Tag: Coronavirus

  • ಕೇರಳದಲ್ಲಿ ಸೋಂಕಿತರ ಸಂಖ್ಯೆ ಇಳಿಕೆ – ಕೊರೊನಾ ನಿಯಂತ್ರಣವಾಗಿದ್ದು ಹೇಗೆ?

    ಕೇರಳದಲ್ಲಿ ಸೋಂಕಿತರ ಸಂಖ್ಯೆ ಇಳಿಕೆ – ಕೊರೊನಾ ನಿಯಂತ್ರಣವಾಗಿದ್ದು ಹೇಗೆ?

    ತಿರುವನಂತಪುರಂ: ಕೊರೊನಾ ವೈರಸ್‍ಗೆ ಇಡೀ ಜಗತ್ತಿನಾದ್ಯಂತ ಹರಡಿದ್ದು, ಜನರು ಭಯಭೀತಾಗಿದ್ದಾರೆ. ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಕೇರಳದಲ್ಲಿ ವೃದ್ಧ ದಂಪತಿ ಕೊರೊನಾ ವೈರಸ್‍ನಿಂದ ಗೆದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಇದೀಗ ಕೇರಳದಿಂದ ಮತ್ತೊಂದು ಸಿಹಿ ಸುದ್ದಿ ಬಂದಿದೆ.

    ಇಡೀ ದೇಶದಲ್ಲೇ ಮೊದಲ ಬಾರಿಗೆ ಕೇರಳದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಇದರಿಂದ ಕೇರಳ ‘ಕೊರೊನಾ ಹಾಟ್‍ಸ್ಟಾಟ್’ ಎನ್ನಿಸಿಕೊಂಡಿತ್ತು. ಆದರೆ ಈಗ ಕೇರಳದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ.

    ಇಷ್ಟು ದಿನ ಕೇರಳದಲ್ಲಿ ಒಂದೇ ದಿನಕ್ಕೆ ಅನೇಕ ಕೊರೊನಾ ಪಾಸಿಟಿವ್ ಕಂಡುಬರುತ್ತಿತ್ತು. ಆದರೆ ಸೋಮವಾರ ಮೂರು ಕೊರೊನಾ ಪ್ರಕರಣ ದಾಖಲಾಗಿವೆ. ಇನ್ನೂ ಭಾನುವಾರ ಕೇವಲ ಎರಡು ಪ್ರಕರಣ ಮಾತ್ರ ದೃಢಪಟ್ಟಿತ್ತು. ಈ ಮೂಲಕ ಕೇರಳದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 378 ಇದೆ. ಇವರಲ್ಲಿ ಈಗಾಗಲೇ 200 ಮಂದಿ ಗುಣಮುಖರಾಗಿದ್ದಾರೆ. ಹೀಗಾಗಿ ಕೇರಳದಲ್ಲಿ ಈಗ ಕೇವಲ 178 ಮಂದಿ ಕೊರೊನಾ ರೋಗಿಗಳಿದ್ದಾರೆ.

    ಪ್ರತಿದಿನ ಕೊರೊನಾ ಪಾಸಿಟಿವ್ ಪ್ರಕರಣಗಳಿಂತ ವೈರಸ್‍ನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಕೇರಳದಲ್ಲಿ ಕೊರೊನಾ ಪ್ರಕರಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.

    ಕೊರೊನಾ ನಿಯಂತ್ರಿಸಿದ್ದು ಹೇಗೆ?
    1. ಈ ಹಿಂದೆ ಕೇರಳದಲ್ಲಿ ನಿಫಾ ವೈರಸ್ ಕಂಡು ಬಂದಿತ್ತು. ಇದರಿಂದ ಅನೇಕ ಸಮಸ್ಯೆಗಳನ್ನು ಎದುರಿಸಿತ್ತು. ಹೀಗಾಗಿ ಕೇರಳ ಭಾರತದಲ್ಲಿ ಕೊರೊನಾ ವೈರಸ್ ಕಾಣಿಸಿಕೊಳ್ಳುವ ಮೊದಲೇ ಅಗತ್ಯ ಪೂರ್ವ ಯೋಜನೆಗಳನ್ನು ಕೈಗೊಂಡಿತ್ತು.
    2. ಕೊರೊನಾ ಸೋಂಕಿತರ ಸಂಖ್ಯೆ 100ಕ್ಕೆ ಏರಿಕೆಯಾದ ತಕ್ಷಣ ಸರ್ಕಾರ ಅಪಾಯಕಾರಿ ಪ್ರದೇಶಗಳನ್ನು ಸಂಪೂರ್ಣ ಲಾಕ್‍ಡೌನ್ ಮಾಡಿತ್ತು. ಅಲ್ಲಿಂದ ಇತರಿಗೆ ಸೋಂಕು ತಗುಲದಂತೆ ಕ್ರಮಕೈಗೊಂಡಿತ್ತು.
    3. ಕೊರೊನಾ ವೈರಸ್ ವಿದೇಶದಿಂದ ಬಂದವರಿಂದಲೇ ಹೆಚ್ಚಾಗಿ ಹರಡುತ್ತದೆ ಎನ್ನಲಾಗಿತ್ತು. ಹೀಗಾಗಿ ಎಚ್ಚೆತ್ತ ಕೇರಳ ಸರ್ಕಾರ ವಿಮಾನ ನಿಲ್ದಾಣದಲ್ಲೇ ವಿದೇಶದಿಂದ ಬಂದವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿತ್ತು. ಅಲ್ಲದೇ 5 ಸಾವಿರ ಐಸೋಲೇಷನ್ ವಾರ್ಡ್ ತೆರೆದಿತ್ತು.

    4. ವಿದೇಶ ಹಾಗೂ ಬೇರೆ ರಾಜ್ಯ ಪ್ರಯಾಣ ಮಾಡಿದ್ದವರ ಮಾಹಿತಿಯನ್ನು ಕೊಡದೆ ಮುಚ್ಚಿಟ್ಟವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು.
    5. ಸಾರ್ವಜನಿಕರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿತ್ತು. ಅಲ್ಲದೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ ನೀಡಿತು.
    6. ಆ್ಯಪ್ ಮೂಲಕ ಕೊರೊನಾ ವೈರಸ್ ಬಗ್ಗೆ ಜನರಿಗೆ ಮಾಹಿತಿ ನೀಡಿತ್ತು.

  • ಮೂರು ಆಸ್ಪತ್ರೆಗೆ ಅಲೆದಾಡಿ ಬೆಂಗ್ಳೂರಿನ ವೃದ್ಧ ಸಾವು – ಕೊನೆಗೆ ಕೊರೊನಾ ಪರೀಕ್ಷೆ

    ಮೂರು ಆಸ್ಪತ್ರೆಗೆ ಅಲೆದಾಡಿ ಬೆಂಗ್ಳೂರಿನ ವೃದ್ಧ ಸಾವು – ಕೊನೆಗೆ ಕೊರೊನಾ ಪರೀಕ್ಷೆ

    – ಸಂಪರ್ಕಕ್ಕೆ ಬಂದಿದ್ದ 20 ಮಂದಿಗೆ ಕ್ವಾರಂಟೈನ್
    – ಟಾಯ್ಲೆಟ್‍ನಲ್ಲೇ ಕುಸಿದು ಬಿದ್ದಿದ್ದ ವೃದ್ಧ
    – ಸೋಮವಾರ ಸಂಜೆ ಕೊರೊನಾ ದೃಢ

    ಬೆಂಗಳೂರು: ಕೊರೊನಾ ಸೋಂಕಿತರ ಸಾವು ಕರ್ನಾಟಕದಲ್ಲಿ 8ಕ್ಕೆ ಏರಿದ್ದು, ಕಳೆದ ದಿನವೇ ಇಬ್ಬರು ಒಂದೇ ದಿನ ಮೃತಪಟ್ಟಿದ್ದಾರೆ. ಅದರಲ್ಲೂ ಸಿಲಿಕಾನ್ ಸಿಟಿಯ 65 ವರ್ಷದ ವೃದ್ಧ ಮೂರು ಆಸ್ಪತ್ರೆಗೆ ಅಲೆದಾಡಿ ಕೊನೆಗೆ ಮೃತಪಟ್ಟಿದ್ದಾರೆ.

    ಭಾನುವಾರ ಮೃತ ವೃದ್ಧ ಕಫ, ಕೆಮ್ಮು ಎಂದು ರಾಜೀವ್ ಗಾಂಧಿ ಆಸ್ಪತ್ರೆಗೆ ಬಂದಿದ್ದಾರೆ. ಅಲ್ಲಿ ಆತನಿಗೆ ನ್ಯೂಮೋನಿಯಾ ಲಕ್ಷಣ ಕಾಣಿಸಿಕೊಂಡಿದೆ ಅಂತ ವೈದ್ಯರು ಕೊರೊನಾ ಪರೀಕ್ಷೆಗೆ ಮುಂದಾಗಿದ್ದಾರೆ. ಈ ವೇಳೆ ವೈದ್ಯರು ವೃದ್ಧನಿಗೆ ಅಡ್ಮಿಟ್ ಆಗಿ ಎಂದು ತಿಳಿಸಿದ್ದಾರೆ. ಆದರೆ ವೃದ್ಧ ಅಡ್ಮಿಟ್ ಆಗಲ್ಲ, ನಾನು ಜಯದೇವ ಆಸ್ಪತ್ರೆಗೆ ಹೋಗುತ್ತೇನೆ ಎಂದು ಹೇಳಿ ಹೋಗಿದ್ದಾರೆ.

    ವೃದ್ಧ ಜಯದೇವದ ರೆಗ್ಯೂಲರ್ ರೋಗಿ ಆಗಿದ್ದರು. ಆದರೆ ಜಯದೇವ ಆಸ್ಪತ್ರೆಯಲ್ಲೂ ರಾಜೀವ್ ಗಾಂಧಿಗೆ ಹೋಗಿ ಎಂದು ರೆಫರ್ ಮಾಡಿದ್ದಾರೆ. ಆದರೂ ವೃದ್ಧ ಖಾಸಗಿ ಆಸ್ಪತ್ರೆಗೆ ತೆರಳಿದ್ದಾರೆ. ಬಳಿಕ ಅಲ್ಲಿಯೂ ರಾಜೀವ್ ಗಾಂಧಿಗೆ ರೆಫರ್ ಮಾಡಿದ್ದಾರೆ. ಕೊನೆಗೆ ವೃದ್ಧ ರಾಜೀವ್ ಗಾಂಧಿ ಆಸ್ಪತ್ರೆಗೆ ಬಂದಿದ್ದಾರೆ. ಆದರೆ ಎರಡನೇ ಬಾರಿ ಆಸ್ಪತ್ರೆಗೆ ಬಂದಾಗ ಆರೋಗ್ಯ ಸಂಪೂರ್ಣ ಹದಗೆಟ್ಟಿತ್ತು. ಕೊನೆಗೆ ವೃದ್ಧ ಭಾನುವಾರ ರಾತ್ರಿ 8:30 ರ ವೇಳೆಗೆ ಅಡ್ಮಿಟ್ ಆಗಿದ್ದಾರೆ.

    ಅಡ್ಮಿಟ್ ಆದ ಬಳಿಕ ವೃದ್ಧ ಸೋಮವಾರ ಬೆಳಗ್ಗೆ ವಾರ್ಡಿನಲ್ಲಿದ್ದ ಟಾಯ್ಲೆಟ್‍ಗೆ ತೆರಳಿದ್ದು ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ವೈದ್ಯರು ಐಸಿಯುಗೆ ಶಿಫ್ಟ್ ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

    ವೃದ್ಧ ವಾರ್ಡ್ ನಂಬರ್ 132ರ ನಿವಾಸಿಯಾಗಿದ್ದು, ಸೋಮವಾರ ಸಂಜೆ ಪರೀಕ್ಷಾ ವರದಿಯಲ್ಲಿ ಕೊರೊನಾ ಇರುವುದು ದೃಢಪಟ್ಟಿತ್ತು. ಸದ್ಯಕ್ಕೆ ವೃದ್ಧ ಭೇಟಿ ನೀಡಿದ ಆಸ್ಪತ್ರೆಯ ವೈದ್ಯರು ಹಾಗೂ ಆತ ಯಾವುದರಲ್ಲಿ ಪ್ರಯಾಣ ಬೆಳೆಸಿದ್ದ ಎಂಬ ಎಲ್ಲ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.

    ಕೊರೊನಾಗೆ 65 ವರ್ಷದ ವ್ಯಕ್ತಿ ಮೃತಪಟ್ಟ ಹಿನ್ನೆಲೆಯಲ್ಲಿ ಸೋಂಕಿತನ ಜೊತೆ 20 ಜನ ಪ್ರೈಮರಿ ಕಾಂಟ್ಯಾಕ್ಟ್ ಹೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಪ್ರೈಮರಿ ಕಾಂಟ್ಯಾಕ್ಟ್ ಹೊಂದಿರುವವರನ್ನ ಕ್ವಾರಂಟೈನ್‍ನಲ್ಲಿ ಇಡಲು ಬಿಬಿಎಂಪಿ ಮುಂದಾಗಿದೆ. ಅಲ್ಲದೇ ವೃದ್ಧ ಮೃತಪಟ್ಟ ಬೆನ್ನಲ್ಲೇ ಟಿಪ್ಪು ನಗರದ ಮನೆಗೆ ಬಿಬಿಎಂಪಿ ಅಧಿಕಾರಿಗಳು ದೌಡಾಯಿಸಿದ್ದಾರೆ. ಮೃತ ವೃದ್ಧ ಸೀಲ್‍ಡೌನ್ ಆಗಿರುವ ಬಾಪೂಜಿನಗರ ಮತ್ತು ಪಾದರಾಯನಪುರ ವಾರ್ಡ್ ಗಳ ಪಕ್ಕದಲ್ಲೇ ನೆಲೆಸಿದ್ದು ಆತಂಕ ಹೆಚ್ಚಾಗಿದೆ.

    ಮೊದಲು ಮೊದಲು ಎದೆನೋವು ಬಂದಾಗ ನಿರ್ಲಕ್ಷ್ಯ ಮಾಡಿದ್ದೇ ಸಾವಿಗೆ ಕಾರಣ ಎಂದು ತಿಳಿದು ಬಂದಿದೆ. ಆರಂಭದಲ್ಲಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳದೆ ಅಸಡ್ಡೆ ತೋರಿ, ಸಾವಿನ ಅಂಚಿನಲ್ಲಿದ್ದಾಗ ಕೊರೊನಾ ಟೆಸ್ಟ್ ಮಾಡಲಾಗಿದೆ. ಸಾವಿಗೂ ಮುನ್ನ ಹಲವರನ್ನು ಸಂಪರ್ಕಿಸಿರುವುದರಿಂದ ಇದೀಗ ವೃದ್ಧನ ಸಾವು ತಲೆನೋವಾಗಿದೆ. ಸದ್ಯಕ್ಕೆ ಆರೋಗ್ಯ ಇಲಾಖೆ ಮನೆಯಲ್ಲಿರುವ ಮಕ್ಕಳು ಸೇರಿದಂತೆ ಅಕ್ಕಪಕ್ಕದವರ ಮೇಲೆ ನಿಗಾ ಇಟ್ಟಿದೆ.

    ಹೃದಯಸಂಬಂಧಿ ಕಾಯಿಲೆ ಇರುವಲ್ಲಿ ಈಗ ಕೊರೊನಾ ಪಾಸಿಟಿವ್ ಹೆಚ್ಚಾಗಿ ಕಾಣಿಸುತ್ತಿದೆ. ಉಸಿರಾಟದ ತೊಂದರೆಯಂತೆ ಹೃದಯ ಸಂಬಂಧಿ ಕಾಯಿಲೆ ಕೂಡ ಈಗ ಅಪಾಯಕಾರಿಯಾಗುತ್ತಿದೆ ಎಂದು ಜಯದೇವ ನಿರ್ದೇಶಕ ಡಾ ಮಂಜುನಾಥ್ ಸರ್ಕಾರದ ಗಮನಕ್ಕೆ ತಂದಿದ್ದರು. ಬಹುತೇಕರಲ್ಲಿ ಹೃದಯ ಸಂಬಂಧಿ ಕಾಯಿಲೆ ಇರೋರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಭಾನುವಾರ ದಾಖಲಾಗಿ ಸೋಮವಾರ ಸಾವನ್ನಪ್ಪಿದ ವೃದ್ಧ ಕೂಡ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು.

  • ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದೆ, ಬಡವರನ್ನು ಬದುಕಿಸಿಕೊಳ್ಳಲು ಸ್ಥಿತಿವಂತರು ಸಹಾಯ ಮಾಡಿ: ಡಿಸಿಎಂ ಕಾರಜೋಳ

    ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದೆ, ಬಡವರನ್ನು ಬದುಕಿಸಿಕೊಳ್ಳಲು ಸ್ಥಿತಿವಂತರು ಸಹಾಯ ಮಾಡಿ: ಡಿಸಿಎಂ ಕಾರಜೋಳ

    ಚಿತ್ರದುರ್ಗ: ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದೆ. ಸ್ಥಿತಿವಂತರು ಬಡವರನ್ನು ಬದುಕಿಸಿಕೊಳ್ಳಲು ಆರ್ಥಿಕ ಸಹಾಯ ಮಾಡಬೇಕು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಕೇಳಿಕೊಂಡಿದ್ದಾರೆ.

    ಚಿತ್ರದುರ್ಗದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ನೆರೆ ಹಾವಳಿ, ಬರಗಾಲ ಸೇರಿದಂತೆ ಒಂದಲ್ಲಾ ಒಂದು ಸಮಸ್ಯೆಗಳನ್ನು ಎದುರಿಸುತ್ತಾ ಬಂದಿದ್ದೇವೆ. ಇದೆಲ್ಲವನ್ನೂ ಮುಗಿಸಿಕೊಂಡು 2020ರಲ್ಲಿ ಹೊಸ ಹೊಸ ಯೋಜನೆಗಳನ್ನು ರೂಪಿಸೋಣ ಎಂದಾಗ ಈ ಮಹಾಮಾರಿ ಕೊರೊನಾ ವೈರಸ್ ಅಂಟಿಕೊಂಡಿದೆ. ಈ ಕೊರೊನಾ ನಿರ್ಮೂಲನೆ ಮಾಡಲು ದೇಶ ಸೇರಿದಂತೆ ವಿಶ್ವವೇ ನಲುಗಿ ಹೋಗಿದ್ದು, ಲಾಕ್‍ಡೌನ್‍ನಿಂದಾಗಿ ಎಲ್ಲಾ ದೇಶಗಳು ಆರ್ಥಿಕವಾಗಿ ಸಂಕಷ್ಟವನ್ನು ಅನುಭವಿಸುತ್ತಿವೆ. ಅದರಂತೆ ನಮ್ಮ ರಾಜ್ಯವೂ ಕೂಡ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದೆ ಎಂದರು.

    ರಾಜ್ಯವನ್ನು ಕೊರೊನಾ ಮುಕ್ತ ಮಾಡಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸ್ಥಿತಿವಂತರು ಸಹಕಾರ ಮಾಡಿ ಎಂದು ಹೇಳಲಾಗಿದೆ ಹೊರೆತು ಯಾರ ಮೇಲೂ ಒತ್ತಡ ಹಾಕಲಾಗಿಲ್ಲ. ಇದಕ್ಕೆ ಪೊಲೀಸ್ ಇಲಾಖೆಯಲ್ಲಿ ಕೆಲವರು ಏಕೆ ಕೊಡಬೇಕು ಎಂದು ಕೇಳಿದ್ದಾರೆ ಅಂತಹವರನ್ನು ಒತ್ತಾಯ ಮಾಡುವುದಿಲ್ಲ ಎಂದು ಹೇಳಿದರು. ಸಿಎಂ ಪರಿಹಾರ ನಿಧಿಗೆ ಈಗಾಗಲೇ 130 ಕೋಟಿ ಬಂದಿದೆ. ಕಠಿಣ ಪರಿಸ್ಥಿತಿಯಲ್ಲಿ ಪರಸ್ಪರ ಸಹಕಾರ ನೀಡಿ ಎಲ್ಲಾ ರೀತಿಯಿಂದಲೂ ಸಹಾಯ ಮಾಡಿ ಎಂದು ಕೇಳಿದ್ದೇವೆ ಎಂದು ಹೇಳಿದರು.

    ಇದೇ ವೇಳೆ ಚಿತ್ರದುರ್ಗದ ಆಹಾರ ಇಲಾಖೆ ಅಧಿಕಾರಿಗಳು ಜನರಿಗೆ ತಾತ್ಕಾಲಿಕ ರೇಷನ್ ಕಾರ್ಡ್ ವಿತರಿಸುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆಂಬ ವಿಷಯ ತಿಳಿದು ಡಿಸಿಎಂ ಗರಂ ಆದರು. ತಕ್ಷಣ ಚಿತ್ರದುರ್ಗ ಜಿಲ್ಲೆಯ ಆಹಾರ ಇಲಾಖೆ ಉಪನಿರ್ದೇಶಕ ಮಧುಸೂಧನ್ ಅವರಿಗೆ ಕರೆಮಾಡಿ ತರಾಟೆ ತೆಗೆದುಕೊಂಡರು. ಕ್ಯಾಬಿನೆಟ್‍ನಲ್ಲಿ ತೀರ್ಮಾನಿಸಿರುವಂತೆ ಕೂಡಲೇ ತಾತ್ಕಾಲಿಕ ಕಾರ್ಡ್ ವಿತರಿಸಿ ಪಡಿತರವನ್ನು ನೀಡಿ ಎಂದು ಸೂಚಿಸಿದರು.

  • ಜಮಾತ್ ನಂಜಿಗೆ ಬೆಚ್ಚಿಬಿದ್ದ ಕುಡಚಿ – ಒಂದೇ ಊರಲ್ಲಿ 10ಕ್ಕೆ ಏರಿದ ಸೋಂಕಿತರ ಸಂಖ್ಯೆ

    ಜಮಾತ್ ನಂಜಿಗೆ ಬೆಚ್ಚಿಬಿದ್ದ ಕುಡಚಿ – ಒಂದೇ ಊರಲ್ಲಿ 10ಕ್ಕೆ ಏರಿದ ಸೋಂಕಿತರ ಸಂಖ್ಯೆ

    ಬೆಳಗಾವಿ(ಚಿಕ್ಕೋಡಿ): ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ಕರ್ನಾಟಕದಲ್ಲಿಯು ತನ್ನ ಅಟ್ಟಹಾಸ ಮುಂದುವರೆಸಿದೆ. ಹೆಚ್ವು ಸೋಂಕಿತರು ಇರುವ ಪಟ್ಟಿಗೆ ಈಗ ಬೆಳಗಾವಿ ಜಿಲ್ಲೆಯು ಸೇರ್ಪಡೆಯಾಗಿದೆ. ಜಿಲ್ಲೆಯಲ್ಲಿ ಭಾನುವಾರ 14 ಇದ್ದ ಸೊಂಕಿತರ ಸಂಖ್ಯೆ ಸೋಮವಾರಕ್ಕೆ 17ಕ್ಕೆ ಏರಿಕೆಯಾಗಿದೆ.

    ಬೆಳಗಾವಿ ಜಿಲ್ಲೆಯ ಕುಡಚಿ ಪಟ್ಟಣದಲ್ಲಿ ಮತ್ತೆ ಮೂವರಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದ್ದು, ಈ ಮೂಲಕ ಬೆಳಗಾವಿ ಜಿಲ್ಲೆ ಡೋಂಜರ್ ಝೋನ್‍ನತ್ತ ಹೆಜ್ಜೆ ಇಟ್ಟಿದೆ. ಸೋಮವಾರ ಮಧ್ಯಾಹ್ನ ಹೆಲ್ತ್ ಬುಲಿಟಿನ್ ಬಿಡುಗಡೆಯಾಗಿದ್ದು, ಅದರಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ಮೂರು ಹೊಸ ಸೋಂಕಿತ ಪ್ರಕರಣ ಪತ್ತೆಯಾಗಿರುವುದು ವರದಿಯಾಗಿದೆ. ಈ ಮೂಲಕ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣ ಕೊರೊನಾ ಹಾಟ್‌ಸ್ಪಾಟ್‌ ಆಗಿ ಪರಿಣಮಿಸಿದೆ. ಈಗ ಕುಡಚಿ ಪಟ್ಟಣ ಒಂದರಲ್ಲೇ 10 ಸೋಂಕಿತ ಪ್ರಕರಣಗಳು ಬೆಳಕಿಗೆ ಬಂದಿರ.

    ಸೊಂಕಿತ ರೋಗಿ 149ರ ಇಬ್ಬರೂ ಮೊಮ್ನಕ್ಕಳಿಗೆ ಕೊರೊನಾ ತಗುಲಿದೆ. ರೋಗಿ 243 ಹಾಗೂ ರೋಗಿ 244 ಇಬ್ಬರೂ ರೋಗಿ 149ರ ಮೊಮ್ಮಕ್ಕಳಾಗಿದ್ದು, ರೋಗಿ 245 ಸೇರಿ ಎಲ್ಲರೂ ದೆಹಲಿ ಜಮಾತಗೆ ಹೋಗಿ ಬಂದವರು ಎಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ 7 ಮಂದಿ ಸೋಂಕಿತರಿಗೆ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇಂದು ವರದಿಯಾದ ಪ್ರಕರಣಗಳ ಸೋಂಕಿತರನ್ನು ಕೂಡ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.

    ಕುಡಚಿ ಪಟ್ಟಣದ ಜನತೆ ನಿಜಾಮುದ್ದೀನ್ ನಂಜಿಗೆ ಅಕ್ಷರಶಃ ಬೆಚ್ಚಿ ಬಿದ್ದಿದ್ದು, ಸೋಂಕಿತರ ಸಂಪರ್ಕ ಮಾಡಿದ್ದ 46 ಜನರನ್ನು ಜಿಲ್ಲಾಡಳಿತ ಕ್ವಾರಂಟೈನ ಮಾಡಿದೆ. ದಿನದಿಂದ ದಿನಕ್ಕೆ ಸೊಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಕುಡಚಿ ಪಟ್ಟಣವನ್ನು ಸಂಪೂರ್ಣ ಲಾಕಡೌನ್ ಮಾಡಲಾಗಿದ್ದು, ಲಾಕ್‍ಡೌನ ಉಲಂಘಿಸಿ ಹೊರಬರುವವರ ಮೇಲೆ ಡ್ರೋಣ್ ಕ್ಯಾಮೆರಾ ಮೂಲಕ ಕಣ್ಣಿಟ್ಟಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ.

  • ಆರೋಗ್ಯಾಧಿಕಾರಿ, ಸಿಬ್ಬಂದಿಗೆ ಸಹಕರಿಸುವಂತೆ ಮನೆ ಮನೆಗೂ ತೆರೆಳಿ ಖಾದರ್ ಮನವಿ

    ಆರೋಗ್ಯಾಧಿಕಾರಿ, ಸಿಬ್ಬಂದಿಗೆ ಸಹಕರಿಸುವಂತೆ ಮನೆ ಮನೆಗೂ ತೆರೆಳಿ ಖಾದರ್ ಮನವಿ

    – ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಮಸೀದಿ ಮೈಕ್‍ನಲ್ಲಿ ಮನವಿ

    ಮಂಗಳೂರು: ಕೊರೊನಾ ಸೋಂಕು ತಪಾಸಣೆ ಮಾಡಿಸಿಕೊಳ್ಳಿ, ಆರೋಗ್ಯಾಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಸಹಕರಿಸಿ ಎಂದು ಇಂದು ಮಾಜಿ ಸಚಿವ ಯು.ಟಿ ಖಾದರ್ ಮನೆ ಮನೆಗೂ ತೆರೆಳಿ ಮನವಿ ಮಾಡಿಕೊಂಡಿದ್ದಾರೆ.

    ವಾರದ ಹಿಂದೆ ಮಂಗಳೂರಿನ ಹೊರ ವಲಯದ ತೊಕ್ಕೊಟ್ಟು ಮೂಲದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆ ಸ್ಥಳೀಯ ನಾಗರಿಕರು ಇಲ್ಲಿನ ಚೆಂಬುಗುಡ್ಡೆ ಮಸೀದಿ ಆವರಣದಲ್ಲಿ ಆರೋಗ್ಯ ತಪಾಸಣೆಗೆ ಒಳಪಡುವಂತೆ ಖಾದರ್ ಮಸೀದಿ ಮೈಕ್‍ನಲ್ಲಿ ಇಂದು ಮನವಿ ಮಾಡಿದರು.

    ಸೋಂಕು ದೃಢಪಟ್ಟ ತೊಕ್ಕೊಟ್ಟು ಮೂಲದ ವ್ಯಕ್ತಿ ಚೆಂಬುಗುಡ್ಡೆ ಮಸೀದಿಗೆ ಹಲವು ಬಾರಿ ಪ್ರಾರ್ಥನೆ ಸಲ್ಲಿಸಲು ಆಗಮಿಸಿದರು. ಈ ಹಿನ್ನೆಲೆ ಆರೋಗ್ಯ ಇಲಾಖೆ ತಂಡ ಮಸೀದಿ ಆವರಣದಲ್ಲಿ ಆರೋಗ್ಯ ತಪಾಸಣೆಗೆ ನಡೆಸುತ್ತಿದ್ದು, ಖಾದರ್ ಕೂಡ ಸ್ವತಃ ತಪಾಸಣೆಗೆ ಒಳಗಾಗಿ ಇತರೆ ಮುಸ್ಲಿಂ ಬಾಂಧವರು ಮತ್ತು ನಾಗರಿಕರು ಮಸೀದಿ ಆವರಣದಲ್ಲಿ ಆರೋಗ್ಯ ತಪಾಸಣೆಗೆ ಮಾಡಿಸಿ ಎಂದು ಕೋರಿಕೊಂಡರು.

    ಹಾಗೆಯೇ ಆರೋಗ್ಯ ಇಲಾಖೆಯ ವೈದರು, ಸಿಬ್ಬಂದಿ ತಂಡದ ಜೊತೆ ಸಹಕರಿಸಿ ಅಂತ ಮಸೀದಿ ಮೈಕ್ ನಲ್ಲಿ ಮನವಿ ಮಾಡಿಕೊಂಡರು. ಮಾಜಿ ಸಚಿವರ ಮನವಿ ಹಿನ್ನೆಲೆ ಸ್ವಯಂ ಪ್ರೇರಿತವಾಗಿ ಆಗಮಿಸಿದ ನಾಗರಿಕರು ಆರೋಗ್ಯ ತಪಾಸಣೆಗೆ ಮಾಡಿಸಿಕೊಂಡರು.

  • ಶೆಲ್ ಫಿಶ್ ಬೇಟೆ ಜೋರು – ನದಿಗೆ ಧುಮುಕಿದ ಮತ್ಸ್ಯಪ್ರಿಯರು

    ಶೆಲ್ ಫಿಶ್ ಬೇಟೆ ಜೋರು – ನದಿಗೆ ಧುಮುಕಿದ ಮತ್ಸ್ಯಪ್ರಿಯರು

    ಉಡುಪಿ: ನಾಡದೋಣಿ ಮೀನುಗಾರಿಕೆಗೆ ಸರ್ಕಾರ ಅವಕಾಶ ನೀಡಿದ್ದೇ ತಡ ಕರಾವಳಿಯ ಮೀನುಗಾರರು ನದಿಗೆ ಧುಮುಕಿದ್ದಾರೆ. ಸಮುದ್ರ ಸೇರುವ ಮುನ್ನ ಚಿಪ್ಪು ಮೀನು ಹಿಡಿಯುತ್ತಿದ್ದಾರೆ.

    ಕರಾವಳಿ ಜನ ಕಳೆದ 15 ದಿನದಿಂದ ಮೀನು ಸಿಗದೆ ಕಂಗಾಲಾಗಿದ್ದಾರೆ. ಪ್ರತಿದಿನ ಮೀನು ತಿನ್ನುತ್ತಿದ್ದವರಿಗೆ ತರಕಾರಿ ತಿನ್ನೋದು ಅಂದರೆ ಬಹಳ ಕಷ್ಟ. ಮಲ್ಪೆ ಮೀನುಗಾರಿಕಾ ಬಂದರಲ್ಲಿ ಸಾವಿರಾರು ಜನ ಜಮಾಯಿಸುವುದರಿಂದ ಆಳಸಮುದ್ರ ಮತ್ತು ಪರ್ಸಿನ್ ಮೀನುಗಾರಿಕೆಯನ್ನು ಜಿಲ್ಲಾಡಳಿತ ತಡೆ ಹಿಡಿದಿತ್ತು. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅಸಾಧ್ಯವಾದಾಗ ಡಿಸಿ ಖಡಕ್ ಕ್ರಮ ಕೈಗೊಂಡಿದ್ದರು. ಈ ಆದೇಶದಿಂದ ಮತ್ಸ್ಯಪ್ರಿಯರು ಒಣ ಮೀನಿನ ಕಡೆ ಮುಖ ಮಾಡಿದ್ದರು.

    ಮೀನುಗಾರಿಕೆಗೆ ಸರ್ಕಾರದ ಆದೇಶದ ನಂತರ ಇದೀಗ ಮಹಿಳೆಯರು ಮಕ್ಕಳೂ ನದಿಗಿಳಿದು ಮರುವಾಯಿ ಹೆಕ್ಕುತ್ತಿದ್ದಾರೆ. ಸಿಕ್ಕಾಪಟ್ಟೆ ಟೇಸ್ಟಿಯಾಗಿರುವ ಈ ಶೆಲ್ ಫಿಶ್‍ಗೆ ಈಗ ಭಾರೀ ಡಿಮ್ಯಾಂಡ್ ಇದೆ. ಲಾಕ್‍ಡೌನ್ ಸಂದರ್ಭದಲ್ಲಿ ಇದೀಗ ಇದು ಟೈಂ ಪಾಸ್ ಹಾಬಿಯಾಗಿ ಮಾರ್ಪಾಡಾಗಿದೆ. ಬೆಳಗ್ಗೆ ಸಂಜೆ ಜನ ನದಿ, ತೊರೆಗೆ ಇಳಿದು ಮರುವಾಯಿ ಬಾಚಿಕೊಳ್ಳುತ್ತಿದ್ದಾರೆ.

    ಮರುವಾಯಿ ಹೆಕ್ಕುತ್ತಿದ್ದ ವಾಮನ್ ಮಾತನಾಡಿ, ದಿನದ ಒಂದು ಊಟಕ್ಕಾದರೂ ಮೀನು ಬೇಕೇಬೇಕು. ಫ್ರೆಶ್ ಮೀನು ಮಾರ್ಕೆಟ್‍ಗೆ ಬರುತ್ತಿಲ್ಲ. ಹಾಗಾಗಿ ಗೆಳೆಯರೆಲ್ಲ ಉದ್ಯಾವರ ನದಿಗೆ ಇಳಿದಿದ್ದೇವೆ. ಚಿಪ್ಪು ಹಿಡಿಯುತ್ತಿದ್ದೇವೆ ಎಂದು ಹೇಳಿದರು. ಪ್ರವೀಣ್ ಮತ್ತು ಗಣೇಶ್ ಮಾತಮಾಡಿ, ಚಿಪ್ಪಿನೊಳಗೆ ಇರುವ ಸಣ್ಣ ಪ್ರಮಾಣದ ಮಾಂಸವನ್ನು ಟೇಸ್ಟ್ ಮಾಡಿದವರಿಗೆ ಗೊತ್ತು. ಬೇರೆ ಸಮಯದಲ್ಲಿ ಇದಕ್ಕೆ ಅಷ್ಟೊಂದು ಡಿಮ್ಯಾಂಡಿಲ್ಲ. ಈಗ ಬಹಳ ಬೇಡಿಕೆ ಇದೆ ಎಂದರು.

    ಮರುವಾಯಿ ಸಾರು ಮತ್ತು ಡ್ರೈ ಸುಕ್ಕದ ಜೊತೆ ನೀರ್ ದೋಸೆ ಸೂಪರ್ ಕಾಂಬಿನೇಶನ್. ಕುಚ್ಚಿಲು ಅನ್ನದ ಜೊತೆಗೂ ಬಹಳ ಟೇಸ್ಟ್ ಆಗುತ್ತದೆ. ಕರಾವಳಿ ಜಿಲ್ಲೆ ಉಡುಪಿಯ ನದಿಯಲ್ಲಿ ಸಿಗುವ ಮರುವಾಯಿ ಮಾರುಕಟ್ಟೆ ಸೇರದೆ ಸೀದಾ ಅಡುಗೆ ಮನೆ ಸೇರುತ್ತಿದೆ. ನಾಡದೋಣಿ ಸಮುದ್ರಕ್ಕೆ ಇಳಿದ ಮೇಲೆ ಜನಕ್ಕೆ ತಾಜಾ ಮೀನುಗಳು ಸಿಗಲಿವೆ.

  • ಲಾಕ್‍ಡೌನ್ ಉಲ್ಲಂಘಿಸಿ ಪ್ರವಾಸ- ರೆಸಾರ್ಟಿನಲ್ಲಿ ಮೋಜು, ಮಸ್ತಿ

    ಲಾಕ್‍ಡೌನ್ ಉಲ್ಲಂಘಿಸಿ ಪ್ರವಾಸ- ರೆಸಾರ್ಟಿನಲ್ಲಿ ಮೋಜು, ಮಸ್ತಿ

    ಮಡಿಕೇರಿ: ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನಲ್ಲಿ ಲಾಕ್‍ಡೌನ್ ಉಲ್ಲಂಘಿಸಿ ಕೆಲ ವ್ಯಕ್ತಿಗಳು ಪ್ರವಾಸ ಕೈಗೊಂಡಿದ್ದು, ರೆಸಾರ್ಟಿನಲ್ಲಿ ಮೋಜು ಮಸ್ತಿ ನಡೆಸಿದ್ದಾರೆ.

    ಹೆಮ್ಮಾರಿ ಕೊರೊನಾ ವೈರಸ್ ನಿಯಂತ್ರಿಸಲು ದೇಶವನ್ನು ಲಾಕ್‍ಡೌನ್ ಮಾಡಿ ಜನರು ಮನೆಯಲ್ಲಿರುವಂತೆ ಕೇಂದ್ರ ಸರ್ಕಾರ ಮನವಿ ಮಾಡಿಕೊಂಡಿದೆ. ವೈದ್ಯರು, ಪೊಲೀಸರು ಹಗಲು ರಾತ್ರಿ ಎನ್ನದೆ ತಮ್ಮ ಪ್ರಾಣವನ್ನು ಲೆಕ್ಕಿಸದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಬೆಂಗಳೂರಿನ ಜನರಿಗೆ ಮಾತ್ರ ಇದೆಲ್ಲಕ್ಕಿಂತ ಮೋಜು ಮಸ್ತಿ ಪ್ರವಾಸವೇ ಮುಖ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಕೆಲ ರೆಸಾರ್ಟ್ ಗಳಿಗೆ ದುಡಿಮೆಯೇ ಮುಖ್ಯವಾಗಿದೆ.

    ಸೋಮವಾರಪೇಟೆ ತಾಲೂಕಿನ 7ನೇ ಹೊಸಕೋಟೆ ಸಮೀಪದ ತೊಡೂರಿನಲ್ಲಿರುವ ಪ್ಯಾಡಿಂಗ್ಟನ್ ರೆಸಾರ್ಟ್ ನಲ್ಲಿ ಬೆಂಗಳೂರಿನ ಪ್ರವಾಸಿಗರು ಕಳೆದ ಕೆಲವು ದಿನಗಳಿಂದಲೂ ಮೋಜು ಮಸ್ತಿ ಮಾಡುತ್ತಿದ್ದಾರೆ. ಜೊತೆಗೆ ಪಕ್ಕದಲ್ಲೇ ಇರುವ ಚಿಕ್ಲಿಹೊಳೆ ಜಲಾಶಯಕ್ಕೆ ಸೈಕಲ್, ಜೀಪ್ ಮೂಲಕ ವಿಹಾರಕ್ಕೆ ತೆರಳಿ ಎಂಜಾಯ್ ಮಾಡುತ್ತಿದ್ದಾರೆ. ಕದ್ದು ಮುಚ್ಚಿ ಹೀಗೆ ಓಡಾಡಿಕೊಂಡಿದ್ದ ವೇಳೆ ಇಂದು ಗ್ರಾಮಸ್ಥರಿಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾರೆ.

    ಜಿಲ್ಲೆಯಲ್ಲಿ ಓರ್ವರಿಗೆ ಕೊರೊನಾ ತಗುಲಿದ್ದರಿಂದ ಜಿಲ್ಲೆಯ ಎಲ್ಲಾ ಗಡಿಗಳನ್ನು ಬಂದ್ ಮಾಡಲಾಗಿತ್ತು. ಜಿಲ್ಲೆಯಿಂದ ಯಾರು ಹೊರ ಹೋಗದಂತೆ ಮತ್ತು ಒಳ ಬರದಂತೆ ಕಟ್ಟೆಚ್ಚರ ವಹಿಸಲಾಗಿದೆ. ಇಷ್ಟೆಲ್ಲಾ ಆದರೂ ಬೆಂಗಳೂರಿನಿಂದ ಕೆಲವರು ಕೊಡಗಿನ ರೆಸಾರ್ಟಿಗೆ ಬಂದಿದ್ದು ಹೇಗೆ ಎನ್ನುವ ಪ್ರಶ್ನೆ ಉದ್ಭವಿಸಿದೆ. ಅಷ್ಟೇ ಅಲ್ಲದೆ ಪ್ರವಾಸಿಗರಿಗೆ ಆತಿಥ್ಯ ನೀಡಿರುವ ಪ್ಯಾಡಿಂಗ್ಟನ್ ರೆಸಾರ್ಟ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

  • ‘ಕೊರೊನಾಗಿಂತಲೂ ಭಯಾನಕ ಪೊಲೀಸ್ ವೈರಸ್’

    ‘ಕೊರೊನಾಗಿಂತಲೂ ಭಯಾನಕ ಪೊಲೀಸ್ ವೈರಸ್’

    – ಆರೋಪಿಯ ವಿರುದ್ಧ ಎಫ್‍ಐಆರ್

    ಮಂಗಳೂರು: ಜಗತ್ತು ಕೊರೊನಾ ಎಂಬ ಮಹಾಮಾರಿಗೆ ನಲುಗಿ ಹೋಗಿದೆ. ವೈದ್ಯರು, ಪೊಲೀಸರು ತಮ್ಮ ಜೀವದ ಹಂಗು ತೊರೆದು ಕೊರೊನಾ ನಿಯಂತ್ರಣಕ್ಕೆ ರಾತ್ರಿ ಹಗಲೆನ್ನದೇ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದರಂತೆ ಮಂಗಳೂರಿನಲ್ಲಿ ಕೂಡ ಕಟ್ಟು ನಿಟ್ಟಾಗಿ ನಿಯಮ ಪಾಲಿಸುವಂತೆ ಪೊಲೀಸರು ನೋಡಿಕೊಳ್ಳುತ್ತಿದ್ದಾರೆ.

    ಆದರೆ ಇಂತಹ ಕೊರೊನಾ ವಾರಿಯರ್ಸ್ ಪೊಲೀಸರ ಬಗ್ಗೆ ಕಿಡಿಗೇಡಿಯೊಬ್ಬ ಕೀಳು ಮಟ್ಟದ ಪೋಸ್ಟ್ ಮಾಡಲಾಗಿದೆ. ಆರೋಪಿಯ ವಿರುದ್ಧ ಮಂಗಳೂರಿನ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಮೈಕಲ್ತೋ ಬಿಸಯಾ ಎನ್ನುವ ಫೇಸ್‍ಬುಕ್ ಖಾತೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಹರ್ಷಾ ಅವರ ಫೋಟೋ ಬಳಸಿ, ”ಕೊರೊನಾಗಿಂದತಲೂ ಭಯಾನಕ ವೈರಸ್ ಮಂಗಳೂರು ಪೊಲೀಸರು. ಭಾರೀ ಸುದ್ದಿ ಮಾಡುತ್ತಿರುವ ಪೋಲೀ__ ವೈರಸ್” ಎಂದು ಪೋಸ್ಟ್ ಮಾಡಲಾಗಿದೆ.

    ಈ ಸಂಬಂಧ ವಿರುದ್ಧ ಮಂಗಳೂರಿನ ಪ್ರದೀಪ್ ಎಂಬವರು ಕಂಕನಾಡಿ ನಗರ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಕುರಿತು ಪೊಲೀಸರು, ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ಎಫ್‍ಐಆರ್ ದಾಖಲಿಸಿ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

  • ಕಲಬುರಗಿಯಲ್ಲಿ 2 ವರ್ಷದ ಬಾಲಕನಿಗೆ ಕೊರೊನಾ ಪಾಸಿಟಿವ್

    ಕಲಬುರಗಿಯಲ್ಲಿ 2 ವರ್ಷದ ಬಾಲಕನಿಗೆ ಕೊರೊನಾ ಪಾಸಿಟಿವ್

    ಕಲಬುರಗಿ: ಯಾವುದೇ ಕೊರೊನಾ ಸೋಂಕಿತ ವ್ಯಕ್ತಿಯ ಜೊತೆಗೆ ಸಂಪರ್ಕ ಹೊಂದಿರದ ಎರಡು ವರ್ಷದ ಮಗುವಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಜಿಲ್ಲೆಯ ಜನರನ್ನು ತೀವ್ರ ಆತಂಕಕ್ಕೀಡು ಮಾಡಿದೆ.

    ಚಿತ್ತಾಪುರ ತಾಲೂಕಿನ ವಾಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಉತ್ತರ ಪ್ರದೇಶ ಮೂಲದ ವ್ಯಕ್ತಿಯ ಮಗನಿಗೆ ಕೊರೊನಾ ಸೋಂಕು ಹರಡಿದೆ ಎಂದು ಶಾಸಕ, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

    ಪ್ರಿಯಾಂಕ್ ಖರ್ಗೆ ಅವರು ಇಂದು  ಟ್ವಿಟ್ಟರ್ ಹಾಗೂ ಫೇಸ್‍ಬುಕ್‍ನಲ್ಲಿ ಈ ಮಾಹಿತಿಯನ್ನು ಹಾಕಿಕೊಂಡಿದ್ದಾರೆ. ಹೀಗಾಗಿ ಅವರು ಗ್ರಾಮದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸ್ಥಳೀಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸೂಚಿಸುವುದಾಗಿ ತಿಳಿಸಿದ್ದಾರೆ.

    ಕೊರೊನಾ ಸೋಂಕಿತ ಬಾಲಕ ಶನಿವಾರ ಸಂಜೆ ಮನೆ ಮುಂದೆ ಆಟವಾಡಿಕೊಂಡಿದ್ದಾಗ ಗಾಯ ಮಾಡಿಕೊಂಡಿದ್ದಳು.  ಬಳಿಕ ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಕೊರೊನಾ ಟೆಸ್ಟ್ ಮಾಡಿಸಿದಾಗ ರಿಪೋರ್ಟ್ ಪಾಸಿಟಿವ್ ಇರುವುದಾಗಿ ತಿಳಿದು ಬಂದಿತು. ಮುಂಜಾಗ್ರತಾ ಕ್ರಮವಾಗಿ ತಹಶೀಲ್ದಾರ್ ಉಮಾಕಾಂತ, ತಾಲೂಕು ವೈದ್ಯಾಧಿಕಾರಿ ಮೇಕನ್, ಡಿವೈಎಸ್‍ಪಿ ವೆಂಕನಗೌಡ ಪಾಟೀಲ, ಸಿಪಿಐ ಪಂಚಾಕ್ಷರಿ ಸಾಲಿಮಠ ಅವರು ತಮ್ಮ ಸಿಬ್ಬಂದಿಯೊಂದಿಗೆ ಆಗಮಿಸಿ ಮನೆಯ ಇತರ ಸದಸ್ಯರನ್ನು ವಿಚಾರಣೆ ನಡೆಸಿ ಸುತ್ತಲೂ ಬ್ಯಾರಿಕೇಡ್ ಹಾಕಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.

    ಎಸ್‍ಪಿ ಯಡಾ ಮಾರ್ಟಿನ್ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದರಿಂದ ಜಿಲ್ಲೆಯಲ್ಲಿ ಆತಂಕದ ವಾತವರಣ ನಿರ್ಮಾಣವಾಗಿದೆ.

    ಕೊರೊನಾ ಪೀಡಿತ ರೋಗಿಗಳಿಗೆ ಪ್ರಸ್ತುತ ಇ.ಎಸ್.ಐ.ಸಿ. ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಜಿಲ್ಲೆಯ ಇಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ.

  • ರಾತ್ರೋರಾತ್ರಿ ನಮ್ಮ ಮನೆಗೆ ಔಷಧಿ ತಲುಪಿಸಿದ್ರು – ಮಹಿಳೆಯ ಮಗಳಿಂದ ಕೃತಜ್ಞತೆ

    ರಾತ್ರೋರಾತ್ರಿ ನಮ್ಮ ಮನೆಗೆ ಔಷಧಿ ತಲುಪಿಸಿದ್ರು – ಮಹಿಳೆಯ ಮಗಳಿಂದ ಕೃತಜ್ಞತೆ

    – ಟಿಕ್‍ಟಾಕ್ ಮೂಲಕ ಧನ್ಯವಾದ

    ಬೆಂಗಳೂರು: ತಾಯಿಗೆ ಸಕಾಲಕ್ಕೆ ಔಷಧಿ ದೊರಕಿಸಿದ್ದಕ್ಕೆ ಸಿಎಂ ಯಡಿಯೂರಪ್ಪ, ಬಿ.ವೈ ವಿಜಯೇಂದ್ರ ಮತ್ತು ರಾಮದುರ್ಗ ತಹಶೀಲ್ದಾರ್ ಅವರಿಗೆ ಮಗಳು ಪವಿತ್ರ ಅರಭಾವಿ ಕೃತಜ್ಞತೆ ಸಲ್ಲಿದ್ದಾರೆ.

    ರಾಮದುರ್ಗ ತಾಲೂಕಿನ ನರಸಾಪುರ ಗ್ರಾಮದ ಮಹಿಳೆಗೆ ಆಪರೇಷನ್ ಮಾಡಿ ಕಿಡ್ನಿ ಕಸಿ ಮಾಡಿದರೂ, ಸೂಕ್ತ ಔಷಧಿ ಇಲ್ಲದೆ ನರಳಾಡುತ್ತಿದ್ದರು. ನಂತರ ಮಗಳು ಪವಿತ್ರಾ ಅರಭಾವಿ ಟಿಕ್‍ಟಾಕ್ ಮೂಲಕವೇ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದಿದ್ದರು. ಇದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ತಕ್ಷಣವೇ ಸ್ಪಂದಿಸಿದ್ದು, ಮಹಿಳೆಗೆ ಒಂದು ತಿಂಗಳ ಔಷಧಿ ವ್ಯವಸ್ಥೆ ಮಾಡುವಂತೆ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು.

    ಈ ಹಿನ್ನೆಲೆಯಲ್ಲಿ ಪವಿತ್ರಾ ಅರಭಾವಿ ಕುಟುಂಬಕ್ಕೆ ಸಕಾಲಕ್ಕೆ ಔಷಧಿ ದೊರಕಿಸಿದ್ದಕ್ಕೆ ಅದೇ ಟಿಕ್‍ಟಾಕ್ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳಿಗೆ, ಅವರ ಪುತ್ರ ವಿಜಯೇಂದ್ರ ಅವರಿಗೂ ತುಂಬಾ ಧನ್ಯವಾದಗಳು. ಯಾಕೆಂದರೆ ನಮ್ಮ ಕುಟುಂಬಕ್ಕೆ ಇದ್ದ ಕಷ್ಟವನ್ನು ತಮ್ಮ ಕುಟುಂಬದ ಕಷ್ಟ ಅಂದುಕೊಂಡು ರಾತ್ರೋರಾತ್ರಿ ನಮ್ಮ ಮನೆವರೆಗೂ ಮಾತ್ರೆ ತಲುಪಿಸಿದ್ದಾರೆ. ಅಲ್ಲದೇ ರಾಮದುರ್ಗ ತಹಶೀಲ್ದಾರ್ ನಮಗೆ ಬಂದು ಔಷಧಿ ಕೊಟ್ಟಿದ್ದಾರೆ. ಹೀಗಾಗಿ ಎಲ್ಲಾ ಇಲಾಖೆಯ ಅಧಿಕಾರಿಗಳಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.

    ಟಿಕ್‍ಟಾಕ್ ಮೂಲಕ ಮನವಿ:
    ಬೆಳಗಾವಿಯ ಜಿಲ್ಲೆಯ ರಾಮದುರ್ಗ ತಾಲೂಕಿನ ನರಸಾಪುರ ಗ್ರಾಮದ ಶೇಖವ್ವ ಅರಂಭಾವಿ ಅವರು ಕಿಡ್ನಿ ವೈಫಲ್ಯದಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಚಿಕಿತ್ಸೆ ವೇಳೆ ಪತಿ ಪತ್ನಿಗಾಗಿ ತಮ್ಮ ಒಂದು ಕಿಡ್ನಿ ದಾನ ಮಾಡಿದ್ದರು. ಜನವರಿ 17ರಂದು ಹುಬ್ಬಳ್ಳಿಯ ಎಸ್‍ಡಿಎಂ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಮಾಡಲಾಗಿತ್ತು. ಆದರೆ ಲಾಕ್‍ಡೌನ್ ಘೋಷಣೆಯಾದ ಕಾರಣ ಶೇಖವ್ವ ಅವರಿಗೆ ಅಗತ್ಯ ಔಷಧಿಗಳು ದೊರೆಯದೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು.

    ಏನು ಮಾಡುವುದು ಎಂದು ತೋಚದೇ ಅವರ ಕುಟುಂಬ ತೀವ್ರ ನೋವಿನಲ್ಲಿತ್ತು. ಆಗ ಶೇಖವ್ವ ಅವರ ಮಗಳು ಪವಿತ್ರ ಹೊಳಿದಿದ್ದೇ ಟಿಕ್‍ಟಾಕ್. ಟಿಕ್‍ಟಾಕ್‍ನಲ್ಲಿ ವಿಡಿಯೋ ಮಾಡಿ, ತನ್ನ ತಾಯಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಕುರಿತು ಪವಿತ್ರ ತಿಳಿಸಿದ್ದರು. ಅಲ್ಲದೆ ಮುಖ್ಯಮಂತ್ರಿಗಳು ಈ ಕುರಿತು ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದರು. ಈ ವಿಡಿಯೋ ಸಿಎಂ ಗಮನಕ್ಕೆ ಬಂದಿದ್ದು, ತಕ್ಷಣವೇ ಎಚ್ಚೆತ್ತ ಬಿಎಸ್‍ವೈ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಪರಿಹಾರಕ್ಕೆ ಸೂಚಿಸಿದ್ದಾರೆ.

    ಬೆಳಗಾವಿಯ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮೊಬೈಲ್ ಕರೆ ಮಾಡಿ ಶೇಖವ್ವ ಅರಂಭಾವಿ ಅವರಿಗೆ ತಕ್ಷಣವೇ ಒಂದು ತಿಂಗಳಿಗಾಗುವಷ್ಟು ಅಗತ್ಯ ಔಷಧಿಗಳನ್ನು ಪೂರೈಸಿ ಎಂದು ಆದೇಶಿಸಿದ್ದರು. ಸಿಎಂ ಆದೇಶಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಶೇಖವ್ವ ಅರಂಭಾವಿ ಅವರಿಗೆ ಅಗತ್ಯ ಔಷಧಿ ಪೂರೈಸಿ, ಈ ಬಗ್ಗೆ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಿದ್ದರು.