Tag: Coronavirus

  • ಬಾಣಂತಿ, ಮಗುವಿನ ಆರೈಕೆ ಜವಾಬ್ದಾರಿ ಬಿಟ್ಟು ಪೇದೆಯಿಂದ 18 ಗಂಟೆ ಡ್ಯೂಟಿ

    ಬಾಣಂತಿ, ಮಗುವಿನ ಆರೈಕೆ ಜವಾಬ್ದಾರಿ ಬಿಟ್ಟು ಪೇದೆಯಿಂದ 18 ಗಂಟೆ ಡ್ಯೂಟಿ

    – ಪ್ರೇಮ ವಿವಾಹದಿಂದ ಬೆಂಬಲಕ್ಕೆ ನಿಲ್ಲದ ಪೋಷಕರು
    – ಪೇದೆಯ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ

    ಯಾದಗಿರಿ: ಕೊರೊನಾ ವಾರಿಯರ್ಸ್ ಗಳು ವೈಯಕ್ತಿಕ ಜೀವನಕ್ಕಿಂತಲೂ ಹೆಚ್ಚಾಗಿ ಸಾರ್ವಜನಿಕರ ಜೀವ ಉಳಿಸುವ, ಸೋಂಕು ಹರಡದಂತೆ ದಡೆಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂತೆ ಯಾದಗಿರಿಯ ಪೊಲೀಸ್ ಪೇದೆಯೊಬ್ಬರು ಬಾಣಂತಿ ಪತ್ನಿ, ಮಗುವಿನ ಆರೈಕೆ ಜವಾಬ್ದಾರಿ ಬಿಟ್ಟು ದಿನದ 18 ಗಂಟೆ ಡ್ಯೂಟಿ ನಿರ್ವಹಿಸುತ್ತಿದ್ದಾರೆ.

    ಕೊರೊನಾ ಲಾಕ್‍ಡೌನ್‍ನಲ್ಲಿ ಆಶಾ ಕಾರ್ಯಕರ್ತೆಯರು, ವೈದ್ಯರು ತಮ್ಮ ವೃತ್ತಿ ಪರಾಕಾಷ್ಠೆಯನ್ನು ಮೆರೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇವರ ಜೊತೆ ಪೊಲೀಸ್ ಕಾರ್ಯ ಸಹ ಎಲ್ಲರ ಮೆಚ್ಚುಗೆ ಪಾತ್ರವಾಗಿದೆ. ಇಂತಹ ಪೊಲೀಸ್ ಇಲಾಖೆಯಲ್ಲಿ ಕೆಲ ಪೇದೆಗಳು ಎಲೆಮರೆಯ ಕಾಯಿಗಳಂತೆ, ತಮ್ಮ ವೈಯಕ್ತಿಕ ಬದುಕನ್ನು ಸಹ ಬಲಿಕೊಟ್ಟು ಕೊರೊನಾ ಯುದ್ಧದಲ್ಲಿ ಹೊರಾಡುತ್ತಿದ್ದಾರೆ. ಇದನ್ನೂ ಓದಿ: ಅಮ್ಮಾ ನೀನು ಬಂದ್ಯಾ? -21 ದಿನಗಳ ಬಳಿಕ ತಾಯಿಯ ಮಡಿಲು ಸೇರಿದ ಕಂದಮ್ಮ

    ಯಾದಗಿರಿ ನಗರ ಠಾಣೆಯ ವಿಶೇಷ ಶಾಖೆಯ ಪೇದೆ ಸಾಬರೆಡ್ಡಿ ಅವರು ಮನೆಯ ವಿರೋಧದ ನಡುವೆಯೂ ಏಳು ವರ್ಷಗಳಿಂದ ಪ್ರೀತಿಸಿದ್ದ ಗೆಳತಿಯನ್ನು ಕೈ ಹಿಡಿದಿದ್ದರು. ಇದರಿಂದಾಗಿ ಅವರು ಕುಟುಂಬವರಿಂದ ದೂರವಾಗಿದ್ದಾರೆ. ಸಾಬರೆಡ್ಡಿ ದಂಪತಿ ಪ್ರೀತಿಯ ಸಂಕೇತವಾಗಿ ಆರು ತಿಂಗಳ ಮಗು ಈಗ ಮಡಿಲಲ್ಲಿದೆ.

    ಪತ್ನಿ ಹೆರಿಗೆಯ ಸಮಯದಲ್ಲಿ ಕೆಲಸದ ಜೊತೆ ಆಸ್ಪತ್ರೆಗೆ ಕರೆದುಕೊಂಡು ಪರೀಕ್ಷೆ ಮಾಡಿಸುವ ಜವಾಬ್ದಾರಿ ನಿರ್ವಹಿಸಿದ್ದರು. ಆದರೆ ಈಗ ಪತ್ನಿ ಮಗುವಿಗೆ ಮಗುವಿಗೆ ಜನ್ಮ ನೀಡಿದ್ದು, ಆರು ತಿಂಗಳ ಆರೈಕೆ ಹೊಣೆ ಸಾಬರೆಡ್ಡಿ ಅವರ ಮೇಲಿದೆ. ಹೀಗಿದ್ದರೂ ಅದನ್ನು ಬದಿಗೊತ್ತಿರುವ ಸಾಬರೆಡ್ಡಿ ತಮ್ಮ ಕರ್ತವ್ಯ ನಿಷ್ಠೆಯನ್ನು ಮೆರೆಯುತ್ತಿದ್ದಾರೆ.

    ದಿನದ 18 ಗಂಟೆ ಲಾಕ್‍ಡೌನ್ ಕಾನೂನು ಕಾಪಾಡುವ ಸಾಬರೆಡ್ಡಿ ಅವರು, ಮಧ್ಯರಾತ್ರಿ ಪತ್ನಿ ಮಗು ಮಲಗಿದ ಬಳಿಕ ಮನೆಗೆ ಹೋಗುತ್ತಾರೆ. ಅಷ್ಟೇ ಅಲ್ಲದೆ ಬೆಳಗ್ಗೆ ಪತ್ನಿಗಿಂತ ಮೊದಲೇ ಎದ್ದು ಠಾಣೆಗೆ ಬಂದು ಕಾರ್ಯಕ್ಕೆ ಹಾಜರಾಗುತ್ತಾರೆ. ಕೆಲವು ಬಾರಿ ರಾತ್ರಿ ತಡವಾದರೆ ಠಾಣೆಯಲ್ಲಿಯೇ ಮಲಗಿ ಬಿಡುತ್ತಾರೆ. ಪತ್ನಿ ಮತ್ತು ಮಗುವಿನ ಸ್ವಹಿತಾಸಕ್ತಿಗಿಂತ ಜನರ ಹಿತ ಮೊದಲು ಎನ್ನುವ ಸಾಬರೆಡ್ಡಿ, ಕೊರೊನಾ ವಿರುದ್ಧ ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ.

  • ಪುತ್ತೂರು ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ 8 ಅಡಿ ಆಳದಿಂದ ಚಿಮ್ಮಿದ ಜಲಧಾರೆ- ಪವಾಡ ಎಂದ ಭಕ್ತರು

    ಪುತ್ತೂರು ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ 8 ಅಡಿ ಆಳದಿಂದ ಚಿಮ್ಮಿದ ಜಲಧಾರೆ- ಪವಾಡ ಎಂದ ಭಕ್ತರು

    ಮಂಗಳೂರು: ದೇಶವೇ ಕೊರೊನಾ ಭೀತಿಯಿಂದ ಲಾಕ್‍ಡೌನ್ ಆಗಿದೆ. ಆದರೆ ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮಹಾಲಿಂಗೇಶ್ವರ ಆವರಣದಲ್ಲಿ ಕೇವಲ 8 ಅಡಿಯಲ್ಲಿ ನೀರು ಸಿಕ್ಕಿ ಅಚ್ಚರಿ ಘಟನೆ ನಡೆದಿದೆ.

    ಪುತ್ತೂರು ಮಹಾಲಿಂಗೇಶ್ವರನ ಜಾತ್ರೆ ಅಂದ್ರೆ ಜಿಲ್ಲೆಯ ದೊಡ್ಡ ಜಾತ್ರೆ. ಆದರೆ ಈ ಬಾರಿ ಕೊರೊನಾ ಲಾಕ್‍ಡೌನ್‍ನಿಂದ ಭಕ್ತರಿಗೆ ಪ್ರವೇಶ ಇಲ್ಲದೆ ಶಾಸ್ತ್ರೋಕ್ತವಾಗಿ ಜಾತ್ರೆ ನಡೆಯುತ್ತಿದೆ. ಜಾತ್ರಾ ಸಂದರ್ಭದ ದೇಗುಲದ ಆವರಣದ ಅಯ್ಯಪ್ಪಸ್ವಾಮಿ ಗುಡಿ ಬಳಿ, ದೇವರ ಅವಭೃತ ಸ್ನಾನಕ್ಕೆ ತಾತ್ಕಾಲಿಕ ಕೆರೆ ನಿರ್ಮಿಸಲಾಗಿದ್ದು, ಇದರಲ್ಲಿ ಬೇಸಿಗೆಯ ಈ ಸಮಯದಲ್ಲೂ ಕೇವಲ 8 ಅಡಿಗೆ ಬಹಳಷ್ಟು ನೀರು ಸಿಕ್ಕಿದ್ದು ಭಕ್ತರಿಗೆ ಅಚ್ಚರಿ  ಮೂಡಿಸಿದೆ.

    ಹಿಟಾಚಿಯಲ್ಲಿ ಸಂಜೆ ವೇಳೆ ಕೆರೆ ತೊಡಲು ಆರಂಭಿಸಿ ರಾತ್ರಿ ಪೂಜೆಗೂ ಮನ್ನವೇ ನೀರು ಸಿಕ್ಕಿದ್ದು ಕುತೂಹಲಕ್ಕೂ ಕಾರಣವಾಗಿದೆ. ನೂರಾರು ಅಡಿ ಬೋರ್ ವೆಲ್ ಕೊರೆಸಿದರೂ ನೀರು ಸಿಗದ ಈ ಬಿರು ಬೇಸಿಗೆಯಲ್ಲಿ 8 ಅಡಿಯಲ್ಲೇ ಭರಪೂರ ನೀರು ಸಿಕ್ಕಿದ್ದನ್ನು ಕಂಡ ಭಕ್ತರು ಇದು ದೇವರ ಪವಾಡ ಎನ್ನುತ್ತಿದ್ದಾರೆ.

  • ಗದಗದ ಒಂದೇ ಗಲ್ಲಿಯಲ್ಲಿ ಸೆಕೆಂಡರಿ ಕಾಂಟಾಕ್ಟ್‌ನಲ್ಲಿದ್ದ 3ನೇ ಪ್ರಕರಣ ಪತ್ತೆ

    ಗದಗದ ಒಂದೇ ಗಲ್ಲಿಯಲ್ಲಿ ಸೆಕೆಂಡರಿ ಕಾಂಟಾಕ್ಟ್‌ನಲ್ಲಿದ್ದ 3ನೇ ಪ್ರಕರಣ ಪತ್ತೆ

    ಗದಗ: ಜಿಲ್ಲೆಯಲ್ಲಿ 3ನೇ ಕೊರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಿದ್ದು, ಈ ಮೂರು ಪಾಸಿಟಿವ್ ಪ್ರಕರಣಗಳು ಕೂಡ ನಗರದ ರಂಗನವಾಡಿ ಗಲ್ಲಿಯಲ್ಲಿಯೇ ಪತ್ತೆಯಾಗಿದೆ.

    ಜಿಲ್ಲೆಯಲ್ಲಿ ಮೊದಲ ಪಾಸಿಟಿವ್ ಪ್ರಕರಣ ಏಪ್ರಿಲ್ 6ರಂದು 80 ವರ್ಷದ ವೃದ್ಧೆಯಲ್ಲಿ(ರೋಗಿ-166) ದೃಢಪಟ್ಟಿತ್ತು. ಆ ವೃದ್ಧೆ ಏಪ್ರಿಲ್ 8ರಂದು ಮೃತಪಟ್ಟಿದ್ದರು. ವೃದ್ಧೆ ಬಳಿಕ 2ನೇ ಪ್ರಕರಣ ಏಪ್ರಿಲ್ 16ರಂದು 59 ವರ್ಷದ ಮಹಿಳೆಗೆ(ರೋಗಿ-304) ಸೋಂಕು ತಗುಲಿರುವುದು ದೃಢಪಟ್ಟಿತ್ತು. ಆದರೆ ಇಂದು 3ನೇ ಪ್ರಕರಣ ಬೆಳಕಿಗೆ ಬಂದಿದ್ದು, ರೋಗಿ-304 ಮಹಿಳೆಯಿಂದ 42 ವರ್ಷದ ವ್ಯಕ್ತಿಗೆ(ರೋಗಿ-370) ಸೋಂಕು ತಗುಲಿರುವುದು ವರದಿಯಾಗಿದೆ.

    12 ದಿನಗಳಲ್ಲಿ ಮೂರು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಜಿಲ್ಲೆಯ ಜನರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಇಂದು ಸೋಂಕು ದೃಢಪಟ್ಟ ರೋಗಿ-370 ಬಟ್ಟೆ ವ್ಯಾಪಾರಿಯಾಗಿದ್ದು, ನಗರದ ಗಲ್ಲಿ ಗಲ್ಲಿಗಳಲ್ಲಿ ಹಾಗೂ ಸುತ್ತಲಿನ ಅನೇಕ ಪಟ್ಟಣಗಳಿಗೆ ಸಂಚರಿಸಿ ಬಟ್ಟೆ ವ್ಯಾಪಾರ ಮಾಡ್ತಿದ್ದರು ಎಂಬುದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ.

    ಸದ್ಯ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸೋಂಕಿತರ ಇನ್ನಷ್ಟು ಟ್ರಾವೆಲ್ ಹಿಸ್ಟರಿಯನ್ನು ಕಲೆಹಾಕುವಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ. ಸದ್ಯ ರಾಜ್ಯದಲ್ಲಿ ಸೊಂಕಿತರ ಸಂಖ್ಯೆ 371ಕ್ಕೆ ಏರಿಕೆ ಆಗಿದ್ದು, ಇಂದು ಒಂದೇ ದಿನಕ್ಕೆ 12 ಮಂದಿಗೆ ಸೋಂಕು ತಗುಲಿರುವುದು ವರದಿಯಾಗಿದೆ.

  • ಅಮ್ಮಾ ನೀನು ಬಂದ್ಯಾ? -21 ದಿನಗಳ ಬಳಿಕ ತಾಯಿಯ ಮಡಿಲು ಸೇರಿದ ಕಂದಮ್ಮ

    ಅಮ್ಮಾ ನೀನು ಬಂದ್ಯಾ? -21 ದಿನಗಳ ಬಳಿಕ ತಾಯಿಯ ಮಡಿಲು ಸೇರಿದ ಕಂದಮ್ಮ

    – ಮಗಳನ್ನು ತಬ್ಬಿಕೊಂಡು ಮುದ್ದಾಡಿದ ನರ್ಸ್ ಸುನಂದಾ

    ಬೆಳಗಾವಿ: ಅಮ್ಮಾ ಬಾ ಅಮ್ಮಾ ಎಂದು ಕಣ್ಣೀರಿಟ್ಟಿದ್ದ ಬೆಳಗಾವಿಯ ಕಂದಮ್ಮ ಇಂದು ತಾಯಿಯ ಮಡಿಲು ಸೇರಿಕೊಂಡಿದೆ. ಚಿಕ್ಕ ಮಗುವನ್ನು ಬಿಟ್ಟು ಕೊರೊನಾ ವಾರ್ಡಿನಲ್ಲಿ ಕರ್ತವ್ಯ ನಿರ್ವಹಿಸಿದ್ದ ನರ್ಸ್ ಸುನಂದಾ ಅವರು ಕ್ಯಾರಂಟೈನ್ ಅವಧಿ ಮುಗಿಸಿ ಮನೆಗೆ ಬಂದಿದ್ದಾರೆ.

    ಬೆಳಗಾವಿಯ ಕೋಳಿ ಗಲ್ಲಿಯಲ್ಲಿರುವ ನಿವಾಸಕ್ಕೆ ಸುನಂದಾ ಕೊರೆಪ್ಪಗೊಳ ಅವರು ಬರುತ್ತಿದ್ದಂತೆ ಮಗು ಓಡೋಡಿ ಬಂದು ಅಮ್ಮನನ್ನು ತಬ್ಬಿಕೊಂಡ ಕ್ಷಣ ರೋಮಾಂಚಕವಾಗಿತ್ತು. ಅಮ್ಮಾ ನೀನು ಬಂದ್ಯಾ..? ನಂಗ್ ಬಹಳಾ ಖುಷಿ ಆಯ್ತು. ಯಾಕ್ ಅಳ್ತಾ ಇದ್ದಿಯಾ? ಎಂದು ಮಗು ಅಮ್ಮನ ಮಡಿಲು ಸೇರಿತು. ಅಷ್ಟೇ ಅಲ್ಲದೆ ಸುನಂದಾ ಅವರು ಮಗುವನ್ನು ತಬ್ಬಿಕೊಂಡು ಮುದ್ದಾಡಿ ಖುಷಿ ವ್ಯಕ್ತಪಡಿಸಿದರು.

    ಈ ವೇಳೆ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಸುನಂದಾ ಅವರು, 21 ದಿನಗಳ ಕಾಲ ಮಗಳನ್ನು ಬಿಟ್ಟಿರುವುದು ಭಾರೀ ದುಃಖ ತಂದಿತ್ತು. ಆದರೆ ಕರ್ತವ್ಯಕ್ಕೆ ಮೊದಲ ಆದ್ಯತೆ ನೀಡಬೇಕಿತ್ತು. ಹೀಗಾಗಿ ದೇಶ ಸೇವೆಯ ಸಿಕ್ಕ ಅವಕಾಶವನ್ನು ನಿರ್ವಹಿಸಿದ್ದೇನೆ ಎಂದು ತಿಳಿಸಿದರು.

    ನನಗೆ ಉಂಟಾಗಿದ್ದ ಪರಿಸ್ಥಿತಿ ಯಾವುದೇ ತಾಯಿಗೂ ಎದುರಾಗಬಾರದು ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ. ಹೀಗಾಗಿ ಸಾರ್ವಜನಿಕರು ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು. ಮನೆಯಲ್ಲಿಯೇ ಇದ್ದು ಆರೋಗ್ಯ ಇಲಾಖೆ, ಪೊಲೀಸರಿಗೆ ಸಹಕಾರ ನೀಡಿ ಎಂದು ನರ್ಸ್ ಸುನಂದಾ ಮನವಿ ಮಾಡಿಕೊಂಡರು.

    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಫೋನ್ ಮಾಡಿ ಮಾತನಾಡಿ ಕಾಳಜಿ ವ್ಯಕ್ತಪಡಿಸಿದರು. ನಮ್ಮ ಸೇವೆಯು ಮುಖ್ಯಮಂತ್ರಿಗಳ ಗಮನಕ್ಕೆ ಬಂದಿರುವುದು ಖುಷಿ ತಂದಿದೆ. ಕೊರೊನಾ ವಿರುದ್ಧದ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಹೇಳಿದರು.

    ಈ ಹಿಂದೆ ಏನಾಗಿತ್ತು:
    ಬೆಳಗಾವಿ ತಾಲೂಕಿನ ಹಲಗಾ ಗ್ರಾಮದ ನಿವಾಸಿ ಸುನಂದಾ ಕೊರೆಪುರ್ ಅವರು ಭೀಮ್ಸ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕಳೆದ ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಸೋಂಕಿತರಿಗೆ ಹಾಗೂ ಶಂಕಿತರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವ ಸ್ಟಾಫ್ ನರ್ಸ್‍ಗಳಲ್ಲಿ ಸುನಂದಾ ಕೂಡ ಒಬ್ಬರಾಗಿದ್ದರು. ಹೀಗಾಗಿ ಇತರೆ ವೈದ್ಯಕೀಯ ಸಿಬ್ಬಂದಿ ಜೊತೆಗೆ ಸುನಂದಾ ಕೂಡ ಕ್ವಾರಂಟೈನಲ್ಲಿ ಇದ್ದರು. ಆದ್ದರಿಂದ ಕೆಲ ದಿನಗಳಿಂದ ಮನೆಗೆ ಹೋಗಿಲ್ಲ.

    ಆದರೆ ಮನೆಗೆ ಬಾರದ ತಾಯಿ ನೆನೆದು ಸುನಂದಾ ಅವರ 3 ವರ್ಷದ ಮಗಳು ಐಶ್ವರ್ಯ ಕಣ್ಣೀರು ಹಾಕುತ್ತಿದ್ದಳು. ರಾತ್ರಿಯಾದ್ರೆ ಅಮ್ಮನಿಗಾಗಿ ಊಟ ಬಿಟ್ಟು ಐಶ್ವರ್ಯ ಅಳುತ್ತಿದ್ದಳು. ಹೀಗಾಗಿ ಮಗಳ ಅಳಲನ್ನು ನೋಡಲಾಗದೇ ಏಪ್ರಿಲ್ 7ರಂದು ತಂದೆ ಸಂತೋಷ ಅಮ್ಮನ ಮುಖ ತೋರಿಸಲು ಐಶ್ವರ್ಯಳನ್ನು ಸುನಂದಾ ಅವರು ಇದ್ದ ಸ್ಥಳಕ್ಕೆ ಕರೆದುಕೊಂಡು ಬಂದಿದ್ದರು. ದೂರದಿಂದಲೇ ತಾಯಿಯನ್ನು ಐಶ್ವರ್ಯಗೆ ತೋರಿಸಿದರು. ಈ ವೇಳೆ ಬೈಕ್ ಮೇಲೆ ಇದ್ದ ಐಶ್ವರ್ಯ ರಸ್ತೆಯಲ್ಲಿಯೇ ಅಮ್ಮಗಾಗಿ ಕಣ್ಣೀರು ಹಾಕಿದ್ದಳು. ಬಾ ಅಮ್ಮ ಮನೆಗೆ ಹೋಗೋಣ ಎಂದು ಗೋಳಾಡಿದ್ದಳು. ಇತ್ತ ಸುನಂದಾ ಅವರು ಮಗಳ ಬಳಿ ಹೋಗಲಾಗದೇ, ಮಗಳ ಕಣ್ಣೀರು ಒರೆಸಲಾಗದೇ ನೊಂದಿದ್ದರು. ಈ ದೃಶ್ಯ ನೋಡಿ ಬೆಳಗಾವಿ, ಕರ್ನಾಟಕ ಅಷ್ಟೇ ಅಲ್ಲದೆ ದೇಶದ ಜನರು ಮಮ್ಮಲ ಮರುಗಿದ್ದರು.

  • ಸ್ಮಶಾನ ಕಾಯುತ್ತಿದ್ದ ವ್ಯಕ್ತಿಗೆ ಕೊರೊನಾ ಪಾಸಿಟಿವ್

    ಸ್ಮಶಾನ ಕಾಯುತ್ತಿದ್ದ ವ್ಯಕ್ತಿಗೆ ಕೊರೊನಾ ಪಾಸಿಟಿವ್

    ಹುಬ್ಬಳ್ಳಿ: ರೋಗಿ-236ರ ದ್ವಿತೀಯ ಸಂಪರ್ಕ ಹೊಂದಿದ್ದ ಹುಬ್ಬಳ್ಳಿ ಕರಾಡಿ ಓಣಿಯ 63 ವರ್ಷದ ವೃದ್ಧರೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತ ವೃದ್ಧನನ್ನು ರೋಗಿ-363 ಎಂದು ಗುರುತಿಸಲಾಗಿದೆ. ಅವರಿಗೆ ಹುಬ್ಬಳ್ಳಿಯ ಕಿಮ್ಸ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

    ವೃದ್ಧ ಹುಬ್ಬಳ್ಳಿಯಲ್ಲಿ ಸ್ಮಶಾನ ಕಾಯುತ್ತಿದ್ದರು ಎಂದು ಗುರುತಿಸಲಾಗಿದೆ. ಅವರು ಮಾರ್ಚ್ 27ರಂದು ಕಾಳಮ್ಮ ಸರ್ಕಲ್‍ನಿಂದ ಡಾಕಪ್ಪ ಸರ್ಕಲ್‍ವರೆಗೆ ಆಹಾರ ಧಾನ್ಯ ಹಂಚಿಕೆಯ ತಂಡದಲ್ಲಿದ್ದರು ಎಂದು ತಿಳಿದುಬಂದಿದೆ.

    ಧಾರವಾಡ ಜಿಲ್ಲೆಯ ಕೋವಿಡ್-19 ಪೀಡಿತರ ಸಂಖ್ಯೆ ಏಳಕ್ಕೆ ಏರಿಕೆಯಾಗಿದ್ದು, ಈ ಪೈಕಿ ಓರ್ವ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದ 6 ಜನರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ರೋಗಿ-363ರ ಸಂಪರ್ಕದಲ್ಲಿರುವವರು ಹಾಗೂ ಆಹಾರ ಕಿಟ್ ಪಡೆದವರು ಕೂಡಲೇ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

  • ಇಂದು ಒಂದೇ ದಿನ 12 ಮಂದಿಗೆ ಕೊರೊನಾ- ಸೋಂಕಿತರ ಸಂಖ್ಯೆ 371ಕ್ಕೆ ಏರಿಕೆ

    ಇಂದು ಒಂದೇ ದಿನ 12 ಮಂದಿಗೆ ಕೊರೊನಾ- ಸೋಂಕಿತರ ಸಂಖ್ಯೆ 371ಕ್ಕೆ ಏರಿಕೆ

    – ಮತ್ತೆ ಮೈಸೂರಿನ ಮೂವರಿಗೆ ಸೋಂಕು

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಶುಕ್ರವಾರ ಸಂಜೆ 5 ಗಂಟೆಯಿಂದ ಶನಿವಾರ ಮಧ್ಯಾಹ್ನ 12ಗಂಟೆ ವೇಳೆಗೆ 12 ಜನರಿಗೆ ಕೋವಿಡ್-19 ದೃಢಪಟ್ಟಿದೆ.

    ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿ ಪ್ರಕಾರ, ಶನಿವಾರ ಮಧ್ಯಾಹ್ನದವರೆಗಿನ ವರದಿಯ ಪ್ರಕಾರ ರಾಜ್ಯದಲ್ಲಿ 371 ಜನರಿಗೆ ಕೊರೊನಾ ಸೋಂಕಿತ ದೃಢಪಟ್ಟಿದೆ. ಈ ಪೈಕಿ 13 ಜನರು ಮೃತಪಟ್ಟಿದ್ದು, 92 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

    ಇಂದು ಮೈಸೂರಿನಲ್ಲಿ ಮೂವರಿಗೆ, ಕಲಬುರಗಿ, ಬಾಗಲಕೋಟೆ ಜಿಲ್ಲೆಗಳಲ್ಲಿ ತಲಾ ಇಬ್ಬರಿಗೆ, ಧಾರವಾಡ, ಮಂಡ್ಯ, ಗದಗ, ವಿಜಯಪುರ, ಬೆಳಗಾವಿ ಜಿಲ್ಲೆಗಳಲ್ಲಿ ತಲಾ ಒಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

    ಸೋಂಕಿತರ ವಿವರ:
    ರೋಗಿ- 360: ಕಲಬುರಗಿಯ 34 ವರ್ಷದ ವ್ಯಕ್ತಿ, ರೋಗಿ 205ರ ಸಂಪರ್ಕ, ಕಲಬುರಗಿ ಆಸತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.
    ರೋಗಿ -361: ಕಲಬುರಗಿಯ ಶಹಬಾದ್ ನಿವಾಸಿ 16 ವರ್ಷದ ವ್ಯಕ್ತಿ, ರೋಗಿ-174ರ ಸಂಪರ್ಕ ಹೊಂದಿದ್ದರು. ಕಲಬುರಗಿ ಆಸ್ಪತ್ರೆಯಲ್ಲಿ ಪ್ರತ್ಯೇಕಿಸಿ ಚಿಕಿತ್ಸೆ ನೀಡಲಾಗುತ್ತಿದೆ.
    ರೋಗಿ -362: ವಿಜಯಪುರ 60 ವರ್ಷದ ವ್ಯಕ್ತಿ, ರೋಗಿ-221ರ ಸಂಪರ್ಕ, ವಿಜಯಪುರ ಆಸತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.
    ರೋಗಿ -363: ಧಾರವಾಡ ಜಿಲ್ಲೆಯ ಹುಬ್ಬಳಿ 63ರ ವೃದ್ಧ, ರೋಗಿ-236ರ ದ್ವಿತೀಯ ಸಂಪರ್ಕ, ಹುಬ್ಬಳಿಯ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ರೋಗಿ-364: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿ 45 ವರ್ಷದ ವ್ಯಕ್ತಿ, ರೋಗಿ-128ರ ಸಂಪರ್ಕ, ಬೆಳಗಾವಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆದಿದೆ.
    ರೋಗಿ-365: ಮೈಸೂರು ಜಿಲ್ಲೆ ನಂಜನಗೂಡಿನ 30 ವರ್ಷದ ಪುರುಷ, ರೋಗಿ-52ರ ದ್ವಿತೀಯ ಸಂಪರ್ಕ, ಮೈಸೂರು ಆಸ್ಪತ್ರೆಯಲ್ಲಿ ದಾಖಲಿಸಿಲಾಗಿದೆ.
    ರೋಗಿ-366: ಮೈಸೂರು ಜಿಲ್ಲೆ ನಂಜನಗೂಡಿನ 50 ವರ್ಷದ ಪುರುಷ, ಮೈಸೂರಿನ ರೋಗಿ- 52ರ ದ್ವಿತೀಯ ಸಂಪರ್ಕ, ಮೈಸೂರಿನ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ.
    ರೋಗಿ-367: ಬಾಗಲಕೋಟೆಯ 65 ವೃದ್ಧ, ರೋಗಿ-186ರ ದ್ವಿತೀಯ ಸಂಪರ್ಕ, ಬಾಗಲಕೋಟೆಯ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆದಿದೆ.

    ರೋಗಿ-368: ಬಾಗಲಕೋಟೆಯ 48 ಮಹಿಳೆ, ರೋಗಿ-186ರ ದ್ವಿತೀಯ ಸಂಪರ್ಕ, ಬಾಗಲಕೋಟೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
    ರೋಗಿ-369: ಮೈಸೂರಿನ 65 ವೃದ್ಧ, ಅವರಿಗೆ ತೀವ್ರ ಉಸಿರಾಟದ ತೊಂದರೆ ಉಂಟಾಗಿದ್ದು, ಮೈಸೂರಿನ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.
    ರೋಗಿ-370: ಗದಗನ 42 ವರ್ಷದ ಪುರುಷ, ರೋಗಿ-304ರ ದ್ವಿತೀಯ ಸಂಪರ್ಕ, ಗದಗನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
    ರೋಗಿ-371: ಮಂಡ್ಯ ಜಿಲ್ಲೆ ಮಳವಳ್ಳಿಯ 39 ವರ್ಷದ ಪುರುಷ, ರೋಗಿ-134 ಮತ್ತು 138ರ ಸಂಪರ್ಕ, ಮಂಡ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.

  • ಕೊರೊನಾ ವಿರುದ್ಧದ ಹೋರಾಟಕ್ಕೆ 16 ಲಕ್ಷ ರೂ. ದೇಣಿಗೆ ನೀಡಿದ ರಾಣೇಬೆನ್ನೂರು ಶಾಸಕ

    ಕೊರೊನಾ ವಿರುದ್ಧದ ಹೋರಾಟಕ್ಕೆ 16 ಲಕ್ಷ ರೂ. ದೇಣಿಗೆ ನೀಡಿದ ರಾಣೇಬೆನ್ನೂರು ಶಾಸಕ

    ಹಾವೇರಿ: ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ರಾಣೇಬೆನ್ನೂರು ಶಾಸಕ ಅರುಣ್‍ಕುಮಾರ ಪೂಜಾರ್ ಅವರು 16 ಲಕ್ಷ ರೂ. ದೇಣಿಗೆ ನೀಡಿದ್ದಾರೆ.

    ಶಾಸಕ ಅರುಣ್‍ಕುಮಾರ್ ಅವರು ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ 16.47 ಲಕ್ಷ ರೂ. ಚೆಕ್ ನೀಡಿದ್ದಾರೆ. ಬೆಂಗಳೂರಿನಲ್ಲಿ ಗುರುವಾರ ಗೃಹ ಕಚೇರಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಪರಿಹಾರ ನಿಧಿಗೆ ಚೆಕ್ ನೀಡಿದ್ದಾರೆ. ಈ ಸಂದರ್ಭದಲ್ಲಿ ಗೃಹ ಸಚಿವ, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಉಪಸ್ಥಿತರಿದ್ದರು.

    ಹೆಮ್ಮಾರಿ ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಅನೇಕರು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ದೇಣಿಗೆ ನೀಡಿ ಬೆಂಬಲ ಸೂಚಿಸಿದ್ದಾರೆ. ಇತ್ತೀಚೆಗಷ್ಟೇ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರ ಪುತ್ರಿ ಸೃಷ್ಟಿ ಪಾಟೀಲ್ ಅವರು ಕೂಡ ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ 50 ಸಾವಿರ ರೂ. ದೇಣಿಗೆ ನೀಡಿದ್ದರು.

    ಮಠಗಳಿಂದ ದೇಣಿಗೆ:
    ಹುಬ್ಬಳ್ಳಿಯ ಪ್ರಖ್ಯಾತ ಮೂರುಸಾವಿರ ಮಠದಿಂದ ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ 10 ಲಕ್ಷ ರೂ. ದೇಣಿಗೆ ನೀಡಲಾಗಿದೆ. ಮೂರುಸಾವಿರ ಮಠದ ಜಗದ್ಗುರು ಗುರುಸಿದ್ದ ರಾಜಯೋಗೀಂದ್ರ ಶ್ರೀಗಳು 10 ಲಕ್ಷ ರೂ. ಚೆಕ್ ಅನ್ನು ಸಚಿವ ಜಗದೀಶ್ ಶೆಟ್ಟರ್ ಅವರ ಮೂಲಕ ಸರ್ಕಾರಕ್ಕೆ ಏಪ್ರಿಲ್ 15ರಂದು ಹಸ್ತಾಂತರಿಸಿದ್ದರು.

    ಇದಕ್ಕೂ ಮುನ್ನ ಸಿದ್ದಗಂಗಾ ಮಠ ಹಾಗೂ ಸಿದ್ದಗಂಗಾ ವಿದ್ಯಾಸಂಸ್ಥೆ ವತಿಯಿಂದ 50 ಲಕ್ಷ ರೂ.ವನ್ನು ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ ನೀಡಲಾಗಿತ್ತು. ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳು ಏಪ್ರಿಲ್ 4ರಂದು ಮಠದಿಂದ 25 ಲಕ್ಷ ರೂ. ಹಾಗೂ ವಿದ್ಯಾಸಂಸ್ಥೆಯಿಂದ 25 ಲಕ್ಷ ರೂ. ಸೇರಿ ಒಟ್ಟು 50 ಲಕ್ಷ ರೂ.ಗಳ ಡಿಡಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಮೂಲಕ ಸಿಎಂ ಪರಿಹಾರ ನಿಧಿಗೆ ಸಲ್ಲಿಸಿದ್ದರು.

    ಕೊರೊನಾ ವೈರಸ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೋರಿರುವ ಆರ್ಥಿಕ ನೆರವಿಗೆ ಮೈಸೂರಿನ ಶ್ರೀ ಸುತ್ತೂರು ಮಠವು ಏಪ್ರಿಲ್ 1ರಂದು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಲಕ್ಷ ರೂಪಾಯಿ ದೇಣಿಗೆ ನೀಡಿತ್ತು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಇವತ್ತು ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಿದ್ದರು. ಈ ವೇಳೆ ಜೆಎಸ್‍ಎಸ್ ಮಹಾವಿದ್ಯಾಪೀಠ ಹಾಗೂ ಸಂಸ್ಥೆಯ ನೌಕರರಿಂದ 50 ಲಕ್ಷ ರೂ.ಗಳ ದೇಣಿಗೆಯನ್ನು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ಸಚಿವರಿಗೆ ನೀಡಿದ್ದರು.

  • ಕೊರೊನಾ ಮಧ್ಯೆ ಮೀನಿಗಾಗಿ ಕ್ಯೂ..!

    ಕೊರೊನಾ ಮಧ್ಯೆ ಮೀನಿಗಾಗಿ ಕ್ಯೂ..!

    ಉಡುಪಿ: ಕೊರೊನಾ ವೈರಸ್ ಲಾಕ್‍ಡೌನ್‍ನಿಂದಾಗಿ ಜನರು ಮನೆಯಲ್ಲಿಯೇ ಬಂಧಿಯಾಗಿದ್ದಾರೆ. ಈ ಟೈಮ್‍ನಲ್ಲಿ ನಾನ್‍ವೆಜ್ ಪ್ರಿಯರ ಪಾಡು ಕೇಳುವುದೇ ಬೇಡ. ಅದರಲ್ಲೂ ಮೀನಿನೂಟ ಇಲ್ಲದೇ ಬಹುತೇಕ ಕರಾವಳಿಯವರಿಗೆ ಊಟ ಸಪ್ಪೆ ಸಪ್ಪೆ. ಈಗ ಲಾಕ್‍ಡೌನ್ ಎಫೆಕ್ಟ್ ಇರುವ ಹಿನ್ನೆಲೆಯಲ್ಲಿ ಮೀನು ಸಿಗುವುದೆ ಅಪರೂಪ.

    ಮೀನು ಸಿಗುವ ಮೀನಿನಂಗಡಿಯಲ್ಲಿ ಈಗ ಕಿಲೋ ಮೀಟರ್‌ಗಟ್ಟಲೇ ಉದ್ದದ ಕ್ಯೂ ಇರುತ್ತದೆ. ಹೆಬ್ರಿ ಮುದ್ರಾಡಿಯ ಮೀನಿನಂಗಡಿಯಲ್ಲಿ ಪ್ರತಿನಿತ್ಯವೂ ಜನ ಮೀನುಕೊಳ್ಳಲು ಸೋಷಿಯಲ್ ಡಿಸ್ಟೆನ್ಸ್‌ನಲ್ಲಿ ಕಿಲೋ ಮೀಟರ್‌ಗಟ್ಟಲೇ ಕ್ಯೂ ನಿಲ್ಲುತ್ತಾರೆ. ಮೀನು ಬಂದ ಒಂದು ಗಂಟೆಯೊಳಗೆ ಖಾಲಿ ಖಾಲಿಯಾಗುತ್ತದೆ. ಇದನ್ನೂ ಓದಿ: ಲಾಕ್‍ಡೌನ್ ನಡುವೆಯೂ ಸಾಂಪ್ರದಾಯಿಕ ಮೀನುಗಾರಿಕೆ ಪ್ರಾರಂಭ

    ಮೀನಿನಂಗಡಿ ತೆರೆಯುವ ಮುನ್ನವೇ ಗಂಟೆಗಟ್ಟಲೆ ಜನ ಕ್ಯೂನಲ್ಲಿ ಕಾದುನಿಲ್ಲುವ ದೃಶ್ಯ ಸಾಮಾನ್ಯವಾಗಿದೆ. ಡಿಮ್ಯಾಂಡ್‍ಗೆ ತಕ್ಕಂತೆ ರೇಟ್ ಕೂಡ ಕೊಂಚ ಜಾಸ್ತಿಯಾಗಿದೆ.

  • ರಾಜ್ಯದಲ್ಲಿ ಕೊರೊನಾ ಕರಾಳತೆ – ನಿಯಂತ್ರಿತ ವಲಯದಲ್ಲಿ ಒಂದೇ ಪ್ರವೇಶ ದ್ವಾರ, ಒಂದು ಎಕ್ಸಿಟ್ ಅಷ್ಟೇ

    ರಾಜ್ಯದಲ್ಲಿ ಕೊರೊನಾ ಕರಾಳತೆ – ನಿಯಂತ್ರಿತ ವಲಯದಲ್ಲಿ ಒಂದೇ ಪ್ರವೇಶ ದ್ವಾರ, ಒಂದು ಎಕ್ಸಿಟ್ ಅಷ್ಟೇ

    – ಲಾಕ್‍ಡೌನ್ ನಿಯಮಾವಳಿ ಕಂಪ್ಲೀಟ್ ಬದಲು.!
    – ನಿಯಂತ್ರಿತ ವಲಯದಲ್ಲಿ ಸೀಲ್‍ಡೌನ್ ರೂಲ್ಸ್

    ಬೆಂಗಳೂರು: ರಾಜ್ಯದಲ್ಲಿ ಹೆಮ್ಮಾರಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಮತ್ತಷ್ಟು ಆತಂಕ ಹೆಚ್ಚಿಸಿದೆ. ಈ ಹಿನ್ನೆಯಲ್ಲಿ ಲಾಕ್‍ಡೌನ್ ನಿಯಮಾವಳಿ ಕಂಪ್ಲೀಟ್ ಬದಲು ಮಾಡಿ ರಾಜ್ಯ ಸರ್ಕಾರ ನಿಯಮಗಳ ಆದೇಶ ಹೊರಡಿಸಿದೆ.

    ಕೊರೊನಾ ಹಾಟ್‍ಸ್ಪಾಟ್‍ನಲ್ಲಿ ಲಾಕ್‍ಡೌನ್ ಟಫ್ ರೂಲ್ಸ್ ಜಾರಿಗೆ ಬರಲಿದೆ. ರಾಜ್ಯ ಸರ್ಕಾರವು ಹಾಟ್‍ಸ್ಪಾಟ್ ಝೋನ್‍ನಲ್ಲಿಯೇ ಮೂರು ವಲಯಗಳನ್ನು ಮಾಡಿದೆ. ನಿಯಂತ್ರಿತ ವಲಯ, ಬಫರ್ ಝೋನ್ ಹಾಗೂ ವಲಯ ಎಂದು ವಿಂಗಡಿಸಲಾಗಿದ್ದು, ಈ ಮೂಲಕ ಕಠಿಣ ಕ್ರಮಕೈಗೊಳ್ಳಲು ಸರ್ಕಾರ ಮುಂದಾಗಿದೆ.

    ನಿಯಂತ್ರಿಯ ವಲಯ:
    28 ದಿನಗಳಲ್ಲಿ ಒಂದು ಪಾಸಿಟಿವ್ ಪ್ರಕರಣ ಕಂಡು ಬಂದರೂ ಅಂತಹ ಪ್ರದೇಶವನ್ನು ನಿಯಂತ್ರಿಯ ವಲಯ ಎಂದು ಗುರುತಿಸಲಾಗುತ್ತದೆ. ಪಾಸಿಟಿವ್ ಇರುವ ವ್ಯಕ್ತಿಯ ನಿವಾಸದ ಮುಂದೆ ತೀವ್ರ ಕ್ರಮ ಕೈಗೊಳ್ಳಲಾಗುತ್ತದೆ. ಅಪಾರ್ಟ್‍ಮೆಂಟ್, ಸಂಕೀರ್ಣದಲ್ಲಿ ಒಬ್ಬರಿಗೆ ಕಂಡು ಬಂದ್ರೆ ಇಡೀ ಬ್ಲಾಕ್‍ಗೆ ಗೃಹಬಂಧನ ಹಾಕಲಾಗುತ್ತದೆ. ಪಾಸಿಟಿವ್ ವ್ಯಕ್ತಿಯ ಮನೆ, ಅಪಾರ್ಟ್‍ಮೆಂಟ್ ರಸ್ತೆಯ ನೂರು ಮೀಟರ್‍ಗೆ ದಿಗ್ಭಂದನ ಹೇರಲಾಗುತ್ತದೆ. ಸ್ಲಂ ಆದ್ರೆ ಇಡೀ ಸ್ಲಂಗೆ ಗೃಹಬಂಧನ ಹಾಕಲಾಗುವುದು. ಹಳ್ಳಿಯಲ್ಲಿ ಕೊರೊನಾ ಸೋಂಕು ಕಂಡು ಬಂದ್ರೆ ಸೋಂಕಿತನ ವಾಸ ವ್ಯಾಪ್ತಿಯು ಕಂಪ್ಲೀಟ್ ಸೀಲ್‍ಡೌನ್ ಆಗಲಿದೆ.

    ಬಫರ್ ಝೋನ್:
    27 ದಿನಗಳಲ್ಲಿ ಹೊಸ ಪ್ರಕರಣ ವರದಿಯಾಗದೇ ಇದ್ದರೆ ಅಥವಾ ಈ ನಿಯಂತ್ರಿತ ವಲಯದಲ್ಲಿ ಹತ್ತಕ್ಕಿಂತ ಕಡಿಮೆ ಸಂಪರ್ಕ ವ್ಯಕ್ತಿಗಳು ಇದ್ದರೆ ಇದನ್ನು ಬಫರ್ ಝೋನ್ ಆಗಿ ಮಾರ್ಪಾಡು ಮಾಡಲಾಗುತ್ತದೆ. ನಗರ ಪ್ರದೇಶದ ಐದು ಕಿ.ಮೀ ವ್ಯಾಪ್ತಿ, ಗ್ರಾಮೀಣ ಭಾಗದ ಏಳು ಕಿ.ಮೀ ವ್ಯಾಪ್ತಿಗೆ ಕಣ್ಗಾವಲು ಇಡಲಾಗುತ್ತದೆ. ಈ ವ್ಯಾಪ್ತಿಯ ಪ್ರತಿ ಮನೆ ಮನೆಗೂ ತಪಾಸಣೆ ನಡೆಸಲಾಗುತ್ತದೆ.

    ವಲಯ: ಗುಂಪು ಗುಂಪಾಗಿ ಪ್ರಕರಣ ಕಂಡುಬಂದರೆ ಅದನ್ನು ವಲಯ ಅಂತ ವಿಭಾಗಿಸಿ ಕಣ್ಗಾವಲು ಇಡಲಾಗುತ್ತದೆ.

    ಬೆಂಗ್ಳೂರಿನಲ್ಲಿ ಸೀಲ್‍ಡೌನ್ ರೂಲ್ಸ್:
    ಕೊರೊನಾ ಸೋಂಕಿತರ ಸಂಖ್ಯೆ ರೆಡ್ ಝೋನ್‍ನಲ್ಲಿ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ. ಬೆಂಗಳೂರಿಗರ ಮೇಲೆ ಮೂರು ಕಣ್ಣು ಕಾಯಲಿದೆ. ಬಿಬಿಎಂಪಿಯಿಂದ ಬಿಕ್ಕಟ್ಟು ನಿರ್ವಹಣಾ ಟೀಂ, ಖಡಕ್ ಪೊಲೀಸರಿಂದ ಲಾಕ್‍ಡೌನ್ ಉಲ್ಲಂಘಿಸಿದರೆ ಮಾರಿ ಹಬ್ಬ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಬೆಂಗಳೂರಿನಲ್ಲಿ ಹೈ ಅಲರ್ಟ್ ಆಗಲಿದ್ದಾರೆ. ಈ ಮೂಲಕ ಮೂರು ಟೀಂ ರಚಿಸಿ ಬೆಂಗಳೂರಿನ ಹಾಟ್‍ಸ್ಪಾಟ್ ಮೇಲೆ ಹದ್ದಿನ ಕಣ್ಣು ಇಡಲಾಗುತ್ತದೆ.

    ಬೆಂಗ್ಳೂರು ಹಾಟ್‍ಸ್ಪಾಟ್ ಸೀಲ್‍ಡೌನ್ ಹೇಗಿರುತ್ತೆ?
    ಬೆಂಗಳೂರಿಗರು ಊಹಿಸಲು ಸಾಧ್ಯವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಲಿದೆ. ದೇಶದಲ್ಲಿ ಎಲ್ಲೂ ಇರದ ಟಫ್ ರೂಲ್ಸ್ ಬೆಂಗಳೂರಲ್ಲಿ ಜಾರಿಗೆ ಬರಲಿದೆ. ನಿಯಂತ್ರಿತ ವಲಯದಲ್ಲಿ ಒಂದು ಪ್ರವೇಶ ದ್ವಾರ ಒಂದು ಎಕ್ಸಿಟ್ ಅಷ್ಟೇ ಇರಲಿದೆ. ಪ್ರತಿಯೊಂದು ಖಾಕಿ ಕಣ್ಣಲ್ಲಿ ರಿಜಿಸ್ಟಾರ್ ನೀಡಲಾಗುತ್ತದೆ. ತುರ್ತು ಪರಿಸ್ಥಿತಿ ಹೊರತುಪಡಿಸಿ ಮನೆಯಿಂದ ಹೊರಗೆ ಕಾಲಿಡುವ ಹಾಗಿಲ್ಲ. ದಿನಸಿ, ಸಿಲಿಂಡರ್, ಔಷಧಿಗೆ ಮಾತ್ರ ಮನೆಯಿಂದ ಹೊರಗೆ ಬರಬಹುದು. ಬೇರೆ ವಾರ್ಡ್‍ನ ಖಾಸಗಿ ವಾಹನಕ್ಕೆ ಮತ್ತೊಂದು ವಾರ್ಡ್‍ನಲ್ಲಿ ಎಂಟ್ರಿ ಇರುವುದಿಲ್ಲ.

    ಪೊಲೀಸ್ ಪಾತ್ರ:
    ರಾಜ್ಯ ಸರ್ಕಾರವು ಬೆಂಗಳೂರನ್ನು ಸಂಪೂರ್ಣ ಸೀಲ್‍ಡೌನ್ ಮಾಡಲಿದ್ದು, ಪೊಲೀಸ್ ನಾಕಾಬಂದಿ ಹಾಕಲಿದೆ. ಎಲ್ಲಾ ಪ್ರವೇಶ ದ್ವಾರಗಳಲ್ಲೂ ಶಾಶ್ವತವಾಗಿ ತಡೆಗೊಡೆ ಹಾಕಿ, ಪೊಲೀಸ್ ನಾಕಾಬಂದಿ ರೂಪಿಸಲಾಗುತ್ತದೆ. ಯಾವುದೇ ವ್ಯಕ್ತಿ ಯಾವುದೇ ಉದ್ದೇಶದಿಂದ ಮನೆಯಿಂದ ಹೊರಬರುವಂತಿಲ್ಲ. ನಿಯಂತ್ರಿತ ವಲಯದಲ್ಲಿ ಒಂದೇ ಒಂದು ನಿರ್ಗಮನ, ಪ್ರವೇಶದ್ವಾರ ಇಲಿದೆ. ನಿಯಂತ್ರಿತ ವಲಯದ ಒಳಗೆ ಖಾಸಗಿ ವಾಹನ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಅಗತ್ಯ ಸೇವೆಗಳು, ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಪೊಲೀಸರಿಂದ ಎಮರ್ಜೆನ್ಸಿ ಪಾಸ್ ನೀಡಲಾಗುತ್ತದೆ. ಸೀಲ್‍ಡೌನ್ ಏರಿಯಾದಲ್ಲಿ ಡ್ರೋಣ್ ಪರಿಣಾಮಕಾರಿಯಾಗಿ ಬಳಕೆ ಮಾಡಲಾಗುತ್ತದೆ.

    ಆರೋಗ್ಯ ಇಲಾಖೆ:
    ಆರೋಗ್ಯ ಇಲಾಖೆ ಔಟ್-ಪೋಸ್ಟ್ ಆರಂಭಿಸಬೇಕು. ದಿನಕ್ಕೆ ಎರಡು ಬಾರಿ ಜನಸಂಪರ್ಕಗಳ ಪತ್ತೆ ಕಾರ್ಯ ನಡೆಸಬೇಕು. ಜನ ಸಂಪರ್ಕ ನಿಗಾ ಮತ್ತು ಪತ್ತೆ ಕಾರ್ಯವನ್ನ ಶಿಷ್ಟಾಚಾರದ ನಿಯಮದ ಪ್ರಕಾರ ಮಾಡಬೇಕು ಎಂದು ರಾಜ್ಯ ಸರ್ಕಾರ ಸೂಚನೆ ನೀಡಿದೆ.

    ನಗರಸಭೆ ಅಧಿಕಾರಿಗಳು:
    ಸೀಲ್‍ಡೌನ್ ಪ್ರದೇಶದಲ್ಲಿ ಪ್ರತಿನಿತ್ಯ ಸೋಂಕು ನಿವಾರಣೆ ಸ್ಟ್ರೇ ಮಾಡಬೇಕು. ನಗರಸಭೆ ಅಧಿಕಾರಿಗಳು ಸಿಂಪಡಣೆ ಮಾಡಬೇಕು. ಸೀಲ್‍ಡೌನ್ ಏರಿಯಾದಲ್ಲಿ ಅಗತ್ಯ ವಸ್ತುಗಳನ್ನು ಮನೆಗಳಿಗೆ ಸರಬರಾಜು ಮಾಡಬೇಕು. ದಿನಸಿ ಪದಾರ್ಥ, ಮಾಂಸ, ಹಾಲು, ಎಲ್‍ಪಿಜಿ, ಅನಿಲ ಮತ್ತು ಔಷಧಿ ಮನೆ ಮನೆಗೆ ಸರಬರಾಜು ಮಾಡಬೇಕು ಎಂದು ರಾಜ್ಯ ಸರ್ಕಾರ ಆದೇಶ ನೀಡಿದೆ.

  • ಬೆಂಗ್ಳೂರಿನಲ್ಲಿ ಕಂಟ್ರೋಲ್‍ಗೆ ಬಾರದ ಡೆಡ್ಲಿ ವೈರಸ್- 10 ಕಿ.ಮೀ. ವ್ಯಾಪ್ತಿಯಲ್ಲಿ 9 ಪಾಸಿಟಿವ್

    ಬೆಂಗ್ಳೂರಿನಲ್ಲಿ ಕಂಟ್ರೋಲ್‍ಗೆ ಬಾರದ ಡೆಡ್ಲಿ ವೈರಸ್- 10 ಕಿ.ಮೀ. ವ್ಯಾಪ್ತಿಯಲ್ಲಿ 9 ಪಾಸಿಟಿವ್

    ಬೆಂಗಳೂರು: ರೆಡ್‍ ಝೋನ್‍ನಲ್ಲಿರೋ ಬೆಂಗಳೂರಿನಲ್ಲಿ 86 ಜನ ಸೋಂಕಿತರಿದ್ದಾರೆ. ಈ ಪೈಕಿ ಬೆಂಗಳೂರು ದಕ್ಷಿಣ 18, ಪೂರ್ವ 16, ಮಹದೇವಪುರ 10, ಬೊಮ್ಮನಹಳ್ಳಿ 4, ಆರ್ ಆರ್. ನಗರ 3 ಮತ್ತು ಯಲಹಂಕ 2 ಜನರಿಗೆ ಕೊರೊನಾ ಸೋಂಕು ತಗುಲಿದೆ.

    ಪಶ್ಚಿಮ ವಿಭಾಗದಲ್ಲಿ ಬರೋಬ್ಬರಿ 22 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಪಶ್ಚಿಮ ವಿಭಾಗದ 10 ಕಿಲೋ ಮೀಟರ್ ಸುತ್ತಮುತ್ತಲೇ ಕೊರೊನಾ ಡೇಂಜರ್ ಹಾಟ್‍ಸ್ಪಾಟ್ ಆಗಿದೆ. ಟಿಪ್ಪುನಗರದ ಮೃತ ವೃದ್ಧನಿಂದ ಮೊಮ್ಮಗನಿಗೂ ಸೋಂಕು ತಗುಲಿದೆ. ಮೃತ ಕುಟುಂಬದಲ್ಲಿರುವ 23 ಮಂದಿಯಲ್ಲಿ ಇಬ್ಬರಿಗೆ ಪಾಸಿಟಿವ್ ಬಂದಿದ್ದು, ಇನ್ನಿತರ ಕುಟುಂಬಸ್ಥರಿಗೂ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ.

    ಬೆಂಗಳೂರು ಪಶ್ಚಿಮ ವಿಭಾಗ ಡೇಂಜರ್:
    ಪಶ್ಚಿಮ ವಿಭಾಗ – 22 ಜನರಿಗೆ ಕೊರೊನಾ ತಗುಲಿದೆ.
    ಪಾದರಾಯನಪುರ – 9 ಮಂದಿಗೆ ಕೊರಿನಾ ತಗುಲಿದೆ. (ರೋಗಿ-198 ಮನೆಯ ಸುತ್ತಮುತ್ತ ಬಾಡಿಗೆಗೆ ಇದ್ದವರು. 50 ಜನ ಹೋಟೆಲ್ ಕ್ವಾರಂಟೈನ್, 100 ಜನ ಸೆಕೆಂಡರಿ ಕಾಂಟ್ಯಾಕ್ಟ್‍ಗಳಿಗೆ ಗೃಹ ಬಂಧನ ವಿಧಿಸಲಾಗಿದೆ).
    ಟಿಪ್ಪು ನಗರ – 3 ಕೊರೊನಾ ಸೋಂಕಿತರು. (ಮೃತ ವೃದ್ಧ ಮೊಮ್ಮಗ ಮತ್ತು ವೃದ್ಧನ ಮನೆಗೆ ಬಂದಿದ್ದ ಯುವತಿ ಸೇರಿ)
    ಬಾಪೂಜಿನಗರ – 2 ಕೊರೊನಾ ಸೋಂಕಿತರು.
    ದೊಡ್ಡಬಸ್ತಿ – ಓರ್ವರಿಗೆ ಸೋಂಕು ತಗುಲಿದೆ.

    ರಾಜ್ಯದಲ್ಲಿ ಕೊರೊನಾ ಸದ್ದಿಲ್ಲದೇ ತನ್ನ ಕಬಂಧಬಾಹು ಚಾಚುತ್ತಲೇ ಇದೆ. ಬೆಂಗಳೂರಿನ ಟಿಪ್ಪು ನಗರ ಮೂಲದ ವೃದ್ಧ ಕೊರೊನಾ ಡೆತ್ ಪ್ರಕರಣ ಮತ್ತೊಂದು ತಲೆ ನೋವಾಗಿದೆ. ಈ ವೃದ್ಧಗೆ ಚಿಕಿತ್ಸೆ ನೀಡಿದ್ದ ಜಯದೇವ ಆಸ್ಪತ್ರೆಯ 10 ಸಿಬ್ಬಂದಿಗೆ ಈಗ 10 ದಿನ ಹೋಂ ಕ್ವಾರಂಟೈನ್ ಮಾಡಲಾಗಿದೆ. ಜಯದೇವ ಆಸ್ಪತ್ರೆಯ ರೆಗ್ಯೂಲರ್ ಪೇಷೆಂಟ್ ಆಗಿದ್ದ ಈ ವೃದ್ಧ, ಮೊನ್ನೆ ಹೃದಯ ಸಮಸ್ಯೆ, ಕಫಾ, ಕೆಮ್ಮು ಅಂತ ಚೆಕಪ್‍ಗೆ ಹೋಗಿದ್ದರು. ರೆಗ್ಯೂಲರ್ ಚೆಕಪ್ ಮಾಡಿದ್ದ ಸಿಬ್ಬಂದಿ, ರಾಜೀವ್ ಗಾಂಧಿ ಆಸ್ಪತ್ರೆಗೆ ರೆಫರ್ ಮಾಡಿದ್ದರು. ಇಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಕೊರೋನಾ ಪಾಸಿಟಿವ್ ಬಂದಿದೆ. ಹೀಗಾಗಿ, ಕೊರೋನಾ ಕ್ವಾರಂಟೈನ್ ನಿಯಮದಂತೆ ಜಯದೇವ ಆಸ್ಪತ್ರೆ ಸಿಬ್ಬಂದಿಯನ್ನು 10 ದಿನ ಹೋಂ ಕ್ವಾರಂಟೈನ್‍ನಲ್ಲಿ ಇಡಲಾಗಿದೆ.