Tag: Coronavirus

  • ಲಾಕ್‍ಡೌನ್ ವಿಸ್ತರಣೆಗೆ ವಿವಿಧ ರಾಜ್ಯಗಳಿಂದ ಕೇಂದ್ರಕ್ಕೆ ಮನವಿ

    ಲಾಕ್‍ಡೌನ್ ವಿಸ್ತರಣೆಗೆ ವಿವಿಧ ರಾಜ್ಯಗಳಿಂದ ಕೇಂದ್ರಕ್ಕೆ ಮನವಿ

    ನವದೆಹಲಿ: ದೇಶಾದ್ಯಂತ ಹೆಮ್ಮಾರಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ. ಹೀಗಾಗಿ ದೇಶಾದ್ಯಂತ ಜಾರಿಯಲ್ಲಿರುವ ಲಾಕ್‍ಡೌನ್ ಅನ್ನು ವಿಸ್ತರಿಸುವಂತೆ ಅನೇಕ ರಾಜ್ಯ ಸರ್ಕಾರಗಳು ಮತ್ತು ತಜ್ಞರು ಕೇಂದ್ರ ಸರ್ಕಾರವನ್ನು ಕೋರಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

    ಇತ್ತ ಕೇಂದ್ರ ಸರ್ಕಾರವೂ ಲಾಕ್‍ಡೌನ್ ವಿಸ್ತರಿಸುವ ನಿಟ್ಟಿನಲ್ಲಿ ಯೋಚನೆ ನಡೆಸಿದೆ. ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 24ರಂದು ರಾತ್ರಿ 8 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ದೇಶಾದ್ಯಂತ 21 ದಿನಗಳ ಲಾಕ್‍ಡೌನ್ ವಿಧಿಸುವ ಕ್ರಮವನ್ನು ಘೋಷಿಸಿದ್ದರು. ಅಂದು ಮಧ್ಯರಾತ್ರಿಯಿಂದ ಲಾಕ್‍ಡೌನ್ ಜಾರಿಗೆ ಬಂದಿತ್ತು. ಒಂದು ವೇಳೆ 21 ದಿನಗಳ ಲಾಕ್‍ಡೌನ್ ವಿಸ್ತರಿಸದೆ ಹೋದಲ್ಲಿ ಏಪ್ರಿಲ್ 14 ರಂದು ಕೊನೆಗೊಳ್ಳುತ್ತದೆ. ಆದರೆ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

    ಇದೇ ವಿಚಾರವಾಗಿ ಮಾತನಾಡಿರುವ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು, ಲಾಕ್‍ಡೌನ್ ಅನ್ನು ಮೇ ಕೊನೆಯ ವಾರದವರೆಗೂ ವಿಸ್ತರಿಸವ ಅಗತ್ಯವಿದೆ. ದೇಶದಲ್ಲಿ ಕೊರೊನಾವೈರಸ್ ಹರಡುತ್ತಿರುವ ಮಾಹಿತಿ ಮೇಲೆ ಕೇಂದ್ರ ಸರ್ಕಾರ ಲಾಕ್‍ಡೌನ್ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

    ಕೇಂದ್ರ ಸರ್ಕಾರ ಅಂತಿಮವಾಗಿ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಬದ್ಧರಾಗಿರುವಂತೆ ವೆಂಕಯ್ಯ ನಾಯ್ಡು ದೇಶದ ಜನರಿಗೆ ಕೇಳಿಕೊಂಡಿದ್ದಾರೆ. ಮಾರ್ಚ್ 25ರಿಂದ ಜಾರಿಗೆ ಬಂದ ಲಾಕ್‍ಡೌನ್ ಎರಡು ವಾರ ಪೂರ್ಣಗೊಂಡಿದೆ. ಇದರಿಂದಾಗಿ ಅನೇಕ ಬಿಕ್ಕಟ್ಟಿನ ಪರಿಸ್ಥಿತಿ ಉಂಟಾಗಿವೆ. ದೇಶದ ಜನರ ಕಾಯುತ್ತಿರುವ ನಾಯಕತ್ವವನ್ನು ಬೆಂಬಲಿಸುವುದು ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.

    ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ಭಾರತದಲ್ಲಿ ಮಂಗಳವಾರದ ಮಧ್ಯಾಹ್ನದ ವೇಳೆಗೆ ಒಟ್ಟು 4,421 ಜನರಿಗೆ ಕೊರೊನಾ ಸೋಂಕು ತಗುಲಿದೆ. ಮೃತರ ಸಂಖ್ಯೆ ಈಗ 114 ಕ್ಕೆ ಏರಿದೆ.

  • ಸಾಕಾನೆ ಶಿಬಿರಕ್ಕೂ ತಟ್ಟಿದ ಲಾಕ್‍ಡೌನ್ ಎಫೆಕ್ಟ್ – ಆಹಾರ ಇಲ್ಲದೇ ಮಾವುತ, ಕಾವಡಿಗಳ ಕುಟುಂಬದ ನರಳಾಟ

    ಸಾಕಾನೆ ಶಿಬಿರಕ್ಕೂ ತಟ್ಟಿದ ಲಾಕ್‍ಡೌನ್ ಎಫೆಕ್ಟ್ – ಆಹಾರ ಇಲ್ಲದೇ ಮಾವುತ, ಕಾವಡಿಗಳ ಕುಟುಂಬದ ನರಳಾಟ

    ಮಡಿಕೇರಿ: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಭಾಗವಹಿಸುವ ದುಬಾರೆ ಸಾಕಾನೆ ಶಿಬಿರಕ್ಕೂ ಲಾಕ್‍ಡೌನ್ ಎಫೆಕ್ಟ್ ತಟ್ಟಿದೆ.

    ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ದುಬಾರೆ ಸಾಕಾನೆ ಶಿಬಿರದಲ್ಲಿ ಆನೆಗಳ ಪರಿಸ್ಥಿತಿ ಸಾಕಾನೆಗಳ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತೆ ಆಗಿದೆ. ಶಿಬಿರದಲ್ಲಿರುವ ಆನೆಗಳಿಗೆ ಹೊಟ್ಟೆ ತುಂಬಾ ಆಹಾರ ಬಳಲುತ್ತಿವೆ. ಲಾಕ್‍ಡೌನ್ ಹಿನ್ನೆಲೆ ಆಹಾರ ಪೂರೈಕೆಯಾಗಿಲ್ಲ. ಆನೆಗಳಿಗೆ ಪ್ರತಿದಿನ ಆಹಾರ ನೀಡುತ್ತಿದ್ದ ಭತ್ತದ ಹುಲ್ಲು, ಬೆಲ್ಲದ ಕೊರತೆ ಉಂಟಾಗಿದೆ. ಮಾವುತರು, ಕಾವಡಿಗರಿಗೂ ಅಗತ್ಯ ವಸ್ತುಗಳ ಕೊರತೆಯಾಗಿದೆ.

    ಅಷ್ಟೇ ಅಲ್ಲದೇ ಸಾಕಾನೆಗಳನ್ನೆ ಅವಲಂಬಿಸಿಕೊಂಡು ಜೀವನ ನಡೆಸುತ್ತಿರುವ ಮಾವುತ, ಕಾವಡಿಗಳ ಕುಟುಂಬಕ್ಕೂ ಪಡಿತರ ಅಂಗಡಿಯಿಂದ ಅಕ್ಕಿ, ಗೋಧಿಗಳ ಪೂರೈಕೆ, ತರಕಾರಿ ಪೂರೈಕೆಯೂ ಇಲ್ಲವಾಗಿದೆ. ಇದರಿಂದ 90 ಕುಟುಂಬಗಳು ಪರದಾಟ ನಡೆಸುತ್ತಿವೆ. ಒಂದು ಹೊತ್ತು ಊಟ ಮಾಡಿ ಎರಡು ಹೊತ್ತು ಉಪವಾಸ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ.

    ತೋಟಗಳಲ್ಲಿ ಹೋಗಿ ಕೆಲಸ ಮಾಡುತ್ತೇವೆ ಅಂದರೂ ಇದೀಗಾ ಲಾಕ್‍ಡೌನ್ ಹಿನ್ನೆಲೆ ಯಾರು ಕೆಲಸ ಕೋಡುತ್ತಿಲ್ಲ. ಜೀವನ ನಡೆಸುವುದೇ ಕಷ್ಟವಾಗಿದೆ ಎಂದು ಮಾವುತ, ಕಾವಡಿಗಳ ಕುಟುಂಬಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾವೆ.

  • ಒಬ್ಬರಿಗೆ ಮಾತ್ರ ಶೇರ್ – ವಾಟ್ಸಪ್‍ನಲ್ಲಿ ವೈರಲ್ ಮೆಸೇಜ್‍ಗೆ ಮಿತಿ

    ಒಬ್ಬರಿಗೆ ಮಾತ್ರ ಶೇರ್ – ವಾಟ್ಸಪ್‍ನಲ್ಲಿ ವೈರಲ್ ಮೆಸೇಜ್‍ಗೆ ಮಿತಿ

    ಸ್ಯಾನ್‍ಫ್ರಾನ್ಸಿಸ್ಕೋ: ಕೊರೊನಾ ಕುರಿತ ಸುಳ್ಳು ಸುದ್ದಿಗಳು ಶೇರ್ ಆಗುತ್ತಿರುವ ಹಿನ್ನೆಲೆಯಲ್ಲಿ ವೈರಲ್ ಆಗಿರುವ ಫಾರ್ವರ್ಡ್ ಮೆಸೇಜ್ ಕಳುಹಿಸಲು ವಾಟ್ಸಪ್ ಮಿತಿ ಹೇರಿದೆ.

    ಕೊರೊನಾದಿಂದ ಸಾಮಾಜಿಕ ಜಾಲತಾಣಗಳ ಜೊತೆ ಮೆಸೇಜಿಂಗ್ ಅಪ್ಲಿಕೇಶನ್ ಗಳ ಬಳಕೆ ಹೆಚ್ಚಾಗುತ್ತಿದೆ. ಅದರಲ್ಲೂ ವಿಶ್ವದ ನಂಬರ್ ಒನ್ ಮೆಸೇಜಿಂಗ್ ಆ್ಯಪ್ ವಾಟ್ಸಪ್ ನಲ್ಲಿ ಸಂದೇಶಗಳ ಪ್ರವಾಹವೇ ಆಗುತ್ತಿದೆ.

    ಸಂದೇಶಗಳ ಪೈಕಿ ಸುಳ್ಳು ಮಾಹಿತಿ ಇರುವ ಅತಿ ಹೆಚ್ಚು ಶೇರ್ ಆಗಿರುವ ಪೋಸ್ಟ್ ಗಳನ್ನು ನಿಯಂತ್ರಿಸಲು ಒಬ್ಬರಿಗೆ ಮಾತ್ರ ಕಳುಹಿಸಲು ವಾಟ್ಸಪ್ ಮಿತಿ ಹೇರಿದೆ. ವಾಟ್ಸಪ್ ವಕ್ತಾರರು ಪ್ರತಿಕ್ರಿಯಿಸಿ, ಅನಿರ್ಧಿಷ್ಟವಧಿಯವರೆಗೆ ಹೊಸ ಮಿತಿ ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.

    ಈ ಹಿಂದೆ ಭಾರತದಲ್ಲಿ ಗುಂಪು ಗಲಾಟೆಗಳು ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಗರಿಷ್ಟ 20 ಜನರಿಗೆ ಸೆಂಡ್ ಮಾಡುವ ಮೆಸೇಜ್ ಗಳ ಮಿತಿಯನ್ನು 5 ಜನರಿಗೆ ವಾಟ್ಸಪ್ ಇಳಿಸಿತ್ತು. ಇದರಿಂದಾಗಿ ಶೇ.25 ರಷ್ಟು ಸುಳ್ಳು ಸುದ್ದಿಗಳು ಹಂಚಿಕೆಯಾಗುವುದು ಕಡಿಮೆಯಾಗಿತ್ತು.

    ಇದರ ಜೊತೆ ವೈರಲ್ ಆಗಿರುವ ಮತ್ತು ಅತಿ ಹೆಚ್ಚು ಶೇರ್ ಮಾಡಿರುವ ಮೆಸೇಜ್ ಗಳು ಬಳಕೆದಾರರರಿಗೆ ಸುಲಭವಾಗಿ ತಿಳಿಯಲು ಎರಡು ಬಾಣಗಳ(double arrows) ಐಕಾನ್ ಗಳನ್ನು ಪರಿಚಯಿಸಿತ್ತು. ವೈರಲ್ ಮೆಸೇಜ್ ಸೆಂಡ್ ಮಾಡುವ ಸಮಯದಲ್ಲಿ ತೆರೆಯುವ ಪುಟದ ಆರಂಭದಲ್ಲಿ “ಈ ಮೆಸೇಜ್ ಅತಿ ಹೆಚ್ಚು ಸಂಖ್ಯೆಯಲ್ಲಿ ಹಂಚಿಕೆಯಾಗಿದ್ದಕ್ಕೆ ಮಾರ್ಕ್ ಮಾಡಲಾಗಿದೆ” ಎಂದು ಬರೆದಿರುತ್ತದೆ. ಈ ಸಾಲನ್ನು ನೋಡಿಕೊಂಡು ಈ ಸಂದೇಶವನ್ನು ಕಳುಹಿಸಬೇಕೇ? ಬೇಡವೇ ಎಂದು ತೀರ್ಮಾನ ಮಾಡಬಹುದು.

     

  • ಇಂದು 12 ಹೊಸ ಪ್ರಕರಣ – ಜಮಾತ್‍ಗೆ ಹೋದವರ ಸಂಪರ್ಕಕ್ಕೆ ಬಂದವರಿಗೂ ಕೊರೊನಾ

    ಇಂದು 12 ಹೊಸ ಪ್ರಕರಣ – ಜಮಾತ್‍ಗೆ ಹೋದವರ ಸಂಪರ್ಕಕ್ಕೆ ಬಂದವರಿಗೂ ಕೊರೊನಾ

    – ಮಂಡ್ಯದಲ್ಲಿ ಮೂವರಿಗೆ ಕೊರೊನಾ
    – ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 175ಕ್ಕೆ ಏರಿಕೆ
    – ಜಮಾತ್‍ನಿಂದಾಗಿ 8 ಮಂದಿಗೆ ಕೊರೊನಾ

    ಬೆಂಗಳೂರು: ಲಾಕ್‍ಡೌನ್ ಇದ್ದರೂ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇವತ್ತು ಒಂದೇ ದಿನ 12 ಹೊಸ ಕೊರೊನಾ ಪ್ರಕರಣ ದಾಖಲಾಗಿದೆ. ಈ ಮೂಲಕ ಕರ್ನಾಟಕದಲ್ಲಿ ಒಟ್ಟು 175 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.

    ಇಂದು 12 ಹೊಸ ಕೊರೊನಾ ಪ್ರಕರಣಗಳು ಕಂಡು ಬಂದಿದ್ದು, ಮಂಡ್ಯದಲ್ಲಿ ಮೂವರಿಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ. ದೆಹಲಿಯ ನಿಜಾಮುದ್ದೀನ್ ಕಾರ್ಯಕ್ರಮಕ್ಕೆ ಹೋದವರ ನಿರ್ಲಕ್ಷ್ಯದಿಂದ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಪ್ರಾಥಮಿಕ ಸಂಪರ್ಕದಲ್ಲಿರುವವರಿಗೂ ಕೊರೊನಾ ಪಾಸಿಟಿವ್ ಕಂಡು ಬರುತ್ತಿದೆ.

    ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ನಿಜಾಮುದ್ದೀನ್‍ಗೆ ಹೋಗಿ ಬಂದವರ ಸಂಪರ್ಕದಲ್ಲಿರುವವರಿಗೆ ಕೊರೊನಾ ಸೋಂಕು ತಗಲಿದ ಪ್ರಕರಣ ಬೆಳಕಿಗೆ ಬಂದಿದೆ. ಹೀಗಾಗಿ ನಿಜಾಮುದ್ದೀನ್‍ಗೆ ಹೋಗಿ ಬಂದವರು ಸರಿಯಾಗಿ ಕ್ವಾರಂಟೈನ್ ಆಗದ ಪರಿಣಾಮ ಈಗ ಅವರ ಜೊತೆ ಸಂಪರ್ಕದಲ್ಲಿದ್ದವರಿಗೂ ಕೊರೊನಾ ಭೀತಿ ಉಂಟಾಗಿದೆ.

    ಕೊರೊನಾ ಸೋಂಕಿತರ ವಿವರಗಳು
    ರೋಗಿ 164 – 33 ವರ್ಷದ ಪುರುಷನಾಗಿದ್ದು, ಬಾಗಲಕೋಟೆಯ ಮುಧೋಳ್ ನಿವಾಸಿ. ಮಾರ್ಚ್ 13 ರಿಂದ 18ರವರೆಗೆ ದೆಹಲಿಯ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸದ್ಯಕ್ಕೆ ಬಾಗಲಕೋಟೆಯ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ರೋಗಿ 165 – 41 ವರ್ಷದ ಮಹಿಳೆಯಾಗಿದ್ದು, ಬಾಗಲಕೋಟೆ ನಿವಾಸಿಯಾಗಿದ್ದಾರೆ. ಇವರು 125ರ ಸೋಂಕಿತ ರೋಗಿಯ ನೆರೆಹೊರೆಯವರು. ಬಾಗಲಕೋಟೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ರೋಗಿ 166 – 80 ವರ್ಷ ವೃದ್ಧೆಯಾಗಿದ್ದು, ಗದಗ ಜಿಲ್ಲೆಯವರಾಗಿದ್ದಾರೆ. ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ, ಸೋಂಕಿತರ ಜೊತೆ ಸಂಪರ್ಕವೂ ಇಲ್ಲ. ಆದರೆ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದವರಿಗೆ ಕೊರೊನಾ ಬಂದಿದೆ. ಗದಗ ಆಸ್ಪತ್ರೆಯಲ್ಲಿ ಪ್ರತ್ಯೇಕವಾದ ವಾರ್ಡಿನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ರೋಗಿ 167 – 29 ವರ್ಷದ ಪುರುಷನಾಗಿದ್ದು, ಬೆಂಗಳೂರು ನಗರದ ನಿವಾಸಿ. ದೆಹಲಿಯ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ರೋಗಿ 168 – 50 ವರ್ಷದ ವ್ಯಕ್ತಿ, ಬೆಂಗಳೂರು ನಗರದ ನಿವಾಸಿಯಾಗಿದ್ದು, ನಿಜಾಮುದ್ದೀನ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

    ರೋಗಿ 169 – 35 ವರ್ಷದ ಬೆಂಗಳೂರು ನಗರದ ನಿವಾಸಿಯಾಗಿದ್ದು, ನಿಜಾಮುದ್ದೀನ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

    ರೋಗಿ 170 – 68 ವರ್ಷ ವೃದ್ಧನಾಗಿದ್ದು, ಬೆಂಗಳೂರು ನಗರದ ನಿವಾಸಿಯಾಗಿದ್ದಾರೆ. ದುಬೈನಿಂದ ಬಂದಿರುವ ಇತಿಹಾಸವಿದೆ. ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ರೋಗಿ 171 – 32 ವರ್ಷದ ಪುರುಷನಾಗಿದ್ದು, ಮಂಡ್ಯ ನಿವಾಸಿ. ಇವರು ತಬ್ಲಿಘಿ ಜಮಾತ್ ಕಾರ್ಯಕ್ರಮಕ್ಕೆ ಹೋಗಿದ್ದ 134, 135, 136, 137 ಮತ್ತು 138 ಸೋಂಕಿತರ ಜೊತೆ ಸಂಪರ್ಕದಲ್ಲಿದ್ದರು. ಸದ್ಯಕ್ಕೆ ಮಂಡ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ರೋಗಿ 172 – 36 ವರ್ಷದ ಪುರುಷನಾಗಿದ್ದು, ಮಂಡ್ಯ ನಿವಾಸಿ. ಇವರು ತಬ್ಲಿಘಿ ಜಮಾತ್ ಕಾರ್ಯಕ್ರಮಕ್ಕೆ ಹೋಗಿದ್ದ 134, 135, 136, 137 ಮತ್ತು 138 ಕೊರೊನಾ ಸೋಂಕಿತರ ಜೊತೆ ಸಂಪರ್ಕದಲ್ಲಿದ್ದರು. ಸದ್ಯಕ್ಕೆ ಮಂಡ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ರೋಗಿ 173 – 65 ವರ್ಷದ ವ್ಯಕ್ತಿ, ಮಂಡ್ಯ ನಿವಾಸಿ. ನಿಜಾಮುದ್ದೀನ್ ಕಾರ್ಯಕ್ರಮಕ್ಕೆ ಹೋಗಿದ್ದ 134, 135, 136, 137 ಮತ್ತು 138 ಸೋಂಕಿತರ ಜೊತೆ ಸಂಪರ್ಕದಲ್ಲಿದ್ದರು. ಸದ್ಯಕ್ಕೆ ಮಂಡ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ರೋಗಿ 174 – 28 ವರ್ಷದ ಮಹಿಳೆಯಾಗಿದ್ದು, ಕಲಬುರಗಿ ನಿವಾಸಿಯಾಗಿದ್ದಾರೆ. ಕೊರೊನಾ ರೋಗಿ 124 ಸೋಂಕಿತರ ಸಂಪರ್ಕದಲ್ಲಿದ್ದರು. ಅಲ್ಲದೇ ಈ ರೋಗಿಯ ಸೊಸೆಯಾಗಿದ್ದಾರೆ. ಸದ್ಯಕ್ಕೆ ಕಲಬುರಗಿಯ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ.

    ರೋಗಿ 175 – 57 ವರ್ಷದ ಪುರುಷನಾಗಿದ್ದು, ಕಲಬುರಗಿ ನಿವಾಸಿ. ಟ್ರಾವೆಲ್ ಹಿಸ್ಟರಿ ಇರದೇ ಇದ್ದರೂ ಅತಿ ಹೆಚ್ಚು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಕಲಬುರಗಿ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಗದಗ ಹಾಗೂ ಕಲಬುರಗಿಯ ಎರಡು ಹೊಸ ಪ್ರಕರಣದಿಂದ ಆರೋಗ್ಯ ಇಲಾಖೆಗೆ ಆತಂಕ ಶುರುವಾಗಿದೆ. ಯಾಕೆಂದರೆ ಗದಗ ಹಾಗೂ ಕಲಬುರ್ಗಿ ಇಬ್ಬರು ಸೋಂಕಿತರಲ್ಲಿ ಟ್ರಾವೆಲ್ ಹಿಸ್ಟರಿ ಇಲ್ಲ, ಸೋಂಕಿತರ ಜೊತೆ ಸಂಪರ್ಕವೂ ಇಲ್ಲ. ಆದರೂ ಉಸಿರಾಟದ ತೊಂದರೆ ಮತ್ತು ಶ್ವಾಸಕೋಶ ಸಮಸ್ಯೆ ಇದೆ. ಇಂತಹವರಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಈ ಮೂಲಕ ಉಸಿರಾಟದ ತೊಂದರೆ ಇರುವವರಿಗೆ ಅತೀ ಬೇಗ ಕೊರೊನಾಗೆ ತುತ್ತಾಗುತ್ತಿರುವ ಪ್ರಕರಣ ಕಂಡುಬರುತ್ತಿದೆ.

  • ಪೌರ ಕಾರ್ಮಿಕರಿಗೆ ಹಣದ ಹಾರ ಹಾಕಿ ಸನ್ಮಾನ

    ಪೌರ ಕಾರ್ಮಿಕರಿಗೆ ಹಣದ ಹಾರ ಹಾಕಿ ಸನ್ಮಾನ

    ಬೆಂಗಳೂರು: ಕೊರೊನಾನಿಂದ ಜನರ ಜೀವವನ್ನು ಕಾಪಾಡಲು ವೈದ್ಯರು, ನರ್ಸ್ ಮತ್ತು ಪೊಲೀಸರು ಮಾತ್ರ ಹೋರಾಡುತ್ತಿಲ್ಲ. ಇವರ ಜೊತೆಗೆ ಪೌರ ಕಾರ್ಮಿಕರು ಕೂಡ ಹೋರಾಡುತ್ತಿದ್ದಾರೆ. ಹೀಗಾಗಿ ರಿಯಲ್ ಕೊರೊನಾ ವಾರಿಯರ್ಸ್‌ಗೆ ಸನ್ಮಾನ ಮಾಡಲಾಗಿದೆ. ಇದನ್ನೂ ಓದಿ: ಗದಗನ ಪೌರಕಾರ್ಮಿಕರಿಗೆ ಮುತ್ತಿನ ಹಾರದ ಸನ್ಮಾನ

    ಬೆಂಗಳೂರಿನ ಶ್ರೀರಾಂಪುರದಲ್ಲಿ ಪೌರ ಕಾರ್ಮಿಕರಿಗೆ ಸನ್ಮಾನ ಮಾಡಲಾಗಿದೆ. ಪೌರ ಕಾರ್ಮಿಕರು ಪ್ರತಿ ಮನೆ, ರಸ್ತೆಗೂ ಹೋಗಿ ಕಸವನ್ನು ತೆಗೆದುಕೊಂಡು ಸ್ವಚ್ಛತೆ ಮಾಡುತ್ತಾರೆ. ಯಾರ ಮನೆಯವರಿಗೆ ಕೊರೊನಾ ಇರುತ್ತದೆಯೋ ಗೊತ್ತಿಲ್ಲ. ಆದರೂ ಇವರು ಪ್ರತಿ ರಸ್ತೆಯ ಸ್ವಚ್ಛತೆಯ ಕಾರ್ಯಯನ್ನು ಮಾಡುತ್ತಾರೆ. ಹೀಗಾಗಿ ಶ್ರೀರಾಂಪುರದಲ್ಲಿ ರಿಯಲ್ ಕೊರೊನಾ ವಾರಿಯರ್ಸ್‌ಗೆ ಹಣದ ಹಾರ ಹಾಕಿ ಸನ್ಮಾನ ಮಾಡಲಾಗಿದೆ.

    ಕೆಲಸ ಮಾಡುತ್ತಿದ್ದ ಪೌರ ಕಾರ್ಮಿಕರಿಗೆ ಹಣದ ಹಾರ, ಶಾಲು ಹೊದಿಸಿ ಸ್ಥಳೀಯರು ಸನ್ಮಾನ ಮಾಡಿದ್ದಾರೆ. ಈ ವೇಳೆ ಅಲ್ಲಿನ ಜನರು ಮನೆಯೊಳಗೆ ನಿಂತುಕೊಂಡು ಕಾರ್ಮಿಕರಿಗಾಗಿ ಚಪ್ಪಾಳೆ ತಟ್ಟಿದ್ದಾರೆ. ಸ್ಥಳದಲ್ಲಿದ್ದವರು ಇದನ್ನು ಮೊಬೈಲಿನಲ್ಲಿ ವಿಡಿಯೋ ಮಾಡಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ.

  • ಲಾಕ್‍ಡೌನ್‍ನಿಂದ ಕಾಂಡಿಮೆಂಟ್ಸ್, ಬೇಕರಿಗಳಿಗೆ ವಿನಾಯ್ತಿ ನೀಡಿದ ರಾಜ್ಯ ಸರ್ಕಾರ

    ಲಾಕ್‍ಡೌನ್‍ನಿಂದ ಕಾಂಡಿಮೆಂಟ್ಸ್, ಬೇಕರಿಗಳಿಗೆ ವಿನಾಯ್ತಿ ನೀಡಿದ ರಾಜ್ಯ ಸರ್ಕಾರ

    ಚಿಕ್ಕಬಳ್ಳಾಪುರ: ಭಾರತ ಲಾಕ್‍ಡೌನ್ ನಡುವೆ ರಾಜ್ಯದಲ್ಲಿ ಬೇಕರಿ, ಕಾಂಡಿಮೆಂಟ್ಸ್, ಮಿಠಾಯಿ ಹಾಗೂ ಸಿಹಿ ತಿನಿಸುಗಳ ತಯಾರಿಕಾ ಘಟಕಗಳಿಗೆ ರಾಜ್ಯ ಸರ್ಕಾರ ವಿನಾಯ್ತಿ ನೀಡಿ ಇಂದು ಆದೇಶ ಹೊರಡಿಸಿದೆ.

    ಬೇಕರಿಯ ತಿಂಡಿ ತಿನಿಸುಗಳು, ಅವುಗಳಲ್ಲಿ ಪ್ರಮುಖವಾಗಿ ಬ್ರೆಡ್ ಹಾಗೂ ಬಿಸ್ಕೆಟ್‍ಗಳನ್ನ ರಾಜ್ಯದಲ್ಲಿ ಆಸ್ಪತ್ರೆಗಳಲ್ಲಿನ ರೋಗಿಗಳು ಹಾಗೂ ವಯಸ್ಸಾದವರು ಸೇರಿದಂತೆ ಮಕ್ಕಳು ಹಾಗೂ ಸಾಮಾನ್ಯ ಜನ ಸಹ ತಿನ್ನುತ್ತಾರೆ. ಹೀಗಾಗಿ ಬೇಕರಿ ತಿಂಡಿ ತಿನಿಸುಗಳ ಅವಶ್ಯಕತೆ ಇರುವ ಕಾರಣ ಬೇಕರಿ ಹಾಗೂ ಕಾಂಡಿಮೆಂಟ್ಸ್ ಗಳಿಗೆ ಲಾಕ್‍ಡೌನ್‍ನಿಂದ ಸಡಲಿಕೆ ನೀಡಲಾಗಿದೆ. ಆದರೆ ಕೊರೊನಾ ವೈರಸ್ ಹರಡದಂತೆ ತಡೆಯುವ ಸಲುವಾಗಿ ಆರೋಗ್ಯ ಇಲಾಖೆಯ ನಿಬಂಧನೆಗಳನ್ನ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.

    ಪ್ರಮುಖವಾಗಿ ಬೇಕರಿ ತಿಂಡಿ ತಿನಿಸುಗಳನ್ನು ತಯಾರಿ ಹಾಗೂ ಮಾರಾಟ ಮಾಡುವ ವೇಳೆ ಕಡಿಮೆ ಕಾರ್ಮಿಕರನ್ನ ಬಳಕೆ ಮಾಡಿಕೊಳ್ಳಬೇಕು. ತಯಾರಿಕಾ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು, ಸ್ಯಾನಿಟೈಸರ್ ಬಳಕೆ ಹಾಗೂ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಸೂಚಿಸಲಾಗಿದೆ.

  • ದೇಶದಲ್ಲಿ 24 ಗಂಟೆಯಲ್ಲಿ ಕೊರೊನಾಗೆ 30 ಮಂದಿ ಬಲಿ- 693 ಜನರಿಗೆ ಸೋಂಕು ದೃಢ

    ದೇಶದಲ್ಲಿ 24 ಗಂಟೆಯಲ್ಲಿ ಕೊರೊನಾಗೆ 30 ಮಂದಿ ಬಲಿ- 693 ಜನರಿಗೆ ಸೋಂಕು ದೃಢ

    – ಸೋಂಕಿತರ ಸಂಖ್ಯೆ 4500ಕ್ಕೆ ಏರಿಕೆ
    – 25 ಸಾವಿರ ಜಮಾತ್ ಸಭೆ ಸಂಪರ್ಕಿತರ ಕ್ವಾರಂಟೈನ್

    ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಮತ್ತಷ್ಟು ತೀವ್ರವಾಗಿದೆ. ಸೋಂಕಿತರ ಸಂಖ್ಯೆ 4502ಕ್ಕೆ ಏರಿದ್ದು, ಸಾವಿನ ಸಂಖ್ಯೆ 129 ಆಗಿದೆ.

    ದೇಶದಲ್ಲಿ ಒಂದೇ ದಿನ 693 ಮಂದಿಗೆ ಸೋಂಕು ದೃಢವಾಗಿದ್ದು, 24 ಗಂಟೆಯಲ್ಲಿ 30 ಮಂದಿ ಸಾವನ್ನಪ್ಪಿದ್ದಾರೆ. 291 ಜನ ಸೋಂಕಿನಿಂದ ಗುಣ ಮುಖರಾಗಿದ್ದಾರೆ. 1,445 ಕೇಸ್‍ಗಳು ಜಮಾತ್‍ಗೆ ಸಂಬಂಧಿಸಿದ್ದು, ತಬ್ಲಿಘಿಗಳು ಮತ್ತು ಅವರ ಸಂಪರ್ಕದಲ್ಲಿರುವ 25,500 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಜೊತೆಗೆ 1,750 ತಬ್ಲಿಘಿ ಕಾರ್ಯಕರ್ತರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಅಂತ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

    ಕೊರೊನಾಗೆ ಬಲಿಯಾದವರ ಪೈಕಿ ಶೇ.63ರಷ್ಟು 60 ವರ್ಷ ಮೇಲ್ಪಟ್ಟವರೇ ಆಗಿದ್ದಾರೆ. ಸೋಂಕಿತರ ಪೈಕಿ ಶೇ.76 ರಷ್ಟು ಪುರುಷರು, ಶೇ.24 ರಷ್ಟು ಮಹಿಳೆಯರು ಇದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ವಿವರ ನೀಡಿದೆ.

    ಇದೇ ವೇಳೆ 5 ಲಕ್ಷ ರ‍್ಯಾಪಿಡ್ ಟೆಸ್ಟ್ ಕಿಟ್‍ಗಳಿಗೆ ಆರ್ಡರ್ ಮಾಡಲಾಗಿದ್ದು, 2.5 ಲಕ್ಷ ಕಿಟ್‍ಗಳು ಈ ತಿಂಗಳಲ್ಲಿ ಬರಲಿವೆ ಅಂತ ಐಸಿಎಂಆರ್ ಹೇಳಿದೆ. ಮುಂಬೈನ ವೋಕ್ಹಾರ್ಡ್ ಆಸ್ಪತ್ರೆಯ 26 ನರ್ಸ್ ಗಳು, ಮೂವರು ವೈದ್ಯರಿಗೆ ಕೊರೊನಾ ಸೋಂಕಾಗಿದ್ದು, ಆಸ್ಪತ್ರೆಯನ್ನೇ ಬಂದ್ ಮಾಡಲಾಗಿದೆ.

    ಯಾವ ರಾಜ್ಯದಲ್ಲಿ ಎಷ್ಟು ಸೋಂಕಿತರು?
    ಮಹಾರಾಷ್ಟ್ರ        781 (33 ಏರಿಕೆ)
    ತಮಿಳುನಾಡು     621 (50 ಏರಿಕೆ)
    ದೆಹಲಿ                523 (23 ಏರಿಕೆ)
    ಕೇರಳ               327 (13 ಏರಿಕೆ)
    ಉತ್ತರ ಪ್ರದೇಶ   305 (27 ಏರಿಕೆ)

    ಈ ಮಧ್ಯೆ ಸೆಲೆಬ್ರಿಟಿಗಳು, ರಾಜಕೀಯ ಗಣ್ಯರ ವಲಯದಲ್ಲಿ ತೀವ್ರ ಆತಂಕ ಸೃಷ್ಟಿಸಿದ್ದ ಬಾಲಿವುಡ್ ಗಾಯಕಿ ಕನ್ನಿಕಾ ಕಪೂರ್, ಕೊರೊನಾ ಸೋಂಕಿನಿಂದ ಚೇತರಿಕೆ ಕಂಡಿದ್ದು ಡಿಸ್ಚಾರ್ಜ್ ಆಗಿದ್ದಾರೆ. 6ನೇ ಬಾರಿ ನಡೆಸಿದ ಪರೀಕ್ಷೆಯಲ್ಲಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ.

  • ಜಾಗತಿಕ ಕೊರತೆ – ಕಾಂಡೋಮ್ ಕಾರ್ಖಾನೆಯ ನೌಕರರನ್ನು ‘ಅಗತ್ಯ ಸೇವೆ’ ಪಟ್ಟಿಗೆ ಸೇರ್ಪಡೆ

    ಜಾಗತಿಕ ಕೊರತೆ – ಕಾಂಡೋಮ್ ಕಾರ್ಖಾನೆಯ ನೌಕರರನ್ನು ‘ಅಗತ್ಯ ಸೇವೆ’ ಪಟ್ಟಿಗೆ ಸೇರ್ಪಡೆ

    ಕೌಲಾಲಂಪುರ್: ವೇಗವಾಗಿ ಹರಡುತ್ತಿರುವ ಕೊರೊನಾ ವೈರಸ್ ಅನ್ನು ತಡೆಯುವ ಪ್ರಯತ್ನದಲ್ಲಿ ಉತ್ಪಾದನಾ ಸೌಲಭ್ಯಗಳನ್ನು ವಿಶ್ವಾದ್ಯಂತ ಸ್ಥಗಿತಗೊಳಿಸಲಾಗಿದೆ. ಆದರೆ ಕಾಂಡೋಮ್ ಕಾರ್ಖಾನೆ ನೌಕರರನ್ನು ಮತ್ತೆ ಕೆಲಸಕ್ಕೆ ಬರುವಂತೆ ಸೂಚನೆ ನೀಡಲಾಗಿದೆ.

    ಹೌದು. ಈಗ ಜಾಗತಿಕ ಮಟ್ಟದಲ್ಲಿ ಕಾಂಡೋಮ್ ಕೊರತೆಯು ಹೆಚ್ಚಾಗುತ್ತಿರುವುದರಿಂದ ಗರ್ಭಧಾರಣೆ ಮತ್ತು ಲೈಂಗಿಕವಾಗಿ ಹರಡುವ ಸೋಂಕುಗಳ ಸಂಭವನೀಯ ಏರಿಕೆಯನ್ನು ತಡೆಯಲು ಕಾಂಡೋಮ್ ಕಾರ್ಖಾನೆಯ ಕಾರ್ಮಿಕರನ್ನು ಅಗತ್ಯವೆಂದು ಪರಿಗಣಿಸಲಾಗಿದೆ. ಇದನ್ನೂ ಓದಿ: ಕೊರೊನಾ ಎಫೆಕ್ಟ್- ಸ್ಯಾನಿಟೈಜರ್‌ಗಿಂತಲೂ ಕಾಂಡೋಮ್‍ಗಳಿಗೆ ಭಾರೀ ಬೇಡಿಕೆ

    ವಿಶ್ವದ ಹೆಚ್ಚಿನ ಕಾಂಡೋಮ್‍ಗಳನ್ನು ಏಷ್ಯಾದಲ್ಲಿ ಉತ್ಪಾದಿಸಲಾಗುತ್ತದೆ. ಕೊರೊನಾ ವೈರಸ್ ಪ್ರಾರಂಭವಾದ ಚೀನಾ, ಮೊದಲು ಕಾಂಡೋಮ್ ಸೌಲಭ್ಯಗಳನ್ನು ಮುಚ್ಚಿತ್ತು. ಮಲೇಷ್ಯಾ, ಭಾರತ ಮತ್ತು ಥೈಲ್ಯಾಂಡ್ ಇತರ ಪ್ರಮುಖ ಉತ್ಪಾದಕ ದೇಶಗಳಲ್ಲಿಯೂ ಹೆಚ್ಚಿನ ಕಾಂಡೋಮ್ ಕಾರ್ಖಾನೆಗಳು ಮುಚ್ಚಲ್ಪಟ್ಟಿವೆ. ಇದನ್ನೂ ಓದಿ: ಲಾಕ್‍ಡೌನ್ ಎಫೆಕ್ಟ್, ಭಾರೀ ಬೇಡಿಕೆ – ಕೆಲ ದಿನಗಳಲ್ಲಿ ಖಾಲಿಯಾಗಲಿದೆ ಕಾಂಡೋಮ್

    ಈಗ ಚೀನಾದ ಕಾರ್ಖಾನೆಗಳು ಮತ್ತು ಮಲೇಷ್ಯಾದ ಕಂಪನಿಯೊಂದು ಉತ್ಪಾದನೆಯನ್ನು ಪುನರಾರಂಭಿಸಿ ಕೊರತೆಯನ್ನು ನೀಗಿಸಲು ಪ್ರಯತ್ನಿಸುತ್ತಿವೆ. ಮಲೇಷ್ಯಾದ ಕಾರೆಕ್ಸ್ ಬಿಎಚ್‍ಡಿ ತನ್ನ ಅರ್ಧದಷ್ಟು ಉದ್ಯೋಗಿಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಮರಳಿ ಉದ್ಯೋಗಗಕ್ಕೆ ಬರುವಂತೆ ಹೇಳಿದೆ.

    ಡ್ಯುರೆಕ್ಸ್‍ನಂತಹ ಬ್ರಾಂಡ್‍ಗಳನ್ನು ಒಳಗೊಂಡಂತೆ ವಿಶ್ವದ ಕಾಂಡೋಮ್ ಸರಬರಾಜಿನ ಐದನೇ ಒಂದು ಭಾಗವನ್ನು ಕಾರೆಕ್ಸ್ ಬಿಎಚ್‍ಡಿ ತಯಾರಿಸುತ್ತದೆ.

    ಕಾರೆಕ್ಸ್ ಮುಖ್ಯ ಕಾರ್ಯನಿರ್ವಾಹಕ ಗೊಹ್ ಮಿಯಾ ಕಿಯಾಟ್ ಮಾತನಾಡಿ, ನಾವು ಎಲ್ಲೆಡೆ ಕಾಂಡೋಮ್‍ಗಳ ಜಾಗತಿಕ ಕೊರತೆಯನ್ನು ನೋಡಲಿದ್ದೇವೆ. ಮುಂದೆ ಅದು ಭಯಾನಕವಾಗಿರುತ್ತದೆ. ನನ್ನ ಕಳವಳವೆಂದರೆ ಆಫ್ರಿಕಾದಲ್ಲಿ ಸಾಕಷ್ಟು ಕೊರತೆ ಕಂಡು ಬಂದಿದೆ. ಮುಂದೆ ಜಗತ್ತಿನಲ್ಲಿ ಕಾಂಡೋಮ್ ಕೊರತೆ ಕೇವಲ ಎರಡು ವಾರಗಳು ಅಥವಾ ಒಂದು ತಿಂಗಳು ಆಗುವುದಿಲ್ಲ. ತಿಂಗಳುಗಳವರೆಗೂ ಈ ಸಮಸ್ಯೆ ಎದುರಾಗಬಹುದು ಎಂದು ತಿಳಿಸಿದ್ದಾರೆ.

  • ದಿನಸಿ ಸಾಮಗ್ರಿ ತರುವುದಕ್ಕೆ ಜಗಳ – ಅತ್ತೆ, ಪತಿಯನ್ನೇ ಹಿಗ್ಗಾಮುಗ್ಗ ಥಳಿಸಿದ ಮಹಿಳಾ ಪೇದೆ

    ದಿನಸಿ ಸಾಮಗ್ರಿ ತರುವುದಕ್ಕೆ ಜಗಳ – ಅತ್ತೆ, ಪತಿಯನ್ನೇ ಹಿಗ್ಗಾಮುಗ್ಗ ಥಳಿಸಿದ ಮಹಿಳಾ ಪೇದೆ

    ಹುಬ್ಬಳ್ಳಿ: ದೇಶಾದ್ಯಂತ ಕೊರೊನಾ ವೈರಸ್ ಭೀತಿಯಿಂದ ಲಾಕ್‍ಡೌನ್ ಘೋಷಣೆಯಾಗಿದ್ದು, ಪೊಲೀಸ್ ಸಿಬ್ಬಂದಿ ಸಾರ್ವಜನಿಕರ ಸೇವೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ ಹುಬ್ಬಳ್ಳಿಯಲ್ಲಿ ಮಹಿಳಾ ಪೊಲೀಸ್ ಪೇದೆಯೊಬ್ಬರು ತನ್ನ ಪತಿ ಮನೆಯವರಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿರುವ ಘಟನೆಯೊಂದು ಬೆಳಕಿಗೆ ಬಂದಿದೆ.

    ಹುಬ್ಬಳ್ಳಿಯ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಪೊಲೀಸ್ ಸಿಬ್ಬಂದಿ ಕಸ್ತೂರಿ ಛಲವಾದಿ ಕ್ಷುಲ್ಲಕ ಕಾರಣಕ್ಕೆ ಪತಿಗೆ ಮಾನಸಿಕ ಕಿರುಕುಳ ನೀಡಿ ಹಲ್ಲೆ ಮಾಡಿದ್ದಾರೆ. ಅಲ್ಲದೇ ಅತ್ತೆಗೂ ಕೂಡ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಪತಿ ಬಸವರಾಜ್ ಗೋಕಾವಿ ಮಾಧ್ಯಮದ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

    ಮನೆಗೆ ಕಿರಾಣಿ ಸಾಮಗ್ರಿಗಳನ್ನು ತರುವ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಜಗಳ ತಾರಕಕ್ಕೇರಿದ್ದು, ಪೊಲೀಸ್ ಸಿಬ್ಬಂದಿಯೇ ಪತಿ ಹಾಗೂ ಅತ್ತೆ ಮೇಲೆ ಹಲ್ಲೆ ಮಾಡಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. ಅಲ್ಲದೇ ಪತಿ, ಪತ್ನಿ ನಡುವೆ ಮಗುವನ್ನು ಪಾಲನೆ ಪೋಷಣೆ ಮಾಡುವ ಹಾಗೂ ಇನ್ನಿತರ ಕೌಟುಂಬಿಕ ವಿಚಾರಕ್ಕೆ ಜಗಳವಾಗುತ್ತಿತ್ತು. ಪತಿ ಮೇಲೆ ಹಲ್ಲೆ ಮಾಡಿ, ಪತಿ ಹಾಗೂ ಅತ್ತೆಗೆ ಅಶ್ಲೀಲ ಪದಗಳನ್ನು ಬಳಸುವ ಮೂಲಕ ಮಹಿಳಾ ಪೇದೆ ತೊಂದರೆ ನೀಡುತ್ತಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

    ಹಾಗೆಯೇ ಪೊಲೀಸ್ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಬಸವರಾಜ್ ಮಾಧ್ಯಮದ ಮುಂದೆ ಬಿಚ್ಚಿಟ್ಟಿದ್ದಾರೆ. ಪತ್ನಿ ಕಿರುಕುಳ ತಾಳಲಾರದೆ ಎಪಿಎಂಸಿ ನವನಗರ ಪೊಲೀಸ್ ಠಾಣೆಗೆ ದೂರು ನೀಡಲು ಹೋದರು ಕೂಡ ಪೊಲೀಸ್ ಅಧಿಕಾರಿಗಳು ದೂರನ್ನು ಸ್ವೀಕರಿಸಿಲ್ಲ ಎಂದು ಬಸವರಾಜ್ ಆರೋಪಿಸಿದ್ದಾರೆ.

    ಕೊರೊನಾ ವೈರಸ್ ಭೀತಿಯಲ್ಲಿಯೂ ಕೂಡ ಪೊಲೀಸ್ ಸಿಬ್ಬಂದಿ ಕಾರ್ಯವನ್ನು ಸಾರ್ವಜನಿಕರು ಪ್ರಶಂಸಿಸುತ್ತಿದ್ದಾರೆ. ಆದರೇ ಈ ಪೊಲೀಸ್ ಸಿಬ್ಬಂದಿ ವರ್ತನೆಯಿಂದ ಕುಟುಂಬಸ್ಥರು ಮಾಧ್ಯಮದ ಮುಂದೆ ಬಂದು ಕಣ್ಣೀರು ಹಾಕುವಂತಾಗಿದೆ.

  • 12 ಹೊಸ ಪ್ರಕರಣ, ಮೈಸೂರಿನಲ್ಲಿ ಮತ್ತೆ 7 ಮಂದಿಗೆ ಕೊರೊನಾ

    12 ಹೊಸ ಪ್ರಕರಣ, ಮೈಸೂರಿನಲ್ಲಿ ಮತ್ತೆ 7 ಮಂದಿಗೆ ಕೊರೊನಾ

    – ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 163ಕ್ಕೆ ಏರಿಕೆ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 163ಕ್ಕೆ ಏರಿದ್ದು, ಕಳೆದ 24 ಗಂಟೆಯಲ್ಲಿ 12 ಹೊಸ ಕೊರೊನಾ ಸೊಂಕಿತ ಪ್ರಕರಣ ವರದಿಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

    12 ಕೊರೊನಾ ಸೋಂಕಿತ ಪ್ರಕರಣದಲ್ಲಿ 7 ಮಂದಿ ಮೈಸೂರು, ಇಬ್ಬರು ಬಾಗಲಕೋಟೆ, ಒಬ್ಬರು ಕೇರಳ, ಒಬ್ಬರು ಬೆಂಗಳೂರು, ಒಬ್ಬರು ಬೆಂಗಳೂರು ಗ್ರಾಮಂತರಕ್ಕೆ ಸೇರಿದವರಾಗಿದ್ದಾರೆ. ಈವರೆಗೆ ದಾಖಲಾದ 163 ಸೊಂಕಿತರಲ್ಲಿ 9 ಮಂದಿ ಕೇರಳ ಮೂಲದವರಾಗಿದ್ದು, ಸದ್ಯ ಕರ್ನಾಟಕದಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇಂದಿನ ಹೊಸ ಪ್ರಕರಣದಿಂದಾಗಿ ಮೈಸೂರು ಜಿಲ್ಲೆಯಲ್ಲಿ 35 ಮಂದಿಗೆ ಕೊರೊನಾ ಬಂದಿದ್ದರೆ ಬೆಂಗಳೂರು ನಗರದಲ್ಲಿ 59 ಮಂದಿಗೆ ಕೊರೊನಾ ಬಂದಿದೆ.

    ರೋಗಿ 152 – ಬೆಂಗಳೂರಿನ 32 ವರ್ಷದ ಪುರುಷ. ರೋಗಿ 43 ಹಾಗೂ ರೋಗಿ 44 ಅವರ ಮಗ. ಈ ಇಬ್ಬರು ರೋಗಿಗಳ ಜೊತೆ ಇವರು ಪ್ರಾಥಮಿಕ ಸಂಪರ್ಕ ಹೊಂದಿದ್ದರು. ಇವರಿಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ರೋಗಿ 153 – ಕೇರಳ ಮೂಲದ 62 ವರ್ಷದ ವೃದ್ಧೆ. ಜರ್ಮನಿಗೆ ಪ್ರಯಾಣ ಮಾಡಿರುವ ಹಿನ್ನೆಲೆ ಇದ್ದು, ಕೇರಳ ಮೂಲದ ರೋಗಿ 106 ಹಾಗೂ ಕ್ವಾರಂಟೈನ್ ಅಲ್ಲಿರುವ ರೋಗಿ 133 ಜೊತೆ ಸಂಪರ್ಕ ಹೊಂದಿದ್ದರು. ಈವರಿಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ರೋಗಿ 154 – ಮೈಸೂರಿನ 20 ವರ್ಷದ ಯುವಕ. ರೋಗಿ 104 ಅವರ ಸಹೋದರ. ರೋಗಿ ಜೊತೆ ಸಂಪರ್ಕ ಹೊಂದಿದ್ದನು. ಈತನನ್ನು ಮೈಸೂರಿನ ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ಕೊಡಲಾಗುತ್ತಿದೆ.

    ರೋಗಿ 155 – ಮೈಸೂರಿನ 37 ವರ್ಷದ ಪುರುಷ. ದೆಹಲಿಗೆ ಪ್ರಯಾಣ ಬೆಳೆಸಿರುವ ಹಿನ್ನೆಲೆ ಇದ್ದು, ಮೈಸೂರಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ.

    ರೋಗಿ 156 – ಮೈಸೂರಿನ 57 ವರ್ಷದ ಪುರುಷ. ಇವರೂ ಕೂಡ ದೆಹಲಿಗೆ ಪ್ರಯಾಣ ಮಾಡಿರುವ ಹಿನ್ನೆಲೆ ಇದ್ದು, ಇವರಿಗೆ ಮೈಸೂರಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ನೀಡಲಾಗುತ್ತಿದೆ.

    ರೋಗಿ 157 – ಮೈಸೂರಿನ 22 ವರ್ಷದ ಯುವಕ. ರಾಷ್ಟ್ರ ರಾಜಧಾನಿ ದೆಹಲಿಗೆ ಪ್ರಯಾಣ ಮಾಡಿರುವ ಹಿನ್ನೆಲೆ ಇದ್ದು, ಈತನನ್ನೂ ಕೂಡ ಮೈಸೂರಿನ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ.

    ರೋಗಿ 158 – ಮೈಸೂರಿನ 26 ವರ್ಷದ ಯುವಕ. ಈತನ ವಿವರವನ್ನು ಕಲೆಹಾಕಲಾಗುತ್ತಿದ್ದು, ಮೈಸೂರಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ.

    ರೋಗಿ 159 – ಮೈಸೂರಿನ 32 ವರ್ಷದ ಮಹಿಳೆ. ರೋಗಿ 52 ಅವರ ರೀತಿಯೇ ಇವರು ಕೂಡ ಫಾರ್ಮಸಿಟಿಕಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರನ್ನು ಮೈಸೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಿ ನಿಗಾ ವಹಿಸಲಾಗಿದೆ.

    ರೋಗಿ 160 – ಮೈಸೂರಿನ 35 ವರ್ಷದ ಪುರುಷ. ಇವರು ದುಬೈಗೆ ಪ್ರಯಾಣ ಮಾಡಿರುವ ಹಿನ್ನೆಲೆ ಹೊಂದಿದ್ದು, ಇವರಿಗೂ ಕೂಡ ಮೈಸೂರಿನ ಜಿಲ್ಲಾಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.

    ರೋಗಿ 161 – ಬಾಗಲಕೋಟೆಯ 56 ವರ್ಷದ ಮಹಿಳೆ. ಇವರು ರೋಗಿ 125 ಅವರ ಪತ್ನಿ. ರೋಗಿ 125 ಅವರ ಜೊತೆ ಸಂಪರ್ಕದಲ್ಲಿದ್ದ ಕಾರಣ ಇವರಿಗೂ ಸೋಂಕು ತಗುಲಿದೆ. ಇವರಿಗೆ ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.

    ರೋಗಿ 162 – ಬಾಗಲಕೋಟೆಯ 58 ವರ್ಷದ ಪುರುಷ. ಇವರು ರೋಗಿ 125 ಅವರ ಸಹೋದರ. ರೋಗಿ 125 ಅವರ ಜೊತೆ ಸಂಪರ್ಕದಲ್ಲಿದ್ದ ಕಾರಣ ಇವರಿಗೂ ಸೋಂಕು ತಗುಲಿದ್ದು, ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಒಳಪಡಿಸಲಾಗಿದೆ.

    ರೋಗಿ 163 – ಬೆಂಗಳೂರು ಗ್ರಾಮಾಂತರದ 43 ವರ್ಷದ ಪುರುಷ. ಇವರು ದೆಹಲಿಯಲ್ಲಿ ಮಾರ್ಚ್ 13ರಿಂದ 18ರವರೆಗೆ ನಡೆದಿದ್ದ ತಬ್ಲಿಘಿ ಜಮಾತ್ ಸಭೆಯಲ್ಲಿ ಭಾಗಿಯಾಗಿದ್ದರು. ಇವರಿಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಈವರೆಗೆ ವರದಿಯಾದ 163 ಸೋಂಕಿತರಲ್ಲಿ 20 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 139 ಮಂದಿ ಇನ್ನೂ ಸೊಂಕಿನಿಂದ ಬಳಲುತ್ತಿದ್ದು, 4 ಮಂದಿ ಸಾವನ್ನಪ್ಪಿದ್ದಾರೆ.

    ರಾಜ್ಯದ 25 ಜಿಲ್ಲೆಗಳಿಂದ ಇಂದು 47 ಮಂದಿ ಹೊಸ ಕೊರೊನಾ ಶಂಕಿತರನ್ನು ಪತ್ತೆಹಚ್ಚಲಾಗಿದ್ದು, ಶಂಕಿತರು ಯಾವ ಜಿಲ್ಲೆಯವರೋ ಆ ಜಿಲ್ಲಾಸ್ಪತ್ರೆಗಳಲ್ಲಿಯೇ ಅವರನ್ನು ಪ್ರತ್ಯೇಕವಾಗಿರಿಸಿ ನಿಗಾ ವಹಿಸಲಾಗಿದೆ. ಈವರೆಗೆ 333 ಮಂದಿ ಶಂಕಿತರನ್ನು ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿರಿಸಲಾಗಿತ್ತು, ಅವರಲ್ಲಿ ಇಂದು 120 ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದೆ.