Tag: Coronavirus

  • ಲಾಕ್‍ಡೌನ್: ಕಲರ್ ಜೆರಾಕ್ಸ್ ಪಾಸ್ ತೆಗೆದು ಸಿಕ್ಕಿಬಿದ್ದರೆ 7 ತಿಂಗಳು ಜೈಲು

    ಲಾಕ್‍ಡೌನ್: ಕಲರ್ ಜೆರಾಕ್ಸ್ ಪಾಸ್ ತೆಗೆದು ಸಿಕ್ಕಿಬಿದ್ದರೆ 7 ತಿಂಗಳು ಜೈಲು

    ಬೆಂಗಳೂರು: ಒಂದು ಕಡೆ ಸೀಲ್‍ಡೌನ್ ಮಾದರಿ ನಿರ್ಬಂಧ ಹಾಕುತ್ತಿರುವ ಬೆಂಗಳೂರು ಪೊಲೀಸರು, ಅಡ್ಡಾದಿಡ್ಡಿ ಓಡಾಡುತ್ತಿರುವವರಿಗೆ ಮತ್ತಷ್ಟು ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.

    ಬೆಂಗಳೂರು ರಸ್ತೆಗಳನ್ನು ಸೀಲ್ ಮಾಡುವುದರ ಜೊತೆಗೆ ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಉದ್ದೇಶಿಸಿದ್ದಾರೆ. ಈಗಾಗಲೇ ನೀಡಿರುವ ತುರ್ತು ಕೋವಿಡ್-19 ಪಾಸ್‍ಗಳನ್ನು ಶನಿವಾರದಿಂದ ರದ್ದು ಮಾಡಲು ಬಯಸಿದ್ದಾರೆ. ಇದನ್ನೂ ಓದಿ:  ಬೆಂಗ್ಳೂರಿನ 2 ವಾರ್ಡ್ ಹೊರತುಪಡಿಸಿ ಬೇರೆಲ್ಲೂ ಸೀಲ್‍ಡೌನ್ ಇಲ್ಲ: ಭಾಸ್ಕರ್ ರಾವ್

    ಬೆಂಗ್ಳೂರು ಪೊಲೀಸರ ಪ್ಲಾನ್:
    ನಗರದಲ್ಲಿ 70,000 ತುರ್ತು ಕೋವಿಡ್-19 ಪಾಸ್, ಆನ್‍ಲೈನ್ 1.30 ಲಕ್ಷ ಪಾಸ್ ವಿತರಣೆ ಮಾಡಲಾಗಿದೆ. ಆದರೆ ದಿನಕ್ಕೆ 3 ಲಕ್ಷಕ್ಕಿಂತ ಹೆಚ್ಚು ವಾಹನ ಓಡಾಡುತ್ತಿವೆ. ಕೆಲವರು ನಕಲಿ ಪಾಸ್ ಮಾಡಿಕೊಂಡು ಅನಾವಶ್ಯಕವಾಗಿ ತಿರುಗಾಡುತ್ತಿದ್ದಾರೆ. ಹೀಗಾಗಿ ಪೊಲೀಸರು ಅಂತವರಿಗೆ ಬಲೆ ಬೀಸಿದ್ದಾರೆ.

    ಕಲರ್ ಜೆರಾಕ್ಸ್ ಪಾಸ್ ತೆಗೆದು ಸಿಕ್ಕಿಬಿದ್ದರೆ 7 ತಿಂಗಳು ಜೈಲು ಶಿಕ್ಷೆಗೆ ಗುರಿಯಾಗಲಿಸಲು ಪೊಲೀಸರು ಯೋಚಿಸಿದ್ದಾರೆ. ದಿನಸಿ, ತರಕಾರಿ ಮಾರಾಟಕ್ಕೆ ಬೆಳಗ್ಗೆ 6ರಿಂದ 12 ಗಂಟೆವರೆಗೆ ಸಮಯ ನಿಗದಿ, ಜನರಿಗೆ ಊಟ ಹಂಚುವವರಿಗೂ ಮಧ್ಯಾಹ್ನ 12 ಗಂಟೆವರೆಗೆ ವಿತರಣೆಗೆ ನಿಬಂಧನೆ ಹಾಗೂ ಸಂಜೆ ನಂತರ ತುರ್ತು ವಾಹನಗಳನ್ನು ಬಿಟ್ಟರೆ ಯಾವುದೇ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲು ಪೊಲೀಸರು ಪ್ಲಾನ್ ರೂಪಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಬೆಂಗಳೂರು ಸೇರಿದಂತೆ ರಾಜ್ಯದ 18 ಜಿಲ್ಲೆಗಳ ಸೀಲ್‍ಡೌನ್‍ನಂಥ ಪರಿಸ್ಥಿತಿ ಇದೆ. ಬೆಂಗಳೂರಿನ ವಿಜಯನಗರ, ಬಿಟಿಎಂ ಲೇಔಟ್, ಫ್ರೇಜರ್‍ಟೌನ್, ಕಮರ್ಷಿಲ್ ಸ್ಟ್ರೀಟ್‍ಗಳಲ್ಲಿ ಪೊಲೀಸರು ಪ್ರಮುಖ ರಸ್ತೆಗಳನ್ನು ಬ್ಯಾರಿಕೇಡ್, ಮರಗಳನ್ನು ಕಟ್ಟಿ ಬಂದ್ ಮಾಡಿದ್ದಾರೆ. ಮೈಸೂರಿನಲ್ಲೂ ಎಲ್ಲಾ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗುತ್ತಿದೆ. ಜನ ಹೊರಬಾರದಂತೆ ತಡೆಯಲು ಬಡಾವಣೆಗಳನ್ನು ಬ್ಲಾಕ್ ಮಾಡಲಾಗುತ್ತಿದೆ.

    ಕೊರೊನಾ ರೆಡ್‍ಝೋನ್‍ನಲ್ಲಿರುವ ಮಂಡ್ಯದಲ್ಲೂ ಶನಿವಾರದಿಂದ ಮಾರುಕಟ್ಟೆಗಳನ್ನು ಬಂದ್ ಮಾಡಲಾಗುತ್ತಿದೆ. ಬೀದಿಗೆ ಒಬ್ಬ ತರಕಾರಿ ಮಾರಾಟಗಾರನಿಗೆ ಪಾಸ್ ವಿತರಣೆ ಮಾಡಲಾಗಿದೆ. ಚಿಕ್ಕಬಳ್ಳಾಪುರದ ಗೌರಿಬಿದನೂರಿನಲ್ಲೂ ಸೀಲ್‍ಡೌನ್‍ಗೆ ಸಿದ್ಧತೆ ನಡೆದಿದೆ. ಮಂಗಳೂರಿನ ತೊಕ್ಕೊಟ್ಟು ಪ್ರದೇಶದಲ್ಲಿ ಯಾರಿಗೂ ಎಂಟ್ರಿಯಿಲ್ಲ. ಕಲಬುರಗಿ ನಗರದ ಬಹುತೇಕ ರಸ್ತೆಗಳಲ್ಲಿ ಪೊಲೀಸ್ ಬ್ಯಾರಿಕೇಡ್ ಹಾಕಲಾಗಿದ್ದು, ರಸ್ತೆ ಸಂಚಾರ ವ್ಯವಸ್ಥೆಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ.

    ಗದಗದಲ್ಲಿ ವೃದ್ಧೆ ಮೃತಪಟ್ಟ ಹಿನ್ನೆಲೆಯಲ್ಲಿ ಸೀಲ್‍ಡೌನ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಲಾಗಿದೆ. ಬೀದರ್, ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ದಾವಣಗೆರೆ, ಕೊಡಗು, ತುಮಕೂರು ಸೇರಿದಂತೆ ಒಟ್ಟು 18 ಜಿಲ್ಲೆಗಳಲ್ಲಿ ಸೀಲ್‍ಡೌನ್ ಮಾಡಲು ಸಿದ್ಧತೆ ನಡೆಯುತ್ತಿದೆ.

  • ಭಾರತದಲ್ಲಿ ಸಮುದಾಯ ಹಂತಕ್ಕೆ ಸೋಂಕು ಹೋಗಿಲ್ಲ: ತಪ್ಪು ಒಪ್ಪಿಕೊಂಡ ಡಬ್ಲ್ಯೂಎಚ್‍ಒ

    ಭಾರತದಲ್ಲಿ ಸಮುದಾಯ ಹಂತಕ್ಕೆ ಸೋಂಕು ಹೋಗಿಲ್ಲ: ತಪ್ಪು ಒಪ್ಪಿಕೊಂಡ ಡಬ್ಲ್ಯೂಎಚ್‍ಒ

    ನವದೆಹಲಿ: ಕೊರೊನಾ ವೈರಸ್ ಸಮುದಾಯ ಪ್ರಸರಣ ಹಂತ ತಲುಪಿದ ದೇಶಗಳ ಪಟ್ಟಿಯಲ್ಲಿ ಭಾರತವನ್ನು ತೋರಿಸಿದ್ದ ವಿಶ್ವ ಆರೋಗ್ಯ ಸಂಸ್ಥೆ, ತನ್ನ ಯಥಾಸ್ಥಿತಿ ವರದಿಯ ದೋಷವನ್ನು ಒಪ್ಪಿಕೊಂಡಿದೆ.

    ವಿಶ್ವ ಆರೋಗ್ಯ ಸಂಸ್ಥೆ ಯಥಾಸ್ಥಿತಿ ವರದಿಯಲ್ಲಿ, ‘ಭಾರತದಲ್ಲಿ ಕೊರೊನಾ ವೈರಸ್ ಸಮುದಾಯ ಪ್ರಸರಣ ಹಂತಕ್ಕೆ ಹೋಗಿ’ ಎಂದು ಹೇಳಿತ್ತು. ಆದರೆ ಈಗ ತಮ್ಮ ತಪ್ಪನ್ನು ಒಪ್ಪಿಕೊಂಡು, ಭಾರತದಲ್ಲಿ ಸೋಂಕು ಹರಡುವ ಕ್ಲಸ್ಟರ್ ಕಾಣಿಸಿಕೊಂಡಿವೆ. ಆದರೆ ಸಮುದಾಯ ಪ್ರಸರಣದ ಸ್ಥಿತಿ ಉಂಟಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

    ಈ ವಿಚಾರವಾಗಿ ಕೇಂದ್ರ ಆರೋಗ್ಯ ಸಚಿವಾಲಯವು ಸ್ಪಷ್ಟನೆ ನೀಡಿದೆ. ದೆಹಲಿಯಲ್ಲಿ ಇಂದು ಸಂಜೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್, ದೇಶದಲ್ಲಿ ಇನ್ನೂ ಕೊರೊನಾ ವೈರಸ್ ಮೂರನೇ ಹಂತ (ಸಮುದಾಯ ಪ್ರಸಾರ)ಕ್ಕೆ ಕಾಲಿಟ್ಟಿಲ್ಲ. ಹೀಗಾಗಿ ಭಯಪಡುವ ಅಗತ್ಯವಿಲ್ಲ. ಆದರೆ ಜಾಗರೂಕರಾಗಿರಿ ಮತ್ತು ಎಚ್ಚರಕೆಯಿಂದ. ಆರೋಗ್ಯ ಇಲಾಖೆ ಕೂಡ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಿದ್ದರು.

    ದೇಶದಲ್ಲಿ ಕೊರೊನಾ ಮಹಾಮಾರಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಮುಂದಿನ ಸೆಷ್ಟೆಂಬರ್ ವರೆಗೂ ವೈರಸ್ ಇರುವ ಸಾಧ್ಯತೆಗಳಿವೆ ಎಂದು ಚಂಡೀಗಢ ವೈದ್ಯಕೀಯ ವಿಜ್ಞಾನ ಸಂಸ್ಥೆ ವರದಿ ನೀಡಿದೆ.

    ಈ ವೈರಸ್ ಶೇ.58ರಷ್ಟು ಮಂದಿಗೆ ಕಾಡುವ ಸಾಧ್ಯತೆಗಳಿವೆ ಎಂದು ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಹೇಳಿರುವುದು ಆತಂಕ ಮೂಡಿಸಿದೆ. ಈ ತಿಂಗಳ ಅಂತ್ಯದವರೆಗೂ ಯಾವುದೇ ಹಬ್ಬ-ಹರಿದಿನ ಆಚರಣೆ ಮಾಡಲು ಅವಕಾಶ ನೀಡದಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಎಚ್ಚರಿಕೆ ನೀಡಿದೆ. ಮಧ್ಯ ಪ್ರದೇಶದ ಇಂಧೋರ್ ನಲ್ಲಿ ಇವತ್ತು ಕೂಡ ಓರ್ವ ಆರ್ಯುವೇದ ವೈದ್ಯ ನಿಧನರಾಗಿದ್ದಾರೆ.

    ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 7,061ಕ್ಕೆ ಏರಿದ್ದು, ಸಾವಿನ ಸಂಖ್ಯೆ 241 ಆಗಿದೆ. ಕಳೆದ 24 ಗಂಟೆಯಲ್ಲಿ 37 ಸಾವಾಗಿದ್ದು, ದಾಖಲೆಯ 896 ಜನರಿಗೆ ಸೋಂಕು ದೃಢವಾಗಿದೆ. 692 ಜನ ಡಿಸ್ಚಾರ್ಜ್ ಆಗಿದ್ದಾರೆ.

  • ಅಂಗನವಾಡಿ, ಆಶಾ ಕಾರ್ಯಕರ್ತರು, ನರ್ಸ್‍ಗಳು ನಿಜವಾದ ದೇಶ ಭಕ್ತರು: ರಾಹುಲ್ ಗಾಂಧಿ

    ಅಂಗನವಾಡಿ, ಆಶಾ ಕಾರ್ಯಕರ್ತರು, ನರ್ಸ್‍ಗಳು ನಿಜವಾದ ದೇಶ ಭಕ್ತರು: ರಾಹುಲ್ ಗಾಂಧಿ

    ನವದೆಹಲಿ: ದೇಶವನ್ನು ಕಾಡುತ್ತಿರುವ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು ಹೋರಾಡುತ್ತಿರುವ ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ನರ್ಸ್‍ಗಳು ನಿಜವಾದ ದೇಶ ಭಕ್ತರು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ದೇಶ ಸಂಕಷ್ಟದಲ್ಲಿ ಇರುವಾಗ ನಿಸ್ವಾರ್ಥದಿಂದ ದುಡಿಯುವುದೇ ನಿಜವಾದ ದೇಶಭಕ್ತಿ. ಈ ಕಷ್ಟಕರ ಸಮಯದಲ್ಲೂ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತರು, ನರ್ಸ್‍ಗಳು, ಅಂಗನವಾಡಿ ಕಾರ್ಯಕರ್ತರು ನಿಜವಾದ ದೇಶಭಕ್ತರು. ಇವರು ಮುಖ್ಯವಾಹಿನಿಯಿಂದ ದೂರವುಳಿದು ಸಾರ್ವಜನಿಕ ಸುರಕ್ಷತೆಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದ್ದಾರೆ.

    ಕೊರೊನಾ ವೈರಸ್ ಮೇಲಿರುವ ಭಯ ಹಾಗೂ ತಪ್ಪು, ಸುಳ್ಳಿ ಮಾಹಿತಿಗಳು ವೈರಸ್‍ಗಿಂತ ಅಪಾಯಕಾರಿಯಾಗಿದೆ. ಈ ಪರಿಸ್ಥಿತಿಯಲ್ಲಿ ಸಮುದಾಯ ಕಾರ್ಯಕರ್ತರು ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ದೇಶಕ್ಕಾಗಿ ಜನರ ಹಿತಕ್ಕಾಗಿ ದುಡಿಯುತ್ತಿದ್ದಾರೆ ಎಂದರು.

    ದೇಶವಾಸಿಗಳಾಗಿ ನಾವು ಅವರಿಗೆ ಆಭಾರಿಯಾಗಿದ್ದೇವೆ. ಈ ಕೊರೊನಾ ವೈರಸ್ ಬಿಕ್ಕಟ್ಟಿಗೆ ಮುಕ್ತಿ ಸಿಕ್ಕ ಬಳಿಕ ಆಶಾ ಕಾರ್ಯಕರ್ತರು, ನರ್ಸ್‍ಗಳು, ಅಂಗನವಾಡಿ ಕಾರ್ಯಕರ್ತರ ಅಪೂರ್ವ ಕೊಡುಗೆಯನ್ನು ಗುರುತಿಸಿ, ಅವರು ಕೆಲಸದ ಪರಿಸ್ಥಿತಿಗಳು ಸುಧಾರಣೆಯಾಗಲಿದೆ ಎಂಬ ವಿಶ್ವಾಸವನ್ನು ರಾಹುಲ್ ಗಾಂಧಿ ವ್ಯಕ್ತಪಡಿಸಿದರು.

  • ಬೆಂಗ್ಳೂರಿನ 2 ವಾರ್ಡ್ ಹೊರತುಪಡಿಸಿ ಬೇರೆಲ್ಲೂ ಸೀಲ್‍ಡೌನ್ ಇಲ್ಲ: ಭಾಸ್ಕರ್ ರಾವ್

    ಬೆಂಗ್ಳೂರಿನ 2 ವಾರ್ಡ್ ಹೊರತುಪಡಿಸಿ ಬೇರೆಲ್ಲೂ ಸೀಲ್‍ಡೌನ್ ಇಲ್ಲ: ಭಾಸ್ಕರ್ ರಾವ್

    ಬೆಂಗಳೂರು: ಕೊರೊನಾ ವೈರಸ್ ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಬೆಂಗಳೂರಿನ ಎರಡು ವಾರ್ಡ್ ಗಳನ್ನು ಮಾತ್ರ ಸೀಲ್‍ಡೌನ್ ಮಾಡಲಾಗುತ್ತಿದೆ.

    ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಇಡೀ ಬೆಂಗಳೂರು ನಗರವನ್ನೇ ಸೀಲ್‍ಡೌನ್ ಮಾಡಲಾಗುತ್ತಿದೆ ಅಂತ ಸುದ್ದಿ ಬರುತ್ತಿದೆ. ಆದರೆ ಸರ್ಕಾರದ ಮುಂದೆ ಇಂತಹ ಯಾವುದೇ ಆಲೋಚನೆಗಳಿಲ್ಲ. ಸುಳ್ಳು ಸುದ್ದಿಯಿಂದಾಗಿ ಜನರು ಆತಂಕಕ್ಕೆ ಒಳಗಾಗುತ್ತಿದ್ದಾರೆ ಎಂದು ತಿಳಿಸಿದರು.

    ಬೆಂಗಳೂರಿನ ಪಾದರಾಯನಪುರ ಮತ್ತು ಬಾಪೂಜಿ ನಗರ ವಾರ್ಡ್ ಗಳನ್ನು ಮಾತ್ರ ಸೀಲ್‍ಡೌನ್ ಮಾಡಲಾಗುತ್ತಿದೆ. ಈ ಎರಡು ವಾರ್ಡ್ ಹೊರತುಪಡಿಸಿ ಬೇರೆ ಎಲ್ಲೂ ಸೀಲ್‍ಡೌನ್ ಇಲ್ಲ. ಈ ಬಗ್ಗೆ ಮುಖ್ಯ ಕಾರ್ಯದರ್ಶಿಗಳು ಮತ್ತು ಡಿಜಿ ಅಂಡ್ ಐಜಿಪಿಯವರ ಜೊತೆ ಮಾತನಾಡಲಾಗಿದೆ. ಎರಡು ವಾರ್ಡ್ ನಲ್ಲಿ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲಿನ ಜನಕ್ಕೆ ಅಗತ್ಯ ವಸ್ತುಗಳ ಪೂರೈಕೆಗಾಗಿ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸ್ಪಷ್ಟನೆ ನೀಡಿದರು.

    ಈ ವಿಚಾರವನ್ನು ಸಾಮಾಜಿಕ ಜಾಲತಾಣದ ಮೂಲಕ ಜನರಿಗೆ ತಲುಪಿಸುವಂತೆ ಕೆಲಸ ಮಾಡಿ ಅಂತ ಕೇಳಿಕೊಳ್ಳುತ್ತಿದ್ದೇವೆ. ಜನರಿಗೆ ಧೈರ್ಯ ಕೊಡಿ ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಭಾಸ್ಕರ್ ರಾವ್ ಕೇಳಿಕೊಂಡರು.

    ದಿನನಿತ್ಯದ ಅವಶ್ಯಕ ವಸ್ತುಗಳು ಸಿಗುತ್ತಿವೆ. ಹಾಲು, ದಿನಸಿ, ಔಷಧಿಗಳಿಗೆ ತೊಂದರೆಯಾಗಿಲ್ಲ. ಯಾರು ಕೂಡ ಆತಂಕಕ್ಕೆ ಒಳಗಾಗಬೇಕಿಲ್ಲ. ಮೆಡಿಕಲ್ ಎಮರ್ಜೆನ್ಸಿ ಇದ್ದವರಿಗೆ ಓಡಾಡಲು ಬಿಡಲಾಗುತ್ತಿದೆ. ಆದರೆ ಇಲ್ಲಿಯವರೆಗೂ ಅನಾವಶ್ಯಕವಾಗಿ ತಿರುಗಾಡುತ್ತಿದ್ದವರ 21,700 ವಾಹಕಗಳನ್ನು ಸೀಜ್ ಮಾಡಲಾಗಿದೆ. ಕೆಲವರು ಸುಳ್ಳು ದಾಖಲೆ ನೀಡಿ ಪಾಸ್ ಪಡೆದಿರುವುದು ಗೊತ್ತಗಿದೆ ಎಂದು ಮಾಹಿತಿ ನೀಡಿದರು.

    ಶುಕ್ರವಾರ ಮತ್ತೆ 10 ಹೊಸ ಕೊರೊನಾ ಪ್ರಕರಣಗಳ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 207ಕ್ಕೆ ಏರಿಕೆಯಾಗಿದೆ. ಗುರುವಾರ ಒಟ್ಟು 16 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 200ರ ಗಡಿ ದಾಟಿದೆ.

    ಮೈಸೂರು 5, ಬೆಂಗಳೂರು 2 ಮತ್ತು ಕಲಬುರಗಿಯಲ್ಲಿ 1 ಕೊರೊನಾ ಪ್ರಕರಣ ಪತ್ತೆಯಾಗಿದೆ. ಮೈಸೂರಿನಲ್ಲಿ ತಂದೆಯಿಂದ 8 ವರ್ಷದ ಬಾಲಕನಿಗೆ ಕೊರೊನಾ ಸೋಂಕು ತಗುಲಿದೆ. ಬೆಂಗಳೂರು ಗ್ರಾಮಾಂತರದ 11 ವರ್ಷದ ಬಾಲಕಿಗೂ ಕೊರೊನಾ ತಗುಲಿದೆ. ಈಕೆ ರೋಗಿ ನಂಬರ್ 206ರ ಪುತ್ರಿಯಾಗಿದ್ದಾಳೆ. ಗುರುವಾರ ಬಾಗಲಕೋಟೆಯ ಮೂರು ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು.

    ರೋಗಿ ನಂಬರ್ 198: 48 ವರ್ಷದ ಪುರುಷನಾಗಿದ್ದು, ರೋಗಿ ನಂಬರ್ 167 ಮತ್ತು 168ರ ಜೊತೆ ಸಂಪರ್ಕದಲ್ಲಿದ್ದರು. ಬೆಂಗಳೂರಿನ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ರೋಗಿ ನಂಬರ್ 199: 57 ವರ್ಷದ ಪುರುಷನಾಗಿದ್ದು, ರೋಗಿ ನಂಬರ್ 167 ಮತ್ತು 168ರ ಜೊತೆ ಸಂಪರ್ಕದಲ್ಲಿದ್ದರು. ಬೆಂಗಳೂರಿನ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.

  • ಮೈಸೂರು ಕೈ ತಪ್ಪಿದ್ದಕ್ಕೆ ಸೋಮಣ್ಣ ಮುನಿಸು – ರಾತ್ರೋರಾತ್ರಿ ಬೆಂಗ್ಳೂರಿಗೆ ವಾಪಸ್

    ಮೈಸೂರು ಕೈ ತಪ್ಪಿದ್ದಕ್ಕೆ ಸೋಮಣ್ಣ ಮುನಿಸು – ರಾತ್ರೋರಾತ್ರಿ ಬೆಂಗ್ಳೂರಿಗೆ ವಾಪಸ್

    ಮೈಸೂರು: ಕೊರೊನಾ ಮಹಾಮಾರಿ ನಿಭಾಯಿಸಲು ಜಿಲ್ಲಾ ಉಸ್ತುವಾರಿ ಸಚಿವರನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ನೇಮಿಸಿ ಆದೇಶ ಹೊರಡಿಸಿದ್ದಾರೆ. ಆದರೆ ಸಚಿವ ಸೋಮಣ್ಣ ಅವರು ಮೈಸೂರು ಉಸ್ತುವಾರಿ ಬದಲಾಗಿದ್ದಕ್ಕೆ ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ.

    ಕೊರೊನಾ ಆತಂಕ ಹೆಚ್ಚಾದ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಮಾಡಿದ್ದಾರೆ. ಸಚಿವ ಸೋಮಣ್ಣ ಮೈಸೂರು ಮತ್ತು ಕೊಡುಗೆ ಜಿಲ್ಲೆ ಉಸ್ತುವಾರಿಯಾಗಿದ್ದರು. ಆದರೆ ಸಚಿವ ಎಸ್.ಟಿ.ಸೋಮಶೇಖರ್‌ಗೆ ಮೈಸೂರು ಜಿಲ್ಲಾ ಉಸ್ತುವಾರಿಯನ್ನು ಸಿಎಂ ಯಡಿಯೂರಪ್ಪ ನೀಡಿದ್ದಾರೆ. ಈ ಮೂಲಕ ಸಚಿವ ಸೋಮಣ್ಣಗೆ ಕೊಡಗು ಉಸ್ತುವಾರಿ ಮಾತ್ರ ನೀಡಲಾಗಿದೆ. ಇದರಿಂದ ಮೈಸೂರು ಉಸ್ತುವಾರಿ ಬದಲಾಗಿದ್ದಕ್ಕೆ ಸೋಮಣ್ಣ ಮುನಿಸಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

    ವಿ.ಸೋಮಣ್ಣ ರಾತ್ರೋರಾತ್ರಿ ಮೈಸೂರಿನಿಂದ ಬೆಂಗಳೂರಿಗೆ ಹೋಗಿದ್ದಾರೆ. ರಾತ್ರಿ ಸುಮಾರು 12 ಗಂಟೆಗೆ ಮೈಸೂರಿನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಸಚಿವ ಸೋಮಣ್ಣ ಮೂರು ದಿನದ ಮೈಸೂರು – ಕೊಡಗು ಪ್ರವಾಸದಲ್ಲಿದ್ದರು. ಆದರೆ ಉಸ್ತುವಾರಿ ಬದಲಾವಣೆ ಪಟ್ಟಿ ನೋಡಿ ಬೇಸರದಿಂದ ರಾತ್ರೋರಾತ್ರಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ.

    ಸಚಿವ ಸಂಪುಟದ ಸಭೆಯಲ್ಲೂ ಮೈಸೂರು ಉಸ್ತುವಾರಿ ಬದಲಾವಣೆ ಸೂಚನೆ ಕೊಡದೆ ದಿಢೀರ್ ಬದಲಾವಣೆ ಹಿಂದೆ ರಾಜಕೀಯ ಲೆಕ್ಕಚಾರ ಇದೆ ಎಂದು ಹೇಳಲಾಗುತ್ತಿದೆ.

    ಸಿಎಂ ಯಡಿಯೂರಪ್ಪ ಬೆಂಗಳೂರನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿ, ಗೋಪಾಲಯ್ಯ, ಶ್ರೀಮಂತ ಪಾಟೀಲ್‍ಗೆ ಯಾವ ಜಿಲ್ಲೆಯ ಉಸ್ತುವಾರಿಯನ್ನು ನೀಡಿಲ್ಲ. ಬೆಳಗಾವಿ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಮುಂದುವರಿದಿದ್ದಾರೆ. ಅಶ್ವಥ್ ನಾರಾಯಣ್‍ಗೆ ರಾಮನಗರ, ಅಶೋಕ್‍ಗೆ ಬೆಂಗಳೂರು ಗ್ರಾಮಾಂತರ, ಶ್ರೀರಾಮುಲುಗೆ ಚಿತ್ರದುರ್ಗ, ಬಿ.ಸಿ.ಪಾಟೀಲ್‍ಗೆ ಕೊಪ್ಪಳ, ಆನಂದ್ ಸಿಂಗ್‍ಗೆ ಬಳ್ಳಾರಿ, ಉತ್ತರ ಕನ್ನಡಕ್ಕೆ ಶಿವರಾಂ ಹೆಬ್ಬಾರ್, ಮಾಧುಸ್ವಾಮಿಗೆ ತುಮಕೂರು, ಹಾಸನ, ಬಸವರಾಜ ಬೊಮ್ಮಾಯಿಗೆ ಹಾವೇರಿ, ಉಡುಪಿ, ಗೋವಿಂದ ಕಾರಜೋಳಗೆ ಬಾಗಲಕೋಟೆ, ಕಲಬುರಗಿ, ಪ್ರಭು ಚವ್ಹಾಣ್‍ಗೆ ಬೀದರ್, ಯಾದಗಿರಿ ಜಿಲ್ಲಾ ಉಸ್ತುವಾರಿ ನೀಡಲಾಗಿದೆ.

  • ಕೊರೊನಾ ವಿರುದ್ಧದ ಹೋರಾಟಕ್ಕೆ 50 ಸಾವಿರ ರೂ. ದೇಣಿಗೆ ನೀಡಿದ ಕೌರವನ ಪುತ್ರಿ

    ಕೊರೊನಾ ವಿರುದ್ಧದ ಹೋರಾಟಕ್ಕೆ 50 ಸಾವಿರ ರೂ. ದೇಣಿಗೆ ನೀಡಿದ ಕೌರವನ ಪುತ್ರಿ

    ಬೆಂಗಳೂರು: ಹೆಮ್ಮಾರಿ ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಅನೇಕರು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ದೇಣಿಗೆ ನೀಡಿ ಬೆಂಬಲ ಸೂಚಿಸಿದ್ದಾರೆ. ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರ ಪುತ್ರಿ ಸೃಷ್ಟಿ ಪಾಟೀಲ್ ಅವರು ಕೂಡ ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ 50 ಸಾವಿರ ರೂ. ದೇಣಿಗೆ ನೀಡಿದ್ದಾರೆ.

    ತಾವು ದೇಣಿಗೆ ನೀಡುವ ಮಾಹಿತಿಯನ್ನು ಟ್ವೀಟ್ ಮಾಡಿರುವ ಸೃಷ್ಟಿ ಪಾಟೀಲ್, ಮಹಾಮಾರಿ ಕೊರೊನಾ ವೈರಸ್ ಅನ್ನು ತಡೆಗಟ್ಟಲು ರಾಜ್ಯ ಸರ್ಕಾರವು, ನಮ್ಮಲೆಲ್ಲರ ಹಿತ ಕಾಯುತ್ತಿದೆ. ನಾವೆಲ್ಲರೂ ಸೇರಿ ನಮ್ಮ ಕೈಯಲ್ಲಿ ಎಷ್ಟಾಗುತ್ತೋ ಅಷ್ಟು ಧನಸಹಾಯವನ್ನು ರಾಜ್ಯ ಸರ್ಕಾರಕ್ಕೆ ಮಾಡೋಣ. ನನ್ನ ಕಡೆಯಿಂದ ಆದಷ್ಟು ನಾನು ಮಾಡಿದ್ದೇನೆ. ನೀವೂ ಕೂಡ ಸಿಎಂ ರಿಲೀಫ್ ಫಂಡ್‍ಗೆ ಧನ ಸಹಾಯ ಮಾಡಬಹುದು ಎಂದು ಬರೆದುಕೊಂಡಿದ್ದಾರೆ.

    ಕೊರೊನಾ ವೈರಸ್‍ನಿಂದಾಗಿ ದೇಶಾದ್ಯಂತ ಏಪ್ರಿಲ್ 14ರವರೆಗೆ ಲಾಕ್‍ಡೌನ್ ಘೋಷಿಸಲಾಗಿದೆ. ಇದರಿಂದಾಗಿ ಸಾಮಾನ್ಯ ಜನರ ಜೀವನ ಕಷ್ಟವಾಗಿದೆ. ಹೀಗಾಗಿ ಸೃಷ್ಟಿ ಪಾಟೀಲ್ ಕಳೆದ ಕೆಲವು ದಿನಗಳಿಂದ ತಂದೆ ಬಿ.ಸಿ.ಪಾಟೀಲ್ ಅವರ ಕ್ಷೇತ್ರದ ಜನರ ಸಹಾಯಕ್ಕೆ ನಿಂತಿದ್ದಾರೆ.

    ಸೃಷ್ಟಿ ಪಾಟೀಲ್ ಅವರು ಏಪ್ರಿಲ್ 5ರಂದು ಹಂಸಭಾವಿ ಹಾಗೂ ರಟ್ಟಿಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತರು, ಪೊಲೀಸ್, ಗ್ರಾಮ ಪಂಚಾಯತಿ ಸ್ವಚ್ಛತಾ ಸಿಬ್ಬಂದಿಗೆ ಊಟದ ವ್ಯವಸ್ಥೆ ಮಾಡಿದ್ದರು. ಜೊತೆಗೆ ಅಂದು ಅನೇಕರಿಗೆ ಮಾಸ್ಕ್ ಗಳನ್ನು ವಿತರಿಸಿದ್ದರು. ಹೀಗೆ ಹಾವೇರಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಜನರಿಗೆ ಸಹಾಯ ಮಾಡುತ್ತಿದ್ದಾರೆ.

  • ರಾಜ್ಯದಲ್ಲಿ ಕೊರೊನಾ ವಿರುದ್ಧ ‘3ಟಿ’ ಅಸ್ತ್ರ!

    ರಾಜ್ಯದಲ್ಲಿ ಕೊರೊನಾ ವಿರುದ್ಧ ‘3ಟಿ’ ಅಸ್ತ್ರ!

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 200ರ ಗಡಿ ಸಮೀಪಿಸಿರುವ ಹಿನ್ನೆಲೆಯಲ್ಲಿ ಮುಂದಿನ 5 ದಿನ ಫೈನಲ್ ವಾರ್ ಎಂದು ಪರಿಗಣಿಸಲಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯು ‘3ಟಿ’ ಅಸ್ತ್ರಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಿದೆ.

    ರಾಜ್ಯದಲ್ಲಿ ಒಟ್ಟು ಜನರಿಗೆ 197 ಕೊರೊನಾ ತಗುಲಿರುವುದು ದೃಢಪಟ್ಟಿದೆ. ರಾಜ್ಯದಲ್ಲಿ ಗುರುವಾರ ಒಂದೇ ದಿನ 16 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಬಾಗಲಕೋಟೆಯಲ್ಲಿ 3 ಮಕ್ಕಳಲ್ಲೇ ಕೊರೊನಾ ಪತ್ತೆಯಾದರೆ, ಹೊಸ 3 ಪ್ರಕರಣಗಳಲ್ಲಿ ಮಕ್ಕಳಿಂದಲೇ ತಂದೆಗೆ ಸೋಂಕು ಹಬ್ಬಿದೆ. ಬೆಳಗಾವಿಯಲ್ಲಿ ತಬ್ಲಿಘಿ ಪ್ರಕರಣವೊಂದು ದಾಖಲಾಗಿದೆ. ಮೈಸೂರಲ್ಲಿ 2 ಕೇಸ್ ಪತ್ತೆಯಾಗಿದೆ. ಮಂಡ್ಯಕ್ಕೂ ನಂಜನಗೂಡು ಸೋಂಕು ಹಬ್ಬಿದೆ. ಬೆಂಗಳೂರಿನಲ್ಲಿ ಇಂದೊಂದೇ ದಿನ 5 ಪ್ರಕರಣ ದಾಖಲಾಗಿ ಒಟ್ಟು ಕೇಸ್ 68ಕ್ಕೆ ಏರಿಕೆಯಾಗಿದೆ.

    ಕೊರೊನಾ ವೈರಸ್ ಹರಡುವುದನ್ನ ತಡೆಗಟ್ಟಲು ರಾಜ್ಯ ಆರೋಗ್ಯ ಇಲಾಖೆ ಸರ್ವ ಪ್ರಯತ್ನ ನಡೆಸಿದೆ. ಮುಂದಿನ 5 ದಿನಗಳಲ್ಲಿ ಕೊರೊನಾ ಸೋಂಕು ಹರಡುವುದನ್ನು ತಡೆಯುವುದಕ್ಕಾ `3 ಟಿ’ ಅಸ್ತ್ರಗಳನ್ನು ಬಳಸಲು ಮುಂದಾಗಿದೆ.

    ‘3ಟಿ’ ಅಸ್ತ್ರ ಅಂದ್ರೆ ಏನು?:
    ಕೊರೊನಾ ವಿರುದ್ಧ ‘3ಟಿ’ ಅಂದ್ರೆ ಟ್ರೇಸಿಂಗ್, ಟೆಸ್ಟಿಂಗ್ ಮತ್ತು ಟ್ರೀಟ್‍ಮೆಂಟ್ ಆಗಿದೆ. ಮೊದಲು ಸೋಂಕಿತರ ಜೊತೆ ಸಂಪರ್ಕದಲ್ಲಿರುವವರ ಟ್ರೇಸ್ ಮಾಡುವುದು. ಬಳಿಕ ಪ್ರಾಥಮಿಕ, ದ್ವಿತೀಯ ಹಂತದ ಸಂಪರ್ಕ ಹೊಂದಿದ್ದವರ ಶೀಘ್ರ ಪತ್ತೆ ಹಚ್ಚುವುದು. ಸಂಪರ್ಕದಲ್ಲಿರುವವರ ಸಂಖ್ಯೆ ಅದೆಷ್ಟೇ ದೊಡ್ಡದಿದ್ರೂ ತತ್‍ಕ್ಷಣ ಟೆಸ್ಟಿಂಗ್ ಮಾಡುವುದು ಮುಖ್ಯವಾಗಿದೆ ಎಂದು ಆರೋಗ್ಯ ಇಲಾಖೆಯು ವೈದ್ಯರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದೆ.

    ಸೋಂಕಿತರ ಸಂಪರ್ಕದಲ್ಲಿದ್ದವರಿಗೆ ಸೋಂಕಿನ ಗುಣಲಕ್ಷಣ ಕಾಣಿಸಿಲ್ಲ ಅಂತ ನಿರ್ಲಕ್ಷ್ಯ ತೋರುವಂತಿಲ್ಲ. ಸೋಂಕು ಪೀಡಿತ ಪ್ರದೇಶದಲ್ಲಿ ಸ್ಕ್ರೀನಿಂಗ್ ಕಡ್ಡಾಯ ಮಾಡಬೇಕು. ಸೋಂಕಿತರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಐಸೋಲೇಷನ್‍ನಲ್ಲಿಟ್ಟು ಚಿಕಿತ್ಸೆ ಕೊಡಬೇಕು. ಐಸೋಲೇಷನ್‍ನಲ್ಲಿ ಇಡದಿದ್ದರೆ ಒಬ್ಬ ಸೋಂಕಿತ 406 ಮಂದಿಗೆ ವೈರಸ್ ಹರಡಬಲ್ಲ. ತಕ್ಷಣ ಸೋಂಕಿತರು, ಸಂಪರ್ಕದಲ್ಲಿ ಇದ್ದವರ ಪತ್ತೆ ಹಚ್ಚಿ, ಟೆಸ್ಟ್ ಮಾಡಿ ಟ್ರೀಟ್‍ಮೆಂಟ್ ಕೊಡಿ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

  • 17 ದಿನದಲ್ಲಿ ಮೊದಲ 50, ಈಗ ಕೇವಲ 4 ದಿನದಲ್ಲಿ 47 ಮಂದಿಗೆ ಕರ್ನಾಟಕದಲ್ಲಿ ಸೋಂಕು

    17 ದಿನದಲ್ಲಿ ಮೊದಲ 50, ಈಗ ಕೇವಲ 4 ದಿನದಲ್ಲಿ 47 ಮಂದಿಗೆ ಕರ್ನಾಟಕದಲ್ಲಿ ಸೋಂಕು

    – ಕರ್ನಾಟಕದಲ್ಲಿ ಕೊರೊನಾ ಕಂಪನ
    – ನಂಜನಗೂಡು, ದೆಹಲಿ ಜಮಾತ್‍ನಿಂದ ಏರಿಕೆ

    ಬೆಂಗಳೂರು: ಕೊರೊನಾ ಪೀಡಿತ ರಾಜ್ಯಗಳ ಪೈಕಿ ಕರ್ನಾಟಕಕ್ಕೆ 11ನೇ ಸ್ಥಾನ ಸಿಕ್ಕಿರಬಹುದು. ಆದರೆ ಲಾಕ್‍ಡೌನ್ ಮಧ್ಯೆ ಕೊರೊನಾ ಪೀಡಿತರ ಸಂಖ್ಯೆ ದಿಢೀರ್ ಏರಿಕೆ ಆಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

    ಕರ್ನಾಟಕದಲ್ಲಿ ಮೊದಲ ಪ್ರಕರಣ ಬೆಳಕಿಗೆ ಬಂದಿದ್ದು ಮಾರ್ಚ್ 8 ರಂದು. ಖಾಸಗಿ ಕಂಪನಿಯ ಟೆಕ್ಕಿಗೆ ಕೊರೊನಾ ಬಂದಿತ್ತು. ಇದಾದ 17 ದಿನದಲ್ಲಿ ಕೊರೊನಾ ಪೀಡಿತರ ಸಂಖ್ಯೆ 50ಕ್ಕೆ ಏರಿಕೆ ಆಗಿತ್ತು.

    ಮಾರ್ಚ್ 31ಕ್ಕೆ 100ನೇ ಪ್ರಕರಣ ಬಂದಿತ್ತು. ಅಂದರೆ ಮಾರ್ಚ್ 25 ರಿಂದ 31ರವರೆಗಿನ 6 ದಿನದಲ್ಲಿ 50 ಮಂದಿಗೆ ಪಾಸಿಟಿವ್ ಬಂದಿತ್ತು. ಇದಾದ ನಂತರ ಏಪ್ರಿಲ್ 5ಕ್ಕೆ 150 ಮಂದಿಗೆ ಕೊರೊನಾ ಬಂದಿದ್ದರೆ ಕಳೆದ ನಾಲ್ಕು ದಿನದಲ್ಲೇ 47 ಮಂದಿಗೆ ಸೋಂಕು ತಗಲಿದ್ದು ಕೊರೊನಾ ನಿಯಂತ್ರಣ ಸಾಧ್ಯವೇ ಎನ್ನುವ ಪ್ರಶ್ನೆ ಎದ್ದಿದೆ.

    ಮಾರ್ಚ್ 21ರಿಂದ ರಾಜ್ಯಾದ್ಯಂತ ಲಾಕ್‍ಡೌನ್ ಘೋಷಣೆಯಾಗಿದೆ. ಅಷ್ಟೇ ಅಲ್ಲದೇ ವಿದೇಶದಿಂದ ಬಂದವರ ಕ್ವಾರಂಟೈನ್ ಅವಧಿಯೂ ಪೂರ್ಣವಾಗಿದೆ. ಆದರೆ ನಂಜನಗೂಡು ಫಾರ್ಮಾ ಕಂಪನಿ ಮತ್ತು ದೆಹಲಿಯ ಜಮಾತ್‍ಗೆ ತೆರಳಿದವರು ಮತ್ತು ಅವರ ಸಂಪರ್ಕಕ್ಕೆ ಬಂದವರಿಂದ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ ದಿನೇ ದಿನೇ ಏರಿಕೆ ಆಗುತ್ತಿದೆ.

    ಪ್ರಸ್ತುತ ರಾಜ್ಯದಲ್ಲಿ 197 ಮಂದಿಗೆ ಕೊರೊನಾ ಬಂದಿದ್ದು, 6 ಮಂದಿ ಮೃತ ಪಟ್ಟಿದ್ದಾರೆ. 30 ಮಂದಿ ಡಿಸ್ಚಾರ್ಜ್ ಆಗಿದ್ದು, 161 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗಿಗಳ ಪೈಕಿ ಒಬ್ಬರನ್ನು ಐಸಿಯುನಲ್ಲಿ, ಒಬ್ಬರನ್ನು ವೆಂಟಿಲೇಟರ್ ನಲ್ಲಿ ಇಡಲಾಗಿದೆ.

    ಅತಿ ಹೆಚ್ಚು ಕೊರೊನಾ ಎಲ್ಲಿ?
    ಬೆಂಗಳೂರು ನಗರ 58, ಮೈಸೂರು 37, ದಕ್ಷಿಣ ಕನ್ನಡ 12 ಮಂದಿಗೆ ಕೊರೊನಾ ಬಂದಿದೆ. ಬೀದರ್ ಮತ್ತು ಬೆಳಗಾವಿಯಲ್ಲಿ ತಲಾ 10, ಬಾಗಲಕೋಟೆ 8, ಉತ್ತರ ಕನ್ನಡ, ಚಿಕ್ಕಬಳ್ಳಾಪುರ, ಕಲಬುರ್ಗಿಯಲ್ಲಿ ತಲಾ 9 ಮಂದಿ, ಬಳ್ಳಾರಿಯಲ್ಲಿ 6, ಮಂಡ್ಯ 5 ಮಂದಿಗೆ ಪಾಸಿಟಿವ್ ಬಂದಿದೆ.

    ದಾವಣಗೆರೆ, ಬೆಂಗಳೂರು ಗ್ರಾಮಾಂತರ, ಉಡುಪಿಯಲ್ಲಿ ತಲಾ 3, ಧಾರವಾಡ 2, ಕೊಡಗು, ತುಮಕೂರು, ಗದಗದಲ್ಲಿ ಒಂದೊಂದು ಪ್ರಕರಣ ಬಂದಿದೆ.

    ಮೃತಪಟ್ಟವರು:
    ಕಲಬರುಗಿಯ ಹಿರಿಯ ವ್ಯಕ್ತಿ(ರೋಗಿ 6), ಚಿಕ್ಕಬಳ್ಳಾಪುರದ ಮಹಿಳೆ(ರೋಗಿ 53), ತುಮಕೂರಿನ ಹಿರಿಯ ವ್ಯಕ್ತಿ(ರೋಗಿ 125) ಮೃತಪಟ್ಟಿದ್ದರು. ನಿನ್ನೆ ಬಾಗಲಕೋಟೆಯ 75 ವರ್ಷದ ವ್ಯಕ್ತಿ(ರೋಗಿ 166), ಗದಗನ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ 80 ವರ್ಷದ ವೃದ್ಧೆ(ರೋಗಿ 177) ಇಂದು ಸಾವನ್ನಪ್ಪಿದ್ದಾರೆ.

    ಬಿಡುಗಡೆಯಾದವರು:
    ಆರಂಭದಲ್ಲಿ ಕೊರೊನಾ ಬಂದವರ ಪೈಕಿ ಹಲವು ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರೋಗಿ ಸಂಖ್ಯೆಗಳಾದ 1, 2, 3, 4, 5, 7, 8, 9, 10, 11, 12, 13, 14, 15, 20, 21, 23, 24, 26, 28, 29, 31, 34 -ಕೆ, 35, 36, 39-ಕೆ, 41-ಕೆ, 42, 63, 75 ಡಿಸ್ಚಾರ್ಜ್ ಆಗಿದ್ದಾರೆ.

    ಯಾವ ದಿನ ಎಷ್ಟು ಪ್ರಕರಣ?
    ಮಾ.8 – 1
    ಮಾ.25 – 50
    ಮಾ.31 – 100
    ಏ.5 – 150
    ಏ.9 – 197

    ಎಷ್ಟು ದಿನದಲ್ಲಿ ಎಷ್ಟು ಏರಿಕೆ?
    1-50 — 17 ದಿನ
    1-100 — 6 ದಿನ
    100-150 — 5 ದಿನ
    150-197 — 4 ದಿನ

  • ಟಿಕ್‍ಟಾಕ್ ವಿಡಿಯೋದಿಂದ 10 ಮಂದಿ ಆಸ್ಪತ್ರೆಗೆ ದಾಖಲು

    ಟಿಕ್‍ಟಾಕ್ ವಿಡಿಯೋದಿಂದ 10 ಮಂದಿ ಆಸ್ಪತ್ರೆಗೆ ದಾಖಲು

    ಹೈದರಾಬಾದ್: ಮಹಾಮಾರಿ ಕೊರೊನಾ ವೈರಸ್‍ಗೆ ಇನ್ನೂ ಸೂಕ್ತವಾದ ಔಷಧಿಯನ್ನು ಕಂಡುಹಿಡಿದಿಲ್ಲ. ಆದರೂ ಕೊರೊನಾದಿಂದ ನಿಮ್ಮನ್ನ ರಕ್ಷಣೆ ಮಾಡಿಕೊಳ್ಳಲು ‘ಮನೆಮದ್ದು’ ಎಂಬ ಟಿಕ್‍ಟಾಕ್ ವಿಡಿಯೋ ನೋಡಿ 10 ಮಂದಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಆಂಧ್ರ ಪ್ರದೇಶದ ಚಿತ್ತೂರಿ ಜಿಲ್ಲೆಯಲ್ಲಿ ನಡೆದಿದೆ.

    ಕೋವಿಡ್-19 ವೈರಸ್‍ಗೆ ನಿಖರವಾದ ಔಷಧಿ ಇನ್ನೂ ಪತ್ತೆಯಾಗಿಲ್ಲ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಬರುವ ಮನೆಮದ್ದು, ಔಷಧಿಗಳ ವದಂತಿಯನ್ನು ಯಾರೂ ನಂಬಬೇಡಿ ಎಂದು ರಾಜ್ಯ ಮತ್ತು ಕೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳು, ವೈದ್ಯರು ಸಾರ್ವಜನಿಕರ ಬಳಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೂ ಗ್ರಾಮೀಣ ಪ್ರದೇಶದ ಕೆಲ ಜನರು ಸೋಶಿಯಲ್ ಮೀಡಿಯಾದಲ್ಲಿ ಹೇಳುವ ಔಷಧಿಯನ್ನು ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಜಿಲ್ಲೆಯ ಅಲಿಪಲ್ಲಿ ಗ್ರಾಮದಲ್ಲಿ ಎರಡು ಕುಟುಂಬಗಳು ಟಿಕ್‍ಟಾಕ್ ವಿಡಿಯೋವೊಂದರಲ್ಲಿ ದತ್ತೂರಿ ಬೀಜ (ದತ್ತೂರಿ ಬೀಜ ಹಳ್ಳಿಗಳಲ್ಲಿ ಸುಲಭವಾಗಿ ಸಿಗುತ್ತದೆ) ದಿಂದ ಮಾಡಿದ ರಸವನ್ನು ಸೇವಿಸಿದರೆ ಕೊರೊನಾ ವೈರಸ್ ಬರದಂತೆ ತಡೆಯಬಹುದು ಎಂಬುದನ್ನು ನೋಡಿದೆ. ಅದರಂತೆಯೇ ವಿಡಿಯೋ ನಂಬಿಕೊಂಡು ದತ್ತೂರಿ ಬೀಜದಿಂದ ರಸವನ್ನು ತಯಾರಿಸಿದ್ದಾರೆ. ಬಳಿಕ ಅದನ್ನು ಎರಡು ಕುಟುಂಬದ 10 ಮಂದಿ ಕುಡಿದಿದ್ದಾರೆ ಎಂದು ಸಬ್ ಇನ್ಸ್‌ಪೆಕ್ಟರ್ ಮುನಿಸ್ವಾಮಿ ತಿಳಿಸಿದರು.

    ರಸವನ್ನು ಕುಡಿದ ನಂತರ ಎಲ್ಲರೂ ಹೊಟ್ಟೆನೋವಿನಿಂದ ನರಳಿದ್ದಾರೆ. ಅಲ್ಲದೇ ಪ್ರಜ್ಞಾಹೀನರಾಗಿ ಬಿದ್ದಿದ್ದಾರೆ. ತಕ್ಷಣ ನೆರೆಹೊರೆಯವರು ಅವರನ್ನು ನೋಡಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆದು ಮನೆಗೆ ಹೋಗಿದ್ದಾರೆ ಎಂದು ವರದಿಯಾಗಿದೆ.

    ಕೊರೊನಾ ವೈರಸ್‍ಗೆ ಲಸಿಕೆ ಇಲ್ಲ. ಇನ್ನೂ ಪ್ರಯೋಗಗಳು ನಡೆಯುತ್ತಿವೆ. ಸೋಶಿಯಲ್ ಮೀಡಿಯಾದಲ್ಲಿ ಬರುವ ಔಷಧಿಯ ವದಂತಿಯನ್ನು ನಂಬಬೇಡಿ. ಎಲ್ಲರೂ ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ. ಜೊತೆಗೆ ಆರೋಗ್ಯ ಇಲಾಖೆ ನೀಡುವ ಸಲಹೆ, ಸೂಚನೆಗಳನ್ನು ಅನುಸರಿಸಿ ಎಂದು ಆರೋಗ್ಯ ಅಧಿಕಾರಿ ಡಾ.ಎಂ.ಪಂಚಲಯ್ಯ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

  • ತನ್ನ ಪ್ರತಿ ಸೆಂಚುರಿಗೆ ಲಕ್ಷ ರೂ. ಸೇರಿಸಿ ದೇಣಿಗೆ ಕೊಟ್ಟ ಗವಾಸ್ಕರ್

    ತನ್ನ ಪ್ರತಿ ಸೆಂಚುರಿಗೆ ಲಕ್ಷ ರೂ. ಸೇರಿಸಿ ದೇಣಿಗೆ ಕೊಟ್ಟ ಗವಾಸ್ಕರ್

    ಮುಂಬೈ: ಟೀಂ ಇಂಡಿಯಾ ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ ದೇಶದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ 59 ಲಕ್ಷ ರೂ.ಗಳನ್ನು ದೇಣಿಗೆಯಾಗಿ ನೀಡಿದ್ದಾರೆ.

    ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್, ಸುರೇಶ್ ರೈನಾ, ಎಂ.ಎಸ್.ಧೋನಿ ಸೇರಿದಂತೆ ಅನೇಕ ಕ್ರಿಕೆಟಿಗರು, ಸ್ಟಾರ್ ಸಿನಿಮಾ ನಟರು ರೌಂಡ್ ಫಿಗರ್ ಮೊತ್ತವನ್ನು ಪಿಎಂ-ಕೇರ್ಸ್ ಫಂಡ್‍ಗೆ ದೇಣಿಗೆ ನೀಡಿದ್ದಾರೆ. ಆದರೆ ಸುನಿಲ್ ಗವಾಸ್ಕರ್ ಅವರು ಮಾತ್ರ ಏಕೆ 59 ಲಕ್ಷ ರೂ.ಗಳನ್ನ ನೀಡಿದ್ದರು ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆದಿತ್ತು. ಈ ಹಿನ್ನೆಲೆಯಲ್ಲಿ ಗವಾಸ್ಕರ್ ಏಕೆ 59 ಲಕ್ಷ ರೂ.ಗಳನ್ನು ನೀಡಿದ್ದಾರೆ ಎಂದು ಅವರ ಪುತ್ರ ರೋಹನ್ ಗವಾಸ್ಕರ್ ರಿವೀಲ್ ಮಾಡಿದ್ದಾರೆ.

    ಸುನಿಲ್ ಗವಾಸ್ಕರ್ ನೀಡಿರುವ 59 ಲಕ್ಷ ರೂ. ದೇಣಿಗೆಯಲ್ಲಿ 35 ಲಕ್ಷ ರೂ.ಗಳನ್ನು ಮಹಾರಾಷ್ಟ್ರ ಸಿಎಂ ಪರಿಹಾರ ನಿಧಿಗೆ ಹಾಗೂ ಉಳಿದ 24 ಲಕ್ಷ ರೂ.ಗಳನ್ನು ಪ್ರಧಾನಿಗಳ ನಿಧಿಗೆ ನೀಡಿದ್ದಾರೆ. ಈ ದೇಣಿಗೆ ಹಿಂದಿರುವ ಕಥೆಯನ್ನು ರಿವೀಲ್ ಮಾಡಿರುವ ರೋಹನ್ ಅವರು, ಭಾರತದ ಪರ 1971ರಿಂದ 1987ರವರೆಗೂ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದ ಗವಾಸ್ಕರ್ 35 ಶತಕ ಸಿಡಿಸಿದ್ದರು. ಅಲ್ಲದೇ ಮುಂಬೈ ಪರ ಆಡಿದ್ದ ಪಂದ್ಯಗಳಲ್ಲಿ 24 ಶತಕಗಳನ್ನು ಗವಾಸ್ಕರ್ ಸಿಡಿಸಿದ್ದರು. ಪರಿಣಾಮ ಈ ಶತಕಗಳ ಅನ್ವಯ ಗವಾಸ್ಕರ್ ದೇಣಿಗೆ ನೀಡಿದ್ದಾರೆ ಎಂದು ವಿವರಿಸಿದ್ದಾರೆ.

    ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಜೋಡಿ 3 ಕೋಟಿ ರೂ., ರೋಹಿತ್ ಶರ್ಮಾ 80 ಲಕ್ಷ ರೂ., ರೈನಾ 52 ಲಕ್ಷ ರೂ. ಸಚಿನ್ 50 ಲಕ್ಷ ರೂ., ರಹಾನೆ 10 ಲಕ್ಷ ರೂ.ಗಳನ್ನು ದೇಣಿಗೆ ನೀಡಿದ್ದಾರೆ. ಇತ್ತ ಚೇತೇಶ್ವರ ಪೂಜಾರ ಕೂಡ ದೇಣಿಗೆ ನೀಡಿದ್ದು, ಆದರೆ ಎಷ್ಟು ಮೊತ್ತವನ್ನು ನೀಡಿದ್ದಾರೆ ಎಂದು ಮಾತ್ರ ತಿಳಿಸಿಲ್ಲ.

    ಭಾರತದ ಪರ 124 ಟೆಸ್ಟ್ ಪಂದ್ಯಗಳನ್ನು ಆಡಿರುವ ಗವಾಸ್ಕರ್ 34 ಶತಕ ಸಿಡಿಸಿದ್ದಾರೆ. ಈ ವೇಳೆಗೆ ಟೆಸ್ಟ್ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ದಾಖಲೆಯನ್ನು ಗವಾಸ್ಕರ್ ನಿರ್ಮಿಸಿದ್ದರು. ಬರೋಬ್ಬರಿ 29 ವರ್ಷಗಳ ಬಳಿಕ ಸಚಿನ್ 2005 ರಲ್ಲಿ ಈ ದಾಖಲೆಯನ್ನು ಬ್ರೇಕ್ ಮಾಡಿದ್ದರು. ಉಳಿದಂತೆ ಗವಾಸ್ಕರ್ ಆಡಿರುವ 108 ಏಕದಿನ ಪಂದ್ಯಗಳಲ್ಲಿ 1 ಶತಕ ಗಳಿಸಿದ್ದಾರೆ.