ಗದಗ: ಕೊರೊನಾ ವೈರಸ್‍ನಿಂದ ನಗರದಲ್ಲಿ 80 ವರ್ಷದ ವೃದ್ಧೆ ಸಾವನ್ನಪ್ಪಿದ ಹಿನ್ನೆಲೆ ಮೃತದೇಹವನ್ನ ಜಿಲ್ಲಾಡಳಿತ ನೇತೃತ್ವದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು.
ಸರ್ಕಾರದ ಪ್ರೊಟೊಕಾಲ್ ಪ್ರಕಾರ ವೈರಸ್ ಸೋಂಕಿತ ವೃದ್ದೆಯನ್ನ ನಗರದ ಬೆಟಗೇರಿ ಮುಕ್ತಿಧಾಮದಲ್ಲಿ ಸುಡುವ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಯಿತು. ವೈದ್ಯರು ಹಾಗೂ ಸಿಬ್ಬಂದಿಗಳು ಪಿ.ಪಿ.ಇ ಕಿಟ್ ಧರಿಸಿಕೊಂಡು ಗದಗ ಜಿಮ್ಸ್ ಆಸ್ಪತ್ರೆಯ ಶ್ರದ್ಧಾಂಜಲಿ ವಾಹನದ ಮೂಲಕ ಮುಕ್ತಿಧಾಮಕ್ಕೆ ಮೃತ ದೇಹದ ರವಾನೆ ಮಾಡಿ ಅಂತ್ಯಕ್ರಿಯೆ ಮಾಡಿ ಮುಗಿಸಿದರು.
ಸೋಂಕಿತ ವ್ಯಕ್ತಿ ಮೃತಪಟ್ಟ ವೇಳೆ ಸರ್ಕಾರದ ನಿಯಮಗಳು:
* ಸರ್ಕಾರ ವಿಪತ್ತು ನಿರ್ವಹಣಾ ನಿಯಮಗಳ ಪ್ರಕಾರ ಕುಟುಂಬಸ್ತರಿಗೆ ಮಾಹಿತಿ ನೀಡಲಾಗುತ್ತೆ.
* ಸಂಬಂಧಿಕರು ಮೃತದೇಹದ ಬಳಿ ಬರುವುದು ಅಥವಾ ಮುಟ್ಟುವುದು ಮಾಡುವಂತಿಲ್ಲ.
* ಪಿಪಿಇ ಕಿಟ್ ಧರಿಸಿದವರಿಂದ ಮಾತ್ರ ಮೃತದೇಹ ರವಾನೆ ಮಾಡಬೇಕು.
* ಸಂಬಂಧಿಕರಾಗಲಿ, ಇತರೆ ಅಧಿಕಾರಿ, ಸಿಬ್ಬಂದಿಗಳಾಗಲಿ ಮೃತ ದೇಹದ ಬಳಿಗೆ ಬರಲು ಬಿಡುವುದಿಲ್ಲ.
* ಸರ್ಕಾರದ ಪ್ರೊಟೊಕಾಲ್ ಪ್ರಕಾರ ಶವವನ್ನು ದಹನ(ಸುಡುವ) ಅಥವಾ ಹೂಳುವ ಮೂಲಕ ಅಂತ್ಯಕ್ರಿಯೆ ಮಾಡಬೇಕು.
* ಮೃತ ವ್ಯಕ್ತಿಗೆ ಬಳಸಿದ ವಸ್ತು ಅಥವಾ ಪರಿಕರಗಳನ್ನು ಜೈವಿಕ ತ್ಯಾಜ್ಯ ನಿರ್ವಹಣಾ ಪ್ರಕಾರ ಸಂಸ್ಕರಿಸಬೇಕು.
* ವೈರಸ್ ಸೋಂಕಿತ ಮೃತ ವ್ಯಕ್ತಿಗೆ ಬಳಸಿದ ಪರಿಕರಗಳನ್ನ ಬಯೋಮೆಡಿಕಲ್ ವೆಸ್ಟ್ ಮ್ಯಾನೆಜ್‍ಮೆಂಟ್ ನಿಯಮ ಪ್ರಕಾರ ಸಂಸ್ಕರಿಸಿ ವಿಲೆವಾರಿ ಮಾಡಬೇಕು. ಹೀಗೆ ಸರ್ಕಾರದ ಈ ಎಲ್ಲಾ ನಿಯಮಗಳ ಪ್ರಕಾರ ವೃದ್ಧೆಯ ಮೃತದೇಹವನ್ನು ಅಂತ್ಯಕ್ರಿಯೆ ಮಾಡಲಾಯಿತು.
ವಾಷಿಂಗ್ಟನ್: ಡೆಡ್ಲಿ ಕೊರೊನಾ ವೈರಸ್‍ಗೆ ಅಮೆರಿಕದಲ್ಲಿ ನೆಲೆಸಿರುವ ಭಾರತೀಯರ ಪೈಕಿ 11 ಜನ ಸಾವನ್ನಪ್ಪಿದ್ದಾರೆ. ಜೊತೆಗೆ 16 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ.
ಅಮೆರಿಕದಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ಎಲ್ಲಾ ಭಾರತೀಯ ನಾಗರಿಕರು ಪುರುಷರು ಎಂದು ವರದಿಯಾಗಿದೆ. ಸಾವನ್ನಪ್ಪಿದ 11 ಮಂದಿಯಲ್ಲಿ ಹತ್ತು ಮಂದಿ ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿ ಪ್ರದೇಶದವರಾಗಿದ್ದು, ಮೊತ್ತೊಬ್ಬರು ಫ್ಲೋರಿಡಾ ನಗರದಲ್ಲಿ ಸಾವನ್ನಪ್ಪಿದ್ದಾರೆ. ಇದರಲ್ಲಿ ನಾಲ್ವರು ನ್ಯೂಯಾರ್ಕ್ ನಗರದಲ್ಲಿ ಟ್ಯಾಕ್ಸಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಹೆಚ್ಚು ಭಾರತೀಯರು ವಾಸಿಸುವ ನ್ಯೂಯಾರ್ಕ್ ನಗರವು ಅಮೆರಿಕದಲ್ಲಿ ಕೊರೊನಾ ವೈರಸ್ ನ ಹಾಟ್‍ಸ್ಪಾಟ್ ಆಗಿದೆ. ಈ ಪ್ರದೇಶದಲ್ಲಿ ಕೊರೊನಾದಿಂದ 6,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 1,38,000ಕ್ಕೂ ಹೆಚ್ಚು ಜನರು ಸೋಂಕಿಗೆ ತುತ್ತಾಗಿದ್ದಾರೆ. ಇದಾದ ನಂತರ ನ್ಯೂಜೆರ್ಸಿಯಲ್ಲಿ ಸೋಂಕಿನಿಂದ 1,500 ಜನರು ಸಾವನ್ನಪ್ಪಿದ್ದು, ಸುಮಾರು 48,000 ಜನರಿಗೆ ಸೋಂಕು ತಗುಲಿದೆ. ಇದರಲ್ಲಿ ಭಾರತೀಯರು ಇದ್ದಾರೆ.
ಕೊರೊನಾ ವೈರಸ್ ಪರೀಕ್ಷೆಯಲ್ಲಿ ನಾಲ್ಕು ಮಹಿಳೆಯರು ಸೇರಿದಂತೆ 16 ಭಾರತೀಯರಿಗೆ ಸೋಂಕು ಪಾಸಿಟಿವ್ ಬಂದಿದ್ದು, ಅವರನ್ನು ಸ್ವಯಂ ನಿರ್ಬಂಧದಲ್ಲಿ ಇರಿಸಲಾಗಿದೆ. ಅಮೆರಿಕಾದ ಬೇರೆ ಬೇರೆ ಪ್ರದೇಶದಲ್ಲಿ ಅಂದರೆ ನ್ಯೂಯಾರ್ಕ್‍ನಲ್ಲಿರುವ ಎಂಟು ಮಂದಿಗೆ ನ್ಯೂಜೆರ್ಸಿಯಲ್ಲಿ ಮೂವರಿಗೆ ಮತ್ತು ಟೆಕ್ಸಾಸ್ ಮತ್ತು ಕ್ಯಾಲಿಫೋರ್ನಿಯಾದಲ್ಲಿರುವ ಭಾರತೀಯರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ.
ಅಮೆರಿಕದಲ್ಲಿ ಬಹಳಷ್ಟು ಮಂದಿ ಭಾರತೀಯರು ಇದ್ದಾರೆ. ಉದ್ಯೋಗ, ವ್ಯಾಪಾರ ಮತ್ತು ಕಾರು ಚಾಲಕ ವೃತ್ತಿಗೆ ತೆರಳಿ ಅಲ್ಲೇ ನೆಲಸಿದ್ದಾರೆ. ಸದ್ಯ ಅಮೆರಿಕದಲ್ಲಿ ಕೊರೊನಾ ವೈರಸ್ ತಂಡವಾಡುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತೀಯರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗ ಸದ್ಯ ಅಮೆರಿಕದಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿರುವವರು ಭಾರತದ ಉತ್ತರಾಖಂಡ, ಮಹಾರಾಷ್ಟ್ರ, ಕರ್ನಾಟಕ ಮತ್ತು ಉತ್ತರ ಪ್ರದೇಶದ ಮೂಲದವರು ಎಂದು ತಿಳಿದು ಬಂದಿದೆ.
ಅಮೆರಿಕದಲ್ಲಿ ಕೊರೊನಾ ವೈರಸ್ ಪೀಡಿತ ಭಾರತೀಯರಿಗೆ ಅಗತ್ಯ ನೆರವು ನೀಡಲು ಭಾರತೀಯ ರಾಯಭಾರ ಕಚೇರಿ ಸತತ ಕೆಲಸ ಮಾಡುತ್ತಿದೆ. ಸ್ಥಳೀಯ ಅಮೆರಿಕ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿ ಇರುವ ಭಾರತೀಯ ಅಧಿಕಾರಿಗಳು ಸ್ಥಳೀಯ ಸಂಸ್ಥೆಗಳ ನೆರವು ಪಡೆದು ಭಾರತೀಯರಿಗೆ ಸಹಾಯವಾಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.
ರಾಮನಗರ: ಒಂದೇ ಒಂದು ಕೊರೊನಾ ಪಾಸಿಟಿವ್ ಪ್ರಕರಣ ಇಲ್ಲದೇ ನಿರ್ಭಿತಿಯಿಂದಿದ್ದ ರಾಮನಗರಕ್ಕೆ ಇದೀಗ ಕೊರೊನಾ ಟೆನ್ಷನ್ ಶುರುವಾಗಿದೆ. ತಬ್ಲಿಘಿ ಸಮಾವೇಶಕ್ಕೆ ತೆರಳಿದ್ದ ವ್ಯಕ್ತಿಯೊರ್ವ ಚನ್ನಪಟ್ಟಣಕ್ಕೆ ಬಂದು ಹೋಗಿರುವುದು ಆತಂಕಕ್ಕೆ ಕಾರಣವಾಗಿದೆ.
ಚನ್ನಪಟ್ಟಣಕ್ಕೆ ಬಂದು ಹೋಗಿದ್ದ ಆ ವ್ಯಕ್ತಿಗೆ ಈಗಾಗಲೇ ಸೊಂಕು ದೃಢಪಟ್ಟಿದ್ದು, ಆತನ ಪೋಷಕರನ್ನು ಇದೀಗ ಕ್ವಾರಂಟೈನ್‍ಗೆ ಶಿಫ್ಟ್ ಮಾಡಲಾಗಿದೆ. ಇದು ಜಿಲ್ಲೆಯ ಜನರಲ್ಲಿ ಸಾಕಷ್ಟು ಭಯದ ಜೊತೆಗೆ ಟೆನ್ಷನ್ ಸಹ ಹೆಚ್ಚಿಸಿದೆ.
ದೆಹಲಿಯ ತಬ್ಲಿಘಿ ಸಮಾವೇಶ ಇಡೀ ದೇಶಕ್ಕೆ ಕಂಟಕ ಆಗಿದೆ. ಬೆಂಗಳೂರಿನ ನೆರೆಯ ಜಿಲ್ಲೆ ರಾಮನಗರದಲ್ಲಿ ಇದುವರೆಗೂ ಕೊರೊನಾ ಕಂಟಕ ಎದುರಾಗಿರಲಿಲ್ಲ. ಆದರೆ ರೋಗಿ ನಂಬರ್ 163ನಿಂದ ಇದೀಗ ರಾಮನಗರ ಜಿಲ್ಲೆ ಕೊರೊನಾ ವೈರಸ್ ಭೀತಿಗೆ ಒಳಗಾಗಿದೆ.
ಈ ಸೋಂಕಿತ ವ್ಯಕ್ತಿ ತಬ್ಲಿಘಿ ಸಮಾವೇಶದಿಂದ ವಾಪಸ್ಸಾದ ಬಳಿಕ ಚನ್ನಪಟ್ಟಣದ ತನ್ನ ಪೋಷಕರ ಜೊತೆ ಒಂದೂವರೆ ದಿನ ಇದ್ದು, ನಂತರ ಹೊಸಕೋಟೆಗೆ ವಾಪಸ್ ತೆರಳಿದ್ದಾನೆ. ಇದರಿಂದ ಆರೋಗ್ಯ ಇಲಾಖೆ ಅಧಿಕಾರಿಗಳು ಸೋಂಕಿತ ವ್ಯಕ್ತಿಯ ಪೋಷಕರು ಹಾಗೂ ಸಂಬಂಧಿಗಳನ್ನು ಕ್ವಾರಂಟೈನ್ ಶಿಬಿರಕ್ಕೆ ಶಿಫ್ಟ್ ಮಾಡಿದ್ದಾರೆ.
ರೋಗಿ ನಂಬರ್ 163 ಸೋಂಕಿತ ರಾಮನಗರ ಜಿಲ್ಲೆಗೆ ಕಾಲಿಡುವ ಮೂಲಕ ಜಿಲ್ಲೆಯ ಜನರಲ್ಲಿ ಸಾಕಷ್ಟು ಆತಂಕವನ್ನುಂಟು ಮಾಡಿದ್ದಾನೆ.
ಗದಗ: ರಾಜ್ಯದಲ್ಲಿ ಕೊರೊನಾ ತನ್ನ ಕಬಂದಬಾಹುವನ್ನು ಚಾಚುತ್ತಿದ್ದು, ಗದಗನಲ್ಲಿ 6ನೇ ಬಲಿ ಪಡೆದುಕೊಂಡಿದೆ.
ಏಪ್ರಿಲ್ 4ರಂದು ಗದಗನ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ 80 ವರ್ಷದ ವೃದ್ಧೆ ಸಾವನ್ನಪ್ಪಿದ್ದಾರೆ. ವೃದ್ಧೆಗೆ ಏಪ್ರಿಲ್ 7ರಂದು ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇದೀಗ ಗದಗ ನಗರದ ನಿವಾಸಿಯಾಗಿದ್ದ ರೋಗಿ ನಂಬರ್ 166 ಸಾವನ್ನಪ್ಪಿದ್ದಾರೆ. ಈ ಕುರಿತು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಈವರೆಗೆ 181 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇಂದು ಸಾವನ್ನಪ್ಪಿದ ವೃದ್ಧೆ ಸೇರಿ ಒಟ್ಟು 6 ಜನ ಸಾವನ್ನಪ್ಪಿದ್ದಾರೆ. ಗದಗ ನಗರವನ್ನು ಸಂಪೂರ್ಣವಾಗಿ ಲಾಕ್‍ಡೌನ್ ಮಾಡಲಾಗಿದೆ.
ಇತ್ತೀಚೆಗೆ ಕೊರೊನಾ ಸೋಂಕಿತ ರೋಗಿ ನಂಬರ್ 177 ಸಾವನ್ನಪ್ಪಿದ್ದರು. ಕಲಬುರಗಿಯ ಖಾಸಗಿ ಆಸ್ಪತ್ರೆಯ ಎಡವಟ್ಟಿನಿಂದ ರೋಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು. ಕಲಬುರಗಿಯ ಖಾಸಗಿ ಆಸ್ಪತ್ರೆ ಎರಡು ದಿನಗಳ ಕಾಲ ರೋಗಿಯನ್ನು ಇಟ್ಟುಕೊಂಡು ಈ ಬಗ್ಗೆ ಸರ್ಕಾರಿ ಆಸ್ಪತ್ರೆಗೆ ಯಾವುದೇ ಮಾಹಿತಿ ಕೊಟ್ಟಿರಲಿಲ್ಲ. ಎರಡು ದಿನಗಳ ಬಳಿಕ ಅಲ್ಲಿಂದ ಇಎಸ್‍ಐ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ರೋಗಿ ಸಾವನ್ನಪ್ಪಿದ್ದರು. ಆಗ ಸ್ಯಾಂಪಲ್ ತೆಗೆದುಕೊಂಡಿದ್ದು, ಕೊರೊನಾ ತಗುಲಿರುವುದು ದೃಢಪಟ್ಟಿತ್ತು.
ಕಲಬುರಗಿಯ ಖಾಸಗಿ ಆಸ್ಪತ್ರೆಗೆ ಬೀಗ ಹಾಕಲಾಗಿದ್ದು, ಅಲ್ಲಿನ ಎಲ್ಲಾ ಸಿಬ್ಬಂದಿಯನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ. ಅಷ್ಟೇ ಅಲ್ಲದೆ ಆಸ್ಪತ್ರೆಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ರೋಗಿ ನಂಬರ್ 177 ಅವರಿಗೆ ಹೇಗೆ ಸೋಂಕು ತಗುಲಿತ್ತು ಎನ್ನುವ ಬಗ್ಗೆ ಪೊಲೀಸರು ಹಾಗೂ ಸ್ಥಳೀಯ ಆರೋಗ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಮಂಗಳೂರು: ಕೊರೊನಾ ವೈರಸ್ ಭೀತಿಯಿಂದ ದೇಶವೇ ಲಾಕ್‍ಡೌನ್ ಆಗಿದೆ. ಕೊರೊನಾ ಆತಂಕದಿಂದ, ಜನ ಮನೆ ಬಿಟ್ಟು ಹೊರಗೆ ಬರುವುದು ಕಡಿಮೆಯಾಗಿದ್ದು, ಇದೇ ಸಮಯದಲ್ಲಿ ಕಳ್ಳರು ಅಂಗಡಿ, ಕಟ್ಟಡಗಳಿಗೆ ನುಗ್ಗಿ ಹಣ ದೋಚಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ರಾಮಕುಂಜನಲ್ಲಿ ನಡೆದಿದೆ.
ರಾಮಕುಂಜ ಪರಿಸರದ ಅಂಗಡಿಗಳಿಗೆ ಬುಧವಾರ ರಾತ್ರಿ ನುಗ್ಗಿದ ಕಳ್ಳರು ಹಣ ದೋಚಿದ್ದಾರೆ. ಅಷ್ಟೇ ಅಲ್ಲದೆ ರಾಮಕುಂಜ ಗ್ರಾಮ ಪಂಚಾಯತ್ ಕಚೇರಿಯ ಮುಂಭಾಗದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಇಂಟರ್‍ನೆಟ್‍ನ ಮೋಡೆಮ್ ಎಗರಿಸಿದ್ದು, ದಾಖಲೆಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಡ್ರಾಯರ್ ತೆರೆದು ಹಣಕ್ಕಾಗಿ ಹುಡುಕಾಟ ನಡೆದಿದ್ದಾರೆ. ಗ್ರಾಮ ಪಂಚಾಯತ್ ಕಚೇರಿ ಮುಂಭಾಗದಲ್ಲಿರುವ ಪಂಚಾಯತ್ ವಾಣಿಜ್ಯ ಸಂಕೀರ್ಣದಲ್ಲಿನ ಎಸ್‍ಬಿಐನ ಗ್ರಾಹಕ ಸೇವಾ ಕೇಂದ್ರಕ್ಕೂ ನುಗ್ಗಿದ್ದು ಇಲ್ಲಿಂದ ನಗದು ದೋಚಿದ್ದಾರೆ.
ಮೊಬೈಲ್ ಅಂಗಡಿಗೂ ನುಗ್ಗಿದ ಕಳ್ಳರು ಡಿವಿಆರ್ ಕಳವುಗೈದಿದ್ದು ಡ್ರಾಯರ್ ಲಾಕ್ ತೆಗೆದು ಹಣಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಮಾತ್ರವಲ್ಲದೆ ರಾಮಕುಂಜ ಪ.ಪೂ.ಕಾಲೇಜಿನ ಕಚೇರಿಗೂ ನುಗ್ಗಿದ್ದು ಇಲ್ಲಿಂದ ಹಣ ದೋಚಿ ತಪ್ಪಿಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶ್ವಾನದಳ, ಬೆರಳಚ್ಚು ತಜ್ಞರನ್ನು ಪರಿಶೀಲನೆ ನಡೆಸಿ ಕಳ್ಳರಿಗಾಗಿ ಬಲೆ ಬೀಸಿದ್ದಾರೆ.
– ಮಹಾರಾಷ್ಟ್ರದಲ್ಲಿ ನಿಯಂತ್ರಣಕ್ಕೆ ಸಿಗದ ಕೊರೊನಾ
– 24 ಗಂಟೆಯಲ್ಲಿ 117 ಜನರಿಗೆ ಸೋಂಕು, 8 ಮಂದಿ ಸಾವು
ನವದೆಹಲಿ: ದೇಶದಲ್ಲಿ ಹೆಮ್ಮಾರಿ ಕೊರೊನಾ ಸೋಂಕಿತರ ಸಂಖ್ಯೆ 5,742 ಆಗಿದ್ದು, 174 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಒಂದೇ ದಿನ 773 ಮಂದಿಗೆ ಸೋಂಕು ದೃಢವಾಗಿದ್ದು, 24 ಗಂಟೆಯಲ್ಲಿ 32 ಮಂದಿ ಸಾವನ್ನಪ್ಪಿದ್ದಾರೆ.
ದೇಶದಲ್ಲಿ 402 ದಿನ ಚೇತರಿಸಿಕೊಂಡಿದ್ದಾರೆ. ಹಾಟ್‍ಸ್ಪಾಟ್‍ಗಳ ಮೇಲೆ ನಿರಂತರವಾಗಿ ನಿಗಾವಹಿಸಿದ್ದೇವೆ ಅಂತ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬರುತ್ತಿಲ್ಲ. ಮಂಗಳವಾರ ಒಂದು ಸಾವಿರ ಸೋಂಕಿತರ ಗಡಿ ದಾಟಿದ್ದ ಮಹಾರಾಷ್ಟ್ರದಲ್ಲಿ ಬುಧವಾರ ರಾತ್ರಿ 7 ಗಂಟೆಯ ವೇಳೆಗೆ ಸೋಂಕಿತರ ಸಂಖ್ಯೆ 1,100ಕ್ಕೂ ಅಧಿಕವಾಗಿದೆ.
ಮಹಾರಾಷ್ಟ್ರ ಆರೋಗ್ಯ ಇಲಾಖೆ ಬುಧವಾರ ರಾತ್ರಿ 7 ಗಂಟೆ ಮಾಹಿತಿ ಪ್ರಕಾರ, ಕಳೆದ 24 ಗಂಟೆಯಲ್ಲಿ 117 ಜನ ಸೋಂಕಿತರು ಪತ್ತೆಯಾಗಿದ್ದು, 8 ಜನರು ಮೃತಪಟ್ಟಿದ್ದಾರೆ. ಈ ಮೂಲಕ ಮೃತರ ಸಂಖ್ಯೆ 72ಕ್ಕೆ ಏರಿದರೆ, ಸೋಂಕಿತರ ಸಂಖ್ಯೆ 1135ಕ್ಕೆ ತಲುಪಿದೆ.
ಆಂಧ್ರಪ್ರದೇಶದ ನೋಡಲ್ ಅಧಿಕಾರಿ ಅರ್ಜಾ ಶ್ರೀಕಾಂತ್ ಮಾತನಾಡಿ, ರಾಜ್ಯದಲ್ಲಿ ಇಂದು 19 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು 348 ಜನ ಸೋಂಕಿತರಿದ್ದಾರೆ.
117 #COVID19 positive cases and 8 deaths have been reported in Maharashtra today. Death toll rises to 72. Total positive cases in the state stands at 1135: Health Department, Maharashtra
ಗುಜರಾತ್ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ಬುಧವಾರ 7 ಮಂದಿ ಕೊರೊನಾ ವೈರಸ್ ಸೋಂಕಿತರು ಪತ್ತೆಯಾಗಿದ್ದಾರೆ. ರಾಜ್ಯದ ಒಟ್ಟು 186 ಜನರಿಗೆ ಸೋಂಕು ತಗುಲಿದ್ದು, ಈ ಪೈಕಿ 143 ಜನರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ರೋಗಿಗಳು ವೆಂಟಿಲೇಟರ್ ನಲ್ಲಿದ್ದಾರೆ.
ಗುಜರಾತ್‍ನ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಇಂದು 7 ಹೊಸ ಜನರಿಗೆ ಕೊರೊನಾ ಪತ್ತೆಯಾಗಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 186 ಜನರಿಗೆ ಸೋಂಕು ತಗುಲಿದ್ದು, ಈ ಪೈಕಿ 143 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ ಇಬ್ಬರು ವೆಂಟಿಲೇಟರ್‍ನಲ್ಲಿದ್ದಾರೆ.
19 new #COVID19 positive cases have been reported in Andhra Pradesh today. Total positive cases in the state stands at 348: Arja Srikanth, Andhra Pradesh Nodal Officer
ಯಾವ ರಾಜ್ಯದಲ್ಲಿ ಎಷ್ಟೆಷ್ಟು..?
ಮಹಾರಾಷ್ಟ್ರ 1,135 ( 117 ಏರಿಕೆ)
ತಮಿಳುನಾಡು 738 (48 ಏರಿಕೆ)
ದೆಹಲಿ 576
ತೆಲಂಗಾಣ 404 (49 ಏರಿಕೆ)
ರಾಜಸ್ಥಾನ 363 (23 ಏರಿಕೆ)
ಉತ್ತರ ಪ್ರದೇಶ 361 (29 ಏರಿಕೆ)
ಆಂಧ್ರ ಪ್ರದೇಶ 348 (34 ಏರಿಕೆ)
ಕೇರಳ 345 (9 ಏರಿಕೆ)
ಚಿಕ್ಕಮಗಳೂರು: ಒಬ್ಬರಿಗೆ 1,800ರಿಂದ 2,000 ರೂ.ನಂತೆ ಪಡೆದು 21 ಜನರನ್ನು ಕರೆದುಕೊಂಡು ಮಂಗಳೂರಿನಿಂದ ವಿಜಯಪುರಕ್ಕೆ ಹೋಗುತ್ತಿದ್ದ ಅಂಬುಲೆನ್ಸ್ ಚಾಲಕನನ್ನು ಪೊಲೀಸರು ಬಂಧಿಸಿರುವ ಘಟನೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದೆ.
ದಾವಣಗೆರೆ ಮೂಲದ ಭೀಮಾ ಅಂಬುಲೆನ್ಸ್ ಸರ್ವಿಸ್ ಎಂಬ ಖಾಸಗಿ ಸಂಸ್ಥೆಯ ಚಾಲಕ ಬಸವರಾಜ್ ಬಂಧಿತ ವ್ಯಕ್ತಿ. ಬಸವರಾಜ್ ದಾವಣಗೆರೆಯಿಂದ ಮಂಗಳೂರಿಗೆ ರೋಗಿಯನ್ನು ಕರೆದುಕೊಂಡು ಬಂದಿದ್ದ. ಅಲ್ಲಿದ್ದ ವಿಜಯಪುರ ಹಾಗೂ ಮುದ್ದೆಬಿಹಾಳ ಮೂಲದ ಸುಮಾರು 21 ಜನರನ್ನ ಅಂಬುಲೆನ್ಸ್‌ನಲ್ಲಿ ಕರೆತಂದಿದ್ದಾನೆ.
ಅಂಬುಲೆನ್ಸ್ ಅನ್ನು ಯಾರೂ ಚೆಕ್ ಮಾಡುವುದಿಲ್ಲ ಎಂದು ತಿಳಿಸಿದ್ದ ಬಸವರಾಜ್ ಪ್ರತಿಯೊಬ್ಬರಿಂದ 1,800ರಿಂದ 2,000 ಸಾವಿರ ಎಂದು ಬಾಡಿಗೆ ಮಾತನಾಡಿಕೊಂಡಿದ್ದ. ಎಲ್ಲರನ್ನೂ ವಿಜಯಪುರಕ್ಕೆ ಬಿಟ್ಟು ದಾವಣಗೆರೆಗೆ ವಾಪಸ್ ಬಂದರೆ ಆಯ್ತು ಎಂದು ಪ್ಲಾನ್ ಮಾಡಿದ್ದ. ಆದರೆ ಮಂಗಳೂರಿನಿಂದ ಬಾಳೆಹೊನ್ನೂರಿಗೆ ಬರುತ್ತಿದ್ದಂತೆ ಬಾಳೆಹೊನ್ನೂರು ಪೊಲೀಸರು ವಾಹನವನ್ನು ತಡೆದು ತಪಾಸಣೆ ಮಾಡಿದಾಗ, ಜಾಗವಿಲ್ಲದೆ ಒಬ್ಬರ ಮೇಲೊಬ್ಬರಂತೆ 21 ಜನ ಕುಳಿತಿದ್ದರು. ಬಳಿಕ ಎಲ್ಲರನ್ನೂ ಕೆಳಗಿಸಿ ವಿಚಾರಿಸಿದಾಗ ವಿಷಯ ಬೆಳಕಿಗೆ ಬಂದಿದೆ.
ಎಲ್ಲರನ್ನೂ ಎನ್.ಆರ್.ಪುರ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ನಿರ್ಮಿಸಿರುವ ಕೊರೊನಾ ಚಿಕಿತ್ಸಾ ಘಟಕರದಲ್ಲಿ ಇರಿಸಿದ್ದಾರೆ. ಪೊಲೀಸರು ವಾಹನವನ್ನ ತಪಾಸಣೆಗೆ ಮುಂದಾಗುತ್ತಿದ್ದಂತೆ ಅಂಬುಲೆನ್ಸ್ ಚಾಲಕ ಬಸವರಾಜ್ ಪರಾರಿಯಾಗಲು ಯತ್ನಿಸಿದ್ದ. ಆದರೆ ಅವನನ್ನ ಹಿಡಿದ ಪೊಲೀಸರು ಒಂದೆರಡು ಗೂಸಾ ಕೊಟ್ಟು, ಠಾಣೆಗೆ ಕೊರೆದೊಯ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳಿಕ ಆರೋಪಿಯನ್ನು ಕೊರೊನಾ ಚಿಕಿತ್ಸಾ ಘಟಕದಲ್ಲಿ ಬಿಟ್ಟಿದ್ದಾರೆ. 21 ಜನರಲ್ಲಿ 1ರಿಂದ 10ವರ್ಷದೊಳಗಿನ ಏಳು ಮಕ್ಕಳಿದ್ದಾರೆ.
ನವದೆಹಲಿ: ವರ್ಷಾಂತ್ಯದಲ್ಲಿ ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) 13ನೇ ಆವೃತ್ತಿ ನಡೆಯಲಿದೆ ಎಂದು ಟೀಂ ಇಂಡಿಯಾ ಮಾಜಿ ವೇಗದ ಬೌಲರ್ ಆಶಿಶ್ ನೆಹ್ರಾ ಹೇಳಿದ್ದಾರೆ.
ಹೆಮ್ಮಾರಿ ಕೊರೊನಾ ವೈರಸ್‍ನಿಂದಾಗಿ ಐಪಿಎಲ್ ಅನ್ನು ಮಾರ್ಚ್ 29ರಿಂದ ಏಪ್ರಿಲ್ 15ರವರೆಗೆ ಮುಂದೂಡಲಾಗಿದೆ. ಆದರೆ ಸದ್ಯದ ಪರಿಸ್ಥಿತಿ ಗಮನಿಸಿದರೆ ಟೂರ್ನಿ ನಡೆಯುತ್ತೋ, ಇಲ್ಲವೋ ಎನ್ನುವ ಗೊಂದಲ ಇನ್ನೂ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತದ ಮಾಜಿ ವೇಗದ ಬೌಲರ್ ಆಶಿಶ್ ನೆಹ್ರಾ ಅವರು, ಐಪಿಎಲ್ ಟೂರ್ನಿ ವರ್ಷದ ಕೊನೆಯಲ್ಲಿ ನಡೆಯಬಹದು. ಏಪ್ರಿಲ್-ಆಗಸ್ಟ್ ಮಧ್ಯನಲ್ಲಿ ಟೂರ್ನಿ ನಡೆಸಲು ಸಾಧ್ಯವೇ ಇಲ್ಲ ಎಂಬ ಭರವಸೆ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ‘ಐಪಿಎಲ್ ನಡೆಯಲೇಬೇಕು’: ಟೂರ್ನಿ ನಡೆಸುವ ಬಗ್ಗೆ ಪೀಟರ್ಸನ್ ಸಲಹೆ
ಸಂದರ್ಶನವೊಂದರಲ್ಲಿ ಮಾತನಾಡಿದ ನೆಹ್ರಾ, ‘ಏಪ್ರಿಲ್‍ನಲ್ಲಿ ಐಪಿಎಲ್ ನಡೆಸುವ ಸಾಧ್ಯತೆ ತೀರಾ ಕಡಿಮೆ ಇದೆ. ಟೂರ್ನಿಯನ್ನು ಆಗಸ್ಟ್ ಗೆ ಮುಂದೂಡಿದರೆ ಆಗ ಮಳೆಗಾಲ ಇರುತ್ತದೆ. ಹೀಗಾಗಿ ಅನೇಕ ಪಂದ್ಯಗಳು ರದ್ದಾಗುವ ಸಾಧ್ಯತೆ ಇರುತ್ತದೆ. ಅಕ್ಟೋಬರ್ ವೇಳೆಗೆ ವಿಶ್ವವ್ಯಾಪಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬಂದರೆ ವರ್ಷದ ಕೊನೆಯಲ್ಲಿ ಐಪಿಎಲ್ ನಡೆಯಬಹುದು ಎಂಬ ವಿಶ್ವಾಸವಿದೆ’ ಎಂದು ತಿಳಿಸಿದ್ದಾರೆ.
ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್ ಸ್ಟೀವ್ ಸ್ಮಿತ್ ಹಾಗೂ ಇಂಗ್ಲೆಂಡ್ ಕ್ರಿಕೆಟರ್ ಜೋಸ್ ಬಟ್ಲರ್ ಕೂಡ, ಈ ವರ್ಷ ಐಪಿಎಲ್ ನಡೆಯಲಿದೆ ಎಂಬ ಭರವಸೆ ಇದೆ. ಆದರೆ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಸಹ ಅಕ್ಟೋಬರ್‍ನಲ್ಲಿ ನಡೆಯಲಿದೆ. ಇಂತಹ ಪರಿಸ್ಥಿತಿಯಲ್ಲಿ ಐಪಿಎಲ್ ನಡೆಸುವುದು ಬಿಸಿಸಿಐಗೆ ಸವಾಲಿನ ಕೆಲಸವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ರನ್ನಿಂಗ್ ಕ್ಯಾಚ್ ಹಿಡಿದು ಸ್ವಚ್ಛ ಕೈಗಳ ಸಂದೇಶ ಕೊಟ್ಟ ಕೈಫ್
ಇತ್ತ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸ್ಟೀವ್ ಸ್ಮಿತ್, ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್ ಮತ್ತು ರಿಯಾನ್ ಪರಾಗ್ ಅವರನ್ನು ನೋಡಿ ಉತ್ಸುಕನಾಗಿದ್ದೇನೆ ಎಂದಿದ್ದರು. ರಾಜಸ್ಥಾನ್ ರಾಯಲ್ಸ್ ಫೇಸ್‍ಬುಕ್ ಪುಟದಲ್ಲಿ ಸಹ ಆಟಗಾರ ಇಶ್ ಸೋಧಿ ಅವರೊಂದಿಗಿನ ಸಂಭಾಷಣೆಯಲ್ಲಿ ಸ್ಮಿತ್ ಈ ವಿಷಯ ತಿಳಿಸಿದ್ದರು.
ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಈ ಹಿಂದೆ ಮಾತನಾಡಿ, ಜಗತ್ತಿನಾದ್ಯಂತ ಜನರು ಇಂದು ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆಯನ್ನು ನೋಡಿದರೆ ನಾವು ಇದೀಗ ಕ್ರಿಕೆಟ್ ಬಗ್ಗೆ ಯೋಚಿಸಬಾರದು. ಹೆಮ್ಮಾರಿ ಕೊರೊನಾ ವೈರಸ್ ವಿರುದ್ಧ ಯುದ್ಧದಂತೆ ಒಟ್ಟಿಗೆ ಹೋರಾಡಬೇಕಾಗಿದೆ. ಪರಿಸ್ಥಿತಿಯನ್ನು ನಿವಾರಿಸುವುದು ನಮ್ಮ ಮೊದಲ ಪ್ರಯತ್ನವಾಗಬೇಕು. ಆ ಬಳಿಕ ನಾವು ಕ್ರಿಕೆಟ್ ಮತ್ತು ಇತರ ಕ್ರೀಡೆಗಳ ಬಗ್ಗೆ ಯೋಚಿಸಬಹುದು ಎಂದು ಹೇಳಿದ್ದರು.
ಬೆಂಗಳೂರು: ಕೊರೊನಾ ವಿರುದ್ಧ ದೇಶದ ಹೋರಾಟಕ್ಕೆ ಎಲ್ಲರೂ ಸಾಥ್ ನೀಡಿ, ಸರ್ಕಾರದ ಆದೇಶಕ್ಕೆ ಸಹಕರಿಸಿ, ಮನೆಯಲ್ಲಿಯೇ ಇದ್ದು ಸೋಂಕು ಹರಡುವಿಕೆಗೆ ಕಡಿವಾಣ ಹಾಕಿ ಎಂದು ಸ್ಯಾಂಡಲ್‍ವುಡ್, ಟಾಲಿವುಡ್, ಬಾಲಿವುಡ್ ಸೇರಿದಂತೆ ಅನೇಕ ಸಿನಿಮಾ ಕಲಾವಿದರು, ನಟ, ನಟಿಯರು ಜನರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ ಕೆಲ ಜನರು ಮಾತ್ರ ಯಾರ ಮಾತನ್ನು ಕಿವಿಗೆ ಹಾಕಿಕೊಳ್ಳದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೊರೊನಾ ಭೀಕರತೆ ಅರಿಯದೆ ಮುರ್ಖತನ ಪ್ರದರ್ಶಿಸುತ್ತಿದ್ದಾರೆ. ಇದನ್ನು ಕಂಡು ಕ್ರೇಜಿ ಸ್ಟಾರ್ ರವಿಚಂದ್ರನ್ ತಮ್ಮದೇ ಶೈಲಿಯಲ್ಲಿ ಜನರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಕೊರೊನಾ ವೈರಸ್ ಮಹಾಮಾರಿ ವಿರುದ್ಧದ ಹೋರಾಟದಲ್ಲಿ ನಾವು ಏನು ಮಾಡಬೇಕು? ನಮ್ಮ ಜವಾಬ್ದಾರಿಗಳೇನು ಎಂದು ಬೆಂಗಳೂರು ಸಿಟಿ ಪೊಲೀಸರ ಸಹಯೋಗದಲ್ಲಿ ಸಿದ್ಧಪಡಿಸಿರುವ ವಿಡಿಯೋದಲ್ಲಿ ರವಿಚಂದ್ರನ್ ತಿಳಿಸಿದ್ದಾರೆ. ಈ ಕೊರೊನಾಗೆ ತಿಥಿ ಮಾಡ್ಬೇಕು ಅಂದ್ರೆ ನೀವು ಮನೆಯಲ್ಲೇ ಇದ್ದು ಸುರಕ್ಷಿತರಾಗಿರಿ. ಸುಮ್ಮನೆ ಹೊರಬಂದು ಸೋಂಕಿಗೆ ಅತಿಥಿ ಆಗಬೇಡಿ ಎಂದು ಮಲ್ಲ ಕಿವಿ ಮಾತು ಹೇಳಿದ್ದಾರೆ.
ವಿಡಿಯೋದಲ್ಲಿ ಕ್ರೇಜಿ ಸ್ಟಾರ್ ಅಭಿಮಾನಿಗಳಿಗೆ ಹಾಗೂ ಸಾರ್ವಜನಿಕರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಅಲ್ಲದೇ ವಿಡಿಯೋದಲ್ಲಿ ಮನೋರಂಜನ್ ಮತ್ತು ವಿಕ್ರಂ ಕೂಡ ತಂದೆಗೆ ಸಾಥ್ ಕೊಟ್ಟಿದ್ದಾರೆ. ಕೊರೊನಾಗೆ ಬೆಂಕಿ ಹಚ್ಚಬೇಕು ಅಂದರೆ ನಿಮ್ಮನೆ ದೀಪ ಆರಬಾರದು. ಹೀಗಾಗಿ ನೀವಷ್ಟೂ ಜನ ಮನೆಯಲ್ಲಿರಬೇಕು. ದೇವಸ್ಥಾನಗಳೆಲ್ಲವೂ ಮುಚ್ಚಿದೆ ಅಂದರೆ ದೇವರು ಇಲ್ಲ ಅಂತಾನಾ? ಡಾಕ್ಟರ್ಸ್‍ಗಳಲ್ಲಿ, ನರ್ಸ್‍ಗಳಲ್ಲಿ, ಪೊಲೀಸರಲ್ಲಿ ಹಾಗೂ ಈ ಸಂದರ್ಭದಲ್ಲಿ ಸೇವೆ ಮಾಡುತ್ತಿರುವ ಪ್ರತಿಯೊಬ್ಬರಲ್ಲಿಯೂ ಆ ದೇವರು ಇದ್ದಾನೆ. ಆ ದೇವರ ಮೇಲೆ ನಿಮಗೆ ನಂಬಿಕೆ ಇದ್ದರೆ ನೀವು ಮಾಡಬೇಕಿರುವುದು ಇಷ್ಟೇ. ಅವರಷ್ಟೂ ಜನರಕ್ಕೆ ಒಂದು ಸಲ್ಯೂಟ್, ನಮಸ್ಕಾರ, ಒಂದು ಫ್ಲೈಯಿಂಗ್ ಕಿಸ್ ಕೊಟ್ಟು ಧ್ಯನವಾದ ಹೇಳಿ ಎಂದಿದ್ದಾರೆ.
ಎಷ್ಟು ಜನ್ಮವೆತ್ತಿದರೂ ನಮಗಾಗಿ ಈ ಸಂದರ್ಭದಲ್ಲಿ ಸೇವೆ ಸಲ್ಲಿಸುತ್ತಿರುವವರ ಋಣ ತೀರಿಸಲು ಆಗೊಲ್ಲ. ಅದನ್ನು ತೀರಿಸಬೇಕು ಅಂತ ನಿಮಗೆ ಅನಿಸಿದರೆ ನೀವು ಮನೆಯಲ್ಲಿಯೇ ಇರಿ. ವೈದ್ಯರು, ಪೊಲೀಸರಿಗೆ ಕೊರೊನಾ ವಿರುದ್ಧ ಹೋರಾಡಲು ಬಿಡಿ. ನಿಮ್ಮ ಜೊತೆ ಹೋರಾಡುವುದಲ್ಲ ಪೊಲೀಸರ ಕೆಲಸವಲ್ಲ ಎಂದು ತಿಳಿ ಹೇಳಿದ್ದಾರೆ.
ಕೊರೊನಾಗೆ ತಿಥಿ ಮಾಡಬೇಕು ಅಂದರೆ ನೀವು ಅದಕ್ಕೆ ಅತಿಥಿಯಾಗಬಾರದು. ಮನುಷ್ಯನಿಗೆ ಕಷ್ಟ ಬಂದಾಗಲೇ ಆ ಪರಿಸ್ಥಿತಿಯನ್ನು ಆತ ಹೇಗೆ ನಿಭಾಯಿಸುತ್ತಾನೆ ಎನ್ನೋದರ ಮೇಲೆ ಆತನ ವ್ಯಕ್ತಿತ್ವ ಗೊತ್ತಾಗುತ್ತೆ. ಅಂತಹದೊಂದು ಪರೀಕ್ಷೆ ನಮ್ಮೆಲ್ಲರಿಗೂ ಬಂದಿದೆ. ಈ ಪರೀಕ್ಷೆಯನ್ನು ನಾವು ಪಾಸು ಮಾಡಬೇಕು ಎಂದರೆ ನೀವೆಲ್ಲರೂ ಮನೆಯಲ್ಲಿ ಇರಬೇಕು. ಸಾಮಾಜಿಕ ಅಂತರವನ್ನು ಪಾಲಿಸಬೇಕು. ಆದರೆ ಫೇಲ್ ಆಗಬೇಕು ಎಂದರೆ ನಿಮ್ಮಿ ಇಷ್ಟ. ನೀವು ಮನೆಯಿಂದ ಹೊರಗೆ ಬನ್ನಿ. ಆಗ ನಿಮಗೆ ನಿಮ್ಮ ಹೆಸರು ಕೂಡ ನೆನಪಿರೊಲ್ಲ. ಏಕೆಂದರೆ ಅದೊಂದು ಪೇಷೆಂಟ್ ನಂಬರ್ ಆಗಿಬಿಡುತ್ತದೆ. ನೀವು ಪೇಷೆಂಟ್ ಆಗಲು ಬಯಸಿದ್ದೀರಾ ಅಥವಾ ಮನೆಯಲ್ಲಿ ಪೇಷೆನ್ಸ್ ನಿಂದ ಇರಲು ಬಯಸಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
ವಿಡಿಯೋ ಕೊನೆಯಲ್ಲಿ ಕ್ರೇಜಿ ಸ್ಟಾರ್ ಮತ್ತೊಮ್ಮೆ ಡಾಕ್ಟರ್‍ಗಳಿಗೆ, ನರ್ಸ್‍ಗಳಿಗೆ, ಪೊಲೀಸರಿಗೆ, ಅವರ ಕುಟುಂಬದವರಿಗೆ, ಸರ್ಕಾರದವರಿಗೆ ಹಾಘೂ ನಮಗಾಗಿ ಸೇವೆ ಸಲ್ಲಿಸುತ್ತಿರುವ ಪ್ರತಿಯೊಬ್ಬರಿಗೂ ನಮ್ಮ ಕಡೆಯಿಂದೊಂದು ಸಲ್ಯೂಟ್ ಎಂದು ಧನ್ಯವಾದ ತಿಳಿಸಿದ್ದಾರೆ.
ಈ ವಿಡಿಯೋವನ್ನು ರವಿಚಂದ್ರನ್ ಪುತ್ರ ನಟ ಮನೋರಂಜನ್ ಅವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಾವು ಮನೆಯಲ್ಲೇ ಉಳಿದರೆ ಮಾತ್ರ ಕೋವಿಡ್-19 ಅರೆಸ್ಟ್ ಆಗಲು ಸಾಧ್ಯ, ನಮ್ಮ ಸುರಕ್ಷತೆ ನಮ್ಮ ಕೈಯಲ್ಲಿದೆ ಎಂದು ಕ್ಯಾಪ್ಷನ್ ಹಾಕಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.
– ಹನುಮಂತನನ್ನ ಉಲ್ಲೇಖಿಸಿ ಪತ್ರ ಬರೆದ ಜೈರ್ ಬೋಲ್ಸನಾರೊ
– ಯೂಟರ್ನ್ ಹೊಡೆದು ಮೋದಿ ‘ಗ್ರೇಟ್’ ಎಂದ ಟ್ರಂಪ್
ನವದೆಹಲಿ: ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಮಾಯಣದಲ್ಲಿ ಬರುವ ಸಂಜೀವಿನಿ ಪರ್ವತವನ್ನು ಉಲ್ಲೇಖಿಸಿ ಮಾತ್ರೆ ನೀಡುವಂತೆ ಮನವಿ ಮಾಡಿದ್ದಾರೆ.
ಕೋವಿಡ್-19 ವಿರುದ್ಧದ ಜಾಗತಿಕ ಹೋರಾಟದಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ರಫ್ತಿಗೆ ಅನುಮತಿ ಮುಂದಾದ ಭಾರತದ ನಿರ್ಧಾರವನ್ನು ರಾಮಾಯಣದ ಪೌರಾಣಿಕ ಕಥೆಗೆ ಹೋಲಿಕೆ ಮಾಡಿದ್ದಾರೆ.
ಲಂಕಾದಲ್ಲಿ ನಡೆದ ಯುದ್ಧದಲ್ಲಿ ಭಗವಾನ್ ಶ್ರೀರಾಮನ ಸಹೋದರ ಲಕ್ಷ್ಮಣ ಭಾರೀ ಗಾಯಗೊಂಡಿದ್ದ. ಆಗ ಲಕ್ಷ್ಮಣನಿಗೆ ಚಿಕಿತ್ಸೆ ನೀಡಲು ಗಿಡಮೂಲಿಕೆ ಬೇಕಾಗಿದ್ದರಿಂದ ರಾಮನ ಪರಮಭಕ್ತ ಹನುಮಂತ ಸಂಜೀವಿನಿ ಪರ್ವತವನ್ನೇ ಹೊತ್ತುಕೊಂಡು ಬರುತ್ತಾನೆ. ಈ ಪ್ರಸಂಗವನ್ನು ನೆನೆದು ಜೈರ್ ಬೋಲ್ಸನಾರೊ ಸಂಜೀವಿನಿ ಪರ್ವತವನ್ನು ಉಲ್ಲೇಖಿಸಿ ಮಾತ್ರೆ ನೀಡುವಂತೆ ಕೇಳಿಕೊಂಡಿದ್ದಾರೆ.
ಕೊರೊನಾ ವೈರಸ್‍ನಿಂದ ಕಂಗೆಟ್ಟಿರುವ ಅಮೆರಿಕ ಸೇರಿದಂತೆ ವಿವಿಧ ದೇಶಗಳಿಗೆ ಭಾರತವು ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಪ್ಯಾರೆಸಿಟಮಾಲ್ ರಫ್ತು ಮಾಡಲು ಅನುಮತಿ ನೀಡಿದೆ. ಸರ್ಕಾರದ ಈ ನಿರ್ಧಾರದ ಹಿನ್ನೆಲೆಯಲ್ಲಿ ಬೋಲ್ಸನಾರೊ ಅವರು ಪತ್ರವನ್ನು ಬರೆದಿದ್ದಾರೆ.
ಭಗವಾನ್ ರಾಮನ ಸಹೋದರ ಲಕ್ಷ್ಮಣನ ಜೀವವನ್ನು ಉಳಿಸಲು ಹನುಮಂತ ಹಿಮಾಲಯದಿಂದ ಸಂಜೀವಿನಿ ತಂದ. ಯೇಸು ಅನಾರೋಗ್ಯದಿಂದ ಬಳಲುತ್ತಿದ್ದವರನ್ನು ಗುಣಪಡಿಸಿದನು ಹಾಗೂ ಬಾರ್ಟಿಮಿಯುಗೆ ಕಣ್ಣು ಕಾಣುವಂತೆ ಮಾಡಿದ. ಅಂತೆ ಜಗತ್ತಿನ ಎಲ್ಲಾ ಜನರ ಸಲುವಾಗಿ ಭಾರತ ಮತ್ತು ಬ್ರೆಜಿಲ್ ಈ ಜಾಗತಿಕ ಬಿಕ್ಕಟ್ಟನ್ನು ನಿವಾರಿಸಲು ಶ್ರಮಿಸುತ್ತಿವೆ ಎಂದು ಬೋಲ್ಸನಾರೊ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಅಮೆರಿಕ ಏಪ್ರಿಲ್ 6ರಂದು ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಪ್ಯಾರೆಸಿಟಮಾಲ್‍ಗಳಿಗೆ ಬೇಡಿಕೆ ಇಟ್ಟಿತ್ತು. ಅಮೆರಿಕ ಸೇರಿದಂತೆ ಕೊರೊನಾ ಬಾಧಿತ ರಾಷ್ಟ್ರಗಳಿಗೆ ಮಾನವೀಯತೆ ದೃಷ್ಟಿಯಲ್ಲಿ ಆ್ಯಂಟಿ ಮಲೇರಿಯಾ (ಹೈಡ್ರೋಕ್ಸಿಕ್ಲೋರೋಕ್ವೀನ್) ಔಷಧಿ ರಫ್ತು ಮಾಡುವುದಾಗಿ ಭಾರತ ಹೇಳಿದೆ. 26 ಜೆನರಿಕ್ ಔಷಧಿಗಳ ರಫ್ತಿಗೆ ಕಳೆದ ತಿಂಗಳಷ್ಟೇ ಭಾರತ ನಿರ್ಬಂಧ ಹೇರಿತ್ತು. ಆದರೆ ಅಮೆರಿಕದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಆ್ಯಂಟಿ ಮಲೇರಿಯಾ ಔಷಧಿಯನ್ನು ತ್ವರಿತವಾಗಿ ರಫ್ತು ಮಾಡುವಂತೆ ಅಮೆರಿಕ ಕೇಳಿತ್ತು.
ಈ ಬೆನ್ನಲ್ಲೇ ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು, ಒಂದು ವೇಳೆ ಆ್ಯಂಟಿ ಮಲೇರಿಯಾ ಔಷಧಿಯನ್ನು ರಫ್ತು ಮಾಡದಿದ್ದಲ್ಲಿ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಬೆದರಿಸಿದ್ದರು. ಇದಕ್ಕೆ ದೇಶದಲ್ಲಿ ಟೀಕೆ ವ್ಯಕ್ತವಾಗಿದೆ. ದೇಶವೊಂದರ ವಿರುದ್ಧ ಇಂಥ ಬೆದರಿಕೆ ನೋಡಿಯೇ ಇಲ್ಲ ಅಂತ ಕಾಂಗ್ರೆಸ್‍ನ ಶಶಿತರೂರ್ ಮಂಗಳವಾರ ಟ್ವೀಟ್ ಮಾಡಿದ್ದರು.
ಆದರೆ ಈಗ ಟ್ರಂಪ್ ತಮ್ಮ ಹೇಳಿಕೆ ಪರಿಣಾಮ ಅರಿತು ಯೂಟರ್ನ್ ಹೊಡೆದಿದ್ದಾರೆ. ”ನಾನು ಲಕ್ಷಾಂತರ ರೂ. ಮೌಲ್ಯದ ಪ್ರಮಾಣದಲ್ಲಿ ಔಷಧಿ ಖರೀದಿಸಿದೆ. ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿದ್ದೇನೆ. ಆದಷ್ಟು ವೇಗ ಭಾರತದಿಂದ ರಫ್ತು ಆಗುತ್ತದೆ. ಅವರು ಗ್ರೇಟ್, ನಿಜವಾಗಿಯೂ ಒಳ್ಳೆಯವರಾಗಿದ್ದಾರೆ. ಔಷಧಿ ಭಾರತಕ್ಕೆ ಬೇಕಾಗಿರುವುದರಿಂದಲೇ ರಫ್ತಿನ ಮೇಲೆ ನಿರ್ಬಂಧ ಹೇರಿದ್ದರು. ಆದರೆ ಈಗ ಅವರಿಂದ ಸಾಕಷ್ಟು ಒಳ್ಳೆಯ ಸಂಗತಿಗಳು ಬರುತ್ತಿವೆ” ಎಂದು ಟ್ರಂಪ್ ಪ್ರಧಾನಿ ಮೋದಿ ಅವರನ್ನು ಹೊಗಳಿದ್ದಾರೆ.
ಬಹಳಷ್ಟು ಜನರು ಭಾರತದ ಸಹಾಯವನ್ನು ನೋಡುತ್ತಿದ್ದಾರೆ, ಅದರ ಬಗ್ಗೆ ಮಾತನಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ನಾನು ಕೆಟ್ಟ ಕಥೆಗಳನ್ನು ಕೇಳುವುದಿಲ್ಲ. ಭಾರತಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದು ಟ್ರಂಪ್ ಹೇಳಿದ್ದಾರೆ.
ಕೊರೊನಾ ಮೇಲೆ ಪರಿಣಾಮ ಬೀರುತ್ತಾ?
ಅಮೆರಿಕದಲ್ಲಿ 3.60 ಲಕ್ಷ ಮಂದಿಗೆ ಕೊರೊನಾ ಬಂದಿದ್ದು ಈಗಾಗಲೇ 10 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಕೊರೊನಾಗೆ ಸಧ್ಯಕ್ಕೆ ಯಾವುದೇ ಔಷಧಿ ಇಲ್ಲ. ಹೀಗಾಗಿ ಇಂದು ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಾ ಎನ್ನವ ಪ್ರಶ್ನೆ ಏಳುವುದು ಸಹಜ. ಮಲೇರಿಯಾ ರೋಗದ ವಿರುದ್ಧವಾಗಿ ಹೋರಾಡಲು ರೋಗಿಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯನ್ನು ನೀಡಲಾಗುತ್ತಿದೆ. ಭಾರತದಲ್ಲಿ ಇದು ಯಶಸ್ವಿಯಾದ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಈ ಮಾತ್ರೆಗಳನ್ನು ದೇಶದಲ್ಲಿ ಉತ್ಪಾದನೆ ಮಾಡಲಾಗುತ್ತಿದೆ.
ಮಲೇರಿಯಾಗೆ ನೀಡುವ ಈ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯಿಂದಲೇ ಕೊರೊನಾ ಗುಣವಾಗುತ್ತದೆ ಎಂದು ಪೂರ್ಣವಾಗಿ ಹೇಳಲು ಬರುವುದಿಲ್ಲ. ಯಾಕೆಂದರೆ ವಿಶ್ವ ಆರೋಗ್ಯ ಸಂಸ್ಥೆಯೇ ಯಾವುದೇ ಔಷಧಿಯಿಂದ ಕೊರೊನಾ ವಾಸಿಯಾಗಿದ್ದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಹೇಳಿದೆ.
ಪರಿಸ್ಥಿತಿ ಹೀಗಿರುವಾಗ ತಾತ್ಕಾಲಿಕವಾಗಿ ಕೊರೊನಾಗೆ ಯಾವ ಮಾತ್ರೆ ನೀಡಿದರೆ ಕಡಿಮೆಯಾಗುತ್ತದೆ ಎನ್ನುವ ಬಗ್ಗೆ ಕಂಪನಿಯೊಂದು ಅಧ್ಯಯನ ನಡೆಸಿದೆ. ಹಲವು ದೇಶಗಳಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯಿಂದ ರೋಗಿಗಳು ಗುಣಮುಖರಾಗಿದ್ದಾರೆ ಎಂದು ಜಾಗತಿಕವಾಗಿ ಆರೋಗ್ಯ ಕುರಿತಾಗಿ ಅಧ್ಯಯನ ಮಾಡುವ sermo ಕಂಪನಿ ತಿಳಿಸಿದ ಹಿನ್ನೆಲೆಯಲ್ಲಿ ಈ ಮಾತ್ರೆಗೆ ಬೇಡಿಕೆ ಹೆಚ್ಚಾಗಿದೆ.
ಅಧ್ಯಯನ ಹೇಳಿದ್ದು ಏನು?
ಕೊರೊನಾ ತೀವ್ರವಾಗಿ ಹರಡುತ್ತಿರುವ ಯುರೋಪ್, ದಕ್ಷಿಣ ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ವಿಶ್ವದ 30 ದೇಶಗಳ ಒಟ್ಟು 6,227 ಮಂದಿ ವೈದ್ಯರನ್ನು ಸಂಪರ್ಕಿಸಿ ಅಧ್ಯಯನ ನಡೆಸಲಾಗಿದೆ. ಈ ಪೈಕಿ ಶೇ.37ರಷ್ಟು ಮಂದಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರ ಪರಿಣಾಮ ಬೀರಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಕೊರೊನಾ ತಡೆಗಟ್ಟಲು ನೀಡಲಾಗುವ ಔಷಧಿಗಳ ಪೈಕಿ ಶೇ.56 ನೋವು ನಿವಾರಕಗಳು, ಶೇ.41 ಅಜಿಥ್ರೊಮೈಸಿನ್, ಶೇ.33 ಹೈಡ್ರಾಕ್ಸಿಕ್ಲೋರೋಕ್ವಿನ್ ನೀಡಲಾಗುತ್ತಿದೆ. ಈ ಪೈಕಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಉತ್ತಮ ಪರಿಣಾಮ ಬೀರಿದೆ ಎಂದು ಅಧ್ಯಯನ ತಿಳಿಸಿದೆ.
ಸ್ಪೇನ್ ಶೇ.72, ಇಟಲಿ ಶೇ.49, ಬ್ರೆಜಿಲ್ ಶೇ.41, ಮೆಕ್ಸಿಕೋ ಶೇ.39, ಫ್ರಾನ್ಸ್ ಶೇ.28, ಅಮೆರಿಕ ಶೇ.23, ಜರ್ಮನಿ ಶೇ.17, ಕೆನಡಾ ಶೇ.16, ಇಂಗ್ಲೆಂಡ್ ಶೇ.13, ಜಪಾನ್ ಶೇ.7 ರಷ್ಟು ರೋಗಿಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ನೀಡಲಾಗಿದೆ.
ಟ್ರಂಪ್ ಹೇಳಿದ್ದು ಏನು?
ಇಂದಿನ ತುರ್ತು ಪರಿಸ್ಥಿತಿಯಲ್ಲಿ ಲ್ಯಾಬ್‍ನಲ್ಲಿ ಕೊರೊನಾಗೆ ಔಷಧಿ ಕಂಡು ಹುಡುಕುವುದು ಬಹಳ ಸವಾಲಿನ ಕೆಲಸ. ಹೀಗಿರುವಾಗ ಅಮೆರಿಕನ್ನರ ರಕ್ಷಣೆಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಅಗತ್ಯವಾಗಿದೆ. ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಅಜಿಥ್ರೊಮೈಸಿನ್ ಎರಡು ಮೆಡಿಕಲ್ ಇತಿಹಾಸದಲ್ಲಿ ಗೇಮ್ ಚೇಂಜರ್ ಎಂದು ಹೇಳಿದ್ದರು. ಅಷ್ಟೇ ಅಲ್ಲದೇ ನಾನು ಕೂಡ ಈ ಮಾತ್ರೆಯನ್ನು ತೆಗೆದುಕೊಳ್ಳುವುದಾಗಿ ತಿಳಿಸಿದ್ದರು.