Tag: Coronavirus

  • ಚೀನಾ ಪರವಾಗಿರುವ WHOಗೆ ಫಂಡ್ ನೀಡಲ್ಲ -ಟ್ರಂಪ್

    ಚೀನಾ ಪರವಾಗಿರುವ WHOಗೆ ಫಂಡ್ ನೀಡಲ್ಲ -ಟ್ರಂಪ್

    – ಮೊದಲೇ ಎಚ್ಚರಿಕೆ ನೀಡದ್ದರಿಂದ ವಿಶ್ವದಲ್ಲಿ ಅವಾಂತರ
    – ಅಮೆರಿಕದಿಂದಲೇ ಅತಿ ಹೆಚ್ಚು ಫಂಡ್

    ವಾಷಿಂಗ್ಟನ್: ವಿಶ್ವವ್ಯಾಪಿ ಹರಡುತ್ತಿರುವ ಕೊರೊನಾ ವೈರಸ್ ಮೊದಲು ಚೀನಾದಲ್ಲಿ ಪತ್ತೆಯಾದಾಗ ಇದು ಅತೀ ವೇಗವಾಗಿ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್‍ಒ) ಮೊದಲೇ ಎಚ್ಚರಿಕೆ ನೀಡಬೇಕಿತ್ತು. ಆದರೆ ವಿಶ್ವಕ್ಕೆ ಈ ಬಗ್ಗೆ ಸಮರ್ಪಕ ಮಾಹಿತಿ ನೀಡುವಲ್ಲಿ ವಿಫಲವಾಗಿದ್ದಕ್ಕೆ ಅಮೆರಿಕ ಡಬ್ಲ್ಯೂಎಚ್‍ಒಗೆ ನೀಡುತ್ತಿದ್ದ ಧನಸಹಾಯವನ್ನು ನಿಲ್ಲಿಸಿದೆ.

    ಚೀನಾ ದೇಶದಲ್ಲಿ ಕೊರೊನಾ ವೈರಸ್ ಸೋಂಕು ಮೊದಲು ಕಾಣಿಸಿಕೊಂಡಾಗ ಅದು ವೇಗವಾಗಿ ಹಬ್ಬುತ್ತಿರುವ ಬಗ್ಗೆ ಡಬ್ಲ್ಯೂಎಚ್‍ಒ ಮೊದಲೇ ಎಚ್ಚರಿಕೆ ನೀಡದೆ ಪ್ರಕರಣವನ್ನು ಮುಚ್ಚಿಹಾಕುವಲ್ಲಿ ಮತ್ತು ತೀವ್ರವಾಗಿ ನಿಗಾವಹಿಸುವಲ್ಲಿ ವಿಫಲವಾಗಿದೆ. ಡಬ್ಲ್ಯೂಎಚ್‍ಒ ಮೊದಲೇ ಸರಿಯಾಗಿ ಮಾಹಿತಿ ಕೊಟ್ಟಿದ್ದರೆ ವೈರಸ್ ಈ ರೀತಿ ವಿಶ್ವದಲ್ಲಿ ಅಟ್ಟಹಾಸ ಮೆರೆಯುವುದನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳಬಹುದಾಗಿತ್ತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಡಿಕಾರಿದ್ದಾರೆ.

    ಶ್ವೇತ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಟ್ರಂಪ್ ಅವರು, ಕೊರೊನಾ ಬಗ್ಗೆ ಮಾಹಿತಿ ನೀಡುವಲ್ಲಿ ಡಬ್ಲ್ಯೂಎಚ್‍ಒ ವಿಫಲವಾಗಿದೆ. ಹೀಗಾಗಿ ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದ್ದು, ಡಬ್ಲ್ಯೂಎಚ್‍ಒಗೆ ನೀಡಲಾಗುತ್ತಿದ್ದ ಧನಸಹಾಯವನ್ನು ನಿಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ.

    ಅಮೆರಿಕದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬಾರದ ರೀತಿಯಲ್ಲಿ ಹಬ್ಬುತ್ತಿದೆ. ಈ ಅಪಾಯದ ಬಗ್ಗೆ ಅರಿವಿದ್ದರೂ ಕೂಡ ಡಬ್ಲ್ಯೂಎಚ್‍ಒ ತಮ್ಮ ದೇಶಕ್ಕೆ ಮುನ್ನೆಚ್ಚರಿಕೆ ನೀಡಿರಲಿಲ್ಲ, ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರಲಿಲ್ಲ ಎಂದು ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಅಲ್ಲದೇ ಚೀನಾದ ಪರವಾಗಿ ಡಬ್ಲ್ಯೂಎಚ್‍ಒ ಇದೆ ಎನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಡಬ್ಲ್ಯೂಎಚ್‍ಒಗೆ ಅಮೆರಿಕದಿಂದ ಹೆಚ್ಚು ಧನಸಹಾಯವನ್ನು ಮಾಡಲಾಗುತ್ತಿತ್ತು. ಅಮೆರಿಕದ ಮಂದಿ ವಿಶ್ವ ಆರೋಗ್ಯ ಸಂಸ್ತೆಗೆ ಹೆಚ್ಚು ಫಂಡ್ ನೀಡುತ್ತಿದ್ದರು. ಕಳೆದ ವರ್ಷ ಸಂಸ್ಥೆಗೆ ಅಮೆರಿಕ 400 ದಶಲಕ್ಷ ಯುಎಸ್ ಡಾಲರ್(3,056 ಕೋಟಿ) ನೆರವನ್ನು ನೀಡಿತ್ತು. ಪ್ರತಿ ವರ್ಷ 400ರಿಂದ 500 ದಶಲಕ್ಷ ಯುಎಸ್ ಡಾಲರ್ ನೆರವನ್ನು ಡಬ್ಲ್ಯೂಎಚ್‍ಒಗೆ ಅಮೆರಿಕ ನೀಡುತ್ತದೆ. ಆದರೆ ಚೀನಾ ಡಬ್ಲ್ಯೂಎಚ್‍ಒಗೆ 40 ದಶಲಕ್ಷ ಯುಎಸ್ ಡಾಲರ್ ಗಿಂತ ಕಡಿಮೆ ಹಣವನ್ನು ನೀಡುತ್ತದೆ. ಆದರೂ ಡಬ್ಲ್ಯೂಎಚ್‍ಒ ಚೀನಾ ಪರವಾಗಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ.

    ಡಬ್ಲ್ಯೂಎಚ್‍ಒ ಕೊರೊನಾ ವೈರಸ್ ಬಗ್ಗೆ ಸರಿಯಾಗಿ ಮಾಹಿತಿ ವಿಶ್ವಕ್ಕೆ ನೀಡುತ್ತಿಲ್ಲ. ರಾಷ್ಟ್ರಗಳ ನಡುವಿನ ಬಾಂಧವ್ಯ ಹೆಚ್ಚಿಸಲು, ಸ್ನೇಹವನ್ನು ಹೆಚ್ಚಿಸಲು ಡಬ್ಲ್ಯೂಎಚ್‍ಒ ಕೆಲಸ ಮಾಡಬೇಕು. ಯಾವ ರಾಷ್ಟ್ರದ ಸ್ಥಿತಿ ಹೇಗಿದೆ ಎಂದು ವಿಶ್ವಕ್ಕೆ ಮಾಹಿತಿ ನೀಡಬೇಕು. ಆದರೆ ಡಬ್ಲ್ಯೂಎಚ್‍ಒ ಕೊರೊನಾ ವೈರಸ್ ಹುಟ್ಟಿಕೊಂಡ ರಾಷ್ಟ್ರದಲ್ಲಿ ಯಾವ ಹೊಸ ನಿಯಮ ಪಾಲಿಸುತ್ತಿದ್ದಾರೆ? ವಿಜ್ಞಾನಿಗಳ ಸಂಶೋಧನೆ ಏನಾಯಿತು? ವೈದ್ಯರು ಹೇಗೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಇತರೆ ರಾಷ್ಟ್ರಗಳಿಗೆ ನೀಡುತ್ತಿಲ್ಲ. ಚೀನಾದ ಪರವಾಗಿ ಡಬ್ಲ್ಯೂಎಚ್‍ಒ ನಿಂತಿದೆ ಎಂದು ಟ್ರಂಪ್ ಹರಿಹಾಯ್ದಿದ್ದಾರೆ.

    ಸದ್ಯ ವಿಶ್ವಾದ್ಯಂತ 1,17,217 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇದರಲ್ಲಿ ಹೆಚ್ಚು ಮಂದಿ ಅಮೆರಿಕದಲ್ಲಿಯೇ ಸಾವನ್ನಪ್ಪಿದ್ದಾರೆ. ಅಮೆರಿಕದಲ್ಲಿ 25 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 5,94,207 ಮಂದಿಗೆ ಸೋಂಕು ತಗುಲಿರುವುದು ವರದಿಯಾಗಿದೆ. ಇದು ಜಾಗತಿಕ ಮಟ್ಟದಲ್ಲಿ ಆರ್ಥಿಕ ವ್ಯವಸ್ಥೆಯನ್ನು ಅಲ್ಲೋಲ ಕಲ್ಲೋಲ ಮಾಡಿದೆ.

  • ಕಿಲ್ಲರ್ ಕೊರೊನಾಗೆ ಚಿಕ್ಕಬಳ್ಳಾಪುರದ 65 ವರ್ಷದ ವೃದ್ಧ ಬಲಿ – ರಾಜ್ಯದಲ್ಲಿ ಸಾವಿನ ಸಂಖ್ಯೆ 11ಕ್ಕೆ ಏರಿಕೆ

    ಕಿಲ್ಲರ್ ಕೊರೊನಾಗೆ ಚಿಕ್ಕಬಳ್ಳಾಪುರದ 65 ವರ್ಷದ ವೃದ್ಧ ಬಲಿ – ರಾಜ್ಯದಲ್ಲಿ ಸಾವಿನ ಸಂಖ್ಯೆ 11ಕ್ಕೆ ಏರಿಕೆ

    ಚಿಕ್ಕಬಳ್ಳಾಪುರ: ಮಹಾಮಾರಿ ಕೊರೊನಾ ವೈರಸ್‍ಗೆ ಚಿಕ್ಕಬಳ್ಳಾಪುರ ನಗರದ ನಿವಾಸಿ 65 ವರ್ಷದ ವೃದ್ಧ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೊನಾಗೆ ಸಾವನ್ನಪ್ಪಿದವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

    ಜಿಲ್ಲೆಯಲ್ಲಿ ಇದು ಸೋಂಕಿನಿಂದ ಸಾವನ್ನಪ್ಪಿದ ಎರಡನೇ ಪ್ರಕರಣವಾಗಿದೆ. ಈ ಮೊದಲು ಗೌರಿಬಿದನೂರಿನ 70 ವರ್ಷದ ವೃದ್ಧೆ ಕೊರೊನಾ ವೈರಸ್‍ನಿಂದ ಮೃತಪಟ್ಟಿದ್ದರು. ಇಂದು ಚಿಕ್ಕಬಳ್ಳಾಪುರ ನಗರದ 65 ವರ್ಷದ ವೃದ್ಧ ಮೃತಪಟ್ಟಿದ್ದಾರೆ. ವೃದ್ಧ ಮೊದಲೇ ಅಸ್ತಮಾ, ಬಿಪಿ, ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಇವರನ್ನು ಏಪ್ರಿಲ್ 08ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರವಷ್ಟೇ ಇವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಆದರೆ ಇಂದು ಸೋಂಕಿತ ವೃದ್ಧ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

    ಈ ವೃದ್ಧ ವಿದೇಶಕ್ಕೆ ಹೋಗಿ ಬಂದ ಹಿನ್ನೆಲೆ ಹೊಂದಿಲ್ಲ. ಕೊರೊನಾ ಸೋಂಕಿತ ಪ್ರದೇಶಗಳಿಗೆ ಹೋಗಿ ಬಂದ ಟ್ರಾವೆಲ್ ಹಿಸ್ಟರಿ ಕೂಡ ಇಲ್ಲ. ಆದರೂ ಇವರಿಗೆ ಕೊರೊನಾ ಹೇಗೆ ಬಂತು ಅನ್ನೋದು ಯಕ್ಷ ಪ್ರಶ್ನೆಯಾಗಿದ್ದು, ಕೊರೊನಾ ಹೇಗೆ ಬಂತು ಅಂತ ಪತ್ತೆ ಹಚ್ಚುವಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ನಿರತರಾಗಿದ್ದಾರೆ.

    ಸದ್ಯ ಮೃತನ ಮನೆಯ ಎಲ್ಲಾ ಸದಸ್ಯರನ್ನು ಚಿಕ್ಕಬಳ್ಳಾಪುರ ಕೋವಿಡ್-19 ಜಿಲ್ಲಾಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಚಿಕ್ಕಬಳ್ಳಾಪುರ ನಗರದ ಸೋಂಕಿತ ವೃದ್ಧ ವಾಸವಿದ್ದ ಏರಿಯಾ ಅಕ್ಕ ಪಕ್ಕದ 4 ವಾರ್ಡುಗಳನ್ನ ಸೀಲ್‍ಡೌನ್ ಮಾಡಲಾಗಿದೆ.

  • ಬೆಂಗ್ಳೂರಲ್ಲಿ 40 ಹಾಟ್‍ಸ್ಪಾಟ್ – ಯಾವ ವಾರ್ಡಿನಲ್ಲಿ ಎಷ್ಟು ಮಂದಿಗೆ ಸೋಂಕು?

    ಬೆಂಗ್ಳೂರಲ್ಲಿ 40 ಹಾಟ್‍ಸ್ಪಾಟ್ – ಯಾವ ವಾರ್ಡಿನಲ್ಲಿ ಎಷ್ಟು ಮಂದಿಗೆ ಸೋಂಕು?

    ಬೆಂಗಳೂರು: ಸಿಲಿಕಾನ್ ಸಿಟಿ, ಗ್ರೀನ್‍ಸಿಟಿ ಎಂದು ಕರೆಸಿಕೊಳ್ಳೋ ಬೆಂಗಳೂರು ಈಗ ಕೊರೊನಾ ಹಾಟ್‍ಸ್ಪಾಟ್ ಆಗುತ್ತಿದೆ. ಬೆಂಗಳೂರಿನಲ್ಲಿ 2 ದಿನಗಳ ಅಂತರದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಜೊತೆಗೆ, ಟಿಪ್ಪುನಗರ, ಆನಂದಪುರ ವಾರ್ಡ್‌ಗಳನ್ನು ಸೀಲ್‍ಡೌನ್ ಮಾಡಲಾಗಿದ್ದು, 40 ಹಾಟ್‍ಸ್ಪಾಟ್‍ಗಳ ಮೇಲೆ ಸರ್ಕಾರ ತೀವ್ರ ನಿಗಾ ಇರಿಸಿದೆ.

    ಲಾಕ್‍ಡೌನ್ ಮಾಡಿ ಎಷ್ಟೇ ಮನವಿ ಮಾಡಿ, ಬುದ್ಧಿ ಹೇಳಿದರೂ ಜನರು ಕೇಳುತ್ತಿಲ್ಲ. ಸುಖಾಸುಮ್ಮನೇ ಮನೆಯಿಂದ ಹೊರಗೆ ಬರುತ್ತಿದ್ದಾರೆ. ಇದರ ಪರಿಣಾಮವೇ ರಾಜ್ಯದಲ್ಲಿನ ಕೊರೊನಾ ಲಿಸ್ಟ್ ನಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಇಲ್ಲಿ ಪ್ರತಿದಿನವೂ ಕೇಸ್ ದಾಖಲಾಗುತ್ತಿದ್ದು, ಬೆಂಗಳೂರಿನಲ್ಲಿ ಕೇವಲ ಒಂದು ತಿಂಗಳ ಅವಧಿಯಲ್ಲಿ 80 ಕೊರೊನಾ ಕೇಸ್ ದಾಖಲಾಗಿದೆ.

    ಇದನ್ನ ಮನಗಂಡ ಬಿಬಿಎಂಪಿ ಕೊರೊನಾ ತಡೆಗೆ ಬ್ಲೂ ಪ್ರಿಂಟ್ ಸಿದ್ಧ ಪಡಿಸಿಕೊಂಡಿದೆ. ಬೆಂಗಳೂರಿನ ಆರು ವಲಯಗಳಲ್ಲಿ 40 ವಾರ್ಡ್‌ಗಳನ್ನು ಹಾಟ್‍ಸ್ಪಾಟ್ ಅಂತ ಗುರುತಿಸಿದೆ. ಇದರಲ್ಲಿ ಈಗಾಗಲೇ ಪಾದರಾಯನಪುರ, ಬಾಪೂಜಿನಗರ, ಜೆಜೆ ನಗರ ವಾರ್ಡ್ ಗಳು ಸೀಲ್‍ಡೌನ್ ಆಗಿದೆ. ಇವುಗಳ ಜೊತೆಗೆ 40 ವಾರ್ಡಿನಲ್ಲಿ ಟಫ್ ಲಾಕ್‍ಡೌನ್ ಜಾರಿಯಾಗಲಿದೆ. ಈ ವಾರ್ಡ್‌ಗಳನ್ನು ಅಗತ್ಯ ವಸ್ತುಗಳ ಖರೀದಿಗೂ ಜನರು ಹೊರಬಾರದಂತೆ ನಿಗಾ ವಹಿಸಲು ಪ್ಲಾನ್ ಆಗುತ್ತಿದೆ. ಹೀಗಾಗಿ ಅಡ್ಡ ರಸ್ತೆಗಳನ್ನ ಸಂಪೂರ್ಣ ಬಂದ್ ಮಾಡಲಾಗುತ್ತಿದೆ. ಗ್ತಿದೆ.

    ಬೆಂಗಳೂರು ದಕ್ಷಿಣ ವಲಯ-12 ವಾರ್ಡ್
    * ಜೆ.ಪಿ.ನಗರ – 4 ಕೇಸ್
    * ಶಾಕಂಬರಿನಗರ – 3 ಕೇಸ್
    * ಬಾಪೂಜಿನಗರ – 2 ಕೇಸ್
    * ಮಡಿವಾಳ – 2 ಕೇಸ್
    * ಗಿರಿನಗರ – 1 ಕೇಸ್
    * ಆಡುಗೋಡಿ – 1 ಕೇಸ್
    * ಸುದ್ದುಗುಂಟೆಪಾಳ್ಯ – 1 ಕೇಸ್
    * ಹೊಸಹಳ್ಳಿ – 1 ಕೇಸ್
    * ಸುಧಾಮನಗರ – 1 ಕೇಸ್
    * ಅತ್ತಿಕುಪ್ಪೆ – 1 ಕೇಸ್
    * ಕರಿಸಂದ್ರ – 1 ಕೇಸ್

    ಪೂರ್ವ ವಲಯ – 9 ವಾರ್ಡ್
    * ವಸಂತನಗರ – 2 ಕೇಸ್
    * ಗಂಗಾನಗರ – 1 ಕೇಸ್
    * ಲಿಂಗರಾಜಪುರ – 1 ಕೇಸ್
    * ಜೀವನ್ ಭೀಮಾನಗರ – 2 ಕೇಸ್
    * ರಾಧಕೃಷ್ಣ ಟೆಂಪಲ್ – 4 ಕೇಸ್
    * ಸಿ.ವಿ ರಾಮನ್ ನಗರ – 1 ಕೇಸ್
    * ರಾಮಸ್ವಾಮಿ ಪಾಳ್ಯ – 1 ಕೇಸ್
    * ಮಾರುತಿಸೇವಾ ನಗರ – 1 ಕೇಸ್
    * ಸಂಪಗಿರಾಮ ನಗರ

    ಪಶ್ಚಿಮ ವಲಯ – 7 ವಾರ್ಡ್ ಗಳು
    * ಅರಮನೆನಗರ – 3 ಕೇಸ್
    * ನಾಗರಭಾವಿ – 1 ಕೇಸ್
    * ನಾಗಪುರ – 1 ಕೇಸ್
    * ಶಿವನಗರ – 1 ಕೇಸ್
    * ಆಜಾದ್‍ನಗರ – 5 ಕೇಸ್
    * ಜಗಜೀವನ್‍ರಾಮ್ ನಗರ – 1 ಕೇಸ್
    * ಸುಭಾಷ್ ನಗರ

    ಯಲಹಂಕ ವಲಯದಲ್ಲಿ ಒಟ್ಟು 2 ವಾರ್ಡ್‌ಗಳನ್ನು ಹಾಟ್‍ಸ್ಪಾಟ್ ಎಂದು ಗುರುತಿಸಲಾಗಿದೆ.
    * ಥಣಿಸಂಧ್ರ – 1 ಕೇಸ್
    * ಬ್ಯಾಟರಾಯನಪುರ – 1 ಕೇಸ್

    ಬೊಮ್ಮನಹಳ್ಳಿ ವಲಯದಲ್ಲಿ ಒಟ್ಟು 2 ಹಾಟ್‍ಸ್ಪಾಟ್ ವಾರ್ಡ್‌ಗಳಿವೆ.
    * ಸಿಂಗಸಂದ್ರ – 4 ಕೇಸ್
    * ಬೇಗೂರು – 1 ಕೇಸ್

    ಮಹದೇವಪುರ ವಲಯದಲ್ಲಿ 6 ವಾರ್ಡ್ ಗಳು ಹಾಟ್‍ಸ್ಟಾಟ್ ಆಗಿವೆ.
    * ಹೊರಮಾವು – 2 ಕೇಸ್
    * ಹಗದೂರು – 1 ಕೇಸ್
    * ರಾಮಮೂರ್ತಿನಗರ – 1 ಕೇಸ್
    * ಹೂಡಿ – 1 ಕೇಸ್
    * ವರ್ತೂರು – 1 ಕೇಸ್
    * ಗರುಡಾಚಾರ್ ಪಾಳ್ಯ – 1 ಕೇಸ್

    ಇಷ್ಟು ನಗರಗಳು ಬೆಂಗಳೂರಿನಲ್ಲಿ ಕೊರೊನಾ ಹಾಟ್‍ಸ್ಪಾಟ್‍ಗಳಾಗಿವೆ. ಈ ಬಗ್ಗೆ ಡಿಜಿ ಪ್ರವೀಣ್ ಸೂದ್ ಅವರ ಜೊತೆ ಬೆಂಗಳೂರು ಕಮಿಷನರ್ ಭಾಸ್ಕರ್ ರಾವ್ ಅವರು ಚರ್ಚೆ ಮಾಡಿದ್ದಾರೆ. ಹಾಟ್‍ಸ್ಪಾಟ್‍ಗಳಲ್ಲಿ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಿ ಅಂತ ಭಾಸ್ಕರ್ ರಾವ್ ಅವರಿಗೆ ಡಿಜಿ ಸೂಚಿಸಿದ್ದಾರೆ. ಗೃಹ ಸಚಿವ ಬೊಮ್ಮಾಯಿ ಕೂಡ ಕಠಿಣ ಕ್ರಮ ತೆಗೆದುಕೊಳ್ಳೋದಾಗಿ ಹೇಳಿದ್ದಾರೆ.

    ಅಷ್ಟೇ ಅಲ್ಲದೇ ಸಹಾಯವಾಣಿ ಕೇಂದ್ರ ತೆರೆದು ಎಲ್ಲ ಸೌಲಭ್ಯಗಳನ್ನು ಮನೆ ಬಾಗಿಲಿಗೆ ಕೊಡಲು ಬಿಬಿಎಂಪಿಯಲ್ಲಿ ಚರ್ಚೆಯಾಗಿದೆ. ರೆಡ್ ಝೋನ್‍ಗಳಲ್ಲಿ ಹೊರಗಿನವರು ಒಳಗೆ, ಒಳಗಿನವರು ಹೊರಗೆ ಬಾರದಂತೆ ಕ್ರಮವಹಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

  • ಕೊರೊನಾ ವಿರುದ್ಧದ ಹೋರಾಟಕ್ಕೆ ಪೊಲೀಸರಿಗೆ ವಿಶ್ವದ ಅತ್ಯಂತ ಕುಬ್ಜ ಮಹಿಳೆ ಸಾಥ್

    ಕೊರೊನಾ ವಿರುದ್ಧದ ಹೋರಾಟಕ್ಕೆ ಪೊಲೀಸರಿಗೆ ವಿಶ್ವದ ಅತ್ಯಂತ ಕುಬ್ಜ ಮಹಿಳೆ ಸಾಥ್

    ಮುಂಬೈ: ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ವಿಶ್ವದ ಅತ್ಯಂತ ಕಿರಿಯ ಮಹಿಳೆ ಜ್ಯೋತಿ ಆಮ್ಗೆ ಅವರು ಪೊಲೀಸರಿಗೆ ಸಾಥ್ ನೀಡಿದ್ದಾರೆ.

    26 ವರ್ಷದ ಜ್ಯೋತಿ ಆಮ್ಗೆ ಅವರು ಮಹಾರಾಷ್ಟ್ರದ ನಾಗ್ಪುರದಲ್ಲಿ ಪೊಲೀಸರೊಂದಿಗೆ ರಸ್ತೆಗೆ ಬಂದು ಕೊರೊನಾ ವೈರಸ್ ಹರಡದಂತೆ ತಡೆಯಲು ಸಹಾಯ ಮಾಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದ್ದಾರೆ. ನಾಗ್ಪುರ ಪೊಲೀಸರು ಜ್ಯೋತಿ ಅವರನ್ನು ತಮ್ಮ ವಾಹನದ ಮೇಲೆ ನಿಲ್ಲಿಸಿ ಮೈಕ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ಇದನ್ನೂ ಓದಿ: ‘ನಮ್ಮನ್ನು ಊರಿಗೆ ಕಳಿಸಿ, ಹಸಿವಿನಿಂದ ಸಾಯ್ತಿದ್ದೇವೆ’- ಮುಂಬೈನಲ್ಲಿ ಸಿಡಿದೆದ್ದ ವಲಸೆ ಕಾರ್ಮಿಕರು

    ಹೆಮ್ಮಾರಿ ಕೊರೊನಾ ವೈರಸ್ ಎದುರಿಸಲು ಸ್ಥಳೀಯ ಆಡಳಿತಕ್ಕೆ, ಪೊಲೀಸರಿಗೆ ಸಹಾಯ ಹಾಗೂ ಸಹಕಾರ ನೀಡಬೇಕು. ಜೊತೆಗೆ ಪ್ರತಿಯೊಬ್ಬರೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಜ್ಯೋತಿ ಆಮ್ಗೆ ಸಾರ್ವಜನಿಕರಿಗೆ ಕೇಳಿಕೊಂಡರು.

    ಆಮ್ಗೆ ಅವರು ನಟಿಯಾಗಿದ್ದು, ಕೊರೊನಾ ವೈರಸ್ ಹರಡಿದ ನಂತರ ಅವರು ಕೂಡ ತಮ್ಮ ಎಲ್ಲಾ ಅಂತರರಾಷ್ಟ್ರೀಯ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ. ಲಾಕ್‍ಡೌನ್ ನಂತರ ಮನೆಯೊಳಗೆ ಉಳಿದುಕೊಂಡಿದ್ದಾರೆ.

    ಜ್ಯೋತಿ ಅವರು 26 ವರ್ಷದವರಾಗಿದ್ದು, 62.8 ಸೆಂ.ಮೀ ಎತ್ತರ ಇದ್ದಾರೆ. 2011ರಲ್ಲಿ ಜ್ಯೋತಿ ಅವರನ್ನು ವಿಶ್ವದ ಕುಬ್ಜ ಮಹಿಳೆ ಎಂದು ಗಿನ್ನಿಸ್ ಸಂಸ್ಥೆ ಪ್ರಕಟಿಸಿತ್ತು.

  • ‘ನಮ್ಮನ್ನು ಊರಿಗೆ ಕಳಿಸಿ, ಹಸಿವಿನಿಂದ ಸಾಯ್ತಿದ್ದೇವೆ’- ಮುಂಬೈನಲ್ಲಿ ಸಿಡಿದೆದ್ದ ವಲಸೆ ಕಾರ್ಮಿಕರು

    ‘ನಮ್ಮನ್ನು ಊರಿಗೆ ಕಳಿಸಿ, ಹಸಿವಿನಿಂದ ಸಾಯ್ತಿದ್ದೇವೆ’- ಮುಂಬೈನಲ್ಲಿ ಸಿಡಿದೆದ್ದ ವಲಸೆ ಕಾರ್ಮಿಕರು

    ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರು ಮೇ 3ರವರಗೆ ಲಾಕ್‍ಡೌನ್ ವಿಸ್ತರಣೆ ಬೆನ್ನಲ್ಲೇ ಮುಂಬೈನಲ್ಲಿ ವಲಸೆ ಕಾರ್ಮಿಕರ ಆಕ್ರೋಶ ಕಟ್ಟೆ ಒಡೆದಿದೆ. ನಮ್ಮನ್ನು ಊರಿಗೆ ಕಳಿಸಿ, ಹಸಿವಿನಿಂದ ಸಾಯುತ್ತಿದ್ದೇವೆ ಎಂದು ಸಾವಿರಾರು ದಿನಗೂಲಿ ನೌಕರರು ಬಾಂದ್ರಾ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.

    ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‍ಡೌನ್ ಘೋಷಣೆ ಆದಾಗಿನಿಂದ ಕಟ್ಟಡ ನಿರ್ಮಾಣ ಕಾರ್ಮಿಕರು, ದಿನಗೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದುಡಿಮೆ ಇಲ್ಲದೆ ಹೊತ್ತಿನ ಊಟಕ್ಕೂ ಅವರು ಪರದಾಡುವಂತಾಗಿದೆ. ಹೀಗಾಗಿ ಇಂದು ಮಧ್ಯಾಹ್ನದ ವೇಳೆ ಸಾವಿರಾರು ಕೂಲಿ ಕಾರ್ಮಿಕರು ಬಾಂದ್ರಾ ನಿಲ್ದಾಣದ ಬಳಿ ಜಮಾಯಿಸಿ, ನಮ್ಮ ಊರುಗಳಿಗೆ ಹೋಗಲು ಸಾರಿಗೆ ವ್ಯವಸ್ಥೆ ಕಲ್ಪಿಸಿ. ನಾವು ನಿತ್ಯವೂ ಹಸಿವಿನಿಂದ ಸಾಯುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಲಾಕ್‍ಡೌನ್ ಉಲ್ಲಂಘಿಸಿ ಸಾವಿರಾರು ಜನರು ಜಮಾಯಿಸಿದ್ದರಿಂದ ಪೊಲೀಸರು ಲಾಠಿ ಚಾರ್ಜ್ ನಡೆಸಿ ಅವರನ್ನು ಚದುರಿಸಿದ್ದಾರೆ. ಈ ವಿಚಾರದಲ್ಲಿ ಕೇಂದ್ರ ಮತ್ತು ಮಹಾರಾಷ್ಟ್ರ ಸರ್ಕಾರಗಳು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಳ್ಳುತ್ತಿವೆ. ಮುಂಬೈನಲ್ಲಿ ಅತೀ ಹೆಚ್ಚು ಕೊರೊನಾ ಸೋಂಕಿತರಿದ್ದಾರೆ. ಮುಂಬೈನ ಧಾರಾವಿಯಲ್ಲಿ ಇಂದು ಕೂಡ ಇಬ್ಬರು ಸಾವನ್ನಪ್ಪಿದ್ದಾರೆ.

    ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 11 ಸಾವಿರ ದಾಟಿದೆ. ಕಳೆದ 24 ಗಂಟೆಯಲ್ಲಿ 1,200ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದ್ದು, 31 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಕೊರೊನಾಗೆ ಮೃತಪಟ್ಟವರ ಸಂಖ್ಯೆ 365 ಆಗಿದೆ. ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಎರಡು ರಾಜ್ಯಗಳಲ್ಲಿ ಸೋಮವಾರ ಒಂದೇ ದಿನ 350ಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಇಂದು ಕೂಡ ಮಹಾರಾಷ್ಟ್ರದಲ್ಲಿ 121 ಮಂದಿಗೆ ಸೋಂಕು ವ್ಯಾಪಿಸಿದೆ.

    ದೇಶದಲ್ಲಿ ಕೊರೊನಾ ಅಟ್ಟಹಾಸ:
    ರಾಜ್ಯ                ಸೋಂಕಿತರು        ಸಾವು
    ಮಹಾರಾಷ್ಟ್ರ        2,455               160
    ದೆಹಲಿ                1,510                 28
    ತಮಿಳುನಾಡು     1,173                 11
    ರಾಜಸ್ಥಾನ         945                    11
    ಗುಜರಾತ್         617                     26
    ಮಧ್ಯಪ್ರದೇಶ     614                     50

  • ಕೊರೊನಾ ಕಟ್ಟುನಿಟ್ಟಿನ ಕ್ರಮ- ಉಡುಪಿ ಜಿಲ್ಲಾಡಳಿತಕ್ಕೆ ಕೇಂದ್ರ ಪ್ರಶಂಸೆ

    ಕೊರೊನಾ ಕಟ್ಟುನಿಟ್ಟಿನ ಕ್ರಮ- ಉಡುಪಿ ಜಿಲ್ಲಾಡಳಿತಕ್ಕೆ ಕೇಂದ್ರ ಪ್ರಶಂಸೆ

    – ಮೋದಿ ಭಾಷಣದ ಬೆನ್ನಲ್ಲೇ ಖಡಕ್ ರೂಲ್ಸ್!
    – ಬೈಕರ್ ಸವಾರರಿಗೆ ಪೊಲೀಸರ ಲಗಾಮು

    ಉಡುಪಿ: ಮಹಾಮಾರಿ ಕೊರೊನಾ ವೈರಸ್‍ಗೆ ಕಡಿವಾಣ ಹಾಕಿರುವ ಉಡುಪಿ ಜಿಲ್ಲೆಗೆ ಕೇಂದ್ರ ಸಚಿವರಿಂದ ಪ್ರಶಂಸೆ ವ್ಯಕ್ತವಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

    ಕೊರೊನಾ ವೈರಸ್ ನಿಯಂತ್ರಣ ಕುರಿತಂತೆ, ಉಡುಪಿ ಜಿಲ್ಲೆಯ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳಿಂದ ಕಳೆದ 2 ವಾರಗಳಿಂದ ಯಾವುದೇ ಸೋಂಕಿತರು ಕಂಡುಬಂದಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರ ಪ್ರಶಂಸೆ ವ್ಯಕ್ತಪಡಿಸಿದೆ. ಉಡುಪಿ ಜಿಲ್ಲೆಯಲ್ಲಿ ಮಾರ್ಚ್ 29ರಂದು ಕೊನೆಯದಾಗಿ ಕೊರೊನಾ ಸೋಂಕಿತರೊಬ್ಬರು ಪತ್ತೆಯಾಗಿದ್ದರು. ಅದಾದ ಬಳಿಕ ಜಿಲ್ಲಾಡಳಿತ ಕೈಗೊಂಡ ಸಮರ್ಥ ನಿರ್ಧಾರಗಳಿಂದ ಜಿಲ್ಲೆಯಲ್ಲಿ ಯಾರಿಗೂ ಸೋಂಕು ಕಂಡು ಬಂದಿಲ್ಲ.

    ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಕಂಡು ಬಂದ ಕೂಡಲೇ ಅವರೊಂದಿಗೆ ಸಂಪರ್ಕದಲ್ಲಿದ್ದವರನ್ನು ಗುರುತಿಸಿ ಕ್ವಾರಂಟೈನ್‍ಗೆ ಒಳಪಡಿಸಲಾಗಿತ್ತು. ಜೊತೆಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡ ಕಾರಣ ಸೋಂಕು ಹರಡುವುದನ್ನು ತಡೆಯುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ ಎಂದು ಕೇಂದ್ರ ಪ್ರಶಂಸಿದೆ. ಜಿಲ್ಲೆಯ ಗಡಿಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಕೈಗೊಂಡಿದ್ದು, ಸರಕು ಸಾಗಾಣಿಕೆ ಮತ್ತು ತುರ್ತು ವೈದ್ಯಕೀಯ ಕಾರಣ ಹೊರತು ಪಡಿಸಿ ಇತರೆ ಯಾವುದೇ ಉದ್ದೇಶಕ್ಕೆ ಜಿಲ್ಲೆಯೊಳಗೆ ಪ್ರವೇಶ ನೀಡಿಲ್ಲ ಎಂದು ಡಿಸಿ ತಿಳಿಸಿದರು.

    ಹೊರ ಜಿಲ್ಲೆಗಳಿಂದ ಸಹ ಸೋಂಕು ಹರಡುವುದನ್ನು ತಪ್ಪಿಸಲಾಗಿದೆ. ಜಿಲ್ಲೆಯೊಳಗೆ ದಿನನಿತ್ಯದ ವಸ್ತುಗಳ ಖರೀದಿಗೆ ಸಾರ್ವಜನಿಕರಿಗೆ ಸಮಯ ನಿಗಧಿಪಡಿಸಲಾಗಿದ್ದು, ಖರೀದಿ ಸಮಯದಲ್ಲಿ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದ್ದು, ಅನಗತ್ಯ ವಾಹನ ಸಂಚಾರ ನಿಭಂಧಿಸಲಾಗಿದೆ. ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿನ ಕಾರ್ಮಿಕರಿಗೆ, ನಿರಾಶ್ರಿತರಿಗೆ ಮತ್ತು ನಿರ್ಗತಿಕರಿಗೆ ಊಟದ ವ್ಯವಸ್ಥೆ ಕಲ್ಪಿಸಿದ್ದು, ಅವರಿಗೆ ಯಾವುದೇ ಕೊರತೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

    ಲಾಕ್‍ಡೌನ್ ಅವಧಿ ಮುಗಿಯುವವರೆಗೂ ಜಿಲ್ಲಾಡಳಿತದ ಸೂಚನೆಗಳನ್ನು ಪಾಲಿಸುವ ಮೂಲಕ ಉಡುಪಿ ಜಿಲ್ಲೆ ಕೊರೊನಾ ಮುಕ್ತವಾಗಲು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ ಮನವಿ ಮಾಡಿದ್ದಾರೆ.

    ಖಡಕ್ ರೂಲ್ಸ್:
    ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್‍ಡೌನ್ ವಿಸ್ತರಿಸಿದ್ದೇ ತಡ ಉಡುಪಿಯಲ್ಲಿ ಚೆಕ್ ಪೋಸ್ಟನ್ನು ಪೊಲೀಸರು ಫುಲ್ ಟೈಟ್ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ರಸ್ತೆಗಳಲ್ಲಿ ಹೆಚ್ಚುವರಿ ಚೆಕ್ ಪೋಸ್ಟ್ ಹಾಕಲಾಗಿದೆ. ಬೆಳಗ್ಗೆ 11ರ ನಂತರ ಓಡಾಡುವ ಎಲ್ಲಾ ವಾಹನವನ್ನು ಬಿಡದೆ ಪೊಲೀಸರು ತಡೆದು ನಿಲ್ಲಿಸುತ್ತಿದ್ದಾರೆ. ಕಾರಣ ಕೇಳಿ, ವಿನಾಯಿತಿ ನಿಯಮಕ್ಕೆ ಅನ್ವಯವಾಗದಿದ್ದರೆ ವಾಹನಗಳನ್ನು ಸೀಜ್ ಮಾಡುತ್ತಿದ್ದಾರೆ. ಅನಗತ್ಯವಾಗಿ ಓಡಾಡುವ ಬೈಕ್, ಕಾರುಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಮಣಿಪಾಲ ಉಡುಪಿಯಲ್ಲಿ 10ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆ, 247 ಮೆಡಿಕಲ್‍ಗಳು, ಫಾರ್ಮಸಿ ಇರೋದ್ರಿಂದ ಈ ನಗರಗಳ ನಡುವೆ ಸ್ವಲ್ಪ ಸಾರ್ವಜನಿಕರ ಓಡಾಟ ಇದೆ.

    ಮಂಗಳವಾರ ಒಂದೇ ದಿನ 20 ಪ್ರಕರಣಗಳು ಉಡುಪಿ ನಗರ ಠಾಣೆಯಲ್ಲಿ ಪೊಲೀಸರು ದಾಖಲು ಮಾಡಕೊಂಡಿದ್ದಾರೆ. ಈ ನಡುವೆ ಹೊರ ಜಿಲ್ಲೆಗಳಿಗೆ ಹೋಗಲು ಜನ ಪೊಲೀಸ್ ಪಾಸ್‍ಗೆ ಒತ್ತಾಯ ಮಾಡುತ್ತಿದ್ದಾರೆ. ಆರೋಗ್ಯದ ವಿಚಾರ ಬಿಟ್ಟು ಬೇರೆ ಯಾವ ವಿಚಾರಕ್ಕೂ ಪಾಸ್ ಕೊಡಲ್ಲ ಅಂತ ಎಸ್ ಪಿ. ವಿಷ್ಣುವರ್ಧನ್ ಹೇಳಿದ್ದಾರೆ.

  • ಜಿಲ್ಲಾಡಳಿತಕ್ಕೆ ಕಗ್ಗಂಟಾದ ಕೊರೊನಾ ಸೋಂಕಿತ ವೃದ್ಧೆಯ ಸಾವಿನ ರಹಸ್ಯ

    ಜಿಲ್ಲಾಡಳಿತಕ್ಕೆ ಕಗ್ಗಂಟಾದ ಕೊರೊನಾ ಸೋಂಕಿತ ವೃದ್ಧೆಯ ಸಾವಿನ ರಹಸ್ಯ

    – ಅಜ್ಜಿ ಸಂಪರ್ಕದಲ್ಲಿದ್ದ 72 ಜನರ ವರದಿ ನೆಗೆಟಿವ್

    ಗದಗ: ನಗರದಲ್ಲಿ ಕೊರೊನಾ ಸೋಂಕಿತ 80 ವರ್ಷದ ವೃದ್ಧೆಯ ಸಾವಿನ ಪ್ರಕರಣ, ಸೋಂಕಿನ ಮೂಲ ಜಿಲ್ಲಾಡಳಿತಕ್ಕೆ ಕಗ್ಗಂಟಾಗಿದೆ.

    ಅಜ್ಜಿ ಸಂಪರ್ಕದಲ್ಲಿದ್ದ 72 ಜನರ ವರದಿ ನೆಗೆಟಿವ್ ಬಂದಿದೆ. ಆದ್ದರಿಂದ ಅಜ್ಜಿಗೆ ಸೋಂಕು ಹೇಗೆ ತಗುಲಿತು ಎಂಬ ಪ್ರಶ್ನೆ ಕಾಡತೊಡಗಿದೆ. ಮೃತ ಅಜ್ಜಿ ಸಂಪರ್ಕದಲ್ಲಿದ್ದ ಜನರನ್ನು ಈಗ 2ನೇ ಹಂತದ ಥ್ರೋಟ್ ಸ್ವ್ಯಾಬ್ ಪರೀಕ್ಷೆ ಒಳಪಡಿಸಲಾಗುತ್ತಿದೆ. ಇಂದು ನಗರದ ಎಸ್.ಎಂ.ಕೃಷ್ಣಾ ಕಾಲೋನಿಯ 21 ಜನರನ್ನು ಜಿಮ್ಸ್ ಆಸ್ಪತ್ರೆಗೆ ಕರೆದೊಯಲಾಯಿತು. ಇದನ್ನೂ ಓದಿ: ಕೊರೊನಾಗೆ ರಾಜ್ಯದ 9 ಮಂದಿ ಬಲಿ: ಸೋಂಕು ಬಂದಿದ್ದು ಹೇಗೆ? ಇಲ್ಲಿದೆ ಪೂರ್ಣ ವಿವರ

    ಮೃತ ಸೋಂಕಿತ ವೃದ್ಧೆ ಕಳೆದ ಮಾರ್ಚ್ 23ರಂದು ಎಸ್.ಎಂ.ಕೃಷ್ಣಾ ಕಾಲೋನಿಯಲ್ಲಿ ಕಾರ್ಯಕ್ರಮವೊಂದಕ್ಕೆ ಹೋಗಿದ್ದರು. ನಂತರ ಬೇರೆಲ್ಲೂ ಹೊಗಿರಲಿಲ್ಲ. ಆದ್ದರಿಂದ ಅಜ್ಜಿ ಸೋಂಕಿನ ಮೂಲ ಪತ್ತೆಗಾಗಿ 2ನೇ ಹಂತದ ಥ್ರೋಟ್ ಸ್ವ್ಯಾಬ್ ಪಡೆದ ಬಳಿಕ ಅವರನ್ನು ಹೋಂ ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ. ಆರೋಗ್ಯ ಇಲಾಖೆ ಎಸ್.ಎಂ.ಕೃಷ್ಣಾ ಕಾಲೋನಿಯ 200ಕ್ಕೂ ಅಧಿಕ ಜನ್ರ ಗುರುತಿಸಿದ್ದು, ಹಂತ ಹಂತವಾಗಿ ಜನರನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ.

  • ಕೊರೊನಾಗೆ ರಾಜ್ಯದ 9 ಮಂದಿ ಬಲಿ: ಸೋಂಕು ಬಂದಿದ್ದು ಹೇಗೆ? ಇಲ್ಲಿದೆ ಪೂರ್ಣ ವಿವರ

    ಕೊರೊನಾಗೆ ರಾಜ್ಯದ 9 ಮಂದಿ ಬಲಿ: ಸೋಂಕು ಬಂದಿದ್ದು ಹೇಗೆ? ಇಲ್ಲಿದೆ ಪೂರ್ಣ ವಿವರ

    ಬೆಂಗಳೂರು: ಹೆಮ್ಮಾರಿ ಕೊರೊನಾ ವೈರಸ್‍ಗೆ ರಾಜ್ಯದಲ್ಲಿ ಈವರೆಗೂ 9 ಜನರನ್ನು ಬಲಿ ಪಡೆದುಕೊಂಡಿದೆ. ಮೃತರಲ್ಲಿ ಹೆಚ್ಚಿನವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದವರೇ ಆಗಿದ್ದರು. ಹೀಗಾಗಿ ಇಲ್ಲಿ ಮೃತ ವ್ಯಕ್ತಿಗಳ ವಿವರವನ್ನು ನೀಡಲಾಗಿದೆ.

    ಮೃತಪಟ್ಟ ರೋಗಿಗಳು:
    1. ರೋಗಿ 6:
    ಕೊರೊನಾ ವೈರಸ್‍ಗೆ ದೇಶದ ಮೊದಲ ಸಾವು ಕಲಬುರಗಿಯಲ್ಲಿ ಆಗಿತ್ತು. ಮಾರ್ಚ್ 11ರಂದು ಮೃತಪಟ್ಟಿದ್ದ 76 ವರ್ಷದ ವೃದ್ಧನಿಗೆ ಕೊರೊನಾ ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ವೈದ್ಯರು ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದಾಗ ಪಾಸಿಟಿವ್ ಬಂದಿತ್ತು. ಇದರಿಂದಾಗಿ ವೃದ್ಧನ ಜೊತೆಗೆ ಸಂಪರ್ಕ ಹೊಂದಿದ್ದವರನ್ನು ಪ್ರತ್ಯೇಕವಾಗಿರಿ ಚಿಕಿತ್ಸೆ ಕೊಡಲಾಗಿದೆ. ವೃದ್ಧ ಫೆಬ್ರವರಿ 29ರಂದು ಸೌದಿಯಿಂದ ವಾಪಸ್ ಆಗಿದ್ದರು.

    2. ರೋಗಿ 53:
    ಮೆಕ್ಕಾದಿಂದ ಹಿಂತಿರುಗಿದ್ದ ಗೌರಿಬಿದನೂರಿನ 75 ವರ್ಷದ ವೃದ್ಧೆಯೊರೊಬ್ಬರು ಮಾರ್ಚ್ 24ರಂದು ರಾತ್ರಿ ಒಂದು ಗಂಟೆಗೆ ಬೌರಿಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಅವರು ಮಧುಮೇಹ, ಎದೆನೋವಿನಿಂದ ಬಳಲುತ್ತಿದ್ದರು.

    3. ರೋಗಿ 60:
    ದೆಹಲಿಯಲ್ಲಿ ತಬ್ಲಿಘಿ ಜಮಾತ್ ಸಭೆಗೆ ಹೋಗಿ ಬಂದಿದ್ದ ತುಮಕೂರು ಜಿಲ್ಲೆ ಶಿರಾದ 60 ವರ್ಷದ ವೃದ್ಧ ಕೊರೊನಾ ಸೋಂಕಿನಿಂದ ಮಾರ್ಚ್ 27ರಂದು ಮೃತಪಟ್ಟಿದ್ದರು. ಅವರು ಒಟ್ಟು 13 ಜನರ ಸ್ನೇಹಿತರೊಂದಿಗೆ ದೆಹಲಿಗೆ ತೆರಳಿದ್ದರು. ಇವರಲ್ಲಿ ಒಬ್ಬರು ತಿಪಟೂರು, ಒಬ್ಬರು ಮಂಡ್ಯದ ನಾಗಮಂಗಲ. ಮೃತ ವೃದ್ಧ ಶಿರಾ ನಗರ, ಇನ್ನುಳಿದಂತೆ 10 ಜನರು ತುಮಕೂರು ನಗರದವರು ಎನ್ನಲಾಗಿತ್ತು. ಅಲ್ಲದೇ ಮೃತ ವೃದ್ಧನ ಮೂವರು ಪತ್ನಿಯರು, 9 ಜನ ಮಕ್ಕಳು, 5 ಜನ ಮೊಮ್ಮಕ್ಕಳು, ಸೊಸೆ, ಮತ್ತೊಬ್ಬ ಸ್ನೇಹಿತ ಸೇರಿದಂತೆ ಒಟ್ಟು 33 ಜನರ ನಡುವೆ ನೇರಸಂಪರ್ಕ ಇಟ್ಟುಕೊಂಡಿದ್ದರು.

    4. ರೋಗಿ 125:
    ಬಾಗಲಕೋಟೆ ಜಿಲ್ಲೆಯಲ್ಲಿ ಮಾರ್ಚ್ 3ರಂದು 75 ವರ್ಷದ ವೃದ್ಧ ಮಾರ್ಚ್ 3ರಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಕಿರಾಣಿ ಹಾಗೂ ಅಡುಗೆ ಎಣ್ಣೆ ವರ್ತಕರಾಗಿದ್ದ ವೃದ್ಧ ಮಾರ್ಚ್ 31ರಂದು ಬಾಗಲಕೋಟೆಯ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಹೀಗಾಗಿ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದಾಗ ಪಾಸಿಟಿವ್ ವರದಿ ಬಂದಿತ್ತು. ವೃದ್ಧ ಯಾವುದೇ ವಿದೇಶ, ರಾಜ್ಯ, ಪರ ಜಿಲ್ಲೆಗೂ ಪ್ರವಾಸ ಮಾಡಿರಲಿಲ್ಲ. ವೃದ್ಧನ ಮಗ ಮತ್ತು ಮಗಳು ಮಾರ್ಚ್ ಎರಡನೇ ವಾರದಲ್ಲಿ ಬೆಂಗಳೂರಿನಿಂದ ಬಾಗಲಕೋಟೆಗೆ ಬಂದಿದ್ದರು. ಮೃತನ 58 ವರ್ಷದ ಸಹೋದರ ಕಲಬುರಗಿಗೆ ಹೋಗಿದ್ದು ಆತನಿಗೆ ಪಾಸಿಟಿವ್ ಬಂದಿದೆ. ಒಟ್ಟು ಈಗ ಈ ಸಂಪರ್ಕದಿಂದ ಮೃತನು ಸೇರಿದಂತೆ 10 ಮಂದಿಗೆ ಕೊರೊನಾ ಬಂದಿದೆ.

    5. ರೋಗಿ 166:
    ಗದಗನ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ 80 ವರ್ಷದ ವೃದ್ಧೆ ಏಪ್ರಿಲ್ 4ರಂದು ಸಾವನ್ನಪ್ಪಿದ್ದರು. ವೃದ್ಧೆಗೆ ಏಪ್ರಿಲ್ 7ರಂದು ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಅಜ್ಜಿ ಸೋಂಕು ಹೇಗೆ ಬಂದಿದೆ ಎನ್ನುವುದು ತಿಳಿದು ಬಂದಿಲ್ಲ. ಜಿಲ್ಲಾಡಳಿತ ಈಗಲೂ ಮೂಲವನ್ನು ಪತ್ತೆ ಮಾಡುವ ಕಾರ್ಯ ಮಾಡುತ್ತಿದೆ.

    6. ರೋಗಿ 177:
    ಕಲಬುರಗಿಯ 65 ವರ್ಷದ ವ್ಯಕ್ತಿ ಏಪ್ರಿಲ್ 9ರಂದು ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಇದು ಎರಡನೇ ಸಾವು ಆಗಿತ್ತು. ಯಾವುದೇ ಸಂಪರ್ಕ ಇಲ್ಲದ ಈ ವ್ಯಕ್ತಿಗೆ ಕೊರೊನಾ ಬಂದಿದ್ದು ಹೇಗೆ ಎನ್ನುವ ಪ್ರಶ್ನೆ ಎದ್ದಿತ್ತು. ಕುಟುಂಬದವರ ವಿಚಾರಣೆಯ ಸಂದರ್ಭದಲ್ಲಿ ಪುಣೆಯಲ್ಲಿದ್ದ ಸಹೋದರಿಯ ಮನೆಗೆ ತೆರಳಿದ್ದರು ಎಂದು ತಿಳಿಸಿದ್ದರು. ಆದರೆ ವ್ಯಕ್ತಿಯ ಫೋನ್ ನಂಬರ್ ಟ್ರ್ಯಾಕ್‍ಗೆ ಮಾಡಿದಾಗ ಪುಣೆಗೆ ತೆರಳದ ವಿಚಾರ ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಕುಟುಂಬದವರನ್ನು ಜಿಲ್ಲಾಡಳಿತ ಮತ್ತಷ್ಟು ವಿಚಾರಣೆಗೆ ಒಳಪಡಿಸಿದಾಗ ತಬ್ಲಿಘಿಗೆ ಹೋಗಿದ್ದ ವ್ಯಕ್ತಿಯ ಜೊತೆ ಸಂಪರ್ಕದಲ್ಲಿದ್ದರು ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿತ್ತು.

    7. ರೋಗಿ 205:
    ರಾಜ್ಯದಲ್ಲಿ ಕೊರೊನಾ ವೈರಸ್‍ಗೆ ಏಪ್ರಿಲ್ 13ರಂದು ವ್ಯಕ್ತಿ ಮೃತಪಟ್ಟಿದ್ದರು. ದೇಶದಲ್ಲೇ ಮೊದಲ ಕೊರೊನಾ ಸಾವು ಸಂಭವಿಸಿದ್ದ ಕಲಬುರಗಿಯಲ್ಲಿಯೇ ಮೂರನೇ ವ್ಯಕ್ತಿ ಕೊರೊನಾಗೆ ಬಲಿಯಾಗಿದ್ದರು. ಕೊರೊನಾ ಪೀಡಿತ 55 ವರ್ಷದ ವ್ಯಕ್ತಿ ರೋಗಿ ಸಂಖ್ಯೆ-205 ಸೋಮವಾರ ಕಲಬುರಗಿ ನಗರದ ಇಎಸ್‍ಐ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಮೃತ ವ್ಯಕ್ತಿ ಕಲಬುರಗಿ ನಗರದ ಮೋಮಿನಪುರ ಬಡಾವಣೆಯ ನಿವಾಸಿಯಾಗಿದ್ದು, ಅವರಿಗೆ ಪಕ್ಕದ ಮನೆಯಲ್ಲಿ ದೆಹಲಿಯ ತಬ್ಲಿಘಿ ಸಮಾವೇಶಕ್ಕೆ ಹೋಗಿ ಬಂದಿದ್ದ ವ್ಯಕ್ತಿಯೊಡನೆ ಸಂಪರ್ಕವಿತ್ತು. ಅವರು ಏಪ್ರಿಲ್ 10ರಂದು ಮೃತ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ದರು.

    ಕಲಬುರಗಿಯ ಖಾಸಗಿ ಆಸ್ಪತ್ರೆ ಎರಡು ದಿನಗಳ ಕಾಲ ರೋಗಿಯನ್ನು ಇಟ್ಟುಕೊಂಡು ಈ ಬಗ್ಗೆ ಸರ್ಕಾರಿ ಆಸ್ಪತ್ರೆಗೆ ಯಾವುದೇ ಮಾಹಿತಿ ಕೊಟ್ಟಿರಲಿಲ್ಲ. ಎರಡು ದಿನಗಳ ಬಳಿಕ ಅಲ್ಲಿಂದ ಇಎಸ್‍ಐ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರೋಗಿ ಸಾವನ್ನಪ್ಪಿದ್ದರು. ಆಗ ಸ್ಯಾಂಪಲ್ ತೆಗೆದುಕೊಂಡಿದ್ದು, ಕೊರೊನಾ ತಗುಲಿರುವುದು ದೃಢಪಟ್ಟಿತ್ತು. ಈಗ ಆಸ್ಪತ್ರೆಗೆ ಬೀಗ ಹಾಕಲಾಗಿದ್ದು ಸಿಬ್ಬಂದಿಯನ್ನು ಕ್ವಾರಂಟೈನ್‍ನಲ್ಲ ಇಡಲಾಗಿದೆ.

    8. ರೋಗಿ 252:
    ಬೆಂಗಳೂರಿ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಸೋಮವಾರ 65 ವರ್ಷದ ವೃದ್ಧ ಸಾವನ್ನಪ್ಪಿದ್ದರು. ವೃದ್ಧ ಭಾನುವಾರವಷ್ಟೇ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತ್ಪಟ್ಟಿದ್ದರು. ಇವರು ಹೃದ್ರೋಗದ ಸಮಸ್ಯೆಯಿಂದಲೂ ಬಳಲುತ್ತಿದ್ದರು. ಪ್ರತ್ಯೇಕ ಚಿಕಿತ್ಸಾ ಕೇಂದ್ರದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಕೊರೊನಾ ವೈರಸ್ ತಗುಲಿರುವ ಕುರಿತು ಪರೀಕ್ಷೆ ಮಾಡಲಾಗಿದ್ದು, ವರದಿಯಲ್ಲಿ ಸೋಂಕು ದೃಢಪಟ್ಟಿದೆ.

    9. ರೋಗಿ 257:
    ವಿಜಯಪುರದಲ್ಲಿ 69 ವೃದ್ಧ ಕೊರೊನಾಗೆ ಏಪ್ರಿಲ್ 12ರಂದು ಬಲಿಯಾಗಿದ್ದರು. ಶನಿವಾರ ರಾತ್ರಿ ದಿಢೀರ್ ಆಗಿ ರಾಜ್ಯ ಸರ್ಕಾರ ನಗರದ ಚಪ್ಪರ ಬಂದ್ ಕಾಲೋನಿಯನ್ನು ಸೀಲ್‍ಡೌನ್ ಮಾಡಲು ಸೂಚನೆ ನೀಡಿತ್ತು. ಕೂಡಲೇ ಜಿಲ್ಲಾಡಳಿತ ಚಪ್ಪರಬಂದ್ ಕಾಲೋನಿಯನ್ನು ಸೀಲ್‍ಡೌನ್ ಮಾಡಿ ಕಟ್ಟೆಚ್ಚರ ವಹಿಸಿತ್ತು. ಇದರ ಬೆನ್ನಲ್ಲೇ ಭಾನುವಾರ ಮಧ್ಯಾಹ್ನ ಈ ಚಪ್ಪರ ಬಂದ್ ಕಾಲೋನಿ ನಿವಾಸಿ 60 ವರ್ಷದ ವೃದ್ಧೆಗೆ ಕೊರೊನಾ ಸೋಂಕು ತಗುಲಿದ್ದನ್ನು ರಾಜ್ಯ ಸರ್ಕಾರ ದೃಢಪಡಿಸಿತ್ತು. ಈ ಬೆನ್ನಲ್ಲೇ ವೃದ್ಧೆಯ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನು ಕ್ವಾರಂಟೈನ್ ಮಾಡಲಾಗಿತ್ತು. ಪತಿ ಸೇರಿದಂತೆ ಒಟ್ಟು 24 ಮಂದಿಯ ಗಂಟಲ ದ್ರವದ ಮಾದರಿಯನ್ನು ತೆಗೆದುಕೊಂಡು ಕ್ವಾರಂಟೈನ್ ನಲ್ಲಿ ಇಡಲಾಗಿತ್ತು. ರಾತ್ರಿ ಆಕೆಯ ಪತಿ(69) ಮೃತಪಟ್ಟಿದ್ದರು. ಮೃತಪಟ್ಟ ಸಂದರ್ಭದಲ್ಲಿ ಕೊರೊನಾ ಇರುವುದು ದೃಢಪಟ್ಟಿರಲಿಲ್ಲ. ಮಂಗಳವಾರ ಸರ್ಕಾರ ಅಧಿಕೃತವಾಗಿ ಕೊರೊನಾದಿಂದ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ತಿಳಿಸಿತ್ತು.

  • ಮನೆಯಲ್ಲೇ ಇದ್ದ ಚಿಕ್ಕಬಳ್ಳಾಪುರ ವೃದ್ಧನಿಗೂ ಕೊರೊನಾ ಸೋಂಕು

    ಮನೆಯಲ್ಲೇ ಇದ್ದ ಚಿಕ್ಕಬಳ್ಳಾಪುರ ವೃದ್ಧನಿಗೂ ಕೊರೊನಾ ಸೋಂಕು

    ಚಿಕ್ಕಬಳ್ಳಾಪುರ: ಮನೆಯಲ್ಲೇ ಇದ್ದ ನಗರದ 65 ವರ್ಷದ ವೃದ್ಧನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಡಿದ್ದು, ಇದು ಚಿಕ್ಕಬಳ್ಳಾಪುರ ನಗರದ ಜನರಲ್ಲಿ ಆತಂಕ ಸೃಷ್ಟಿಸಿದೆ.

    ಇದುವೆರಗೂ ಜಿಲ್ಲೆಯಲ್ಲಿ 12 ಕೊರೊನಾ ಸೋಂಕಿತ ಪ್ರಕರಣಗಳು ಗೌರಿಬಿದನೂರಿನಲ್ಲೇ ಪತ್ತೆಯಾಗಿದ್ದವು. ಹೀಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದ ಜನ ನೆಮ್ಮದಿಯಿಂದ ಇದ್ದರು. ಆದರೆ ಇಂದು ಚಿಕ್ಕಬಳ್ಳಾಪುರ ನಗರದ 65 ವರ್ಷದ ವೃದ್ಧನಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದೆ. ಸ್ಟೀಲ್ ಪಾತ್ರೆಗಳ ವ್ಯಾಪಾರಿಯಾದ ವೃದ್ಧನಿಗೆ ಸೋಂಕು ಹೇಗೆ ತಗುಲಿತು ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ.

    ಸದ್ಯ ವೃದ್ಧನ ಪತ್ನಿ(52), ಮೊದಲ ಮಗ(38), ಎರಡನೇ ಮಗ(26) ಹಾಗೂ ಮೂರನೇ ಮಗ(24) ಸೇರಿದಂತೆ ಮನೆ ಕೆಲಸದಾಕೆ ಮತ್ತು ಕಾರು ಚಾಲಕನನ್ನು ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಮೊದಲೇ ಅಸ್ತಮಾ, ಬಿಪಿ ಹಾಗೂ ಸಕ್ಕರೆ ಖಾಯಿಲೆಯಿಂದ ವೃದ್ಧ ಬಳಲುತ್ತಿದ್ದರು ಈ ಮಧ್ಯೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಏಪ್ರಿಲ್ 08ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಇವರನ್ನು ದಾಖಲಿಸಲಾಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆ ವೇಳೆ ಕೊರೊನಾ ಸೋಂಕು ದೃಢಪಟ್ಟಿದೆ.

    ಮೊದಲೇ ಗೌರಿಬಿದನೂರಿನ 12 ಪ್ರಕರಣಗಳಿಂದ ರೆಡ್ ಝೋನ್ ಪಟ್ಟಿಗೆ ಸೇರಿರುವ ಚಿಕ್ಕಬಳ್ಳಾಪುರ ಜಿಲ್ಲೆ ಈಗ ಮತ್ತಷ್ಟು ಕೊರೊನಾ ಸೋಂಕಿತ ಪ್ರಕರಣಗಳಿಗೆ ಸಾಕ್ಷಿಯಾಗುತ್ತಿದೆ. ಸದ್ಯ ಚಿಕ್ಕಬಳ್ಳಾಪುರ ನಗರದ ಹಳೇ ಜಿಲ್ಲಾಸ್ಪತ್ರೆಯ ಕೋವಿಡ್-19 ಆಸ್ಪತ್ರೆಯಲ್ಲಿ ವೃದ್ಧನ 06 ಮಂದಿ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಿ ನಿಗಾ ಇಡಲಾಗಿದೆ. ಆದರೆ ವೃದ್ಧನಿಗೆ ಸೋಂಕು ತಗುಲಿದ್ದು ಹೇಗೆ ಅನ್ನೋದು ಜಿಲ್ಲಾಡಳಿತಕ್ಕೂ ತಲೆನೋವು ತಂದಿದೆ. ಆಸಲಿಗೆ ಈ ವೃದ್ಧ ಯಾವುದೇ ವಿದೇಶ ಪ್ರಯಾಣ ಮಾಡಿಲ್ಲ, ಸೋಂಕಿತ ಪ್ರದೇಶಗಳಿಗೂ ಭೇಟಿ ಮಾಡಿಲ್ಲ. ಹೀಗಾಗಿ ಹೇಗೆ ಸೋಂಕು ತಗುಲಿತು ಅನ್ನೋದು ಮತ್ತಷ್ಟು ಆತಂಕ ಹೆಚ್ಚಿಸಿದೆ.

  • ರಾಜ್ಯದಲ್ಲಿ ಮೂವರು ಬಲಿ, 11 ಮಂದಿಗೆ ಕೊರೊನಾ ಸೋಂಕು – 258ಕ್ಕೆ ಏರಿಕೆ

    ರಾಜ್ಯದಲ್ಲಿ ಮೂವರು ಬಲಿ, 11 ಮಂದಿಗೆ ಕೊರೊನಾ ಸೋಂಕು – 258ಕ್ಕೆ ಏರಿಕೆ

    ಬೆಂಗಳೂರು: ಕೊರೊನಾಗೆ ಮತ್ತೊಂದು ಬಲಿಯಾಗಿದ್ದು ವಿಜಯಪುರದ ವ್ಯಕ್ತಿ ಮೃತಪಟ್ಟಿದ್ದಾರೆ. ಈ ಮೂಲಕ 2 ದಿನದ ಅಂತರದಲ್ಲಿ ಮೂರು ಮಂದಿ ಪ್ರಾಣ ತೆತ್ತಿದ್ದಾರೆ. ಇಂದು 11 ಕೊರೊನಾ ಪಾಸಿಟಿವ್ ಪ್ರಕರಣ ಬಂದಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 247ಕ್ಕೆ ಏರಿಕೆಯಾಗಿದೆ.

    ವಿಜಯಪುರದ 69 ವರ್ಷದ ವ್ಯಕ್ತಿ ಭಾನುವಾರ ಮೃತಪಟ್ಟಿದ್ದರು. ಪತ್ನಿಗೆ ಕೊರೊನಾ ಬಂದಿದ್ದ ಹಿನ್ನೆಲೆಯಲ್ಲಿ ಕ್ವಾರಂಟೈನ್‍ನಲ್ಲಿ ಇಡಲಾಗಿತ್ತು. ಈಗ ಪರೀಕ್ಷಾ ವರದಿ ಪ್ರಕಟವಾಗಿದ್ದು ಕೊರೊನಾದಿಂದ ಮೃತಪಟ್ಟಿರುವುದು ದೃಢವಾಗಿದೆ. ಇದನ್ನೂ ಓದಿ: ವಿಜಯಪುರದಲ್ಲಿ ಮೃತಪಟ್ಟ ವೃದ್ಧ ಕೊರೊನಾಗೆ ಬಲಿ – ಅಧಿಕೃತ ಪ್ರಕಟ

    ಬಾಗಲಕೋಟೆ, ಕಲಬುರಗಿಯ ಮೂವರು, ಬೆಂಗಳೂರಿನ ಇಬ್ಬರು, ಚಿಕ್ಕಬಳ್ಳಾಪುರ, ಬಾಗಲಕೋಟೆ, ವಿಜಯಪುರದ, ಬೆಳಗಾವಿ ತಲಾ ಒಬ್ಬರಿಗೆ ಸೋಂಕು ಬಂದಿದೆ. ಕಲಬುರಗಿಯ ತರಕಾರಿ ಮಾರಾಟ ಮಾಡಿದ್ದ ವೃದ್ಧ, ಬೆಂಗಳೂರಿನ 65 ವರ್ಷದ ವೃದ್ಧ ಸೇರಿ ಒಟ್ಟು ಕರ್ನಾಟಕದಲ್ಲಿ 9 ಮಂದಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ತಬ್ಲಿಘಿಗೆ ಹೋಗಿದ್ದ ಸ್ನೇಹಿತನಿಂದ ಸೋಂಕು, ವೃದ್ಧ ಬಲಿ – ಕಲಬುರಗಿಯ ನಿದ್ದೆಗೆಡಿಸಿದೆ ಮೂರು ಸಾವು

    ಇಲ್ಲಿಯವರೆಗೆ ಒಟ್ಟು 65 ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದ್ದು, ಒಟ್ಟು 184 ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಬೆಳಗಿನ ವರದಿಯಾಗಿದ್ದು ಸಂಜೆ ಸರ್ಕಾರ ಎಂದಿನಂತೆ ಮತ್ತೊಂದು ವರದಿ ಬಿಡುಗಡೆ ಮಾಡುತ್ತದೆ. ಇದನ್ನೂ ಓದಿ: ಮೂರು ಆಸ್ಪತ್ರೆಗೆ ಅಲೆದಾಡಿ ಬೆಂಗ್ಳೂರಿನ ವೃದ್ಧ ಸಾವು – ಕೊನೆಗೆ ಕೊರೊನಾ ಪರೀಕ್ಷೆ

    ರೋಗಿಗಳ ವಿವರ:
    ರೋಗಿ 248 – 43 ವರ್ಷದ ಬಾಗಲಕೋಟೆಯ ವ್ಯಕ್ತಿ, ರೋಗಿ 186 ಮತ್ತು ರೋಗಿ 165 ಸಂಪರ್ಕ.
    ರೋಗಿ 249 – 32 ವರ್ಷದ ಬಾಗಲಕೋಟೆಯ ಮಹಿಳೆ ರೋಗಿ 186 ಮತ್ತು 165ರ ಸಂಪರ್ಕ
    ರೋಗಿ 250 – 65 ವರ್ಷದ ಚಿಕ್ಕಬಳ್ಳಾಪುರದ ವ್ಯಕ್ತಿ ಉಸಿರಾಟದ ಸಮಸ್ಯೆ
    ರೋಗಿ 251 – 39 ವರ್ಷದ ಬಾಗಲಕೋಟೆಯ ಮಹಿಳೆ, ರೋಗಿ 125ರ ಸಂಪರ್ಕ

    ರೋಗಿ 252 – 65 ವರ್ಷದ ಬೆಂಗಳೂರಿನ ವ್ಯಕ್ತಿ ಉಸಿರಾಟದ ಸಮಸ್ಯೆಯಿಂದ ದಾಖಲಾಗಿದ್ದರು. ಸೋಮವಾರ ಮೃತಪಟ್ಟಿದ್ದಾರೆ.
    ರೋಗಿ 253 – 26 ವರ್ಷದ ಬಿಬಿಎಂಪಿ ವ್ಯಾಪ್ತಿಯ ವ್ಯಕ್ತಿ ಏ.7 ರಂದು ಹಿಂದೂಪುರದಿಂದ ಬೆಂಗಳೂರಿಗೆ ಪ್ರಯಾಣ
    ರೋಗಿ 254 – 10 ವರ್ಷದ ಕಲಬರುಗಿಯ ಬಾಲಕಿ, ರೋಗಿ 177ರ ಸಂಪರ್ಕ

    ರೋಗಿ 255 – 51 ವರ್ಷದ ಕಲಬುರಗಿಯ ಪುರುಷ, ರೋಗಿ ಸಹೋದರ(ರೋಗಿ 205) ಸಂಪರ್ಕ
    ರೋಗಿ 256 – 35 ವರ್ಷದ ಕಲಬುರಗಿಯ ಮಹಿಳೆ, ರೋಗಿ 177ರ ಸಂಪರ್ಕ
    ರೋಗಿ 257 – 69 ವರ್ಷದ ವಿಜಯಪುರದ ವ್ಯಕ್ತಿ ಭಾನುವಾರ ಮೃತಪಟ್ಟಿದ್ದು, ಈಗ ಕೊರೊನಾದಿಂದ ಎನ್ನುವುದು ದೃಢಪಟ್ಟಿದೆ. ಈ ವ್ಯಕ್ತಿಯ ಪತ್ನಿ(ರೋಗಿ 177) ವೆಂಟಿಲೇಟರ್ ನಲ್ಲಿದ್ದಾರೆ.
    ರೋಗಿ 258 – 33 ವರ್ಷದ ಬೆಳಗಾವಿ ಮೂಲದ ವ್ಯಕ್ತಿ ದೆಹಲಿ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ.