Tag: Coronavirus

  • ಇಂದು ರಾಜ್ಯದಲ್ಲಿ 3 ಪ್ರಕರಣ ಪತ್ತೆ, ಓರ್ವ ಮಹಿಳೆ ಬಲಿ – ಒಟ್ಟು 182 ಮಂದಿ ಡಿಸ್ಚಾರ್ಜ್

    ಇಂದು ರಾಜ್ಯದಲ್ಲಿ 3 ಪ್ರಕರಣ ಪತ್ತೆ, ಓರ್ವ ಮಹಿಳೆ ಬಲಿ – ಒಟ್ಟು 182 ಮಂದಿ ಡಿಸ್ಚಾರ್ಜ್

    – ಸೋಂಕಿತರ ಸಂಖ್ಯೆ 503ಕ್ಕೇರಿಕೆ

    ಬೆಂಗಳೂರು: ಇಂದು ರಾಜ್ಯದಲ್ಲಿ ಹೊಸತಾಗಿ ಕೇವಲ 3 ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 503ಕ್ಕೆ ಏರಿದೆ.

    ಈ ಮಧ್ಯೆ ರೋಗಿ-465 ಸೋಂಕಿಗೆ ಬಲಿಯಾಗಿದ್ದಾರೆ. ಬೆಂಗಳೂರು ನಗರ ನಿವಾಸಿ 45 ವರ್ಷದ ಮಹಿಳೆ ತೀವ್ರ ಉಸಿರಾಟದ ತೊಂದರೆ ಹಾಗೂ ನಿಮೋನಿಯಾ ಹಿನ್ನೆಲೆ ಬೆಂಗಳೂರಿನ ನಿಗದಿತ ಆಸ್ಪತ್ರಗೆ ಏಪ್ರಿಲ್ 24ರಂದು ದಾಖಲಾಗಿದ್ದರು. ಇವರಿಗೆ ಮಧುಮೇಹ ಸಮಸ್ಯೆ ಕೂಡ ಇದ್ದು, ಈ ಹಿಂದೆ ಕ್ಷಯರೋಗ ಇತ್ತು ಎಂದು ವೈದ್ಯಕೀಯ ದಾಖಲೆ ಇದೆ. ಇಂದು ರೋಗಿ-465 ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ಕೊರೊನಾಗೆ ಮತ್ತೊಂದು ಬಲಿ

    ಸೋಂಕಿತರ ಮಾಹಿತಿ:
    ರೋಗಿ-501: ಪಾಣೆ ಮಂಗಳೂರು, ದಕ್ಷಿಣ ಕನ್ನಡದ 47 ವರ್ಷದ ಮಹಿಳೆ. ರೋಗಿ-432 ಜೊತೆ ಸಂಪರ್ಕ.
    ರೋಗಿ-502: ಕಲಬುರಗಿಯ 65 ವರ್ಷದ ವೃದ್ಧೆ. ರೋಗಿ-422 ಜೊತೆ ಸಂಪರ್ಕ.
    ರೋಗಿ-503: ಕಲಬುರಗಿಯ 7 ವರ್ಷದ ಬಾಲಕ. ರೋಗಿ-425 ಜೊತೆ ದ್ವಿತೀಯ ಸಂಪರ್ಕ.

    ಇಂದು ಆಸ್ಪತ್ರೆಯಿಂದ ಒಟ್ಟು 24 ಮಂದಿ ಬಿಡುಗಡೆಗೊಂಡಿದ್ದಾರೆ. ಬೆಂಗಳೂರು ನಗರದಲ್ಲಿ 8 , ಮೈಸೂರಿನಲ್ಲಿ 4 , ಬಾಗಲಕೋಟೆಯಲ್ಲಿ 4, ಮಂಡ್ಯದಲ್ಲಿ 4, ಬೆಳಗಾವಿಯಲ್ಲಿ 4, ಬಳ್ಳಾರಿಯಲ್ಲಿ 2 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.

    ಕರ್ನಾಟಕದಲ್ಲಿ ಪತ್ತೆಯಾಗಿರುವ ಸೋಂಕಿತ ಪ್ರಕರಣದಲ್ಲಿ 9 ಮಂದಿ ಕೇರಳದವರಾಗಿದ್ದಾರೆ. ಇವರನ್ನು ಕರ್ನಾಟದ ವಿಮಾನ ನಿಲ್ದಾಣದ ಮೂಲಕ ಕೇರಳಕ್ಕೆ ಪ್ರಯಾಣಿಸುತ್ತಿರುವಾಗ ಪತ್ತೆ ಮಾಡಿ, ಇಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.

    ಕರ್ನಾಟಕದಲ್ಲಿ ಸದ್ಯ 302 ಮಂದಿ ಕೊರೊನಾದಿಂದ ಬಳಲುತ್ತಿದ್ದಾರೆ. ಇವರಲ್ಲಿ ಓರ್ವ ಗರ್ಭಿಣಿ ಸೇರಿ ಒಟ್ಟು 296 ಮಂದಿ ನಿಗದಿತ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡುಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 6 ಮಂದಿ ಸ್ಥಿತಿ ಗಂಭಿರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆಗೆ ಒಳಪಟ್ಟಿದ್ದಾರೆ.

  • ಬೆಂಗ್ಳೂರಿನಲ್ಲಿ ಕೊರೊನಾಗೆ ಮತ್ತೊಂದು ಬಲಿ

    ಬೆಂಗ್ಳೂರಿನಲ್ಲಿ ಕೊರೊನಾಗೆ ಮತ್ತೊಂದು ಬಲಿ

    ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ರಾಜ್ಯದಲ್ಲಿ ಮತ್ತೊಂದು ಬಲಿ ಪಡೆದುಕೊಂಡಿದ್ದು, ಸಾವಿನ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಈವರೆಗೂ 6 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ.

    ಬೆಂಗಳೂರಿನ ಹಂಪಿನಗರ ನಿವಾಸಿ 47 ವರ್ಷದ ಮಹಿಳೆ (ರೋಗಿ-465) ಮೃತ ದುರ್ದೈವಿ. ಶೀತ, ನೆಗಡಿ, ಕೆಮ್ಮು ಮತ್ತು ನ್ಯೂಮೊನಿಯಾ ಲಕ್ಷಣದಿಂದ ಬಳಲುತ್ತಿದ್ದ ಮಹಿಳೆಗೆ ಕೊರೊನಾ ಪರೀಕ್ಷೆ ಮಾಡಲಾಗಿತ್ತು. ಎರಡು ದಿನಗಳ ಹಿಂದೆ ಮಹಿಳೆಯ ರಿಪೋರ್ಟ್ ನಲ್ಲಿ ಕೊರೊನಾಪಾಸಿಟಿವ್ ಬಂದಿತ್ತು. ಹೀಗಾಗಿ ಆಕೆಯ ಸಂಪರ್ಕದಲ್ಲಿದ್ದ ಕುಟುಂಬಸ್ಥರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.

    ಮಹಿಳೆಯ ಸಂಪರ್ಕದಲ್ಲಿದ್ದ ಆಕೆಯ ಅಕ್ಕ, ಮಗ ಮತ್ತು ಅಳಿಯನಿಗೆ (ರೋಗಿ-498, 499 ಹಾಗೂ 500) ಸೋಂಕು ತಗುಲಿದೆ. ಎಲ್ಲರನ್ನೂ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ಕೊಡಲಾಗುತ್ತಿತ್ತು. ಮೃತ ಮಹಿಳೆಯು ಹಂಪಿನಗರ, ದೀಪಾಂಜಲಿ ನಗರ ಮತ್ತು ಮೂಡಲ ಪಾಳ್ಯದಲ್ಲಿ ಓಡಾಡಿದ್ದಳು. ಹೀಗಾಗಿ ಈ ಮೂರೂ ಪ್ರದೇಶಗಳಲ್ಲಿ ಹೆಮ್ಮಾರಿ ಕಂಟಕ ಉಂಟು ಮಾಡುವ ಲಕ್ಷಣಗಳು ಕಂಡುಬರುತ್ತಿವೆ.

    https://twitter.com/sriramulubjp/status/1254377747280883713

    ಮೃತ ಮಹಿಳೆ (ರೋಗಿ-465) ಪ್ರಯಾಣದ ಹಿನ್ನಲೆ ಬೆಂಗಳೂರಿಗರನ್ನು ಬೆಚ್ಚಿಬೀಳಿಸುವಂತಿದೆ. ನೆಗಡಿ, ಕೆಮ್ಮು, ಶೀತ ಜ್ವರದಿಂದ ಬಳಲುತ್ತಿದ್ದ ಮಹಿಳೆಯ ಪತಿ ಏಪ್ರಿಲ್-2 ರಂದು ಮೃತಪಟ್ಟಿದ್ದ. ಹೀಗಾಗಿ ಕುಟುಂಬವು ಟಿ.ಆರ್ ಮಿಲ್‍ನ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಿತ್ತು. 10 ದಿನದ ಬಳಿಕ ಮಹಿಳೆಗೂ ನೆಗಡಿ, ಕೆಮ್ಮು, ಶೀತ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ರಾಜಾಜಿನಗರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಳು. ಅಷ್ಟೇ ಅಲ್ಲದೆ ಮಹಿಳೆಯು ಹಂಪಿನಗರದಿಂದ ದೀಪಾಂಜಲಿ ನಗರದ ಅಣ್ಣನ ಮನೆಯಲ್ಲಿ ಉಳಿದುಕೊಂಡಿದ್ದಳು. ಹಾಗಾಗಿ ಮಹಿಳೆಯ ಅಣ್ಣನ ಕುಟುಂಬದವರಿಗೂ ಕೊರೊನಾ ಸೋಂಕು ತಗುಲಿರುವ ಸಾಧ್ಯತೆ ಇದೆ.

  • ಕೊರೊನಾ ವಿರುದ್ಧ ಅಜ್ಜನ ಸವಾಲು!

    ಕೊರೊನಾ ವಿರುದ್ಧ ಅಜ್ಜನ ಸವಾಲು!

    ಬೆಂಗಳೂರು: ಹೆಮ್ಮಾರಿ ಕೊರೊನಾ ವೈರಸ್ ವಿರುದ್ಧ 90 ವರ್ಷದ ವೃದ್ಧ ಸವಾಲು ಹಾಕಿದ್ದು, ಗುಣಮುಖನಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲು ಅಜ್ಜ ಎಲ್ಲ ರೀತಿಯ ಹೋರಾಟ ನಡೆಸುತ್ತಿದ್ದಾನೆ.

    ಬೆಂಗಳೂರಿನ ಹೊಂಗಸಂದ್ರದಲ್ಲಿ ವಾಸವಿದ್ದ ಬಿಹಾರ ಮೂಲದ ಕಾರ್ಮಿಕ ರೋಗಿ-419ರ ಸಂಪರ್ಕದಿಂದ ವೃದ್ಧನಿಗೆ ಸೋಂಕು ತಗುಲಿರುವುದು ಶನಿವಾರ ದೃಢಪಟ್ಟಿತ್ತು. ಹೀಗಾಗಿ ಸದ್ಯ ಆತನನ್ನು ಪ್ರತ್ಯೇಕವಾಗಿಸಿರಿ ಚಿಕಿತ್ಸೆ ಕೊಡಲಾಗುತ್ತಿದೆ.

    ವೃದ್ಧನಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ವೈದ್ಯರಿಗೆ ಎಲ್ಲವೂ ಕಷ್ಟ ಕಷ್ಟವಾಗಿದೆ. ಆದರೂ ಅಜ್ಜ 90 ವರ್ಷ ವಯಸ್ಸಿನಲ್ಲಿ ಕೊರೊನಾ ವಿರುದ್ಧ ಹೋರಾಟ ನಡೆಸಿದ್ದಾನೆ. ಈ ನಿಟ್ಟಿನಲ್ಲಿ ವೈದ್ಯರು ವಯೋ ಸಹಜ ಕಾಯಿಲೆ ನೋಡಿಕೊಂಡು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ. ಡಯಟ್ ಫುಡ್‍ನಲ್ಲೂ ಎಲ್ಲ ಭಿನ್ನವಾಗಿದೆ. ಡಯಾಬಿಟಿಕ್, ಬಿಪಿ ವ್ಯತ್ಯಾಸವಾಗದಂತೆ ನಿಗದಿತ ಪ್ರಮಾಣದಲ್ಲಿ ವೃದ್ಧನಿಗೆ ಊಟ ಕೊಡಲಾಗುತ್ತಿದೆ.

    ವೃದ್ಧನಿಗೆ ಮರುಜನ್ಮ ನೀಡುವುದು ವೈದ್ಯರಿಗೆ ಬಾರಿ ಸವಾಲಿನ ಕೆಲಸವಾಗಿದೆ. ಆದರೆ ವೈದ್ಯರ ಮಾತನ್ನು ಅಜ್ಜ ಚಾಚು ತಪ್ಪದೇ ಆರೋಗ್ಯಕ್ಕಾಗಿ ಪಾಲಿಸುತ್ತಿದ್ದಾನೆ. ಹೀಗಾಗಿ ವೃದ್ಧನಲ್ಲಿ ರೋಗ ನಿರೋಧಕ ಶಕ್ತಿ ಪ್ರಮಾಣ ಕೊಂಚ ಬ್ಯಾಲೆನ್ಸಿಂಗ್ ಬಂದಿದೆ.

  • ‘ಇದೇ ಕೊನೆಯ ಎಚ್ಚರಿಕೆ ನಿನಗೆ’ – ರೇಣುಕಾಚಾರ್ಯಗೆ ಹಿಗ್ಗಾಮುಗ್ಗ ಕ್ಲಾಸ್ ತೆಗೆದುಕೊಂಡ ಸಿಎಂ

    ‘ಇದೇ ಕೊನೆಯ ಎಚ್ಚರಿಕೆ ನಿನಗೆ’ – ರೇಣುಕಾಚಾರ್ಯಗೆ ಹಿಗ್ಗಾಮುಗ್ಗ ಕ್ಲಾಸ್ ತೆಗೆದುಕೊಂಡ ಸಿಎಂ

    ಬೆಂಗಳೂರು: ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಆಶಾ ಕಾರ್ಯಕರ್ತೆಯರ ಸಭೆ ನಡೆಸಿದ್ದ ಶಾಸಕ ರೇಣುಕಾಚಾರ್ಯ ಅವರಿಗೆ ಸಿಎಂ ಬಿಎಸ್ ಯಡಿಯೂರಪ್ಪ ಹಿಗ್ಗಾಮುಗ್ಗ ಕ್ಲಾಸ್ ತೆಗೆದುಕೊಂಡು ಎಚ್ಚರಿಕೆ ನೀಡಿದ್ದಾರೆ.

    ರೇಣುಕಾಚಾರ್ಯ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಆಶಾ ಕಾರ್ಯಕರ್ತೆಯರ ಸಭೆ ನಡೆಸಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದನ್ನು ನೋಡಿದ ಸಿಎಂ ಬಿಎಸ್‍ವೈ ಇಂದು ರೇಣುಕಾಚಾರ್ಯರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಏನು ಮಾಡುತ್ತಿದ್ದೀಯ ನೀನು? ಇಡೀ ದೇಶದಲ್ಲೇ ಸಾಮಾಜಿಕ ಅಂತರದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ನೀನು ಮಾತ್ರ ಅದನ್ನು ಕಾಪಾಡಿಕೊಳ್ಳದೆ ಸಭೆ ಮಾಡಿದ್ದೀಯ. ಶಾಸಕನಾಗಿ ಜವಾಬ್ದಾರಿ ಬೇಡವೇ? ಇದೇ ಕೊನೆಯ ಎಚ್ಚರಿಕೆ ನಿನಗೆ, ಇನ್ನೊಮ್ಮೆ ಈ ತಪ್ಪು ಮರುಕಳಿಸಿದರೆ ಸಹಿಸುವುದಿಲ್ಲ ಅಂತ ಸಿಎಂ ರೇಣುಕಾಚಾರ್ಯರಿಗೆ ಕರೆಯಲ್ಲಿಯೇ ಎಚ್ಚರಿಕೆ ನೀಡಿದ್ದಾರೆ.

  • ಭಾರತದಲ್ಲಿ ಕಿಲ್ಲರ್ ಕೊರೊನಾಗೆ 824 ಮಂದಿ ಬಲಿ – 26 ಸಾವಿರ ದಾಟಿದ ಸೋಂಕಿತರ ಸಂಖ್ಯೆ

    ಭಾರತದಲ್ಲಿ ಕಿಲ್ಲರ್ ಕೊರೊನಾಗೆ 824 ಮಂದಿ ಬಲಿ – 26 ಸಾವಿರ ದಾಟಿದ ಸೋಂಕಿತರ ಸಂಖ್ಯೆ

    – 24 ಗಂಟೆಯಲ್ಲಿ 49 ಸಾವು
    – 1,990 ಹೊಸ ಪ್ರಕರಣಗಳು ಪತ್ತೆ

    ನವದೆಹಲಿ: ಭಾರತದಲ್ಲಿ ದಿನ ಕಳೆದಂತೆ ಕೊರೊನಾ ಅಟ್ಟಹಾಸ ಜೋರಾಗುತ್ತಿದ್ದು, ಸೋಂಕಿತರ ಸಂಖ್ಯೆ 26,496ಕ್ಕೆ ಏರಿದೆ. ಕಳೆದ 24 ಗಂಟೆಯಲ್ಲಿ 49 ಮಂದಿ ಮಹಾಮಾರಿಗೆ ಬಲಿಯಾಗಿದ್ದರೆ, 1,990 ಹೊಸ ಸೋಂಕಿತ ಪ್ರಕರಣಗಳು ದೇಶದಲ್ಲಿ ಪತ್ತೆಯಾಗಿದೆ.

    ಈವರೆಗೆ ಒಟ್ಟು 824 ಮಂದಿಯನ್ನು ಕೊರೊನಾ ವೈರಸ್ ಬಲಿಪಡೆದಿದೆ. ಮಹಾರಾಷ್ಟ್ರ, ದೆಹಲಿ, ಗುಜರಾತ್, ಮಧ್ಯಪ್ರದೇಶ ಮತ್ತು ತೆಲಂಗಾಣ ರಾಜ್ಯದಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ದೇಶದ ವಿವಿಧ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಮಹಾರಾಷ್ಟ್ರ ಒಂದು ರಾಜ್ಯದಲ್ಲಿಯೇ ಶೇ. 13.8ರಷ್ಟು ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಇತ್ತ ಮುಂಬೈ ನಗರದಲ್ಲಿಯೇ ಶೇ. 47.6ರಷ್ಟು ಪ್ರಕರಣಗಳು ವರದಿಯಾಗಿದೆ. ಕೊರೊನಾ ಅತೀ ವೇಗವಾಗಿ ಹರಡುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಗುಜರಾತ್ ಎರಡನೇ ಸ್ಥಾನದಲ್ಲಿದ್ದು, ಅಹಮದಾಬಾದ್‍ನಲ್ಲಿ ಶೇ. 62ರಷ್ಟು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.

    ಮಹಾರಾಷ್ಟ್ರದಲ್ಲಿ 7,628 ಮಂದಿಗೆ ಸೋಂಕು ತಗುಲಿದ್ದು, 323 ಮಂದಿ ಸಾವನ್ನಪ್ಪಿದ್ದಾರೆ. 1,076 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಗುಜರಾತ್‍ನಲ್ಲಿ 3,071 ಮಂದಿ ಕೊರೊನಾಗೆ ತುತ್ತಾಗಿದ್ದು, 133 ಮಂದಿ ಸಾವನ್ನಪ್ಪಿದ್ದಾರೆ.

    ಇತ್ತ ರಾಷ್ಟ್ರ ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ 2,625ಕ್ಕೆ ಏರಿದ್ದು, 54 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ರಾಜಸ್ಥಾನದಲ್ಲಿ 2,141 ಮಂದಿಗೆ ಸೋಂಕು ತಗುಲಿದ್ದು, 35 ಮಂದಿ ಸಾವನ್ನಪ್ಪಿದ್ದಾರೆ. ಹಾಗೆಯೇ ಕರ್ನಾಟಕದಲ್ಲಿ ಈವರೆಗೆ 500 ಮಂದಿ ಕೊರೊನಾಗೆ ತುತ್ತಾಗಿದ್ದು, 18 ಮಂದಿ ಸಾವನ್ನಪ್ಪಿದ್ದಾರೆ. ಈವರೆಗೆ 158 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಕೇರಳದಲ್ಲಿ ಕೊರೊನಾ ಈಗ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ. ಈವರೆಗೆ 458 ಮಂದಿಗೆ ಸೋಂಕು ತಗುಲಿದ್ದು, 4 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಅಲ್ಲದೇ 338 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ ಎಂದು ವರದಿಯಾಗಿದೆ.

  • ಎಡಬಿಡಂಗಿತನ, ರಾಜಕಾರಣ ಮಾಡಿದ್ದು ನಿಮ್ಮದೇ ಸರ್ಕಾರ: ಶೆಟ್ಟರ್ ವಿರುದ್ಧ ಎಚ್‍ಡಿಕೆ ಕಿಡಿ

    ಎಡಬಿಡಂಗಿತನ, ರಾಜಕಾರಣ ಮಾಡಿದ್ದು ನಿಮ್ಮದೇ ಸರ್ಕಾರ: ಶೆಟ್ಟರ್ ವಿರುದ್ಧ ಎಚ್‍ಡಿಕೆ ಕಿಡಿ

    ಬೆಂಗಳೂರು: ಪಾದರಾಯನಪುರ ಪುಂಡರನ್ನ ರಾಮನಗರ ಜೈಲಿಗೆ ಶಿಫ್ಟ್ ಮಾಡಿದ್ದ ವಿಚಾರಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ಮಧ್ಯೆ ವಾಗ್ದಾಳಿ ಜೋರಾಗಿದೆ.

    ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿಕೆ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ”ಜಗದೀಶ್ ಶೆಟ್ಟರ್ ಅವರೇ, ಪಾದರಾಯನಪುರ ಗಲಭೆಕೋರರನ್ನು ರಾಮನಗರ ಜೈಲಿಗೆ ಸ್ಥಳಾಂತರ ಮಾಡುವ ವಿಷಯದಲ್ಲಿ ಎಡಬಿಡಂಗಿತನ ಮತ್ತು ರಾಜಕಾರಣ ಮಾಡಿದ್ದು ನಿಮ್ಮದೇ ಬಿಜೆಪಿ ಸರ್ಕಾರ ಎಂಬುದು ನಿಮಗೆ ಗೊತ್ತಿಲ್ಲವೇ” ಎಂದು ಪ್ರಶ್ನಿಸಿದ್ದಾರೆ.

    ರಾಮನಗರಕ್ಕೆ ಶಿಫ್ಟ್ ಮಾಡಲಾದ ಕೈದಿಗಳ ವಿಚಾರದಲ್ಲಿ ನಾನು ರಾಜಕಾರಣ ಮಾಡುತ್ತಿದ್ದೇನೆ ಎಂದು ಆರೋಪಿಸುವ ನೀವು ಹಿಂದೊಮ್ಮೆ ಮುಖ್ಯಮಂತ್ರಿಯಾಗಿದ್ದವರು. ಕನಿಷ್ಠ ಸಾಮಾನ್ಯ ಜ್ಞಾನ ಇಲ್ಲದವರಂತೆ ಮಾತನಾಡುವುದನ್ನು ಬಿಟ್ಟು ತೆಪ್ಪಗಿರಿ. ನಾನು ಸಣ್ಣ ರಾಜಕಾರಣ ಮಾಡುತ್ತೇನೆ ಎಂದು ದೂಷಿಸುವ ನಿಮ್ಮ ಸರ್ಕಾರ ಮತ್ತ್ಯಾಕೆ ಯು-ಟರ್ನ್ ತೆಗೆದುಕೊಂಡು ಕೈದಿಗಳನ್ನು ಬೆಂಗಳೂರಿಗೆ ಸ್ಥಳಾಂತರಿಸಿತು? ಮೊದಲೇ ಈ ಕೆಲಸ ಮಾಡಿದ್ದರೆ, ನಿಮ್ಮ ಸರ್ಕಾರಕ್ಕೊಂದು ಮರ್ಯಾದೆ ಇರುತ್ತಿತ್ತು ಎಂದು ಗುಡುಗಿದ್ದಾರೆ.

    ರಾಮನಗರ ಜಿಲ್ಲೆಯ ಜನತೆಯಲ್ಲಿ ಆತಂಕ ಸೃಷ್ಟಿಸಿ ಬಿಜೆಪಿ ಸರ್ಕಾರ ಸಾಧಿಸಿದ್ದಾದರೂ ಏನನ್ನ? ರೋಗ ನಿಯಂತ್ರಿಸಬೇಕಾದ ಸರ್ಕಾರವೇ ರೋಗ ಹಂಚಿದ್ದು ಸರ್ಕಾರದ ವೈಫಲ್ಯ ಅಲ್ಲದೆ ಮತ್ತೇನು? ನಿಮ್ಮದು ಸಣ್ಣ ರಾಜಕಾರಣ. ನನ್ನದಲ್ಲ ಎಂದು ಟ್ವೀಟ್ ಮಾಡಿದ್ದಾರೆ.

    ಶೆಟ್ಟರ್ ಹೇಳಿದ್ದೇನು?
    ಧಾರವಾಡದಲ್ಲಿ ಶುಕ್ರವಾರ ಮಾತನಾಡಿದ್ದ ಸಚಿವ ಜಗದೀಶ್ ಶೆಟ್ಟರ್ ಅವರು, ರಾಮನಗರ ಜೈಲು ಬಿಟ್ಟು ಬೇರೆ ಕಡೆ ಪಾದರಾಯನಪುರ ಆರೋಪಿಗಳನ್ನು ಇಟ್ಟರೆ, ಅಲ್ಲಿ ಕೂಡ ಜನ, ಊರು ಹಾಗೂ ಅಧಿಕಾರಿಗಳು ಇದ್ದೇ ಇರುತ್ತಾರೆ. ಇಡೀ ರಾಜ್ಯದಲ್ಲಿ ರಾಮನಗರ ಒಂದೇ ಇದೆ ಎಂದು ಸೀಮಿತವಾಗಿ ನೋಡಬೇಡಿ. ನೀವು ರಾಜ್ಯ ನಾಯಕರು ಹಾಗೂ ಮಾಜಿ ಸಿಎಂ ಆಗಿದ್ದವರು. ಇಡೀ ರಾಜ್ಯದಲ್ಲಿ ಎಲ್ಲಿಟ್ಟರೆ ಏನಾಗುತ್ತೆ ಎನ್ನುವುದನ್ನ ವಿಚಾರ ಮಾಡಬೇಕು ಎಂದು ಹೇಳಿದ್ದರು.

  • ದೇಶದಲ್ಲಿ 25 ಸಾವಿರ ಮಂದಿಗೆ ಕೊರೊನಾ, 779 ಜನ ಬಲಿ

    ದೇಶದಲ್ಲಿ 25 ಸಾವಿರ ಮಂದಿಗೆ ಕೊರೊನಾ, 779 ಜನ ಬಲಿ

    – ಯಾವ ರಾಜ್ಯದಲ್ಲಿ ಎಷ್ಟು ಜನರಿಗೆ ಸೋಂಕು?

    ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಕಳೆದ 24 ಗಂಟೆಯಲ್ಲಿ 1,429 ಮಂದಿಗೆ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 25 ಸಾವಿರ ಗಡಿ ದಾಟಿದೆ. ಇವತ್ತು 57 ಮಂದಿ ಕೊರೊನಾಗೆ ಬಲಿ ಆಗಿದ್ದು, ಮೃತರ ಸಂಖ್ಯೆ 779 ಆಗಿದೆ.

    ಇದುವರೆಗೂ ಮಹಾರಾಷ್ಟ್ರದಲ್ಲಿ 301 ಮಂದಿ ಸಾವನ್ನಪ್ಪಿದ್ದಾರೆ. ಗುಜರಾತ್‍ನಲ್ಲಿ 127, ಮಧ್ಯಪ್ರದೇಶದಲ್ಲಿ 92, ದೆಹಲಿಯಲ್ಲಿ 53, ಆಂಧ್ರ ಪ್ರದೇಶದಲ್ಲಿ 29, ರಾಜಸ್ಥಾನದಲ್ಲಿ 27, ತೆಲಂಗಾಣದಲ್ಲಿ 26 ಮಂದಿ ಬಲಿ ಆಗಿದ್ದಾರೆ. ಉತ್ತರ ಪ್ರದೇಶದ ಸಂತ್ ಕಬೀರ್ ನಗರದಲ್ಲಿ ಒಂದೇ ಕುಟುಂಬದ 18 ಮಂದಿಗೆ ಸೋಂಕು ತಗುಲಿದೆ.

    ಈವರೆಗೂ ಒಟ್ಟು 5,209 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇತ್ತ ಮಹಾರಾಷ್ಟ್ರ, ಗುಜರಾತ್, ದೆಹಲಿ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಮಹಾರಾಷ್ಟ್ರದಲ್ಲಿ 6,817 ಮಂದಿಗೆ ಸೋಂಕು ತಗುಲಿದ್ದರೆ, ಗುಜರಾತ್ 2,815 ಮಂದಿ, ದೆಹಲಿ 2,514 ಜನರು ಮತ್ತು ರಾಜಸ್ಥಾನದಲ್ಲಿ 2,034 ಜನರಿಗೆ ಸೋಂಕು ದೃಢಪಟ್ಟಿದೆ.

    ಯಾವ ರಾಜ್ಯದಲ್ಲಿ ಎಷ್ಟು ಸೋಂಕಿತರು?
    ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು- 27, ಆಂಧ್ರಪ್ರದೇಶ- 1,061, ಅರುಣಾಚಲ ಪ್ರದೇಶ- 1, ಅಸ್ಸಾಂ- 36, ಬಿಹಾರ- 228, ಚಂಡೀಗಢ- 28, ಛತ್ತೀಸ್‍ಗಢ- 36, ದೆಹಲಿ- 2,514, ಗೋವಾ- 7, ಗುಜರಾತ್- 2,815, ಹರಿಯಾಣ- 272, ಹಿಮಾಚಲ ಪ್ರದೇಶ- 40, ಜಮ್ಮು ಮತ್ತು ಕಾಶ್ಮೀರ- 454, ಜಾರ್ಖಂಡ್- 59, ಕರ್ನಾಟಕ- 500, ಕೇರಳ- 451, ಲಡಾಖ್- 20, ಮಧ್ಯಪ್ರದೇಶ- 1,952, ಮಹಾರಾಷ್ಟ್ರ- 6,817, ಮಣಿಪುರ- 2, ಮೇಘಾಲಯ – 12, ಮಿಜೋರಾಂ- 1, ಒಡಿಶಾ- 94, ಪುದುಚೇರಿ- 7, ಪಂಜಾಬ್- 298, ರಾಜಸ್ಥಾನ- 2,034, ತಮಿಳುನಾಡು- 1,755, ತೆಲಂಗಾಣ- 984, ತ್ರಿಪುರ- 2, ಉತ್ತರಾಖಂಡ- 48, ಉತ್ತರ ಪ್ರದೇಶ- 1,778 ಮತ್ತು ಪಶ್ಚಿಮ ಬಂಗಾಳದಲ್ಲಿ- 571 ಮಂದಿಗೆ ಕೊರೊನಾ ದೃಢಪಟ್ಟಿದೆ.

    ಜಗತ್ತಿನಲ್ಲಿ ಡೆಡ್ಲಿ ಕೊರೊನಾ ರಣಕೇಕೆ ಕಳೆದ 5 ತಿಂಗಳಿಂದ ದಿನ ದಿನಕ್ಕೂ ಹೆಚ್ಚುತ್ತಲೇ ಇದೆ. ಜಗತ್ತಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 28.63 ಲಕ್ಷ ದಾಟಿದೆ. ಬಲಿಯಾದವರ ಸಂಖ್ಯೆ 2 ಲಕ್ಷ ತಲುಪಿದೆ. ಕೇವಲ ಅಮೆರಿಕದಲ್ಲಿ 9.25 ಲಕ್ಷ ಮಂದಿಗೆ ಸೋಂಕು ತಗುಲಿದ್ದು, ಮೃತರ ಸಂಖ್ಯೆ 52 ಸಾವಿರ ದಾಟಿದೆ. ಅಂದ್ರೆ ಒಟ್ಟು ಸಾವುಗಳ ನಾಲ್ಕನೇ ಒಂದು ಭಾಗ ಅಮೆರಿಕದಲ್ಲಿಯೇ ಸಂಭವಿಸಿವೆ. ಆದರೆ ಸೋಂಕಿಗೆ ಹೋಲಿಸಿದಲ್ಲಿ ಮರಣಗಳ ಪ್ರಮಾಣ ಅಮೆರಿಕದಲ್ಲಿ ಕಡಿಮೆಯೇ ಇದೆ.

    ಇಟಲಿಯಲ್ಲಿ 25 ಸಾವಿರ, ಸ್ಪೇನ್‍ನಲ್ಲಿ 22 ಸಾವಿರ, ಫ್ರಾನ್ಸ್ ನಲ್ಲಿ 22 ಸಾವಿರ, ಇಂಗ್ಲೆಂಡ್ 19 ಸಾವಿನ ಮಂದಿ ಸಾವನ್ನಪ್ಪಿದ್ದಾರೆ. ಬ್ರೆಜಿಲ್‍ನಲ್ಲಿ ಪರಿಸ್ಥಿತಿ ದಾರುಣವಾಗಿದೆ. ಎಲ್ಲಾ ಆಸ್ಪತ್ರೆಗಳು ಕೊರೊನಾ ರೋಗಿಗಳಿಂದ ತುಂಬಿ ತುಳುಕುತ್ತಿವೆ. ಹೊಸ ಸೋಂಕಿತರನ್ನು ಸೇರಿಸಿಕೊಳ್ಳಲು ಸಾಧ್ಯವಿಲ್ಲದ ಪರಿಸ್ಥಿತಿ ಏರ್ಪಟ್ಟಿದೆ. ಶವಾಗಾರಗಳು, ಸ್ಮಶಾನಗಳು ತುಂಬಿ ಹೋಗಿವೆ. ಬ್ರೆಜಿಲ್‍ನಲ್ಲಿ ಇದುವರೆಗೂ 53 ಸಾವಿರ ಮಂದಿ ಸೋಂಕಿತರಾಗಿದ್ದೂ, 3600 ಮಂದಿ ಬಲಿ ಆಗಿದ್ದಾರೆ. ಬೆಲ್ಜಿಯಂನಲ್ಲಿ ಮೇ 11ಕ್ಕೆ ಲಾಕ್‍ಡೌನ್ ತೆಗೆಯಲು ನಿರ್ಧರಿಸಲಾಗಿದೆ.

  • ಲಾಕ್‍ಡೌನ್ ಸಂಕಷ್ಟದಲ್ಲಿರುವ ಜನರಿಗೆ ಕುದ್ರೋಳಿ ಕ್ಷೇತ್ರದಿಂದ ಸಹಾಯ

    ಲಾಕ್‍ಡೌನ್ ಸಂಕಷ್ಟದಲ್ಲಿರುವ ಜನರಿಗೆ ಕುದ್ರೋಳಿ ಕ್ಷೇತ್ರದಿಂದ ಸಹಾಯ

    ಮಂಗಳೂರು: ಕೊರೊನಾ ಲಾಕ್‍ಡೌನ್‍ನಿಂದಾಗಿ ಸಂಕಷ್ಟದಲ್ಲಿರುವ ಬಡವರು, ನಿರ್ಗತಿಕರಿಗೆ ರಾಜ್ಯದ ಪ್ರಮುಖ ಪುಣ್ಯ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ನಿತ್ಯವೂ ಹಸಿವು ನೀಗಿಸುವ ಮಹತ್ವ ಕಾರ್ಯ ನಡೆಯುತ್ತಿದೆ.

    ಕುದ್ರೋಳಿ ಕ್ಷೇತ್ರದ ಹರಿಕಾರ, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅವರ ಸಲಹೆ ಹಾಗೂ ಮಾರ್ಗದರ್ಶನದಂತೆ ಅಕ್ಕಿ ವಿತರಣೆ ಕಾರ್ಯ ಆರಂಭಗೊಂಡಿದೆ. ಆರಂಭದಲ್ಲಿ 100 ಕ್ವಿಂಟಾಲ್ ಅಕ್ಕಿ ವಿತರಣೆ ಮಾಡುವ ಉದ್ದೇಶ ಹೊಂದಿತ್ತಾದರೂ ನಂತರ ಅದು ವಿಸ್ತರಣೆಗೊಂಡು ಇದುವರೆಗೆ ಒಟ್ಟ 250 ಕ್ವಿಂಟಾಲ್ ಅಕ್ಕಿ ವಿತರಿಸಲಾಗಿದೆ. ಅಷ್ಟೇ ಅಲ್ಲದೆ ನಿತ್ಯವೂ ದೇವಸ್ಥಾನದ ವತಿಯಿಂದ 1,000 ಸಾವಿರ ಮಂದಿಗೆ ಅನ್ನದಾನ ನೀಡಲಾಗುತ್ತಿದೆ.

    ಕುದ್ರೋಳಿ ಕ್ಷೇತ್ರದ ವತಿಯಿಂದ ನೀಡಲಾಗುತ್ತಿರುವ ನೆರವಿಗೆ ಭಕ್ತರು ಕೊಡುಗೈ ದಾನಿಗಳು ನೆರವು ನೀಡುತ್ತಿದ್ದಾರೆ. ದಿನದಿಂದ ದಿನಕ್ಕೆ ಕ್ಷೇತ್ರದ ವತಿಯಿಂದ ನೀಡಲಾಗುತ್ತಿರುವ ಅಕ್ಕಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಕಷ್ಟದಲ್ಲಿರುವ ಎಲ್ಲರಿಗೂ ಅಕ್ಕಿ ವಿತರಣೆ ನಡೆಯಲಿದೆ ಎಂದು ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಆರ್.ಪದ್ಮರಾಜ್ ತಿಳಿಸಿದ್ದಾರೆ. ಮುಜರಾಯಿ ಇಲಾಖೆಗೆ ಸೇರದಿರುವ ಒಂದು ದೇವಸ್ಥಾನ ಈ ರೀತಿಯ ಪುಣ್ಯದ ಕೆಲಸ ಮಾಡುತ್ತಿರುವುದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

  • ರಾಜ್ಯದಲ್ಲಿ ಇಂದು 26 ಮಂದಿಗೆ ಕೊರೊನಾ- ಸೋಂಕಿತರ ಸಂಖ್ಯೆ 500ಕ್ಕೆ ಏರಿಕೆ

    ರಾಜ್ಯದಲ್ಲಿ ಇಂದು 26 ಮಂದಿಗೆ ಕೊರೊನಾ- ಸೋಂಕಿತರ ಸಂಖ್ಯೆ 500ಕ್ಕೆ ಏರಿಕೆ

    – ಬೆಂಗ್ಳೂರಿನ 11 ಮಂದಿ, ಬೆಳಗಾವಿಯ 9 ಜನರಿಗೆ
    – ಬಿಹಾರ ಕಾರ್ಮಿಕನಿಂದ 9 ಜನರಿಗೆ ಕೊರೊನಾ
    – ಬೆಳಗಾವಿಯಲ್ಲೂ ಒಬ್ಬನಿಂದ 9 ಮಂದಿಗೆ ಸೋಂಕು

    ಬೆಂಗಳೂರು: ಹೆಮ್ಮಾರಿ ಕೊರೊನಾ ವೈರಸ್ ರಾಜ್ಯದಲ್ಲಿ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಕಳೆದ 24 ಗಂಟೆಯಲ್ಲಿ ರಾಜ್ಯದ 26 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 500ಕ್ಕೆ ಏರಿಕೆ ಕಂಡಿದೆ.

    ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಇಂದು 11 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಅದರಲ್ಲೂ ಬಿಹಾರ ಕಾರ್ಮಿಕನಿಂದಲೇ 9 ಮಂದಿಗೆ ಸೋಂಕು ತಗುಲಿದೆ. ಬೆಳಗಾವಿಯಲ್ಲೂ ಒಬ್ಬ ಸೋಂಕಿತನಿಂದ 9 ಮಂದಿಗೆ ಕೊರೊನಾ ಬಂದಿದೆ.

    ಬೆಂಗಳೂರಿನಲ್ಲಿ 13 ಜನರಿಗೆ ಹಾಗೂ ಬೆಳಗಾವಿಯಲ್ಲಿ 9 ಮಂದಿಗೆ ಕೊರೊನಾ ದೃಢಪಟ್ಟಿದೆ. ಮಂಡ್ಯ, ಮೈಸೂರು, ದಕ್ಷಿಣ ಕನ್ನಡ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ತಲಾ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಇದುವರೆಗೂ ರಾಜ್ಯದಲ್ಲಿ 158 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಹಾಗೂ 18 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

    ಸೋಂಕಿತರ ಮಾಹಿತಿ:
    1. ರೋಗಿ-475: ಬೆಂಗಳೂರಿನ 34 ವರ್ಷದ ಪುರುಷ. ಬಿಬಿಎಂಪಿ ಕಂಟೈನ್‍ಮೆಂಟ್ ಝೋನ್‍ಗೆ ಭೇಟಿ
    2. ರೋಗಿ-476: ಬೆಂಗಳೂರಿನ 37 ವರ್ಷದ ಪುರುಷ. ರೋಗಿ 419ರ ಜೊತೆ ಸಂಪರ್ಕ
    3. ರೋಗಿ-477: ಬೆಂಗಳೂರಿನ 21 ವರ್ಷದ ಯುವಕ. ರೋಗಿ 419ರ ಜೊತೆ ಸಂಪರ್ಕ
    4. ರೋಗಿ-478: ಬೆಂಗಳೂರಿನ 14 ವರ್ಷದ ಹುಡುಗ. ರೋಗಿ 419ರ ಜೊತೆ ಸಂಪರ್ಕ
    5. ರೋಗಿ-479: ಬೆಂಗಳೂರಿನ 19 ವರ್ಷದ ಯುವತಿ. ರೋಗಿ 419ರ ಜೊತೆ ಸಂಪರ್ಕ
    6. ರೋಗಿ-480: ಬೆಂಗಳೂರಿನ 28 ವರ್ಷದ ಯುವಕ. ರೋಗಿ 419ರ ಜೊತೆ ಸಂಪರ್ಕ
    7. ರೋಗಿ-481: ಮಂಡ್ಯದ 37 ವರ್ಷದ ಪುರುಷ. ರೋಗಿ 78ರ ಜೊತೆ ಸಂಪರ್ಕ

    8. ರೋಗಿ-482: ಬೆಳಗಾವಿ ಜಿಲ್ಲೆ ಹಿರೆಬಾಗೆವಾಡಿಯ 45 ವರ್ಷದ ಪುರುಷ. ರೋಗಿ 128ರ ದ್ವಿತೀಯ ಸಂಪರ್ಕ
    9. ರೋಗಿ-483: ಬೆಳಗಾವಿ ಜಿಲ್ಲೆ ಹಿರೆಬಾಗೆವಾಡಿಯ 38 ವರ್ಷದ ಪುರುಷ. ರೋಗಿ 128ರ ದ್ವಿತೀಯ ಸಂಪರ್ಕ
    10. ರೋಗಿ-484: ಬೆಳಗಾವಿ ಜಿಲ್ಲೆ ಹಿರೆಬಾಗೆವಾಡಿಯ 80 ವರ್ಷದ ವೃದ್ಧೆ. ರೋಗಿ 128ರ ದ್ವಿತೀಯ ಸಂಪರ್ಕ
    11. ರೋಗಿ-485: ಬೆಳಗಾವಿ ಜಿಲ್ಲೆ ಹಿರೆಬಾಗೆವಾಡಿಯ 55 ವರ್ಷದ ಮಹಿಳೆ. ರೋಗಿ 128ರ ದ್ವಿತೀಯ ಸಂಪರ್ಕ
    12. ರೋಗಿ-486: ಬೆಳಗಾವಿ ಜಿಲ್ಲೆ ಹಿರೆಬಾಗೆವಾಡಿಯ 42 ವರ್ಷದ ಮಹಿಳೆ. ರೋಗಿ 128ರ ದ್ವಿತೀಯ ಸಂಪರ್ಕ
    13. ರೋಗಿ-487: ಬೆಳಗಾವಿ ಜಿಲ್ಲೆ ಹಿರೆಬಾಗೆವಾಡಿಯ 39 ವರ್ಷದ ಮಹಿಳೆ. ರೋಗಿ 128ರ ದ್ವಿತೀಯ ಸಂಪರ್ಕ

    14. ರೋಗಿ-488: ಚಿಕ್ಕಬಳ್ಳಾಪುರದ 18 ವರ್ಷದ ಹುಡುಗ. ಆಂಧ್ರ ಪ್ರದೇಶದ ಹಿಂದೂಪುರ ಮತ್ತು ಅನಂತಪುರಕ್ಕೆ ಭೇಟಿ
    15. ರೋಗಿ-489: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ 33 ವರ್ಷದ ಮಹಿಳೆ. ರೋಗಿ 409ರೊಂದಿಗೆ ಸಂಪರ್ಕ
    16. ರೋಗಿ-490: ಬೆಂಗಳೂರಿನ 52 ವರ್ಷದ ಮಹಿಳೆ. ರೋಗಿ-419ರ ದ್ವಿತೀಯ ಸಂಪರ್ಕ
    17. ರೋಗಿ-491: ಬೆಂಗಳೂರಿನ 6 ವರ್ಷದ ಬಾಲಕ. ರೋಗಿ-419ರ ದ್ವಿತೀಯ ಸಂಪರ್ಕ
    18. ರೋಗಿ-492: ಬೆಂಗಳೂರಿನ 90 ವರ್ಷದ ವೃದ್ಧೆ. ರೋಗಿ-419ರ ದ್ವಿತೀಯ ಸಂಪರ್ಕ
    19. ರೋಗಿ-493: ಬೆಂಗಳೂರಿನ 27 ವರ್ಷದ ಮಹಿಳೆ. ರೋಗಿ-419ರ ದ್ವಿತೀಯ ಸಂಪರ್ಕ

    20. ರೋಗಿ-494: ಬೆಳಗಾವಿ ಜಿಲ್ಲೆ ಹಿರೆಬಾಗೆವಾಡಿಯ 20 ವರ್ಷದ ಯುವಕ. ರೋಗಿ 128ರ ದ್ವಿತೀಯ ಸಂಪರ್ಕ
    21. ರೋಗಿ-495: ಬೆಳಗಾವಿ ಜಿಲ್ಲೆ ಹಿರೆಬಾಗೆವಾಡಿಯ 8 ವರ್ಷದ ಬಾಲಕ. ರೋಗಿ-128ರ ದ್ವಿತೀಯ ಸಂಪರ್ಕ
    22. ರೋಗಿ-496: ಬೆಳಗಾವಿ ಜಿಲ್ಲೆ ಹಿರೆಬಾಗೆವಾಡಿಯ 30 ವರ್ಷದ ಮಹಿಳೆ. ರೋಗಿ-128ರ ದ್ವಿತೀಯ ಸಂಪರ್ಕ
    23. ರೋಗಿ-497: ಮೈಸೂರು ಜಿಲ್ಲೆ ನಂಜನಗೂಡಿನ 50 ವರ್ಷದ ಮಹಿಳೆ. ರೋಗಿ-382ರ ಸಂಪರ್ಕ
    24. ರೋಗಿ-498: ಬೆಂಗಳೂರಿನ 27 ವರ್ಷದ ಮಹಿಳೆ. ರೋಗಿ-465ರ ಸಂಪರ್ಕ
    25. ರೋಗಿ-499: ಬೆಂಗಳೂರಿನ 27 ವರ್ಷದ ಮಹಿಳೆ. ರೋಗಿ-465ರ ಸಂಪರ್ಕ
    26. ರೋಗಿ-500: ಬೆಂಗಳೂರಿನ 66 ವರ್ಷದ ಮಹಿಳೆ. ರೋಗಿ-465ರ ಸಂಪರ್ಕ

  • ರಸ್ತೆಯಲ್ಲಿ ನೋಟುಗಳು ಬಿದ್ದಿದ್ರೂ ಮುಟ್ಟದ ಜನ – ಪೊಲೀಸರಿಗೆ ಮಾಹಿತಿ

    ರಸ್ತೆಯಲ್ಲಿ ನೋಟುಗಳು ಬಿದ್ದಿದ್ರೂ ಮುಟ್ಟದ ಜನ – ಪೊಲೀಸರಿಗೆ ಮಾಹಿತಿ

    ರಾಯಚೂರು: ಮಹಾಮಾರಿ ಕೊರೊನಾ ವೈರಸ್ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನೋಟುಗಳು ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. 500 ರೂಪಾಯಿ ಮುಖಬೆಲೆಯ ನೋಟುಗಳು ಬೀದಿಯಲ್ಲಿ ಬಿದ್ದಿದ್ದಕ್ಕೆ ಜನ ಆತಂಕಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ರಾಯಚೂರಿನ ನೇತಾಜಿ ನಗರದಲ್ಲಿ 500 ರೂಪಾಯಿ ಮುಖಬೆಲೆಯ 5 ನೋಟುಗಳು ರಸ್ತೆಯಲ್ಲಿ ಬಿದ್ದಿದ್ದವು. ಇದನ್ನು ನೋಡಿದ ಸ್ಥಳೀಯರು ಆತಂಕಗೊಂಡಿದ್ದಾರೆ. ಅಲ್ಲದೇ ರಸ್ತೆಯಲ್ಲಿ ಹಣ ಬಿದ್ದಿದ್ದರು ಮುಟ್ಟದ ಸಾರ್ವಜನಿಕರು ಪೊಲೀಸರ ಗಮನಕ್ಕೆ ತಂದಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ನೇತಾಜಿ ನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ನೋಟುಗಳನ್ನ ತೆಗೆದುಕೊಂಡು ಹೋಗುವಂತೆ ಸ್ಥಳೀಯರು ಪೊಲೀಸರಿಗೆ ಮನವಿ ಮಾಡಿದ್ದಾರೆ. ಪೊಲೀಸರು ನೋಟುಗಳನ್ನ ಪ್ಲಾಸ್ಟಿಕ್ ಬ್ಯಾಗ್‍ನಲ್ಲಿ ಸಂಗ್ರಹಿಸಿಕೊಂಡಿದ್ದು, ನೋಟುಗಳು ರಸ್ತೆಯಲ್ಲಿ ಬಿದ್ದಿರುವ ಬಗ್ಗೆ ವಿಚಾರಣೆ ನಡೆಸಿದ್ದಾರೆ.