ಬಳ್ಳಾರಿ: ಕೊರೊನಾ ಸೋಂಕಿನಿಂದ ಜಿಲ್ಲೆಯ 72 ವರ್ಷದ ವೃದ್ಧೆಯೊಬ್ಬರು ಇಂದು ಗುಣಮುಖರಾದ ಹಿನ್ನೆಲೆ ಅವರನ್ನು ಕೋವಿಡ್-19 ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಇದರಿಂದಾಗಿ ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ 9ಕ್ಕೆ ಏರಿದ್ದು, ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 5ಕ್ಕೆ ಇಳಿದಿದೆ.
ಜಿಲ್ಲೆಯಲ್ಲಿ ಇದುವರೆಗೆ 14 ಮಂದಿಗೆ ಸೋಂಕು ತಗುಲಿದ್ದು, ಅವರಲ್ಲಿ ಈ ಮೊದಲು ಗುಣಮುಖರಾದ ರೋಗಿ-89, ರೋಗಿ-91, ರೋಗಿ-141, ರೋಗಿ-90 ಮತ್ತು ರೋಗಿ-151 ಅವರನ್ನು ಬಿಡುಗಡೆ ಮಾಡಲಾಗಿತ್ತು. ಮತ್ತೆ ಇನ್ನಿಬ್ಬರನ್ನು 21 ವರ್ಷ ವರ್ಷದ ರೋಗಿ-333 ಮತ್ತು 24 ವರ್ಷದ ರೋಗಿ-337 ಅವರನ್ನು ಬಿಡುಗಡೆ ಮಾಡಲಾಗಿತ್ತು. ಹಾಗೆಯೇ ಗುಣಮುಖರಾದ ಹೊಸಪೇಟೆಯ ರೋಗಿ-336 ಅವರಿಗೆ ಮೂರು ದಿನಗಳ ಹಿಂದಷ್ಟೇ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಇಂದು ಹೊಸಪೇಟೆಯ 72 ವರ್ಷದ ರೋಗಿ-332 ಅವರು ಗುಣಮುಖರಾದ ಹಿನ್ನೆಲೆ ಅವರನ್ನು ಸಹ ಬಿಡುಗಡೆ ಮಾಡಲಾಯಿತು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್ ಬಸರೆಡ್ಡಿ ಅವರು ಗುಣಮುಖರಾಗಿ ಮನೆಯತ್ತ ತೆರಳಲು ಸಿದ್ಧರಾಗಿದ್ದ ವೃದ್ಧೆಗೆ ರೋಗಿ-332 ಅವರಿಗೆ ಹೂಗುಚ್ಛ, ಹಣ್ಣು-ಹಂಪಲು ನೀಡಿ ಚಪ್ಪಾಳೆ ತಟ್ಟಿ ಅಭಿನಂದಿಸಿದರು. ನಂತರ ಅವರಿಗೆ ಪಡಿತರ ಕಿಟ್ ಕಳುಹಿಸಿಕೊಡಲಾಯಿತು.
ಈ ಸಂದರ್ಭದಲ್ಲಿ ಡಾ.ಎನ್ ಬಸರೆಡ್ಡಿ ಅವರು ಮಾತನಾಡಿ, ರೋಗಿ-332 ಬಗ್ಗೆಯೇ ಸಾಕಷ್ಟು ಚಿಂತಿತರಾಗಿದ್ದೇವು. ಅದಕ್ಕೆ ಅವರ ವಯಸ್ಸು ಕೂಡ ಕಾರಣವಾಗಿತ್ತು. ಈ ಮಹಿಳೆಯ ವಯಸ್ಸು 72 ಆಗಿರವುದರಿಂದ ವಿಶೇಷ ಕಾಳಜಿ ವಹಿಸಿ ಚಿಕಿತ್ಸೆ ನೀಡಲಾಯಿತು. ಅವರು ಗುಣಮುಖರಾಗಿ ಬಿಡುಗಡೆಯಾಗುತ್ತಿರುವುದು ಸಂತಸ ತಂದಿದೆ ಎಂದರು.
ಬೆಂಗಳೂರು: ಪಾದರಾಯನಪುರ ಪ್ರಕರಣದಿಂದ ಆತಂಕಕ್ಕೆ ಒಳಗಾಗಿದ್ದ ರಾಮನಗರ ಜಿಲ್ಲೆಯ ಜನರಿಗೆ ಗುಡ್‍ನ್ಯೂಸ್ ಸಿಕ್ಕಿದೆ. ಪಾದರಾಯನಪುರ ಗಲಭೆಯ ಆರೋಪಿಗಳ ನಿಗಾವಹಿಸಿದ್ದ ವಿವಿಧ ಇಲಾಖೆಗಳ ಸಿಬ್ಬಂದಿಗೆ ಕೊರೊನಾ ಟೆಸ್ಟ್ ವರದಿಯು ನೆಗೆಟಿವ್ ಬಂದಿದೆ.
ಈ ಕುರಿತು ಟ್ವಿಟ್ ಮಾಡಿರುವ ಅಶ್ವತ್ಥ ನಾರಾಯಣ ಅವರು, ರಾಮನಗರದ ಜಿಲ್ಲಾ ಕಾರಾಗೃಹದಲ್ಲಿ ಪಾದರಾಯನಪುರ ಗಲಭೆಯ ಆರೋಪಿಗಳ ನಿಗಾವಹಿಸಿದ್ದ ವಿವಿಧ ಇಲಾಖೆಗಳ ಸಿಬ್ಬಂದಿ ಸೇರಿ ಒಟ್ಟು 68 ಮಂದಿಯ ಎರಡನೇ ಬಾರಿಯ ಕೊರೊನಾ ತಪಾಸಣೆ ಫಲಿತಾಂಶಗಳು ಕೂಡ ನೆಗೆಟಿವ್ ಬಂದಿವೆ. ಈ ಸಂತಸದ ಸುದ್ದಿಯನ್ನು ಹಂಚಿಕೊಳ್ಳುತ್ತಾ, ರಾಮನಗರ ಜಿಲ್ಲೆ ಗ್ರೀನ್ ಝೋನ್‍ನಲ್ಲೇ ಉಳಿದಿದೆ ಎಂದು ಹೇಳಬಯಸುತ್ತೇನೆ ಎಂದು ತಿಳಿಸಿದ್ದಾರೆ.
ರಾಮನಗರದ ಜಿಲ್ಲಾ ಕಾರಾಗೃಹದಲ್ಲಿ, ಪಾದರಾಯನಪುರ ಗಲಭೆಯ ಆರೋಪಿಗಳ ನಿಗಾವಹಿಸಿದ ವಿವಿಧ ಇಲಾಖೆಗಳ ಸಿಬ್ಬಂದಿಗಳು ಸೇರಿ ಒಟ್ಟು 68 ಮಂದಿಯ ಎರಡನೇ ಬಾರಿಯ ಕೊರೋನಾ ತಪಾಸಣೆ ಫಲಿತಾಂಶಗಳು ಕೂಡಾ ನೆಗೆಟಿವ್ ಬಂದಿವೆ.
ಈ ಸಂತಸದ ಸುದ್ದಿಯನ್ನು ಹಂಚಿಕೊಳ್ಳುತ್ತಾ, ರಾಮನಗರ ಜಿಲ್ಲೆ Green Zone ಅಲ್ಲೇ ಉಳಿದಿದೆ ಎಂದು ಹೇಳಬಯಸುತ್ತೇನೆ.
— Dr. C.N. Ashwath Narayan (@drashwathcn) May 6, 2020
ಪಾದರಾಯನಪುರದ ಪುಂಡರು ಸೃಷ್ಟಿಸಿರುವ ಅವಾಂತರ ಅಷ್ಟಿಷ್ಟಲ್ಲ. ಗಲಭೆ ಎಬ್ಬಿಸಿದ್ದ 124 ಮಂದಿಯಲ್ಲಿ ಐವರಿಗೆ ಕೊರೊನಾ ಸೋಂಕು ಹಬ್ಬಿದೆ. ಅವರು ಕಾಲಿಟ್ಟಿದ್ದ ರಾಮನಗರ ಜಿಲ್ಲೆಗೂ ಕೊರೊನಾ ಸೋಂಕು ಹಬ್ಬುವ ಭೀತಿ ಎದುರಾಗಿತ್ತು. ಅದೃಷ್ಟವಶಾತ್ ಯಾವುದೇ ಸಿಬ್ಬಂದಿಗೆ ಸೋಂಕು ಪತ್ತೆಯಾಗಿಲ್ಲ. ಹೀಗಾಗಿ ರಾಮನಗರ ಜಿಲ್ಲೆಯ ಜನರು ನಿಟ್ಟುಸಿರುಬಿಟ್ಟಿದ್ದಾರೆ.
ಪಾದರಾಯನಪುರದ ಪುಂಡರಲ್ಲಿ ಐವರಿಗೆ ಕೊರೊನಾ ಹೇಗೆ ಬಂತು ಎನ್ನುವುದು ಈಗ ಆರೋಗ್ಯ ಇಲಾಖೆಗೆ ಸವಾಲಾಗಿದೆ. ಈ ಪುಂಡರು ಕೊರೊನಾ ಸೋಂಕಿತರ ಪ್ರಾಥಮಿಕ ಅಥವಾ ಸೆಕೆಂಡರಿ ಸಂಪರ್ಕದಲ್ಲಿದ್ದ ಬಗ್ಗೆ ಮಾಹಿತಿ ಇಲ್ಲ. ಅವರಿಗೆ ಕೊರೊನಾ ಹಬ್ಬಿದ್ದು ಹೇಗೆ ಎಂಬ ಮಾಹಿತಿಯನ್ನು ಆರೋಗ್ಯ ಇಲಾಖೆ ಪತ್ತೆ ಮಾಡುತ್ತಿದೆ.
ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರ ಕ್ವಾರಂಟೈನ್ ಅವಧಿ ಮುಕ್ತಾಯವಾಗಿದೆ. ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿರುವ ಅವರು, ನನ್ನ ಸೆಲ್ಫ್ ಕ್ವಾರಂಟೈನ್ ಅವಧಿ ಇಂದು ಮುಕ್ತಾಯವಾಗಿದೆ. ಮತ್ತೆ ನೆಗೆಟಿವ್ ಫಲಿತಾಂಶ ಬಂದಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸಚಿವ ಸಂಪುಟದ ಕಾರ್ಯಗಳಲ್ಲಿ ಭಾಗಿಯಾಗಿದ್ದೇನೆ. ಎಂದಿನಂತೆ ಜನಸೇವೆ ಮಾಡಲು ಉತ್ಸುಕನಾಗಿದ್ದೇನೆ. ಈ ದಿನಗಳಲ್ಲಿ ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ನನಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು ಎಂದು ತಿಳಿಸಿದ್ದಾರೆ.
ಕೊರೊನಾ ಸೋಂಕಿತ ಕ್ಯಾಮೆರಾಮೆನ್‍ನ ಪ್ರಾಥಮಿಕ ಸಂಪರ್ಕದಲ್ಲಿದ್ದ ಅಶ್ವತ್ಥ ನಾರಾಯಣ ಅವರು ಕಳೆದ ತಿಂಗಳ 29ರಿಂದ ಸ್ವಯಂ ಪ್ರೇರಿತರಾಗಿ ಹೋಂ ಕ್ವಾರಂಟೈನ್ ಆಗಿದ್ದರು. ಈಗ ಅವರ ಹೋಂ ಕ್ವಾರಂಟೈನ್ ಅವಧಿ ಮುಕ್ತಾಯಗೊಂಡಿದೆ.
ನನ್ನ ಸೆಲ್ಫ್ ಕ್ವಾರಂಟೈನ್ ಅವಧಿ ಇಂದು ಮುಕ್ತಾಯವಾಗಿದೆ. ಮತ್ತೆ ನೆಗೆಟಿವ್ ಫಲಿತಾಂಶ ಬಂದಿದ್ದು, ಮುಖ್ಯಮಂತ್ರಿ ಶ್ರೀ @BSYBJP ಅವರ ನೇತೃತ್ವದ ಸಚಿವ ಸಂಪುಟದ ಕಾರ್ಯಗಳಲ್ಲಿ ಭಾಗಿಯಾಗಿ ಎಂದಿನಂತೆ ಜನಸೇವೆ ಮಾಡಲು ಉತ್ಸುಕನಾಗಿದ್ದೇನೆ.
ಈ ದಿನಗಳಲ್ಲಿ ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ನನಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು.
— Dr. C.N. Ashwath Narayan (@drashwathcn) May 6, 2020
ನವದೆಹಲಿ: ಕೊರೊನಾ ವೈರಸ್ ಲಾಕ್‍ಡೌನ್‍ನಿಂದಾಗಿ ಬ್ಯಾಟ್ಸ್‌ಮನ್‍ಗಳು ಫಾರ್ಮ್‍ಗೆ ಮರಳುವುದು ಸುಲಭವಲ್ಲ ವಿಷಯವಲ್ಲ ಎಂದು ಟೀಂ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಲೈವ್ ಚಾಟ್ ನಡೆಸಿದ್ದಾಗ ರೋಹಿತ್ ಈ ವಿಷಯ ತಿಳಿಸಿದ್ದಾರೆ. ಹಳೆಯ ಫಾರ್ಮ್‍ಗೆ ಮರಳಲು ಬ್ಯಾಟ್ಸ್‌ಮನ್‍ಗಳಿಗೆ ಕನಿಷ್ಠ ಒಂದೂವರೆ ತಿಂಗಳು ಬೇಕಾಗುತ್ತದೆ.
ಬೌಲರ್‌ಗಳಿಗಿಂತ ಬ್ಯಾಟ್ಸ್‌ಮನ್‍ಗಳು ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ಮರಳುವುದು ಹೆಚ್ಚು ಸವಾಲಾಗಿದೆ ಎಂದು ರೋಹಿತ್ ಮೊಹ್ಮಮ್ ಶಮಿ ಅವರಿಗೆ ತಿಳಿಸಿದರು. ಬ್ಯಾಟ್ಸ್‌ಮನ್‍ಗಳಿಗೆ ಅಭ್ಯಾಸ ಮಾಡಲು ಹೆಚ್ಚಿನ ಸಮಯ ಬೇಕಾಗುತ್ತದೆ. ಅವರು 3 ತಿಂಗಳಿಗಿಂತ ಹೆಚ್ಚು ಕಾಲ ಮೈದಾನದಿಂದ ದೂರವಾಗಿದ್ದಾರೆ. ಈ ಸಮಯದಲ್ಲಿ ಅವರು ಬ್ಯಾಟ್ ಮುಟ್ಟಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬ್ಯಾಟ್ಸ್‌ಮನ್ ತನ್ನ ಲಯವನ್ನು ಮರಳಿ ಪಡೆಯುವುದು ಹೆಚ್ಚು ಕಷ್ಟಕರವಾಗಿರುತ್ತದೆ ಎಂದು ರೋಹಿತ್ ಹೇಳಿದರು.
ಲಾಕ್‍ಡೌನ್ ನಂತರ ಕ್ರಿಕೆಟ್ ಮೈದಾನಕ್ಕೆ ಮರಳುವ ಮೊದಲು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಒಂದು ತಿಂಗಳ ತರಬೇತಿ ಶಿಬಿರ ಇರಬೇಕು ಎಂದು ಶಮಿ ಅಭಿಪ್ರಾಯಪಟ್ಟಿದ್ದಾರೆ. “ಈ ಬಗ್ಗೆ ನಾನು ಆಶಿಶ್ ಭಾಯ್ (ಆಶಿಶ್ ನೆಹ್ರಾ) ಅವರೊಂದಿಗೆ ಮಾತನಾಡಿದ್ದೇನೆ. ಲಾಕ್‍ಡೌನ್ ಮುಗಿದ ತಕ್ಷಣ ನಾವು ಎನ್‍ಸಿಎಯಲ್ಲಿ ತರಬೇತಿ ಶಿಬಿರವನ್ನು ಪ್ರಾರಂಭಿಸಬೇಕು. ಇದು ಲಯವನ್ನು ಸಾಧಿಸಲು ನಮಗೆ ಸಹಾಯಕವಾಗುತ್ತದೆ. ಜೊತೆಗೆ ಬೌಲರ್ ಗಾಯಗೊಂಡಿದ್ದಾರೆಯೇ ಎಂದು ಸಹ ತಿಳಿಯಬಹುದಾಗಿದೆ ಎಂದು ಶಮಿ ತಿಳಿಸಿದರು.
– ಗರ್ಭಿಣಿಯಿಂದ 13 ಮಂದಿಗೆ ಕೊರೊನಾ ಸೋಂಕು
– ಬೆಂಗ್ಳೂರಿನ ಡೆಲಿವರಿ ಬಾಯ್‍ಗೆ ಕೊರೊನಾ
– ಗುಣಮುಖರಾದ 23 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇಂದು ಒಂದೇ ದಿನ 20 ಮಂದಿಗೆ ಕೊರೊನಾ ದೃಢಪಟ್ಟಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 693ಕ್ಕೆ ಏರಿಕೆಯಾಗಿದೆ. ಇಂದು ಒಂದೇ ದಿನ ಬಾಗಲಕೋಟೆಯಲ್ಲಿ 13 ಮಂದಿಗೆ ಕೊರೊನಾ ಸೋಂಕು ತಗುಲಿದೆ.
ಆರೋಗ್ಯ ಇಲಾಖೆ ಇಂದು ಸಂಜೆ ಬಿಡುಗಡೆ ಮಾಡಿದ ಬುಲೆಟಿನ್‍ನಲ್ಲಿ, ಬಾಗಲಕೋಟೆಯಲ್ಲಿ 13, ಬೆಂಗಳೂರು 2, ದಕ್ಷಿಣ ಕನ್ನಡ 3, ಕಲಬುರಗಿ ಹಾಗೂ ವಿಜಯಪುರದಲ್ಲಿ ಒಬ್ಬರಿಗೆ ಕೊರೊನಾ ಪ್ರಕರಣ ಬೆಳಕಿಗೆ ಬಂದಿದೆ. ಬಾಗಲಕೋಟೆಯ ಬದಾಮಿ ತಾಲೂಕಿನ ಡಾಣಕಶಿರೂರು ಗ್ರಾಮದ ಗರ್ಭಿಣಿ (ರೋಗಿ 607)ಯಿಂದಲೇ 13 ಮಂದಿಗೆ ಸೋಂಕು ತಗುಲಿದೆ. ಗರ್ಭಿಣಿಯ ಸೀಮಂತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 13 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಮಂಗಮ್ಮನಪಾಳ್ಯದ ಕೂಲಿ ಕಾರ್ಮಿಕ (ರೋಗಿ ನಂಬರ್ 654)ಗೆ ಸೋಂಕು ತಗುಲಿರುವುದು ದೃಢವಾಗುತ್ತಿದ್ದಂತೆ ಆತನ ಕುಟುಂಬಸ್ಥರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿತ್ತು. ಕಾರ್ಮಿಕನ ಪುತ್ರ ಮತ್ತು ಪತ್ನಿಗೆ ಸೋಂಕು ತಗುಲಿದೆ. ಕಾರ್ಮಿಕನ ಪುತ್ರ ನಗರದಲ್ಲಿ ಡೆಲಿವರಿ ಬಾಯ್ (ರೋಗಿ ನಂಬರ್ 678) ಆಗಿ ಕೆಲಸ ಮಾಡಿಕೊಂಡಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಇದೀಗ ಆರೋಗ್ಯ ಇಲಾಖೆಗೆ ಡೆಲಿವರಿ ಬಾಯ್ ಟ್ರಾವೆಲ್ ಹಿಸ್ಟರಿ ಪತ್ತೆ ಮಾಡುವುದು ಮತ್ತು ಆತನ ಸಂಪರ್ಕದಲ್ಲಿರುವ ಜನರನ್ನು ಪತ್ತೆ ಹಚ್ಚುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಸೋಂಕಿತರ ವಿವರ:
1. ರೋಗಿ-674: ದಕ್ಷಿಣ ಕನ್ನಡದ 11 ವರ್ಷದ ಬಾಲಕಿ. ರೋಗಿ ನಂಬರ್ 536ರ ಜೊತೆ ಸಂಪರ್ಕ
2. ರೋಗಿ-675: ದಕ್ಷಿಣ ಕನ್ನಡದ 35 ವರ್ಷದ ಮಹಿಳೆ. ರೋಗಿ 536ರ ಜೊತೆ ಸಂಪರ್ಕದಲ್ಲಿದ್ದರು.
3. ರೋಗಿ-676: ದಕ್ಷಿಣ ಕನ್ನಡದ ಬಂಟ್ವಾಳದ 16 ವರ್ಷದ ಬಾಲಕಿ. ರೋಗಿ ನಂಬರ್ 390ರ ಜೊತೆ ಸಂಪರ್ಕ
4. ರೋಗಿ-677: ಬೆಂಗಳೂರಿನ 40 ವರ್ಷದ ಮಹಿಳೆ. ರೋಗಿ-654ರ ಜೊತೆ ಸಂಪರ್ಕದಲ್ಲಿದ್ದರು.
5. ರೋಗಿ-678: ಬೆಂಗಳೂರಿನ 25 ವರ್ಷದ ಯುವಕ. ರೋಗಿ-654ರ ಜೊತೆ ಸಂಪರ್ಕದಲ್ಲಿದ್ದರು.
6. ರೋಗಿ-679: ಕಲಬುರಗಿಯ 52 ವರ್ಷದ ಪುರುಷ. ರೋಗಿ 610ರ ಜೊತೆ ಸಂಪರ್ಕದಲ್ಲಿದ್ದರು.
7. ರೋಗಿ-680: ಬಾಗಲಕೋಟೆಯ ಬದಾಮಿ ತಾಲೂಕಿನ 18 ವರ್ಷದ ಯುವತಿ. ಜ್ವರದ ಲಕ್ಷಣಗಳು ಕಾಣಿಸಿಕೊಂಡಿವೆ.
8. ರೋಗಿ-681: ಬಾಗಲಕೋಟೆಯ ಬದಾಮಿ ತಾಲೂಕಿನ 45 ವರ್ಷದ ಪುರುಷ. ರೋಗಿ-607ರ ಜೊತೆ ಸಂಪರ್ಕ.
9. ರೋಗಿ-682: ಬಾಗಲಕೋಟೆಯ ಬದಾಮಿ ತಾಲೂಕಿನ 55 ವರ್ಷದ ಪುರುಷ. ರೋಗಿ-607ರ ಜೊತೆ ಸಂಪರ್ಕ.
10. ರೋಗಿ-683: ಬಾಗಲಕೋಟೆಯ ಬದಾಮಿ ತಾಲೂಕಿನ 26 ವರ್ಷದ ಯುವಕ. ರೋಗಿ-607ರ ಜೊತೆ ಸಂಪರ್ಕ.
11. ರೋಗಿ-684: ಬಾಗಲಕೋಟೆಯ ಬದಾಮಿ ತಾಲೂಕಿನ 47 ವರ್ಷದ ಪುರುಷ. ರೋಗಿ-607ರ ಜೊತೆ ಸಂಪರ್ಕ.
12. ರೋಗಿ-685: ಬಾಗಲಕೋಟೆಯ ಬದಾಮಿ ತಾಲೂಕಿನ 30 ವರ್ಷದ ಮಹಿಳೆ. ರೋಗಿ-607ರ ಜೊತೆ ಸಂಪರ್ಕ.
13. ರೋಗಿ-686: ಬಾಗಲಕೋಟೆಯ ಬದಾಮಿ ತಾಲೂಕಿನ 15 ವರ್ಷದ ಬಾಲಕ. ರೋಗಿ-607ರ ಜೊತೆ ಸಂಪರ್ಕ.
14. ರೋಗಿ-687: ಬಾಗಲಕೋಟೆಯ ಬದಾಮಿ ತಾಲೂಕಿನ 40 ವರ್ಷದ ಮಹಿಳೆ. ರೋಗಿ-607ರ ಜೊತೆ ಸಂಪರ್ಕ.
15. ರೋಗಿ-688: ಬಾಗಲಕೋಟೆಯ ಬದಾಮಿ ತಾಲೂಕಿನ 23 ವರ್ಷದ ಯುವಕ. ರೋಗಿ-607ರ ಜೊತೆ ಸಂಪರ್ಕ.
16. ರೋಗಿ-689: ಬಾಗಲಕೋಟೆಯ ಬದಾಮಿ ತಾಲೂಕಿನ 10 ವರ್ಷದ ಬಾಲಕ. ರೋಗಿ-607ರ ಜೊತೆ ಸಂಪರ್ಕ.
17. ರೋಗಿ-690: ಬಾಗಲಕೋಟೆಯ ಬದಾಮಿ ತಾಲೂಕಿನ 32 ವರ್ಷದ ಪುರುಷ.ರೋಗಿ-607ರ ಜೊತೆ ಸಂಪರ್ಕ.
18. ರೋಗಿ-691: ಬಾಗಲಕೋಟೆಯ ಬದಾಮಿ ತಾಲೂಕಿನ 30 ವರ್ಷದ ಮಹಿಳೆ. ರೋಗಿ-607ರ ಜೊತೆ ಸಂಪರ್ಕ.
19. ರೋಗಿ-692: ಬಾಗಲಕೋಟೆಯ ಬದಾಮಿ ತಾಲೂಕಿನ 16 ವರ್ಷದ ಬಾಲಕಿ. ರೋಗಿ-607ರ ಜೊತೆ ಸಂಪರ್ಕ.
20. ರೋಗಿ-693: ವಿಜಯಪುರದ 35 ವರ್ಷದ ಮಹಿಳೆ. ರೋಗಿ-221ರ ಜೊತೆ ಸಂಪರ್ಕದಲ್ಲಿದ್ದರು.
ಇಂದು ಡಿಸ್ಚಾರ್ಜ್:
ಬೆಳಗಾವಿಯಲ್ಲಿ 8 ಮಂದಿ (ರೋಗಿ-224, 225, 243, 244, 245, 289, 294 298), ಬಾಗಲಕೋಟೆ ನಾಲ್ವರು (ರೋಗಿ-262, ಪಿ -263, 373, 379), ಮಂಡ್ಯದಲ್ಲಿ ನಾಲ್ವರು (ರೋಗಿ-237, 322, 322, 371), ಕಲಬುರಗಿಯಲ್ಲಿ ಐವರು ರೋಗಿ-394, 395, 421, 424, 425), ವಿಜಯಪುರ ಒಬ್ಬರು (ರೋಗಿ-428) ಹಾಗೂ ದಕ್ಷಿಣ ಕನ್ನಡ ಒಬ್ಬರು (ರೋಗಿ-325) ಸೇರಿ ಒಟ್ಟು ಇಂದು 23 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಡಾಣಕಶಿರೂರು ಗ್ರಾಮವನ್ನು ಸಂಪೂರ್ಣ ಸೀಲ್‍ಡೌನ್ ಮಾಡಲಾಗಿದ್ದು, ಗ್ರಾಮಸ್ಥರಿಗೆ ಮನೆಯಿಂದ ಹೊರಬರದಂತೆ ಸೂಚಿಸಲಾಗಿದೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಗಳನ್ನು ಬಂದ್ ಮಾಡಲಾಗಿದೆ.
ಮೂರು ದಿನಗಳ ಹಿಂದೆ ಡಾಣಕಶಿರೂರು ಗ್ರಾಮದ ಗರ್ಭಿಣಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿತ್ತು. ಆದರೆ ಗರ್ಭಿಣಿಗೆ ಸೋಂಕು ಹೇಗೆ ತಗುಲಿದೆ ಎಂಬುವುದು ಇದುವರೆಗೂ ಪತ್ತೆಯಾಗಿಲ್ಲ. ಗರ್ಭಿಣಿಗೆ ಸೋಂಕು ತಗುಲಿರುವ ವಿಷಯ ತಿಳಿದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಕಾರಣ ಕೆಲವು ದಿನಗಳ ಹಿಂದೆ ನಡೆದ ಗರ್ಭಿಣಿಯ ಸೀಮಂತ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಸೇರಿದಂತೆ ಗ್ರಾಮದ ಬಹುತೇಕರು ಭಾಗಿಯಾಗಿದ್ದರು. ಗರ್ಭಿಣಿಯ ಪತಿ ಸಾಂಪ್ರದಾಯಿಕ ಕಜ್ಜಾಯ ಭಿಕ್ಷೆಗಾಗಿ ಗ್ರಾಮದ ಪ್ರತಿ ಪ್ರತಿ ಮನೆಗಳಿಗೂ ತೆರಳಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ದಾವಣಗೆರೆ: ಹೆಮ್ಮಾರಿ ಕೊರೊನಾ ವೈರಸ್ ತಡೆಗಟ್ಟಲು ವೈದ್ಯರು ಹಗಲು ರಾತ್ರಿ ಎನ್ನದೆ ಕೆಲಸ ಮಾಡುತ್ತಿದ್ದು, ಅವರ ಜೊತೆ ವೈದ್ಯಕೀಯ ವಿದ್ಯಾರ್ಥಿಗಳು ಕೂಡ ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಅಂತಹ ಕೊರೊನಾ ವಾರಿಯರ್ಸ್ ಗಳ ಸರ್ಕಾರ ನಿರ್ಲಕ್ಷ್ಯವಹಿಸಿದೆ.
15 ತಿಂಗಳ ಶಿಷ್ಯವೇತನಕ್ಕೆ ಒತ್ತಾಯಿಸಿ ದಾವಣಗೆರೆಯ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳು ಕಪ್ಪುಪಟ್ಟಿ ಧರಿಸಿ ಕೋವಿಡ್ ವಾರ್ಡ್‍ಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದೆರಡು ದಿನದ ಹಿಂದಷ್ಟೇ ಶಿಷ್ಯವೇತನ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾಸ್ಪತ್ರೆಯ ಮುಂಭಾಗ ಕ್ಯಾಂಡಲ್ ಲೈಟ್ ಹಿಡಿದು ಪ್ರತಿಭಟನೆ ನಡೆಸಿದ್ದ ವಿದ್ಯಾರ್ಥಿಗಳು ಇಂದು ಕಪ್ಪು ಪಟ್ಟಿ ಧರಿಸಿ ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದಾರೆ.
ಮೆರಿಟ್ ಸೀಟ್ ಪಡೆದ ವಿದ್ಯಾರ್ಥಿಗಳ ಶಿಷ್ಯವೇತನವು 2019ರ ಫೆಬ್ರವರಿಯಿಂದ ಪಾವತಿಯಾಗಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಕಾಲೇಜು, ಹಾಸ್ಟಲ್ ಶುಲ್ಕ ಪಾವತಿಸಲು ಪರದಾಡುವ ಸ್ಥಿತಿಯಲ್ಲಿದ್ದಾರೆ. ಸರ್ಕಾರ ಈ ಕೂಡಲೇ ಶಿಷ್ಯ ವೇತನ ನೀಡಿದರೆ ನಮ್ಮ ಕಷ್ಟ ನಿವಾರಣೆಯಾಗಲಿದೆ ಎಂದು ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.
ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ 100ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳಿದ್ದಾರೆ. ನಮ್ಮ ಹೋರಾಟ ನಮ್ಮ ಹಕ್ಕಿಗಾಗಿ, ರೋಗಿಗಳ ವಿರುದ್ಧವಲ್ಲ ಎಂಬ ಘೋಷಣೆಯೊಂದಿಗೆ ಕಪ್ಪು ಪಟ್ಟಿ ಧರಿಸಿ ಸೇವೆಗೆ ಹಾಜರಾಗಿದ್ದಾರೆ.
ದಾವಣಗೆರೆಯ ಜೆಜೆಎಂ ಮೆಡಿಕಲ್ ಕಾಲೇಜಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಾಗಿದ್ದೇವೆ. ನಾವು ಮೆರಿಟ್‍ನಲ್ಲಿ ಸೀಟ್ ಪಡೆದು ವ್ಯಾಸಂಗ ಮಾಡುತ್ತಿದ್ದೇವೆ. ನಮ್ಮ ಮೆರಿಟ್ ಆಧರಿಸಿ ನಮಗೆ ಶಿಷ್ಯವೇತನ ನೀಡಲಾಗುತ್ತದೆ. ಆದರೆ ಕಳೆದ ಫೆಬ್ರವರಿ ತಿಂಗಳಿನಿಂದ ಶಿಷ್ಯವೇತನವಿಲ್ಲದೇ ನಮ್ಮ ಖರ್ಚು, ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಬೇಕೆಂದು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ಚಿತ್ರದುರ್ಗ: ಕೊರೊನಾ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳದೆ ಗ್ರೀನ್ ಝೋನ್‍ನಲ್ಲಿರು ಚಿತ್ರದುರ್ಗಕ್ಕೆ ತಬ್ಲಿಘಿಗಳು ವಾಪಸ್ ಆಗಿದ್ದಾರೆ.
ಭಾರತದಲ್ಲಿ ಕೊರೊನಾ ಶುರುವಾದಾಗ ವಿದೇಶಕ್ಕೆ ತೆರಳಿದ್ದ ಚಿತ್ರದುರ್ಗ ಮೂಲದ ಓರ್ವ ಮಹಿಳೆಗೆ ಕೊರೊನಾ ಪಾಸಿಟಿವ್ ಬಂದಿದ್ದದಿಂದ ಜಿಲ್ಲೆಯ ಜನರು ಆತಂಕಕ್ಕೆ ಒಳಗಾಗಿದ್ದರು. ಮಹಿಳೆ ಗುಣಮುಖರಾಗಿ ಮನೆ ಸೇರಿದ ಬಳಿಕ ನಿಟ್ಟುಸಿರು ಬಿಟ್ಟಿದ್ದರು. ಅಲ್ಲಿಂದ ಇಲ್ಲಿಯವರೆಗೂ ಜಿಲ್ಲೆಯಲ್ಲಿ ಯಾರಿಗೂ ಸೋಂಕು ಕಾಣಿಸಿಕೊಳ್ಳದೆ ಗ್ರೀನ್ ಝೋನ್‍ನಲ್ಲಿದೆ. ಆದರೆ ಮಂಗಳವಾರ ಗುಜರಾತ್‍ನಿಂದ ಬಂದಿರುವ 33ಜನ ತಬ್ಲಿಘಿಗಳು ಬಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಚಿತ್ರದುರ್ಗ ಡಿಎಚ್‍ಓ ಡಾ.ಪಾಲಾಕ್ಷ ಅವರು, ಅದೃಷ್ಟವಶಾತ್ ಅವರೆಲ್ಲರೂ ಸಹ ಈಗಾಗಲೇ ಗುಜರಾತ್‍ನಲ್ಲಿ ತಪಾಸಣೆಗೊಳಪಟ್ಟಿದ್ದು, 30 ದಿನಗಳ ಕ್ವಾರಂಟೈನ್ ಸಹ ಮುಗಿಸಿದ್ದಾರೆ. ಆದರೂ ಅವರನ್ನು ಮುಂಜಾಗ್ರತಾಕ್ರಮವಾಗಿ ಚಿತ್ರದುರ್ಗದ ಸರ್ಕಾರಿ ಹಾಸ್ಟೆಲ್‍ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಹಾಗೆಯೇ ಮತ್ತೊಮ್ಮೆ ಅವರನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸುವುದರ ಜೊತೆಗೆ ಅವರ ಮೇಲೆ ಒಂದು ವಾರಗಳ ಕಾಲ ನಿಗಾ ವಹಿಸಲಾಗುವುದು ಎಂದು ತಿಳಿಸಿದ್ದಾರೆ.
ಚಿತ್ರದುರ್ಗಕ್ಕೆ ವಾಪಸ್ ಆಗಿರುವ ತಬ್ಲಿಘಿಗಳೆಲ್ಲರೂ ಚಿತ್ರದುರ್ಗ, ತುಮಕೂರು ಮೂಲದವರಾಗಿದ್ದು, ಅವರಲ್ಲಿ ಚಿತ್ರದುರ್ಗದ 15 ಜನ ಹಾಗೂ ತುಮಕೂರಿನ 18 ಜನ ತಬ್ಲಿಗಿಗಳು ಒಂದೇ ಬಸ್‍ನಲ್ಲಿ ವಾಪಸ್ ಆಗಿದ್ದಾರೆ. ಅವರು ಗುಜರಾತ್‍ನ ಅಹಮದಾಬಾದ್‍ನಲ್ಲಿ ಮಾರ್ಚ್ 8ರಂದು ನಡೆದ ತಬ್ಲಿಘಿ ಸಭೆಗೆ ತೆರಳಿದ್ದರು. ಲಾಕ್‍ಡೌನ್ ಸಡಿಲಿಕೆಯಿಂದಾಗಿ ಸೋಮವಾರ ಗುಜರಾತಿನಿಂದ ಪ್ರಯಾಣ ಬೆಳೆಸಿ ಇಂದು ಅವರ ಸ್ವಗ್ರಾಮಗಳಿಗೆ ತೆರಳಲು ಆಗಮಿಸಿದ್ದಾರೆ. ಆದರೆ ಎಚ್ಚೆತ್ತ ಜಿಲ್ಲೆಯ ಪೊಲೀಸರು ಚಿತ್ರದುರ್ಗ ತಾಲೂಕಿನ ಬೊಗಳೇರಹಟ್ಟಿ ಚೆಕ್ ಪೋಸ್ಟ್ ಬಳಿ ಅವರನ್ನು ತಡೆದು ಪರಿಶೀಲನೆ ನಡೆಸಿದ್ದಾರೆ. ಹೀಗಾಗಿ ಕೋಟೆನಾಡಿನ ಮಂದಿ ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯಾಧಿಕಾರಿ ಮನವಿ ಮಾಡಿದ್ದಾರೆ.
ಜಿಲ್ಲಾ ಆರೋಗ್ಯಾಧಿಕಾರಿಗಳು ಕೂಡ ಚಿತ್ರದುರ್ಗದ 15 ಜನರನ್ನು ಮಾತ್ರ ಇಲ್ಲಿ ಕ್ವಾರಂಟೈನ್ ಮಾಡಿದ್ದು, 18 ಜನರನ್ನು ತುಮಕೂರಿಗೆ ಕಳಿಸಿದ್ದಾರೆ. ಆದರೆ ಈವರೆಗೆ ನಿರಾತಂಕವಾಗಿ ಯಾವುದೇ ಭಯವಿಲ್ಲದೇ ನಿರ್ಭಯವಾಗಿ ಓಡಾಡುತ್ತಿದ್ದ ಚಿತ್ರದುರ್ಗದ ಜನರು ತಬ್ಲಿಘಿಗಳ ಆಗಮನದಿಂದ ಮತ್ತೆ ಚಿಂತಾಕ್ರಾಂತರಾಗಿದ್ದಾರೆ.
ಹುಬ್ಬಳ್ಳಿ: ಕೊರೊನಾ ಲಾಕ್‍ಡೌನ್‍ನಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸಡಿಲಿಕೆ ಕೊಡಲಾಗಿದೆ. ಈ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆಯ ಆಡಳಿತ ಕಚೇರಿ, ಹುಬ್ಬಳ್ಳಿ-ಧಾರವಾಡ ಜಿಲ್ಲೆಯ ಗ್ಯಾರೇಜ್ ಮತ್ತು ವರ್ಕ್‌ಶಾಪ್ ಮೇ 4ರಿಂದ ಶೇ.33 ಸಿಬ್ಬಂದಿಯೊಂದಿಗೆ ಕೆಲಸ ಆರಂಭಿಸಿವೆ.
ಅಧಿಕಾರಿಗಳು ಮತ್ತು ಸಿಬ್ಬಂದಿ ಮತ್ತೆ ಕೆಲಸಕ್ಕೆ ಹಾಜರಾಗುತ್ತಿರುವುದರಿಂದ ಕೋವಿಡ್-19 ವೈರಸ್ ಹರಡುವುದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹುಬ್ಬಳ್ಳಿಯಲ್ಲಿನ ಗ್ಯಾರೇಜ್ ಮತ್ತು ವರ್ಕ್‌ಶಾಪ್ ಪ್ರವೇಶದ್ವಾರದಲ್ಲಿ ದೇಹ ತಾಪಮಾನ ಸ್ಕ್ರೀನಿಂಗ್ ಸ್ಮಾರ್ಟ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕಾರ್ಯಾಗಾರಕ್ಕೆ ಪ್ರವೇಶಿಸುವ ಎಲ್ಲ ಸಿಬ್ಬಂದಿಯನ್ನು ಪರೀಕ್ಷಿಸಲಾಗುತ್ತಿದೆ. ಇನ್‍ಫ್ರಾರೆಡ್ ಸ್ಮಾರ್ಟ್ ಕ್ಯಾಮೆರಾದೊಂದಿಗೆ ದೇಹದ ಉಷ್ಣಾಂಶ ಅಳೆಯುವ ಥರ್ಮಲ್ ಸ್ಕ್ರೀನಿಂಗ್ ಬಳಸಲಾಗುತ್ತಿದೆ. ಈ ಮೂಲಕ ದಕ್ಷತೆಯೊಂದಿಗೆ ಸುರಕ್ಷಿತ ಸ್ಥಳಗಳಿಂದ ಮೇಲ್ವಿಚಾರಣೆ ಮಾಡಲಾಗುತ್ತಿದೆ.
ಇನ್‍ಫ್ರಾರೆಡ್ ಸ್ಮಾರ್ಟ್ ಕ್ಯಾಮೆರಾಗಳು ಒಂದೇ ಬಾರಿಗೆ 20 ಜನರ ದೇಹದ ಉಷ್ಣಾಂಶ ಅಳೆಯುವ ಸಾಮರ್ಥ್ಯ ಹೊಂದಿದೆ. ಯಾವುದೇ ಸಿಬ್ಬಂದಿಯ ದೇಹದ ಉಷ್ಣಾಂಶ ಹೆಚ್ಚಾಗಿದ್ದರೆ ಅವರನ್ನು ವೈದ್ಯಕೀಯ ಪರೀಕ್ಷೆಗೆ ಕಳಿಸಿಕೊಡಲಾಗುತ್ತಿದೆ. ನೌಕರನ ದೇಹದ ಉಷ್ಣತೆಯು 37.5 ಸೆಲ್ಸಿಯಸ್ ದಾಟಿದರೆ ಥರ್ಮಲ್ ಸ್ಕ್ರೀನಿಂಗ್ ಕೆಂಪು ಬಣ್ಣ ತೋರಿಸಿ, ಬಜರ್ ಧ್ವನಿಯೊಂದಿಗೆ ಎಚ್ಚರಿಕೆ ನೀಡುತ್ತದೆ. ಹೀಗಾಗಿ ಸೋಂಕು ಹರಡುವುದನ್ನು ತಡೆಗಟ್ಟಲು ಸಾಧ್ಯವಾಗುತ್ತಿದೆ.
ಪ್ರವೇಶದ್ವಾರದಲ್ಲಿ ಅಳವಡಿರುವ ಸಿಸ್ಟಮ್ ಹೆಚ್ಚಿನ ಉಷ್ಣಾಂಶ ಸಂವೇದನೆಯೊಂದಿಗೆ ಇಮೇಜ್ ಸೆನ್ಸರ್ ಅನ್ನು ಹೊಂದಿದೆ. ಕ್ಯಾಮೆರಾಗಳು ಹೆಚ್ಚು ನಿಖರವಾದ ಚಿತ್ರ ಮತ್ತು ತಾಪಮಾನ ವ್ಯತ್ಯಾಸದ ಮಾಹಿತಿಯನ್ನು ಸೆರೆಹಿಡಿಯಲು ಅನುಕೂಲವಾಗಿವೆ.
– ವೀರ್ಯ ಪಡೆಯುವ ಬಗ್ಗೆ ಮಾಹಿತಿ ಕೊಟ್ಟ 2 ಮಕ್ಕಳ ತಾಯಿ
– ‘ಜೇನುತುಪ್ಪ, ನಿಂಬೆ ರಸಕ್ಕಿಂತ ಸ್ಪರ್ಮ್ ಸ್ಮೂಥಿ ಭಿನ್ನವಲ್ಲ’
ಲಂಟನ್: ಹೆಮ್ಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಡಲು ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಎರಡು ಮಕ್ಕಳ ತಾಯಿಯೊಬ್ಬರು ವೀರ್ಯ ಸ್ಮೂಥಿ (ಸ್ಪರ್ಮ್ ಸ್ಮೂಥಿ) ಸೇವಿಸುತ್ತಿದ್ದಾರೆ.
ಬಿಟ್ರನ್‍ನ 32 ವರ್ಷದ ಟ್ರೇಸಿ ಕಿಸ್ ತನ್ನ ಗೆಳೆಯನಿಂದ ವೀರ್ಯ ಪಡೆದು ಅದನ್ನು ಸ್ಮೂಥಿಯಲ್ಲಿ ಮಿಶ್ರಣ ಮಾಡಿಕೊಂಡು ಕಳೆದ ಮೂರು ವರ್ಷಗಳಿಂದ ಸೇವಿಸುತ್ತಾ ಬಂದಿದ್ದಾರೆ. ಹೀಗಾಗಿ ಅವರಿಗೆ ಈವರೆಗೂ ಶೀತ ಅಥವಾ ಜ್ವರ ಕಾಣಿಸಿಕೊಂಡಿಲ್ಲ. ಟ್ರೇಸಿ ಕಿಸ್ ವಾರಕ್ಕೆ ಮೂರು ಬಾರಿ ಸ್ಪರ್ಮ್ ಸ್ಮೂಥಿ ಕುಡಿಯುತ್ತಾರೆ.
ಈ ಕುರಿತು ಮಾತನಾಡಿರುವ ಟ್ರೇಸಿ ಕಿಸ್ “ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನಾನು ಸಸ್ಯಾಹಾರಿ ವಿಧಾನವನ್ನು ಕಂಡುಕೊಂಡಿದ್ದೇನೆ. ಔಷಧಿಗಳಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಸೂಕ್ತವಲ್ಲ. ತಾಯಿಯು ತನ್ನ ನವಜಾತ ಶಿಶುವಿಗೆ ಸ್ತನ್ಯಪಾನ ಮಾಡುವುದರಿಂದ ಮಗುವಿಗೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತಾಳೆ. ಅಂತೆ ನಾನು 2017ರಲ್ಲಿ ಸ್ಪರ್ಮ್ ಸ್ಮೂಥಿ ಕುಡಿಯಲು ಆರಂಭಿಸಿದೆ. ಅಂದಿನಿಂದ ನನಗೆ ಶೀತ ಅಥವಾ ಜ್ವರ ಕಾಣಿಸಿಕೊಂಡಿಲ್ಲ. ಮುಖದ ಚರ್ಮವನ್ನು ಮೃದುವಾಗಿಸಲು ವೀರ್ಯವನ್ನು ಹಚ್ಚಿಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.
“ಹೆಚ್ಚಿನ ಪೋಷಕಾಂಶ ಮತ್ತು ಪ್ರಯೋಜನಗಳನ್ನು ಪಡೆಯಲು ವೀರ್ಯವನ್ನು ನೇರವಾಗಿ ಸೇವಿಸುವುದು ಉತ್ತಮ. ಆದರೆ ನಾನು ಅದನ್ನು ಫ್ರೀಜರ್ ನಲ್ಲಿ ಐಸ್ ಕ್ಯೂಬ್ ಟ್ರೇನಲ್ಲಿ ಸಂಗ್ರಹಿಸುತ್ತೇನೆ. ನನಗೆ ವೀರ್ಯ ನೀಡುತ್ತಿರುವ ವ್ಯಕ್ತಿಯ ಹೆಸರು ಹೇಳಲು ನಾನು ಇಷ್ಟಪಡುವುದಿಲ್ಲ. ಅವರಿಂದ ದೂರದ ಸಂಬಂಧದಲ್ಲಿದ್ದೇನೆ. ಕೆಲವೊಮ್ಮೆ ತಾಜಾ ಹಣ್ಣುಗಳು ಮತ್ತು ಬಾಳೆಹಣ್ಣುಗಳ ಸ್ಮೂತಿ ಜೊತೆಗೆ ವೀರ್ಯ ಮಿಶ್ರಣ ಮಾಡಿಕೊಂಡು ಕುಡಿಯುತ್ತೇನೆ. ಇದು ವಿವಿಧ ರೀತಿಯ ರುಚಿಕೊಡುತ್ತದೆ” ಎಂದು ತಿಳಿಸಿದ್ದಾರೆ.
“ಆರೋಗ್ಯ ದೃಷ್ಟಿಯಿಂದ ಕಟ್ಟುನಿಟ್ಟಾಗಿ ಸ್ಪರ್ಮ್ ಸ್ಮೂತಿಯನ್ನು ಸೇವಿಸುತ್ತಿರುವೆ. ರೋಗ ಲಕ್ಷಣಗಳು ಕಾಣಿಸಿಕೊಂಡ ಬಳಿಕ ಬಹಳಷ್ಟು ಜನರು ತಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹೊಸ ಮಾರ್ಗಗಳನ್ನು ಪ್ರಯತ್ನಿಸುತ್ತಾರೆ. ಆದರೆ ಅದು ಸರಿಯಲ್ಲ. ಅನಾರೋಗ್ಯಕ್ಕೆ ಒಳಗಾಗುವ ಮೊದಲೇ ರೋಗನಿರೋಧಕ ಶಕ್ತಿಯನ್ನು ಬಲಪಡಿಸಬೇಕು” ಎಂದು ಟ್ರೇಸಿ ಕಿಸ್ ಹೇಳಿದ್ದಾರೆ.
“ನೀವು ಗಂಟಲು ನೋವು ಕಾಣಿಸಿಕೊಂಡಾಗ ಕುಡಿಯುವ ಜೇನುತುಪ್ಪ ಮತ್ತು ನಿಂಬೆ ರಸಕ್ಕಿಂತ ಸ್ಪರ್ಮ್ ಸ್ಮೂಥಿ ಭಿನ್ನವಾಗಿರುವುದಿಲ್ಲ. ಇದು ಮತ್ತೊಂದು ನೈಸರ್ಗಿಕ ಔಷಧಿಯಾಗಿದೆ. ಆದರೆ ಸಂಪೂರ್ಣವಾಗಿ ಉಚಿತವಾಗಿದ್ದು, ಗೆಳೆಯರನ್ನೇ ಹೊಂದಿರಬೇಕಾಗಿಲ್ಲ. ನೀವು ಆರೋಗ್ಯವಂತ ಸ್ನೇಹಿತನನ್ನು ಕೇಳಿ ವೀರ್ಯ ಪಡೆಯಬಹುದಾಗಿದೆ” ಎಂದು ಸಲಹೆ ನೀಡಿದ್ದಾರೆ.
ಕೊರೊನಾ ವೈರಸ್‍ಗೆ ಇಲ್ಲಿಯವರೆಗೆ ಯಾರೂ ಔಷಧಿ ಕಂಡು ಹಿಡಿದಿಲ್ಲ. ವಿವಿಧ ಪ್ರಯೋಗಾಲಯದಲ್ಲಿ ಔಷಧಿ ಕಂಡು ಹಿಡಿಯುವ ಕಾರ್ಯ ನಡೆಯುತ್ತಿದೆ. ವೀರ್ಯ ಸೇವಿಸುವುದರಿಂದ ಕೋವಿಡ್ 19 ಬರುವುದಿಲ್ಲ ಎನ್ನುವುದು ಆಕೆಯ ಅಭಿಪ್ರಾಯವಾಗಿದೆ.
– ಸೋಂಕಿತರ ಸಂಖ್ಯೆ 673ಕ್ಕೆ ಏರಿಕೆ, 29 ಮಂದಿ ಬಲಿ
– ದಾವರಣಗೆರೆಯಲ್ಲಿ ಕೊರೊನಾ ಸ್ಫೋಟ
– ಹೌಸ್ ಕೀಪರ್, ಕೂಲಿ ಕಾರ್ಮಿಕನಿಗೆ ಡೆಡ್ಲಿ ವೈರಸ್
ಬೆಂಗಳೂರು: ರಾಜ್ಯದಲ್ಲಿ ಡೆಡ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬರುವಂತೆ ಕಾಣುತ್ತಿಲ್ಲ. ಇಂದು ಒಂದೇ ದಿನದಲ್ಲಿ 22 ಮಂದಿಗೆ ಸೋಂಕು ದೃಢಪಟ್ಟಿದೆ. ಅಷ್ಟೇ ಅಲ್ಲದೆ ಇಬ್ಬರು ಹೆಮ್ಮಾರಿ ವೈರಸ್‍ಗೆ ಬಲಿಯಾಗಿದ್ದಾರೆ.
ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 673ಕ್ಕೆ ಹಾಗೂ ಮೃತರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ಇವತ್ತು ಬಾಗಲಕೋಟೆ, ಮೈಸೂರು, ವಿಜಯಪುರ ಜಿಲ್ಲೆಯಲ್ಲಿ ತಲಾ ಮೂವರು ಸೇರಿದಂತೆ ಒಟ್ಟು 10 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇತ್ತ ದಾವಣಗೆರೆಯಲ್ಲಿ ಕೊರೊನಾ ಸ್ಫೋಟಗೊಂಡಂತೆ ಕಾಣುತ್ತಿದೆ. ಕೊರೊನಾದಿಂದ ಮುಕ್ತವಾಗಿ ಹಸಿರು ವಲಯದಲ್ಲಿದ್ದ ಉತ್ತರ ಕನ್ನಡ ಜಿಲ್ಲೆಯ ಯುವಕನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಎರಡು ದಿನಗಳ ಹಿಂದೆ ಯುವಕನಿಗೆ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದವು.
ದಾವಣಗೆರೆ ಜಿಲ್ಲೆಯಲ್ಲಿ ಇಂದು ಒಂದೇ ದಿನದಲ್ಲಿ 5 ವರ್ಷದ ಬಾಲಕ ಸೇರಿದಂತೆ 12 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 44ಕ್ಕೆ ಏರಿಕೆ ಕಂಡಿದೆ. ಇತ್ತ ಹಸಿರು ವಲಯದಲ್ಲಿದ್ದ ಹಾವೇರಿ ಜಿಲ್ಲೆಯಲ್ಲಿ ಮತ್ತೊಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರು ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ಮೂವರಿಗೆ, ಬಳ್ಳಾರಿ ಜಿಲ್ಲೆಯ ಇಬ್ಬರಿಗೆ, ದಕ್ಷಿಣ ಕನ್ನಡ, ಧಾರವಾಡ ಹಾಗೂ ಉತ್ತರ ಕನ್ನಡ ಜಿಲ್ಲೆಯ ತಲಾ ಒಬ್ಬರಿಗೆ ಸೋಂಕು ತಗುಲಿದೆ.
ಬೆಂಗಳೂರಿನ ಶಿವಾಜಿನಗರದಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ 40 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದೆ. ಈ ವ್ಯಕ್ತಿ ವಾಸವಾಗಿದ್ದ ಒಂದೇ ಕೋಣೆಯಲ್ಲಿ 7 ಜನರು ವಾಸವಾಗಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಸೋಂಕಿತ ವ್ಯಕ್ತಿ ಕ್ವಾರಂಟೈನ್ ಮಾಡಿದ್ದ ಹೋಟೆಲ್ ನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡಿದ್ದು, ಇಲ್ಲಿ 72 ಜನರು ಉಳಿದುಕೊಂಡಿದ್ದರು. ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದ 13 ಜನರನ್ನು ಗುರುತಿಸಿ ಕ್ವಾರಂಟೈನ್ ಮಾಡಲಾಗಿದೆ. ಆದ್ರೆ ಸೋಂಕು ಹೇಗೆ ತಗುಲಿದೆ ಎಂಬುವುದು ತಿಳಿದು ಬಂದಿಲ್ಲ.
ಬೆಂಗಳೂರಿನ ಮಂಗಮ್ಮನ ಪಾಳ್ಯದ 45 ವರ್ಷದ ಕೂಲಿ ಕಾರ್ಮಿಕನಿಗೆ ಸೋಂಕು ತಗುಲಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಜಯನಗರದ ಜನರಲ್ ಆಸ್ಪತ್ರೆಯಿಂದ ವಿಕ್ಟೋರಿಯಾದ ಕೋವಿಡ್-19 ಘಟಕಕ್ಕೆ ಶಿಫ್ಟ್ ಮಾಡಲಾಗಿದೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಕಾರ್ಮಿಕ ಐದು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದನು.
ಸೋಂಕಿತರ ವಿವರ:
1. ರೋಗಿ 652: ಬೆಂಗಳೂರಿನ 30 ವರ್ಷದ ಮಹಿಳೆ. ಸೋಂಕು ಸಂಪರ್ಕ ಮಾಹಿತಿಯನ್ನು ಪತ್ತೆ ಹಚ್ಚಲಾಗುತ್ತಿದೆ.
2. ರೋಗಿ 653: ಬೆಂಗಳೂರಿನ 40 ವರ್ಷದ ಪುರುಷ. ರೋಗಿ 420ರ ಜೊತೆ ಸಂಪರ್ಕ
3. ರೋಗಿ 654: ಬೆಂಗಳೂರಿನ 45 ವರ್ಷದ ಪುರುಷ. ಜ್ವರದ ಲಕ್ಷಣಗಳು ಕಾಣಿಸಿಕೊಂಡಿವೆ.
4. ರೋಗಿ 655: ಬಾಗಲಕೋಟೆಯ 29 ವರ್ಷದ ಮಹಿಳೆ. ರೋಗಿ 367 ಮತ್ತು 368ರ ಸಂಪರ್ಕದಲ್ಲಿದ್ದರು.
5. ರೋಗಿ 656: ಬಾಗಲಕೋಟೆಯ 29 ವರ್ಷದ ಪುರುಷ. ರೋಗಿ 367 ಮತ್ತು 368ರ ಸಂಪರ್ಕದಲ್ಲಿದ್ದರು.
6. ರೋಗಿ 657: ಬಳ್ಳಾರಿ 43 ವರ್ಷದ ಪುರುಷ. ಉತ್ತರಾಖಂಡಕ್ಕೆ ಪ್ರಯಾಣದ ಹಿನ್ನೆಲೆ
7. ರೋಗಿ 658: ದಕ್ಷಿಣ ಕನ್ನಡ 51 ವರ್ಷದ ಪುರುಷ. ರೋಗಿ 536ರ ಜೊತೆ ಸಂಪರ್ಕದಲ್ಲಿದ್ದರು.
8. ರೋಗಿ 659: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ 28 ವರ್ಷದ ಯುವಕ. ಜ್ವರದ ಲಕ್ಷಣಗಳು ಕಾಣಿಸಿಕೊಂಡಿವೆ.
ಮಧ್ಯಾಹ್ನದ ವರದಿ:
9. ರೋಗಿ-660: ದಾವಣಗೆರೆಯ 30 ವರ್ಷದ ಪುರುಷ. ರೋಗಿ-556ರ ಸಂಪರ್ಕದಲ್ಲಿದ್ದರು.
10. ರೋಗಿ-660: ದಾವಣಗೆರೆಯ 25 ವರ್ಷದ ಪುರುಷ. ರೋಗಿ-556ರ ಸಂಪರ್ಕದಲ್ಲಿದ್ದರು.
11. ರೋಗಿ-662: ದಾವಣಗೆರೆಯ 50 ವರ್ಷದ ಮಹಿಳೆ. ರೋಗಿ-556ರ ದ್ವಿತೀಯ ಸಂಪರ್ಕದಲ್ಲಿದ್ದರು.
12. ರೋಗಿ-663: ದಾವಣಗೆರೆಯ 51 ವರ್ಷದ ಪುರುಷ. ರೋಗಿ-556ರ ದ್ವಿತೀಯ ಸಂಪರ್ಕದಲ್ಲಿದ್ದರು.
13. ರೋಗಿ-664: ದಾವಣಗೆರೆಯ 48 ವರ್ಷದ ಪುರುಷ. ರೋಗಿ-581ರ ಸಂಪರ್ಕದಲ್ಲಿದ್ದರು.
14. ರೋಗಿ-665: ದಾವಣಗೆರೆಯ 52 ವರ್ಷದ ಮಹಿಳೆ. ರೋಗಿ-556ರ ಸಂಪರ್ಕದಲ್ಲಿದ್ದರು.
15. ರೋಗಿ-666: ದಾವಣಗೆರೆಯ 36 ವರ್ಷದ ಮಹಿಳೆ. ರೋಗಿ-581ರ ಸಂಪರ್ಕದಲ್ಲಿದ್ದರು.
16. ರೋಗಿ-667: ದಾವಣಗೆರೆಯ 15 ವರ್ಷದ ಬಾಲಕಿ. ರೋಗಿ-581ರ ಸಂಪರ್ಕದಲ್ಲಿದ್ದಳು.
17. ರೋಗಿ-668: ದಾವಣಗೆರೆಯ 19 ವರ್ಷದ ಯುವತಿ. ರೋಗಿ-581ರ ಸಂಪರ್ಕದಲ್ಲಿದ್ದರು.
18. ರೋಗಿ-669: ದಾವಣಗೆರೆಯ 27 ವರ್ಷದ ಪುರುಷ. ರೋಗಿ-581ರ ಸಂಪರ್ಕದಲ್ಲಿದ್ದಳು.
19. ರೋಗಿ-670: ದಾವಣಗೆರೆಯ 42 ವರ್ಷದ ಪುರುಷ. ರೋಗಿ-581ರ ಸಂಪರ್ಕದಲ್ಲಿದ್ದರು.
20. ರೋಗಿ-671: ದಾವಣಗೆರೆಯ 5 ವರ್ಷದ ಬಾಲಕ. ರೋಗಿ-581ರ ಸಂಪರ್ಕದಲ್ಲಿದ್ದರು.
21. ರೋಗಿ-672: ಹಾವೇರಿ ಜಿಲ್ಲೆ ಸವನೂರಿನ 40 ವರ್ಷದ ಪುರುಷ. ರೋಗಿ-639ರ ಸಂಪರ್ಕದಲ್ಲಿದ್ದರು.
22. ರೋಗಿ-673: ಧಾರವಾಡದ 26 ವರ್ಷದ ಪುರುಷ. ಮುಂಬೈ ಪ್ರವಾಸದ ಹಿನ್ನಲೆ ಹೊಂದಿದ್ದರು.
ಬಳ್ಳಾರಿಯ ಕೌಲ್ ಬಜಾರ್ ಪ್ರದೇಶದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದೆ. ಈ ವ್ಯಕ್ತಿ 18 ಜನರ ತಂಡದೊಂದಿಗೆ ಉತ್ತರಾಖಂಡ ಪ್ರವಾಸಕೈಗೊಂಡಿದ್ದರು. ಸೋಂಕಿತನ ಸಂಪರ್ಕದಲ್ಲಿದ್ದ 12 ಜನರ ಆರೋಗ್ಯದ ಮೇಲೆ ನಿಗಾ ಇಡಲಾಗಿದ್ದು, ಜಿಲ್ಲಾಡಳಿತ ಎಲ್ಲರ ವರದಿಗಾಗಿ ಕಾಯುತ್ತಿದೆ.
ರೋಗಿ ನಂಬರ್ 640 (62 ವರ್ಷ)ದ ಮಹಿಳೆ ಕೊರೊನಾಗೆ ಬಲಿಯಾಗಿದ್ದಾರೆ. ಇವರು ಅಸ್ತಮಾ, ಶ್ವಾಸಕೋಶ ಕಾಯಿಲೆ, ಬೊಜ್ಜು ಸೇರಿ ನಾನಾ ಕಾಯಿಲೆಗಳಿಂದ ಬಳಲುತ್ತಿದ್ದು, 3-4 ದಿನಗಳ ಹಿಂದೆ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ಬೆಳಗ್ಗೆ ಈ ವೃದ್ಧೆಯಲ್ಲಿ ಕೊರೊನಾ ಸೋಂಕು ಇರುವುದು ಪತ್ತೆಯಾಗಿತ್ತು. ಆದರೆ ಇಂದು ಬೆಳಗ್ಗಿನ ಜಾವ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇವರಿಗೆ ರೋಗಿ ನಂಬರ್ 228 (13 ವರ್ಷ)ದ ಬಾಲಕನ ದ್ವಿತೀಯ ಸಂಪರ್ಕಕ್ಕೆ ಬಂದ ಹಿನ್ನೆಲೆ ಸೋಂಕು ತಗುಲಿದ್ದು ಧೃಢಪಟ್ಟಿದೆ. ಸಕಲ ವೈದ್ಯಕೀಯ, ಧಾರ್ಮಿಕ ಶಿಷ್ಠಾಚಾರದಂತೆ ವೃದ್ಧೆಯ ಅಂತ್ಯಕ್ರಿಯೆಯನ್ನು ಅಧಿಕಾರಿಗಳು ನೆರವೇರಿಸಿದ್ದಾರೆ.
ರೋಗಿ-662 (50 ವರ್ಷದ) ದಾವಣಗೆರೆ ಮಹಿಳೆ ಸೋಂಕಿನಿಂದ ಮೃತಪಟ್ಟಿದ್ದಾರೆ. ಅವರಿಗೆ ವೈರಲ್ ನ್ಯುಮೋನಿಯಾ ಇತ್ತು. ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಮಂಗಳೂರು: ಕೊರೊನಾ ಲಾಕ್‍ಡೌನ್‍ನಿಂದಾಗಿ ಖಾಲಿ ಖಾಲಿಯಾಗಿದ್ದ ಮಂಗಳೂರು ನಗರಕ್ಕೆ ಕಾಡಿನಿಂದ ಬಂದಿದ್ದ ಕಾಡುಕೋಣವೊಂದು ಜನರಿಗೆ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.
ಕಳೆದ ಕೆಲ ದಿನದಿಂದ ನಿಶ್ಯಬ್ದದಿಂದ ಇದ್ದ ನಗರವವೂ ಕಾಡೆಂದುಕೊಂಡು ಆಗಮಿಸಿದ್ದ ಕಾಡುಕೋಣ ಇಂದು ಬೆಳ್ಳಂಬೆಳಗ್ಗೆ ಪ್ರತ್ಯೇಕವಾಗಿತ್ತು. ನಗರದ ಬಿಜೈ, ಅಳಕೆ, ಮಣ್ಣುಗುಡ್ಡೆ ಪರಿಸರದಲ್ಲಿ ತನ್ನ ರಂಪಾಟವನ್ನು ತೋರಿಸಿತ್ತು. ರಸ್ತೆಯಲ್ಲಿದ್ದ ಹಲವು ಕಾರುಗಳಿಗೆ ಹಾನಿಯನ್ನು ಮಾಡಿತ್ತು.
ಮನೆಯ ಕಾಂಪೌಡು ಹಾರಿ ಬರುತ್ತಿದ್ದ ಕಾಡುಕೋಣದ ಆರ್ಭಟಕ್ಕೆ ಆತಂಕಗೊಂಡಿದ್ದ ಜನ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯರ ಸಹಕಾರದಿಂದ ಕೊನೆಗೂ ಮಣ್ಣಗುಡ್ಡೆಯಲ್ಲಿ ಕಾಡುಕೋಣವನ್ನು ಸೆರೆಹಿಡಿದಿದ್ದಾರೆ.
ಒಂದು ಕಡೆಯಿಂದ ಇನ್ನೊಂದು ಕಡೆಗೆ ಭಯಂಕರವಾಗಿ ಓಡುತ್ತಿದ್ದ ಕಾಡುಕೋಣಕ್ಕೆ ಎರಡು ಅರಿವಳಿಕೆ ಚುಚ್ಚು ನೀಡಿ ನಿಯಂತ್ರಣಕ್ಕೆ ತರಲಾಯಿತು. ಕಾಡಿನಲ್ಲಿರುವ ಈ ಕಾಡುಕೋಣ ಲಾಕ್‍ಡೌನ್ ಕಾರಣದಿಂದ ಖಾಲಿರಸ್ತೆಯಲ್ಲಿ ನಗರಕ್ಕೆ ಎಂಟ್ರಿ ಕೊಟ್ಟಿರಬಹುದು ಎಂದು ಅಂದಾಜಿಸಲಾಗಿದೆ.