ಹೈದರಾಬಾದ್: ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಸರ್ಕಾರ ಸೇರಿದಂತೆ ಪೊಲೀಸರು ಕೂಡ ವಿವಿಧ ರೀತಿಯಲ್ಲಿ ಕೊರೊನಾ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ ಆಂಧ್ರ ಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರು ಕುದುರೆಯನ್ನೇರಿ ವಿಭಿನ್ನ ರೀತಿಯಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಕರ್ನೂಲ್ ಜಿಲ್ಲೆಯ ಸಬ್ ಇನ್ಸ್‌ಪೆಕ್ಟರ್ ಮಾರುತಿ ಶಂಕರ್ ಕುದುರೆ ಸವಾರಿ ಮಾಡುತ್ತಾ ಕೊರೊನಾ ಬಗ್ಗೆ ವಿಭಿನ್ನವಾಗಿ ಜಾಗೃತಿ ಮೂಡಿಸಿದ್ದಾರೆ. ಕುದುರೆ ಏರಿ ಜಾಗೃತಿ ಮೂಡಿಸುವುದರಲ್ಲಿ ವಿಶೇಷತೆ ಏನು ಇರಲಿಲ್ಲ. ಆದರೆ ಕುದುರೆಯ ಮೇಲೆ ಬರೆದಿದ್ದ ಚಿತ್ರ ಎಲ್ಲರ ಗಮನ ಸೆಳೆದಿತ್ತು.
ಬಿಳಿ ಕುದುರೆಯ ಮೈ-ಮೇಲೆ ಕೆಂಪು ಬಣ್ಣದಿಂದ ವೈರಸ್ ಮಾದರಿಯ ಚಿತ್ರವನ್ನು ಬಿಡಿಸಲಾಗಿತ್ತು. ಈ ಕುದುರೆ ಏರಿದ ಇನ್ಸ್‌ಪೆಕ್ಟರ್ ಮಾರುತಿ ಶಂಕರ್ ಪ್ಯಾಪಿಲಿ ಪಟ್ಟಣಗಳಲ್ಲಿ ಸಂಚರಿಸುತ್ತಾ ಜಾಗೃತಿ ಮೂಡಿಸಿದ್ದಾರೆ.
ಕೊರೊನಾ ಹರಡದಂತೆ ನಾವೆಲ್ಲರೂ ಎಚ್ಚರಿಕೆ ವಹಿಸಬೇಕು. ಆಗಾಗ ಕೈ ತೊಳೆಯಿರಿ. ಲಾಕ್‍ಡೌನ್ ಸಂದರ್ಭದಲ್ಲಿ ಯಾರೂ ಕೂಡ ಮನೆಯಿಂದ ಹೊರಗೆ ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿಯ ನೂತನ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇತ್ತೀಚೆಗೆ ಚೆನ್ನೈನಲ್ಲಿ ಪೊಲೀಸ್ ಅಧಿಕಾರಿಯೊಬ್ಬ ಕೊರೊನಾ ಹೆಲ್ಮೆಟ್ ಧರಿಸಿಕೊಂಡು ರಸ್ತೆಯಲ್ಲಿ ಬರುವ ವಾಹನ ಸವಾರರಿಗೆ ಎಚ್ಚರಿಕೆ ನೀಡುತ್ತಿದ್ದರು. ಹೆಲ್ಮೆಟ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಆ ಹೆಲ್ಮೆಟ್ ಅನ್ನು ಕಲಾವಿದ ಗೌತಮ್ ಡಿಸೈನ್ ಮಾಡಿದ್ದರು.
Andhra Pradesh: Sub Inspector Maruti Sankar, Peapally Mandal, Kurnool district rides a horse painted with images of #COVID19 virus, to create awareness among the public about the pandemic pic.twitter.com/xIFsktWahG
ನವದೆಹಲಿ: ನ್ಯೂಜಿಲೆಂಡ್ ಕ್ರಿಕೆಟ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಬೆನ್ನಲ್ಲೇ ಟೀಂ ಇಂಡಿಯಾ ಯುವ ಆಟಗಾರ ಶ್ರೇಯಸ್ ಅಯ್ಯರ್ ಅವರು ತಮ್ಮ ಸಾಕು ನಾಯಿಗೆ ಕ್ಯಾಚ್ ಹಿಡಿಯುವುದನ್ನು ಕಲಿಸಿದ್ದಾರೆ.
ಕೊರೊನಾ ವೈರಸ್‍ನಿಂದಾಗಿ ದೇಶಾದ್ಯಂತ ಏಪ್ರಿಲ್ 14ರವರೆಗೆ ಲಾಕ್‍ಡೌನ್ ಘೋಷಿಸಲಾಗಿದೆ. ಹೀಗಾಗಿ ಕ್ರೀಡಾಪಟುಗಳು, ಕ್ರಿಕೆಟಿಗರು ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಅವರಲ್ಲಿ ಕೆಲವರು ತಮ್ಮ ಪ್ರೀತಿಪಾತ್ರರ ಜೊತೆ ಸಮಯ ಕಳೆಯುವುದರಲ್ಲಿ ನಿರತರಾಗಿದ್ದರೆ. ಇನ್ನು ಕೆಲವರು ತಮ್ಮ ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ವಿಡಿಯೋ, ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.
https://www.instagram.com/p/B-O4UB-nQ87/
ಕೇನ್ ವಿಲಿಯಮ್ಸನ್ ಅವರು ಇತ್ತೀಚೆಗೆ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ನಾಯಿ ಸ್ಯಾಂಡಿ ಜೊತೆ ಕ್ರಿಕೆಟ್ ಆಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ವಿಡಿಯೋದಲ್ಲಿ, ವಿಲಿಯಮ್ಸನ್ ಬಾಲ್ ಅನ್ನು ತಮ್ಮ ನಾಯಿ ಸ್ಯಾಂಡಿ ಕಡೆಗೆ ಹೊಡೆಯುತ್ತಾರೆ. ಆಗ ಸ್ಯಾಂಡಿ ಕ್ಯಾಚ್ ಹಿಡಿಯುತ್ತದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬೆನ್ನಲ್ಲೇ ಶ್ರೇಯಸ್ ಅಯ್ಯರ್ ಕೂಡ ತಮ್ಮ ನಾಯಿ ಬ್ರೆಟ್ಟಿಯೊಂದಿಗೆ ಕ್ರಿಕೆಟ್ ಆಡಿದ್ದಾರೆ. ಮೊದಲ ಪ್ರಯತ್ನದಲ್ಲಿ ಬ್ರೆಟ್ಟಿ ಕ್ಯಾಚ್ ಮಿಸ್ ಮಾಡಿ, ನಂತರ ಹಿಡಿಯುತ್ತದೆ. ಈ ವಿಡಿಯೋ ಅಯ್ಯರ್ ತಮ್ಮ ಟ್ವಿಟ್ಟರ್ ಹಾಗೂ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
‘ಕೇನ್ ವಿಲಿಯಮ್ಸನ್ ಅವರ ನಾಯಿ ಸ್ಯಾಂಡಿ ಬಾಲ್ ಹಿಡಿದಿದ್ದನ್ನು ನೋಡಿದ ನಂತರ ಬೆಟ್ಟಿ ಕೂಡ ಕ್ಯಾಚ್ ಹಿಡಿಯಲು ಬಯಸಿತ್ತು. ಸ್ವಲ್ಪ ಸಮಯ ತೆಗೆದುಕೊಂಡರೂ ಮೊದಲ ಕ್ಯಾಚ್ ಬಿಟ್ಟು, ಎರಡನೇ ಕ್ಯಾಚ್ ಅನ್ನು ಹಿಡಿಯಿತು ಎಂದು ಶ್ರೇಯಸ್ ಅಯ್ಯರ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
Betty wanted to have a go too after watching Kane Williamson’s beautiful dog Sandy nail that catch. Took Betty a while but she’s got her first catch and immediately ran to celebrate 😊😂 pic.twitter.com/yM8lzdvs2e
ನವದೆಹಲಿ: ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿರುವ ತಬ್ಲಿಘಿ ಜಮಾತ್ ಪ್ರಧಾನ ಕಚೇರಿಯು ಕೊರೊನಾ ಹಾಟ್‍ಸ್ಪಾಟ್ ಆಗಿ ಬದಲಾಗಿದೆ. ಸಭೆಯಲ್ಲಿ ಭಾಗವಹಿಸಿದ್ದವರ ಪೈಕಿ 10 ಜನ ಸೋಂಕಿತರು ಮೃತಪಟ್ಟಿದ್ದಾರೆ. ಉಳಿದಂತೆ 300 ಮಂದಿಯಲ್ಲಿ ಕೊರಾನಾ ಲಕ್ಷಣಗಳು ಕಂಡು ಬಂದಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ತಬ್ಲಿಘಿ ಜಮಾತ್‍ನಲ್ಲಿ ಮಾರ್ಚ್ 1ರಿಂದ 15ರವರೆಗೆ ಸಭೆ ನಡೆದಿತ್ತು. ಈ ಸಭೆಯಲ್ಲಿ ದೇಶ, ವಿದೇಶದ ಮುಸ್ಲಿಂ ಅನುಯಾಯಿಗಳು ಭಾಗವಹಿಸಿದ್ದರು. ಈ ಪೈಕಿ ಒಂಬತ್ತು ಭಾರತೀಯರು ತೆಲಂಗಾಣದಲ್ಲಿ ಆರು, ತಮಿಳುನಾಡು, ಕರ್ನಾಟಕ ಮತ್ತು ಜಮ್ಮು-ಕಾಶ್ಮೀರದಲ್ಲಿ ತಲಾ ಒಬ್ಬರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ದೆಹಲಿಯಲ್ಲಿ ಸೋಮವಾರ ವರದಿಯಾದ 25 ಕೊರೊನಾ ಹೊಸ ರೋಗಿಗಳಲ್ಲಿ 18 ಮಂದಿ ನಿಜಾಮುದ್ದೀನ್‍ನ ಸಭೆಯಲ್ಲಿ ಭಾಗವಹಿಸಿದ್ದರೇ ಆಗಿದ್ದಾರೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೀಗಾಗಿ ಅವರೊಂದಿಗೆ ಸಂಪರ್ಕ ಹೊಂದಿದ್ದ 97 ಜನರಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದ್ದು, 500ಕ್ಕೂ ಹೆಚ್ಚು ಜನರನ್ನು ಹೋಮ್ ಕ್ವಾರೆಂಟೈನ್‍ನಲ್ಲಿ ಇರಿಸಲಾಗಿದೆ.
ಜಮಾತ್ ಆಯೋಜಿಸಿದ್ದ ಜಾತ್ಯತೀತ ಸಭೆಗೆ ಹಾಜರಾಗಲು ಮಾರ್ಚ್ ಮೊದಲ ವಾರ 250 ವಿದೇಶಿ ಪ್ರಜೆಗಳು ದೆಹಲಿಗೆ ಆಗಮಿಸಿದ್ದರು. ಅವರಲ್ಲಿ ಅನೇಕರು ವಿವಿಧ ರಾಜ್ಯಗಳಿಗೆ ಪ್ರಯಾಣ ಬೆಳೆಸಿದ್ದಾರೆ. ಅವರೊಂದಿಗೆ ಅನೇಕ ಭಾರತೀಯ ಅನುಯಾಯಿಗಳು ಸಹ ಸೇರಿದ್ದರು ಎಂದು ವರದಿಯಾಗಿದೆ.
1,500ಕ್ಕೂ ಹೆಚ್ಚು ಸದಸ್ಯರು ಮಸೀದಿಯಲ್ಲಿದ್ದರು. ಅವರಲ್ಲಿ ಸುಮಾರು 300 ಮಂದಿಗೆ ಜ್ವರ, ಕೆಮ್ಮು ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವುದು ಪತ್ತೆಯಾಗಿದೆ. ಅವರಲ್ಲಿ ಹಲವರನ್ನು ಪ್ರತ್ಯೇಕವಾಗಿ ದೆಹಲಿಯ ವಿವಿಧ ಸಾರ್ವಜನಿಕ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಸಾಮಾನ್ಯವಾಗಿ ಬ್ಯಾಂಗಲ್ ವಾಲಿ ಮಸೀದಿ ಎಂದು ಕರೆಯಲ್ಪಡುವ ಜಮಾತ್‍ನ ಪ್ರಧಾನ ಕಚೇರಿಯನ್ನು ಮೊಹರು ಮಾಡಲಾಗಿದೆ. ಉಳಿದ ಎಲ್ಲ ಸದಸ್ಯರಿಗೆ ಕೋವಿಡ್ -19 ಹೋಮ್ ಕ್ವಾರೆಂಟೈನ್ ಸೀಲ್ ಹಾಕಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಜಮಾತ್‍ನ ಸಾಗರೋತ್ತರ ಅನುಯಾಯಿಗಳು ಇತರರನ್ನು ಹೊರತುಪಡಿಸಿ ಥೈಲ್ಯಾಂಡ್, ಇಂಡೋನೇಷ್ಯಾ ಮತ್ತು ಮಲೇಷ್ಯಾದಿಂದ ಜನರು ಬಂದಿದ್ದರು. ನಿಜಾಮುದ್ದೀನ್ ಪ್ರಧಾನ ಕಚೇರಿಯಿಂದ ಸ್ಥಳೀಯ ಮಾರ್ಗದರ್ಶಿಗಳ ಜೊತೆಗೆ ಸೇರಿ ವಿವಿಧ ರಾಜ್ಯಗಳ ಮಸೀದಿಗಳಲ್ಲಿ ತಂಗಿದ್ದರು ಎಂದು ವರದಿಯಾಗಿದೆ.
ಮುಂಬೈನಿಂದ 10 ಜನರ ಗುಂಪು ಸಭೆಗಾಗಿ ದೆಹಲಿಗೆ ಪ್ರಯಾಣ ಬೆಳೆಸಿತ್ತು. ಅವರಲ್ಲಿ ಒಬ್ಬರು, ಫಿಲಿಪೈನ್ಸ್‍ನ ಬೋಧಕ, ಕಸ್ತೂರಬಾ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಭಾರತೀಯ ಅನುಯಾಯಿಗಳಲ್ಲಿ ಒಬ್ಬರಾದ ಜಮ್ಮು ಮತ್ತು ಕಾಶ್ಮೀರದ 65 ವರ್ಷದ ವೃದ್ಧ ಕೆಲ ದಿನಗಳ ಹಿಂದಷ್ಟೇ ಮೃತಪಟ್ಟಿದ್ದರು. ಉಳಿದಂತೆ ಸೋಂಕು ತಗುಲಿದವರನ್ನು ಗುರು ತೇಜ್ ಬಹದ್ದೂರ್ (ಜಿಟಿಬಿ) ಮತ್ತು ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತದೆ.
ಚಿಕ್ಕೋಡಿ/ಬೆಳಗಾವಿ: ಕೊರೊನಾ ವೈರಸ್‍ನಿಂದ ಈಗಾಗಲೇ ಅನೇಕ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಹಾಲಿನ ಮೇಲೆ ಕೊರೊನಾ ಪರಿಣಾಮ ಬೀರಿದೆ. ಹಳ್ಳಿಗಳಲ್ಲಿ ರೈತರಿಂದ ಹಾಲು ಪಡೆದು ಬೇರೆ ಬೇರೆ ಕಡೆ ಸರಬರಾಜು ಮಾಡುತ್ತಿದ್ದ ಗೌಳಿ ಸಮುದಾಯ ಈಗ ಹಾಲನ್ನು ಹರಿಯುವ ನಾಲೆ ಪಾಲು ಮಾಡಿದೆ.
ಜಿಲ್ಲೆಯ ರಾಯಭಾಗ ತಾಲೂಕಿನ ಪಾಲಭಾಂವಿಯಲ್ಲಿ 1500ಕ್ಕೂ ಹೆಚ್ಚು ಲೀಟರ್ ಹಾಲನ್ನು ಗೌಳಿ ಸಮುದಾಯದ ಯುವಕರು ನೀರು ಪಾಲು ಮಾಡಿದ್ದಾರೆ. ಈ ಹಿಂದೆ ರೈತರಿಂದ ಎಮ್ಮೆ ಹಾಲು ಲೀಟರಿಗೆ 32 ರೂಪಾಯಿಯಂತೆ ಈ ಸಮುದಾಯ ಖರೀದಿ ಮಾಡುತ್ತಿತ್ತು .ಅದೇ ರೀತಿ ಆಕಳ ಹಾಲನ್ನು 22 ರೂಪಾಯಿಯಂತೆ ಪ್ರತಿ ಲೀಟರಿಗೆ ಖರೀದಿ ಮಾಡುತ್ತಿತ್ತು.
ಈಗ ಅದೇ ಬೆಲೆಗೆ ಗೌಳಿ ಸಮುದಾಯದ ಯುವಕರು ರೈತರಿಂದ ಹಾಲು ಖರೀದಿ ಮಾಡಿದ್ದಾರೆ. ಆದರೆ ಗೌಳಿ ಸಮುದಾಯ ಸರಬರಾಜು ಮಾಡುತ್ತಿದ್ದ ಕಂಪನಿಯ ಏಜೆಂಟರು ಕೇವಲ 10 ರೂಪಾಯಿ ಲೀಟರಿನಂತೆ ಹಾಲು ಕೊಡಿ, ಇಲ್ಲವಾದರೆ ನಿಮ್ಮ ಹಾಲು ನಮಗೆ ಬೇಡ ಎಂದು ಹೇಳಿದ್ದಾರಂತೆ. ಹೀಗಾಗಿ ಗೌಳಿ ಸಮುದಾಯದ ಯುವಕರು ಘಟಪ್ರಭಾ ಎಡದಂಡೆ ಕಾಲುವೆಗೆ ತಾವು ಸಂಗ್ರಹಸಿದ ಹಾಲು ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಎಂಎಫ್ ಕೂಡ ಈ ಯುವಕರು ಸಂಗ್ರಹಿಸಿದ ಹಾಲು ಖರೀದಿಗೆ ಮುಂದಾಗದ ಕಾರಣ ಈ ನಿರ್ಧಾರಕ್ಕೆ ಬಂದಿದ್ದಾಗಿ ಹಾಲು ಸಂಗ್ರಹಾಗಾರರು ತಿಳಿಸಿದ್ದಾರೆ.
-ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಮೊದಲಿಗ
-ಕೊರೊನಾದಿಂದ ತಡೆಗೆ ಏನ್ ಮಾಡಬೇಕು?
ಬೆಂಗಳೂರು: ಭಾರತದಲ್ಲಿ ಕೊರೊನಾ ವೈರಸ್ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇತ್ತ ಕೊರೊನಾ ಗೆದ್ದ ಬೆಂಗಳೂರಿನ ಆರ್.ಆರ್.ನಗರದ ನಿವಾಸಿ ವೆಂಕಟ್ ರಾಘವ್ ತಮಗಾದ ಅನುಭವವನ್ನು ಜನತೆಯೊಂದಿಗೆ ಹಂಚಿಕೊಂಡಿದ್ದಾರೆ. ತಮಗೆ ಕೊರೊನಾ ಸೋಂಕು ತಗುಲಿದ್ದು ಹೇಗೆ? ಚಿಕಿತ್ಸೆ ಹೇಗಿತ್ತು ಎಂಬುದರ ಬಗ್ಗೆ ವೆಂಕಟ್ ರಾಘವ್ ವಿವರಿಸಿದ್ದಾರೆ.
ವೆಂಕಟ್ ರಾಘವ್ ಮಾತು:
ನಮಸ್ಕಾರ, ನಾನು ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸಿಯಾಗಿದ್ದು, ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆದ ಮೊದಲ ವ್ಯಕ್ತಿ. ಮಾರ್ಚ್ ಮೊದಲ ವಾರ ನಾನು ಯುಎಸ್ ಗೆ ಹೋಗಬೇಕಿತ್ತು. ಹಲವು ವಿಮಾನ ನಿಲ್ದಾಣಗಳು ಲಾಕ್‍ಡೌನ್ ಪರಿಣಾಮ ಇಟಲಿ ಮತ್ತು ಚೀನಾದವರು ಯುಎಸ್ ಮಾರ್ಗವಾಗಿ ಪ್ರಯಾಣಿಸುತ್ತಿದ್ದರು. ಈ ವೇಳೆ ಸಾರ್ವಜನಿಕ ಶೌಚಾಲಯ, ಬಯೋಮೆಟ್ರಿಕ್ (ಸೆಕ್ಯೂರಿಟಿ ಸ್ಕ್ಯಾನ್) ಬಳಕೆ ಮಾಡಿದಾಗ ನನಗೆ ಕೊರೊನಾ ವೈರಸ್ ತಗುಲಿದಿದೆ ಎಂಬುವುದು ನನ್ನ ಅನಿಸಿಕೆ. ಪ್ರಯಾಣದ ವೇಳೆ ಸೋಂಕಿತರ ಸಂಪರ್ಕಕ್ಕೆ ಬಂದಾಗ ಕೊರೊನಾ ತಗುಲಿರಬಹುದು. ಇದೇ ಮಾರ್ಗದ ಮೂಲಕ ಕೊರೊನಾ ನನಗೆ ತಗುಲಿತ್ತು ಎಂಬುದರ ಬಗ್ಗೆ ಖಾತ್ರಿ ಇಲ್ಲ.
ಭಾನುವಾರ ನಾನು ಯುಎಸ್ ನಲ್ಲಿ ತಲುಪಿದೆ. ಮಾರ್ಚ್ 6 ಗುರುವಾರ ನನಗೆ ಜ್ವರ ಕಾಣಿಸಿಕೊಂಡಿತು. ಪ್ರಯಾಣ ಮಾಡಿದ್ದರಿಂದ ಜ್ವರ ಎಂದು ತಿಳಿದು ಕೆಲ ಮಾತ್ರೆ ತೆಗೆದುಕೊಂಡು ಚೇತರಿಕೆ ಕಾಣಲಿಲ್ಲ. ಜ್ವರದ ಜೊತೆಯಲ್ಲಿ ಶೀತವು ಹೆಚ್ಚಾಗಿದ್ದರಿಂದ ನನ್ನ ಪ್ರವಾಸವನ್ನು ಮುಂದೂಡಿ ವಾಪಸ್ ಬಂದೆ. ನನ್ನ ಜ್ವರದ ಬಗ್ಗೆ ಅನುಮಾನಗಳಿದ್ದರಿಂದ ವಿಮಾನ ನಿಲ್ದಾಣದ ವೈದ್ಯರ ಬಳಿ ತೆರಳಿ ಆರೋಗ್ಯದಲ್ಲಾದ ಏರುಪೇರುಗಳ ಬಗ್ಗೆ ಮಾಹಿತಿ ನೀಡಿದೆ.
ಕೊರೊನಾ ವೈರಸ್ ಸೋಂಕು ತಗುಲಿದೆಯಾ ಅಥವಾ ಇಲ್ವಾ ಎಂಬುದರ ಬಗ್ಗೆ ತಿಳಿದುಕೊಳ್ಳಬೇಕು. ಅನುಮಾನ ಮತ್ತು ಭಯದ ಜೊತೆ ಮನೆಗೆ ಹೋಗಲಾರೆ. ಒಂದು ವೇಳೆ ಸೋಂಕು ತಗುಲಿದ್ದರೂ, ಅದು ನನ್ನಿಂದ ಬೇರೆಯವರಿಗೆ ಹರಡೋದು ಬೇಡ ಎಂದು ವಿಮಾನ ನಿಲ್ದಾಣದ ವೈದ್ಯರಿಗೆ ಹೇಳಿದೆ. ಮಾರ್ಚ್ ಮೊದಲ ವಾರದಲ್ಲಿ ಏರ್ ಪೋರ್ಟ್ ವೈದ್ಯರ ಬಳಿ ಕೊರೊನಾ ವೈರಸ್ ಬಗ್ಗೆ ಪರೀಕ್ಷಿಸುವ ಯಾವುದೇ ವೈದ್ಯಕೀಯ ಉಪಕರಣಗಳು ಇರಲಿಲ್ಲ. ಹಾಗಾಗಿ ನನಗೆ ಕೊರೊನಾ ನೆಗಟಿವ್ ಎಂದು ರಿಪೋರ್ಟ್ ನೀಡಿದರು. ವಿಮಾನ ನಿಲ್ದಾಣದಿಂದ ಹೊರ ಬಂದ ನಾನು ಕಂಪನಿ ಕಳುಹಿಸಿದ ಕ್ಯಾಬ್ ನಲ್ಲಿ ಮನೆ ಸೇರಿದೆ.
ನನಗೆ ಅನುಮಾನವಿತ್ತು: ಮನೆಗೆ ಬಂದ ನಂತರವೂ ನಾನು ಆರೋಗ್ಯವಾಗಿದ್ದೇನೆ ಎಂಬುದರ ಬಗ್ಗೆ ಅನುಮಾನವಿತ್ತು. ಪತ್ನಿಗೆ ವಿಷಯ ತಿಳಿಸಿ ಕುಟುಂಬದವರಿಂದ ಅಂತರ ಕಾಯ್ದುಕೊಂಡು ಪ್ರತ್ಯೇಕ ಕೋಣೆಯಲ್ಲಿ ಉಳಿದುಕೊಂಡೆ. ಆರ್.ಆರ್.ನಗರದಲ್ಲಿಯ ಕ್ಲಿನಿಕ್ ಗೆ ತೆರಳಿದಾಗ ಅಲ್ಲಿಯ ಡಾಕ್ಟರ್ ಸಹ ಕೊರೊನಾ ಬಗ್ಗೆ ಭಯಗೊಂಡಿದ್ದರು. ತಮ್ಮ ಹತ್ರ ಕೊರೊನಾಗೆ ಚಿಕಿತ್ಸೆ ನೀಡುವ ಸೌಲಭ್ಯಗಳಿಲ್ಲ. ಅವರ ಸಲಹೆಯ ಮೇರೆಗೆ ರಾಜೀವ್ ಗಾಂಧಿ ಆಸ್ಪತ್ರೆಗೆ ತೆರಳಿದೆ.
ರಾಜೀವ್ ಗಾಂಧಿ ಆಸ್ಪತ್ರೆಯ ಸಿಬ್ಬಂದಿ ಅತ್ಯಂತ ಕಾಳಜಿಯಿಂದ ನನಗೆ ಚಿಕಿತ್ಸೆ ನೀಡಿದರು. ನನ್ನ ಟ್ರಾವೆಲ್ ಹಿಸ್ಟರಿ, ನನ್ನ ಜೊತೆಗೆ ನೇರ ಸಂಪರ್ಕದಲ್ಲಿದ್ದವರು ಎಲ್ಲ ಮಾಹಿತಿ ಪಡೆದು ಕೆಲವು ಮಾತ್ರೆ ನೀಡಿ ವರದಿ ಬರುವರೆಗೂ ಪ್ರತ್ಯೇಕವಾಗಿರುವಂತೆ ತಿಳಿಸಿ ಕಳುಹಿಸಿದರು.
ಮರುದಿನ ಮಧ್ಯಾಹ್ನ ರಾಜೀವ್ ಗಾಂಧಿ ಆಸ್ಪತ್ರೆಯ ವೈದ್ಯ ಡಾ.ಪದ್ಮಾ ಕರೆ ಮಾಡಿ, ನಿಮ್ಮಲ್ಲಿ ಕೊರೊನಾ ವೈರಸ್ ಹೆಚ್ಚಾಗಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಾಗುವಂತೆ ತಿಳಿಸಿದರು. ಕೂಡಲೇ ಬಟ್ಟೆ ಪ್ಯಾಕ್ ಮಾಡಿಕೊಂಡು ಆಸ್ಪತ್ರೆ ಕಳುಹಿಸಿದ ಆಂಬುಲೆನ್ಸ್ ನಲ್ಲಿ ತೆರಲಿ ಐಸೋಲೇಶನ್ ವಾರ್ಡಿನಲ್ಲಿ ದಾಖಲಾದೆ.
ವೈದ್ಯರ ಸೂಚನೆ ಪಾಲಿಸಿ: ಕೊರೊನಾ ವೈರಸ್ ತಗುಲಿದ ಸೋಂಕಿತನಾಗಿದ್ದರಿಂದ ಆಸ್ಪತ್ರೆ ಸಿಬ್ಬಂದಿ ಸಹಜವಾಗಿ ಆತಂಕಕ್ಕೊಳಗಾಗಿದ್ದರು. ಜ್ವರ ಪದೇ ಪದೇ ಏರುಪೇರಾಗಿತ್ತು. ಐಸೋಲೇಶನ್ ವಾರ್ಡಿನಲ್ಲಿ ಎಲ್ಲ ವ್ಯವಸ್ಥೆ ಕಲ್ಪಿಸಲಾಗಿತ್ತು. ಗುಣಮಟ್ಟದ ಆಹಾರವನ್ನು ನೀಡುತ್ತಿದ್ದರು. ಒಮ್ಮೆ ನಾನು ದಕ್ಷಿಣ ಭಾರತದ ಶೈಲಿಯ ತಿಂಡಿ ಬೇಕೆಂದಾಗ ಡಾ.ದೀಪಕ್ ಎಂಬವರು ತಾವೇ ಹೋಟೆಲಿಗೆ ತೆರಳಿ ತಂದುಕೊಟ್ಟರು. ಐಸೋಲೆಶನ್ ವಾರ್ಡಿನಲ್ಲಿ ಹೆಚ್ಚು ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ಸೂಚಿಸಿದ್ದರು. ವೈದ್ಯರ ನಿರಂತರ ಚಿಕಿತ್ಸೆಯಿಂದ ಜ್ವರ ಕಡಿಮೆಯಾಗುತ್ತಾ ಬಂತು. ಎರಡು ವಾರಗಳ ನಂತರ ನನ್ನಲ್ಲಿ ಚೇತರಿಕೆ ಕಾಣಿಸ್ತು. ನಾನು ಸಹ ಭಯಪಡದೇ ವೈದ್ಯರು ಹೇಳಿದಂತೆ ಆರೋಗ್ಯ ಕಾಪಾಡಿಕೊಂಡಿದ್ದರಿಂದ ಇಂದು ಗುಣಮುಖವಾಗಿದ್ದೇನೆ.
ಸರ್ಕಾರಕ್ಕೆ ಧನ್ಯವಾದ: ಮಾಸ್ಕ್ ಧರಿಸೋದು, ಕೈಗಳನ್ನು ತೊಳೆಯುತ್ತೀರಿ, ಹೊರಗಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ನನಗೆ ಕೊರೊನಾಗೆ ಬಂದಿದ್ದರಿಂದ ನೆರೆಹೊರೆಯವರು ತುಂಬಾ ಪ್ಯಾನಿಕ್ ಆಗಿದ್ದರು. ಆದ್ರೆ ನಮ್ಮ ಪಕ್ಕದ್ಮನೆಯ ಮಂಜುಳಾ ಎಂಬವರು ಪ್ರತಿನಿತ್ಯ ಊಟ ಕಳುಹಿಸುತ್ತಿದ್ದರು. ಮಗಳಿಗೆ ಪಿಯುಸಿ ಪರೀಕ್ಷೆ ಇತ್ತು. ಕಾಲೇಜಿನವರು ಪರೀಕ್ಷೆಗೆ ಅನುಮತಿ ನೀಡದಿದ್ದಾಗ ಸರ್ಕಾರವೇ ಆಕೆಗೆ ಒಂದು ಪರೀಕ್ಷಾ ಕೇಂದ್ರವನ್ನು ತೆರೆಯ್ತು. ಆರೋಗ್ಯ ಇಲಾಖೆ ಸಿಬ್ಬಂದಿ ಮನೆಗೆ ಬಂದು ಪತ್ನಿಗೆ ಧೈರ್ಯ ತುಂಬಿದ್ರು. ಯಾವ ಖಾಸಗಿ ಆಸ್ಪತ್ರೆ ನಮ್ಮ ಸಹಾಯಕ್ಕೆ ಬರಲಿಲ್ಲ. ಸರ್ಕಾರವೇ ನಮ್ಮ ಸಹಾಯಕ್ಕೆ ಬಂತು. ಆರೋಗ್ಯ ಸಚಿವರಾದ ಶ್ರೀರಾಮುಲು ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ರಾಜೀವ್ ಗಾಂಧಿ ಆಸ್ಪತ್ರೆಯಿಂದ ಹೊರ ಬಂದರೂ ಏಪ್ರಿಲ್ 6ರವರೆಗೆ ಹೋಮ್ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಿದ್ದಾರೆ. ಹಾಗಾಗಿ ಕುಟುಂಬಸ್ಥರಿಂದ ಅಂತರ ಕಾಯ್ದುಕೊಂಡಿದ್ದೇನೆ. ಪ್ರತ್ಯೇಕ ತಟ್ಟೆಯನ್ನು ಬಳಸುತ್ತಿದ್ದೇನೆ. ನನ್ನ ಬಟ್ಟೆಗಳನ್ನು ಪ್ರತ್ಯೇಕವಾಗಿ ಇರಿಸಲಾಗುತ್ತಿದೆ. ವೈದ್ಯರು ಸೂಚನೆಯನ್ನು ಪಾಲಿಸಿದ್ರೆ ಕೊರೊನಾದಿಂದ ಉಳಿಯಬಹುದು ಎಂದು ವೆಂಕಟ್ ರಾಘವ್ ಹೇಳಿದ್ದಾರೆ.
ಮೈಸೂರು: ಮೈಸೂರು, ಹಾಸನ, ಮಂಡ್ಯ, ಹಾಗೂ ಚಾಮರಾಜನಗರಕ್ಕೆ ಕೊರೊನಾ ವೈರಸ್ ನ ದೊಡ್ಡ ಕಂಟಕ ಎದುರಾಗಿದೆ. ನಂಜನಗೂಡಿನ ಜ್ಯೂಬಿಲಿಯೆಂಟ್ ಕಾರ್ಖಾನೆ ಕಾರ್ಮಿಕನಿಂದ ಹರಡಿದ ಕೊರೊನಾ ಸೋಂಕು ಕಾರ್ಖಾನೆಯ ಬಹುತೇಕ ಕಾರ್ಮಿಕರಿಗೆ ತಗುಲಿರುವ ಬಗ್ಗೆ ಅನುಮಾನಗಳ ವ್ಯಕ್ತವಾಗಿದೆ. ಈ ಕಾರ್ಮಿಕರು ಈ ನಾಲ್ಕು ಜಿಲ್ಲೆಗಳಲ್ಲಿ ಇರುವುದರಿಂದ ಅಪಾಯದ ಗಂಟೆ ಸದ್ದು ನಾಲ್ಕು ಜಿಲ್ಲೆಗಳಲ್ಲಿ ಕೇಳಿಸುತ್ತಿದೆ.
ನಂಜನಗೂಡಿನ ಜ್ಯೂಬಿಲಿಯೆಂಟ್ ಕಾರ್ಖಾನೆ ನೌಕರನಿಗೆ ಕೊರೋನಾ ಪಾಸಿಟಿವ್ ಇತ್ತು. ಆತನಿಂದ ಇತರೆ 5 ಮಂದಿಗೆ ಸೋಂಕು ಹರಡಿತ್ತು. ಈಗ ಮತ್ತೆ ಅದೇ ಕಾರ್ಖಾನೆಯ 4 ಕಾರ್ಮಿಕರಿಗೆ ಸೋಂಕು ಖಚಿತವಾಗಿದೆ. ಅಲ್ಲಿಗೆ ಇದೇ ಕಾರ್ಖಾನೆಯ 10 ಜನರಲ್ಲಿ ಸೋಂಕು ಇದೆ. ಉಳಿದಂತೆ ಇಬ್ಬರು ವಿದೇಶದಿಂದ ಬಂದವರಲ್ಲಿ ಸೋಂಕು ಇದ್ದು ಮೈಸೂರು ಜಿಲ್ಲೆಯಲ್ಲಿ ಒಟ್ಟು ಸೋಂಕು ಪೀಡಿತರ ಸಂಖ್ಯೆ 12ಕ್ಕೆ ಏರಿದೆ.
ನಂಜನಗೂಡಿನ ಔಷಧಿ ಕಂಪನಿ ನೌಕರ ಮತ್ತು ಮೈಸೂರಿನ ಮೂರನೇ ಸೋಂಕಿತನಿಗೆ ಸೋಂಕು ಬಂದಿದ್ದು ಹೇಗೆ ಎಂಬುದನ್ನು ಪತ್ತೆ ಹಚ್ಚಲು ಆರೋಗ್ಯ ಇಲಾಖೆಗೆ ಇದುವರೆಗೂ ಸಾಧ್ಯವಾಗಿಲ್ಲ. ಇದು ಆತಂಕಕ್ಕೆ ಕಾರಣವಾಗಿದೆ. ಇದೇ ನೌಕರನಿಂದ 9 ಮಂದಿಗೆ ಸೋಂಕು ಹರಡಿದೆ. ನಿನ್ನೆ ಕಂಡು ಬಂದ 4 ಪಾಸಿಟಿವ್ ಪ್ರಕರಣಗಳ ವಿವರ ಹೀಗಿದೆ.
ಕೊರೊನಾ ಪ್ರಕರಣ 85 – 32 ವರ್ಷದ ಪುರುಷ
ನಂಜನಗೂಡಿನ ಔಷಧಿ ಕಂಪನಿ ಕಾರ್ಮಿಕ
ಪ್ರಕರಣ 52ರ ಜೊತೆ ಸಂಪರ್ಕ (ಮೈಸೂರಿನಲ್ಲಿ ಚಿಕಿತ್ಸೆ)
ಕೊರೊನಾ ಪ್ರಕರಣ ನಂ.86 – 34 ವರ್ಷದ ಪುರುಷ
ನಂಜನಗೂಡಿನ ಔಷಧಿ ಕಂಪನಿ ಕಾರ್ಮಿಕ
ಪ್ರಕರಣ ನಂ.52ರ ಜೊತೆ ಸಂಪರ್ಕ (ಮೈಸೂರಿನಲ್ಲಿ ಚಿಕಿತ್ಸೆ)
ಕೊರೊನಾ ಪ್ರಕರಣ ನಂ.87 – 21 ವರ್ಷದ ಯುವಕ
ನಂಜನಗೂಡಿನ ಔಷಧಿ ಕಂಪನಿ ಕಾರ್ಮಿಕ
ಪ್ರಕರಣ ನಂ.52ರ ಜೊತೆ ಸಂಪರ್ಕ (ಮೈಸೂರಿನಲ್ಲಿ ಚಿಕಿತ್ಸೆ)
ಕೊರೊನಾ ಪ್ರಕರಣ ನಂ.88 – 24 ವರ್ಷದ ಯುವಕ
ನಂಜನಗೂಡಿನ ಔಷಧಿ ಕಂಪನಿ ಕಾರ್ಮಿಕ
ಪ್ರಕರಣ ನಂ.52ರ ಜೊತೆ ಸಂಪರ್ಕ (ಮೈಸೂರಿನಲ್ಲಿ ಚಿಕಿತ್ಸೆ)
ಕೊರೊನಾಗೆ ದೇಶಕ್ಕೆ ಮೊದಲ ಸಾವಾದ ಕಲಬುರಗಿಯ ವೃದ್ಧ ಎಲ್ಲರಿಗೂ ಭಯ ಮೂಡಿಸಿದ್ದ. ಆದ್ರೆ ಈಗ ಕಲಬುರಗಿ ವೃದ್ಧನಿಗಿಂತ ನಂಜನಗೂಡು ನೌಕರನೇ ಡೇಂಜರ್ ಅನಿಸಲಾರಂಭಿಸಿದೆ. ಯಾಕಂದ್ರೆ ಮೈಸೂರೊಂದರಲ್ಲೇ 12 ಪಾಸಿಟಿವ್ ಕೇಸ್ ಪತ್ತೆಯಾಗಿದ್ದು ಮತ್ತೆ 50 ಮಂದಿಗೆ ಸೋಂಕು ಶಂಕೆ ವ್ಯಕ್ತವಾಗಿದೆ. ಅದರಲ್ಲೂ ಮೈಸೂರು ಭಾಗದ 4 ಜಿಲ್ಲೆಗಳಲ್ಲಿ ಕೊರೊನಾ ಅಪಾಯದ ಸೈರನ್ ಮೊಳಗಲಾರಂಭಿಸಿದೆ.
ನಂಜನಗೂಡು ಔಷಧಿ ಫ್ಯಾಕ್ಟರಿಯಲ್ಲಿ 1,500 ಕಾರ್ಮಿಕರಿದ್ದು ಈ ಕಾರ್ಮಿಕರು ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನದಲ್ಲಿ ನೆಲೆಸಿದ್ದಾರೆ. ಇವರೆಲ್ಲರನ್ನೂ ಆಯಾ ಜಿಲ್ಲೆಗಳಲ್ಲಿ ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಇವರಿಗೆ ಸೋಂಕು ತಗುಲಿರೋ ಸಾಧ್ಯತೆ ಜಾಸ್ತಿ ಇರುವ ಕಾರಣ ಮೈಸೂರು ಸೇರಿದಂತೆ ಸುತ್ತಲಿನ ಮೂರು ಜಿಲ್ಲೆಗಳ ಜನರ ಆತಂಕಕ್ಕೆ ಒಳಗಾಗಿದ್ದಾರೆ. ನಂಜನಗೂಡಿನ ಶಂಕಿತರನ್ನು ತಮ್ಮೂರಿನ ಸರ್ಕಾರಿ ಕಟ್ಟಡಕ್ಕೆ ಶಿಫ್ಟ್ ಮಾಡಬೇಡಿ ಅಂತ ಮಹದೇವ ನಗರ ಗ್ರಾಮಸ್ಥರು ಕಿಡಿಕಾರಿದ್ದಾರೆ. ಮಹದೇವನಗರದಿಂದ 1 ಕಿ.ಮೀ. ದೂರದಲ್ಲಿರೋ ಹಾಸ್ಟೆಲ್‍ಗೆ ಶಂಕಿತರ ಶಿಫ್ಟ್ ಮಾಡಲು ಬಿಡಲ್ಲ ಅಂತ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
ನಂಜನಗೂಡು ಪಟ್ಟಣದಲ್ಲೇ ಸೋಂಕಿತರ ಸಂಖ್ಯೆ 6 ಇರುವ ಕಾರಣ ನಂಜನಗೂಡು ಪಟ್ಟಣ ಬಂದ್ ಮಾಡಲಾಗಿದೆ. ಅಲ್ಲದೆ ಹೋಮ್ ಕ್ವಾರಂಟೈನ್ ಒಳಗಾದವನ ಕಣ್ಗಾವಲಿಗೆ 10 ಮನೆಗಳಿಗೆ ಒಬ್ಬರು ಪೊಲೀಸ್ ಪೇದೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ನಿಯೋಜಿಸಲು ಮೈಸೂರು ಜಿಲ್ಲಾಡಳಿತ ಮುಂದಾಗಿದೆ. ಇವರು ಮನೆಯಿಂದ ಹೊರ ಬಾರದಂತೆ ನೋಡಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗ್ತಿದೆ. ಅಲ್ಲದೆ ಕೈಗೆ ಸೀಲ್ ಜೊತೆ ಬೆರಳಿಗೆ ಬಣ್ಣ ಹಚ್ಚುವ ಕ್ರಮವನ್ನೂ ಆರಂಭಿಸುತ್ತಿದೆ.
ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ, ಸೋಂಕು ತಗುಲಿದ ಕಾರ್ಖಾನೆಯ ಮೊದಲ ನೌಕರ ಕಥೆ ಮಾತ್ರ ಸ್ಪಷ್ಟವಾಗ್ತಿಲ್ಲ. ಈ ನೌಕರ ವಿದೇಶಕ್ಕೂ ಹೋಗಿಲ್ಲ, ವಿದೇಶದಿಂದ ಬಂದವರ ಸಂಪರ್ಕದಲ್ಲೂ ಇಲ್ಲ. ಆದರೂ ಹೇಗೆ ಸೋಂಕು ಹರಡಿತು ಅನ್ನೋ ಪ್ರಶ್ನೆಗೆ ಮಾತ್ರ ಇನ್ನೂ ಉತ್ತರ ಸಿಕ್ಕಿಲ್ಲ. ಈ ನಡುವೆ ಸೋಂಕು ಪೀಡಿತರ ಸಂಖ್ಯೆ ಬೆಳೆಯುತ್ತಲೆ ಇದೆ. ಇದು ಈಗ ನಾಲ್ಕು ಜಿಲ್ಲೆಗಳ ಆತಂಕಕ್ಕೆ ಕಾರಣವಾಗಿದೆ.
ಚಿಕ್ಕಬಳ್ಳಾಪುರ: ಕೊರೊನಾ ವೈರಸ್ ಅಟ್ಟಹಾಸ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದ್ದು, ದೇಶದ ಬೆನ್ನೆಲುಬು ರೈತರು ನಲುಗಿ ಹೋಗುತ್ತಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ರೈತರು ಸಹ ತತ್ತರಿಸಿ ಹೋಗಿದ್ದು, ತಾಲೂಕಿನ ಕತ್ರಿಗುಪ್ಪೆ, ಮರಳುಕುಂಟೆ ಗ್ರಾಮಗಳಲ್ಲಿ ಬೆಳೆದ ಅಲಂಕಾರಿಕ ಗ್ಲಾಡಿಯೋಲಸ್ ಹೂವುಗಳಿಗೆ ಬೇಡಿಕೆಯಿಲ್ಲದೆ ಈಗ ತೋಟದಲ್ಲೇ ಬಾಡಿ ಹೋಗುತ್ತಿವೆ.
ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಹಿನ್ನೆಲೆ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದೆ. ಇದರಿಂದ ಮುದುವೆ, ಮುಂಜಿ ಶುಭ ಸಮಾರಂಭಗಳಿಗೆ ಬ್ರೇಕ್ ಬಿದ್ದಿದೆ. ಇತ್ತ ಗ್ಲಾಡಿಯೋಲಸ್ ಬೆಳೆದ ರೈತರಿಗೆ ಈಗ ಲಕ್ಷಾಂತರ ರೂಪಾಯಿ ನಷ್ಟವಾಗ್ತಿದೆ. ಈ ಬಾರಿ ಏಪ್ರಿಲ್ ತಿಂಗಳಲ್ಲಿ ಸಾಕಷ್ಟು ಮದುವೆ ಶುಭ ಸಮಾರಂಭಗಳಿದ್ದವು. ಆದರೆ ಈಗ ಕೊರೊನಾ ಎಫೆಕ್ಟ್ ನಿಂದ ಎಲ್ಲವೂ ನಿಂತುಹೋಗಿವೆ. ಇದರಿಂದ ಕಾರ್ಯಕ್ರಮಗಳಲ್ಲಿ ಅಲಂಕಾರಕ್ಕೆ ಬಲು ಬೇಡಿಕೆ ಇರುತ್ತಿದ್ದ ಈ ಗ್ಲಾಡಿಯೋಲಸ್ ಹೂವುಗಳನ್ನು ಕೇಳೋರೆ ಎಲ್ಲದಂತಾಗಿದೆ. ಮಾರುಕಟ್ಟೆಗೆ ತೆಗೆದುಕೊಂಡು ಹೋದರೂ ಉಪಯೋಗವಾಗುತ್ತಿಲ್ಲ. ಹೀಗಾಗಿ ತೋಟಗಳಲ್ಲೇ ಗಿಡಗಳಲ್ಲಿ ಗ್ಲಾಡಿಯೋಲಸ್ ಹೂವುಗಳನ್ನ ಹಾಗೆ ಬಿಡುತ್ತಿದ್ದು, ಎಲ್ಲವೂ ಬಾಡಿ ಹೋಗ್ತಿವೆ.
ಮತ್ತೊಂದೆಡೆ ಹೂವುಗಳನ್ನ ಹಾಗೆ ಬಿಟ್ಟರೆ ರೋಗ ಬರುತ್ತೆ ಅಂತ ಕಟಾವು ಮಾಡಿ ಬಿಸಾಡಲಾಗುತ್ತಿದೆ. ಕೆಲ ಹೂವುಗಳನ್ನ ಓಣಗಿಸಿ ದನಕರುಗಳಿಗೆ ಮೇವಾಗಿ ಬಳಸಲಾಗುತ್ತಿದೆ. ಆದರೆ ಅತಿಯಾಗಿ ಹಸುಗಳು ಸಹ ಇದನ್ನ ತಿನ್ನುವಂತಿಲ್ಲ. ಒಂದು ಹೂವಿನ ಕಡ್ಡಿಗೆ ಸರಾಸರಿ 5-6 ಹೂವುಗಳಿ ಸಿಗುತ್ತೆ. ಮದುವೆ ಸಮಾರಂಭಗಳು ಜಾಸ್ತಿ ಇರುವ ಸಮಯದಲ್ಲಿ 20 ರೂಪಾಯಿವರೆಗೆ ಇದರ ದರ ಏರಿಕೆಯಾಗುತ್ತೆ. ಸದ್ಯ ಮರಳುಕುಂಟೆ, ಕತ್ರಿಗುಪ್ಪೆ, ಕಾಡ ದಿಬ್ಬೂರು, ಅಂಗರೇಖನಹಳ್ಳಿಯ ನೂರಾರು ಮಂದಿ ರೈತರು ಎಕ್ರೆಗಟ್ಟಲೆ ಇದೇ ರೀತಿ ಗ್ಲಾಡಿಯೋಲಸ್ ಹೂವು ಬೆಳೆದಿದ್ದು, ಕೊರೊನಾ ಹೊಡೆತಕ್ಕೆ ನಲುಗಿ ಹೋಗಿದ್ದಾರೆ.
– ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 12ಕ್ಕೆ ಏರಿಕೆ
– ಮನೆಯಿಂದ ಯಾರೂ ಹೊರ ಬರುವಂತಿಲ್ಲ
– 10 ಮನೆಗೆ ಓರ್ವ ಪೊಲೀಸ್ ಸಿಬ್ಬಂದಿ ನೇಮಕ
ಮೈಸೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 12ಕ್ಕೆ ಏರಿದ್ದು, ಒಂದೇ ದಿನದಲ್ಲಿ 5 ಕೊರೊನಾ ಪಾಸಿಟಿವ್ ಪ್ರಕರಣ ಕಂಡು ಬಂದ ಹಿನ್ನೆಲೆ ನಂಜನಗೂಡಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಎರಡನೇ ದಿನವೂ ನಾಕಾಬಂದಿ ಮುಂದುವರೆದಿದೆ.
ನಂಜನಗೂಡಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಬಂದ್ ಆಗಿವೆ. ಮೈಸೂರು-ಊಟಿ, ಕೇರಳ ಮತ್ತು ತಮಿಳುನಾಡು ಸಂಪರ್ಕ ಕಲ್ಪಿಸುವ ಹೆದ್ದಾರಿ ಸೇರಿದಂತೆ ಪಟ್ಟಣಕ್ಕೆ ನಾಲ್ಕು ಕಡೆಯಿಂದ ಸಂಪರ್ಕಿಸೋ ಎಲ್ಲಾ ಮುಖ್ಯ ರಸ್ತೆಗಳನ್ನು ಸಹ ಬಂದ್ ಮಾಡಲಾಗಿದೆ. ಪಾಸ್ ಹೊಂದಿರುವ ವಾಹನಗಳಿಗೆ, ದಿನಸಿ ಪದಾರ್ಥ ತರೋ ವಾಹನ ಹೊರತುಪಡಿಸಿ ಎಲ್ಲಾ ವಾಹನಗಳ ಪ್ರವೇಶ ರದ್ದು ಮಾಡಲಾಗಿದೆ. ನಂಜನಗೂಡು ಪಟ್ಟಣದಿಂದ ಯಾರು ಹೊರಹೋಗದಂತೆ ಮತ್ತು ಒಳ ಬರದಂತೆ ಪೊಲೀಸರು ನಾಕಾಬಂಧಿ ಹಾಕಿದ್ದು, ನಂಜನಗೂಡು ಸಂಪೂರ್ಣ ಸ್ತಬ್ಧವಾಗಿದೆ.
ಈ ಬಗ್ಗೆ ಜಿಲ್ಲಾ ಉಸ್ತವಾರಿ ಸಚಿವ ವಿ. ಸೋಮಣ್ಣ ಅವರು ಮಾತನಾಡಿ, ಮೈಸೂರಿನಲ್ಲಿ 12 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇಬ್ಬರು ವಿದೇಶದಿಂದ ಬಂದವರು ಹಾಗೂ ಉಳಿದ 10 ಮಂದಿ ಜುಬಿಲೆಂಟ್ ಕಾರ್ಖಾನೆಯ ನೌಕರರಿಗೆ ಸೋಂಕು ತಗುಲಿದೆ. ಇದು ನೋವಿನ ಸಂಗತಿ ಹೀಗೆ ಆಗಬಾರದಿತ್ತು, ಆದರೆ ಆಗೋಗಿದೆ. ಈ ಬಗ್ಗೆ ಯಾವೆಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. 6 ಮಂದಿ ಕೋವಿಡ್-19ಗಾಗಿ ಪ್ರತ್ಯೇಕವಾಗಿ ಮಾಡಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 6 ಮಂದಿ ಬೇರೆ ಬೇರೆ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಅವರು ಕೂಡ ಇಂದು ಕೋವಿಡ್-19ಗಾಗಿ ಇರುವ ಆಸ್ಪತ್ರೆಗೆ ಶಿಫ್ಟ್ ಆಗಲಿದ್ದಾರೆ ಎಂದು ಮಾಹಿತಿ ನೀಡಿದರು.
ಹೋಂ ಕ್ವಾರಂನ್‍ಟೈನ್‍ನಲ್ಲಿ ಇರಬೇಕು ಎಂದು ಗುರುತಿಸಿದ ಮಂದಿ ಮನೆಯಿಂದ ಹೊರಹೋಗುತ್ತಿದ್ದಾರೆ. ಹೀಗಾಗಿ ಅವರು ಮನೆಬಿಟ್ಟು ಹೊರಹೋಗದಂತೆ ನೋಡಿಕೊಳ್ಳಲು 10 ಮನೆಗಳಿಗೆ ಒಬ್ಬ ಪೊಲೀಸ್ ಸಿಬ್ಬಂದಿ, ಆರೋಗ್ಯ ಅಧಿಕಾರಿ ಹಾಗೂ ಗ್ರಾಮ ಲೆಕ್ಕಾಧಿಕಾರಿಯನ್ನು ನೇಮಿಸಲಾಗುತ್ತೆ. ಅವರು 10 ಮನೆಯಲ್ಲಿ ಕ್ವಾರಂಟೈನ್‍ನಲ್ಲಿರುವ ಮನೆ ಮಂದಿ ಮೇಲೆ ನಿಗವಹಿಸಲಿದ್ದಾರೆ. ಅಧಿಕಾರಿಗಳಿಗೆ ವಹಿಸಿರುವ ಮನೆಗಳಿಗೆ ಆಹಾರ ತಂದು ಕೊಡುವುದು, ಔಷಧಿಗಳನ್ನು ತಂದುಕೊಡುವುದು ಹಾಗೂ ಅಗತ್ಯ ವಸ್ತುಗಳನ್ನು ತಂದುಕೊಡುವ ವ್ಯವಸ್ಥೆಯನ್ನು ಅವರೇ ನೋಡಿಕೊಳ್ಳುತ್ತಾರೆ. ಇಂದು ಸಂಜೆಯಿಂದಲೇ ಈ ನಿಯಮ ಜಾರಿಗೆ ಬರಲಿದೆ ಎಂದರು.
ಮನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳು, ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ. ವಿಡಿಯೋ ಕಾನ್ಫರೆನ್ಸ್ ಮುಖಾಂತರ ತಹಶೀಲ್ದಾರ್‍ಗಳ ಜೊತೆಗೂ ಚರ್ಚೆ ನಡೆಸಿದ್ದೇನೆ. ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಹಾಗೆಯೇ ಹೋಂ ಕ್ವಾರಂಟೈನ್ ಆಗುವ ಮಂದಿಗೆ ಹಾಕುತ್ತಿಒರುವ ಸ್ಟಾಂಪ್ ಅಳಸಿ ಹೋಗುತ್ತಿದೆ ಎನ್ನುವುದು ತಿಳಿದು ಬಂದಿದೆ. ಆದ್ದರಿಂದ ಇನ್ನು ಮುಂದೆ ಚುನಾವಣೆ ಸಮಯದಲ್ಲಿ ಮತದಾರರು ವೋಟ್ ಹಾಕುವಾಗ ಅವರ ಬೆರಳಿಗೆ ಹಾಕುವ ಇಂಕ್‍ಯನ್ನು ಹೋಂ ಕ್ವಾರಂಟೈನ್ ಸ್ಟಾಂಪ್ ಜೊತೆಗೆ ಶಂಕಿತರ ಬೆರಳಿಗೆ ಹಾಕಲು ನಿರ್ಧರಿಸಿದ್ದೇವೆ ಎಂದು ಸಚಿವರು ತಿಳಿಸಿದರು.
– ಆಸ್ಟ್ರೇಲಿಯಾದಲ್ಲಿ ಕೊರೊನಾದ ಭೀಕರತೆ ಬಿಚ್ಚಿಟ್ಟ ಕನ್ನಡತಿ
ಕ್ಯಾನ್ಬೆರಾ: ಕೊರೊನಾ ವೈರಸ್ ಇಡೀ ಜಗತ್ತಿನಾದ್ಯಂತ ದಿನೇ ದಿನೇ ಹೆಚ್ಚಾಗಿ ವ್ಯಾಪಿಸುತ್ತಿದೆ. ಅದರಲ್ಲೂ ಆಸ್ಟ್ರೇಲಿಯಾದಲ್ಲಿ ಕ್ಷಣ ಕ್ಷಣಕ್ಕೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಆಸ್ಟ್ರೇಲಿಯಾದಲ್ಲಿನ ಕೊರೊನಾದ ಭೀಕರತೆಯನ್ನ ಕನ್ನಡತಿಯೊಬ್ಬಳು ವಿಡಿಯೋ ಮೂಲಕ ಬಿಚ್ಚಿಟ್ಟಿದ್ದಾಳೆ.
ಶಿವಮೊಗ್ಗ ಮೂಲದ ಶುಭ್ರತಾ ವಿಡಿಯೋ ಮೂಲಕ ಆಸ್ಟ್ರೇಲಿಯಾದಲ್ಲಿನ ಕೊರೊನಾ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಶುಭ್ರತಾ ಹೇಳಿದ್ದೇನು?
ನಾನು ಆಸ್ಟ್ರೇಲಿಯಾದ ಮೆಲ್ಬರ್ನ್ ನಗರದಲ್ಲಿ ಕಳೆದ 8 ವರ್ಷಗಳಿಂದ ನೆಲೆಸಿದ್ದೇನೆ. ಆಸ್ಟ್ರೇಲಿಯಾದಲ್ಲಿ ಸದ್ಯದ ಪರಿಸ್ಥಿತಿ ಹೇಗಿದೆ, ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಈ ವಿಡಿಯೋ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಜನವರಿ 25ರಂದು ಮೊದಲ ಕೊರೊನಾ ಪ್ರಕರಣ ಪತ್ತೆಯಾಗಿತ್ತು. ಅಂದಿನಿಂದ ಇಂದಿನವರೆಗೆ ಸುಮಾರು 2 ಲಕ್ಷಕ್ಕೂ ಹೆಚ್ಚಿನ ಮಂದಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ. ಅದರಲ್ಲಿ 3,800ಕ್ಕೂ ಅಧಿಕ ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇದುವರೆಗೂ 14 ಮಂದಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ 2ನೇ ಹಂತದ ಲಾಖ್‍ಡೌನ್‍ನಲ್ಲಿದೆ.
ಅಂದರೆ ಸೂಪರ್ ಮಾರ್ಕೆಟ್, ಮೆಡಿಕಲ್ ಶಾಪ್, ದಿನಸಿ, ಪೆಟ್ರೋಲ್ ಬಂಕ್ ಓಪನ್ ಮಾತ್ರ ಇದೆ. ಬೇರೆ ಯಾವ ಅಂಗಡಿಗಳು ತೆರೆದಿಲ್ಲ. ಯಾರೂ ಮನೆಯಿಂದ ಹೊರಗೆ ಹೋಗುತ್ತಿಲ್ಲ. ಎಲ್ಲರೂ ಮನೆಯಲ್ಲಿ ಇದ್ದಾರೆ. ನಾವು ಕೂಡ ಮನೆಯಲ್ಲಿಯೇ ಇದ್ದೇವೆ. ಕೆಲವರು ಮನೆಯಲ್ಲಿಯೇ ಕುಳಿತು ಕೆಲಸ ಮಾಡುತ್ತಿದ್ದಾರೆ. ಆದರೆ ಕೊರೊನಾದಿಂದ ಸಾವಿರಾರು ಜನರು ಕೆಲಸ ಕಳೆದುಕೊಂಡಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದೆ. ಆದರೂ ಸರ್ಕಾರ ಕೆಲಸ ಕಳೆದುಕೊಂಡಿರುವ ಪ್ರತಿಯೊಬ್ಬರಿಗೂ ತಿಂಗಳಿಗೆ 1000 ರೂಪಾಯಿಯಂತೆ ಆರು ತಿಂಗಳು ಕೊಡಲು ನಿರ್ಧಾರ ಮಾಡಿದೆ. ಇದರಿಂದ ಅನೇಕರಿಗೆ ಸಹಾಯವಾಗುತ್ತದೆ ಎಂದು ತಿಳಿಸಿದ್ದಾರೆ.
ಇಲ್ಲಿನ ಸಾರ್ವಜನಿಕರು, ಡಾಕ್ಟರ್‌ಗಳಿಗೆ ವಿಡಿಯೋ ಕಾಲ್ ಮೂಲಕ ಮಾಹಿತಿ ಪಡೆಯುತ್ತಿದ್ದಾರೆ. ಆಸ್ಪತ್ರೆಗಳಿಗೆ ನೇರವಾಗಿ ಹೋಗಲು ಆಗುತ್ತಿಲ್ಲ. ಒಂದು ವೇಳೆ ಆಸ್ಪತ್ರೆಗೆ ಹೋಗಬೇಕಾದ ಅನಿವಾರ್ಯತೆ ಬಂದರೆ ಆಸ್ಪತ್ರೆಯ ಮುಂದೆ ಕಾರಿನಲ್ಲಿಯೇ ಕೂರಬೇಕು. ಆಸ್ಪತ್ರೆಯ ಸಿಬ್ಬಂದಿ ಸ್ಯಾನಿಟೈಸರ್ ಮಾಡಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಇಷ್ಟೆಲ್ಲಾ ಮುಂಜಾಗ್ರತಾ ಕ್ರಮವನ್ನು ಕೈಗೊಂಡರೂ ಸಹ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.
ಆಸ್ಟ್ರೇಲಿಯಾದಲ್ಲಿ ಒಟ್ಟು ಸಂಖ್ಯೆ 2.5 ಕೋಟಿ, ಕರ್ನಾಟಕ ಒಂದು ರಾಜ್ಯದಲ್ಲಿ 6 ಕೋಟಿ ಜನಸಂಖ್ಯೆ ಇದೆ. ಕರ್ನಾಟಕದ ಅರ್ಧದಷ್ಟು ಜನಸಂಖ್ಯೆ ಆಸ್ಟೇಲಿಯಾದಲ್ಲಿ ಇಲ್ಲ. ಆದರೂ ಕೊರೊನಾ ಪ್ರಕರಣ ಹೆಚ್ಚಾಗುತ್ತಿದೆ. ಇನ್ನೂ ಭಾರತದ ಜನಸಂಖ್ಯೆಯನ್ನು ಪರಿಗಣಿಸಿದರೆ ನಾವು ಎಷ್ಟೇ ಎಚ್ಚರಿಕೆ ವಹಿಸಿದರೂ ಸಾಲದು. ಹೀಗಾಗಿ ದಯವಿಟ್ಟು ದಯವಿಟ್ಟು ಮನೆಯಲ್ಲಿರಿ ಪೊಲೀಸ್, ವೈದ್ಯರು, ಬ್ಯಾಂಕ್ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ನಮಗಾಗಿ, ಸಮಾಜಕ್ಕಾಗಿ ಅವರು ಕೆಲಸ ಮಾಡುವಾಗ ನಾವು ಅವರಿಗಾಗಿ ಮನೆಯಲ್ಲಿರಬೇಕು ಅಷ್ಟೆ. ದಯವಿಟ್ಟು ಮನೆಯಲ್ಲಿರಿ. ಅನವಶ್ಯಕವಾಗಿ ಯಾರೂ ಹೊರ ಬರಬೇಡಿ. ಅನಿವಾರ್ಯತೆ ಇದ್ದರೆ ಎಲ್ಲಾ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಂಡು ಬನ್ನಿ, ನಾವು ಬದುಕೋಣ, ಬೇರೆಯವರನ್ನೂ ಬದುಕೋಕೆ ಬಿಡೋಣ ಎಂದು ಶೂಭ್ರತಾ ಮನವಿ ಮಾಡಿಕೊಂಡರು.
ಮೈಸೂರು: ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಹೋಂ ಕ್ವಾರಂಟೈನ್ ಆದವರ ಮನೆಗೆ ಪಾಲಿಕೆಯಿಂದ ಔಷಧಿ ಸಿಂಪಡಣೆ ಇಂದಿನಿಂದ ಆರಂಭವಾಗಿದೆ.
ಮೈಸೂರು ಮಹಾನಗರ ಪಾಲಿಕೆಯಿಂದ ವೈರಾಣು ನಾಶಕ್ಕೆ ಔಷಧಿ ಸಿಂಪಡಣೆ ಆಗುತ್ತಿದ್ದು, ಹೈಡ್ರೋಜನ್ ಪೆರಾಕ್ಸೈಡ್ ವಿತ್ ಸಿಲ್ವರ್ ನ್ರೈಟೆಡ್ ಮಿಶ್ರಿತ ಔಷಧಿ ಇದ್ದಾಗಿದೆ. ಕುಡಿಯುವ ಮಿನರಲ್ ವಾಟರ್ ಜೊತೆ ಔಷಧಿ ಮಿಶ್ರಣ ಮಾಡಲಾಗುತ್ತದೆ.
ಮೈಸೂರು ಪಾಲಿಕೆ ಪೌರಕಾರ್ಮಿಕರಿಂದ ಹೋಂ ಕ್ವಾರಂಟೈನ್ ಆದವರ ಮನೆಗೆ ಇದನ್ನು ಸಿಂಪಡಣೆ ಮಾಡಲಿದ್ದಾರೆ. ಹೋಂ ಕ್ವಾರಂಟೈನ್ ಆದವರ ಮನೆಗಳು ಮುಗಿದ ಮೇಲೆ ವಾರ್ಡಿನಲ್ಲಿರುವ ಮನೆಗಳಿಗೆ ಸಿಂಪಡಣೆ ಮಾಡಲಾಗುತ್ತದೆ.
ಕೊರೊನಾ ವೈರಸ್ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ರೈತರು ಬೆಳೆದಿರುವ ಬೆಳೆಯ ಬೆಲೆ ಕುಸಿತವಾಗಿದೆ. ಟೊಮೆಟೊ ಬೆಲೆ ಭಾರೀ ಕುಸಿತವಾಗಿದ್ದು, ಕೆಜಿಗೆ 50 ಪೈಸೆ, ಒಂದು ರೂಪಾಯಿ ಆಗಿದೆ. ಇದರಿಂದ ಕಂಗಾಲಾದ ಟೊಮೆಟೊ ಬೆಳೆದ ರೈತರು ಮಾರಾಟಕ್ಕೆ ತಂದಿದ್ದ ನೂರಾರು ಕ್ವಿಂಟಾಲ್ ಟೊಮೆಟೊ ಹಣ್ಣನ್ನು ಮೈಸೂರಿನ ಎ.ಪಿ.ಎಂ.ಸಿ ಆವರಣದಲ್ಲಿ ಸುರಿದಿದ್ದಾರೆ.
ಮೈಸೂರಿನಲ್ಲಿ ದಿನ ದಿನಕ್ಕೂ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿದೆ. ಆದರೂ ಮೈಸೂರಿನ ಎಂಜಿ ರಸ್ತೆಯ ತರಕಾರಿ ಖರೀದಿಗೆ ಮಾತ್ರ ಜನ ಎಂದಿನಂತೆ ಮುಗಿ ಬೀಳುತ್ತಿದ್ದಾರೆ. ನಡುವೆ ಅಂತರದ ಮಾತು ಪಾಲಿಸದೆ, ಮುಖಕ್ಕೆ ಮಾಸ್ಕ್ ಕಟ್ಟಿಕೊಳ್ಳದೆ ತರಕಾರಿ ಖರೀದಿ ಮಾಡುತ್ತಿದ್ದಾರೆ.