Tag: Coronavirus

  • ದೇಶವಾಸಿಗಳಲ್ಲಿ ಕ್ಷಮೆ ಕೋರಿದ ಪ್ರಧಾನಿ ಮೋದಿ

    ದೇಶವಾಸಿಗಳಲ್ಲಿ ಕ್ಷಮೆ ಕೋರಿದ ಪ್ರಧಾನಿ ಮೋದಿ

    ನವದೆಹಲಿ: ನಿಮ್ಮ ಜೀವನದಲ್ಲಿ, ವಿಶೇಷವಾಗಿ ಬಡ ಜನರಿಗೆ ತೊಂದರೆ ಉಂಟುಮಾಡಿದ ಲಾಕ್‍ಡೌನ್ ಕಠಿಣ ಕ್ರಮಗಳನ್ನು ಕೈಗೊಂಡಿದ್ದಕ್ಕಾಗಿ ಕ್ಷಮೆಯಾಚಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಕೊರೊನಾ ವಿಚಾರದ ಬಗ್ಗೆ ಮನ್ ಕಿ ಬಾತ್‍ನಲ್ಲಿ ಮಾತನಾಡಿದ ಅವರು, ದೇಶಾದ್ಯಂತ ಲಾಕ್‍ಡೌನ್ ಘೋಷಣೆ ಮಾಡಿದ್ದಕ್ಕೆ ಕೆಲವರು ನನ್ನ ಮೇಲೆ ಕೋಪಗೊಂಡಿದ್ದಾರೆ ಅಂತ ನನಗೆ ತಿಳಿದಿದೆ. ಬಡವರಿಗೆ ಇದರಿಂದ ಸಮಸ್ಯೆಯಾಗಿದೆ ಎನ್ನುವುದು ನನಗೆ ಗೊತ್ತಾಗಿದೆ. ಆದರೆ ಈ ಯುದ್ಧವನ್ನು ಗೆಲ್ಲಲು ಇಂತಹ ಕಠಿಣ ಕ್ರಮಗಳು ಅಗತ್ಯವಾಗಿತ್ತು.ದೇಶದ ಎಲ್ಲರ ರಕ್ಷಣೆಗಾಗಿ ಈ ಕಠಿಣ ನಿರ್ಧಾರ ಕೈಗೊಳ್ಳಲಾಯಿತು ಎಂದು ತಿಳಿಸಿದರು.

    ಕೋವಿಡ್-19 ವಿರುದ್ಧದ ಯುದ್ಧವು ಕಠಿಣವಾದದ್ದು ಮತ್ತು ಅದಕ್ಕೆ ಇಂತಹ ಕಠಿಣ ನಿರ್ಧಾರಗಳು ಬೇಕಾಗುತ್ತವೆ. ಭಾರತದ ಜನರನ್ನು ಸುರಕ್ಷಿತವಾಗಿಡುವುದು ಸರ್ಕಾರದ ಮುಖ್ಯ ಉದ್ದೇಶ. ಯಾರೂ ಉದ್ದೇಶಪೂರ್ವಕವಾಗಿ ಲಾಕ್‍ಡೌನ್ ಘೋಷಣೆಯನ್ನು ಮುರಿಯಲು ಬಯಸುವುದಿಲ್ಲ ಎಂದು ನಂಬಿಕೆ ಹೊಂದಿದ್ದೇನೆ. ಆದರೆ ಕೆಲವರು ಲಾಕ್‍ಡೌನ್ ನಡುವೆಯೂ ಮನೆಯಿಂದ ಹೊರಗೆ ಬರುತ್ತಿದ್ದಾರೆ. ಅಂತವರಿಂದ ಕೊರೊವಾ ವೈರಸ್ ಮತ್ತಷ್ಟು ಹೆಚ್ಚಾಗುತ್ತಿದ್ದು, ನಮ್ಮನ್ನು ರಕ್ಷಿಸಿಕೊಳ್ಳುವುದು ಕಷ್ಟವಾಗುತ್ತದೆ ಎಂದು ಹೇಳಿದರು.

    ಕೊರೊನಾ ವೈರಸ್ ವಿರುದ್ಧ ಹೋರಾಡುವ ಅನೇಕ ಸೈನಿಕರು ಇದ್ದಾರೆ. ನಮ್ಮ ಸಹೋದರ, ಸಹೋದರಿಯರಾದ ದಾದಿಯರು, ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿ ನಮಗಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನೀವು ಅವರ ಸೇವೆ, ತ್ಯಾಗವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಈ ವೇಳೆ ಮನವಿ ಮಾಡಿಕೊಂಡರು.

    ಈ ವೇಳೆ ಪ್ರಧಾನಿ ಮೋದಿ ಅವರೊಂದಿಗೆ ಫೋನ್ ಮೂಲಕ ಮಾತನಾಡಿ ಆಗ್ರಾದ ಅಶೋಕ್ ಕಪೂರ್ ಅವರು, ತಮ್ಮ ಇಡೀ ಕುಟುಂಬದ ಆರು ಜನರಿಗೆ ಕೊರೊನಾ ಸೋಂಕು ತಗುಲಿತ್ತು. ಆದರೆ ಎಲ್ಲರೂ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇವೆ. ನಮಗೆ ಚಿಕಿತ್ಸೆ ನೀಡಿದ ವೈದ್ಯರು, ಅಧಿಕಾರಿಗಳು ಹಾಗೂ ಸರ್ಕಾರಿ ಸಿಬ್ಬಂದಿಗೆ ಧನ್ಯವಾದ ತಿಳಿಸಲು ಇಚ್ಛಿಸುತ್ತೇವೆ ಎಂದರು.

    ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಯಾವುದೇ ಲಾಭ ಅಪೇಕ್ಷಿಸದೆ ರೋಗಿಗಳಿಗೆ ಸೇವೆ ಸಲ್ಲಿಸುವವರು ಅತ್ಯುತ್ತಮ ವೈದ್ಯ ಎಂದು ಆಚಾರ್ಯ ಚರಕ್ ಹೇಳಿದ್ದಾರೆ. ಅಂತಹ ಪ್ರತಿಯೊಬ್ಬ ದಾದಿಯರಿಗೆ ನಾನು ಇಂದು ನಮಸ್ಕರಿಸುತ್ತೇನೆ. ನೀವೆಲ್ಲರೂ ಸಮರ್ಪಣೆಯೊಂದಿಗೆ ಕೆಲಸ ಮಾಡುತ್ತಿದ್ದೀರಿ. ವಿಶ್ವವು 2020ಅನ್ನು ನರ್ಸ್, ವೈದ್ಯಕೀಯ ಸಿಬ್ಬಂದಿಯ ಅಂತರರಾಷ್ಟ್ರೀಯ ವರ್ಷವಾಗಿ ಆಚರಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

  • ಕೊರೊನಾಗೆ ಗುಜರಾತ್, ಶ್ರೀನಗರದಲ್ಲಿ ಸಾವು- ದೇಶದಲ್ಲಿ ಸಾವಿನ ಸಂಖ್ಯೆ 25ಕ್ಕೆ ಏರಿಕೆ

    ಕೊರೊನಾಗೆ ಗುಜರಾತ್, ಶ್ರೀನಗರದಲ್ಲಿ ಸಾವು- ದೇಶದಲ್ಲಿ ಸಾವಿನ ಸಂಖ್ಯೆ 25ಕ್ಕೆ ಏರಿಕೆ

    – ಭಾರತದಲ್ಲಿ 1,024 ಪ್ರಕರಣಗಳು ಪತ್ತೆ

    ನವದೆಹಲಿ: ಗುಜರಾತ್ ಹಾಗೂ ಜಮ್ಮು-ಕಾಶ್ಮೀರದಲ್ಲಿ ಇಂದು ಕೊರೊನಾ ಸೋಂಕಿತರು ಮೃತಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಸಾವಿನ ಸಂಖ್ಯೆ 24ಕ್ಕೆ ಏರಿಕೆ ಕಂಡಿದೆ.

    ಗುಜರಾತ್‍ನ ಅಹಮದಾಬಾದ್‍ನಲ್ಲಿ 45 ವರ್ಷದ ಕೊರೊನಾ ಸೋಂಕಿತ ಮೃತಪಟ್ಟಿದ್ದಾರೆ. ಅವರು ಮಧುಮೇಹದಿಂದ ಬಳಲುತ್ತಿದ್ದರು. ಈ ಮೂಲಕ ಗುಜರಾತ್‍ನಿಂದ ಒಟ್ಟು ಐದು ಸಾವುಗಳು ವರದಿಯಾಗಿವೆ ಎಂದು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

    ಶ್ರೀನಗರ ಸರ್ಕಾರಿ ಆಸ್ಪತ್ರೆಯಲ್ಲಿ 52 ವರ್ಷದ ಕೊರೊನಾ ಸೋಂಕಿತ ವ್ಯಕ್ತಿ ಸಾವನ್ನಪ್ಪಿದ್ದಾರೆ. ಇಲ್ಲಿವರೆಗೂ ಜಮ್ಮು-ಕಾಶ್ಮೀರದಲ್ಲಿ ಕೊರೊನಾಗೆ ಇಬ್ಬರು ಬಲಿಯಾಗಿದ್ದಾರೆ.

    ದೇಶಾದ್ಯಂತ ಘೋಷಣೆಯಾದ ಲಾಕ್‍ಡೌನ್ 5ಕ್ಕೆ ಕಾಲಿಟ್ಟಿದೆ. ಆದರೂ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಒಂದು ಸಾವಿರದ ಗಡಿ ದಾಟಿದೆ. ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಾರ, ಭಾನುವಾರ ಬೆಳಗ್ಗೆ 10 ಗಂಟೆ ವೇಳೆ ದೇಶದಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 979ಕ್ಕೆ ಏರಿದೆ. ಈ ಪೈಕಿ 86 ಜನರು ಗುಣಮುಖರಾಗಿದ್ದರೆ, 25 ಮಂದಿ ಪ್ರಾಣಬಿಟ್ಟಿದ್ದಾರೆ. ಆದರೆ ಇದೇ ಸಮಯದಲ್ಲಿ ಕೋವಿದ್-19 ಇಂಡಿಯಾ ವೆಬ್‍ಸೈಟ್ ಪ್ರಕಾರ, ದೇಶದಲ್ಲಿ 1,024 ಜನ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 915 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 85 ಜನರು ಗುಣಮುಖರಾಗಿದ್ದಾರೆ. ಉಳಿದಂತೆ 24 ಜನರು ಮೃತಪಟ್ಟಿದ್ದಾರೆ.

    ಮಹಾರಾಷ್ಟ್ರದಲ್ಲಿ ಇಂದು ಒಂದೇ ದಿನದಲ್ಲಿ 7 ಕೊರೊನಾ ಹೊಸ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಮುಂಬೈನಲ್ಲಿ 4, ಪುಣೆ, ಸಾಂಗ್ಲಿ, ನಾಗ್ಪುರದಲ್ಲಿ ತಲಾ 1 ಒಂದು ಪ್ರಕರಣಗಳು ಪತ್ತೆಯಾಗಿದೆ. ಇದರಿಂದಾಗಿ ಮಹಾರಾಷ್ಟ್ರದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 193ಕ್ಕೆ ಏರಿಕೆ ಕಂಡಿದೆ.

  • ಬಿಎಸ್‍ಎಫ್ ಅಧಿಕಾರಿಗೆ ಕೊರೊನಾ- 50 ಯೋಧರಿಗೆ ಹೋಮ್ ಕ್ವಾರೆಂಟೈನ್

    ಬಿಎಸ್‍ಎಫ್ ಅಧಿಕಾರಿಗೆ ಕೊರೊನಾ- 50 ಯೋಧರಿಗೆ ಹೋಮ್ ಕ್ವಾರೆಂಟೈನ್

    ಭೋಪಾಲ್: ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ಬಿಎಸ್‍ಎಫ್‍ನ 57 ವರ್ಷ ವಯಸ್ಸಿನ ಅಧಿಕಾರಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದಾಗಿ ಅವರೊಂದಿಗೆ ಸಂಪರ್ಕ ಹೊಂದಿದ್ದ 50 ಜನ ಬಿಎಸ್‍ಎಫ್ ಯೋಧರನ್ನು ಹೋಮ್ ಕ್ವಾರೆಂಟೈನ್‍ನಲ್ಲಿ ಇಡಲಾಗಿದೆ.

    ಸೋಂಕಿತರು ಗ್ವಾಲಿಯರ್ ಜಿಲ್ಲೆಯ ತೆಕನ್‍ಪುರ ನಗರದ ಬಿಎಸ್‍ಎಫ್ ಅಕಾಡೆಮಿಯ ಅಧಿಕಾರಿಯಾಗಿದ್ದಾರೆ. ಈವರೆಗೆ ಮಧ್ಯಪ್ರದೇಶದಲ್ಲಿ 34 ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ.

    ಸೋಂಕಿತ ಅಧಿಕಾರಿ ಹೆಚ್ಚುವರಿ ಮಹಾನಿರ್ದೇಶಕ (ಎಡಿಜಿ) ಮತ್ತು ಇನ್ಸ್‌ಪೆಕ್ಟರ್ ಜನರಲ್ (ಐಜಿ), ಬಿಎಸ್‍ಎಫ್ ಅಕಾಡೆಮಿಯ ನಿರ್ದೇಶಕರು ಸೇರಿದಂತೆ ಅನೇಕರು ನಡೆಸಿದ್ದ ಸಭೆಯಲ್ಲಿ ಭಾಗವಹಿಸಿದ್ದರು. ಹೀಗಾಗಿ ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದ ಎಲ್ಲ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿ ಹೋಮ್ ಕ್ವಾರೆಂಟೈನ್‍ನಲ್ಲಿ ಇರಿಸಲಾಗಿದೆ.

    ಬಿಎಸ್‍ಎಫ್ ಅಧಿಕಾರಿಗೆ ಇಂಗ್ಲೆಂಡ್ ಪ್ರವಾಸದ ಇತಿಹಾಸ ಹೊಂದಿರುವ ಪತ್ನಿಯಿಂದ ಕೋವಿಡ್-19 ತಗುಲಿರಬಹುದು ಎನ್ನಲಾಗಿದೆ. ಎರಡನೇ ಕಮಾಂಡ್ ಶ್ರೇಣಿಯ ಅಧಿಕಾರಿ ಪ್ರಸ್ತುತ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‍ಎಫ್) ಅಧಿಕಾರಿಯೊಬ್ಬರಿಗೆ ಶನಿವಾರ ಸೋಂಕು ತಗುಲಿರುವುದು ದೃಢವಾಗಿತ್ತು. ಈ ಬೆನ್ನಲ್ಲೇ ಬಿಎಸ್‍ಎಫ್ ಅಧಿಕಾರಿಗೆ ಸೋಂಕು ತಗುಲಿರುವುದು ಮತ್ತಷ್ಟು ಆತಂಕ ಹೆಚ್ಚಿಸಿದೆ.

  • ಕೇಸ್ ಇಲ್ಲ, ಲಾಠಿ ರುಚಿಯಿಲ್ಲ, ಪ್ರೀತಿಯಿಂದಲೇ ಜನರ ಮನ ಗೆದ್ದ ಎಸ್‍ಪಿ

    ಕೇಸ್ ಇಲ್ಲ, ಲಾಠಿ ರುಚಿಯಿಲ್ಲ, ಪ್ರೀತಿಯಿಂದಲೇ ಜನರ ಮನ ಗೆದ್ದ ಎಸ್‍ಪಿ

    ಹಾಸನ: ಕೇಸ್ ಇಲ್ಲ, ಲಾಠಿ ರುಚಿಯಿಲ್ಲ, ಪ್ರೀತಿಯಿಂದಲೇ ಹಾಸನದ ಎಸ್‍ಪಿ ಶ್ರೀನಿವಾಸ್ ಗೌಡ ಜನರ ಮನ ಗೆದ್ದಿದ್ದಾರೆ.

    ಲಾಕ್‍ಡೌನ್ ಉಲ್ಲಂಘಿಸಿ ನಗರದ ಮೈದಾನದಲ್ಲಿ ಗುಂಪು ಗುಂಪಾಗಿ ಜನರು ವಾಕ್ ಮಾಡುತ್ತಿದ್ದಾರೆ. ಎಷ್ಟು ತಿಳಿ ಹೇಳಿದರೂ ಹಾಸನದ ಜನ ಬೆಳಗ್ಗೆ ಮೈದಾನಕ್ಕೆ ತೆರಳಿ ವಾಕ್ ಮಾಡುವುದನ್ನು ಮಾತ್ರ ನಿಲ್ಲಿಸಿರಲಿಲ್ಲ. ಈ ಬಗ್ಗೆ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಹಾಸನ ಎಸ್‍ಪಿ ಶ್ರೀನಿವಾಸ್ ಗೌಡ ಸ್ವತಃ ಕಾರ್ಯಾಚರಣೆಗಿಳಿದ್ದಾರೆ.

    ಶ್ರೀನಿವಾಸ್ ಗೌಡ ಅವರು ಇಂದು ತಮ್ಮ ತಂಡದೊಂದಿಗೆ ಮೈದಾನಕ್ಕೆ ತೆರಳಿ ವಾಕ್ ಮಾಡುತ್ತಿದ್ದವರನ್ನು ಪೊಲೀಸ್ ವಾಹನದಲ್ಲಿ ಡಿಆರ್ ಮೈದಾನಕ್ಕೆ ಕರೆ ತಂದಿದ್ದರು. ಅಲ್ಲಿಗೆ ಒಬ್ಬರು ಯೋಗ ಗುರುಗಳನ್ನು ಕರೆಸಿ ಮನೆಯಲ್ಲೇ ಮಾಡಬಹುದಾದ ಸರಳ ವ್ಯಾಯಾಮ ಮತ್ತು ಯೋಗಾಸನಗಳ ಬಗ್ಗೆ ತಿಳಿಸಿಕೊಟಿದ್ದಾರೆ.

    ಎಸ್‍ಪಿಯವರೇ ಸ್ವತಃ ಜನರೊಂದಿಗೆ ಕುಳಿತು ಯೋಗ ಮಾಡಿದ್ದಲ್ಲದೆ, ಇನ್ನು ಮುಂದೆ ಮನೆಯಲ್ಲೇ ಇದ್ದು ವ್ಯಾಯಾಮ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಪೊಲೀಸರು ಅಂದ್ರೆ ಭಯದಿಂದ ನೋಡುತ್ತಿದ್ದ ಜನ, ಹಾಸನ ಎಸ್‍ಪಿಯವರ ಸರಳ ನಡತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ದೇಶಕ್ಕೆ ಕೊರೊನಾ ಟೆನ್ಶನ್, ಇವ್ರಿಗೆ ಮಟನ್ ಟೆನ್ಶನ್!

    ದೇಶಕ್ಕೆ ಕೊರೊನಾ ಟೆನ್ಶನ್, ಇವ್ರಿಗೆ ಮಟನ್ ಟೆನ್ಶನ್!

    – 1 ಕೆಜಿ ಮಟನ್‍ಗೆ 800 ರೂ. ಇದ್ರೂ ಜನರ ಸಾಲೋಸಾಲು

    ಬೆಂಗಳೂರು: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇಂತಹ ಪರಿಸ್ಥಿತಿಯಲ್ಲೂ ಕೆಲವರಂತೂ ಸಾಮಾಜಿಕ ಅಂತರವಿಲ್ಲದೆ ಮಟನ್ ಅಂಗಡಿ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ.

    ನಗರದ ನಂದಿನಿ ಲೇಔಟ್‍ನಲ್ಲಿ ತರಕಾರಿ ಅಷ್ಟೇ ಅಲ್ಲದೆ ನಾನ್ ವೆಜ್‍ಗೂ ದೊಡ್ಡ ಸರದಿಯೇ ನಿಂತಿದೆ. ಕೊರೊನಾ ವೈರೆಸ್ ಭೀಕರತೆಯಿಂದ ತಪ್ಪಿಸಿಕೊಳ್ಳುವುದಕ್ಕಿಂತ ಮಟನ್ ಮುಖ್ಯ ಎಂಬಂತೆ ಜನರು ವರ್ತಿಸುತ್ತಿದ್ದಾರೆ.

    ಸಾಮಾಜಿಕ ಅಂತರದ ಮಾತಿರಲಿ ಕ್ಯೂನಲ್ಲಿ ನಿಂತಿದ್ದ ಹಲವರು ಮಾಸ್ಕ್ ಹಾಕಿರಲಿಲ್ಲ. ಮಟನ್ ಖರೀದಿಗೆ ಗ್ರಾಹಕರು ಕಿ.ಮೀ ಗಟ್ಟಲೆ ಕ್ಯೂ ನಿಂತಿದ್ದರು. ಭಾರತ ಲಾಕ್‍ಡೌನ್ ಅಂದ್ರೆ ಇದೇನಾ? ಸಂಡೆ ಒಂದು ದಿನ ಮಟನ್ ತಿನ್ನದೆ ಇದ್ದರೆ ಇವರು ಸತ್ತೇ ಹೋಗ್ತಾರಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.

    ಚಿಕನ್ ಬೆಲೆ ಕೆಜಿಗೆ 100 ರೂ. ಹಾಗೂ ಮಟನ್ ಬೆಲೆ ಕೆಜಿಗೆ 800 ರೂ. ಆಗಿದೆ. ಮಟನ್ ಬೆಲೆ ದುಬಾರಿಯಾದ್ರೂ ತಿನ್ನುವರರ ಸಂಖ್ಯೆ ಮಾತ್ರ ಇಳಿಕೆಯಾಗಿಲ್ಲ. ಸಂಡೇ ಸ್ಪೆಷಲ್ ಎಂಬ ಕಾರಣಕ್ಕೆ ಜನರು ಮಾಂಸ ಖರೀದಿಗೆ ಮುಗಿಬಿದ್ದಾರೆ.

  • ಕೊರೊನಾ ವಿರುದ್ಧ ಹೋರಾಡಲು ಸಂಭಾವ್ಯ ಲಸಿಕೆ ಅಭಿವೃದ್ಧಿಪಡಿಸಿದ ಹೈದರಾಬಾದ್ ವಿವಿ

    ಕೊರೊನಾ ವಿರುದ್ಧ ಹೋರಾಡಲು ಸಂಭಾವ್ಯ ಲಸಿಕೆ ಅಭಿವೃದ್ಧಿಪಡಿಸಿದ ಹೈದರಾಬಾದ್ ವಿವಿ

    ಹೈದರಾಬಾದ್: ವಿಶ್ವವ್ಯಾಪಿ ಹರಡುತ್ತಿರುವ ಮಹಾಮಾರಿ ಕೊರೊನಾ ವೈರಸ್ ಸೋಂಕಿಗೆ ಹೈದರಾಬಾದ್‍ನ ವಿಶ್ವವಿದ್ಯಾಲಯ ಸಂಭಾವ್ಯ ಲಸಿಕೆಯನ್ನು ಅಭಿವೃದ್ಧಿಗೊಳಿಸಿದೆ.

    ಸ್ಕೂಲ್ ಆಫ್ ಲೈಫ್ ಸೈನ್ಸ್ ಜೀವ ರಾಸಾಯನಿಕ ವಿಭಾಗದ ಅಧ್ಯಾಪಕಿ ಡಾ. ಸೀಮಾ ಮಿಶ್ರಾ ಅವರು ‘ಟಿ ಸೆಲ್ ಎಪಿಟೋಪ್ಸ್’ ಎಂಬ ಸಂಭಾವ್ಯ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಬಗ್ಗೆ ಹೈದರಾಬಾದ್ ವಿಶ್ವವಿದ್ಯಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದ್ದು, ಈ ಲಸಿಕೆಯನ್ನು ಕೊರೊನಾ ವೈರಸ್ ವಿರುದ್ಧ ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಲಾಗುವುದು ಎಂದಿದೆ.

    ಪ್ರಾಧ್ಯಾಪಕಿ ಡಾ. ಸೀಮಾ ಮಿಶ್ರಾ ಅವರು ಸಂಭಾವ್ಯ ಲಸಿಕೆ ಬಗ್ಗೆ ಮಾಹಿತಿ ನೀಡಿದ್ದು, ಈ ಲಸಿಕೆಯನ್ನು ಎಲ್ಲಾ ಸೋಂಕಿತರಿಗೂ ನೀಡಬಹುದಾಗಿದೆ. ಇದು ಮಾನುಷ್ಯನ ದೇಹದಲ್ಲಿ ಕೊರೊನಾ ವೈರಸ್ ಪೆಪ್ಟೈಡ್ಸ್ ಗಳು ಇರುವ ಕೋಶಗಳನ್ನು ನಾಶಪಡಿಸಿ, ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ದೇಹದಲ್ಲಿ ಕೊರೊನಾ ವಿರುದ್ಧ ಹೋರಾಟ ಕ್ಷಮತೆ ಹೆಚ್ಚಾಗುತ್ತದೆ ಎಂದಿದ್ದಾರೆ.

    ಈ ಲಸಿಕೆ ಯಶಸ್ವಿಯಾಗಿ ಕಾರ್ಯರೂಪಕ್ಕೆ ಬರುವ ತನಕ ಕೊರೊನಾ ವೈರಸ್ ಸೋಂಕು ತಗುಲದಂತೆ ನೋಡಿಕೊಳ್ಳುವುದು ಸಾಮಾಜಿಕ ಅಂತರದಿಂದ ಮಾತ್ರ ಸಾಧ್ಯ. ಈ ಲಸಿಕೆ ಬಳಕೆಗೆ ಲಭ್ಯವಾಗಲು ಸ್ವಲ್ಪ ಸಮಯ ಬೇಕಾಗುತ್ತದೆ. ಈ ಸಂಶೋಧನೆ ನಿರ್ಣಾಯಕ ಅಂಗೀಕಾರ ಪಡೆಯಲು ವೈಜ್ಞಾನಿಕ ಸಮುದಾಯ ವಿಟ್ರೋ ಅಧ್ಯಯನ ಬಾಕಿ ಇದೆ. ಈ ಅಧ್ಯಯನ ಯಶಸ್ವಿಯಾದರೆ ಲಸಿಕೆ ಬಳಕೆಗೆ ಮುಕ್ತವಾಗಲಿದೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ.

  • ಕೊರೊನಾ ಸೋಂಕಿತರಿಗೆ ಸಿದ್ಧವಾಗುತ್ತಿದೆ ರೈಲ್ವೆ ಆಸ್ಪತ್ರೆ!

    ಕೊರೊನಾ ಸೋಂಕಿತರಿಗೆ ಸಿದ್ಧವಾಗುತ್ತಿದೆ ರೈಲ್ವೆ ಆಸ್ಪತ್ರೆ!

    ನವದೆಹಲಿ: ಹೆಮ್ಮಾರಿ ಕೊರೊನಾ ವೈರಸ್ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ದೇಶಾದ್ಯಂತ ಏಪ್ರಿಲ್ 14ರವರೆಗೂ ಲಾಕ್‍ಡೌನ್ ಘೋಷಿಸಿದರೂ ಹೇಳಿಕೊಳ್ಳವ ಮಟ್ಟಿಗೆ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಒಂದು ವೇಳೆ ದೇಶದಲ್ಲಿರುವ ಆಸ್ಪತ್ರೆಗಳಲ್ಲಿ ವಾರ್ಡ್‍ಗಳ ಸಮಸ್ಯೆಯಾದರೆ ರೈಲಿನಲ್ಲೇ ಕ್ವಾರಂಟೈಮ್ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.

    ಲಾಕ್‍ಡೌನ್ ಘೋಷಣೆಗೂ ಮುನ್ನವೇ ರೈಲ್ವೆ ಇಲಾಖೆ ರೈಲು ಸಂಚಾರವನ್ನು ಸ್ಥಗಿತಗೊಳಿಸಿದೆ. ಇತ್ತ ದೇಶಾದ್ಯಂತ ಕೊರೊನಾ ಶಂಕಿತರು ಮತ್ತು ಸೋಂಕಿತರ ಚಿಕಿತ್ಸೆಗೆ ಐಸೋಲೇಶ್ ವಾರ್ಡ್ ಗಳ ಕೊರತೆ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ತನ್ನಲ್ಲಿರುವ ಅಪಾರ ಪ್ರಮಾಣದ ರೈಲುಗಳನ್ನ ಐಸೋಲೇಶನ್ ವಾರ್ಡ್ ಗಳಾಗಿ ಬಳಕೆ ಮಾಡುವ ಆಫರ್ ಮುಂದಿಟ್ಟಿದೆ.

    ರೈಲ್ವೆ ಬೋಗಿಗಳಲ್ಲಿ ಎಲ್ಲ ರೀತಿಯ ವ್ಯವಸ್ಥೆ ಸಿಗಲಿದೆ. ವೈದ್ಯ ಸಿಬ್ಬಂದಿ, ಸೋಂಕಿತರು, ಶಂಕಿತರು ಸೇರಿದಂತೆ ಆಹಾರ ಪೂರೈಕೆಗೂ ಅವಕಾಶ ಕಲ್ಪಿಸಲಾಗಿದೆ. ಇದಕ್ಕೆಲ್ಲ ಕೇಂದ್ರ ಸರ್ಕಾರವು ಒಪ್ಪಿಗೆ ನೀಡಿದರೆ ರೈಲ್ವೆ ಇಲಾಖೆಯು 20 ಸಾವಿರ ಬೋಗಿಗಳನ್ನು 10 ಸಾವಿರ ಐಸೋಲೇಶನ್ ವಾರ್ಡ್ ಗಳಾಗಿ ಮಾರ್ಪಾಡಾಗುವ ಸಾಧ್ಯತೆಯಿದೆ.

    ಪ್ರತ್ಯೇಕತೆ:
    ದೇಶದಲ್ಲಿ ಕೊರೊನಾ ವೈರಸ್ ಉಲ್ಬಣಗೊಂಡ ನಂತರ ತಮ್ಮನ್ನು ತಾವೇ ಪ್ರತ್ಯೇಕಿಸಿಕೊಳ್ಳುವ, ಮತ್ತೊಬ್ಬರಿಂದ ಅಂತರ ಕಾಯ್ದುಕೊಳ್ಳುವ ಸೌಲಭ್ಯಗಳ ಅವಶ್ಯಕತೆಯಿದೆ. ಈ ಬೇಡಿಕೆ ಈಡೇರಿಸಲು ಭಾರತೀಯ ರೈಲ್ವೆ ಒಂದು ಚತುರ ಪರಿಹಾರವನ್ನು ಕಂಡುಹಿಡಿದಿದೆ.

    ವಿದ್ಯುತ್:
    ಪ್ರತ್ಯೇಕ ಸೌಲಭ್ಯಗಳಿಗಾಗಿ ದೇಶದ ಸಾಮಥ್ರ್ಯವನ್ನು ಹೆಚ್ಚಿಸುವ ಪ್ರಯತ್ನದಲ್ಲಿ, ರೈಲ್ವೆ ತನ್ನ ರೈಲು ಬೋಗಿಗಳನ್ನು ಕ್ವಾರೆಂಟೈನ್ ಹಬ್‍ಗಳಾಗಿ ಪರಿವರ್ತಿಸುವ ಯೋಜನೆಯನ್ನು ರೂಪಿಸುತ್ತಿದೆ. ಆದರೆ ವಿದ್ಯುತ್ ಸಂಪರ್ಕವಿರುವ ಸಮೀಪದಲ್ಲಿ ಬೋಗಿಗಳನ್ನು ನಿಲ್ಲಿಸಿದರೆ ಅನುಕೂಲವಾಗಲಿದೆ.

    ವಿನ್ಯಾಸ:
    ಕ್ವಾರೆಂಟೈನ್‍ಗಾಗಿ ರೈಲ್ವೆ ಇಲಾಖೆ ನಾನ್ ಎಸಿ ಕೋಚ್ ಆಯ್ಕೆ ಮಾಡಿಕೊಂಡಿದೆ. ಇದರಲ್ಲಿ 10 ಕ್ಯಾಬಿನ್‍ಗಳಿರುತ್ತವೆ. ಕೇವಲ ಒಂದು ಬರ್ತ್ ಬಿಟ್ಟು ಉಳಿದ ಮೂರು ಬರ್ತ್ ತೆಗೆದು ರೂಮ್ ರೀತಿ ಸಿದ್ಧಗೊಳಿಸಲಾಗಿದೆ. ಇದೇ ರೀತಿ ಸೋಂಕಿತ ವ್ಯಕ್ತಿಯ ಚಿಕಿತ್ಸೆಗೆ ಇರುವ ರೂಮ್ ವ್ವವಸ್ಥೆ ಮಾಡಲಾಗಿದ್ದು, ಪ್ಲಾಸ್ಟಿಕ್ ಕರ್ಟನ್‍ನಿಂದ ಕ್ಯಾಬಿನ್ ಕವರ್ ಮಾಡಲಾಗಿದೆ.

    ಶೌಚಾಲಯ:
    ಒಂದು ಕ್ಯಾಬಿನ್‍ನಲ್ಲಿ 3 ಭಾರತೀಯ ಶೈಲಿ 1 ವೆಸ್ಟರ್ನ್ ಟಾಯ್ಲೆಟ್‍ಗಳಿರುತ್ತವೆ. ಈ ಪೈಕಿ ಎರಡು ಟಾಯ್ಲೆಟ್‍ಗಳನ್ನು ಸ್ನಾನದ ಕೋಣೆಯಾಗಿ ಪರಿವರ್ತಿಸಲಾಗಿದೆ. ಬಾಥ್ ರೂಮ್‍ನಲ್ಲಿ ಟ್ಯಾಪ್‍ನ ಎತ್ತರವನ್ನು ಹೆಚ್ಚಿಸಲಾಗಿದೆ. ಜೊತೆಗೆ ಹ್ಯಾಂಡ್ ಶವರ್ ಗಳನ್ನ ಹಾಕಲಾಗಿದೆ.

    ವೈದ್ಯಕೀಯ ಸಿಬ್ಬಂದಿ:
    ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಡಾಕ್ಟರ್, ನರ್ಸ್ ಸೇರಿ ವೈದ್ಯಕೀಯ ಸಿಬ್ಬಂದಿಗೂ ಪ್ರತ್ಯೇಕ ಕ್ಯಾಬಿನ್ ವ್ಯವಸ್ಥೆ ಮಾಡಲಾಗಿದೆ. ರೋಗಿ ಮತ್ತು ವೈದ್ಯರ ಕ್ಯಾಬಿನ್ ಮಧ್ಯೆ ಅಡ್ಡವಾಗಿ ಪ್ಲಾಸ್ಟಿಕ್ ಕರ್ಟನ್ ಹಾಕಲಾಗಿದೆ.

    ಆಹಾರ:
    ಬೇಸ್ ಅಡಿಗೆಮನೆಗಳಿಲ್ಲದ ನಿಲ್ದಾಣಗಳಿಗೆ ಆಹಾರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಪ್ಯಾಂಟ್ರಿ ಕಾರುಗಳನ್ನು ಮೊಬೈಲ್ ಅಡುಗೆಮನೆಯನ್ನಾಗಿ ಪರಿವರ್ತಿಸಲು ರೈಲ್ವೆ ಯೋಜಿಸಿದೆ.

  • ಕೊರೊನಾ ಭಯದಿಂದ ಗ್ರಾಮಕ್ಕೆ ಮರಳುತ್ತಿದ್ದವ್ರು ಮಸಣ ಸೇರಿದ್ರು

    ಕೊರೊನಾ ಭಯದಿಂದ ಗ್ರಾಮಕ್ಕೆ ಮರಳುತ್ತಿದ್ದವ್ರು ಮಸಣ ಸೇರಿದ್ರು

    – ಲಾರಿ ಡಿಕ್ಕಿ ರಭಸಕ್ಕೆ 4 ಜನ ಅಪ್ಪಚ್ಚಿ, ಸಾವಿನ ಸಂಖ್ಯೆ 7ಕ್ಕೆ
    – 4 ಜನರ ಸ್ಥಿತಿ ಚಿಂತಾಜನಕ

    ರಾಯಚೂರು: ಕೊರೊನಾ ವೈರಸ್ ಭಯದಿಂದ ಲಾಕ್‍ಡೌನ್ ಮಧ್ಯ ತಮ್ಮ ಗ್ರಾಮಗಳಿಗೆ ಮರಳುತ್ತಿದ್ದ ರಾಯಚೂರು ಜಿಲ್ಲೆಯ 30 ಜನರಿದ್ದ ಮಿನಿ ಟ್ರಕ್‍ಗೆ ಲಾರಿ ಡಿಕ್ಕಿ ಹೊಡೆದು ಏಳ ಜನ ಮೃತಪಟ್ಟ ಘಟನೆ ತೆಲಂಗಾಣದಲ್ಲಿ ನಡೆದಿದೆ.

    ಸುರಪೂರ ತಾಲೂಕಿನ ಕಕ್ಕೇರಿ ಗ್ರಾಮದ ಬಸಮ್ಮ, ಹನುಮಂತ, ಲಿಂಗಸ್ಗೂರು ತಾಲೂಕಿನ ರಾಯದುರ್ಗ ಗ್ರಾಮದ ಶ್ರೀದೇವಿ, ರಂಗಪ್ಪ, ಶರಣಪ್ಪ, ಅಮರಪ್ಪ ಹಾಗೂ ಚಿಂಚರಕಿ ಗ್ರಾಮದ ಕೊಳ್ಳಪ್ಪ ಮೃತ ದುರ್ದೈವಿಗಳು. ಗಂಭೀರವಾಗಿ ಗಾಯಗೊಂಡ ನಾಲ್ವರನ್ನು ಹೈದರಾಬಾದ್‍ನ ಉಸ್ಮಾನಿಯಾ ಆಸ್ಪತ್ರೆಯಲ್ಲಿ  ದಾಖಲಿಸಲಾಗಿದೆ.

    ಆಗಿದ್ದೇನು?:
    ಕೊರೊನಾ ವೈರಸ್‍ನಿಂದ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದ್ದು, ರಾಯಚೂರಿನ ರಸ್ತೆ ನಿರ್ಮಾಣ ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದರು. ಜೊತೆಗೆ ಕೊರೊನಾ ಭಯಕ್ಕೆ ಸೂರ್ಯಪೇಟೆಯಿಂದ 30 ಜನರು ತಮ್ಮ ಗ್ರಾಮಗಳಿಗೆ ಮಿನಿ ಟ್ರಕ್‍ನಲ್ಲಿ ಸಾಗಿಸುತ್ತಿದ್ದರು. ಶಂಶಾಬಾದ್ ಬಳಿ ವೇಗವಾಗಿ ಬಂದ ಲಾರಿ ಚಾಲಕ ನಿಯಂತ್ರಣ ತಪ್ಪಿ ಹಿಂಬದಿಯಿಂದ ಮಿನಿ ಟ್ರಕ್‍ಗೆ ಡಿಕ್ಕಿ ಹೊಡೆದಿದ್ದ. ಪರಿಣಾಮ ಮಿನಿ ಟ್ರಕ್‍ನಲ್ಲಿದ್ದ ನಾಲ್ವರು ಸ್ಥಳದಲ್ಲಿ ಪ್ರಾಣಬಿಟ್ಟಿದ್ದು, 6 ಜನರು ಗಂಭೀರವಾಗಿ ಗಾಯಗೊಂಡಿದ್ದರು.

    ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಶಂಶಾಬಾದ್ ಗ್ರಾಮೀಣ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಆರ್.ವೆಂಕಟೇಶ್ ಅವರು ಪರಿಶೀಲನೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡವರನ್ನು ಶಂಶಾಬಾದ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಹೆಚ್ಚಿನ ಚಿಕಿತ್ಸೆ ಅಗತ್ಯವಾಗಿದ್ದರಿಂದ ಗಾಯಾಳುಗಳನ್ನು ಹೈದರಾಬಾದ್‍ನ ಉಸ್ಮಾನಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಚಿಕಿತ್ಸೆ ಫಲಿಸದೆ ಮೂವರು ಸಾವನ್ನಪ್ಪಿದ್ದಾರೆ. ಉಳಿದ ನಾಲ್ವರಿಗೆ ಇನ್ನೂ ಚಿಕಿತ್ಸೆ ಕೊಡಲಾಗುತ್ತದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಯಚೂರು ಎಸ್‍ಪಿ, ತೆಲಂಗಾಣದಕ್ಕೆ ಗುಳೆ ಹೋಗಿದ್ದ ರಾಯಚೂರಿನ ಜನರು ಕೊರೊನಾ ವೈರಸ್ ಹರಡುವ ಭೀತಿಯ ಹಿನ್ನೆಲೆಯಲ್ಲಿ ತಮ್ಮ ಗ್ರಾಮಗಳಿಗೆ ಮಾರ್ಚ್ 27ರಂದು ಬೆಳಗಿನ ಜಾವ 12ಗಂಟೆ ಸುಮಾರಿಗೆ ವಾಪಸ್ ಆಗುತ್ತಿದ್ದರು. ಆದರೆ ಶಂಶಾಬಾದ್ ರಿಂಗ್ ರೋಡ್‍ನಲ್ಲಿ ಕಾರ್ಮಿಕರಿದ್ದ ಮಿನಿ ಟ್ರಕ್ ಕೆಟ್ಟು ನಿಂತಿತ್ತು. ಅದನ್ನು ರಿಪೇರಿ ಮಾಡುತ್ತಿದ್ದಾಗ ಹಿಂದುಗಡೆಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದ್ದು, ಅಪಘಾತದ ಸ್ಥಳದಲ್ಲಿಯೇ ನಾಲ್ಕು ಜನ ಸಾವನ್ನಪ್ಪಿದ್ದಾರೆ. ಮೂವರು ಉಸ್ಮಾನಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

  • 15 ದಿನಗಳಲ್ಲಿ 53 ಸಾವಿರ ಕೋಟಿ ರೂ. ವಿತ್‍ಡ್ರಾ

    15 ದಿನಗಳಲ್ಲಿ 53 ಸಾವಿರ ಕೋಟಿ ರೂ. ವಿತ್‍ಡ್ರಾ

    ಮುಂಬೈ: ಕೊರೊನಾ ವೈರಸ್ ಭಯವು ಜನರ ಜೀವನದ ಪ್ರತಿಯೊಂದು ಭಾಗದ ಮೇಲೆ ಪರಿಣಾಮ ಬೀರುತ್ತಿದೆ. ಜನರು ತುರ್ತು ಪರಿಸ್ಥಿತಿಯನ್ನು ನಿರೀಕ್ಷಿಸಿ ಬ್ಯಾಂಕ್‍ಗಳಿಂದ ಅಪಾರ ಪ್ರಮಾಣದ ಹಣವನ್ನು ವಿತ್‍ಡ್ರಾ ಮಾಡಿಕೊಳ್ಳುತ್ತಿದ್ದಾರೆ. ಹದಿನೈದು ದಿನಗಳಲ್ಲಿ ಠೇವಣಿದಾರರು 53 ಸಾವಿರ ಕೋಟಿ ರೂ. ಹಿಂಪಡೆಸಿದ್ದಾರೆ. ಇದು ಕಳೆದ 16 ತಿಂಗಳಲ್ಲಿ ಅತ್ಯಧಿಕ ನಗದು ವಿತ್‍ಡ್ರಾ ಆಗಿದೆ.

    ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಕಾರ, ಹಬ್ಬ ಅಥವಾ ಚುನಾವಣೆ ಸಂದರ್ಭದಲ್ಲಿ ಮಾತ್ರ ಇಷ್ಟು ಪ್ರಮಾಣದಲ್ಲಿ ಗ್ರಾಹಕರು ಹಣವನ್ನು ವಿತ್‍ಡ್ರಾ ಮಾಡಿಕೊಳ್ಳುತ್ತಾರೆ. ಆದರೆ ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಮಾರ್ಚ್ 13ರಿಂದ 27ರವರೆಗೆ ಜನರು ಇಷ್ಟು ದೊಡ್ಡ ಪ್ರಮಾಣದ ಹಣವನ್ನು ಹಿಂಪಡೆದಿದ್ದಾರೆ. ಮಾರ್ಚ್ 13ರ ವೇಳೆ ಗ್ರಾಹಕರು 23 ಲಕ್ಷ ಕೋಟಿ ರೂ. ಠೇವಣಿ ಹೊಂದಿದ್ದರು. ನಂತರದ 16 ತಿಂಗಳಲ್ಲಿ 53 ಸಾವಿರ ಕೋಟಿ ರೂ. ಹಿಂಪಡೆಸಿದ್ದಾರೆ.

    ಲಾಕ್‍ಡೌನ್ ಸಮಯದಲ್ಲಿ ಅಗತ್ಯ ವಸ್ತುಗಳನ್ನು ನಗದು ರೂಪದಲ್ಲಿ ಖರೀದಿಸಬೇಕಾಗುತ್ತದೆ. ಹೀಗಾಗಿ ಹಣಕ್ಕಾಗಿ ಹಠಾತ್ ಬೇಡಿಕೆಯ ಸಂದರ್ಭದಲ್ಲಿ ಬ್ಯಾಂಕುಗಳು ನಗದು ವಿತರಣೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸ್ಟೇಟ್ ಬ್ಯಾಂಕಿನ ಮುಖ್ಯ ಅರ್ಥಶಾಸ್ತ್ರಜ್ಞ ಎಸ್.ಕೆ.ಘೋಷ್ ತಿಳಿಸಿದ್ದಾರೆ.

    ಇಂತಹ ಪರಿಸ್ಥಿತಿಯಲ್ಲಿ ಬ್ಯಾಂಕ್‍ಗಳು ಮತ್ತು ಎಟಿಎಂಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತದೆಯೇ ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮುನ್ನೆಚ್ಚರಿಕೆಯಾಗಿ ಭಾರೀ ಪ್ರಮಾಣದ ಹಣವನ್ನು ಹಿಂಪಡೆದಿದ್ದಾರೆ. ಬ್ಯಾಂಕ್‍ಗಳು ಆನ್‍ಲೈನ್ ವಹಿವಾಟುಗಳನ್ನು ಉತ್ತೇಜಿಸುತ್ತಿವೆ. ಆದರೆ ಅನೇಕ ಇ-ಕಾಮರ್ಸ್ ಕಂಪನಿಗಳು ಸೀಮಿತ ವಿತರಣಾ ಸೇವೆಯನ್ನು ಹೊಂದಿವೆ. ಈ ಹಿನ್ನೆಲೆಯಲ್ಲಿ ಜನರು ಆಫ್‍ಲೈನ್‍ನಲ್ಲಿ ಶಾಪಿಂಗ್ ಮಾಡುತ್ತಿದ್ದಾರೆ. ಇದಕ್ಕಾಗಿ ಹಣದ ಅಗತ್ಯವಿದೆ ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.

  • ಕೊರೊನಾಗೆ ಕೇರಳದಲ್ಲಿ ಮೊದಲ ಬಲಿ – ಮೃತನ ಪತ್ನಿ, ಚಾಲಕನಿಗೂ ಸೋಂಕು

    ಕೊರೊನಾಗೆ ಕೇರಳದಲ್ಲಿ ಮೊದಲ ಬಲಿ – ಮೃತನ ಪತ್ನಿ, ಚಾಲಕನಿಗೂ ಸೋಂಕು

    – ದೇಶದಲ್ಲಿ 20ಕ್ಕೆ ಏರಿದ ಸಾವಿನ ಸಂಖ್ಯೆ
    – ಸಾವಿನ ಸಂಖ್ಯೆ ‘ಮಹಾ’ ಟಾಪ್

    ತಿರುವನಂತಪುರಂ: ಹೆಮ್ಮಾರಿ ಕೊರೊನಾ ವೈರಸ್‍ಗೆ ಕೇರಳದಲ್ಲಿ ಮೊದಲ ಸಾವು ಸಂಭವಿಸಿದೆ. ಕೊಚ್ಚಿಯ ಕಲಾಮಸ್ಸೆರಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದ 69 ವರ್ಷದ ವೃದ್ಧ ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

    ಕೊಚ್ಚಿಯ ಚುಲ್ಲಿಕಲ್ ನಿವಾಸಿ ವೃದ್ಧ ಮಾರ್ಚ್ 16ರಂದು ದುಬೈನಿಂದ ಮರಳಿದ್ದರು. ಅವರೊಂದಿಗೆ ಸಂಪರ್ಕ ಹೊಂದಿದ್ದ ಪತ್ನಿ ಹಾಗೂ ಚಾಲಕನಿಗೂ ಸೋಂಕು ತಗುಲಿದ್ದು, ಅವರನ್ನು ಕೂಡ ಕಲಾಮಸ್ಸೆರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ.

    ಶುಕ್ರವಾರ ಸಂಜೆವರೆಗೂ ಕೇರಳದಲ್ಲಿ 176 ಪ್ರಕರಣಗಳು ಪತ್ತೆಯಾಗಿದ್ದು, 12 ಜನರು ಚೇತರಿಸಿಕೊಂಡಿದ್ದಾರೆ. ಆದರೆ ಮೃತ ವೃದ್ಧ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಕೇರಳ ಸರ್ಕಾರ ಹೇಳಿದೆ.

    ವೃದ್ಧ ಮಾರ್ಚ್ 16ರಂದು ದುಬೈನಿಂದ ಮರಳಿದ್ದಾಗ ಅವರಲ್ಲಿ ಸೋಂಕು ತಗುಲಿರುವ ಲಕ್ಷಣಗಳು ಕಂಡು ಬಂದಿದ್ದವು. ಹೀಗಾಗಿ ಹೋಮ್ ಕ್ವಾರೆಂಟೈನ್ ಇರುವಂತೆ ಸೂಚನೆ ನೀಡಲಾಗಿತ್ತು. ಮಾರ್ಚ್ 22ರಂದು ಆರೋಗ್ಯ ಹದಗೆಟ್ಟಿದ್ದರಿಂದ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ವೆಂಟಿಲೇಟರ್ ಮೇಲೆ ಇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

    ಭಾರತದಲ್ಲಿ ಈವರೆಗೂ ಒಟ್ಟು 20 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಕೇರಳ, ದೆಹಲಿ, ಹಿಮಾಚಾಲ, ತಮಿಳುನಾಡು, ಪಂಜಾಬ್, ಪಶ್ಚಿಮ ಬಂಗಾಳ ಮತ್ತು ಜಮ್ಮು ಕಾಶ್ಮೀರಗಳಲ್ಲಿ ತಲಾ ಒಂದು, ಗುಜರಾತ್ ಮತ್ತು ಕರ್ನಾಟಕದಲ್ಲಿ ತಲಾ ಮೂರು, ಮಧ್ಯಪ್ರದೇಶದಲ್ಲಿ ಎರಡು ಮತ್ತು ಮಹಾರಾಷ್ಟ್ರದಲ್ಲಿ ಐದು ಜನರು ಮೃತಪಟ್ಟಿದ್ದಾರೆ.

    ಕೇರಳದ ಅಂಕಿ-ಅಂಶ:
    ಕೇರಳದ ವಿವಿಧ ಆಸ್ಪತ್ರೆಗಳಲ್ಲಿ ಬುಧವಾರ 112 ಕೊರೊನಾ ಶಂಕಿರತನ್ನು ವೀಕ್ಷಣೆಗಾಗಿ ದಾಖಲಿಸಲಾಗಿದೆ. ಆಸ್ಪತ್ರೆಗಳಲ್ಲಿ ಈವರೆಗೂ 616 ಜನರು ಚಿಕಿತ್ಸೆ ಪಡೆಯುತ್ತಿದ್ದರೆ, 1,09,683 ಜನ ಹೋಮ್ ಕ್ವಾರೆಂಟೈನ್‍ನಲ್ಲಿದ್ದಾರೆ. ಹೆಚ್ಚಿನ ಸಂಖ್ಯೆಯ ಸೋಂಕಿತರು ಕಾಸರಗೋಡುನಲ್ಲಿರುವುದರಿಂದ ಈಗಿರುವ ನಿರ್ಬಂಧಗಳನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಮುಂದುವರಿಸಬೇಕು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೂಚನೆ ನೀಡಿದ್ದಾರೆ.

    ಇಲ್ಲಿಯವರೆಗೆ ವೇಳೆಗೆ ರಾಜ್ಯದಲ್ಲಿ 1,10,299 ಜನರನ್ನು ನಿಗಾದಲ್ಲಿ ಇಡಲಾಗಿದ್ದು, ಈ ಪೈಕಿ 616 ಜನರನ್ನು ರಾಜ್ಯದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಒಟ್ಟು 5,679 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪೈಕಿ 4,448 ಮಂದಿಯ ರಿಪೋರ್ಟ್ ನೆಗೆಟಿವ್ ಬಂದಿದೆ ಎಂದು ಪಿಣರಾಯಿ ವಿಜಯನ್ ಖಚಿತಪಡಿಸಿದ್ದಾರೆ.