Tag: Coronavirus

  • ಕರ್ನಾಟಕಕ್ಕೆ ಕಂಟಕ ತರುತ್ತಾ ದೆಹಲಿ ಸಭೆ? ಯಾವ ಜಿಲ್ಲೆಯಿಂದ ಎಷ್ಟು ಮಂದಿ ಭಾಗಿ?

    ಕರ್ನಾಟಕಕ್ಕೆ ಕಂಟಕ ತರುತ್ತಾ ದೆಹಲಿ ಸಭೆ? ಯಾವ ಜಿಲ್ಲೆಯಿಂದ ಎಷ್ಟು ಮಂದಿ ಭಾಗಿ?

    – ಜಮಾತ್ ಸಭೆಯಲ್ಲಿ ರಾಜ್ಯದ 391 ಜನರು ಭಾಗಿ
    – ಎಲ್ಲರಿಗೂ ಹೋಮ್ ಕ್ವಾರಂಟೈನ್ ಎಂದ ಬೊಮ್ಮಾಯಿ

    ಬೆಂಗಳೂರು: ದೆಹಲಿಯ ಮರ್ಕಜ್ ಮಸೀದಿ ಕರ್ನಾಟಕಕ್ಕೂ ಮುಳುವಾಗುತ್ತಾ ಎಂಬ ಪ್ರಶ್ನೆ ಎದ್ದಿದೆ. ಯಾಕಂದ್ರೆ ರಾಜ್ಯದ ಬಹುತೇಕ ಜಿಲ್ಲೆಗಳಿಂದ ಮೌಲ್ವಿಗಳು ದೆಹಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಾಪಸ್ ಆಗಿದ್ದಾರೆ.

    ಪಬ್ಲಿಕ್ ಟಿವಿಗೆ ಲಭ್ಯವಾದ ಪ್ರಾಥಮಿಕ ಮಾಹಿತಿ ಪ್ರಕಾರ, ರಾಜ್ಯದಿಂದ ದೆಹಲಿಗೆ ಹೋಗಿ ಬಂದವರ ಸಂಖ್ಯೆ 430 ದಾಟುತ್ತದೆ. ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಬಸವರಾಜ ಬೊಮ್ಮಾಯಿ ಅವರು, ದೆಹಲಿಯ ನಿಜಾಮುದ್ದೀನ್ ಜಮಾತ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದವರ ರಾಜ್ಯದ ಮೌಲ್ವಿಗಳ ಸಂಖ್ಯೆ ಏರಿಕೆಯಾಗಿದೆ. ಕರ್ನಾಟಕದ 391 ಮಂದಿ ದೆಹಲಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದರು. ಎಲ್ಲ 391 ಜನರನ್ನೂ ಕ್ವಾರಂಟೈನ್ ಮಾಡಲಾಗಿದೆ. ಕೆಲವರು ತಮ್ಮ ನಿವಾಸದಲ್ಲಿ ಇರೇ ಬೇರೆ ಬೇರೆ ಕಡೆ ತೆರಳಿದ್ದಾರೆ. ಅವರನ್ನು ಪತ್ತೆ ಹಚ್ಚುವ ಕೆಲಸ ನಡೆದಿದೆ. ಇನ್ನು ಕೆಲವರು ಕಾಶ್ಮೀರ, ಗುಜರಾತ್, ಮಹಾರಾಷ್ಟ್ರ, ಉತ್ತರಪ್ರದೇಶ, ರಾಜಸ್ಥಾನ ರಾಜ್ಯಗಳಿಗೆ ತೆರಳಿದ್ದು ಕರ್ನಾಟಕಕ್ಕೆ ತಲುಪಿಲ್ಲ. ಅವರ ಬಗ್ಗೆಯೂ ಶೋಧ ಕಾರ್ಯ ನಡೆಯುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಯಾರ್ಯಾರು ದೆಹಲಿ ಧಾರ್ಮಿಕ ಸಭೆಗೆ ಹೋಗಿ ಬಂದಿದ್ದೀರೋ ಅವರೆಲ್ಲಾ ಸ್ವಯಂಪ್ರೇರಿತವಾಗಿ ಮುಂದೆ ಬಂದು ಮಾಹಿತಿ ನೀಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಮನವಿ ಮಾಡಿಕೊಂಡಿದ್ದರು. ಈ ಬೆನ್ನಲ್ಲೇ ಜಮಾತ್‍ಗೆ ಹೋಗಿ ಬಂದು ರಾಜ್ಯದ ವಿವಿಧೆಡೆ ನೆಲೆಸಿರುವ 50 ವಿದೇಶಿಗರನ್ನು ಕ್ವಾರಂಟೈನ್ ಮಾಡಲಾಗಿದೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಇಂದು 110 ಮಂದಿಗೆ ಕೊರೊನಾ – ಪಾಸಿಟಿವ್ ಬಂದವರೆಲ್ಲ ದೆಹಲಿ ಸಭೆಯಲ್ಲಿ ಭಾಗಿ

    ಯಾವ ಜಿಲ್ಲೆಯಿಂದ ಎಷ್ಟೆಷ್ಟು ಮಂದಿ?
    ಬೆಂಗಳೂರಿನಿಂದ 60 ಮಂದಿ ದೆಹಲಿಯಲ್ಲಿ ನಡೆದಿದ್ದ ತಬ್ಲಘಿ ಜಮಾತ್ ಸಭೆಯಲ್ಲಿ ಭಾಗವಹಿಸಿದ್ರು. ಆದರೆ ಈವರೆಗೂ 9 ಮಂದಿ ಮಾತ್ರ ಪತ್ತೆಯಾಗಿದ್ದಾರೆ. ಬೆಳಗಾವಿ ಜಿಲ್ಲೆಯಿಂದ ಭಾಗಿಯಾಗಿದ್ದ 70 ಮಂದಿ ಪತ್ತೆಯಾಗಿದ್ದಾರೆ. ಮೈಸೂರಿನಿಂದ ಕಾರ್ಯಕ್ರಮಕ್ಕೆ ಹಾಜರಾಗಿದ್ದ 63 ಮಂದಿ ಪೈಕಿ 43 ಮಂದಿ ಮಾತ್ರ ಪತ್ತೆಯಾಗಿದ್ದಾರೆ. ಬೀದರ್ ಜಿಲ್ಲೆಯ 26 ಹಾಗೂ ಬಾಗಲಕೋಟೆ ಜಿಲ್ಲೆಯ 21 ಜನರು ಹಾಜರಾಗಿದ್ದರು.

    ಕಲಬುರಗಿ ಜಿಲ್ಲೆಯಿಂದ ದೆಹಲಿ ಸಭೆಗೆ ಹಾಜರಾಗಿದ್ದ 26 ಜನರ ಪೈಕಿ 14 ಮಂದಿ ಮಾತ್ರ ಪತ್ತೆಯಾಗಿದ್ದಾರೆ. ವಿಜಯಪುರ ಜಿಲ್ಲೆಯ 13 ಜನರು, ಚಿಕ್ಕಬಳ್ಳಾಪುರದ 17 ಮಂದಿ, ಚಿತ್ರದುರ್ಗದ 9 ಜನರು, ದಾವಣಗೆರೆಯ ಇಬ್ಬರು, ಧಾರವಾಡದ 15 ಮಂದಿ ಹಾಗೂ ಕಲಬುರಗಿಯ 19 ಜನರು ಜಮಾತ್ ಸಭೆಗೆ ಹೋಗಿದ್ದರು.

    ಕೊಪ್ಪಳ ಜಿಲ್ಲೆಯ 14 ಜನ, ಉತ್ತರ ಕನ್ನಡ ನಾಲ್ವರು ಜಮಾತ್ ಸಭೆಗೆ ಹಾಜರಾಗಿದ್ದರು. ದಕ್ಷಿಣ ಕನ್ನಡದ 28 ಜನರು ಭಾಗವಹಿಸಿದ್ದು, 21 ಜನರು ಮಾತ್ರ ಪತ್ತೆಯಾಗಿದ್ದಾರೆ. ಯಾದಗಿರಿ ಜಿಲ್ಲೆಯ ಐವರು, ಕೋಲಾರದ 8 ಮಂದಿ, ಗದಗ ಜಿಲ್ಲೆಯ 6 ಜನರು, ತುಮಕೂರು ಜಿಲ್ಲೆಯ 11 ಮಂದಿ ಹಾಜರಾಗಿದ್ದರು. ಕೊಡಗು ಜಿಲ್ಲೆಯ 11 ಜನರು ಭಾಗವಹಿಸಿದ್ದು, ಕುಶಾಲನಗರದ ಯಾರು ವಾಪಸ್ ಆಗಿಲ್ಲ. ಉಡುಪಿಯಿಂದ 16 ಜನರು ಭಾಗವಹಿಸಿದ್ದರೆ, ಚಾಮರಾಜನಗರ ಜಿಲ್ಲೆಯ 14 ಜನರ ಪೈಕಿ 4 ಪತ್ತೆಯಾಗಿದ್ದಾರೆ.

  • ತಮಿಳುನಾಡಿನಲ್ಲಿ ಇಂದು 110 ಮಂದಿಗೆ ಕೊರೊನಾ – ಪಾಸಿಟಿವ್ ಬಂದವರೆಲ್ಲ ದೆಹಲಿ ಸಭೆಯಲ್ಲಿ ಭಾಗಿ

    ತಮಿಳುನಾಡಿನಲ್ಲಿ ಇಂದು 110 ಮಂದಿಗೆ ಕೊರೊನಾ – ಪಾಸಿಟಿವ್ ಬಂದವರೆಲ್ಲ ದೆಹಲಿ ಸಭೆಯಲ್ಲಿ ಭಾಗಿ

    – ದೆಹಲಿಯಲ್ಲಿ ನಡೆದ ಸಭೆಗೆ ತಮಿಳುನಾಡು ತತ್ತರ
    – ನಿನ್ನೆ 50 ಮಂದಿ, ಇಂದು 110 ಜನರಿಗೆ ಸೋಂಕು ದೃಢ

    ಚೆನ್ನೈ: ಇಂದು ಒಂದೇ 110 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಎಲ್ಲ 110 ಮಂದಿ ದೆಹಲಿ ಮಸೀದಿಯ ಕಾರ್ಯಕ್ರಮಕ್ಕೆ ತೆರಳಿದವರು ಎಂದು ತಮಿಳುನಾಡು ಸರ್ಕಾರ ಹೇಳಿದೆ.

    ಒಂದೇ ದಿನದಲ್ಲಿ 110 ಪ್ರಕರಣಗಳು ಬೆಳಕಿಗೆ ಬಂದ ಪರಿಣಾಮ ತಮಿಳುನಾಡಿನ ಕೊರೊನಾ ಪೀಡಿತರ ಸಂಖ್ಯೆ 234ಕ್ಕೆ ಏರಿಕೆಯಾಗಿದೆ. ಈ ಪೈಕಿ 190 ಜನರು ದೆಹಲಿಯಲ್ಲಿ ನಡೆದ ಸಭೆಯಲ್ಲಿ ಭಾಗವಸಿದರೇ ಆಗಿದ್ದಾರೆ. ಅಷ್ಟೇ ಅಲ್ಲದೆ ತಮಿಳುನಾಡಿನ 19 ಜಿಲ್ಲೆಗಳಿಗೆ ಸೇರಿದ ಜನರು ಸಭೆಯಲ್ಲಿ ಭಾಗವಹಿಸಿದ್ದರು. ಹೀಗಾಗಿ ರಾಜ್ಯದಲ್ಲಿ ಮತ್ತಷ್ಟು ಆತಂಕದ ವಾತಾವರಣ ನಿರ್ಮಾಣವಾಗಿದೆ.

    ದೆಹಲಿಯಲ್ಲಿ ಇಸ್ಲಾಮಿಕ್ ಸಂಘಟನೆ ತಬ್ಲಘಿ ಜಮಾತ್ ಆಯೋಜಿಸಿದ್ದ ಸಮಾವೇಶದಲ್ಲಿ ತಮಿಳುನಾಡಿನ ಅನೇಕರು ಭಾಗವಿಸಿದ್ದರು. ಈ ಪೈಕಿ 110 ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರೆಲ್ಲರ ವರದಿ ಸರ್ಕಾರದ ಕೈಸೇರಿದೆ. ಎಲ್ಲರಲ್ಲಿಯೂ ಕೊರೊನಾ ಸೋಂಕು ಪತ್ತೆಯಾಗಿದ್ದು, ಅವರನ್ನು ಪ್ರತ್ಯೇಕಗೊಳಿಸಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ತಮಿಳುನಾಡು ಆರೋಗ್ಯ ಇಲಾಖೆ ಕಾರ್ಯದರ್ಶಿ ಬೀಲಾ ರಾಜೇಶ್ ಮಾಹಿತಿ ನೀಡಿದ್ದಾರೆ.

    ತಮಿಳುನಾಡು ಸರ್ಕಾರ ಮಂಗಳವಾರ, ದೆಹಲಿಯಲ್ಲಿ ತಬ್ಲಘಿ ಜಮಾತ್ ಮಾರ್ಚ್ 8ರಿಂದ 21ರ ನಡುವೆ ಆಯೋಜಿಸಿದ್ದ ಸಭೆಗೆ ಹಾಜರಾದವರು ದಯವಿಟ್ಟು ಬಂದು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿಕೊಂಡಿತ್ತು. ಈ ಹಿನ್ನೆಲೆಯಲ್ಲಿ 1,103 ಮಂದಿ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದರು. ಈ ಪೈಕಿ 110 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಆರೋಗ್ಯ ಇಲಾಖೆ ಕಾರ್ಯದರ್ಶಿ ಬೀಲಾ ರಾಜೇಶ್, ರಾಜ್ಯ ಸರ್ಕಾರದ ಮನವಿಯ ಬೆನ್ನಲ್ಲೇ ದೆಹಲಿ ಸಮಾವೇಶದಲ್ಲಿ ಭಾಗವಹಿಸಿದ್ದ ಜನರು ಮಂಗಳವಾರ ರಾತ್ರಿಯಿಂದಲೇ ಆಸ್ಪತ್ರೆಗಳಿಗೆ ಬರಲು ಪ್ರಾರಂಭಿಸಿದರು. ಇದರಿಂದಾಗಿ ನಮ್ಮ ವೈದ್ಯಕೀಯ ಸಿಬ್ಬಂದಿ ಹಗಲು-ರಾತ್ರಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

    ಯಾವ ಜಿಲ್ಲೆಯಲ್ಲಿ ಎಷ್ಟು ರೋಗಿಗಳು?
    ತಮಿಳುನಾಡಿನ ಜಿಲ್ಲಾವಾರು ಕೊರೊನಾ ಸೋಂಕಿತರ ಸಂಖ್ಯೆ ಹೀಗಿದೆ. ತಿರುನೆಲ್ವೇಲಿನಲ್ಲಿ 6 ಜನ, ಕೊಯಮತ್ತೂರಿನಲ್ಲಿ 28 ಮಂದಿ, ಈರೋಡ್‍ನಲ್ಲಿ ಇಬ್ಬರು, ಥೇನಿಯಲ್ಲಿ 20 ಜನ, ದಿಂಡಿಗಲ್‍ನಲ್ಲಿ 17 ಮಂದಿ ಕೊರೊನಾ ಸೋಂಕಿತರಿದ್ದಾರೆ. ಉಳಿದಂತೆ ಮಧುರೈನಲ್ಲಿ 9 ಜನ, ತಿರುಪಾಥೂರ್ ನಲ್ಲಿ 7 ಜನ, ಚೆಂಗಲ್‍ಪೇಟೆಯಲ್ಲಿ 7 ಮಂದಿ, ಶಿವಗಂಗೈನಲ್ಲಿ 5 ಮಂದಿ, ತೂತುಕುಡಿಯಲ್ಲಿ ಇಬ್ಬರು, ತಿರುವರೂರಿನಲ್ಲಿ ಇಬ್ಬರು, ಕರೂರಿನಲ್ಲಿ ಓರ್ವ, ಕಂಚಿಯಲ್ಲಿ ಇಬ್ಬರು, ಚೆನ್ನೈನಲ್ಲಿ ಓರ್ವ ಮತ್ತು ತಿರುವಣ್ಣಾಮಲೈನಲ್ಲಿ ಓರ್ವ ಕೊರೊನಾ ಸೋಂಕಿತರಿದ್ದಾರೆ.

    ಒಟ್ಟಾರೆಯಾಗಿ ರಾಜ್ಯದಲ್ಲಿ 2,726 ಜನರ ರಕ್ತದ ಮಾದರಿಗಳನ್ನು ಪರೀಕ್ಷಿಸಿದ್ದು, ಅದರಲ್ಲಿ 234 ಜನರು ರಿಪೋರ್ಟ್ ಪಾಸಿಟೀವ್ ಬಂದಿದೆ. ಇಂದು ಪತ್ತೆಯಾದ 110 ಹೊಸ ಪ್ರಕರಣಗಳಲ್ಲಿ ಒಬ್ಬ ವ್ಯಕ್ತಿ ಮ್ಯಾನ್ಮಾರ್ ಮತ್ತು ಇನ್ನೊಬ್ಬರು ಇಂಡೋನೇಷ್ಯಾದ ಪ್ರಜೆಯಾಗಿದ್ದಾರೆ.

    ಮಂಗಳವಾರ 57 ಹೊಸ ಪ್ರಕರಣಗಳು ವರದಿಯಾಗಿತ್ತು. ಅದರಲ್ಲಿ 50 ರೋಗಿಗಳು ದೆಹಲಿಯಲ್ಲಿ ನಡೆದ ತಬ್ಲಘಿ ಜಮಾತ್ ಸಮಾವೇಶದಲ್ಲಿ ಭಾಗವಹಿಸಿದ್ದರೇ ಆಗಿದ್ದರು. ಅವರನ್ನು ಕನ್ಯಾಕುಮಾರಿ (5 ರೋಗಿಗಳು), ತಿರುನೆಲ್ವೇಲಿ (23 ರೋಗಿಗಳು), ಚೆನ್ನೈ (4 ರೋಗಿಗಳು) ಮತ್ತು ನಮಕ್ಕಲ್ (18 ರೋಗಿಗಳು), ಮಧುರೈ (2 ರೋಗಿಗಳು), ವಿಲ್ಲುಪುರಂ (3 ರೋಗಿಗಳು) ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ.

  • ಇನ್ಸ್‌ಪೆಕ್ಟರ್‌ ಕಾಲಿಗೆ ಬಿದ್ದು ನಮಸ್ಕರಿಸಿದ ಶಾಸಕ

    ಇನ್ಸ್‌ಪೆಕ್ಟರ್‌ ಕಾಲಿಗೆ ಬಿದ್ದು ನಮಸ್ಕರಿಸಿದ ಶಾಸಕ

    – ಶಾಸಕರ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆ

    ವಿಶಾಖಪಟ್ಟಣಂ: ಕೊರೊನಾ ವೈರಸ್‍ನಿಂದಾಗಿ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದೆ. ಪೊಲೀಸರು ಜನದಡ್ಡನೆ, ವಾಹನಗಳ ಸಂಚಾರ ತಡೆಯುವ ಕೆಲಸ ಮಾಡುತ್ತಿದ್ದಾರೆ. ಪೊಲೀಸ ಸೇವೆಗೆ ಆಂಧ್ರಪ್ರದೇಶದ ಶಾಸಕರೊಬ್ಬರು ಫುಲ್ ಫಿದಾ ಆಗಿ ಇನ್ಸ್‌ಪೆಕ್ಟರ್ ಒಬ್ಬರ ಕಾಲಿಗೆ ಮುಟ್ಟಿ ನಮಸ್ಕರಿಸಿದ್ದಾರೆ.

    ಆಂಧ್ರ ಪ್ರದೇಶದ ಅರಕು ಕ್ಷೇತ್ರದ ಶಾಸಕ ಚೆಟ್ಟಿ ಫಲ್ಗುನಾ ವಿಶಾಖಪಟ್ಟಣಂನ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸಿದ್ದಾರೆ. ಈ ದೃಶ್ಯವನ್ನು ಸ್ಥಳದಲ್ಲಿದ್ದ ಕೆಲವರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

    ಶಾಸಕರ ನಡೆಯ ಬಗ್ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದರೆ ಕೆಲವರು ತಮ್ಮದೆ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ದೇಶಾದ್ಯಂತ ಕಾಲ್‍ಡೌನ್ ಘೋಷಿಸಿದ್ದರೂ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕೊರೊನಾ ಸೋಂಕಿತರ ಸಂಖ್ಯೆ ಇಂದು 1,700 ಗಡಿ ದಾಟಿದೆ.

  • ಹಾಡು ಹಾಡಿ ಜನರನ್ನ ಮನೆಗೆ ಕಳುಹಿಸಿದ ರಾಯಚೂರು ಎಸ್‍ಪಿ

    ಹಾಡು ಹಾಡಿ ಜನರನ್ನ ಮನೆಗೆ ಕಳುಹಿಸಿದ ರಾಯಚೂರು ಎಸ್‍ಪಿ

    ರಾಯಚೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆ ಇಡೀ ದೇಶವೇ ಲಾಕ್‍ಡೌನ್ ಆಗಿದ್ದರೂ ಜನ ರಸ್ತೆಯಲ್ಲಿ ಓಡಾಡುವುದನ್ನ ಕಡಿಮೆ ಮಾಡುತ್ತಿಲ್ಲ. ಹೀಗಾಗಿ ರಾಯಚೂರು ಪೊಲೀಸರು ವಿನೂತನ ಪ್ರಯತ್ನಗಳಿಗೆ ಮುಂದಾಗುತ್ತಿದ್ದಾರೆ.

    ಜಿಲ್ಲಾ ಪೋಲಿಸ್ ಅಧೀಕ್ಷಕ ಡಾ.ಸಿ.ಬಿ.ವೇದಮೂರ್ತಿ ಸ್ವತಃ ನಗರದ ಪ್ರಮುಖ ವೃತ್ತಗಳಲ್ಲಿ ಕೊರೊನಾ ಜಾಗೃತಿ ಹಾಡು ಹಾಡಿ ಜನರನ್ನ ಮನೆಗೆ ಕಳುಹಿಸುತ್ತಿದ್ದಾರೆ. ನಗರದ ತೀನ್ ಕಂದಿಲ್, ಗಂಜ್ ವೃತ್ತ ಸೇರಿ ವಿವಿಧೆಡೆ ವೇದಮೂರ್ತಿ ಅವರು ಹಾಡು ಹೇಳುವ ಮೂಲಕ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ.

    ಕೊರೊನಾ ಹಿನ್ನೆಲೆ ಲಾಕ್‍ಡೌನ್ ಇದ್ದರೂ ನಗರದಲ್ಲಿ ಜನ ಓಡಾಡುವುದು ಕಡಿಮೆಯಾಗಿಲ್ಲ. ಲಾಠಿ ಏಟಿಗೂ ಬಗ್ಗಲಿಲ್ಲ, ಬೈಕ್ ಜಪ್ತಿ ಮಾಡಿದರೂ ಜನ ಜಗ್ಗಲಿಲ್ಲ. ಹೀಗಾಗಿ ಕೊನೆಗೆ ಕರೊಕೆ ಹಾಡು ಹೇಳುವ ಮೂಲಕ ಜಾಗೃತಿಗೆ ಮೂಡಿಸುತ್ತಿದ್ದಾರೆ.

    ಒಳಿತು ಮಾಡು ಮನುಸ, ನೀ ಇರೋದು ಮೂರು ದಿವಸ ಹಾಡಿನ ದಾಟಿಯಲ್ಲೇ ‘ಮನೆಯಲ್ಲಿಯೋ ಮನುಸ ಬಂದೈತೋ ಕೊರೊನಾ ವೈರಸಾ… ಕಾಲ ಕಾಲಕ್ಕೆ ಕೈತೊಳೆಯಬೇಕು ಎಂದು ಹಾಡುವ ಮೂಲಕ ಜನ ಜಾಗೃತಿ ಕೈಗೊಂಡಿದ್ದಾರೆ.

    ಈಗಾಗಲೇ ಡ್ರೋಣ್ ಕ್ಯಾಮೆರಾ ಬಳಸುವ ಮೂಲಕ ನಗರದ ಬಡಾವಣೆಗಳಲ್ಲಿ ಜನ ಸೇರದಂತೆ ತಡೆಯಲು ಕ್ರಮವಹಿಸಲಾಗಿದೆ. ಡ್ರೋಣ್ ಕ್ಯಾಮೆರಾ ಮೂಲಕ ಜನರನ್ನು ಚದುರಿಸುವ ಕೆಲಸವನ್ನೂ ಪೊಲೀಸ್ ಇಲಾಖೆ ಮಾಡುತ್ತಿದೆ.

  • ಕೊರೊನಾ ಸೋಂಕಿನ ಭಯಕ್ಕೆ ಆತ್ಮಹತ್ಯೆಗೆ ಶರಣಾದ ಕೂಲಿ ಕಾರ್ಮಿಕ

    ಕೊರೊನಾ ಸೋಂಕಿನ ಭಯಕ್ಕೆ ಆತ್ಮಹತ್ಯೆಗೆ ಶರಣಾದ ಕೂಲಿ ಕಾರ್ಮಿಕ

    ಗದಗ: ಮಂಗಳೂರಿಗೆ ಗುಳೆಹೋಗಿದ್ದ ಗಜೇಂದ್ರಗಡ ತಾಲೂಕಿನ ಕಲ್ಲಿಗನೂರು ಗ್ರಾಮದ ಕೂಲಿ ಕಾರ್ಮಿಕನೋರ್ವ ಏಕಾಏಕಿ ಅನಾರೋಗ್ಯಕ್ಕೆ ಒಳಗಾಗಿದ್ದನು. ಹೀಗೆ ಅನಾರೋಗ್ಯಕ್ಕೆ ತುತ್ತಾಗಿರುವುದರಿಂದ ಕೊರೊನಾ ಸೋಂಕು ತಗುಲಿರಬಹುದು ಎಂದು ಭಯಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಕಲ್ಲಿಗನೂರು ಗ್ರಾಮದ ನಿವಾಸಿ ಗುರುಸಂಗಪ್ಪ ಜಂಗಣ್ಣವರ(40) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಕೂಲಿ ಕಾರ್ಮಿಕನಾಗಿದ್ದ ಗುರುಸಂಗಪ್ಪ ದುಡಿಯಲು ಮಂಗಳೂರಿಗೆ ಹೋಗಿದ್ದನು. ಮೂರು ದಿನಗಳ ಹಿಂದೆ ಕಲ್ಲಿಗನೂರು ಗ್ರಾಮಕ್ಕೆ ವಾಪಸ್ ಆಗಿದ್ದನು. ಆದ್ರೆ ಗ್ರಾಮಕ್ಕೆ ಬಂದ ಬಳಿಕ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಶಾಂತಗೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದನು. ಈ ವೇಳೆ ತಪಾಸಣೆ ಮಾಡಿದ್ದ ವೈದ್ಯರು ಆತನಿಗೆ ಕೊರೊನಾ ವೈರಸ್ ಸೋಂಕು ತಗುಲಿಲ್ಲ ಎಂದು ದೃಢಪಡಿಸಿದ್ದರು.

    ಆದರೂ ಕೊರೊನಾ ವೈರಸ್‍ನ ಲಕ್ಷಣಗಳಾದ ಜ್ವರ, ನೆಗಡಿ, ಕೆಮ್ಮು ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆ ಸೋಂಕು ತಗುಲಿರಬಹುದು ಎಂದು ಗುರುಸಂಗಪ್ಪ ಭಯಗೊಂಡಿದ್ದನು. ಇದೇ ಭಯದಲ್ಲಿ ಮಂಗಳವಾರ ಗ್ರಾಮದ ಹೊರವಲಯದ ಜಮೀನಿನಲ್ಲಿದ್ದ ಹುಣಸೆ ಮರಕ್ಕೆ ಪ್ಲಾಸ್ಟಿಕ್ ಹಗ್ಗದಿಂದ ನೇಣು ಬಿಗಿದುಕೊಂಡು ಗುರುಸಂಗಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಗಜೇಂದ್ರಗಡ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಗುರುಸಂಗಪ್ಪ ತನಗೆ ಕೊರೊನಾ ಸೋಂಕು ತಗುಲಿರಬಹುದು ಎಂದು ಭಯಗೊಂಡಿದ್ದರು, ಆ ಭಯಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಪತ್ನಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಲಾಕ್‍ಡೌನ್ ಎಫೆಕ್ಟ್- ಎಲ್‍ಪಿಜಿ ಗ್ರಾಹಕರ ಹೊರೆ ಕಡಿಮೆಗೊಳಿಸಿದ ಸರ್ಕಾರ

    ಲಾಕ್‍ಡೌನ್ ಎಫೆಕ್ಟ್- ಎಲ್‍ಪಿಜಿ ಗ್ರಾಹಕರ ಹೊರೆ ಕಡಿಮೆಗೊಳಿಸಿದ ಸರ್ಕಾರ

    ನವದೆಹಲಿ: ಕೊರೊನಾ ವೈರಸ್‍ನಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯ ಲಾಭವನ್ನು ಸಾಮಾನ್ಯ ಜನರು ಈಗ ಪಡೆಯುತ್ತಿದ್ದಾರೆ. ನೈಸರ್ಗಿಕ ಅನಿಲದ ಬೆನ್ನಲ್ಲೇ ಅಡಿಗೆ (ಎಲ್‍ಪಿಜಿ) ಅನಿಲದ ಬೆಲೆಯನ್ನು ಕಡಿಮೆ ಮಾಡಲಾಗಿದೆ.

    ದೇಶದ ಅತಿದೊಡ್ಡ ಸರ್ಕಾರಿ ತೈಲ ಕಂಪನಿಯಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್, ರಾಜಧಾನಿಯಲ್ಲಿ ಸಬ್ಸಿಡಿ ರಹಿತ 14.2 ಕೆಜಿ ಎಲ್‍ಪಿಜಿ ಸಿಲಿಂಡರ್ ಬೆಲೆಯನ್ನು ಸಿಲಿಂಡರ್‌ಗೆ 61 ರೂ. ಈ ಕಡಿತಗೊಳಿಸಿದೆ. ಮಾರ್ಚ್ ನಲ್ಲಿ ಒಂದು ಸಿಲೆಂಟರ್ ಬೆಲೆ 805.50 ರೂ. ಇತ್ತು. ಸದ್ಯ ಅದರ ಬೆಲೆ 744 ರೂ.ಗೆ ಇಳಿಕೆಯಾಗಿದೆ. ಹೊಸ ಬೆಲೆಯು ಏಪ್ರಿಲ್ 1ರಿಂದ ಜಾರಿಗೆ ಬಂದಿದೆ.

    ಹೋಳಿ ಹಬ್ಬಕ್ಕೂ ಮುನ್ನ ಅಂದ್ರೆ ಮಾರ್ಚ್ 1ರಿಂದ ಸಬ್ಸಿಡಿ ರಹಿತ 14.2 ಕೆಜಿ ಎಲ್‍ಪಿಜಿ ಸಿಲಿಂಡರ್ ಬೆಲೆಯಲ್ಲಿ 53 ರೂ. ಕಡಿಮೆ ಮಾಡಲಾಗಿತ್ತು. ಇದರಿಂದಾಗಿ ಬೆಲೆಯು 744 ರೂ.ಗೆ ಇಳಿಕೆ ಕಂಡಿತ್ತು. ಇಂದಿನಿಂದ ಮತ್ತೆ 61 ರೂ. ಕಡಿಮೆ ಮಾಡಿರುವುದು ಗ್ರಾಹಕರಿಗೆ ಖುಷಿ ತಂದಿದೆ.

    ಕೋಲ್ಕತ್ತಾದಲ್ಲಿ ಸಬ್ಸಿಡಿ ರಹಿತ 14.2 ಕೆಜಿ ಎಲ್‍ಪಿಜಿ ಸಿಲಿಂಡರ್ ಬೆಲೆಯು 65 ರೂ. ಇಳಿಕೆಯಾಗಿದೆ. ಈ ಮೂಲಕ ಮಾರ್ಚ್ ನಲ್ಲಿ 839.50 ರೂ. ಪಾವತಿಸಬೇಕಿದ್ದ ಗ್ರಾಹಕರು ಇಂದಿನಿಂದ 774.50 ರೂ. ಪಾವತಿಸಬೇಕು. ಮುಂಬೈನಲ್ಲಿ 62 ರೂ. ಇಳಿಕೆಯಾಗಿದ್ದು, 714.50 ರೂ.ಗೆ ಸಬ್ಸಿಡಿ ರಹಿತ ಸಿಲಿಂಡರ್ ಲಭ್ಯವಾಗಲಿದೆ. ಚೆನ್ನೈನಲ್ಲಿ 64.50 ರೂ. ಬೆಲೆ ಕಡಿಮೆಯಾಗಿದ್ದು, ಗ್ರಾಹಕರು ಒಂದು ಸಿಲಿಂಡರ್ ಗೆ 761.50 ರೂ. ಪಾವತಿಸಬೇಕಾಗುತ್ತದೆ.

    ಬೆಂಗಳೂರಿನಲ್ಲಿ ಮಾರ್ಚ್ ವೇಳೆಗೆ ಸಬ್ಸಿಡಿ ರಹಿತ 14.2 ಕೆಜಿ ಎಲ್‍ಪಿಜಿ ಸಿಲಿಂಡರ್ ಬೆಲೆಯು 809 ರೂ. ಇತ್ತು. ಬೆಲೆ ಇಳಿಯಿಂದಾಗಿ 747 ರೂ.ಗೆ ಲಭ್ಯವಾಗಲಿದೆ.

    ಫೆಬ್ರವರಿಯಲ್ಲಿ ಎಲ್‍ಪಿಜಿ ಬೆಲೆ ದಿಢೀರ್ ಹೆಚ್ಚಾದ ನಂತರ ಸರ್ಕಾರ ಗ್ಯಾಸ್ ಸಿಲಿಂಡರ್‌ಗಳ ಮೇಲಿನ ಸಬ್ಸಿಡಿಯನ್ನು ದ್ವಿಗುಣಗೊಳಿಸಿತ್ತು. ರಾಜಧಾನಿ ದೆಹಲಿಯಲ್ಲಿ ಪ್ರತಿ ಸಿಲಿಂಡರ್‍ಗೆ 153.86 ರೂ.ಗಳ ಸಬ್ಸಿಡಿಯನ್ನು 291.48 ರೂ.ಗೆ ಹೆಚ್ಚಿಸಲಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹೇಳಿಕೆ ನೀಡಿತ್ತು. ಅಂತೆಯೇ ಪ್ರಧಾನಿ ಉಜ್ವಲ ಯೋಜನೆ ಅಡಿ ಪ್ರತಿ ಸಿಲಿಂಡರ್‍ಗೆ ಸಬ್ಸಿಡಿಯನ್ನು 174.86 ರೂ.ನಿಂದ 312.48 ರೂ.ಗೆ ಹೆಚ್ಚಿಸಲಾಗಿದೆ. ದೇಶೀಯ ಗ್ರಾಹಕರು ವರ್ಷದಲ್ಲಿ 12 ಸಿಲಿಂಡರ್‌ಗಳಿಗೆ ಸಬ್ಸಿಡಿ ಪಡೆಯುತ್ತಾರೆ. ಇದಕ್ಕಿಂತ ಹೆಚ್ಚಿನದನ್ನು ನೀವು ಖರೀದಿಸಿದರೆ, ಗ್ರಾಹಕರು ಮಾರುಕಟ್ಟೆ ಬೆಲೆಯನ್ನು ಪಾವತಿಸಬೇಕಾಗುತ್ತದೆ.

  • ರಾಜ್ಯದಲ್ಲಿ 101 ಮಂದಿಗೆ ಕೊರೊನಾ – 8 ಮಂದಿ ಡಿಸ್ಚಾರ್ಜ್

    ರಾಜ್ಯದಲ್ಲಿ 101 ಮಂದಿಗೆ ಕೊರೊನಾ – 8 ಮಂದಿ ಡಿಸ್ಚಾರ್ಜ್

    ಬೆಂಗಳೂರು: ಲಾಕ್‍ಡೌನ್ ನಡುವೆಯೂ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಇಂದು ನೂರರ ಗಡಿ ದಾಟಿದೆ. ಇವತ್ತು 10 ಮಂದಿಯಲ್ಲಿ ಸೋಂಕು ಕಂಡುಬಂದಿದೆ.

    ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 101ಕ್ಕೆ ಏರಿಕೆ ಆಗಿದೆ. ಗರ್ಭಿಣಿ ಸೇರಿ 88 ಮಂದಿಗೆ ಐಸೋಲೇಷನ್ ವಾರ್ಡ್ ನಲ್ಲಿ ಇಬ್ಬರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ರಾಜ್ಯದಲ್ಲಿ 43 ಶಂಕಿತರು ಪತ್ತೆಯಾಗಿದ್ದಾರೆ. 37,261 ಮಂದಿಯ ಕ್ವಾರಂಟೇನ್ ಪೂರ್ಣಗೊಂಡಿದ್ದು, ಇನ್ನೂ 25,382 ಮಂದಿ ಹೋಮ್ ಕ್ವಾರಂಟೇನ್‍ನಲ್ಲಿ ಇದ್ದಾರೆ. ಇವರೆಲ್ಲರ ಕೈಗೆ ಸೀಲ್ ಹಾಕಲಾಗಿದೆ. ನಂಜನಗೂಡು, ಚಿಕ್ಕಬಳ್ಳಾಪುರದ ಗೌರಿಬಿದನೂರಿನಲ್ಲಿ ಆತಂಕದ ವಾತಾವರಣ ನಿರ್ಮಾಣ ಆಗಿದೆ.

    ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಮತ್ತೆ ಮೂವರಲ್ಲಿ ಕೊರೊನಾ ಪಾಸಿಟೀವ್ ಕಂಡುಬಂದಿದೆ. ಬೆಂಗಳೂರಿನ ಇಬ್ಬರಿಗೆ, ಕಲಬುರಗಿ, ಗೌರಿಬಿದನೂರು, ಭಟ್ಕಳದ ತಲಾ ಒಬ್ಬರಲ್ಲಿ ಇಂದು ಸೋಂಕು ಕಂಡುಬಂದಿದೆ. ಇವರಲ್ಲಿ ನಾಲ್ವರು ವಿದೇಶದಿಂದ ಮರಳಿದ್ದರೆ, ಐವರು ಸೋಂಕಿತರಿಂದ ಸೋಂಕಿಗೆ ತುತ್ತಾಗಿದ್ದಾರೆ. ಒಬ್ಬರ ಟ್ರಾವೆಲ್ ಹಿಸ್ಟರಿ ತಿಳಿದುಬರಬೇಕಿದೆ.

    ರೋಗಿಗಳಾದ 1, 2, 3, 4, 5, 7, 8 ಮತ್ತು 12 ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ರೋಗಿ 6, 53 ಹಾಗೂ 60 ಮರಣ ಹೊಂದಿದ್ದಾರೆ.

    ಕೊರೊನಾ ಸೋಂಕಿತರ ವಿವರ:
    ರೋಗಿ 89: 52 ವರ್ಷದ ಪುರುಷ, ಹೊಸಪೇಟೆ-ಬಳ್ಳಾರಿ ಜಿಲ್ಲೆಯ ನಿವಾಸಿಯಾಗಿದ್ದು, ಇವರು ಮಾರ್ಚ್ 16ರಂದು ಬೆಂಗಳೂರು ಜಿಲ್ಲೆಗೆ ಪ್ರಯಾಣಿಸಿದ ಪ್ರಯಾಣ ಹಿನ್ನಲೆ ಇರುತ್ತದೆ. ಇವರನ್ನು ಬಳ್ಳಾರಿಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.

    ರೋಗಿ 90: 48 ವರ್ಷದ ಮಹಿಳೆ, ಹೊಸಪೇಟೆ-ಬಳ್ಳಾರಿ ಜಿಲ್ಲೆಯ ನಿವಾಸಿಯಾಗಿದ್ದು, ಇವರು ಮಾರ್ಚ್ 16ರಂದು ಬೆಂಗಳೂರು ಜಿಲ್ಲೆಗೆ ಪ್ರಯಾಣಿಸಿದ ಪ್ರಯಾಣ ಹಿನ್ನಲೆ ಇರುತ್ತದೆ. ಇವರನ್ನು ಬಳ್ಳಾರಿಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.

    ರೋಗಿ 91: 26 ವರ್ಷದ ಮಹಿಳೆ, ಹೊಸಪೇಟೆ-ಬಳ್ಳಾರಿ ಜಿಲ್ಲೆಯ ನಿವಾಸಿಯಾಗಿದ್ದು, ಇವರು ಮಾರ್ಚ್ 16ರಂದು ಬೆಂಗಳೂರು ಜಿಲ್ಲೆಗೆ ಪ್ರಯಾಣಿಸಿದ ಪ್ರಯಾಣ ಹಿನ್ನಲೆ ಇರುತ್ತದೆ. ಇವರನ್ನು ಬಳ್ಳಾರಿಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.

    ರೋಗಿ 92: 40 ವರ್ಷದ ಪುರುಷ, ಬೆಂಗಳೂರು ಜಿಲ್ಲೆಯ ನಿವಾಸಿಯಾಗಿದ್ದು (ಪ್ರಕರಣ 59-ಗಂಡ). ಇವರನ್ನು ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.

    ರೋಗಿ 93: 19 ವರ್ಷದ ಪುರುಷ, ಬೆಂಗಳೂರು ಜಿಲ್ಲೆಯ ನಿವಾಸಿಯಾಗಿದ್ದು, ನ್ಯೂಯಾರ್ಕ್, ಯು.ಎಸ್.ಎ.ದಿಂದ ಮಾರ್ಚ್ 22ರಂದು ಭಾರತಕ್ಕೆ ವಾಪಸ್ ಆಗಿರುವ ಪ್ರಯಾಣ ಹಿನ್ನಲೆ ಇರುತ್ತದೆ. ಇವರನ್ನು ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.

    ರೋಗಿ 94: 40 ವರ್ಷದ ಮಹಿಳೆ, ಗೌರಿಬಿದನೂರು-ಚಿಕ್ಕಬಳ್ಳಾಪುರ ಜಿಲ್ಲೆಯ ನಿವಾಸಿಯಾಗಿರುತ್ತಾರೆ. ಇವರನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.

    ರೋಗಿ 95: 35 ವರ್ಷದ ಪುರುಷ, ಮೈಸೂರು ಜಿಲ್ಲೆಯ ನಿವಾಸಿಯಾಗಿರುತ್ತಾರೆ (ಪ್ರಕರಣ 52 ಸಂಪರ್ಕಿತ). ಇವರನ್ನು ಮೈಸೂರು ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.

    ರೋಗಿ 96: 41 ವರ್ಷದ ಪುರುಷ, ಮೈಸೂರು ಜಿಲ್ಲೆಯ ನಿವಾಸಿಯಾಗಿರುತ್ತಾರೆ (ಪ್ರಕರಣ 52 ಸಂಪರ್ಕಿತ). ಇವರನ್ನು ಮೈಸೂರು ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.

    ರೋಗಿ 97: 34 ವರ್ಷದ ಪುರುಷ, ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿಯಾಗಿದ್ದು, ದುಬೈಗೆ ಪ್ರಯಾಣ ಬೆಳಸಿ ಮಾರ್ಚ್ 18ರಂದು ಭಾರತಕ್ಕೆ ಹಿಂದಿರುಗಿರುವ ಪ್ರಯಾಣ ಹಿನ್ನಲೆ ಇರುತ್ತದೆ. ಇವರನ್ನು ದಕ್ಷಿಣ ಕನ್ನಡ ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.

    ರೋಗಿ 98: 26 ವರ್ಷದ ಪುರುಷ, ಭಟ್ಕಳ-ಉತ್ತರ ಕನ್ನಡ ಜಿಲ್ಲೆಯ ನಿವಾಸಿಯಾಗಿದ್ದು, ದುಬೈಗೆ ಪ್ರಯಾಣ ಬೆಳಸಿ ಮಾರ್ಚ್ 20ರಂದು ಭಾರತಕ್ಕೆ ಹಿಂದಿರುಗಿರುವ ಪ್ರಯಾಣ ಹಿನ್ನಲೆ ಇರುತ್ತದೆ. ಇವರನ್ನು ಉತ್ತರ ಕನ್ನಡ ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.

    ರೋಗಿ 99: 60 ವರ್ಷದ ಮಹಿಳೆ, ಕಲಬುರ್ಗಿ ಜಿಲ್ಲೆಯ ನಿವಾಸಿಯಾಗಿರುತ್ತಾರೆ (ಪ್ರಕರಣ 9 ಪತ್ನಿ). ಇವರನ್ನು ಕಲಬುರ್ಗಿ ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.

    ರೋಗಿ 100: 40 ವರ್ಷದ ಪುರುಷ, ಬಿಬಿಎಂಪಿ- ಬೆಂಗಳೂರಿನ ನಿವಾಸಿಯಾಗಿದ್ದು, ದುಬೈಗೆ ಪ್ರಯಾಣ ಬೆಳಸಿ ಮಾರ್ಚ್ 20ರಂದು ಭಾರತಕ್ಕೆ ಹಿಂದಿರುಗಿರುವ ಪ್ರಯಾಣ ಹಿನ್ನಲೆ ಇರುತ್ತದೆ. ಇವರನ್ನು ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.

    ರೋಗಿ 101: 62 ವರ್ಷದ ಮಹಿಳೆ, ಬೆಂಗಳೂರಿನ ನಿವಾಸಿಯಾಗಿರುತ್ತಾರೆ. ವಿವರವಾದ ವೈದ್ಯಕೀಯ ತನಿಖೆಯು ಪ್ರಗತಿಯಲ್ಲಿರುತ್ತದೆ ಮತ್ತು ಇವರನ್ನು ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.

    ಕರ್ನಾಟಕದಲ್ಲಿ ಒಟ್ಟು ಪತ್ತೆ ಮಾಡಲಾಗಿರುವ 101 ಪ್ರಕರಣಗಳಲ್ಲಿ 6 ಪ್ರಕರಣಗಳು ಕೇರಳದವರಾಗಿದ್ದು, ಅವರು ಕರ್ನಾಟಕದ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಕರ್ನಾಟಕದಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರ್ನಾಟಕದಲ್ಲಿ ಈ ದಿನದವರೆಗೆ, 1,28,315 ಹೊರದೇಶದಿಂದ ಪ್ರಯಾಣಿಕರನ್ನು ತಪಾಸಣೆ ಮಾಡಲಾಗಿದೆ.

    ಹೋಮ್ ಕ್ವಾರೆಂಟೈನ್ ಜಾರಿ ತಂಡದವರು, ಸಾರ್ವಜನಿಕರಿಂದ ಪಡೆದ ದೂರುಗಳ ಮೇರೆಗೆ ಸೋಮವಾರ 49 ವ್ಯಕ್ತಿಗಳನ್ನು ಸಂಸ್ಥೆಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಇದೂವರೆಗೂ ಒಟ್ಟು 193 ವ್ಯಕ್ತಿಗಳನ್ನು ಮನೆ ಕ್ವಾರಂಟೈನ್‍ನಿಂದ ನಿಗದಿತ ಸಂಸ್ಥೆಗಳಲ್ಲಿ ಕ್ವಾರಂಟೈನ್‍ಗೆ ವರ್ಗಾವಣೆ ಮಾಡಿರುತ್ತಾರೆ.

  • ಕೊರೊನಾ ಬಗ್ಗೆ ರಾಮನಗರ ಜನ ಭಯಪಡೋ ಅವಶ್ಯಕತೆಯಿಲ್ಲ: ಮಾಜಿ ಸಿಎಂ

    ಕೊರೊನಾ ಬಗ್ಗೆ ರಾಮನಗರ ಜನ ಭಯಪಡೋ ಅವಶ್ಯಕತೆಯಿಲ್ಲ: ಮಾಜಿ ಸಿಎಂ

    ರಾಮನಗರ: ಕೊರೊನಾ ತಡೆಗೆ ರಾಮನಗರ ಜಿಲ್ಲಾಡಳಿತದಿಂದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡ ಪರಿಣಾಮವಾಗಿ ಜಿಲ್ಲೆಯಲ್ಲಿ ಈವರೆಗೆ 200ಕ್ಕೂ ಹೆಚ್ಚು ಜನರು ಹೋಮ್ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ. ಗಂಭೀರವಾದ ಪ್ರಕರಣವಾಗಲಿ, ಪಾಸಿಟಿವ್ ಪ್ರಕರಣಗಳು ಕಂಡುಬಂದಿಲ್ಲ. ಹೀಗಾಗಿ ಸಾರ್ವಜನಿಕರು ಭಯಭೀತರಾಗುವಂತಹ ಅವಶ್ಯಕತೆಯಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

    ನಗರದಲ್ಲಿ ಮಾತನಾಡಿದ ಕುಮಾರಸ್ವಾಮಿ, ಜಿಲ್ಲಾಸ್ಪತ್ರೆಯಲ್ಲಿ ಒಟ್ಟು 26 ಮಂದಿ ವೈದ್ಯಾಧಿಕಾರಿಗಳು ಇದ್ದು, 4 ಜನ ವೈದ್ಯರ ಕೊರತೆ ಇದೆ. ವೈದ್ಯರ ಮೂರು ಬ್ಯಾಚ್‍ಗಳನ್ನು ಮಾಡಿ ಕೆಲಸ ಮಾಡಿಸಲಾಗುತ್ತಿದೆ. ಜಿಲ್ಲಾಧಿಕಾರಿಗಳು ಕೋವಿಡ್- 19 ವಿರುದ್ಧ ಹೋರಾಟಕ್ಕೆ ಒಳ್ಳೆಯ ಕ್ರಮ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು.

    ಜಿಲ್ಲೆಯಲ್ಲಿ ಗಂಭೀರವಾದ ಪ್ರಕರಣವಾಗಲಿ, ಪಾಸಿಟಿವ್ ಪ್ರಕರಣಗಳು ಕಂಡುಬಂದಿಲ್ಲ. ಹೀಗಾಗಿ ಸಾರ್ವಜನಿಕರು ಭಯಭೀತರಾಗುವಂತಹ ಅವಶ್ಯಕತೆಯಿಲ್ಲ ಎಂದಿದ್ದಾರೆ. ದೇಶವೇ ಲಾಕ್‍ಡೌನ್ ಆಗಿರುವುದರಿಂದ ರಾಮನಗರ ಜಿಲ್ಲೆಯಲ್ಲಿ ಅನೇಕ ಕಾರ್ಮಿಕರು, ನಿರ್ಗತಿಕರಿಗೆ ಸಂಕಷ್ಟ ಎದುರಾಗಿದೆ. ಇಂಡಸ್ಟ್ರಿಯಲ್ ಏರಿಯಾದಲ್ಲಿನ ನಿರ್ಗತಿಕರಿಗೆ ಎನ್‍ಜಿಓ ಮೂಲಕ ಸಹಾಯವಾಗುತ್ತಿದೆ. ಈ ಕುರಿತು ನಮ್ಮಿಂದ ಹೇಗೆ ಸಹಾಯ ಮಾಡಬಹುದು ಅನ್ನೋದರ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದರು.

    ಎಪಿಎಂಸಿಯಲ್ಲಿ ರೈತರಿಗೆ ಸಮಸ್ಯೆ ಆಗದಂತೆ ಕ್ರಮ ಜರುಗಿಸಲು ಸೂಚಿಸಿದ್ದೇನೆ. ಈಗಾಗಲೇ ಬೆಳಗಾವಿ ಚಿಂಚೊಳ್ಳಿಯಲ್ಲಿ ಕಲ್ಲಂಗಡಿ ಬೆಳೆದ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಬಗ್ಗೆ ಸಹ ನಾನು ಮಾಹಿತಿ ಕಲೆ ಹಾಕಿದ್ದೇನೆ. ರೇಷ್ಮೆ ಗೂಡು ಬೆಳೆಗಾರರ ಬಗ್ಗೆ ಸಿಎಂ ಜತೆ ಚರ್ಚೆ ಮಾಡಿದ್ದೇನೆ. ರಾಮನಗರ ಮಾತ್ರವಲ್ಲದೆ ರಾಜ್ಯದಲ್ಲಿ ಬೆಳೆಗಾರರ ಅನುಕೂಲಕ್ಕಾಗಿ ಕ್ರಮಕ್ಕೆ ಆಗ್ರಹಿಸಿದ್ದೇವೆ. ಕಳೆದ ಮೂರು ದಿನಗಳಿಂದ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದೇವೆ. ರೈತರಿಗೆ ಅನುಕೂಲವಾಗುವಂತೆ ಕ್ರಮಕ್ಕೆ ಅನುವು ಮಾಡಿಕೊಳ್ಳಲು ರಾಜ್ಯ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.

    ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಕೆಲ ಸಾರ್ವಜನಿಕರ ಒತ್ತಾಯ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕೆಲವರು ಮದ್ಯ ವ್ಯಸನಿಗಳಿದ್ದಾರೆ. ಏಕಾಏಕಿ ಮದ್ಯ ನಿಲ್ಲಿಸಿದ್ದರಿಂದ ಮದ್ಯವ್ಯಸನಿಗಳ ದೇಹದ ಮೇಲೆ ಪರಿಣಾಮ ಬೀರುತ್ತದೆ ಎಂದು ವೈದ್ಯರು ತಿಳಿಸಿರುವುದಾಗಿ ಹೇಳಿದರು. ಈ ಬಗ್ಗೆ ಸರ್ಕಾರ ಸೂಕ್ತ ತೀರ್ಮಾನಕ್ಕೆ ಮುಂದಾಗಿದೆ. ಮದ್ಯವ್ಯಸನಿಗಳಿಗೆ ನಿಮಾನ್ಸ್ ನಲ್ಲಿ ಕೌನ್ಸಿಲಿಂಗ್ ಮಾಡಲು ವ್ಯವಸ್ಥೆ ಮಾಡುತ್ತಿದ್ದಾರೆ ಎಂದರು.

    ರಾಮನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೊರೊನಾ ತಡೆಗೆ ಮುಂಜಾಗ್ರತಾ ಕ್ರಮ ಹಾಗೂ ಲಾಕ್‍ಡೌನ್ ನಿಂದ ಸಂಕಷ್ಟದಲ್ಲಿರುವ ನಿರ್ಗತಿಕರು, ಬಡವರ ಅನುಕೂಲಕ್ಕಾಗಿ ಜನಪ್ರತಿನಿಧಿಗಳಿಂದ ಕೂಲಿ ಕಾರ್ಮಿಕರಿಗೆ ನೆರವು ನೀಡಲು ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಶಾಸಕರಾದ ಅನಿತಾ ಕುಮಾರಸ್ವಾಮಿ, ಎ.ಮಂಜುನಾಥ್, ಸಂಸದ ಡಿ.ಕೆ ಸುರೇಶ್ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

  • ಬೆಂಗ್ಳೂರಿನಿಂದ ಬಂದ ವ್ಯಕ್ತಿ ಏಕಾಏಕಿ ಸಾವು- ಭಯಭೀತರಾಗಿರುವ ಗ್ರಾಮಸ್ಥರು

    ಬೆಂಗ್ಳೂರಿನಿಂದ ಬಂದ ವ್ಯಕ್ತಿ ಏಕಾಏಕಿ ಸಾವು- ಭಯಭೀತರಾಗಿರುವ ಗ್ರಾಮಸ್ಥರು

    ರಾಯಚೂರು: ಬೆಂಗಳೂರಿನಿಂದ ಬಂದ ವ್ಯಕ್ತಿ ಏಕಾಏಕಿ ಸಾವನ್ನಪ್ಪಿದ ಹಿನ್ನೆಲೆ ಮೃತ ವ್ಯಕ್ತಿಯ ಮನೆ ಹತ್ತಿರ ಸುಳಿಯಲು ಗ್ರಾಮಸ್ಥರು ಹಾಗೂ ಸಂಬಂಧಿಕರು ಹೆದರಿಕೊಂಡಿರುವ ಘಟನೆ ಲಿಂಗಸೂಗೂರು ತಾಲೂಕಿನ ರೋಡಲಬಂಡಾ ಗ್ರಾಮದಲ್ಲಿ ನಡೆದಿದೆ.

    ಮಲ್ಲಪ್ಪ ತಳವಾರ (54) ಇಂದು ಮಧ್ಯಾಹ್ನ ಬೆಂಗಳೂರಿನಿಂದ ದೇವದುರ್ಗದ ಸೋಮನಮರಡಿ ಗ್ರಾಮದಲ್ಲಿ ತನ್ನ ಮಗಳ ಮನೆಗೆ ಬಂದಿದ್ದರು. ಬಳಿಕ ತನ್ನ ಊರಾದ ಲಿಂಗಸುಗೂರಿನ ರೋಡಲಬಂಡಾಗೆ ಬಂದು ಎರಡು ಗಂಟೆಯಲ್ಲಿ ಸಾವನ್ನಪ್ಪಿದ್ದಾರೆ. ಇದರಿಂದ ವ್ಯಕ್ತಿ ಕೊರೊನಾ ವೈರಸ್‍ನಿಂದ ಸಾವನ್ನಪ್ಪಿದ್ದಾನೆಂದು ಭಾವಿಸಿರುವ ಗ್ರಾಮಸ್ಥರು ಭಯಗೊಂಡಿದ್ದಾರೆ.

    ಮೃತ ದೇಹದ ಬಳಿ ಹೋಗಲು ಗ್ರಾಮಸ್ಥರು ಹಾಗೂ ಸಂಬಂಧಿಕರು ಹಿಂದೇಟು ಹಾಕಿದರು. ಮೃತ ದೇಹವನ್ನು ದೂರದಿಂದಲೇ ವೀಕ್ಷಣೆ ಮಾಡಿದರು. ಈ ಕುರಿತು ಸ್ಥಳೀಯರು ಮಾಹಿತಿ ನೀಡಿದ ತಕ್ಷಣ ಲಿಂಗಸೂಗೂರು ತಾಲೂಕಾ ವೈದ್ಯಾಧಿಕಾರಿ ಡಾ.ನಂದಕುಮಾರ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ವ್ಯಕ್ತಿಯ ಸಾವಿನ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದು, ಸಾವಿಗೆ ಇನ್ನೂ ಕಾರಣ ತಿಳಿದುಬಂದಿಲ್ಲ. ತಾಲೂಕು ವೈದ್ಯಾಧಿಕಾರಿ, ಲಿಂಗಸುಗೂರು ತಹಶೀಲ್ದಾರ್ ಗ್ರಾಮದಲ್ಲಿ ಪರಿಶೀಲನೆ ಮುಂದುವರಿಸಿದ್ದಾರೆ. ಜೊತೆಗೆ ಮಲ್ಲಪ್ಪ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಾಯಚೂರು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದ್ದು, ಕುಟುಂಬಸ್ಥರನ್ನು ಹೋಮ್ ಕ್ವಾರೆಂಟೈನ್‍ನಲ್ಲಿ ಇರಿಸಲಾಗಿದೆ.

  • ಕೊರೊನಾ ಎಫೆಕ್ಟ್- ಮದ್ಯ ಸಿಗದಿದ್ದಕ್ಕೆ ನೇಣಿಗೆ ಶರಣು

    ಕೊರೊನಾ ಎಫೆಕ್ಟ್- ಮದ್ಯ ಸಿಗದಿದ್ದಕ್ಕೆ ನೇಣಿಗೆ ಶರಣು

    ರಾಮನಗರ: ಮದ್ಯ ಸಿಗದೇ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಅತ್ಮಹತ್ಯೆಗೆ ಶರಣಾದ ಘಟನೆ ಮಾಗಡಿ ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ನಡೆದಿದೆ.

    ಹುಲಿಕೆರೆ ಗ್ರಾಮದ ನಿವಾಸಿ ರಮೇಶ್ (35) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‍ಡೌನ್ ಮಾಡಲಾಗಿದ್ದು, ಮದ್ಯ ಪ್ರಿಯರಿಗೆ ಎಣ್ಣೆ ಸಿಗದಂತಾಗಿದೆ. ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ವೈನ್ ಸ್ಟೋರ್, ಬಾರ್ ಅಂಡ್ ರೆಸ್ಟೋರೆಂಟ್, ಎಂಎಸ್‍ಐಎಲ್ ಮಳಿಗೆಗಳಿಗೆ ಬೀಗ ಜಡಿಯಲಾಗಿದೆ.

    ಕಳೆದು ಮೂರು ದಿನಗಳಿಂದ ಮದ್ಯಕ್ಕಾಗಿ ಹುಡುಕಾಡ ನಡೆಸಿದ್ದ ರಮೇಶ್ ಇಂದು ಸಹ ಬೆಳಗ್ಗೆ 6 ಗಂಟೆಯಿಂದಲೇ ಹುಲಿಕಲ್ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹುಡುಕಾಡಿದ್ದರೂ ಎಣ್ಣೆ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿ ಗ್ರಾಮದ ಹೊರವಲಯದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

    ರಮೇಶ್‍ಗೆ ವಿವಾಹವಾಗಿದ್ದು ಪತ್ನಿ ಮತ್ತು ಮಕ್ಕಳು ಆತನನ್ನು ತೊರೆದಿದ್ದರು. ಇದರಿಂದಾಗಿ ಮದ್ಯಕ್ಕೆ ದಾಸನಾಗಿದ್ದ. ದಿನವೂ ಕೂಲಿ ಮಾಡಿದ ಹಣವನ್ನ ಮದ್ಯ ಖರೀಸಿದ ಕುಡಿಯುತ್ತಿದ್ದ ಎಂದು ಗ್ರಾಮಸ್ಥರು ದೂರಿದ್ದಾರೆ. ಈ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿದ ಕುದೂರು ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.