Tag: Coronavirus

  • ನಗರಸಭೆಯಿಂದ ನಿರಾಶ್ರಿತರಿಗೆ ಹೇರ್ ಕಟಿಂಗ್, ಹೊಸಬಟ್ಟೆ

    ನಗರಸಭೆಯಿಂದ ನಿರಾಶ್ರಿತರಿಗೆ ಹೇರ್ ಕಟಿಂಗ್, ಹೊಸಬಟ್ಟೆ

    ಚಾಮರಾಜನಗರ: ಕೊರೊನಾ ವೈರಸ್ ಭೀತಿಗೆ ಜನರೆಲ್ಲ ಮನೆ ಸೇರಿದ್ದಾರೆ. ಆದರೆ ನಿರ್ಗತಿಕರು ಮಾತ್ರ ಸೂರಿಲ್ಲದೆ ಬೀದಿಯಲ್ಲೇ ಪರದಾಡುವಂತಾಗಿದೆ. ಇಂಥವರಿಗೆ ಆಶ್ರಯ ನೀಡಲು ಚಾಮರಾಜನಗರ ನಗರಸಭೆ ಪರಿಹಾರ ಕೇಂದ್ರ ತೆರೆದಿದ್ದು, ಜಿಲ್ಲೆಯಲ್ಲಿರುವ ನಿರ್ಗತಿಕರಿಗೆ ಆಹಾರ, ಬಟ್ಟೆ ನೀಡಿ ಕ್ಷೇಮವಾಗಿ ನೋಡಿಕೊಳ್ಳುತ್ತಿದೆ.

    ನಗರಸಭೆ ವತಿಯಿಂದ ನಗರದ ಸಿಡಿಎಸ್ ಭವನದಲ್ಲಿ ತೆರೆದಿರುವ ನಿರಾಶ್ರಿತರ ತಾತ್ಕಾಲಿಕ ಕೇಂದ್ರದಲ್ಲಿ ಇಬ್ಬರು ಮಾನಸಿಕ ಅಸ್ವಸ್ಥರು ಸೇರಿದಂತೆ ಐವರು ನಿರಾಶ್ರಿತರಿಗೆ ಕ್ಷೌರ ಮಾಡಿಸಿ ಹೊಸ ಬಟ್ಟೆಗಳನ್ನು ನೀಡಲಾಗಿದೆ. ಕೊರೊನಾ ಹರಡುವಿಕೆ ಕಡಿಮೆಯಾಗುವರೆಗೂ ಅವರ ಯೋಗಕ್ಷೇಮವನ್ನು ನೋಡಿಕೊಳ್ಳಲಾಗುತ್ತಿದೆ.

    ಇಡೀ ದೇಶವೇ ಸಂಪೂರ್ಣ ಲಾಕ್ ಡೌನ್ ಆಗಿರುವುದರಿಂದ ಊಟಕ್ಕೆ ಪರದಾಡುತ್ತಿದ್ದ ಇವರಿಗೆ ಆಹಾರ-ವಸತಿ ಸೌಕರ್ಯ ಕಲ್ಪಿಸಲಾಗಿದೆ. ಜೊತೆಗೆ, 14 ಮಂದಿ ರಾಜಸ್ಥಾನದ ಪಾನಿಪೂರಿ ವ್ಯಾಪಾರಿಗಳಿಗೂ ಊಟದ ವ್ಯವಸ್ಥೆ ಮಾಡಿದ್ದು, ಕೊರೊನಾ ಆತಂಕ ಮುಗಿಯುವವರೆಗೂ ಅವರ ಯೋಗಕ್ಷೇಮ ನೋಡಿಕೊಳ್ಳಲಾಗುವುದು ಎಂದು ನಗರಸಭೆ ಆಯುಕ್ತ ರಾಜಣ್ಣ ತಿಳಿಸಿದರು.

  • ಹೋಂ ಕ್ವಾರಂಟೈನ್‍ನಲ್ಲಿದ್ದವರ ಮೇಲೆ ಜಿಪಿಎಸ್ ಕಣ್ಣು – ಬೆಳ್ತಂಗಡಿಯಲ್ಲಿ ದೇಶದಲ್ಲಿಯೇ ಮೊದಲ ಪ್ರಯತ್ನ

    ಹೋಂ ಕ್ವಾರಂಟೈನ್‍ನಲ್ಲಿದ್ದವರ ಮೇಲೆ ಜಿಪಿಎಸ್ ಕಣ್ಣು – ಬೆಳ್ತಂಗಡಿಯಲ್ಲಿ ದೇಶದಲ್ಲಿಯೇ ಮೊದಲ ಪ್ರಯತ್ನ

    ಬೆಂಗಳೂರು/ಮಂಗಳೂರು: ಹೋಂ ಕ್ವಾರಂಟೈನ್ ಆದವರು ಎಲ್ಲಿದ್ದಾರೆ? ಹೇಗಿದ್ದಾರೆ? ಎನ್ನುವ ಭಾವಚಿತ್ರ ಸಮೇತ ಲೈವ್ ಅಪ್ಡೇಟ್ ಕೊಡುವ ಮಾಹಿತಿ ಮೊದಲ ಬಾರಿಗೆ ಕಾರ್ಯರೂಪಕ್ಕೆ ಬರಲಿದೆ. ವಾರ್ ರೂಮ್‍ನಲ್ಲಿಯೇ ಕೂತು ಗೃಹಬಂಧನದಲ್ಲಿದ್ದವರ ಮೇಲೆ ಹದ್ದಿನಗಣ್ಣು ಇಡಲಾಗುತ್ತದೆ.

    ಕೊರೊನಾ ಸೋಂಕಿತರ ಜೊತೆ ಸಂಪರ್ಕ ಹೊಂದಿರುವವರ ಕೈಗೆ ಸ್ಟಾಂಪ್ ಹಾಕಿದ್ದರೂ ಸಾರ್ವಜನಿಕ ಸ್ಥಳದಲ್ಲಿ ಓಡಾಟ ಮಾಡಿ ಆತಂಕ ಸೃಷ್ಟಿಸುತ್ತಿದ್ದಾರೆ. ಹೀಗಾಗಿ ಅವರ ಮಾಹಿತಿಗೆ ಜಿಪಿಎಸ್ ಆಧಾರಿತ ಆ್ಯಪ್ ಬಳಕೆಗೆ ದಕ್ಷಿಣ ಕನ್ನಡದ ಬೆಳ್ತಂಗಡಿ ಸಜ್ಜಾಗಿದೆ.

    ಹೋಂ ಕ್ವಾರಂಟೈನ್ ಸ್ಟಾಂಪ್ ಹಾಕಿಸಿಕೊಂಡವರನ್ನು ಮನೆಯಲ್ಲೇ ಇರಿಸಿ ನಿಗಾ ವಹಿಸಲು ಕುಟುಂಬ, ಪೊಲೀಸರು, ಆಶಾ ಕಾರ್ಯಕರ್ತರು, ವೈದ್ಯರು ಹರಸಾಹಸ ಪಡುತ್ತಿದ್ದಾರೆ. ಈ ಹಿನ್ನೆಲೆ ಐಸರ್ಚ್ ಎಂಬ ಸಂಸ್ಥೆಯ ನೆರವಿನಿಂದ ಹೊಸ ಆ್ಯಪ್ ಬಿಡುಗಡೆ ಮಾಡಲಾಗಿದೆ. COVID19 BLT DATABASE ಅನ್ನುವ ಈ ಆಪ್ ಬೆಳ್ತಂಗಡಿ ತಾಲೂಕು ಆಡಳಿತ, ತಹಶೀಲ್ದಾರರು, ಪೊಲೀಸ್ ಇಲಾಖೆ, ಆರೋಗ್ಯ, ಕಂದಾಯ, ನಾಗರೀಕ ಸರಬರಾಜು ಇಲಾಖೆ, ಶ್ರಮಿಕ ಬೆಳ್ತಂಗಡಿ ಶಾಸಕರ ಕಚೇರಿ ಹಾಗೂ ಐಸರ್ಚ್ ಸಹಯೋಗದಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಜಿಪಿಎಸ್ ಆಧಾರಿತ ಆಪ್ ಬಳಸಿ ಸೋಂಕಿತರ ಮೇಲೆ ನಿಗಾ ಇಡುವ ಕಾರ್ಯಕ್ಕೆ ಮುಂದಾಗಿದೆ.

    ಈ ಪ್ರಯತ್ನ ದೇಶದಲ್ಲೇ ಮೊದಲನೆಯಾದಾಗಿದೆ. ಈಗಾಗಲೇ ಇದರ ಪೂರ್ವ ಸಿದ್ಧತೆ ಮುಗಿದಿದ್ದು, ಇಲಾಖೆಗಳ ಉಪಯೋಗಕ್ಕೆ ನೀಡಲಾಗುತ್ತದೆ. ತಾಲೂಕಿನ ತಣ್ಣೀರುಪಂಥ ಗ್ರಾಮದಲ್ಲಿ ಒಂದು ಕೋವಿಡ್-19 ಪ್ರಕರಣ ಬೆಳಕಿಗೆ ಬಂದ ಬಳಿಕ ಈ ತಂತ್ರಜ್ಞಾನ ಬಳಸಲು ಯೋಜನೆ ಮಾಡಲಾಯಿತು. ಹೋಮ್ ಕ್ವಾರಂಟೈನ್ ಆಗಿರುವವರ ಮೇಲೆ ಅಧಿಕಾರಿಗಳಿಗೆ ನಿಗಾ ಇರಿಸಲು ಈ ವ್ಯವಸ್ಥೆ ನೆರವಾಗಲಿದೆ.

    ಜಿಪಿಎಸ್ ಆಧಾರಿತ ಆಪ್ ಮೂಲಕ ವಾರ್ ರೂಮ್‍ನಲ್ಲಿ ಕೂತು ಹೋಮ್ ಕ್ವಾರಂಟೈನ್ ಆಗಿರುವವರು ಎಲ್ಲಿದ್ದಾರೆ? ಹೇಗಿದ್ದಾರೆ? ಅವರ ಭಾವಚಿತ್ರ ಸಹಿತ ಮಾಹಿತಿಯನ್ನು ಇದರಿಂದ ಪಡೆಯಬಹುದಾಗಿದೆ. ಈ ಆ್ಯಪ್ ಕೋವಿಡ್-19 ಶಂಕಿತರನ್ನು ಟ್ರಾಕ್ ಮಾಡುವ ಮುಖಾಂತರ ಸೋಂಕು ಇತರರಿಗೆ ಹರಡುವುದನ್ನು ತಡೆಗಟ್ಟಲು ಸಹಕರಿಸಲಿದೆ.

  • ತಾಲೂಕುಗಳಲ್ಲಿನ ಖಾಸಗಿ ಕ್ಲಿನಿಕ್‍ಗಳನ್ನು ತೆರೆದು ಚಿಕಿತ್ಸೆ ನೀಡಲು ಬೀದರ್ ಡಿಸಿ ಸೂಚನೆ

    ತಾಲೂಕುಗಳಲ್ಲಿನ ಖಾಸಗಿ ಕ್ಲಿನಿಕ್‍ಗಳನ್ನು ತೆರೆದು ಚಿಕಿತ್ಸೆ ನೀಡಲು ಬೀದರ್ ಡಿಸಿ ಸೂಚನೆ

    ಬೀದರ್: ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿರುವ ಖಾಸಗಿ ಕ್ಲಿನಿಕಗಳು ಮುಚ್ಚಿರುವುದಾಗಿ ತಿಳಿದು ಬಂದಿದ್ದು, ಕೂಡಲೇ ಎಲ್ಲಾ ಖಾಸಗಿ ಕ್ಲಿನಿಕ್‍ಗಳು ತೆರೆದು ಸಾಮಾನ್ಯ ಲಕ್ಷಣ ಕಂಡು ಬರುವ ರೋಗಿಗಳಿಗೆ ಚಿಕಿತ್ಸೆ ಒದಗಿಸುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಹೆಚ್.ಆರ್ ಮಹಾದೇವ್ ಅವರು ಡಿಎಚ್‍ಓ ಅವರಿಗೆ ಸೂಚಿಸಿದ್ದಾರೆ.

    ಇಂದು ಜಿಲ್ಲಾಧಿಕಾರಿ ಕಚೇರಿಯ ವಿಡಿಯೋ ಸಂವಾದ ಸಭಾಂಗಣದಲ್ಲಿ ತಾಲೂಕಿನ ತಹಶೀಲ್ದಾರ್ ಗಳು ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಡಿಸಿ ವಿಡಿಯೋ ಸಂವಾದ ನಡೆಸಿದರು. ಕೊರೊನಾ ವೈರಾಣು ತೀವ್ರ ಹರಡುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮ ವಹಿಸುವ ನಿಟ್ಟಿನಲ್ಲಿ ಜನತೆಗೆ ಈಗ ಸಕಾಲಕ್ಕೆ ಚಿಕಿತ್ಸೆ ಕೊಡಬೇಕಿದೆ. ಹೀಗಿದ್ದರೂ ಖಾಸಗಿ ಕ್ಲಿನಿಕ್‍ಗಳು ಮುಚ್ಚಿದಲ್ಲಿ ಅಂತಹ ಕ್ಲಿನಿಕ್‍ಗಳ ಪರವಾನಿಗೆಯನ್ನು ರದ್ದುಪಡಿಸುವಂತೆ ಜಿಲ್ಲಾಧಿಕಾರಿಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

    ವಿದೇಶ, ಹೊರ ರಾಜ್ಯಗಳಿಂದ ಬಂದು ಹೋಮ್ ಕ್ವಾರಂಟೈನ್ ನಲ್ಲಿ ಇರುವ ಜನರ ಬಗ್ಗೆ ಸರಿಯಾದ ರೀತಿಯಲ್ಲಿ ಗಮನ ಕೊಡಬೇಕು ಎಂದು ಎಲ್ಲಾ ತಾಲೂಕು ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಸಾಮಾನ್ಯ ರೋಗಿಗಳು ಬಂದರೂ ಕೂಡ ಅಂತರ ಕಾಯ್ದುಕೊಂಡು ಅವರಿಗೆ ತಪಾಸಣೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಎಲ್ಲಾ ವೈದ್ಯಾಧಿಕಾರಿಗಳಿಗೆ ಸಲಹೆ ನೀಡಿದರು.

    ಈ ವೇಳೆ ಸಿಇಓ ಗ್ಯಾನೇಂದ್ರಕುಮಾರ್ ಗಂಗವಾರ, ಬೀದರ ಸಹಾಯಕ ಆಯುಕ್ತರಾದ ಅಕ್ಷಯ್ ಶ್ರೀಧರ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿ.ಜಿ ರೆಡ್ಡಿ, ಬ್ರಿಮ್ಸ್ ನಿರ್ದೇಶಕರಾದ ಡಾ. ಶಿವಕುಮಾರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಶರಣಬಸಪ್ಪ ಕೋಟಪ್ಪಗೋಳ, ನಗರಸಭೆ ಪೌರಾಯುಕ್ತರಾದ ಬಸಪ್ಪ, ಜಿಲ್ಲಾ ವೈದ್ಯಾಧಿಕಾರಿಗಳಾದ ಡಾ. ರತಿಕಾಂತ ಸ್ವಾಮಿ, ಇಂದುಮತಿ ಪಾಟೀಲ್, ಜಿಲ್ಲಾ ಕಣ್ಗಾವಲು ಘಟಕದ ಕಾರ್ಯಕ್ರಮ ಅಧಿಕಾರಿ ಡಾ. ಕೃಷ್ಣಾರೆಡ್ಡಿ ಹಾಗೂ ಇತರರು ಉಪಸ್ಥಿತರಿದ್ದರು.

  • ಕೊರೊನಾವೈರಸ್: ಮಧುಮೇಹಿಗಳು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು

    ಕೊರೊನಾವೈರಸ್: ಮಧುಮೇಹಿಗಳು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು

    ವಿಶ್ವವ್ಯಾಪಿ ಹರಡುತ್ತಿರುವ ಕೊರೊನಾವೈರಸ್ ಸೋಂಕನ್ನು ತಡೆಗಟ್ಟಲು ಜನರು ತುಂಬಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ. ಭಾರತವನ್ನು ಕೂಡ ಕಾಡುತ್ತಿರುವ ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟಲು ದೇಶಾದ್ಯಂತ ಲಾಕ್‍ಡೌನ್ ಮಾಡಲಾಗಿದೆ. ಕೊರೊನಾವೈರಸ್ ಮಧುಮೇಹಿಗಳಿಗೆ ಸೋಂಕಿದರೆ ಗುಣವಾಗಲು ಕಷ್ಟವಾಗಿರುವ ಕಾರಣಕ್ಕೆ ಮಧುಮೇಹ ಇದ್ದವರು ಹೆಚ್ಚು ಜಾಗೃತರಾಗಿರಬೇಕು.

    ಮಧುಮೇಹಿಗಳ ದೇಹದಲ್ಲಿ ಗ್ಲೈಸೆಮಿಕ್ ನಿಯಂತ್ರಣ ಸಾಮರ್ಥ್ಯ ಕಡಿಮೆ ಇರುತ್ತದೆ. ಹೀಗಾಗಿ ಮಧುಮೇಹಿಗಳಿಗೆ ಕೊರೊನಾ ಸೋಂಕು ತಗುಲುವ ಸಾಮರ್ಥ್ಯ ಹೆಚ್ಚು ಎಂದು ಸಿಡಿಸಿ (Centers for Disease Control and Prevention) ಮಾಹಿತಿ ನೀಡಿದೆ. ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರಿಗೆ ಸೋಂಕು ತಗುಲಿದರೆ ಅವರ ಪರಿಸ್ಥಿತಿ ಜಿಂತಾಜನಕವಾಗುತ್ತದೆ. ಹೀಗಾಗಿ ಮಧುಮೇಹಿಗಳು ಕೆಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು.

    ಅಮೆರಿಕದ ಡಯಾಬಿಟಿಕ್ ಅಸೋಸಿಯೇಷನ್ ಕೊರೊನಾ ವೈರಸ್ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಿದೆ. ಈ ವರದಿಯನ್ನು ನೋಡಿದಾಗ ವಯಸ್ಸಾದವರಿಗೆ, ಮಧುಮೇಹಿಗಳಿಗೆ, ಹೃದಯ ಹಾಗೂ ಇತರ ಶ್ವಾಸಕೋಶ ಸಮಸ್ಯೆ ಇರುವ ಮಂದಿಗೆ ಕೊರೊನಾವೈರಸ್ ಸೋಂಕಿನ ಅಪಾಯ ಹೆಚ್ಚು ಎಂಬುದು ತಿಳಿದುಬಂದಿದೆ. ಒಂದು ವೇಲೆ ಈ ಆರೋಗ್ಯ ಸಮಸ್ಯೆಗಳು ಇದ್ದವರಿಗೆ ಸೋಂಕು ತಟ್ಟಿದರೆ ಚೇತರಿಸಿಕೊಳ್ಳೋದು ಕಷ್ಟವಾಗುತ್ತದೆ ಎಂದು ತಿಳಿಸಿದೆ

    ಮಧುಮೇಹ ಕಾಯಿಲೆ ಬಂದರೆ ಅದನ್ನು ನಿಯಂತ್ರಿಸಬಹುದೇ ಹೊರತಾಗಿ ಅದರಿಂದ ಸಂಪೂರ್ಣ ಗುಣಮುಖರಾಗಲು ಸಾಧ್ಯವಿಲ್ಲ. ಹೀಗಾಗಿ ಸದ್ಯ ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೊನಾವೈರಸ್ ದೇಹ ಹೊಕ್ಕದಂತೆ ಮಧುಮೇಹಿಗಳು ಎಚ್ಚರವಹಿಸಬೇಕು.

    ಅನುಸರಿಸಬೇಕಾದ ಕ್ರಮಗಳೇನು?

    1. ಮೊದಲು ಮಧುಮೇಹಿಗಳೂ ತೆಗೆದುಕೊಳ್ಳುತ್ತಿರುವ ಔಷಧಿಯ ಬಗ್ಗೆ ನಿಗವಹಿಸಬೇಕು. ಅವುಗಳ ಹೆಸರು ಹಾಗೂ ಡೋಸೇಜ್ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡಿರಬೇಕು.

    2. ಒಂದು ತಿಂಗಳಿಗೆ ಬೇಕಾಗುವಷ್ಟು ಔಷಧಿಯನ್ನು ಮಧುಮೇಹಿಗಳು ತಂದು ಇಟ್ಟುಕೊಳ್ಳುವುದು ಒಳ್ಳೆಯದು, ಯಾಕೆಂದರೆ ಪದೇ ಪದೇ ಔಷಧಿಗಾಗಿ ಆಸ್ಪತ್ರೆ ಅಥವಾ ಮೆಡಿಕಲ್ ಶಾಪ್‍ಗೆ ಹೋಗೋದು ತಪ್ಪುತ್ತದೆ.

    3. ನಿಮ್ಮಗೆ ತಪಾಸಣೆ ನಡೆಸುವ ವೈದ್ಯರ ನಂಬರ್ ಇಟ್ಟುಕೊಂದು ಅಗ್ಯತ ಬಿದ್ದಾಗ, ಆರೋಗ್ಯದಲ್ಲಿ ಏರುಪೇರಾದಾಗ ಮಾತ್ರ ಕರೆ ಸಲಹೆ ಪಡೆಯಿರಿ.

    4. ಹ್ಯಾಂಡ್ ವಾಶ್, ಸೋಪ್ ಅಥವಾ ಸ್ಯಾನಿಟೈಸರ್‍ನಿಂದ ಆಗಾಗ ಕೈಗಳನ್ನು ತೊಳೆದುಕೊಳ್ಳೋದು ಒಳ್ಳೆಯದು. ದೇಹದಲ್ಲಿ ಸಕ್ಕರೆಯಂಶ ಕಡಿಮೆ ಆಗದಂತೆ ನೋಡಿಕೊಳ್ಳುವುದು ಅಗತ್ಯವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಗ್ಲೂಕೋಸ್ ಟ್ಯಾಬ್ಲೆಟ್ ಇಟ್ಟುಕೊಳ್ಳುವುದು ಒಳ್ಳೆಯದು.

    5. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಬಗ್ಗೆ ಗಮನ ಹರಿಸಿ. ದೇಹಕ್ಕೆ ಪೌಷ್ಟಿಕಾಂಶ ಸಿಗುವ ಆಹಾರ ಪಾನೀಯಗಳನ್ನು ಸೇವಿಸಿ, ಚೆನ್ನಾಗಿ ನಿದ್ರೆ ಮಾಡಿ, ವ್ಯಾಯಾಮ ಮಾಡಿ, ಸರಿಯಾದ ಸಮಯಕ್ಕೆ ಆಹಾರ ಸೇವಿಸಿ ಔಷಧಿಗಳನ್ನು ತೆಗೆದುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಿ.

    ಸೋಂಕು ತಗುಲುವುದನ್ನು ತಡೆಗಟ್ಟಲು ಏನು ಮಾಡಬೇಕು?

    1. ನಿಮ್ಮ ಕೈಗಳನ್ನು ಸೋಪ್, ಹ್ಯಾಂಡ್ ವಾಶ್ ಬಳಸಿ ಆಗಾಗ ತೊಳೆದುಕೊಳ್ಳಿ. ಅಥವಾ ಆಗಾಗ ಸ್ಯಾನಿಟೈಸರ್ ಬಳಸುತ್ತಿರಿ.

    2. ಒಂದು ವೇಳೆ ನಿಮ್ಮ ಕೈಗಳಿಗೆ ವೈರಸ್ ತಗುಲಿದ್ದರೆ ಅದು ನಿಮ್ಮ ದೇಹವನ್ನು ಸೇರುವ ಸಾಧ್ಯತೆ ಇರುತ್ತದೆ. ಹೀಗಾಗಿ ಕಣ್ಣು, ಮೂಗು, ಬಾಯಿಯನ್ನು ಆಗಾಗ ಮುಟ್ಟದಿರಿ. ನೀವು ಮುಟ್ಟುವ ವಸ್ತುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ.

    3. ಗುಂಪು ಗುಂಪಾಗಿ ಓಡಾಡಬೇಡಿ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ. ಯಾರಾದರೂ ಕೆಮ್ಮುತ್ತಿದ್ದರೆ, ಜ್ವರ ಇದ್ದರೆ ಅವರಿಂದ ದೂರವಿರಿ.

    4. ಒಂದು ವೇಲೆ ಜ್ವರ, ಕೆಮ್ಮು, ಉಸಿರಾಟದ ಸಮಸ್ಯೆ ಆದರೆ ತಕ್ಷಣ ವೈದ್ಯರ ಬಳಿ ಹೋಗಿ ತಪಾಸಣೆ ಮಾಡಿಸಿಕೊಳ್ಳಿ, ನಿರ್ಲಕ್ಷಿಸಿದರೆ ಅಪಾಯ ಆಗುವ ಸಾಧ್ಯತೆ ಹೆಚ್ಚಿರುತ್ತದೆ.

  • 1 ಕೋಟಿ ರೂ. ದೇಣಿಗೆ ನೀಡಿ ಕೊರೊನಾ ವಿರುದ್ಧದ ಹೋರಾಟಕ್ಕೆ ಗಂಭೀರ್ ಸಾಥ್

    1 ಕೋಟಿ ರೂ. ದೇಣಿಗೆ ನೀಡಿ ಕೊರೊನಾ ವಿರುದ್ಧದ ಹೋರಾಟಕ್ಕೆ ಗಂಭೀರ್ ಸಾಥ್

    – ಅಜಿಂಕ್ಯ ರಹಾನೆಯಿಂದ 10 ಲಕ್ಷ ರೂ. ದೇಣಿಗೆ

    ನವದೆಹಲಿ: ಹೆಮ್ಮಾರಿ ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಸಿನಿಮಾ ನಟ, ನಟಿಯರು, ಉದ್ಯಮಿಗಳು, ಕ್ರೀಡಾಪಟುಗಳು, ಕ್ರಿಕೆಟಿಗರು ಸಹಾಯ ನೀಡಲು ಒಬ್ಬೊಬ್ಬರೇ ಮುಂದೆ ಬರುತ್ತಿದ್ದಾರೆ. ಸಚಿನ್ ತೆಂಡೂಲ್ಕರ್, ಬಿಸಿಸಿಐ, ಸೌರವ್ ಗಂಗೂಲಿ, ಸುರೇಶ್ ರೈನಾ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ಸಂಸದ ಗೌತಮ್ ಗಂಭೀರ್  1 ಕೋಟಿ ರೂ. ನೀಡಿದ್ದಾರೆ.

    ಬಿಜೆಪಿ ಸಂಸದ ಗಂಭೀರ್ ಅವರು ಪ್ರಧಾನ ಮಂತ್ರಿ ವಿಪತ್ತು ಪರಿಹಾರ ನಿಧಿಗೆ 1 ಕೋಟಿ ರೂ. ಜಮಾ ಮಾಡಿದ್ದಾರೆ. ಅಷ್ಟೇ ಅಲ್ಲದೆ ಅವರು ತಮ್ಮ ಒಂದು ತಿಂಗಳ ವೇತನವನ್ನೂ ದಾನ ಮಾಡಿದ್ದಾರೆ. ಜೊತೆಗೆ ಗಂಭೀರ್ ಅವರು ನಡೆಸುತ್ತಿರುವ ಎನ್‍ಜಿಒ ಬಡವರಿಗೆ ಉಚಿತವಾಗಿ ಆಹಾರವನ್ನು ನೀಡುತ್ತಿದೆ.

    ಕ್ರೀಡಾ ಸಚಿವ ರಿಜಿಜು ಅವರು ಟ್ವೀಟ್ ಮಾಡಿ, ನಾನು ಪ್ರಧಾನ ಮಂತ್ರಿ ವಿಪತ್ತು ಪರಿಹಾರ ನಿಧಿಗೆ ಸಂಸತ್ತಿನ ಸದಸ್ಯರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಯ ನಿಧಿ (ಎಂಪಿಎಲ್‍ಡಿಎಸ್)ನಿಂದ ಒಂದು ಕೋಟಿ ರೂ. ಜಮಾ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಜೊತೆಗೆ ತಮ್ಮ ಒಂದು ತಿಂಗಳ ವೇತನವನ್ನೂ ದಾನ ಮಾಡಿದ್ದಾರೆ. ಇತ್ತ ಟೀಂ ಇಂಡಿಯಾ ಕ್ರಿಕೆಟರ್ ಅಜಿಂಕ್ಯ ರಹಾನೆ 10 ಲಕ್ಷ ರೂ. ದೇಣಿಗೆ ಕೊಟ್ಟಿದ್ದಾರೆ.

    ಕೊರೊನಾ ವೈರಸ್ ವಿಶ್ವಾದ್ಯಂತ 195 ದೇಶಗಳಿಗೆ ಹರಡಿದ್ದು, ತಮ್ಮ ದೇಶವನ್ನು ರಕ್ಷಿಸಲು ಅಲ್ಲಿಯ ಆಟಗಾರರು, ಸೆಲೆಬ್ರಿಟಿಗಳು, ಉದ್ಯಮಿಗಳು ಸರ್ಕಾರಕ್ಕೆ ನೆರವು ನೀಡುತ್ತಿದ್ದಾರೆ. ಫುಟ್ಬಾಲ್ ಆಗದಂತಕಥೆ ಕ್ರಿಸ್ಟಿಯಾನೊ ರೊನಾಲ್ಡೊ, ತರಬೇತುದಾರ ಮೌರಿಜಿಯೊ ಸಾರಿ. ಇಟಲಿಯನ್ ಫುಟ್ಬಾಲ್ ಕ್ಲಬ್ ಯುವೆಂಟಸ್ ಪರ ಆಡಿರುವ ಇತರ ಆಟಗಾರರು 100 ಮಿಲಿಯನ್ ಯುರೋಗಳನ್ನು (ಸುಮಾರು 753 ಕೋಟಿ ರೂ.) ದೇಣಿಗೆ ನೀಡಿದ್ದಾರೆ.

    ರೊನಾಲ್ಡೊ ಅವರು ಮೂರು ತಿಂಗಳ ಸಂಬಳ 10 ಮಿಲಿಯನ್ ಯುರೋಗಳಷ್ಟು (ಸುಮಾರು 84 ಕೋಟಿ ರೂ.)ವನ್ನು ದೇಣಿಗೆ ನೀಡಿದ್ದಾರೆ. ಇತ್ತೀಚೆಗೆ ಡೇನಿಯಲ್ ರುಗಾನಿ, ಬ್ಲೇಸ್ ಮಾಟುಡಿ ಮತ್ತು ಪಾವೊಲೊ ದಿಬಾಲಾ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಈ ಪೈಕಿ ದಿಬಾಲಾ ಚೇತರಿಸಿಕೊಂಡಿದ್ದು, ಉಳಿದ ಇಬ್ಬರು ಆಟಗಾರರು ಹೋಮ್ ಕ್ವಾರೆಂಟೈನ್‍ನಲ್ಲಿ ಇದ್ದಾರೆ. ಇಟಲಿಯಲ್ಲಿ ಈವರೆಗೂ 10 ಸಾವಿರಕ್ಕೂ ಅಧಿಕ ಜನರು ಸೋಂಕಿತರು ಮೃತಪಟ್ಟಿದ್ದಾರೆ.

    ಕೊರೊನಾ ವೈರಸ್‍ಗೆ ವಿಶ್ವಾದ್ಯಂತ ಭಾನುವಾರ ಮಧ್ಯಾಹ್ನದ ವೇಳೆಗೆ 30,943 ಜನರು ಮೃತಪಟ್ಟಿದ್ದಾರೆ. ಜತ್ತಿನಾದ್ಯಂತ 666,013 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 497,002 ಜನರು ಚಿಕಿತ್ಸೆ ಪಡೆಯುತ್ತಿದ್ದು, 1,38,068 ಮಂದಿ ಗುಣಮುಖರಾಗಿದ್ದಾರೆ.

  • ಆಹಾರ ಸಿಗದೆ ಕಂಗೆಟ್ಟು ಆತ್ಮಹತ್ಯೆ ಬೆದರಿಕೆ- ಮಹಿಳೆ ಮನೆಗೆ ದೌಡಾಯಿಸಿದ ಪೊಲೀಸರು

    ಆಹಾರ ಸಿಗದೆ ಕಂಗೆಟ್ಟು ಆತ್ಮಹತ್ಯೆ ಬೆದರಿಕೆ- ಮಹಿಳೆ ಮನೆಗೆ ದೌಡಾಯಿಸಿದ ಪೊಲೀಸರು

    ಚಂಡೀಗಢ: ಆಹಾರ ಸಿಗದೆ ಕಂಗೆಟ್ಟು ಮಹಿಳೆಯೊಬ್ಬರು ಪತಿ ಹಾಗೂ ಮಗುವಿನೊಂದಿಗೆ ಆತ್ಮಹತ್ಯೆ ಬೆದರಿಕೆ ಹಾಕಿದ್ದರಿಂದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಆಹಾರ ನೀಡಿದ ಪ್ರಸಂಗ ಚಂಡೀಗಢದಲ್ಲಿ ನಡೆಸಿದೆ.

    ಕೊರೊನಾ ವೈರಸ್‍ನಿಂದಾಗಿ ದೇಶಾದ್ಯಂತ ಮಾರ್ಚ್ 14ರವರೆಗೆ ಲಾಕ್‍ಡೌನ್ ಘೋಷಿಸಲಾಗಿದೆ. ಇದರಿಂದಾಗಿ ದಿನಗೂಲಿ ಕಾರ್ಮಿಕ ಪರಿಸ್ಥಿರಿ ಚಿಂತಾಜನಕವಾಗಿದೆ. ಕೆಲಸವಿಲ್ಲದೆ ಕಂಗೆಟ್ಟು ಹೋಗಿದ್ದಾರೆ.

    ಚಂಡೀಗಢದ ನಿವಾಸಿ ದಿನಗೂಲಿ ಕಾರ್ಮಿಕ ಮಹಿಳೆಯೊಬ್ಬರು ಆಹಾರ ಮತ್ತು ಔಷಧಿ ಖರೀದಿಸಲು ಯಾವುದೇ ಮಾರ್ಗವಿಲ್ಲದೆ ಶನಿವಾರ ಕಂಗೆಟ್ಟಿದ್ದರು. ಇದರಿಂದಾಗಿ ಪೊಲೀಸರಿಗೆ ಫೋನ್ ಮಾಡಿ, ನಮಗೆ ತಿನ್ನಲು ಆಹಾರವಿಲ್ಲ. ಅನಾರೋಗ್ಯದಿಂದ ಬಳಲುತ್ತಿರುವ ಮಗುವಿಗೆ ಔಷಧಿ ಖರೀದಿಸಲು ಸಾಧ್ಯವಾಗುತ್ತಿಲ್ಲ. ನೀವು ಸಹಾಯಕ್ಕೆ ಬರದಿದ್ದರೇ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಕಣ್ಣೀರಿಟ್ಟಿದ್ದರು.

    ಮಹಿಳೆ ಕರೆಯ ಬಳಿಕ ಚಂಡೀಗಢದ ಡೆಪ್ಯೂಟಿ ಪೊಲೀಸ್ ವರಿಷ್ಠಾಧಿಕಾರಿ ದಿಲ್ಶರ್ ಸಿಂಗ್, ಮಹಿಳೆ ವಾಸವಿರುವ ಪ್ರದೇಶದ ವ್ಯಾಪ್ತಿಯ ಪೊಲೀಸ್ ಠಾಣೆ ಅಧಿಕಾರಿಯೊಂದಿಗೆ ಮಾತನಾಡಿದ್ದರು. ಜೊತೆಗೆ ಮಹಿಳೆಯ ನಿವಾಸಕ್ಕೆ ಧಾವಿಸಿ ಅವರಿಗೆ ಆಹಾರ ಮತ್ತು ಸ್ವಲ್ಪ ಹಣವನ್ನು ನೀಡಿದ್ದಾರೆ ಎಂದು ವರದಿಯಾಗಿದೆ.

  • ‘ಬೆಂಬಲಿಗರ ಗುಂಪು ಕಟ್ಟಿಕೊಂಡು ನಗರ ಸುತ್ತಾಟ’- ರೇಣುಕಾಚಾರ್ಯಗೆ ಡಿಸಿ ಕ್ಲಾಸ್

    ‘ಬೆಂಬಲಿಗರ ಗುಂಪು ಕಟ್ಟಿಕೊಂಡು ನಗರ ಸುತ್ತಾಟ’- ರೇಣುಕಾಚಾರ್ಯಗೆ ಡಿಸಿ ಕ್ಲಾಸ್

    ದಾವಣಗೆರೆ: ಬೆಂಬಲಿಗರ ಗುಂಪು ಕಟ್ಟಿಕೊಂಡು ನಗರ ಸುತ್ತಾಟ ನಡೆಸಿದ್ದ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಮನೆ ಬಿಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಆದರೆ ಕೊರೊನಾ ಜಾಗೃತಿ ಅಂತ ಹೇಳಿ ಎಂ.ಪಿ.ರೇಣುಕಾಚಾರ್ಯ ಅವರ ನೇತೃತ್ವದಲ್ಲಿ ಅನೇಕ ಬಿಜೆಪಿ ಮುಖಂಡರು, ಕಾರ್ಯಕರ್ತರು ದಾವಣಗೆರೆ ನಗರ ಸುತ್ತುತ್ತಿದ್ದಾರೆ.

    ನಗರದ ದುರ್ಗಾಂಬಿಕಾ ದೇವಸ್ಥಾನ ಪ್ರದೇಶದಲ್ಲಿ ನಡೆದ ಜಾಗೃತಿ ಜಾಥಾದಲ್ಲಿ ರೇಣುಕಾಚಾರ್ಯ ಅವರಿಗೆ ಮೇಯರ್ ಬಿ.ಜೆ.ಅಜಯಕುಮಾರ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಉಮಾ ರಮೇಶ್ ಸಾಥ್ ಸೇರಿದಂತೆ ಅನೇಕ ಕಾರ್ಯಕರ್ತರು, ಬೆಂಬಲಿಗರು ಸಾಥ್ ನೀಡಿದರು. ಹತ್ತಾರು ಜನ ಬೀದಿಯಲ್ಲಿ ಸುತ್ತಿದ್ದರೂ ಜಿಲ್ಲಾಡಳಿ ಮೌನಕ್ಕೆ ಶರಣಾಗಿತ್ತು. ಈ ವೇಳೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ರೇಣುಕಾಚಾರ್ಯ ಅವರನ್ನ ತರಾಟೆಗೆ ತೆಗೆದುಕೊಂಡರು. ಹೀಗೆ ಗುಂಪು ಕಟ್ಟಿಕೊಂಡು ಜಾಗೃತಿ ಮೂಡಿದುವುದು ಸರಿಯಲ್ಲ. ಇದರಿಂದ ಮತ್ತಷ್ಟು ತೊಂದರೆಯಾಗುತ್ತದೆ. ಇದು ಪ್ರಚಾರದ ಸಮಯವಲ್ಲ ಎಂದು ಅಸಮಾಧಾನ ಹೊರ ಹಾಕಿದರು.

    ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಶಾಸಕ ರೇಣುಕಾಚಾರ್ಯ, ಜನರರಲ್ಲಿ ಜಾಗೃತಿ ಮೂಡಿಸಲು ನಾಲ್ಕು ಜನರೊಂದಿಗೆ ಹೋಗಿದ್ದೆ. ಜಿಲ್ಲಾಧಿಕಾರಿಗಿಂತ ನಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಇಂತಹ ಸಂದರ್ಭದಲ್ಲಿ ನಾನೇನು ಪ್ರಚಾರ ಮಾಡುತ್ತಿಲ್ಲ ಎಂದು ಹೇಳಿದರು.

  • ಕೊರೊನಾಗೆ ರಾಜ ಮನೆತನದಲ್ಲಿ ಮೊದಲ ಸಾವು – ಸ್ಪೇನ್ ರಾಣಿ ಬಲಿ

    ಕೊರೊನಾಗೆ ರಾಜ ಮನೆತನದಲ್ಲಿ ಮೊದಲ ಸಾವು – ಸ್ಪೇನ್ ರಾಣಿ ಬಲಿ

    ಸ್ಪೇನ್: ಇಡೀ ವಿಶ್ವವೇ ಕೊರೊನಾ ವೈರಸ್‍ಗೆ ಬೆಚ್ಚಿಬಿದ್ದಿದೆ. ವಿಶ್ವಾದ್ಯಂತ 30ಕ್ಕೂ ಹೆಚ್ಚು ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇಂದು ಕೊರೊನಾ ವೈರಸ್‍ಗೆ ರಾಜವಂಶಸ್ಥ ಮನೆತನದಲ್ಲಿ ಮೊದಲ ಸಾವಾಗಿದೆ.

    ಸ್ಪೇನ್‍ನ ರಾಣಿ ಮಾರಿಯಾ ಥೆರೇಸಾ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಮೃತಪಟ್ಟಿದ್ದಾರೆ ಎಂದು ಸಹೋದರ ಪ್ರಿನ್ಸ್ ಸಿಕ್‍ಸ್ಟೋ ಎನ್ರಿಕ್ ಡಿ ಬೊರ್ಬನ್ ತಿಳಿಸಿದ್ದಾರೆ.

    86 ವರ್ಷದ ರಾಣಿ ಮಾರಿಯಾ ಸ್ಪೇನ್ ರಾಜಮನೆತನದ ಹೌಸ್ ಆಫ್ ಬೌರ್ಬನ್-ಪಾರ್ಮಾದ ಸದಸ್ಯೆಯಾಗಿದ್ದರು. 1933ರಲ್ಲಿ ಪ್ಯಾರಿಸ್‍ನಲ್ಲಿ ಜನಿಸಿದ್ದ ಮಾರಿಯಾ ಥೆರೇಸಾ ಫ್ರಾನ್ಸ್ ನಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು. ಬಳಿಕ ಪ್ಯಾರಿಸ್‍ನ ಸೊರ್ಬೊನ್‍ನಲ್ಲಿ ಹಾಗೂ ಮ್ಯಾಡ್ರಿಡ್‍ನ ಕಾಂಪ್ಲುಟೆನ್ಸ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು.

    ವಿದೇಶಿ ಮಾಧ್ಯಮ ವರದಿಗಳ ಪ್ರಕಾರ, ರಾಣಿ ಮಾರಿಯಾ ಥೆರೇಸಾ ಅವರ ನೇರ ಅಭಿಪ್ರಾಯಗಳು ಮತ್ತು ಕಾರ್ಯಕರ್ತರ ಕೆಲಸದಿಂದಾಗಿ ಅವರನ್ನು ‘ಕೆಂಪು ರಾಜಕುಮಾರಿ’ (ರೆಡ್ ಪ್ರಿನ್ಸ್) ಎಂದು ಕರೆಯಲಾಗುತ್ತಿತ್ತು. ಕಳೆದ ಕೆಲವು ತಿಂಗಳುಗಳಿಂದ ರಾಣಿ ಮಾರಿಯಾ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

    https://www.facebook.com/sixtoenriquedeborbon/photos/a.264181261771/10158048240541772/?type=3&theater

    ಭಾನುವಾರ ಮಧ್ಯಾಹ್ನ 12:30 ಗಂಟೆ ಮಾಹಿತಿ ಪ್ರಕಾರ ಕೊರೊನಾ ವೈರಸ್‍ಗೆ ಸ್ಪೇನ್‍ನಲ್ಲಿ ಸಾವನ್ನಪ್ಪಿದವರ ಸಂಖ್ಯೆ 5,982ಕ್ಕೆ ಏರಿದೆ. ಇದು ಚೀನಾದನ್ನು ಮೀರಿಸಿದೆ. ಸ್ಪೇನ್‍ನಲ್ಲಿ 73,235 ಕೊರೊನಾ ಸೋಂಕಿತ ಪ್ರಕರಣಗಳಿದ್ದು, 54,968 ಜನರು ಚಿಕಿತ್ಸೆ ಪಡೆಯುತ್ತಿದ್ದು, 12,285 ಜನರು ಗುಣಮುಖರಾಗಿದ್ದಾರೆ. ಇದರಿಂದಾಗಿ ತುರ್ತು ಪರಿಸ್ಥಿತಿಯನ್ನು ಇನ್ನೂ ಎರಡು ವಾರಗಳವರೆಗೆ ವಿಸ್ತರಿಸಲು ಸ್ಪೇನ್ ಸಂಸತ್ತು ಒಪ್ಪಿಗೆ ನೀಡಿದೆ.

  • ಡೇಂಜರ್ ಜೋನ್‍ನಲ್ಲಿ ನಂಜನಗೂಡು – ಒಳ ಹೋಗುವಂತಿಲ್ಲ, ಹೊರ ಬರುವಂತಿಲ್ಲ

    ಡೇಂಜರ್ ಜೋನ್‍ನಲ್ಲಿ ನಂಜನಗೂಡು – ಒಳ ಹೋಗುವಂತಿಲ್ಲ, ಹೊರ ಬರುವಂತಿಲ್ಲ

    – ಸಾರಾ ಮಹೇಶ್ ಏಕಾಂಗಿ ಸಂಚಾರ

    ಮೈಸೂರು: ಕೊರೊನಾ ಸೋಂಕಿತರ ಸಂಖ್ಯೆ ಮೈಸೂರು ಜಿಲ್ಲೆಯಲ್ಲಿ 8ಕ್ಕೆ ಏರಿದೆ. ಕೊರೊನಾ 52ನೇ ಸೋಂಕಿತನಿಂದ ಇತರೆ 5 ಮಂದಿಗೆ ಸೊಂಕು ತಗುಲಿರುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ನಂಜನಗೂಡಿನ  ಸಂಪರ್ಕವನ್ನು ಕಡಿತ ಮಾಡಲಾಗಿದೆ.

    ಐದು ಮಂದಿಯು ನಂಜನಗೂಡು ಪಟ್ಟಣ, ಚಾಮುಂಡಿಪುರಂ, ರಾಮಸ್ವಾಮಿ ಲೇಔಟ್, ಗೋವಿಂದ ರಾಜ ಲೇಔಟ್ ಹಾಗೂ ಯರಗನಹಳ್ಳಿ ನಿವಾಸಿಗಳು. ಎಲ್ಲರು ನಂಜನಗೂಡು ಜ್ಯೂಬಿಲಿಯೇಟ್ ಫ್ಯಾಕ್ಟರಿ ನೌಕರರು. ಮೂರನೇ ಸೋಂಕಿತನಿಂದ ಈ ಐದು ಮಂದಿಗೆ ಸೋಂಕು ಬಂದಿದೆ. ಹೀಗಾಗಿ ಈಗ ನಂಜನಗೂಡು ಪಟ್ಟಣದ ಒಳಗೆ ಹೋಗುವುದಕ್ಕೆ ಮತ್ತು ಅಲ್ಲಿಂದ ಹೊರ ಬರುವವರ ಪ್ರವೇಶ ಕೂಡ ನಿಷೇಧಿಸಲಾಗಿದೆ.

    ನಂಜನಗೂಡಿನಲ್ಲಿ ರೆಡ್ ಅಲರ್ಟ್ ಘೋಷಣೆ ಹಿನ್ನೆಲೆಯಲ್ಲಿ ನಂಜನಗೂಡಿಗೆ ಯಾರು ಬರುವಂತಿಲ್ಲ, ಹೋಗುವಂತಿಲ್ಲ. ಆದರೂ ಜಿಲ್ಲಾಡಳಿತದ ಮಾತು ಮೀರಿ ಜನರು ಹೊರಗೆ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮದ ಯುವಕರೇ ಗ್ರಾಮಸ್ಥರಿಗೆ ಅರಿವು ಮೂಡಿಸಲು ಪಣ ತೊಟ್ಟಿದ್ದು, ಯುವಕರು ಗ್ರಾಮದ ನಿವಾಸಿಗಳಿಗೆ ಮಾಸ್ಕ್ ವಿತರಣೆ ಮಾಡಿದ್ದಾರೆ.

    ನಂಜನಗೂಡಿನ ಶ್ರೀರಾಂಪುರ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಮಾಸ್ಕ್ ವಿತರಿಸಿದ್ದಾರೆ. ಈಗಲಾದರೂ ಎಚ್ಚರಿಕೆಯಿಂದ ಇರಿ ಎಂದು ಮನವಿ ಮಾಡುತ್ತಿದ್ದು, ಮಾಸ್ಕ್ ಕೊಟ್ಟು, ಈಗಲೇ ಧರಿಸಿಯೇ ಮನೆಯಲ್ಲಿರಬೇಕೆಂದು ಸೂಚಿಸಿದರು.

    ಮೈಸೂರು ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 8ಕ್ಕೆ ಏರಿದರೂ ಜನಕ್ಕೆ ಬುದ್ಧಿ ಬಂದಂತೆ ಕಾಣುತ್ತಿಲ್ಲ. ಮೈಸೂರಿನ ಎಂಜಿ ರಸ್ತೆಯಲ್ಲಿನ ತರಕಾರಿ ಸಂತೆಯಲ್ಲಿ ಗಿಜಿಗಿಡುವಷ್ಟು ಜನ ಸೇರಿ ತರಕಾರಿ ಖರೀದಿ ಮಾಡುತ್ತಿದ್ದಾರೆ. ಜನರ ನಡುವೆ ಅಂತರ ಇಲ್ಲ. ಮಾಸ್ಕ್ ಕೂಡ ಹಾಕಿಕೊಂಡಿಲ್ಲ. ಅಲ್ಲಿಗೆ ಜನರಿಗೆ ಕೊರೊನಾ ಭಯವೂ ಇಲ್ಲದಂತಾಗಿದೆ.

    ಇನ್ನೂ ಮೈಸೂರಿನಲ್ಲಿ ಇಂದಿನಿಂದ ಮಾಂಸ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಗತ್ಯ ಸೇವೆಗಳ ಅಡಿಯಲ್ಲಿ ಮಾಂಸ ಮಾರಾಟಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಹಕ್ಕಿ ಜ್ವರದಿಂದ ಮಟನ್ ಮಾರಾಟ ನಿಲ್ಲಿಸಲಾಗಿತ್ತು. ಶಾಪ್ ಓಪನ್ ಆದ ಕೆಲವೇ ಗಂಟೆಗಳಲ್ಲಿ ಮಾಂಸ ಖಾಲಿಯಾಗಿದೆ. ಭಾನುವಾರವಾದ ಕಾರಣ ಜನ ಮುಗಿಬಿದ್ದು ಮಾಂಸ ಖರೀದಿ ಮಾಡಿದ್ದಾರೆ. ಕಳೆದ 1 ವಾರದಿಂದ ಮಾಂಸ ಖರೀದಿ ಮಾಡಿರಲಿಲ್ಲ. ಇಂದು ಓಪನ್ ಆಗುತ್ತಿದ್ದಂತೆ 8  ಗಂಟೆ ವೇಳೆಯಲ್ಲೇ ಮಟನ್ ಖಾಲಿಯಾಗಿದೆ.

    ಸಾರಾ ಮಹೇಶ್ ಏಕಾಂಗಿ ಸಂಚಾರ:
    ಮೈಸೂರು ಜಿಲ್ಲೆ ಕೆ.ಆರ್.ನಗರದಲ್ಲಿ ಶಾಸಕ ಸಾರಾ ಮಹೇಶ್ ಏಕಾಂಗಿ ಸಂಚಾರ ನಡೆಸಿದರು. ಕೆ.ಆರ್.ನಗರ ತಾಲೂಕಿನಲ್ಲಿ ಸ್ವತಃ ಶಾಸಕರು ಕಾರು ಚಲಾಯಿಸಿಕೊಂಡು ವೀಕ್ಷಣೆ ಮಾಡಿದರು. ಕೊರೊನಾ ಬಗ್ಗೆ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಪರಿಶೀಲಿಸಿದರು.

  • ಸಾಮಾಜಿಕ ದೂರ ಹೆಚ್ಚಿಸಿ, ಭಾವನಾತ್ಮಕ ದೂರ ಕಡಿಮೆ ಮಾಡ್ಬೇಡಿ: ಮೋದಿ ಮನವಿ

    ಸಾಮಾಜಿಕ ದೂರ ಹೆಚ್ಚಿಸಿ, ಭಾವನಾತ್ಮಕ ದೂರ ಕಡಿಮೆ ಮಾಡ್ಬೇಡಿ: ಮೋದಿ ಮನವಿ

    ನವದೆಹಲಿ: ಹೋಮ್ ಕ್ವಾರೆಂಟೈನ್‍ಗಳೊಂದಿಗೆ ಕೆಲವರು ಕೆಟ್ಟದಾಗಿ ವರ್ತಿಸುತ್ತಿದ್ದಾರೆಂದು ತಿಳಿದಾಗ ನನಗೆ ತುಂಬಾ ನೋವಾಯಿತು. ನಾವು ಸೂಕ್ಷ್ಮ ಮತ್ತು ತಿಳುವಳಿಕೆ ಹೊಂದಬೇಕಿದೆ. ಸಾಮಾಜಿಕ ದೂರವನ್ನು ಹೆಚ್ಚಿಸಿ. ಆದರೆ ಭಾವನಾತ್ಮಕ ದೂರವನ್ನು ಕಡಿಮೆ ಮಾಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿಕೊಂಡಿದ್ದಾರೆ.

    ಕೊರೊನಾ ವಿಚಾರದ ಬಗ್ಗೆ ಮನ್ ಕೀ ಬಾತ್‍ನಲ್ಲಿ ಮಾತನಾಡಿದ ಅವರು, ಕೊರೊನಾ ವೈರಸ್ ತಡೆಯಲು ಸಂಪರ್ಕತಡೆಯನ್ನು ಮಾಡಬೇಕಾಗಿದೆ. ಆದರೆ ಹೋಮ್ ಕ್ವಾರೆಂಟೈನ್‍ನಲ್ಲಿರುವವನ್ನು ಕೆಟ್ಟದಾಗಿ ಕಾಣಬೇಡಿ. ಅವರು ಅನಿವಾರ್ಯವಾಗಿ ಕೆಲವು ದಿನಗಳ ಕಾಲ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗುತ್ತದೆ. ಅವರೊಂದಿಗೆ ನಾವು ಭಾವನಾತ್ಮಕ ಸಂಬಂಧವನ್ನು ಕಾಪಾಡಿಕೊಳ್ಳಬೇಕು. ಇದು ಸಂಬಂಧಗಳನ್ನು ಪುನಶ್ಚೇತನಗೊಳಿಸುವ ಸಮಯವಾಗಿದೆ ಎಂದು ತಿಳಿಸಿದರು.

    ಮನೆಗಳಲ್ಲಿ ಉಳಿಯುವಂತೆ ನಿಮ್ಮಲ್ಲಿ ಮನವಿ ಮಾಡಿಕೊಂಡೆ. ಆದರೆ ನಿಮ್ಮ ಮನಸ್ಸನ್ನು ಅದನ್ನು ಕೇಳುತ್ತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ನಾವು ಲಾಕ್‍ಡೌನ್ ಎಂಬ ಲಕ್ಷ್ಮಣ ರೇಖೆಯನ್ನು ಪಾಲಿಸಲೇಬೇಕಿದೆ. ನಾನು ಫಿಟ್‍ನೆಸ್ ತರಬೇತುದಾರನಲ್ಲ. ಆದರೆ ಕೆಲವು ಯೋಗಗಳಿಂದ ಬಲಿಷ್ಠವಾಗಿದ್ದೇನೆ ಎಂದರು.

    ಸಹಾಯ ಮಾಡಿ:
    ದೇಶಾದ್ಯಂತ ಲಾಕ್‍ಡೌನ್‍ನಿಂದಾಗಿ ಬಡವನು ಹಸಿವಿನಿಂದ ಕಂಗೆಟ್ಟಿದ್ದಾರೆ ಅಥವಾ ಬಿಕ್ಕಟ್ಟಿಗೆ ಸಿಲುಕಿದ್ದಾರೆ. ದಯವಿಟ್ಟು ಅಂಥವರ ಸಹಾಯ ನಿಲ್ಲಿ. ಇಂದು ದೇಶವನ್ನು ಉಳಿಸಲು ನಾವು ಜಾತಿ, ಧರ್ಮ, ಮೇಲೂ, ಕೀಳು ಎಂಬ ಎಲ್ಲಾ ಗೋಡೆಗಳನ್ನು ಮುರಿಯಬೇಕಾಗಿದೆ. ನೀವು ಮನೆಯಲ್ಲಿಯೇ ಇರಿ, ಸುರಕ್ಷಿತವಾಗಿರಿ. ನಾವು ಈ ಯುದ್ಧವನ್ನು ಗೆಲ್ಲಬೇಕಿದೆ. ನಾನು ನಿಮಗೆ ಶುಭ ಹಾರೈಸುತ್ತೇನೆ ಎಂದು ತಿಳಿಸಿದರು.