Tag: Coronavirus

  • ಸೆಕ್ಸ್‌ನಿಂದ ಕೊರೊನಾ ಬರಲ್ಲ!

    ಸೆಕ್ಸ್‌ನಿಂದ ಕೊರೊನಾ ಬರಲ್ಲ!

    ವಾಷಿಂಗ್ಟನ್: ಸೂಕ್ತ ಸುರಕ್ಷತೆ ಇಲ್ಲದೆ ಕೊರೊನಾ ಸೋಂಕಿತ ವ್ಯಕ್ತಿಯನ್ನು ತಬ್ಬಿಕೊಳ್ಳುವುದು ಅಥವಾ ಹಸ್ತಲಾಘವ ಮಾಡಲು ಸಾಧ್ಯವಿಲ್ಲ. ಆದರೆ ಹೊಸ ಸಂಶೋಧನೆಯು ಸೆಕ್ಸ್‌ನಿಂದ ಸೋಂಕು ಹರಡುವುದಿಲ್ಲ ಎಂದು ತಿಳಿಸಿದೆ.

    ಈ ಕುರಿತು ಇತ್ತೀಚೆಗೆ ಆನ್‍ಲೈನ್ ಜರ್ನಲ್ ‘ಫರ್ಟಿಲಿಟಿ ಅಂಡ್ ಸ್ಟೆರಿಲಿಟಿ’ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ತಿಳಿಸಲಾಗಿದೆ. ಕೊರೊನಾ ವೈರಸ್‍ನಿಂದಾಗಿ ಜಗತ್ತಿನಾದ್ಯಂತ ಭಾರೀ ಪ್ರಮಾಣದ ಸಾವು ನೋವು ಸಂಭವಿಸಿದೆ. ಈ ಮಧ್ಯೆ ಚೀನಾದಲ್ಲಿ ಕೊರೊನಾ ಸೋಂಕಿತ 34 ಪುರುಷರಿಂದ ವೀರ್ಯ ಮಾದರಿಗಳನ್ನು ಸಂಶೋಧಕರು ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದರು. ರಿಪೋರ್ಟ್ ನಲ್ಲಿ ಯಾವುದೇ ವೀರ್ಯ ಮಾದರಿಗಳಲ್ಲಿ ಕೊರೊನಾ ವೈರಸ್ ಪತ್ತೆಯಾಗಿಲ್ಲ. ಜೊತೆಗೆ ಪುರುಷರ ವೃಷಣಗಳಲ್ಲಿ ವೈರಸ್ ಇರುವುದಿಲ್ಲ ಎಂದು ಹೇಳಿದೆ. ಇದನ್ನೂ ಓದಿ: ಲಾಕ್‍ಡೌನ್ ಎಫೆಕ್ಟ್- ಸಿಗರೇಟ್ ಕೊಡದಿದ್ದಕ್ಕೆ ಬರ್ಬರವಾಗಿ ಕೊಲೆಗೈದ್ರು

    “ಈ ಸಣ್ಣ, ಪ್ರಾಥಮಿಕ ಅಧ್ಯಯನದಲ್ಲಿ ಇದು ಕೊರೊನಾ ವೈರಸ್ ವೃಷಣಗಳಲ್ಲಿ ಅಥವಾ ವೀರ್ಯದಲ್ಲಿ ಕಾಣಿಸುವುದಿಲ್ಲ ಎಂಬುದು ಒಂದು ಪ್ರಮುಖ ಶೋಧನೆಯಾಗಿದೆ” ಎಂದು ಅಮೆರಿಕದ ಉತಾಹ್ ವಿಶ್ವವಿದ್ಯಾಲಯದ ಸಹ-ಪ್ರಾದ್ಯಾಪಕ ಡಾ.ಜೇಮ್ಸ್ ಹೊಟಾಲಿಂಗ್ ತಿಳಿಸಿದ್ದಾರೆ.

    “ಕೊರೊನಾ ಲೈಂಗಿಕವಾಗಿ ಹರಡಿದರೆ ಅದು ರೋಗ ತಡೆಗಟ್ಟುವಿಕೆಯ ಮೇಲೆ ಪ್ರಮುಖ ಪರಿಣಾಮಗಳನ್ನು ಬೀರುತ್ತದೆ. ಅಷ್ಟೇ ಅಲ್ಲದೆ ಮನುಷ್ಯನಿಗೆ ಸುದೀರ್ಘ ಕಾಲ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು” ಎಂದು ಹೇಳಿದ್ದಾರೆ.

    “ಕೋವಿಡ್-19ನಿಂದ ತೀವ್ರವಾಗಿ ಅನಾರೋಗ್ಯಕ್ಕೆ ತುತ್ತಾದ ವ್ಯಕ್ತಿಯು ಹೆಚ್ಚಿನ ಪ್ರಮಾಣದಲ್ಲಿ ವೈರಸ್ ಹರಡಬಹುದು. ಇದು ವೀರ್ಯಕ್ಕೆ ಸೋಂಕು ತಗಲುವ ಹೆಚ್ಚಿನ ಸಂಭವನೀಯತೆಗೆ ಕಾರಣವಾಗಬಹುದು. ಅದಕ್ಕೆ ನಮ್ಮಲ್ಲಿ ಈಗ ಉತ್ತರವಿಲ್ಲ” ಎಂದು ಹೊಟಾಲಿಂಗ್ ತಿಳಿಸಿದ್ದಾರೆ.

    “ಸಂಶೋಧನೆಗಳ ಹೊರತಾಗಿಯೂ ನಿಕಟ ಸಂಪರ್ಕ, ಕೆಮ್ಮು, ಸೀನುವಿಕೆ ಮತ್ತು ಚುಂಬನದ ಮೂಲಕ ಕೊರೊನಾ ವೈರಸ್ ಹರಡುವ ಅಪಾಯವನ್ನು ಇನ್ನೂ ಹೆಚ್ಚಿಸುತ್ತದೆ. ಕೆಲವು ಸೋಂಕಿತರಿಗೆ ರೋಗಲಕ್ಷಣಗಳು ಕಂಡುಬರುವುದಿಲ್ಲ, ಅವರು ಆರೋಗ್ಯಕರವಾಗಿ ಕಾಣಿಸಬಹುದು. ಆದರೆ ಕೊರೊನಾ ವೈರಸ್ ಅನ್ನು ಇತರರಿಗೆ ಹರಡಬಹುದು” ಎಂದು ಅವರು ಎಚ್ಚರಿಸಿದ್ದಾರೆ.

  • ಆಶಾ ಕಾರ್ಯಕರ್ತೆಗೆ ಕೊಲೆ ಬೆದರಿಕೆ- ಇಬ್ಬರ ಬಂಧನ

    ಆಶಾ ಕಾರ್ಯಕರ್ತೆಗೆ ಕೊಲೆ ಬೆದರಿಕೆ- ಇಬ್ಬರ ಬಂಧನ

    ಉಡುಪಿ: ಜಿಲ್ಲೆಯಲ್ಲಿ ಮತ್ತೊಮ್ಮೆ ಕೊರೊನಾ ವಾರಿಯರ್ಸ್ ಮೇಲೆ ಬೆದರಿಕೆ ಪ್ರಕರಣ ಮರುಕಳಿಸಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಆಶಾ ಕಾರ್ಯಕರ್ತೆಯನ್ನ ಬೆದರಿಸಿದ ಘಟನೆ ನಡೆದಿದೆ.

    ಕೊರೊನಾ ಲಾಕ್‍ಡೌನ್ ನಡುವೆ ಬೆಂಗಳೂರಿಂದ ಬಂದಿರುವ ಯುವಕ ಸಂದೀಪ್ ಮೇಸ್ತ ಎಂಬಾತನಿಗೆ ಆಶಾ ಕಾರ್ಯಕರ್ತೆ ಲಕ್ಷ್ಮೀ ಹೋಂ ಕ್ವಾರಂಟೈನ್ ವಿಧಿಸಿದ್ದರು. ಆದರೆ ಸಂದೀಪ್ ಕ್ವಾರಂಟೈನ್ ಉಲ್ಲಂಘಿಸಿ ಬೇಕಾಬಿಟ್ಟಿ ಓಡಾಡುತ್ತಿದ್ದ. ಹೀಗಾಗಿ ಸಂದೀಪ್ ನನ್ನ ಮನೆಯಲ್ಲಿರುವಂತೆ ಸೂಚನೆ ನೀಡಿದ್ದೇ ತಡ ಸಂದೀಪ್ ಹಾಗೂ ಆತನ ಗೆಳೆಯ ಮಹೇಶ್ ಖಾರ್ವಿ ಕೊಲೆ ಬೆದರಿಕೆ ಒಡ್ಡಿದ್ದಾರೆ.

    ಕುಂದಾಪುರ ತಾಲೂಕಿನ ಮುದ್ದುಗಡ್ಡೆಯಲ್ಲಿ ಬದುಕಲು ಬಿಡಲ್ಲ ಎಂದು ಬೆದರಿಕೆ ಒಡ್ಡಲಾಗಿದೆ. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

    ಕಳೆದ ಕೆಲ ದಿನದ ಹಿಂದೆ 22ರಂದು ಉಡುಪಿ ಜಿಲ್ಲೆಯ ಪಡುಬಿದ್ರಿ ತಾಲೂಕಿನ ಉಚ್ಚಿಲದಲ್ಲಿ ಆರೋಗ್ಯ ಸಹಾಯಕಿ ಶ್ಯಾಮಲಾ ಅವರ ಮೇಲೆ ಹಲ್ಲೆ ಯತ್ನ, ಜೀವ ಬೆದರಿಕೆ ಘಟನೆ ನಡೆದಿತ್ತು. ಮಾಸ್ಕ್ ಹಾಕಿ ಎನ್ನುವ ಬುದ್ಧಿ ಮಾತು ಹಾಗೂ ಹೊರ ಜಿಲ್ಲೆಯಿಂದ ಬರುವ ಬಗ್ಗೆ ಪ್ರಶ್ನಿಸಿದಕ್ಕೆ ಈ ಪ್ರಕರಣ ನಡೆದಿತ್ತು.

    ವಾರಿಯರ್ಸ್ ಮೇಲೆ ಬೆದರಿಕೆ, ಹಲ್ಲೆ ನಡೆದರೆ ಕಠಿಣ ಶಿಕ್ಷೆಗೆ ಒಳಪಡಿಸುವುದಾಗಿ ಸರ್ಕಾರ ಎಚ್ಚರಿಕೆ ನೀಡಿದ ಬೆನ್ನಲ್ಲೇ ಮತ್ತೆ ಬೆದರಿಕೆ ಪ್ರಕರಣ ನಡೆದಿದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಉಸ್ತುವಾರಿ ಜಿಲ್ಲೆಯಲ್ಲಿ ಎರಡು ಘಟನೆಗಳು ನಡೆದು ಪ್ರಕರಣಗಳು ದಾಖಲಾಗಿದೆ.

  • ಲಾಕ್‍ಡೌನ್ ನಿರ್ಧಾರ ರಾಜ್ಯಗಳಿಗೆ ಬಿಟ್ಟರೆ ಬಿಎಸ್‍ವೈ ಪ್ಲಾನ್ ಏನು?

    ಲಾಕ್‍ಡೌನ್ ನಿರ್ಧಾರ ರಾಜ್ಯಗಳಿಗೆ ಬಿಟ್ಟರೆ ಬಿಎಸ್‍ವೈ ಪ್ಲಾನ್ ಏನು?

    ಬೆಂಗಳೂರು: ಹೆಮ್ಮಾರಿ ಕೊರೊನಾ ವೈರಸ್ ಹಿನ್ನೆಲೆ ಮೇ 3ರವರೆಗೆ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದೆ. ಆ ಬಳಿಕ ಕೇಂದ್ರ ಸರ್ಕಾರವು ಲಾಕ್‍ಡೌನ್ ನಿರ್ಧಾರವನ್ನು ರಾಜ್ಯಗಳಿಗೆ ಬಿಟ್ಟರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮುಂದಿನ ನಡೆ ಏನು ಎಂಬ ಚರ್ಚೆ ಶುರುವಾಗಿದೆ.

    ಈ ನಿಟ್ಟಿನಲ್ಲಿ ಸಿಎಂ ಯಡಿಯೂರಪ್ಪ ಅವರು ಎಲ್ಲಾ ಜಿಲ್ಲಾಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳು ಕೂಡ ಕೆಲವು ಸಲಹೆಗಳನ್ನು ನೀಡಿದ್ದಾರೆ. ಅದರ ಆಧಾರದ ಮೇಲೆ ಸಿಎಂ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ. ಇದನ್ನೂ ಓದಿ: ಕೊರೊನಾ ತಡೆಗೆ ಮೋದಿ ‘ತ್ರಿ’ ಸೂತ್ರ- ಕರ್ನಾಟಕದ 6 ಜಿಲ್ಲೆಗಳು ರೆಡ್ ಝೋನ್

    ಡಿಸಿಗಳ ಸಲಹೆ ಏನು?
    ಲಾಕ್‍ಡೌನ್ ಸಡಿಲಿಕೆಗೆ ಬಹುತೇಕ ಜಿಲ್ಲಾಧಿಕಾರಿಗಳಿಂದ 50:50 ಅಭಿಪ್ರಾಯ ವ್ಯಕ್ತವಾಗಿದೆ. ಗ್ರೀನ್ ಝೋನ್ ಜಿಲ್ಲೆಗಳಲ್ಲಿ ಷರತ್ತಿನ ಸಡಿಲಿಕೆಗೆ ಜಿಲ್ಲಾಧಿಕಾರಿಗಳು ಸಲಹೆ ನೀಡಿದ್ದಾರೆ. ರೆಡ್, ಆರೆಂಜ್, ಯೆಲ್ಲೋ ಜಿಲ್ಲೆಗಳ ಡಿಸಿಗಳು ಸಡಿಲಿಕೆಗೆ ಸಮ್ಮತಿ ಸೂಚಿಸಿಲ್ಲ. ಲಾಕ್‍ಡೌನ್ ಸಡಿಲಿಸಿದರೆ ಅಪಾಯ ಆಹ್ವಾನಿಸಿದಂತೆ ಎಂದು ತಿಳಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಲಾಕ್‍ಡೌನ್‍ಗೆ ಬಿಎಸ್‍ವೈ ಮಂತ್ರ:
    ಮುಖ್ಯಕಾರ್ಯದರ್ಶಿ ಅವರು ಎಲ್ಲಾ ಜಿಲ್ಲಾಧಿಕಾರಿಗಗಳ ಅಭಿಪ್ರಾಯದ ವರದಿ ಸಿದ್ಧಪಡಿಸುತ್ತಿದ್ದಾರೆ. ಸಿಎಸ್ ವರದಿ ನಂತರ ಸಂಪುಟದಲ್ಲಿ ಸಿಎಂ ಬಿಎಸ್‍ವೈ ಚರ್ಚೆ ಮಾಡಲಿದ್ದಾರೆ. ಬಹುತೇಕ ಲಾಕ್‍ಡೌನ್ ಮುಂದುವರಿಕೆಗೆ ಸಿಎಂ ಒಲವು ಎನ್ನಲಾಗುತ್ತಿದೆ.

    ಗ್ರೀನ್ ಝೋನ್‍ಗಳಲ್ಲಿ ಸದ್ಯಕ್ಕಿಂತ ಪರಿಸ್ಥಿತಿ ಸುಧಾರಿಸಿದರೆ ಷರತ್ತಿನ ಸಡಿಲಿಕೆಗೆ ಚಿಂತನೆ ನಡೆದಿದೆ. ಇತ್ತ ರೆಡ್, ಯೆಲ್ಲೋ, ಆರೆಂಜ್ ಝೋನ್‍ಗಳಲ್ಲಿ ಸಡಿಲಿಕೆ ಕೊಡದಿರಲು ತೀರ್ಮಾನವನ್ನು ಸಿಎಂ ಕೈಗೊಳ್ಳಲಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

  • ಬಿಡುವಿದ್ದಾಗ ಮಾಸ್ಕ್ ತಯಾರಿಸಿ ಗ್ರಾಮೀಣ ಜನರಿಗೆ ವಿತರಿಸ್ತಿದ್ದಾರೆ ಅಂಗನವಾಡಿ ಶಿಕ್ಷಕಿಯರು

    ಬಿಡುವಿದ್ದಾಗ ಮಾಸ್ಕ್ ತಯಾರಿಸಿ ಗ್ರಾಮೀಣ ಜನರಿಗೆ ವಿತರಿಸ್ತಿದ್ದಾರೆ ಅಂಗನವಾಡಿ ಶಿಕ್ಷಕಿಯರು

    – ಕೊರೊನಾ ಕೆಲಸದ ಮಧ್ಯೆಯೂ ಜನರಿಗೆ ಸಹಾಯ
    – ಬಿಡುವಿದ್ದಾಗಲೆಲ್ಲ ಮಾಸ್ಕ್ ಹೊಲಿಯುವ ಶಿಕ್ಷಕಿಯರು

    ಮಡಿಕೇರಿ: ಕೊರೊನಾ ವೈರಸ್ ನಿಯಂತ್ರಿಸಲು ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸಿದ್ದು, ಇದರ ಭಾಗವಾಗಿ ಆಶಾ ಕಾರ್ಯಕರ್ತೆಯರು ಸಹ ಟೆಸ್ಟಿಂಗ್ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಇಲ್ಲೊಂದಿಷ್ಟು ಅಂಗನವಾಡಿ ಕಾರ್ಯಕರ್ತರು ತಮ್ಮದೇಯಾದ ಕೊಡುಗೆ ನೀಡುತ್ತಿದ್ದಾರೆ.

    ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಬಾಡಗ ಗ್ರಾಮದ ಅಂಗನವಾಡಿ ಶಿಕ್ಷಕಿ ಜಯಂತಿ ಸೇರಿದಂತೆ ನಾಲ್ಕೈದು ಅಂಗನವಾಡಿಗಳ ಶಿಕ್ಷಕಿಯರು ಕೊರೊನಾ ನಿಯಂತ್ರಣಕ್ಕೆ ಸಹಾಯ ಮಾಡುತ್ತಿದ್ದು, ಮಾಸ್ಕ್ ಹೊಲೆದು ಗ್ರಾಮೀಣ ಭಾಗದ ಜನರಿಗೆ ಉಚಿತವಾಗಿ ವಿತರಣೆ ಮಾಡುತ್ತಿದ್ದಾರೆ. ಬಿಡುವಿನ ವೇಳೆಯಲ್ಲಿ ಮಾಸ್ಕ್ ಹೊಲೆಯುವ ಕಾರ್ಯ ಮಾಡುತ್ತಿದ್ದು, ಗ್ರಾಮೀಣ ಭಾಗದ ಜನರಿಗೆ ಕೊರೊನಾ ಹರಡಬಾರದು ಎಂಬ ಉದ್ದೇಶದಿಂದ ಉಚಿತವಾಗಿ ಮಾಸ್ಕ್ ವಿತರಣೆ ಮಾಡುತ್ತಿದ್ದಾರೆ. ಈಗಾಗಲೇ 150ಕ್ಕೂ ಹೆಚ್ಚು ಮಾಸ್ಕ್ ಗಳನ್ನು ಹೊಲೆದು ಬಡ ಜನರಿಗೆ ನೀಡಿದ್ದಾರೆ.

    ಈ ಶಿಕ್ಷಕಿಯರು ಕೂಡ ಸರ್ಕಾರ ವಹಿಸಿದ ಕೊರೊನಾ ಸಂಬಂಧಿ ಕೆಲಸ ಮಾಡುತ್ತಿದ್ದು, ಮಧ್ಯಾಹ್ನದವರೆಗೆ ಕೆಲಸ ಮಾಡಿ ಬಿಡುವಿನ ವೇಳೆಯಲ್ಲಿ ಮಾಸ್ಕ್ ಹೊಲಿಯುತ್ತಿದ್ದಾರೆ. ಕೊರೊನಾ ಕೆಲಸಕ್ಕೆ ತೆರಳಿದಾಗ ಯಾವ ಗ್ರಾಮಗಳಲ್ಲಿ ಬಡ ಜನರು ಮಾಸ್ಕ್ ಧರಿಸಿರುವುದಿಲ್ಲವೋ ಅವರನ್ನು ಗಮನಿಸಿ ಅಂತಹವರಿಗೆ ಮಾಸ್ಕ್ ವಿತರಣೆ ಮಾಡುತ್ತಿದ್ದಾರೆ.

    ಗ್ರಾಮೀಣ ಭಾಗದ ಜನರಿಗೆ ಹಣ ನೀಡಿ ಮಾಸ್ಕ್ ಕೊಂಡು ಧರಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಹೀಗಾಗಿ ಅವರು ಮಾಸ್ಕ್ ಧರಿಸದೆಯೇ ಓಡಾಡುತ್ತಿದ್ದಾರೆ. ಇಂತಹವರಿಗೆ ಉಚಿತವಾಗಿ ಮಾಸ್ಕ್ ವಿತರಣೆ ಮಾಡುತ್ತಿದ್ದೇವೆ. ಜೊತೆಗೆ ಕೊರೊನಾ ಕುರಿತು ಜನರಿಗೆ ಮಾಹಿತಿ ನೀಡುತ್ತಿದ್ದೇವೆ ಎಂದು ಶಿಕ್ಷಿಯೊಬ್ಬರು ತಿಳಿಸಿದ್ದಾರೆ. ಸಾಕಷ್ಟು ಸಂಘ ಸಂಸ್ಥೆಗಳು ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಿವೆ. ಈ ಶಿಕ್ಷಕಿಯರು ಸಹ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.

  • ಲಾಕ್‍ಡೌನ್ ಬಳಿಕ ಮುಂಬೈನಿಂದ ಟ್ರಕ್, ಬೈಕ್‍ಗಳಲ್ಲಿ ಪ್ರಯಾಣ – ಮಂಡ್ಯ ವ್ಯಕ್ತಿಗೆ ಸೋಂಕು

    ಲಾಕ್‍ಡೌನ್ ಬಳಿಕ ಮುಂಬೈನಿಂದ ಟ್ರಕ್, ಬೈಕ್‍ಗಳಲ್ಲಿ ಪ್ರಯಾಣ – ಮಂಡ್ಯ ವ್ಯಕ್ತಿಗೆ ಸೋಂಕು

    – ಈಗ ಸಾತೇನಹಳ್ಳಿ ಗ್ರಾಮ ಸೀಲ್‍ಡೌನ್

    ಮಂಡ್ಯ: ದಿನೇ ದಿನೇ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇವತ್ತು 8 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 511ಕ್ಕೆ ಏರಿದೆ. ಇಂದು ಜಿಲ್ಲೆಯ ನಾಗಮಂಗಲದ 50 ವರ್ಷದ ಪುರುಷನಿಗೆ ಕೊರೊನಾ ದೃಢಪಟ್ಟಿದ್ದು, ಆತನ ಟ್ರಾವೆಲ್ ಹಿಸ್ಟರಿಂದ ಮಂಡ್ಯ ಜನತೆ ಆತಂಕಗೊಂಡಿದ್ದಾರೆ.

    ಮುಂಬೈನಿಂದ ಬಂದ ನಾಗಮಂಗಲ ಮೂಲದ ವ್ಯಕ್ತಿಗೆ ಸೋಂಕು ದೃಢವಾಗಿದೆ. ನಾಗಮಂಗಲ ತಾಲೂಕಿನ ಸಾತೇನಹಳ್ಳಿ ಗ್ರಾಮದ 50 ವರ್ಷದ ವ್ಯಕ್ತಿಗೆ (ರೋಗಿ 505) ಸೋಂಕು ಬಂದಿದೆ. ಈ ವ್ಯಕ್ತಿ ಮುಂಬೈನಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದರು. ಆದರೆ ಲಾಕ್‍ಡೌನ್ ಇದ್ದರೂ ಅಧಿಕಾರಿಗಳ ಕಣ್ಣು ತಪ್ಪಿಸಿ ಏಪ್ರಿಲ್ 22ಕ್ಕೆ ಗ್ರಾಮಕ್ಕೆ ಆಗಮಿಸಿದ್ದಾರೆ.

    ಕೊರೊನಾ ಸೋಂಕಿತ ಅಗತ್ಯ ಸೇವೆಗಳ ಟ್ರಕ್, ಬೈಕ್ ಸಹಾಯ ಪಡೆದು ಮುಂಬೈನಿಂದ ಸಾತೇನಹಳ್ಳಿಗೆ ಬಂದಿದ್ದಾರೆ. ಇತ್ತ ಮುಂಬೈನಿಂದ ವ್ಯಕ್ತಿ ಬರುತ್ತಿದ್ದಂತೆ ಅಧಿಕಾರಿಗಳಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ತಕ್ಷಣ ಏಪ್ರಿಲ್ 24ರಂದು ವ್ಯಕ್ತಿಯ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ಬಂದ ರಿಪೋರ್ಟ್ ನಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಪಾಸಿಟಿವ್ ಬರುತ್ತಿದ್ದಂತೆ ಸಾತೇನಹಳ್ಳಿಯನ್ನು ಸೀಲ್‍ಡೌನ್ ಮಾಡಲಾಗಿದೆ.

    ಸೋಂಕಿತ ವ್ಯಕ್ತಿಯನ್ನು ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡಿಗೆ ಶಿಫ್ಟ್ ಮಾಡಲಾಗಿದೆ. ಈಗಾಗಲೇ ಅಧಿಕಾರಿಗಳು ಕುಟುಂಬಸ್ಥರನ್ನು ಕ್ವಾರೆಂಟೈನ್ ಮಾಡಿದ್ದಾರೆ. ಇದು ನಾಗಮಂಗಲದ ಮೊದಲ ಪಾಸಿಟಿವ್ ಪ್ರಕರಣ ಆಗಿದೆ. ಮಂಡ್ಯ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 17ಕ್ಕೇರಿದೆ. ಮಳವಳ್ಳಿ (ತಬ್ಲಿಘಿಗಳು) -14, ಮಂಡ್ಯ ನಗರ (ಜುಬಿಲಿಯಂಟ್) -2 ಮತ್ತು ನಾಗಮಂಗಲ (ಮುಂಬೈ ಮೂಲ)- ಓರ್ವನಿಗೆ ಸೋಂಕು ಬಂದಿದೆ.

  • ರಾಜ್ಯದಲ್ಲಿ 8 ಹೊಸ ಕೊರೊನಾ ಪ್ರಕರಣ ಪತ್ತೆ – ಸೋಂಕಿತರ ಸಂಖ್ಯೆ 511ಕ್ಕೆ ಏರಿಕೆ

    ರಾಜ್ಯದಲ್ಲಿ 8 ಹೊಸ ಕೊರೊನಾ ಪ್ರಕರಣ ಪತ್ತೆ – ಸೋಂಕಿತರ ಸಂಖ್ಯೆ 511ಕ್ಕೆ ಏರಿಕೆ

    – ಕಳೆದ 24 ಗಂಟೆಯಲ್ಲಿ ಓರ್ವ ರೋಗಿ ಸಾವು

    ಬೆಂಗಳೂರು: ಕಳೆದ 24 ಗಂಟೆಯಲ್ಲಿ 8 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿದ್ದು, ಓರ್ವ ರೋಗಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 511ಕ್ಕೆ ಏರಿದ್ದು, ಸಾವಿನ ಸಂಖ್ಯೆ 20ಕ್ಕೆ ತಲುಪಿದೆ.

    ಇಂದು ರಾಜ್ಯದ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿನ್ ಪ್ರಕಾರ, ಬೆಂಗಳೂರಿನಲ್ಲಿ 1, ಮಂಡ್ಯದಲ್ಲಿ 1, ದಕ್ಷಿಣ ಕನ್ನಡದಲ್ಲಿ 2, ಬಾಗಲಕೋಟೆಯಲ್ಲಿ 2 ಹಾಗೂ ವಿಜಯಪುರದಲ್ಲಿ 2 ಕೊರೊನಾ ಸೋಂಕಿತ ಪ್ರಕರಣ ವರದಿಯಾಗಿದೆ.

    ಸೋಂಕಿತರ ವಿವರ:
    ರೋಗಿ-504: ಬೆಂಗಳೂರಿನ ಪಾದರಾಯಪುರದ 13 ವರ್ಷದ ಬಾಲಕ, ಅನಾರೋಗ್ಯದಿಂದ ಬಳಲುತ್ತಿದ್ದ.
    ರೋಗಿ-505: ಮಂಡ್ಯ ಜಿಲ್ಲೆಯ ನಾಗಮಂಗಲದ 50 ವರ್ಷದ ಪುರುಷ, ಮಹಾರಾಷ್ಟ್ರಕ್ಕೆ ಭೇಟಿ ನೀಡಿದ್ದ ಹಿನ್ನೆಲೆ
    ರೋಗಿ-506: ದಕ್ಷಿಣ ಕನ್ನಡದ 45 ವರ್ಷದ ಪುರುಷ, ರೋಗಿ-432 ಜೊತೆ ಸಂಪರ್ಕ.
    ರೋಗಿ-507: ದಕ್ಷಿಣ ಕನ್ನಡದ 80 ವರ್ಷದ ವೃದ್ಧೆ, ರೋಗಿ-432 ಜೊತೆ ಸಂಪರ್ಕ.
    ರೋಗಿ-508: ಬಾಗಲಕೋಟೆ ಜಮಖಂಡಿಯ 32 ವರ್ಷದ ಮಹಿಳೆ, ರೋಗಿ-456 ಜೊತೆ ಸಂಪರ್ಕ.
    ರೋಗಿ-509: ಬಾಗಲಕೋಟೆ ಜಮಖಂಡಿಯ 21 ವರ್ಷದ ಯುವತಿ, ರೋಗಿ-456 ಜೊತೆ ಸಂಪರ್ಕ.
    ರೋಗಿ-510: ವಿಜಯಪುರದ 45 ವರ್ಷದ ಪುರುಷ, ರೋಗಿ-221 ಜೊತೆ ಸಂಪರ್ಕ.
    ರೋಗಿ-511: ವಿಜಯಪುರದ 27 ವರ್ಷದ ಯುವಕ, ಸೋಂಕು ಹೇಗೆ ತಗುಲಿತು ಎಂಬ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ.

    ಬೆಂಗಳೂರು ನಗರದ 50 ವರ್ಷದ ಪುರುಷ(ರೋಗಿ-466) ಇಂದು ಸಾವನ್ನಪ್ಪಿದ್ದಾರೆ. ಈ ರೋಗಿ ಏಪ್ರಿಲ್ 24ರಂದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ನ್ಯೂಮೋನಿಯಾ, ಅಧಿಕ ರಕ್ತದೊತ್ತಡ, ಎಚ್‍ಸಿವಿ ಪಾಸಿಟಿವ್ ಹಾಗೂ ಕಿಡ್ನಿ ಸಮಸ್ಯೆ ಇತ್ತು. ಇವರು ಇಂದು ಆಸ್ಪತ್ರೆಯ ತುರ್ತು ನಿರ್ಗಮನದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

  • ದೇಶದಲ್ಲಿ 28 ಸಾವಿರಕ್ಕೆ ತಲುಪಿದ ಸೋಂಕಿತರ ಸಂಖ್ಯೆ – ವಿಶ್ವಾದ್ಯಂತ 2 ಲಕ್ಷಕ್ಕೂ ಅಧಿಕ ಮಂದಿ ಸಾವು

    ದೇಶದಲ್ಲಿ 28 ಸಾವಿರಕ್ಕೆ ತಲುಪಿದ ಸೋಂಕಿತರ ಸಂಖ್ಯೆ – ವಿಶ್ವಾದ್ಯಂತ 2 ಲಕ್ಷಕ್ಕೂ ಅಧಿಕ ಮಂದಿ ಸಾವು

    – ವಿಶ್ವಾದ್ಯಂತ 29 ಲಕ್ಷ ಮಂದಿಗೆ ತಗುಲಿದ ಸೋಂಕು
    – ಭಾರತದಲ್ಲಿ 884 ಮಂದಿ ಕೊರೊನಾಗೆ ಬಲಿ

    ನವದೆಹಲಿ: ದೇಶದಲ್ಲಿ ಕೊರೊನಾ ರಣಕೇಕೆ ಮುಂದುವರಿದಿದ್ದು, ಸೋಂಕಿತರ ಸಂಖ್ಯೆ 28 ಸಾವಿರಕ್ಕೆ ತಲುಪಿದೆ. ಈವರೆಗೆ ದೇಶದಲ್ಲಿ 884 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇತ್ತ ವಿಶ್ವಾದ್ಯಂತ 29,95,043 ಮಂದಿಗೆ ಸೋಂಕು ತಗುಲಿದ್ದು, 2,07,000 ಮಂದಿಯನ್ನು ಕೊರೊನಾ ಬಲಿ ಪಡೆದಿದೆ.

    ಸದ್ಯ ಭಾರತದಲ್ಲಿ 28,062 ಮಂದಿಗೆ ಸೋಂಕು ತಗುಲಿದೆ. ಈ ಸೋಂಕಿತ ಪ್ರಕರಣದಲ್ಲಿ ಶೇ. 50ರಷ್ಟು ಪ್ರಕರಣ ಮಹಾರಾಷ್ಟ್ರ, ಗುಜರಾತ್ ಹಾಗೂ ದೆಹಲಿಯಲ್ಲಿ ವರದಿಯಾಗಿದೆ. ಈವರೆಗೆ 884 ಮಂದಿ ಕೊರೊನಾಗೆ ಬಲಿಯಾಗಿದ್ದು, 6,527 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ.

    ಮಹಾರಾಷ್ಟ್ರದಲ್ಲಿ 8,068 ಸೋಂಕಿತ ಪ್ರಕರಣ ವರದಿಯಾಗಿದ್ದು, 342 ಮಂದಿ ಸಾವನ್ನಪ್ಪಿದ್ದಾರೆ. ಗುಜರಾತ್‍ನಲ್ಲಿ 3,301 ಮಂದಿ ಸೋಂಕಿಗೆ ತುತ್ತಾಗಿದ್ದು, 151 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ದೆಹಲಿಯಲ್ಲಿ 2,918 ಮಂದಿಗೆ ಸೋಂಕು ತಗುಲಿದ್ದು, 54 ಮಂದಿ ಸೋಂಕಿನಿಂದ ಜೀವ ಕಳೆದುಕೊಂಡಿದ್ದಾರೆ. ಇತ್ತ ಕರ್ನಾಟಕದಲ್ಲಿ 503 ಮಂದಿಗೆ ಸೋಂಕು ತಗುಲಿದ್ದು, 19 ಮಂದಿ ಸಾವನ್ನಪ್ಪಿದ್ದಾರೆ. 182 ಮಂದಿ ಸೋಂಕಿಗೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

    ಇತ್ತ ವಿಶ್ವಾದ್ಯಂತ ಕೊರೊನಾ ಅಟ್ಟಹಾಸ ಹೆಚ್ಚಾಗುತ್ತಲೇ ಇದ್ದು, ಅಮೆರಿಕಾ ಅಕ್ಷರಶಃ ಕೊರೊನಾ ಹಾವಳಿಗೆ ತತ್ತರಿಸಿ ಹೋಗಿದೆ. ಅಮೆರಿಕದಲ್ಲಿಯೇ ಅತೀ ಹೆಚ್ಚು ಕೊರೊನಾ ಸೋಂಕು ಹರಡಿದ್ದು, ವಿಶ್ವಾದ್ಯಂತ ವರದಿಯಾದ ಪ್ರಕರಣಗಳಲ್ಲಿ ಶೇ. 30ರಷ್ಟು ಪ್ರಕರಣ ಅಮೆರಿಕದಲ್ಲಿ ಪತ್ತೆಯಾಗಿದೆ. ಅಲ್ಲದೇ ವಿಶ್ವಾದ್ಯಂತ ವರದಿಯಾದ ಸೊಂಕಿತರ ಸಾವಿನ ಪ್ರಕರಣಗಳಲ್ಲಿಯೂ ಶೇ. 25ರಷ್ಟು ಅಮೆರಿಕದಲ್ಲಿಯೇ ವರದಿಯಾಗಿದೆ. ಈವರೆಗೆ ಅಮೆರಿಕದಲ್ಲಿ 9,39,249, ಸ್ಪೇನ್‍ನಲ್ಲಿ 2,23,759, ಇಟಲಿಯಲ್ಲಿ 1,95,351, ಫ್ರಾನ್ಸ್ ನಲ್ಲಿ 1,61,665 ಹಾಗೂ ಜರ್ಮನಿಯಲ್ಲಿ 1,56,513 ಮಂದಿಗೆ ಸೋಂಕು ತಗುಲಿದೆ ಎಂದು ವರದಿಯಾಗಿದೆ.

  • ಹೊಂಗಸಂದ್ರಕ್ಕೆ ಕೊರೊನಾ ಹಬ್ಬಿಸಿದ ಸೋಂಕಿತ ಗಂಭೀರ

    ಹೊಂಗಸಂದ್ರಕ್ಕೆ ಕೊರೊನಾ ಹಬ್ಬಿಸಿದ ಸೋಂಕಿತ ಗಂಭೀರ

    – ಮಾಹಿತಿಗಾಗಿ ಅಧಿಕಾರಿಗಳ ಹರಸಾಹಸ
    – ಹೊಂಗಸಂದ್ರದ 1,271 ಮನೆಗಳ 3,400 ಜನರ ತಪಾಸಣೆ

    ಬೆಂಗಳೂರು: ಹೊಂಗಸಂದ್ರಕ್ಕೆ ಕೊರೊನಾ ಹಬ್ಬಿಸಿದ ಸೋಂಕಿತ ವ್ಯಕ್ತಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಕೊರೊನಾ ವಿರುದ್ಧ ಹೋರಾಟ ಮಾಡಲು ಸೆಣಸಾಡುತ್ತಿದ್ದಾರೆ.

    ರೋಗಿ ನಂಬರ್ 419ರ ಆರೋಗ್ಯದಲ್ಲಿ ಚೇತರಿಕೆ ಕಾಣಿಸುತ್ತಿಲ್ಲ. ಇವರ ಆರೋಗ್ಯ ತೀವ್ರ ಹದಗೆಡುತ್ತಲೇ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಹಿನ್ನೆಲೆಯ್ಲಲ್ಲಿ ಆತ ಎಲ್ಲೆಲ್ಲಿಗೆ ಭೇಟಿ ನೀಡಿದ್ದ, ಯಾರ ಯಾರ ಸಂಪರ್ಕಕ್ಕೆ ಬಂದಿದ್ದ ಅನ್ನೋದನ್ನ ತಿಳಿಯಲು ಆರೋಗ್ಯ ಇಲಾಖೆ ಹರಸಾಹಸ ಪಡುತ್ತಿದೆ.

    ಸೋಂಕಿತ ಮಾತನಾಡುವ ಸ್ಥಿತಿಯಲ್ಲಿರದ ಕಾರಣ ಮಾಹಿತಿ ಕಲೆಹಾಕಲು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. ವೆಂಟಿಲೇಟರ್ ಮೂಲಕ ಉಸಿರಾಟಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸೋಂಕಿತ ವ್ಯಕ್ತಿಗೆ ಉಸಿರಾಟವೇ ದೊಡ್ಡ ಸವಾಲಾಗಿದೆ.

    ರೋಗಿ ನಂಬರ್ 419 ಬಿಹಾರಿ ಮೂಲದ ಹೊಂಗಸಂದ್ರ ವ್ಯಕ್ತಿಯಾಗಿದ್ದು, ಇದುವರೆಗೆ ಈತನಿಂದ 37 ಮಂದಿಗೆ ಕೊರೊನಾ ಸೋಂಕು ಬಂದಿದೆ ಎಂದು ಬಿಬಿಎಂಪಿ ವಾರ್ ರೂಂ ರಿಪೋರ್ಟ್ ನೀಡುತ್ತಿದೆ. ರಾಜ್ಯದಲ್ಲೇ ಅತಿಹೆಚ್ಚು ಜನರಿಗೆ ಕೊರೊನಾ ಹಚ್ಚಿದ 3ನೇ ವ್ಯಕ್ತಿಯಾಗಿದ್ದು, ಪರಿಣಾಮ ಹೊಂಗಸಂದ್ರದಲ್ಲಿ ಜನರಲ್ಲಿ ಆತಂಕ ಉಂಟಾಗಿದೆ.

    ಈವರೆಗೆ ಹೊಂಗಸಂದ್ರದ 1,271 ಮನೆಗಳ 3,400 ಜನರ ತಪಾಸಣೆಯಾಗಿದೆ. ಈ 3,400 ಜನರಲ್ಲಿ ಯಾರಿಗೂ ಪಾಸಿಟಿವ್ ಬಂದಿಲ್ಲ. ಆದರೂ ಹೊಂಗಸಂದ್ರದಲ್ಲಿ ಆತಂಕ ಮುಂದುವರಿದಿದೆ. ಸದ್ಯ ಹೊಂಗಸಂದ್ರದ ನಂಬರ್ 419 ಚೇತರಿಕೆಗಾಗಿ ಆರೋಗ್ಯಾಧಿಕಾರಿಗಳು ಕಾಯುತ್ತಿದ್ದಾರೆ. ಈ ರೋಗಿಗೆ 54 ವರ್ಷವಾಗಿದ್ದು, ಇದು ವೈದ್ಯರಿಗೆ ಸವಾಲಾಗಿದೆ.

  • ಬೀದಿ ನಾಟಕದ ಮೂಲಕ ಕೊರೊನಾ ಜಾಗೃತಿ ಮೂಡಿಸಿದ ಪೊಲೀಸ್

    ಬೀದಿ ನಾಟಕದ ಮೂಲಕ ಕೊರೊನಾ ಜಾಗೃತಿ ಮೂಡಿಸಿದ ಪೊಲೀಸ್

    ಚಿಕ್ಕಮಗಳೂರು: ಕೊರೊನಾ ಆತಂಕದಿಂದಾಗಿ ಮನೆಯಲ್ಲೇ ಇರಿ ಎಂದು ಪೊಲೀಸರು ಲಾಠಿ ಹಿಡಿದಾಯ್ತು, ಒದೆ ಕೊಟ್ಟಾಯ್ತು, ಕೇಸು ಹಾಕಾಯ್ತು, ಕೈ ಮುಗಿದಾಯ್ತು. ಜನ ಯಾವುದಕ್ಕೂ ಜಪ್ಪಯ್ಯ ಅನ್ನಲಿಲ್ಲ. ಹಾಗಾಗಿ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ಪೊಲೀಸರು ವಿಭಿನ್ನವಾಗಿ ಜನಸಾಮಾನ್ಯರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.

    ಜಾಗತಿಕ ಶಾಪವಾಗಿ ಕಾಡುತ್ತಿರುವ ಕೊರೊನಾ ಮಹಾಮಾರಿ ವಿರುದ್ಧ ಜನರಿಗೆ ಎಲ್ಲಾ ರೀತಿಯ ಮನವಿ ಮಾಡಿಕೊಂಡಿದ್ದ ಪೊಲೀಸರು ಇದೀಗ ವಿಭಿನ್ನ ಪ್ರಯತ್ನಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಬಾಳೆಹೊನ್ನೂರು ಪೊಲೀಸರು ಬೀದಿ ನಾಟಕ ಪ್ರದರ್ಶಿಸುವ ಮೂಲಕ ಮಹಾಮಾರಿ ಕೊರೊನಾ ಕುರಿತು ಜಾಗೃತಿ ಮೂಡಿಸಿದರು. “ಮಾಡಲು ಕೊರೊನಾ ಸಂಹಾರ, ಪಾಲಿಸಿ ಸಾಮಾಜಿಕ ಅಂತರ” ಎಂಬ ಶೀರ್ಷಿಕೆಯಡಿ ಬೀದಿ ನಾಟಕ ಮಾಡಿ ಪೊಲೀಸರು ಜಾಗೃತಿ ಮೂಡಿಸಿದರು.

    ಬಾಳೆಹೊನ್ನೂರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಾರ್ವಜನಿಕರು ಅನುಸರಿಸಬೇಕಾದ ಎಚ್ಚರಿಕೆ ಕ್ರಮಗಳು ಸೇರಿದಂತೆ ಕೊರೊನಾ ವೈರಸ್ ಉಂಟು ಮಾಡುತ್ತಿರುವ ಹಾನಿಯ ಕುರಿತು ಸಾರ್ವಜನಿಕರಿಗೆ ಎಳೆ ಎಳೆಯಾಗಿ ಬಿಡಿಸಿ ಮನಮುಟ್ಟುವಂತೆ ನಾಟಕ ಪ್ರದರ್ಶಿಸಿದರು. ವಿಶೇಷ ಅಂದ್ರೆ ಪೊಲೀಸ್ ಆಗಿ ಯಕ್ಷಗಾನ ಶೈಲಿಯಲ್ಲಿ ನಾಟಕ ಪ್ರದರ್ಶಿಸಿದ್ದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ವಿವಿಧ ಪ್ರಯತ್ನ ಮಾಡಿದ ಬಾಳೆಹೊನ್ನೂರು ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

    ಬೀದಿ ನಾಟಕ ಪ್ರದರ್ಶಿಸಿ ಜನಸಾಮಾನ್ಯರಿಗೆ ಜಾಗೃತಿ ಮೂಡಿಸಲು ಮುಂದಾಗ ಪೊಲೀಸರು ಖಾಕಿ ಸಮವಸ್ತ್ರದ ಮೇಲೆಯೇ ನಾಟಕದ ಉಡುಗೆ ತೊಟ್ಟು ರಸ್ತೆಗಳಲ್ಲಿ ನಾಟಕ ಮಾಡಿದ್ದು ವಿಶೇಷವಾಗಿತ್ತು. ಪೊಲೀಸರ ಈ ಬೀದಿ ನಾಟಕವನ್ನು ನಿಂತು ನೋಡಿದ ಜನ ಕೂಡ ಸಾಮಾಜಿಕ ಅಂತರ ಕಾಪಾಡಿಕೊಂಡೇ ಪೊಲೀಸರ ಜಾಗೃತಿಯ ನಾಟಕವನ್ನ ವೀಕ್ಷಿಸಿದರು.

  • ಭಾರತದಲ್ಲಿ ಫಸ್ಟ್ – ಪ್ಲಾಸ್ಮಾ ಥೆರಪಿಯಿಂದ ಕೊರೊನಾ ಸೋಂಕಿತ ಗುಣಮುಖ

    ಭಾರತದಲ್ಲಿ ಫಸ್ಟ್ – ಪ್ಲಾಸ್ಮಾ ಥೆರಪಿಯಿಂದ ಕೊರೊನಾ ಸೋಂಕಿತ ಗುಣಮುಖ

    – ವೆಂಟಿಲೇಟರ್‌ನಲ್ಲಿದ್ದ ರೋಗಿಗೆ ಪ್ಲಾಸ್ಮಾ ಥೆರಪಿ
    – ಮೂರು ವಾರದ ಹಿಂದೆ ಗುಣಮುಖರಾದ ಮಹಿಳೆಯಿಂದ ಪ್ಲಾಸ್ಮಾ ದಾನ

    ನವದೆಹಲಿ: ಕೊರೊನಾ ವೈರಸ್ ಭೀತಿ ನಡುವೆ ಒಂದು ಶುಭ ಸುದ್ದಿಯೊಂದು ಲಭ್ಯವಾಗಿದ್ದು, ಪ್ಲಾಸ್ಮಾ ಥೆರಪಿ ಸಹಾಯದಿಂದ ದೆಹಲಿಯ ಕೊರೊನಾ ಸೋಂಕಿತ ರೋಗಿಯೊಬ್ಬರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದು ಭಾರತದಲ್ಲಿಯೇ ಮೊದಲ ಪ್ರಕರಣವಾಗಿದೆ.

    ದೆಹಲಿಯ 49 ವರ್ಷದ ವ್ಯಕ್ತಿಗೆ ಕೋವಿಡ್-19 ಪಾಸಿಟಿವ್ ಇದೆ ಎಂದು ಏಪ್ರಿಲ್ 4ರಂದು ದೃಢಪಟ್ಟಿತ್ತು. ರೋಗಿ ತೀವ್ರ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದ ಹಿನ್ನೆಲೆ ಅವರಿಗೆ ಉಸಿರಾಡಲು ಸಹಾಯವಾಗಲಿ ಎಂದು ವೆಂಟಿಲೇಟರ್ ಅಳವಡಿಸಿ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

    ಏಪ್ರಿಲ್ 8ರಂದು ರೋಗಿಯ ಆರೋಗ್ಯ ತೀರ ಹದಗೆಟ್ಟಾಗ ಕುಟುಂಬಸ್ಥರು ರೋಗಿಗೆ ಪ್ಲಾಸ್ಮಾ ಥೆರಪಿ ನೀಡಿ ಜೀವ ಉಳಿಸಿ ಎಂದು ವೈದ್ಯರಲ್ಲಿ ಮನವಿ ಮಾಡಿಕೊಂಡರು. ಅಲ್ಲದೇ ಕುಟುಂಬಸ್ಥರೇ ಪ್ಲಾಸ್ಮಾ ಡೋನರ್ ಅನ್ನು ಕೂಡ ಹುಡಿಕಿದ್ದರು. ಮೂರು ವಾರದ ಹಿಂದೆಯಷ್ಟೇ ಕೊರೊನಾದಿಂದ ಗುಣಮುಖರಾದ ಮಹಿಳೆಯೊಬ್ಬರನ್ನು ಪತ್ತೆ ಮಾಡಿ, ಪ್ಲಾಸ್ಮಾ ಡೊನೇಟ್ ಮಾಡುವಂತೆ ಮನವಿ ಮಾಡಿಕೊಂಡರು. ಅವರ ಮನವಿಗೆ ದಾನಿ ಕೂಡ ಒಪ್ಪಿ ರೋಗಿಗೆ ಪ್ಲಾಸ್ಮಾ ದಾನ ಮಾಡಿದ್ದರು. ಏಪ್ರಿಲ್ 14ರ ರಾತ್ರಿ ಎಲ್ಲಾ ಸರ್ಕಾರಿ ಹಾಗೂ ವೈದ್ಯಕಿಯ ನಿಯಮದ ಪ್ರಕಾರ ರೋಗಿಗೆ ಪ್ಲಾಸ್ಮಾ ಥೆರಪಿ ನೀಡಲಾಗಿತ್ತು.

    ಥೆರಪಿ ನೀಡಿದ ನಾಲ್ಕೇ ದಿನಕ್ಕೆ ಎಂದರೆ ಏಪ್ರಿಲ್ 18ರಂದು ರೋಗಿ ವೆಂಟಿಲೇಟರ್ ಸಹಾಯವಿಲ್ಲದೇ ಉಸಿರಾಡಲು ಆರಂಭಿಸಿ, ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಾ ಬಂದಿದ್ದರು. ಆ ಬಳಿಕ ಅವರನ್ನು ಸಾಮಾನ್ಯ ವಾರ್ಡಿಗೆ ಶಿಫ್ಟ್ ಮಾಡಲಾಯ್ತು. ನಂತರ ಸೋಮವಾರ 24 ಗಂಟೆಗಳಲ್ಲಿ ಎರಡು ಭಾರಿ ರೋಗಿಯ ಕೋವಿಡ್-19 ಪರೀಕ್ಷೆ ಮಾಡಲಾಯ್ತು. ಎರಡು ಬಾರಿಯೂ ವರದಿ ನೆಗೆಟಿವ್ ಮಂದಿತ್ತು. ಕೆಲ ದಿನಗಳು ಚಿಕಿತ್ಸೆ ನೀಡಿ, ನಿಗಾ ವಹಿಸಿದ ಬಳಿಕ ಇಂದು ಕೂಡ ರೋಗಿಯ ವರದಿ ಕೊರೊನಾ ನೆಗೆಟಿವ್ ಬಂದ ಬಳಿಕ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ.

    ಆದರೆ ಸರ್ಕಾರಿ ನಿಯಮದ ಪ್ರಕಾರ ಡಿಸ್ಚಾರ್ಜ್ ಆದ ವ್ಯಕ್ತಿ ಎರಡು ವಾರಗಳ ಕಾಲ ಹೋಮ್ ಕ್ವಾರಂಟೈನ್‍ನಲ್ಲಿ ಇರಬೇಕು. ಹೀಗಾಗಿ ಗುಣಮುಖರಾದ ವ್ಯಕ್ತಿಗೆ ಕ್ವಾರಂಟೈನ್‍ನಲ್ಲಿರಲು ಸೂಚಿಸಲಾಗಿದೆ. ಡಾ. ಓಂಮೆಂದರ್ ಸಿಂಗ್ ನೇತೃತ್ವದ ವೈದ್ಯರ ತಂಡ ರೋಗಿಗೆ ಚಿಕಿತ್ಸೆ ನೀಡಿ, ರೋಗಿಯನ್ನು ಗುಣಮುಖಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಪ್ಲಾಸ್ಮಾ ಥೆರಪಿ ಎಂದರೇನು?
    ಕೊರೊನಾದಿಂದ ಚೇತರಿಸಿಕೊಂಡ ವ್ಯಕ್ತಿಯ ರಕ್ತದಲ್ಲಿ ಆಂಟಿಬಾಡಿಗಳು ಇರುತ್ತವೆ. ಅವು ರೋಗ ನಿರೋಧಕ ಶಕ್ತಿ ಹೊಂದಿರುತ್ತವೆ. ಆ ಪ್ಲಾಸ್ಮಾವನ್ನು ತೆಗೆದು ಸೋಂಕಿತ ಅಥವಾ ಸೋಂಕು ಶಂಕೆ ಹೊಂದಿರುವ ವ್ಯಕ್ತಿಗೆ ನೀಡುವುದನ್ನೇ ಪ್ಲಾಸ್ಮಾ ಥೆರಪಿ ಎನ್ನಲಾಗುತ್ತದೆ. ಪ್ಲಾಸ್ಮಾ ಥೆರಪಿಗೆ ಒಳಗಾದ ವ್ಯಕ್ತಿಗಳು ಬೇಗನೆ ಕೊರೊನಾದಿಂದ ಗುಣಮುಖರಾಗುವುದು ವಿದೇಶಗಳಲ್ಲಿ ಸಾಬೀತಾಗಿದೆ.

    ಸೋಂಕ ಮುಕ್ತವಾದ ವ್ಯಕ್ತಿ ಚೇತರಿಸಿಕೊಂಡ 28 ದಿನಗಳ ಬಳಿಕ ಪ್ಲಾಸ್ಮಾವನ್ನು ದಾನ ಮಾಡಬಹುದು, ಮೊದಲ ಪರೀಕ್ಷೆಯಲ್ಲಿ ಪಾಸಿಟಿವ್ ಬಂದು, 2ನೇ ಪರೀಕ್ಷೆಯಲ್ಲಿ ನೆಗೆಟಿವ್ ಬಂದವರು ಕೂಡಾ ದಾನ ಮಾಡಬಹುದಾಗಿದೆ. ದಾನಿಯೊಬ್ಬನ ಪ್ಲಾಸ್ಮಾವನ್ನು ಅದೇ ರಕ್ತದ ಗುಂಪಿನ ರೋಗಿಗಳಿಗೆ ಮಾತ್ರ ನೀಡಬಹುದು ಎಂದು ತಜ್ಞರು ಹೇಳಿದ್ದಾರೆ.