ಬೆಂಗಳೂರು: ಹೆಮ್ಮಾರಿ ಕೊರೊನಾ ವೈರಸ್ ಅನ್ನು ಮಣಿಸಿ ಯುವಕನಿಗೆ ಮರುಜನ್ಮ ನೀಡಿದ್ದಷ್ಟೇ ಅಲ್ಲದೆ, ವೈದ್ಯರು, ನರ್ಸ್‍ಗಳು ಚಪ್ಪಾಳೆ ಮೂಲಕ ಆತನನ್ನು ಆಸ್ಪತ್ರೆಯಿಂದ ಬೀಳ್ಕೊಟ್ಟಿದ್ದಾರೆ.
ಹೌದು. ಇಂತಹ ಹೃದಯಸ್ಪರ್ಶಿ ಸನ್ನಿವೇಶ ಕಂಡು ಬಂದಿದ್ದು ನಗರದ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ. ಕೊರೊನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖವಾದ ಯುವಕ ಶುಕ್ರವಾರ ಡಿಸ್ಚಾರ್ಜ್ ಆಗಿದ್ದಾರೆ. ಯುವಕ ಆಸ್ಪತ್ರೆಯಿಂದ ಮನೆಗೆ ಹೊರಡುವ ಮುನ್ನ ಆಸ್ಪತ್ರೆಯ ವೈದ್ಯರು, ನರ್ಸ್ ಹಾಗೂ ವೈದ್ಯಕೀಯ ಸಿಬ್ಬಂದಿ ಸಾಮಾಜಿಕ ಅಂತರ ಕಾಯ್ದುಕೊಂಡು ಚಪ್ಪಾಳೆ ತಟ್ಟಿ ಕಳುಹಿಸಿಕೊಟ್ಟಿದ್ದಾರೆ. ಇದನ್ನೂ ಓದಿ: ಕೊರೊನಾ ಸೋಂಕಿತ ರಾಜ್ಯದ 10 ತಿಂಗಳ ಮಗು ಗುಣಮುಖ- ತಾಯಿ, ಅಜ್ಜಿಗೂ ನೆಗೆಟಿವ್
ವಿಶೇಷವೆಂದರೆ ಆಸ್ಪತ್ರೆಯ ಆವರಣದಲ್ಲಿನ ಹೂಗಳನ್ನು ಬಳಸಿ ಪುಷ್ಪಗುಚ್ಚ ಮಾಡಿ ಯುವಕನಿಗೆ ನೀಡಿದ್ದಾರೆ. ಚಿಕಿತ್ಸೆ ನೀಡಿ ಮರುಜನ್ಮ ನೀಡಿದ ವೈದ್ಯರು, ವೈದ್ಯಕೀಯ ಸಿಬ್ಬಂದಿ ಚಪ್ಪಾಳೆ ತಟ್ಟಿ ಬೀಳ್ಕೊಡುವುದನ್ನು ಕಂಡು ಯುವಕ ಭಾವುಕನಾಗಿದ್ದ. ಈ ವೇಳೆ ವೈದ್ಯರ ಕಾಲುಗಳಿಗೆ ನಮಸ್ಕರಿಸಿ ಅಲ್ಲಿಂದ ಮನೆಗೆ ತೆರಳಿದ್ದಾನೆ.
ರಾಜ್ಯದಲ್ಲಿ ಶನಿವಾರ ಕೂಡ 8 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 215ಕ್ಕೆ ಏರಿಕೆಯಾಗಿದೆ. ನಂಜನಗೂಡು ನೌಕರನಿಂದ ಮತ್ತೆ ಐವರಿಗೆ ಕೊರೊನಾ ಹಬ್ಬಿದೆ. ಬೆಂಗಳೂರಲ್ಲಿ ಡಾಕ್ಟರ್ ಹಾಗೂ 10 ವರ್ಷದ ಬಾಲಕನಿಗೆ ಕೊರೊನಾ ಬಂದಿರುವುದು ಎಲ್ಲರನ್ನು ಬೆಚ್ಚಿಬೀಳಿಸಿದೆ. ಈ ಮೂಲಕ ಬೆಂಗಳೂರಲ್ಲಿ 73 ಪಾಸಿಟಿವ್ ಕೇಸ್ ದಾಖಲಾಗಿದೆ. ಇದರಲ್ಲಿ ಪುರುಷರ ಸಂಖ್ಯೆ 47 ಇದ್ದರೆ ಮಹಿಳೆಯರ ಸಂಖ್ಯೆ 25 ಇದೆ. ಬೀದರ್ ನಲ್ಲಿ ದೆಹಲಿ ಜಮಾತ್ ಹೋಗಿದ್ದ ವ್ಯಕ್ತಿಯ ಅತ್ತಿಗೆಗೆ ಪಾಸಿಟಿವ್ ಬಂದಿದೆ.
ಆಮ್‌ಸ್ಟರ್‌ಡ್ಯಾಮ್: ನೆದರ್ಲ್ಯಾಂಡ್‍ನಲ್ಲಿ 107 ವರ್ಷದ ವೃದ್ಧೆಯೊಬ್ಬರು ಕೊರೊನಾ ವೈರಸ್ ವಿರುದ್ಧ ಹೋರಾಡಿ ಗೆದ್ದಿದ್ದಾರೆ.
ಕೊರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ನೆದರ್ಲ್ಯಾಂಡ್‍ನ ಕಾರ್ನೆಲಿಯಾ ರಾಸ್ (107) ಅವರು ಗುಣಮುಖರಾಗಿದ್ದು, ಸದ್ಯ ತಮ್ಮ ಮನೆಯಲ್ಲಿ ಆರಾಮವಾಗಿ ತಿರುಗಾಡುತ್ತಿದ್ದಾರೆ. ಕಾರ್ನೆಲಿಯಾ ರಾಸ್ ಮೊಣಕಾಲೂರಿ ದೇವರಿಗೆ ಹಾಗೂ ವೈದ್ಯರಿಗೆ ಧನ್ಯವಾದ ತಿಳಿಸಿದ್ದಾರೆ.
ತನ್ನದೇ ದೇಶದ ದ್ವೀಪವೊಂದಕ್ಕೆ ಭೇಟಿ ನೀಡಿದಾಗ ಕಾರ್ನೆಲಿಯಾ ರಾಸ್ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಅವರೊಟ್ಟಿಗೆ 40 ಜನ ಪ್ರವಾಸ ಕೈಗೊಂಡಿದ್ದರು. ಈ ಪೈಕಿ 12 ಮಂದಿ ಸಾವನ್ನಪ್ಪಿದ್ದಾರೆ. ಆದರೆ ಕಾರ್ನೆಲಿಯಾ ಅವರು ಯಾವುದಕ್ಕೂ ಹೆದರದೇ ಧೈರ್ಯವಾಗಿ ಕೊರೊನಾ ವಿರುದ್ಧ ಹೋರಾಡಿ ಸಾವು ಜಯಿಸಿದ್ದಾರೆ.
ಚಿಕಿತ್ಸೆ ನೀಡಿದ ವೈದ್ಯರು ಕಾರ್ನೆಲಿಯಾ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ತಿಳಿಸಿದ್ದಾರೆ. ಇದೇ ವಿಚಾರವಾಗಿ ಮಾತನಾಡಿರುವ ವೃದ್ಧೆಯ ಸೋದರ ಸೊಸೆ ಮೇಹ್ಯೂ ಡಿ ಗ್ರೂಟ್ ಅವರು, ಕಾರ್ನೆಲಿಯಾ ರಾಸ್ ಅವರು ಕೊರೊನಾ ವಿರುದ್ಧ ಹೋರಾಡಿ ಗೆಲ್ಲುತ್ತಾರೆ ಎನ್ನುವ ವಿಶ್ವಾಸ ನಮಗೆ ಇರಲಿಲ್ಲ. ಅವರಿಗೆ ಮೊದಲು ಜ್ವರ ಮತ್ತು ಕೆಮ್ಮಿನ ಗುಣಲಕ್ಷಣಗಳು ಕಂಡು ಬಂದಿತ್ತು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗ ಚಿಕಿತ್ಸೆಯ ಸಮಯದಲ್ಲಿ ಅವರು ಸಾಕಷ್ಟು ಶಾಂತವಾಗಿದ್ದರು. ಈಗ ಅವರು ಆರೋಗ್ಯವಾಗಿದ್ದು, ಯಾವುದೇ ಔಷಧಿಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ತಿಳಿಸಿದ್ದಾರೆ.
ನ್ಯೂಜಿಲೆಂಡ್ ಪತ್ರಿಕೆಯೊಂದರ ವರದಿಯ ಪ್ರಕಾರ, 107ನೇ ಹುಟ್ಟುಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಕಾರ್ನೆಲಿಯಾ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಹೀಗಾಗಿ ಅವರು ಕ್ವಾರಂಟೈನ್‍ನಲ್ಲಿ ಒಂಟಿಯಾಗಿ ಬರ್ತ್ ಡೇ ಆಚರಿಸಿಕೊಂಡಿದ್ದರು.
ಕಾರ್ನೆಲಿಯಾ ಅವರಿಗಿಂತ ಮೊದಲು 104 ವರ್ಷದ ಅಮೆರಿಕದ ಲ್ಯಾಪೀಸ್ ಅವರನ್ನು ಕೊರೊನಾ ವಿರುದ್ಧ ಹೋರಾಡಿ ಗೆದ್ದ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂದು ಘೋಷಿಸಲಾಗಿತ್ತು. ಅವರು 1918ರಲ್ಲಿ ಎರಡನೇ ಮಹಾಯುದ್ಧ ಮತ್ತು ಸ್ಪ್ಯಾನಿಷ್ ಜ್ವರದಲ್ಲಿಯೂ ಹೋರಾಡಿ ಬದುಕುಳಿದಿದ್ದರು. ಸ್ಪ್ಯಾನಿಷ್ ಜ್ವರವು ವಿಶ್ವಾದ್ಯಂತ ಸುಮಾರು 5 ಕೋಟಿ ಜನರನ್ನು ಬಲಿ ಪಡೆದಿತ್ತು. 1916ರಲ್ಲಿ ಜನಿಸಿದ ಲ್ಯಾಪೀಸ್ ಅವರಿಗೆ 2020ರ ಮಾರ್ಚ್ ನಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿತ್ತು.
ಮುಂಬೈ: ದೇಶದಲ್ಲಿ ಅತಿ ಹೆಚ್ಚು ಕೊರೊನಾ ಪೀಡಿತರು ಇರುವ ಮಹಾರಾಷ್ಟ್ರಕ್ಕೆ ಧಾರಾವಿ ಸ್ಲಂನಲ್ಲಿ ಕೊರೊನಾ ನಿಯಂತ್ರಿಸುವುದು ದೊಡ್ಡ ತಲೆನೋವಾಗಿದೆ.
ಹೌದು. ಶನಿವಾರ 80 ವರ್ಷದ ವ್ಯಕ್ತಿ ಮೃತಪಟ್ಟಿದ್ದು ಇಲ್ಲಿಯವರೆಗೆ ಈ ಸ್ಲಂನಲ್ಲಿ ಒಟ್ಟು 4 ಮಂದಿ ಸಾವನ್ನಪ್ಪಿದ್ದಾರೆ. ಶುಕ್ರವಾರ 11 ಮಂದಿಗೆ ಪಾಸಿಟಿವ್ ಬಂದಿದ್ದು, ಒಟ್ಟು 28 ಜನರಿಗೆ ಸೋಂಕು ಬಂದಿದೆ.
ಸೋಂಕು ಪೀಡಿತರ ಪೈಕಿ ಹಲವು ಮಂದಿ ಪ್ರಯಾಣದ ಮಾಹಿತಿಯನ್ನು ಸರಿಯಾಗಿ ನೀಡುತ್ತಿಲ್ಲ. ಅಷ್ಟೇ ಅಲ್ಲದೇ ನಿವಾಸಿಗಳು ಲಾಕ್‍ಡೌನ್ ನಿಯಮವನ್ನು ಸರಿಯಾಗಿ ಪಾಲನೆ ಮಾಡದೇ ಇರುವುದು ಸರ್ಕಾರಕ್ಕೆ ದೊಡ್ಡ ಸಮಸ್ಯೆ ತಂದಿದೆ.
ಯಾಕೆ ಸಮಸ್ಯೆ?
ಏಷ್ಯಾದ ಅತಿ ದೊಡ್ಡ ಸ್ಲಂ ಎನಿಸಿಕೊಂಡಿರುವ ಧಾರಾವಿಯಲ್ಲಿ ಸುಮಾರು 7 ಲಕ್ಷಕ್ಕೂ ಅಧಿಕ ಮಂದಿ ವಾಸವಾಗಿದ್ದಾರೆ. ಮಹಾರಾಷ್ಟ್ರದ ಒಟ್ಟು ಜನ ಸಂಖ್ಯೆ 11.24 ಕೋಟಿ ಇದ್ದರೆ ಜನಸಾಂದ್ರತೆ(ಪ್ರತಿ ಚದರ ಕಿ.ಮೀ.ಗೆ ಇರುವ ಜನಸಂಖ್ಯೆ) 365 ಇದೆ. ಗ್ರೇಟರ್ ಮುಂಬೈಯ ಒಟ್ಟು ಜನಸಂಖ್ಯೆ 1.24 ಕೋಟಿ ಇದ್ದರೆ ಜನ ಸಾಂದ್ರತೆ 28,426 ಇದೆ.
ಸದ್ಯ ಭಾರತದ ಕೊರೊನಾ ಹಾಟ್‍ಸ್ಪಾಟ್ ಗಳಲ್ಲಿ ಒಂದಾದ ಧಾರಾವಿ ಸ್ಲಂನಲ್ಲಿ ಸುಮಾರು 7 ಲಕ್ಷಕ್ಕೂ ಹೆಚ್ಚು ಜನ ವಾಸಿಸುತ್ತಿದ್ದರೆ ಜನ ಸಾಂದ್ರತೆ 3,33,333 ಇದೆ. ಗುಂಪು ಸೇರದೇ ಅಂತರ ಕಾಯ್ದುಕೊಳ್ಳುವುದೆ ಕೊರೊನಾ ನಿವಾರಣೆಗೆ ಇರುವ ಏಕೈಕ ಕ್ರಮ. ಹೀಗಿರುವಾಗ ಧಾರಾವಿ ಸ್ಲಂನಲ್ಲಿ ಇದು ಯಶಸ್ವಿಯಾಗುತ್ತಾ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.
ಮುಂದಿನ ಎರಡು ವಾರದಲ್ಲಿ ಧಾರಾವಿಯ ಸುಮಾರು 7 ಲಕ್ಷ ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಮುಂಬೈ ಮಹಾನಗರ ಪಾಲಿಕೆ ತಿಳಿಸಿದೆ. ಮಹಾರಾಷ್ಟ್ರದಲ್ಲಿ ಒಟ್ಟು 1,666 ಮಂದಿಗೆ ಕೊರೊನಾ ಬಂದಿದ್ದು, 110 ಮಂದಿ ಮೃತಪಟ್ಟಿದ್ದಾರೆ. 1,368 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 188 ಮಂದಿ ಗುಣಮುಖರಾಗಿದ್ದಾರೆ.
– ರಾಜ್ಯದಲ್ಲಿ 215 ಜನರಿಗೆ ಕೊರೊನಾ- 39 ಜನ ಡಿಸ್ಚಾರ್ಜ್
– ಬೆಂಗ್ಳೂರಿನಲ್ಲಿ ಇಂದಿನಿಂದ ಒಂದು ತಿಂಗ್ಳು ಕಠಿಣ ಕ್ರಮ
ಬೆಂಗಳೂರು: ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ ಈವರೆಗೂ 1.80 ಕೋಟಿ ರೂ. ಜಮೆಯಾಗಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 215ಕ್ಕೆ ಏರಿಕೆ ಕಂಡಿದ್ದು, ಈ ಪೈಕಿ ನಾಲ್ವರನ್ನು ಐಸಿಯುನಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ರಾಜ್ಯದಲ್ಲಿ ಈವರೆಗೂ 39 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಜೊತೆಗೆ ಒಟ್ಟು 8,560 ಜನರ ಥ್ರೋಟ್ ಸ್ವ್ಯಾಬ್ ಹಾಗೂ ರಕ್ತದ ಮಾದರಿಯನ್ನು ತೆಗೆದುಕೊಳ್ಳಲಾಗಿದೆ. ಅವರ ರಿಪೋರ್ಟ್ ಇನ್ನೂ ಬಂದಿಲ್ಲ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಕಟ್ಟುನಿಟ್ಟಿನ ಕ್ರಮದಿಂದಾಗಿ ಕೊರೊನಾ ಹರಡುವುದರ ಮೇಲೆ ಒಂದಿಷ್ಟು ಕಡಿವಾಣ ಬಿದ್ದಿದೆ ಅಂತ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳು ಹೇಳಿದ್ದಾರೆ. ಮೋದಿ ಅವರು ಮೀನುಗಾರಿಕೆಗೆ ವಿನಾಯಿತಿ ಕೊಡಲು ಸೂಚಿಸಿದ್ದಾರೆ. ಇದರಿಂದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದ ಮೀನುಗಾರರಿಗೆ ಅನುಕೂಲವಾಗಿದೆ ಎಂದರು.
ಲಾಕ್‍ಡೌನ್ ಸ್ವರೂಪವನ್ನು ಪ್ರಧಾನಿ ಮೋದಿ ಅವರೇ ಭಾನುವಾರದೊಳಗೆ ಘೋಷಿಸುತ್ತಾರೆ. ಅವರು ಆರೋಗ್ಯ ಸೇತು ಮೊಬೈಲ್ ಆ್ಯಪ್ ಅನ್ನು ಹೆಚ್ಚೆಚ್ಚು ಜನ ಉಪಯೋಗಿಸುವಂತೆ ಮಾಡಲು ಎಲ್ಲರಿಗೂ ಕರೆ ನೀಡಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಈವರೆಗೆ 214 #ಕೋವಿಡ್_19 ದೃಢಪಟ್ಟಿವೆ. ಇದರಲ್ಲಿ ಆರು ಮಂದಿ ಮೃತಪಟ್ಟಿದ್ದು, 37 ಮಂದಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.
ಬೆಂಗಳೂರಿನಲ್ಲಿ ಇಂದಿನಿಂದ ಒಂದು ತಿಂಗಳ ಕಾಲ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಜೊತೆಗೆ 2 ಪ್ರದೇಶವನ್ನು ಈಗಾಗಲೇ ಸೀಲ್‍ಡೌನ್ ಮಾಡಲಾಗಿದೆ. ವಾಹನ ದಟ್ಟಣೆ ಇಂದು ಕೇವಲ ಶೇ.2 ಇತ್ತು. ಆದರೆ ಪಾಸ್ ಬೇಕು ಅಂತ 44.46 ಲಕ್ಷ ಜನರು ಮನವಿ ಇಟ್ಟಿದ್ದಾರೆ. ಈವರೆಗೂ ಒಂದು ಲಕ್ಷದ 75 ಸಾವಿರ ಪಾಸ್ ವಿತರಣೆ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಬೆಂಗಳೂರಿನ 273 ಹೊಯ್ಸಳ ವಾಹನವನ್ನು ಸಾಮಾನ್ಯ ಜನರ ತುರ್ತು ಸ್ಪಂದನೆಗೆ ನೀಡಲಾಗಿದೆ. ಈ ಮೂಲಕ ವಾಹನಗಳನ್ನು ಆಸ್ಪತ್ರೆಗೆ ಹೋಗಲು, ತುರ್ತು ಸೇವೆಗೆ ಒದಗಿಸಲು ಮೀಸರಿಸಲಾಗಿದೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದವರಿಗೆ ಚಿಕಿತ್ಸೆ ಕೊಟ್ಟ ವೈದ್ಯರಿಗೆ ಕೊರೊನಾ ಬಂದಿದೆ ಎಂದರು.
ಮುಂದಿನ ದಿನಗಳಲ್ಲಿ ಲಾಕ್‍ಡೌನ್ ಡಿಫರೆಂಟ್ ಆಗಿರುತ್ತೆ. ಈಗಾಗಲೇ ಭವಿಷ್ಯವನ್ನು ನಿರ್ಧರಿಸಲಿದೆ. ಕೋವಿಡ್-19 ಹಾಗೂ ನಾನ್ ಕೋವಿಡ್ ಆಸ್ಪತ್ರೆ ಅಂತ ವ್ಯವಸ್ಥೆ ಮಾಡಲಾಗಿದೆ. ಒಟ್ಟು 11,036 ಬೆಡ್ ಹಾಗೂ 1,036 ಐಸಿಯು ಸಿದ್ಧವಾಗಿವೆ ಎಂದು ಮಾಹಿತಿ ನೀಡಿದರು.
ದೆಹಲಿಯ ತಬ್ಲಿಘಿ ಜಮಾತ್ ಸಭೆಯಲ್ಲಿ ರಾಜ್ಯದ 1,332 ಜನರು ಭಾಗವಹಿಸಿದ್ದರು ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿತ್ತು. ಈ ಪೈಕಿ 1,100 ಮಂದಿಗೆ ಟೆಸ್ಟ್ ಮಾಡಲಾಗಿದ್ದು, ಅವರಲ್ಲಿ 40 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಕೇಂದ್ರ ಸರ್ಕಾರವು ಸದ್ಯ ಆರ್.ಎನ್.ಎ ಟೆಸ್ಟ್ ಕಿಟ್ ನೀಡಿದೆ. ರ್ಯಾಪಿಡ್ ಟೆಸ್ಟ್ ಕಿಟ್ ಏಪ್ರಿಲ್ 13ರಂದು ಬರಲಿದೆ ಎಂದು ತಿಳಿಸಿದರು.
ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,035 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 40 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಈವರೆಗೆ ಒಟ್ಟು 239 ಜನ ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ 7,447ಕ್ಕೆ ಏರಿದೆ. ಜೊತೆಗೆ 642 ಜನರು ಚೇತರಿಸಿಕೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ದೆಹಲಿಯಲ್ಲಿ ಇಂದು ಸಂಜೆ 4 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್, ಕೋವಿಡ್-19 ವಿರುದ್ಧದ ಹೋರಾಟಕ್ಕೆ ಭಾರತದ ಪೂರ್ವಭಾವಿ ತಯಾರಿ ನಡೆಸಿತ್ತು. ನಾವು ಶ್ರೇಣೀಕೃತ ವಿಧಾನವನ್ನು ಅನುಸರಿಸಿದ್ದೇವೆ. ಪರಿಣಾಮ ದೇಶದಲ್ಲಿ ಕೋವಿಡ್-19 ಮೀಸಲಾದ 586 ಆಸ್ಪತ್ರೆಗಳು ಮತ್ತು 1 ಲಕ್ಷಕ್ಕೂ ಹೆಚ್ಚು ಪ್ರತ್ಯೇಕ ಹಾಸಿಗೆಗಳ ವ್ಯವಸ್ಥೆ ಆಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಆರೋಗ್ಯಕರ ಭಾರತಕ್ಕಾಗಿ ಲಾಕ್‍ಡೌನ್ ವಿಸ್ತರಣೆ ಅನಿವಾರ್ಯ: ಮೋದಿ
India’s response to COVID19 has been proactive. We have followed a graded approach. There are 586 COVID19 dedicated hospitals and more than 1 lakh isolation beds in the country: Lav Agrawal, Joint Secy, Health Ministry pic.twitter.com/oFqgNJVKFu
ಕೊರೊನಾ ವಿರುದ್ಧ ಹೋರಾಡಲು ಲಾಕ್‍ಡೌನ್ ಮತ್ತು ಪೂರಕ ಕ್ರಮಗಳು ಬಹು ಮುಖ್ಯ ಪಾತ್ರವಹಿಸಿದವು. ನಾವು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಈ ಸಮಯದಲ್ಲಿ 2 ಲಕ್ಷ ಜನರಿಗೆ ಕೊರೊನಾ ಸೋಂಕು ತಗುಲುವ ಸಾಧ್ಯತೆ ಇತ್ತು ಎಂದು ಅಗರ್ವಾಲ್ ತಿಳಿಸಿದರು. ಇದನ್ನೂ ಓದಿ: ಲಾಕ್‍ಡೌನ್ ಪಾಲಿಸದಿದ್ರೆ ಸೀಲ್‍ಡೌನ್: ಸಿಎಂ ಎಚ್ಚರಿಕೆ
ಗೃಹ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಪುಣ್ಯ ಸಲೀಲಾ ಶ್ರೀವಾಸ್ತವ ಮಾತನಾಡಿ, ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಆಸ್ಪತ್ರೆಗಳಲ್ಲಿ ಅಥವಾ ಕೆಲಸ ಮಾಡುತ್ತಿರುವ ಸ್ಥಳಗಳಲ್ಲಿ ಪೊಲೀಸ್ ಭದ್ರತೆ ಒದಗಿಸುವಂತೆ ಗೃಹ ಸಚಿವಾಲಯ ಇಂದು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ತಿಳಿಸಿದೆ. ಜೊತೆಗೆ ಅಗತ್ಯ ಸೌಲಭ್ಯಗಳನ್ನು ಸಕಾಲದಲ್ಲಿ ಒದಗಿರುವಂತೆ ಸೂಚಿಸಿದೆ ಎಂದು ಹೇಳಿದರು.
ಐಸಿಎಂಆರ್ ಹಿರಿಯ ಅಧಿಕಾರಿ ಆರ್ ಗಂಗಖೇಡ್ಕರ್ ಮಾತನಾಡಿ, ಈಗ ನೀಡಿರುವ ಅವಧಿ ಸಾಕಾಗದಿದ್ದರೆ, ಒಂದು ವೇಳೆ ಒತ್ತಡ ಹೇರಿದರೆ ಔಷಧಿಯನ್ನು ಕಂಡು ಹಿಡಿಯುವುದು ತಪ್ಪಾಗಬಹುದು. ಮಲೇರಿಯಾಗೆ ನೀಡಲಾಗುತ್ತಿರುವ ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಕೆಯು ರೋಗನಿರೋಧಕತೆಯಂತೆ ಕೆಲಸ ಮಾಡುತ್ತದೆ. ಕೋವಿಡ್-19 ರೋಗಿಗೆ ಔಷಧಿ ಬಳಸುವ ಮುನ್ನ ಪ್ರಯೋಗ ಮಾಡಬೇಕಾಗುತ್ತದೆ. ಅಲ್ಲಿಯವರೆಗೂ ನಾವು ಯಾವುದೇ ಔಷಧಿಯನ್ನು ಸಾರ್ವಜನಿಕರಿಗೆ ಶಿಫಾರಸು ಮಾಡುವುದಿಲ್ಲ ಎಂದು ತಿಳಿಸಿದರು.
If duration of exposure is not enough then findings can be wrong….Use of HCQ is as prophylaxis not as treatment. We've never recommended it to general public, R Gangakhedkar, ICMR on ANI’s question on efficacy of HCQ on frontline health workers dealing with COVID19 patients pic.twitter.com/nfO16Y1q3B
– ಒಗ್ಗಟ್ಟಿನಿಂದ ಹೋರಾಡಿದ್ರೆ ಮಾತ್ರ ಯಶಸ್ಸು – ಸಿಎಂಗಳ ಜೊತೆ 4 ಗಂಟೆ ಚರ್ಚೆ – ಪ್ರತಿಯೊಬ್ಬರ ಜೀವವೂ ಮುಖ್ಯ
ನವದೆಹಲಿ: ನಾವು ಒಗ್ಗಟ್ಟಿನಿಂದ ಹೋರಾಡಿದರೆ ಮಾತ್ರವೇ ಯಶಸ್ವಿಯಾಗಲು ಸಾಧ್ಯ. ದೇಶದಲ್ಲಿ ಕೋವಿಡ್ ಪ್ರಕರಣಗಳ ಬೆಳವಣಿಗೆಯ ದರ ಲಾಕ್ ಡೌನ್ ನಂತರ ಶೇ.28 ರಿಂದ ಶೇ.14 ಕ್ಕೆ ಇಳಿದಿರುವುದು ಸಮಾಧಾನದ ಸಂಗತಿ. ರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡುವ ಕುರಿತು ಹೆಚ್ಚು ಗಮನ ಹರಿಸಬೇಕಾಗಿದೆ. ಭಾರತ ಸರ್ಕಾರವು 142 ಹಾಟ್ ಸ್ಪಾಟ್ ಗಳನ್ನು ಗುರುತಿಸಲಾಗಿದೆ. ಈ ಹಾಟ್ ಸ್ಪಾಟ್ ಗಳಲ್ಲಿ ತೀವ್ರ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಎಲ್ಲ ಮುಖ್ಯಮಂತ್ರಿಗಳಿಗೆ ಸೂಚಿಸಿದ್ದಾರೆ.
ಇಂದು ಲಾಕ್ ಡೌನ್ ವಿಸ್ತರಣೆ ಸಂಬಂಧ ಎಲ್ಲ ರಾಜ್ಯಗಳ ಸಿಎಂ ಜೊತೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸುಮಾರು ನಾಲ್ಕು ಗಂಟೆಗಳ ಕಾಲ ಸುಧೀರ್ಘ ಚರ್ಚೆ ನಡೆಸಿದರು. ಸಭೆ ಬಳಿಕ ಏ.30ರವರೆಗೆ ಲಾಕ್‍ಡೌನ್ ವಿಸ್ತರಣೆ ಮಾಡುವುದಾಗಿ ಅವರು ಸಿಎಂಗಳಿಗೆ ತಿಳಿಸಿದರು.
ಸಭೆಯಲ್ಲಿ ಭಾಗಿಯಾಗಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ತೆಲಂಗಾಣ ಸಿಎಂ ಕೆಸಿಆರ್, ತಮಿಳುನಾಡು ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಸೇರಿದಂತೆ 15ಕ್ಕೂ ಹೆಚ್ಚು ರಾಜ್ಯಗಳ ಸಿಎಂ ಲಾಕ್ ಡೌನ್ ವಿಸ್ತರಿಸುವಂತೆ ಮನವಿ ಮಾಡಿದರು.
ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾನ್ ಮತ್ತು ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಎಲ್ಲ ನಗರಗಳಿಗೂ ಲಾಕ್ ಡೌನ್ ಮುಂದುವರಿಕೆ ಬೇಡ ಹಾಟ್ ಸ್ಪಾಟ್ ಪ್ರದೇಶದಲ್ಲಿ ಮಾತ್ರ ಮುಂದುವರಿಸಿ ಎಂದು ಸಲಹೆ ನೀಡಿದರು. ಈ ಮಧ್ಯೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಲಾಕ್ ಡೌನ್ ವಿಸ್ತರಿಸಿ ಆದರೆ ಕೆಲವು ಪ್ರಮುಖ ಉತ್ಪಾದನಾ ವರ್ಗಗಳಿಗೆ ಅವಕಾಶ ನೀಡಬೇಕು ಮತ್ತು ಸಣ್ಣಪುಟ್ಟ ಉದ್ಯಮಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡರು.
ಎಲ್ಲ ಅಭಿಪ್ರಾಯ ಸಂಗ್ರಹಿಸಿದ ಮೋದಿ ಸಭೆ ಕೊನೆಯಲ್ಲಿ ಮಾತನಾಡಿ, ನಾನು ರಾಷ್ಟ್ರಕ್ಕೆ ಹಿಂದೆ ಸಂದೇಶ ಕಳುಹಿಸಿದಾಗ ಪ್ರತಿಯೊಬ್ಬರ ಜೀವವೂ ಮುಖ್ಯ ಎಂದಿದೆ. ಪ್ರತಿಯೊಬ್ಬ ನಾಗರಿಕನ ಜೀವವನ್ನು ಉಳಿಸಲು, ಲಾಕ್‍ಡೌನ್ ಮತ್ತು ಸಾಮಾಜಿಕ ದೂರವನ್ನು ಅನುಸರಿಸುವುದು ಬಹಳ ಅಗತ್ಯ. ನಾವೆಲ್ಲರೂ ನಮ್ಮ ದೇಶವಾಸಿಗಳ ಪ್ರಾಣ ಉಳಿಸಲು ಪ್ರಯತ್ನಿಸುತ್ತಿದ್ದೇವೆ. ದೇಶದ ಹೆಚ್ಚಿನ ಜನರು ಇದನ್ನು ಅರ್ಥಮಾಡಿಕೊಂಡು ಮನೆಗಳಲ್ಲಿ ವಾಸಿಸುತ್ತಿದ್ದಾರೆ ಮತ್ತು ತಮ್ಮ ಕರ್ತವ್ಯಗಳನ್ನು ಮನೆಯಲ್ಲೇ ನಿರ್ವಹಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ದೇಶದಲ್ಲಿ ಕೋವಿಡ್ 19 ಪ್ರಕರಣಗಳು ಹೆಚ್ಚುತ್ತಿರುವ ಕುರಿತು ಹಾಗೂ ಸಮುದಾಯದಲ್ಲಿ ಹರಡುವ ಸಾಧ್ಯತೆಗಳ ಕುರಿತು ಕಳವಳ ವ್ಯಕ್ತಪಡಿಸಿದರು. ಹಾಟ್ ಸ್ಪಾಟ್ ಗಳನ್ನು ಗುರುತಿಸಿ, ಸೀಲ್ ಡೌನ್ ಮಾಡುವ ಮೂಲಕ ಹಾಗೂ ಇತರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ರಾಜ್ಯಗಳು ಮಾಡುತ್ತಿರುವ ನಿಯಂತ್ರಣದ ಪ್ರಯತ್ನಗಳನ್ನು ಪ್ರಧಾನಿ ಶ್ಲಾಘಿಸಿದರು.
PM has taken correct decision to extend lockdown. Today, India’s position is better than many developed countries because we started lockdown early. If it is stopped now, all gains would be lost. To consolidate, it is imp to extend it
ಈ ವರೆಗೆ 2.84 ಲಕ್ಷ ಪಿಪಿಇ ಕಿಟ್ ಗಳನ್ನು ಪೂರೈಸಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೂರೈಸಲಾಗುವುದು. ಪ್ರತಿ ಎರಡು ದಿನಗಳಿಗೊಮ್ಮೆ 2 ಲಕ್ಷ ಮಾಸ್ಕ್ ಗಳನ್ನು ಒದಗಿಸಲು ಕ್ರಮ ವಹಿಸಲಾಗುತ್ತಿದೆ. ಪರೀಕ್ಷಾ ಪ್ರಯೋಗಾಲಯಗಳ ಸಂಖ್ಯೆ 220 ಕ್ಕೆ ಹೆಚ್ಚಿಸಲಾಗಿದೆ. ಪ್ರಸ್ತುತ ದಿನಕ್ಕೆ 15,000 ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಏಪ್ರಿಲ್ 30ರ ವೇಳೆಗೆ ಪರೀಕ್ಷಾ ಪ್ರಯೋಗಾಲಯಗಳ ಸಂಖ್ಯೆಯನ್ನು 300 ಕ್ಕೆ ಹೆಚ್ಚಿಸಲಾಗುವುದು. ಮೇ31ರ ವೇಳೆಗೆ ಪ್ರತಿ ದಿನ 1 ಲಕ್ಷ ಪರೀಕ್ಷೆಗಳನ್ನು ನಡೆಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಪರೀಕ್ಷಾ ಸೌಲಭ್ಯ ಹೆಚ್ಚಿಸುವ ನಿಟ್ಟಿನಲ್ಲಿ ಐಸಿಎಂಆರ್ ಗೆ ಅರ್ಜಿ ಸಲ್ಲಿಸುವಂತೆ ಖಾಸಗಿ ಪ್ರಯೋಗಾಲಯಗಳು ಮತ್ತು ವೈದ್ಯಕೀಯ ಕಾಲೇಜುಗಳಿಗೆ ಸಲಹೆ ನೀಡುವಂತೆ ಮೋದಿ ಸೂಚಿಸಿದರು.
ನಗರಗಳಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರನ್ನು ಹಳ್ಳಿಯ ಜನರು ಸ್ವೀಕರಿಸದ ಕಾರಣ ಹಳ್ಳಿಗಳಿಗೆ ಕಳುಹಿಸದಂತೆ ಸಲಹೆ ನೀಡಿದರು. ಮೀನುಗಾರಿಕೆ ಮತ್ತು ಮೀನು ಸಂಸ್ಕರಣಾ ಚಟುವಟಿಕೆಗಳಿಗೆ ಏಪ್ರಿಲ್ 10ರಂದು ಲಾಕ್ ಡೌನ್ ನಿಂದ ವಿನಾಯಿತಿ ನೀಡಲಾಗಿದೆ. ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಅಗತ್ಯ ವಸ್ತುಗಳ ಮಾರಾಟವಾಗುತ್ತಿರುವ ಬಗ್ಗೆ ವ್ಯಾಪಕ ದೂರುಗಳಿದ್ದು, ರಾಜ್ಯ ಸರ್ಕಾರಗಳು ಈ ಕುರಿತು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಭಾರತ ಸರ್ಕಾರ ಅಭಿವೃದ್ಧಿ ಪಡಿಸಿರುವ ‘ಆರೋಗ್ಯ ಸೇತು’ ಮೊಬೈಲ್ ಆ್ಯಪ್ ಅನ್ನು ಜನಪ್ರಿಯಗೊಳಿಸಲು ಸಲಹೆ ನೀಡಿದರು. ಈ ಆಪ್ ನ ಸಹಾಯದಿಂದ ವ್ಯಕ್ತಿಯು ಮುನ್ನೆಚ್ಚರಿಕೆ ವಹಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಮೋದಿ ನೇತೃತ್ವದಲ್ಲಿ ಕೋವಿಡ್ 19ರ ವಿರುದ್ಧದ ಸಮರದಲ್ಲಿ ಗೆಲುವು ನಿಶ್ಚಿತ ಎಂಬ ವಿಶ್ವಾಸವನ್ನು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಜನ ಸಂದಣಿ ಸೇರದಂತೆ ಎಚ್ಚರಿಕೆ ವಹಿಸಬೇಕು. ಲಾಕ್ ಡೌನ್ ಕ್ರಮಗಳನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಹಾಗೂ ಗಂಭೀರವಾಗಿ ಕೈಗೊಳ್ಳುವಂತೆಯೂ ಸೂಚಿಸಿದರು.
ಮೋದಿ ಸಲಹೆ ಏನು?
ಮುಂದಿನ 15 ದಿನಗಳಲ್ಲಿ ಲಾಕ್ ಡೌನ್ ಅನುಷ್ಠಾನದ ಕುರಿತು ಇನ್ನು ಒಂದೆರಡು ದಿನಗಳಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು. ಮುಂದಿನ ಎರಡು ವಾರಗಳ ಕಾಲ ಲಾಕ್ ಡೌನ್ ಹಿಂದಿನ 3 ವಾರಗಳಿಗಿಂತ ವಿಭಿನ್ನವಾಗಿರುತ್ತದೆ. ವಿಶೇಷವಾಗಿ ಆರ್ಥಿಕ ಚಟುವಟಿಕೆಗಳಿಗೆ ಸಹಾಯವಾಗುವಂತೆ, ಕೃಷಿ ಮತ್ತು ಕೈಗಾರಿಕೆ ಹಾಗೂ ಕಾರ್ಮಿಕರಿಗೆ ಉದ್ಯೋಗದ ದೃಷ್ಟಿಯಿಂದ ಕೆಲವು ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ರೂಪಿಸಲಿದೆ.
ಸರ್ಕಾರಿ ಕಚೇರಿಗಳು ಭಾಗಶಃ ನೌಕರರೊಂದಿಗೆ ಕಾರ್ಯ ನಿರ್ವಹಿಸಲಿದೆ. ಮುಂದಿನ ಮೂರು, ನಾಲ್ಕು ವಾರ 130 ಕೋಟಿ ಜನರಿಗೆ ಬಹಳ ಪ್ರಮುಖ ಅವಧಿ. ಈ ಅವಧಿಯಲ್ಲಿ ನಾವು ಮಾಡಿರುವ ಪ್ರಯತ್ನದ ಪರಿಣಾಮ ಏನಾಗುವುದು ಎಂಬುದರ ಕುರಿತು ಸಿದ್ಧರಾಗಿರಬೇಕು. ಪರಿಸ್ಥಿತಿ ಬಿಗಡಾಯಿಸಿದರೆ ಎದುರಿಸಲು ಸನ್ನದ್ಧರಾಗಿರಬೇಕು.
ಕೇಂದ್ರ ಸರ್ಕಾರ ಸಂಪೂರ್ಣವಾಗಿ ರಾಜ್ಯಗಳ ಜೊತೆ ಕೆಲಸ ಮಾಡುತ್ತಿದೆ. ದೇಶದಲ್ಲಿ ವೈದ್ಯಕೀಯ ಸೌಲಭ್ಯಗಳ ದೃಷ್ಟಿಯಿಂದ ಸುಧಾರಣೆ ಆಗಿದೆ. ವೈದ್ಯಕೀಯ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸುವುದನ್ನು ಸಹಿಸಲಾಗದು ಎಂದು ಪ್ರಧಾನಿಯವರು ಸೂಚಿಸಿದರು.
– 15 ದಿನ ಲಾಕ್‍ಡೌನ್ ಆನಿವಾರ್ಯ
– ಮೀನುಗಾರಿಕೆ, ಕೃಷಿ, ಕೈಗಾರಿಕಾ, ಕಾರ್ಮಿಕರಿಗೆ ಕೊಂಚ ರಿಲೀಫ್
ಬೆಂಗಳೂರು: ಕೊರೊನಾ ವೈರಸ್ ನಿಯಂತ್ರಿಸುವ ಸಂಬಂಧ ಕರ್ನಾಟಕದಲ್ಲಿ 15 ದಿನ ಲಾಕ್‍ಡೌನ್ ವಿಸ್ತರಿಸಲಾಗಿದೆ. ಮುಂದಿನ 2 ವಾರ ಲಾಕ್‍ಡೌನ್ ಬಹಳ ಕಠಿಣವಾಗಿರುತ್ತದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ವಿಡಿಯೋ ಕಾನ್ಫರೆನ್ಸ್ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ಪ್ರಧಾನಿ ಮೋದಿ ನಾಲ್ಕು ಗಂಟೆಗಳ ಕಾಲ ಸಂವಾದ ನಡೆಸಿದ್ದಾರೆ. ಕೊರೊನಾ ಬಗ್ಗೆ ಕಳವಳ ವ್ಯಕ್ತಪಡಿಸಿದರು. 2.44 ಲಕ್ಷ ವೈಯಕ್ತಿಕ ರಕ್ಷಣಾ ಸಾಧನ (ಪಿಪಿಇ) ಕಿಟ್, ಮಾಸ್ಕ್ ಗಳನ್ನ ಪೊರೈಸಲಾಗುವುದು, ಏಪ್ರಿಲ್ 30ರ ಒಳಗೆ 300 ಲ್ಯಾಬ್ ಹೆಚ್ಚಳ ಮಾಡುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.
ಪ್ರಧಾನಿ ಶ್ರೀ @narendramodi ಅವರು ರಾಜ್ಯಗಳ ಮುಖ್ಯಮಂತ್ರಿಗಳ ಜತೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮುಖ್ಯಮಂತ್ರಿ ಶ್ರೀ @BSYBJP ಅವರು ಭಾಗವಹಿಸಿದರು. ಸಚಿವರಾದ ಬಿ ಶ್ರೀರಾಮುಲು, ಡಾ. ಸುಧಾಕರ್, ಬಸವರಾಜ ಬೊಮ್ಮಾಯಿ, ಎಸ್ ಸುರೇಶ್ ಕುಮಾರ್, ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ ಭಾಸ್ಕರ್ ಉಪಸ್ಥಿತರಿದ್ದರು.#ಮನೆಯಲ್ಲೇಇರಿpic.twitter.com/nvvZP5QWT7
ಲಾಕ್‍ಡೌನ್‍ನಿಂದ ಮೀನುಗಾರಿಕೆ, ಕೃಷಿ, ಕೈಗಾರಿಕಾ, ಕಾರ್ಮಿಕರಿಗೆ ಕೊಂಚ ರಿಲೀಫ್ ಸಿಕ್ಕಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ತಮ್ಮ ಚಟುವಟಿಗೆ ನಡೆಸಬಹುದುದಾಗಿದೆ. ಉಳಿದವರು ಲಾಕ್‍ಡೌನ್ ಪಾಲಿಸದೇ ಇದ್ದರೆ ಸೀಲ್‍ಡೌನ್ ಜಾರಿಗೆ ಬರುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಗರವಾಸಿಗಳನ್ನು ಹಳ್ಳಿಗಳಿಗೆ ಕಳುಹಿಸಬಾರದು. ಮೀನುಗಾರಿಕೆಗೆ ವಿನಾಯ್ತಿ ನೀಡಿದ್ದಾರೆ. ಆರೋಗ್ಯ ಸೇತು ಮೊಬೈಲ್ ಆಪ್ ಜನಪ್ರಿಯಗೊಳಿಸಲು ಪ್ರಧಾನಿ ಸಲಹೆ ನೀಡಿದ್ದಾರೆ. ಆದರೆ ಲಾಕ್‍ಡೌನ್ ಸಡಿಲ ಮಾಡಬಾರದು. ಮುಂದಿನ 15 ದಿನ ಲಾಕ್‍ಡೌನ್ ಅನಿವಾರ್ಯವಾಗಿದೆ, ಏಪ್ರಿಲ್ 30ರ ತನಕ ಲಾಕ್‍ಡೌನ್ ಮಾರ್ಗಸೂಚಿ ಹೊರಡಿಸ್ತಾರೆ ಎಂದು ಸಿಎಂ ಹೇಳಿದರು.
ಮುಂದಿನ ಎರಡು ವಾರ ಲಾಕ್‍ಡೌನ್ ವಿಭಿನ್ನವಾಗಿರುತ್ತೆ. ಕೃಷಿ, ಕೈಗಾರಿಕಾ, ಕಾರ್ಮಿಕರಿಗೆ ತೊಂದರೆ ಆಗದಂತೆ ಮಾರ್ಗಸೂಚನೆಯನ್ನು ಪ್ರಧಾನಿ ನೀಡಿದ್ದಾರೆ. ಸರ್ಕಾರಿ ಕಚೇರಿಗಳು ಸಹ ಭಾಗಶಃ ತೆರಯಲು ಸೂಚಿಸಿದ್ದಾರೆ. ಏ.15ರಿಂದ ಸರ್ಕಾರಿ ಕಚೇರಿಗಳ ಓಪನ್ ಇರಬೇಕು ಹಾಗೆ ಅರ್ಧದಷ್ಟು ಸಿಬ್ಬಂದಿ ಮಾತ್ರ ಇರಬೇಕು ಅಂತ ಸಲಹೆ ನೀಡಿದ್ದಾರೆ ಎಂದು ತಿಳಿಸಿದರು.
ಇಲ್ಲಿವರೆಗೆ ಒಟ್ಟು 217 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಮೂರನೇ ಸ್ಥಾನದಲ್ಲಿ ಇದ್ದ ಕರ್ನಾಟಕ ಈಗ ಹನ್ನೊಂದನೇ ಸ್ಥಾನಕ್ಕೆ ಇಳಿದಿದ್ದು ಕೊಂಚ ರಿಲೀಫ್ ನೀಡಿದೆ. ಪರಿಸ್ಥಿತಿ ನೋಡಿಕೊಂಡು ಕೆಲವು ಕಡೆ ಸೀಲ್‍ಡೌನ್ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.
ಕೃಷಿಕರು ಬೆಳೆದ ಯಾವುದೇ ಉತ್ಪನ್ನಗಳನ್ನು ಟೋಲ್‍ಗಳಲ್ಲಿ ತಡೆಯಬಾರದು. ಒಂದು ವೇಳೆ ತಡೆದರೆ, ಅಂತಹ ವರ ಮೇಲೆ ದಂಡ ವಿಧಿಸಲಾಗುವುದು. ದೇಶದ ನಾನಾ ಭಾಗಗಳಲ್ಲಿ ಏನೇ ಸ್ಥಿತಿ ಇರಬಹುದು ಆದರೆ ಕರ್ನಾಟಕದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿ ಇದೆ ಎಂದರು.
ರಾಜ್ಯದಲ್ಲಿ ರೆಡ್, ಗ್ರೀನ್, ಎಲ್ಲೋ ಅಂತ ಝೋನ್ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ಆ ಬಗ್ಗೆ ಪ್ರಧಾನಿಗಳು ಗಮನಹರಿಸುತ್ತಾರೆ. ಅವರು ಮಾರ್ಗಸೂಚಿ ಕಳುಹಿಸುತ್ತಾರೆ. ಅದರಂತೆ ನಿಮಯ ಜಾರಿಗೆ ತರಲಾಗುತ್ತದೆ ಎಂದು ಸ್ಪಷ್ಟನೆ ನೀಡಿದರು.
ಪ್ರಧಾನಿ ಮೋದಿ ಜನರಲ್ ಆಗಿ ಎಲ್ಲ ರಾಜ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊರೊನಾ ಪ್ರಕರಣ ಹೆಚ್ಚು ಇರುವ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಮಾತನಾಡಿದರು. ಹೀಗಾಗಿ ಕರ್ನಾಟಕ ರಾಜ್ಯದ ಬಗ್ಗೆ ಹೆಚ್ಚೇನೂ ಮಾತನಾಡಲಿಲ್ಲ ಎಂದರು.
ಒಟ್ಟು 50 ವಿದೇಶಿ ತಬ್ಲಿಘಿಯರ ವಿರುದ್ಧ ಪ್ರಕರಣ ದಾಖಲಾಗಿದ್ದು, ಒಟ್ಟು 801 ತಬ್ಲಿಘಿರನ್ನು ಕ್ವಾರೆಂಟೈನ್ ಮಾಡಲಾಗಿದೆ. ಬೆಂಗಳೂರಿನಲ್ಲಿ 269, ಇತರ ಜಿಲ್ಲೆಗಳಲ್ಲಿ 472 ತಬ್ಲಿಘಿಗರ ಕ್ವಾರೆಂಟೈನ್ ಮಾಡಲಾಗಿದೆ ಎಂದು ತಿಳಿಸಿದರು.
ಬೆಂಗಳೂರು: ಕೊರೊನಾ ವೈರಸ್ ನಿಯಂತ್ರಿಸುವ ಸಂಬಂಧ ಏಪ್ರಿಲ್ 30ರವರೆಗೆ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಲಾಕ್‍ಡೌನ್ ಮುಂದುವರಿಯಲಿದೆ.
ದೇಶಾದ್ಯಂತ ಹೇರಲಾಗಿರುವ 21 ದಿನಗಳ ಲಾಕ್‍ಡೌನ್ ಏ.14ಕ್ಕೆ ಅಂತ್ಯವಾಗಲಿರುವ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ಮೋದಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು.
ಈ ಸಂದರ್ಭದಲ್ಲಿ ಲಾಕ್‍ಡೌನ್ ವಿಧಿಸಿದ ಪರಿಣಾಮ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ. ಹೀಗಾಗಿ ಏ.30ರವರೆಗೆ ಲಾಕ್‍ಡೌನ್ ವಿಸ್ತರಿಸಬೇಕೆಂದು ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಮನವಿ ಮಾಡಿದ್ದರು.
ಮೋದಿ ಜೊತೆಗಿನ ವಿಡಿಯೋ ಕಾನ್ಫರೆನ್ಸ್ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಯಡಿಯೂರಪ್ಪ ಏ.30ರವರೆಗೆ ಲಾಕ್‍ಡೌನ್ ವಿಸ್ತರಿಸಲಾಗಿದೆ ಎಂದು ಅಧಿಕೃತವಾಗಿ ತಿಳಿಸಿದರು.
ಮುಂಬೈ: 21 ತಬ್ಲಿಘಿಗಳನ್ನು ಪತ್ತೆ ಹಚ್ಚಿದ್ದ ಮುಂಬೈ ನಗರದ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ.
ದೆಹಲಿಯ ತಬ್ಲಿಘಿ ಜಮಾತ್ ಕಾರ್ಯಕ್ರಮಕ್ಕೆ ತೆರಳಿದ ವ್ಯಕ್ತಿಗಳು ಕಡ್ಡಾಯವಾಗಿ ಆಸ್ಪತ್ರೆಗೆ ತೆರಳಿ ವೈದ್ಯಕೀಯ ಪರೀಕ್ಷೆ ನಡೆಸಬೇಕೆಂದು ಸೂಚಿಸಲಾಗಿತ್ತು. ಆದರೆ ವಿದೇಶದಿಂದ ಆಗಮಿಸಿದ ವ್ಯಕ್ತಿಗಳು ಪರೀಕ್ಷೆ ನಡೆಸದೇ ಮಸೀದಿ ಮತ್ತು ಕೆಲ ಶಿಕ್ಷಣ ಸಂಸ್ಥೆಯಲ್ಲಿ ಅವಿತುಕೊಂಡಿದ್ದರು.
ತಮಿಳುನಾಡಿನಿಂದ ಮಹಾರಾಷ್ಟ್ರಕ್ಕೆ ಆಗಮಿಸಿದ ಈ ವ್ಯಕ್ತಿಗಳು ಮುಂಬೈ ಕೆಲ ಸ್ಥಳಗಳಲ್ಲಿ ಅವಿತುಕೊಂಡಿದ್ದಾರೆ ಎನ್ನುವ ಖಚಿತ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು.
ಖಚಿತ ಮಾಹಿತಿ ಪಡೆದು ಮಸೀದಿ ಮತ್ತು ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿದ ಇನ್ಸ್‌ಪೆಕ್ಟರ್ 13 ಬಾಂಗ್ಲಾದೇಶ ಮತ್ತು 8 ಮಂದಿ ಮಲೇಷ್ಯಾದ ಪ್ರಜೆಗಳನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಕೇಂದ್ರಕ್ಕೆ ಹಾಕಿದ್ದರು.
ಕ್ವಾರಂಟೈನ್ ಕೇಂದ್ರಕ್ಕೆ ದಾಖಲಾದ 21 ವಿದೇಶಿ ಪ್ರಜೆಗಳು ಮತ್ತು ಆಶ್ರಯ ನೀಡಿದ್ದ ಟ್ರಸ್ಟಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಈ ಘಟನೆ ನಡೆದ ಕೆಲ ದಿನಗಳ ಬಳಿಕ ಇನ್ಸ್‌ಪೆಕ್ಟರ್‌ಗೆ ಅವರಿಗೆ ಕೋವಿಡ್-19 ಲಕ್ಷಣಗಳು ಕಾಣಿಸಿದೆ. ಬಳಿಕ ಆಸ್ಪತ್ರೆಗೆ ತೆರಳಿ ಪರೀಕ್ಷಿಸಿದ್ದು ಶುಕ್ರವಾರ ಪಾಸಿಟಿವ್ ಬಂದಿದೆ. ಈಗ ಇನ್ಸ್‌ಪೆಕ್ಟರ್ ಅವರನ್ನು ನಾಸಿಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಕ್ರಮವಾಗಿ ವಿದೇಶಿ ಪ್ರಜೆಗಳನ್ನು ಬಚ್ಚಿಟ್ಟಿದ್ದಕ್ಕೆ ಮಸೀದಿ ಮತ್ತು ಶಿಕ್ಷಣ ಸಂಸ್ಥೆಯ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮೈಸೂರು: ಕೊರೊನಾ ಹಾಟ್‍ಸ್ಪಾಟ್ ಮೈಸೂರಲ್ಲಿ ಶರವೇಗದಲ್ಲಿ ಹರಡುತ್ತಿದೆ. ಕಳೆದ ಒಂದೇ ದಿನ ಕೊರೊನಾ ಪಾಸಿಟಿವ್ ಸಂಖ್ಯೆ 42ಕ್ಕೆ ಏರಿಕೆ ಆಗಿದೆ. ಇನ್ನೆರಡು ದಿನದಲ್ಲಿ 50ರ ಗಡಿ ದಾಟುವ ಸಾಧ್ಯತೆ ಇದೆ. ಹೀಗಾಗಿ ಅರಮನೆ ನಗರಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ನಡುವೆ ಮೊದಲು ಕೊರೊನಾ ಕದಡಿದ್ದ ಕೇಸ್ ನಂ.52 ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ.
ಮೈಸೂರಿನಲ್ಲಿ ಮತ್ತೆ ಐವರಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಈ ಮೂಲಕ ಕೇವಲ ಮೈಸೂರಿನಲ್ಲಿಯೇ ಸೋಂಕಿತರ ಸಂಖ್ಯೆ 42ಕ್ಕೆ ಏರಿದೆ. 8 ವರ್ಷದ ಬಾಲಕನಿಗೂ ಸೋಂಕು ತಗುಲಿದೆ. ನಂಜನಗೂಡಿನ ಜ್ಯೂಬಿಲಿಯೆಂಟ್ ಕಾರ್ಖಾನೆ ನೌಕರರ ಸಂಪರ್ಕಿತ ವ್ಯಕ್ತಿಗಳಿಗೂ ಸೋಂಕು ದೃಢವಾಗಿದ್ದು, ಸೋಂಕಿತರ ಪುತ್ರ ಹಾಗೂ ಪತ್ನಿಗೂ ಸೋಂಕು ಹರಡಿದೆ. ಹೀಗಾಗಿ ಜ್ಯೂಬಿಲಿಯೆಂಟ್ ಕಾರ್ಖಾನೆಯಲ್ಲಿ ಮತ್ತಷ್ಟು ಆತಂಕ ಹೆಚ್ಚಿದೆ.
ಈ ನಡುವೆ ಮೈಸೂರಿನಲ್ಲಿ ಎರಡನೇ ಕೊರೊನಾ ಪಾಸಿಟಿವ್ ಸೋಂಕಿತ ಡಿಸ್ವಾರ್ಜ್ ಆಗಿದ್ದಾನೆ. ಜ್ಯೂಬಿಲಿಯೆಂಟ್ ಕಾರ್ಖಾನೆಯ ಮೊದಲ ಸೋಂಕಿತನಾಗಿದ್ದ ರೋಗಿ ನಂ 52 ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ. ಜ್ಯೂಬಿಲಿಯಂಟ್ ಕಾರ್ಖಾನೆಯ ಹಲವು ನೌಕರರಿಗೆ ಸೋಂಕು ಹರಡಿಸಿದ್ದ ಕೇಸ್ ನಂ.52 ಮೈಸೂರಿನ ಕೋವಿಡ್-19 ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಶಂಕರ್ ಅಧಿಕೃತ ಮಾಹಿತಿ ಮಾಡಿದ್ದಾರೆ.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಕೇಸ್ ನಂ.52 ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾನೆ. ಜಿಲ್ಲಾಡಳಿತ, ಆಸ್ಪತ್ರೆ ಸಿಬ್ಬಂದಿ ಹಾಗೂ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾನೆ.
“ನನಗೆ 10 ದಿನಗಳ ಹಿಂದೆ ಜ್ವರ ಇತ್ತು. ಮೊದಲು ಸ್ಥಳೀಯ ಕ್ಲಿನಿಕ್‍ಗೆ ತೋರಿಸಿದ್ದೆ. ಮಾರ್ಚ್ 21ರಂದು ನಾನು ಗೋಪಾಲಗೌಡ ಆಸ್ಪತ್ರೆಗೆ ದಾಖಲಾಗಿದ್ದೆ. ನಂತರ ಮಾರ್ಚ್ 25ರಂದು ಕೆ.ಆರ್.ಆಸ್ಪತ್ರೆಗೆ ಕರೆತಂದರು. ನನಗೆ ಎಲ್ಲ ರೀತಿಯ ಪರೀಕ್ಷೆ ಮಾಡಿದರು. ಮಾರ್ಚ್ 30ರಂದು ನನ್ನನ್ನ ಕೋವಿಡ್-19 ಆಸ್ಪತ್ರೆಗೆ ಕಳುಹಿಸಿದರು. 14 ದಿನಗಳ ಕಾಲ ಚಿಕಿತ್ಸೆ ನೀಡಿ ನನ್ನನ್ನು ಗುಣಮುಖರನ್ನಾಗಿ ಮಾಡಿದ್ದಾರೆ. ಸೋಂಕು ಪೀಡಿತರನ್ನು ಸರ್ಕಾರ ಚೆನ್ನಾಗಿ ನೋಡಿಕೊಳ್ಳುತ್ತಿದೆ. ಎಲ್ಲರೂ ಸರ್ಕಾರಕ್ಕೆ ಸಹಕಾರ ನೀಡಿ. ಆದರೆ ನಾನು ಮಾತ್ರ ಈಗಲೇ ಮನೆಗೆ ಹೋಗಲ್ಲ, ನಾನು ಕ್ವಾರಂಟೈನ್‍ಗೆ ಒಳಗಾಗಿದ್ದೇನೆ” ಎಂದು ಪತ್ರದಲ್ಲಿ ಬರೆದಿದ್ದಾನೆ.
ಸೋಂಕು ಹರಡಿದ ವ್ಯಕ್ತಿ ಸೋಂಕಿನಿಂದ ಮುಕ್ತನಾದರೂ ಕೂಡ ಸೋಂಕಿತರ ಸಂಖ್ಯೆ ಮಾತ್ರ ನಿಲ್ಲುತ್ತಿಲ್ಲ. ಸೋಂಕಿತ ಕಾರ್ಮಿಕರ ಕುಟುಂಬದ ಒಳಗೆ ಈ ಚೈನ್ ಬೆಳೀತಿರೋದು ಆತಂಕ ಹೆಚ್ಚುವಂತೆ ಮಾಡಿದೆ.