Tag: Coronavirus

  • ಮನೆಯ ಔಷಧ ಬಳಸಿ ಕೊರೊನಾ ತಡೆಗಟ್ಟಿ- ಆಯುಷ್‍ನಿಂದ ಟಿಪ್ಸ್

    ಮನೆಯ ಔಷಧ ಬಳಸಿ ಕೊರೊನಾ ತಡೆಗಟ್ಟಿ- ಆಯುಷ್‍ನಿಂದ ಟಿಪ್ಸ್

    ಬೆಂಗಳೂರು: ವಿಶ್ವಾದ್ಯಂತ ಕೊರೊನಾ ವೈರಸ್ ಜನರನ್ನು ಭಯಭೀತರನ್ನಾಗಿ ಮಾಡಿದೆ. ಇದುವರೆಗೂ ಕೊರೊನಾ ವೈರಸ್ ತಗುಲಿದವರ ಸಂಖ್ಯೆ 1 ಲಕ್ಷದ ಗಡಿ ದಾಟಿದೆ. ಅವರಲ್ಲಿ ಸೋಂಕಿನಿಂದಾಗಿ ಇದುವರೆಗೆ 3,412 ಮಂದಿ ಸಾವನ್ನಪ್ಪಿದ್ದು, 41,365 ಮಂದಿಗೆ ಈಗಲೂ ಚಿಕಿತ್ಸೆ ಮುಂದುವರಿದಿದೆ. ಇದೀಗ ಕೊರೊನಾ ವೈರಸ್ ತಡೆಗಟ್ಟಲು ಆಯುಷ್ ಮಂತ್ರಾಲಯ ಮತ್ತು ಭಾರತ ಸರ್ಕಾರ ಮುನ್ನೆಚ್ಚರಿಕಾ ಮಾರ್ಗಸೂಚಿಗಳನ್ನು ತಿಳಿಸಿದೆ.

    ಮೊದಲಿಗೆ ತಡೆಗಟ್ಟುವ ಸಾಮಾನ್ಯ ವಿಧಾನ:
    1. ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದು.
    2. ಆಗಾಗ ಸಾಬೂನಿನಿಂದ ಕೈತೊಳೆಯುವುದು.
    3. ಕೆಮ್ಮುವಾಗ ಹಾಗೂ ಸೀನುವಾಗ ಬಾಯಿ ಮತ್ತು ಮೂಗನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳುವುದು.
    4. ಕೆಮ್ಮು ಮತ್ತು ಶೀತ ಲಕ್ಷಣಗಳಿರುವ ವ್ಯಕ್ತಿಗಳಿಂದ ದೂರವಿರುವುದು ಹಾಗೂ ಸರಿಯಾಗಿ ಬೇಯಿಸದ ಮಾಂಸ ಸೇವಿಸಬಾರದು.
    5. ಜೀವಂತ ಪ್ರಾಣಿಗಳ ಸಂಪರ್ಕ ಮಾಡದಿರುವುದು.
    6. ಕಸಾಯಿಖಾನೆ ಹಾಗೂ ಪ್ರಾಣಿಗಳ ಮಾರಾಟ ಸ್ಥಳಗಳಿಂದ ದೂರವಿರುವುದು.
    7. ಕೆಮ್ಮು ಮತ್ತು ಸೀನು ಲಕ್ಷಣಗಳಿದ್ದಲ್ಲಿ ಮಾಸ್ಕ್ ಧರಿಸುವುದು.

    ಆಯುಷ್ ಪದ್ಧತಿಯಿಂದ ತಡೆಗಟ್ಟುವ ವಿಧಾನ:
    1. ತಾಜಾ, ಬಿಸಿಯಾದ, ಜೀರ್ಣಕ್ಕೆ ಸುಲಭವಾದ ಆಯಾ ಕಾಲದಲ್ಲಿ ಲಭ್ಯವಿರುವ ತರಕಾರಿಗಳನ್ನು ಸೇವಿಸುವುದು.
    2. ತುಳಸಿ, ಶುಂಠಿ ಹಾಗೂ ಅರಿಶಿಣಗಳನ್ನು ಬಿಸಿ ನೀರಿನಲ್ಲಿ ಕುದಿಸಿ ಸ್ವಲ್ಪ ಆಗಾಗ ಕುಡಿಯುವುದು.
    3. ಕೆಮ್ಮು ಇದ್ದಾಗ ಜೇನುತುಪ್ಪದೊಂದಿಗೆ 1 ಚಿಟಿಕೆ ಕಾಳು ಮೆಣಸಿನ ಪುಡಿಯೊಂದಿಗೆ ಸೇವಿಸುವುದು.
    4. ಶೀತಲೀಕರಿಸಿದ ಪರಾರ್ಥಗಳನ್ನು ಸೇವಿಸಬಾದರು.
    5. ತಂಪಾದ ಗಾಳಿ ಬೀಸುವ ಸ್ಥಳದಿಂದ ದೂರವಿರುವುದು.
    6. ಯೋಗಾಸನ ಮತ್ತು ಪ್ರಾಣಾಯಾಮವನ್ನು ಮಾಡುವುದು.

    ಉಪಯೋಗಿಸಬಹುದಾದ ಔಷಧ ಸಸ್ಯಗಳು:
    1. ತುಳಸಿ
    2. ಅಮೃತಬಳ್ಳಿ
    3. ಅರಿಶಿಣ

    ಸೋಂಕು ಲಕ್ಷಣ ಕಾಣಿಸಿಕೊಂಡರೆ ಮಾಹಿತಿ, ಚಿಕಿತ್ಸೆಗಾಗಿ ಸಂಪರ್ಕಿಸಿ:
    1.  ರಾಜ್ಯದ ಎಲ್ಲಾ ಜಿಲ್ಲಾ ಆಯುಷ್ ಅಧಿಕಾರಿಗಳು.
    2. ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಬೆಂಗಳೂರು/ಮೈಸೂರು ಇಲ್ಲವೇ ಶಿವಮೊಗ್ಗ ಮತ್ತು ತಾತನಾಥ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಬಳ್ಳಾರಿ.
    3. ಸರ್ಕಾರಿ ಯುನಾನಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಬೆಂಗಳೂರು.
    4. ಸರ್ಕಾರಿ ಹೋಮಿಯೋಪತಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಬೆಂಗಳೂರು.
    5. ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ.
    6. ಸಮೀಪದ ಆಯುರ್ವೇದ/ಯುನಾನಿ/ಹೋಮಿಯೋಪತಿ/ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಆಸ್ಪತ್ರೆ ಮತ್ತು ಚಿಕಿತ್ಸಾಯಗಳು.
    7. ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರ, ಮೈಸೂರು.

    ಹೀಗೆ ಕೊರೊನಾ ವೈರಸ್ ಸೋಂಕು ಬರುವ ಮೊದಲು ಜಾಗೃತರಾಗಿರಬೇಕು. ಒಂದು ವೇಳೆ ಸೋಂಕು ಕಂಡು ಬಂದರೆ ತಕ್ಷಣ ಮೇಲೆ ಸೂಚಿಸಿರುವ ಆಸ್ಪತ್ರೆಗಳಿಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಿ.

  • ಕೊರೊನಾ ವೈರಸ್ ಭೀತಿ- ಶಾಲೆಗಳಿಗೆ ರಜೆ, ಬಯೋ ಮೆಟ್ರಿಕ್ ಹಾಜರಿಗೆ ಬ್ರೇಕ್

    ಕೊರೊನಾ ವೈರಸ್ ಭೀತಿ- ಶಾಲೆಗಳಿಗೆ ರಜೆ, ಬಯೋ ಮೆಟ್ರಿಕ್ ಹಾಜರಿಗೆ ಬ್ರೇಕ್

    ನವದೆಹಲಿ: ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ದೆಹಲಿ ಸರ್ಕಾರ ರಜೆ ಘೋಷಿಸಿದೆ. ಐದನೇ ತರಗತಿವರೆಗಿನ ಮಕ್ಕಳಿಗೆ ರಜೆ ನೀಡುವಂತೆ ಸರ್ಕಾರ ಶಾಲೆಗಳ ಆಡಳಿತ ಮಂಡಳಿಗೆ ಸೂಚಿಸಿದೆ.

    ದೆಹಲಿಯ ಗಡಿ ಭಾಗ ಘಾಜೀಬಾದ್‍ನಲ್ಲಿ ಇಂದು ಮತ್ತೊಂದು ಕೊರೊನಾ ಸೊಂಕು ಪ್ರಕರಣ ಪತ್ತೆಯಾಗಿದ್ದು, ದೇಶದಲ್ಲಿ 30ಕ್ಕೆ ವೈರಸ್ ಸೋಕಿಂತರ ಸಂಖ್ಯೆ ಏರಿಕೆಯಾಗಿದೆ. ಈ ಹಿನ್ನೆಲೆ ಮಕ್ಕಳಿಗೂ ಸಾಮೂಹಿಕವಾಗಿ ವೈರಸ್ ಹರಡುವ ಭೀತಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಿದೆ.

    ಇದರ ಜೊತೆಗೆ ಸರ್ಕಾರಿ ಉದ್ಯೋಗಿಗಳು ಹಾಜರಾತಿಗಾಗಿ ಬಯೋ ಮೆಟ್ರಿಕ್ ಬಳಸದಂತೆ ದೆಹಲಿ ಸರ್ಕಾರ ಆದೇಶಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಆದೇಶ ಹೊರಡಿಸಿದ್ದು ಬಯೋ ಮೆಟ್ರಿಕ್‍ನಿಂದಲೂ ವೈರಸ್ ಹರಡುವ ಸಾಧ್ಯತೆಗಳಿದೆ. ಈ ಹಿನ್ನೆಲೆ ತಾತ್ಕಾಲಿಕವಾಗಿ ಬಯೋ ಮೆಟ್ರಿಕ್ ಹಾಜರಾತಿ ರದ್ದು ಮಾಡಿಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.

  • ಕೊರೊನಾ ಭೀತಿಗೆ ಕಾರವಾರ ಬಂದರಿನಲ್ಲಿ ಹೈ ಅಲರ್ಟ್ – ಜಿಲ್ಲಾಸ್ಪತ್ರೆಗೆ ಕದಂಬ ನೌಕಾ ನೆಲೆಯಿಂದ 100 ಹಾಸಿಗೆ

    ಕೊರೊನಾ ಭೀತಿಗೆ ಕಾರವಾರ ಬಂದರಿನಲ್ಲಿ ಹೈ ಅಲರ್ಟ್ – ಜಿಲ್ಲಾಸ್ಪತ್ರೆಗೆ ಕದಂಬ ನೌಕಾ ನೆಲೆಯಿಂದ 100 ಹಾಸಿಗೆ

    ಕಾರವಾರ: ವಿಶ್ವದೆಲ್ಲೆಡೆ ಹರಡುತ್ತಿರುವ ಮಹಾಮಾರಿ ಕೊರೊನಾ ವೈರಸ್ ಕರ್ನಾಟಕಕ್ಕೂ ಕಾಲಿಟ್ಟಿದೆ. ಕೊರೊನಾ ಭೀತಿಗೆ ಮುಂಜಾಗೃತ ಕ್ರಮವಾಗಿ ಕಾರವಾರ ಬಂದರು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಪ್ರವಾಸಿ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಬೇಕೆಂದು ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಕೆ. ಸೂಚಿಸಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿ ಕೋರ್ಟ್ ಹಾಲ್‍ನಲ್ಲಿ ಕೊರೊನಾ ಸೋಂಕು ತಡೆಗಟ್ಟುವಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಜಿಲ್ಲಾ ಆಸ್ಪತ್ರೆ ಮುಖ್ಯಸ್ಥರು, ವೈದ್ಯಕೀಯ ಕಾಲೇಜು ಮುಖ್ಯಸ್ಥರು, ನೌಕಾ ನೆಲೆ ಮತ್ತು ಬಂದರು ಇಲಾಖೆಯ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್‍ರವರು ಸಭೆ ನಡೆಸಿದರು. ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮನ್ವಯ ಸಾದಿಸಿ ಕೊರೊನಾ ಸೋಂಕು ಜಿಲ್ಲೆಗೆ ಯಾವುದೇ ಮಾರ್ಗದಲ್ಲಿ ಬರದಂತೆ ಸೂಕ್ತ ಕ್ರಮ ಕೈಗೊಂಡು ಕಟ್ಟೆಚ್ಚರಿಕೆ ವಹಿಸಬೇಕು ಎಂದು ಹೇಳಿದರು.

    ಕಾರವಾರ ಬಂದರಿನಲ್ಲಿ ವಿದೇಶಿ ಹಡಗುಗಳು ಆಗಮಿಸುವುದರಿಂದ ಮುಖ್ಯವಾಗಿ ಅಲ್ಲಿ ತೀವ್ರ ನೀಗಾ ಇರಿಸಬೇಕು. ಆಗಮಿಸಿದ ಹಡಗುಗಳಲ್ಲಿ ವೈದ್ಯಕೀಯ ತಪಾಸಣೆಯನ್ನು ಮಾಡುವುದು ಕಡ್ಡಾಯವಾಗಿದ್ದು, ಇದರ ಮಾಹಿತಿಯನ್ನು ಪ್ರತಿ ದಿನ ಜಿಲ್ಲಾ ಆರೋಗ್ಯ ಅಧಿಕಾರಿಗಳು ಪಡೆದು ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

    ಈ ಬಗ್ಗೆ ಕದಂಬ ನೌಕಾ ನೆಲೆ ಅಧಿಕಾರಿ ಮಾತನಾಡಿ, ನೌಕಾ ನೆಲೆಯಲ್ಲಿ ರೋಗಿಗಳ ಆರೈಕೆಗಾಗಿ ಸಾಕಷ್ಟು ಹಾಸಿಗೆಗಳ ವ್ಯವಸ್ಥೆ ಇರುವುದರಿಂದ ಜಿಲ್ಲಾಸ್ಪತ್ರೆಗೆ 100 ಹಾಸಿಗೆಗಳನ್ನು ನೀಡಲು ನಿರ್ಧರಿಸಿದ್ದೇವೆ. ಅಲ್ಲದೆ ಈಗಾಗಲೇ ಸಾಕಷ್ಟು ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದೆ ಮತ್ತು ವಿದೇಶದಿಂದ ಬರುವ ಹಡಗುಗಳಲ್ಲಿರುವ ಪ್ರಯಾಣಿಕರು ಮತ್ತು ನಾವಿಕರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಮುಂಚಿತವಾಗಿಯೇ ಎಲ್ಲ ಹಡಗುಗಳಲ್ಲಿ ವೈದ್ಯಕೀಯ ತಂಡವನ್ನು ಇರಿಸಲಾಗಿದೆ ಎಂದು ಮಾಹಿತಿ ನೀಡಿದರು.

    ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಮಾತನಾಡಿ, ಪ್ರಮುಖವಾಗಿ ಗೋಕರ್ಣದಲ್ಲಿ ವಿದೇಶಿ ಪ್ರವಾಸಿಗರು ಆಗಮಿಸುವುದರಿಂದ ಅಲ್ಲಿ ವೈದ್ಯರ ತಂಡ ರಚಿಸಿಕೊಂಡು ಮನೆ ಮನೆಗೆ ಭೇಟಿ ನೀಡಿ, ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕೆಂದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾತನಾಡಿ, ಪೊಲೀಸ್ ಇಲಾಖೆಯಿಂದ ತೆಗೆದುಕೊಳ್ಳಬಹುದಾದ ಎಲ್ಲಾ ಮುಂಜಾಗೃತ ಕ್ರಮಗಳನ್ನು ಈಗಾಗಲೇ ಕೈಗೊಂಡಿದ್ದು, ಗೋವಾ ಮತ್ತು ಮಂಗಳೂರು ವಿಮಾನ ನಿಲ್ದಾಣದಿಂದ ಬರುವ ಪ್ರಯಾಣಿಕರನ್ನು ವೈದ್ಯರ ಸಹಾಯದೊಂದಿಗೆ ತಪಾಸಣೆ ಮಾಡುವ ಮೂಲಕ ಹೆಚ್ಚಿನ ಜಾಗೃತಿ ವಹಿಸಲಾಗುವುದು ಎಂದರು.

    ಸಭೆಯಲ್ಲಿ ಜಿಲ್ಲಾಸ್ಪತ್ರೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯಾಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದು, ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಕ್ರಮ ಕೈಗೊಂಡಿದ್ದಾರೆ.

    ಕಾರವಾರ ಜಿಲ್ಲಾಸ್ಪತ್ರೆಯಲ್ಲಿ 10 ಹಾಸಿಗೆ ಮೀಸಲು:
    ಕಾರವಾರ ಗಡಿ ಪ್ರದೇಶವಾಗಿರುವ ಹಿನ್ನೆಲೆ ನೆರೆಯ ಗೋವಾ, ಮುಂಬೈನಿಂದ ವಿದೇಶಿ ಪ್ರಜೆಗಳು ಈ ಭಾಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇದರ ಜೊತೆಗೆ ಸಮುದ್ರದ ಮೂಲಕವು ಹಡಗುಗಳು ಬರುವುದರಿಂದ ತೀವ್ರ ನಿಗಾ ಬಹಿಸಲಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ಕಟ್ಟಡವನ್ನು ಮೀಸಲಿಡಲಾಗಿದೆ. 5 ಮಹಿಳೆಯರು, 5 ಪುರುಷರಿಗಾಗಿ ಪ್ರತ್ಯೇಕ ಹಾಸಿಗೆ ವ್ಯವಸ್ಥೆ ಮಾಡಲಾಗಿದ್ದು, ಪ್ರತ್ಯೇಕ ಸಿಬ್ಬಂದಿಗಳನ್ನು ಆರೋಗ್ಯ ಇಲಾಖೆ ನೇಮಿಸಿದೆ.

  • ಪೇಟಿಎಂ ಉದ್ಯೋಗಿಗೆ ಕೊರೊನಾ – ಇಟಲಿ ಪ್ರಯಾಣಿಕರನ್ನು ಕರೆದೊಯ್ದ ಚಾಲಕನಿಗೂ ಬಂತು

    ಪೇಟಿಎಂ ಉದ್ಯೋಗಿಗೆ ಕೊರೊನಾ – ಇಟಲಿ ಪ್ರಯಾಣಿಕರನ್ನು ಕರೆದೊಯ್ದ ಚಾಲಕನಿಗೂ ಬಂತು

    ನವದೆಹಲಿ: ಬುಧವಾರ ಒಂದೇ ದಿನ 22 ಕೊರೊನಾ ಕೇಸ್ ಪತ್ತೆಯಾಗಿದ್ದು, ಭಾರತದಲ್ಲಿ ಈಗ 29 ಮಂದಿಗೆ ಕೊರೊನಾ ಬಂದಿದೆ.

    ಹೊಸದಾಗಿ ಪೇಟಿಎಂ ಕಂಪನಿಯ ಉದ್ಯೋಗಿ ರಕ್ತದ ಮಾದರಿಯ ಪರೀಕ್ಷೆ ನಡೆಸಿದ್ದು ಪಾಸಿಟಿವ್ ಫಲಿತಾಂಶ ಬಂದಿದೆ. ಈ ಹಿನ್ನೆಲೆಯಲ್ಲಿ ಗುರುಗ್ರಾಮದ ಪೇಟಿಎಂ ಕಂಪನಿ ಮುಚ್ಚಲಾಗಿದ್ದು, ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿದೆ.

    ಕೊರೊನಾ ಅತಿ ಹೆಚ್ಚು ವ್ಯಾಪಿಸುತ್ತಿರುವ ಇಟಲಿಯಿಂದ ಪೇಟಿಎಂ ಉದ್ಯೋಗಿ ಮರಳಿದ್ದರು. ಇಟಲಿಯ 16 ಮಂದಿ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದ ಚಾಲಕನಿಗೆ ಸಹ ಈಗ ಕೊರೊನಾ ಬಂದಿದೆ.

    ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಕೇಂದ್ರ ಸರ್ಕಾರ ಈಗ ವಿದೇಶದಿಂದ ಆಗಮಿಸಿದ ಎಲ್ಲ ಪ್ರಯಾಣಿಕರ ಸ್ಕ್ರೀನಿಂಗ್ ಪರೀಕ್ಷೆ ಮಾಡಲಾಗುವುದು ಎಂದು ಹೇಳಿದೆ. ಈ ಮೊದಲು ಕೇವಲ 10 ದೇಶಗಳಿಂದ ಆಗಮಿಸಿದ ಪ್ರಯಾಣಿಕರ ಸ್ಕ್ರೀನಿಂಗ್ ಪರೀಕ್ಷೆ ನಡೆಸಲಾಗುತ್ತಿತ್ತು.

    ಜರ್ಮನಿಯ ಪ್ರಸಿದ್ಧ ಲುಫ್ಥಾನ್ಸ ಏರ್‍ಲೈನ್ಸ್ ತನ್ನ 750 ವಿಮಾನಗಳ ಪೈಕಿ 125 ವಿಮಾನಗಳ ಹಾರಾಟವನ್ನು ನಿಲ್ಲಿಸಿದೆ. ಇಟಲಿಯಲ್ಲಿ 3,089 ಕೊರೊನಾ ಪ್ರಕರಣ ಪತ್ತೆಯಾಗಿದ್ದು 107 ಮಂದಿ ಮೃತಪಟ್ಟಿದ್ದಾರೆ.

  • ಯಾರಿಗೆ ಕೊರೊನಾ ಬಂದ್ರೂ ಸರವಣಗೆ ಬರಲ್ಲ: ಹೊರಟ್ಟಿ

    ಯಾರಿಗೆ ಕೊರೊನಾ ಬಂದ್ರೂ ಸರವಣಗೆ ಬರಲ್ಲ: ಹೊರಟ್ಟಿ

    – ಸರವಣ ಅವ್ರ ಆರೋಗ್ಯ ತಪಾಸಣೆ ಆಗ್ಲೇ ಬೇಕು

    ಬೆಂಗಳೂರು: ಕಲಾಪಕ್ಕೆ ಮಂಗಳವಾರ ಮಾಸ್ಕ್ ಹಾಕಿಕೊಂಡು ಬಂದ ಉದ್ದೇಶವನ್ನು ವಿಧಾನ ಪರಿಷತ್ ಸದಸ್ಯ ಸರವಣ ರಿವೀಲ್ ಮಾಡಿದ್ದಾರೆ.

    ಕಲಾಪದಲ್ಲಿ ಮಾತನಾಡಿದ ಅವರು, ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ನಿನ್ನೆ ಮಾಸ್ಕ್ ಹಾಕಿಕೊಂಡು ಕಲಾಪಕ್ಕೆ ಬಂದಿದ್ದೆ. ಆದರೆ ಕೆಲವರು ನಿಮಗೆ ಕೊರೊನಾ ಬಂದಿದೆಯಾ ಅಂತ ವಿಧಾನ ಪರಿಷತ್‍ನ ಕೆಲ ಸದಸ್ಯರು ರೇಗಿಸಿದರು ಎಂದು ಹೇಳಿದರು. ಆಗ ಬಸವರಾಜ ಹೊರಟ್ಟಿ ಅವರು, ಯಾರಿಗೆ ಕೊರೊನಾ ಬಂದರೂ ಸರವಣಗೆ ಬರಲ್ಲ ಬಿಡಿ ಎಂದು ಗೇಲಿ ಮಾಡಿದರು.

    ಈ ಮಧ್ಯೆ ಧ್ವನಿಗೂಡಿಸಿದ ತೇಜಸ್ವಿನಿ ರಮೇಶ್, ಸರವಣ ಅವರ ಆರೋಗ್ಯ ತಪಾಸಣೆ ಆಗಲೇ ಬೇಕು. ಅನುಮಾನ ನಿವಾರಣೆಯಾಗಲು ತಪಾಸಣೆ ಅಗತ್ಯ ಎಂದು ಹೇಳಿದರು. ಆಗ ಸರವಣ, ನಾನು ಆರೋಗ್ಯವಾಗಿದ್ದೇನೆ. ನೀವು ಕುಳಿತುಕೊಳ್ಳಿ ಎಂದರು.

    ರಾಜ್ಯದ ಜನರು ಕೊರೊನಾ ಬಗ್ಗೆ ಆತಂಕದಲ್ಲಿ ಇದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಯಾವ ರೀತಿ ಕ್ರಮ ಕೈಗೊಂಡಿದೆ ಎನ್ನುವುದನ್ನು ಚರ್ಚಿಸಲು ಮಾಸ್ಕ್ ಹಾಕಿಕೊಂಡು ಬಂದಿದ್ದೆ. ಆದರೆ ಸದನವನ್ನು ಗಲಾಟೆಗೆ ತಳ್ಳಿದ್ರಿ ಎಂದು ಹೇಳಿದರು.

    ಇದಕ್ಕೂ ಮುನ್ನ ಕೃಷಿ ಸಚಿವ ಬಿ.ಸಿ.ಪಾಟೀಲ್, ಕೊರೊನಾ ವೈರಸ್ ವಿವಿಧ ದೇಶಗಳಿಗೆ ಹರಡಿ ಆತಂಕ ಹೆಚ್ಚಿಸಿದೆ. ಅದು ವಿರೋಧ ಪಕ್ಷ, ಆಡಳಿತ ಪಕ್ಷ ಎಂದು ಭೇದಭಾವ ಮಾಡುವುದಿಲ್ಲ. ನಿಮಗೆ ಸ್ವಲ್ಪ ಜಾಸ್ತಿ ಇದೆ ಎಂದು ವಿಪಕ್ಷ ನಾಯಕ ಕಾಲೆಳೆದಿದ್ದರು.

    ಈ ಮಧ್ಯೆ ಎದ್ದು ನಿಂತ ಸಿ.ಸಿ.ಪಾಟೀಲ್ ಅವರು, ನಿನ್ನೆ ಪ್ರಭಾಕರ್ ಕೋರೆ ಅವರು ಸಿಕ್ಕಿದ್ರು. ಅವರಿಗೆ ಶೇಕ್‍ಹ್ಯಾಂಡ್ ಮಾಡೋದಕ್ಕೆ ಹೋದ್ರೆ ಅವರು, ಬೇಡ ಬೇಡ ಎಂದು ಹೋಗಿ ಬಿಟ್ಟರು. ಅದಕ್ಕೆ ನಾನು, ಯಾಕ್ರಿ ಎಂದು ಪ್ರಶ್ನಿಸಿದೆ. ಆಗ ಕೋರೆ, ಕೊರೊನಾ ಬಂದ್ರೆ ಏನ್ ಮಾಡ್ಲಿ ಅಂತ ಹೇಳಿದರು. ಹೀಗಾಗಿ ನಿಮಗೆ ಕೊರೊನಾ ಆಂತಕ ಹೆಚ್ಚಾಗಿದೆ ಎಂದು ಬಿ.ಸಿ.ಪಾಟೀಲ್ ಅವರಿಗೆ ಟಾಂಗ್ ಕೊಟ್ಟಿದ್ದರು.

  • ದೆಹಲಿ ಹಿಂಸಾಚಾರವನ್ನ ಮುಚ್ಚಿಹಾಕಲು ಕೊರೊನಾ ವೈರಸ್ ಭೀತಿ ಸೃಷ್ಟಿ: ದೀದಿ

    ದೆಹಲಿ ಹಿಂಸಾಚಾರವನ್ನ ಮುಚ್ಚಿಹಾಕಲು ಕೊರೊನಾ ವೈರಸ್ ಭೀತಿ ಸೃಷ್ಟಿ: ದೀದಿ

    ಕೋಲ್ಕತ್ತಾ: ದೇಶದಲ್ಲಿ ಕೊರೊನಾ ವೈರಸ್ ಭಾರೀ ತಲ್ಲಣ ಉಂಟು ಮಾಡಿದೆ. ಆದರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೊರೊನಾ ವೈರಸ್ ಭೀತಿಯು ಇತ್ತೀಚಿನ ದೆಹಲಿ ಹಿಂಸಾಚಾರದಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ತಂತ್ರವಾಗಿದೆ ಎಂದು ಆರೋಪಿಸಿದ್ದಾರೆ.

    ಕೋಲ್ಕತ್ತಾದಲ್ಲಿ ಬುಧವಾರ ಮಾತನಾಡಿದ ಅವರು, ‘ಜನರು ಕೊರೊನಾ, ಕೊರೊನಾ ಎಂದು ಕಿರುಚುತ್ತಿದ್ದಾರೆ. ಇದಕ್ಕೆಲ್ಲ ಭಯಪಡಬೇಡಿ. ಕೆಲವು ಚಾನೆಲ್‍ಗಳು ದೆಹಲಿ ಹಿಂಸಾಚಾರವನ್ನು ಕರೋನವೈರಸ್ ಭೀತಿಯಿಂದ ಮುಚ್ಚಿಡಲು ಪ್ರಯತ್ನಿಸುತ್ತಿವೆ. ಇದು ಒಂದು ರೋಗವಷ್ಟೇ ಜನರು ಭಯಭೀತರಾಗಬಾರದು. ದೆಹಲಿ ಹಿಂಸಾಚಾರದಲ್ಲಿ ಜನರು ಕೊಲ್ಲಲ್ಪಟ್ಟಿದ್ದು, ಕೊರೊನಾ ವೈರಸ್ ಕಾರಣದಿಂದಲ್ಲ ಬಿಜೆಪಿಯಿಂದ ಕೊಲೆಯಾಗಿದ್ದಾರೆ ಎಂದು ದೂರಿದರು.

    ಬಿಜೆಪಿ ವಿರುದ್ಧ ಗುಡುಗು:
    ದೆಹಲಿ ಹಿಂಸಾಚಾರವು ‘ರಾಜ್ಯ ಪ್ರಾಯೋಜಿತ ಯೋಜಿತ ನರಮೇಧ’ ಎಂದು ಪಶ್ಚಿಮ ಬಂಗಾಳ ಸಿಎಂ ಮಂಗಳವಾರ ಬಿಜೆಪಿಯ ವಿರುದ್ಧ ತೀವ್ರ ದಾಳಿ ನಡೆಸಿದ್ದರು. ಕೋಲ್ಕತ್ತಾದಲ್ಲಿ ನಡೆದ ಟಿಎಂಸಿ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶಾದ್ಯಂತ ‘ಗುಜರಾತ್ ಮಾದರಿಯ ಗಲಭೆ’ಯನ್ನು ಪುನರಾವರ್ತಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು.

    ‘ದೆಹಲಿಯಲ್ಲಿ ಮುಗ್ಧ ಜನರನ್ನು ಹತ್ಯೆಗೈದಿದ್ದು ನನಗೆ ತುಂಬಾ ನೋವು ತಂದಿದೆ. ಇದು ಯೋಜಿತ ನರಮೇಧ ಎಂದು ನಾನು ಭಾವಿಸುತ್ತೇನೆ. ದೆಹಲಿ ಪೊಲೀಸರು ಕೇಂದ್ರದ ಅಡಿಯಲ್ಲಿದ್ದಾರೆ. ದೆಹಲಿ ಪೊಲೀಸರು, ಸಿಆರ್‍ಪಿಎಫ್, ಸಿಐಎಸ್‍ಎಫ್ ಯಾರೂ ಗಲಭೆಯನ್ನು ನಿಯಂತ್ರಿಸಲಿಲ್ಲ’ ಎಂದು ಆರೋಪಿಸಿದ್ದರು.

    ಕೊರೊನಾ ವೈರಸ್:
    ಚೀನಾದ ವೂಹಾನ್‍ನಲ್ಲಿ ಮೊದಲು ಕಾಣಿಸಿಕೊಂಡ ಮಾರಣಾಂತಿಕ ವೈರಸ್ ಇದುವರೆಗೆ 80ಕ್ಕೂ ಹೆಚ್ಚು ದೇಶಗಳಿಗೆ ಹರಡಿದೆ. ಕೊರೊನಾ ವೈರಸ್‍ಗೆ 3,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಪ್ರಪಂಚದಾದ್ಯಂತ 93,000ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ ಎಂದು ವರದಿಯಾಗಿದೆ.

    ಬುಧವಾರ ಬೆಳಗ್ಗೆಯವರೆಗೆ ಭಾರತದಲ್ಲಿ 438 ಮಂದಿ ಕೊರೊನಾ ಶಂಕಿತರೆಂದು ವರದಿಯಾಗಿದೆ. ಅದರಲ್ಲಿ 225 ಜನರ ಮೇಲೆ 28 ದಿನಗಳ ಕಾಲ ತೀವ್ರ ನಿಗಾ ವಹಿಸಲಾಗಿತ್ತು. 189 ಮಂದಿ ಮೇಲೆ ತೀವ್ರ ನಿಗಾ ವಹಿಸಲಾಗುತ್ತಿದೆ. 89 ಮಂದಿಯನ್ನು ಪ್ರತ್ಯೇಕ ಸ್ಥಳದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. 118 ಮಂದಿ ಕೊರೊನಾ ಪರೀಕ್ಷೆ ಮಾಡಿಸಿದ್ದು, 103 ಜನರ ವರದಿಯಲ್ಲಿ ನೆಗೆಟೀವ್ ಬಂದಿದ್ದು, 4 ಮಂದಿಯ ವರದಿಗಾಗಿ ಕಾಯುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಇಟಲಿಯಿಂದ ಬಂದ 21 ಮಂದಿಯನ್ನು ಪರೀಕ್ಷಿಸಲಾಗಿದ್ದು ಇದರಲ್ಲಿ 15 ಮಂದಿ ರಕ್ತದ ಮಾದರಿಯಲ್ಲಿ ಕೊರೊನಾ ಪಾಸಿಟಿವ್ ಅಂಶ ಕಂಡುಬಂದಿದೆ. ಇಟಲಿಯ ಪ್ರವಾಸಿಗರ ಗುಂಪಿನ ಸದಸ್ಯರನ್ನು ದೆಹಲಿಯ ಐಟಿಬಿಪಿ(ಇಂಡೋ ಟಿಬೆಟ್ ಬಾರ್ಡರ್ ಪೊಲೀಸ್) ಕೇಂದ್ರದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಜೈಪುರಕ್ಕೆ ಆಗಮಿಸಿದ ಇಟಲಿಯ ಪ್ರವಾಸಿಗನಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಆತನ ಪತ್ನಿಗೂ ಕೊರೊನಾ ವೈರಸ್‍ನ ಆರಂಭಿಕ ಲಕ್ಷಣಗಳು ಕಾಣಿಸಿಕೊಂಡಿತ್ತು. ಈ ದಂಪತಿ ರಾಜಸ್ಥಾನ ಪ್ರವಾಸ ಮಾಡುವ ಈ ಪ್ರವಾಸಿ ಗುಂಪಿನ ಭಾಗವಾಗಿದ್ದರು.

  • ಇರಾನಿನ ಶೇ.7ರಷ್ಟು ಸಂಸದರಿಗೆ ಬಂದಿದೆ ಕೊರೊನಾ – 54 ಸಾವಿರ ಕೈದಿಗಳಿಗೆ ಬಿಡುಗಡೆ ಭಾಗ್ಯ

    ಇರಾನಿನ ಶೇ.7ರಷ್ಟು ಸಂಸದರಿಗೆ ಬಂದಿದೆ ಕೊರೊನಾ – 54 ಸಾವಿರ ಕೈದಿಗಳಿಗೆ ಬಿಡುಗಡೆ ಭಾಗ್ಯ

    ಟೆಹರಾನ್: ಇರಾನಿನಲ್ಲಿ ಕೊರೊನಾ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಇರಾನಿನ ಸಂಸತ್ತಿನ ಶೇ.7 ರಷ್ಟು ಸದಸ್ಯರು ಕೊರೊನಾ ಪೀಡಿತರಾಗಿದ್ದಾರೆ.

    ಇರಾನ್ ದೇಶದಲ್ಲಿ ಇಲ್ಲಿಯವರೆಗೆ 2,336 ಮಂದಿಗೆ ಕೊರೊನಾ ಬಾಧಿಸಿದೆ. ಆದರೆ ಈ ಸಂಖ್ಯೆ ಅಧಿಕೃತವಲ್ಲ. ಸಂಖ್ಯೆ ಮತ್ತಷ್ಟು ಹೆಚ್ಚಿರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಈಗಾಗಲೇ ಒಟ್ಟು 77 ಮಂದಿ ಮೃತಪಟ್ಟಿದ್ದಾರೆ. ಚೀನಾ ಬಿಟ್ಟರೆ ವಿಶ್ವದಲ್ಲಿ ಅತಿ ಹೆಚ್ಚಿ ಸಂಖ್ಯೆಯ ಸಾವು ಇರಾನಿನಲ್ಲಿ ದಾಖಲಾಗಿದೆ.

    ಒಟ್ಟು ಸಂಸತ್ ಸದಸ್ಯರ ಪೈಕಿ ಶೇ.7 ರಷ್ಟು ಸದಸ್ಯರ ರಕ್ತದ ಮಾದರಿ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಇರಾನಿನ ತುರ್ತು ವೈದ್ಯಕೀಯ ಸೇವೆಯ ಮುಖ್ಯಸ್ಥರೇ ಕೊರೊನಾಗೆ ತುತ್ತಾಗಿದ್ದಾರೆ ಎಂದು ಸಂಸತ್ತಿನ ಉಪ ಸ್ಪೀಕರ್ ಹೇಳಿದ್ದಾರೆ. ಒಟ್ಟು 290 ಸದಸ್ಯರ ಪೈಕಿ 23 ಮಂದಿಗೆ ಕೊರೊನಾ ಭಾದಿಸಿದ್ದು ರೋಗ ನಿಯಂತ್ರಣ ಮಾಡಲು ಹರಸಾಹಸ ಪಡುತ್ತಿದೆ.

    ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ 54 ಸಾವಿರ ಕೈದಿಗಳನ್ನು ಜೈಲಿನಿಂದ ಬಿಡುಗಡೆ ಮಾಡಲಾಗುತ್ತಿದೆ ಎಂದು ಇರಾನ್ ನ್ಯಾಯಾಂಗ ಇಲಾಖೆಯ ವಕ್ತಾರರು ತಿಳಿಸಿದ್ದಾರೆ. ಪರೀಕ್ಷೆಯ ವೇಳೆ ನೆಗೆಟಿವ್ ಬಂದವರನ್ನು ಜಾಮೀನಿನ ಮೇಲೆ ತಾತ್ಕಾಲಿಕವಾಗಿ ಬಿಡುಗಡೆ ಮಾಡಲಾಗುತ್ತಿದೆ. ಗಂಭೀರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಕೈದಿಗಳನ್ನು ಬಿಡುಗಡೆ ಮಾಡುವುದಿಲ್ಲ. ಕೈದಿಗಳು ಸಹ ಮನುಷ್ಯರೇ. ಮಾನವೀಯ ಆಧಾರದ ಹಿನ್ನೆಲೆಯಲ್ಲಿ ಇವರನ್ನು ತಾತ್ಕಾಲಿಕವಾಗಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

  • ರಾಜ್ಯದಲ್ಲಿ ಕೊರೊನಾ ಭೀತಿ- ಮಂಗ್ಳೂರು ಏರ್‌ಪೋರ್ಟಿನಲ್ಲಿ ಹೈ ಅಲರ್ಟ್

    ರಾಜ್ಯದಲ್ಲಿ ಕೊರೊನಾ ಭೀತಿ- ಮಂಗ್ಳೂರು ಏರ್‌ಪೋರ್ಟಿನಲ್ಲಿ ಹೈ ಅಲರ್ಟ್

    ಮಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮಂಗಳೂರು ಅಂತರಾಷ್ಟ್ರೀಯ ಏರ್‌ಪೋರ್ಟಿನಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

    ಕರಾವಳಿಯಲ್ಲಿ ವೈರಸ್ ಬರದಂತೆ ತಡೆಗಟ್ಟಲು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಯಂತ್ರಗಳನ್ನು ಅಳವಡಿಸಲಾಗಿದೆ. ದುಬೈ ಸೇರಿದಂತೆ ಎಲ್ಲಾ ದೇಶಗಳಿಂದ ಬರುವ ವಿಮಾನದಲ್ಲಿ ಹೆಚ್ಚುವರಿ ತಪಾಸಣೆ ಮಾಡಲಾಗುತ್ತಿದ್ದು, ಹಡಗಿನ ಮೂಲಕ ಬರುವವರಿಗೂ ಸೂಕ್ತ ತಪಾಸಣೆ ನಡೆಸಲಾಗುತ್ತಿದೆ. ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಐಸೋಲೇಟರ್ ವಾರ್ಡ್ ನಿರ್ಮಾಣ ಮಾಡಲಾಗಿದೆ.

    ಕರ್ನಾಟಕ ಗಡಿ ಜಿಲ್ಲೆಗಳಲ್ಲಿ ಕರೋನಾ ಕಟ್ಟೆಚ್ಚರ ವಹಿಸಲಾಗಿದ್ದು, ಆಂಧ್ರ, ತೆಲಂಗಾಣ, ಕೇರಳ ಗಡಿಯಲ್ಲಿ ಎಚ್ಚರಿಕೆ ನೀಡಲಾಗಿದೆ. ಬಳ್ಳಾರಿ, ಕಲಬುರುಗಿ, ಬೆಳಗಾವಿ, ಚಾಮರಾಜನಗರ, ರಾಯಚೂರು ಭಾಗಗಳಲ್ಲಿ ಕೂಡ ಎಚ್ಚರಿಕೆ ವಹಿಸಲಾಗುತ್ತಿದೆ. ಇದನ್ನೂ ಓದಿ: ಆಂಧ್ರದ ಟೆಕ್ಕಿಗೆ ಕೊರೊನಾ : ಬೆಂಗ್ಳೂರಲ್ಲಿ ಲ್ಯಾಂಡ್ ಆಗಿದ್ರೂ ಪತ್ತೆ ಆಗಲಿಲ್ಲ ಯಾಕೆ?-ಟೆಕ್ಕಿಗೆ ಕೊರೊನಾ ಬಂದಿದ್ದು ಹೇಗೆ?

    ಇತ್ತ ಬೆಂಗಳೂರು ಟೆಕ್ಕಿಗೆ ಕೊರೊನಾ ಜ್ವರ ಕಂಡು ಬಂದ ಹಿನ್ನೆಲೆಯಲ್ಲಿ ನಗರದ ಖಾಸಗಿ ಕಂಪನಿಗಳ ಮೇಲೆ ನಿಗಾ ವಹಿಸಲಾಗಿದೆ. ಅಲ್ಲದೆ ಖಾಸಗಿ ಕಂಪನಿಗಳ ನೌಕರರ ಮೇಲೆ ನಿಗಾಕ್ಕೆ ಸೂಚನೆ ನೀಡಲಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

  • ಕೊರೊನಾ ವೈರಸ್ ಎಫೆಕ್ಟ್ – ಮುಕೇಶ್ ಅಂಬಾನಿಗೆ 5.09 ಶತಕೋಟಿ ಡಾಲರ್ ನಷ್ಟ

    ಕೊರೊನಾ ವೈರಸ್ ಎಫೆಕ್ಟ್ – ಮುಕೇಶ್ ಅಂಬಾನಿಗೆ 5.09 ಶತಕೋಟಿ ಡಾಲರ್ ನಷ್ಟ

    ಮುಂಬೈ: ವಿಶ್ವದಲ್ಲಿ ಭಾರೀ ಆತಂಕ ಮೂಡಿಸುತ್ತಿರುವ ಕೊರೊನಾ ವೈರಸ್ ಈಗ ಷೇರುಪೇಟೆ ಮೇಲೆಯೂ ತನ್ನ ಕರಾಳ ಛಾಯೆಯನ್ನು ಬೀರತೊಡಗಿದೆ. ಏಷ್ಯಾದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿರುವ ಮುಖೇಶ್ ಅಂಬಾನಿ ಅವರ ವ್ಯವಹಾರದ ಮೇಲೂ ಕೊರೊನಾ ವೈರನ್ ಭಾರೀ ಪರಿಣಾಮ ಬೀರಿದೆ.

    ದೇಶದ ಷೇರುಪೇಟೆ ದಿಢೀರ್ ಕುಸಿತ ಕಂಡಿದೆ. ಚೀನಾದಲ್ಲಿ ಉಂಟಾದ ಕೊರೊನಾ ವೈರಸ್‍ನಿಂದಾಗಿ ಹೂಡಿಕೆದಾರರು ತಮ್ಮ ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಪರಿಣಾಮ ವಹಿವಾಟು ಆರಂಭವಾಗುತ್ತಿದ್ದಂತೆ ಟ್ರಿಲಿಯನ್ ಡಾಲರ್‌ಗಟ್ಟಲೆ ಜಾಗತಿಕ ಹೂಡಿಕೆದಾರರ ಸಂಪತ್ತನ್ನು ಅಳಿಸಿಹಾಕಿದೆ. ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ 5.09 ಶತಕೋಟಿ ಡಾಲರ್ ನಷ್ಟ ಅನುಭವಿಸಿದ್ದಾರೆ.

    ಕೊರೊನಾ ವೈರಸ್‌ನಿಂದ ಮುಂಬೈ ಷೇರು ಮಾರುಕಟ್ಟೆಗೂ ಹೊಡೆತ ಬಿದ್ದಿದ್ದು, ಷೇರುಗಳ ಮೌಲ್ಯದಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. ಇಂದು ಆರಂಭಿಕ ವಹಿವಾಟಿನಿಂದಲೇ ಷೇರು ಸೂಚ್ಯಂಕದಲ್ಲಿ ಭಾರೀ ಕುಸಿತ ದಾಖಲಾಗಿದೆ. ಆರಂಭಿಕ ವಹಿವಾಟಿನಲ್ಲಿಯೇ ಸೆನ್ಸೆಕ್ಸ್ 1,155 ಅಂಶ ಕುಸಿತ ಕಂಡಿದ್ದು, ನಿಫ್ಟಿಯು ಕೂಡ 346 ಅಂಶ ಕುಸಿತ ಕಂಡಿದೆ. ಕೇವಲ 5 ನಿಮಿಷದಲ್ಲಿ 4 ಲಕ್ಷ ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಗುರುವಾರ 39,745 ಅಂಶಕ್ಕೆ ಅಂತ್ಯಗೊಂಡ ಸೆನ್ಸೆಕ್ಸ್ ಇಂದು ಒಂದೇ ದಿನ 1,448.37 ಅಂಶ ಇಳಿಕೆಯಾಗಿ 38,297 ಅಂಶಕ್ಕೆ ಮುಕ್ತಾಯಗೊಂಡಿತು. ನಿಫ್ಟಿ ಇಂದು 431 ಅಂಶ ಇಳಿಕೆಯಾಗಿ 11,201 ಅಂಶಕ್ಕೆ ಮುಕ್ತಾಯಗೊಂಡಿದೆ.

    ಬ್ಲೂಮ್‍ಬರ್ಗ್ ಬಿಲಿಯನೇರ್‌ಗಳ ಸೂಚ್ಯಂಕದ ಪ್ರಕಾರ, ಮುಖೇಶ್ ಅಂಬಾನಿ ಅವರ ನಿವ್ವಳ ಮೌಲ್ಯವು ಈ ವರ್ಷದಲ್ಲಿ ಇದುವರೆಗೆ 5.09 ಬಿಲಿಯನ್ ಡಾಲರ್ ಇಳಿದು 53.05 ಬಿಲಿಯನ್ ಡಾಲರ್ (53,706.40 ಕೋಟಿ ರೂ.)ಗಳಿಗೆ ತಲುಪಿದೆ. ಅವರ ಪ್ರಮುಖ ಕಂಪನಿ ಆರ್‍ಐಎಲ್‍ನ ಷೇರುಗಳು ಈ ವರ್ಷ ಇಲ್ಲಿಯವರೆಗೆ ಸುಮಾರು ಶೇ. 11 ಕುಸಿದಿವೆ. ಕಳೆದ 15 ದಿನಗಳಲ್ಲಿ ಜಾಗತಿಕ ಮಾರುಕಟ್ಟೆಯ ಮೇಲೆ ಕೊರೊನಾ ವೈರಸ್ ವ್ಯಾಪಕ ಪರಿಣಾಮ ಬೀರಿದೆ.

    ಐಟಿ ಜಾರ್ ಮತ್ತು ವಿಪ್ರೊ ಸಂಸ್ಥಾಪಕ ಈ ವರ್ಷದಲ್ಲಿ ಇದುವರೆಗೆ 869 ಮಿಲಿಯನ್ ಡಾಲರ್ ಕಳೆದುಕೊಂಡಿದ್ದಾರೆ. ಅವರ ನಿವ್ವಳ ಮೌಲ್ಯ ಈಗ 17.4 ಬಿಲಿಯನ್ ಡಾಲರ್‍ಗೆ ಇಳಿದಿದೆ. ಶಾಪೂರ್ಜಿ ಪಲ್ಲೊಂಜಿ ಗ್ರೂಪ್‍ನ ಸಂಸ್ಥಾಪಕ ಪಲ್ಲೊಂಜಿ ಮಿಸ್ತ್ರಿ ಹಾಗೂ ಉದಯ್ ಕೊಟಕ್ ಅವರ ನಿವ್ವಳ ಮೌಲ್ಯವು ಈ ವರ್ಷದಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕ್ರಮವಾಗಿ 463 ಮಿಲಿಯನ್ ಡಾಲರ್ ಮತ್ತು 126 ಮಿಲಿಯನ್ ಡಾಲರ್ ಇಳಿಕೆಯಾಗಿದೆ.

    ಬ್ಲೂಮ್‍ಬರ್ಗ್ ಬಿಲಿಯನೇರ್ ಸೂಚ್ಯಂಕದ ಪ್ರಕಾರ ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾಲ್ ಮಂಗಲಂ ಬಿರ್ಲಾ ಅವರ ನಿವ್ವಳ ಮೌಲ್ಯದಲ್ಲಿ 884 ಮಿಲಿಯನ್ ಡಾಲರ್ ನಷ್ಟವಾಗಿದೆ. ಹಾಗೆ ಅದಾನಿ ಗ್ರೂಪ್‍ನ ಗೌತಮ್ ಅದಾನಿ ಅವರು ಕಳೆದ ಎರಡು ತಿಂಗಳಲ್ಲಿ 496 ಮಿಲಿಯನ್ ಡಾಲರ್ ಕಳೆದುಕೊಂಡಿದ್ದಾರೆ.

    ಷೇರು ಮಾರುಕಟ್ಟೆ ಕುಸಿತದಿಂದ ರೂಪಾಯಿ ಮೌಲ್ಯದಲ್ಲೂ ಕೂಡ ಇಳಿಕೆ ಕಂಡುಬಂದಿದೆ. 33 ಪೈಸೆ ಇಳಿಕೆ ಕಂಡಿರುವ ರೂಪಾಯಿ ಮೌಲ್ಯ ಸದ್ಯಕ್ಕೆ ಅಮೆರಿಕ ಡಾಲರ್ ಎದುರು 71.94 ರೂ. ಇದೆ. ಷೇರು ಕುಸಿತ ಬ್ಯಾಂಕಿಂಗ್, ತೈಲ, ಅನಿಲ ಆಟೋಮೊಬೈಲ್ ಮತ್ತು ಲೋಹ ಕಂಪನಿಗಳ ಮೇಲೆ ನಕರಾತ್ಮಕ ಪ್ರಭಾವ ಬೀರಿದೆ. ರಿಲಾಯನ್ಸ್ ಇಂಡಸ್ಟ್ರೀಸ್, ಹೆಚ್‍ಡಿಎಫ್‍ಸಿ, ಇನ್ಫೋಸಿಸ್ ಷೇರು ಬೆಲೆಯಲ್ಲೂ ಇಳಿಕೆ ಕಂಡಿದೆ. ಜೊತೆಗೆ ಕಚ್ಚಾತೈಲ ಬೆಲೆಯೂ ಶೇ.2.2ರಷ್ಟು ಕುಸಿತ ದಾಖಲಿಸಿದ್ದು, ಒಂದು ಬ್ಯಾರಲ್ ಕಚ್ಚಾತೈಲದ ಬೆಲೆ 51 ಡಾಲರ್ ಇದೆ.

  • ‘ರಾಬರ್ಟ್’ ಚಿತ್ರಕ್ಕೆ ತಟ್ಟಿದ ಕೊರೊನಾ ಭೀತಿ -ಶೂಟಿಂಗ್ ಕ್ಯಾನ್ಸಲ್

    ‘ರಾಬರ್ಟ್’ ಚಿತ್ರಕ್ಕೆ ತಟ್ಟಿದ ಕೊರೊನಾ ಭೀತಿ -ಶೂಟಿಂಗ್ ಕ್ಯಾನ್ಸಲ್

    ಬೆಂಗಳೂರು: ಚೀನಾದಲ್ಲಿ ಮರಣ ಮೃದಂಗ ಬಾರಿಸಿದ ‘ಕೊರೊನಾ ವೈರಸ್’ ವಿಶ್ವದ ಜನರನ್ನು ನಡುಗಿಸಿದೆ. ಇದೀಗ ಕರ್ನಾಟಕದಲ್ಲಿ ಅದರಲ್ಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾಗೂ ಕೊರೊನಾ ವೈರಸ್ ಭೀತಿ ಉಂಟಾಗಿದೆ.

    ‘ರಾಬರ್ಟ್’ ಸಿನಿಮಾದ ಚಿತ್ರೀಕರಣ ಇನ್ನೂ ಕಂಪ್ಲೀಟ್ ಆಗಿಲ್ಲ. ಕೆಲದಿನಗಳ ಹಿಂದೆ ಚಿತ್ರತಂಡ ವಾರಣಾಸಿಗೆ ಹೋಗಿ ಶೂಟಿಂಗ್ ಮಾಡಿಕೊಂಡು ಬಂದಿತ್ತು. ಇನ್ನೂ ಕೆಲ ಹಾಡುಗಳ ಚಿತ್ರೀಕರಣ ಬಾಕಿಯಿದೆ. ಆ ಹಾಡಿನ ಶೂಟಿಂಗ್‍ಗಾಗಿ ಚಿತ್ರತಂಡ ವಿದೇಶಗಳಿಗೆ ಹೋಗಬೇಕಾಗಿತ್ತು. ಆದರೆ ವಿದೇಶದಲ್ಲಿ ಕೊರೊನಾ ವೈರಸ್, ತನ್ನ ಪ್ರತಾಪವನ್ನು ತೋರಿಸುತ್ತಿರೋದರಿಂದ ‘ರಾಬರ್ಟ್’ ಚಿತ್ರತಂಡ ಶೂಟಿಂಗ್ ಕ್ಯಾನ್ಸಲ್ ಮಾಡಿದೆ.

    ಸ್ಪೇನ್‍ನಲ್ಲಿ ಈ ಚಿತ್ರದ ಹಾಡುಗಳ ಶೂಟಿಂಗ್ ನಡೆಯಬೇಕಾಗಿತ್ತು. ಈಗ ಸ್ಪೇನ್ ಬದಲು ಬೇರೆಡೆ ಚಿತ್ರೀಕರಣ ಮಾಡುವ ಬಗ್ಗೆ ಚಿತ್ರತಂಡ ಯೋಚಿಸುತ್ತಿದೆ. ಆದಷ್ಟು ಬೇಗ ಶೂಟಿಂಗ್ ಕಂಪ್ಲೀಟ್ ಮಾಡಿ ಏಪ್ರಿಲ್ 9 ಕ್ಕೆ ತೆರೆಗೆ ಬರಲು ಸಿದ್ಧವಾಗುತ್ತಿದೆ. ಕನ್ನಡ ಮತ್ತು ತೆಲುಗಿನಲ್ಲಿ ಈ ಸಿನಿಮಾ ಏಪ್ರಿಲ್ 9ಕ್ಕೆ ಏಕಕಾಲಕ್ಕೆ ರಿಲೀಸ್ ಆಗಲಿದೆ.

    ಉಮಾಪತಿ ಫಿಲ್ಮ್ ಬ್ಯಾನರ್ ನಡಿಯಲ್ಲಿ ಈ ಸಿನಿಮಾ ರೆಡಿಯಾಗಿದೆ. ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ ಮಾಡಿದ್ದು, ಶೀಘ್ರದಲ್ಲೇ ಸಿನಿಮಾದ ಆಡಿಯೋ ರಿಲೀಸ್ ಮಾಡಲಾಗುತ್ತದೆ. ‘ರಾಬರ್ಟ್’ ಚಿತ್ರದಲ್ಲಿ ದರ್ಶನ್‍ಗೆ ಜೋಡಿಯಾಗಿ ಆಶಾ ಭಟ್ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಗೆ ಕನ್ನಡದಲ್ಲಿ ಇದು ಚೊಚ್ಚಲ ಸಿನಿಮಾವಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಲುಕ್, ಟೀಸರ್ ಮತ್ತು ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.