Tag: Coronavirus

  • ಪ್ರವಾಸ ಮಾಡದಿದ್ರೂ ಕಿರಾಣಿ ಅಂಗಡಿಯವನಿಗೂ ಕೊರೊನಾ ಪಾಸಿಟಿವ್

    ಪ್ರವಾಸ ಮಾಡದಿದ್ರೂ ಕಿರಾಣಿ ಅಂಗಡಿಯವನಿಗೂ ಕೊರೊನಾ ಪಾಸಿಟಿವ್

    ಬಾಗಲಕೋಟೆ: ಯಾವುದೇ ದೇಶ, ರಾಜ್ಯ, ಜಿಲ್ಲೆ ಪ್ರವಾಸ ಮಾಡದಿದ್ದರೂ ಜಿಲ್ಲೆಯಲ್ಲಿ ಓರ್ವನಿಗೆ ಕೊರೊನಾ ಪಾಸಿಟಿವ್ ಬಂದಿದೆ.

    70 ವರ್ಷದ ವೃದ್ಧ ಕಿರಾಣಿ ವ್ಯಾಪಾರಸ್ಥನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈತ ಜ್ವರ, ನೆಗಡಿ, ಕೆಮ್ಮು ಅಂತ ಮೊದಲು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದನು. ಆದರೆ ಕೊರೊನಾ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆ ವೈದ್ಯರು ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದರು. ಮೂರು ದಿನದ ಹಿಂದೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದನು. ನಂತರ ಬುಧವಾರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು.

    ಇದೀಗ ಗಂಟಲು ದ್ರವ ಪರೀಕ್ಷೆಯಿಂದ ಕೊರೊನಾ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಸ್ಪಷ್ಟಪಡಿಸಿದ್ದಾರೆ. ಬುಧವಾರ ಮೂರು ವ್ಯಕ್ತಿಗಳ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಮೂರು ಸ್ಯಾಂಪಲ್ ವರದಿಗಳ ಪೈಕಿ ಒಂದು ಪಾಸಿಟಿವ್ ಧೃಡಪಟ್ಟಿದೆ. ಉಳಿದ ಎರಡು ಸ್ಯಾಂಪಲ್ ನೆಗೆಟಿವ್ ಎಂದು ವರದಿಯಾಗಿದೆ. ಸದ್ಯ ಕೋವಿಡ್-19 ಸೋಂಕಿತ ವ್ಯಕ್ತಿಯನ್ನು ಜಿಲ್ಲಾ ಆಸ್ಪತ್ರೆಯ ಐಸೋಲೇಷನ್ ವಾರ್ಡಿನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಧೃಡಪಟ್ಟ ಹಿನ್ನೆಲೆಯಲ್ಲಿ ಸೋಂಕಿತ ವ್ಯಕ್ತಿಯ ಮನೆಯ ಹಾಗೂ ಏರಿಯಾ ಕ್ವಾರಂಟೈನ್ ಮಾಡಲಾಗುತ್ತಿದೆ. ಜೊತೆಗೆ ಸಂಬಂಧಿಕರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ. ಯಾರೂ ಹೊರಗೆ, ಒಳಗೆ ಬರಲಾರದ ಹಾಗೆ ಜಾಗೃತಿ ವಹಿಸಲಾಗಿದೆ.

    ಇಂದಿನಿಂದ ಮಾರ್ಕೆಟ್, ವ್ಯಾಪಾರ ಎಲ್ಲವೂ ಸಂಪೂರ್ಣ ಬಂದ್ ಆಗಲಿದೆ. ಸೋಂಕಿತ ವ್ಯಕ್ತಿ ಎಲ್ಲಿಯೂ ಹೋಗಿರುವ ಇತಿಹಾಸವಿಲ್ಲ. ಆದರೆ ಸೋಂಕಿತ ವ್ಯಕ್ತಿಯ ಮಗ ಎಂಟು ದಿನಗಳ ಹಿಂದೆ ಬೆಂಗಳೂರಿನಿಂದ ಬಂದಿರುವ ಮಾಹಿತಿ ಇದೆ. ಪೊಲೀಸರು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಮಗನ ಬಗ್ಗೆ, ಬೆಂಗಳೂರಲ್ಲಿ ಆತ ಓಡಾಡಿರುವ ಜಾಗದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಎಸ್.ಪಿ ಲೋಕೇಶ್ ಜಗಲಾಸರ್ ಆಡಿಯೋ ಮೂಲಕ ಮಾಹಿತಿ ನೀಡಿದ್ದಾರೆ.

  • ನಂಜನಗೂಡಿನಿಂದ ಬಂದ ಬಳ್ಳಾರಿಯ ಬಾಲಕನಿಗೆ ಸೋಂಕು – ರಾಜ್ಯದಲ್ಲಿ 124ಕ್ಕೆ ಏರಿಕೆ

    ನಂಜನಗೂಡಿನಿಂದ ಬಂದ ಬಳ್ಳಾರಿಯ ಬಾಲಕನಿಗೆ ಸೋಂಕು – ರಾಜ್ಯದಲ್ಲಿ 124ಕ್ಕೆ ಏರಿಕೆ

    ಬೆಂಗಳೂರು: 14 ವರ್ಷದ ಬಾಲಕ ಸೇರಿದಂತೆ ಇಂದು ಒಟ್ಟು 14 ಮಂದಿಗೆ ಕೊರೊನಾ ಬಂದಿದ್ದು ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 124ಕ್ಕೆ ಏರಿಕೆಯಾಗಿದೆ.

    ಗಣಿ ನಾಡು ಬಳ್ಳಾರಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ನಂಜನಗೂಡು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದವರ ರೋಗಿ 81ನೇ ವ್ಯಕ್ತಿ ಪುತ್ರನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದನ್ನೂ ಓದಿ: ದೆಹಲಿಯ ಜಮಾತ್ ಸಭೆಯಿಂದ ದೇಶಾದ್ಯಂತ ಕೊರೊನಾ ಹರಡಿದ್ದು ಹೇಗೆ?

    14 ವರ್ಷದ ಬಾಲಕ ಪೋಷಕರ ಸ್ನೇಹಿತರೊಂದಿಗೆ ವಿವಿಧ ವಾಹನಗಳನ್ನು ಬಳಸಿಕೊಂಡು ನಾಲ್ಕು ದಿನಗಳ ಹಿಂದೆ ನಂಜನಗೂಡಿನಿಂದ ಬಳ್ಳಾರಿ ಜಿಲ್ಲೆಯ ಸಿರಗುಪ್ಪಾ ನಗರಕ್ಕೆ ಆಗಮಿಸಿದ್ದ. ಹೀಗಾಗಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ನಂಜನಗೂಡಿನಿಂದ ಬಂದ ಮೂವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇಂದು ಮೂವರ ಪರೀಕ್ಷೆ ವರದಿ ಬಂದಿದ್ದು, ಅವರಲ್ಲಿ ಬಾಲಕನಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ಈ ಮೂಲಕ ಬಳ್ಳಾರಿ ಜಿಲ್ಲೆಯ ಸೋಂಕಿತರ ಸಂಖ್ಯೆ ನಾಲ್ಕಕ್ಕೆ ಏರಿಕೆ ಆಗಿದೆ.

    ಜಿಲ್ಲಾಡಳಿತ ನಂಜನಗೂಡಿನಿಂದ ಬಂದ ಈ ಮೂವರನ್ನು ಬಳ್ಳಾರಿಗೆ ಬಂದ ಕೂಡಲೇ ಚಿಕಿತ್ಸೆಗೆ ಒಳಪಡಿಸಿ ಪ್ರತ್ಯೇಕವಾಗಿ ವಾರ್ಡ್ ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗಿದೆ. ಹೀಗಾಗಿ ಸೋಂಕಿತರು ಬೇರೆ ಯಾರನ್ನು ಸಂಪರ್ಕ ಮಾಡಲು ಬಿಟ್ಟಿಲ್ಲ. ದೆಹಲಿಯ ಜಮಾತ್‍ಗೆ ತೆರಳಿದ್ದ ಬೀದರಿನ 9 ಮಂದಿ ಜೊತೆ ಒಬ್ಬರ ಪತ್ನಿಗೂ ಕೊರೊನಾ ಬಂದಿದೆ. ಇದನ್ನೂ ಓದಿ:  ಎಲ್ಲೆಂದರಲ್ಲಿ, ಡಾಕ್ಟರ್ ಮೇಲೆ ಉಗುಳುತ್ತಿದ್ದಾರೆ ದೆಹಲಿ ಮಸೀದಿಯ ಕ್ವಾರಂಟೈನ್‍ಗಳು

    ರೋಗಿ 111: ಮೈಸೂರಿನ 24 ವರ್ಷದ ಪುರುಷರಾಗಿದ್ದು, ರೋಗಿ 88 (ರೂಮ್‍ಮೇಟ್) ಸಂಪರ್ಕಿತರಾಗಿದ್ದರು. ಅವರನ್ನು ಮೈಸೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇದನ್ನೂ ಓದಿ: ಆಸ್ಪತ್ರೆಯಲ್ಲಿ ಕ್ವಾರಂಟೈನ್‍ಗಳಿಂದ ನಮಾಜ್

    ರೋಗಿ 112: ಮೈಸೂರಿನ 22 ವರ್ಷದ ಪುರುಷರಾಗಿದ್ದು, ರೋಗಿ 88 (ರೂಮ್‍ಮೇಟ್) ಸಂಪರ್ಕಿತರಾಗಿದ್ದು ಮೈಸೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ರೋಗಿ 113: ಬಳ್ಳಾರಿಯ 14 ವರ್ಷದ ಬಾಲಕ ರೋಗಿ 81ನೇ ವ್ಯಕ್ತಿಯ ಮಗನಾಗಿದ್ದು ಬಳ್ಳಾರಿ ಆಸ್ಪತ್ರೆ ನಿಗಾ ಇಡಲಾಗಿದೆ. ಇದನ್ನೂ ಓದಿ: ದೇಶದಲ್ಲಿ 2,400ಕ್ಕೂ ಹೆಚ್ಚು ಜನರಿಗೆ ಕೊರೊನಾ – ಇನ್ನೆರಡು ವಾರದಲ್ಲೇ 10,000 ತಲುಪೋ ಸಾಧ್ಯತೆ

     ರೋಗಿ 114: ಬೀದರ್‍ನ ಬಿಲಾಲ್ ಕಾಲೋನಿ ನಿವಾಸಿ 48 ವರ್ಷದ ಪುರುಷನಾಗಿದ್ದು, ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾರ್ಚ್ 13ರಿಂದ 18ರವರೆಗೆ ಭಾಗವಹಿಸಿದ್ದರು. ಸದ್ಯ ಅವರನ್ನು ಬೀದರ್‍ನಲ್ಲಿ ಗೊತ್ತುಪಡಿಸಿದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ರೋಗಿ 115: ಬೀದರ್ ಲಾಲ್ವಾಡಿ ರಸ್ತೆಯ ನಿವಾಸಿ 30 ಪುರುಷನಾಗಿದ್ದು, ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾರ್ಚ್ 13ರಿಂದ 18ರವರೆಗೆ ಭಾಗವಹಿಸಿದ್ದರು. ಸದ್ಯ ಅವರನ್ನು ಬೀದರ್‍ನಲ್ಲಿ ಗೊತ್ತುಪಡಿಸಿದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ರೋಗಿ 116: 41 ಪುರುಷ ಶಹಗುಂಜ್, ಬೀದರ್ ನಿವಾಸಿಯಾಗಿದ್ದಾರೆ. ಅವರು ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾರ್ಚ್ 13ರಿಂದ 18ರವರೆಗೆ ಭಾಗವಹಿಸಿದ್ದರು. ಸದ್ಯ ಅವರನ್ನು ಬೀದರ್‍ನಲ್ಲಿ ಗೊತ್ತುಪಡಿಸಿದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ರೋಗಿ 117: 66 ಪುರುಷ ಗೊಲೆಕ್ಬಾನಾ, ಬೀದರ್ ನಿವಾಸಿ. ಅವರು ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾರ್ಚ್ 13ರಿಂದ 18ರವರೆಗೆ ಭಾಗವಹಿಸಿದ್ದರು. ಸದ್ಯ ಅವರನ್ನು ಬೀದರ್‍ನಲ್ಲಿ ಗೊತ್ತುಪಡಿಸಿದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ರೋಗಿ 118: 59 ಪುರುಷ ಬಸವಕಲ್ಯಾಣ್, ಬೀದರ್ ನಿವಾಸಿ. ಅವರು ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾರ್ಚ್ 13ರಿಂದ 18ರವರೆಗೆ ಭಾಗವಹಿಸಿದ್ದರು. ಸದ್ಯ ಅವರನ್ನು ಬೀದರ್‍ನಲ್ಲಿ ಗೊತ್ತುಪಡಿಸಿದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ರೋಗಿ 119: 39 ಪುರುಷ ಪಹೇಲಿ ಚೌಕಿ, ಹೈದರಾಬಾದ್ ನಿವಾಸಿ. ಅವರು ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾರ್ಚ್ 13ರಿಂದ 18ರವರೆಗೆ ಭಾಗವಹಿಸಿದ್ದರು. ಸದ್ಯ ಅವರನ್ನು ಬೀದರ್‍ನಲ್ಲಿ ಗೊತ್ತುಪಡಿಸಿದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ರೋಗಿ 120: 60 ಪುರುಷ ಬೀದರ್ ನಿವಾಸಿ. ಅವರು ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾರ್ಚ್ 13ರಿಂದ 18ರವರೆಗೆ ಭಾಗವಹಿಸಿದ್ದರು. ಸದ್ಯ ಅವರನ್ನು ಬೀದರ್‍ನಲ್ಲಿ ಗೊತ್ತುಪಡಿಸಿದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ರೋಗಿ 121: 63 ಪುರುಷ ಬೀದರ್ ನಿವಾಸಿ. ಅವರು ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾರ್ಚ್ 13ರಿಂದ 18ರವರೆಗೆ ಭಾಗವಹಿಸಿದ್ದರು. ಸದ್ಯ ಅವರನ್ನು ಬೀದರ್‍ನಲ್ಲಿ ಗೊತ್ತುಪಡಿಸಿದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ರೋಗಿ 122: 73 ಪುರುಷ ಕಿರಮಣಿ ಕಾಲೋನಿ, ಬೀದರ್ ನಿವಾಸಿ. ಅವರು ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾರ್ಚ್ 13ರಿಂದ 18ರವರೆಗೆ ಭಾಗವಹಿಸಿದ್ದರು. ಸದ್ಯ ಅವರನ್ನು ಬೀದರ್‍ನಲ್ಲಿ ಗೊತ್ತುಪಡಿಸಿದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

    ರೋಗಿ 123: 45 ಪುರುಷ ಬೀದರ್ ನಿವಾಸಿ. ಅವರು ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾರ್ಚ್ 13ರಿಂದ 18ರವರೆಗೆ ಭಾಗವಹಿಸಿದ್ದರು. ಸದ್ಯ ಅವರನ್ನು ಬೀದರ್‍ನಲ್ಲಿ ಗೊತ್ತುಪಡಿಸಿದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ರೋಗಿ 124: 60 ಮಹಿಳೆ ಕಲಬುರಗಿ ನಿವಾಸಿ. ಅವರು ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಗೆ ಹಾಜರಾಗಿದ್ದ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದರು. ಸದ್ಯ ಅವರನ್ನು ಕಲಬುರಗಿಯಲ್ಲಿ ಗೊತ್ತುಪಡಿಸಿದ ಆಸ್ಪತ್ರೆಗೆ ದಾಖಲಿಸಲಾಗಿದೆ.

  • ದೇಶದಲ್ಲಿ 2,400ಕ್ಕೂ ಹೆಚ್ಚು ಜನರಿಗೆ ಕೊರೊನಾ – ಇನ್ನೆರಡು ವಾರದಲ್ಲೇ 10,000 ತಲುಪೋ ಸಾಧ್ಯತೆ

    ದೇಶದಲ್ಲಿ 2,400ಕ್ಕೂ ಹೆಚ್ಚು ಜನರಿಗೆ ಕೊರೊನಾ – ಇನ್ನೆರಡು ವಾರದಲ್ಲೇ 10,000 ತಲುಪೋ ಸಾಧ್ಯತೆ

    ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,400 ದಾಟಿದೆ. ಕಳೆದ 24 ಗಂಟೆಗಳಲ್ಲಿ 350ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದ್ದು, ಇಂದು ನಾಲ್ವರು ಬಲಿಯಾಗಿದ್ದಾರೆ. ಇದರೊಂದಿಗೆ ಮಹಾಮಾರಿಗೆ ಬಲಿಯಾದವರ ಸಂಖ್ಯೆ 60ಕ್ಕೆ ಏರಿಕೆಯಾಗಿದೆ.

    ಮೂರು ದಿನದ ಹಸುಗೂಸಿಗೂ ಕೊರೊನಾ ಸೋಂಕು ಹರಡಿರುವ ಹೃದಯವಿದ್ರಾವಕ ಘಟನೆ ಮುಂಬೈನಲ್ಲೇ ನಡೆದಿದೆ. ಸೋಂಕಿತನಿದ್ದ ಕೊಠಡಿಗೆ ಆತನ ಪತ್ನಿ, ಮಗುವನ್ನು ಇರಿಸಿದ್ದರಿಂದ ಸೋಂಕು ಹರಡಿದೆ. ದೆಹಲಿಯ ಏಮ್ಸ್ ಇಬ್ಬರು ವೈದ್ಯರು ಸೇರಿ ದೇಶದಲ್ಲಿ 50 ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಬಂದಿದೆ. ಇದನ್ನೂ ಓದಿ: ದೆಹಲಿಯ ಜಮಾತ್ ಸಭೆಯಿಂದ ದೇಶಾದ್ಯಂತ ಕೊರೊನಾ ಹರಡಿದ್ದು ಹೇಗೆ?

    ಲಾಕ್‍ಡೌನ್ ಉಲ್ಲಂಘಿಸಿದ ವ್ಯಕ್ತಿಗಳಿಗೆ ಶಿಕ್ಷೆ ನೀಡಿದ ಮೊದಲ ಪ್ರಕರಣ ಕೂಡ ವರದಿಯಾಗಿದೆ. ಮಹಾರಾಷ್ಟ್ರದ ಪುಣೆಯ ಬಾರಾಮತಿ ನಗರದಲ್ಲಿ ತಿರುಗಾಡ್ತಿದ್ದ ಮೂವರಿಗೆ ಮೂರು ದಿನಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಉತ್ತರಪ್ರದೇಶದಲ್ಲಿ ಜನಿಸಿದ ಹಸುಗೂಸುಗಳಿಗೆ ‘ಕೊರೊನಾ’ ಮತ್ತು ‘ಲಾಕ್‍ಡೌನ್’ ಎಂದು ಹೆಸರಿಡಲಾಗಿದೆ. ಇದನ್ನೂ ಓದಿ:  ಎಲ್ಲೆಂದರಲ್ಲಿ, ಡಾಕ್ಟರ್ ಮೇಲೆ ಉಗುಳುತ್ತಿದ್ದಾರೆ ದೆಹಲಿ ಮಸೀದಿಯ ಕ್ವಾರಂಟೈನ್‍ಗಳು

    ದೇಶದಲ್ಲಿ ಕೊರೊನಾ:
    ಮಹಾರಾಷ್ಟ್ರದಲ್ಲಿ 416 ಜನರಿಗೆ ಸೋಂಕು ತಗುಲಿದೆ. ಇವರಲ್ಲಿ 81 ಜನ ಗುಣಮುಖರಾಗಿದ್ದು, 16 ಜನ ಸಾವನ್ನಪ್ಪಿದ್ದಾರೆ. ತಮಿಳುನಾಡು 309 ಜನ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 75 ಜನರು ಗುಣಮುಖರಾದರೆ ಓರ್ವರು ಮೃತಪಟ್ಟಿದ್ದಾರೆ. ಕೇರಳದಲ್ಲಿ 286 ಜನರಿಗೆ ಸೋಂಕು ತಗುಲಿದ್ದು, 21 ಮಂದಿ ಗುಣಮುಖರಾದರೆ ಇಬ್ಬರು ಸಾವನ್ನಪ್ಪಿದ್ದಾರೆ. ದೆಹಲಿಯಲ್ಲಿ 219 ಜನರಿಗೆ ಸೋಂಕು ತಗುಲಿದ್ದು, 67 ಜನ ಚೇತರಿಸಿಕೊಂಡಿದ್ದರೆ ಇಬ್ಬರು ಸಾವನ್ನಪ್ಪಿದ್ದಾರೆ.

    ಆಂಧ್ರ ಪ್ರದೇಶದಲ್ಲಿ 143 ಜನರಿಗೆ ಕೊರೊನಾ ತಗುಲಿದ್ದು, 32 ಮಂದಿ ಗುಣಮುಖರಾಗಿದ್ದಾರೆ. ಆಂಧ್ರಪ್ರದೇಶದಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ರಾಜಸ್ಥಾನದಲ್ಲಿ 133 ಜನರಿಗೆ ಸೋಂಕು ತಗುಲಿದ್ದು, 13 ಜನ ಚೇತರಿಸಿಕೊಂಡಿದ್ದಾರೆ. ತೆಲಂಗಾಣದಲ್ಲಿ 130 ಜನ ಸೋಂಕಿತರಿದ್ದು, 3 ಮೂವರು ಗುಣಮುಖರಾದರೆ 9 ಜನ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಆಸ್ಪತ್ರೆಯಲ್ಲಿ ಕ್ವಾರಂಟೈನ್‍ಗಳಿಂದ ನಮಾಜ್

    ದೇಶಾದ್ಯಂತ ಕೊರೊನಾ ವೈರಸ್ ರುದ್ರ ನರ್ತನ ಮಾಡುತ್ತಿದೆ. ಕಳೆದ 2 ದಿನಗಳಲ್ಲಿ ಸೋಂಕಿತರ ಸಂಖ್ಯೆ ಶೇಕಡಾ 47ರಷ್ಟು ಹೆಚ್ಚಾಗಿದೆ. ಮೊದಲ 44 ದಿನಗಳಲ್ಲಿ ಸಾವಿರ ಕೊರೊನಾ ಕೇಸ್ ದಾಖಲಾದರೆ, ಕಳೆದ ಐದು ದಿನಗಳಲ್ಲಿ ಸೋಂಕಿತರ ಸಂಖ್ಯೆ ಡಬಲ್ ಆಗಿದೆ. ಇದು ಹೀಗೆ ಮುಂದುವರಿದರೆ ಮುಂದಿನ 2 ವಾರಗಳಲ್ಲಿ ಸೋಂಕಿತರ ಸಂಖ್ಯೆ 10 ಸಾವಿರ ದಾಟುವ ಸಂಭವವಿದೆ.

    ದೇಶದ ಎಲ್ಲೆಲ್ಲೂ ಕೊರೊನಾ ಆತಂಕ ಕಂಡು ಬರುತ್ತಿದೆ. ಈ ನಡುವೆ ಇವತ್ತಿಗೆ ದೇಶದಲ್ಲಿ 9ನೇ ದಿನದ ಲಾಕ್‍ಡೌನ್ ಪೂರ್ಣಗೊಂಡಿದೆ. ಇಂತಹ ಹೊತ್ತಲ್ಲಿ ಗುರುವಾರ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಪ್ರಧಾನಿ ಮೋದಿ, ಕೊರೊನಾ ವಿರುದ್ಧ ದೇಶ ಸುದೀರ್ಘ ಯುದ್ಧ ಮಾಡಬೇಕಿದ್ದು, ಅದಕ್ಕೆ ಎಲ್ಲರ ಸಹಕಾರ ಬೇಕಿದೆ. ತ್ಯಾಗಗಳಿಗೆ ಎಲ್ಲರೂ ಸಿದ್ಧರಾಗಬೇಕಿದೆ ಅಂತ ಸಲಹೆ ಮಾಡಿದ್ದಾರೆ.

  • ರಾಮನವಮಿಗೆ ತಟ್ಟದ ಲಾಕ್‍ಡೌನ್ ಬಿಸಿ- ಮುಗಿಬಿದ್ದು ದರ್ಶನ ಪಡೆದ ರಾಮ ಭಕ್ತರು

    ರಾಮನವಮಿಗೆ ತಟ್ಟದ ಲಾಕ್‍ಡೌನ್ ಬಿಸಿ- ಮುಗಿಬಿದ್ದು ದರ್ಶನ ಪಡೆದ ರಾಮ ಭಕ್ತರು

    ರಾಯಚೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಎಲ್ಲಾ ದೇವಾಲಯಗಳು ಬಂದ್ ಆಗಿವೆ. ಆದರೆ ರಾಯಚೂರಿನಲ್ಲಿ ರಾಮನವಮಿಗೆ ಮಾತ್ರ ಲಾಕ್‍ಡೌನ್ ಬಿಸಿ ತಟ್ಟಲಿಲ್ಲ. ಬೆಳಗ್ಗೆಯಿಂದ ರಾಮ ಭಕ್ತರು ನಿರಂತರವಾಗಿ ದರ್ಶನ ಪಡೆದಿದ್ದಾರೆ.

    ನಗರದ ಸ್ಟೇಷನ್ ರಸ್ತೆಯಲ್ಲಿರುವ ರಾಮಮಂದಿರಲ್ಲಿ ಭಕ್ತರು ಯಾವ ಸಾಮಾಜಿಕ ಅಂತರವೂ ಕಾಯ್ದುಕೊಳ್ಳದೆ ಮುಗಿಬಿದ್ದು ದರ್ಶನ ಪಡೆದಿದ್ದಾರೆ. ಮಂದಿರದ ಮುಖ್ಯದ್ವಾರಕ್ಕೆ ಬೀಗ ಹಾಕಿದ್ದರೂ ಪಕ್ಕದ ಚಿಕ್ಕ ದ್ವಾರದಿಂದ ಭಕ್ತರ ಪ್ರವೇಶಕ್ಕೆ ಅರ್ಚಕರು ಅನುವು ಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ: ಆಸ್ಪತ್ರೆಯಲ್ಲಿ ಕ್ವಾರಂಟೈನ್‍ಗಳಿಂದ ನಮಾಜ್

    ಸರ್ಕಾರಿ ಆದೇಶ ಉಲ್ಲಂಘಿಸಿ ರಾಮಭಕ್ತರು ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ದೇವಾಲಯ ಆಡಳಿತ ಮಂಡಳಿ ಸಹ ಲಾಕ್ ಉಲ್ಲಂಘಿಸಿ ಭಕ್ತರ ಪ್ರವೇಶಕ್ಕೆ ಅವಕಾಶ ಕೊಟ್ಟಿದೆ.

  • ಆಸ್ಪತ್ರೆಯಲ್ಲಿ ಕ್ವಾರಂಟೈನ್‍ಗಳಿಂದ ನಮಾಜ್

    ಆಸ್ಪತ್ರೆಯಲ್ಲಿ ಕ್ವಾರಂಟೈನ್‍ಗಳಿಂದ ನಮಾಜ್

    ಹೈದರಾಬಾದ್: ದೇಶದಲ್ಲಿ ಕೊರೊನಾ ವೈರಸ್ ಹೆಚ್ಚುತ್ತಿರುವ ಹಿನ್ನೆಲೆ ಹೆಚ್ಚಿನ ಸಂಖ್ಯೆಯ ಜನರನ್ನು ಭದ್ರತೆಯ ದೃಷ್ಟಿಯಿಂದ ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ. ಇಂತಹ ಪರಿಸ್ಥಿತಿ ತೆಲಂಗಾಣದಲ್ಲೂ ಇದೆ. ಆದರೆ ಅಲ್ಲಿನ ಆಸ್ಪತ್ರೆಯಲ್ಲೇ ಮುಸ್ಲಿಂ ಸಮುದಾಯದ ಜನರು ಪ್ರಾರ್ಥನೆ ಸಲ್ಲಿಸುತ್ತಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

    ಹೈದರಾಬಾದ್‍ನ ಗಾಂಧಿ ಆಸ್ಪತ್ರೆಯ ಪರಿಸ್ಥಿತಿ ಇದಾಗಿದ್ದು, ಕ್ವಾರಂಟೈನ್‍ನಲ್ಲಿರು ಕೊರೊನಾ ಶಂಕಿತ ಕೆಲವು ಮುಸ್ಲಿಮರು ಆಸ್ಪತ್ರೆಯಲ್ಲಿ ಇಂದು ನಮಾಜ್ ಮಾಡಿದ್ದಾರೆ. ಕೊರೊನಾ ಹರಡುವುದನ್ನು ತಡೆಗಟ್ಟಲು ಸಾಮಾಜಿಕ, ರಾಜಕೀಯ ಅಥವಾ ಧಾರ್ಮಿಕ ಯಾವುದೇ ರೀತಿಯ ಸಭೆಯ ಮೇಲೆ ಸರ್ಕಾರ ನಿಷೇಧ ಹೇರಿದೆ. ಹೀಗಿದ್ದರೂ ಕೆಲ ಮುಸ್ಲಿಮರು ಆಸ್ಪತ್ರೆಯಲ್ಲಿ ಸಾಮೂಹಿಕವಾಗಿ ನಮಾಜ್ ಮಾಡಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ದೆಹಲಿಯ ಜಮಾತ್ ಸಭೆಯಿಂದ ದೇಶಾದ್ಯಂತ ಕೊರೊನಾ ಹರಡಿದ್ದು ಹೇಗೆ?

    ಇದೇ ಆಸ್ಪತ್ರೆಯಲ್ಲಿ ಬುಧವಾರ ಕೊರೊನಾ ಸೋಂಕಿತ 49 ವರ್ಷದ ರೋಗಿಯು ಸಾವನ್ನಪ್ಪಿದ್ದರು. ಈ ಕುರಿತು ಮಾಹಿತಿ ನೀಡಿದ್ದ ಆಸ್ಪತ್ರೆ ಅಧೀಕ್ಷಕ ಶ್ರವಣ್ ಕುಮಾರ್, ಐದು ದಿನಗಳ ಹಿಂದೆ ಅವರನ್ನು ದಾಖಲಿಸಲಾಗಿತ್ತು. ಮೃತರು ದೆಹಲಿಗೆ ಪ್ರಯಾಣಿಸಿದ್ದರು ಎಂದು ತಿಳಿಸಿದ್ದರು. ಇದನ್ನೂ ಓದಿ:  ಎಲ್ಲೆಂದರಲ್ಲಿ, ಡಾಕ್ಟರ್ ಮೇಲೆ ಉಗುಳುತ್ತಿದ್ದಾರೆ ದೆಹಲಿ ಮಸೀದಿಯ ಕ್ವಾರಂಟೈನ್‍ಗಳು

    ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ದೇಶದಲ್ಲಿ ಇದುವರೆಗೆ ಕೊರೊನಾ ಸೋಂಕಿತರ ಸಂಖ್ಯೆ 1,966ಕ್ಕೆ ತಲುಪಿದೆ. ಅವರಲ್ಲಿ 1764 ಜನರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದರೆ, 150 ಮಂದಿ ಗುಣಮುಖರಾಗಿದ್ದಾರೆ. 50 ಜನರು ಕೊರೊನಾ ವೈರಸ್‍ಗೆ ಬಲಿಯಾಗಿದ್ದಾರೆ.

  • ದೆಹಲಿಯ ಜಮಾತ್ ಸಭೆಯಿಂದ ದೇಶಾದ್ಯಂತ ಕೊರೊನಾ ಹರಡಿದ್ದು ಹೇಗೆ?

    ದೆಹಲಿಯ ಜಮಾತ್ ಸಭೆಯಿಂದ ದೇಶಾದ್ಯಂತ ಕೊರೊನಾ ಹರಡಿದ್ದು ಹೇಗೆ?

    – ತಬ್ಲಿಘಿ ಸಭೆಗೆ ಹಾಜರಾಗಿದ್ದ ತಮಿಳುನಾಡಿನ 264 ಮಂದಿಗೆ ಕೊರೊನಾ

    ನವದೆಹಲಿ: ದೇಶದ ಒಟ್ಟು ಕೊರೊನಾ ಸೋಂಕಿತರಲ್ಲಿ ಶೇ.20 ರಷ್ಟು ಜನರು ತಬ್ಲಿಘಿ ಜಮಾತ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದರವೇ ಆಗಿರುವುದು ಆಂತಕಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲದೆ ಜಮಾತ್ ಸಭೆಯಲ್ಲಿ ಭಾಗವಹಿಸಿದ್ದ 19 ಮಂದಿ ವಿವಿಧ ರಾಜ್ಯಗಳಲ್ಲಿ ಸಾವನ್ನಪ್ಪಿದ್ದಾರೆ.

    ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ಮಾರ್ಚ್ ಮೊದಲ ವಾರದಿಂದ ನಡೆದ ಸಭೆಯಲ್ಲಿ ಸುಮಾರು 12 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿ ಬಳಿಕ ಊರುಗಳಿಗೆ ತೆರಳಿದ್ದರು. ರಾಜ್ಯಗಳಿಗೆ ಮರಳಿದ ಅನೇಕರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಹೀಗಾಗಿ ಅವರೊಂದಿಗೆ ಸಂಪರ್ಕ ಹೊಂದಿದ್ದ ಜನರನ್ನೂ ಕೂಡ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿಗಾಗಿ ಆರೋಗ್ಯ ಇಲಾಖೆ ಕಾಯುತ್ತಿದೆ. ಇದನ್ನೂ ಓದಿ:  ಎಲ್ಲೆಂದರಲ್ಲಿ, ಡಾಕ್ಟರ್ ಮೇಲೆ ಉಗುಳುತ್ತಿದ್ದಾರೆ ದೆಹಲಿ ಮಸೀದಿಯ ಕ್ವಾರಂಟೈನ್‍ಗಳು

    ಸದ್ಯಕ್ಕೆ ದೇಶದಲ್ಲಿ 400ಕ್ಕೂ ಹೆಚ್ಚು ಮಂದಿಗೆ ಕೊರೊನಾ ಬಂದಿದ್ದು, ಸಂಖ್ಯೆ ಏರಿಕೆ ಆಗುತ್ತಲೇ ಇದೆ. ಇದರ ಜೊತೆ ಇವರ ಸಂಪರ್ಕಕ್ಕೆ ಬಂದವರಿಗೂ ಕೊರೊನಾ ಹರಡುತ್ತಿರುವುದರಿಂದ ಆತಂಕ ಸೃಷ್ಟಿಯಾಗಿದೆ.

    ವಿವಿಧ ರಾಜ್ಯದಲ್ಲಿ 9 ಸಾವು:
    ಜಮಾತ್ ಸಭೆಯಿಂದ ವಾಪಸ್ ಆಗಿದ್ದ ತೆಲಂಗಾಣದಲ್ಲಿ ಒಂಬತ್ತು ಜನರು, ದೆಹಲಿ, ಮಹಾರಾಷ್ಟ್ರ, ಜಮ್ಮು-ಕಾಶ್ಮೀರದ ತಲಾ ಇಬ್ಬರು, ಕರ್ನಾಟಕದ, ಆಂಧ್ರ ಪ್ರದೇಶ, ಬಿಹಾರ್ ಹಾಗೂ ಗುಜರಾತ್‍ನಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಸೋಂಕಿತ ಸಂಖ್ಯೆಯಂತೂ ಕ್ಷಣ ಕ್ಷಣಕ್ಕೂ ಏರಿಕೆ ಆಗುತ್ತಲೇ ಇದೆ.

    ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ, ದೇಶದಲ್ಲಿ ಒಟ್ಟು 1,965 ಜನರಿಗೆ ಸೋಂಕುಲಿದ್ದು, ಅವರಲ್ಲಿ 151 ಜನರು ಗುಣಮುಖರಾಗಿದ್ದಾರೆ. ಉಳಿದಂತೆ 50 ಜನರ ಕೊರೊನಾಗೆ ಬಲಿಯಾಗಿದ್ದಾರೆ.

    ಯಾವ ರಾಜ್ಯದಲ್ಲಿ ಎಷ್ಟು ಸೋಂಕಿತರು?
    ಆಂಧ್ರಪ್ರದೇಶದ 746ಕ್ಕೂ ಹೆಚ್ಚು ಜನರು ಜಮಾತ್ ಸಭೆಯಲ್ಲಿ ಭಾಗವಹಿಸಿದ್ದರು. ಈ ಪೈಕಿ 70 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 659 ಜನರನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ.

    ದೆಹಲಿಯ ಸಭೆಗೆ ತೆಲಂಗಾಣದ 1,030 ಜನರು ಹಾಜರಾಗಿದ್ದರು. ಅವರಲ್ಲಿ 321 ಜನರಿಗೆ ಸೋಂಕು ತಗುಲಿದ್ದು, 700 ಜನರನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ.

    ಈ ಕುರಿತು ಮಾಹಿತಿ ನೀಡಿರುವ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ತಬ್ಲಿಘಿ ಜಮಾತ್ ಸಭೆಯಲ್ಲಿ ಪಾಲ್ಗೊಂಡಿದ್ದ 46 ಜನರು ಗೋವಾಗೆ ಬಂದಿದ್ದಾರೆ. ಅವರನ್ನು ಗುರುತಿಸಿದ ಕ್ವಾರಂಟೈನ್‍ನಲ್ಲಿ ಇರಿಸಿದ್ದೇವೆ. ಆದರೆ ಅವರು ಗೋವಾಕ್ಕೆ ಯಾಕೆ ಬಂದಿದ್ದಾರೆಂದು ನಮಗೆ ತಿಳಿದಿಲ್ಲ. ಉಳಿದವರ ಹುಡುಕಾಟ ನಡೆಸಿದ್ದೇವೆ ಎಂದರು.

    ಈ ಕುರಿತು ಮಾಹಿತಿ ನೀಡಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಮರ್ಕಜ್ ನಿಜಾಮುದ್ದೀನ್‍ನಿಂದ ವಾಪಸ್ ಆಗಿರುವ 2,346 ಜನರಲ್ಲಿ 1,810 ಜನರನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ. ಉಳಿದ 536 ಜನರನ್ನು ನಗರ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಎಲ್ಲಾ 2,346 ಜನರಿಗೆ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ. ಒಂದು ವೇಳೆ ಅವರನ್ನು ಹಾಗೆ ಬಿಟ್ಟರೆ ನಗರದಲ್ಲಿ ಮುಂಬರುವ ದಿನಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗಬಹುದು ಎಂದು ತಿಳಿಸಿದ್ದಾರೆ.

    ಉತ್ತರ ಪ್ರದೇಶದಲ್ಲಿ ಈವರೆಗೆ 121 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ದೆಹಲಿಯಲ್ಲಿ ನಡೆದ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 429 ಜನರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇಂದು ಕೇವಲ 8 ಜನ ಸೋಂಕಿತರು ಪತ್ತೆಯಾಗಿದ್ದಾರೆ ಎಂದು ಉತ್ತರ ಪ್ರದೇಶದ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನಿಶ್ ಅವಸ್ಥಿ ಮಾಹಿತಿ ನೀಡಿದ್ದಾರೆ.

    ದೆಹಲಿಯಲ್ಲಿ ನಡೆದ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ 1,400ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಈ ಪೈಕಿ ಸುಮಾರು 1,300 ಮಂದಿಯನ್ನು ಪತ್ತೆ ಮಾಡಲಾಗಿದ್ದು, ಅವರ ಮಾದರಿಗಳನ್ನು ಕೋವಿಡ್-19 ಪರೀಕ್ಷೆಗೆ ಸಂಗ್ರಹಿಸಲಾಗಿದೆ ಎಂದು ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ಟೊಪೆ ತಿಳಿಸಿದ್ದಾರೆ.

    ತಮಿಳುನಾಡಿನಲ್ಲಿ ಬುಧವಾರದ ರಾತ್ರಿ 9 ಗಂಟೆ ಸುಮಾರಿಗೆ ಕೊರೊನಾ ಸೋಂಕಿತರ ಸಂಖ್ಯೆ 234ಕ್ಕೆ ಏರಿತ್ತು. ಈ ಪೈಕಿ 190 ಜನರು ದೆಹಲಿಯಲ್ಲಿ ನಡೆದ ಜಮಾತ್ ಸಭೆಗೆ ಸೇರಿದರೇ ಆಗಿದ್ದರು. ತಮಿಳುನಾಡು ಆರೋಗ್ಯ ಕಾರ್ಯದರ್ಶಿ ಬೀಲಾ ರಾಜೇಶ್ ಅವರು ಇಂದು ಸಂಜೆ ಮಾಧ್ಯಮಗಳೊಂದಿಗೆ ಮಾತನಾಡಿ, ರಾಜ್ಯದಲ್ಲಿ ಇಂದು ಒಂದೇ ದಿನದಲ್ಲಿ 75 ಜನ ಸೋಂಕಿತರು ಪತ್ತೆಯಾಗಿದ್ದಾರೆ. ಅವರಲ್ಲಿ ಅದರಲ್ಲಿ 74 ಮಂದಿ ದೆಹಲಿಯಲ್ಲಿ ನಡೆದ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದವರೇ ಆಗಿದ್ದಾರೆ. ತಬ್ಲಿಘಿ ಕಾರ್ಯಕ್ರಮಕ್ಕೆ ಹಾಜರಾಗಿದ್ದ 264 ಮಂದಿ ಸೇರಿದಂತೆ ರಾಜ್ಯದಲ್ಲಿ ಒಟ್ಟು ಪಾಸಿಟಿವ್ ಪ್ರಕರಣಗಳು 309 ದಾಖಲಾಗಿವೆ ಎಂದು ಮಾಹಿತಿ ನೀಡಿದ್ದಾರೆ.

    ಕೇರಳದಿಂದ 300ಕ್ಕೂ ಅಧಿಕ ಜನರು ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗಹಿಸಿದ್ದರು. ಈ ಪೈಕಿ 60 ಜನರನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ. ಉತ್ತರ ಪ್ರದೇಶದಿಂದ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 596 ಜನರ ಪೈಕಿ ಒಬ್ಬರಿಗೆ ಸೋಂಕು ತಗುಲಿದ್ದು, 500 ಜನರನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ. ಧಾರ್ಮಿಕ ಸಭೆಯಲ್ಲಿ ಗುಜರಾತ್‍ನ 72 ಜನರು, ಒಡಿಶಾದ 20 ಜನರು, ಅಸ್ಸಾಂನ 450 ಜನರು, ರಾಜಸ್ಥಾನದ 583 ಜನರು, ಚತ್ತೀಸಗಢದ 101 ಮಂದಿ ಹಾಜರಾಗಿದ್ದರು.

  • ಇಡೀ ಊರಿನ ಖರ್ಚು ನೋಡ್ಕೋಬೇಕು: ಕೊರೊನಾ ಸೋಂಕಿತನಿಗೆ ಉಡುಪಿ ಡಿಸಿ ಫೈನ್

    ಇಡೀ ಊರಿನ ಖರ್ಚು ನೋಡ್ಕೋಬೇಕು: ಕೊರೊನಾ ಸೋಂಕಿತನಿಗೆ ಉಡುಪಿ ಡಿಸಿ ಫೈನ್

    – ರೋಗಿಯ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು

    ಉಡುಪಿ: ಜಿಲ್ಲೆಯ ಕಾಪು ಮೂಲದ ಕೊರೊನಾ ಸೋಂಕಿತ ವ್ಯಕ್ತಿ ಮೇಲೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಗರಂ ಆಗಿದ್ದಾರೆ. ಸಂಪರ್ಕಕ್ಕೆ ಬಂದ ಎಲ್ಲ ರೋಗಿಗಳ ವೆಚ್ಚ ಅವನೇ ಭರಿಸಬೇಕು ಎಂದು ಗುಡುಗಿದ್ದಾರೆ.

    ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹೋಮ್ ಕ್ವಾರಂಟೈನ್‍ನಲ್ಲಿ ಇರಬೇಕಾದ ವ್ಯಕ್ತಿ ಕ್ರಿಕೆಟ್ ಆಡಿದ್ದಾನೆ. ಆತ ನಿಯಮ ಉಲ್ಲಂಘನೆ ಮಾಡಿ ಎಲ್ಲ ಕಡೆ ಓಡಾಡಿದ್ದಾನೆ. ಹೋಮ್ ಕ್ವಾರಂಟೈನ್‍ನ ಸೂಚನೆ ನೀಡಿದರೂ ಆ ವ್ಯಕ್ತಿ ಹೊರಗಡೆ ತಿರುಗಾಡಿದ್ದಾನೆ. ಆತನಿಂದ ಎಲ್ಲರ ವೆಚ್ಚವನ್ನು ವಸೂಲಿ ಮಾಡುತ್ತೇನೆ ಎಂದರು.

    ಇಡೀ ಊರಿಗೆ ಆದ ವೆಚ್ಚವನ್ನು ಆ ರೋಗಿ ಕೊಡಬೇಕು. ಆ ವ್ಯಕ್ತಿಯ ಮೇಲೆ ಕ್ರಿಮಿನಲ್ ಕೇಸು ಕೂಡ ದಾಖಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಕ್ವಾರಂಟೈನ್ ಸಂದರ್ಭದಲ್ಲಿ ಉದ್ಧಟತನ ತೋರಿದ ಎಲ್ಲರಿಂದ ವೆಚ್ಚವನ್ನು ವಸೂಲಿ ಮಾಡುತ್ತೇವೆ. ಕಾನೂನು ಉಲ್ಲಂಘಿಸಿದವರಿಗೆ ಎರಡು ವರ್ಷ ಜೈಲುವಾಸ ವಿಧಿಸುವ ಅವಕಾಶ ಇದೆ ಎಂದು ಹೇಳಿದರು.

    ವಿದೇಶದಿಂದ ಬಂದ ವ್ಯಕ್ತಿ ಕೊಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಓಡಾಡಿದ್ದು, ಪ್ರಕರಣ ದಾಖಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಎಂಟು ಮಂದಿಯ ಮೇಲೆ ಪ್ರಕರಣ ದಾಖಲಿಸಿದ್ದೇವೆ. ಕ್ವಾರಂಟೈನ್‍ನಲ್ಲಿ ಇರುವವರನ್ನು ಅವರ ಕುಟುಂಬದವರು ಹೊರ ಬಾರದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

    ದೆಹಲಿ ಜಮಾತ್ ಸಮಾವೇಶ:
    ದೆಹಲಿಯ ನಿಜಾಮುದ್ದೀನ್‍ನಲ್ಲಿ ನಡೆದಿದ್ದ ತಬ್ಲಿಘ್ ಸಮಾವೇಶದಲ್ಲಿ ನಮ್ಮ ಜಿಲ್ಲೆಯಿಂದ ಯಾರೂ ಪಾಲ್ಗೊಂಡಿಲ್ಲ ಎಂದು ಉಡುಪಿ ಡಿಸಿ ಜಿ.ಜಗದೀಶ್ ಸ್ಪಷ್ಟಪಡಿಸಿದರು.

    ದೆಹಲಿಗೆ ಆ ಸಂದರ್ಭದಲ್ಲಿ ಓಡಾಡಿದವರು ಹದಿನಾರು ಮಂದಿ ಇದ್ದಾರೆ. ಮೊಬೈಲ್ ಟವರ್ ಲೊಕೇಶನ್‍ನಲ್ಲಿ ನಮ್ಮ ಜಿಲ್ಲೆಯ ಹದಿನಾರು ಮಂದಿ ಇದ್ದರು. ಈ ಪೈಕಿ ಒಂಬತ್ತು ಮಂದಿಯನ್ನು ಹಾಸ್ಪಿಟಲ್ ಕ್ವಾರಂಟೈನ್ ಮಾಡಿದ್ದೇವೆ. ಉಳಿದ ಏಳು ಮಂದಿ ಬೇರೆ ಬೇರೆ ಊರುಗಳಲ್ಲಿದ್ದಾರೆ. ಸರ್ಕಾರಕ್ಕೆ ಎಲ್ಲಾ ಮಾಹಿತಿಯನ್ನು ರವಾನೆ ಮಾಡಿದ್ದೇವೆ ಎಂದರು.

    ಭಾರತ್ ಬಂದ್ ಸಂದರ್ಭದಲ್ಲಿ ಕೂಲಿ ಕಾರ್ಮಿಕರನ್ನು ನಾವು ಚೆನ್ನಾಗಿ ನೋಡಿಕೊಳ್ಳುತ್ತೇವೆ. ಹೊರ ಜಿಲ್ಲೆಯವರು ಆತಂಕಪಡುವ ಅಗತ್ಯವಿಲ್ಲ. ಮಧ್ಯರಾತ್ರಿ ಎದ್ದು ನಮ್ಮ ಜಿಲ್ಲೆ ಬಿಟ್ಟು ಹೋಗಬೇಡಿ ಎಂದು ಮನವಿ ಮಾಡಿಕೊಂಡರು. ಜೊತೆಗೆ ಉತ್ತರ ಕರ್ನಾಟಕದಲ್ಲಿರುವ ಸಂಬಂಧಿಕರು ಆತಂಕಪಡುವ ಅಗತ್ಯವಿಲ್ಲ ಎಂದರು.

  • ‘ಸಾಲಾ ಈಗಷ್ಟೇ ಕ್ರಿಕೆಟ್ ಆಡ್ತಿದ್ದಾನೆ ನನಗೆ ಸವಾಲ್ ಹಾಕ್ತಾನಾ’

    ‘ಸಾಲಾ ಈಗಷ್ಟೇ ಕ್ರಿಕೆಟ್ ಆಡ್ತಿದ್ದಾನೆ ನನಗೆ ಸವಾಲ್ ಹಾಕ್ತಾನಾ’

    ನವದೆಹಲಿ: ವಿಶ್ವಾದ್ಯಂತ ನಿರಂತರವಾಗಿ ಹೆಚ್ಚುತ್ತಿರುವ ಕೊರೊನಾ ವೈರಸ್‍ನಿಂದಾಗಿ ಕ್ರಿಕೆಟ್ ಸೇರಿದಂತೆ ಎಲ್ಲಾ ಕ್ರೀಡಾ ಟೂರ್ನಿಗಳನ್ನು ರದ್ದುಗೊಳಿಸಲಾಗಿದೆ ಅಥವಾ ಮುಂದೂಡಲಾಗಿದೆ. ಕೇಂದ್ರ ಸರ್ಕಾರವು ದೇಶಾದ್ಯಂತ ಏಪ್ರಿಲ್ 14ರವರೆಗೆ ಲಾಕ್‍ಡೌನ್ ಘೋಷಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲಾ ಆಟಗಾರರು ಮನೆಯಲ್ಲಿ ಕುಳಿತು ಸಾಮಾಜಿಕ ಜಾಲತಾಣಗಳಲ್ಲಿ ಚಾಟಿಂಗ್ ನಡೆಸಿದ್ದಾರೆ. ಅಂತೆಯೇ ಬುಧವಾರ ವಿಡಿಯೋ ಕಾಲಿಂಗ್‍ನಲ್ಲಿದ್ದ ಟೀಂ ಇಂಡಿಯಾ ಆಟಗಾರರಾದ ಜಸ್‍ಪ್ರೀತ್ ಬುಮ್ರಾ ಹಾಗೂ ರೋಹಿತ್ ಶರ್ಮಾ ಅವರು ಯುವ ಆಟಗಾರ ರಿಷಬ್ ಪಂತ್ ಕಾಲೆಳೆದಿದ್ದಾರೆ.

    ಜಸ್‍ಪ್ರೀತ್ ಬುಮ್ರಾ ಹಾಗೂ ರೋಹಿತ್ ಶರ್ಮಾ ಅವರ ಸಂಭಾಷಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಂಬೈ ಇಂಡಿಯನ್ಸ್ ತಂಡದ ಈ ಆಟಗಾರರು ಆರ್‍ಸಿಬಿ ತಂಡ ಯಜುವೇಂದ್ರ ಚಹಲ್ ಅವರ ಬಗ್ಗೆಯೂ ಗೇಲಿ ಮಾಡಿದ್ದಾರೆ.

    ಮೊದಲು ಮಾತು ಆರಂಭಿಸಿದ ಜಸ್‍ಪ್ರೀತ್ ಬುಮ್ರಾ ಅವರು ನಾನು ಹೆಚ್ಚು ದೂರದವರೆಗೆ ಸಿಕ್ಸ್ ಸಿಡಿಸುತ್ತೇನೋ ಅಥವಾ ರೋಹಿತ್ ಶರ್ಮಾ ಹೆಚ್ಚು ದೂರ ಸಿಕ್ಸ್ ಸಿಡುಸುತ್ತಾರಾ ಅಂತ ನೋಡಿಯೇ ಬಿಡೋಣ ಎಂದು ರಿಷಬ್ ಪಂತ್ ಅವರಿಗೆ ಸವಾಲು ಹಾಕಿದ್ದಾರೆ. ಆಗ ರೋಹಿತ್ ಶರ್ಮಾ, ಯಾರು ಹೇಳಿದ್ದು ಎಂದು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಬುಮ್ರಾ, ಪಂತ್ ಹೇಳುತ್ತಿದ್ದಾರೆ ಎನ್ನುತ್ತಾರೆ.

    ಪಂತ್ ನನ್ನ ವಿರುದ್ಧವೇ ಸವಾಲು ಹಾಕ್ತಾನಾ? ಸಾಲಾ ಒಂದು ವರ್ಷ ಕೂಡ ಆಗಿಲ್ಲ ಕ್ರಿಕೆಟ್ ಆಡಲು ಆರಂಭಿಸಿ. ಈಗಷ್ಟೇ ಕ್ರಿಕೆಟ್ ಆಡಲು ಆರಂಭಿಸಿದ್ದಾನೆ. ನನಗೆ ಸವಾಲ್ ಹಾಕ್ತಾನಾ ಎಂದು ಕಾಲೆಳೆದಿದ್ದಾರೆ.

    ಚಹಲ್ ಬಗ್ಗೆ ಮಾತನಾಡಿದ ವಿಡಿಯೋ ವೈರಲ್ ಆಗಿದೆ. ‘ಈ ವರ್ಷ ಐಪಿಎಲ್ ನಡೆದರೆ ಚಹಲ್ ಬಾಲ್‍ಗಳನ್ನು ಹಿಗ್ಗಾಮುಗ್ಗಾ ಚಚ್ಚುವುದೇ. ಅಷ್ಟೇ ಅಲ್ಲದೆ ಬ್ಯಾಟಿಂಗ್ ಬಂದಾಗ ಔಟ್ ಮಾಡದೇ ಒಂದು ಓವರ್ ಬೌಲಿಂಗ್‍ನಲ್ಲಿ ಥಂಡಾ ಹೊಡೆಸಬೇಕು. ಅವನು ಔಟ್ ಆಗೋದೇ ಬೇಡ. ಚಹಲ್ ಬ್ಯಾಟಿಂಗ್ ವೇಳೆ ಟೆಸ್ಟ್ ಪಂದ್ಯದಂತೇ ಫಿಲ್ಡಿಂಗ್ ಮಾಡಿಸೋಣ ಎಂದು ಕಾಲೆಳೆದಿದ್ದಾರೆ.

  • ಹಸಿವಿನಿಂದ ಬಳಲುತಿದ್ದ ಮಂದಿಗೆ 4 ಟನ್ ಆಹಾರ ಸಾಮಗ್ರಿ ವಿತರಿಸಿದ ಕೌನ್ಸಿಲರ್

    ಹಸಿವಿನಿಂದ ಬಳಲುತಿದ್ದ ಮಂದಿಗೆ 4 ಟನ್ ಆಹಾರ ಸಾಮಗ್ರಿ ವಿತರಿಸಿದ ಕೌನ್ಸಿಲರ್

    ಬೆಂಗಳೂರು: ಕೊರೊನಾ ವೈರಸ್ ಭೀತಿಯಿಂದ ದೇಶವೇ ಲಾಕ್‍ಡೌನ್ ಆಗಿದ್ದು, ಸರ್ಕಾರದ ಆದೇಶಕ್ಕೆ ಸ್ಪಂದಿಸಿ ಜನರು ಮನೆಯಲ್ಲಿ ಇದ್ದಾರೆ. ಆದರೆ ಹಸಿವಿನಿಂದ ಪರಿತಪಿಸುತ್ತಿದ್ದ ಬಡಾವಣೆ ಮಂದಿಗೆ ಕೌನ್ಸಿಲರ್ ನರಸಿಂಹ ಮೂರ್ತಿ ಸ್ಪಂದಿಸಿ ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲದ ರಾಯನ್ ನಗರ ನಿವಾಸಿಗಳಿಗೆ ದಿನ ಬಳಕೆಯ ದಿನಸಿ ಪದಾರ್ಥಗಳನ್ನು ಕೌನ್ಸಿಲರ್ ನರಸಿಂಹ ಮೂರ್ತಿ ಅವರು ವಿತರಣೆ ಮಾಡಿದ್ದಾರೆ. ವಾರ್ಡಿನ ಪ್ರತಿ ಜನರಿಗೆ ದಿನ ಬಳಕೆಯ ದಿನಸಿ ಪದಾರ್ಥಗಳನ್ನು ಮನೆ ಮನೆಗೆ ತೆರಳಿ ವಿತರಣೆ ಮಾಡಿ ಸಹಾಯ ಮಾಡಿದ್ದಾರೆ. ಪ್ರತಿ ಕುಟುಂಬಕ್ಕೆ ತಲಾ 25 ಕೆ.ಜಿ ಅಕ್ಕಿ, ಮೂರು ತರಹದ ಬೇಳೆ, ಸಕ್ಕರೆ, ಉಪ್ಪು, ಅಡುಗೆ ಎಣ್ಣೆ ಇನ್ನಿತರ ಪದಾರ್ಥಗಳನ್ನು ವಿತರಣೆ ಮಾಡಲಾಗಿದೆ.

    ಸುಮಾರು 4 ಟನ್ ಆಹಾರ ಸಾಮಗ್ರಿಗಳ ವಿತರಣೆ ಮಾಡಿದ ಸದಸ್ಯರಿಗೆ ವಾರ್ಡಿನ ಜನತೆ ಧನ್ಯವಾದ ತಿಳಿಸಿದ್ದಾರೆ. ಲಾಕ್‍ಡೌನ್‍ನಿಂದ ಹೊರಬರದೆ ಕಂಗಾಲಾಗಿದ್ದ ಜನರಿಗೆ ಸ್ಪಂದನೆ ದೊರೆತಿರುವುದು ಉತ್ತಮ ಎಂದು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಾಮಾಜಿಕ ಕಾರ್ಯಕ್ಕೆ ಮಹಿಳೆಯರು ಹೂವುಗಳನ್ನು ನರಸಿಂಹ ಮೂರ್ತಿ ಅವರ ಮೇಲೆ ಹಾಕಿ ದಿನಸಿ ಸ್ವೀಕರಿಸಿ ಧನ್ಯತೆ ಮೆರೆದಿದ್ದಾರೆ.

    ಈ ವೇಳೆ ಮಾತನಾಡಿದ ಕೌನ್ಸಿಲರ್, ನಮ್ಮ ಬಡಾವಣೆಯ ಜನರು ಲಾಕ್‍ಡೌನ್‍ಗೆ ಸ್ಪಂದಿಸಿದ್ದಾರೆ. ಈ ಕೊರೊನಾ ವೈರಸ್ ತಡೆಗಟ್ಟಲು ಮನೆಯಿಂದ ಹೊರಗೆ ಬರದೆ ನಮ್ಮ ಕಾನೂನಿಗೆ ಗೌರವವನ್ನು ನೀಡಿದ್ದಾರೆ. ಆದರೆ ಆಹಾರಕ್ಕಾಗಿ ಎಲ್ಲರು ಪರಿತಪಿಸುತ್ತಿದ್ದರು, ಇದರಿಂದ ನನಗೆ ನೋವಾಯಿತು. ಹೀಗಾಗಿ ಪ್ರತಿನಿತ್ಯ ಕೂಲಿ ಕೆಲಸ ಮಾಡಿ ಜೀವನ ನಡೆಸುತಿದ್ದ ಎಲ್ಲಾ ಕುಟುಂಬಕ್ಕೆ ಆಹಾರ ಧಾನ್ಯಗಳನ್ನ ನೀಡಿದ್ದು, ನನಗೆ ಸಂತಸ ತಂದಿದೆ. ಮುಂದಿನ ಆದೇಶವರೆಗೂ ನಾವು ನಮ್ಮ ಗ್ರಾಮ, ನಮ್ಮ ರಾಜ್ಯ, ನಮ್ಮ ದೇಶಕ್ಕಾಗಿ ಸೇವೆ ಸಲ್ಲಿಸುವುದಾಗಿ ಕೌನ್ಸಿಲರ್ ನರಸಿಂಹಮೂರ್ತಿ ತಿಳಿಸಿದ್ದಾರೆ.

  • ಮೂರು ದಿನದಲ್ಲಿ ಪಿಎಂ ಕೇರ್ಸ್ ನಿಧಿಗೆ 7,314 ಕೋಟಿ ರೂ. ಜಮೆ

    ಮೂರು ದಿನದಲ್ಲಿ ಪಿಎಂ ಕೇರ್ಸ್ ನಿಧಿಗೆ 7,314 ಕೋಟಿ ರೂ. ಜಮೆ

    ನವದೆಹಲಿ: ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಮಾರ್ಚ್ ಕೊನೆಯಲ್ಲಿ ಪ್ರಾರಂಭವಾದ ಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ನಿಧಿ (ಪಿಎಂ ಕೇರ್ಸ್ ಫಂಡ್)ಗೆ ಕೇವಲ ಮೂರು ದಿನಗಳಲ್ಲಿ 7,314 ಕೋಟಿ ರೂ. ದೇಣಿಗೆ ಜಮೆಯಾಗಿದೆ.

    ಕೋವಿಡ್-19 ಭೀತಿಯನ್ನು ನಿಭಾಯಿಸಲು ಕೇಂದ್ರ ಸರ್ಕಾರವು ಮಾರ್ಚ್ 28ರಂದು ಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ಪರಿಹಾರ ನಿಧಿಯನ್ನು ರಚಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು, ಪಿಎಂ ಕೇರ್ಸ್ ಗೆ ಉದಾರವಾಗಿ ದೇಣಿಗೆ ನೀಡಬೇಕೆಂದು ಜನತೆಗೆ ಮನವಿ ಮಾಡಿಕೊಂಡಿದ್ದರು.

    ಪ್ರಧಾನಿ ಮೋದಿ ಅವರ ಮನವಿಯ ನಂತರ, ಬಾಲಿವುಡ್ ಸೆಲೆಬ್ರಿಟಿಗಳು, ಕ್ರೀಡಾಪಟುಗಳು, ಕ್ರಿಕೆಟ್ ಆಟಗಾರರು, ಉದ್ಯಮಿಗಳು ಸೇರಿದಂತೆ ಹಲವಾರು ಗಣ್ಯರು ಪಿಎಂ-ಕೇರ್ಸ್ ನಿಧಿಗೆ ದೇಣಿಗೆ ನೀಡಿದ್ದಾರೆ. ಟಾಟಾ ಸನ್ಸ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಅದಾನಿ ಗ್ರೂಪ್‍ನಂತಹ ಕಾರ್ಪೋರೇಟ್ ಸಂಸ್ಥೆಗಳು ಸಹ ತುರ್ತು ನಿಧಿಗೆ ತಮ್ಮ ಪಾಲನ್ನು ನೀಡಿವೆ.

    ಸಿಎಂ ಕೇರ್ಸ್ ನಿಧಿಗೆ ಸಾಮಾನ್ಯ ನಾಗರಿಕರು, ಸೆಲೆಬ್ರಿಟಿಗಳು ಮತ್ತು ಉದ್ಯಮಗಳಿಂದ ಮೂರು ದಿನಗಳಲ್ಲಿ 7,300 ಕೋಟಿ ರೂ. ಹರಿದು ಬಂದಿದೆ. ಈ ನಿಧಿಯಲ್ಲಿ ಕಾರ್ಪೊರೇಟ್ ಸಂಸ್ಥೆಗಳಾದ ಟಾಟಾ ಗ್ರೂಪ್ 1,500 ಕೋಟಿ ರೂ., ರಿಲಯನ್ಸ್ ಇಂಡಸ್ಟ್ರೀಸ್ 500 ಕೋಟಿ ರೂ., ಒಎನ್‍ಜಿಸಿ 300 ಕೋಟಿ ರೂ., ಸರ್ಕಾರಿ ಸಂಸ್ಥೆಗಳಾದ ಭಾರತೀಯ ರೈಲ್ವೆ 151 ಕೋಟಿ ರೂ. ಮತ್ತು ಲಾರ್ಸೆನ್ ಮತ್ತು ಟೂಬ್ರೊ 150 ಕೋಟಿ ರೂ. ದೇಣಿಗೆ ಸೇರಿದೆ.

    ಸಚಿನ್ ತೆಂಡೂಲ್ಕರ್, ಸುರೇಶ್ ರೈನಾ, ಗೌತಮ್ ಗಂಭೀರ್, ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ, ಪ್ರಿಯಾಂಕಾ ಚೋಪ್ರಾ, ನಿಕ್ ಜೊನಾಸ್, ಪವನ್ ಕಲ್ಯಾಣ್ ಮತ್ತು ಸೋನಮ್ ಕಪೂರ್ ಸೇರಿದಂತೆ ಖ್ಯಾತನಾಮರು ದೇಣಿಗೆ ನೀಡಿದ್ದಾರೆ. ಇವರಲ್ಲದೆ ಕೇಂದ್ರ ಸಚಿವರು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಎಲ್ಲರೂ ಪಿಎಂ ಕೇರ್ಸ್ ನಿಧಿಗೆ ದೇಣಿಗೆ ನೀಡಿದ್ದಾರೆ.

    ದೇಶದಲ್ಲಿ ಈವರೆಗೆ 1,900ಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂತಗುಲಿದ್ದು, 53 ಜನರು ಸಾವನ್ನಪ್ಪಿದ್ದಾರೆ. ವಿಶ್ವಾದ್ಯಂತ 8.50 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದ್ದು, ಸುಮಾರು 42 ಸಾವಿರಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ.