Tag: Coronavirus

  • ರಸ್ತೆ ಗುಂಡಿ ಮುಚ್ಚಿದ ಸಂಗೀತ ಮಾಂತ್ರಿಕ ಹಂಸಲೇಖ!

    ರಸ್ತೆ ಗುಂಡಿ ಮುಚ್ಚಿದ ಸಂಗೀತ ಮಾಂತ್ರಿಕ ಹಂಸಲೇಖ!

    ಬೆಂಗಳೂರು: ಲಾಕ್‍ಡೌನ್ ಸಮಯದಲ್ಲಿ ಸಂಗೀತ ಮಾಂತ್ರಿಕ ಹಂಸಲೇಖ ಅವರು ರಸ್ತೆ ಗುಂಡಿ ಮುಚ್ಚಿ ಸಾಮಾಜಿಕ ಕಾಳಜಿ ಮೆರೆದಿದ್ದಾರೆ.

    ಮಹಾಲಕ್ಷ್ಮೀ ಲೇಔಟ್‍ನಲ್ಲಿರುವ ಹಂಸಲೇಖ ಅವರ ಮನೆ ಪಕ್ಕದಲ್ಲಿರುವ ಪಾರ್ಕಿಗೆ ಬಿಬಿಎಂಪಿಯವರು ಪೈಪ್ ಲೈನ್ ಹಾಕಲು ರಸ್ತೆಯಲ್ಲಿ ಗುಂಡಿ ತೆಗೆದಿದ್ದರು. ಕಾಮಗಾರಿ ಮುಗಿದ ಬಳಿಕ ಮಣ್ಣು ಹಾಕಲಾಗಿತ್ತು. ಆದರೆ ಗುಂಡಿ ಹಾಗೆ ಉಳಿದಿದ್ದರಿಂದ ಸವಾರರಿಗೆ ಕಿರಿಕಿರಿ ಉಂಟಾಗಿತ್ತು. ಅಷ್ಟೇ ಅಲ್ಲದೆ ಅಪಾಯ ಸಂಭವಿಸುವ ಸಾಧ್ಯತೆ ಇತ್ತು.

    ರಸ್ತೆಯಲ್ಲಿ ಗುಂಡಿ ಇರುವುದನ್ನು ಗಮನಿಸಿದ ಹಂಸಲೇಖ ಅವರು ತಲೆಗೆ ವಸ್ತ್ರ ಸುತ್ತಿಕೊಂಡು, ಸ್ವತಃ ಸಲಿಕೆ, ಪುಟ್ಟಿ ಹಿಡಿದು ಜಲ್ಲಿ ತುಂಬಿ ಗುಂಡಿಗೆ ಹಾಕಿದ್ದಾರೆ. ಬಳಿಕ ಕಲ್ಲಿನ ಪುಡಿ ಹಾಕಿ, ನೀರು ಬಿಟ್ಟು ಗುಂಡಿಗಳನ್ನು ಸಂಪೂರ್ಣವಾಗಿ ಮುಚ್ಚಿದ್ದಾರೆ. ಹಂಸಲೇಖ ಅವರ ಈ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸಿನಿಮಾ ನಟ, ನಟಿಯರು, ಸೆಲೆಬ್ರಿಟಿಗಳು, ಆಟಗಾರರು ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಹಂಸಲೇಕ ಅವರು ಕೊರೊನಾ ವೈರಸ್ ವಿಚಾರವಾಗಿ ಸಾಹಿತ್ಯ ಬರೆದು, ಸಂಗೀತ ಸಂಯೋಜನೆ ಮಾಡಿದ್ದರು. ಈ ಹಾಡಿನಲ್ಲಿ ನಾದಬ್ರಹ್ಮ ಕೊರೊನಾ ವೈರಸ್ ಅನ್ನು ತರಾಟೆ ತೆಗೆದುಕೊಂಡಿದ್ದರು.

    ‘ಮಕ್ಕಳೇ, ಭಯಪಡಬೇಡಿ ಕೊರೊನಾ ವೈರಸ್ ಒಂದು ರೋಗ, ಕ್ರಿಮಿ, ಅದೊಂದು ವೈರಸ್. ಈ ರೀತಿಯ ವೈರಸ್‍ಗಳು ಈಗಾಗಲೇ ಹಲವು ಬಂದಿವೆ. ಈ ರೀತಿಯ ವೈರಸ್‍ಗಳು ಭೂಮಿಗೆ ಎಷ್ಟೋ ಬಂದಿವೆ, ಹೋಗಿವೆ. ಹಾಗೆಯೇ ಈ ವೈರಸ್ ಕೂಡ ಹೋಗುತ್ತವೆ. ಈ ಕೊರೊನಾ ವೈರಸ್‍ಗೆ ಸೆಂಡಪ್ ಮಾಡೋಣ, ಬೈ ಬೈ ಹೇಳೋಣ’ ಎಂದು ಹಂಸಲೇಖ ಹೇಳಿದ್ದರು.

  • ಅಂಬುಲೆನ್ಸ್‌ನಲ್ಲಿ ಮದ್ಯ ಸಾಗಣೆ- ನಾಲ್ವರು ಅಂದರ್

    ಅಂಬುಲೆನ್ಸ್‌ನಲ್ಲಿ ಮದ್ಯ ಸಾಗಣೆ- ನಾಲ್ವರು ಅಂದರ್

    ಚಿತ್ರದುರ್ಗ: ಅಂಬುಲೆನ್ಸ್‌ನಲ್ಲಿ ಮದ್ಯ ಸಾಗಿಸುತ್ತಿದ್ದ ನಾಲ್ವರನ್ನು ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಆರೋಗ್ಯ ಸಚಿವ ಶ್ರೀರಾಮುಲು ಅವರ ತವರು ಜಿಲ್ಲೆಯಲ್ಲೇ ಇಂತಹ ಕೃತ್ಯ ನಡೆದಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಅಂಬುಲೆನ್ಸ್ ಚಾಲಕ ಸುಬಾನ್, ಲ್ಯಾಬ್ ಟೆಕ್ನಿಶಿಯನ್ ಸಂತೋಷ್, ಶಿವಗಂಗಾ ಗ್ರಾಮದ ಜೀವನ್ ಹಾಗೂ ಗಿರೀಶ್ ಬಂಧಿತರು. ಆರೋಪಿಗಳು ಮದ್ಯವನ್ನುಅಂಬುಲೆನ್ಸ್‌ನಿಂದ ಓಮಿನಿ ವ್ಯಾನ್‍ಗೆ ಶಿಫ್ಟ್ ಮಾಡುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಾರೆ.

    ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಪಿಎಸ್‍ಐ ಮಂಜುನಾಥ ಸಿದ್ದಪ್ಪ ಕುರಿ ಅವರು, ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರವರ ಮಾರ್ಗದರ್ಶನದಲ್ಲಿ ನಮ್ಮ ಸಿಬ್ಬಂದಿಯೊಂದಿಗೆ ಶಿವಗಂಗ ಗ್ರಾಮದ ಬಳಿ ಗಸ್ತು ತಿರುಗುತ್ತಿದ್ದೇವು. ಈ ವೇಳೆ ರಾಷ್ಟ್ರೀಯ ಹೆದ್ದಾರಿ 13 ರಸ್ತೆಯ ಪಕ್ಕದಲ್ಲಿ ಒಂದು ಸರ್ಕಾರಿ ಅಂಬುಲೆನ್ಸ್ ಹಾಗೂ ಒಂದು ಓಮಿನಿ ಅನುಮಾನಸ್ಪದವಾಗಿ ನಿಂತಿತ್ತು. ಹೀಗಾಗಿ ಅಲ್ಲಿಗೆ ಹೋಗಿ ನೋಡಿದಾಗ ಮದ್ಯ ತುಂಬಿದ ಬಾಕ್ಸ್ ಗಳನ್ನು ಓಮಿನಿ ವಾಹನಕ್ಕೆ ತುಂಬುತ್ತಿರುವುದು ಪತ್ತೆಯಾಗಿತ್ತು ಎಂದು ತಿಳಿಸಿದ್ದಾರೆ.

    ಆರೋಪಿಗಳಾದ ಸುಬಾನ್ ಹಾಗೂ ಸಂತೋಷ್ ಹೆಚ್.ಡಿ.ಪುರ ಪ್ರಾಥಾಮಿಕ ಆರೋಗ್ಯ ಕೇಂದ್ರದ ಅಂಬುಲೆನ್ಸ್‌ನಲ್ಲಿ ಮದ್ಯವನ್ನು ಚಿತ್ರಹಳ್ಳಿ ಗ್ರಾಮಕ್ಕೆ ತಂದಿದ್ದರು. ಬಳಿಕ ಜೀವನ್, ಗಿರೀಶ್ ಜೊತೆ ಸೇರಿ ಅಂಬುಲೆನ್ಸ್‌ನಿಂದ ಓಮಿನಿ ವ್ಯಾನ್‍ಗೆ ಶಿಫ್ಟ್ ಮಾಡುತ್ತಿದ್ದರು ಎಂದು ಪೊಲಿಸರು ಮಾಹಿತಿ ನೀಡಿದ್ದಾರೆ.

    ಲಾಕ್‍ಡೌನ್ ಆದೇಶ ಉಲ್ಲಂಘಿಸಿ ಸಾಗಿಸುತ್ತಿದ್ದ ಅಂದಾಜು 60,614 ರೂ ಮೌಲ್ಯದ 180 ಎಂಎಲ್‍ನ 48 ಬ್ಯಾಕ್‍ಪೈಪರ್ ಡಿಲಕ್ಸ್ ವಿಸ್ಕಿ ಪೌಚ್‍ಗಳು ಇರುವ 14 ಬಾಕ್ಸ್, ಕೆಎ-16, ಜಿ-591 ನೋಂದಣಿಯ ಅಂಬುಲೆನ್ಸ್ ಹಾಗೂ ಕೆಎ-51, ಎಂಎಲ್-7603 ನಂಬರಿನ ಓಮಿನಿ ಕಾರನ್ನು ಪೊಲೀಸರು ವಶಕ್ಕೆ ಪಡೆಕೊಂಡಿದ್ದಾರೆ. ಈ ಕುರಿತು ಚಿತ್ರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಲ್ವರನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

  • 3 ದಿನ ನಡೆದು ಇನ್ನೇನೋ ಮನೆ ಸೇರೋ 1 ಗಂಟೆ ಮುಂಚೆ ಬಾಲಕಿ ಸಾವು

    3 ದಿನ ನಡೆದು ಇನ್ನೇನೋ ಮನೆ ಸೇರೋ 1 ಗಂಟೆ ಮುಂಚೆ ಬಾಲಕಿ ಸಾವು

    – ಕುಟುಂಬಕ್ಕಾಗಿ ಮೆಣಸಿನಕಾಯಿ ತೋಟದಲ್ಲಿ ಕೆಲಸ

    ರಾಯ್ಪುರ: ಕೊರೊನಾದಿಂದ ಇಡೀ ದೇಶವೇ ತತ್ತರಿಸಿ ಹೋಗುತ್ತಿದೆ. ಹೀಗಾಗಿ ಅನೇಕ ಕಾರ್ಮಿಕರು ನಡೆದುಕೊಂಡು ತಮ್ಮ ತಮ್ಮ ಸ್ವ-ಗ್ರಾಮಕ್ಕೆ ಹೋಗಿದ್ದಾರೆ. ಈ ನಡುವೆ ತೆಲಂಗಾಣದಿಂದ ತಮ್ಮ ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದ 12 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ.

    ಜಾಮ್ಲೋ ಮಕ್ಡಾಮ್ (12) ಮೃತ ಬಾಲಕಿ. ತೆಲಂಗಾಣದಿಂದ ಚತ್ತೀಸ್‍ಗಢದ ಬಿಜಾಪುರ ಜಿಲ್ಲೆಗೆ ಕಾಲ್ನಡಿಗೆಯಲ್ಲಿ ಪ್ರಯಾಣಿಸುತ್ತಿದ್ದಾಗ ಸಾವನ್ನಪ್ಪಿದ್ದಾಳೆ. ಮೃತ ಬಾಲಕಿ ತೆಲಂಗಾಣದ ಗ್ರಾಮವೊಂದರಲ್ಲಿ ತನ್ನ ಕುಟುಂಬಕ್ಕಾಗಿ ಮೆಣಸಿನಕಾಯಿ ತೋಟದಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ ಲಾಕ್‍ಡೌನ್ ಆದ ಪರಿಣಾಮ ಏಪ್ರಿಲ್ 15ರಂದು ತನ್ನ ಜೊತೆ ಕೆಲಸ ಮಾಡುತ್ತಿದ್ದ 11 ಮಂದಿಯೊಂದಿಗೆ ತನ್ನ ಗ್ರಾಮಕ್ಕೆ ಹೋಗಲು ಕಾಲ್ನಡಿಗೆಯ ಮೂಲಕ ಹೊರಟ್ಟಿದ್ದಳು.

    11 ಜನರು ಈ ಗುಂಪು ಮೂರು ದಿನಗಳ ಕಾಲ ನಡೆದಿದ್ದರು. ಆದರೆ ಶನಿವಾರ ಮಧ್ಯಾಹ್ನ ಬಾಲಕಿ ತನ್ನ ಮನೆಗ ಇನ್ನೂ 14 ಕಿ.ಮೀ ದೂರದಲ್ಲಿದ್ದಾಗ ತೀವ್ರ ಹೊಟ್ಟೆನೋವು ಕಾಣಿಸಿಕೊಂಡು ಕುಸಿದು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಕೊನೆಗೆ ಆಕೆಯ ಮೃತದೇಹವನ್ನು ಅಂಬುಲೆನ್ಸ್ ನಲ್ಲಿ ಆಕೆಯ ಮನೆಗೆ ತೆಗೆದುಕೊಂಡು ಹೋಗಲಾಗಿದೆ.

    ಬಾಲಕಿ ತೀವ್ರ ನಿರ್ಜಲೀಕರಣ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿದ್ದಳು. ಆಕೆಗೆ ಕೊರೊನಾ ಪರೀಕ್ಷೆ ಮಾಡಿದ್ದು, ವರದಿಯಲ್ಲಿ ನೆಗೆಟಿವ್ ಬಂದಿದೆ ಎಂದು ಹಿರಿಯ ಜಿಲ್ಲಾ ವೈದ್ಯಕೀಯ ಅಧಿಕಾರಿ ಬಿ.ಆರ್.ಪುಜಾರಿ ಹೇಳಿದರು.

    ಬಾಲಕಿಯ ತಂದೆ ಆಂಡೋರಮ್ ಮಾತನಾಡಿ, ತೆಲಂಗಾಣದಲ್ಲಿ ಎರಡು ತಿಂಗಳಿನಿಂದ ಕೆಲಸ ಮಾಡುತ್ತಿದ್ದಳು. ಆದರೆ ಲಾಕ್‍ಡೌನ್ ಕಾರಣ ಅವಳು ಮೂರು ದಿನಗಳ ಕಾಲ ನಡೆದಿದ್ದಾಳೆ. ಹೀಗಾಗಿ ಮಗಳು ವಾಂತಿ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಅವಳು ಸರಿಯಾಗಿ ಊಟ ಮಾಡುತ್ತಿರಲಿಲ್ಲ ಎಂದು ಕಣ್ಣೀರು ಹಾಕಿದರು.

    ಬಾಲಕಿಯ ಕುಟುಂಬಕ್ಕೆ ರಾಜ್ಯ ಸರ್ಕಾರ ಒಂದು ಲಕ್ಷ ರೂ.ಪರಿಹಾರ ನೀಡುವುದಾಗಿ ಘೋಷಿಸಿದೆ.

  • ಕೊರೊನಾಗೆ ಪ್ಲಾಸ್ಮಾ ಥೆರಪಿ ಸಂಜೀವಿನಿ – ಸೋಂಕಿತ ವ್ಯಕ್ತಿಯ ಆರೋಗ್ಯದಲ್ಲಿ ಚೇತರಿಕೆ

    ಕೊರೊನಾಗೆ ಪ್ಲಾಸ್ಮಾ ಥೆರಪಿ ಸಂಜೀವಿನಿ – ಸೋಂಕಿತ ವ್ಯಕ್ತಿಯ ಆರೋಗ್ಯದಲ್ಲಿ ಚೇತರಿಕೆ

    ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ನಡುವೆ ಸೋಂಕಿಗೆ ಲಸಿಕೆ ಇಲ್ಲದಿರುವುದು ಮತ್ತಷ್ಟು ಸಂಕಷ್ಟಕ್ಕೆ ಕಾರಣವಾಗಿದೆ. ಈ ಬೆಳವಣಿಗೆಗಳ ಮಧ್ಯೆ ಪ್ಲಾಸ್ಮಾ ಥೆರಪಿ ಎನ್ನುವ ಚಿಕಿತ್ಸೆ ಕೊರೊನಾ ವಿರುದ್ಧದ ಹೋರಾಟಕ್ಕೆ ಸಂಜೀವಿನಿ ರೂಪದಲ್ಲಿ ಕಾಣುತ್ತಿದೆ.

    ದೆಹಲಿಯ ಸಾಕೇತ್ ನಲ್ಲಿರುವ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ವ್ಯಕ್ತಿಗೆ ಮೊದಲ ಪ್ಲಾಸ್ಮಾ ಥೆರಪಿ ನೀಡಲಾಗಿತ್ತು. ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ನಾಲ್ಕು ದಿನಗಳಲ್ಲಿ ಕೊರೊನಾ ಸೋಂಕು ನೆಗೆಟಿವ್ ರಿಪೋರ್ಟ್ ಬಂದಿದೆ.

    ಎಪ್ರಿಲ್ ನಾಲ್ಕರಂದು 49 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಕಂಡು ಬಂದಿತು. ನಿರಂತರ ಚಿಕಿತ್ಸೆ ನೀಡಿದ್ರೂ ಯಾವುದೇ ಪ್ರಯೋಜನವಾಗಿರಲಿಲ್ಲ. ವೆಂಟಿಲೇಟರ್ ಮೇಲಿದ್ದು ರೋಗಿಯ ಸ್ಥಿತಿ ಕಂಡು ಕುಟುಂಬಸ್ಥರುವ ಪ್ಲಾಸ್ಮಾ ಥೆರಪಿ ಮಾಡಲು ಮನವಿ ಮಾಡಿಕೊಂಡಿದ್ದರು. ಇದನ್ನೂ ಓದಿ: ಸೋಂಕಿನಿಂದ ಗುಣಮುಖರಾದ ವ್ಯಕ್ತಿಯ ರಕ್ತವೇ ಕೊರೊನಾಗೆ ಔಷಧಿ

    ಕುಟುಂಬದ ಮನವಿ ಮೇರೆಗೆ ಎಪ್ರಿಲ್ 14ರಂದು ಸೋಂಕಿತ ವ್ಯಕ್ತಿಗೆ ಪ್ಲಾಸ್ಮಾ ಥೆರಪಿ ಮಾಡಲಾಗಿತ್ತು. ಥೆರಪಿ ಬಳಿಕ ನಾಲ್ಕು ದಿನಗಳಲ್ಲಿ ಸೋಂಕಿತ ವ್ಯಕ್ತಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಮ್ಯಾಕ್ಸ್ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದು, ವೆಂಟಿಲೇಟರ್ ಸಹಾಯವಿಲ್ಲದೆ ಸೋಂಕಿತ ವ್ಯಕ್ತಿ ಉಸಿರಾಡುತ್ತಿದ್ದಾನೆ ಮತ್ತು ಇತ್ತಿಚೇಗೆ ನಡೆಸಿದ ಎರಡು ಟೆಸ್ಟ್‍ಗಳಲ್ಲಿ ಸೋಂಕು ನೆಗೆಟಿವ್ ರಿಪೋರ್ಟ್ ಬಂದಿದೆ ಎಂದಿದ್ದಾರೆ. ಇದನ್ನೂ ಓದಿ: ಕೊರೊನಾ ಹೋರಾಟಕ್ಕೆ ಪ್ಲಾಸ್ಮಾ ಥೆರಪಿ ಅಸ್ತ್ರ – ಐಸಿಎಂಆರ್ ಅನುಮತಿ, ಶೀಘ್ರದಲ್ಲಿ ಆರಂಭ

    ಪ್ಲಾಸ್ಮಾ ಥೆರಪಿ ಎಂದರೇನು?
    ಕೊರೊನಾದಿಂದ ಚೇತರಿಸಿಕೊಂಡ ವ್ಯಕ್ತಿಯ ರಕ್ತದಲ್ಲಿ ಆ್ಯಂಟಿಬಾಡಿಗಳು ಇರುತ್ತವೆ. ಅವು ರೋಗ ನಿರೋಧಕ ಶಕ್ತಿ ಹೊಂದಿರುತ್ತವೆ. ಆ ಪ್ಲಾಸ್ಮಾವನ್ನು ತೆಗೆದು ಸೋಂಕಿತ ಅಥವಾ ಸೋಂಕು ಶಂಕೆ ಹೊಂದಿರುವ ವ್ಯಕ್ತಿಗೆ ನೀಡುವುದನ್ನೇ ಪ್ಲಾಸ್ಮಾ ಥೆರಪಿ ಎನ್ನಲಾಗುತ್ತದೆ. ಪ್ಲಾಸ್ಮಾ ಥೆರಪಿಗೆ ಒಳಗಾದ ವ್ಯಕ್ತಿಗಳು ಬೇಗನೆ ಕೊರೊನಾದಿಂದ ಗುಣಮುಖರಾಗುವುದು ವಿದೇಶಗಳಲ್ಲಿ ಸಾಬೀತಾಗಿದೆ.

    ಸೋಂಕ ಮುಕ್ತವಾದ ವ್ಯಕ್ತಿ ಚೇತರಿಸಿಕೊಂಡ 28 ದಿನಗಳ ಬಳಿಕ ಪ್ಲಾಸ್ಮಾವನ್ನು ದಾನ ಮಾಡಬಹುದು, ಮೊದಲ ಪರೀಕ್ಷೆಯಲ್ಲಿ ಪಾಸಿಟಿವ್ ಬಂದು, 2ನೇ ಪರೀಕ್ಷೆಯಲ್ಲಿ ನೆಗೆಟಿವ್ ಬಂದವರು ಕೂಡಾ ದಾನ ಮಾಡಬಹುದಾಗಿದೆ. ದಾನಿಯೊಬ್ಬನ ಪ್ಲಾಸ್ಮಾವನ್ನು ಅದೇ ರಕ್ತದ ಗುಂಪಿನ ರೋಗಿಗಳಿಗೆ ಮಾತ್ರ ನೀಡಬಹುದು ಎಂದು ತಜ್ಞರು ಹೇಳಿದ್ದಾರೆ.

  • ಹಾವೇರಿಗೆ ಬಂದಿದ್ದ ವಿಜಯಪುರದ ಕೊರೊನಾ ಸೋಂಕಿತರು

    ಹಾವೇರಿಗೆ ಬಂದಿದ್ದ ವಿಜಯಪುರದ ಕೊರೊನಾ ಸೋಂಕಿತರು

    – 21 ಜನಕ್ಕೆ ಹೋಮ್ ಕ್ವಾರಂಟೈನ್

    ಹಾವೇರಿ: ವಿಜಯಪುರ ಜಿಲ್ಲೆಯ ಕೊರೊನಾ ಸೋಂಕಿತರಿಬ್ಬರು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಆಡೂರಿಗೆ ಬಂದು ಹೋಗಿದ್ದಾರೆ ಎಂಬ ವಿಷಯ ಬಹಿರಂಗವಾಗಿದ್ದು, ಗ್ರಾಮದ 21 ಜನರನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಹೋಮ್ ಕ್ವಾರಂಟೈನ್‍ನಲ್ಲಿಡಲಾಗಿದೆ.

    ವಿಜಯಪುರ ಜಿಲ್ಲೆಯ ರೋಗಿ ನಂಬರ್ 306 ಮತ್ತು 308 ಟ್ರಾವೆಲ್ ಹಿಸ್ಟರಿ ಪರಿಶೀಲಿಸಲಾಗಿದ್ದು, ಈ ವೇಳೆ ಆಡೂರಿಗೆ ಭೇಟಿ ನೀಡಿರುವುದು ಬಹಿರಂಗವಾಗಿದೆ. ಏಪ್ರಿಲ್ 5 ರಂದು ಆಡೂರಿನ ತಮ್ಮ ಸಂಬಂಧಿಕರ ಮನೆಗೆ ಬಂದು ಊಟ ಮಾಡಿ ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸೋಂಕಿತರ ಟ್ರಾವೆಲ್ ಹಿಸ್ಟರಿ ಆಧಾರದ ಮೇಲೆ 21 ಜನರನ್ನು ಜಿಲ್ಲಾಸ್ಪತ್ರೆಗೆ ಕರೆತಂದು ತಪಾಸಣೆಗೆ ಒಳಪಡಿಸಲಾಗಿದೆ.

    ಈ 21 ಜನರಲ್ಲಿ ಯಾರಲ್ಲೂ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿಲ್ಲ. ಆದರೆ ಮುಂಜಾಗ್ರತಾ ಕ್ರಮವಾಗಿ ಇವರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಅಲ್ಲದೆ ಇವರ ರಕ್ತ ಮತ್ತು ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷಿಸಲು ಲ್ಯಾಬ್‍ಗೆ ಕಳುಹಿಸಿದೆ. ಪರೀಕ್ಷೆ ನಂತರ 21 ಜನರನ್ನು ಆರೋಗ್ಯ ಇಲಾಖೆ ಕ್ವಾರಂಟೈನ್ ಮಾಡಿದೆ. ಲ್ಯಾಬ್ ವರದಿ ಸೋಮವಾರ ಸಂಜೆ ಅಥವಾ ಮಂಗಳವಾರ ಆರೋಗ್ಯ ಇಲಾಖೆಯ ಕೈ ಸೇರಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಂದ್ರ ದೊಡ್ಡಮನಿ ಮಾಹಿತಿ ನೀಡಿದ್ದಾರೆ.

  • 388ಕ್ಕೆ ಏರಿದ ಸೋಂಕಿತರ ಸಂಖ್ಯೆ – ಮೈಸೂರಿನಲ್ಲಿ ನಾಲ್ವರಿಗೆ ಕೊರೊನಾ

    388ಕ್ಕೆ ಏರಿದ ಸೋಂಕಿತರ ಸಂಖ್ಯೆ – ಮೈಸೂರಿನಲ್ಲಿ ನಾಲ್ವರಿಗೆ ಕೊರೊನಾ

    ಬೆಂಗಳೂರು: ದಿನೇ ದಿನೇ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇವತ್ತು ನಾಲ್ವರಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ 388ಕ್ಕೆ ಏರಿಕೆ ಕಂಡಿದೆ.

    ಬೆಳಗ್ಗೆ ಒಟ್ಟು ನಾಲ್ವರಿಗೆ ಸೋಂಕು ತಗುಲಿರೋದು ದೃಢಪಟ್ಟಿದೆ. ದೆಹಲಿಗೆ ತಬ್ಲಿಘಿ ಜಮಾತ್‍ಗೆ ಹೋಗಿದ್ದ ಮೈಸೂರಿನ ಇಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ. ಇನ್ನೂ ನಂಜನಗೂಡಿನ ಇಬ್ಬರಲ್ಲಿ ಸೋಂಕು ಇರುವುದು ದೃಢವಾಗಿದೆ.

    ಸೋಂಕಿತರ ವಿವರ:
    1. ರೋಗಿ- 385: 46 ವರ್ಷದ ಪುರುಷ, ಮೈಸೂರು ನಿವಾಸಿ. ದೆಹಲಿಗೆ ಪ್ರಯಾಣ ಮಾಡಿದ್ದ.
    2. ರೋಗಿ- 386: 20 ವರ್ಷದ ಯುವಕ, ಮೈಸೂರು ನಿವಾಸಿ. ದೆಹಲಿಗೆ ಪ್ರಯಾಣ ಮಾಡಿದ್ದ.
    3. ರೋಗಿ- 387: 39 ವರ್ಷದ ಪುರುಷ, ಮೈಸೂರಿನ ನಂಜನಗೂಡು ನಿವಾಸಿ. ರೋಗಿ ನಂಬರ್ 52ರ ದ್ವಿತೀಯ ಸಂಪರ್ಕ.
    4. ರೋಗಿ- 388: 23 ವರ್ಷದ ಯುವತಿ, ಮೈಸೂರಿನ ನಂಜನಗೂಡು ನಿವಾಸಿ. ರೋಗಿ ನಂಬರ್ 319ರ ಸಂಪರ್ಕ.

  • ಮಹಾ ಎಡವಟ್ಟು- ಸೋಂಕಿತನ ಕುಟುಂಬಸ್ಥರನ್ನ ಒಂದೇ ಅಂಬುಲೆನ್ಸ್‌ನಲ್ಲಿ ರವಾನೆ

    ಮಹಾ ಎಡವಟ್ಟು- ಸೋಂಕಿತನ ಕುಟುಂಬಸ್ಥರನ್ನ ಒಂದೇ ಅಂಬುಲೆನ್ಸ್‌ನಲ್ಲಿ ರವಾನೆ

    ಮೈಸೂರು: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂತಹ ಪರಿಸ್ಥಿತಿಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಹಾ ಎಡವಟ್ಟು ಮಾಡಿಕೊಂಡಿದ್ದಾರೆ.

    ಮೈಸೂರು ತಾಲೂಕಿನ ಮೊಸಂಬಾಯನಹಳ್ಳಿಯ 65 ವರ್ಷದ ವೃದ್ಧನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಸೋಂಕಿತ ವೃದ್ಧನ ಕುಟುಂಬಸ್ಥರನ್ನು ಒಂದೇ ಅಂಬುಲೆನ್ಸ್‌ನಲ್ಲಿ ಶನಿವಾರ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

    ಯುವತಿ, ಬಾಲಕಿ ಹಾಗೂ ಹಿರಿಯರು ಸೇರಿದಂತೆ ಒಟ್ಟು 6 ಮಂದಿಯನ್ನು ಒಟ್ಟಿಗೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ವೇಳೆ ಆರೋಗ್ಯ ಇಲಾಖೆ ಸಿಬ್ಬಂದಿ ಸಾಮಾಜಿಕ ಅಂತರದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಹೀಗೆ ಎಡವಟ್ಟು ಮಾಡಿಕೊಂಡಿದ್ದಾರೆ. ಸಿಬ್ಬಂದಿಯ ಈ ನಡೆಗೆ ಭಾರೀ ಟೀಕೆ ವ್ಯಕ್ತವಾಗಿದೆ.

    ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶನಿವಾರ ಸಂಜೆ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಮೈಸೂರಿನಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 80 ಆಗಿತ್ತು. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಜ್ಯದ ಜಿಲ್ಲೆಗಳ ಪಟ್ಟಿಯಲ್ಲಿ ಮೈಸೂರು ಎರಡನೇ ಸ್ಥಾನದಲ್ಲಿದೆ.

    ಅಷ್ಟೇ ಅಲ್ಲದೆ ರಾಜ್ಯದಲ್ಲಿ ಶನಿವಾರ ಒಂದೇ ದಿನ 25 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 384ಕ್ಕೆ ಏರಿಕೆಯಾಗಿತ್ತು. ಗಮನಿಸಬೇಕಾದ ಅಂಶ ಅಂದ್ರೆ 25 ಮಂದಿಯಲ್ಲಿ 10 ಮಂದಿ, ಸೋಂಕಿತರ ಸೆಕೆಂಡರಿ ಕಾಂಟ್ಯಾಕ್ಟ್‌ನಲ್ಲಿದ್ದವರು. ತೀವ್ರ ಉಸಿರಾಟದ ಸೋಂಕಿನಿಂದ ಒಬ್ಬರಿಗೆ, ವಿಷಮ ಶೀತಜ್ವರದಿಂದ ಬಳಲುತ್ತಿರುವ ಒಬ್ಬರಿಗೆ ಸೋಂಕು ತಗುಲಿತ್ತು. ಬಾಗಲಕೋಟೆ, ನಂಜನಗೂಡಿನ ತಲಾ ಏಳು ಮಂದಿಗೆ, ಬೆಂಗಳೂರಿನ ಪಾದರಾಯನಪುರದಲ್ಲಿ ಮೂವರು, ವಿಜಯಪುರ, ಕಲಬುರಗಿಯಲ್ಲಿ ತಲಾ ಇಬ್ಬರಿಗೆ, ಹುಬ್ಬಳ್ಳಿ, ಮಂಡ್ಯ, ಗದಗದಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ.

  • ‘ಔಷಧಿ ಮಿತ್ರ’ನೆಂಬ ವಿನೂತನ ಸೇವೆ – ಮನೆ ಬಾಗಿಲಿಗೆ ಮೆಡಿಸಿನ್

    ‘ಔಷಧಿ ಮಿತ್ರ’ನೆಂಬ ವಿನೂತನ ಸೇವೆ – ಮನೆ ಬಾಗಿಲಿಗೆ ಮೆಡಿಸಿನ್

    ಚಾಮರಾಜನಗರ: ಲಾಕ್‍ಡೌನ್ ಇದ್ದರೂ ಜನರು ಔಷಧಿ ಖರೀದಿ ನೆಪದಲ್ಲಿ ಮನೆಯಿಂದ ಹೊರಬರುತ್ತಿದ್ದಾರೆ. ಇದರಿಂದ ವಾಹನ ಸಂಚಾರ, ಜನದಟ್ಟಣೆಯು ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲದೆ ಮೆಡಿಕಲ್ ಶಾಪ್‍ಗಳ ಮುಂದೆ ಜನ ಗುಂಪುಗುಂಪಾಗಿ ಸೇರುತ್ತಿದ್ದಾರೆ. ಇದನ್ನು ತಡೆಗಟ್ಟಲು ಚಾಮರಾಜನಗರ ಜಿಲ್ಲಾಡಳಿತ ‘ಔಷಧಿ ಮಿತ್ರ’ ಎಂಬ ವಿನೂತನ ಸೇವೆ ಆರಂಭಿಸಿದೆ.

    ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು, ಕೊಳ್ಳೇಗಾಲ ಹಾಗೂ ಹನೂರು ಪಟ್ಟಣಗಳಲ್ಲಿ ಮನೆಮನೆಗೆ ಔಷಧಿ ತಲುಪಿಸಲು ಜಿಲ್ಲಾಡಳಿತದ ವತಿಯಿಂದ ಫಾರ್ಮಸಿಸ್ಟ್‌ಗಳನ್ನು ನಿಯೋಜಿಸಲಾಗಿದೆ. ಇವರಿಗೆ ಜಿಲ್ಲಾಡಳಿತದಿಂದಲೇ ಬೈಕ್ ನೀಡಲಾಗಿದ್ದು, ಔಷಧಿಯ ವಿವರಗಳನ್ನು ಡಾಕ್ಟರ್ ನೀಡಿರುವ ಔಷಧಿ ಚೀಟಿ ಸಮೇತ ಇವರಿಗೆ ವಾಟ್ಸಪ್ ಮಾಡಿದರೆ ಸಾಕು. ಈ ಫಾರ್ಮಸಿಸ್ಟ್‌ಗಳು ಮೆಡಿಕಲ್ ಶಾಪ್‍ಗೆ ಹೋಗಿ ವಾಟ್ಸಪ್‍ನಲ್ಲಿ ನೀವು ತಿಳಿಸಿರುವ ಔಷಧಿಗಳನ್ನು ತಂದು ಮನೆ ಬಾಗಿಲಿಗೆ ರಶೀದಿ ಸಮೇತ ತಲುಪಿಸಲಿದ್ದಾರೆ.

    ಔಷಧಿ ತಲುಪಿದ ಮೇಲೆ ಔಷಧಿಗೆ ನಿಗದಿಯಾಗಿರುವ ಹಣ ನೀಡಿದರೆ ಸಾಕು ಯಾವುದೇ ಸರ್ವೀಸ್ ಚಾರ್ಜ್ ಅಥವಾ ಡೆಲಿವರಿ ಚಾರ್ಜ್ ನೀಡಬೇಕಾಗಿಲ್ಲ. ಸದ್ಯದ ಮಟ್ಟಿಗೆ ಚಾಮರಾಜನಗರ ಕೊರೊನಾ ಮುಕ್ತವಾಗಿದೆ. ಆದರೆ ಮೈಸೂರು, ಮಂಡ್ಯ, ಕೇರಳ ತಮಿಳುನಾಡು ಹೀಗೆ ಹಾಟ್‍ಸ್ಪಾಟ್‍ಗಳಿಂದಲೇ ಸುತ್ತುವರಿದಿರುವುದು ಆತಂಕಕ್ಕೆ ಕಾರಣವಾಗಿದೆ.

    ಜನರ ಅನಗತ್ಯ ಓಡಾಟ, ಗುಂಪು ಸೇರುವಿಕೆಯಿಂದ ಅಪಾಯ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಯಾವುದೇ ಕಾರಣಕ್ಕೂ ಚಾಮರಾಜನಗರ ಜಿಲ್ಲೆಗೆ ಕೊರೊನಾ ಸೋಂಕು ತಗುಲಬಾರದು ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದು, ಇದರ ಒಂದು ಭಾಗವಾಗಿ ಔಷಧಿ ಮಿತ್ರ ಯೋಜನೆ ಜಾರಿಗೆ ತಂದಿದ್ದಾರೆ.

  • ಉಚಿತ ಹಾಲು ಪಡೆಯಲು 1.5 ಕಿ.ಮೀ ಕ್ಯೂ

    ಉಚಿತ ಹಾಲು ಪಡೆಯಲು 1.5 ಕಿ.ಮೀ ಕ್ಯೂ

    ಬೆಂಗಳೂರು: ರಾಜ್ಯ ಸರ್ಕಾರ ಜನರ ಜೀವದ ಜೊತೆ ಆಟವಾಡುತ್ತಿದೆಯಾ? ಸರ್ಕಾರವೇ ಕೊರೊನಾ ಸೋಂಕು ಹರಡಿಸುತ್ತಿದೆಯಾ ಎಂಬ ಅನುಮಾನ ಶುರುವಾಗಿದೆ.

    ಹೌದು, ಸರ್ಕಾರ ನೀಡುತ್ತಿರುವ ಉಚಿತ ಹಾಲು ಪಡೆಯಲು ಜನರು ಕಿಲೋ ಮೀಟರ್ ಗಟ್ಟಲೇ ಕ್ಯೂ ನಿಲ್ಲುತ್ತಿದ್ದಾರೆ. ಕೆಲವೊಮ್ಮೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದ ಪ್ರಸಂಗಗಳು ವರದಿಯಾಗಿವೆ. ಇಂತಹದ್ದೇ ಸನ್ನಿವೇಶವೊಂದು ಇಂದು ಮಲ್ಲೇಶ್ವರಂನ ದತ್ತಾತ್ರೇಯ ವಾರ್ಡ್ ನಲ್ಲಿ ನಡೆದಿದೆ.

    ಮಲ್ಲೇಶ್ವರಂನ ದತ್ತಾತ್ರೇಯ ವಾರ್ಡ್‍ನಲ್ಲಿ ಕಳೆದ ಕೆಲವು ದಿನಗಳಿಂದ ಬೆಳಗ್ಗೆ 7 ಗಂಟೆಗೆ ಉಚಿತ ಹಾಲು ವಿತರಣೆ ಮಾಡಲಾಗುತ್ತಿದೆ. ಈ ಹಾಲನ್ನು ಪಡೆಯಲು ಜನರು ಬೆಳಗ್ಗೆ 5 ಗಂಟೆಗೆ ಕ್ಯೂ ನಿಲ್ಲುತ್ತಿದ್ದಾರೆ. ಇಂದು ಕೂಡ ಉಚಿತ ಹಾಲು ಪಡೆಯಲು ಒಂದೂವರೆ ಕಿ.ಮೀ ಕ್ಯೂ ಉಂಟಾಗಿತ್ತು. ಅಷ್ಟೇ ಅಲ್ಲದೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ನೂರಾರು ಜನರು ಕ್ಯೂನಲ್ಲಿ ನಿಂತಿದ್ದರು.

  • ನಂಜನಗೂಡಿಗೆ ಕೊರೊನಾ ಬಂದಿದ್ದು ಹೇಗೆ? ನೌಕರನ ಮಾತು

    ನಂಜನಗೂಡಿಗೆ ಕೊರೊನಾ ಬಂದಿದ್ದು ಹೇಗೆ? ನೌಕರನ ಮಾತು

    – ಕೊರೊನಾ ಪರೀಕ್ಷೆಗೂ ಮೊದಲು ಎಲ್ಲೆಲ್ಲೆ ಹೋಗಿದ್ದ ರೋಗಿ?
    – ಕೊರೊನಾದಿಂದ ಗುಣಮುಖ ಬಳಿಕ ಹೇಳಿದ್ದೇನು?

    ಮೈಸೂರು: ನಂಜನಗೂಡು ಕಾರ್ಖಾನೆಯ ಕೊರೊನಾ ಸೋಂಕಿನಿಂದ ಇಡೀ ಮೈಸೂರು ಜಿಲ್ಲೆಯ ಜನರನ್ನು ಆತಂಕಕ್ಕೆ ತಳ್ಳಿದೆ. ಹೀಗಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಹಾಟ್‍ಸ್ಪಾಟ್ ಜಿಲ್ಲೆಗಳ ಪಟ್ಟಿಯಲ್ಲಿ ಮೈಸೂರು ಸೇರಿಕೊಂಡಿದೆ.

    ನಂಜನಗೂಡು ಕಾರ್ಖಾನೆಯಲ್ಲಿ ಉದ್ಯೋಗಿ ಕೊರೊನಾ ಸೋಂಕಿತ ರೋಗಿ-52 ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಖಾಸಗಿ ವೆಬ್‍ಸೈಟ್ ಜೊತೆಗೆ ದೂರವಾಣಿ ಮೂಲಕ ಮಾತನಾಡಿದ ಅವರು ತಮ್ಮ ಪ್ರಯಾಣದ ವಿವರ ಹಾಗೂ ಕೆಲವು ಪ್ರಮುಖ ಮಾಹಿತಿಯನ್ನು ನೀಡಿದ್ದಾರೆ.

    ರೋಗಿ-52: ನನ್ನ ಹತ್ತಿರ ಪಾಸ್‍ಪೋರ್ಟ್ ಇಲ್ಲ, ನಾನು ಚೀನಾಕ್ಕೆ ಹೇಗೆ ಹೋಗ್ಲಿ….?
    ಪ್ರತಿನಿಧಿ: ಹೌದಾ..?
    ರೋಗಿ-52: ನನಗೆ ಕೊರೊನಾ ಹೇಗೆ ಬಂತು ಅಂತ ಗೊತ್ತಿಲ್ಲ. ನಾನು ಕಂಪನಿ ಬಿಟ್ರೆ ಮನೆ, ಮನೆ ಬಿಟ್ರೆ ಕಂಪನಿ. ಎಲ್ಲೂ ಹೊರಗಡೆ ಹೋದವನಲ್ಲ. ಡೀಟೈಲ್ಸ್ ನೋಡಿದ್ದೀರ. ನಾನು ಚಾಮರಾಜನಗರ, ಗುಂಡ್ಲುಪೇಟೆಗೆ ಹೋಗಿದ್ದೆ. ಡೇಟ್ ಗೊತ್ತಿಲ್ಲ ಯಾವಾಗಂತ. ಚಾಮರಾಜನಗರದಲ್ಲಿ ಈ ಥರ ಕೊರೊನಾ ಕನ್ಸರ್ನ್ ಏನೂ ಇಲ್ಲ.
    ಪ್ರತಿನಿಧಿ: ಚೀನಾದಿಂದ ನಿಮ್ಮ ಕಂಪನಿಗೆ ಶಿಪ್‍ಮೆಂಟ್ ಬಂದಿತ್ತಂತೆ ನಿಜನಾ..?

    ರೋಗಿ-52: ಮೇಡಂ ನಂದು ಕಾರ್ಡಿನೇಷನ್ ಡಿಪಾರ್ಟ್‍ಮೆಂಟ್. ನಮಗದು ಬರಲ್ಲ, ಅದೇನಿದ್ರೂ ಸ್ಟೋರ್ ಡಿಪಾರ್ಟ್‍ಮೆಂಟ್‍ಗೆ ಬರುತ್ತೆ. ನಮ್ಮದೇನಿದ್ರೂ ಡಾಂಕ್ಯುಮೆಂಟೇಷನ್ ಸೆಕ್ಷನ್ ಅಷ್ಟೇ.
    ಪ್ರತಿನಿಧಿ: ನಿಮ್ದು ಬರೀ ಡಾಂಕ್ಯುಮೆಂಟೇಷನ್ ಸೆಕ್ಷನ್ ಅಲ್ವಾ?
    ಸಂಖ್ಯೆ 52: ಹೌದು, ಬರೀ ಡಾಂಕ್ಯುಮೆಂಟೇಷನ್ ಸೆಕ್ಷನ್..
    ಪ್ರತಿನಿಧಿ: ಶಿಪ್‍ನಿಂದ ನೀವು ರಿಸೀವ್ ಮಾಡ್ಕೊಂಡಿಲ್ವಾ..?
    ರೋಗಿ-52: ಇಲ್ಲ, ಇಲ್ಲ ಮೇಡಂ… ನಮ್ಮದೇನಿದ್ರೂ ಡಾಂಕ್ಯುಮೆಂಟೇಷನ್ ಸೆಕ್ಷನ್. ನಮ್ಮದೇನಿದ್ರೂ ಡಾಂಕ್ಯುಮೆಂಟ್ ಏನ್ ಬರುತ್ತೆ ಅದನ್ನ ಸ್ಟೋರ್ ಮಾಡ್ತೀವಿ ಮೇಡಂ.

    ಪ್ರತಿನಿಧಿ: ಸೋ.. ನೀವು ಆಫೀಸ್ ರೂಂನಿಂದ ಹೊರಗಡೆ ಬರೋ ಇದೇ ಇಲ್ವಾ.?
    ರೋಗಿ-52: ಬರ್ತಿವಿ ಮೇಡಂ, ಯಾಕಂದ್ರೆ ಮ್ಯಾನೇಜರ್ ಇರ್ತಾರೆ ಅವರಿಗೆ ರಿಪೋರ್ಟಿಂಗ್ ಮಾಡ್ಬೇಕಲ್ವಾ..? ಅವರು ಕೆಲ್ಸ ಹೇಳಿರ್ತಾರೆ. ಅವರನ್ನ ಮೀಟ್ ಮಾಡ್ತಾ ಇರ್ತಿವಿ, ಅವರೊಂದಿಗೆ ಮಾತಾಡ್ತಾ ಇರ್ತಿವಿ.
    ಪ್ರತಿನಿಧಿ: ಸೋ.. ನೀವು ಗೋಡಾನ್‍ಗೆಲ್ಲ ಹೋಗ್ತೀರಾ, ರೆಗ್ಯುಲರ್ ಆಗಿ..?
    ರೋಗಿ 52: ಇಲ್ಲ ಇಲ್ಲ… ನಾವೇನ್ ಗೋಡಾನ್‍ಗೆ ಹೋಗಲ್ಲ ಮೇಡಂ. ನಮ್ಮ ಡಿಪಾರ್ಟ್‍ಮೆಂಟ್‍ನಲ್ಲಿ ಡಾಂಕ್ಯುಮೆಂಟ್ ಬರೋದನ್ನು ಸ್ಟೋರ್ ಮಾಡ್ತೀವಿ. ಇನ್ವೆಷ್ಟಿಗೇಷನ್ ಡಾಂಕ್ಯುಮೆಂಟೇಷನ್ ಬೇಕು ಅಂದ್ರೆ ಕೊಡ್ತೀವಿ.
    ಪ್ರತಿನಿಧಿ: ಅಷ್ಟೇನಾ ನಿಮ್ ಕೆಲ್ಸ?
    ರೋಗಿ-52: ರಿಪೋರ್ಟಿಂಗ್ ಮ್ಯಾನೇಜರ್ ಕೆಲ್ಸ ಹೇಳಿದ್ರೆ ಅವರ ಜೊತೆ ಸ್ವಲ್ಪ ಮಾಡ್ತೇವೆ.
    ಪ್ರತಿನಿಧಿ: ನಿಮ್ಮ ರಿಪೋರ್ಟಿಂಗ್ ಮ್ಯಾನೇಜರೆಲ್ಲ ಪಾಸಿಟಿವ್ ಆಗಿ ಟೆಸ್ಟ್ ಆಗಿದ್ದಾರಾ..? ಅವರದೆಲ್ಲ ಏನ್ ರಿಪೋರ್ಟ್ ಬಂದಿದೆ?
    ರೋಗಿ-52: ಅವರದ್ದನ್ನೆಲ್ಲ ನೆಗೆಟಿವ್ ಬಂದಿದೆ, ಮೇಡಂ.