Tag: Coronavirus

  • ರಾಜ್ಯವನ್ನ ಮತ್ತೆ ಕಡೆಗಣಿಸಿದ ಕೇಂದ್ರ?- ಕೊರೊನಾದಿಂದ ತತ್ತರಿಸಿದ ಕರ್ನಾಟಕಕ್ಕೆ ಇಲ್ಲ ಅನುದಾನ

    ರಾಜ್ಯವನ್ನ ಮತ್ತೆ ಕಡೆಗಣಿಸಿದ ಕೇಂದ್ರ?- ಕೊರೊನಾದಿಂದ ತತ್ತರಿಸಿದ ಕರ್ನಾಟಕಕ್ಕೆ ಇಲ್ಲ ಅನುದಾನ

    ನವದೆಹಲಿ: ನೆರೆ ಪರಿಹಾರ ವಿಚಾರದಲ್ಲಿ ರಾಜ್ಯವನ್ನು ಕಡೆಗಣಿಸಿದ್ದ ಕೇಂದ್ರ ಸರ್ಕಾರ ಈಗ ಮತ್ತೆ ಅದೇ ಧೋರಣೆ ಮುಂದುವರಿಸಿದೆ. ಕೊರೊನಾ ವೈರಸ್‍ನಿಂದ ತತ್ತರಿಸುತ್ತಿರುವ ಕರ್ನಾಟಕಕ್ಕೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಅನುದಾನ ನೀಡುವಲ್ಲಿ ತಾರತಮ್ಯ ಮಾಡಿದಂತೆ ಕಂಡು ಬಂದಿದೆ.

    ಕೊರೊನಾ ವೈರಸ್ ಭೀತಿ ಹಿನ್ನೆಲೆ ರಾಜ್ಯಗಳಿಗೆ ನೆರವಾಗುವ ನಿಟ್ಟಿನಲ್ಲಿ ಇಂದು 17,287.08 ಕೋಟಿ ಹಣವನ್ನು ಕೇಂದ್ರ ಹಣಕಾಸು ಇಲಾಖೆ ಬಿಡುಗಡೆ ಮಾಡಿದೆ. ಎಸ್‍ಡಿಆರ್‍ಎಫ್ ಅನುದಾನದ ಅಡಿ 2020-21 ರ ಮೊದಲ ಕಂತಾಗಿ 11,092 ಕೋಟಿ ಹಾಗೂ 15 ನೇ ಹಣಕಾಸು ಆಯೋಗದ ಶಿಫಾರಸು ಹಿನ್ನಲೆ ಆದಾಯ ಕೊರತೆ ಅನುದಾನದ ಅಡಿಯಲ್ಲಿ 6,195 ಕೋಟಿ ಬಿಡುಗಡೆ ಮಾಡಿದೆ.

    14 ರಾಜ್ಯಗಳಿಗೆ ಕೇಂದ್ರ ಸರ್ಕಾರ ಈ ಅನುದಾನ ಹಂಚಿಕೆ ಮಾಡಿದೆ. ಆಂಧ್ರಪ್ರದೇಶ, ಅಸ್ಸಾಂ, ಹಿಮಾಚಲ ಪ್ರದೇಶ, ಕೇರಳ, ಮಣಿಪುರ್, ಮೇಘಾಲಯ, ಮಿಜೋರಾಂ, ನಾಗಲ್ಯಾಂಡ್, ಪಂಜಾಬ್, ಸಿಕ್ಕಿಂ, ತಮಿಳುನಾಡು, ತ್ರಿಪುರ, ಉತ್ತರಾಖಂಡ, ಪಶ್ಚಿಮ ಬಂಗಾಳಕ್ಕೆ ಅನುದಾನ ನೀಡಿದೆ. ಈ ಪಟ್ಟಿಯಲ್ಲಿ ಎಲ್ಲೂ ಕರ್ನಾಟಕದ ಹೆಸರು ಉಲ್ಲೇಖಿಸಿಲ್ಲದ ಹಿನ್ನಲೆ ಮೊದಲ ಕಂತಿನ ಅನುದಾನ ಹಂಚಿಕೆಯಲ್ಲಿ ಕರ್ನಾಟಕನ್ನ ಕೇಂದ್ರ ಸರ್ಕಾರ ಕೈ ಬಿಟ್ಟಿತಾ ಎಂಬ ಪ್ರಶ್ನೆ ಎದ್ದಿದೆ.

    ನೆರೆ ಪರಿಹಾರ:
    ರಾಜ್ಯದಲ್ಲಿ ನೆರೆ ನಷ್ಟ ಅಂದಾಜು 1 ಲಕ್ಷ ಕೋಟಿ ರೂ. ಆಗಿತ್ತು. ಆದರೆ ಪ್ರಧಾನಿ ಮೋದಿ ಸರ್ಕಾರ ಈವರೆಗೂ ಎರಡು ಕಂತುಗಳಲ್ಲಿ 3,069 ಕೋಟಿ ರೂ. ಮಾತ್ರ ನೀಡಿದೆ. ಉಳಿದ ಪರಿಹಾರವನ್ನು ಯಾವಾಗ ನೀಡುತ್ತೆ ಅಂತಾ ಕಾಯ್ತಿದ್ದ ಕರ್ನಾಟಕಕ್ಕೆ ಕೇಂದ್ರದ ನಡೆ ದೊಡ್ಡ ಶಾಕ್ ನೀಡಿದೆ.

    ಇದೇ ವಿಚಾರವಾಗಿ ಜನರಿಯಲ್ಲಿ ಟ್ವೀಟ್ ಮಾಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ, ನೆರೆ ಪರಿಹಾರಕ್ಕಾಗಿ 1869 ಕೋಟಿ ರೂ. ಪರಿಹಾರ ನೀಡಿರುವ ನರೇಂದ್ರ ಮೋದಿ ಸರ್ಕಾರಕ್ಕೆ ಧನ್ಯವಾದಗಳು. ಅಂದಾಜು ನೆರೆ ನಷ್ಟ 1 ಲಕ್ಷ ಕೋಟಿ ರೂ. ಸಿಎಂ ಯಡಿಯೂರಪ್ಪ ಸರ್ಕಾರ ಕೇಳಿದ್ದು 38 ಸಾವಿರ ಕೋಟಿ ರೂ. ಎರಡು ಕಂತುಗಳಲ್ಲಿ ಕೇಂದ್ರ ನೀಡಿರುವುದು ರೂ.3,069 ಕೋಟಿ. ಉಳಿದದ್ದು ಯಾವಾಗ ಎಂದು ಪ್ರಶ್ನಿಸಿದ್ದರು.

    ಆಗಸ್ಟ್ ತಿಂಗಳ ನೆರೆಹಾವಳಿಯ ಸಮೀಕ್ಷಾ ವರದಿ ಆಧಾರದಲ್ಲಿ ಸಿಎಂ ಯಡಿಯೂರಪ್ಪನವರು ರೂ.38 ಸಾವಿರ ಕೋಟಿ ಪರಿಹಾರ ಕೇಳಿದ್ದರು. ಅಕ್ಟೋಬರ್ ತಿಂಗಳ ಅತಿವೃಷ್ಟಿಯ ಸಮೀಕ್ಷೆ ಇನ್ನೂ ನಡೆದಿಲ್ಲ. ಅದನ್ನು ತಕ್ಷಣ ಪೂರ್ಣಗೊಳಿಸಿ. ಆ ಸಮೀಕ್ಷಾ ವರದಿಯ ಜೊತೆ ಪರಿಹಾರಕ್ಕಾಗಿ ಪೂರಕ ಬೇಡಿಕೆ ಸಲ್ಲಿಸಬೇಕೆಂದು ಆಗ್ರಹಿಸುತ್ತೇನೆ ಎಂದಿದ್ದರು.

  • ದೆಹಲಿ ಜಮಾತ್‍ನಿಂದಲೇ 3,000 ಸಮೀಪ ಸೋಂಕಿತರು- 24 ಗಂಟೆಯಲ್ಲಿ 336 ಸೋಂಕು, 12 ಸಾವು

    ದೆಹಲಿ ಜಮಾತ್‍ನಿಂದಲೇ 3,000 ಸಮೀಪ ಸೋಂಕಿತರು- 24 ಗಂಟೆಯಲ್ಲಿ 336 ಸೋಂಕು, 12 ಸಾವು

    ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,640ಕ್ಕೆ ಏರಿದೆ. 75 ಜನ ಸಾವನ್ನಪ್ಪಿದ್ದಾರೆ. ಇವತ್ತು ಒಂದೇ ದಿನ 12 ಸಾವಾಗಿದ್ದು, 336 ಹೊಸ ಕೇಸ್‍ಗಳು ಸಾಭೀತಾಗಿವೆ.

    ದೆಹಲಿಯ ತಬ್ಲಿಘಿಯಿಂದಲೇ 14 ರಾಜ್ಯಗಳಿಗೆ ವೈರಸ್ ಹರಡಿದ್ದು, 647 ಮಂದಿಗೆ ಸೋಂಕು ಅಂಟಿದೆ. ನೆರೆಯ ತಮಿಳುನಾಡಿನಲ್ಲಿ ಇವತ್ತು ಒಂದೇ ದಿನ 102 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 411ಕ್ಕೆ ಏರಿದೆ. ದೆಹಲಿಯಲ್ಲಿಯೂ ಇದೇ ಪರಿಸ್ಥಿತಿ ಇದ್ದು, 91 ಹೊಸ ಕೇಸ್ ಪತ್ತೆಯಾಗಿ 384ಕ್ಕೆ ಜಿಗಿದಿದೆ.

    ಮುಂಬೈನ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ 11 ಯೋಧರಿಗೆ ಸೋಂಕು ತಗಲಿದೆ. ಉತ್ತರ ಪ್ರದೇಶದ ಗಾಜಿಯಾಬಾದ್‍ನ ಆಸ್ಪತ್ರೆಯಲ್ಲಿ ಕ್ವಾರಂಟೈನ್‍ನಲ್ಲಿರುವ ತಬ್ಲಿಘಿ ಸದಸ್ಯರು ನರ್ಸ್ ಗಳ ಮೇಲೆ ಹಲ್ಲೆ, ದುರ್ವರ್ತನೆ ತೋರುತ್ತಿರುವುದಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಕಿಡಿಕಾರಿದ್ದಾರೆ. ಅವರು ಮಾನವೀಯತೆ ಶತ್ರುಗಳು ಅಂತ ಕಿಡಿಕಾರಿದ್ದು, ಎನ್‍ಎಸ್‍ಎ ಕಾಯಿದೆ ಅಡಿ ಕೇಸ್ ದಾಖಲಿಸುವಂತೆ ಆದೇಶಿಸಿದ್ದಾರೆ. ಎನ್‍ಎಸ್‍ಎ ಪ್ರಕಾರ ಒಂದು ವರ್ಷ ಜೈಲಿನಲ್ಲಿಡುವ ಅವಕಾಶ ಇದೆ.

    ಟಾಪ್ 5 ರಾಜ್ಯಗಳಲ್ಲಿ ಕೊರೊನಾ:
    ಮಹಾರಾಷ್ಟ್ರ – 423
    ತಮಿಳುನಾಡು- 411 (102 ಇವತ್ತು)
    ದೆಹಲಿ – 384 (91 ಇವತ್ತು)
    ಕೇರಳ – 295 (9 ಇವತ್ತು)
    ಉತ್ತರ ಪ್ರದೇಶ- 172 (44 ಇವತ್ತು)

  • ‘ಮುಸ್ಲಿಮರ ಕೈ-ಬಾಯಿಂದ ಮತ್ತೊಬ್ಬರಿಗೆ ತೊಂದರೆ ಆಗಬಾರದು, ಪರೀಕ್ಷಿಸಿಕೊಳ್ಳಿ’

    ‘ಮುಸ್ಲಿಮರ ಕೈ-ಬಾಯಿಂದ ಮತ್ತೊಬ್ಬರಿಗೆ ತೊಂದರೆ ಆಗಬಾರದು, ಪರೀಕ್ಷಿಸಿಕೊಳ್ಳಿ’

    ಚಿಕ್ಕಮಗಳೂರು: ಮುಸ್ಲಿಮರ ಕೈ-ಬಾಯಿಂದ ಮತ್ತೊಬ್ಬರಿಗೆ ತೊಂದರೆ ಆಗಬಾರದು, ಪರೀಕ್ಷಿಸಿಕೊಳ್ಳಿ ಎಂದು ನಗರದ ಅಲ್ ಹುದಾ ಎಜುಕೇಶನ್ ಅಂಡ್ ಚಾರಿಟಬಲ್ ಟ್ರಸ್ಟ್‌ನ ಚೇರ್ಮನ್ ಮೊಹಮ್ಮದ್ ಅಹ್ಮದ್ ಮನವಿ ಮಾಡಿಕೊಂಡಿದ್ದಾರೆ.

    ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಪ್ರವಾದಿಯವರ ವಚನವೇ ಇದೆ, ಮುಸ್ಲಿಂ ಅಂದರೆ ಅವನ ಕೈ ಹಾಗೂ ಬಾಯಿಂದ ಬೇರೆಯವರಿಗೆ ತೊಂದರೆಯಾಗಬಾರದು. ಹಾಗಾಗಿ ಯಾರದಾದರು ನಿಜಾಮುದ್ದೀನ್ ಧಾರ್ಮಿಕ ಸಭೆಗೆ ಹೋಗಿದ್ದರೆ ನಿಮ್ಮಲ್ಲಿ ವಿನಮ್ರವಾಗಿ ಪ್ರಾರ್ಥಿಸಿಕೊಳ್ಳುತ್ತೇನೆ ದಯವಿಟ್ಟು ಪರೀಕ್ಷೆಗೆ ಒಳಪಡಿಸಿಕೊಳ್ಳಿ. ಇದರಿಂದ ನಿಮಗೂ, ನಿಮ್ಮ ಕುಟುಂಬಕ್ಕೂ ಹಾಗೂ ದೇಶಕ್ಕೂ ಒಳ್ಳೆದಾಗುತ್ತೆ ಎಂದು ಕೇಳಿಕೊಂಡರು.

    ನಮ್ಮಿಂದ ಸಮಾಜಕ್ಕೆ ಒಳ್ಳೆಯದ್ದಾಗಬೇಕೆ ವಿನಃ ಹಾನಿಯಾಗಬಾರದು. ಕೊರೊನಾ ವೈರಸ್ ಹರಡುವುದಕ್ಕೆ ನಾವು ಕಾರಣವಾಗಬಾರದು. ನಮ್ಮಿಂದ ಕೊರೊನಾ ಹರಡಿ ಬೇರೆಯವಿಗೆ ತೊಂದರೆಯಾಗಬಾರದು ಎಂದು ತಿಳಿಸಿದರು.

    ನನ್ನ ಗಮನಕ್ಕೆ ಬಂದಂತೆ ನಮ್ಮ ಜಿಲ್ಲೆಯಿಂದ ಯಾರೂ ತಬ್ಲಿಘಿ ಜಮಾತ್ ಸಭೆಗೆ ಹೋಗಿಲ್ಲ. ಒಂದು ವೇಳೆ ನನ್ನ ಗಮನಕ್ಕೆ ಬಾರದೆ ಯಾರಾದರೂ ಹೋಗಿದ್ದರೆ ಅಥವಾ ಬೇರೆಯವರು ಹೋದವರು ಇದ್ದರೆ ದಯವಿಟ್ಟು ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿ. ನಿಮ್ಮನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿಕೊಳ್ಳಿ ಎಂದು ಮುಸ್ಲಿಂ ಸಮುದಾಯದವರಿಗೆ ಮನವಿ ಮಾಡಿಕೊಂಡರು.

  • ದೆಹಲಿ ಜಮಾತ್‍ನಿಂದ ಬಂದಿದ್ದ ಬೆಳಗಾವಿಯ ಮೂವರಿಗೆ ಕೊರೊನಾ

    ದೆಹಲಿ ಜಮಾತ್‍ನಿಂದ ಬಂದಿದ್ದ ಬೆಳಗಾವಿಯ ಮೂವರಿಗೆ ಕೊರೊನಾ

    – ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 128ಕ್ಕೆ ಏರಿಕೆ

    ಬೆಂಗಳೂರು: ದೆಹಲಿ ತಬ್ಲಿಘಿ ಜಮಾತ್ ಸಭೆಗೆ ಹೋಗಿ ಬಂದಿದ್ದ ಬೆಳಗಾವಿಯ ಮೂವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 128ಕ್ಕೆ ಏರಿಕೆ ಕಂಡಿದೆ.

    ಈ ಕುರಿತು ಪಬ್ಲಿಕ್ ಟಿವಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿ, ಬೆಳಗಾವಿಯ ಮೂವರಲ್ಲಿ ಕೊರೊನಾ ಸೋಂಕು ತಗುಲಿದೆ. ಈ ಮೂವರು ದೆಹಲಿಯ ಜಮಾಜ್ ಸಭೆಗೆ ತೆರಳಿದ್ದವರೇ ಆಗಿದ್ದಾರೆ. ಶಿವಮೊಗ್ಗದ ಲ್ಯಾಬ್‍ನಿಂದ ಬಂದಿರುವ ರಿಪೋರ್ಟ್ ನಲ್ಲಿ ಸೋಂಕು ತಗುಲಿರುವುದು ಖಚಿತವಾಗಿದೆ. ಆದರೆ ಪುಣೆಯ ರಿಪೋರ್ಟ್ ಗಾಗಿ ಬೆಳಗಾವಿ ಜಿಲ್ಲಾಡಳಿತ ಕಾಯುತ್ತಿದೆ. ಪುಣೆಯ ಲ್ಯಾಬ್ ವರದಿ ಬಂದ ನಂತರ ಅಧಿಕೃತ ಘೋಷಣೆ ಮಾಡಲಾಗುತ್ತದೆ. ಸದ್ಯ ಮೂವರು ಸೋಂಕಿತರು ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ನಿಜಾಮುದ್ದೀನ್ ಮರ್ಕಜ್ ಮಸೀದಿಯಲ್ಲಿ ನಡೆದ ತಬ್ಲಿಘಿ ಜಮಾತ್ ಕಾರ್ಯಕ್ರಮವು ಬೆಳಗಾವಿಯಲ್ಲಿ ಆತಂಕ ಸೃಷ್ಟಿಸಿದೆ. ಈ ಕಾರ್ಯಕ್ರಮದಿಂದ ಬೆಳಗಾವಿಗೆ ವಾಪಸ್ ಆಗಿದ್ದ 62 ಜನರನ್ನು ಜಿಲ್ಲಾಡಳಿತ ಪತ್ತೆ ಹಚ್ಚಿ ಕ್ವಾರಂಟೈನ್‍ನಲ್ಲಿ ಇರಿಸಿದೆ. ಕೊರೊನಾ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ 35 ಜನರ ಥ್ರೋಟ್ ಸ್ವ್ಯಾಬ್, ರಕ್ತದ ಮಾದರಿ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು.

    35 ಜನರ ಪೈಕಿ 27 ಮಂದಿಯ ಮಾದರಿಯನ್ನು ಶಿವಮೊಗ್ಗ ಹಾಗೂ 6 ಜನರ ಮಾದರಿಯನ್ನು ಬೆಂಗಳೂರಿಗೆ ಕಳುಹಿಸಲಾಗಿತ್ತು. ಬೆಂಗಳೂರಿಗೆ ಕಳುಹಿಸಿದ್ದ ಆರು ಮಾದರಿಗಳಲ್ಲಿ ಮೂವರ ರಿಪೋರ್ಟ್ ಪಾಸಿಟೀವ್ ಬಂದಿದೆ. ಇದರಿಂದಾಗಿ ಈವರೆಗೂ ದೆಹಲಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಿಸಿದ್ದ ರಾಜ್ಯದ ಒಟ್ಟು 13 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

    ಸೋಂಕಿತರು ನಗರದ ಕ್ಯಾಂಪ್ ಪ್ರದೇಶದ ಕಸಾಯಿ ಗಲ್ಲಿ, ಬೆಳಗಾವಿ ತಾಲೂಕಿನ ಬೆಳಗುಂದಿ ಹಾಗೂ ಹಿರೇಬಾಗೇವಾಡಿ ನಿವಾಸಿಗಳಾಗಿದ್ದಾರೆ. ಅವರು ದೆಹಲಿಯ ನಿಜಾಮುದ್ದೀನ್ ಕಾರ್ಯಕ್ರಮದಲ್ಲಿ 3ಕ್ಕೂ ಹೆಚ್ಚು ದಿನ ಭಾಗಿಯಾಗಿದ್ದರು. ಬಳಿಕ ದೆಹಲಿಯಿಂದ ಸಂಪರ್ಕ್ ಕ್ರಾಂತಿ ಎಕ್ಸ್‍ಪ್ರೆಸ್ ರೈಲಿನಲ್ಲಿ ರಾಜ್ಯಕ್ಕೆ ಆಗಮಿಸಿದ್ದರು ಎಂಬ ಮಾಹಿತಿಯನ್ನು ಜಿಲ್ಲಾಡಳಿತ ಕಲೆಹಾಕಿದೆ. ಅಷ್ಟೇ ಅಲ್ಲದೆ ಮತ್ತಷ್ಟು ಟ್ರಾವೆಲ್ ಹಿಸ್ಟರಿಯನ್ನು ಕಲೆ ಹಾಕುತ್ತಿದ್ದು, ಸೋಂಕಿತರು ವಾಸವಿದ್ದ ಸ್ಥಳವನ್ನು ಬಫರ್ ಜೋನ್ ಎಂದು ಘೋಷಣೆ ಮಾಡಲಾಗಿದೆ.

  • ಲಾಕ್‍ಡೌನ್ ಮಧ್ಯೆ ಅಂಚೆ ಕಚೇರಿ ಮುಂದೆ ಪಿಂಚಣಿಗಾಗಿ ಮುಗಿಬಿದ್ದ ಜನ

    ಲಾಕ್‍ಡೌನ್ ಮಧ್ಯೆ ಅಂಚೆ ಕಚೇರಿ ಮುಂದೆ ಪಿಂಚಣಿಗಾಗಿ ಮುಗಿಬಿದ್ದ ಜನ

    ರಾಯಚೂರು: ಕೊರೊನಾ ವೈರಸ್ ಭೀತಿಯ ಮಧ್ಯೆ ಪಿಂಚಣಿ ಪಡೆಯಲು ನಗರದ ಮುಕರಮಗಂಜ್ ಉಪ ಅಂಚೆ ಕಚೇರಿ ಮುಂದೆ ಜನ ಮುಗಿಬಿದ್ದು ಪರದಾಡಿದ್ದಾರೆ.

    ಕೊರೊನಾ ಹರಡುವಿಕೆಯ ಭೀತಿ ಹಿನ್ನೆಲೆ ದೇಶವೇ ಲಾಕ್ ಡೌನ್ ಆಗಿದ್ದರೂ ಲೆಕ್ಕಿಸದೇ ಪಿಂಚಣಿಗಾಗಿ ನೂರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಅಂಚೆ ಕಚೇರಿ ಮುಂದೆ ಪಿಂಚಣಿಗಾಗಿ ವೃದ್ಧರು, ವಿಧವೆಯರು ಅಂಗವಿಕಲರು ಜಮಾಯಿಸಿದ್ದರು. ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಪಿಂಚಣಿದಾರರು ಪಿಂಚಣಿಗಾಗಿ ಮನವಿ ಮಾಡಿದರು.

    ಐದು ತಿಂಗಳಿಂದ ಪಿಂಚಣಿಯಿಲ್ಲದೆ ಬದುಕು ಕಷ್ಟವಾಗಿದೆ. ದಯವಿಟ್ಟು ಪಿಂಚಣಿ ಹಣ ನೀಡಿ ಅಂತ ಒತ್ತಾಯಿಸಿದರು. ಸುಮಾರು ಹೊತ್ತು ಅಂಚೆ ಕಚೇರಿಯಲ್ಲಿ ಜನ ಜಮಾಯಿಸಿದ್ದರೂ ಅಂಚೆ ಇಲಾಖೆ ಸಿಬ್ಬಂದಿಯಾಗಲಿ, ಪೊಲೀಸ್ ಇಲಾಖೆ ಸಿಬ್ಬಂದಿಯಾಗಲಿ ಸ್ಥಳಕ್ಕಾಗಮಿಸಿ ಜನರನ್ನು ನಿಯಂತ್ರಿಸುವ ಪ್ರಯತ್ನ ಮಾಡಲಿಲ್ಲ.

    ಈಗಾಗಲೇ ಕೊರೊನಾ ವ್ಯಾಪಕವಾಗಿ ಹಬ್ಬುತ್ತಿದ್ದರು ಎಚ್ಚೆತ್ತುಕೊಳ್ಳದ ಜನ ಗುಂಪುಗುಂಪಾಗೇ ಅಂಚೆ ಕಚೇರಿ ಮುಂದೆ ಕುಳಿತಿದ್ದರು. ಇನ್ನೊಂದೆಡೆ ಪಿಂಚಣಿ ಸಿಗದಿರುವುದರಿಂದ ವೃದ್ಧರು, ಅಂಗವಿಕಲರು ಪರದಾಡುತ್ತಿದ್ದಾರೆ. ದೇಶವೇ ಲಾಕ್‍ಡೌನ್ ಆಗಿರುವುದರಿಂದ ದುಡಿಯಲು ಕೆಲಸವೂ ಇಲ್ಲಾ ಇತ್ತ ಪಿಂಚಣಿಯೂ ಇಲ್ಲದೆ ಜೀವನ ಸಾಗಿಸುವುದು ಕಷ್ಟವಾಗಿದೆ ಅಂತ ಆಕ್ರೋಶ ವ್ಯಕ್ತಪಡಿಸಿದರು.

  • ಕೊರೊನಾ ಭೀತಿ ಮಧ್ಯೆ ಶುಭಸುದ್ದಿ – ನೈಋತ್ಯದಲ್ಲಿ ಉತ್ತಮ ಮಳೆ

    ಕೊರೊನಾ ಭೀತಿ ಮಧ್ಯೆ ಶುಭಸುದ್ದಿ – ನೈಋತ್ಯದಲ್ಲಿ ಉತ್ತಮ ಮಳೆ

    ನವದೆಹಲಿ: ಕೊರೊನಾ ವೈರಸ್ ಭೀತಿ ನಡುವೆ ಹವಾಮಾನ ಇಲಾಖೆ ಶುಭಸುದ್ದಿಯೊಂದನ್ನು ನೀಡಿದೆ. ಆಗಾಗ ಮಳೆಗೆ ಅಡ್ಡಿಪಡಿಸುತ್ತಿದ್ದ ‘ಎಲ್ ನಿನೋ’ ಪ್ರಭಾವದ ಬಗ್ಗೆ ಮಾಹಿತಿ ಲಭಿಸಿದ್ದು, ಈ ಬಾರಿ ನೈಋತ್ಯದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.

    ಭಾರತದಲ್ಲಿ ಸದ್ಯ ಕೊರೊನಾ ಅಟ್ಟಹಾಸಕ್ಕೆ ರೈತಾಪಿ ವರ್ಗ ನಷ್ಟ ಅನುಭವಿಸುತ್ತಿದೆ. ಭಾರತದಲ್ಲಿ ಮುಕ್ಕಾಲು ಭಾಗ ಜನರು ನೇರವಾಗಿ ಅಥವಾ ಪರೋಕ್ಷವಾಗಿ ಕೃಷಿಯನ್ನೇ ಅವಲಂಭಿಸಿದ್ದಾರೆ. ಹವಾಮಾನ ಇಲಾಖೆ ಏಪ್ರಿಲ್ ತಿಂಗಳ ಮಳೆ ಮುನ್ಸೂಚನೆ ಬಗ್ಗೆ ವರದಿ ಮಾಡಿದೆ. ಈ ಬಾರಿ ‘ಎಲ್ ನಿನೋ’ ಕಡಿಮೆ ಸಂಭವನೀಯತೆಯನ್ನು ಹೊಂದಿದೆ. ಇದು ಮಳೆಗೆ ಖಂಡಿತವಾಗಿಯೂ ಒಳ್ಳೆಯದು. ಆದರೆ ಸಂಕೀರ್ಣ ಹವಾಮಾನ ವ್ಯವಸ್ಥೆ ಇತರೆ ಹಲವು ಅಂಶಗಳ ಮೇಲೆ ಅವಲಂಭಿಸಿರುತ್ತದೆ ಎಂದು ಹವಾಮಾನಶಾಸ್ತ್ರಜ್ಞರು ಮಾಹಿತಿ ನೀಡಿದ್ದಾರೆ.

    ಒಂದು ವೇಳೆ ಜೂನ್-ಸೆಪ್ಟೆಂಬರ್ ತಿಂಗಳ ಮಳೆ ಸಾಮಾನ್ಯವಾಗಿದ್ದರೆ, ಈಗ ಲಾಕ್‍ಡೌನ್‍ನಿಂದ ಬೆಳೆ ಸರಬರಾಜು ಮಾಡಲು ಸಮಸ್ಯೆ ಎದುರಿಸುತ್ತಿರುವ ರೈತರು ಬೇಸಿಗೆ ಬಿತ್ತನೆಯಿಂದ ಉತ್ತಮ ಲಾಭವನ್ನು ನಿರೀಕ್ಷಿಸಬಹುದಾಗಿದೆ. ಇದು ಭಾರತದ ಆರ್ಥಿಕ ಮನೋಭಾವ ಮತ್ತು ದ್ವಿಚಕ್ರ ವಾಹನಗಳು, ಚಿನ್ನ, ಗ್ರಾಹಕರ ಸರಕುಗಳು, ಕಾರುಗಳು ಹಾಗೂ ಟ್ರ್ಯಾಕ್ಟರ್ ಗಳು ಸೇರಿದಂತೆ ಸರಕುಗಳ ಗ್ರಾಮೀಣ ಬೇಡಿಕೆಯನ್ನು ಹೆಚ್ಚಿಸುತ್ತದೆ.

    El Nino Southern Oscillation(ಇಎನ್‍ಎಸ್‍ಒ) ಸಮಭಾಜಕ ಪೆಸಿಫಿಕ್ ಮಹಾಸಾಗರದ ಮೇಲ್ಮೈ ನೀರನ್ನು ಬೆಚ್ಚಗಿರಿಸುತ್ತದೆ. ಭಾರತೀಯ ಹವಾಮಾನ ಇಲಾಖೆಗೆ(ಐಎಂಡಿ) ಲಭ್ಯವಿರುವ ಮಾಹಿತಿ ಪ್ರಕಾರ, ಸದ್ಯ ಪೆಸಿಫಿಕ್ ಮಹಾಸಾಗರದ ಮೇಲ್ಮೈ ನೀರು ಬೆಚ್ಚಗಿದ್ದು, ಇನ್ನು ಮೂರು ತಿಂಗಳ ಅವಧಿಯಲ್ಲಿ ಅದು ತಟಸ್ಥವಾಗಲಿದೆ. ಹೀಗಾಗಿ ಮಳೆ ಉತ್ತಮವಾಗುವ ಸಾಧ್ಯತೆ ಇದೆ. ಆಸ್ಟ್ರೇಲಿಯಾದ ಹವಾಮಾನ ಇಲಾಖೆ ಕೂಡ ಈ ಬಗ್ಗೆ ವರದಿ ನೀಡಿದ್ದು, ಈ ಬಾರಿ ಇಎನ್‍ಎಸ್‍ಒ ಮಾಹಿತಿ ನಿಖರವಾಗಿದ್ದು, ಪೆಸಿಫಿಕ್ ಮಹಾಸಾಗರದ ಮೇಲ್ಮೈ ನೀರು ತಟಸ್ಥವಾಗುತ್ತದೆ ಎಂದು ತಿಳಿಸಿದೆ.

    ಏನಿದು ಎಲ್ ನಿನೋ?
    ಎಲ್ ನಿನೋ ಎಂದರೆ ಪೆಸಿಫಿಕ್ ಮಹಾಸಾಗರದ ಪೆರು ಮತ್ತು ಈಕ್ವೆಡಾರ್ ಬಳಿ ಪ್ರಾರಂಭವಾಗುವ ಒಂದು ಹವಾಮಾನ ವೈಪರಿತ್ಯದ ವಿದ್ಯಮಾನವಾಗಿದೆ. ಇದರ ಪ್ರಾರಂಭದ ಸೂಚನೆಯಾಗಿ ಈ ಭಾಗದ ಪೆಸಿಫಿಕ್ ಸಾಗರದ ಮೇಲ್ಮೈ ನೀರಿನ ತಾಪಮಾನದ ಸರಾಸರಿಗಿಂತ ಹೆಚ್ಚಾಗಲು ಆರಂಭವಾಗುತ್ತದೆ. ಪೆಸಿಫಿಕ್ ಸಾಗರದ ಮೇಲ್ಮೈ ತಾಪ ಸರಾಸರಿ ಸಹಜ ತಾಪಕ್ಕಿಂತ 0.5-0.9 ಡಿಗ್ರಿ ಸೆಲ್ಸಿಯಸ್ ಇದ್ದರೆ ಅದನ್ನು ದುರ್ಬಲ ಎನ್ ನಿನೋ ಎಂದು ಕರೆಯಲಾಗುತ್ತದೆ. ಎಲ್‍ನಿನೋ 1.5 ಡಿಗ್ರಿಗಿಂತ ಹೆಚ್ಚಿರಬೇಕು ಆಗ ಉತ್ತಮ ಮಳೆ ಆಗುತ್ತದೆ.

    ಒಂದು ವೇಳೆ ಪೆಸಿಫಿಕ್ ಮೇಲ್ಮೈ ನೀರು ಬೆಚ್ಚಗಿದ್ದರೆ ಅದು ಶುಷ್ಕ ಹವಾಮಾನಕ್ಕೆ ಕಾರಣವಾಗುತ್ತದೆ. ಇದರಿಂದ ಮಳೆ ಕಡಿಮೆಗೊಳ್ಳುತ್ತದೆ. ಭಾರತದ ಬಹುತೇಕ ಭಾಗದಲ್ಲಿ ಸರಾಸರಿ ತಾಪಮಾನ 0.5 ಡಿಗ್ರಿ ಸೆಲ್ಸಿಯಸ್ ಅಥವಾ 1 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಇತ್ತ ಹಿಂದೂ ಮಹಾಸಾಗರದ ದ್ವಿಧ್ರುವಿ (ಐಓಡಿ)ಎಂದು ಕರೆಯಲ್ಪಡುವ ಮತ್ತೊಂದು ವಿದ್ಯಮಾನವು ತಟಸ್ಥವಾಗಿದೆ. ಈ ವಿದ್ಯಮಾನವು ಹಿಂದೂ ಮಹಾಸಾಗರದ ವಿವಿಧ ಭಾಗಗಳ ನಡುವಿನ ತಾಪಮಾನದಲ್ಲಿನ ವ್ಯತ್ಯಾಸವನ್ನು ತಿಳಿಸುತ್ತದೆ. ಭಾರತೀಯ ಮಾನ್ಸೂನ್‍ಗೆ ಸಕಾರಾತ್ಮಕ ಐಒಡಿ ರೇಟಿಂಗ್ ಸಹಾಯ ಮಾಡುತ್ತದೆ ಎಂದು ಐಎಂಡಿ ಹೇಳಿದೆ. ಕಳೆದ ಬಾರಿ ಐಒಡಿ ರೇಟಿಂಗ್ ಪಾಸಿಟಿವ್ ಇದ್ದ ಕಾರಣಕ್ಕೆ ಜೂನ್ ತಿಂಗಳ ಮೊದಲ ವಾರದಲ್ಲೇ ದಾಖಲೆ ಪ್ರಮಾಣದ ಮಳೆ ಭಾರತದಲ್ಲಿ ಸುರಿದಿತ್ತು.

  • ಭಾರತದಲ್ಲಿ ಕೊರೊನಾ ರಣಕೇಕೆ – ದೇಶಾದ್ಯಂತ 2,301 ಮಂದಿಗೆ ಸೋಂಕು, 56 ಬಲಿ

    ಭಾರತದಲ್ಲಿ ಕೊರೊನಾ ರಣಕೇಕೆ – ದೇಶಾದ್ಯಂತ 2,301 ಮಂದಿಗೆ ಸೋಂಕು, 56 ಬಲಿ

    ನವದೆಹಲಿ: ಎಲ್ಲೆಡೆ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ವೈರಸ್‍ಗೆ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಇತ್ತ ಭಾರತದಲ್ಲೂ ಕೊರೊನಾ ವೈರಸ್ ಹರಡುವಿಕೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಈವರೆಗೆ ಕೋವಿಡ್-19 ಸೋಂಕಿಗೆ 2,301 ಮಂದಿ ತುತ್ತಾಗಿದ್ದಾರೆ. ಅಲ್ಲದೇ 56 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

    ವಿಶ್ವಾದ್ಯಂತ ರಣಕೇಕೆ ಹಾಕುತ್ತಿರುವ ಸೋಂಕಿಗೆ ಈವರೆಗೆ ಸುಮಾರು 10,16,330 ಮಂದಿ ತುತ್ತಾಗಿದ್ದಾರೆ. ಕೊರೊನಾ ವೈರಸ್‍ನಿಂದ 53,238 ಮಂದಿ ಸಾವನ್ನಪ್ಪಿದ್ದರೆ, 2,13,132 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ವರದಿಯಾಗಿದೆ.

    ಗುರುವಾರದವರೆಗಿನ ವರದಿ ಪ್ರಕಾರ, ಮಹಾರಾಷ್ಟ್ರವನ್ನು ಭಾರತದಲ್ಲಿಯೇ ಅತಿ ಹೆಚ್ಚು ಕೊರೊನಾ ಸೋಂಕು ವರದಿಯಾದ ರಾಜ್ಯ ಎನ್ನಲಾಗಿದೆ. ಯಾಕೆಂದರೆ ಇಲ್ಲಿ 335 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 13 ಮಂದಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆ ಮಹಾರಾಷ್ಟ್ರ ಸರ್ಕಾರ 30 ಸರ್ಕಾರಿ ಆಸ್ಪತ್ರೆಗಳನ್ನು ಕೋವಿಡ್-19 ಚಿಕಿತ್ಸೆಗಾಗಿಯೇ ಮೀಸಲಿಟ್ಟಿದ್ದು, ಈ ಎಲ್ಲಾ ಆಸ್ಪತ್ರೆಗಳು ಸೇರಿ ಸುಮಾರು 2,305 ಬೆಡ್‍ಗಳ ಸೌಲಭ್ಯ ಲಭ್ಯವಿದೆ.

    ಹೆಚ್ಚು ಕೊರೊನಾ ಸೋಂಕು ವರದಿಯಾಗಿರುವ ರಾಜ್ಯಗಳ ಪಟ್ಟಿಯಲ್ಲಿ ಕೇರಳ ಎರಡನೇ ಸ್ಥಾನದಲ್ಲಿದೆ. ಕೇರಳದಲ್ಲಿ 265 ಮಂದಿಗೆ ಸೋಂಕು ತಗುಲಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಆ ಬಳಿಕ ತಮಿಳುನಾಡಿನಲ್ಲಿ 234 ಸೋಂಕಿತ ಪ್ರಕರಣ ವರದಿಯಾಗಿದ್ದು, ಒಬ್ಬರು ಕೊರೊನಾಗೆ ಬಲಿಯಾಗಿದ್ದಾರೆ. ಇತ್ತ ದೆಹಲಿಯಲ್ಲಿ 219 ಮಂದಿ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲಿ 125 ಮಂದಿಗೆ ಸೋಂಕು ತಗುಲಿದ್ದು, ಮೂವರು ಮೃತಪಟ್ಟಿದ್ದಾರೆ.

    ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‍ನಲ್ಲಿ(ಐಸಿಎಂಆರ್) ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ಸಾಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥ ರಾಮನ್ ಆರ್.ಜಿ ಅವರು ಪ್ರತಿಕ್ರಿಯಿಸಿ, ಭಾರತದಲ್ಲಿ ಬುಧವಾರದವರೆಗೆ ಸುಮಾರು 47,951 ಮಂದಿಗೆ ಕೋವಿಡ್-19 ಪರೀಕ್ಷೆ ಮಾಡಲಾಗಿದೆ ಎಂದು ತಿಳಿಸಿದ್ದರು.

    ಭಾರತದಲ್ಲಿ ಕೆಲ ಸ್ಥಳಗಳನ್ನು ಕೊರೊನಾ ವೈರಸ್ ಸೋಂಕಿನ ಹಾಟ್‍ಸ್ಪಾಟ್ ಎಂದು ಗುರುತಿಸಲಾಗಿದೆ. ದೆಹಲಿಯ ದಿಲ್ಶಾದ್ ಗಾರ್ಡನ್ ಹಾಗೂ ನಿಜಾಮುದ್ದೀನ್, ಉತ್ತರ ಪ್ರದೇಶದ ಮೀರತ್ ಹಾಗೂ ನೋಯ್ಡಾ, ರಾಜಸ್ಥಾನದ ಭಿಲ್ವಾರ, ಅಹಮದಾಬಾದ್, ಕೇರಳದ ಕಾಸರಗೋಡು ಹಾಗೂ ಪಥನಂತಿಟ್ಟ, ಮುಂಬೈ ಹಾಗೂ ಪುಣೆ ನಗರಗಳಲ್ಲಿ ಹೆಚ್ಚು ಕೊರೊನಾ ಸೋಂಕಿನ ಪ್ರಕರಣಗಳು ವರದಿಯಾಗಿದೆ.

    ಜಮಾತ್‍ನಲ್ಲಿ ನಡೆದ ತಬ್ಲಿಘಿ ಸಮಾವೇಶದಲ್ಲಿ ಭಾಗಿಯಾಗಿದ್ದ 9 ಸಾವಿರ ಕಾರ್ಯಕರ್ತರನ್ನು ನಾವು ಗುರುತಿಸಿ, ಅವರ ವಿವರಗಳನ್ನು ಪಡೆದಿದ್ದೇವೆ. ಅವರಲ್ಲಿ 1,306 ಮಂದಿ ವಿದೇಶಿಗರಿದ್ದಾರೆ. ಎಲ್ಲರನ್ನೂ ಹೋಂ ಕ್ವಾರಂಟೈನ್ ಆಗಿರಲು ಸೂಚಿಸಿದ್ದೇವೆ ಎಂದು ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.

  • ಬ್ರಿಟನ್ ರಾಜಕುಮಾರನಿಗೆ ಬೆಂಗ್ಳೂರು ವೈದ್ಯನಿಂದ ಚಿಕಿತ್ಸೆ

    ಬ್ರಿಟನ್ ರಾಜಕುಮಾರನಿಗೆ ಬೆಂಗ್ಳೂರು ವೈದ್ಯನಿಂದ ಚಿಕಿತ್ಸೆ

    – ಆಯುರ್ವೇದ ವೈದ್ಯ ಪದ್ಧತಿಯಿಂದ ಗುಣಮುಖ

    ಬೆಂಗಳೂರು: ಬ್ರಿಟನ್‍ ಪ್ರಿನ್ಸ್ ಚಾರ್ಲ್ಸ್‌ಗೆ ಕೊರೊನಾ ವೈರಸ್ ಬಂದಿದ್ದು, ಸೋಂಕು ಗುಣಮುಖವಾಗುವುದಕ್ಕೆ ಭಾರತದ ಆಯುರ್ವೇದ ವೈದ್ಯ ಪದ್ಧತಿ ಮೊರೆ ಹೋಗಿ ಕೊರೊನಾ ಗೆದ್ದು ಬಂದಿದ್ದಾರೆ.

    ಬೆಂಗಳೂರು ಮೂಲದ ವೈದ್ಯ ಐಸಾಕ್ ಮಥಾಯ್ ಬ್ರಿಟನ್‍ನ ರಾಜಕುಮಾರನಿಗೆ ಚಿಕಿತ್ಸೆ ನೀಡಿದ್ದಾರೆ. ಕೊರೊನಾ ಸೋಂಕಿತರಾಗಿದ್ದ ಪ್ರಿನ್ಸ್ ಚಾರ್ಲ್ಸ್‌ಗೆ ಐಸಾಕ್ ಮಥಾಯ್ ಇಲ್ಲಿಂದಲೇ ಆಯುರ್ವೇದದ ಚಿಕಿತ್ಸೆ ನೀಡಿದ್ದಾರೆ. ಕೇಂದ್ರ ಆಯುಷ್ ಸಚಿವ ಶ್ರೀಪಾದ್ ನಾಯ್ಕ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

    ಬೆಂಗಳೂರಿನ ಆಯುರ್ವೇದ ವೈದ್ಯರೊಬ್ಬರು ತಮ್ಮ ವೈದ್ಯ ಪದ್ಧತಿಯಿಂದ ಬ್ರಿಟನ್ ಪ್ರಿನ್ಸ್ ಚಾರ್ಲ್ಸ್‌ಗೆ ಔಷಧ ಸೂಚಿಸಿ ಅವರು ಗುಣಮುಖರಾಗಿದ್ದಾರೆಂದು ಹೇಳಿರುವುದನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಆಯುರ್ವೇದ ಹಾಗೂ ಹೋಮಿಯೋಪತಿಯಲ್ಲಿ ಕೊರೊನಾ ವೈರಸ್‍ಗೆ ಚಿಕಿತ್ಸೆ ಇದೆ ಎಂದು ಶ್ರೀಪಾದ್ ನಾಯ್ಕ್ ಹೇಳಿದ್ದಾರೆ.

    ಬ್ರಿಟನ್‍ನ ಪ್ರಿನ್ಸ್ ಚಾರ್ಲ್ಸ್‌ಗೆ ಆಯುರ್ವೇದ ಔಷಧ ನೀಡಿರುವ ವೈದ್ಯ ಐಸಾಕ್ ಮಥಾಯ್ ಅವರು ‘ಸೌಖ್ಯ’ ಎಂಬ ಆಯುರ್ವೇದ ರೆಸಾರ್ಟ್ ನಡೆಸುತ್ತಿದ್ದಾರೆ.

  • ಕಲಬುರಗಿಯಲ್ಲಿ ಮತ್ತೊಂದು ಕೊರೊನಾ – ಪತಿಗೆ ನೆಗೆಟಿವ್, ಪತ್ನಿಗೆ ಪಾಸಿಟಿವ್

    ಕಲಬುರಗಿಯಲ್ಲಿ ಮತ್ತೊಂದು ಕೊರೊನಾ – ಪತಿಗೆ ನೆಗೆಟಿವ್, ಪತ್ನಿಗೆ ಪಾಸಿಟಿವ್

    ಕಲಬುರಗಿ: ಕರ್ನಾಟಕದಲ್ಲಿ ಕೊರೊನಾ ವೈರಸ್‍ಗೆ ಕಲಬುರಗಿಯ ವೃದ್ಧನೊಬ್ಬ ಮೊದಲು ಸಾವನ್ನಪ್ಪಿದ್ದನು. ಇದೀಗ ಕಲಬುರಗಿಯಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದೆ.

    54 ವರ್ಷದ ಮಹಿಳೆಗೆ ಕೊರೊನಾ ಸೋಂಕು ಧೃಡಪಟ್ಟಿದೆ. ದೆಹಲಿ ಜಮಾತ್‍ನಲ್ಲಿ ಭಾಗಿಯಾಗಿದ್ದ ವ್ಯಕ್ತಿಯ ಜೊತೆಗೆ ಮಹಿಳೆ ಸಂಪರ್ಕ ಹೊಂದಿದ್ದರು. ದೆಹಲಿಯ ಜಮಾತ್ ಸಭೆಗೆ ಹೋಗಿ ಬಂದಿದ್ದ ಶಹಾಬಾದ್ ಮೂಲದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆ ವ್ಯಕ್ತಿಯ ವರದಿ ನೆಗೆಟಿವ್ ಬಂದಿದೆ. ಆದರೆ 60 ವರ್ಷದ ಆತನ ಪತ್ನಿಗೆ ಕೊರೊನಾ ಸೋಂಕು ಇರುವುದು ಲ್ಯಾಬ್ ವರದಿಯಲ್ಲಿ ದೃಢವಾಗಿದೆ. ಈ ಬಗ್ಗೆ ಮಾಧ್ಯಮ ಪ್ರಕಟಣೆ ಮೂಲಕ ಜಿಲ್ಲಾಧಿಕಾರಿ ಶರತ್ ಸ್ಪಷ್ಟಪಡಿಸಿದ್ದಾರೆ.

    ಜಿಲ್ಲೆಯಲ್ಲಿ ಮೃತ ವ್ಯಕ್ತಿ ಸೇರಿದಂತೆ ಈವರೆಗೆ ಕೊರೊನಾ ಪಾಸಿಟಿವ್ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಸದ್ಯಕ್ಕೆ ದೆಹಲಿಯಿಂದ ವಾಪಸ್ಸಾದ 14 ಮಂದಿಯ ರಿಪೋರ್ಟ್ ಬರೋದು ಬಾಕಿಯಿದೆ. ಕೊರೊನಾ ಸೋಂಕಿತ ಮಹಿಳೆಯನ್ನು ಕಲಬುರಗಿಯ ಇಎಸ್‍ಐ ಆಸ್ಪತ್ರೆಯ ಐಸೋಲೇಷನ್‍ನಲ್ಲಿ ವಾರ್ಡಿನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

     

  • ವೈದ್ಯನ ತುಂಬು ಗರ್ಭಿಣಿ ಪತ್ನಿಗೂ ಕೊರೊನಾ

    ವೈದ್ಯನ ತುಂಬು ಗರ್ಭಿಣಿ ಪತ್ನಿಗೂ ಕೊರೊನಾ

    ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದೀಗ ಏಮ್ಸ್ ಆಸ್ಪತ್ರೆ ವೈದ್ಯನ ತುಂಬು ಗರ್ಭಿಣಿ ಪತ್ನಿಗೂ ಕೊರೊನಾ ಸೋಂಕು ಧೃಡಪಟ್ಟಿದೆ.

    9 ತಿಂಗಳ ತುಂಬು ಗರ್ಭಿಣಿಗೆ ಕೊರೊನಾ ಪಾಸಿಟಿವ್ ಬಂದಿದೆ. ದೆಹಲಿ ಏಮ್ಸ್ ಆಸ್ಪತ್ರೆಯ ವೈದ್ಯನಿಗೆ ಕೊರೊನಾ ಸೋಂಕು ಕಂಡು ಬಂದಿತ್ತು. ಹೀಗಾಗಿ ವಿಶೇಷ ವಾರ್ಡಿಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

    ವೈದ್ಯನಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪತ್ನಿಯನ್ನು ತಪಾಸಣೆ ಒಳಪಡಿಸಲಾಗಿತ್ತು. ತಪಾಸಣೆ ವೇಳೆ ಕೊರೊನಾ ಪಾಸಿಟಿವ್ ರಿಪೋರ್ಟ್ ಬಂದಿದೆ. ಇದೀಗ ಗರ್ಭಿಣಿಯನ್ನು ಎಮರ್ಜೆನ್ಸಿ ವಾರ್ಡಿನಲ್ಲಿ ಐಸೋಲೇಷನ್ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಗರ್ಭಿಣಿಗೆ ಚಿಕಿತ್ಸೆ ನೀಡಲಾಗುತ್ತಿದೆ.

    ಇನ್ನೂ ಎರಡು ಮೂರು ದಿನಗಳಲ್ಲಿ ಹೆರಿಗೆ ಆಗುವ ಸಾಧ್ಯತೆ ಇದೆ. ಆದರೆ ಇದೇ ವೇಳೆ ಗರ್ಭಿಣಿಗೂ ಕೊರೊನಾ ಸೋಂಕು ಇರುವುದು ಧೃಡಪಟ್ಟಿದೆ. ಇತ್ತೀಚೆಗೆ ಖಾಸಗಿ ಆಸ್ಪತ್ರೆ ವೈದ್ಯೆಗೆ ಕೊರೊನಾ ಇರುವುದು ಸ್ಪಷ್ಟವಾಗಿತ್ತು. ಇದಕ್ಕೂ ಮುನ್ನ ಮೊಹಲ್ಲಾ ಕ್ಲೀನಿಕ್ ವೈದ್ಯನಿಗೆ ಕೊರೊನಾ ಪಾಸಿಟಿವ್ ಆಗಿತ್ತು.