Tag: Coronavirus

  • ಸಿಆರ್‌ಪಿಎಫ್ ಸಿಬ್ಬಂದಿಗೆ ಸೋಂಕು- ಮುಖ್ಯ ಕಚೇರಿ ಸೀಲ್

    ಸಿಆರ್‌ಪಿಎಫ್ ಸಿಬ್ಬಂದಿಗೆ ಸೋಂಕು- ಮುಖ್ಯ ಕಚೇರಿ ಸೀಲ್

    ನವದೆಹಲಿ: ಸಿಆರ್‌ಪಿಎಫ್‍ನ ಹಿರಿಯ ಅಧಿಕಾರಿಯೊಬ್ಬರ ಆಪ್ತ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆ ದೆಹಲಿಯಲ್ಲಿರುವ ಕೇಂದ್ರ ಕಚೇರಿಯನ್ನು ಸಂಪೂರ್ಣ ಸೀಲ್ ಮಾಡಲಾಗಿದ್ದು, ಸ್ಯಾನಿಟೈಜರ್ ಸಿಂಪಡಿಸಲಾಗುತ್ತಿದೆ.

    ಸಿಆರ್‌ಪಿಎಫ್‍ನ ಹೆಚ್ಚುವರಿ ಮಹಾ ನಿರ್ದೇಶಕ ಜಾವೇದ್ ಅಖ್ತಾರ್ ಮತ್ತು ಅವರ ಸ್ಟೇನೋಗ್ರಾಫರ್ ಅವರನ್ನು ಇಂದು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಪರೀಕ್ಷೆ ವೇಳೆ ಸ್ಟೇನೋಗ್ರಾಫರ್ ನಲ್ಲಿ ಪಾಸಿಟಿವ್ ವರದಿ ಬಂದಿದ್ದರಿಂದ ಲೋಧಿ ರಸ್ತೆಯ ಸಿಜಿಓ ಕಾಂಪ್ಲೆಕ್ಸ್ ನಲ್ಲಿರುವ ಸಿಆರ್‌ಪಿಎಫ್‍ ಕಚೇರಿಯನ್ನು ಪ್ರೊಟೊಕಾಲ್ ಪ್ರಕಾರ ಸೀಲ್ ಮಾಡಲಾಯಿತು. ಇದನ್ನೂ ಓದಿ:  68 ಮಂದಿ ಸಿಆರ್‌ಪಿಎಫ್ ಯೋಧರಿಗೆ ಸೋಂಕು

    ಈ ಮೊದಲು ಕೇಂದ್ರ ಕಚೇರಿಯೊಂದಿಗೆ ಸಂಪರ್ಕವಿಟ್ಟುಕೊಂಡಿದ್ದ ಚಾಲಕನಿಗೂ ಕೊರೊನಾ ಸೋಂಕು ಇರುವುದು ಪತ್ತೆಯಾಗಿರುವುದರಿಂದ ಇತರೆ ನೌಕರರು ಕೆಲಸ ಮಾಡಲು ಅವಕಾಶವನ್ನು ನೀಡಿಲ್ಲ. ನೌಕರರು ಕೇಂದ್ರ ಕಚೇರಿ ಕಟ್ಟಡಕ್ಕೆ ಪ್ರವೇಶಿಸಲು ಅನುಮತಿ ನೀಡುತ್ತಿಲ್ಲ ಎಂದು ಸಿ.ಆರ್.ಪಿ.ಎಫ್ ಮೂಲಗಳು ತಿಳಿಸಿವೆ.

    ಹೆಚ್ಚುವರಿ ಮಹಾ ನಿರ್ದೇಶಕರ ಕುಟುಂಬ, ಮನೆ ಸಿಬ್ಬಂದಿ ಮತ್ತು ಇವರ ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿದ್ದ ಹಿರಿಯ ಅಧಿಕಾರಿಗಳು ಎಲ್ಲ ಸಿಬ್ಬಂದಿ ಮತ್ತು ಅವರ ಮನೆಗಳನ್ನು ಸೀಲ್ ಮಾಡಿದ್ದು, ಕ್ವಾರಂಟೈನ್‍ನಲ್ಲಿರುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

    ಇದಕ್ಕೂ ಮೊದಲು ದೆಹಲಿಯ ಮಯೂರ್ ವಿಹಾರ್ ಫೇಸ್ 3ರಲ್ಲಿರುವ ಸಿಆರ್‍ಪಿಎಫ್ ನ ಮೂರನೇ ಬೆಟಾಲಿಯನ್‍ನಲ್ಲಿ 144 ಯೋಧರಿಗೆ ಸೋಂಕು ಕಾಣಿಸಿಕೊಂಡಿದೆ. ಈವರೆಗೂ ಓರ್ವ ಯೋಧ ಸಾವನ್ನಪ್ಪಿದ್ದರೆ, ಮತ್ತೊಬ್ಬರು ಚೇತರಿಸಿಕೊಂಡಿದ್ದು ಇನ್ನು 20 ಮಂದಿಯ ವರದಿ ನಿರೀಕ್ಷೆಯಲ್ಲಿದೆ.

  • ಲಾಕ್‍ಡೌನ್ ಇದ್ರೂ ಬರ್ತ್ ಡೇ ಆಚರಿಸಿಕೊಂಡ ಬಿಜೆಪಿ ಕಾರ್ಪೊರೇಟರ್

    ಲಾಕ್‍ಡೌನ್ ಇದ್ರೂ ಬರ್ತ್ ಡೇ ಆಚರಿಸಿಕೊಂಡ ಬಿಜೆಪಿ ಕಾರ್ಪೊರೇಟರ್

    ಬೆಂಗಳೂರು: ಕೊರೊನಾ ವೈರಸ್‍ನಿಂದಾಗಿ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದೆ. ಯಾವುದೇ ಸಭೆ, ಕಾರ್ಯಕ್ರಮ ನಡೆಸದಂತೆ ಆದೇಶ ಹೊರಡಿಸಲಾಗಿದೆ. ಹೀಗಿದ್ದರೂ ಬಿಬಿಎಂಪಿಯ ಬಿಜೆಪಿ ಕಾರ್ಪೊರೇಟರ್ ಒಬ್ಬರು ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ.

    ಜಕ್ಕೂರು ವಾರ್ಡಿನ ಬಿಜೆಪಿ ಕಾರ್ಪೊರೇಟರ್ ಮುನೇಂದ್ರ ಕುಮಾರ್ ಅವರು ತಮ್ಮ ಬೆಂಬಲಿಗರೊಂದಿಗೆ ಬರ್ತ್ ಡೇ ಆಚರಿಸಿಕೊಂಡಿಕೊಂಡಿದ್ದಾರೆ. ಈ ವೇಳೆ ಸಾಮಾಜಿಕ ಅಂತರ, ಸುರಕ್ಷತೆಯೂ ಇರಲಿಲ್ಲ. ಬೆಂಬಲಿಗರ ಮಧ್ಯೆ ನಿಂತು ಮುನೇಂದ್ರ ಕುಮಾರ್ ದೊಡ್ಡ ಕೇಕ್ ಕಟ್ ಮಾಡಿದ್ದಾರೆ.  ಇದನ್ನೂ ಓದಿ: ಮಸಾಲೆ ಜಯರಾಂ ಹುಟ್ಟುಹಬ್ಬ ಆಚರಣೆ – ಮೂವರ ವಿರುದ್ಧ ಎಫ್‍ಐಆರ್

    ಆಡಳಿತ ಪಕ್ಷದ ಮುಖಂಡರ ಬರ್ತ್ ಡೇ ಅಂದ್ರೆ ನಿಯಮಗಳು ಅನ್ವಯಿಸಲ್ವಾ? ಸಾಮಾನ್ಯ ಜನರಿಗೊಂದು ನಿಯಮ, ರಾಜಕಾರಣಿಗಳಿಗೊಂದು ನಿಯಮವೇ? ಬಿಜೆಪಿ ಮುಖಂಡರಿಗೆ ಜನರ ಸುರಕ್ಷತೆಗಿಂತಲೂ ಬರ್ತ್ ಡೇ ಹೆಚ್ಚಾಯ್ತಾ ಎಂದು ಪ್ರಶ್ನಿಸಿ ಸಾರ್ವಜನಿಕರು ಅಸಮಾಧಾನ ಹೊರ ಹಾಕಿದ್ದಾರೆ.

    ಇತ್ತೀಚೆಗೆ ತುರುವೇಕೆರೆ ಶಾಸಕ ಮಸಾಲೆ ಜಯರಾಂ ಸಹ ಹೀಗೇ ಎಡವಟ್ಟು ಮಾಡಿಕೊಂಡಿದ್ದರು. ಈ ಬೆನ್ನಲ್ಲೇ ಬಿಜೆಪಿ ಕಾರ್ಪೊರೇಟರ್ ಮುನೇಂದ್ರ ಕುಮಾರ್ ಸಾಮಾಜಿಕ ಅಂತರ, ಲಾಕ್‍ಡೌನ್ ಆದೇಶ ಮರೆತು ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಸಾರ್ವನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

  • ಉಚಿತ ಬಸ್ ಸಂಚಾರಕ್ಕಾಗಿ 1 ಕೋಟಿ ದೇಣಿಗೆ ಕೊಟ್ಟ ಕೆಪಿಸಿಸಿ

    ಉಚಿತ ಬಸ್ ಸಂಚಾರಕ್ಕಾಗಿ 1 ಕೋಟಿ ದೇಣಿಗೆ ಕೊಟ್ಟ ಕೆಪಿಸಿಸಿ

    – ಬಸ್ ಹತ್ತಿ ಕಾರ್ಮಿಕರ ಸಮಸ್ಯೆ ಆಲಿಸಿದ ಸಿದ್ದರಾಮಯ್ಯ

    ಬೆಂಗಳೂರು: ಕೂಲಿ ಕಾರ್ಮಿಕರಿಗೆ ಉಚಿತ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸುವುದಕ್ಕಾಗಿ  ಕೆಪಿಸಿಸಿಯು  ಕೆಎಸ್‌ಆರ್‌ಟಿಸಿಗೆ 1 ಕೋಟಿ ರೂ. ದೇಣಿಗೆ ನೀಡಿದೆ.

    ಬೆಂಗಳೂರಿನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಕೂಲಿ ಕಾರ್ಮಿಕರು ತಮ್ಮ ಊರಿಗೆ ಹೋಗಲು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಜಮಾಯಿಸಿದ್ದಾರೆ. ಹೀಗಾಗಿ ಅವರನ್ನು ಉಚಿತವಾಗಿ ಕರೆದೊಯ್ಯಲು ಕೆಪಿಸಿಸಿಯಿಂದ ಒಂದು ಕೋಟಿ ಚೆಕ್ ಅನ್ನು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಎಂ ಕಳಸದ್ ಅವರಿಗೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿದ್ದಾರೆ. ಅಷ್ಟೇ ಅಲ್ಲದೆ ಇನ್ನೂ ಹೆಚ್ಚಿನ ವೆಚ್ಚವಾದರೆ ಅದನ್ನು ಬರಿಸಲು ಕೆಪಿಸಿಸಿ ಸಿದ್ಧವಿದೆ ಎಂದು ತಿಳಿಸಿದ್ದಾರೆ.

    ಜೊತೆಗೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಸಚಿವರಾದ ಎಚ್.ಕೆ.ಪಾಟೀಲ್, ಪ್ರಿಯಾಂಕ್ ಖರ್ಗೆ ಸೇರಿದಂತೆ ಕಾಂಗ್ರೆಸ್ ನಿಯೋಗ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದೆ. ಈ ವೇಳೆ ಸಿದ್ದರಾಮಯ್ಯ ಅವರು ಬಸ್ ಹತ್ತಿ ಪ್ರಯಾಣಿಕರ ಸಮಸ್ಯೆಯನ್ನು ಆಲಿಸಿ, ಅಭಯ ನೀಡಿದರು.

    ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಕಾರ್ಮಿಕರಿಂದ ದುಪ್ಪಟ್ಟು ಹಣ ಪಡೆಯದಂತೆ ರಾಜ್ಯ ಸರ್ಕಾರಕ್ಕೆ ತಿಳಿಸಿದ್ದೆವು. ಆದರೆ ಅವರು ಉಚಿತ ಬಸ್ ಸೇವೆಯ ಬದಲು ಹಳೇ ದರದಲ್ಲಿ ಕಾರ್ಮಿಕರಿಂದ ಟಿಕೆಟ್ ಹಣ ಪಡೆಯುವಂತೆ ಆದೇಶ ನೀಡಿತ್ತು. ಹೀಗಾಗಿ ನಮ್ಮ ಪಕ್ಷ ಎಲ್ಲಾ ಮುಖಂಡರು ಚರ್ಚೆ ನಡೆಸಿ ಉಚಿತ ಬಸ್ ಸಂಚಾರಕ್ಕೆ 1 ಕೋಟಿ ರೂ. ದೇಣಿಗೆ ನೀಡಲು ನಿರ್ಧರಿಸಿದ್ದೆವು. ಇದರಿಂದಾಗಿ ಎಚ್ಚೆತ್ತ ರಾಜ್ಯ ಸರ್ಕಾರ ಕಾರ್ಮಿಕರಿಂದ ಯಾವುದೇ ರೀತಿ ಹಣ ಪಡೆಯದಂತೆ ರಾಜ್ಯ ಸಾರಿಗೆ ಇಲಾಖೆ ಸೂಚನೆ ನೀಡಿತು ಎಂದರು.

    ಮೆಜೆಸ್ಟಿಕ್‍ನಲ್ಲಿ ಸಾವಿರಾರು ಜನರು ಸೇರಿದ್ದಾರೆ. ಹೀಗಾಗಿ ಅವರಿಗೆ ನೀರು, ಆಹಾರದ ವ್ಯವಸ್ಥೆಯನ್ನು ನಮ್ಮ ಪಕ್ಷದ ಕಾರ್ಯಕರ್ತರು ಮಾಡುತ್ತಿದ್ದಾರೆ. ಕಾರ್ಮಿಕರ ಸಮಸ್ಯೆಗೆ ಸ್ಪಂದಿಸುವುದು ರಾಜ್ಯ ಸರ್ಕಾರದ ಕರ್ತವ್ಯ. ಅದನ್ನು ಮರೆಯಬಾರದು ಎಂದು ಹೇಳಿದರು.

    ಪ್ರಿಯಾಂಕ ಖರ್ಗೆ ಮಾತನಾಡಿ, ರಾಜ್ಯ ಸರ್ಕಾರ ಕನ್ನಡಿಗರಿಗೆ ಆದ್ಯತೆ ನೀಡುತ್ತಿಲ್ಲ. ಬೇರೆ ರಾಜ್ಯದಲ್ಲಿರುವ ಕಾರ್ಮಿಕರಿಗೆ ಯಾವುದೇ ವ್ಯವಸ್ಥೆ ಮಾಡಿಲ್ಲ. ರಾಜ್ಯದ ಕಾರ್ಮಿಕರಿಗೆ ಉಚಿತವಾಗಿ ಕಳಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದೆವು. ನಮ್ಮ ಪಕ್ಷದ ವತಿಯಿಂದ ಅಳಿಲು ಸೇವೆ ಮಾಡಲಾಗುತ್ತದೆ ಎಂದು ಹೇಳಿದರು.

  • ರಾಜ್ಯದಲ್ಲಿ  ಇಂದು 5 ಮಂದಿಗೆ ಕೊರೊನಾ- ಸೋಂಕಿತರ ಸಂಖ್ಯೆ 606ಕ್ಕೆ ಏರಿಕೆ

    ರಾಜ್ಯದಲ್ಲಿ ಇಂದು 5 ಮಂದಿಗೆ ಕೊರೊನಾ- ಸೋಂಕಿತರ ಸಂಖ್ಯೆ 606ಕ್ಕೆ ಏರಿಕೆ

    – ಕಲಬುರಗಿ, ಬಾಗಲಕೋಟೆಯಲ್ಲಿ ಸೋಂಕಿತರು ಪತ್ತೆ

    ಬೆಂಗಳೂರು: ರಾಜ್ಯದಲ್ಲಿ ಇಂದು 5 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 606ಕ್ಕೆ ಏರಿಕೆ ಆಗಿದೆ.

    ರಾಜ್ಯ ಆರೋಗ್ಯ ಇಲಾಖೆ ನೀಡಿದ ಮಾಹಿತಿ ಪ್ರಕಾರ ಇಂದು ಕಲಬುರಗಿಯ ಮೂವರಿಗೆ ಹಾಗೂ ಬಾಗಲಕೋಟೆಯ ಇಬ್ಬರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಅವರನ್ನು ಈಗಾಗಲೇ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ವಿಶೇಷವೆಂದರೆ ಇಂದು ಸೋಂಕಿತರು ಪತ್ತೆಯಾಗಿದ್ದಕ್ಕಿಂತ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದವರ ಸಂಖ್ಯೆಯೇ ಹೆಚ್ಚಾಗಿದೆ. ಭಾನುವಾರ ರಾಜ್ಯದ ವಿವಿಧ ಜಿಲ್ಲೆಗಳ ಆಸ್ಪತ್ರೆಯಿಂದ ಒಟ್ಟು 11 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದವರ ಸಂಖ್ಯೆ 282ಕ್ಕೆ ಏರಿಕೆ ಕಂಡಿದೆ. ಉಳಿದಂತೆ ಈವರಗೂ ರಾಜ್ಯದ 25 ಜನರು ಕೊರೊನಾಗೆ ಬಲಿಯಾಗಿದ್ದಾರೆ.

    ಸೋಂಕಿತರ ವಿವರ:
    ರೋಗಿ-602: ಕಲಬುರಗಿಯ 13 ಬಾಲಕಿ. ರೋಗಿ-532ರ ಸಂಪರ್ಕ ಹೊಂದಿದ್ದರು.
    ರೋಗಿ-603: ಕಲಬುರಗಿಯ 54 ಪುರುಷ. ರೋಗಿ-532ರ ಸಂಪರ್ಕದಲ್ಲಿದ್ದರು.
    ರೋಗಿ-604: ಕಲಬುರಗಿಯ 41 ಪುರುಷ. ತೀವ್ರತರ ಉಸಿರಾಟದ ಸೋಂಕು.
    ರೋಗಿ-605: ಬಾಗಲಕೋಟೆಯ 68 ವೃದ್ಧ. ರೋಗಿ-380ರ ದ್ವಿತೀಯ ಸಂಪರ್ಕದಲ್ಲಿದ್ದರು.
    ರೋಗಿ-606: ಬಾಗಲಕೋಟೆಯ 60 ವೃದ್ಧೆ. ರೋಗಿ-380ರ ದ್ವಿತೀಯ ಸಂಪರ್ಕದಲ್ಲಿದ್ದರು.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಕಾರ್ಮಿಕರಿಗೆ 3 ದಿನ ಉಚಿತ ಪ್ರಯಾಣ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಕಾರ್ಮಿಕರಿಗೆ 3 ದಿನ ಉಚಿತ ಪ್ರಯಾಣ

    – ಕಾರ್ಮಿಕರು ಯಾವುದೇ ದಾಖಲೆ ತೋರಿಸು ಅಗತ್ಯವಿಲ್ಲ

    ಬೆಂಗಳೂರು: ತಮ್ಮ ಊರಿಗಳಿಗೆ ಹೋಗುತ್ತಿದ್ದ ವಲಸೆ ಕಾರ್ಮಿಕರಿಂದ ಹಣ ಪಡೆಯುತ್ತಿದ್ದ ಸರ್ಕಾರ ಈಗ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ.

    ಕೆಎಸ್‌ಆರ್‌ಟಿಸಿ ಶನಿವಾರ ಕಾರ್ಮಿಕರಿಂದ ದುಪ್ಪಟ್ಟು ಹಣವನ್ನು ಪಡೆಯುವ ಬಗ್ಗೆ ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ಇದರಿಂದ  ಎಚ್ಚೆತ್ತುಕೊಂಡಿದ್ದ ರಾಜ್ಯ ಸರ್ಕಾರ ಹಳೇ ದರವನ್ನು ಪಡೆಯುವಂತೆ ಸೂಚನೆ ನೀಡಿತ್ತು. ಈ ಬೆನ್ನಲ್ಲೇ ಸರ್ಕಾರ ಇಂದು ಪ್ರಯಾಣಿಕರ ಬಳಿಯಿಂದ ಯಾವುದೇ ಹಣವನ್ನು ಪಡೆಯುವುದಿಲ್ಲ ಎಂದು ತಿಳಿಸಿದೆ. ಇದನ್ನೂ ಓದಿ: ವಲಸೆ ಕಾರ್ಮಿಕರಿಗೆ ಬಿಗ್ ಶಾಕ್- ಬೆಂಗ್ಳೂರಿನಿಂದ ಹೊರಟವ್ರಿಗೆ ಡಬಲ್ ದರದ ಬಿಸಿ 

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಎಂ ಕಳಸದ್, ಸಾರಿಗೆ ನಿಗಮದಿಂದ ಕಾರ್ಮಿಕರಿಗೆ ಇಂದಿನಿಂದ 3 (ಮಂಗಳವಾರ) ದಿನಗಳವರೆಗೆ ಮೂರು ದಿನಗಳ ಕಾಲ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್‍ಭಾಸ್ಕರ್ ಅವರ ನಿರ್ದೇಶನದ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ:  ಹುಷಾರಾಗಿ ಹೋಗಿ, ಪುಟ್ಟ ಮಗುವಿದೆ- ಧೈರ್ಯ ತುಂಬಿದ ಪೊಲೀಸ್

    ಬಸ್‍ಗಳಲ್ಲಿ ಸಂಚರಿಸುವ ಎಲ್ಲರೂ ಕಾರ್ಮಿಕರೆಂದು ನಾವು ಭಾವಿಸಿದ್ದೇವೆ. ಉಚಿತ ಪ್ರಯಾಣ ನೀಡಿರುವುದು ಸಿಹಿ ಸುದ್ದಿಯಾಗಿದೆ. ಕಾರ್ಮಿಕರು ಯಾವುದೇ ಆತಂಕವಿಲ್ಲದೆ ಸುಖಕರವಾಗಿ ಪ್ರಯಾಣಿಸಬಹುದು. ಈಗಾಗಲೇ ಹಣ ಪಾವತಿಸಿ ಪ್ರಯಾಣಿಸುತ್ತಿರುವ ಕಾರ್ಮಿಕರಿಗೆ ಹಣ ಮರುಪಾವತಿ ಮಾಡಲಾಗುತ್ತದೆ ಎಂದು ಕಳಸದ್ ತಿಳಿಸಿದರು.

    ಸಿಎಂ ಪತ್ರಿಕಾ ಪ್ರಕಟಣೆಯಲ್ಲಿ ಏನಿದೆ?:
    ಕಾರ್ಮಿಕರು ಮತ್ತು ಬಡ ಕೂಲಿ ಕಾರ್ಮಿಕರ ಪರಿಸ್ಥಿತಿಯನ್ನು ಗಮನಿಸಿ ಇಂದಿನಿಂದ 3 (ಮಂಗಳವಾರ) ದಿನಗಳವರೆಗೆ ಜಿಲ್ಲಾ ಕೇಂದ್ರಗಳಿಂದ ಮತ್ತು ರಾಜಧಾನಿ ಬೆಂಗಳೂರಿನಿಂದ ಕರ್ನಾಟಕದಲ್ಲಿನ ತಮ್ಮ ತಮ್ಮ ಊರುಗಳಿಗೆ ಹೋಗುವ ಎಲ್ಲರಿಗೂ ಉಚಿತವಾಗಿ ಕೆಎಸ್‌ಆರ್‌ಟಿಸಿ ಬಸ್‍ಗಳಲ್ಲಿ ತೆರಳಲು ಅನುವು ಮಾಡಿಕೊಡಲಾಗಿದೆ. ಇದರ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ನನ್ನ ಕಳಕಳಿಯ ಮನವಿ ಯಾವುದೇ ಬಸ್ ನಿಲ್ದಾಣಗಳಲ್ಲಿ ಯಾರು ನೂಕುನುಗ್ಗಲು ಮಾಡಬಾರದು. ಜನರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಿಎಂ ಯಡಿಯೂರಪ್ಪ ಅವರು ಮನವಿ ಮಾಡಿಕೊಂಡಿದ್ದಾರೆ.

    ಮೆಜೆಸ್ಟಿಕ್‍ನಲ್ಲಿ ಸಾವಿರಾರೂ ಕಾರ್ಮಿಕರು ಜಮಾಯಿಸಿದ್ದಾರೆ. ಹೀಗಾಗಿ ಕೆಎಸ್‌ಆರ್‌ಟಿಸಿ 200ಕ್ಕೂ ಹೆಚ್ಚು ಬಸ್ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಅಧಿಕಾರಿಗಳು ಮುಂದೆ ನಿಂತು ಕಾರ್ಯನಿರ್ವಹಿಸುತ್ತಿದ್ದಾರೆ. ಇಂದು ಬಸ್ ನಿಲ್ದಾಣದಲ್ಲಿ ಸೇರಿರುವ ಎಲ್ಲರನ್ನೂ ತಮ್ಮ ಜಿಲ್ಲೆಗಳಿಗೆ ಕಳಿಸಿಕೊಡಲು ಸಿದ್ಧತೆ ನಡೆದಿದೆ. ಅಷ್ಟೇ ಅಲ್ಲದೆ ದಾಖಲೆಗಳನ್ನು ತೋರಿಸಲೇ ಬೇಕು ಎಂದು ಸರ್ಕಾರ ಈ ಹಿಂದೆ ಸೂಚನೆ ನೀಡಿತ್ತು. ಆದರೆ ಈಗ ಯಾವುದೇ ದಾಖಲೆ ತೋರಿಸು ಅಗತ್ಯವಿಲ್ಲ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಸೋಮವಾರದಿಂದ 12 ಜಿಲ್ಲೆಯೊಳಗೆ ಬಸ್ ಸಂಚಾರ ಆರಂಭ

    ಈ ಮೊದಲು ಎಲ್ಲಿಗೆ, ಎಷ್ಟು ದರ ಇತ್ತು?
    ಬಾಗಲಕೋಟೆಗೆ ಈ ಹಿಂದೆ ನಿಗದಿಯಾಗಿದ್ದ 700 ರೂ. ಬದಲು 1,311 ರೂ. ಪಡೆಯಲಾಗುತ್ತಿದೆ. ಅಂತೆಯೇ ಬಳ್ಳಾರಿಗೆ ತೆರಳಲು 450 ರೂ. ಬದಲು 884 ರೂ., ಬೆಳಗಾವಿಗೆ ಹೋಗಲು 800 ರೂ. ಬದಲು 1,478 ರೂ., ವಸೂಲಿ ಮಾಡಲಾಗುತ್ತಿದೆ. ಬೆಳಗಾವಿಗೆ ಹೋಗಲು 800 ರೂ. ಬದಲು 1,478 ರೂ., ಚಿತ್ರದುರ್ಗಕ್ಕೆ ತೆರಳಲು 300 ರೂ. ಬದಲು 602 ರೂ., ಕೊಪ್ಪಳಕ್ಕೆ ತೆರಳಲು 600 ರೂಪಾಯಿ ಬದಲು 1,000 ರೂ., ಕಲಬುರಗಿಗೆ ತೆರಳಲು 900 ರೂಪಾಯಿ ಬದಲು 1,619 ರೂ. ಪಡೆಯಲಾಗುತ್ತಿದೆ. ಹೀಗೆ ವಿವಿಧ ಪ್ರದೇಶಗಳಿಗೆ ಹೋಗಲು ಸಿದ್ಧರಾದ ವಲಸೆ ಕಾರ್ಮಿಕರಿಗೆ ಬಸ್ ಟಿಕೆಟ್ ದರ ಆಘಾತ ನೀಡಿದೆ.

  • ಹುಷಾರಾಗಿ ಹೋಗಿ, ಪುಟ್ಟ ಮಗುವಿದೆ- ಧೈರ್ಯ ತುಂಬಿದ ಪೊಲೀಸ್

    ಹುಷಾರಾಗಿ ಹೋಗಿ, ಪುಟ್ಟ ಮಗುವಿದೆ- ಧೈರ್ಯ ತುಂಬಿದ ಪೊಲೀಸ್

    – ಹಸಿದವರಿಗೆ ಅನ್ನ, ನೀರು ನೀಡಿದ ಖಾಕಿ

    ಬೆಂಗಳೂರು: ಕೊರೊನಾ ವೈರಸ್ ಸೃಷ್ಟಿಸಿದ ಆತಂಕದಲ್ಲಿ ಪೊಲೀಸರು ಜನರು ನಿಯಮ ಪಾಲಿಸುವಂತೆ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಹಸಿದವರಿಗೆ ಅನ್ನ, ನೀರು ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ. ಇಂತಹದ್ದೇ ದೃಶ್ಯಗಳು ಶನಿವಾರ ರಾತ್ರಿ ಮೆಜೆಸ್ಟಿಕ್‍ನ ಬಿಎಂಟಿಸಿ ನಿಲ್ದಾಣದಲ್ಲಿ ಕಂಡು ಬಂದವು.

    ಬೆಂಗಳೂರಿನ ವಿವಿಧ ಪ್ರದೇಶಗಳಿಂದ ನೂರಾರು ಜನರು ಶನಿವಾರ ರಾತ್ರಿಯೇ ಮೆಜೆಸ್ಟಿಕ್‍ಗೆ ಬಂದು ತಲುಪಿದ್ದರು. ಉತ್ತರ ಕರ್ನಾಟಕದ ವಲಸೆ ಕಾರ್ಮಿಕರು ಊಟ, ನಿದ್ದೆಯಿಲ್ಲದೆ ಈಡೀ ರಾತ್ರಿ ಜಾಗರಣೆ ಮಾಡಿದರು. ಅವರ ಹಸಿವಿನ ಸಂಕಟಕ್ಕೆ ಸ್ಪಂದಿಸಿದ ಪೊಲೀಸರು ಬಿಸ್ಕೇಟ್, ನೀರು ಹಂಚಿದರು. ಜೊತೆಗೆ ಮಕ್ಕಳು ಮತ್ತು ವಯೋವೃದ್ಧರಿಗೆ ಸ್ಯಾನಿಟೈಸರ್ ಹಾಕಿ ಮಾನವೀಯತೆ ಮೆರೆದರು. ಇದನ್ನೂ ಓದಿ: ಮೆಜೆಸ್ಟಿಕ್‍ನ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಜನ ಜಾತ್ರೆ- ಸಾಮಾಜಿಕ ಅಂತರ ಮರೆತ ಜನ

    ಓರ್ವ ಪೊಲೀಸ್ ಸಿಬ್ಬಂದಿ ಮಗುವನ್ನು ಎತ್ತಿಕೊಂಡು ಕುಳಿತಿದ್ದ ಮಹಿಳೆ ಬಳಿ ಹೋಗಿ ಆಹಾರ ನೀಡಿದರು. ಜೊತೆಗೆ ‘ಹುಷಾರಾಗಿ ನಿಮ್ಮೂರಿಗೆ ಹೋಗಿ. ಪುಟ್ಟ ಮಗು ಇದೆ’ ಎಂದು ಧೈರ್ಯ ತುಂಬಿದ ದೃಶ್ಯಗಳು ಕಂಡು ಮೆಜೆಸ್ಟಿಕ್‍ನಲ್ಲಿ ಕಂಡು ಬಂದವು. ಇದನ್ನೂ ಓದಿ: ಯಾವ ಜಿಲ್ಲೆಯಲ್ಲಿ ಎಷ್ಟು ಕಂಟೈನ್‍ಮೆಂಟ್ ಝೋನ್?

    ವಲಸೆ ಕಾರ್ಮಿಕರು, ತಮ್ಮ ಊರುಗಳಿಗೆ ಹೋಗಲು ಮೆಜಸ್ಟಿಕ್‍ಗೆ ಬಂದಿದ್ದ ಜನರು ರಾತ್ರಿಯಲ್ಲಾ ನರಕಯಾತನೆ ಅನುಭವಿಸುವಂತಾಗಿತ್ತು. ಮಹಿಳೆಯರಿಗೆ ಬಯಲು ಶೌಚವೇ ಗತಿಯಾಗಿತ್ತು. ಕೆಲವರು ಮಕ್ಕಳನ್ನು ತಮ್ಮ ಪಕ್ಕದಲ್ಲೇ ಮಲಗಿಸಿಕೊಂಡು ರಾತ್ರಿ ಕಳೆದರು.

  • ಮೆಜೆಸ್ಟಿಕ್‍ನ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಜನ ಜಾತ್ರೆ- ಸಾಮಾಜಿಕ ಅಂತರ ಮರೆತ ಜನ

    ಮೆಜೆಸ್ಟಿಕ್‍ನ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಜನ ಜಾತ್ರೆ- ಸಾಮಾಜಿಕ ಅಂತರ ಮರೆತ ಜನ

    ಬೆಂಗಳೂರು: ಇಕ್ಕಟಿನಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳನ್ನು ತವರು ಜಿಲ್ಲೆಗಳಿಗೆ ಕಳಿಸಲು ರಾಜ್ಯ ಸರ್ಕಾರ ಸಾರಿಗೆ ವ್ಯವಸ್ಥೆಯನ್ನ ಮಾಡಿದೆ. ಆದರೆ ಪ್ರಯಾಣಿಕರು ಮಾತ್ರ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.

    ಮೆಜೆಸ್ಟಿಕ್‍ನ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಸಾವಿರಾರು ಜನ ಗುಂಪು ಗುಂಪಾಗಿ ಓಡಾಡುವುದು, ನಿಂತುಕೊಂಡಿರುವ ದೃಶ್ಯಗಳು ಸಾಮಾನ್ಯವಾಗಿ ಕಂಡು ಬಂದವು. ಅನೇಕರು ಮಾಸ್ಕ್ ಧರಿಸದೇ ಬಸ್ ನಿಲ್ದಾಣದಲ್ಲಿ ಕುಳಿತಿದ್ದರು ಹಾಗೂ ಓಡಾಡುತ್ತಿದ್ದರು.

    ಸರ್ಕಾರ ಇಷ್ಟೇಲ್ಲ ಅನುಕೂಲ ಒದಗಿಸಿದರೂ ಸಾರ್ವಜನಿಕರು ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದನ್ನು ಮರೆತಿದ್ದು ಬೇಸರದ ಸಂಗತಿಯಾಗಿದೆ. ನೂರಾರು ಜನರು ರಾತ್ರಿಯೇ ಬಸ್ ನಿಲ್ದಾಣಕ್ಕೆ ಬಂದಿದ್ದರಿಂದ ಜನದಟ್ಟನೆ ಹೆಚ್ಚಾಗಿತ್ತು. ಹೀಗಾಗಿ ಜನರು ಎಲ್ಲಂದರಲ್ಲಿ ಕುಳಿತು, ಮಲಗಿ ಕಾಲ ಕಳೆದರು. ಅಷ್ಟೇ ಅಲ್ಲದೆ ಬೆಳಗ್ಗೆಯೂ ಸಾಮಾಜಿಕ ಅಂತರ ಕಂಡು ಬರಲಿಲ್ಲ.

    ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ತೆರಳುವವರು ಜಿಲ್ಲಾಧಿಕಾರಿಗಳು ಅಥವಾ ಜಿಲ್ಲಾ ವರಿಷ್ಠಾಧಿಕಾರಿಗಳಿಂದ ಅನುಮತಿ ಪಡೆದು ಖಾಸಗಿ ವಾಹನಗಳಲ್ಲಿಯೂ ಸಂಚರಿಸಬಹುದಾಗಿದೆ. ರೆಡ್‍ಝೋನ್‍ಗಳಿಗೆ ಬಸ್ ಸಂಚಾರ ಇರುವುದಿಲ್ಲ. ರಾಜ್ಯ ಸಾರಿಗೆ ರಸ್ತೆ ಇಲಾಖೆಯು ಪ್ರತಿ ಡಿಪೋದಿಂದ ಒಟ್ಟು 150 ಕೆಎಸ್‌ಆರ್‌ಟಿಸಿ ಬಸ್‍ಗಳನ್ನ ಕರೆಸಿಕೊಂಡಿದೆ. ಈ ಎಲ್ಲಾ ಬಸ್‍ಗಳು ರಾಜ್ಯದ ವಿವಿಧ ಜಿಲ್ಲೆಗಳಿಗೆ ಪ್ರಯಾಣ ಬೆಳೆಸಲಿವೆ.

  • ಯಾವ ಜಿಲ್ಲೆಯಲ್ಲಿ ಎಷ್ಟು ಕಂಟೈನ್‍ಮೆಂಟ್ ಝೋನ್?

    ಯಾವ ಜಿಲ್ಲೆಯಲ್ಲಿ ಎಷ್ಟು ಕಂಟೈನ್‍ಮೆಂಟ್ ಝೋನ್?

    ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಂಟೈನ್‍ಮೆಂಟ್ ಝೋನ್‍ಗಳ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ. ಆದರೆ ಬೆಂಗಳೂರಿನಲ್ಲಿ ಇಳಿಕೆ ಕಂಡಿದೆ.

    ರೆಡ್ ಝೋನ್ ಮೈಸೂರು ಜಿಲ್ಲೆಯಲ್ಲಿ ಒಟ್ಟು 28 ಕಂಟೈನ್‍ಮೆಂಟ್ ವಲಯಗಳಿವೆ. ಇದರಲ್ಲಿ ಮೈಸೂರು ನಗರದ ಕೆಲವು ಪ್ರದೇಶ, ನಂಜನಗೂಡಿನ ಕೆಲವು ಬಡಾವಣೆ, ಮೈಸೂರು ತಾಲೂಕು ಕೆಲವು ಏರಿಯಾ ಹಾಗೂ ಟೀ ನರಸೀಪುರದ 1 ಗ್ರಾಮ ಸೇರಿವೆ.

    ಸಿಲಿಕಾನ್ ಸಿಟಿಯಲ್ಲಿ ಕಂಟೈನ್‍ಮೆಂಟ್ ಝೋನ್‍ಗಳ ಸಂಖ್ಯೆ 25ರಿಂದ 22ಕ್ಕೆ ಇಳಿಕೆಯಾಗಿದೆ. ಕೆಂಪು ವಲಯವನ್ನ ತೆಗೆದು ನೇರಳೆ ಮತ್ತು ಕಡು ನೇರಳೆ ಎರಡು ವಲಯಗಳನ್ನ ಬಿಬಿಎಂಪಿ ವಿಂಗಡನೆ ಮಾಡಿದೆ. ಹೊರಮಾವು, ಗುರಪ್ಪನ ಪಾಳ್ಯ ಮತ್ತು ಜೆಪಿ ನಗರವನ್ನು ಕಂಟೈನ್‍ಮೆಂಟ್ ಝೋನ್‍ನಿಂದ ಕೈ ಬಿಡಲಾಗಿದೆ.

    ಆರೆಂಜ್ ಝೋನ್ ಮಂಡ್ಯ ಜಿಲ್ಲೆಯಲ್ಲಿ ಒಟ್ಟು 12 ಕಂಟೈನ್‍ಮೆಂಟ್ ವಲಯಗಳಿವೆ. ಮಳವಳ್ಳಿ ಪಟ್ಟಣದಲ್ಲಿ 7, ಮಂಡ್ಯ ನಗರದ ಪೇಟೆ ಬೀದಿ, ಸ್ವರ್ಣಸಂದ್ರ ಬಡಾವಣೆ, ನಾಗಮಂಗಲದ 1 ಬಡಾವಣೆ, ಪಾಂಡವಪುರದ ಡಿ ಕೋಡಗಹಳ್ಳಿ, ಕೆ.ಆರ್.ಪೇಟೆ ರಾಜಘಟ್ಟ ಕಂಟೈನ್‍ಮೆಂಟ್ ಝೋನ್‍ಗಳಾಗಿವೆ.

    ಆರೆಂಜ್ ಝೋನ್ ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 18 ಕಂಟೈನ್‍ಮೆಂಟ್ ವಲಯಗಳಿವೆ. ಕಲಬುರಗಿ ನಗರದಲ್ಲಿ 15, ಚಿತ್ತಾಪುರದಲ್ಲಿ 2 ಹಾಗೂ ಆಳಂದದಲ್ಲಿ 1 ಇದೆ. ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 10 ಕಂಟೈನ್‍ಮೆಂಟ್ ವಲಯಗಳಿವೆ. ಜಮಖಂಡಿ 3 ಏರಿಯಾ, ಮುಧೋಳದ ಸಾಯಿನಗರ ಬಡಾವಣೆ, ಬಾಗಲಕೋಟೆ ನಗರದ 6 ವಾರ್ಡ್ ಕಂಟೈನ್‍ಮೆಂಟ್ ಝೋನ್‍ಗಳಾಗಿವೆ.

    ಆರೆಂಜ್ ಝೋನ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 9 ಕಂಟೈನ್‍ಮೆಂಟ್ ವಲಯಗಳಿವೆ. ಮಂಗಳೂರು ನಗರದಲ್ಲೇ 4, ಬಂಟ್ವಾಳದಲ್ಲಿ 3, ಪುತ್ತೂರಿನಲ್ಲಿ 2 ಇವೆ. ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 6 ಕಂಟೈನ್‍ಮೆಂಟ್ ವಲಯಗಳಿವೆ. ಹಿರೇಬಾಗೇವಾಡಿಯಲ್ಲಿ 3, ಬೆಳಗಾವಿ ನಗರದಲ್ಲಿ 1, ಹುಕ್ಕೇರಿಯಲ್ಲಿ 1, ರಾಯಬಾಗದಲ್ಲಿ 1 ಇದೆ.

    ಕಿತ್ತಳೆ ವಲಯ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು 6 ಕಂಟೈನ್‍ಮೆಂಟ್ ವಲಯಗಳಿವೆ. ಚಿಕ್ಕಬಳ್ಳಾಪುರ ನಗರದ 4 ವಾರ್ಡ್, ಗೌರಿಬಿದನೂರಿನ 2 ವಾರ್ಡ್ ಕಂಟೈನ್‍ಮೆಂಟ್ ಝೋನ್‍ಗಳಾಗಿವೆ. ವಿಜಯಪುರ ಜಿಲ್ಲೆಯಲ್ಲಿ ಒಟ್ಟು 4 ಕಂಟೈನ್‍ಮೆಂಟ್ ವಲಯಗಳಿವೆ. ವಿಜಯಪುರದ ಚಪ್ಪರ್ ಬಂದ್ ಸುತ್ತಮುತ್ತಲ ಪ್ರದೇಶ 3, ಬಾರಾಮಮಾನ್ 1 ಇದೆ.

    ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 3 ಕಂಟೈನ್‍ಮೆಂಟ್ ವಲಯಗಳಿವೆ. ಹೊಸಪೇಟೆ ನಗರ, ಸಿರಗುಪ್ಪ ಎಚ್ ಹೊಸಹಳ್ಳಿ, ಬಳ್ಳಾರಿ ತಾಲೂಕಿನ ಗುಗ್ಗರಹಟ್ಟಿ ಕಂಟೈನ್‍ಮೆಂಟ್ ಝೋನ್‍ಗಳಾಗಿವೆ. ಬೀದರ್ ನಲ್ಲಿ ಒಟ್ಟು 2 ಕಂಟೈನ್‍ಮೆಂಟ್ ಝೋನ್‍ಗಳಿವೆ. ಬೀದರ್ ತಾಲೂಕು ಓಲ್ಡ್ ಸಿಟಿ ಹಾಗೂ ಬಸವಕಲ್ಯಾಣ. ದಾವಣಗೆರೆಯ 2 ಪ್ರದೇಶ ಭಾಷಾನಗರ ಹಾಗೂ ಜಾಲಿನಗರ, ಗದಗನ ರಂಗನವಾಡಿ ಹಾಗೂ ಗಂಜಿ ಬಸವೇಶ್ವರ ಸರ್ಕಲ್ ಪ್ರದೇಶಗಳು ಕಂಟೈನ್‍ಮೆಂಟ್ ಝೋನ್‍ಗಳಾಗಿವೆ.

    ಧಾರವಾಡ ಜಿಲ್ಲೆಯಲ್ಲಿ ಹುಬ್ಬಳ್ಳಿ ನಗರ ಮಾತ್ರ ಕಂಟೈನ್‍ಮೆಂಟ್ ಝೋನ್ ಆಗಿದೆ. ತುಮಕೂರು ಜಿಲ್ಲೆಯಲ್ಲಿ ತುಮಕೂರು ನಗರವನ್ನು ಕಂಟೈನ್‍ಮೆಂಟ್ ಝೋನ್ ಎಂದು ಪರಿಗಣಿಸಲಾಗಿದೆ.

  • ಸೋಮವಾರದಿಂದ 12 ಜಿಲ್ಲೆಯೊಳಗೆ ಬಸ್ ಸಂಚಾರ ಆರಂಭ

    ಸೋಮವಾರದಿಂದ 12 ಜಿಲ್ಲೆಯೊಳಗೆ ಬಸ್ ಸಂಚಾರ ಆರಂಭ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರಿಗೆ ತಮ್ಮ ಊರುಗಳಿಗೆ ಹೋಗಲು ರಾಜ್ಯ ಸರ್ಕಾರ ಶನಿವಾರದಿಂದ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಬೆನ್ನಲ್ಲೇ ಹಸಿರು ವಲಯದಲ್ಲಿ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿದೆ.

    ಉಡುಪಿಯನ್ನು ಹೊರತುಪಡಿಸಿ ರಾಜ್ಯದ 12 ಹಸಿರು ವಲಯ ಜಿಲ್ಲೆಗಳಲ್ಲಿ ಸೋಮವಾರದಿಂದ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭವಾಗಲಿದೆ. ಆದರೆ ಜಿಲ್ಲೆಯ ಒಳಗೆ ಮಾತ್ರ ಬಸ್‍ಗಳು ಸಂಚರಿಸಲಿವೆ. ಅಂತರ್ ಜಿಲ್ಲೆಯ ಬಸ್ ಸಂಚಾರ ಇರುವುದಿಲ್ಲ.

    ಹಾವೇರಿ, ಯಾದಗಿರಿ, ಚಿಕ್ಕಮಗಳೂರು, ಶಿವಮೊಗ್ಗ, ಕೊಪ್ಪಳ, ಚಿತ್ರದುರ್ಗ, ಚಾಮರಾಜನಗರ, ಕೋಲಾರ, ರಾಮನಗರ, ಹಾವೇರಿ, ಹಾಸನ, ದಾವಣಗೆರೆ ಜಿಲ್ಲೆಗಳಲ್ಲಿ ಮಾತ್ರ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ನಾಳೆಯಿಂದ ಆರಂಭವಾಗಲಿದೆ. ಆದರೆ ಖಾಸಗಿ ಬಸ್ ಸಂಚಾರಕ್ಕೆ ರಾಜ್ಯ ಸರ್ಕಾರ ಯಾವುದೇ ಅನುಮತಿ ನೀಡಿಲ್ಲ.

    ಬಸ್‍ಗಳಲ್ಲಿ ಪ್ರಯಾಣಿಸುವಾಗ ಮಾಸ್ಕ್ ಧರಿಸಲೇ ಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಹಾಗೂ ಪ್ರಯಾಣಿಕರಿಗೆ ಥರ್ಮಲ್ ಪರೀಕ್ಷೆ ಕಡ್ಡಾಯವಾಗಬೇಕು. ಒಂದು ಬಸ್‍ನಲ್ಲಿ ಸೀಟ್ ಸಂಖ್ಯೆ ಅರ್ಧದಷ್ಟು ಮಾತ್ರ ಜನರು ಪ್ರಯಾಣಿಸಬೇಕು.

    ಚಿಕ್ಕಮಗಳೂರಿನ ಜಿಲ್ಲೆಯೊಳಗೆ ನಾಳೆಯಿಂದ ಶೇಕಡ 25ರಷ್ಟು ಬಸ್ ಓಡಾಡಲು ಅನುಮತಿ ನೀಡಲಾಗಿದೆ. ಒಂದು ಬಸ್‍ನಲ್ಲಿ 27 ಜನ ಮಾತ್ರ ಸಂಚಾರ ಮಾಡಬೇಕು. ಅರ್ಧಗಂಟೆ ಮುಂಚೆ ಬಸ್ ನಿಲ್ದಾಣಕ್ಕೆ ಬರಬೇಕು. ಗುರುತಿನ ಚೀಟಿ ಕಡ್ಡಾಯವಾಗಿ ತರಬೇಕು. ಸ್ಯಾನಿಟೈಸರ್ ನಿಂದ ಕೈ ತೊಳೆದು ಬಸ್ ಹತ್ತಬೇಕು. ಬಸ್‍ನಲ್ಲಿ ಏನನ್ನೂ ತಿನ್ನುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

  • ಕೊರೊನಾ ವಾರಿಯರ್ ಆದ ದಿಗಂತ್ – ಬಡ ರೋಗಿಗಳ ಮನೆಗೆ ತೆರಳಿ ಔಷಧಿ ವಿತರಣೆ

    ಕೊರೊನಾ ವಾರಿಯರ್ ಆದ ದಿಗಂತ್ – ಬಡ ರೋಗಿಗಳ ಮನೆಗೆ ತೆರಳಿ ಔಷಧಿ ವಿತರಣೆ

    ಬೆಂಗಳೂರು: ಕೊರೊನಾ ವೈರಸ್ ಎಂಬ ಶಬ್ದ ಕೇಳಿದರೆ ಸಾಕು ಇಡೀ ವಿಶ್ವವೇ ಬೆಚ್ಚಿಬೀಳುತ್ತಿದೆ. ಇತ್ತ ಭಾರತಲ್ಲೂ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ವೈರಸ್ ನಿಯಂತ್ರಣಕ್ಕೆ ಜಾರಿಮಾಡಿದ್ದ ಲಾಕ್‍ಡೌನ್ ಅವಧಿಯನ್ನು ಮೇ 17ರವರೆಗೆ ವಿಸ್ತರಿಸಲಾಗಿದೆ. ಈ ಮಧ್ಯೆ ಬಡ ರೋಗಿಗಳು ಔಷಧಿ ಸಿಗದೇ ಪರದಾಡಬಾರದೆಂದು ನಟ ದಿಗಂತ್ ಅವರು ಬಡವರ ನೆರವಿಗೆ ನಿಂತಿದ್ದಾರೆ.

    ಹೌದು. ರೈಡರ್ಸ್ ರಿಪಬ್ಲಿಕ್ ಮೋಟಾರ್ ಕ್ಲಬ್ ನೇತೃತ್ವದಲ್ಲಿ ನಟ ದಿಗಂತ್ ಹಾಗೂ ಯತೀಶ್ ತಂಡ ಬಡವರ ನೆರವಿಗೆ ಮುಂದಾಗಿದೆ. ಔಷಧಿಗಾಗಿ ಪರದಾಡುವ ಬಡವರಿಗೆ ಅವರ ಮನೆ ಬಾಗಲಿಗೆ ಔಷಧಿಯನ್ನು ತಲುಪಿಸುವ ಕೆಲಸವನ್ನು ತಂಡ ಮಾಡುತ್ತಿದೆ. ರಾಜ್ಯದಲ್ಲಿ ಮಾತ್ರವಲ್ಲದೇ ಹೊರ ರಾಜ್ಯದಲ್ಲೂ ಔಷಧಿಯ ಅಗತ್ಯವಿರುವ ಮಂದಿಗೆ ಅದನ್ನು ತಲುಪಿಸುವ ಕೆಲಸದಲ್ಲಿ ತಂಡ ನಿರತವಾಗಿದೆ.

    ಇತ್ತ ಲಾಕ್‍ಡೌನ್ ಮತ್ತೆ ಎರಡು ವಾರ ವಿಸ್ತರಣೆ ಆದ ಕಾರಣಕ್ಕೆ ಸಾಕಷ್ಟು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದು ಹೊತ್ತಿನ ಊಟಕ್ಕಾಗಿ ಜನರು ಪರದಾಡುತ್ತಿದ್ದಾರೆ. ಹೀಗಾಗಿ ಬಡವರ ನೆರವಿಗೆ ಮುಂದೆ ಬಂದಿರುವ ರೈಡರ್ಸ್ ರಿಪಬ್ಲಿಕ್ ಮೋಟಾರ್ ಕ್ಲಬ್ ಸದಸ್ಯರು ಹಾಗೂ ದಿಗಂತ್ ಅವರ ತಂಡ ಜೊತೆಗೂಡಿ ಔಷಧಿ ಅಗತ್ಯವಿರುವ ಬಡವರಿಗೆ ಅದನ್ನು ತಲುಪಿಸುವ ಕೆಲಸ ಮಾಡುತ್ತಿದ್ದಾರೆ.

    ಇಂದು ಬೆಳಗ್ಗೆ ಕೊಡಗಿನಿಂದ ಹೊರಟಿದ್ದ ತಂಡ ಬೈಕ್‍ನಲ್ಲಿ ತೆರಳಿ ಲಿವರ್ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗೆ ಔಷಧಿ, ಮಾತ್ರೆಯನ್ನು ನೀಡಿ ಸಹಾಯ ಮಾಡಿದ್ದಾರೆ. ತಂಡದ ಈ ವಿನೂತನ ಕಾರ್ಯಕ್ಕೆ ಡಿಸಿಪಿ ಭೀಮಾಶಂಕರ ಗುಳೇದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರೈಡರ್ಸ್ ರಿಪಬ್ಲಿಕ್ ಮೋಟಾರ್ ಕ್ಲಬ್ ತಂಡಕ್ಕೆ ಮತ್ತು ದಿಗಂತ್ ತಂಡಕ್ಕೆ ಶುಭಕೋರಿದ್ದಾರೆ.

    ಈ ಹಿಂದೆ ದಿಗಂತ್ ಪತ್ನಿ ನಟಿ ಐಂದ್ರಿತಾ ರೇ ಲಾಕ್‍ಡೌನ್‍ನಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು. ಈ ವಿಚಾರವಾಗಿ ಟ್ವೀಟ್ ಮಾಡಿದ್ದ ಐಂದ್ರಿತಾ, ನಮ್ಮ ನೆರೆಹೊರೆಯಲ್ಲಿರುವ ನಾಲ್ಕು ಕಾಲಿನ ಸ್ನೇಹಿತರನ್ನು ನಾವು ಮರೆಯಬಾರದು. ಈ ಬೇಸಿಗೆಯಲ್ಲಿ ತಾಪಮಾನ ಹೆಚ್ಚಾಗುತ್ತಿದೆ ಮತ್ತು ಕೊರೊನಾದಿಂದ ಪ್ರಸ್ತುತ ದೇಶ ಲಾಕ್‍ಡೌನ್ ಆಗಿದೆ. ಈ ಪರಿಸ್ಥಿತಿಯಲ್ಲಿ ಅವುಗಳಿಗೆ ಆಹಾರ ಮತ್ತು ನೀರಿನ ಕೊರತೆ ಊಂಟಾಗಿದೆ. ಆದ್ದರಿಂದ ನೀವು ಮನೆಗೆ ಬೇಕಾದ ದಿನಸಿ ತರಲು ಹೊರಹೋದಾಗ ದಯವಿಟ್ಟು ನಾಯಿಗಳಿಗೆ ಆಹಾರ ನೀಡಿ ಎಂದು ಮನವಿ ಮಾಡಿಕೊಂಡಿದ್ದರು.

    ಹೀಗೆ ಸಾಕಷ್ಟು ಮಂದಿ ಸಿನಿ ತಾರೆಯರು ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿರುವ ಬಡವರಿಗೆ, ನಿರ್ಗತಿಕರಿಗೆ ಹಾಗೂ ಮೂಕಪ್ರಾಣಿಗಳ ನೆರವಿಗೆ ನಿಂತು ಮಾನವೀಯತೆ ಮೆರೆದಿದ್ದಾರೆ.