ಬೆಂಗಳೂರು: ಕೊರೊನಾ ವೈರಸ್‍ನಿಂದಾಗಿ ಸಿಲಿಕಾನ್ ಸಿಟಿ ಬೆಂಗಳೂರಿನ ನಂದಿನಿ ಲೇಔಟ್‍ನಲ್ಲಿ ಡ್ರೋಣ್ ಮೂಲಕ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ.
ಬಿಬಿಎಂಪಿ ಕಾರ್ಪೋರೇಟರ್ ಕೆ.ವಿ.ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ಮಾರುತಿನಗರ, ರವಿ ಬಡವಾಣೆ, ಪರಿಮಳ ನಗರ ಸೇರಿದಂತೆ ಹಲವು ಬಡವಾಣೆಗಳಲ್ಲಿ ಔಷಧಿ ಸಿಂಪಡಣೆ ಆರಂಭವಾಗಿದೆ. ಈ ಹಿನ್ನೆಲೆ ಮನೆಯಿಂದ ಯಾರು ಹೊರ ಬರದಂತೆ ಸೂಚನೆ ನೀಡಲಾಗಿದೆ.
ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲದೆ ವಿದೇಶದಿಂದ ವಾಪಸ್ ಆಗಿರುವ ಹಾಗೂ ಹೋಮ್ ಕ್ವಾರೆಂಟೈನ್‍ನಲ್ಲಿರುವ ಕೊರೊನಾ ಶಂಕಿತರು ಹೆಚ್ಚನ ಸಂಖ್ಯೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಔಷಧಿ ಸಿಂಪಡಣೆ ಆರಂಭಿಸಿದೆ.
ದೇಶದಲ್ಲಿ ಶುಕ್ರವಾರ ಒಂದೇ ದಿನ ಅತಿ ಹೆಚ್ಚು 125 ಕೊರೊನಾ ಪಾಸಿಟಿವ್ ದಾಖಲಾಗಿದ್ದು, ಒಟ್ಟು ಪೀಡಿತರ ಸಂಖ್ಯೆ 834ಕ್ಕೆ ಏರಿಕೆಯಾಗಿದೆ. ಈವರೆಗೂ 19 ಮಂದಿ ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. ಕರ್ನಾಟಕದಲ್ಲಿ ಮೂರು ಸೇರಿದಂತೆ ದೆಹಲಿ, ಮಹಾರಾಷ್ಟ್ರ, ಪಂಜಾಬ್, ಗುಜರಾತ್, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶದಲ್ಲಿ ಮೃತಪಟ್ಟಿದ್ದಾರೆ.
ಬೆಂಗಳೂರು: ಜನದಟ್ಟನೆ ಹಿನ್ನೆಲೆಯಲ್ಲಿ ಕೆಆರ್ ಮಾರ್ಕೆಟ್ ಅನ್ನು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನಕ್ಕೆ ಶಿಫ್ಟ್ ಮಾಡಿದ್ದ ಪ್ಲಾನ್ ವಿಫಲವಾಗಿದೆ.
ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನ ಕೆ.ಆರ್ ಮಾರುಕಟ್ಟೆಯಂತೆ ಆಗಿದೆ. ಬಸವನಗುಡಿ ಮೈದಾನದಲ್ಲಿ ಅನೇಕ ತರಕಾರಿ ಲೋಡ್ ಲಾರಿಗಳು ನಿಂತಿವೆ. ಅಷ್ಟೇ ಅಲ್ಲದೆ ಯಾವುದೇ ಸಾಮಾಜಿಕ ಅಂತರ ಇಲ್ಲದಂತಾಗಿದೆ. ಈ ಮೂಲಕ ಜನಸಂದಣಿ ಕಡಿಮೆ ಮಾಡುವ ಬಿಬಿಎಂಪಿ ಪ್ಲಾನ್ ಠುಸ್ ಆಗಿದೆ.
20 ಅಡಿ ಅಂತರದಲ್ಲಿ ಸ್ಟಾಲ್ ನಿರ್ಮಾಣ ಮಾಡಲಾಗುವುದು ಎಂದು ಬಿಬಿಎಂಪಿ ತಿಳಿಸಿತ್ತು. ಆದರೆ ಯಾವ ಅಂತರವೂ ಕಾಣದ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಕಾಣಿಸಲಿಲ್ಲ. ಅಲ್ಲದೇ ಕೆಆರ್ ಮಾರ್ಕೆಟ್ ಕಲಾಸಿಪಾಳ್ಯಕ್ಕೂ ವಿಸ್ತರಿಸಿಕೊಂಡಿದೆ.
ಈ ಕುರಿತು ಶುಕ್ರವಾರ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದ ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ಮತ್ತು ಬಿಬಿಎಂಪಿ ಮೇಯರ್ ಗೌತಮ್ ಕುಮಾರ್, ನ್ಯಾಷನಲ್ ಕಾಲೇಜು ಮೈದಾನದಲ್ಲಿ ಎಲ್ಲ ರೀತಿಯ ಸಿದ್ಧತೆ ಮಾಡಿದೆ. ತಾತ್ಕಾಲಿಕವಾಗಿ 15 ದಿನಗಳ ಕಾಲ ಕೆ.ಆರ್.ಮಾರ್ಕೆಟ್‍ನ ಹೋಲ್‍ಸೇಲ್ ತರಕಾರಿ ಮಾರುಕಟ್ಟೆಯನ್ನು ನ್ಯಾಷನಲ್ ಕಾಲೇಜ್ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ. ಈಗಾಗಲೇ ಸ್ಟಾಲ್‍ಗಳು ಸಿದ್ಧವಾಗಿದ್ದು, 20 ಅಡಿ ಅಂತರದಲ್ಲಿ 10 ಸ್ಟಾಲ್‍ಗಳನ್ನು ಹಾಕಲಾಗಿದೆ. ಸಾರ್ವಜನಿಕರು ಅಂತರ ಕಾಯ್ದುಕೊಳ್ಳಲು 5 ಅಡಿ ಅಂತರದಲ್ಲಿ ಸರ್ಕಲ್ ಹಾಕಲಾಗಿದೆ ಎಂದು ಮಾಹಿತಿ ನೀಡಿದ್ದರು. ಆದರೆ ಸಾಮಾಜಿಕ ಅಂತರವಿಲ್ಲದಿರುವುದು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ.
ಕೋಲಾರ: ಮಂಗಳೂರು ಬಂದರಿನಿಂದ ಆಂಧ್ರ ಪ್ರದೇಶಕ್ಕೆ ತೆರಳುತ್ತಿದ್ದ ಮೀನುಗಾರರನ್ನು ಕೋಲಾರದ ಗಡಿ ಭಾಗವಾದ ನಂಗಲಿ ಚೆಕ್ ಪೋಸ್ಟ್ ಬಳಿ ಆಂಧ್ರಪ್ರದೇಶ ಪೊಲೀಸರು ತಡೆ ಹಿಡಿದಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಗಡಿಯಲ್ಲಿ ಆಂಧ್ರ ಪೊಲೀಸರು ಮೀನುಗಾರರಿಗೆ ತಡೆ ಮಾಡಿದ್ದು, ಆಂಧ್ರ ಮೂಲದ ನೂರಾರು ಮಂದಿ ಮೀನುಗಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇತ್ತ ಮಂಗಳೂರಿನಲ್ಲಿ ಮೀನುಗಾರಿಕೆ ಮಾಡಿಕೊಂಡು ಇವರು ಜೀವನ ನಡೆಸುತ್ತಿದ್ದರು. ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲೆಡೆ ಲಾಕ್‍ಡೌನ್ ಮಾಡಿರುವ ಪರಿಣಾಮ ಮಂಗಳೂರು ಮೀನುಗಾರಿಕಾ ಇಲಾಖೆ ಅನುಮತಿ ಪಡೆದು, ಮಿನಿ ಬಸ್‍ಗಳ ಮೂಲಕ ಸಾವಿರಕ್ಕೂ ಹೆಚ್ಚಿನ ಮೀನುಗಾರರು ಆಂಧ್ರದತ್ತ ಮುಖಮಾಡಿದ್ದರು.
ಆದರೆ ನಂಗಲಿ ಬಳಿ ಆಂಧ್ರ ಪೊಲೀಸರು ಮೀನುಗಾರರನ್ನು ತಡೆದು ಪ್ರವೇಶ ನಿರಾಕರಿಸಿದ್ದಾರೆ. ಈ ಮೀನುಗಾರರು ಆಂಧ್ರದ ನೆಲ್ಲೂರು, ವಿಶಾಕಪಟ್ಟಣಂ, ಪ್ರಕಾಶಂ, ಶ್ರೀಕಾಕುಲಂ ಜಿಲ್ಲೆಗಳಿಗೆ ಸೇರಿದವರಾಗಿದ್ದಾರೆ. ಸ್ಥಳಕ್ಕೆ ಚಿತ್ತೂರು ಜಿಲ್ಲೆಯ ಎಸ್‍ಪಿ ಹಾಗೂ ಡಿಸಿ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು, ಗಡಿಯಲ್ಲಿ ಸಾವಿರಕ್ಕೂ ಹೆಚ್ಚಿನ ಮೀನುಗಾರರು ಪರದಾಡುತ್ತಿದ್ದಾರೆ.
ಕಲಬುರಗಿ: ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾದ್ಯಂತ ಮುಂದಿನ ಆದೇಶದವರೆಗೆ ಕೆಲವು ಷರತ್ತುಗಳಿಗೆ ಒಳಪಟ್ಟು ಪೆಟ್ರೋಲ್ ಬಂಕ್‍ಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಶರತ್ ಬಿ. ಅವರು ಆದೇಶ ಹೊರಡಿಸಿದ್ದಾರೆ.
ಈ ಆದೇಶವು ಸರ್ಕಾರಿ ವಾಹನಗಳು, ವೈದ್ಯರು, ವೈದ್ಯಕೀಯ ಸಿಬ್ಬಂದಿಗಳ ವಾಹನ, ಎಲ್ಲಾ ತರಹದ ಅಂಬುಲೆನ್ಸ್ ಗಳು, ಔಷಧ ವ್ಯಾಪಾರಿಗಳು, ಪತ್ರಕರ್ತರು, ಕೆಲವು ಅವಶ್ಯಕ ಸೇವಾ ವ್ಯಾಪ್ತಿ ಪಡುವ ಇಲಾಖೆಗಳು ಹಾಗೂ ಸರ್ಕಾರಿ ನೌಕರರಿಗೆ ಅನ್ವಯಿಸುವುದಿಲ್ಲ. ಇಂಧನ ಭರಿಸುವ ಸಮಯದಲ್ಲಿ ಕಡ್ಡಾಯವಾಗಿ ಅವರ ಗುರುತಿನ ಚೀಟಿಯನ್ನು ಪರಿಶೀಲಿಸಿ ಇಂಧನ ಭರಿಸಬೇಕೆಂದು ಪೆಟ್ರೋಲ್ ಬಂಕ್ ಮಾಲೀಕರಿಗೆ ಜಿಲ್ಲಾಧಿಕಾರಿಗಳು ಆದೇಶದಲ್ಲಿ ಸೂಚಿಸಿದ್ದಾರೆ.
ಈ ಮೂಲಕ ಬೇಕಾ ಬಿಟ್ಟಿಯಾಗಿ ರಸ್ತೆಗಳ ಮೇಲೆ ಸಂಚರಿಸುವ ವಾಹನಗಳಿಗೆ ಬ್ರೇಕ್ ಹಾಕಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಜರುಗಿಸಿದೆ. ಈಗಾಗಲೇ ಕಲಬುರಗಿಯಲ್ಲಿ ಮೂವರಿಗೆ ಕೊರೊನಾ ಸೋಂಕು ತಗುಲಿರುವುದು ವರದಿಯಾಗಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 64ಕ್ಕೆ ಏರಿದೆ.
ಬೆಂಗಳೂರು: ಸಣ್ಣಪುಟ್ಟ ಕಾಯಿಲೆ ಇದ್ದರೆ ಬರಲೇಬೇಡಿ, ಎಮರ್ಜೆನ್ಸಿ ಇದ್ದವರು ಮಾತ್ರ ಕಿದ್ವಾಯಿ ಆಸ್ಪತ್ರೆಗೆ ಬನ್ನಿ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನಿರ್ದೇಶಕ ಡಾ. ಸಿ ರಾಮಚಂದ್ರ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ವಿನಾಕಾರಣ ಮನೆಯಿಂದ ಹೊರ ಬರಬೇಡಿ. ಸರ್ಕಾರದ ಆದೇಶಗಳನ್ನ ಪಾಲನೆ ಮಾಡಿ. ಉಸಿರಾಟ, ಹೊಟ್ಟೆ ಉಬ್ಬರ, ತುರ್ತು ಆರೋಗ್ಯ ಚಿಕಿತ್ಸೆ ಇದ್ದರೆ ಮಾತ್ರ ಮನೆಯಿಂದ ಹೊರ ಬನ್ನಿ. ವಿನಾಕಾರಣ ನೀವು ಹೊರಗೆ ಬಂದು, ಇತರರಿಗೂ ತೊಂದರೆ ಕೊಡಬೇಡಿ. ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಸಹಕರಿಸಿ ಎಂದು ಸಂಸ್ಥೆಯ ನಿರ್ದೇಶಕರು ಸಾರ್ವಜನಿಕರಲ್ಲಿ ಕೋರಿಕೊಂಡಿದ್ದಾರೆ.
ಈ ಹಿಂದೆ ಗುರುವಾರ ಉಡುಪಿ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಬಂದ ವ್ಯಕ್ತಿಯನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಶಿಫ್ಟ್ ಮಾಡಿದಾಗ, ಓಪಿಡಿ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ, ತುರ್ತು ಸೇವೆ ಮಾತ್ರ ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ ಸಿಗಲಿದೆ ಎಂದು ವೈದ್ಯಕೀಯ ಅಧೀಕ್ಷಕರು ಪ್ರಕಟಣೆ ಹೊರಡಿಸಿದ್ದರು.
ಕಿಮೋಥೆರಪಿ ಮತ್ತು ರೇಡಿಯೋ ತೆರಪಿ ಮಾಡಿಸಿಕೊಳ್ಳುವ ರೋಗಿಗಳು ಕೆಎಂಸಿಗೆ ಯಾವುದೇ ಕಾರಣಕ್ಕೆ ಕಾಲಿಡಬಾರದು. ಅವರು ನೇರವಾಗಿ ಶಿರಡಿ ಸಾಯಿಬಾಬಾ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಬೇಕು. ಗರ್ಭಿಣಿ ಸ್ತ್ರೀಯರು ಎಮರ್ಜೆನ್ಸಿ ಮತ್ತು ಒಪಿಡಿ ಕಟ್ಟಡದ ಬಳಿ ಸುಳಿದಾಡುತ್ತಿಲ್ಲ, ಅವರು ನೇರವಾಗಿ ಮಹಿಳಾ ಮತ್ತು ಮಕ್ಕಳ ಘಟಕಕ್ಕೆ ತೆರಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.
ಯಾವುದೇ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಯನ್ನು ಪ್ರವೇಶ ಮಾಡುವವರು ಹೊರಭಾಗದಲ್ಲಿ ಸಂಪೂರ್ಣ ತಪಾಸಣೆಗೆ ಒಳಗಾಗಬೇಕು. ರೋಗದ ಯಾವುದೇ ಲಕ್ಷಣಗಳು ಇದ್ದಲ್ಲಿ ಅಂತಹ ವ್ಯಕ್ತಿಯನ್ನು ಮಣಿಪಾಲ ಕೆಎಂಸಿಯ ಒಳಗೆ ವೈದ್ಯರು ಮತ್ತು ಸಿಬ್ಬಂದಿಗಳು ಬಿಟ್ಟುಕೊಳ್ಳುವುದಿಲ್ಲ. ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ 10 ಮಂದಿ ಕೊರೊನಾ ಸೋಂಕಿತರಿಗೆ ಸಂಪೂರ್ಣ ಚಿಕಿತ್ಸೆ ಕೊಡುವಂತಹ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಲಾಗಿತ್ತು.
ದಾವಣಗೆರೆ: ಜಿಲ್ಲೆಯಲ್ಲಿ ಮೊದಲ ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ಫ್ರಾನ್ಸ್ ನಿಂದ ದಾವಣಗೆರೆಗೆ ಬಂದಿದ್ದ ವ್ಯಕ್ತಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಸೋಂಕಿತ ವ್ಯಕ್ತಿ ಎಲ್ಲೆಲ್ಲಿ ಪ್ರಯಾಣಿಸಿದ್ದ ಎಂಬ ಬಗ್ಗೆ ಜಿಲ್ಲಾಡಳಿತ ಮಾಹಿತಿ ನೀಡಿದೆ.
ಮಾರ್ಚ್ 17ರಂದು ಫ್ರಾನ್ಸ್ ನಿಂದ ಅಬುದಾಭಿ ಮುಖಾಂತರ ವಿಮಾನದಲ್ಲಿ ಬೆಳಗ್ಗೆ 11:30ಕ್ಕೆ ಸೋಂಕಿತ ವ್ಯಕ್ತಿ ಹೊರಟಿದ್ದರು. ಮಾರ್ಚ್ 18ರಂದು ಬೆಳಗ್ಗೆ 6 ಗಂಟೆಗೆ ಬೆಂಗಳೂರು ತಲುಪಿದ ಸೋಂಕಿತ ವೋಲ್ವೋ ಬಸ್ ಮುಖಾಂತರ ಬೆಳಗ್ಗೆ 8 ಗಂಟೆಗೆ ಮೆಜೆಸ್ಟಿಕ್‍ನ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದು ತಲುಪಿದ್ದರು. ಮೆಜೆಸ್ಟಿಕ್‍ನಿಂದ ರಾಜಹಂಸ ಬಸ್ಸಿನಲ್ಲಿ ಬೆಳಗ್ಗೆ 10 ಗಂಟೆಗೆ ಹೊರಟು ಮಧ್ಯಾಹ್ನ 4 ಗಂಟೆಗೆ ದಾವಣಗೆರೆಗೆ ಬಂದಿಳಿದು, ತಮ್ಮ ಸ್ವಂತ ಕಾರಿನಲ್ಲಿ ಮನೆಗೆ ಹೋಗಿದ್ದರು.
ಸೋಂಕಿತ ವ್ಯಕ್ತಿಯ ಪ್ರಯಾಣ ಮಾಹಿತಿಯು ವಿಮಾನ ನಿಲ್ದಾಣದ ಪ್ರಾಧಿಕಾರದ ಮುಖಾಂತರ ಮಾರ್ಚ್ 18ರ ಮಧ್ಯರಾತ್ರಿ ಜಿಲ್ಲಾ ಸರ್ವೇಕ್ಷಣ ಘಟಕಕ್ಕೆ ಲಭ್ಯವಾಗಿತ್ತು. ಬಳಿಕ ಮಾರ್ಚ್ 22ರಂದು ವ್ಯಕ್ತಿಯನ್ನು ಸಂಪರ್ಕಿಸಿ ಕೋವಿಡ್-19 ಮಾರ್ಗಸೂಚಿಗಳನ್ವಯ ಕ್ರಮ ಕೈಗೊಳ್ಳಲಾಗಿತ್ತು.
ಆದರೆ ಮಾರ್ಚ್ 25ರಂದು ವ್ಯಕ್ತಿಯಲ್ಲಿ ಕೆಮ್ಮು, ಗಂಟಲು ನೋವು, ಜ್ವರ ಕಾಣಿಸಿಕೊಂಡಿದ್ದು ಅವರನ್ನು ತಪಾಸಣೆ ಒಳಪಡಿಸಲಾಗಿತ್ತು. ಇಂದು ವ್ಯಕ್ತಿಯ ವೈದ್ಯಕೀಯ ಪರೀಕ್ಷೆಯ ವರದಿ ಬಂದಿದ್ದು, ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸದ್ಯ ಸೋಂಕಿತ ವ್ಯಕ್ತಿಯನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗಿದ್ದು, ಸೋಂಕಿತ ಒಟ್ಟು 18 ಮಂದಿ ಜೊತೆ ನೇರ ಸಂಪರ್ಕ ಹೊಂದಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ಅವರನ್ನೂ ಕೂಡ ತಪಾಸಣೆಗೆ ಒಳಪಡಿಸಲಾಗಿದೆ.
ದಾವಣಗೆರೆ: ಮಹಾಮಾರಿ ಕೊರೊನಾ ವೈರಸ್ ಸೋಂಕಿತರ ಸಮಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ದಾವಣಗೆರೆಯಲ್ಲಿ ಮೊದಲ ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸ್ಪಷ್ಟನೆ ನೀಡಿದ್ದಾರೆ.
ಫ್ರಾನ್ಸ್ ನಿಂದ ದಾವಣಗೆರೆಗೆ ಮರಳಿದ್ದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಮಾರ್ಚ್ 22ರಂದು ಫ್ರಾನ್ಸ್ ನ ಪ್ಯಾರಿಸ್‍ನಿಂದ ವ್ಯಕ್ತಿ ದಾವಣಗೆರೆಗೆ ಬಂದಿದ್ದರು. ಈ ಬಗ್ಗೆ ಜಿಲ್ಲಾ ಸರ್ವೇಕ್ಷಣ ಘಟಕಕ್ಕೆ ಮಾಹಿತಿ ತಿಳಿದ ತಕ್ಷಣ ವ್ಯಕ್ತಿಯನ್ನು ತಪಾಸಣೆಗೆ ಒಳಪಡಿಸಲಾಯಿತು. ಆಗ ಯಾವುದೇ ಕೊರೊನಾ ಸೋಂಕಿನ ಲಕ್ಷಣಗಳು ಕಂಡುಬರದ ಹಿನ್ನೆಲೆ ವ್ಯಕ್ತಿಯನ್ನು 14 ದಿನಗಳು ಮನೆಯಲ್ಲಿಯೇ ಇರುವಂತೆ ಸೂಚಿಸಲಾಗಿತ್ತು.
ಆದರೆ ಮಾರ್ಚ್ 25ರಂದು ವ್ಯಕ್ತಿಯಲ್ಲಿ ಕೆಮ್ಮು, ಗಂಟಲು ನೋವು, ಜ್ವರ ಕಾಣಿಸಿಕೊಂಡಿದ್ದು ಅವರನ್ನು ತಪಾಸಣೆ ಒಳಪಡಿಸಲಾಗಿತ್ತು. ಇಂದು ವ್ಯಕ್ತಿಯ ವೈದ್ಯಕೀಯ ಪರೀಕ್ಷೆಯ ವರದಿ ಬಂದಿದ್ದು, ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸದ್ಯ ಸೋಂಕಿತ ವ್ಯಕ್ತಿಯನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತ ಒಟ್ಟು 18 ಮಂದಿ ಜೊತೆ ನೇರ ಸಂಪರ್ಕ ಹೊಂದಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ಅವರನ್ನೂ ಕೂಡ ತಪಾಸಣೆಗೆ ಒಳಪಡಿಸಲಾಗಿದೆ.
ನವದೆಹಲಿ: ಕೊರೊನಾ ವಿರುದ್ಧದ ಹೋರಾಡಲು ಸೆಲೆಬ್ರಿಟಿಗಳು, ಕ್ರಿಕೆಟಿಗರು ಮತ್ತು ಕ್ರೀಡಾಪಟುಗಳು ಸಹಾಯ ಮಾಡಲು ಸರ್ಕಾರಗಳಿಗೆ ದೇಣಿಗೆ ನೀಡುತ್ತಿದ್ದಾರೆ. ಎಂ.ಎಸ್.ಧೋನಿ, ಪಿ.ವಿ ಸಿಂಧು, ಹಿಮಾ ದಾಸ್, ಭಜರಂಗ್ ಪೂನಿಯಾ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು 50 ಲಕ್ಷ ರೂ. ದೊಡ್ಡ ದೇಣಿಗೆಯನ್ನು ನೀಡಿದ್ದಾರೆ.
ಸಚಿನ್ ತೆಂಡೂಲ್ಕರ್ ಅವರು ಪ್ರಧಾನ ವಿಪತ್ತು ಪರಿಹಾರ ನಿಧಿಗೆ 25 ಲಕ್ಷ ರೂ. ಹಾಗೂ ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ 25 ಲಕ್ಷ ರೂ. ನೀಡಲು ನಿರ್ಧರಿಸಿದ್ದಾರೆ. ತೆಂಡೂಲ್ಕರ್ ಅವರ ಸಹಾಯದ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ: ಕೊರೊನಾ ಪರಿಹಾರ ನಿಧಿಗೆ ತನ್ನ 6 ತಿಂಗ್ಳ ಸಂಬಳ ನೀಡಿದ ಭಾರತದ ಕುಸ್ತಿಪಟು
46 ವರ್ಷದ ಸಚಿನ್ ತೆಂಡೂಲ್ಕರ್ ಅವರು, ಈ ಹಿಂದೆ ಕೊರೊನಾ ವೈರಸ್ ವಿರುದ್ಧದ ಹೋರಾಟವನ್ನು ಟೆಸ್ಟ್ ಕ್ರಿಕೆಟ್‍ನಲ್ಲಿ ಆಟಗಾರ ಎದುರಿಸುವ ಸವಾಲುಗಳಿಗೆ ಹೋಲಿಸಿದ್ದರು. ‘ಬಹುಶಃ ನಾವೆಲ್ಲರೂ ಆಟದ ಹಳೆಯ ಸ್ವರೂಪದಿಂದ ಪಾಠಗಳನ್ನು ಕಲಿಯುವ ಸಮಯ ಬಂದಿದೆ. ನಾವು ಉತ್ತಮವಾಗಿ ಇರಬೇಕಾದರೆ ತಾಳ್ಮೆ ನಮಗೆ ಬೇಕಾಗಿದೆ’ ಎಂದು ಸಚಿತ್ ತಿಳಿಸಿದ್ದರು. ಇದನ್ನೂ ಓದಿ: ಕೊರೊನಾ ವಿರುದ್ಧದ ಹೋರಾಟಕ್ಕೆ 2 ಕೋಟಿ ರೂ. ದೇಣಿಗೆ ನೀಡಿದ ಪವನ್ ಕಲ್ಯಾಣ್
ಅಷ್ಟೇ ಅಲ್ಲದೆ ಸಚಿನ್ ತೆಂಡೂಲ್ಕರ್ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಂಚಿಕೊಂಡಿದ್ದ ಸಚಿನ್, ‘ಕೇಂದ್ರ ಸರ್ಕಾರ, ವೈದ್ಯಕೀಯ ಸಿಬ್ಬಂದಿ, ಪೊಲೀಸರು ಮನೆಯಲ್ಲಿ ಇರುವಂತೆ ಮನವಿ ಮಾಡಿಕೊಂಡಿದ್ದಾರೆ. ಆದರೂ ಕೆಲವರು ಇದನ್ನು ಅಷ್ಟು ಗಂಭೀರವಾಗಿ ಪರಿಗಣಿಸಿಲ್ಲ. ನಾವು ಕೆಲವು ವಿಡಿಯೋಗಳನ್ನು ನೋಡಿದ್ದೇನೆ. ಕೆಲವರು ಹೊರಗಡೆ ಕ್ರಿಕೆಟ್ ಆಡುತ್ತಿದ್ದಾರೆ. ಒಮ್ಮೆ ಕೊರೊನಾ ವೈರಸ್ ದೇಶದಲ್ಲಿ ಕೈಮೀರಿದರೆ ನಮ್ಮ ಹೆಣಗಳನ್ನು ಉರುಳಿಸುತ್ತದೆ ಎಂದು ಎಚ್ಚರಿಕೆ ನೀಡಿದ್ದರು.
https://www.instagram.com/p/B-J5zkZlg_O/
ಟೀಂ ಇಂಡಿಯಾ ಮಾಜಿ ಆಲ್‍ರೌಂಡರ್ ಗಳಾದ ಇರ್ಫಾನ್ ಪಠಾಣ್ ಮತ್ತು ಯೂಸುಫ್ ಪಠಾಣ್ ಒಟ್ಟು 4,000 ಫೇಸ್ ಮಾಸ್ಕ್ ಗಳನ್ನು ಬರೋಡಾ ಪೊಲೀಸ್ ಮತ್ತು ಆರೋಗ್ಯ ಇಲಾಖೆಗೆ ನೀಡಿದ್ದಾರೆ. ಮತ್ತೊಂದೆಡೆ ಧೋನಿ ಇತ್ತೀಚೆಗೆ ಪುಣೆ ಮೂಲದ ಎನ್‍ಜಿಒ ಮೂಲಕ 1 ಲಕ್ಷ ರೂ. ದೇಣಿಗೆ ನೀಡಿದ್ದಾರೆ.
ಮಂಗಳೂರು: ಇಡೀ ವಿಶ್ವವನ್ನೇ ಕಾಡುತ್ತಿರುವ ಮಹಾಮಾರಿ ಕೊರೊನಾ ವೈರಸ್ ಸೋಂಕು ತನಗೆ ತಗಲಿದೆ ಎಂದು ಶಂಕಿಸಿ ವ್ಯಕ್ತಿಯೋಬ್ಬರು ನೇಣಿಗೆ ಶರಣಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಬ್ಬೆಟ್ಟುವಿನಲ್ಲಿ ಈ ಘಟನೆ ನಡೆದಿದೆ. ಅಬ್ಬೆಟ್ಟು ನಿವಾಸಿ ಸದಾಶಿವ ಶೆಟ್ಟಿ(56) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಪೆಟ್ರೋಲ್ ಬಂಕ್‍ನಲ್ಲಿ ಕೆಲಸ ಮಾಡುತ್ತಿದ್ದ ಸದಾಶಿವ ಅವರು ತನಗೆ ಕೊರೊನಾ ತಗಲಿದೆ ಎಂದು ಶಂಕಿಸಿ ಭಯಗೊಂಡಿದ್ದರು. ತನ್ನಿಂದ ಮನೆಯವರಿಗೂ ಈ ಸೋಂಕು ಹರಡಬಹುದೆಂಬ ಖಿನ್ನತೆಗೆ ಒಳಗಾಗಿದ್ದರು.
ಈ ಖಿನ್ನತೆಯಿಂದಲೇ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಸದಾಶಿವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮನೆಯವರ ಬಳಿ ಸದಾಶಿವ ಅವರು ಹೇಳಿಕೊಂಡಿದ್ದರು ಎಂದು ಪತ್ನಿ ದೂರಿನಲ್ಲಿ ಉಲ್ಲೇಖಿಸಿದ್ದು, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 10 ತಿಂಗಳ ಮಗುವಿಗೆ ಕೊರೊನಾ ಸೋಂಕು ತಗುಲಿದೆ.
ಮಗುವಿನ ಪೋಷಕರು ಬುಧವಾರ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ಬಂದಿತ್ತು. ಆದರೆ ತಾಂತ್ರಿಕ ದೋಷವಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿ, ಮರು ಪರೀಕ್ಷೆಗಾಗಿ ಸ್ವ್ಕಾಬ್ ಮತ್ತು ರಕ್ತದ ಮಾದರಿಯನ್ನು ಕಳುಹಿಸಿ ಕೊಟ್ಟಿದ್ದು, ಪಾಸಿಟಿವ್ ಎಂದು ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.
ರಾಜ್ಯದಲ್ಲಿ ಮಾರ್ಚ್ 26ರ ಸಂಜೆ 5ರಿಂದ ಮಾರ್ಚ್ 27ರ ಬೆಳಗ್ಗೆ 8ರವರೆಗೆ 7 ಹೊಸ ಸೋಂಕಿತ ಪ್ರಕರಣಗಳನ್ನು ಗುರುತಿಸಲಾಗಿದೆ ಎಂದು ಕರ್ನಾಟಕ ಸರ್ಕಾರವು ಮಾಹಿತಿ ನೀಡಿದೆ. ಇದನ್ನೂ ಓದಿ: ಹೆಣ್ಣು ಶಿಶುವಿಗೆ ಕೊರೊನಾ ಎಂದ ಹೆಸರಿಟ್ಟ ಚಿಕ್ಕಪ್ಪ
ಪ್ರಕರಣ 56: 10 ತಿಂಗಳ ಗಂಡು ಮಗು, ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿ, ಯಾವುದೇ ಕೋವಿಡ್-19 ಪ್ರಭಾವಿತ ದೇಶಕ್ಕೆ ಪ್ರಯಾಣಿಸಿದ ಹಿನ್ನಲೆಯಿರುವುದಿಲ್ಲ. ಪ್ರಕರಣವನ್ನು ದಕ್ಷಿಣ ಕನ್ನಡ ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ. ಪ್ರಾಥಮಿಕ ಮಾಹಿತಿ ಪ್ರಕಾರ ಪೋಷಕರು ಮಗುವಿನೊಂದಿಗೆ ಕೆಲವು ದಿನಗಳ ಹಿಂದೆ ಕೇರಳಕ್ಕೆ ಭೇಟಿ ನೀಡಿರುವ ಪ್ರಯಾಣ ಹಿನ್ನಲೆಯಿರುತ್ತದೆ. ಮಾಹಿತಿ ಕಲೆಹಾಕಲಾಗಿದ್ದು, ತಪಾಸಣೆ ಪ್ರಗತಿಯಲ್ಲಿರುತ್ತದೆ. ಜೊತೆಗೆ 6 ಪ್ರಾಥಮಿಕ ಸಂಪರ್ಕ ವ್ಯಕ್ತಿಗಳನ್ನು ಗುರುತಿಸಲಾಗಿದ್ದು, ಅವರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿರುತ್ತದೆ.
ಪ್ರಕರಣ 57: 20 ವರ್ಷದ ಮಹಿಳೆ ಬೆಂಗಳೂರು ನಿವಾಸಿಯಾಗಿದ್ದು, ಕೋಲಂಬೋ ದೇಶಕ್ಕೆ ಪ್ರಯಾಣ ಬೆಳೆಸಿ ಮಾರ್ಚ್ 15ರಂದು ಭಾರತಕ್ಕೆ ಹಿಂದಿರುಗಿರುವ ಪ್ರಯಾಣ ಹಿನ್ನಲೆಯಿರುತ್ತದೆ. ಪ್ರಕರಣವನ್ನು ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ. ಇದನ್ನೂ ಓದಿ: ಪ್ರಪಂಚದ ಕ್ಯೂಟೆಸ್ಟ್ ಮಗುವಿಗೆ ಕೊರೊನಾ ವದಂತಿ – ತಾಯಿ ಸ್ಪಷ್ಟನೆ
ಪ್ರಕರಣ 58: 25 ವರ್ಷದ ಮಹಿಳೆ ಬೆಂಗಳೂರು ನಿವಾಸಿಯಾಗಿದ್ದು, ಲಂಡನ್ ದೇಶಕ್ಕೆ ಪ್ರಯಾಣ ಬೆಳೆಸಿ ಮಾರ್ಚ್ 18ರಂದು ಭಾರತಕ್ಕೆ ಹಿಂದಿರುಗಿರುವ ಪ್ರಯಾಣ ಹಿನ್ನಲೆಯಿರುತ್ತದೆ. ಪ್ರಕರಣವನ್ನು ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.
ಪ್ರಕರಣ 59: 35 ವರ್ಷದ ಮಹಿಳೆ ಬೆಂಗಳೂರು ನಿವಾಸಿಯಾಗಿದ್ದು ಪ್ರಕರಣ 25ರ ಸಂಪರ್ಕ ವ್ಯಕ್ತಿ (ಮನೆ ಕೆಲಸದ ಮಹಿಳೆ) ಈ ಪ್ರಕರಣವನ್ನು ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.
ಪ್ರಕರಣ 60: 60 ವರ್ಷದ ಪುರುಷ ತುಮಕೂರು ಜಿಲ್ಲೆಯ ನಿವಾಸಿಯಾಗಿದ್ದು, ದೆಹಲಿಗೆ ರೈಲು ಮುಖಾಂತರ ಮಾರ್ಚ್ 13ರಂದು ಪ್ರಯಾಣ ಬೆಳೆಸಿರುತ್ತಾರೆ. ಇವರು ಮಾರ್ಚ್ 27ರಂದು ಬೆಳಗ್ಗೆ ತುಮಕೂರು ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಮರಣ ಹೊಂದಿರುತ್ತಾರೆ. 24 ಹೈರಿಸ್ಕ್ ಪ್ರಾಥಮಿಕ ಸಂಪರ್ಕ ವ್ಯಕ್ತಿಗಳನ್ನು ಗುರುತಿಸಲಾಗಿರುತ್ತದೆ. ಇವರುಗಳಲ್ಲಿ 13 ಪ್ರಕರಣಗಳನ್ನು ನಿಗಧಿತ ಆಸ್ಪತ್ರೆಗಳಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ ಮತ್ತು 8 ನೆಗೆಟಿವ್ ಪ್ರಕರಣಗಳು ಹಾಗೂ 3 (ವೈದ್ಯಕೀಯ ಸಿಬ್ಬಂದಿ) ಪ್ರಕರಣಗಳನ್ನು ಮನೆ ಕ್ವಾರಂಟೈನ್ ಮಾಡಲಾಗಿರುತ್ತದೆ.
ಪ್ರಕರಣ 61: 33 ವರ್ಷದ ಮಹಿಳೆ ಬೆಂಗಳೂರು ನಿವಾಸಿಯಾಗಿದ್ದು, ಪ್ರಕರಣ 25ರ ಸಂಪರ್ಕ ವ್ಯಕ್ತಿ (ಮನೆ ಕೆಲಸದ ಮಹಿಳೆ) ಈ ಪ್ರಕರಣವನ್ನು ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.
ಪ್ರಕರಣ 62: 22 ವರ್ಷದ ಪುರುಷ, ಉತ್ತರ ಕನ್ನಡ ಜಿಲ್ಲೆಯ ನಿವಾಸಿಯಾಗಿದ್ದು, ದುಬೈ ದೇಶಕ್ಕೆ ಪ್ರಯಾಣ ಬೆಳೆಸಿರುವ ಹಿನ್ನಲೆಯಿರುತ್ತದೆ. ಪ್ರಕರಣವನ್ನು ಉತ್ತರ ಕನ್ನಡ ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.
ಪ್ರಕರಣ 1 ಮತ್ತು ಪ್ರಕರಣ 3 ಗುಣಮುಖರಾಗಿದ್ದು, ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿರುತ್ತದೆ. ರಾಜ್ಯದಲ್ಲಿ ಈವರೆಗೂ ಮೂವರು ಕೊರೊನಾಗೆ ಬಲಿಯಾಗಿದ್ದಾರೆ.