Tag: Coronavirus

  • ತನ್ನ ಪರ ತೀರ್ಪು ಕೊಡದ ನ್ಯಾಯಾಧೀಶರಿಗೇ ಕೊರೊನಾ ಬರಲಿ ಎಂದು ಶಾಪ ಹಾಕಿದ ವಕೀಲ

    ತನ್ನ ಪರ ತೀರ್ಪು ಕೊಡದ ನ್ಯಾಯಾಧೀಶರಿಗೇ ಕೊರೊನಾ ಬರಲಿ ಎಂದು ಶಾಪ ಹಾಕಿದ ವಕೀಲ

    ಕೊಲ್ಕತ್ತಾ: ವಿಶ್ವವ್ಯಾಪಿ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ವೈರಸ್‍ಗೆ ಜನರು ತತ್ತರಿಸಿ ಹೋಗಿದ್ದು, ಭಯಭೀತರಾಗಿದ್ದಾರೆ. ಈ ಮಧ್ಯೆ ತನ್ನ ಕಕ್ಷಿದಾರರ ಪರ ತೀರ್ಪು ಕೊಡಲಿಲ್ಲ ಎಂದು ಸಿಟ್ಟಿಗೆದ್ದ ವಕೀಲರೊಬ್ಬರು ನ್ಯಾಯಾಧೀಶರಿಗೇ ಕೊರೊನಾ ಬರಲಿ ಎಂದು ಶಾಪ ಹಾಕಿದ್ದಾರೆ.

    ಕೊಲ್ಕತ್ತಾದಲ್ಲಿ ಈ ಘಟನೆ ನಡೆದಿದೆ. ದೇಶದೆಲ್ಲೆಡೆ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಕೊಲ್ಕತ್ತಾ ಹೈಕೋರ್ಟ್ ಮಾರ್ಚ್ 15ರಿಂದ ತುರ್ತು ಪ್ರಕರಣಗಳನ್ನು ಮಾತ್ರ ವಿಚಾರಣೆ ನಡೆಸಲಾಗುತ್ತೆ, ಬೇರೆ ಪ್ರಕರಣಗಳನ್ನು ಕಾಯ್ದಿಸಲಾಗುತ್ತೆ ಎಂದು ತಿಳಿಸಿತ್ತು. ಅಲ್ಲದೇ ಮಾರ್ಚ್ 25ರಿಂದ ತುರ್ತು ಪ್ರಕರಣಗಳಿದ್ದರೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸೋದಾಗಿ ನ್ಯಾಯಾಲಯ ಘೋಷಿಸಿತ್ತು.

    ಆದರೆ ವಕೀಲ ಬಿಜೋಯ್ ಅಧಿಕಾರಿ ತಮ್ಮ ಕಕ್ಷಿದಾರರ ಪ್ರಕರಣವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿ, ತೀರ್ಪು ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಬಸ್ ಲೋನ್ ಕಟ್ಟದ ಪರಿಣಾಮ ಬ್ಯಾಂಕ್ ಅವರು ಕಕ್ಷಿದಾರರ ಬಸ್ ಜಪ್ತಿ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿ ಎಂದು ಬಿಜೋಯ್ ನ್ಯಾಯಾಧೀಶರಾದ ದೀಪಂಕರ್ ದತ್ತ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮಾಡುತ್ತಿದ್ದರು.

    ಈ ವೇಳೆ ನ್ಯಾಯಾಧೀಶರು ತಮ್ಮ ಕಕ್ಷಿದಾರನ ಪ್ರಕರಣವನ್ನು ತ್ವರಿತವಾಗಿ ವಿಚಾರಣೆ ನಡೆಸದೆ, ತಮ್ಮ ಪರವಾಗಿ ತೀರ್ಪು ನೀಡದ್ದಕ್ಕೆ ಬಿಜೋಯ್ ಕೋಪಗೊಂಡರು. ಅಲ್ಲದೇ ನ್ಯಾಯಮೂರ್ತಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಿಮಗೇ ಕೊರೊನಾ ಬರಲಿ ಎಂದು ಶಾಪ ಹಾಕಿದ್ದಾರೆ.

    ವಿಡಿಯೋ ಕಾನ್ಫರೆನ್ಸ್ ನಲ್ಲಿ ತಮಗೆ ಅಗೌರವ ತೋರಿಸಿ, ಅವಹೇಳನಕಾರಿಯಾಗಿ ಹೇಳಿಕೆ ನೀಡಿ ಬಿಜೋಯ್ ಅವರು ನ್ಯಾಯಾಲಯದ ತೀರ್ಪನ್ನು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ವಕೀಲ ವೃತ್ತಿಯ ಘನತೆಯನ್ನು ಕಾಪಾಡದೆ, ಈ ರೀತಿ ನಡೆದುಕೊಂಡಿದ್ದಕ್ಕೆ ಅವರು ಸ್ಪಷ್ಟನೆ ನೀಡಬೇಕೆಂದು ಎಂದು ನ್ಯಾಯಾಧೀಶರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

  • ಯಾದಗಿರಿಯಲ್ಲಿ ಮೊದಲ ಬಾರಿಗೆ ಸ್ಯಾನಿಟೈಸರ್ ಸ್ಪ್ರೇ ಟನಲ್ ಆರಂಭ

    ಯಾದಗಿರಿಯಲ್ಲಿ ಮೊದಲ ಬಾರಿಗೆ ಸ್ಯಾನಿಟೈಸರ್ ಸ್ಪ್ರೇ ಟನಲ್ ಆರಂಭ

    ಯಾದಗಿರಿ: ಕೊರೊನಾ ವೈರಸ್ ಭೀತಿ ಹಿನ್ನೆಲೆ ಮುಂಜಾಗ್ರತೆ ಕ್ರಮವಾಗಿ ಕಲ್ಯಾಣ ಕರ್ನಾಟಕದ ಯಾದಗಿರಿಯಲ್ಲಿ ಮೊದಲ ಬಾರಿಗೆ ಸ್ಯಾನಿಟೈಸರ್ ಸ್ಪ್ರೇ ಟನಲ್ ಆರಂಭಿಸಲಾಗಿದೆ.

    ತಮ್ಮ ಕ್ಷೇತ್ರದ ಜನರ ಹಿತದೃಷ್ಟಿಯಿಂದ ಯಾದಗಿರಿ ಜಿಲ್ಲೆಯ ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ ತಮ್ಮ ಸ್ವಂತ ಖರ್ಚಿನಲ್ಲಿ ಈ ಟೆನಲ್‍ಗಳನ್ನು ಆರಂಭಿಸಿದ್ದಾರೆ. ಪಟ್ಟಣದ ಸರ್ಕಾರಿ ಡಿಗ್ರಿ ಕಾಲೇಜು ಆವರಣದಲ್ಲಿ ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಹೊಸದಾಗಿ ತರಕಾರಿ ಮಾರುಕಟ್ಟೆ ಆರಂಭಿಸಲಾಗಿದೆ. ಈ ಮಾರುಕಟ್ಟೆ ಮುಖ್ಯ ದ್ವಾರದಲ್ಲಿ ಈ ಸ್ಯಾನಿಟೈಸರ್ ಸ್ಪ್ರೇ ಟನಲ್ ನಿರ್ಮಾಣ ಮಾಡಲಾಗಿದೆ.

    ತರಕಾರಿ ಮಾರುಕಟ್ಟೆಗೆ ನಿತ್ಯ ಬರುವ ನೂರಾರು ಮಂದಿ ಸ್ಪ್ರೇ ಸಿಂಪಡಣೆ ಆದ ಬಳಿಕವೇ ಒಳಗಡೆ ಹೋಗಬೇಕು ಮತ್ತು ವಾಪಸ್ ಬರವಾಗಲೂ ಸ್ಪ್ರೇ ಟನಲ್‍ನಿಂದಲೇ ಹೊರಗಡೆ ಬರಬೇಕು ಎಂದು ಸೂಚಿಸಲಾಗಿದೆ. ಈ ಮೂಲಕ ಯಾದಗಿರಿಯಲ್ಲಿ ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗಿದೆ.

  • ಉತ್ತರ ಕನ್ನಡದಲ್ಲಿ ಗರ್ಭಿಣಿಗೆ ಕೊರೊನಾ – ಜಿಲ್ಲೆಯಲ್ಲಿ 9ಕ್ಕೆ ಏರಿದ ಸೋಂಕಿತರ ಸಂಖ್ಯೆ

    ಉತ್ತರ ಕನ್ನಡದಲ್ಲಿ ಗರ್ಭಿಣಿಗೆ ಕೊರೊನಾ – ಜಿಲ್ಲೆಯಲ್ಲಿ 9ಕ್ಕೆ ಏರಿದ ಸೋಂಕಿತರ ಸಂಖ್ಯೆ

    ಕಾರವಾರ: ದೇಶದಲ್ಲಿ ತಲ್ಲಣ ಮೂಡಿಸಿರುವ ಕೊರೊನಾ ಸೋಂಕು ಉತ್ತರ ಕನ್ನಡ ಜಿಲ್ಲೆಯಲ್ಲಿ ಹತೋಟಿಗೆ ಬರುತ್ತಿದೆ ಎಂದು ನಿಟ್ಟುಸಿರು ಬಿಡುತ್ತಿದ್ದಂತೆ ಭಟ್ಕಳದಲ್ಲಿ ಗರ್ಭಿಣಿ ಒಬ್ಬರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

    26 ವರ್ಷದ ಐದು ತಿಂಗಳ ಗರ್ಭಿಣಿಗೆ ಸೋಂಕು ಇರುವುದು ದೃಢಪಟ್ಟಿದೆ. ಈಕೆಗೆ ಈಗಾಗಲೇ ಇಬ್ಬರು ಮಕ್ಕಳಿದ್ದು, ಈಕೆಯ ಪತಿ ದುಬೈನಿಂದ ವಾಪಸ್ಸಾಗಿದ್ದರು. ಆದರೆ ಪತಿಯ ಕೊರೊನಾ ಪರೀಕ್ಷೆ ವರದಿ ನೆಗೆಟಿವ್ ಬಂದಿದೆ. ಇದನ್ನೂ ಓದಿ: ರಾಜ್ಯದಲ್ಲಿ ಕೊರೊನಾಗೆ ಮತ್ತೊಂದು ಸಾವು- ಮತ್ತೆ ಆರು ಮಂದಿಗೆ ಸೋಂಕು

    ದುಬೈನಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯ ಪತಿ ಮಾರ್ಚ್ 17ರಂದು ಮುಂಬೈಗೆ ವಿಮಾನದ ಮೂಲಕ ಬಂದಿಳಿದಿದ್ದರು. ಮುಂಬೈನಲ್ಲಿ ಸುಮಾರು 4 ದಿನ ಉಳಿದಿದ್ದರು. ಆ ನಂತರ ರೈಲಿನಲ್ಲಿ ಭಟ್ಕಳಕ್ಕೆ ಬಂದಿದ್ದರು. ಭಟ್ಕಳ ರೈಲು ನಿಲ್ದಾಣದಿಂದ ಸ್ನೇಹಿತನ ಬೈಕ್‍ನಲ್ಲಿ ಮನೆಗೆ ತೆರಳಿದ್ದರು.

    ದುಬೈನಿಂದ ಬಂದವರಾಗಿದ್ದರಿಂದ ಆರೋಗ್ಯ ಇಲಾಖೆ ಸಿಬ್ಬಂದಿ ಮಹಿಳೆಯ ಪತಿಯ ಕೈಗೆ ಹೋಂ ಕ್ವಾರಂಟೈನ್ ಮುದ್ರೆ ಹಾಕಿದ್ದರು. ಮಾರ್ಚ್ 31ರಂದು ಮಹಿಳೆ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಂಡು ಬಂದ ಹಿನ್ನೆಲೆ ಆಕೆಯನ್ನು ಪತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಆಸ್ಪತ್ರೆಯ ಸಿಬ್ಬಂದಿ ಪತಿಯ ಕೈ ಮೇಲೆ ಕ್ವಾರಂಟೈನ್ ಮುದ್ರೆ ಇರುವುದನ್ನು ಗಮನಿಸಿ ವೈದ್ಯರ ಗಮನಕ್ಕೆ ತಂದಿದ್ದಾರೆ. ನಂತರ ಇಬ್ಬರನ್ನು ಭಟ್ಕಳ ತಾಲೂಕು ಆಸ್ಪತ್ರೆಗೆ ದಾಖಲಿಸಿ, ಇಬ್ಬರ ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇದನ್ನೂ ಓದಿ: ಶುಭ ಸುದ್ದಿ, ಕೊರೊನಾ ಗೆದ್ದ ವೃದ್ಧ ದಂಪತಿ ಡಿಸ್ಚಾರ್ಜ್- ಆಹಾರ ಏನಿತ್ತು?

    ಈ ವೇಳೆ ಪತ್ನಿಗೆ ಕೊರೊನಾ ಸೋಂಕು ತಗುಲಿರುವುದು ದೃಢ ಪಟ್ಟಿದ್ದು, ಪತಿಯ ವರದಿ ನೆಗೆಟಿವ್ ಬಂದಿದೆ. ಇದೀಗ ಪತಿಯ ಗಂಟಲಿನ ದ್ರವವನ್ನು ಮತ್ತೊಮ್ಮೆ ಪರೀಕ್ಷೆಗೆ ಕಳುಹಿಸಲಾಗಿದೆ. ಸದ್ಯ ಸೋಂಕಿತ ಮಹಿಳೆಯನ್ನು ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ. ಇತ್ತ ಇನ್ನೊಮ್ಮೆ ಕಳುಹಿಸಲಾದ ಪತಿಯ ಗಂಟಲಿನ ದ್ರವದ ಮಾದರಿಯ ವರದಿ ಬರಬೇಕಿದ್ದು, ಅಲ್ಲಿಯವರೆಗೆ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.

    ಗರ್ಭಿಣಿಯ ಪತಿಗೆ ಕೊರೊನಾ ಇದ್ದು ರೋಗ ನಿರೋಧಕ ಶಕ್ತಿ ಅಧಿಕವಾಗಿರುವುದರಿಂದ ಅದು ಅವರಲ್ಲಿ ಕಾಣಿಸಿಕೊಳ್ಳದೇ ಇರಬಹುದು. ಅಥವಾ ಅವರಲ್ಲಿದ್ದ ವೈರಾಣು ನಾಶವಾಗಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಅವರು 14 ದಿನಗಳ ಕ್ವಾರಂಟೈನ್ ಪೂರೈಸಿದ ಬಳಿಕ ಪತ್ನಿಯೊಂದಿಗೆ ಸಂಪರ್ಕ ಹೊಂದಿದ್ದು, ಈ ವೇಳೆ ವೈರಾಣು ಆಕೆಗೆ ತಗುಲಿರುವ ಸಾಧ್ಯತೆಯೂ ಇದೆ ಎಂದು ಶಂಕಿಸಲಾಗಿದೆ.

  • ಶುಭ ಸುದ್ದಿ, ಕೊರೊನಾ ಗೆದ್ದ ವೃದ್ಧ ದಂಪತಿ ಡಿಸ್ಚಾರ್ಜ್- ಆಹಾರ ಏನಿತ್ತು?

    ಶುಭ ಸುದ್ದಿ, ಕೊರೊನಾ ಗೆದ್ದ ವೃದ್ಧ ದಂಪತಿ ಡಿಸ್ಚಾರ್ಜ್- ಆಹಾರ ಏನಿತ್ತು?

    – ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ರೂ ಗುಣಮುಖ

    ಕೇರಳ: ಮಹಾಮಾರಿ ಕೊರೊನಾ ಎಂದರೆ ಸಾಕು ಜನರು ಭಯಭೀತರಾಗುತ್ತಾರೆ. ಅದರಲ್ಲೂ ಈ ವೈರಸ್ 60 ವರ್ಷ ಮೇಲ್ಪಟ್ಟವರಿಗೆ ಬಂದರೆ ಗುಣಮುಖರಾಗುವುದು ಕಷ್ಟ ಎಂಬ ಆತಂಕವಿದೆ. ಇದೇ ವೇಳೆ ಕೇರಳದಿಂದ ಶುಭ ಸುದ್ದಿ ಸಿಕ್ಕಿದ್ದು, ವೃದ್ಧ ದಂಪತಿ ಮಹಾಮಾರಿ ಕೋವಿಡ್-19 ವೈರಸ್‍ನಿಂದ ಗೆದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಥಾಮಸ್ (93) ಮತ್ತು ಅವರ ಪತ್ನಿ ಮರಿಯಮ್ಮ (88) ಕೊರೊನಾದಿಂದ ಗುಣಮುಖರಾಗಿದ್ದಾರೆ. ಈ ದಂಪತಿ ಕೇರಳದ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಇದೀಗ ಈ ದಂಪತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಕೇರಳದ ಕೊಟ್ಟಾಯಂನಲ್ಲಿರುವ ತಮ್ಮ ಮನೆಗೆ ತೆರಳಿದ್ದಾರೆ.

    ಥಾಮಸ್ ಕೋವಿಡ್-19 ವೈರಸ್‍ನಿಂದ ಪಾರಾದ ಭಾರತದ ಅತ್ಯಂತ ವೃದ್ಧರಾಗಿದ್ದಾರೆ. ಇತ್ತೀಚಿಗೆ ನಡೆಸಿದ ಪರೀಕ್ಷೆಯಲ್ಲಿ ಕೊರೊನಾ ನೆಗೆಟಿವ್ ಬಂದಿದೆ. ಹೀಗಾಗಿ ಥಾಮಸ್ ಅವರನ್ನು ಪತ್ನಿಯೊಂದಿಗೆ ಡಿಸ್ಚಾರ್ಜ್ ಮಾಡಲಾಗಿದೆ.

    ಸೋಂಕು ಬಂದಿದ್ದು ಹೇಗೆ?
    ವೃದ್ಧ ದಂಪತಿಯನ್ನು ಮಾರ್ಚ್ 9 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಥಾಮಸ್ ಮತ್ತು ಮರಿಯಮ್ಮ ವೃದ್ಧ ದಂಪತಿ ಪತ್ತನಂತಿಟ್ಟ ಜಿಲ್ಲೆಯ ರಾಣಿ ಗ್ರಾಮದ ನಿವಾಸಿಯಾಗಿದ್ದು, ಮಾರ್ಚ್‍ನಲ್ಲಿ ಇಟಲಿಯಿಂದ ವೃದ್ಧ ದಂಪತಿಯ ಮಗ, ಸೊಸೆ ಮತ್ತು ಮೊಮ್ಮಗ ಹಿಂದಿರುಗಿದ್ದರು. ಇವರ ಜೊತೆ ಸಂಪರ್ಕ ಹೊಂದಿದ್ದ ವೃದ್ಧ ದಂಪತಿಗೆ ಕೊರೊನಾ ಬಂದಿತ್ತು. ಅವರ ಮಗ, ಸೊಸೆ ಮತ್ತು ಮೊಮ್ಮಗನಿಗೂ ಕೊರೊನಾ ಪಾಸಿಟಿವ್ ಬಂದಿತ್ತು.

    ದಂಪತಿ ಎರಡು ವಾರಗಳವರೆಗೆ ಕಟ್ಟುನಿಟ್ಟಿನಿಂದ ಹೋಂ ಕ್ಯಾರೆಂಟೈನ್‍ನಲ್ಲಿ ಉಳಿದಿದ್ದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರಿಬ್ಬರನ್ನು ಮತ್ತೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ದಂಪತಿ ಈಗಾಗಲೇ ಮಧುಮೇಹ, ರಕ್ತದೊತ್ತಡ, ಹೃದಯ ಕಾಯಿಲೆ ಮತ್ತು ವಯಸ್ಸಿಗೆ ಸಂಬಂಧಿಸಿದ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದರು. ಹೀಗಾಗಿ ಮೊದಲ ಹಂತದ ಚಿಕಿತ್ಸೆಯಲ್ಲಿ ದಂಪತಿಯ ಸ್ಥಿತಿ ಗಂಭೀರವಾಗಿತ್ತು.

    ಅಷ್ಟೇ ಅಲ್ಲದೇ ಚಿಕಿತ್ಸೆಯ ಸಮಯದಲ್ಲಿ ಥಾಮಸ್‍ಗೆ ಹೃದಯಾಘಾತವಾಗಿತ್ತು. ಅಲ್ಲದೇ ರಕ್ತದೊತ್ತಡದಿಂದ ವೈದ್ಯರು ಅವರನ್ನು ವೆಂಟಿಲೇಟರ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆಯ ಸಮಯದಲ್ಲಿ ಥಾಮಸ್ ಮತ್ತು ಮರಿಯಮ್ಮ ಇಬ್ಬರಿಗೂ ಮೂತ್ರದ ಸೋಂಕು ಕೂಡ ಕಂಡುಬಂದಿತ್ತು. ಆದರೂ ಇಷ್ಟೆಲ್ಲಾ ಕಷ್ಟದಿಂದಲೂ ವೃದ್ಧ ದಂಪತಿ ಧೈರ್ಯದಿಂದ ಕೊರೊನಾ ವೈರಸ್ ವಿರುದ್ಧ ಹೋರಾಡಿ ಗೆದ್ದು ಬಂದಿದ್ದಾರೆ.

    ಸ್ಥಳಿಯವಾಗಿ ವೃದ್ಧದಂಪತಿ ಎಲ್ಲ ಆಹಾರವನ್ನು ಇಷ್ಟ ಪಡುತ್ತಾರೆ. ಥಾಮಸ್ ಅವರಿಗೆ ಫಿಶ್ ಫ್ರೈ ಅಂದರೆ ತುಂಬಾ ಇಷ್ಟ. ಹೀಗಾಗಿ ನಾವು ತಿನ್ನಲು ಫಿಶ್  ಫ್ರೈ ಕೊಡುತ್ತಿದ್ದೆವು. ಅಲ್ಲದೇ ಅಕ್ಕಿ ಗಂಜಿ, ಮರಗೆಣಸು ಮತ್ತು ಹಲಸಿನ ಹಣ್ಣನ್ನು ಆಹಾರವಾಗಿ ತಿನ್ನಲು ಕೊಡುತ್ತಿದ್ದೆವು ಎಂದು ಚಿಕಿತ್ಸೆ ನೀಡಿದ್ದ ವೈದ್ಯರೊಬ್ಬರು ಹೇಳಿದ್ದಾರೆ.

    ಇದೀಗ ವೃದ್ಧ ದಂಪತಿಯನ್ನು ಉಳಿಸಲು ಶ್ರಮಿಸಿದ ವೈದ್ಯರು, ನರ್ಸ್ ಗಳು ಮತ್ತು ಇತರ ಸಿಬ್ಬಂದಿಗೆ ಕೇರಳ ಆರೋಗ್ಯ ಸಚಿವ ಕೆ.ಕೆ.ಶೈಲಾಜಾ ಧನ್ಯವಾದ ತಿಳಿಸಿದ್ದಾರೆ. ಸರ್ಕಾರದ ಪ್ರಕಾರ, ಏಳು ವೈದ್ಯರ ತಂಡವು ಚಿಕಿತ್ಸೆ ನೀಡಿದ್ದು, ಇವರಿಗೆ 25 ಮಂದಿ ನರ್ಸ್ ಸೇರಿದಂತೆ 40 ವೈದ್ಯಕೀಯ ಸಿಬ್ಬಂದಿ ಸಹಕಾರ ನೀಡಿದ್ದರು ಎಂದು ತಿಳಿದುಬಂದಿದೆ.

  • ಆ್ಯಂಟಿ ಮಲೇರಿಯಾ ಔಷಧಿಗಾಗಿ ಭಾರತಕ್ಕೆ ಟ್ರಂಪ್ ಬೆದರಿಕೆ

    ಆ್ಯಂಟಿ ಮಲೇರಿಯಾ ಔಷಧಿಗಾಗಿ ಭಾರತಕ್ಕೆ ಟ್ರಂಪ್ ಬೆದರಿಕೆ

    – ಐಸಿಯು ಸೇರಿದ ಬ್ರಿಟನ್ ಪ್ರಧಾನಿ ಬೋರಿಸ್

    ನವದೆಹಲಿ: ಆ್ಯಂಟಿ ಮಲೇರಿಯಾ ಔಷಧಿಗಾಗಿ ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತಕ್ಕೆ ಬೆದರಿಕೆ ಹಾಕಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

    ಅಮೆರಿಕ ಸೇರಿದಂತೆ ಕೊರೊನಾ ಬಾಧಿತ ರಾಷ್ಟ್ರಗಳಿಗೆ ಮಾನವೀಯತೆ ದೃಷ್ಟಿಯಲ್ಲಿ ಆ್ಯಂಟಿ ಮಲೇರಿಯಾ (ಹೈಡ್ರೋಕ್ಸಿಕ್ಲೋರೋಕ್ವೀನ್) ಔಷಧಿ ರಫ್ತು ಮಾಡುವುದಾಗಿ ಭಾರತ ಹೇಳಿದೆ. 26 ಜೆನರಿಕ್ ಔಷಧಿಗಳ ರಫ್ತಿಗೆ ಕಳೆದ ತಿಂಗಳಷ್ಟೇ ಭಾರತ ನಿರ್ಬಂಧ ಹೇರಿತ್ತು. ಆದರೆ ಅಮೆರಿಕದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಆ್ಯಂಟಿ ಮಲೇರಿಯಾ ಔಷಧಿಯನ್ನು ತ್ವರಿತವಾಗಿ ರಫ್ತು ಮಾಡುವಂತೆ ಅಮೆರಿಕ ಕೇಳಿತ್ತು. ಅಲ್ಲದೆ ಒಂದೊಮ್ಮೆ ರಫ್ತು ಮಾಡದಿದ್ದಲ್ಲಿ ಪ್ರತೀಕಾರ ತೀರಿಸಿಕೊಳ್ಳೋದಾಗಿ ಟ್ರಂಪ್ ಬೆದರಿಸಿದ್ದರು. ಇದಕ್ಕೆ ದೇಶದಲ್ಲಿ ಟೀಕೆ ವ್ಯಕ್ತವಾಗಿದೆ. ದೇಶವೊಂದರ ವಿರುದ್ಧ ಇಂಥ ಬೆದರಿಕೆ ನೋಡಿಯೇ ಇಲ್ಲ ಅಂತ ಕಾಂಗ್ರೆಸ್‍ನ ಶಶಿತರೂರ್ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಅಮೆರಿಕಕ್ಕೆ ಭಾರತದಿಂದ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ರಫ್ತು – ಟ್ರಂಪ್ ಈ ಮಾತ್ರೆಗೆ ಬೇಡಿಕೆ ಇಟ್ಟಿದ್ದು ಯಾಕೆ?

    ವಿಶ್ವಾದ್ಯಂತ ಮಂಗಳವಾರ ರಾತ್ರಿ 8 ಗಂಟೆ ವೇಳೆಗೆ ಕೊರೊನಾ ಸೋಂಕಿತರ ಸಂಖ್ಯೆ 13.60 ಲಕ್ಷಕ್ಕೆ ಏರಿದ್ದು, 75,910 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 3 ಲಕ್ಷ ಜನ ಚೇತರಿಸಿಕೊಂಡಿದ್ದಾರೆ. ಅಮೆರಿಕದಲ್ಲಂತೂ ಕೊರೊನಾ ಸೋಂಕು ನಿಯಂತ್ರಣಕ್ಕೆ ಸಿಗುತ್ತಿಲ್ಲ. ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.

    ದೇಶ           ಸೋಂಕಿತರು         ಸಾವು
    ಅಮೆರಿಕ      3.67 ಲಕ್ಷ              10,934 (ಮಂಗಳವಾರ 72)
    ಸ್ಪೇನ್        1.40 ಲಕ್ಷ              13,798 (ಮಂಗಳವಾರ 457)
    ಇಟಲಿ         1.32 ಲಕ್ಷ              16,523
    ಜರ್ಮನಿ      1.03 ಲಕ್ಷ              1,810
    ಫ್ರಾನ್ಸ್        98 ಸಾವಿರ            8,911

    ಬೆಲ್ಜಿಯಂನಲ್ಲಿ 22 ಸಾವಿರಕ್ಕೇರಿದೆ, 2,035 ಜನ ಸತ್ತಿದ್ದಾರೆ. ಇವತ್ತೊಂದೇ ಜನ 403 ಮಂದಿ ಜೀವಬಿಟ್ಟಿದ್ದಾರೆ.

  • ಕೆಟ್ಟ ದಾಖಲೆ ಬರೆದ ‘ಮಹಾ’- 1 ಸಾವಿರ ಸೋಂಕಿತರ ಗಡಿ ದಾಟಿದ ಮೊದಲ ರಾಜ್ಯ

    ಕೆಟ್ಟ ದಾಖಲೆ ಬರೆದ ‘ಮಹಾ’- 1 ಸಾವಿರ ಸೋಂಕಿತರ ಗಡಿ ದಾಟಿದ ಮೊದಲ ರಾಜ್ಯ

    ಮುಂಬೈ: ಹೆಮ್ಮಾರಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಲೇ ಇದೆ. ಮಂಗಳವಾರ ರಾತ್ರಿ 7 ಗಂಟೆ ವೇಳೆ ಒಂದು ಸಾವಿರ ಸೋಂಕಿತರ ಗಡಿ ದಾಟಿದೆ.

    ಮಹಾರಾಷ್ಟ್ರದಲ್ಲಿ ಮಂಗಳವಾರ ಒಂದೇ ದಿನದಲ್ಲಿ 150 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದಾಗಿ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,018ಕ್ಕೆ ಕಂಡಿದೆ. ದೇಶದಲ್ಲಿ ಈವರೆಗೂ ಯಾವುದೇ ರಾಜ್ಯದಲ್ಲಿಯೂ ಸೋಂಕಿತರ ಸಂಖ್ಯೆ ಒಂದು ಸಾವಿರದ ಗಡಿ ದಾಟಿರಲಿಲ್ಲ. ಆದರೆ ಮಹಾರಾಷ್ಟ್ರ ಈ ಕೆಟ್ಟ ದಾಖಲೆ ಬರೆದಿದೆ.

    ಮಹಾರಾಷ್ಟ್ರದ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ಮಂಗಳವಾರದ ಪುಣೆಯಲ್ಲಿ 8 ಮಂದಿ ಸೋಂಕಿತರು, ಅಹ್ಮದ್‍ನಗರ, ನಾಗಪುರ್, ಔರಂಗಬಾದ್‍ನಲ್ಲಿ ತಲಾ 3 ಜನ ಸೋಂಕಿತರು, ಥಾಣೆ, ಬುಲ್ಡಾನಾನಲ್ಲಿ ತಲಾ ಇಬ್ಬರು ಸೋಂಕಿತು, ಸತಾರಾ, ರತ್ನಾಗಿರಿ ಮತ್ತು ಸಾಂಗ್ಲಿಯಲ್ಲಿ ತಲಾ ಒಬ್ಬರು ಸೋಂಕಿತರು ಪತ್ತೆಯಾಗಿದ್ದಾರೆ.

    ಮಹಾರಾಷ್ಟ್ರದ ನಂತರದ ಸ್ಥಾನದಲ್ಲಿ 699 ಜನ ಸೋಂಕಿತರನ್ನು ಹೊಂದಿರುವ ತಮಿಳುನಾಡು ಇದೆ. ಮಂಗಳವಾರ ತಮಿಳುನಾಡಿನಲ್ಲಿ 69 ಜನರಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದ್ದು, ಅವರಲ್ಲಿ 63 ಮಂದಿ ದೆಹಲಿ ತಬ್ಲಿಘಿ ಜಮಾತ್ ಸಭೆಗೆ ನಂಟು ಹೊಂದಿದವರೇ ಆಗಿದ್ದಾರೆ. ತಮಿಳುನಾಡಿನಲ್ಲಿ ಈವರೆಗೂ ಪತ್ತೆಯಾದ 699 ಜನ ಸೋಂಕಿತರಲ್ಲಿ 636 ಮಂದಿ ಜಮಾತ್ ನಂಟು ಹೊಂದಿದ್ದಾರೆ.

    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ರಾತ್ರಿ 8 ಗಂಟೆಗೆ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 508 ಜನರಿಗೆ ಸೋಂಕು ದೃಢವಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 4,789ಕ್ಕೆ ಏರಿಕೆ ಕಂಡಿದೆ. 24 ಗಂಟೆಯಲ್ಲಿ 13 ಮಂದಿ ಸಾವನ್ನಪ್ಪವ ಮೂಲಕ ಸಾವಿನ ಸಂಖ್ಯೆ 140ಕ್ಕೆ ಏರಿದೆ.

    ಕೊರೊನಾ ಬಗ್ಗೆ ಆನ್‍ಲೈನ್‍ನಲ್ಲಿ ತರಬೇತಿ ಪಡೆಯುವಂತೆ ಸೈನಿಕರು, ಪೊಲೀಸರು, ರೆಡ್‍ಕ್ರಾಸ್ ಸಂಸ್ಥೆ, ಎನ್‍ಸಿಸಿ, ಎನ್‍ಎಸ್‍ಎಸ್‍ನವರಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಕೊರೊನಾ ಕಂಟ್ರೋಲ್ ಮತ್ತು ತಬ್ಲಿಘಿಗಳ ಪತ್ತೆಗೆ ದೆಹಲಿ 5 ಸೂತ್ರ ರೂಪಿಸಿದೆ.

  • ಪ್ರಧಾನಿ ಮೋದಿಗೆ ಸೋನಿಯಾ ಗಾಂಧಿ ಪಂಚ ಸಲಹೆ

    ಪ್ರಧಾನಿ ಮೋದಿಗೆ ಸೋನಿಯಾ ಗಾಂಧಿ ಪಂಚ ಸಲಹೆ

    ನವದೆಹಲಿ: ದೇಶಾದ್ಯಂತ ಹದ್ದು ಮೀರುತ್ತಿರುವ ಕೊರೊನಾ ನಿಯಂತ್ರಣಕ್ಕೆ ವಿಪಕ್ಷ ನಾಯಕರ ಸಲಹೆ ಕೇಳಿ ಪ್ರಧಾನಿ ನರೇಂದ್ರ ಮೋದಿ ಅವರು ಮೊನ್ನೆಯಷ್ಟೇ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ಈ ಬೆನ್ನಲ್ಲೇ, ಇವತ್ತು ಪ್ರಧಾನಿ ಅವರಿಗೆ ಪತ್ರ ಬರೆದಿರುವ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಸಂಸದರ ಶೇ.30ರಷ್ಟು ಸಂಬಳ ಕಡಿತಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕೊರೊನಾ ವಿರುದ್ಧ ಹೋರಾಟದ ಆರ್ಥಿಕ ಕ್ರೋಢೀಕರಣಕ್ಕಾಗಿ ಐದು ಸಲಹೆ ನೀಡಿದ್ದಾರೆ.

    ಪ್ರಧಾನಿಗೆ ಸೋನಿಯಾ ‘ಪಂಚ’ ಸಲಹೆ:
    ಸಲಹೆ 1: 20 ಸಾವಿರ ಕೋಟಿಗಳ ಸೆಂಟ್ರಲ್ ವಿಸ್ಟಾ ಯೋಜನೆ ಸ್ಥಗಿತಗೊಳಿಸಿ. (900ರಿಂದ 1200 ಸಂಸದರ ಆಸನದ ಸಾಮಥ್ರ್ಯದ ಹೊಸ ಸಂಸತ್ ಭವನ ನಿರ್ಮಾಣ. ಎಲ್ಲಾ ಇಲಾಖೆಗಳಿಗೆ ಸಾಮಾನ್ಯ ಸಚಿವಾಲಯ, ರಾಷ್ಟ್ರಪತಿ ಭವನದಿಂದ ಇಂಡಿಯಾಗೇಟ್‍ವರೆಗೆ 3 ಕಿ.ಮೀ. ದೂರದ ರಾಜಪಥ ನಿರ್ಮಿಸುವ ಯೋಜನೆ. 75ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಆಗಸ್ಟ್ 2022ರ ವೇಳೆಗೆ ನಿರ್ಮಿಸಲು ಉದ್ದೇಶಿಸಲಾಗಿದೆ.)

    ಸಲಹೆ 2: ಬಜೆಟ್‍ನಲ್ಲಿ ಘೋಷಿಸಿರೋ ಖರ್ಚನ್ನು ಶೇಕಡಾ 30ರಷ್ಟು ಅನುಪಾತದಲ್ಲಿ ಕಡಿತಗೊಳಿಸಿ. (ಸಂಬಳ, ಪಿಂಚಣಿ ಮತ್ತು ಕೇಂದ್ರ ವಲಯದ ಯೋಜನೆಗಳನ್ನು ಹೊರತುಪಡಿಸಿ – ಇದನ್ನು ವಲಸಿಗರಿಗರು, ಅಸಂಘಟಿತ ವರ್ಗದ ಅನುಕೂಲಕ್ಕೆ ಬಳಸಿ.)

    ಸಲಹೆ 3: ಕೇಂದ್ರ, ರಾಜ್ಯ ಸರ್ಕಾರಗಳ ಎಲ್ಲಾ ವಿದೇಶಿ ಪ್ರವಾಸಕ್ಕೆ ಬ್ರೇಕ್ ಹಾಕಿ. (ರಾಷ್ಟ್ರಪತಿ, ಪ್ರಧಾನಿ, ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ರಾಜ್ಯ ಸಚಿವರು, ಅಧಿಕಾರಿಗಳದ್ದು… ಕಳೆದ 5 ವರ್ಷದಲ್ಲಿ ಪಿಎಂ, ಸಚಿವರ ಪ್ರವಾಸಕ್ಕೆ 393 ಕೋಟಿ ಖರ್ಚಾಗಿದೆ.)

    ಸಲಹೆ 4: ಕೊರೊನಾ ಹೊರತುಪಡಿಸಿದ ಜಾಹೀರಾತಿಗೆ 2 ವರ್ಷ ನಿಯಂತ್ರಣ ಇರಲಿ (ಟಿವಿ, ಪ್ರಿಂಟ್ ಮತ್ತು ಆನ್‍ಲೈನ್ ಮೇಲೆ ಸಂಪೂರ್ಣ ನಿಷೇಧ ಹೇರಿ)

    ಸಲಹೆ 5: ಪಿಎಂ ಕೇರ್ಸ್‍ಗೆ ಬರ್ತಿರೋ ಹಣವನ್ನು `ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ’ಗೆ ವರ್ಗಾಯಿಸಿ. (ಹಣಕಾಸು ಹಂಚಿಕೆಗೆ ಎರಡು ಪ್ರತ್ಯೇಕ ವ್ಯವಸ್ಥೆ ಬೇಡ. ದಕ್ಷತೆ, ಪಾರದರ್ಶಕತೆಗೆ ನಿಧಿ ಸಾಕು. ಪ್ರಧಾನಿ ಪರಿಹಾರದಲ್ಲಿ ಈಗಾಗಲೇ 3,800 ಕೋಟಿ ಇದೆ ಅದನ್ನು ಬಳಸಿ. ಕೊರೋನಾ ನಿಧಿಯನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ.)

  • ಮಸೀದಿ ಗೇಟ್ ಹತ್ತಿರಕ್ಕೂ ಬಿಡಬಾರದು- ವಕ್ಫ್ ಬೋರ್ಡಿನಿಂದ ಆದೇಶ

    ಮಸೀದಿ ಗೇಟ್ ಹತ್ತಿರಕ್ಕೂ ಬಿಡಬಾರದು- ವಕ್ಫ್ ಬೋರ್ಡಿನಿಂದ ಆದೇಶ

    – ರಾಜ್ಯದಲ್ಲಿ ಒಟ್ಟು 25 ಮಂದಿ ಬಿಡುಗಡೆ
    – ಮೊದಲ ಬಾರಿಗೆ ಮಂಡ್ಯ, ಗದಗದಲ್ಲಿ ಕೊರೊನಾ ಪತ್ತೆ
    – 4,030 ಐಸೋಲೇಷನ್ ಬೆಡ್‍ಗಳು ಸಿದ್ಧ

    ಬೆಂಗಳೂರು: ರಾಜ್ಯದಲ್ಲಿ ಲಾಕ್‍ಡೌನ್ ಉಲ್ಲಂಘಿಸಿ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದ ಪ್ರಕರಣಗಳು ಕೇಳಿ ಬಂದಿದ್ದರಿಂದ ಮಸೀದಿಗೆ ಬರಲೇಬಾರದು. ಅಷ್ಟೇ ಅಲ್ಲದೆ ಗೇಟ್ ಹತ್ತಿರಕ್ಕೂ ಬಿಡಬಾರದು ಅಂತ ವಕ್ಫ್ ಬೋರ್ಡ್ ನಿಂದ ಆದೇಶವಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಒಟ್ಟು 175 ಕೊರೊನಾ ಸೋಂಕಿತರಿದ್ದಾರೆ. ಮಂಗಳವಾರ ಸಂಜೆಯ ಸಿಕ್ಕ ಮಾಹಿತಿ ಪ್ರಕಾರ ಒಂದೇ ದಿನದಲ್ಲಿ 12 ಜನರಿಗೆ ಪಾಸಿಟಿವ್ ಬಂದಿದೆ. ವಿದೇಶದಿಂದ ಬಂದವರೆಲ್ಲರ ಹೋಂ ಕ್ವಾರಂಟೈನ್ ಮುಕ್ತಾಯವಾಗಿದೆ. ಈಗ ಯಾರು ಹೋಂ ಕ್ವಾರಂಟೈನ್‍ನಲ್ಲಿ ಇಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಅವರ ಮೇಲೆ ನಿಗಾ ಇಡಲಾಗಿದೆ ಎಂದು ಮಾಹಿತಿ ನೀಡಿದರು.

    ರಾಜ್ಯದಲ್ಲಿ 9 ಡೆಡಿಕೇಟ್ ಕೋವಿಡ್-19 ಹಾಸ್ಪಿಟಲ್‍ಗಳು ಇದ್ದವು. ಈಗ ಮತ್ತೆ 8 ಆಸ್ಪತ್ರೆಗಳು ಸೇರ್ಪಡೆ ಆಗಿದ್ದು, ಒಟ್ಟು 17 ಆಸ್ಪತ್ರೆಗಳು ಕೋವಿಡ್ ಹಾಸ್ಪಿಟಲ್‍ಗಳಾಗಿವೆ. ರಾಜ್ಯದಲ್ಲಿ 4,030 ಐಸೋಲೇಷನ್ ಬೆಡ್‍ಗಳನ್ನು ಸಿದ್ಧಪಡಿಕೊಳ್ಳಲಾಗಿದೆ, 494 ಐಸಿಯುಗಳು ಇವೆ ಎಂದು ಹೇಳಿದರು.

    ಭಟ್ಕಳ, ನಂಜನಗೂಡು, ಗೌರಿಬಿದನೂರು ಹಾಟ್‍ಸ್ಪಾಟ್‍ನಲ್ಲಿ ಹೊಸ ಪ್ರಕರಣ ಪತ್ತೆಯಾಗಿಲ್ಲ. ಸೋಂಕು ಪೀಡಿತ ಪ್ರದೇಶದಲ್ಲಿ ಯಾರಿಗಾದ್ರೂ ಪ್ಲೂನಂತಹ ಲಕ್ಷಣ ಕಂಡುಬಂದರೆ ಅವರಿಗೆ ರ‍್ಯಾಂಡಮ್ ಟೆಸ್ಟ್ ಮಾಡಲಾಗುತ್ತದೆ. ಆಹಾರಧಾನ್ಯ ದಾಸ್ತುನು ಇದೆ. ಎಲ್ಲೂ ಕೊರತೆ ಇಲ್ಲ ಎಂದು ಸ್ಪಷ್ಟನೆ ನೀಡಿದರು.

    ಲಾಕ್‍ಡೌನ್ ವಿಸ್ತರಣೆ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದರೆ ಡಾ.ದೇವಿಶೆಟ್ಟಿ, ಜಯದೇವ ಮಂಜುನಾಥ್ ಬಳಿ ನಾವು ಈ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

    ಗದಗ ಹಾಗೂ ಕಲಬುರಗಿಯ ವ್ಯಕ್ತಿಗಳಿಗೆ ಕೊರೊನಾ ಪಾಸಿಟಿವ್ ವಿಚಾರವಾಗಿ ಮಾತನಾಡಿ ಸಚಿವರು, ಈಗಾಗಲೇ ಉಸಿರಾಟದ ತೊಂದರೆಯಿದ್ದವರ ಸ್ಯಾಂಪಲ್ಸ್ ಕಲೆಕ್ಟ್ ಮಾಡಿದ್ವಿ. ಆಗ ಅವರಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಈಗ ವೈದ್ಯಕೀಯ ತನಿಖೆ ಶುರುಮಾಡುತ್ತೇವೆ ಎಂದು ಮಾಹಿತಿ ನೀಡಿದರು.

    ಇಂದು 12 ಹೊಸ ಕೊರೊನಾ ಪ್ರಕರಣಗಳು ಕಂಡು ಬಂದಿದ್ದು, ಮಂಡ್ಯದಲ್ಲಿ ಮೂವರಿಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ. ದೆಹಲಿಯ ನಿಜಾಮುದ್ದೀನ್ ಕಾರ್ಯಕ್ರಮಕ್ಕೆ ಹೋದವರ ನಿರ್ಲಕ್ಷ್ಯದಿಂದ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಪ್ರಾಥಮಿಕ ಸಂಪರ್ಕದಲ್ಲಿರುವವರಿಗೂ ಕೊರೊನಾ ಪಾಸಿಟಿವ್ ಕಂಡು ಬರುತ್ತಿದೆ.

    ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ನಿಜಾಮುದ್ದೀನ್‍ಗೆ ಹೋಗಿ ಬಂದವರ ಸಂಪರ್ಕದಲ್ಲಿರುವವರಿಗೆ ಕೊರೊನಾ ಸೋಂಕು ತಗಲಿದ ಪ್ರಕರಣ ಬೆಳಕಿಗೆ ಬಂದಿದೆ. ಹೀಗಾಗಿ ನಿಜಾಮುದ್ದೀನ್‍ಗೆ ಹೋಗಿ ಬಂದವರು ಸರಿಯಾಗಿ ಕ್ವಾರಂಟೈನ್ ಆಗದ ಪರಿಣಾಮ ಈಗ ಅವರ ಜೊತೆ ಸಂಪರ್ಕದಲ್ಲಿದ್ದವರಿಗೂ ಕೊರೋನಾ ಭೀತಿ ಉಂಟಾಗಿದೆ.

    ಕೊರೊನಾ ಸೋಂಕಿತರ ವಿವರಗಳು
    ರೋಗಿ 164 – 33 ವರ್ಷದ ಪುರುಷನಾಗಿದ್ದು, ಬಾಗಲಕೋಟೆಯ ಮುಧೋಳ್ ನಿವಾಸಿ. ಮಾರ್ಚ್ 13 ರಿಂದ 18ರವರೆಗೆ ದೆಹಲಿಯ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸದ್ಯಕ್ಕೆ ಬಾಗಲಕೋಟೆಯ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ರೋಗಿ 165 – 41 ವರ್ಷದ ಮಹಿಳೆಯಾಗಿದ್ದು ಬಾಗಲಕೋಟೆ ನಿವಾಸಿಯಾಗಿದ್ದಾರೆ. ಇವರು 125ರ ಸೋಂಕಿತ ರೋಗಿಯ ನೆರೆಹೊರೆಯವರು. ಬಾಗಲಕೋಟೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ರೋಗಿ 166 – 80 ವರ್ಷ ವೃದ್ಧೆಯಾಗಿದ್ದು, ಗದಗ ನಿವಾಸಿ ಜಿಲ್ಲೆಯವರಾಗಿದ್ದಾರೆ. ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ, ಸೋಂಕಿತರ ಜೊತೆ ಸಂಪರ್ಕವೂ ಇಲ್ಲ. ಆದರೆ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದವರಿಗೆ ಕೊರೊನಾ ಬಂದಿದೆ. ಗದಗ ಆಸ್ಪತ್ರೆಯಲ್ಲಿ ಪ್ರತ್ಯೇಕವಾದ ವಾರ್ಡಿನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ರೋಗಿ 167 – 29 ವರ್ಷದ ಪುರುಷನಾಗಿದ್ದು, ಬೆಂಗಳೂರು ನಗರದ ನಿವಾಸಿ. ದೆಹಲಿಯ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ರೋಗಿ 168 – 50 ವರ್ಷದ ವ್ಯಕ್ತಿ ಬೆಂಗಳೂರು ನಗರದ ನಿವಾಸಿಯಾಗಿದ್ದು, ನಿಜಾಮುದ್ದೀನ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

    ರೋಗಿ 169 – 35 ವರ್ಷದ ಬೆಂಗಳೂರು ನಗರದ ನಿವಾಸಿಯಾಗಿದ್ದು, ನಿಜಾಮುದ್ದೀನ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

    ರೋಗಿ 170 – 68 ವರ್ಷ ವೃದ್ಧನಾಗಿದ್ದು, ಬೆಂಗಳೂರಿನ ಬಿಬಿಎಂಪಿ ನಿವಾಸಿಯಾಗಿದ್ದಾರೆ. ದುಬೈನಿಂದ ಬಂದಿರುವ ಇತಿಹಾಸವಿದೆ. ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ರೋಗಿ 171 – 32 ವರ್ಷದ ಪುರುಷನಾಗಿದ್ದು, ಮಂಡ್ಯ ನಿವಾಸಿ. ಇವರು ತಬ್ಲಿಘಿ ಜಮಾತ್ ಕಾರ್ಯಕ್ರಮಕ್ಕೆ ಹೋಗಿದ್ದ 134, 135, 136, 137 ಮತ್ತು 138 ಸೋಂಕಿತರ ಜೊತೆ ಸಂಪರ್ಕದಲ್ಲಿದ್ದರು. ಸದ್ಯಕ್ಕೆ ಮಂಡ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ರೋಗಿ 172 – 36 ವರ್ಷದ ಪುರುಷನಾಗಿದ್ದು, ಮಂಡ್ಯ ನಿವಾಸಿ. ಇವರು ತಬ್ಲಿಘಿ ಜಮಾತ್ ಕಾರ್ಯಕ್ರಮಕ್ಕೆ ಹೋಗಿದ್ದ 134, 135, 136, 137 ಮತ್ತು 138 ಕೊರೊನಾ ಸೋಂಕಿತರ ಜೊತೆ ಸಂಪರ್ಕದಲ್ಲಿದ್ದರು. ಸದ್ಯಕ್ಕೆ ಮಂಡ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ರೋಗಿ 173 – 65 ವರ್ಷದ ವ್ಯಕ್ತಿ, ಮಂಡ್ಯ ನಿವಾಸಿ. ನಿಜಾಮುದ್ದೀನ್ ಕಾರ್ಯಕ್ರಮಕ್ಕೆ ಹೋಗಿದ್ದ 134, 135, 136, 137 ಮತ್ತು 138 ಸೋಂಕಿತರ ಜೊತೆ ಸಂಪರ್ಕದಲ್ಲಿದ್ದರು. ಸದ್ಯಕ್ಕೆ ಮಂಡ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ರೋಗಿ 174 – 28 ವರ್ಷದ ಮಹಿಳೆಯಾಗಿದ್ದು, ಕಲಬುರಗಿ ನಿವಾಸಿಯಾಗಿದ್ದಾರೆ. ಕೊರೊನಾ ರೋಗಿ 124 ಸೋಂಕಿತರ ಸಂಪರ್ಕದಲ್ಲಿದ್ದರು. ಅಲ್ಲದೇ ಈ ರೋಗಿಯ ಸೊಸೆಯಾಗಿದ್ದಾರೆ. ಸದ್ಯಕ್ಕೆ ಕಲಬುರಗಿಯ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ.

    ರೋಗಿ 175 – 57 ವರ್ಷದ ಪುರುಷನಾಗಿದ್ದು, ಕಲಬುರಗಿ ನಿವಾಸಿ. ಟ್ರಾವೆಲ್ ಹಿಸ್ಟರಿ ಇರದೇ ಇದ್ದರೂ ಅತಿ ಹೆಚ್ಚು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಕಲಬುರಗಿ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಗದಗ ಹಾಗೂ ಕಲಬುರಗಿಯ ಎರಡು ಹೊಸ ಪ್ರಕರಣದಿಂದ ಆರೋಗ್ಯ ಇಲಾಖೆಗೆ ಆತಂಕ ಶುರುವಾಗಿದೆ. ಯಾಕೆಂದರೆ ಗದಗ ಹಾಗೂ ಕಲಬುರ್ಗಿ ಇಬ್ಬರು ಸೋಂಕಿತರಲ್ಲಿ ಟ್ರಾವೆಲ್ ಹಿಸ್ಟರಿ ಇಲ್ಲ, ಸೋಂಕಿತರ ಜೊತೆ ಸಂಪರ್ಕವೂ ಇಲ್ಲ. ಆದರೂ ಉಸಿರಾಟದ ತೊಂದರೆ ಮತ್ತು ಶ್ವಾಸಕೋಶ ಸಮಸ್ಯೆ ಇದೆ. ಇಂತಹವರಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಈ ಮೂಲಕ ಉಸಿರಾಟದ ತೊಂದರೆ ಇರುವವರಿಗೆ ಅತೀ ಬೇಗ ಕೊರೊನಾಗೆ ತುತ್ತಾಗುತ್ತಿರುವ ಪ್ರಕರಣ ಕಂಡುಬರುತ್ತಿದೆ.

  • ಕ್ವಾರಂಟೈನ್‍ನಲ್ಲಿರುವ ಅಮ್ಮನಿಗಾಗಿ ಬೀದಿಯಲ್ಲಿ ಕಣ್ಣೀರಿಟ್ಟ ಮಗು – ಕರುಳಕುಡಿಯ ಕಷ್ಟ ನೋಡಿ ಮರುಗಿದ ನರ್ಸ್

    ಕ್ವಾರಂಟೈನ್‍ನಲ್ಲಿರುವ ಅಮ್ಮನಿಗಾಗಿ ಬೀದಿಯಲ್ಲಿ ಕಣ್ಣೀರಿಟ್ಟ ಮಗು – ಕರುಳಕುಡಿಯ ಕಷ್ಟ ನೋಡಿ ಮರುಗಿದ ನರ್ಸ್

    ಬೆಳಗಾವಿ: ಒಂದೆಡೆ ಅಮ್ಮಾ ಬಾ ಎಂದು ಬೀದಿಯಲ್ಲಿ ನಿಂತು ಕಣ್ಣೀರು ಹಾಕುತ್ತಲೇ ಕರೆಯುತ್ತಿರುವ ಮಗು, ಇನ್ನೊಂದೆಡೆ ಕೊರೊನಾ ಸೋಂಕಿತ ವಾರ್ಡಿನಲ್ಲಿ ಕೆಲಸ ಮಾಡುತ್ತಿದ್ದ ಸ್ಟಾಫ್ ನರ್ಸ್ ತಮ್ಮ ಮಗಳ ಬಳಿ ಹೋಗಲಾಗದೇ ದೂರ ನಿಂತು ಮರುಗಿದ ದೃಶ್ಯ ನೋಡಿದರೆ ಕಣ್ಣಂಚಲ್ಲಿ ನೀರು ತುಂಬಿಕೊಳ್ಳುತ್ತದೆ.

    ಬೆಳಗಾವಿಯಲ್ಲಿ ಸದ್ಯ 7 ಜನರಿಗೆ ಕೊರೊನಾ ಸೋಂಕು ತಗುಲಿದೆ. ಹೀಗಾಗಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ನರ್ಸ್‍ಗಳು ಮತ್ತು ವೈದ್ಯರು ಮನೆ ಹೋಗುತ್ತಿಲ್ಲ. ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಹಿನ್ನೆಲೆ ವೈದ್ಯರು ಹಾಗೂ ಸ್ಟಾಫ್ ನರ್ಸ್‍ಗಳನ್ನೇ ಜಿಲ್ಲಾಡಳಿತ ಹೋಟೆಲ್ ಕ್ವಾರಂಟೈನ್ ಮಾಡಿದೆ. ಬೆಳಗಾವಿ ತಾಲೂಕಿನ ಹಲಗಾ ಗ್ರಾಮದ ನಿವಾಸಿ ಸುನಂದಾ ಕೊರೆಪುರ್ ಅವರು ಭೀಮ್ಸ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕಳೆದ ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಸೋಂಕಿತರಿಗೆ ಹಾಗೂ ಶಂಕಿತರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವ ಸ್ಟಾಫ್ ನರ್ಸ್‍ಗಳಲ್ಲಿ ಸುನಂದಾ ಕೂಡ ಒಬ್ಬರು. ಹೀಗಾಗಿ ಇತರೆ ವೈದ್ಯಕೀಯ ಸಿಬ್ಬಂದಿ ಜೊತೆಗೆ ಸುನಂದಾ ಕೂಡ ಕ್ವಾರಂಟೈನಲ್ಲಿ ಇದ್ದಾರೆ. ಆದ್ದರಿಂದ ಕೆಲ ದಿನಗಳಿಂದ ಮನೆಗೆ ಹೋಗಿಲ್ಲ.

    ಆದರೆ ಮನೆಗೆ ಬಾರದ ತಾಯಿ ನೆನೆದು ಸುನಂದಾ ಅವರ 3 ವರ್ಷದ ಮಗಳು ಐಶ್ವರ್ಯ ಕಣ್ಣೀರು ಹಾಕುತ್ತಿದ್ದಾಳೆ. ಕಳೆದ 15 ದಿನಗಳಿಂದ ಮನೆ ಹೋಗದ ಸುನಂದಾ ಅವರನ್ನು ನೆನೆದು ಮಗಳು ಪ್ರತಿದಿನ ಮನೆಯಲ್ಲಿ ಕಣ್ಣಿರು ಹಾಕುತ್ತಿದ್ದಾಳೆ. ರಾತ್ರಿಯಾದ್ರೆ ಅಮ್ಮನಿಗಾಗಿ ಊಟ ಬಿಟ್ಟು ಐಶ್ವರ್ಯ ಅಳುತ್ತಿರುತ್ತಾಳೆ. ಹೀಗಾಗಿ ಮಗಳ ಅಳಲನ್ನು ನೋಡಲಾಗದೇ ಇಂದು ತಂದೆ ಸಂತೋಷ ಅಮ್ಮನ ಮುಖ ತೋರಿಸಲು ಐಶ್ವರ್ಯಳನ್ನು ಸುನಂದಾ ಅವರು ಇದ್ದ ಸ್ಥಳಕ್ಕೆ ಕರೆದುಕೊಂಡು ಬಂದಿದ್ದರು.

    ದೂರದಿಂದಲೇ ತಾಯಿಯನ್ನು ಐಶ್ವರ್ಯಗೆ ತೋರಿಸಿದರು. ಈ ವೇಳೆ ಬೈಕ್ ಮೇಲೆ ಇದ್ದ ಐಶ್ವರ್ಯ ರಸ್ತೆಯಲ್ಲಿಯೇ ಅಮ್ಮಗಾಗಿ ಕಣ್ಣೀರು ಹಾಕಿದ್ದಾಳೆ. ಬಾ ಅಮ್ಮ ಮನೆಗೆ ಹೋಗೋಣ ಎಂದು ಗೋಳಾಡಿದ್ದಾಳೆ. ಇತ್ತ ಸುನಂದಾ ಅವರು ಮಗಳ ಬಳಿ ಹೋಗಲಾಗದೇ, ಮಗಳ ಕಣ್ಣೀರು ಒರೆಸಲಾಗದೇ ನೊಂದಿದ್ದಾರೆ. ಈ ದೃಶ್ಯ ನೋಡಿ ಬೆಳಗಾವಿ ಜನರು ಮಮ್ಮಲ ಮರುಗಿದ್ದಾರೆ.

  • ನಿನ್ನೆಗಿಂತ ಅರ್ಧದಷ್ಟು ಕಡಿಮೆ – 24 ಗಂಟೆಗಳಲ್ಲಿ 354 ಜನರಿಗೆ ಕೊರೊನಾ

    ನಿನ್ನೆಗಿಂತ ಅರ್ಧದಷ್ಟು ಕಡಿಮೆ – 24 ಗಂಟೆಗಳಲ್ಲಿ 354 ಜನರಿಗೆ ಕೊರೊನಾ

    ನವದೆಹಲಿ: ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 354 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ನಿನ್ನೆಗಿಂತ ಇಂದು ಸೋಂಕಿತರ ಪ್ರಮಾಣ ಅರ್ಧದಷ್ಟು ಕಡಿಮೆಯಾಗಿದೆ.

    ಈ ಕುರಿತು ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್, ಕಳೆದ 24 ಗಂಟೆಗಳಲ್ಲಿ 354 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 8 ಜನರು ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 117ಕ್ಕೆ ಏರಿಕೆ ಕಂಡಿದೆ. ಈವರೆಗೆ ದೇಶದಲ್ಲಿ 4,421 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 326 ಜನರು ಚೇತರಿಸಿಕೊಂಡು ಡಿಸ್ಚಾರ್ಚ್ ಆಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಸೋಮವಾರ ರಾತ್ರಿಯ ಮಾಹಿತಿ ಪ್ರಕಾರ ಭಾರತದಲ್ಲಿ 24 ಗಂಟೆಗಳಲ್ಲಿ 30 ಮಂದಿ ಸೋಂಕಿತರು ಮೃತಪಟ್ಟಿದ್ದರೆ, 693 ಜನರಿಗೆ ಕೊರೊನಾ ಸೋಂಕು ತಗುಲಿತ್ತು. ಹೀಗಾಗಿ ಸಾವು ಹಾಗೂ ಸೋಂಕಿತರ ಸಂಖ್ಯೆಯಲ್ಲಿ ಇಂದಿನ ವರದಿಯಲ್ಲಿ ಇಳಿಮುಖವಾಗಿದೆ.

    ಕ್ಲಸ್ಟರ್ ನಿರ್ವಹಣೆಗೆ ಅನುಕೂಲವಾಗುವ ರೀತಿ ಸರ್ಕಾರವು ಒಂದು ತಂತ್ರವನ್ನು ಅನುಸರಿಸುತ್ತಿದೆ. ಈ ಕಾರ್ಯತಂತ್ರವು ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತಿದೆ. ವಿಶೇಷವಾಗಿ ಆಗ್ರಾ, ಗೌತಮ್ ಬುದ್ಧ ನಗರ, ಪತ್ತನಂತಿಟ್ಟ, ಭಿಲ್ವಾರ ಮತ್ತು ಪೂರ್ವ ದೆಹಲಿಯಲ್ಲಿ ಯಶಸ್ವಿಯಾಗಿದೆ ಎಂದು ಮಾಹಿತಿ ನೀಡಿದರು.

    ಐಸಿಎಂಆರ್ ನ ಇತ್ತೀಚಿನ ಅಧ್ಯಯದ ಪ್ರಕಾರ, ಓರ್ವ ಕೊರೊನಾ ಸೋಂಕಿತ ರೋಗಿಯು ಲಾಕ್‍ಡೌನ್ ಆದೇಶಗಳನ್ನು ಅನುಸರಿಸದಿದ್ದರೆ ಅಥವಾ ಸಾಮಾಜಿಕ ದೂರ ಕಾಯ್ದುಕೊಳ್ಳದಿದ್ದರೆ 30 ದಿನಗಳಲ್ಲಿ 406 ಜನರಿಗೆ ಸೋಂಕು ತಗುಲಿಸಬಹುದು. ನಮ್ಮ ದೇಶದಲ್ಲಿ ವೈದ್ಯಕೀಯ ಅವಶ್ಯಕತೆಯ ಆಧಾರದ ಮೇಲೆ ನಾವು ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಲಾವ್ ಅಗರ್‍ವಾಲ್ ಹೇಳಿದರು.

    ಭಾರತೀಯ ರೈಲ್ವೆಯ 2,500 ಬೋಗಿಗಳಲ್ಲಿ 40,000 ಪ್ರತ್ಯೇಕ ಹಾಸಿಗೆಗಳನ್ನು ಸಿದ್ಧಪಡಿಸಿದೆ. ರೈಲ್ವೆ ಇಲಾಖೆ ಪ್ರತಿದಿನ 375 ಪ್ರತ್ಯೇಕ ಹಾಸಿಗೆಗಳನ್ನು ತಯಾರಿಸುತ್ತಿದೆ ಮತ್ತು ಇದು ದೇಶಾದ್ಯಂತ 133 ಸ್ಥಳಗಳಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು.

    ಗೃಹ ಸಚಿವಾಲಯದ ಕಾರ್ಯದರ್ಶಿ ಪಿ.ಎಸ್. ಶ್ರೀವಾಸ್ತವ್ ಮಾತನಾಡಿ, ಅಗತ್ಯ ಸರಕುಗಳು ಮತ್ತು ಸೇವೆಗಳ ಸ್ಥಿತಿ ಉತ್ತಮವಾಗಿದೆ. ಗೃಹ ಸಚಿವರು ಅಗತ್ಯ ಸರಕುಗಳ ಸ್ಥಿತಿಗತಿ ಮತ್ತು ಲಾಕ್‍ಡೌನ್ ಕ್ರಮಗಳ ಬಗ್ಗೆ ವಿವರವಾದ ಪರಿಶೀಲನೆ ನಡೆಸಿದ್ದಾರೆ. ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಮತ್ತು ಹೋರ್ಡಿಂಗ್ ಮತ್ತು ಕಪ್ಪು ಮಾರುಕಟ್ಟೆ ನಡೆಯದಂತೆ ನೋಡಿಕೊಳ್ಳಲು ಅವರು ನಿರ್ದೇಶನಗಳನ್ನು ನೀಡಿದ್ದಾರೆ ಎಂದು ಹೇಳಿದರು.

    ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಹಾಯಕ ನಿರ್ದೇಶಕ ಆರ್ ಗಂಗಖೇಡ್ಕರ್ ಮಾತನಾಡಿ, ಈವರೆಗೆ 1,07,006 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಪ್ರಸ್ತುತ 136 ಸರ್ಕಾರಿ ಲ್ಯಾಬ್‍ಗಳು ಕಾರ್ಯನಿರ್ವಹಿಸುತ್ತಿದ್ದು, 59 ಖಾಸಗಿ ಲ್ಯಾಬ್‍ಗಳಿಗೆ ಅನುಮತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.