ಚಿಕ್ಕಬಳ್ಳಾಪುರ: ಕೊರೊನಾ ಸೋಂಕು ಮುಕ್ತವಾಗಿದ್ದ ಜಿಲ್ಲೆಯ ಗೌರಿಬಿದನೂರಿಗೆ ಮತ್ತೆ ಸೋಂಕು ವಕ್ಕರಿಸಿದ್ದು, ಜಿಲ್ಲೆಯಲ್ಲಿ ಇಂದೂ ಸಹ ಹೊಸ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 18ಕ್ಕೆ ಏರಿದೆ.
ಗೌರಿಬಿದನೂರಿನ 11 ಮಂದಿ ಕೊರೊನಾ ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಹೀಗಾಗಿ ಗೌರಿಬಿದನೂರು ನಗರ ಕೊರೊನಾ ಮುಕ್ತವಾಯಿತು ಅಂತಲೇ ಎಲ್ಲರೂ ಭಾವಿಸಿದ್ದರು. ಆದರೆ ಗೌರಿಬಿದನೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದ ಚಿಕ್ಕಬಳ್ಳಾಪುರ ನಗರದ 18 ವರ್ಷದ ಯುವಕನೊರ್ವನಿಗೆ ಕೊರೊನಾ ತಗುಲಿರುವುದು ದೃಢವಾಗಿದೆ.
ಈ ಯುವಕ ಮಾರ್ಚ್ 24ರಂದು ಚಿಕ್ಕಬಳ್ಳಾಪುರ ನಗರದಿಂದ ಹಿಂದೂಪುರದ ಸಂಬಂಧಿಕರ ಮನೆಗೆ ತೆರಳಿದ್ದ. ಲಾಕ್‍ಡೌನ್ ಹಿನ್ನೆಲೆ ಮರಳಿ ಚಿಕ್ಕಬಳ್ಳಾಪುರ ಕ್ಕೆ ಬರಲಾಗದೆ ಅಲ್ಲೇ ಉಳಿದುಕೊಂಡಿದ್ದ. ಆದರೆ ಏಪ್ರಿಲ್ 23ರ ರಾತ್ರಿ ಈತನ ಸಂಬಂಧಿಕರು ಹಿಂದೂಪುರದಿಂದ ಮಾಂಸ ಸಾಗಾಟ ಮಾಡಿಕೊಂಡು ಬೊಲೆರೋ ವಾಹನದಲ್ಲಿ ಶಿವಾಜಿನಗರಕ್ಕೆ ಹೊರಟಿದ್ದರು. ಇದೇ ವಾಹನದಲ್ಲಿ ಈತ ಕೂಡ ತನ್ನನ್ನ ಚಿಕ್ಕಬಳ್ಳಾಪುರಕ್ಕೆ ಡ್ರಾಪ್ ಮಾಡುವಂತೆ ಕೇಳಿಕೊಂಡಿದ್ದು, ಅದೇ ವಾಹನದಲ್ಲಿ ಆಗಮಿಸಿದ್ದ.
ಆದರೆ ಆಂಧ್ರ-ಕರ್ನಾಟಕ ಗಡಿಭಾಗದ ಚೆಕ್‍ಪೋಸ್ಟ್ ತಪ್ಪಿಸಿ ಚಂದನದೂರು ಗ್ರಾಮದ ಬಳಿ ಬರುವಾಗ ರಾತ್ರಿ ಪಾಳಿ ಕರ್ತವ್ಯದಲ್ಲಿದ್ದ ಸ್ಥಳೀಯ ಗ್ರಾಮ ಪಂಚಾಯತಿ ಪಿಡಿಒ, ಬಿಲ್ ಕಲೆಕ್ಟರ್, ಕಂಪ್ಯೂಟರ್ ಅಪರೇಟರ್ ಹಾಗೂ 7 ಮಂದಿ ಗ್ರಾಮ ಪೊಲೀಸ್ ಪಡೆಯ ಯುವಕರು ವಾಹನವನ್ನ ತಡೆದು ವಿಚಾರಿಸಿದ್ದಾರೆ. ಈ ವೇಳೆ ತರಕಾರಿ ಕ್ರೇಟ್ ಅಡ್ಡ ಇಟ್ಟು ವಾಹನದೊಳಗೆ ತರಕಾರಿ ಸಾಗಾಟ ಮಾಡುತ್ತಿರುವುದಾಗಿ ಸುಳ್ಳು ಹೇಳಿದ್ದರು. ಅನುಮಾನ ಬಂದು ಪರಿಶೀಲನೆ ನಡೆಸಿದಾಗ ವಾಹನದೊಳಗೆ ಮಾಂಸ ಪತ್ತೆಯಾಗಿತ್ತು. ಇದರಿಂದ ವಾಹನ ಸಮೇತ ಮೂವರನ್ನ ಗೌರಿಬಿದನೂರು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆತಂದಿದ್ದರು. ರಾತ್ರಿ ಮೂರು ಗಂಟೆಯಿಂದ ಬೆಳಿಗ್ಗೆ 08 ಗಂಟೆಯವರೆಗೂ ಈ ಕೊರೊನಾ ಪಾಸಿಟಿವ್ ಯುವಕ ಠಾಣೆಯಲ್ಲೇ ಇದ್ದನು.
ಹಿಂದೂಪುರದಲ್ಲೂ ಸಹ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆ ಅನುಮಾನದ ಮೇರೆಗೆ ಮೂವರನ್ನ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಒರ್ವನಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಉಳಿದ ಇಬ್ಬರಿಗೆ ನೆಗೆಟಿವ್ ಬಂದಿದೆ. ಹೀಗಾಗಿ ಸದ್ಯ ಗೌರಿಬಿದನೂರಿಗೆ ಮತ್ತೆ ಕೊರೊನಾ ಕಂಟಕ ಶುರುವಾಗಿದ್ದು, ಈ ಮೂವರನ್ನ ಹಿಡಿದ ಪಿಡಿಓ, ಕಂಪ್ಯೂಟರ್ ಅಪರೇಟರ್, ಬಿಲ್‍ಕಲೆಕ್ಟರ್, 07 ಮಂದಿ ಗ್ರಾಮ ಪೊಲೀಸ್ ಪಡೆಯ ಯುವಕರು ಸೇರಿದಂತೆ ಗೌರಿಬಿದನೂರು ಗ್ರಾಮಾಂತರ ಠಾಣೆಯ 10 ಮಂದಿ ಪೊಲೀಸರನ್ನ ಸದ್ಯಕ್ಕೆ ಕ್ವಾರಂಟೈನ್ ಮಾಡಲಾಗಿದೆ ಎಂದು ಎಸ್‍ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.
ಅಪ್ಪಿ ತಪ್ಪಿ ಈ ಯುವಕನನ್ನ ಗೌರಿಬಿದನೂರಿನಲ್ಲಿ ತಡೆಯದೆ ಇದ್ದಿದ್ದಲ್ಲಿ ಈತ ಶಿವಾಜಿನಗರ ಸೇರಿದಂತೆ ಚಿಕ್ಕಬಳ್ಳಾಪುರ ನಗರಕ್ಕೆ ಆಗಮಿಸಿ ಮತ್ಯಾರಾರಿಗೆ ಕೊರೊನಾ ಸೋಂಕು ಹರಡಿಸುತ್ತಿದ್ದನೋ ಗೊತ್ತಿಲ್ಲ. ಆದರೆ ಈ ವಾಹನವನ್ನ ತಡೆದ ಕಂದಾಯ ಇಲಾಖಾಧಿಕಾರಿಗಳು ಹಾಗೂ ಇವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದ ಪೊಲೀಸರ ಸಮಯಪ್ರಜ್ಞೆಯಿಂದ ಮತ್ತಷ್ಟು ಮಂದಿಗೆ ಕೊರೊನಾ ಹರಡೋದು ತಪ್ಪಿದಂತಾಗಿದೆ.
– 775 ಮಂದಿ ಸೋಂಕಿಗೆ ಬಲಿ
– 24 ಗಂಟೆಯಲ್ಲಿ 1,429 ಹೊಸ ಪ್ರಕರಣ ಪತ್ತೆ
ನವದೆಹಲಿ: ದಿನೇ ದಿನೇ ಭಾರತದಲ್ಲಿ ಕೊರೊನಾ ರಣಕೇಕೆ ಹೆಚ್ಚಾಗುತ್ತಿದೆ. ಕಳೆದ 24 ಗಂಟೆಯಲ್ಲಿ 57 ಮಂದಿ ಮಹಾಮಾರಿಗೆ ಬಲಿಯಾಗಿದ್ದು, ದೇಶದಲ್ಲಿ ಸೋಂಕಿತರ ಸಂಖ್ಯೆ 24,506ಕ್ಕೆ ಏರಿದೆ.
ಕಳೆದ 24 ಗಂಟೆಯಲ್ಲಿ ದೇಶಾದ್ಯಂತ ಬರೋಬ್ಬರಿ 1,429 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಈವರೆಗೆ 775 ಮಂದಿಯನ್ನು ಮಹಾಮಾರಿ ಕೊರೊನಾ ಬಲಿ ಪಡೆದಿದೆ. ಮಹಾರಾಷ್ಟ್ರದಲ್ಲಿ ಕೊರೊನಾ ವೇಗವಾಗಿ ಹರಡುತ್ತಿದ್ದು, ಈವರೆಗೆ 6,817 ಮಂದಿಗೆ ಸೋಂಕು ತಗುಲಿದ್ದು, 301 ಮಂದಿ ಸಾವನ್ನಪ್ಪಿದ್ದಾರೆ. ಹೆಚ್ಚು ಸೋಂಕು ಹರಡಿರುವ ರಾಜ್ಯಗಳ ಪಟ್ಟಿಯಲ್ಲಿ ಗುತರಾತ್ 2ನೇ ಸ್ಥಾನದಲ್ಲಿದ್ದು, ಅಲ್ಲಿ 2,815 ಮಂದಿ ಕೊರೊನಾಗೆ ತುತ್ತಾಗಿದ್ದು, 127 ಮಂದಿ ಸಾವನ್ನಪ್ಪಿದ್ದಾರೆ.
1429 new #COVID19 cases & 57 deaths reported in the last 24 hours as India's total number of positive cases stands at 24,506 (including 5063 cured/discharged/migrated and 775 deaths) https://t.co/LpckKJ7nOb
ಇತ್ತ ರಾಷ್ಟ್ರ ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ 2,514ಕ್ಕೆ ಏರಿದ್ದು, 53 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ರಾಜಸ್ಥಾನದಲ್ಲಿ 2,059 ಮಂದಿಗೆ ಸೋಂಕು ತಗುಲಿದ್ದು, 32 ಮಂದಿ ಸಾವನ್ನಪ್ಪಿದ್ದಾರೆ. ಹಾಗೆಯೇ ಕರ್ನಾಟಕದಲ್ಲಿ ಈವರೆಗೆ 489 ಮಂದಿ ಕೊರೊನಾಗೆ ತುತ್ತಾಗಿದ್ದು, 18 ಮಂದಿ ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಯಲ್ಲಿ 15 ಹೊಸ ಪ್ರಕರಣಗಳು ವರದಿಯಾಗಿದ್ದು, ಈವರೆಗೆ 153 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
India's total number of #Coronavirus positive cases rise to 24,506 (including 18,668 active cases, 5063 cured/discharged/migrated and 775 deaths): Ministry of Health and Family Welfare pic.twitter.com/g5d7UzxKdX
ಕೇರಳದಲ್ಲಿ ಕೊರೊನಾ ಈಗ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ. ಈವರೆಗೆ 450 ಮಂದಿಗೆ ಸೋಂಕು ತಗುಲಿದ್ದು, 3 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಅಲ್ಲದೇ 331 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ ಎಂದು ವರದಿಯಾಗಿದೆ.
ಕೊರೊನಾ ವೈರಸ್‍ನಿಂದ ದೇಶದಲ್ಲಿ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ. ಇತ್ತ ದಿನೇ ದಿನೇ ಸೋಂಕಿತರ ಸಂಖ್ಯೆ ಕೂಡ ದೇಶದಲ್ಲಿ ಏರಿಕೆಯಾಗುತ್ತಿದೆ. ಈಗಾಗಲೇ ಕೊರೊನಾ ನಿಯಂತ್ರಣಕ್ಕೆ ದೇಶಾದ್ಯಂತ ಲಾಕ್‍ಡೌನ್ ಜಾರಿಗೊಳಿಸಿದ್ದರೂ ಸೋಂಕು ಮಾತ್ರ ಹತೋಟಿಗೆ ಬರುತ್ತಿಲ್ಲ. ದಿನ ಕಳೆದಂತೆ ಸೋಂಕಿಗೆ ತುತ್ತಾಗುತ್ತಿರುವವರ ಸಂಖ್ಯೆ ಏರುತ್ತಲೇ ಇದೆಯೇ ಹೊರತಾಗಿ ಕಡಿಮೆಯಾಗುತ್ತಿಲ್ಲ.
ಈ ಮಧ್ಯೆ ಶುಭಸುದ್ದಿಯೆಂದರೆ ರಾಜ್ಯದಲ್ಲಿ ಇಂದು ಮೊದಲ ಪ್ಲಾಸ್ಮಾ ಥೆರಪಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಾಲನೆ ನೀಡಲಾಗಿದೆ. ಕೊರೊನಾದಿಂದ ಗುಣಮುಖರಾದವರೊಬ್ಬರು ತಮ್ಮ ರಕ್ತದ ಪ್ರತಿರೋಧಕ ಕಣಗಳನ್ನು ದಾನ ಮಾಡುತ್ತಾರೆ. ಅವರಿಂದ ಪ್ರತಿರೋಧಕ ಕಣಗಳನ್ನು ಪಡೆದು ಕೊರೊನಾ ಸೋಂಕಿತ ವ್ಯಕ್ತಿಯ ರಕ್ತಕ್ಕೆ ಸೇರಿಸಲಾಗುತ್ತದೆ. ಈ ಚಿಕಿತ್ಸೆಯೇ ಪ್ಲಾಸ್ಮಾ ಥೆರಪಿಯಾಗಿದೆ. ಇಂದು ರಾಜ್ಯದ ಮೊದಲ ಪ್ಲಾಸ್ಮಾ ಥೆರಪಿ ಮಾಡಲಾಗುತ್ತಿದೆ. ಇದರ ಸಫಲತೆ ಆಧರಿಸಿ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ಲಾಸ್ಮಾ ಥೆರಪಿಗೆ ಸರ್ಕಾರ ನಿರ್ಧಾರ ಕೈಗೊಳ್ಳುತ್ತದೆ.
– ಬೆಳಗಾವಿಯಲ್ಲಿ ಒಬ್ಬನಿಂದ 6 ಮಂದಿಗೆ ಸೋಂಕು
– ಬಿಹಾರ ಕಾರ್ಮಿಕನಿಂದ 5 ಜನರಿಗೆ ಕೊರೊನಾ
ಬೆಂಗಳೂರು: ದಿನೇ ದಿನೇ ರಾಜ್ಯದಲ್ಲಿ ಕೊರೊನಾ ಸೋಂಕಿತ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಶುಕ್ರವಾರ ಸಂಜೆಯಿಂದ ಈವರೆಗೆ ರಾಜ್ಯದಲ್ಲಿ 15 ಮಂದಿಗೆ ಕೊರೊನಾ ತಗುಲಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 489ಕ್ಕೇರಿದೆ.
ಸಿಲಿಕಾನ್ ಸಿಟಿಯಲ್ಲಿ ಇಂದು ಆರು ಮಂದಿಯಲ್ಲಿ ಸೋಂಕು ಕಂಡುಬಂದಿದ್ದು, ಅದರಲ್ಲೂ ಬಿಹಾರ ಕಾರ್ಮಿಕನಿಂದಲೇ ಐದು ಮಂದಿಗೆ ಕೊರೊನಾ ತಗುಲಿರೋದು ದೃಢಪಟ್ಟಿದೆ. ಇನ್ನೂ ಬೆಳಗಾವಿಯಲ್ಲಿ ಒಬ್ಬ ಸೋಂಕಿತನಿಂದ ಆರು ಮಂದಿಗೆ ಕೊರೊನಾ ಬಂದಿದೆ.
ಮಂಡ್ಯ, ಚಿಕ್ಕಬಳ್ಳಾಪುರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ತಲಾ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ.ಇದುವರೆಗೂ ರಾಜ್ಯದಲ್ಲಿ 153 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು, 18 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
ಬೆಳಗ್ಗೆ ಬಿಡುಗಡೆಯಾದ ಸೋಂಕಿತರ ಮಾಹಿತಿ:
1. ರೋಗಿ-475: ಬೆಂಗಳೂರಿನ 34 ವರ್ಷದ ಪುರುಷ. ಬಿಬಿಎಂಪಿ ಕಂಟೈನ್‍ಮೆಂಟ್ ಝೋನ್‍ಗೆ ಭೇಟಿ
2. ರೋಗಿ-476: ಬೆಂಗಳೂರಿನ 37 ವರ್ಷದ ಪುರುಷ. ರೋಗಿ 419ರ ಜೊತೆ ಸಂಪರ್ಕ
3. ರೋಗಿ-477: ಬೆಂಗಳೂರಿನ 21 ವರ್ಷದ ಯುವಕ. ರೋಗಿ 419ರ ಜೊತೆ ಸಂಪರ್ಕ
4. ರೋಗಿ-478: ಬೆಂಗಳೂರಿನ 17 ವರ್ಷದ ಹುಡುಗ. ರೋಗಿ 419ರ ಜೊತೆ ಸಂಪರ್ಕ
5. ರೋಗಿ-479: ಬೆಂಗಳೂರಿನ 19 ವರ್ಷದ ಯುವತಿ. ರೋಗಿ 419ರ ಜೊತೆ ಸಂಪರ್ಕ
6. ರೋಗಿ-480: ಬೆಂಗಳೂರಿನ 28 ವರ್ಷದ ಯುವಕ. ರೋಗಿ 419ರ ಜೊತೆ ಸಂಪರ್ಕ
7. ರೋಗಿ-481: ಮಂಡ್ಯದ 37 ವರ್ಷದ ಪುರುಷ. ರೋಗಿ 78ರ ಜೊತೆ ಸಂಪರ್ಕ
ಕೋವಿಡ್19: ಬೆಳಗಿನ ವರದಿ
ಒಟ್ಟು ಪ್ರಕರಣಗಳು: 489 ಮೃತಪಟ್ಟವರು: 18 ಗುಣಮುಖರಾದವರು: 153 ಹೊಸ ಪ್ರಕರಣಗಳು: 15
8. ರೋಗಿ-482: ಬೆಳಗಾವಿಯ ಹಿರೆಬಾಗೆವಾಡಿಯ 45 ವರ್ಷದ ಪುರುಷ. ರೋಗಿ 128ರ ದ್ವಿತೀಯ ಸಂಪರ್ಕ
9. ರೋಗಿ-483: ಬೆಳಗಾವಿಯ ಹಿರೆಬಾಗೆವಾಡಿಯ 38 ವರ್ಷದ ಪುರುಷ. ರೋಗಿ 128ರ ದ್ವಿತೀಯ ಸಂಪರ್ಕ
10. ರೋಗಿ-484: ಬೆಳಗಾವಿಯ ಹಿರೆಬಾಗೆವಾಡಿಯ 80 ವರ್ಷದ ವೃದ್ಧೆ. ರೋಗಿ 128ರ ದ್ವಿತೀಯ ಸಂಪರ್ಕ
11. ರೋಗಿ-485: ಬೆಳಗಾವಿಯ ಹಿರೆಬಾಗೆವಾಡಿಯ 55 ವರ್ಷದ ಮಹಿಳೆ. ರೋಗಿ 128ರ ದ್ವಿತೀಯ ಸಂಪರ್ಕ
12. ರೋಗಿ-486: ಬೆಳಗಾವಿಯ ಹಿರೆಬಾಗೆವಾಡಿಯ 42 ವರ್ಷದ ಮಹಿಳೆ. ರೋಗಿ 128ರ ದ್ವಿತೀಯ ಸಂಪರ್ಕ
13. ರೋಗಿ-487: ಬೆಳಗಾವಿಯ ಹಿರೆಬಾಗೆವಾಡಿಯ 39 ವರ್ಷದ ಮಹಿಳೆ. ರೋಗಿ 128ರ ದ್ವಿತೀಯ ಸಂಪರ್ಕ
14. ರೋಗಿ-488: ಚಿಕ್ಕಬಳ್ಳಾಪುರದ 18 ವರ್ಷದ ಹುಡುಗ. ಆಂಧ್ರ ಪ್ರದೇಶದ ಹಿಂದೂಪುರ ಮತ್ತು ಅನಂತಪುರಕ್ಕೆ ಭೇಟಿ
15. ರೋಗಿ-489: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ 33 ವರ್ಷದ ಮಹಿಳೆ. ರೋಗಿ 409ರೊಂದಿಗೆ ಸಂಪರ್ಕ
ಬೆಂಗಳೂರು: ಕೊರೊನಾ ವೈಸರ್ ನಿಂದಾಗಿ ರೈತರು ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಲಾಗದೇ ನಷ್ಟ ಅನುಭವಿಸಿದ್ದಾರೆ. ಆದರೆ ಲಾಕ್‍ಡೌನ್ ನಡುವೆ ರಾಜ್ಯದಲ್ಲಿ ದಿಢೀರನೇ ಹಾಲು ಉತ್ಪಾದನೆ ಹೆಚ್ಚಳವಾಗಿದೆ.
ಒಂದು ತಿಂಗಳಲ್ಲಿ 2 ಲಕ್ಷ ಲೀಟರ್ ಹಾಲು ಉತ್ಪಾದನೆ ಜಾಸ್ತಿಯಾಗಿದೆ. ಕೊರೊನಾ ಲಾಕ್‍ಡೌನ್ ಇರುವುದರಿಂದ ರೈತರು ಹೈನುಗಾರಿಕೆಗೆ ಹೆಚ್ಚು ಮಹತ್ವ ನೀಡಿದ್ದಾರೆ. ಲಾಕ್‍ಡೌನ್ ಪರಿಣಾಮದಿಂದ ಬೇರೆ ಕ್ಷೇತ್ರದ ವ್ಯಾಪಾರ ವ್ಯವಹಾರ ಕುಸಿತವಾಗಿದೆ. ಈ ಹಿನ್ನೆಲೆಯಲ್ಲಿ ರೈತರು ಹೈನುಗಾರಿಕೆ ಹೆಚ್ಚು ಒತ್ತು ನೀಡಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಹಾಲು ಉತ್ಪಾದನೆ ಹೆಚ್ಚಳವಾಗಿದೆ.
ರಾಜ್ಯದಲ್ಲಿ ಲಾಕ್‍ಡೌನ್ ಆಗುವ ಮುನ್ನ ತಿಂಗಳಲ್ಲಿ 68 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿತ್ತು. ಆದರೆ ಲಾಕ್‍ಡೌನ್ ನಂತರ 70 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಈ ಮೂಲಕ ಒಂದು ತಿಂಗಳಲ್ಲಿ 2 ಲಕ್ಷ ಲೀಟರ್ ಹಾಲು ಉತ್ಪಾದನೆ ಜಾಸ್ತಿಯಾಗಿದೆ.
ರಾಜ್ಯದ ವಿವಿಧ ಭಾಗಗಳಲ್ಲಿ ಹಾಲು ಉತ್ಪಾದನೆ ಹೆಚ್ಚಾಗಿದೆ. ಕೆಎಂಎಫ್‍ಗೆ ಹೆಚ್ಚುವರಿಯಾಗಿ 2 ಲಕ್ಷ ಲೀಟರ್ ಹಾಲು ಹರಿದು ಬರುತ್ತಿದೆ. ಲಾಕ್‍ಡೌನ್ ಮುನ್ನ ರಾಜ್ಯದಲ್ಲಿ ಹಾಲು ಉತ್ಪಾದನೆ ಕಡಿಮೆ ಆಗುತ್ತಿತ್ತು. ಆದರೆ ದಿಢೀರ್ ಹಾಲು ಉತ್ಪಾದನೆ ಹೆಚ್ಚಳದಿಂದ ಕೆಎಂಎಫ್‍ಗೆ ಹೆಚ್ಚಾಗಿ ಹಾಲು ಬರುತ್ತಿದೆ. ಲಾಕ್‍ಡೌನ್ ನಂತರ ರಾಜ್ಯದಲ್ಲಿ ಹಾಲು ಉತ್ಪಾದನೆ ಏರಿಕೆ ಕಂಡಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಪಾದರಾಯನಪುರದ ಪುಂಡರು ಸೃಷ್ಟಿಸಿರುವ ಅವಾಂತರ ಅಷ್ಟಿಷ್ಟಲ್ಲ. ಗಲಭೆ ಎಬ್ಬಿಸಿದ್ದ 124 ಮಂದಿಯಲ್ಲಿ ಐವರಿಗೆ ಕೊರೊನಾ ಸೋಂಕು ಹಬ್ಬಿದೆ. ಇವರು ಕಾಲಿಟ್ಟಿದ್ದ ರಾಮನಗರ ಜಿಲ್ಲೆಗೂ ಕೊರೊನಾ ಸೋಂಕು ಹಬ್ಬುವ ಭೀತಿ ಎದುರಾಗಿದೆ. ಗ್ರೀನ್‍ಝೋನ್‍ನಿಂದ ರಾಮನಗರವನ್ನು ಹೊರಗಿಡಲಾಗಿದ್ದು, ಈಗ ಹಾಟ್‍ಸ್ಪಾಟ್ ಆಗುವ ಆತಂಕ ಉಂಟಾಗಿದೆ.
ಪಾದರಾಯನಪುರದ ಪುಂಡರಲ್ಲಿ ಐವರಿಗೆ ಕೊರೊನಾ ಹೇಗೆ ಬಂತು ಅನ್ನೋದು ಈಗ ಆರೋಗ್ಯ ಇಲಾಖೆಗೆ ಸವಾಲಾಗಿದೆ. ಈ ಪುಂಡರು ಕೊರೊನಾ ಸೋಂಕಿತರ ಪ್ರಾಥಮಿಕ ಅಥವಾ ಸೆಕೆಂಡರಿ ಸಂಪರ್ಕದಲ್ಲಿದ್ದ ಬಗ್ಗೆ ಮಾಹಿತಿ ಇಲ್ಲ. ಸದ್ಯಕ್ಕೆ ಇವರಿಗೆ ಕೊರೊನಾ ಹಬ್ಬಿದ್ದು ಹೇಗೆ ಎಂಬ ಮಾಹಿತಿಯನ್ನು ಆರೋಗ್ಯ ಇಲಾಖೆ ಪತ್ತೆ ಮಾಡುತ್ತಿದೆ.
ಜ್ವರ ಮುಚ್ಚಿಟ್ಟಿದ್ರಾ ಪುಂಡರು?
ಅಂದಹಾಗೆ ಪಾದರಾಯನಪುರದಲ್ಲಿ ಪೊಲೀಸರು, ವೈದ್ಯರು, ಆಶಾ ಕಾರ್ಯಕರ್ತೆಯರ ಮೇಲೆ ದಾಳಿ ನಡೆಸಿ ಬ್ಯಾರಿಕೇಡ್, ಪೆಂಡಾಲ್‍ಗಳನ್ನ ಧ್ವಂಸಗೊಳಿಸಿದ್ದ ಈ ಪಾಪಿಗಳು ತಮಗೆ ಕೊರೊನಾದ ಲಕ್ಷಣ ಇದ್ದರೂ ಮುಚ್ಚಿಟ್ಟಿದ್ರಾ ಎಂಬ ಅನುಮಾನ ಮೂಡಿದೆ. ಜ್ವರ, ಶೀತ ಮತ್ತು ಕೆಮ್ಮಿನ ಮಾತ್ರೆಗಳನ್ನು ಸೇವಿಸಿ ಯಾರಿಗೂ ಕೊರೊನಾ ಬಗ್ಗೆ ಅನುಮಾನ ಬರದಂತೆ ಊರೆಲ್ಲ ಓಡಾಡಿದ್ದಾರೆ ಅನ್ನೋ ಶಂಕೆ ವ್ಯಕ್ತವಾಗುತ್ತಿದೆ.
ಕೈಕೊಟ್ಟ ರ‍್ಯಾಪಿಡ್ ಟೆಸ್ಟ್ ಕಿಟ್:
ಲಾಕ್‍ಡೌನ್ ಘೋಷಣೆಯಾಗಿ ಇಂದಿಗೆ 32ನೇ ದಿನ. ಹೀಗಿದ್ದರೂ ಇನ್ನೂ ಕರ್ನಾಟಕದಲ್ಲಿ ರ‍್ಯಾಪಿಡ್ ಟೆಸ್ಟ್ ಆರಂಭವಾಗಿಲ್ಲ. ರ‍್ಯಾಪಿಡ್ ಟೆಸ್ಟ್ ಮಾಡಿದ್ದರೆ ಆಗ ಈ ಪಾದರಾಯನಪುರದ ಪುಂಡರಲ್ಲಿ ಕೊರೊನಾ ಲಕ್ಷಣ ಇದ್ದಿದ್ದರ ಸುಳಿವು ಸಿಗುತ್ತಿತ್ತು ಎನ್ನಲಾಗಿದೆ.
ಯಾಕೆಂದರೆ ಗಲಭೆಗೂ ಮೊದಲೇ ಪಾದರಾಯನಪುರ ಕೊರೊನಾ ಹಾಟ್‍ಸ್ಪಾಟ್ ಏರಿಯಾ ಎಂದು ಘೋಷಣೆ ಆಗಿತ್ತು. ಸೀಲ್‍ಡೌನ್ ಕೂಡ ಮಾಡಲಾಗಿತ್ತು. ಸೀಲ್‍ಡೌನ್ ಏರಿಯಾದಲ್ಲಿ ರ‍್ಯಾಪಿಡ್ ಟೆಸ್ಟ್ ಗೆ ಸೂಚಿಸಲಾಗಿತ್ತು. ಆದರೆ ಚೀನಾದಿಂದ ತರಿಸಿದ ರ‍್ಯಾಪಿಡ್ ಟೆಸ್ಟ್ ಕಿಟ್‍ಗಳಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ ಪರೀಕ್ಷೆಯನ್ನ ಸ್ಥಗಿತಗೊಳಿಸಲಾಗಿತ್ತು. ಇವೆಲ್ಲವೂ ಪಾದರಾಯನಪುರದ ಕೊರೊನಾ ಪರಿಸ್ಥಿತಿಯನ್ನ ಇನ್ನಷ್ಟು ಬಿಗಡಾಯಿಸಿತಾ ಅನ್ನೋ ಪ್ರಶ್ನೆ ಕಾಡುತ್ತಿದೆ.
ಮಾಹಿತಿ ಕೊಡದೇ ಸತಾಯಿಸ್ತಿದ್ದಾರೆ ಪುಂಡರು:
ಈ ಪಾದರಾಯನಪುರ ಪುಂಡರ ಆಟಾಟೋಪ ಒಂದೆರಡಲ್ಲ. ಸೋಂಕು ಕಾಣಿಸಿಕೊಂಡವರು ತಾವು ಯಾರ ಜೊತೆಗೆ ಸಂಪರ್ಕಕ್ಕೆ ಮಾಡಿದ್ದೀವಿ, ಎಲ್ಲೆಲ್ಲಿ ಹೋಗಿದ್ದೀವಿ ಅನ್ನೋದರ ಮಾಹಿತಿ ಕೊಡಬೇಕು. ಆದರೆ ಅದ್ಯಾವುದನ್ನೂ ಈ ಪುಂಡರು ಕೊಡುತ್ತಿಲ್ಲ. ಹೀಗಾಗಿ ಇವರ ಕಾಲ್ ರೆಕಾರ್ಡ್ ಡೀಟೇಲ್ಸ್ ಹುಡುಕುವ ಮೂಲಕ ಟ್ರೇಸ್ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಟಿಪ್ಪು ನಗರದಲ್ಲಿ ಕೊರೊನಾ ಸೋಂಕಿತ ವ್ಯಕ್ತಿ ತನಗೆ ಎರಡನೇ ಪತ್ನಿ ಇದ್ದ ವಿಚಾರವನ್ನೇ ಮುಚ್ಟಿಟ್ಟಿದ್ದ. ಆತನ ಕಾಲ್ ಟ್ರೇಸ್ ಮಾಡಿದಾಗಲೇ ಸತ್ಯ ಬಯಲಾಗಿತ್ತು.
ಬೆಂಗಳೂರಿನ ಪಶ್ಚಿಮ ವಲಯದಲ್ಲಿ ಬರೋಬ್ಬರಿ 30 ಕೊರೊನಾ ಪಾಸಿಟಿವ್ ಪ್ರಕರಣ ವರದಿ ಆಗಿದೆ. ಇದರಲ್ಲಿ ಪಾದರಾಯನಪುರದಲ್ಲಿ 23 ಕೇಸ್ ಮತ್ತು ಟಿಪ್ಪು ನಗರದಲ್ಲಿ 7 ಪ್ರಕರಣ ವರದಿ ಆಗಿದೆ.
ಕೋಲಾರ: ನಿತ್ಯ ತರ್ಲೆ ಮಾಡೋ ಕೋತಿಗಳು ಇದ್ದಕ್ಕಿದಂತೆ ಮಂಕಾಗಿವೆ. ಕಳೆದ ಕೆಲವು ದಿನಗಳಿಂದ ಈ ಕೋತಿಗಳ ಆರೋಗ್ಯದಲ್ಲಾದ ಏರು ಪೇರು ಇಡೀ ಗ್ರಾಮವನ್ನೇ ಬೆಚ್ಚಿ ಬೀಳಿಸಿದ್ದು, ಕೊರೊನಾ ಆತಂಕದ ನಡುವೆ ಕೋತಿಗಳು ಮಂಕಾಗಿರುವುದು ಜನರಲ್ಲಿ ಭಯ ಹುಟ್ಟಿಸಿದೆ.
ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕು ಕೋಡುಗುರ್ಕಿ ಗ್ರಾಮದಲ್ಲಿ ಮಂಗಗಳು ಈ ರೀತಿ ವರ್ತಿಸುತ್ತಿದ್ದು, ಕೆಲವು ನಿತ್ರಾಣವಾಗಿ ಮಲಗಿದರೆ, ಇನ್ನೂ ಕೆಲವು ಏಳಲು ಸಾಧ್ಯವಾಗದೇ ಅಸಹಾಯಕ ಸ್ಥಿತಿಯಲ್ಲಿ ನೋಡುತ್ತಿವೆ. ಇನ್ನೂ ಹಲವು ಕೋತಿಗಳು ಕೆಮ್ಮುತ್ತಿವೆ. ಇದೆಲ್ಲವನ್ನೂ ಗ್ರಾಮಸ್ಥರು ಆತಂಕದಿಂದ ನೋಡುತ್ತಿದ್ದಾರೆ. ಸಾಮಾನ್ಯ ದಿನಗಳಲ್ಲಾಗಿದ್ದರೆ ಗ್ರಾಮಸ್ಥರು ತೆಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಕೊರೊನಾ ಮಹಾಮಾರಿ ಒಕ್ಕರಿಸಿರುವ ಸಂದರ್ಭದಲ್ಲಿ ಕೋತಿಗಳು ಈ ರೀತಿ ಮಾಡುತ್ತಿರುವುದನ್ನು ಕಂಡು ಭಯಭೀತರಾಗಿದ್ದಾರೆ.
ಕೋಡುಗುರ್ಕಿ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಈ ಕೋತಿಗಳ ಆರೋಗ್ಯದಲ್ಲಿ ಏರುಪೇರಾಗಿದ್ದು, ಕೋತಿಗಳ ಹಾವ ಭಾವಗಳನ್ನ ಕಂಡ ಗ್ರಾಮಸ್ಥರು ಕೋತಿಗಳಿಗೂ ಕೊರೊನಾ ವೈರಸ್ ಹರಡಿದಿಯಾ ಎಂದು ಆತಂಕಗೊಂಡಿದ್ದಾರೆ. ಇದರ ನಡುವೆಯೂ ಕೋತಿಗಳ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ.
ಗ್ರಾಮದಲ್ಲಿರುವ ನೂರಾರು ಕೋತಿಗಳಲ್ಲಿ ಕೆಲವೊಂದು ರೋಗ ಲಕ್ಷಣಗಳು ಗೋಚರವಾಗಿವೆ. ಇಲ್ಲಿರುವ ಹೆಚ್ಚಿನ ಸಂಖ್ಯೆಯ ಕೋತಿಗಳು ಕೆಮ್ಮುವುದು, ಎಲ್ಲಂದರಲ್ಲಿ ನಿತ್ರಾಣವಸ್ಥೆಯಲ್ಲಿ ಮಲಗುವುದು, ಸುಸ್ತಾಗಿ ಬೀಳುವುದು. ಜನರು ಏನಾದರೂ ಆಹಾರ ಕೊಟ್ಟರೂ ತಿನ್ನದೆ ಇರೋದು ಹೀಗೆ ವರ್ತಿಸುತ್ತಿರುವ ಕೋತಿಗಳು ರಾತ್ರಿಯೆಲ್ಲಾ ಕೆಮ್ಮುತ್ತಿರುತ್ತವಂತೆ.
ಕೋಲಾರದಲ್ಲಿ ಯಾವುದೇ ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿಲ್ಲ ಎಂದು ನೆಮ್ಮದಿಯಿಂದಿರುವ ಜನರು, ಇದೀಗ ಕೋತಿಗಳ ರೋಗ ಲಕ್ಷಣ ಕಂಡು ಮೈಸೂರು ಹಾಗೂ ಇನ್ನಿತರ ಭಾಗಗಳಲ್ಲಿ ಕಾಣಿಸಿಕೊಂಡ ಮಂಗನ ಕಾಯಿಲೆ ಏನಾದ್ರು ಕಾಣಿಸಿಕೊಂಡಿತಾ ಅಥವಾ ಕೊರೊನಾ ವೈರಸ್ಸೇ ಹಬ್ಬಿತಾ ಎಂಬ ಆಂತಂಕದಲ್ಲಿದ್ದಾರೆ. ಈ ಕುರಿತು ಸ್ಥಳೀಯ ಪಂಚಾಯಿತಿ ಪಿಡಿಓ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಗ್ರಾಮಕ್ಕೆ ಬಂದಿರುವ ಅರಣ್ಯ ಇಲಾಖೆ, ಆರೋಗ್ಯ ಹಾಗೂ ಪಶು ವೈದ್ಯಾಧಿಕಾರಿಗಳ ತಂಡ ಕೋತಿಗಳ ಪರಿಶೀಲನೆಯಲ್ಲಿ ತೊಡಗಿದೆ.
ಇಸ್ಲಾಮಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗಾಗಿ ಏಪ್ಯಾಕಪ್ ಮುಂದೂಡಲು ಸಾಧ್ಯವೇ ಇಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿದೆ.
ಪಿಸಿಬಿ ಈ ತಿಂಗಳಲ್ಲಿ ಎರಡನೇ ಬಾರಿಗೆ ಏಷ್ಯಾ ಕಪ್ ಮತ್ತು ಐಪಿಎಲ್ ಬಗ್ಗೆ ಹೇಳಿಕೆ ನೀಡಿದೆ. ಏಷ್ಯಾಕಪ್‍ನಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಪಿಸಿಬಿ ಸಿಇಒ ವಾಸಿಮ್ ಖಾನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕೊರೊನೊ ವೈರಸ್ ಬಿಕ್ಕಟ್ಟು ಕಡಿಮೆಯಾದರೆ ಯುಎಇಯಲ್ಲಿ ಏಪ್ಯಾಕಪ್ ಟೂರ್ನಿಯು ಸೆಪ್ಟೆಂಬರ್‍ನಲ್ಲಿ ನಡೆಯಲಿದೆ. ಆದರೆ ಟೂರ್ನಿಯನ್ನು ಐಪಿಎಲ್‍ಗಾಗಿಯೇ ಮುಂದೂಡಲು ಆಗುವುದಿಲ್ಲ ಎಂದು ಪಿಸಿಬಿ ಸಿಇಒ ವಾಸಿಮ್ ಖಾನ್ ಹೇಳಿದ್ದಾರೆ.
”ನಮ್ಮ ನಿಲುವು ತುಂಬಾ ಸ್ಪಷ್ಟವಾಗಿದ್ದು, ಏಷ್ಯಾಕಪ್ ಸೆಪ್ಟೆಂಬರ್‍ನಲ್ಲಿ ನಡೆಯಲಿದೆ. ಆ ಸಮಯದಲ್ಲಿ ಕೊರೊನಾ ಭೀತಿ ಇದ್ದರೆ ಮಾತ್ರ ಟೂರ್ನಿಯನ್ನು ಮುಂದೂಡಲಾಗುತ್ತದೆ. ಆದರೆ ಐಪಿಎಲ್‍ಗಾಗಿ ಏಷ್ಯಾಕಪ್‍ನ ವೇಳಾಪಟ್ಟಿಯಲ್ಲಿ ಏನಾದರೂ ಬದಲಾವಣೆಗಳಿದ್ದರೆ ಅದನ್ನು ಒಪ್ಪುವುದಿಲ್ಲ. ಏಷ್ಯಾಕಪ್ ಟೂರ್ನಿಯನ್ನು ನವೆಂಬರ್ ಅಥವಾ ಡಿಸೆಂಬರ್‍ಗೆ ಮುಂದೂಡುವ ಬಗ್ಗೆ ಚರ್ಚೆ ನಡೆದಿದೆ ಎಂಬ ಮಾಹಿತಿ ಲಭಿಸಿದೆ. ಆದರೆ ಇದು ನಮಗೆ ಸಾಧ್ಯವಿಲ್ಲ. ಯಾವುದೇ ಒಂದು ಸದಸ್ಯ ದೇಶಕ್ಕಾಗಿ ಏಷ್ಯಾಕಪ್ ಟೂರ್ನಿಯ ದಿನಾಂಕವನ್ನು ಬದಲಾಯಿಸುವುದು ಸರಿಯಲ್ಲ. ಇದಕ್ಕೆ ನಮ್ಮ ಬೆಂಬಲ ಇಲ್ಲ” ಎಂದು ವಾಸಿಮ್ ಖಾನ್ ತಿಳಿಸಿದ್ದಾರೆ.
ಏಷ್ಯಾಕಪ್ ಭಾರತ-ಪಾಕ್ ವಿಷಯವಲ್ಲ:
ಇದಕ್ಕೂ ಮುನ್ನ ಏಪ್ರಿಲ್ 14ರಂದು ಪಿಸಿಬಿ ಅಧ್ಯಕ್ಷ ಎಹ್ಸಾನ್ ಮನಿ ಕೂಡ ಇದೇ ಮಾತನ್ನು ಹೇಳಿದ್ದರು. ”ನಾನು ಈ ಎಲ್ಲಾ ಊಹಾಪೋಹಗಳ ಬಗ್ಗೆ ಓದಿದ್ದೇನೆ ಮತ್ತು ಕೇಳಿದ್ದೇನೆ. ಆದರೆ ಈಗ ಏಷ್ಯಾಕಪ್ ನಡೆಸಬೇಕೋ ಬೇಡವೋ ಎಂಬುದು ಕೇವಲ ಭಾರತ-ಪಾಕಿಸ್ತಾನದ ವಿಷಯವಲ್ಲ. ಈ ಟೂರ್ನಿಯಲ್ಲಿ ಇನ್ನೂ ಅನೇಕ ದೇಶಗಳು ಭಾಗವಹಿಸುತ್ತವೆ. ಇದನ್ನು ಗಮನದಲ್ಲಿ ಇಟ್ಟುಕೊಂಡೇ ನಿರ್ಧಾರಾ ಕೈಗೊಳ್ಳಬೇಕು” ಎಂದಿದ್ದರು.
ಈ ಮೊದಲ ಏಷ್ಯಾ ಕಪ್ ಟೂರ್ನಿ ಪಾಕಿಸ್ತಾನದಲ್ಲಿ ನಡೆಯಬೇಕಿತ್ತು. ಆದರೆ ಭಾರತದ ಆಕ್ಷೇಪಣೆಯ ನಂತರ ಅದನ್ನು ಯುಎಇಗೆ ವರ್ಗಾಯಿಸಲಾಯಿತು. ಟೂರ್ನಿಯ ಆಯೋಜಿಸುವ ಜವಾಬ್ದಾರಿ ಪಾಕಿಸ್ತಾನಕ್ಕಿದೆ. ಹೀಗಾಗಿ ಪಿಸಿಬಿ ಪಟ್ಟು ಸಾಧಿಸಲು ಮುಂದಾಗಿದೆ.
ಏಷ್ಯಾಕಪ್‍ನಲ್ಲಿ ಒಟ್ಟು 6 ತಂಡಗಳು ಭಾಗವಹಿಸಲಿವೆ. ಅವುಗಳೆಂದರೆ ಭಾರತ, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ. ಆರನೇ ತಂಡವನ್ನು ಅರ್ಹತಾ ಪಂದ್ಯಗಳ ಮೂಲಕ ನಿರ್ಧರಿಸಲಾಗುತ್ತದೆ. ಮೊದಲ ಏಷ್ಯಾ ಕಪ್ ಟೂರ್ನಿ 1984ರಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಡೆಸಿತ್ತು. ಟೂರ್ನಿಯು ಪ್ರತಿ 2 ವರ್ಷಗಳಿಗೊಮ್ಮೆ ನಡೆಯುತ್ತದೆ. ಟೀಂ ಇಂಡಿಯಾ ಇದುವರೆಗೆ 7 ಬಾರಿ ಏಷ್ಯಾ ಕಪ್ ಗೆದ್ದು ಬೀಗಿದೆ. ಶ್ರೀಲಂಕಾ 5 ಬಾರಿ ಮತ್ತು ಪಾಕಿಸ್ತಾನ 2 ಬಾರಿ ಚಾಂಪಿಯನ್ ಆಗಿವೆ. ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ತಂಡಗಳು ಈವರೆಗೂ ಏಪ್ಯಾ ಕಪ್ ಗೆದ್ದಿಲ್ಲ.
ಐಪಿಎಲ್ ಅನ್ನು ಮಾರ್ಚ್ 29ರಿಂದ ಆರಂಭಿಸಬೇಕಿತ್ತು. ಆದರೆ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಈ ಮೊದಲು ಏಪ್ರಿಲ್ 15ಕ್ಕೆ ಮುಂದೂಡಲಾಗಿತ್ತು. ಆ ಬಳಿಕ ಲಾಕ್‍ಡೌನ್ ಅನ್ನು ಮೇ 3ರವರೆಗೂ ಕೇಂದ್ರ ಸರ್ಕಾರ ವಿಸ್ತರಿಸಿದ ಬೆನ್ನಲ್ಲೇ ಬಿಸಿಸಿಐ ಅನಿರ್ದಿಷ್ಟಾವಧಿಗೆ ಐಪಿಎಲ್ ಮುಂದೂಡಿತು.
ಮೂಲಗಳ ಪ್ರಕಾರ ಏಷ್ಯಾಕಪ್ ಟೂರ್ನಿಯನ್ನು ಮುಂದೂಡಿದರೆ ಸೆಪ್ಟೆಂಬರ್ ಅಥವಾ ನವೆಂಬರ್-ಡಿಸೆಂಬರ್ ನಡುವೆ ಬಿಸಿಸಿಐ ಐಪಿಎಲ್ ಅನ್ನು ನಡೆಸಲು ಮುಂದಾಗಿದೆ. ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ನಡೆಯಲಿದೆ.
ಮಂಗಳೂರು: ಕೊರೊನಾ ಸೋಂಕಿತ ವೃದ್ಧೆಯ ಅಂತ್ಯಕ್ರಿಯೆ ವೇಳೆ ನಡೆದ ಹೈಡ್ರಾಮಾ ಖೇದಕರ ಎಂದು ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.
ನಗರದಲ್ಲಿ ಕೊರೊನಾ ಸೋಂಕಿತ ವೃದ್ಧೆ ಶವ ಸಂಸ್ಕಾರ ವಿಚಾರದಲ್ಲಿ ನಡೆದ ಹೈಡ್ರಾಮಾ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಗುರುವಾರ ನಡೆದ ಘಟನೆ ಖೇದಕರ. ನಾಗರಿಕ ಸಮಾಜಕ್ಕೆ ಕಪ್ಪು ಚುಕ್ಕೆ. ಮೃತ ಶರೀರರದ ಜೊತೆ ಕಠೋರವಾಗಿ ವರ್ತಿಸಿ ಅಂತ ಯಾವ ಧರ್ಮವೂ ಹೇಳಿಲ್ಲ. ಶಾಸಕರೇ ಮುಂದೆ ನಿಂತು ಪ್ರತಿಭಟಿಸಿದ್ದು ಆಶ್ಚರ್ಯ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಸ್ಥಾನ ಶಾಶ್ವತವಲ್ಲ, ಮನುಷ್ಯತ್ವೇ ಮುಖ್ಯ. ಶಾಸಕರ ಮನುಷ್ಯತ್ವ ಇಲ್ಲದ ವರ್ತನೆಯನ್ನ ಖಂಡಿಸ್ತೇನೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ನಡೆ ಸ್ವಾಗತಾರ್ಹ. ದಕ್ಷಿಣ ಕನ್ನಡ ಜಿಲ್ಲಾಡಳಿತ ಕೊರೊನಾ ಆಕ್ಷನ್ ಪ್ಲಾನ್‍ನಲ್ಲಿ ಅಂತ್ಯ ಸಂಸ್ಕಾರದ ಬಗ್ಗೆಯೂ ಯೋಚಿಸಬೇಕು. ಆದರೆ ಜಿಲ್ಲಾಡಳಿತ ಈ ವಿಚಾರದಲ್ಲಿ ವಿಫಲವಾಗಿದೆ. ಇದು ರಾಜ್ಯದ ಬೇರೆ ಕಡೆ ಆಗಬಾರದು ಎಂದು ಹೇಳಿದರು.
ಆರೋಗ್ಯ ಸಚಿವ ಶ್ರೀರಾಮುಲು, ಕಂದಾಯ ಸಚಿವ ಆರ್.ಅಶೋಕ್ ಅವರು ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಿ. ಗುರುವಾರ ಘಟನೆ ನಡೆದ ಬಗ್ಗೆ ಜಿಲ್ಲಾಡಳಿತ ಮತ್ತು ಇಲ್ಲಿನ ಶಾಸಕ ಭರತ್ ಶೆಯ ಬಗ್ಗೆ ಬೇಸರವಿದೆ. ಶಾಸಕರು ಮನುಷ್ಯತ್ವ ಅಳವಡಿಸಿಕೊಳ್ಳಬೇಕು. ಇದರಿಂದ ಜನರಿಗೆ ನೋವಾಗಿದೆ ಎಂದರು.
ಬೆಂಗಳೂರು: ಪಾದರಾಯನಪುರ ಆರೋಪಿಗಳನ್ನು ರಾಮನಗರಕ್ಕೆ ಶಿಫ್ಟ್ ಮಾಡುವ ಮೂಲಕ ನನ್ನ ಮೇಲಿರುವ ಸಿಟ್ಟಿಗೆ ರಾಮನಗರ ಜನತೆ ಜೀವದ ಜೊತೆ ಚೆಲ್ಲಾಟವಾಡ್ತಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಎಡಿಜಿಪಿ ಅಲೋಕ್ ಮೋಹನ್ ವಿರುದ್ಧ ಆರೋಪ ಮಾಡಿದ್ದಾರೆ.
ಪಬ್ಲಿಕ್ ಟವಿ ಜೊತೆ ಮಾತನಾಡಿದ ಅವರು, ಈ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಸಿಎಂ ಬಿ.ಎಸ್ ಯಡಿಯೂರಪ್ಪ ಜೊತೆಗೆ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರ ಜೊತೆಗೆ ಎರಡೆರಡು ಬಾರಿ ಮಾತನಾಡಿದ್ದೇನೆ. ಯಾವುದೇ ಕಾರಣಕ್ಕೂ ಈ ಅಧಿಕಾರಿಗಳ ಮಾತು ಕೇಳಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವಂತ ನಿರ್ಧಾರ ಮಾಡ್ಕೊಬೇಡಿ ಎಂದು ಹೇಳಿದ್ದೆ. ನನಗೆ ಪ್ರಾರಂಭಿಕ ಹಂತದಲ್ಲೇ ಬಂದ ಮಾಹಿತಿ ಪ್ರಕಾರ, ಸರ್ಕಾರಿ ಅಧಿಕಾರಿ ಪ್ರಸ್ತುತ ಇರುವ ಎಡಿಜಿಪಿ ಅವರೇ ಖುದ್ದು ಪಾದರಾಯನಪುರದ ಆರೋಪಿಗಳನ್ನು ರಾಮನಗರಕ್ಕೆ ಶಿಫ್ಟ್ ಮಾಡಬೇಕು ಎಂದು ಸರ್ಕಾರದ ಗಮನ ಸೆಳೆದಿದ್ದಾರೆ. ಈ ಬಗ್ಗೆ ಕೂಡ ನಾನು ಸಿಎಂ ಹಾಗೂ ಗೃಹ ಸಚಿವರ ಬಳಿ ಮಾತನಾಡಿದ್ದೆ. ಅವರೂ ನನ್ನ ಮಾತಿಗೆ ಸ್ಪಂದಿಸಿದ್ದರು. ರಾಮನಗರಕ್ಕೆ ಆರೋಪಿಗಳನ್ನು ಶಿಫ್ಟ್ ಮಾಡುವ ಬಗ್ಗೆ ಮರು ಚಿಂತನೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು ಎಂದರು.
ಆದರೆ 4 ಗಂಟೆ ಬಳಿಕ ಮೊದಲ ಬ್ಯಾಚ್ 49 ಮಂದಿಯನ್ನು ರಾಮನಗರ ಕಾರಾಗೃಹಕ್ಕೆ ಕಳುಹಿಸಿದರು. ಮರುದಿನ ಇನ್ನೂ 72 ಮಂದಿಯನ್ನು ಕರೆದುಕೊಂಡು ಬಂದರು. ಈಗ ಮೊದಲ ಬ್ಯಾಚ್‍ನಲ್ಲಿದ್ದ ಇಬ್ಬರಿಗೆ ಕೊರೊನಾ ಸೋಂಕು ತಗುಲಿದೆ. ಅವರನ್ನು ಮಧ್ಯರಾತ್ರಿ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. 2ನೇ ಬ್ಯಾಚ್‍ನಲ್ಲಿದ್ದ 72 ಮಂದಿಯಲ್ಲಿ 3 ಜನಕ್ಕೆ ಸೋಂಕು ತಗುಲಿದೆ ಎಂದು ಶಂಕಿಸಲಾಗಿದೆ. ಈ ಬಗ್ಗೆ ಕೂಡ ನನ್ನ ಬಳಿ ಮಾಹಿತಿ ಇದೆ. ಈ ಮೂವರನ್ನೂ ಕೂಡ ಜೈಲಿನಿಂದ ಆಸ್ಪತ್ರೆಗೆ ಪ್ರಚಾರ ಆಗದಂತೆ ಶಿಫ್ಟ್ ಮಾಡಬೇಕು ಎಂದು ನೋಡುತ್ತಿದ್ದಾರೆ. ಹೀಗಾಗಿ ನಾನು ಸರ್ಕಾರಕ್ಕೆ ಹೇಳುತ್ತಿದ್ದೇನೆ, ಇಂತಹ ಸನ್ನಿವೇಷವನ್ನ ರಾಜಕಾರಣಕ್ಕೆ ದುರುಪಯೋಗ ಪಡಿಸಿಕೊಳ್ಳಬಾರದು ಎಂದು ಹೇಳಿದರು.
ಇಂದು ಕೂಡ ನಾನು ಸಿಎಂ ಹಾಗೂ ಗೃಹ ಸಚಿವರ ಜೊತೆ ಮಾತನಾಡಿದ್ದೇನೆ. ಈ ಆರೋಪಿಗಳನ್ನು ರಾಮನಗರದಿಂದ ಮತ್ತೆ ಬೆಂಗಳೂರಿಗೆ ಶಿಫ್ಟ್ ಮಾಡಲಾಗುತ್ತೆ, ಅಲ್ಲಿ ಹಜ್ ಕೇಂದ್ರದಲ್ಲಿ ಕ್ವಾರಂಟೈನ್ ಮಾಡಲು ವ್ಯವಸ್ಥೆ ಮಾಡುತ್ತಿದ್ದೇವೆ ಎಂದಿದ್ದಾರೆ. ಅಧಿಕಾರಿಗಳು ಆರೋಪಿಗಳನ್ನು ಕರೆತರುವಾಗ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳದೇ ಕರೆದುಕೊಂಡು ಬಂದಿದ್ದಾರೆ. ಇದರಲ್ಲಿ ಅಧಿಕಾರಿಗಳ ಲೋಪವಿದೆ. ಹೀಗಾಗಿ ರಾಮನಗರದಿಂದ ಬೆಂಗಳೂರಿಗೆ ಶಿಫ್ಟ್ ಮಾಡುವಾಗಲಾದರೂ ವೈದ್ಯರ ಸಲಹೆಗಳನ್ನು ಪಡೆದು ಸಿಬ್ಬಂದಿ, ಅಧಿಕಾರಿಗಳಿಗೆ ಸೋಂಕು ತಗುಲದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಮನವಿ ಮಾಡಿಕೊಂಡರು.
ಸಿಟ್ಟು ಯಾಕೆ..?
ನಾನು ಸಿಎಂ ಆಗಿದ್ದಾಗ ಎಡಿಜಿಪಿ ಅಲೋಕ್ ಮೋಹನ್ ಅವರು ಬೆಂಗಳೂರಿನ ಸಿಟಿ ಕಮಿಷನರ್ ಆಗಬೇಕೆಂದು ಎರಡು ಮೂರು ಬಾರಿ ನನ್ನ ಬಳಿ ಬಂದಿದ್ದರು. ಆಗ ನಾನು ಅವರಿಗೆ ಸ್ಪಂದನೆ ಮಾಡಿರಲಿಲ್ಲ. ಹೀಗಾಗಿ ಅವರಿಗೆ ನನ್ನ ಮೇಲಿದ್ದ ಸಿಟ್ಟನ್ನು ನನ್ನ ಜಿಲ್ಲೆಯ ಜನರ ಮೇಲೆ ತೋರಿಸಿದ್ದಾರೆ ಎಂಬ ಅನುಮಾನ ಕಾಡುತ್ತಿದೆ. ಯಾಕೆ ಅವರು ರಾಮನಗರ ಜೈಲನ್ನೇ ಆರಿಸಿ, ಆರೋಪಿಗಳನ್ನು ಅಲ್ಲಿಗೇ ಶಿಫ್ಟ್ ಮಾಡಿ ಎಂದರು? ನಾನು ಸರ್ಕಾರಕ್ಕೆ ಮನವಿ ಮಾಡಿದ್ದರೂ ಅವರು ಮಾತ್ರ ಒತ್ತಡ ಹಾಕಿ ರಾಮನಗರ ಜೈಲಿಗೇ ಆರೋಪಿಗಳನ್ನು ಶಿಫ್ಟ್ ಮಾಡಿದರು. ಇದೆಲ್ಲಾ ಕಾಕತಾಳಿಯ ಇರಬಹುದು. ಆದರೆ ಇಂದು ಬೆಳಗ್ಗೆ ಅವರು ನಡೆದುಕೊಂಡ ರೀತಿ ನೋಡಿದರೆ ಅನುಮಾನ ಹೆಚ್ಚಾಗುತ್ತಿದೆ. ಗೃಹ ಸಚಿವರು ಗುರುವಾರ ರಾತ್ರಿಯೇ ಆರೋಪಿಗಳನ್ನು ಶಿಫ್ಟ್ ಮಾಡುತ್ತೇವೆ ಎಂದಿದ್ದರು. ಇತ್ತ ಬೆಳಗ್ಗೆ ಸ್ಥಳೀಯ ಅಧಿಕಾರಿಗಳು ಜೈಲಿನ ಮುಂದೆ ಬಸ್ಸುಗಳನ್ನು ತಂದು ಆರೋಪಿಗಳನ್ನು ಶಿಫ್ಟ್ ಮಾಡಲು ಮುಂದಾದಾಗ, ಎಡಿಜಿಪಿ ಅವರು ಅವರ ಮೇಲೆ ತಮ್ಮ ಅಧಿಕಾರ ಪ್ರಯೋಗ ಮಾಡಿದ್ದಾರೆ. ಶಿಫ್ಟ್ ಮಾಡಲು ನಾನು ಅನುಮತಿ ಕೊಡಬೇಕು. ಯಾರ ಅನುಮತಿ ಪಡೆದು ಶಿಫ್ಟ್ ಮಾಡಲು ನಿರ್ಧಾರ ತೆಗೆದುಕೊಂಡಿರಿ ಎಂದು ಎಡಿಜಿಪಿ ರೇಗಾಡಿದ್ದಾರೆ ಎಂದು ಆರೋಪಿಸಿದರು.
ಅಧಿಕಾರಿಯೇ ನೇರ ಹೊಣೆ:
ನನ್ನ ಮೇಲಿನ ಸಿಟ್ಟಿಗೆ ಎಡಿಜಿಪಿ ರಾಮನಗರ ಜನತೆಯ ಜೀವದ ಜೊತೆ ಚೆಲ್ಲಾಟ ಆಡಿದ್ದು ಸರಿಯಲ್ಲ. ಅಧಿಕಾರಿಯ ಉದ್ಧಟತನಕ್ಕೆ ಜೈಲಿನ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಸ್ಥಿತಿ ಏನಾಗಬೇಡ? ನನ್ನ ಮೇಲಿನ ಸಿಟ್ಟಿಗೆ ಹೀಗೆ ಮಾಡಿದ್ದಾರೆ ಎನಿಸುತ್ತಿದೆ. ಪಾದರಾಯನಪುರ ಆರೋಪಿಗಳನ್ನು ರಾಮನಗಕ್ಕೆ ಶಿಫ್ಟ್ ಮಾಡಿದಾಗಲೇ ನಾನು ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದೆ. ನನ್ನ ಜಿಲ್ಲೆಯ ಜನರಿಗೆ ಏನಾದರೂ ಆದರೆ ಅದಕ್ಕೆ ಸರ್ಕಾರ ಹಾಗೂ ಈ ಸಲಹೆ ಕೊಟ್ಟ ಅಧಿಕಾರಿಯೇ ನೇರ ಹೊಣೆ ಹೊರಬೇಕು ಎಂದಿದ್ದೆ. ನನ್ನ ಪ್ರಕಾರ ಈ ವಿಚಾರದಲ್ಲಿ ಸರ್ಕಾರದ ದಾರಿ ತಪ್ಪಿಸಲಾಗಿದೆ. ಅಧಿಕಾರಿ ಹೇಳಿದ ತಕ್ಷಣ ಸರ್ಕಾರ ಇದಕ್ಕೆ ಒಪ್ಪಿಗೆ ಕೊಡಬಾರದಾಗಿತ್ತು. ನಾವು ಹೇಳಿದ ರೀತಿ ಕೆಲಸ ಮಾಡಿ ಎಂದು ಸರ್ಕಾರ ಎಚ್ಚರಿಕೆ ಕೊಟ್ಟು ಕೆಲಸ ಮಾಡಿಸಬೇಕಿತ್ತು. ಹೀಗಾಗಿ ಸರ್ಕಾರದಿಂದಲೂ ಲೋಪ ಆಗಿದೆ ಎಂದು ಕಿಡಿಕಾಡಿದರು.
ರಾಮನಗರಕ್ಕೆ ಆರೋಪಿಗಳನ್ನು ಶಿಫ್ಟ್ ಮಾಡುತ್ತಾರೆ ಎಂದಾಗಲೇ ರಾಮನಗರದ ಹಲವು ಮಂದಿ ನನಗೆ ಬೆಳಗ್ಗೆಯಿಂದಲೇ ಕರೆ ಮಾಡುತ್ತಾ ಹೆದ್ದಾರಿಯಲ್ಲೇ ವಾಹನಗಳನ್ನು ತಡೆಯುತ್ತೇವೆ ಅನುಮತಿ ಕೊಡಿ ಎಂದು ಕೇಳಿಕೊಂಡಿದ್ದರು. ಆಗ ನಾನು ಕಾರ್ಯಕರ್ತರಿಗೆ ಹಾಗೂ ಜನರಿಗೆ ಹಾಗೆ ಮಾಡಬೇಡಿ ಎಂದಿದ್ದೆ. ನಾನು ಸಿಎಂ ಜೊತೆ ಮಾತನಾಡಿದ್ದೇನೆ. ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ, ರಸ್ತೆಯಲ್ಲಿ ಗಲಾಟೆ ಮಾಡಿಕೊಳ್ಳಲು ಹೋಗಬೇಡಿ ಎಂದು ಮನವಿ ಮಾಡಿದ್ದೆ. ಇಷ್ಟೆಲ್ಲ ಆದ ನಂತರವೂ ಈ ಘಟನೆ ನಡೆದು ಹೋಗಿದೆ ಎಂದು ಎಚ್‍ಡಿಕೆ ಅಸಮಾಧಾನ ಹೊರಹಾಕಿದರು.
ಇಲ್ಲಿಯವರೆಗೆ ನಾನೆಂದೂ ಸರ್ಕಾರಕ್ಕೆ ಮುಜುಗರ ತರುವಂತೆ ರಾಜಕೀಯ ಮಾಡಿಲ್ಲ. ಸರ್ಕಾರಕ್ಕೆ ಬೆಂಬಲ ಕೊಟ್ಟಿದೆ. ಕೊರೊನಾ ಸೋಂಕಿತರು ಇದ್ದಾರೆ ಎಂದು ಗೊತ್ತಿದ್ದರೂ ಯಾಕೆ ಅವರು ರಾಮನಗರಕ್ಕೆ ಆರೋಪಿಗಳನ್ನು ಶಿಫ್ಟ್ ಮಾಡಿದರು? ಸಲಹೆ ಕೊಟ್ಟವರು ಯಾರು? ವಿಕ್ಟೋರಿಯಾ ಆಸ್ಪತ್ರೆಯಲ್ಲಿದ್ದ 1,500 ಬೆಡ್‍ಗಳಲ್ಲಿ ಈ 120 ಆರೋಪಿಗಳನ್ನು ಇರಿಸಲು ಆಗುತ್ತಿರಲಿಲ್ಲವಾ? ರಾಮನಗರಕ್ಕೇ ಯಾಕೆ ಕರೆತಂದಿರಿ? ಸೋಂಕು ಇಲ್ಲದೇ ರಾಮನಗರದ ಜನ ಶಾಂತ ರೀತಿಯಿಂದ ಇದ್ದಾರೆ. ಆದರೆ ಇಂದು ಈ ಘಟನೆಯಿಂದ ಜನರನ್ನು ಆತಂಕಕ್ಕೀಡು ಮಾಡಿದ್ದೀರಿ. ಜನರ ಜೊತೆಗೆ ಅಧಿಕಾರಿಗಳೇ ಹೆದರಿ ಹೋಗಿದ್ದಾರೆ. ಈ ಪರಿಸ್ಥಿತಿಗೆ ಕಾರಣ ನೀವೇ ತಾನೆ? ಹೀಗೆ ಮಾಡೋದಾಗಿದ್ದರೇ 1 ತಿಂಗಳು ಯಾವ ಪುರುಷಾರ್ಥಕ್ಕೆ ನೀವು ಲಾಕ್‍ಡೌನ್ ಮಾಡಿದ್ದು? ಜನ ನಿಮ್ಮ ಮಾತು ಕೇಳಿದಕ್ಕೆ ಈ ರೀತಿ ವಾತಾವರಣ ಸೃಷ್ಟಿಸಿದ್ದೀರಾ? ಎಂದು ಗೃಹ ಸಚಿವರಿಗೆ ಹೆಚ್‍ಡಿಕೆ ಪ್ರಶ್ನಿಸಿದರು.
ಪಾದರಾಯನಪುರ ಆರೋಪಿಗಳು ಬಿಟ್ಟರೆ ರಾಮನಗರದಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣಗಳಿಲ್ಲ. ಆದರೆ ಈಗ ರಾಮನಗರದ ಜೈಲಿನ ಅಧಿಕಾರಿಗಳು, ಸಿಬ್ಬಂದಿಯಲ್ಲಿ ಕೆಲವರು ಬಾಡಿಗೆ ಮನೆಯಲ್ಲಿದ್ದಾರೆ. ಅವರಿಗೆ ಮನೆ ಮಾಲೀಕರು ಮನೆಯನ್ನು ಖಾಲಿ ಮಾಡಿ ಎಂದು ಒತ್ತಡ ಹಾಕುತ್ತಿದ್ದಾರೆ. ಒಂದು ವೇಳೆ ಈ ಅಧಿಕಾರಿಗಳು, ಸಿಬ್ಬಂದಿಗೆ ಸೋಂಕು ತಗುಲಿದರೆ ಇಡೀ ಜಿಲ್ಲೆಗೆ ಸಮಸ್ಯೆ ಪ್ರಾರಂಭವಾಗುತ್ತದೆ. ಇದಕ್ಕೆ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ಕಿಡಿಕಾರಿದರು.
ನನ್ನ ಮಗನ ಮದುವೆಯನ್ನು ಸಾಮಾಜಿಕ ಅಂತರ ಕಾಯ್ದುಕೊಂಡು, ನಿಯಮಗಳನ್ನು ಪಾಲಿಕೊಂಡು, ನನ್ನ ತೋಟದ ಮನೆಯಲ್ಲಿ ಮಾಡಿದ್ದೇನೆ. ಆದರೆ ಕೆಲ ಮಾಧ್ಯಮಗಳಲ್ಲಿ ಇದು ತಪ್ಪು, ದೇವೇಗೌಡರನ್ನ ಬಂಧಿಸಿ ಎನ್ನುವ ರೀತಿ ಸುದ್ದಿ ಮಾಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಯಾವ ರೀತಿ ನಮ್ಮ ಕೆಲ ಸ್ನೇಹಿತರು ಹೇಳಿಕೆ ಕೊಟ್ಟರು. ಈಗ ಈ ಪಾದರಾಯನಪುರ ಆರೋಪಿಗಳನ್ನು ರಾಮನಗರಕ್ಕೆ ಶಿಫ್ಟ್ ಮಾಡಿರುವ ಬಗ್ಗೆ ಮಹಾನುಭಾವರು ಏನು ಹೇಳುತ್ತಾರೆ? ಯಾರನ್ನ ಹೊಣೆ ಮಾಡುತ್ತಾರೆ? ಯಾರನ್ನ ಜೈಲಿಗೆ ಕಳುಹಿಸುತ್ತಾರೆ ಎಂದು ಪ್ರಶ್ನಿಸಿದರು.
ಐಸಿಎಂಆರ್ ಸಲಹೆಗಳನ್ನು ಪಾಲಿಸುವಲ್ಲಿ ಸರ್ಕಾರ ಮಹಾನ್ ಅಪರಾಧ ಮಾಡಿದೆ. ಪಾದರಾಯನಪುರ ಆರೋಪಿಗಳನ್ನು ರಾಮನಗರಕ್ಕೆ ಶಿಫ್ಟ್ ಮಾಡಿದ್ದು ಸರ್ಕಾರ ಮಾಡಿರುವ ವಿವೇಕರಹಿತ ತೀರ್ಮಾನ ಎಂಬುದು ನನ್ನ ಅಭಿಪ್ರಾಯ. ಕೇಂದ್ರದ ಸಲಹೆ, ನಿಯಮಗಳನ್ನ ರಾಜ್ಯ ಸರ್ಕಾರ ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ಹೇಳಿದರು.
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಸಿಗುವಂತೆ ಕಾಣುತ್ತಿಲ್ಲ. ಇಂದು ಬೆಂಗಳೂರಿನ 11 ಜನರು ಸೇರಿದಂತೆ ರಾಜ್ಯದ 18 ಜನರಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 463ಕ್ಕೆ ಏರಿಕೆ ಕಂಡಿದೆ.
ರಾಮನಗರ ಜೈಲಿನಲ್ಲಿದ್ದ ಪಾದರಾಯನಪುರ ಪುಂಡರ ಪೈಕಿ ಐವರಿಗೆ ಕೊರೊನಾ ದೃಢಪಟ್ಟಿದ್ದು, ರಾಮನಗರ ಜಿಲ್ಲೆಯ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಬೆಂಗಳೂರಿನ 11 ಜನರಿಗೆ ಸೋಂಕು ತಗುಲಿರುವುದು ರಾಜಧಾನಿಯ ಜನರನ್ನು ಆತಂಕಕ್ಕೆ ದೂಡಿದೆ. ಇದನ್ನೂ ಓದಿ: ರಾಮನಗರ ಜೈಲಿನಲ್ಲಿ ಐವರಿಗೆ ಕೊರೊನಾ ದೃಢ: ಅಶ್ವತ್ಥನಾರಾಯಣ
ಸೋಂಕಿತರ ಮಾಹಿತಿ: ರೋಗಿ-446: ಬೆಂಗಳೂರಿನ 49 ವರ್ಷದ ಮಹಿಳೆ. ಸಂಪರ್ಕದ ಮಾಹಿತಿ ಲಭ್ಯವಾಗಿಲ್ಲ. ರೋಗಿ-447: ತುಮಕೂರಿನ 32 ವರ್ಷದ ಪುರುಷ. ಸೂರತ್-ಗುಜರಾತ್‍ಗೆ ಪ್ರಯಾಣ ಬೆಳೆಸಿದ ಹಿನ್ನಲೆ ಹೊಂದಿದ್ದಾರೆ. ರೋಗಿ-448: ಬೆಳಗಾವಿ ಜಿಲ್ಲೆ ರಾಯಬಾಗ್‍ನ 10 ವರ್ಷದ ಬಾಲಕಿ. ರೋಗಿ-150ರ ಸಂಪರ್ಕದಲ್ಲಿದ್ದರು. ರೋಗಿ-449: ಬೆಂಗಳೂರಿನ 30 ವರ್ಷದ ಪುರುಷ. ಪಾದರಾಯನಪುರದ ಸೋಂಕಿನ ಸಂಪರ್ಕ ಹೊಂದಿದ್ದಾರೆ. ರೋಗಿ-450: ಬೆಂಗಳೂರಿನ 22 ವರ್ಷದ ಯುವಕ. ಪಾದರಾಯನಪುರದ ಸೋಂಕಿನ ಸಂಪರ್ಕ ಹೊಂದಿದ್ದಾರೆ. ರೋಗಿ-451: ಚಿಕ್ಕಬಳ್ಳಾಪುರದ 39 ವರ್ಷದ ಪುರುಷ. ರೋಗಿ-250ರ ಸಂಪರ್ಕದಲ್ಲಿದ್ದರು.
ರೋಗಿ-452: ಬೆಂಗಳೂರಿನ 35 ವರ್ಷದ ಪುರುಷ. ಪಾದರಾಯನಪುರದ ಸೋಂಕಿನ ಸಂಪರ್ಕ ಹೊಂದಿದ್ದರು. ರೋಗಿ-453: ಬೆಂಗಳೂರಿನ 32 ವರ್ಷದ ಪುರುಷ. ಪಾದರಾಯನಪುರದ ಸೋಂಕಿನ ಸಂಪರ್ಕ ಹೊಂದಿದ್ದರು. ರೋಗಿ-454: ಬೆಂಗಳೂರಿನ 23 ವರ್ಷದ ಯುವಕ. ಪಾದರಾಯನಪುರದ ಸೋಂಕಿನ ಸಂಪರ್ಕ ಹೊಂದಿದ್ದರು. ರೋಗಿ-455: ಬಾಗಲಕೋಟೆ ಜಿಲ್ಲೆ ಮುದೋಳದ 28 ವರ್ಷದ ಪುರುಷ. ರೋಗಿ-380ರ ಸಂಪರ್ಕದಲ್ಲಿದ್ದರು. ರೋಗಿ-456: ಬಾಗಲಕೋಟೆ ಜಿಲ್ಲೆ ಜಮಕಂಡಿಯ 46 ವರ್ಷದ ಪುರುಷ. ಸಂಪರ್ಕದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ರೋಗಿ-457: ವಿಜಯಪುರದ 17 ವರ್ಷದ ಯುವಕ. ರೋಗಿ-221ರ ಸಂಪರ್ಕ ಹೊಂದಿದ್ದರು.
ಪಾದರಾಯನಪುರದಲ್ಲಿ ಕೋರೋನ ಸೈನಿಕರ ವಿರುದ್ಧ ಹಲ್ಲೆ ಮಾಡಿದ ಪುಂಡರ ಪೈಕಿ ಎರಡು ವ್ಯಕ್ತಿಗಳಿಗೆ ಈ ಮೊದಲು #Covid19 ಖಚಿತವಾಗಿತ್ತು. ಈಗ, ಮತ್ತೆ ಮೂವರಲ್ಲಿ #Covid19 ಸೋಂಕು ಖಚಿತವಾಗಿದ್ದು, ಸೊಂಕಿತರ ಸಂಖ್ಯೆ ಐದಕ್ಕೇರಿದೆ. #IndiaFightsCorona#ಮನೆಯಲ್ಲೇಇರಿ
ರೋಗಿ-458: ಬೆಂಗಳೂರಿನ 26 ವರ್ಷದ ಪುರುಷ. ರೋಗಿ-419ರ ಸಂಪರ್ಕದಲ್ಲಿದ್ದರು. ರೋಗಿ-459: ಬೆಂಗಳೂರಿನ 35 ವರ್ಷದ ಪುರುಷ. ರೋಗಿ-419ರ ಸಂಪರ್ಕದಲ್ಲಿ ಇದ್ದರು. ರೋಗಿ-460: ಬೆಂಗಳೂರಿನ 31 ವರ್ಷದ ಪುರುಷ. ರೋಗಿ-419ರ ಸಂಪರ್ಕದ ಹೊಂದಿದ್ದರು. ರೋಗಿ-461: ಬೆಂಗಳೂರಿನ 32 ವರ್ಷದ ಪುರುಷ. ರೋಗಿ-419ರ ಸಂಪರ್ಕದಲ್ಲಿ ಇದ್ದರು. ರೋಗಿ-462: ಬೆಂಗಳೂರಿನ 35 ವರ್ಷದ ಪುರುಷ. ರೋಗಿ-419ರ ಸಂಪರ್ಕದಲ್ಲಿದ್ದರು. ರೋಗಿ-463: ಬೆಳಗಾವಿ ಜಿಲ್ಲೆ ರಾಯಬಾಗ್‍ನ 15 ವರ್ಷದ ಬಾಲಕ. ರೋಗಿ-148ರ ಸಂಪರ್ಕದಲ್ಲಿದ್ದರು.
ಬೆಂಗಳೂರಿನ 11, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ತಲಾ ಇಬ್ಬರಿಗೆ, ವಿಜಯಪುರದ, ತುಮಕೂರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ರಾಜ್ಯದ 453 ಸೋಂಕಿತರ ಪೈಕಿ ಈವರೆಗೂ 18 ಜನರು ಮೃತಪಟ್ಟಿದ್ದರೆ, 150 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.