ ಬಂದಿದೆ ಅಂತ ಸ್ನೇಹಿತರು ಅಪಹಾಸ್ಯ ಮಾಡಿದ್ದಕ್ಕೆ ರೊಚ್ಚಿಗೊದ್ದ ಯುವಕ ಮಚ್ಚುಹಿಡಿದು ಹುಚ್ಚಾಟ ನಡೆಸಿದ ಘಟನೆ ಶಿಡ್ಲಘಟ್ಟ ತಾಲೂಕಿನ ಹಿತ್ತಲಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಹಿತ್ತಲಹಳ್ಳಿ ಗ್ರಾಮದ ಹರೀಶ್ ಮಚ್ಚುಹಿಡಿದು ಹುಚ್ಚಾಟ ನಡೆಸಿದ ಯುವಕ. ಹರೀಶ್ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದಾನೆ. ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಗ್ರಾಮದಲ್ಲಿನ ಹರೀಶ್ ಸ್ನೇಹಿತರು ಸುಖಾಸುಮ್ಮನೆ ಕೊರೊನಾ ಬಂದಿದೆ ಅಂತ ರೇಗಿಸುತ್ತಿದ್ದರು. ಇದರಿಂದ ಕೋಪಗೊಂಡ ಯುವಕ ಹರೀಶ್ ಮಚ್ಚು ಹಿಡಿದು ಬಂದು ಹುಚ್ಚಾಟ ಮೆರೆದಿದ್ದಾನೆ. ಈ ವಿಡಿಯೋವನ್ನ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ಕಂಡ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಯುವಕನಿಗಾಗಿ ಹುಡುಕಾಡ ನಡೆಸಿದ್ದಾರೆ.

    ಪೊಲೀಸರು ಹುಡಾಕಾಡುತ್ತಿರುವ ವಿಷಯ ತಿಳಿದ ಹರೀಶ್ ಊರು ಬಿಟ್ಟು ನಾಪತ್ತೆಯಾಗಿದ್ದಾನೆ. ಹಿತ್ತಲಹಳ್ಳಿ ಗ್ರಾಮದ ಯುವಕರು ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಮಾದರಿಯಾಗಿದ್ದರು. ಆದರೆ ಈಗ ಯುವಕ ಹರೀಶ್‍ನ ಹುಚ್ಚಾಟದಿಂದ ಹಿತ್ತಲಹಳ್ಳಿ ಗ್ರಾಮಕ್ಕೆ ಕೆಟ್ಟು ಹೆಸರು ಬರುವಂತಾಗಿದೆ ಅಂತ ಗ್ರಾಮಸ್ಥರು ನೊಂದುಕೊಂಡಿದ್ದಾರೆ.

  • ನನಗೆ ಕೊರೊನಾ ಸೋಂಕಿದೆ ಕಾಪಾಡಿ- ಬಿಎಸ್‍ವೈಗೆ ಬೆಳಗಾವಿ ಯೋಧ ಮನವಿ

    ನನಗೆ ಕೊರೊನಾ ಸೋಂಕಿದೆ ಕಾಪಾಡಿ- ಬಿಎಸ್‍ವೈಗೆ ಬೆಳಗಾವಿ ಯೋಧ ಮನವಿ

    ಬೆಳಗಾವಿ: ನನಗೆ ಕೊರೊನಾ ಸೋಂಕಿದೆ ಕಾಪಾಡಿ ಎಂದು ಜಿಲ್ಲೆಯ ಯೋಧರೊಬ್ಬರು ವಿಡಿಯೋ ಮೂಲಕ ಸಿಎಂ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

    ಯೋಧ ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದವರಾಗಿದ್ದು, ಮಾರ್ಚ್ 17ರಂದು ಹೈದರಾಬಾದ್‍ನಿಂದ ಗ್ರಾಮಕ್ಕೆ ಬಂದಿದ್ದಾರೆ. ಆದರೆ ತಮಗೆ ಕೊರೊನಾ ಸೋಂಕು ತಗುಲಿದ್ದು, ವೈದ್ಯಾಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ದಯವಿಟ್ಟು ನನ್ನನ್ನು ಕಾಪಾಡಿ ಎಂದು ಕೇಳಿದ್ದಾರೆ.

    ವಿಡಿಯೋದಲ್ಲಿ ಏನಿದೆ?:
    ನನಗೆ ಕೋವಿಡ 19 ಲಕ್ಷಣಗಳು ಕಾಣಿಸಿಕೊಂಡಿವೆ. ಈಗ ನನ್ನ ತಾಯಿಯಲ್ಲೂ ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿವೆ. ಹುಬ್ಬಳ್ಳಿಯ ಕಿಮ್ಸ್ ವೈದ್ಯರು ನನಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ವಿದೇಶದಿಂದ ಬಂದವರನ್ನು ಮಾತ್ರ ಪರೀಕ್ಷೆಗೆ ಒಳಡಿಸುತ್ತಿದ್ದಾರೆ. ನಿನಗೆ ಏನು ಆಗಿಲ್ಲ ಹೋಗು ಅಂತ ಹೇಳುತ್ತಿದ್ದಾರೆ. ದಯವಿಟ್ಟು ನನ್ನನ್ನು ಹಾಗೂ ನನ್ನ ಕುಟುಂಬವನ್ನು ಕಾಪಾಡಿ. ಸೂಕ್ತ ಚಿಕಿತ್ಸೆ ದೊರೆಯುವಂತೆ ಕ್ರಮಕೈಗೊಳ್ಳಿ ಎಂದು ಯೋಧ ಮನವಿ ಸಲ್ಲಿಸಿದ್ದಾರೆ.

  • ಕೊನೆಗೂ ಕಲಬುರಗಿಯಲ್ಲಿ ಆರಂಭಗೊಂಡ ಕೊರೊನಾ ಟೆಸ್ಟಿಂಗ್ ಲ್ಯಾಬ್

    ಕೊನೆಗೂ ಕಲಬುರಗಿಯಲ್ಲಿ ಆರಂಭಗೊಂಡ ಕೊರೊನಾ ಟೆಸ್ಟಿಂಗ್ ಲ್ಯಾಬ್

    ಕಲಬುರಗಿ: ಕೊನೆಗೂ ಕಲಬುರಗಿಯಲ್ಲಿ ಕೊರೊನಾ ಟೆಸ್ಟಿಂಗ್ ಲ್ಯಾಬ್ ಆರಂಭಗೊಂಡಿದ್ದು, ಇಂದಿನಿಂದ ಕಾರ್ಯಾರಂಭಗೊಂಡಿದೆ.

    ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಲ್ಯಾಬ್ ತೆರೆಯಲಾಗಿದೆ. ಕೊರೊನಾ ಶಂಕಿತ ವ್ಯಕ್ತಿಯ ಕಫಾ, ರಕ್ತದ ಮಾದರಿಯ ಪರೀಕ್ಷೆಯನ್ನು ಇಲ್ಲಿಯೆ ಪರೀಕ್ಷೆಗೊಳಪಡಿಸಲಾಗುತ್ತದೆ. ಇದರಿಂದಾಗಿ ಕೇವಲ ಎರಡೇ ಗಂಟೆಯಲ್ಲಿ ಕೊರೊನಾ ಶಂಕಿತರ ವರದಿ ಸಿಗಲಿದೆ.

    ಆರೋಗ್ಯ ಸಚಿವ ಶ್ರೀರಾಮುಲು ಅವರು ಮಾರ್ಚ್ 18ರಂದು ವಿಧಾನಸೌಧದಲ್ಲಿ ಶೂನ್ಯವೇಳೆಯಲ್ಲಿ ಮಾತನಾಡಿ, ಕೊರೊನಾ ಲಕ್ಷಣ ಪತ್ತೆಗೆ ಇಂದಿನಿಂದ ಕಲಬುರಗಿಯಲ್ಲಿ ಪರೀಕ್ಷಾ ಕೇಂದ್ರ ಆರಂಭ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಇಲ್ಲಿವರೆಗೂ ಲ್ಯಾಬ್ ಆರಂಭವಾಗಿರಲಿಲ್ಲ.

    ಶೂನ್ಯವೇಳೆಯಲ್ಲಿ ಮಾತನಾಡಿದ್ದ ಸಚಿವರು, ರಾಜ್ಯದಲ್ಲಿ ಇದೂವರೆಗೆ 5 ಪ್ರಯೋಗಾಲಯಗಳನ್ನು ಪ್ರಾರಂಭಿಸಲಾಗಿದೆ. ಬೆಂಗಳೂರು 2, ಶಿವಮೊಗ್ಗ, ಹಾಸನ ಮತ್ತು ಮೈಸೂರುಗಳಲ್ಲಿ ತಲಾ 1 ಪರಿಕ್ಷಾ ಲ್ಯಾಬ್ ಗಳು ಇವೆ. ಉಳಿದ ಜಿಲ್ಲೆಗಳಲ್ಲೂ ಸದ್ಯದಲ್ಲೇ ಪರೀಕ್ಷಾ ಲ್ಯಾಬ್ ತೆರೆಯುತ್ತೇವೆ. ಬೆಳಗಾವಿ, ಮಂಗಳೂರು, ಬಳ್ಳಾರಿ, ಬೀದರ್, ಹುಬ್ಬಳ್ಳಿ, ರಾಯಚೂರು ಗಳಲ್ಲೂ ಶೀಘ್ರದಲ್ಲೇ ಲ್ಯಾಬ್‍ಗಳು ಬರಲಿವೆ. ಮಂಗಳೂರಿನಲ್ಲಿ ಪ್ರಯೋಗಾಲಯ ಸ್ಥಾಪನೆಗೆ ಉಪಕರಣ ಖರೀದಿಗೆ ಅನುಮತಿ ನೀಡಿದ್ದೇವೆ ಎಂದು ತಿಳಿಸಿದ್ದರು.

    ಭೀತಿಯಲ್ಲಿ ಕಲಬುರಗಿ:
    ಕಲಬುರಗಿಯಲ್ಲಿ ಮಾರ್ಚ್ 11ರಂದು ಕೊರೊನಾ ಸೋಂಕಿತ ವೃದ್ಧನ ಮೃತಪಟ್ಟ ಬಳಿಕ ಭೀತಿ ಹೆಚ್ಚಳವಾಗಿದೆ. ಕೆಮ್ಮು, ನೆಗಡಿ ಬಂದವರೆಲ್ಲ ಭೀತಿಯಿಂದ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಕಲಬುರಗಿಯಲ್ಲಿ ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಈವರೆಗೆ ಬಹಳಷ್ಟು ಜನರನ್ನು ಪರೀಕ್ಷಗೆ ಒಳಪಟ್ಟಿದ್ದಾರೆ.

  • ಮೂರನೇ ಹಂತಕ್ಕೆ ತಲುಪಿತಾ ಭಾರತ?- ಉಡಾಫೆ ಜನರೇ ಎಚ್ಚರ, ಎಚ್ಚರ

    ಮೂರನೇ ಹಂತಕ್ಕೆ ತಲುಪಿತಾ ಭಾರತ?- ಉಡಾಫೆ ಜನರೇ ಎಚ್ಚರ, ಎಚ್ಚರ

    – ಮಣಿಪಾಲದ ಕೆಎಂಸಿ ಆಸ್ಪತ್ರೆಯ ಒಪಿಡಿ ಬಂದ್

    ಬೆಂಗಳೂರು: ಹೆಮ್ಮಾರಿ, ಡೆಡ್ಲಿ ವೈರಸ್ ಕೊರೊನಾ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಆತಂಕ ಹೆಚ್ಚಿಸುತ್ತಿದೆ. ಬುಧವಾರ 51 ಇದ್ದ ಕೊರೊನಾ ಪ್ರಕರಣ ಗುರುವಾರ ದಿಢೀರ್ 55ಕ್ಕೆ ಏರಿಕೆಯಾಗಿದೆ. ನಿನ್ನೆ ಒಂದೇ ದಿನ ನಾಲ್ಕು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

    ವಿವಿಧ ರಾಜ್ಯಗಳಲ್ಲಿ ನಿತ್ಯವೂ ಸೋಂಕಿತರ ಸಂಖ್ಯೆ ಏರುವುದನ್ನು ಗಮನಿಸಿದರೆ ದೇಶದಲ್ಲಿ ಕೊರೊನಾ 3ನೇ ಹಂತಕ್ಕೆ ಕಾಲಿಟ್ಟಿದೇಯಾ ಎಂಬ ಅನುಮಾನ ಮೂಡಲು ಶುರುವಾಗಿದೆ. ಕರ್ನಾಟಕ, ತೆಲಂಗಾಣ ಮತ್ತು ದೆಹಲಿಯಲ್ಲಿ ಗುರುವಾರ ತಲಾ 4 ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಕೊರೊನಾ ಥರ್ಡ್ ಸ್ಟೇಜ್‍ಗೆ ಲಗ್ಗೆ ಇಟ್ಟಿದೇಯಾ? ಸಮುದಾಯಕ್ಕೆ ಕೊರೊನಾ ಹಬ್ಬುತಿದೇಯಾ ಎಂಬ ಅನುಮಾನಕ್ಕೆ ಕಾರಣ ಆಗಿದೆ.

    ಮಣಿಪಾಲ:
    ಮಣಿಪಾಲದ ಕೆಎಂಸಿ ಆಸ್ಪತ್ರೆ ಇಂದಿನಿಂದ ಏಪ್ರಿಲ್ 15 ರವರೆಗೆ ತನ್ನ ಎಲ್ಲಾ ಒಪಿಡಿ ಸೇವೆಯನ್ನು ಸ್ಥಗಿತಗೊಳಿಸಿದೆ. ತುರ್ತು ಚಿಕಿತ್ಸೆ ಮತ್ತು ಎಮರ್ಜೆನ್ಸಿ ಸೇವೆ ಮಾತ್ರ ಮಣಿಪಾಲ ಕಸ್ತೂರಬಾ ಮೆಡಿಕಲ್ ಕಾಲೇಜಿನಲ್ಲಿ ಸಿಗಲಿದೆ ಎಂದು ವೈದ್ಯಕೀಯ ಅಧೀಕ್ಷಕರು ಪ್ರಕಟಣೆ ಹೊರಡಿಸಿದ್ದಾರೆ.

    ಕೊರೊನಾ ಪಾಸಿಟಿವ್ ಬಂದ ವ್ಯಕ್ತಿಗೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತ ವ್ಯಕ್ತಿಗೆ ಕೆಎಂಸಿಯಲ್ಲಿ ಚಿಕಿತ್ಸೆ ಸಿಗುತ್ತಿರುವುದರಿಂದ ಒಪಿಡಿ ರೋಗಿಗಳಿಗೆ ಯಾವುದೇ ಸಮಸ್ಯೆಗಳು ಆಗಬಾರದು ಎನ್ನುವ ಉದ್ದೇಶದಿಂದ ಕೆಎಂಸಿಯ ವೈದ್ಯಕೀಯ ಅಧೀಕ್ಷಕರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

    ಕೊಡಗು ಜಿಲ್ಲೆಯಾದ್ಯಂತ ಕೊರೊನಾ ಸೋಂಕು ಹರಡದಂತೆ ಮುಂಜಾಗೃತ ಕ್ರಮ ತೆಗೆದುಕೊಳ್ಳಲಾಗಿದೆ. ಮಡಿಕೇರಿಯಲ್ಲಿ ತರಕಾರಿ ಹಾಗೂ ಅಗತ್ಯ ವಸ್ತುಗಳ ಖರೀದಿಸುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ರಮಕೈಗೊಳ್ಳಲಾಗಿದೆ. ಮಾರುಕಟ್ಟೆಯಲ್ಲಿ ಮತ್ತು ಅಂಗಡಿ ಮುಂಗಟ್ಟುಗಳ ಮುಂದೆ ಖುದ್ದು ಪೊಲೀಸರೇ ಲ್ಯಾಂಡ್ ಮಾಕ ಮಾಡಿದ್ದಾರೆ. ಜನರು ಅಂತರಕಾಯ್ದುಕೊಂಡು ವಹಿವಾಟು ನಡೆಸುವಂತೆ ಸೂಚಿಸಿದ್ದಾರೆ.

    ಮೈಸೂರಿನಲ್ಲಿ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಕಿರಾಣಿ ಅಂಗಡಿ ಮಾಲೀಕರು ತಮ್ಮ ಅಂಗಡಿಯನ್ನು ಗಾಜಿನಲ್ಲಿ ಕವರ್ ಮಾಡಿದ್ದಾರೆ. ಮೈಸೂರಿನ ಇಟ್ಟಿಗೆಗೂಡಿನ ರಿಷಭ್ ಬಂಢಾರ್ ದಿನಸಿ ಅಂಗಡಿಯನ್ನು ಮಾಲೀಕರು ಗಾಜಿನಲ್ಲಿ ಮುಚ್ಚಿ ಅಂಗಡಿ ಪಕ್ಕ ಚಿಕ್ಕದೊಂದು ಜಾಗದ ತೆರೆದು ಅಲ್ಲಿಂದ ದಿನಸಿ ಪದಾರ್ಥ ವಿತರಣೆ ಮಾಡುತ್ತಿದ್ದಾರೆ. ಅಂಗಡಿಯ ಹೊರಗೆ ಸರತಿ ಸಾಲಿನಲ್ಲಿ ಮೂರು ಅಡಿ ಅಂತರದಲ್ಲಿ ಮಾರ್ಕಿಂಗ್ ಮಾಡಲಾಗಿದೆ. ಮಾಸ್ಕ್ ಧರಿಸಿ ಬಂದವರಿಗೆ ಮಾತ್ರ ಪದಾರ್ಥ ನೀಡಲಾಗುತ್ತಿದೆ.

  • 199 ದೇಶಗಳ 5.31 ಲಕ್ಷ ಜನರಿಗೆ ಕೊರೊನಾ- ಚೀನಾಕ್ಕಿಂತ ಅಮೆರಿಕದಲ್ಲೇ ಹೆಚ್ಚು

    199 ದೇಶಗಳ 5.31 ಲಕ್ಷ ಜನರಿಗೆ ಕೊರೊನಾ- ಚೀನಾಕ್ಕಿಂತ ಅಮೆರಿಕದಲ್ಲೇ ಹೆಚ್ಚು

    – ಪ್ರಪಂಚದಲ್ಲಿ 24 ಸಾವಿರ ಮಂದಿಯ ಸಾವು

    ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ವಿಶ್ವದಲ್ಲಿ 199 ದೇಶಗಳಿಗೆ ಹಬ್ಬಿದ್ದು, 5.31 ಲಕ್ಷ ಜನರಿಗೆ ಸೋಂಕು ತಗುಲಿದೆ. ಹೆಮ್ಮಾರಿ ಕೊರೊನಾ ವೈರಸ್‍ಗೆ ಈವರೆಗೂ 24 ಸಾವಿರ ಜನ ಬಲಿಯಾಗಿದ್ದಾರೆ.

    ಕೊರಾನಾ ವೈರಸ್‍ಗೆ ಸ್ಪೇನ್‍ನಲ್ಲಿ ಒಂದೇ ದಿನಕ್ಕೆ 718 ಮಂದಿ ಮೃತಪಟ್ಟಿದ್ದು, ಇಟಲಿಯಲ್ಲಿ 712 ಮಂದಿ ಆಹುತಿಯಾಗಿದ್ದಾರೆ. ಫ್ರಾನ್ಸ್‌ನಲ್ಲಿ  365 ಜನ, ಇಂಗ್ಲೆಂಡ್‍ನಲ್ಲಿ 110 ಮಂದಿ ಕೊರೊನಾ ಸಾವು ಸಂಭವಿಸಿದೆ.

    ಅಮೆರಿಕದಲ್ಲಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ಮೂಲಕ ಸೋಂಕಿತರ ಸಂಖ್ಯೆಯಲ್ಲಿ ಚೀನಾ ಮೀರಿಸಿ ಅಮೆರಿಕ ಪ್ರಥಮ ಸ್ಥಾನಕ್ಕೇರಿದೆ. ಗುರುವಾರ ಒಂದೇ ದಿನ 15 ಸಾವಿರ ಹೊಸ ಪ್ರಕರಣಗಳು ಪತ್ತೆಯಾಗಿವೆ. ಅಮೆರಿಕದಲ್ಲಿ ಒಟ್ಟಾರೆ 85 ಸಾವಿರ ಜನರಿಗೆ ಸೋಂಕು ತಗುಲಿದ್ದು, 263 ಮಂದಿ ಬಲಿಯಾಗಿದ್ದಾರೆ. ಚೀನಾನದಲ್ಲಿ ಈವರೆಗೂ 81,340 ಜನರಿಗಷ್ಟೇ ವೈರಸ್ ತಗುಲಿದ್ದು, 3,296 ಜನರು ಮೃತಪಟ್ಟಿದ್ದಾರೆ.

    ಭಾರತದಲ್ಲಿ ಕೊರೊನಾ:
    ದೇಶದಲ್ಲಿ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಅಷ್ಟೇ ಅಲ್ಲದೆ ಸೋಂಕಿತರ ಸಂಖ್ಯೆ 727ಕ್ಕೆ ಏರಿಕೆ ಕಂಡಿದೆ. ರಾಜ್ಯದಲ್ಲಿ 55 ಮಂದಿ ಕೊರೊನಾ ಸೋಂಕಿತ ಪತ್ತೆಯಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಮತ್ತಷ್ಟು ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಜನ ಉದಾಸೀನ, ಉದ್ಧಟತನಕ್ಕೆ ಇಂದಿನಿಂದ ಬ್ರೇಕ್ ಹಾಕಲು ಸರ್ಕಾರ ನಿರ್ಧರಿಸಿದೆ. ಲಾಕ್‍ಡೌನ್ ಪಾಲಿಸದೆ ಬೀದಿಗೆ ಇಳಿದರೆ ಬಂಧಿಸಲು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸಿಎಂ ಯಡಿಯೂರಪ್ಪ ಆದೇಶ ನೀಡಿದ್ದಾರೆ.

  • ಶುಕ್ರವಾರದಿಂದ ಮಣಿಪಾಲ ಕೆಎಂಸಿ ಬಂದ್ – ಒಪಿಡಿ ಸೇವೆ ಸ್ಥಗಿತ

    ಶುಕ್ರವಾರದಿಂದ ಮಣಿಪಾಲ ಕೆಎಂಸಿ ಬಂದ್ – ಒಪಿಡಿ ಸೇವೆ ಸ್ಥಗಿತ

    ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಬಂದ ವ್ಯಕ್ತಿಯನ್ನು ಮಣಿಪಾಲ ಕೆಎಂಸಿಗೆ ಶಿಫ್ಟ್ ಮಾಡಲಾಗಿದೆ. ಅಜ್ಜರಕಾಡು ಜಿಲ್ಲಾ ಸರ್ಕಾರಿ ಆಸ್ಪತ್ರೆಯಿಂದ ಸೋಂಕಿತನನ್ನು ಕೆಎಂಸಿಗೆ ರವಾನಿಸಿದ್ದು, ಕೆಎಂಸಿ ತನ್ನ ಎಲ್ಲಾ ಒಪಿಡಿ ಸೇವೆಯನ್ನು ಸ್ಥಗಿತಗೊಳಿಸಿದೆ.

    ತುರ್ತು ಚಿಕಿತ್ಸೆ ಮಾತ್ರ ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ ಸಿಗಲಿದೆ ಎಂದು ವೈದ್ಯಕೀಯ ಅಧೀಕ್ಷಕರು ಪ್ರಕಟಣೆ ಹೊರಡಿಸಿದ್ದಾರೆ. ಕಿಮೋಥೆರಪಿ ಮತ್ತು ರೇಡಿಯೋ ತೆರಪಿ ಮಾಡಿಸಿಕೊಳ್ಳುವ ರೋಗಿಗಳು ಕೆಎಂಸಿಗೆ ಯಾವುದೇ ಕಾರಣಕ್ಕೆ ಕಾಲಿಡಬಾರದು. ಅವರು ನೇರವಾಗಿ ಶಿರಡಿ ಸಾಯಿಬಾಬಾ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಬೇಕು. ಗರ್ಭಿಣಿ ಸ್ತ್ರೀಯರು ಎಮರ್ಜೆನ್ಸಿ ಮತ್ತು ಒಪಿಡಿ ಕಟ್ಟಡದ ಬಳಿ ಸುಳಿದಾಡುತ್ತಿಲ್ಲ, ಅವರು ನೇರವಾಗಿ ಮಹಿಳಾ ಮತ್ತು ಮಕ್ಕಳ ಘಟಕಕ್ಕೆ ತೆರಳಬೇಕು ಎಂದು ಹೇಳಿದರು.

    ಯಾವುದೇ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಯನ್ನು ಪ್ರವೇಶ ಮಾಡುವವರು ಹೊರಭಾಗದಲ್ಲಿ ಸಂಪೂರ್ಣ ತಪಾಸಣೆಗೆ ಒಳಗಾಗಬೇಕು. ರೋಗದ ಯಾವುದೇ ಲಕ್ಷಣಗಳು ಇದ್ದಲ್ಲಿ ಅಂತಹ ವ್ಯಕ್ತಿಯನ್ನು ಮಣಿಪಾಲ ಕೆಎಂಸಿಯ ಒಳಗೆ ವೈದ್ಯರು ಮತ್ತು ಸಿಬ್ಬಂದಿಗಳು ಬಿಟ್ಟುಕೊಳ್ಳುವುದಿಲ್ಲ. ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ 10 ಮಂದಿ ಕೊರೊನಾ ಸೋಂಕಿತರಿಗೆ ಸಂಪೂರ್ಣ ಚಿಕಿತ್ಸೆ ಕೊಡುವಂತಹ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

    ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಕಾಸರಗೋಡು ಜಿಲ್ಲೆಯಿಂದ ರೋಗಿಗಳು ಕೆಎಂಸಿಗೆ ಬರುತ್ತಾರೆ. ಪ್ರತಿನಿತ್ಯ ಸುಮಾರು 500ರಿಂದ 600 ಮಂದಿ ರೋಗಿಗಳು ಬರುತ್ತಾರೆ. ಸೋಂಕಿತ ವ್ಯಕ್ತಿಗೆ ಕೆಎಂಸಿಯಲ್ಲಿ ಚಿಕಿತ್ಸೆ ಸಿಗುತ್ತಿರುವುದರಿಂದ ಒಪಿಡಿ ರೋಗಿಗಳಿಗೆ ಯಾವುದೇ ಸಮಸ್ಯೆ ಆಗಬಾರದು ಎನ್ನುವ ಉದ್ದೇಶದಿಂದ ಕೆಎಂಸಿಯ ವೈದ್ಯಕೀಯ ಅಧೀಕ್ಷಕರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

  • ಕೊರೊನಾ ಭೀತಿಗೆ ಗ್ರಾಮಕ್ಕೆ ಬಂದ ನೆಂಟರನ್ನೇ ವಾಪಸ್ ಕಳಿಸಿದ್ರು

    ಕೊರೊನಾ ಭೀತಿಗೆ ಗ್ರಾಮಕ್ಕೆ ಬಂದ ನೆಂಟರನ್ನೇ ವಾಪಸ್ ಕಳಿಸಿದ್ರು

    ಚಿಕ್ಕಮಗಳೂರು: ಜಗತ್ತಿನಾದ್ಯಂತ ದಿನದಿಂದ ದಿನಕ್ಕೆ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸೋಂಕಿನ ಭೀತಿಗೆ ಜನ ಮನೆಯಿಂದ ಹೊರಬರೋದಕ್ಕೆ ಹಿಂದೇಟು ಹಾಕ್ತಿದ್ದಾರೆ. ಈಗಾಗಲೇ ಕೆಎಫ್‍ಡಿ ಭಯದಿಂದ ಕಂಗಲಾಗಿರೋ ಮಲೆನಾಡಿಗರಲ್ಲಿ ಮಹಾಮಾರಿ ಕೊರೊನಾ ಮತ್ತಷ್ಟು ಆತಂಕ ಸೃಷ್ಟಿಸಿದೆ.

    ಹೀಗಿರುವಾಗ ಹಳ್ಳಿ ಬಿಟ್ಟು ವರ್ಷವಾಗಿದ್ದ ಜನ ಕೊರೊನಾ ವೈರಸ್‍ಗೆ ಹೆದರಿ ಮತ್ತೆ ಹಳ್ಳಿಗಳತ್ತ ಮುಖ ಮಾಡ್ತಿದ್ದಾರೆ. ಆದ್ದರಿಂದ ಮಲೆನಾಡಿಗರು ಅವರಿಗೆಲ್ಲಾ ಬರಬೇಡಿ ಅಲ್ಲೇ ಇರಿ ಎಂದು ಮನವಿ ಕೂಡ ಮಾಡಿಕೊಂಡಿದ್ದಾರೆ. ಜಿಲ್ಲೆಯ ಶೃಂಗೇರಿ ತಾಲೂಕಿನ ಬೇಗಾರು ಗ್ರಾಮದಲ್ಲೂ ಗ್ರಾಮದ ಮುಖ್ಯ ರಸ್ತೆಗೆ ಬೇಲಿ ಹಾಕಿ ಗ್ರಾಮಸ್ಥರು ಊರಿಗೆ ಯಾರೂ ಹೊರಗಿನಿಂದ ಬಾರದಂತೆ ಕಾದು ಕೂತಿದ್ದಾರೆ. ಒಳಗಿನವರು ಹೊರ ಹೊಗುವಂತಿಲ್ಲ. ಯಾರೇ ಆದರೂ ಹೊರಗಿನವರಂತೂ ಬಿಲ್‍ಕುಲ್ ಒಳಗೆ ಬರುವಂತಿಲ್ಲ ಎಂದು ಮುಖ್ಯ ರಸ್ತೆಗೆ ಬೇಲಿ ಹಾಕಿಕೊಂಡು ಕಾದು ಕೂತಿದ್ದಾರೆ.

    ಅಷ್ಟೇ ಅಲ್ಲದೇ ಗ್ರಾಮಕ್ಕೆ ಬಂದ ನೆಂಟರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿ ವಾಪಸ್ ಕಳುಹಿಸಿದ್ದಾರೆ. ಈಗಾಗಲೇ ಕೊರೊನಾದಿಂದ ಆತಂಕಕ್ಕೀಡಾಗಿರೋ ಮಲೆನಾಡಿನ ಮತ್ತಾವರ ಗ್ರಾಮದಲ್ಲಿ ಹಳ್ಳಿಕಟ್ಟೆ ಮುಂದೆ ಯುವಕರು ಕಾದು ಕೂತಿದ್ದು, ಗ್ರಾಮಕ್ಕೆ ಹೊಸಬರು ಬಂದರೆ ವಾಪಸ್ ಕಳುಹಿಸುತ್ತಿದ್ದಾರೆ. ಇತ್ತ ದೂರದೂರಲ್ಲಿ ಇರುವವರಿಗೆ ಅಲ್ಲೇ ಇರಿ ಗ್ರಾಮಕ್ಕೆ ಬರಬೇಡಿ ಎಂದು ಫೋನ್ ಮಾಡಿ ಹೇಳುತ್ತಿದ್ದಾರೆ. ಮೂಡಿಗೆರೆಯ ಮರ್ಕಲ್ ಗ್ರಾಮದಲ್ಲಿ ರಸ್ತೆಗೆ ತಂತಿ ಬೇಲಿ ಹಾಕಿದ್ರೆ, ಕೆಲ್ಲೂರು ಗ್ರಾಮದಲ್ಲಿ ಹೊರಗಿನವರಿಗೆ ಪ್ರವೇಶವಿಲ್ಲ ಎಂದು ರಸ್ತೆ ತುಂಬಾ ಬ್ಯಾನರ್ ಕಟ್ಟಿದ್ದಾರೆ.

  • ಜನರನ್ನು ಗುಂಪಿನಿಂದ ಬೇರ್ಪಡಿಸಬೇಕೆಂದು ಅರಳಿಮರದ ಕಟ್ಟೆಗೆ ಡಾಂಬರು ಹಾಕಿದ ಗ್ರಾಮಸ್ಥರು

    ಜನರನ್ನು ಗುಂಪಿನಿಂದ ಬೇರ್ಪಡಿಸಬೇಕೆಂದು ಅರಳಿಮರದ ಕಟ್ಟೆಗೆ ಡಾಂಬರು ಹಾಕಿದ ಗ್ರಾಮಸ್ಥರು

    ಧಾರವಾಡ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟೋದಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಎಷ್ಟೇ ಹೇಳಿದರೂ ಕೆಲವು ಜನ ಕೇಳ್ತಾನೆ ಇಲ್ಲ. ಪೊಲೀಸರು ಲಾಠಿ ರುಚಿ ತೋರಿಸಿದರೂ ಕೆಲವರಿಗೆ ಭಯವೇ ಇಲ್ಲವಾಗಿ ಹೋಗಿದೆ. ಹೀಗಾಗಿ ಜನರನ್ನು ಹೇಗಾದರೂ ಮಾಡಿ ಗುಂಪಿನಿಂದ ಬೇರ್ಪಡಿಸಬೇಕು ಎಂದು ಧಾರವಾಡ ಜಿಲ್ಲೆಯ ಮಾರಡಗಿ ಗ್ರಾಮಸ್ಥರು ಹೊಸ ಪ್ಲಾನ್ ಮಾಡಿದ್ದಾರೆ.

    ಗ್ರಾಮದ ಅರಳಿಮರದ ಕಟ್ಟೆ ಹಿಡಿದು ಗುಂಪು ಗುಂಪಾಗಿ ಕುಳಿತುಕೊಳ್ಳೋರೆಲ್ಲಾ ಈಗ ಅದರಿಂದ ದೂರ ಇರುವಂತೆ ಮಾರಡಗಿ ಗ್ರಾಮಸ್ಥರು ಮಾಡಿದ್ದಾರೆ. ಗ್ರಾಮದ ಪ್ರಮುಖ ವೃತ್ತದಲ್ಲಿರೋ ಅರಳಿಮರದ ಕಟ್ಟೆಗೆ ಡಾಂಬರು ಹಾಕಿದ್ದು, ಯಾರು ಕಟ್ಟೆಯ ಮೇಲೆ ಕೂರದಂತೆ ಮಾಡಿದ್ದಾರೆ. ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಯಾರೂ ಈ ಕಟ್ಟೆಯ ಮೇಲೆ ಕುಳಿತುಕೊಳ್ಳಬೇಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಅಂತ ಜನರಿಗೆ ಎಷ್ಟೇ ಹೇಳಿದರೂ ಯಾರೂ ಮಾತನ್ನು ಕೇಳಿರಲಿಲ್ಲ. ಗ್ರಾಮಸ್ಥರು ಒಂದು ಗುಂಪಿಗೆ ತಿಳಿ ಹೇಳಿ ಅಲ್ಲಿಂದ ಕಳಿಸುತ್ತಿದ್ದಂತೆ ಮತ್ತೊಂದು ಗುಂಪು ಕಟ್ಟೆ ಮೇಲೆ ಬಂದು ಕುಳಿತುಕೊಳ್ಳುತ್ತಿತ್ತು.

    ಎಷ್ಟೇ ಹೇಳಿದರೂ ಕೇಳದ ಜನರಿಗೆ ಬುದ್ಧಿ ಕಲಿಸಲು ಗ್ರಾಮಸ್ಥರು ಪ್ಲಾನ್ ಮಾಡಿದ್ದು, ಆ ಕಟ್ಟೆಯ ಮೇಲೆ ಡಾಂಬರು ಸುರಿದು ಬಿಟ್ಟಿದ್ದಾರೆ. ಮೊದಲೇ ಈಗ ಬೇಸಿಗೆ, ಸೂರ್ಯ ಶಾಖಕ್ಕೆ ಡಾಂಬರು ಕಾಯುತ್ತಿರೋದು ಒಂದೆಡೆಯಾದ್ರೆ, ಅದು ಅಂಟಿಕೊಂಡ್ರೆ ಮುಗದೇ ಹೋಯ್ತು ಎಂದು ಜನರು ಕಟ್ಟೆಯಿಂದ ದೂರವಿದ್ದಾರೆ. ಹೀಗಾಗಿ ಈಗ ಯಾರೂ ಕೂಡ ಗುಂಪಾಗಿ ಕುಳಿತುಕೊಳ್ಳಲು ಸಾಧ್ಯವಾಗದೆ ತಮ್ಮ ಪಾಡಿಗೆ ತಾವೇ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾರೆ.