Tag: Coronavirus

  • ಚೀನಾದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 2,233ಕ್ಕೆ ಏರಿಕೆ – ಭಾರತೀಯರನ್ನು ವಾಪಸ್ ಕರೆತರಲು ನಿರ್ಧಾರ

    ಚೀನಾದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 2,233ಕ್ಕೆ ಏರಿಕೆ – ಭಾರತೀಯರನ್ನು ವಾಪಸ್ ಕರೆತರಲು ನಿರ್ಧಾರ

    ಬೀಜಿಂಗ್: ಮಹಾಮಾರಿ ಕೊರೊನಾ ವೈರಸ್‍ಗೆ ಚೀನಾ ಅಕ್ಷರಶಃ ನಲುಗಿ ಹೋಗಿದ್ದು, ಸೋಂಕಿಗೆ ಬಲಿಯಾದವರ ಸಂಖ್ಯೆ 2,233ಕ್ಕೆ ಏರಿದೆ. ಇತ್ತ ಭಾರತೀಯ ವಿದೇಶಾಂಗ ಸಚಿವಾಲಯವು ವುಹಾನ್‍ನಲ್ಲಿ ಇರುವ ಭಾರತೀಯರನ್ನು ಭಾರತೀಯ ವಾಯು ಸೇನೆಯ ಸಹಾಯದಿಂದ ದೇಶಕ್ಕೆ ವಾಪಸ್ ಕರೆಸಿಕೊಳ್ಳಲಾಗುತ್ತೆ ಎಂದು ತಿಳಿಸಿದೆ.

    ಹೌದು. ಸದ್ಯ ಚೀನಾ ಮಾತ್ರವಲ್ಲಿದೆ 25ಕ್ಕೂ ಹೆಚ್ಚು ದೇಶಗಳಿಗೆ ಹೆಮ್ಮಾರಿ ಕೊರೊನಾ ಕಾಲಿಟ್ಟಿದೆ. ಚೀನಾದಲ್ಲಿ ಈವರೆಗೆ ಸುಮಾರು 75 ಸಾವಿರಕ್ಕೂ ಅಧಿಕ ಮಂದಿ ಕೊರೆನಾ ವೈರಸ್ ಸೋಂಕಿಗೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ. ಇತ್ತ ಹುಬೈನಲ್ಲಿ ಸೋಂಕು ತಗುಲಿರುವ 411 ಹೊಸ ಪ್ರಕರಣಗಳು ವರದಿಯಾಗಿದ್ದರೆ, ವುಹಾನ್‍ನಲ್ಲಿ 319 ಹೊಸ ಪ್ರಕರಣಗಳು ಬೆಳಕಿಗೆ ಬಂದಿದೆ.

    ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು ಗುರುವಾರ ಮಾತನಾಡಿ, ಚೀನಾದಲ್ಲಿ ವಿಮಾನಗಳ ಪ್ರಯಾಣಕ್ಕೆ ನಿಷೇಧ ಹೇರಲಾಗಿಲ್ಲ. ಆದರೆ, ಪ್ರಯಾಣದ ವೇಳೆ ನಿಯಮಗಳ ಪಾಲನೆಗೆ ಕೆಲ ಸಲಹೆಗಳನ್ನು ನೀಡಲಾಗಿದೆ. ಚೀನಾದ ವುಹಾನ್ ನಗರದಲ್ಲಿ ಸಂಕಷ್ಟದಲ್ಲಿರುವ ಭಾರತೀಯರಿಗೆ ಈಗಾಗಲೇ ವೈದ್ಯಕೀಯ ಸಾಮಾಗ್ರಿಗಳನ್ನು ತಲುಪಿಸಲಾಗಿದ್ದು, ಮತ್ತೆ 100 ಭಾರತೀಯರನ್ನು ವುಹಾನ್‍ನಿಂದ ಶೀಘ್ರದಲ್ಲಿಯೇ ಸ್ಥಳಾಂತರ ಮಾಡಲಾಗುತ್ತದೆ ಎಂದು ತಿಳಿಸಿದರು.

    ಈಗಾಗಲೇ ಭಾರತ ಸಿ-17 ಸೇನಾ ವಿಮಾನವನ್ನು ವುಹಾನ್‍ಗೆ ಕಳುಹಿಸಿದ್ದು, ಸಂಕಷ್ಟದಲ್ಲಿರುವ ಭಾರತೀಯನ್ನು ಭಾರತಕ್ಕೆ ಕರೆ ತರುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಹಾಗೆಯೇ ಭಾರತೀಯ ಪ್ರಜೆಗಳ ಮೇಲೆ ನಿಗಾ ಇರಿಸಲಾಗಿದೆ. ಅಗತ್ಯ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವಂತ ವುಹಾನ್ ಹಾಗೂ ಹುಬೆ ಪ್ರಾಂತ್ಯದಲ್ಲಿರುವ ಭಾರತೀಯರಿಗೆ ಈಗಾಗಲೇ ಸಲಹೆ ನೀಡಲಾಗಿದೆ. ಕಳೆದೊಂದು ತಿಂಗಳಿನಿಂದ 640 ಭಾರತೀಯರನ್ನು ವುಹಾನ್‍ನಿಂದ ಸ್ಥಳಾಂತರ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

  • ಕೊರೊನಾ ಎಫೆಕ್ಟ್ – ಸಮುದ್ರ ಮಧ್ಯೆ ಸಿಲುಕಿದ್ದ ಮಂಗ್ಳೂರಿನ ಮಧುಮಗ ಬಿಡುಗಡೆ

    ಕೊರೊನಾ ಎಫೆಕ್ಟ್ – ಸಮುದ್ರ ಮಧ್ಯೆ ಸಿಲುಕಿದ್ದ ಮಂಗ್ಳೂರಿನ ಮಧುಮಗ ಬಿಡುಗಡೆ

    – ಶೀಘ್ರದಲ್ಲೇ ನಡೆಯಲಿದೆ ಮುಂದೂಡಲ್ಪಟ್ಟ ವಿವಾಹ

    ಮಂಗಳೂರು: ಕೊರೊನಾ ವೈರಸ್ ಎಫೆಕ್ಟ್‌ನಿಂದ ಸಮುದ್ರ ಮಧ್ಯೆ ದಿಗ್ಬಂಧನಕ್ಕೊಳಗಾಗಿದ್ದ ಹಡಗನ್ನು ಹಾಂಗ್ ಕಾಂಗ್ ಸರ್ಕಾರ ಇಂದು ಬಿಡುಗಡೆಗೊಳಿಸಿದೆ. ಹೀಗಾಗಿ ಆ ಹಡಗಿನಲ್ಲಿದ್ದ ಸಿಬ್ಬಂದಿ ಮಂಗಳೂರಿನ ಕುಂಪಲ ನಿವಾಸಿಗೆ ಇಂದು ಮದುವೆಯಾಗಬೇಕಿತ್ತು. ಇದೀಗ ಮುಂದೂಡಲ್ಪಟ್ಟ ವಿವಾಹ ಶೀಘ್ರದಲ್ಲೇ ನಡೆಯಲಿದೆ.

    ಸಿಂಗಾಪುರ ಮೂಲದ ಸ್ಟಾರ್ ಕ್ರೂಝ್‍ನಲ್ಲಿ ಮಂಗಳೂರಿನ ಕುಂಪನ ನಿವಾಸಿ ಗೌರವ್ ಕಳೆದ ಕೆಲ ವರ್ಷದಿಂದ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಫೆಬ್ರವರಿ 10 ಅಂದರೆ ಇಂದು ಮಂಗಳೂರಿನಲ್ಲಿ ಗೌರವ್‍ಗೆ ಮದುವೆ ನಡೆಯಬೇಕಿತ್ತು. ಆದರೆ ಕೊರೊನಾ ವೈರಸ್‍ನ ಹಿನ್ನೆಲೆಯಲ್ಲಿ ಗೌರವ್ ಇದ್ದ ಸ್ಟಾರ್ ಕ್ರೂಝ್‍ನ್ನು ಹಾಂಗ್ ಕಾಂಗ್ ಸಮುದ್ರ ಮಧ್ಯೆ ಅಲ್ಲಿನ ಸರ್ಕಾರ ತಡೆದು ನಿಲ್ಲಿಸಿತ್ತು. ಇದನ್ನೂ ಓದಿ: ಮದುವೆಗೂ ತಟ್ಟಿದ ಕೊರೊನಾ ವೈರಸ್

    ಕಳೆದ ಎಂಟು ದಿನದಿಂದ ಸಮುದ್ರ ಮಧ್ಯೆಯಲ್ಲೇ 1,700 ಪ್ರವಾಸಿಗರು ಸೇರಿ ಸಿಬ್ಬಂದಿ ದಿಗ್ಭಂದನಕ್ಕೊಳಗಾಗಿದ್ದರು. ಹಾಂಗ್ ಕಾಂಗ್, ಸಿಂಗಪುರ, ಥೈವಾನ್ ನಡುವೆ ಸಂಚರಿಸುವ ಕ್ರೂಝ್ ಆಗಿರುವುದರಿಂದ ಅದರಲ್ಲಿದ್ದ ಎಲ್ಲರನ್ನೂ ಕೊರೊನಾ ವೈರಸ್ ಇರುವ ಶಂಕೆಯಿಂದ ತಪಾಸಣೆ ನಡೆಸಲಾಗಿತ್ತು. ಹೀಗಾಗಿ ಇಂದು ನಿಗದಿಯಾಗಿದ್ದ ಗೌರವ್ ಅವರ ಮದುವೆಯನ್ನು ಅವರು ಬರದೇ ಇರುವ ಕಾರಣಕ್ಕೆ ಮುಂದೂಡಲಾಗಿತ್ತು.

    ಇಂದು ಹಡಗಿನಲ್ಲಿದ್ದ ಎಲ್ಲರ ವರದಿಯಲ್ಲೂ ನೆಗೆಟಿವ್ ಬಂದಿರುವುದರಿಂದ ಹಗಡನ್ನು ಬಿಡುಗಡೆಗೊಳಿಸಲಾಗಿದೆ. ಹೀಗಾಗಿ ಕ್ರೂಝ್‍ನಲ್ಲಿದ್ದ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದು, ಗೌರವ್ ಅವರು ಶೀಘ್ರದಲ್ಲೇ ಊರಿಗೆ ಬರಲಿದ್ದಾರೆ. ಹೀಗಾಗಿ ಮುಂದೂಡಲ್ಪಟ್ಟ ಮದುವೆ ಶೀಘ್ರದಲ್ಲೇ ನಡೆಸಲು ಕುಟುಂಬದವರು ತೀರ್ಮಾನಿಸಿದ್ದಾರೆ.

  • ಚೀನಾದಲ್ಲಿ ಕೊರೊನಾ ವೈರಸ್‍ಗೆ ಬಲಿಯಾದವರ ಸಂಖ್ಯೆ 564ಕ್ಕೆ ಏರಿಕೆ

    ಚೀನಾದಲ್ಲಿ ಕೊರೊನಾ ವೈರಸ್‍ಗೆ ಬಲಿಯಾದವರ ಸಂಖ್ಯೆ 564ಕ್ಕೆ ಏರಿಕೆ

    ಬೀಜಿಂಗ್: ಮಾರಣಾಂತಿಕ ಕೊರೊನಾ ವೈರಸ್ ಸೋಂಕಿಗೆ ಚೀನಾದಲ್ಲಿ ಸಾವನ್ನಪ್ಪಿದವರ ಸಂಖ್ಯೆ 564ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 70ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಈವರೆಗೆ ಒಟ್ಟು 28,018 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಚೀನಾದ ಆರೋಗ್ಯ ಸಮಿತಿ ಮಾಹಿತಿ ನೀಡಿದೆ.

    ಬುಧವಾರ ಒಂದೇ ದಿನ 73 ಮಂದಿ ಕೊರೊನಾ ವೈರಸ್‍ಗೆ ಬಲಿಯಾಗಿದ್ದು, ಹುಬೇಯ ಪ್ರಾಂತ್ಯದಲ್ಲಿ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಹುಬೇಯನಲ್ಲಿ ಬುಧವಾರ 2,987 ಸೋಂಕು ತಗುಲಿರುವ ಶಂಕಿತ ಪ್ರಕರಣಗಳು ಪತ್ತೆಯಾಗಿದೆ. ಈವರೆಗೆ ಹುಬೇಯದಲ್ಲಿ ಒಟ್ಟು 19,665 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದನ್ನೂ ಓದಿ: ಕೊರೊನಾ ವೈರಸ್‍ನಿಂದ ಆಸ್ಪತ್ರೆ ಸೇರಿದ ತಂದೆ – ಹಸಿವಿನಿಂದ ಬಳಲಿ ಶವವಾದ ವಿಶೇಷಚೇತನ ಮಗ

    ಹುಬೇಯ ಪ್ರಾಂತ್ಯದಲ್ಲಿ ಸೋಂಕು ತಗುಲಿರುವ 14,314 ಮಂದಿಯನ್ನು ಆಸ್ಪತ್ರೆಯ ನಿಗಾ ಘಟಕದಲ್ಲಿ ಇರಿಸಲಾಗಿದೆ. ಅವರಲ್ಲಿ 756 ಮಂದಿ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬುಧವಾರ ಜಪಾನ್ ದೇಶದ ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿ ಪ್ರಯಾಣಿಸುತ್ತಿದ್ದವರ ಪೈಕಿ 10 ಮಂದಿಯಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿತ್ತು. ಈಗ ಸೋಂಕು ತಗಲಿರುವವರ ಸಂಖ್ಯೆ ಹೆಚ್ಚಾಗಿದ್ದು, ಒಟ್ಟು 20 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಡೈಮಂಡ್ ಪ್ರಿನ್ಸೆಸ್ ಹಡಗನ್ನು ಸದ್ಯ ಯಾಕೋಹಾಮಾ ಬಂದರಿನಲ್ಲಿ ನಿಲ್ಲಿಸಲಾಗಿದೆ. ಈ ಹಡಗಿನಲ್ಲಿ ಒಟ್ಟು 3,700 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.

    ವಿಶ್ವಾದ್ಯಂತ ಕೊರೊನಾ ವೈರಸ್ ಹರಡುತ್ತಿದ್ದು, ಏಷ್ಯಾ, ಯುರೋಪ್, ಅಮೆರಿಕಾ, ಕೆನೆಡಾದಲ್ಲಿ ಸೋಂಕು ಹರಡಿದೆ. ಈವರೆಗೆ ಸುಮಾರು 20 ದೇಶಗಳಲ್ಲಿ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದೆ.

  • ಕೊರೊನಾ ವೈರಸ್ ಕೊಲ್ಲಲು ಚೀನಾಗೆ ಹೊರಟ ರಾಖಿ

    ಕೊರೊನಾ ವೈರಸ್ ಕೊಲ್ಲಲು ಚೀನಾಗೆ ಹೊರಟ ರಾಖಿ

    ಮುಂಬೈ: ಸದಾ ಒಂದಲ್ಲ ಒಂದು ವಿವಾದದಿಂದ ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಸುದ್ದಿಯಲ್ಲಿರುತ್ತಾಳೆ. ಆದ್ರೆ ಈಗ ವಿಶ್ವಾದ್ಯಂತ ಭೀತಿ ಹೆಚ್ಚಿಸುತ್ತಿರುವ ಕೊರೊನಾ ವೈರಸ್ ಅನ್ನು ನಾಶ ಮಾಡುತ್ತೇನೆ ಎಂದು ಚೀನಾಗೆ ಹೊರಟ ರಾಖಿ ವಿಡಿಯೋ ಸಖತ್ ವೈರಲ್ ಆಗಿದೆ.

    ಹೌದು. ಕೊರೊನಾ ವೈರಸ್‍ಗೆ ಸದ್ಯ ಚೀನಾದಲ್ಲಿ 425 ಮಂದಿ ಬಲಿಯಾಗಿದ್ದಾರೆ. 20 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದೆ. ವಿಶ್ವದೆಲ್ಲೆಡೆ ಹರಡುತ್ತಿರುವ ಕೊರೊನಾ ವೈರಸ್ ಭಾರತಕ್ಕೂ ಕಾಲಿಟ್ಟಿದ್ದು, ಕೇರಳದಲ್ಲಿ ಈಗಾಗಲೇ 3 ಮಂದಿಗೆ ಸೋಂಕು ತಗುಲಿರುವುದು ವರದಿಯಾಗಿದೆ.

    ಹೀಗಿರುವಾಗ ನಾನು ಚೀನಾಗೆ ಹೋಗುತ್ತಿದ್ದೇನೆ, ನನ್ನ ಬಳಿ ಕೊರೊನಾ ವೈರಸ್ ಅನ್ನು ನಾಶ ಮಾಡಲು ಔಷಧಿ ಇದೆ. ಕೊರೊನಾ ವೈರಸ್ ಅನ್ನು ನಾನು ಕೊಂದೇ ಕೊಲ್ಲುತ್ತೇನೆ ಎಂದು ರಾಖಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾಳೆ. ಈ ವಿಡಿಯೋ ಸದ್ಯ ಸಖತ್ ವೈರಲ್ ಆಗಿದ್ದು, ರಾಖಿಯ ಡ್ರಾಮಾ ನೋಡಿ ನೆಟ್ಟಿಗರು ಸಖತ್ ಟ್ರೋಲ್ ಮಾಡುತ್ತಿದ್ದಾರೆ.

    ಮೋದಿಜಿ ನಾನು ಚೀನಾಗೆ ಹೋಗುತ್ತಿದ್ದೇನೆ. ಕೊರೊನಾ ವೈರಸ್ ಅನ್ನು ನಾಶ ಮಾಡುತ್ತೇನೆ. ನಾನು ಕ್ಷೇಮವಾಗಿ ವಾಪಸ್ ಬರಲಿ ಅಂತ ಎಲ್ಲರೂ ಪ್ರಾರ್ಥಿಸಿ. ನಾನು ನಾಸಾದಿಂದ ಕೊರೊನಾ ವೈರಸ್ ಅನ್ನು ನಾಶ ಮಾಡಲು ಸ್ಪೆಷಲ್ ಔಷಧಿ ತಂದಿದ್ದೇನೆ. ಚೀನಾದಲ್ಲಿ ಜನರು ಉಸಿರಾಡಲು ಕೂಡ ಕಷ್ಟ ಪಡುತ್ತಿದ್ದಾರೆ ಎಂದು ರಾಖಿ ವಿಡಿಯೋ ಮಾಡಿ ತನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾಳೆ. ಈ ವಿಡಿಯೋವನ್ನು 77 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದು, ನೂರಾರು ಮಂದಿ ಕಮೆಂಟ್ ಮಾಡಿ ರಾಖಿಯ ಕಾಲೆಳೆದಿದ್ದಾರೆ.

    ಸಂಬಂಧ ಇರಲಿ, ಬಿಡಲಿ ಅಭಿಮಾನಿಗಳನ್ನು ರಂಜಿಸುವ ಯಾವ ಅವಕಾಶವನ್ನು ರಾಖಿ ಬಿಡಲ್ಲ. ಇಡೀ ಜಗತ್ತೆ ಕೊರೊನಾ ವೈರಸ್‍ನಿಂದ ಆತಂಕದಲ್ಲಿದ್ದರೆ, ರಾಖಿ ಮಾತ್ರ ಕೂಲ್ ಆಗಿ ನನ್ನ ಬಳಿ ಔಷಧಿ ಇದೆ ಎಂದು ಶಾಕ್ ಕೊಟ್ಟಿದ್ದಾಳೆ.

    https://www.instagram.com/p/B8D_fADH4Gy/

  • ಹುಬ್ಬಳ್ಳಿಯ ಟೆಕ್ಕಿಗಿಲ್ಲ ಕೊರೊನಾ ವೈರಸ್ ಭಯ

    ಹುಬ್ಬಳ್ಳಿಯ ಟೆಕ್ಕಿಗಿಲ್ಲ ಕೊರೊನಾ ವೈರಸ್ ಭಯ

    ಹುಬ್ಬಳ್ಳಿ: ಚೀನಾದಿಂದ ಆಗಮಿಸಿದ ಹುಬ್ಬಳ್ಳಿ ಮೂಲದ ಟೆಕ್ಕಿಗೆ ಕೊರೊನಾ ವೈರಸ್ ಇಲ್ಲವೆಂದು ವೈದ್ಯಕೀಯ ವರದಿ ದೃಢಪಡಿಸಿದೆ.

    ಸಾಫ್ಟ್‌ವೇರ್ ಎಂಜಿನಿಯರ್ ಸಂದೀಪ್‍ಗೆ ಕೊರೊನಾ ಸೊಂಕು ಶಂಕೆ ಹಿನ್ನೆಲೆಯಲ್ಲಿ ಕಿಮ್ಸ್‌ನ ಪ್ರತ್ಯೇಕ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸಂದೀಪ್ ರಕ್ತದ ಮಾದರಿಯನ್ನು ಬೆಂಗಳೂರು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿಂದ ಇದೀಗ ಕೊರೊನಾ ನೆಗೆಟಿವ್ ಎಂದು ವರದಿ ಬಂದಿದ್ದು ಕೊರೊನಾ ಭೀತಿ ಇಲ್ಲವೆಂದು ಸ್ಪಷ್ಟವಾಗಿದೆ. ಇದನ್ನೂ ಓದಿ: ಕೊರೊನಾ ವೈರಸ್ ಎಂದರೇನು? ಹೇಗೆ ಹರಡುತ್ತೆ? ರೋಗ ಲಕ್ಷಣವೇನು?

    ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಯಾವುದೇ ಆತಂಕ ಪಡುವ ಅಗತ್ಯವಿಲ್ಲವೆಂದು ಕಿಮ್ಸ್ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಹುಬ್ಬಳ್ಳಿ ಜನರು ಮತ್ತು ವೈದ್ಯರು ನಿಟ್ಟುಸಿರು ಬಿಟ್ಟಿದ್ದಾರೆ.

    ಕೇಶ್ವಾಪುರದ ಸಂದೀಪ್ ಚೀನಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಜನವರಿ 19ರಂದು ಬೆಂಗಳೂರಿಗೆ ಆಗಮಿಸಿದ್ದು, ಕಳೆದ 15 ದಿನಗಳ ಹಿಂದೆ ಹುಬ್ಬಳ್ಳಿಗೆ ಬಂದಿದ್ದಾರೆ. ಸೋಮವಾರ ಜ್ವರ ಬಂದಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅವರು ಚೀನಾದಿಂದ ಆಗಮಿಸಿದ ಹಿನ್ನೆಲೆಯಲ್ಲಿ ಕೊರೊನಾ ಶಂಕೆ ವ್ಯಕ್ತಪಡಿಸಿ ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿತ್ತು. ನಂತರ ಅದನ್ನು ಬ್ಲಡ್ ಮತ್ತು ಸ್ಟ್ರಾಬ್ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಪ್ ವೈರಾಜಲಿ ಬೆಂಗಳೂರಿಗೆ ರವಾನಿಸಲಾಗಿತ್ತು.

  • ಕೊರೊನಾ ವೈರಸ್ ಭೀತಿಗೆ ಕುಸಿದ ಮೆಣಸಿನಕಾಯಿ ದರ – ರೈತ ಕಂಗಾಲು

    ಕೊರೊನಾ ವೈರಸ್ ಭೀತಿಗೆ ಕುಸಿದ ಮೆಣಸಿನಕಾಯಿ ದರ – ರೈತ ಕಂಗಾಲು

    ಬಳ್ಳಾರಿ: ಚೀನಾದಲ್ಲಿ ಮರಣಮೃದಂಗ ಬಾರಿಸುತ್ತಿರುವ ಕೊರೊನಾ ವೈರಸ್ ಇದೀಗ ಭಾರತದಲ್ಲೂ ಅಲ್ಲಲ್ಲಿ ಕಾಣ ಸಿಗುತ್ತದೆ. ಇದು ಒಂದು ಕಡೆ ಆತಂಕದ ವಿಷಯವಾದರೆ, ಇದೀಗ ಚೀನಾದ ಕೊರೊನಾ ವೈರಸ್ ಎಫೆಕ್ಟ್ ಬಳ್ಳಾರಿ ರೈತರಿಗೆ ತಟ್ಟಿದೆ.

    ಬಳ್ಳಾರಿ ಮತ್ತು ಹಾವೇರಿ ಭಾಗದಲ್ಲಿ ಅತಿಹೆಚ್ಚು ಮೆಣಸಿನಕಾಯಿ ಬೆಳೆಯನ್ನು ಬೆಳೆಯಲಾಗುತ್ತದೆ. ಊಟಕ್ಕಷ್ಟೇ ಅಲ್ಲ ಹಲವು ಕೆಂಪು ಬಣ್ಣದ ಸೌಂದರ್ಯ ವರ್ಧಕಗಳಿಗೂ ಮೆಣಸಿನಕಾಯಿ ಬಳಸಲಾಗುತ್ತದೆ. ಬಳ್ಳಾರಿಯಲ್ಲಿ ಭತ್ತದ ಜೊತೆ ಅತಿಹೆಚ್ಚು ಬೆಳೆಯೋ ಬೆಳೆ ಅಂದರೆ ಅದು ಕೆಂಪು ಮೆಣಸಿನಕಾಯಿ. ಕಳೆದ ಮೂರು ವರ್ಷದಿಂದ ಉತ್ತಮ ಇಳುವರಿ ಇಲ್ಲದೇ ಮೆಣಸಿನಕಾಯಿ ಬೆಳೆದು ನಷ್ಟ ಹೊಂದುತ್ತಿದ್ದ ಬಳ್ಳಾರಿ ರೈತರಿಗೆ ಈ ಬಾರಿ ಮೆಣಸಿನಕಾಯಿ ಬೆಳೆ ಒಂದಷ್ಟು ಕೈ ಹಿಡಿದಿತ್ತು. ಉತ್ತಮ ಮಳೆ ಬಂದ ಹಿನ್ನೆಲೆ ಇಳುವರಿ ಕೂಡ ಉತ್ತಮವಾಗಿ ಬಂದಿತ್ತು. ಆದರೆ ಇದೀಗ ಚೀನಾದಲ್ಲಿ ಕೊರೊನಾ ವೈರಸ್ ಹರಡುತ್ತಿರುವ ಪರಿಣಾಮ ಮೆಣಸಿನಕಾಯಿ ರಫ್ತು ಸ್ಥಗಿತಗೊಳಿಸಲಾಗಿದೆ.

    ಪರಿಣಾಮ ಮೆಣಸಿನಕಾಯಿ ಬೆಲೆ ದಿಢೀರನೆ ಕುಸಿದಿದ್ದು, ಅನ್ನದಾತ ಕಂಗಾಲಾಗಿದ್ದಾನೆ. ಕಳೆದ 15 ದಿನಗಳ ಹಿಂದೆ ಬ್ಯಾಡಗಿ, ಬಳ್ಳಾರಿ ಸೇರಿದಂತೆ ವಿವಿಧ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್‍ ಕೆಂಪು ಮೆಣಸಿನಕಾಯಿಗೆ 20 ರಿಂದ 25 ಸಾವಿರ ರೂ. ಬೆಲೆಯಿತ್ತು. ಆದರೆ, ಇದೀಗ ಏಕಾಏಕಿ ಕ್ವಿಂಟಾಲ್‍ಗೆ ಕೇವಲ 10 ರಿಂದ 12 ಸಾವಿರ ರೂ. ಇಳಿಮುಖವಾಗಿದೆ.

    ಬಳ್ಳಾರಿ ಜಿಲ್ಲೆಯ ಕಂಪ್ಲಿ, ಸಿರಗುಪ್ಪದಲ್ಲಿ ಅತಿಹೆಚ್ಚು ಕೆಂಪು ಮೆಣಸಿನಕಾಯಿ ಬೆಳೆ ಬೆಳೆಯಲಾಗುತ್ತದೆ. ವಿಶೇಷವಾಗಿ ಡಬ್ಬಿ ಬ್ಯಾಡಗಿ, ಸಿಜೆಂಟಾ ಥಳಿಯ ಮೆಣಸಿನಕಾಯಿಯನ್ನು ಅತಿಹೆಚ್ಚು ಇಲ್ಲಿ ಬೆಳೆಯಲಾಗುತ್ತದೆ. ಆದರೆ ಬೆಲೆ ದಿಢೀರ್ ಕುಸಿತದಿಂದ ಬಳ್ಳಾರಿಯ 20 ಸಾವಿರಕ್ಕೂ ಹೆಚ್ಚು ರೈತರು ಕಂಗಾಲಾಗಿದ್ದಾರೆ. ಆದರೆ ಎಪಿಎಂಸಿ ಅಧಿಕಾರಿಗಳು ರಫ್ತು ನಿಷೇಧದ ಜೊತೆ ಈ ಬಾರಿ ಇಳುವರಿ ಹೆಚ್ಚು ಬಂದಿರೋದು ಬೆಲೆ ಇಳಿಕೆಗೆ ಕಾರಣ ಎನ್ನುತ್ತಿದ್ದಾರೆ.

    ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರು ಎನ್ನುವ ಮಾತಿನಂತೆ ಇದೀಗ ಚೀನಾದಲ್ಲಿನ ವೈರಸ್ ಬಳ್ಳಾರಿ ರೈತರ ಮೇಲೆ ಪರಿಣಾಮ ಬೀರಿದೆ. ಅದೇನೆ ಇರಲಿ ಅನ್ನದಾತ ನಷ್ಟ ಹೊಂದಲು ಕಾಲಕಾಲಕ್ಕೆ ಒಂದೊಂದು ಸಮಸ್ಯೆ ಉದ್ಭವಾಗುತ್ತದೆ ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.

    ಈ ಬಗ್ಗೆ ಸರ್ಕಾರ ಗಂಭೀರವಾಗಿ ರಫ್ತಾಗುವ ಮೆಣಸಿನಕಾಯಿಯನ್ನು ಗೋದಾಮಿನಲ್ಲಿ ಸ್ಟಾಕ್ ಇಡಲು ಅನುಕೂಲ ಮಾಡಿಕೊಡಬೇಕಿದೆ. ಇಲ್ಲವಾದಲ್ಲಿ ರೈತರು ಮತ್ತಷ್ಟು ನಷ್ಟ ಅನುಭವಿಸುವುದು ಗ್ಯಾರಂಟಿ ಎನ್ನಲಾಗುತ್ತಿದೆ.

  • ಚೀನಾದಿಂದ ಬಂದ ಹುಬ್ಬಳ್ಳಿ ಟೆಕ್ಕಿಗೆ ಕೊರೋನಾ ವೈರಸ್ ಶಂಕೆ – ವರದಿಗಾಗಿ ಕಾಯ್ತಿರೋ ವೈದ್ಯರು

    ಚೀನಾದಿಂದ ಬಂದ ಹುಬ್ಬಳ್ಳಿ ಟೆಕ್ಕಿಗೆ ಕೊರೋನಾ ವೈರಸ್ ಶಂಕೆ – ವರದಿಗಾಗಿ ಕಾಯ್ತಿರೋ ವೈದ್ಯರು

    ಹುಬ್ಬಳ್ಳಿ: ಮಾರಕ ಕೊರೋನಾ ವೈರಸ್ ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದು, ಟೆಕ್ಕಿಗೆ ಕೊರೋನಾ ಸೊಂಕು ಶಂಕೆ ಹಿನ್ನೆಲೆಯಲ್ಲಿ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸಾಫ್ಟ್‌ವೇರ್ ಎಂಜಿನಿಯರ್ ಸಂದೀಪ್‍ಗೆ ಕೊರೋನಾ ಸೊಂಕು ಶಂಕೆ ಹಿನ್ನೆಲೆಯಲ್ಲಿ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಲ್ಯಾಬ್ ವರದಿಗಾಗಿ ವೈದ್ಯರು ಕಾಯುತ್ತಿದ್ದಾರೆ. ಚೀನಾದ ವುಹಾನ್‍ನಿಂದ ಮರಳಿದ ನಂತರ ಸಂದೀಪ್ ಕಿಮ್ಸ್‌ಗೆ ದಾಖಲಾಗಿದ್ದು, ಬೆಂಗಳೂರಿನ ನ್ಯಾಷನಲ್ ಇನ್ಸಿಟ್ಯೂಟ್ ಆಪ್ ವೈರಾಲಜಿಯಿಂದ ವರದಿಗಾಗಿ ಕಾಯುತ್ತಿದ್ದಾರೆ. ಇದನ್ನೂ ಓದಿ: ಕೊರೊನಾ ವೈರಸ್ ಎಂದರೇನು? ಹೇಗೆ ಹರಡುತ್ತೆ? ರೋಗ ಲಕ್ಷಣವೇನು?

    ಸಾಫ್ಟ್‌ವೇರ್ ಎಂಜಿನಿಯರ್ ಕಿಮ್ಸ್‌ನ ಪ್ರತ್ಯೇಕ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೇಶ್ವಾಪುರದ ಸಂದೀಪ್ ಚೀನಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಜನವರಿ 19ರಂದು ಬೆಂಗಳೂರಿಗೆ ಆಗಮಿಸಿದ್ದು, ಕಳೆದ 15 ದಿನಗಳ ಹಿಂದೆ ಹುಬ್ಬಳ್ಳಿಗೆ ಬಂದಿದ್ದಾರೆ.

    ಸೋಮವಾರ ಜ್ವರ ಬಂದಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅವರು ಚೀನಾದಿಂದ ಆಗಮಿಸಿದ ಹಿನ್ನೆಲೆಯಲ್ಲಿ ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿತ್ತು. ನಂತರ ಅದನ್ನು ಬ್ಲಡ್ ಮತ್ತು ಸ್ಟ್ರಾಬ್ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಪ್ ವೈರಾಜಲಿ ಬೆಂಗಳೂರಿಗೆ ರವಾನಿಸಲಾಗಿತ್ತು. ಸದ್ಯಕ್ಕೆ ವೈದ್ಯರು ವರದಿಗಾಗಿ ಕಾಯುತ್ತಿದ್ದಾರೆ.

  • 10 ದಿನದಲ್ಲಿ 1 ಸಾವಿರ ಬೆಡ್ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಗೊಂಡಿದ್ದು ಹೇಗೆ? ಚೀನಾದ ಜೈವಿಕ ಅಸ್ತ್ರ ಕೊರೋನಾ?

    10 ದಿನದಲ್ಲಿ 1 ಸಾವಿರ ಬೆಡ್ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಗೊಂಡಿದ್ದು ಹೇಗೆ? ಚೀನಾದ ಜೈವಿಕ ಅಸ್ತ್ರ ಕೊರೋನಾ?

    ಕೊರೋನಾ ವೈರಸ್‍ಗೆ ತುತ್ತಾಗಿರುವ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡಲು ಚೀನಾ ಸರ್ಕಾರ ಕೇವಲ 10 ದಿನದಲ್ಲಿ ಒಂದು ಮಹಡಿಯ ಆಸ್ಪತ್ರೆಯನ್ನು ತೆರೆದಿದ್ದು, ಸೋಮವಾರವಾದ ಇಂದು ಈ ಆಸ್ಪತ್ರೆಗೆ ರೋಗಿಗಳು ದಾಖಲಾಗುತ್ತಿದ್ದಾರೆ. ನಮ್ಮಲ್ಲಿ ಒಂದು ಆಸ್ಪತ್ರೆ ನಿರ್ಮಿಸಲು ಹಲವು ವರ್ಷಗಳು ಬೇಕಾಗಿರುವಾಗ ಚೀನಾದಲ್ಲಿ 10 ದಿನದಲ್ಲಿ 1 ಸಾವಿರ ಬೆಡ್ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣ ಸಾಧ್ಯ ಹೇಗೆ ಎನ್ನುವ ಪ್ರಶ್ನೆ ಹುಟ್ಟದೇ ಇರಲಾರದು. ಈ ಪ್ರಶ್ನೆಗೆ ಉತ್ತರ ಎನ್ನುವಂತೆ ಈ ಆಸ್ಪತ್ರೆ ವಿಶೇಷತೆ ಏನು? ಏನು ತಂತ್ರಜ್ಞಾನಗಳನ್ನು ಬಳಸಲಾಗಿದೆ ಮತ್ತು ಇದು ಚೀನಾದ ಜೈವಿಕ ಅಸ್ತ್ರವೇ ಇತ್ಯಾದಿ ಪ್ರಶ್ನೆಗಳಿಗೆ ಇಲ್ಲಿ ಉತ್ತರ ನೀಡಲಾಗಿದೆ

    ನಿರ್ಮಾಣವಾಗಿದ್ದು ಎಲ್ಲಿ?
    ಕೊರೋನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕೇಂದ್ರ ಸ್ಥಾನ ವುಹಾನ್ ನಗರದ ಹುಶೋಶೆನ್ ನಲ್ಲಿ ಆಸ್ಪತ್ರೆ ನಿರ್ಮಾಣವಾಗಿದೆ. ಇದರ ಜೊತೆ ಚೀನಾ ಸರ್ಕಾರ 1500 ಬೆಡ್ ಸೌಲಭ್ಯ ಇರುವ ಮತ್ತೊಂದು ಆಸ್ಪತ್ರೆಯನ್ನು ನಿರ್ಮಿಸುತ್ತಿದ್ದು ಈ ವಾರದಲ್ಲಿ ಇದು ರೋಗ ಪೀಡಿತರಿಗೆ ತೆರೆಯಲಿದೆ.

    ಆಸ್ಪತ್ರೆ ನಿರ್ಮಿಸಿದ್ದು ಹೇಗೆ?
    ದಿನದ 24 ಗಂಟೆ 3 ಶಿಫ್ಟ್ ಗಳಲ್ಲಿ 7 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡಿ 60 ಸಾವಿರ ಚದರ ಮೀಟರ್ ವಿಸ್ತೀರ್ಣದ ಆಸ್ಪತ್ರೆಯನ್ನು ನಿರ್ಮಿಸಿದ್ದಾರೆ. ಮೊದಲೇ ನಿರ್ಮಾಣಗೊಂಡ ಕಾಂಕ್ರೀಟ್ ಗೋಡೆಗಳನ್ನು ಬಳಸಿಕೊಂಡು ವುಹಾನ್ ಸ್ಥಳೀಯ ಆಡಳಿತದ ಚೀನಾದ ಸೇನೆಯ ಸಹಕಾರವನ್ನು ಪಡೆದು ಈ ಆಸ್ಪತ್ರೆ ನಿರ್ಮಿಸಿದೆ. ಈ ಕಾಂಕ್ರೀಟ್ ಗೋಡೆಗಳು ಹಡಗಿನ ಕಂಟೈನರ್ ಮಾದರಿಯಲ್ಲಿದ್ದು ರೈಲು ಮತ್ತು ಲಾರಿಗಳ ಮೂಲಕ ಸ್ಥಳಕ್ಕೆ ತರಲಾಗಿದೆ. ಬಳಿಕ ಕ್ರೇನ್ ಮೂಲಕ ಇವುಗಳನ್ನು ಜೋಡಿಸಲಾಗಿದೆ. ಕಾರ್ಮಿಕರಿಗೆ ಸಾಮಾನ್ಯಕ್ಕಿಂತ 3 ಪಟ್ಟು ಹೆಚ್ಚು ವೇತನ ನೀಡಲಾಗಿದೆ ಎಂದು ವರದಿಯಾಗಿದೆ. ಕೊರೋನಾ ನಿಯಂತ್ರಣ ಕ್ರಮಗಳಿಗಾಗಿ ಚೀನಾ ಅಭಿವೃದ್ಧಿ ಬ್ಯಾಂಕ್ 2061 ಕೋಟಿ ರೂ. ತುರ್ತು ಸಾಲ ನೀಡಿದೆ. ಹೊಸ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಲು ವೈದ್ಯರು, ನರ್ಸ್, ಇತರೇ ಸಿಬ್ಬಂದಿ ಸೇರಿದಂತೆ ಒಟ್ಟು 1,500 ಜನರ ತಂಡವನ್ನು ಚೀನಾ ಸರ್ಕಾರ ಕಳುಹಿಸಿಕೊಟ್ಟಿದೆ.

    ದಿಢೀರ್ ಆಸ್ಪತ್ರೆ ಯಾಕೆ?
    ಕೊರೋನಾ ವೈರಾಣು ಮೊದಲು ಪತ್ತೆಯಾದ ವುಹಾನ್ ನಗರ ಈಗ ಸಂಪೂರ್ಣ ಸ್ತಬ್ಧವಾಗಿದ್ದು, ಜೈಲಿನಂತಾಗಿದೆ. ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆಯಾಗಿದ್ದು ಮನೆಯಿಂದ ಹೊರಬರಬೇಡಿ ಎಂಬ ಸೂಚನೆ ನೀಡಲಾಗಿದೆ. ಚೀನಾದಲ್ಲಿ 17 ಸಾವಿರಕ್ಕೂ ಹೆಚ್ಚು ಜನರು ಕೊರೋನಾಗೆ ತುತ್ತಾಗಿರುವುದು ಅಧಿಕೃತವಾಗಿ ಪ್ರಕಟವಾಗಿದ್ದು ಈಗಾಗಲೇ 361 ಜನ ಮೃತಪಟ್ಟಿದ್ದಾರೆ. ವೇಗವಾಗಿ ಹರಡುತ್ತಿದ್ದು ವಿಶ್ವದ 27 ರಾಷ್ಟ್ರಗಳಲ್ಲಿ ಕೊರೋನಾ ವ್ಯಾಪಿಸಿದೆ. ದಿನೇ ದಿನೇ ರೋಗ ಬಾಧಿತರ ಸಂಖ್ಯೆ ಜಾಸ್ತಿಯಾಗುತ್ತಿರುವ ಜೊತೆಗೆ ಸಾವನ್ನಪ್ಪುತ್ತಿರುವ ಜನರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಚೀನಾ ಸರ್ಕಾರ ಈಗ ದಿಢೀರ್ ಆಸ್ಪತ್ರೆಗಳನ್ನು ನಿರ್ಮಿಸುತ್ತಿದೆ.

    ಆಸ್ಪತ್ರೆಯ ವಿಶೇಷತೆ ಏನು?
    ನಿರ್ಮಾಣಗೊಂಡ ಆಸ್ಪತ್ರೆಯಲ್ಲಿ ಅರ್ಧಕ್ಕೂ ಹೆಚ್ಚು ಪ್ರತ್ಯೇಕ ವಾರ್ಡ್ ಗಳಿದ್ದು 30ಕ್ಕೂ ಹೆಚ್ಚು ತುರ್ತು ಚಿಕಿತ್ಸಾ ಘಟಕ ಹೊಂದಿದೆ. ಇಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಸಲಹೆ ಸೂಚನೆ ನೀಡಲು ತಜ್ಞರ ವೈದ್ಯರ ಜೊತೆ ಸಂವಹನ ಸಾಧಿಸಲು 12 ಗಂಟೆಯ ಅವಧಿಯೊಳಗೆ ವುಹಾನ್ ಟೆಲಿಕಾಂ ಲಿಮಿಟೆಡ್ ನ 20 ಮಂದಿ ಕಮಾಂಡೋ ತಂಡ ವಿಡಿಯೋ ಸಿಸ್ಟಂ ಅಳವಡಿಸಿದೆ. ಈ ಲಿಂಕ್ ಮೂಲಕ ಬೀಜಿಂಗ್ ನಲ್ಲಿರುವ ಪಿಎಲ್‍ಎ ಜನರಲ್ ಆಸ್ಪತ್ರೆಯ ವೈದ್ಯರ ಜೊತೆ ನೇರವಾಗಿ ವಿಡಿಯೋ ಮೂಲಕ ಮಾತನಾಡಬಹುದಾಗಿದೆ.

    10 ದಿನದಲ್ಲೇ ಹೇಗೆ?
    ಚೀನಾದಲ್ಲಿರುವುದು ಕಮ್ಯೂನಿಸ್ಟ್ ಸರ್ಕಾರ. ಕಟ್ಟಡ ನಿರ್ಮಾಣ ಮಾಡುತ್ತಿರುವ ಕಂಪನಿಗಳು ಸರ್ಕಾರದ್ದೇ ಆಗಿದೆ. ಈಗಾಗಲೇ ತುರ್ತು ಪರಿಸ್ಥಿತಿ ಘೋಷಣೆಯಾಗಿದ್ದು ಸರ್ಕಾರಕ್ಕೆ ಸಂಪೂರ್ಣ ಅಧಿಕಾರ ಇರುತ್ತದೆ. ಪ್ರಜಾಪ್ರಭುತ್ವ ದೇಶದಲ್ಲಿ ಸರ್ಕಾರಿ ಯೋಜನೆಗಳು ಆರಂಭಗೊಂಡಾಗ ಕೋರ್ಟ್ ಮೊರೆ ಹೋಗಬಹುದಾಗಿದೆ. ಚೀನಾದಲ್ಲಿ ಸರ್ಕಾರ ಯೋಜನೆ ಕೈಗೆತ್ತಿಕೊಂಡರೆ ಅದಕ್ಕೆ ವಿರೋಧಿಸುವಂತಿಲ್ಲ. 2002 ರಲ್ಲಿ ಸಾರ್ಸ್ ರೋಗ ಬಂದ ನಂತರ ಚೀನಾ ಸರ್ಕಾರ ಎಚ್ಚೆತ್ತುಕೊಂಡಿತ್ತು. ವಿಶ್ವದ ಟಾಪ್ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಹೋಲಿಸಿದರೆ ಮೂಲಸೌಕರ್ಯ ವಿಚಾರದಲ್ಲಿ ಚೀನಾವೇ ನಂಬರ್ 1. ಹಲವು ದಶಕಗಳಿಂದ ಚೀನಾದಲ್ಲಿ ದೊಡ್ಡ ದೊಡ್ಡ ಕಾಮಗಾರಿಗಳು ನಡೆಯುತ್ತಲೇ ಇದೆ. ಹೀಗಾಗಿ ಅಲ್ಲಿನ ಕಾರ್ಮಿಕರು ಮತ್ತು ಸೈನಿಕರು ಈ ವಿಚಾರದಲ್ಲಿ ತುಂಬ ಅನುಭವಿಗಳಾಗಿದ್ದಾರೆ. 1.20 ಲಕ್ಷ ಕಿ.ಮೀ ಉದ್ದದ ರೈಲ್ವೇ ಜಾಲವನ್ನು ಹೊಂದಿದೆ. ಹಲವು ನಗರಗಳಲ್ಲಿ ಬುಲೆಟ್ ರೈಲುಗಳು ಸಂಚರಿಸುತ್ತಿವೆ. ಹೀಗಾಗಿ ದೇಶದ ಯಾವುದೇ ಮೂಲೆಯಿಂದ ವಸ್ತುಗಳನ್ನು ಬಹಳ ವೇಗವಾಗಿ ಸಾಗಿಸುವ ಸಾಮರ್ಥ್ಯ ಚೀನಾಕ್ಕಿದೆ.

    ಇದೇ ಮೊದಲಲ್ಲ:
    2003 ರಲ್ಲಿ ಸಾರ್ಸ್ ಬಂದಾಗ ಚೀನಾ ಸರ್ಕಾರ 7 ದಿನದಲ್ಲಿ ಆಸ್ಪತ್ರೆ ನಿರ್ಮಿಸಿತ್ತು. ಮಿಲಿಟರಿಯಲ್ಲಿ ಪವರ್ ಫುಲ್ ರಾಷ್ಟ್ರವಾಗಿರುವ ಚೀನಾ ಒಂದು ವೇಳೆ ಯುದ್ಧ ಅಥವಾ ಸಾರ್ಸ್, ಕೊರೋನಾದಂತಹ ವೈರಸ್ ಬಂದಾಗ ಜನರನ್ನು ರಕ್ಷಿಸಲು ಮೊದಲೇ ಸಿದ್ಧತೆಗಳನ್ನು ಮಾಡಿಕೊಂಡಿರುತ್ತದೆ. ಇದರಿಂದಾಗಿ ಕಡಿಮೆ ಅವಧಿಯಲ್ಲಿ ಆಸ್ಪತ್ರೆಯನ್ನು ನಿರ್ಮಾಣ ಮಾಡುತ್ತದೆ.

    ವುಹಾನ್ ವಿಶೇಷತೆ ಏನು?
    ಮಧ್ಯ ಚೀನಾದ ದೊಡ್ಡ ನಗರ ವುಹಾನ್ ಆಗಿದ್ದು ಇಲ್ಲಿ ಬಂದರು, ವಿಮಾನ ನಿಲ್ದಾಣಗಳಿವೆ. 35 ಶಿಕ್ಷಣ ಸಂಸ್ಥೆಗಳಿದ್ದು ಚೀನಾದ ಶೈಕ್ಷಣಿಕ ಹಬ್ ಎಂದು ವುಹಾನ್ ನಗರವನ್ನು ಕರೆಯಲಾಗುತ್ತದೆ. ಈ ಕಾರಣಕ್ಕೆ ಹಲವು ರಾಷ್ಟ್ರಗಳ ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೇ ಚೀನಾ ಸರ್ಕಾರವೇ ಇಲ್ಲಿ ಹಲವು ಸಂಶೋಧನಾ ಕೇಂದ್ರಗಳನ್ನು ತೆರೆದಿದೆ. ಒಟ್ಟು ಇಲ್ಲಿ 350 ಸಂಶೋಧನಾ ಕೇಂದ್ರಗಳಿವೆ.

    ಚೀನಾವೇ ಸೃಷ್ಟಿಸಿದ ವೈರಸ್?
    ಕೊರೋನಾ ವೈರಸ್ ವೇಗವಾಗಿ ಹರಡುತ್ತಿರುವುದನ್ನು ಗಮನಿಸಿ ಈಗ ಚೀನಾವೇ ಈ ವೈರಸ್ ಸೃಷ್ಟಿ ಮಾಡಿತೇ ಎನ್ನುವ ಶಂಕೆ ಎದ್ದಿದೆ. ವೈರಸ್ ಅಧ್ಯಯನ ಮಾಡಲೆಂದೇ ವುಹಾನ್ ನಗರದಲ್ಲಿ ಚೀನಾ ಸರ್ಕಾರ ಸಂಶೋಧನಾ ಕೇಂದ್ರಗಳನ್ನು ತೆರೆದಿದೆ. ವುಹಾನ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಾಜಿ ಎಂಬ ಸಂಸ್ಥೆಯಲ್ಲಿ ಸಾರ್ಸ್ ಸೇರಿದಂತೆ ಹಲವು ವೈರಸ್ ಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಈಗ ಕೊರೋನಾ ವೈರಸ್ ಸೃಷ್ಟಿಯಾದ ಕೇಂದ್ರ ಸ್ಥಳ ವುಹಾನ್ ಆಗಿದೆ. ವುಹಾನ್ ವಿಶ್ವವಿದ್ಯಾಲಯಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಕೊರೋನಾ ಪೀಡಿತರಾಗಿದ್ದಾರೆ.

    ವೈರಾಲಾಜಿ ಸಂಸ್ಥೆಯಲ್ಲಿ ಏನು ಪ್ರಯೋಗ ಕೈಗೊಳ್ಳಲಾಗುತ್ತದೆ ಎನ್ನುವುದು ಈಗಲೂ ರಹಸ್ಯವಾಗಿದೆ. ಯುದ್ಧದ ಮೂಲಕ ದೇಶಗಳ ಜೊತೆ ಹೋರಾಡುವುದು ಇಂದು ಬಹಳ ಕಷ್ಟ. ಹೀಗಾಗಿ ಚೀನಾ ಜೈವಿಕ ಅಸ್ತ್ರವನ್ನು ತಯಾರು ಮಾಡುತ್ತದೆ ಎನ್ನುವ ಆರೋಪ ಈ ಹಿಂದಿನಿಂದಲೂ ಕೇಳಿ ಬಂದಿತ್ತು. ಸಾರ್ಸ್ ಆರಂಭದಲ್ಲಿ ಕಂಡು ಬಂದಿದ್ದು ಇದೇ ವುಹಾನ್ ನಲ್ಲಿ. 2002ರಲ್ಲಿ ಕಾಣಿಸಿಕೊಂಡಾಗ ಚೀನಾ ಈ ವಿಚಾರವನ್ನು ಮುಚ್ಚಿಟ್ಟಿತ್ತು. ಆದರೆ ವಿದೇಶಗಳಿಗೆ ಹರಡಿದಾಗ ಕೊನೆಗೆ ಸತ್ಯವನ್ನು ಒಪ್ಪಿಕೊಂಡಿತ್ತು. ಈಗಲೂ ಕೆಲ ವಿಜ್ಞಾನಿಗಳು ಇದು ಯಾವುದೋ ಪ್ರಾಣಿಯಿಂದ, ಪಕ್ಷಿಯಿಂದ ಕೊರೋನಾ ವೈರಸ್ ಸೃಷ್ಟಿಯಾಗಿಲ್ಲ. ಜೈವಿಕ ಅಸ್ತ್ರವನ್ನು ಪರೀಕ್ಷೆ ಮಾಡುತ್ತಿದ್ದಾಗ ಹೇಗೋ ಸೋರಿಕೆಯಾಗಿ ಈಗ ಜಗತ್ತಿಗೆ ಹರಡುತ್ತಿದೆ ಎಂದು ವಾದವನ್ನು ಮುಂದಿಡುತ್ತಿದ್ದಾರೆ. ಭಾರತದಲ್ಲಿ ಕೇರಳದ ಮೂರು ಮಂದಿ ವಿದ್ಯಾರ್ಥಿ ಕೊರೋನಾ ವೈರಸ್ ಪತ್ತೆಯಾಗಿದೆ. ಈ ಮೂವರು ವುಹಾನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೇ ಆಗಿರುವುದು ವಿಶೇಷ.

  • ಕೊರೊನಾ ವೈರಸ್ ಭೀತಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೈ ಅಲರ್ಟ್

    ಕೊರೊನಾ ವೈರಸ್ ಭೀತಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೈ ಅಲರ್ಟ್

    – ಗೊಂದಲಕ್ಕೊಳಗಾಗದೆ ಎಚ್ಚರದಿಂದಿರಿ: ಡಿಸಿ ಸಿಂಧೂ ರೂಪೇಶ್

    ಮಂಗಳೂರು: ಜಗತ್ತಿನಾದ್ಯಂತ ಭೀತಿ ಹುಟ್ಟಿಸಿದ ಕೊರೊನಾ ವೈರಸ್ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ತಲ್ಲಣ ಮೂಡಿಸಿದೆ. ಕೇರಳದಲ್ಲಿ ಕೊರೊನಾ ಪತ್ತೆಯಾದ ಬೆನ್ನಲ್ಲೇ ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಬೆಡ್ ಕಾಯ್ದಿದಿರಿಸಲಾಗಿದೆ. ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಬಂದರು,ಬಸ್ ನಿಲ್ದಾಣದಲ್ಲೂ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

    ಭಾರತದಲ್ಲಿ ಮೊದಲ ಕೊರೊನಾ ಸೋಂಕು ಕೇರಳದ ವಿದ್ಯಾರ್ಥಿಯಲ್ಲಿ ಪತ್ತೆಯಾಗಿದ್ದು ಕೇರಳದೊಂದಿಗೆ ಗಡಿ ಭೂಭಾಗ ಹಂಚಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಆತಂಕ ಮೂಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೂ ಸೋಂಕು ಬಾಧಿತರು ಕಂಡು ಬರದಿದ್ದರೂ ಅತೀ ಹೆಚ್ಚಾಗಿ ಕೇರಳದಿಂದ ರೋಗಿಗಳು ಮಂಗಳೂರಿನ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿರುವುದರಿಂದ ಜನ ಕೊರೊನಾ ಭೀತಿಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ನವಮಂಗಳೂರು ಬಂದರು, ರೈಲ್ವೆ ಸ್ಟೇಷನ್, ಕೆಎಸ್ಆರ್‌ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣ, ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳಲ್ಲಿ ಜಾಗೃತಿ ನೀಡುವ ಕಾರ್ಯ ನಡೆಯುತ್ತಿದೆ.

    ಮಂಗಳೂರು ವಿಮಾನ ನಿಲ್ದಾಣದ ಆಯಕಟ್ಟಿನ ಜಾಗಗಳಲ್ಲಿ ಎಲ್‍ಇಡಿ ಫಲಕದಲ್ಲಿ ಕೊರೊನಾ ಸೋಂಕಿನ ಎಚ್ಚರಿಕೆ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಆದರೆ ಚೀನಾದಿಂದ ನೇರವಾಗಿ ಮಂಗಳೂರಿಗೆ ವಿಮಾನ ಯಾನ ಸೇವೆ ಇಲ್ಲ. ಹೀಗಾಗಿ ಜನರು ನಿರಾಳವಾಗಿರಬಹುದು ಎಂದು ಜಿಲ್ಲಾಡಳಿತ ಸೂಚಿಸಿದೆ. ಈ ನಡುವೆ ಕೊರೊನಾ ಬಾಧಿತರು ಎಲ್ಲಾದರೂ ಖಾಸಗಿ ಆಸ್ಪತ್ರೆಗಳಲ್ಲಿ ಇದ್ದರೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಕೊರೊನಾ ಬಗ್ಗೆ ಯಾವುದೇ ಗೊಂದಲ ಇಲ್ಲದೆ ಜಾಗೃತಿ ವಹಿಸುವಂತೆ ಜಿಲ್ಲಾಡಳಿತ ಜನರಿಗೆ ಮನವಿ ಮಾಡಿದೆ.

    ಕೊರೊನಾ ವೈರಸ್ ಬಾಧಿತರು ಕಂಡು ಬಂದಲ್ಲಿ ತಕ್ಷಣ ಚಿಕಿತ್ಸೆ ಗೆಂದು ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ರತ್ಯೇಕ 10 ಬೆಡ್‍ಗಳನ್ನು ಕಾಯ್ದಿರಿಸಲಾಗಿದೆ. ಪ್ರತಿ ಖಾಸಗಿ ಆಸ್ಪತ್ರೆಯಲ್ಲೂ ತಲಾ 5 ಬೆಡ್‍ಗಳನ್ನು ಮೀಸಲಿಡಲಾಗಿದೆ. ಕೊರೊನಾ ಬಗ್ಗೆ ಜಿಲ್ಲಾಡಳಿತ ಹೆಲ್ಪ್ ಲೈನ್ ನಂಬರನ್ನೂ ತೆರೆದಿದ್ದು, ಯಾವುದೇ ಭಯ ಮತ್ತು ಗೊಂದಲವಿದ್ದರೂ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಲು ಕೋರಿದೆ. ಕೊರೊನಾ ವೈರಸ್ ಕಡಲನಗರಿಯಲ್ಲೂ ಆತಂಕ ಮೂಡಿಸಿದ್ದು, ವೈರಸ್‍ನ ಸೋಂಕು ಜಿಲ್ಲೆಗೆ ತಾಗದಂತೆ ಜಿಲ್ಲಾಡಳಿತ ಸಕಲ ಕ್ರಮಕೈಗೊಂಡಿದೆ.

  • ಭಾರತಕ್ಕೂ ವಕ್ಕರಿಸಿದ ಕರೋನಾ ವೈರಸ್ ಮಹಾಮಾರಿ- ಮೊದಲ ಕೇಸ್ ದಾಖಲು

    ಭಾರತಕ್ಕೂ ವಕ್ಕರಿಸಿದ ಕರೋನಾ ವೈರಸ್ ಮಹಾಮಾರಿ- ಮೊದಲ ಕೇಸ್ ದಾಖಲು

    ನವದೆಹಲಿ: ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿರುವ ಮಹಾಮಾರಿ ಕರೋನಾ ವೈರಸ್ ಭಾರತಕ್ಕೂ ಕಾಲಿಟ್ಟಿದ್ದು, ದೇಶದಲ್ಲಿ ಮೊದಲ ಪ್ರಕರಣ ದಾಖಲಾಗಿದೆ.

    ಚೀನಾದ ವುಹಾನ್ ವಿಶ್ವವಿದ್ಯಾಲಯದಲ್ಲಿ ಕೇರಳ ವಿದ್ಯಾರ್ಥಿಯೊಬ್ಬನಲ್ಲಿ ಕರೋನಾ ಸೋಂಕು ಪತ್ತೆಯಾಗಿದೆ. ಸದ್ಯ ಆತನಿಗೆ ಕೇರಳದ ತ್ರಿಶ್ಯೂರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

    ಭಾರತದಾದ್ಯಂತ ಸುಮಾರು 900 ಜನರು ಪರೀಕ್ಷೆಗೆ ಒಳಪಡಿಸಲಾಗಿದೆ. ಕೇರಳದಲ್ಲಿ ವೀಕ್ಷಣೆಯಲ್ಲಿರುವ 806 ಜನರಲ್ಲಿ 10 ಮಂದಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್ ಗಳಲ್ಲಿದ್ದರೆ, ಉಳಿದವರು ಮನೆಯಿಂದಲೇ ಆಸ್ಪತ್ರೆಗಳ ಸಂಪರ್ಕದಲ್ಲಿದ್ದಾರೆ. ಮಹಾರಾಷ್ಟ್ರದಲ್ಲಿ ಕನಿಷ್ಠ 27 ಜನರನ್ನು ವೀಕ್ಷಣೆಗೆ ಒಳಪಡಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅವರಲ್ಲಿ 10 ಜನರನ್ನು ಪ್ರತ್ಯೇಕಿಸಲಾಗಿದೆ. ಎರಡು ದಿನಗಳ ಹಿಂದೆ ಚೀನಾದಿಂದ ಹಿಂದಿರುಗಿದ ಪಂಜಾಬ್‍ನ ಮೊಹಾಲಿಯ ನಿವಾಸಿ 28 ವರ್ಷದ ಯುವಕನನ್ನು ಚಂಡೀಗಢ ಆಸ್ಪತ್ರೆಯ ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಲಾಗಿದೆ.

    ಮಲೇಷ್ಯಾದಲ್ಲಿ ಕೆಲಸ ಮಾಡುತ್ತಿದ್ದ ತ್ರಿಪುರದ ಮುನೀರ್ ಎಂಬಾತ ಕರೋನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿದ್ದಾನೆ. ಕರೋನಾ ವೈರಸ್ ಇದುವರೆಗೂ 17 ದೇಶಗಳಿಗೆ ವ್ಯಾಪಿಸಿದ್ದು, 170ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 8 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ವ್ಯಾಪಿಸಿದೆ. ಈ ಬೆನ್ನಲ್ಲೇ ಶುಕ್ರವಾರ ವುಹಾನ್‍ನಿಂದ ಭಾರತೀಯರ ಮೊದಲ ತಂಡವನ್ನು ಏರ್‌ಲಿಫ್ಟ್‌ ಮಾಡಲು ಸಕಲ ಸಿದ್ಧತೆಗಳನ್ನು ಕೇಂದ್ರ ಸರ್ಕಾರ ನಡೆಸಿದೆ.

    ಜಾಗತಿಕ ತುರ್ತು ಪರಿಸ್ಥಿತಿ ಘೋಷಿಸಲು ವಿಶ್ವ ಆರೋಗ್ಯ ಸಂಸ್ಥೆ ಮುಂದಾಗಿದೆ. ಕರೋನಾ ವೈರಸ್ ದೇಶದೊಳಗೆ ಪ್ರವೇಶಿಸದಂತೆ ರಷ್ಯಾ ಮುನ್ನೆಚ್ಚೆರಿಕಾ ಕ್ರಮಕೈಗೊಂಡಿದೆ. ಈ ನಿಟ್ಟಿನಲ್ಲಿ ರಷ್ಯಾ ಚೀನಾದೊಂದಿಗೆ ಇರುವ 2,600 ಮೈಲಿ ಗಡಿಯನ್ನು ಮುಚ್ಚುತ್ತಿದೆ.

    ಚೀನಾದ ಹುಬೈ ಪ್ರಾಂತ್ಯದ ರಾಜಧಾನಿಯಾದ ವುಹಾನ್ ಕೊರೊನಾವೈರಸ್ ಕೇಂದ್ರವಾಗಿದೆ. ಈ ವೈರಸ್ ಈಗ ವಿಶ್ವದ ಅನೇಕ ಭಾಗಗಳಲ್ಲಿ ಹರಡುತ್ತಿದೆ. ಚೀನಾದ ಕೊರೊನಾವೈರಸ್ ರೋಗದಿಂದ ರಾಷ್ಟ್ರವ್ಯಾಪಿ ಸಾವನ್ನಪ್ಪಿದವರ ಸಂಖ್ಯೆ 170ಕ್ಕೆ ಏರಿದ್ದು, ಹುಬೈ ಪ್ರಾಂತ್ಯದಲ್ಲಿ 38 ಸಾವುನೋವುಗಳು ವರದಿಯಾಗಿವೆ.

    ವೈರಸ್ ಹೇಗೆ ಹರಡುತ್ತದೆ?
    ಮಹಾಮಾರಿ ಕರೋನಾ ವೈರಸ್ ಹರಡುವ ನಿರ್ದಿಷ್ಟ ವಿಧಾನಗಳು ಇನ್ನೂ ಸ್ಪಷ್ಟವಾಗಿಲ್ಲ. ಈ ವೈರಸ್ ಬಹುಶಃ ಮೂಲತಃ ಪ್ರಾಣಿ ಮೂಲದಿಂದ ಹೊರಹೊಮ್ಮಿದೆ. ಆದರೆ ಈಗ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತಿದೆ. ವ್ಯಕ್ತಿಯಿಂದ ವ್ಯಕ್ತಿಗೆ ಎಷ್ಟು ಸುಲಭವಾಗಿ ಹರಡುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಸೋಂಕಿತ ವ್ಯಕ್ತಿಯು ಕೆಮ್ಮಿದಾಗ ಅಥವಾ ಸೀನುವಾಗ ಸೋಂಕು ತಗಲುತ್ತದೆ ಎಂದು ವರದಿಯಾಗಿದೆ.