Tag: Coronavirus

  • ಸಾವಿರಾರು ಮಾಸ್ಕ್ ತಯಾರಿಸ್ತಿದ್ದಾರೆ ಧಾರವಾಡ ಮಹಿಳೆಯರು

    ಸಾವಿರಾರು ಮಾಸ್ಕ್ ತಯಾರಿಸ್ತಿದ್ದಾರೆ ಧಾರವಾಡ ಮಹಿಳೆಯರು

    ಹುಬ್ಬಳ್ಳಿ: ಕೊರೊನಾ ಹಾವಳಿಯಿಂದ ಮಾಸ್ಕ್ ಕೊರತೆ ಉಂಟಾಗದಂತೆ ತಡೆಯಲು ಮತ್ತು ಅಗತ್ಯವಿರುವ ಪ್ರತಿಯೊಬ್ಬರಿಗೂ ಉಚಿತ ಮಾಸ್ಕ್ ದೊರೆಯುವಂತೆ ಮಾಡಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ.

    ಕ್ಷೇತ್ರದ ಬಡ ಮಹಿಳೆಯರಿಗೆ ಸಂಸದರ ಅನುದಾನದಡಿ ವಿತರಿಸಿದ್ದ ಹೊಲಿಗೆ ಯಂತ್ರದ ಸಹಾಯದಿಂದ ಈಗಾಗಲೇ ಸಾವಿರಾರು ಮಾಸ್ಕ್ ಸಿದ್ಧಪಡಿಸಲಾಗಿದೆ. ಈಗ ವಿತರಿಸುವ ಮೂಲಕ ಮಾದರಿ ಕಾರ್ಯ ಮಾಡುತ್ತಿದ್ದಾರೆ. ಕೊರೊನಾ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹೋರಾಟಕ್ಕೆ ಕೈಜೋಡಿಸಿರುವ ಧಾರವಾಡದ ಲೋಕಸಭಾ ಕ್ಷೇತ್ರದ ಗ್ರಾಮೀಣ ಪ್ರದೇಶದ ಮಹಿಳೆಯರು ತಮಗೆ ನೀಡಿದ ಯಂತ್ರದಿಂದ ಉಚಿತವಾಗಿ ಮಾಸ್ಕ್ ಹೊಲಿದುಕೊಡುವ ಮೂಲಕ ಮಾದರಿ ಸೇವೆ ಸಲ್ಲಿಸುತ್ತಿದ್ದಾರೆ.

    ಕೇಂದ್ರ ಸಚಿವ ಜೋಶಿ ಅವರು ತಮ್ಮ ಕ್ಷೇತ್ರದಲ್ಲಿ 544 ಬಡ ಮಹಿಳೆಯರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಉಚಿತ ಹೊಲಿಗೆ ಯಂತ್ರವನ್ನು ವಿತರಣೆ ಮಾಡಿದ್ದಾರೆ. ಅದರಲ್ಲಿ ಸಂಸದರ ಆದರ್ಶ ಗ್ರಾಮವಾದ ಹಾರೋಬೆಳವಡಿ, ಕಬ್ಬೇನೂರು ಗ್ರಾಮ ಸೇರಿದಂತೆ ಕ್ಷೇತ್ರದ 200ಕ್ಕೂ ಹೆಚ್ಚು ಮಹಿಳೆಯರು ಈಗಾಗಲೇ ಮಾಸ್ಕ್ ತಯಾರಿಕೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.

    ತಲಾ ಒಬ್ಬರು ದಿನಕ್ಕೆ 100 ರಿಂದ 150 ಮಾಸ್ಕ್ ಸಿದ್ಧಪಡಿಸುತ್ತಿದ್ದಾರೆ. ಸಚಿವ ಜೋಶಿ ಅವರು ತಮ್ಮದೇ ಪೋಷಕತ್ವದಲ್ಲಿರುವ ಕ್ಷಮತಾ ಸೇವಾ ಸಂಸ್ಥೆಯನ್ನು ಈ ಜನೋಪಕಾರಿ ಕೆಲಸಕ್ಕೆ ಬಳಸಿಕೊಂಡಿದ್ದಾರೆ. ಮಾಸ್ಕ್ ತಯಾರಿಕೆಗೆ ಅಗತ್ಯವಿರುವ ಬಟ್ಟೆ ಮತ್ತು ದಾರವನ್ನು ಸಂಸ್ಥೆಯಿಂದ ಉಚಿತವಾಗಿ ವಿತರಣೆ ಮಾಡಿಸಿದ್ದಾರೆ. ಸಚಿವರ ಈ ಮಹತ್ವದ ಸೇವಾ ಕಾರ್ಯಕ್ಕೆ ಗ್ರಾಮೀಣ ಪ್ರದೇಶದ ಮಹಿಳೆಯರು ಬೆನ್ನೆಲುಬಾಗಿ ನಿಂತಿದ್ದಾರೆ ಎಂದರೆ ತಪ್ಪಾಗಲಾರದು.

    ಕ್ಷಮತಾ ಸೇವಾ ಸಂಸ್ಥೆಯೂ 3 ಲಕ್ಷ ಮಾಸ್ಕ್ ವಿತರಿಸುವ ಗುರಿಯನ್ನು ಇಟ್ಟುಕೊಂಡಿದ್ದು, ಲೋಕಸಭಾ ಕ್ಷೇತ್ರದಲ್ಲಿ ಬರುವ ಸಾವಿರಾರು ಬಡ ಮಹಿಳೆಯರಿಗೆ ‘ಸುವರ್ಣ ಎಜುಕೇಶನ್ ಟ್ರಸ್ಟ್’ ಉಚಿತ ಹೊಲಿಗೆ ತರಬೇತಿ ನೀಡಿದೆ. ತರಬೇತಿ ಹೊಂದಿದ ಮಹಿಳೆಯರನ್ನು ಬಳಸಿಕೊಂಡು ಈಗಾಗಲೇ ಉತ್ತಮ ಗುಣಮಟ್ಟದ 40 ಸಾವಿರಕ್ಕೂ ಹೆಚ್ಚು ಮಾಸ್ಕ್‍ಗಳನ್ನು ತಯಾರಿದಿದೆ.

    ಬಡ ಮಹಿಳೆಯರ ನಿಶ್ವಾರ್ಥ ಸೇವೆ
    ಸಂಸದರ ಅನುದಾನದಡಿ ಈ ಹಿಂದೆ ವಿತರಣೆ ಮಾಡಿದ ಯಂತ್ರಗಳು ಇಂದು ಬಹಳಷ್ಟು ಸಹಕಾರಿಯಾಗಿದ್ದು, ಮಹಿಳೆಯರು ಸ್ವಯಂ ಪ್ರೇರಣೆಯಿಂದ ಉಚಿತ ಮಾಸ್ಕ್ ತಯಾರಿಸಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಇಂದಿನ ಕಠಿಣ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬ ಮಹಿಳೆಯರು ಮಾಸ್ಕ್ ತಯಾರಿಕೆಯಲ್ಲಿ ನಿರತರಾಗಿದ್ದಾರೆ. ಮಾಸ್ಕ್ ತಯಾರಿಸುವ ಕುಶರಿ ಕೆಲಸಕ್ಕೆ ಸಂಭಾವನೆ ನೀಡಲು ಮುಂದಾದರೂ ಅದನ್ನು ಈ ಮಹಿಳೆಯರು ನಿರಾಕರಿಸುತ್ತಿದ್ದಾರೆ.

  • ಮೊಬೈಲಿನಿಂದ ಹರಡುತ್ತೆ ಕೊರೊನಾ – ವೈದ್ಯಕೀಯ ಸಿಬ್ಬಂದಿಗೆ ಫೋನ್ ಬಳಕೆಗೆ ನಿಷೇಧ

    ಮೊಬೈಲಿನಿಂದ ಹರಡುತ್ತೆ ಕೊರೊನಾ – ವೈದ್ಯಕೀಯ ಸಿಬ್ಬಂದಿಗೆ ಫೋನ್ ಬಳಕೆಗೆ ನಿಷೇಧ

    – ಪಶ್ಚಿಮ ಬಂಗಾಳ ಸರ್ಕಾರದಿಂದ ಆದೇಶ

    ಕೋಲ್ಕತ್ತಾ: ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ರಾಜ್ಯಗಳು ಅನೇಕ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿವೆ. ಈ ನಡುವೆ ಪಶ್ಚಿಮ ಬಂಗಾಳ ಸರ್ಕಾರ ಕೊರೊನಾ ವೈರಸ್ ತಡೆಯುವ ನಿಟ್ಟಿನಲ್ಲಿ ವೈದ್ಯಕೀಯ ಸಿಬ್ಬಂದಿ, ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸಿದೆ.

    ಕೊರೊನಾ ವೈರಸ್ ತಡೆಯುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ)ಯ ಮಾರ್ಗಸೂಚಿಗಳಿಗೆ ಅನುಗುಣವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.

    ಕೊರೊನಾ ವೈರಸ್ ಮೊಬೈಲ್ ಫೋನ್‍ಗಳ ಮೂಲಕ ಹರಡುವ ಸಾಧ್ಯತೆ ಇದೆ. ಅಲ್ಲದೇ ಡಬ್ಲ್ಯುಎಚ್‍ಒ ಮಾರ್ಗಸೂಚಿಗಳ ಅನುಸಾರ ಕೊರೊನಾ ಹರಡುವಿಕೆಯನ್ನು ನಿಯಂತ್ರಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಎಲ್ಲಾ ವೈದ್ಯರು, ವೈದ್ಯಕೀಯ ಸಿಬ್ಬಂದಿ ಮತ್ತು ರೋಗಿಗಳು ತಮ್ಮ ಮೊಬೈಲ್ ಫೋನ್‍ಗಳನ್ನು ಹೊರಗಡೆ ಇಟ್ಟು ಬರಬೇಕು. ನಂತರ ಆಸ್ಪತ್ರೆಯಿಂದ ಹೋಗುವಾಗ ಫೋನ್‍ಗಳನ್ನು ತೆಗೆದುಕೊಂಡು ಹೋಗಬಹುದು ಎಂದು ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ರಾಜೀವ್ ಸಿನ್ಹಾ ಹೇಳಿದ್ದಾರೆ.

    ದೇಶಾದ್ಯಂತ ವೈಯಕ್ತಿಕ ರಕ್ಷಣಾ ಸಾಧನಗಳ (ಪಿಪಿಇ) ಕೊರತೆ ಉಂಟಾಗಿದೆ. ಅಲ್ಲದೇ ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡುವ ಆರೋಗ್ಯ ಕಾರ್ಯಕರ್ತರಿಗೂ ಸಾಕಷ್ಟು ಸುರಕ್ಷತಾ ಕ್ರಮಗಳ ಅಗತ್ಯತೆ ಇದೆ. ಈ ಹಿನ್ನೆಲೆಯಲ್ಲಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸೇರಿದಂತೆ ಎಂಟು ವೈದ್ಯಕೀಯ ಸಂಸ್ಥೆಗಳು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಪತ್ರ ಬರೆಯಲಾಗಿದೆ. ಅದರಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಸುರಕ್ಷತೆ ಒದಗಿಸುವಂತೆ ಮನವಿ ಮಾಡಲಾಗಿದೆ.

    “ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಅನುಮತಿಯೊಂದಿಗೆ ಅಧಿಕ ಕೊರೊನಾ ವೈರಸ್ ಪರೀಕ್ಷಾ ಕೇಂದ್ರಗಳನ್ನು ತೆರೆಯಬೇಕು. ಪ್ರತಿ ಪ್ರದೇಶದಲ್ಲಿ ಕನಿಷ್ಠ ಒಂದು ಕೇಂದ್ರವನ್ನು ತೆರೆಯಬೇಕು. ಅಲ್ಲದೇ ಐಸಿಎಂಆರ್ ಮಾರ್ಗಸೂಚಿಗಳ ಅನುಸಾರ ಪರೀಕ್ಷೆಯನ್ನು ಮಾಡಬೇಕು. ಪ್ರತಿ ಉಪವಿಭಾಗದ ಮಟ್ಟದಲ್ಲಾದರೂ ಮಾದರಿ ಸಂಗ್ರಹ ಕೇಂದ್ರ ಇರಬೇಕು” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

    ರಾಜ್ಯದ 14 ವೈದ್ಯಕೀಯ ಕಾಲೇಜುಗಳು ಕೊರೊನಾ ವೈರಸ್ ಪರೀಕ್ಷೆ ನಡೆಸಲು ಪ್ರಾರಂಭಿಸಿವೆ. ಐಸಿಎಂಆರ್ ಕಮಾಂಡ್ ಆಸ್ಪತ್ರೆ, ಅಲಿಪೋರ್ ಹಾಗೂ ಆರ್ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕೊರೊನಾ ವೈರಸ್ ಪರೀಕ್ಷೆ ನಡೆಸಲು ಅನುಮತಿ ನೀಡಿದೆ. ಮೊದಲಿಗೆ ಹಾಟ್‍ಸ್ಟಾಟ್‍ಗಳಲ್ಲಿ ಶೀಘ್ರದಲ್ಲೇ ಕೊರೊನಾ ಪರೀಕ್ಷೆಯನ್ನು ನಡೆಸಲಾಗುತ್ತದೆ. ನಂತರ ಇತರ ಪ್ರದೇಶಗಳಲ್ಲಿ ಕೊರೊನಾ ವೈರಸ್ ಪರೀಕ್ಷೆ ನಡೆಸಲಾಗುತ್ತದೆ.

  • ಲಾಕ್‍ಡೌನ್‍ನಲ್ಲಿ ಸಿಕ್ಕಿಹಾಕಿಕೊಂಡಿದ್ದ 170 ಜನರಿಗೆ ಬಟ್ಟೆ ವಿತರಿಸಿದ ಪಬ್ಲಿಕ್ ಹೀರೋ

    ಲಾಕ್‍ಡೌನ್‍ನಲ್ಲಿ ಸಿಕ್ಕಿಹಾಕಿಕೊಂಡಿದ್ದ 170 ಜನರಿಗೆ ಬಟ್ಟೆ ವಿತರಿಸಿದ ಪಬ್ಲಿಕ್ ಹೀರೋ

    ಉಡುಪಿ: ಕೊರೊನಾ ಲಾಕ್‍ಡೌನ್‍ನಿಂದಾಗಿ ಕೂಲಿ ಕಾರ್ಮಿಕರು ಊರಿಗೆ ವಾಪಸ್ ಹೋಗಲು ಸಾಧ್ಯವಾಗದೆ ಉಡುಪಿಯಲ್ಲೇ ಲಾಕ್ ಆಗಿದ್ದಾರೆ. ಮೂರು ಹೊತ್ತು ಆಹಾರ ಸಿಕ್ಕರೂ ಉಡುವ ಬಟ್ಟೆಯಿಲ್ಲದೆ ಜನ ಪರದಾಡುತ್ತಿದ್ದರು. ಹೀಗಾಗಿ ಅವರಿಗೆ ಉಡುಪಿಯ ಪಬ್ಲಿಕ್ ಹೀರೋ ಅವರಿಗೆ ಸಹಾಯ ಮಾಡಿದ್ದಾರೆ.

    ಸಮಾಜಸೇವಕ ಉಡುಪಿಯ ಪಬ್ಲಿಕ್ ಹೀರೋ ನಿತ್ಯಾನಂದ ಒಳಕಾಡು 170 ಜನ ಕಾರ್ಮಿಕರಿಗೆ ಬಟ್ಟೆ ಹಂಚಿದ್ದಾರೆ. ಹೀಗಾಗಿ ಒಂದೆರಡು ಬಟ್ಟೆಯಲ್ಲಿ ಅರ್ಧ ತಿಂಗಳು ಕಳೆದ ಜೀವಗಳು ಈಗ ಖುಷಿಯಾಗಿವೆ. ಮೂರು ಹೊತ್ತು ಅನ್ನದ ಜೊತೆ ಬಟ್ಟೆ ಕೂಡ ಸಿಕ್ಕಿದ್ದರಿಂದ ಕಾರ್ಮಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

    ಭಾರತ ಲಾಕ್‍ಡೌನ್ ಆದಾಗ ಸುಮಾರು ಮೂರೂವರೆ ಸಾವಿರ ಕಾರ್ಮಿಕರು ತಮ್ಮ ಜಿಲ್ಲೆ, ರಾಜ್ಯಕ್ಕೆ ಹೊರಟು ನಿಂತಿದ್ದರು. ಜಿಲ್ಲೆಯ ನಾಲ್ಕು ಗಡಿಗಳಲ್ಲಿ ಕಾರ್ಮಿಕರನ್ನು ತಡೆಹಿಡಿದು ಮತ್ತೆ ಅವರನ್ನು ಬಿಡಾರಕ್ಕೆ ನಿರಾಶ್ರಿತರ ಕೇಂದ್ರಕ್ಕೆ ಬಿಡಲಾಗಿತ್ತು. ಕಳೆದ ಇಪ್ಪತ್ತೈದು ದಿನಗಳಿಂದಲೂ ಅವರಿಗೆ ಮೂರು ಹೊತ್ತು ಆಹಾರ ಕೊಡಲಾಗುತ್ತಿದೆ. ಆದರೆ ಅವರು ಹೆಚ್ಚುವರಿ ಬಟ್ಟೆ ಇಲ್ಲದೆ ಪರದಾಡುತ್ತಿದ್ದರು. ಒಂದೆರಡು ಜೊತೆ ಬಟ್ಟೆಯಲ್ಲಿ ಇಷ್ಟು ದಿನ ಕಳೆದಿದ್ದರೂ ಇದೀಗ ನಿತ್ಯಾನಂದ ಒಳಕಾಡು ಎಲ್ಲರಿಗೂ ಹೊಸ ಬಟ್ಟೆಯನ್ನು ವಿತರಣೆ ಮಾಡಿದ್ದಾರೆ.

    ಪರ್ಕಳದ ಪಾಟೀಲ್ ಕ್ಲಾತ್ ಸ್ಟೋರ್ ಮಾಲೀಕರು ಸಹಾಯ ಮಾಡಿದ್ದಾರೆ. ಉಡುಪಿ ನಗರಸಭೆಯ ಕಮಿಷನರ್ ಬಟ್ಟೆಗಳನ್ನು ವಿತರಣೆ ಮಾಡಿದರು. ಆನಂದ್ ಕಲ್ಲೋಳಿಕರ್ ಮಾತನಾಡಿ, ಎಲ್ಲರಿಗೂ ಎಲ್ಲ ಕಡೆಯಿಂದಲೂ ಆಹಾರ ಸಿಗುತ್ತಿದೆ. ಆದರೆ ಅವರಿಗೆ ಅಗತ್ಯವಾಗಿರುವುದು ಬಟ್ಟೆ. ಅದನ್ನು ಈಗ ವಿತರಿಸುತ್ತಿದ್ದೇವೆ ಎಂದು ಹೇಳಿದರು.

    ಸಮಾಜ ಸೇವಕ ನಿತ್ಯಾನಂದ ಒಳಕಾಡು ಮಾತನಾಡಿ, ಬೋರ್ಡ್ ಸ್ಕೂಲ್‍ನಲ್ಲಿ ಸುಮಾರು 170 ಜನ ವಲಸೆ ಕಾರ್ಮಿಕರಿದ್ದಾರೆ. ಭಾರತ್ ಬಂದ್ ಆದಾಗ ಅವರು ಉಟ್ಟ ಬಟ್ಟೆಯಲ್ಲಿ ತಮ್ಮ ಊರುಗಳಿಗೆ ಹೊರಟಿದ್ದರು. ಇವರೆಲ್ಲ ಆರ್ಥಿಕವಾಗಿ ಸದೃಢವಾಗಿದ್ದರೂ ಅಗತ್ಯ ವಸ್ತುಗಳನ್ನು ಖರೀದಿಸಲು ಕಷ್ಟ ಪಡುತ್ತಿದ್ದಾರೆ. ನಗರದಲ್ಲಿ ನೂರಾರು ಬಟ್ಟೆ ಅಂಗಡಿಗಳಿದ್ದು, ಜಿಲ್ಲೆಯ ಆಯಾಯ ಭಾಗದಲ್ಲಿ ಇರುವ ನಿರಾಶ್ರಿತರ ಕೇಂದ್ರಕ್ಕೆ ಬಟ್ಟೆ ದಾನ ಮಾಡಿ ಎಂದು ಅವರು ವಿನಂತಿ ಮಾಡಿಕೊಂಡರು.

  • ಕೊರೊನಾ ನಿರ್ವಹಣೆ- ಮೋದಿಯನ್ನ ಹೊಗಳಿದ ಬಿಲ್ ಗೇಟ್ಸ್

    ಕೊರೊನಾ ನಿರ್ವಹಣೆ- ಮೋದಿಯನ್ನ ಹೊಗಳಿದ ಬಿಲ್ ಗೇಟ್ಸ್

    ನವದೆಹಲಿ: ವಿಶ್ವಾದ್ಯಂತ ಕೊರೊನಾ ವೈರಸ್‍ಗೆ ಭಾರೀ ಪ್ರಮಾಣದ ಸಾವು-ನೋವು ಸಂಭವಿಸಿದೆ. ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಎರಡನೇ ದೇಶವಾಗಿರುವ ಭಾರತದಲ್ಲಿ ಕೋವಿಡ್-19 ಹೆಚ್ಚಾಗಿ ಹರಡದಂತೆ ತಡೆಯಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಶ್ರಮಿಸಿದೆ. ಇದಕ್ಕೆ ಮೈಕ್ರೋಸಾಫ್ಟ್ ಸಹ ಸ್ಥಾಪಕ, ಜಗತ್ತಿನ ಶ್ರೀಮಂತ ಉದ್ಯಮಿ ಬಿಲ್ ಗೇಟ್ಸ್ ಪತ್ರ ಬರೆದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಹೆಮ್ಮಾರಿ ಕೊರೊನಾ ವೈರಸ್‍ನಿಂದ ದೇಶದ ಜನರನ್ನು ಪಾರು ಮಾಡಲು ಪ್ರಧಾನಿ ಮೋದಿ ಇಡೀ ಭಾರತವನ್ನೇ ಲಾಕ್‍ಡೌನ್ ಮಾಡಿರುವುದು ಸ್ವಾಗತಾರ್ಹ. ಇದರಿಂದಾಗಿ ಭಾರತದಲ್ಲಿ ಸೋಂಕಿತರ ಪತ್ತೆ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಬಿಲ್ ಗೇಟ್ಸ್ ಶ್ಲಾಘಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ನಾಯಕತ್ವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಬಿಲ್ ಗೇಟ್ಸ್, ”ಕೊರೊನಾ ಸೃಷ್ಟಿಸಿದ ಸಂಕಷ್ಟದ ವೇಳೆ ಭಾರತದಲ್ಲಿ ನಿಮ್ಮ ನಾಯಕತ್ವದಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಸ್ವಾಗತಿಸುತ್ತೇವೆ. ದೇಶದಲ್ಲಿ ಕೊರೊನಾ ಹರಡಲು ಕಾರಣವಾದ ಹಾಟ್‍ಸ್ಪಾಟ್‍ಗಳನ್ನು ಗುರುತಿಸುವುದು, ಸೋಂಕಿತರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡುವುದು, ರೋಗಿಗಳೊಂದಿಗೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದ್ದ ವ್ಯಕ್ತಿಗಳಿಗೆ 14 ದಿನಗಳ ಕಾಲ ಹೋಮ್ ಕ್ವಾರಂಟೈನ್ ಕಡ್ಡಾಯ ಮಾಡಿರುವುದು ಕೊರೊನಾ ವೈರಸ್ ಕಡಿಮೆಯಾಗಲು ಕಾರಣವಾಗಿದೆ. ಇದು ದೇಶದ ಜನರ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಲಿದೆ” ಎಂದು ಪತ್ರದ ಮೂಲಕ ತಿಳಿಸಿದ್ದಾರೆ.

    ಇಂತಹ ಪರಿಸ್ಥಿತಿಯಲ್ಲಿ ಡಿಜಿಟಲ್ ಮಾಧ್ಯಮಗಳನ್ನು ಬಳಸಿಕೊಂಡ ಬಗ್ಗೆಯೂ ಬಿಲ್ ಗೇಟ್ಸ್, ಅವರು ಪ್ರಧಾನಿ ಮೋದಿ ಅವರನ್ನು ಹೊಗಳಿದ್ದಾರೆ. ”ನೀವು ಕೊರೊನಾ ವಿರುದ್ಧದ ಹೋರಾಟದಲ್ಲಿ ಡಿಟಿಜಿಲ್ ಮೀಡಿಯಾಗೂ ಮೊದಲ ಆದ್ಯತೆ ನೀಡಿದ್ದೀರಿ. ಕೊರೊನಾ ಸೋಂಕಿತರನ್ನು ಪತ್ತೆ ಹಚ್ಚಲು ಆರೋಗ್ಯ ಸೇತು ಆ್ಯಪ್ ಸಿದ್ಧಪಡಿಸಿದ್ದೀರಿ. ನಿಮ್ಮ ಸರ್ಕಾರದ ನಿರ್ಧಾರದಿಂದ ತುಂಬಾ ಸಂತೋಷಗೊಂಡಿರುವೆ” ಎಂದು ಹೇಳಿದ್ದಾರೆ.

    ”ಎಲ್ಲಾ ಭಾರತೀಯರಿಗೆ ಸಾಕಷ್ಟು ಸಾಮಾಜಿಕ ರಕ್ಷಣೆಯನ್ನು ಖಾತ್ರಿಪಡಿಸಿದ್ದೀರಿ. ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡಿರುವುದಕ್ಕೆ ನನ್ನದೊಂದು ಸಲಾಮ್” ಎಂದಿದ್ದಾರೆ.

  • ಕೊರೊನಾ ವಾರಿಯರ್ಸ್ ಮೇಲೆ ದಾಳಿ ನಡೆಸಿದ್ರೆ ಹುಷಾರ್- ರಾಜ್ಯದಲ್ಲಿ 3 ವರ್ಷ ಜೈಲು, ಆಸ್ತಿ ಜಪ್ತಿ

    ಕೊರೊನಾ ವಾರಿಯರ್ಸ್ ಮೇಲೆ ದಾಳಿ ನಡೆಸಿದ್ರೆ ಹುಷಾರ್- ರಾಜ್ಯದಲ್ಲಿ 3 ವರ್ಷ ಜೈಲು, ಆಸ್ತಿ ಜಪ್ತಿ

    – ಕೇಂದ್ರದಿಂದಲೂ 7 ವರ್ಷ ಶಿಕ್ಷೆಗೆ ಸುಗ್ರೀವಾಜ್ಞೆ

    ಬೆಂಗಳೂರು: ನಗರದ ಪಾದರಾಯನಪುರ ಗಲಭೆ ಬೆನ್ನಲ್ಲೇ ಕೊರೊನಾ ವಾರಿಯರ್ಸ್ ಮೇಲಿನ ದಾಳಿ ತಡೆ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ.

    ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆಗೆ ರಾಜ್ಯಪಾಲರು ಅಂಕಿತ ಹಾಕಿದ್ದು, ತಕ್ಷಣದಿಂದಲೇ ಜಾರಿಗೆ ಬಂದಿದೆ. ಇನ್ಮೇಲೆ, ಸರ್ಕಾರಿ ಅಧಿಕಾರಿಗಳು, ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿದರೆ ಅಂಥವರಿಗೆ ಮುಟ್ಟಿ ನೋಡಿಕೊಳ್ಳುವ ರೀತಿಯಲ್ಲಿ ಶಿಕ್ಷೆ ನೀಡಲಾಗುತ್ತದೆ. ಕೇಂದ್ರ ಸರ್ಕಾರ ಕೂಡ 1897ರ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಿದೆ.

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನಕ್ಕೆ ಬಂದಿದ್ದು, ಕೊರೋನಾ ವಾರಿಯರ್ಸ್ ಮೇಲೆ ನಡೆಯುತ್ತಿರುವ ಕೃತ್ಯಗಳು `ಸಹಿಸುವಂತ ಪ್ರಕರಣ’ಗಳೇ ಅಲ್ಲ ಅಂತ ಸ್ಪಷ್ಟಪಡಿಸಿದೆ. ಏಪ್ರಿಲ್ 27ರಂದು ಪ್ರಧಾನಿ ಮೋದಿ ಅವರು, ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. ಈ ನಡುವೆಯೂ ಇಂದು ಪಾದರಾಯನಪುರದ ಗಲಭೆಯಂತಹ ಘಟನೆ ಪಶ್ಚಿಮ ಬಂಗಾಳದ ಬದುರಿಯಾದಲ್ಲಿ ನಡೆದಿದೆ. ಲಾಕ್‍ಡೌನ್ ಕಾವಲಿಗೆ ಇದ್ದ ಪೊಲೀಸರ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದಾರೆ.

    ರಾಜ್ಯದ ಸುಗ್ರೀವಾಜ್ಞೆಯಲ್ಲಿ ಏನಿದೆ?
    ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿದ್ರೆ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಆಸ್ತಿ ನಷ್ಟ ಉಂಟುಮಾಡಿದರೆ ಆಸ್ತಿ ಮಟ್ಟುಗೋಲು ಹಾಕಲಾಗುತ್ತದೆ. ಆಸ್ತಿ ಇಲ್ಲದಿದ್ದರೆ ಆರೋಪಿಗಳು ಬಂಧನ, ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ. ಜಿಲ್ಲಾ ದಂಡಾಧಿಕಾರಿಗಳಿಗೆ ಅಧಿಕಾರ ಚಲಾಯಿಸಲು ಅವಕಾಶ ನೀಡಲಾಗಿದೆ. ಈ ಮೂಲಕ ಅವರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಬಂಧನ ಮಾಡಬಹುದು. ಹಲ್ಲೆಗೊಳಗಾದ ಕೊರೊನಾ ವಾರಿಯರ್ಸ್ ದೂರು ದಾಖಲಿಸಬೇಕಿಲ್ಲ.

    ಕೇಂದ್ರದ ಸುಗ್ರೀವಾಜ್ಞೆಯಲ್ಲಿ ಏನಿರುತ್ತೆ?
    ಹೆಲ್ತ್ ವಾರಿಯರ್ಸ್ ಮೇಲಿನ ಹಲ್ಲೆಗೆ 6 ತಿಂಗಳಿಂದ 7 ವರ್ಷದವರೆಗೂ ಜೈಲು ಶಿಕ್ಷೆ ವಿಧಿಸಲಾಗುತ್ತದೆ. 50 ಸಾವಿರ ರೂ.ದಿಂದ 5 ಲಕ್ಷ ರೂಪಾಯಿವರೆಗೂ ದಂಡ ವಿಧಿಸಲಾಗುವುದು. ವಾಹನಗಳು, ಆಸ್ಪತ್ರೆಗಳ ಮೇಲೆ ದಾಳಿ ನಡೆದು ಆಸ್ತಿ ನಷ್ಟ ಸಂಭವಿಸಿದರೆ ಅವುಗಳ ಮಾರುಕಟ್ಟೆ ಮೌಲ್ಯದ ದುಪ್ಪಟ್ಟು ದಂಡವನ್ನು ವಸೂಲಿ ಮಾಡಲಾಗುತ್ತದೆ. ಇಂತಹ ಪ್ರಕರಣವನ್ನು ಒಂದು ವರ್ಷದೊಳಗೆ ವಿಚಾರಣೆ ಮುಗಿಸಿ ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗುತ್ತದೆ. ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಸಂಪೂರ್ಣ ಭದ್ರತೆ ನೀಡಲಾಗುತ್ತದೆ.

  • 47ನೇ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ಕ್ರಿಕೆಟ್ ದಿಗ್ಗಜ ನಿರ್ಧಾರ

    47ನೇ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ಕ್ರಿಕೆಟ್ ದಿಗ್ಗಜ ನಿರ್ಧಾರ

    ಮುಂಬೈ: ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಭಾರತ ಹೋರಾಟವನ್ನು ಮುಂದುವರಿಸಿದೆ. ಇತ್ತ ಶುಕ್ರವಾರ 47ನೇ ವಸಂತಕ್ಕೆ ಕಾಲಿಡುತ್ತಿರುವ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು, ಕೋವಿಡ್-19 ವಾರಿಯರ್ಸ್‍ಗೆ ಗೌರವ ಸಲ್ಲಿಸುವುದಕ್ಕಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ.

    ಇದು ಆಚರಣೆಗಳ ಸಮಯವಲ್ಲ ಎಂದು ಸಚಿನ್ ಹೇಳಿದ್ದಾರೆ. ಹೀಗಾಗಿ ಅವರು ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಎಲ್ಲಾ ವೈದ್ಯರು, ದಾದಿಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸರು, ರಕ್ಷಣಾ ಸಿಬ್ಬಂದಿಗೆ ಸಲ್ಲಿಸುವ ಅತ್ಯುತ್ತಮ ಗೌರವ ಇದಾಗಿದೆ ಎಂದು ತೆಂಡೂಲ್ಕರ್ ಭಾವಿಸಿದ್ದಾರೆ ಎಂದು ಸಚಿನ್ ಆಪ್ತರು ಮಾಧ್ಯಮಗಳಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

    ಭಾರತದ ಕ್ರಿಕೆಟ್ ದಂತ ಕಥೆ ಸಚಿನ್ ತೆಂಡೂಲ್ಕರ್ ಅವರು ಈಗಾಗಲೇ ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿ ರಿಲೀಫ್ ಫಂಡ್‍ಗೆ ಒಟ್ಟು 50 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಜೊತೆಗೆ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಜನರಲ್ಲಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

    ಅಪ್ರತಿಮ ಬ್ಯಾಟ್ಸ್‌ಮನ್‌ಗೆ ಕೋಟ್ಯಂತರ ಅಭಿಮಾನಿಗಳು ಹಾಗೂ ಕ್ಲಬ್‍ಗಳು ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಗೌರವ ಸಲ್ಲಿಸಲು ಸಿದ್ಧತೆ ನಡೆಸಿವೆ. ಒಂದು ಫ್ಯಾನ್ ಕ್ಲಬ್ ಸಚಿನ್ ಅವರ 40 ಅಪರೂಪದ ಫೋಟೋಗಳನ್ನು ಬಿಡುಗಡೆ ಮಾಡಲಿದೆ. ಇನ್ನೊಂದು ಕ್ಲಬ್ ದಂತಕಥೆ ಸಚಿನ್ ಕೈಗೊಂಡ ಎಲ್ಲಾ ಸಾಮಾಜಿಕ ಕಾರ್ಯಗಳು ಮತ್ತು ಸೇವೆಗಳನ್ನು ಜನರ ಮುಂದಿಡಲು ತಯಾರಿ ನಡೆಸಿದೆ.

  • ಎಲೆಬಿಚ್ಚಾಲಿಯ ವಿಳ್ಯದೆಲೆಗೆ ಲಾಕ್‍ಡೌನ್ ಎಫೆಕ್ಟ್: ಮಾರುಕಟ್ಟೆಯಿಲ್ಲದೆ ನಷ್ಟದಲ್ಲಿ ಬೆಳೆಗಾರರು

    ಎಲೆಬಿಚ್ಚಾಲಿಯ ವಿಳ್ಯದೆಲೆಗೆ ಲಾಕ್‍ಡೌನ್ ಎಫೆಕ್ಟ್: ಮಾರುಕಟ್ಟೆಯಿಲ್ಲದೆ ನಷ್ಟದಲ್ಲಿ ಬೆಳೆಗಾರರು

    ರಾಯಚೂರು: ಕೊರೊನಾ ಲಾಕ್‍ಡೌನ್ ರೈತರನ್ನು ಸಂಕಷ್ಟಕ್ಕೀಡುಮಾಡಿದೆ. ರೈತರು ಕಷ್ಟ ಪಟ್ಟು ಬೆಳೆದ ಬೆಳೆಯನ್ನು ಮಾರಾಟ ಮಾಡಲು ಆಗುತ್ತಿಲ್ಲ. ಮತ್ತೊಂದೆಡೆ ಮಾರುಕಟ್ಟೆಯಲ್ಲಿ ದರ ಇಳಿಕೆಯಾಗಿದೆ. ರಾಯಚೂರು ತಾಲೂಕಿನ ಎಲೆಬಿಚ್ಚಾಲಿಯಲ್ಲಿ ಸಂಪ್ರಾದಾಯಿಕ ಬೆಳೆಯಾಗಿ ವಿಳ್ಯದೆಲೆ ಬೆಳೆಯುತ್ತಿದ್ದ ರೈತರು ಮಾರುಕಟ್ಟೆಯಿಲ್ಲದೆ ನಷ್ಟದಲ್ಲಿದ್ದಾರೆ.

    ಜಿಲ್ಲೆಯ ತುಂಗಭದ್ರಾ ನದಿಯ ಪಕ್ಕದಲ್ಲಿರುವ ಎಲೆಬಿಚ್ಚಾಲಿ ಗ್ರಾಮ ಈ ಹಿಂದೆ ವಿಳ್ಯೆದೆಲೆಯನ್ನು ಬೆಳೆಯುವುದರಲ್ಲಿ ತುಂಬಾ ಪ್ರಸಿದ್ಧಿ ಹೊಂದಿತ್ತು. ಎಲೆ ಬೆಳೆಯುವ ಹಿನ್ನೆಲೆ ಈ ಗ್ರಾಮಕ್ಕೆ ಎಲೆಬಿಚ್ಚಾಲಿ ಎನ್ನುವ ಹೆಸರು ಬಂದಿದೆ. ಆದರೆ 1992ರಲ್ಲಿ ಬಂದ ಪ್ರವಾಹದಿಂದ ಮಣ್ಣಿನ ಗುಣಲಕ್ಷಣವೇ ಬದಲಾಗಿ ಬೆಳೆ ಬರುತ್ತಿರಲಿಲ್ಲ. ಕಳೆದ ನಾಲ್ಕು ವರ್ಷದಿಂದ ವಿಳ್ಯೆದೆಲೆಯನ್ನು ಇಲ್ಲಿಯ ರೈತರು ಪುನಃ ಬೆಳೆಯುತ್ತಿದ್ದಾರೆ. ಸುಮಾರು 20 ಎಕರೆಗೂ ಅಧಿಕ ಪ್ರದೇಶದಲ್ಲಿ ವಿಳ್ಯೆದೆಲೆಯನ್ನು ಬೆಳೆಯುತ್ತಿದ್ದಾರೆ. ಈಗ ಉತ್ತಮ ಇಳುವರಿ ಬರುತ್ತಿದ್ದರೂ ಕಳೆದ ಒಂದು ತಿಂಗಳನಿಂದ ಕೊರೊನಾ ಲಾಕ್‍ಡೌನ್ ಆಗಿ ವಿಳ್ಯೆದೆಲೆ ಮಾರಾಟ ಮಾಡಲು ಆಗುತ್ತಿಲ್ಲ.

    ಲಾಕ್‍ಡೌನ್ ಆರಂಭದಲ್ಲಿ ಕೂಲಿಗಳು ಬರುತ್ತಿರಲಿಲ್ಲ. ಈಗ ಕೂಲಿಗಳನ್ನು ಕೆಲಸಕ್ಕೆ ಬಂದರೂ ವಿಳ್ಯೆದೆಲೆಯನ್ನು ಮಾರುಕಟ್ಟೆಗೆ ಕಳುಹಿಸಲು ಆಗುತ್ತಿಲ್ಲ. ಬಹುತೇಕ ಕಡೆ ಚೆಕ್ ಪೋಸ್ಟ್‌ಗಳಲ್ಲಿ ಕಿರಿಕಿರಿಯಾಗುತ್ತಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

    ಸಾಮಾನ್ಯವಾಗಿ ವಿಳ್ಯೆದೆಲೆಯು ಅತ್ಯಧಿಕವಾಗಿ ಪಾನ್‍ಶಾಪ್‍ಗಳಲ್ಲಿ ಬಳಕೆಯಾಗುತ್ತಿತ್ತು. ಕೊರೊನಾ ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ ಪಾನ್ ಶಾಪಗಳು ಬಂದ್ ಆಗಿವೆ. ರಾಯಚೂರು ಮಾರುಕಟ್ಟೆಗೆ ಕಳುಹಿಸುವ ವಿಳ್ಯೆದೆಲೆಯನ್ನು ಕಡಿಮೆ ದರದಲ್ಲಿ ಮಾರಾಟ ಮಾಡಬೇಕಾಗಿದೆ. ಈ ಹಿಂದೆ 2,000 ಎಲೆಗಳಿಗೆ 1,500 ರೂ.ವರೆಗೆ ದರವಿದ್ದದ್ದು ಈಗ 400 ರಿಂದ 500 ರೂಪಾಯಿಗೆ ಮಾರಾಟ ಮಾಡಬೇಕಾಗಿದೆ ಎಂದು ರೈತರು ಹೇಳಿದ್ದಾರೆ.

    ಇನ್ನೊಂದು ಕಡೆ ಬೇಸಿಗೆಯ ಕಾಲ ಮದುವೆ ಸೀಜನ್ ಆಗಿದ್ದು, ಮದುವೆಯ ಸಂದರ್ಭದಲ್ಲಿ ವಿಳ್ಯೆದೆಲೆಯನ್ನು ಸೇವಿಸುತ್ತಿದ್ದರು. ಈಗ ಮದುವೆ ಸೇರಿದಂತೆ ಯಾವುದೇ ಕಾರ್ಯಕ್ರಮಗಳು ಇಲ್ಲ. ಇದರಿಂದಾಗಿ ವಿಳ್ಯೆದೆಲೆ ಕೇಳುವವರೆ ಇಲ್ಲದಂತಾಗಿದೆ.

    ಪ್ರತಿ ಎಕರೆಯಲ್ಲಿ ವಿಳ್ಯೆದೆಲೆಯನ್ನು ಬೆಳೆಯಲು ಕನಿಷ್ಠ 3ರಿಂದ 4 ಲಕ್ಷ ರೂಪಾಯಿ ಖರ್ಚು ಮಾಡುವ ರೈತರು ಈಗ ಖರ್ಚು ಸಹ ಬಾರದೆ ಸಾಲಗಾರರಾಗುತ್ತಿದ್ದಾರೆ. ಲಾಭವಾಗುವ ಸಮಯಕ್ಕೆ ಲಾಕ್‍ಡೌನ್ ಆಗಿ ರೈತ ಸಂಕಷ್ಟ ಹೆಚ್ಚಾಗುತ್ತಿವೆ. ನಷ್ಟ ಅನುಭವಿಸುತ್ತಿರುವ ರೈತ ನೆರವಿಗೆ ಸರ್ಕಾರ ಬರಬೇಕೆಂದು ಎಂದು ರೈತರು ಆಗ್ರಹಿಸಿದ್ದಾರೆ.

  • ಇಂದು 9 ಮಂದಿಗೆ ಕೊರೊನಾ- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 427ಕ್ಕೆ ಏರಿಕೆ

    ಇಂದು 9 ಮಂದಿಗೆ ಕೊರೊನಾ- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 427ಕ್ಕೆ ಏರಿಕೆ

    – ನಂಜನಗೂಡಿನಲ್ಲಿ ಮತ್ತೆ ಇಬ್ಬರಿಗೆ ಸೋಂಕು
    – ಕಲಬರುಗಿಯ 4 ತಿಂಗಳ ಮಗು ಸೇರಿ ಐವರಿಗೆ ಕೊರೊನಾ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಂದು ಒಂದೇ ದಿನದಲ್ಲಿ 9 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 427ಕ್ಕೆ ಏರಿಕೆಯಾಗಿದೆ.

    ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ಮತ್ತೆ ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇತ್ತ ಕಲಬರುಗಿಯಲ್ಲಿ 4 ತಿಂಗಳ ಮಗು ಸೇರಿದಂತೆ ಐವರಿಗೆ ಕೊರೊನಾ ಸೋಂಕು ತಗುಲಿದೆ. ಉಳಿದಂತೆ ಬೆಂಗಳೂರಿನ ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

    ಕೊರೊನಾ ಸೋಂಕಿತರ ವಿವರ:
    ರೋಗಿ 419 : 54 ವರ್ಷದ ಪುರುಷನಾಗಿದ್ದು, ಬೆಂಗಳೂರಿನ ನಿವಾಸಿ. ತೀವ್ರ ಉಸಿರಾಟದ ತೊಂದರೆ. ಸದ್ಯ ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.
    ರೋಗಿ 420 : 28 ವರ್ಷದ ಮಹಿಳೆಯಾಗಿದ್ದು, ಬೆಂಗಳೂರಿನ ನಿವಾಸಿ. ರೋಗಿ ನಂಬರ್ 208ರ ಜೊತೆ ಸಂಪರ್ಕದಲ್ಲಿದ್ದರು. ಸದ್ಯ ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.
    ರೋಗಿ 421 : 46 ವರ್ಷದ ಮಹಿಳೆಯಾಗಿದ್ದು, ಕಲಬುರಗಿಯ ನಿವಾಸಿ. ರೋಗಿ ನಂಬರ್ 222ರ ಜೊತೆ ಸಂಪರ್ಕದಲ್ಲಿದ್ದರು. ಸದ್ಯ ಕಲಬುರಗಿಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.
    ರೋಗಿ 422 : 57 ವರ್ಷದ ಪುರುಷನಾಗಿದ್ದು, ಕಲಬುರಗಿಯ ನಿವಾಸಿ. ತೀವ್ರ ಉಸಿರಾಟದ ತೊಂದರೆಯೊಂದ ದಾಖಲು. ಸದ್ಯ ಕಲಬುರಗಿಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ರೋಗಿ 423 : 35 ವರ್ಷದ ಮಹಿಳೆಯಾಗಿದ್ದು, ಕಲಬುರಗಿಯ ನಿವಾಸಿ. ರೋಗಿ ನಂಬರ್ 329ರ ಜೊತೆ ಸಂಪರ್ಕದಲ್ಲಿದ್ದರು. ಸದ್ಯ ಕಲಬುರಗಿಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.
    ರೋಗಿ 424 : ಕಲಬುರಗಿಯ 4 ತಿಂಗಳ ಹೆಣ್ಣು ಮಗು. ಕಲಬುರಗಿಯ ನಿವಾಸಿ. ರೋಗಿ ನಂಬರ್ 329ರ ಜೊತೆ ಸಂಪರ್ಕದಲ್ಲಿತ್ತು. ಸದ್ಯ ಕಲಬುರಗಿಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.
    ರೋಗಿ 425 : 26 ವರ್ಷದ ಮಹಿಳೆಯಾಗಿದ್ದು, ಕಲಬುರಗಿಯ ನಿವಾಸಿ. ರೋಗಿ ನಂಬರ್ 329ರ ಜೊತೆ ಸಂಪರ್ಕದಲ್ಲಿದ್ದರು. ರೋಗಿ ನಂಬರ್ 424 ಹೆಣ್ಣು ಮಗುವಿನ ತಾಯಿ. ಸದ್ಯ ಕಲಬುರಗಿಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.
    ರೋಗಿ 426 : ಮೈಸೂರು ಜಿಲ್ಲೆ ನಂಜನಗೂಡಿನ 56 ವರ್ಷದ ಪುರುಷನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅವರು ರೋಗಿ- 383 (ಮಾವ) ಸಂಪರ್ಕ ಹೊಂದಿದ್ದರು. ಅವರಿಗೆ ಮೈಸೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
    ರೋಗಿ 427 : ಮೈಸೂರು ಜಿಲ್ಲೆ ನಂಜನಗೂಡಿನ 32 ವರ್ಷದ ಪುರುಷನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅವರು ರೋಗಿ-52 ಜೊತೆಗೆ ದ್ವಿತೀಯ ಸಂಪರ್ಕ ಹೊಂದಿದ್ದರು. ಅವರನ್ನು ಮೈಸೂರಿ ನಿಗದಿತ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ.

    ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಧ್ಯಾಹ್ನ 12 ಗಂಟೆಗೆ ಬಿಡುಗಡೆ ಮಾಡಿದ್ದ ರೋಗಿಗಳ ಪಟ್ಟಿಯಲ್ಲಿ ಏಳು ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಆದರೆ ಸಂಜೆ ವೇಳೆ ನಂಜನಗೂಡಿನ ಇಬ್ಬರಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ನಿನ್ನೆಗಿಂತ ಇಂದು ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ.

    ಮಂಗಳವಾರ 10 ಮಂದಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿತ್ತು. ಇಂದು ಸೋಂಕಿತರ ಸಂಖ್ಯೆ 418ರಿಂದ 427ಕ್ಕೆ ಏರಿಕೆಯಾಗಿದೆ. ಮಂಗಳವಾರ ಕಲಬುರಗಿ, ವಿಜಯಪುರದಲ್ಲಿ ತಲಾ ಮೂವರಿಗೆ, ಮೈಸೂರಿನ ನಂಜನಗೂಡಿನಲ್ಲಿ ಇಬ್ಬರಿಗೆ, ಬೆಳಗಾವಿ ಮತ್ತು ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಒಬ್ಬರಿಗೆ ಸೋಂಕು ತಗುಲಿತ್ತು. ಮಂಗಳವಾರದಿಂದಲೇ ಬಂಟ್ವಾಳಕ್ಕೆ ಸಂಪರ್ಕಿಸುವ ಎಲ್ಲ ಮಾರ್ಗಗಳನ್ನು ಬಂದ್ ಮಾಡಲಾಗಿದ್ದು, ಪಟ್ಟಣದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

  • ಗುರುವಾರದಿಂದ ಕರ್ನಾಟಕದಲ್ಲಿ ಲಾಕ್‍ಡೌನ್ ಭಾಗಶಃ ಸಡಿಲ- ಏನಿದೆ, ಏನಿಲ್ಲ?

    ಗುರುವಾರದಿಂದ ಕರ್ನಾಟಕದಲ್ಲಿ ಲಾಕ್‍ಡೌನ್ ಭಾಗಶಃ ಸಡಿಲ- ಏನಿದೆ, ಏನಿಲ್ಲ?

    – ಮದ್ಯ ಪ್ರಿಯರಿಗೆ ಸಿಗಲ್ಲ ಎಣ್ಣೆ

    ಬೆಂಗಳೂರು: ಹೆಮ್ಮಾರಿ ಕೊರೊನಾ ವೈರಸ್‍ನಿಂದಾಗಿ ಹೇರಿದ್ದ ಲಾಕ್‍ಡೌನ್ ಗುರುವಾರದಿಂದ ಭಾಗಶಃ ಸಡಿಲಗೊಳ್ಳಲಿದೆ.

    ನಾಳೆಯಿಂದ ಕಟೈಂನ್‍ಮೆಂಟ್ ವಲಯ ಹೊರತು ಪಡಿಸಿ ಉಳಿದ ಕಡೆಯಲ್ಲಿ ಲಾಕ್‍ಡೌನ್ ನಿಯಮ ಸಡಿಲಗೊಳ್ಳಲಿದೆ. ಈ ಮೂಲಕ ಕಟ್ಟಡ ನಿರ್ಮಾಣ, ಅಗತ್ಯ ವಸ್ತುಗಳ ಕೈಗಾರಿಕೆ, ಕೆಲ ಸರ್ಕಾರಿ ಕಚೇರಿಗಳು ತೆರೆಯಲಿವೆ. ಆದರೆ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಕಡ್ಡಾಯ. ಸಾರ್ವಜನಿಕ ಸ್ಥಳದಲ್ಲಿ 5ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ ಎಂದು ಸರ್ಕಾರ ಸೂಚಿಸಿದೆ.

    ಏನಿರುತ್ತೆ?:
    ಸೇಫ್ ಝೋನ್‍ನಲ್ಲಿ ಕಟ್ಟಡ ನಿರ್ಮಾಣ, ರಸ್ತೆ ಕಾಮಗಾರಿಗೆ ಅನುಮತಿ ನೀಡಲಾಗಿದೆ. ಈ ನಿಟ್ಟಿನಲ್ಲಿ ಸಿಮೆಂಟ್, ಜೆಲ್ಲಿ, ಗೂಡ್ಸ್ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ವೈಯಕ್ತಿಕ ಪಾಸ್ ಇದ್ದರೆ ಮಾತ್ರ ಸಂಚಾರಕ್ಕೆ ಅನುಮತಿ ಇರುತ್ತದೆ. ಸ್ವ ಉದ್ಯೋಗ ಮಾಡುವ ವ್ಯಕ್ತಿಗಳಿಗೆ, ಎಲೆಕ್ಟ್ರೀಷಿಯನ್ಸ್, ಐಟಿ ರಿಪೇರಿ, ಪ್ಲಂಬರ್, ಮೋಟಾರ್ ಮೆಕಾನಿಕ್ಸ್, ಕಾರ್ಪೆಂಟರ್ಸ್ ಗಳಿಗೆ ಕೆಲಸ ನಿರ್ವಹಿಸಲು ಅವಕಾಶ ನೀಡಿಲಾಗಿದೆ.

    ಗೂಡ್ಸ್ ರೈಲುಗಳ ಮೂಲಕ ಅಗತ್ಯ ವಸ್ತು ಸಾಗಾಟಕ್ಕೆ ಅನುಮತಿ ನೀಡಲಾಗಿದೆ. ತುರ್ತು ಅಗತ್ಯ ಸೇವೆಗಳ ಸಾಗಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ತುರ್ತು ಸೇವೆಗಳಿಗಾಗಿ ವಾಹನ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಕಾರಿನಲ್ಲಿ ಕೇವಲ ಇಬ್ಬರು ಮಾತ್ರ ಪ್ರಯಾಣಿಸಬೇಕು.

     

    ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆಗೆ ಅವಕಾಶ ನೀಡಲಾಗಿದೆ. ಅಗತ್ಯ ಸರ್ಕಾರಿ ಇಲಾಖೆಗಳನ್ನು ತೆರೆಯಬೇಕು. ಆದರೆ ಶೇ.33ರಷ್ಟು ಸಿಬ್ಬಂದಿ ಮಾತ್ರ ಕೆಲಸ ನಿರ್ವಹಿಸಬೇಕು. ಅಗತ್ಯವಸ್ತುಗಳನ್ನು ಆನ್‍ಲೈನ್‍ನಲ್ಲಿ ಖರೀದಿ ಮಾಡಬಹುದು.

    ಏನಿಲ್ಲ?:
    ಮೆಟ್ರೋ, ರೈಲು, ಬೈಕ್ ಸಂಚಾರ ಇರುವುದಿಲ್ಲ. ಮೇ 3ರವರೆಗೆ ಬಿಎಂಟಿಸಿ, ಕೆಎಸ್‍ಆರ್ ಟಿಸಿ ಬಸ್ ಸಂಚಾರ ಇರುವುದಿಲ್ಲ. ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ. ಮದ್ಯ ಮಾರಾಟ ಮೇ 3ರವರೆಗೂ ಇರುವುದಿಲ್ಲ. ಹೋಟೆಲ್, ರೆಸ್ಟೋರೆಂಟ್‍ಗಳನ್ನು ತೆರೆಯುವಂತಿಲ್ಲ. ಯಾವುದೇ ಸಭೆ, ಕಾರ್ಯಕ್ರಮ ನಡೆಸುವಂತಿಲ್ಲ. ಅಂತರ ಜಿಲ್ಲೆ ಸಂಚಾರ ಇರುವುದಿಲ್ಲ.

    ಈ ಮೊದಲು ಐಟಿ-ಬಿಟಿ ಕಂಪನಿ ತೆರೆಯಲು ಸರ್ಕಾರ ಅನುಮತಿ ನೀಡಿರಲಿಲ್ಲ. ಆದರೆ ಹೊಸ ಪ್ರಕಟಣೆ ಹೊರಡಿಸಿರುವ ಸರ್ಕಾರವು ಕನಿಷ್ಠ ಸಿಬ್ಬಂದಿ ಆಧಾರದ ಮೇಲೆ  ಕಂಪನಿ ತೆರೆಯಬಹುದು ಎಂದು ತಿಳಿಸಿದೆ.

  • ಜಮಾತ್‍ಗೆ ಹೋಗಿ ಬಂದವರು ಸೇರಿದಂತೆ ಕ್ವಾರಂಟೈನ್‍ನಲ್ಲಿದ್ದ 238 ಜನರ ಬಿಡುಗಡೆ

    ಜಮಾತ್‍ಗೆ ಹೋಗಿ ಬಂದವರು ಸೇರಿದಂತೆ ಕ್ವಾರಂಟೈನ್‍ನಲ್ಲಿದ್ದ 238 ಜನರ ಬಿಡುಗಡೆ

    ಬಳ್ಳಾರಿ: ಕ್ವಾರಂಟೈನ್‍ನಲ್ಲಿ ಇರಿಸಲಾಗಿದ್ದ ತಬ್ಲಿಘಿ ಜಮಾತ್‍ಗೆ ಹೋಗಿ ಬಂದವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳದ ಹಿನ್ನೆಲೆ ಜಿಲ್ಲಾಡಳಿತ ಅವರನ್ನು ಬಿಡುಗಡೆ ಮಾಡಿದೆ.

    ಬಳ್ಳಾರಿ ಜಿಲ್ಲೆಯ ನಾನಾ ಪ್ರದೇಶದಿಂದ ದೆಹಲಿಯ ತಬ್ಲಿಘಿ ಜಮಾತ್‍ಗೆ 92 ಮಂದಿ ಹೋಗಿ ಬಂದಿದ್ದರು. ಹೀಗಾಗಿ ಅವರನ್ನು ಬಳ್ಳಾರಿಯ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಯದಲ್ಲಿ 79 ಜನರನ್ನು ಪ್ರತ್ಯೇಕವಾಗಿ ಇಡಲಾಗಿತ್ತು. ಇನ್ನು ಉಳಿದ 12 ಜನರು ರಾಜ್ಯದ ಬೇರೆ ಬೇರೆ ಪ್ರದೇಶಗಳಲ್ಲಿ ವಾಸವಾಗಿದ್ದರು. ಹೀಗಾಗಿ ಅವರನ್ನು ಆಯಾ ಪ್ರದೇಶದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಇನ್ನು ಜಮಾತ್‍ಗೆ ಹೋಗಿ ಬಂದವರು ಸೇರಿದಂತೆ ಕ್ವಾರಂಟೈನಲ್ಲಿದ್ದ ಜಿಲ್ಲೆಯ ಒಟ್ಟು 238 ಜನರನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದೆ.

    ಇವರೆಲ್ಲಾ ಕೊರೊನಾ ಸೋಂಕು ಹೊಂದಿದವರ ಜೊತೆಯಲ್ಲಿ ಸಂಪರ್ಕ ಹೊಂದಿದ್ದರು. ಆದ್ರೆ ಇವರಲ್ಲಿ ಯಾರಿಗೂ ಸೋಂಕಿನ ಗುಣಲಕ್ಷಣಗಳು ಕಾಣದ ಹಿನ್ನೆಲೆ ಜಿಲ್ಲಾಡಳಿತ ಕ್ವಾರಂಟೈನಿಂದ ಇವರನ್ನು ಬಿಡುಗಡೆ ಮಾಡಿದೆ. ಜಿಲ್ಲಾಡಳಿತ ಇವರಿಗೆ ಕಟ್ಟುನಿಟ್ಟಿನ ಆದೇಶ ಮಾಡಿದ್ದು, ಬಿಡುಗಡೆ ಆದ ಇವರೆಲ್ಲಾ ಹೋಮ್ ಕ್ವಾರಂಟೈನ್‍ನಲ್ಲಿ ಇರುವಂತೆ ಸೂಚನೆ ನೀಡಲಾಗಿದೆ.

    ಜಿಲ್ಲೆಯಲ್ಲಿ ಈವರೆಗೂ ಒಟ್ಟು 13 ಪಾಸಿಟಿವ್ ಪ್ರಕರಣಗಳು ಪತ್ತೆ ಆಗಿವೆ. ಅಲ್ಲದೇ ತಬ್ಲಿಘಿ ಜಮಾತ್‍ಗೆ ಹೋಗಿ ಬಂದ ಒಬ್ಬರಲ್ಲಿ ಮಾತ್ರ ಸೋಂಕು ಕಾಣಿಸಿಕೊಂಡಿದೆ.