Tag: Coronavirus

  • ಸರ್ಕಾರದ ಆದೇಶ ಮೀರಿ ನಡೆಯುತ್ತಿವೆ ನರ್ಸರಿ ಸ್ಕೂಲ್

    ಸರ್ಕಾರದ ಆದೇಶ ಮೀರಿ ನಡೆಯುತ್ತಿವೆ ನರ್ಸರಿ ಸ್ಕೂಲ್

    – ಶಾಲೆಗೆ ಬೀಗ ಹಾಕಿ ಪುಟಾಣಿಗಳಿಗೆ ಕ್ಲಾಸ್
    – ಪಬ್ಲಿಕ್ ಟಿವಿ ಕ್ಯಾಮೆರಾ ಕಾಣುತ್ತಿದ್ದಂತೆ ಉಲ್ಟಾ ಹೊಡೆದ ಶಾಲಾ ಸಿಬ್ಬಂದಿ

    ಬೆಂಗಳೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಹಾಗೂ ಗ್ರಾಮಾಂತದ ಎಲ್ಲಾ ನರ್ಸರಿ ಶಾಲೆಗಳಿಗೆ ಸರ್ಕಾರ ರಜೆ ಘೋಷಿಸಿದೆ. ಆದರೆ ಚಾಮರಾಜಪೇಟೆಯ ನರ್ಸರಿ ಸ್ಕೂಲ್ ಒಂದು ತರಗತಿ ನಡೆಸುತ್ತಿದೆ.

    ಚಾಮರಾಜಪೇಟೆಯ ದಿ ಚೈಲ್ಡ್ ಕಿಂಗಡಮ್ ಸ್ಕೂಲ್‍ಗೆ ಬೀಗ ಹಾಕಿ ಪುಟಾಣಿ ಮಕ್ಕಳಿಗೆ ಕ್ಲಾಸ್ ತೆಗೆದುಕೊಳ್ಳಲಾಗುತ್ತಿದೆ. ಈ ಕುರಿತು ವರದಿ ಮಾಡಲು ಪಬ್ಲಿಕ್ ಟಿವಿ ಹೋದಾಗ ಕ್ಯಾಮೆರಾ ನೋಡಿದ ಕೂಡಲೇ ಶಿಕ್ಷಕಿಯೊಬ್ಬರು ಮಕ್ಕಳನ್ನು ತರಗತಿಯೊಳಗೆ ಒಳ ಕಳಿಸಿದರು.

    ಈ ಕುರಿತು ಪ್ರತಿಕ್ರಿಯೆ ನೀಡಿದ ಶಿಕ್ಷಕಿಯೊಬ್ಬರು, ನಾವು ತರಗತಿ ಕ್ಲೋಸ್ ಮಾಡಲ್ಲ. ನೀವ್ಯಾರು ಇದನ್ನು ಕೇಳೋಕೆ? ನೀವು ಮೀಡಿಯಾದವರೆ ಸಮಸ್ಯೆ ಮಾಡ್ತಿರೋದು. ಸರ್ಕಾರದ ಆದೇಶ ನಮ್ಗೆ ಗೊತ್ತಿದೆ ಎಂದು ರೇಗಾಡಿದರು. ಬಳಿಕ ರಿಪೋರ್ಟ್ ಕಾರ್ಡ್ ಕೊಡೋದಕ್ಕೆ ನರ್ಸರಿ ಸ್ಕೂಲ್ ಅನ್ನು ತೆರೆದಿದ್ದೇವೆ. ಸ್ಕೂಲ್ ಮಕ್ಕಳಿಗೆ ರಿಪೋರ್ಟ್ ಕಾರ್ಡ್ ಮುಖ್ಯ ಅಲ್ವಾ ಅಂತ ಕಥೆ ಹೇಳಿದರು.

    ಪಬ್ಲಿಕ್ ಟಿವಿಯ ಮಾಹಿತಿ ಸಿಗುತ್ತಿದ್ದಂತೆ ಕ್ಷೇತ್ರ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ಸ್ಥಳಕ್ಕೆ ಬಂದರು. ಆದರೆ ಶಾಲಾ ಆಡಳಿತ ಮಂಡಳಿಯು ಅವರನ್ನು ಶಾಲೆಯ ಅವರಣದೊಳಗೆ ಬಿಡಲೇ ಇಲ್ಲ.

    ಸರ್ಕಾರದ ಆದೇಶದಲ್ಲಿ ಏನಿದೆ?
    ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಮಾರ್ಚ್ 8ರಂದು ಟ್ವೀಟ್ ಮಾಡಿ, ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಿದಂತೆ ಬಿಬಿಎಂಪಿ, ಬೆಂಗಳೂರುನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಎಲ್ಲಾ ಪ್ರಾಥಮಿಕ ಶಾಲೆಗಳಿಗೆ ಮುಂದಿನ ಆದೇಶದವರೆಗೆ ರಜೆ ಘೋಷಿಸಲಾಗಿದೆ ಎಂದು ತಿಳಿಸಿದ್ದರು.

    1-9ನೇ ತರಗತಿವರೆಗಿನ ಪರೀಕ್ಷೆ ಶೀಘ್ರವೇ ಮುಗಿಸಿ ಶಾಲೆಗಳಿಗೆ ರಜೆ ಘೋಷಣೆ ಮಾಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ರಾಜ್ಯದ ಎಲ್ಲಾ ಶಾಲೆಗಳಿಗೆ ಸುತ್ತೋಲೆ ಹೊರಡಿಸಿದೆ. 1-5 ನೇ ತರಗತಿ ಮಾರ್ಚ್ 11ರಿಂದ 16ವರೆಗೆ ಪರೀಕ್ಷೆ ಮುಗಿಸಬೇಕು. 6-9 ನೇ ತರಗತಿ- ಮಾರ್ಚ್ 23 ರ ಒಳಗೆ ಮುಗಿಸಬೇಕು. 10 ನೇ ತರಗತಿ ಮೊದಲೇ ನಿಗದಿ ಪಡಿಸಿದ ವೇಳಾಪಟ್ಟಿಯಂತೆ ಮುಗಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶಿಸಿದೆ.

    ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಪ್ರೀ ನರ್ಸರಿ, ಎಲ್‍ಕೆಜಿ ಮತ್ತು ಯುಕೆಜಿ ಮಕ್ಕಳಿಗೆ ರಜೆ ಘೋಷಣೆಯಾದ ಬೆನ್ನಲ್ಲೇ ಅಂಗನವಾಡಿಗಳಿಗೂ ರಜೆ ನೀಡಿ ಆದೇಶಿಸಲಾಗಿತ್ತು. ದಿನಾಂಕ 10-03-2020 ರಿಂದ 17-03-2020ರವರೆ ಅಂಗನವಾಡಿಗಳಿಗೆ ರಜೆ ನೀಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ಧರಿಸಿ ಸುತ್ತೋಲೆ ಹೊರಡಿಸಿದೆ.

  • ಕೊರೊನಾ ನಿಯಂತ್ರಣಕ್ಕೆ 13 ರೂಲ್ಸ್

    ಕೊರೊನಾ ನಿಯಂತ್ರಣಕ್ಕೆ 13 ರೂಲ್ಸ್

    ಬೆಂಗಳೂರು: ಕೊರೊನಾ ವೈರಸ್ ಮತ್ತಷ್ಟು ಜಾಸ್ತಿ ಆಗದಂತೆ ತಡೆಯಲು ಕರ್ನಾಟಕ ಸರ್ಕಾರ ವಿಶೇಷ ಕಠಿಣ ಕಾನೂನು ಜಾರಿ ಮಾಡಿದೆ. ಸಾಂಕ್ರಾಮಿಕ ರೋಗಗಳ ಕಾಯ್ದೆ 1897ರ ಸೆಕ್ಷನ್ 2,3 ಮತ್ತು 4ರಡಿ ರಾಜ್ಯ ಸರ್ಕಾರ ‘ಕರ್ನಾಟಕ ಸಾಂಕ್ರಾಮಿಕ ರೋಗ ಕೋವಿಡ್ -19 ನಿಯಂತ್ರಣ 2020′(Karnataka Epidemic Diseases, COVID-19 Regulations, 2020’) ಹೆಸರಿನಲ್ಲಿ ನಿಯಂತ್ರಣ ಕ್ರಮವನ್ನು ಪ್ರಕಟಿಸಿದೆ.

    ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಕಠಿಣ ನಿಯಮವನ್ನು ಜಾರಿ ಮಾಡಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋದರೆ ಈ ನಿಯಮ ಜಾರಿಯಾಗಲಿದೆ.

    ಕೊರೊನಾ ನಿಯಮ ಏನು?
    1. ಸೋಂಕು ಶಂಕಿತ ವ್ಯಕ್ತಿ ಸರ್ಕಾರಿ/ ಖಾಸಗಿ ಆಸ್ಪತ್ರೆಗೆ ದಾಖಲಾದಾಗ ಕಡ್ಡಾಯವಾಗಿ ಚಿಕಿತ್ಸೆ ನೀಡಲೇಬೇಕು. ಒಂದು ವೇಳೆ ವ್ಯಕ್ತಿ ಚಿಕಿತ್ಸೆ ನಿರಾಕರಿಸಿದ್ರೆ ಆರೋಗ್ಯಾಧಿಕಾರಿಗಳು, ವೈದ್ಯಾಧಿಕಾರಿಗಳು ಒತ್ತಾಯ ಪೂರ್ವಕವಾಗಿ ಆಸ್ಪತ್ರೆಗೆ ದಾಖಲಿಸಬೇಕು. 14 ದಿನ ಐಸೋಲೇಷನ್ ಸೆಂಟರಿನಲ್ಲಿ  ಇಟ್ಟುಕೊಳ್ಳಬೇಕು.

    2. ಕೊರೊನಾ ಪಾಸಿಟಿವ್ ರಿಪೋರ್ಟ್ ಆದ ವ್ಯಕ್ತಿ ವಾಸವಿರುವ ಪ್ರದೇಶ, ಹಳ್ಳಿ/ಬಡಾವಣೆ/ನಗರ/ ವಾರ್ಡ್/ ಕಾಲೋನಿಗೆ ಸಂಪೂರ್ಣ ದಿಗ್ಭಂಧನವನ್ನು ಹೇರಲಾಗುತ್ತದೆ.

    3. ಸೋಂಕು ಪೀಡಿತ ವಾಸವಿರುವ ವ್ಯಕ್ತಿಯ ಪ್ರದೇಶವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುತ್ತದೆ. ಸೋಂಕುಪೀಡಿತ ವ್ಯಕ್ತಿ ಇರುವ ಪ್ರದೇಶಕ್ಕೆ ಬೇರೆ ಜನರ ಪ್ರವೇಶಕ್ಕೆ ನಿಷೇಧ

    4. ಸೋಂಕುಪೀಡಿತ ವ್ಯಕ್ತಿ ವಾಸವಿರುವ ಪ್ರದೇಶದವರು ಎಲ್ಲಿಯೂ ಹೊರಗಡೆ ಹೋಗುವಂತಿಲ್ಲ. ಸೋಂಕು ಪೀಡಿತನ ಏರಿಯಾದ ಶಾಲಾ ಕಾಲೇಜ್ ಬಂದ್, ಕಚೇರಿಗಳು ಬಂದ್ ಹಾಗೂ ಸಾರ್ವಜನಿಕ ಸಮಾರಂಭಗಳನ್ನು ಬಂದ್ ಮಾಡಲಾಗುತ್ತದೆ. ಈ ಸ್ಥಳದಲ್ಲಿ ವಾಹನಗಳ ಓಡಾಟ ಸಂಪೂರ್ಣ ನಿಷೇಧಿಸಲಾಗುತ್ತದೆ.

    5. ಸೋಂಕು ಪೀಡಿತರು ಹಾಗೂ ಶಂಕಿತರು ಕಡ್ಡಾಯವಾಗಿ ಐಸೋಲೇಷನ್ ಸೆಂಟರ್‍ನಲ್ಲಿರಬೇಕು. ಈ ಸ್ಥಳದಲ್ಲಿರುವ ಖಾಸಗಿ ಸರ್ಕಾರಿ ಬಿಲ್ಡಿಂಗ್‍ಗಳನ್ನು ವಶಕ್ಕೆ ಪಡೆದುಕೊಂಡು ಅಲ್ಲಿ ಐಸೋಲೇಷನ್ ನಿರ್ಮಾಣ ಮಾಡಬೇಕು. ತುರ್ತು ಪರಿಸ್ಥಿತಿ ನಿಭಾಯಿಸಲು ಎಲ್ಲಾ ಸರ್ಕಾರಿ ಸಿಬ್ಬಂದಿಗಳು ಕೈಜೋಡಿಸಲೇಬೇಕು. ಕುಟುಂಬ ಮತ್ತು ಆರೋಗ್ಯ ಇಲಾಖೆಯ ಎಲ್ಲ ಸೂಚನೆಗಳನ್ನು ಸರ್ಕಾರಿ ಸಿಬ್ಬಂದಿ ಪಾಲಿಸಲೇಬೇಕು.

    6 ಈ ಕಾಯ್ದೆ ಜಾರಿ ಮಾಡುವ ಅಧಿಕಾರ ಆಯಾಯ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯ ಅಧಿಕಾರಿ, ಜಿಲ್ಲಾ ಸರ್ಜನ್, ತಾಲೂಕು ಆರೋಗ್ಯ ಅಧಿಕಾರಿ, ಬಿಬಿಎಂಪಿ ಮುಖ್ಯ ಆರೋಗ್ಯ ಅಧಿಕಾರಿಗಳ ಜೊತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಇರುತ್ತದೆ.

    7. ಒಂದು ವೇಳೆ ಕೊರೊನಾ ಪಾಸಿಟಿವ್ ಕಂಡುಬಂದರೆ ಸರ್ಕಾರಿ/ ಖಾಸಗಿ ಆಸ್ಪತ್ರೆಗಳು ರೋಗಿ ವಿದೇಶಕ್ಕೆ ಹೋಗಿದ್ದರೆ ಅಥವಾ ಆತ ಸಂಚರಿಸಿದ ಪ್ರದೇಶದ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಅಷ್ಟೇ ಅಲ್ಲದೇ ಈ ವ್ಯಕ್ತಿಯ ಸಂಪರ್ಕಕ್ಕೆ ಬಂದವರ ಎಲ್ಲ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳಬೇಕು.

    8. ಯಾವುದೇ ಸಂಸ್ಥೆಯರು ಕೊರೊನಾ ಬಗ್ಗೆ ಕುಟುಂಬ ಮತ್ತು ಕಲ್ಯಾಣ ಇಲಾಖೆಯ ಅನುಮತಿ ಪಡೆಯದೇ ಯಾರಿಗೂ ಮಾಹಿತಿಯನ್ನು ನೀಡುವಂತಿಲ್ಲ. ಒಂದು ವೇಳೆ ಸುಳ್ಳು ಮಾಹಿತಿಯನ್ನು ಹರಡಿದರೆ ಈ ನಿಯಮದ ಅನ್ವಯ ಶಿಕ್ಷಿಸಲಾಗುತ್ತದೆ.

    9. ಕರ್ನಾಟಕ ರಾಜ್ಯದಲ್ಲಿ ಯಾವುದೇ ಖಾಸಗಿ ಲ್ಯಾಬೋರೇಟರಿಯವರಿಗೆ ಕೊರೊನಾ ವೈರಸ್ ಮಾದರಿ ಪರೀಕ್ಷೆ ಮಾಡಲು ಅನುಮತಿ ನೀಡಿಲ್ಲ. ಎಲ್ಲ ಮಾದರಿಗಳು ಭಾರತ ಸರ್ಕಾರ ನಿಗದಿಪಡಿಸಿದ ಮಾನದಂಡದಲ್ಲಿ ಸಂಗ್ರಹಿಸಬೇಕು ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚಿಸಿದ ಲ್ಯಾಬ್ ಗಳಿಗೆ ಕಳುಹಿಸಬೇಕು.

    10. ಕಳೆದ 14 ದಿನಗಳ ಹಿಂದೆ ವಿದೇಶದಿಂದ ಆಗಮಿಸಿದ್ದರೆ ಅಥವಾ ಕೊರೊನಾ ಪಾಸಿಟಿವ್ ಕಂಡು ಬಂದ ವ್ಯಕ್ತಿಗಳು ಓಡಾಡಿದ ಜಾಗದಲ್ಲಿ ಸಂಚರಿಸಿದ್ದರೆ ಆ ವ್ಯಕ್ತಿಗಳು ಕಡ್ಡಾಯವಾಗಿ ಸಮಿಪದ ಸರ್ಕಾರಿ ಆಸ್ಪತ್ರೆಗೆ ತೆರಳಬೇಕು ಅಥವಾ ಉಚಿತ ಸಹಾಯವಾಣಿ 104ಕ್ಕೆ ಕರೆ ಮಾಡಿ ತಿಳಿಸಬೇಕು.

    11. ವ್ಯಕ್ತಿ ಕೊರೊನಾ ವೈರಸ್ ಇರುವ ದೇಶದಿಂದ ಆಗಮಿಸಿದ್ದರೆ ಅಥವಾ ಕೊರೊನಾ ಸೋಂಕು ಪೀಡಿತ ವ್ಯಕ್ತಿ ಇರುವ ಪ್ರದೇಶದಲ್ಲಿ ಸಂಚರಿಸಿಯೂ ಯಾವುದೇ ಕಫ, ಜ್ವರ, ಉಸಿರಾಟದ ತೊಂದರೆ ಕಾಣಿಸದೇ ಇದ್ದರೂ ಆ ವ್ಯಕ್ತಿ ಮನೆಯಲ್ಲೇ ಪ್ರತೇಕವಾಗಿ ಇರಬೇಕು ಮತ್ತು ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಧರಿಸಬೇಕು. ಈ ವ್ಯಕ್ತಿ ಯಾವುದೇ ಕಾರಣಕ್ಕೂ 14 ದಿನಗಳ ಕಾಲ ಕುಟುಂಬದ ಸದಸ್ಯರ ಸಂಪರ್ಕದಿಂದ ದೂರ ಇರಬೇಕು.

    13. ಇಂದಿನಿಂದ ಈ ಕಾಯ್ದೆ ಜಾರಿಯಾಗಲಿದ್ದು ಒಂದು ವರ್ಷದವರೆಗೆ ಈ ಕಾನೂನು ಜಾರಿಯಲ್ಲಿರಲಿದೆ. ಈ ಕಾಯ್ದೆಯನ್ನು ಸಾರ್ವಜನಿಕರು/ ಸಂಸ್ಥೆಗಳು ಉಲ್ಲಂಘಿಸಿದರೆ ಐಪಿಸಿ ಸೆಕ್ಷನ್ 188ರ(ಸರ್ಕಾರಿ ಆದೇಶದ ಉಲ್ಲಂಘನೆ) ಅಡಿ ಶಿಕ್ಷಾರ್ಹ ಅಪರಾಧವಾಗುತ್ತದೆ. ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಅಥವಾ ಜಿಲ್ಲಾಧಿಕಾರಿ ಶಿಕ್ಷೆ ನೀಡಬಹುದು.

  • ಇಂಗ್ಲೆಂಡಿನಲ್ಲಿ ಕೊರೊನಾ ಅರಿವು ಮೂಡಿಸುತ್ತಿದ್ದ ಆರೋಗ್ಯ ಸಚಿವೆಗೆ ಬಂತು ಸೋಂಕು

    ಇಂಗ್ಲೆಂಡಿನಲ್ಲಿ ಕೊರೊನಾ ಅರಿವು ಮೂಡಿಸುತ್ತಿದ್ದ ಆರೋಗ್ಯ ಸಚಿವೆಗೆ ಬಂತು ಸೋಂಕು

    ಲಂಡನ್: ದೇಶದ ಜನತೆಗೆ ಕೊರೊನಾ ಬಗ್ಗೆ ಅರಿವು ಮೂಡಿಸುತ್ತಿದ್ದ ಇಂಗ್ಲೆಂಡ್ ಆರೋಗ್ಯ ಸಚಿವೆಗೂ ಕೊರೊನಾ ವೈರಸ್ ಬಂದಿರುವುದು ಹೆಲ್ತ್ ಚೆಕಪ್ ವೇಳೆ ದೃಢಪಟ್ಟಿದೆ.

    ಇಂಗ್ಲೆಂಡ್‍ನ ಆರೋಗ್ಯ ಸಚಿವೆ ನಾಡಿನ್ ಡೋರಿಸ್‍ಗೆ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ. ವಿಷಯ ತಿಳಿದು ಬಂದ ಕೂಡಲೇ ಸ್ವತಃ ನಾಡಿನ್ ಡೋರಿಸ್ ಅವರೇ ಮನೆಯಿಂದ ಹೊರಗೆ ಬರೆದೇ ಗೃಹ ಬಂಧನದಲ್ಲಿದ್ದಾರೆ.

    ನಾಡಿನ್ ಡೋರಿಸ್ ಅವರಿಗೆ ಕಳೆದ ಗುರುವಾರ ರೋಗದ ಲಕ್ಷಣಗಳು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ಆದರೆ ರೋಗದ ಲಕ್ಷಣ ಕಾಣಿಸಿಕೊಂಡ ದಿನವೇ ನಾಡಿನ್ ಅವರು ಇಂಗ್ಲೆಂಡ್ ಪ್ರಧಾನ ಮಂತ್ರಿಯವರು ಆಯೋಜನೆ ಮಾಡಿದ್ದ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆದ್ದರಿಂದ ಅವರ ಬಳಿ ಸಂಪರ್ಕದಲ್ಲಿ ಇದ್ದ ಎಲ್ಲರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

    ಈ ಬಗ್ಗೆ ಟ್ವೀಟ್ ಮಾಡಿರುವ ನಾಡಿನ್ ಡೋರಿಸ್ ಅವರು, ನನಗೆ ಕೊರೊನಾ ಇರುವುದು ತಿಳಿದ ನಂತರ ಗುಣಮುಖರಾಗಿ ಎಂದು ಶುಭಕೊರಿದ ಎಲ್ಲರಿಗು ಧನ್ಯವಾದಗಳು. ಮುಂದೆ ಎಲ್ಲ ಸರಿ ಹೋಗುತ್ತದೆ. ಆದರೆ ನನ್ನ ಜೊತೆಯಲ್ಲೇ ಇದ್ದ ನನ್ನ 84 ವರ್ಷದ ಅಮ್ಮನಿಗೆ ಕೂಡ ಇಂದು ಕೆಮ್ಮು ಕಾಣಿಸಿಕೊಂಡಿದೆ. ಆಕೆಯನ್ನು ನಾಳೆ ವೈದ್ಯರು ಪರೀಕ್ಷಿಸಲಿದ್ದಾರೆ. ಎಲ್ಲರೂ ಸುರಕ್ಷಿತವಾಗಿರಿ ಮತ್ತು ಎಲ್ಲರೂ ಸದಾ ಕೈಗಳನ್ನು ತೊಳಿದುಕೊಳ್ಳುತ್ತಿರಿ ಎಂದು ಬರೆದುಕೊಂಡಿದ್ದಾರೆ.

    ಡಿಸೆಂಬರ್ ತಿಂಗಳಲ್ಲಿ ಚೀನಾದಲ್ಲಿ ಕಾಣಿಸಿಕೊಂಡ ಈ ವೈರಸ್ ಈಗ ವಿಶ್ವದೆಲ್ಲೆಡೆ ಕಾಣಿಸಿಕೊಂಡಿದೆ. ಚೀನಾದಲ್ಲಿ 80,778 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಭಾರತದಲ್ಲಿ ಸುಮಾರು 61 ಮಂದಿಗೆ ಕೊರೊನಾ ತಗುಲಿದ್ದು, ಕರ್ನಾಟಕದಲ್ಲಿ 4 ಮಂದಿ ಕೊರೊನಾ ತುತ್ತಾಗಿರುವುದು ದೃಢಪಟ್ಟಿದೆ. ಇತ್ತ ಕರ್ನಾಟಕ ಮತ್ತು ಮಹಾರಾಷ್ಟ್ರ ಸೇರಿ ಒಟ್ಟು 14 ಹೊಸ ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿದೆ.

    ಇತ್ತ ಇರಾನ್‍ನಲ್ಲಿ ಕೂಡ ಕೊರೊನಾ ಮರಣಮೃದಂಗ ಬಾರಿಸುತ್ತಿದೆ. 291 ಮಂದಿ ಮಹಾಮಾರಿ ಕೊರೊನಾಗೆ ಬಲಿಯಾಗಿದ್ದು, 8,042 ಮಂದಿಗೆ ಸೋಂಕು ತಗುಲಿದೆ. ಈ ಮಧ್ಯೆ ಇರಾನ್‍ನಲ್ಲಿ ಇದ್ದ 58 ಭಾರತೀಯರನ್ನು ಭಾರತೀಯ ವಾಯುಪಡೆ ತಾಯ್ನಾಡಿಗೆ ವಾಪಸ್ ಕರೆತಂದಿದೆ. ಮಹಾಮಾರಿ ಕೊರೊನಾಗೆ ಭಾರತೀಯರೊಬ್ಬರು ಸಾವನ್ನಪ್ಪಿದ್ದಾರೆ. ಭಾರತೀಯ ಮೂಲದ ಬ್ರಿಟನ್‍ನಲ್ಲಿದ್ದ ಮನೋಹರ್ ಕೃಷ್ಣ ಪ್ರಭು(80) ಮೃತರಾಗಿದ್ದಾರೆ. ಇವರು ವ್ಯಾಟ್‍ಫೋರ್ಡ್ ಜನರಲ್ ಆಸ್ಪತ್ರೆಯಲ್ಲಿ ಸೋಮವಾರ ಮೃತಪಟ್ಟಿದ್ದಾರೆ ಎಂದು ವೈದ್ಯರು ಖಚಿತ ಪಡಿಸಿದ್ದಾರೆ.

  • ಕೊರೊನಾ ಭೀತಿಗೆ ನೆಲಕಚ್ಚಿದ ಕುಕ್ಕುಟೋದ್ಯಮ – 4 ಸಾವಿರ ಜೀವಂತ ಕೋಳಿಮರಿಗಳನ್ನು ಹೂತ ಮಾಲೀಕ

    ಕೊರೊನಾ ಭೀತಿಗೆ ನೆಲಕಚ್ಚಿದ ಕುಕ್ಕುಟೋದ್ಯಮ – 4 ಸಾವಿರ ಜೀವಂತ ಕೋಳಿಮರಿಗಳನ್ನು ಹೂತ ಮಾಲೀಕ

    ಶಿವಮೊಗ್ಗ: ಕೊರೊನಾ ವೈರಸ್ ಭೀತಿಯಿಂದ ಇಡೀ ವಿಶ್ವವೇ ತಲ್ಲಣಗೊಂಡಿದೆ. ಅದರಂತೆ ರಾಜ್ಯದಲ್ಲಿಯೂ ಕೊರೊನಾ ವೈರಸ್‍ನ ಪರಿಣಾಮ ಸಾಕಷ್ಟಿದೆ. ಈ ಹಿನ್ನೆಲೆ ಶಿವಮೊಗ್ಗದಲ್ಲಿ ಕುಕ್ಕುಟೋದ್ಯಮ ನಷ್ಟ ಅನುಭವಿಸುತ್ತಿದೆ. ಶಿವಮೊಗ್ಗದ ಸಂತೆಕಡೂರಿನಲ್ಲಿ ಶ್ರೀನಿವಾಸ್ ಕೋಳಿ ಫಾರಂನ ಮಾಲೀಕರಾದ ಶ್ರೀನಿವಾಸ್ ನಷ್ಟ ಅನುಭವಿಸಿದ್ದು, ಸುಮಾರು 4 ಸಾವಿರ ಜೀವಂತ ಕೋಳಿಮರಿಗಳನ್ನು ಗುಂಡಿ ತೆಗೆದು ಹೂತಿದ್ದಾರೆ.

    ಕೊರೊನಾ ವೈರಸ್‍ನಿಂದಾಗಿ ಜಗತ್ತಿನ ಹಲವು ದೇಶಗಳ ಆರ್ಥಿಕ ವ್ಯವಸ್ಥೆಯೇ ಅಲ್ಲೋಲ ಕಲ್ಲೋಲವಾಗಿದೆ. ಈ ನಡುವೆ ರಾಜ್ಯದಲ್ಲಿಯೂ ಕೊರೊನಾ ವೈರಸ್ ಭೀತಿಯ ಎಫೆಕ್ಟ್ ಬಹಳ ಜೋರಾಗಿದ್ದು, ಈಗಾಗಲೇ ರಾಜ್ಯದಲ್ಲಿ 4 ಮಂದಿಗೆ ಈ ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ ಹಕ್ಕಿ ಜ್ವರದ ಭೀತಿ ಕೂಡ ಶುರುವಾಗಿದ್ದು, ಶಿವಮೊಗ್ಗದ ಕುಕ್ಕುಟೋದ್ಯಮದ ಮೇಲೆ ಭಾರೀ ಗಂಭೀರ ಪರಿಣಾಮ ಬೀರಿದೆ.

    ಶಿವಮೊಗ್ಗದ ಸಂತೆಕಡೂರು ಗ್ರಾಮದ ಶ್ರೀನಿವಾಸ್ ಕೋಳಿ ಫಾರಂನಲ್ಲಿದ್ದ 22 ದಿನಗಳ ಸುಮಾರು 4 ಸಾವಿರ ಕೋಳಿ ಮರಿಗಳನ್ನು ಗುಂಡಿ ತೆಗೆದು ಜೀವಂತವಾಗಿ ಹೂಳಲಾಗಿದೆ. ಕಳೆದ ನಾಲ್ಕು ದಿನಗಳಿಂದ ಕೋಳಿ ಮಾಂಸ ಮಾರಾಟಗಾರರು ಕೋಳಿ ಖರೀದಿಗೆ ಹಿಂದೇಟು ಹಾಕಿದ್ದು, ಸುಮಾರು 170 ರೂ. ಇದ್ದ ಕೋಳಿ ಮಾಂಸದ ಬೆಲೆ ಕೇವಲ 70 ರೂ. ಗೆ ಇಳಿದಿದೆ. ಇದರಿಂದಾಗಿ ಭಾರೀ ನಷ್ಟವುಂಟಾಗಿದೆ. ಹೀಗಾಗಿ ಕೋಳಿ ಸಾಕಾಣಿಕೆದಾರರು ಕೂಡ ನಷ್ಟದ ಹಾದಿಯಲ್ಲಿದ್ದು, ತಾವು ಫಾರಂನಲ್ಲಿ ಬೆಳೆಸಲಾಗುತ್ತಿರುವ ಕೋಳಿಗಳಿಗೆ ಬೆಲೆ ಇಲ್ಲದಂತಾಗಿ ನಷ್ಟ ಅನುಭವಿಸುವ ಬದಲು ಜೀವಂತವಾಗಿ ಹೂತರೆ ಇನ್ನಷ್ಟು ನಷ್ಟವುಂಟಾಗುವುದು ತಪ್ಪುತ್ತದೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

    ಇಂದು ಜೆಸಿಬಿ ಮೂಲಕ 12 ಅಡಿ ಆಳದ ಗುಂಡಿ ತೆಗೆದು ಜೀವಂತವಾಗಿ ಕೋಳಿ ಮರಿಗಳನ್ನು ಹೂತು ಹಾಕಿದ್ದಾರೆ. ಶ್ರೀನಿವಾಸ್ ಅವರಿಗೆ ಒಂದು ಕೆಜಿ ಕೋಳಿಗೆ ಕೇವಲ 8 ರೂ. ಮಾತ್ರ ಸಿಗುತ್ತಿದ್ದು, ಕೋಳಿ ಸಾಕಲು 16 ರೂ. ವರೆಗೂ ಖರ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಎರಡೂವರೆ ಲಕ್ಷ ಖರ್ಚಾಗಿದ್ದು, ಇದನ್ನು ಮತ್ತೆ ಸಾಕಲು ಮುಂದಾದರೆ ಮತ್ತೆ ಲಕ್ಷಾಂತರ ರೂ. ನಷ್ಟ ಉಂಟಾಗುತ್ತದೆ. ಹೀಗಾಗಿ ಈಗಲೇ ಹೂತು ಹಾಕಿದರೇ ಲಕ್ಷಾಂತರ ರೂಪಾಯಿ ನಷ್ಟ ತಪ್ಪಿದಂತಾಗುತ್ತದೆ ಎಂಬ ನಿರ್ಧಾರಕ್ಕೆ ಶ್ರೀನಿವಾಸ್ ಬಂದಿದ್ದಾರೆ.

    ಆದ್ದರಿಂದ ಶ್ರೀನಿವಾಸ್ ಅವರು 4 ಸಾವಿರ ಕೋಳಿಗಳನ್ನು ಸಮಾಧಿ ಮಾಡುವ ತೀರ್ಮಾನಕ್ಕೆ ಬಂದಿದ್ದು, ಜೀವಂತ ಕೋಳಿಗಳನ್ನು ತಮ್ಮ ಫಾರಂನ ಆವರಣದಲ್ಲಿಯೇ ಹೂತಿದ್ದಾರೆ. ಕೊರೊನಾ ವೈರಸ್ ಭೀತಿಗೆ ಜನರು ಕೋಳಿ ಮಾಂಸ ಸೇವಿಸದೇ ಇರುವುದೇ ಈ ನಷ್ಟಕ್ಕೆ ಕಾರಣವಾಗಿದೆ. ಕೋಳಿ ಕೃಷಿ ಮಾಡುವವರು ಇದೀಗ ಬೀದಿಗೆ ಬರುವಂತಾಗಿದ್ದು, ಮಾಂಸ ಮಾರಾಟಗಾರರು ಕೂಡ ಮಾಂಸ ಮಾರಾಟ ಮಾಡಲಾಗದೇ, ಕೋಳಿಗಳನ್ನ ಖರೀದಿಸದೇ ಸುಮ್ಮನಾಗಿದ್ದಾರೆ.

    ಕೊರೊನಾ ವೈರಸ್ ಕೋಳಿಯಿಂದ ಬಾರಲ್ಲ ಇದು ಮನುಷ್ಯರಿಂದ ಮನುಷ್ಯರಿಗೆ ಹರಡುತ್ತೆದೆ. ಹೀಗಾಗಿ ಕೋಳಿ ತಿನ್ನುವುದರಲ್ಲಿ ಸಮಸ್ಯೆ ಇಲ್ಲ. ಕೋಳಿ ಮಾಂಸ ಖರೀದಿಸಿ, ನಮ್ಮನ್ನು ಉಳಿಸಿ ಎಂಬುದು ಕೋಳಿ ಫಾರಂ ಮಾಲೀಕರ ಅಳಲಾಗಿದೆ. ಅಲ್ಲದೇ ರಾಜ್ಯ ಸರ್ಕಾರ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಕೋಳಿ ಫಾರಂ ಮಾಲೀಕರು ಮನವಿ ಮಾಡಿದ್ದಾರೆ.

    ಕೊರೊನಾ ವೈರಸ್ ಮತ್ತು ಹಕ್ಕಿ ಜ್ವರದ ಭೀತಿ ಪರಿಣಾಮದಿಂದಾಗಿ ಕುಕ್ಕುಟೋದ್ಯಮಕ್ಕೆ ಬೇಡಿಕೆ ಕಡಿಮೆಯಾಗಿದೆ. ಹೀಗಾಗಿ ಇದೀಗ ಜಿಲ್ಲೆಯಲ್ಲಿ ಪ್ರಥಮ ಕೋಳಿ ಫಾರಂ ಮುಚ್ಚಲಾಗಿದ್ದು, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಾಗುವ ಸಂಭವವಿದೆ. ಏನೇ ಆಗಲಿ ಕೊರೊನಾ ವೈರಸ್‍ನ ಭೀತಿಯಿಂದಾಗಿ ಜನರು ನಲುಗಿಹೋಗಿದ್ದು, ಇದನ್ನ ಹೋಗಲಾಡಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳಬೇಕಾದ ಅಗತ್ಯವಿದೆ.

  • ಐಪಿಎಲ್ ರದ್ದುಗೊಳಿಸುವಂತೆ ಮದ್ರಾಸ್ ಹೈಕೋರ್ಟಿಗೆ ಅರ್ಜಿ

    ಐಪಿಎಲ್ ರದ್ದುಗೊಳಿಸುವಂತೆ ಮದ್ರಾಸ್ ಹೈಕೋರ್ಟಿಗೆ ಅರ್ಜಿ

    ಚೆನ್ನೈ: ಕೊರೊನಾ ವೈರನ್‍ನಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಬಿಕ್ಕಟ್ಟಿಗೆ ಸಿಲುಕಿದೆ. ಐಪಿಎಲ್ ರದ್ದುಗೊಳಿಸುವಂತೆ ಕೋರಿ ವಕೀಲ ಜಿ.ಅಲೆಕ್ಸ್ ಬೆಂಜಿಗರ್ ಮದ್ರಾಸ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

    ಬಿಸಿಸಿಐ ಐಪಿಎಲ್ ನಡೆಸದಂತೆ ಆದೇಶ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಬೇಕು ಎಂದು ಜಿ.ಅಲೆಕ್ಸ್ ಬೆಂಜಿಗರ್ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಈ ಬಾರಿ ಪಂದ್ಯಾವಳಿ ಮಾರ್ಚ್ 29ರಿಂದ ಮೇ 24ರವರೆಗೆ ನಡೆಯಲಿದೆ. ಇದನ್ನೂ ಓದಿ: ಬೆಂಗಳೂರು ಕರಗ, ಐಪಿಎಲ್ ಮ್ಯಾಚ್‍ಗೂ ಕೊರೊನಾ ಕಂಟಕ

    ಇತ್ತ ಮಿಜೋರಾಂನ ರಾಜಧಾನಿ ಐಜ್ವಾಲ್‍ನಲ್ಲಿ ನಡೆಯಲಿರುವ ಹೀರೋ ಸಂತೋಷ್ ಟ್ರೋಫಿಯ 2019-20ರ ಅಂತಿಮ ಸುತ್ತನ್ನು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಐಎಫ್‍ಎಫ್) ಮುಂದೂಡಿದೆ. ಏಪ್ರಿಲ್ 14ರಿಂದ27 ರವರೆಗೆ ಪಂದ್ಯ ನಡೆಯಬೇಕಿತ್ತು. ಫುಟ್ಬಾಲ್ ಟೂರ್ನಿ ಬೆನ್ನಲ್ಲೇ ಐಪಿಎಲ್‍ಗೂ ಈ ಬಿಸಿ ತಟ್ಟಿದೆ.

    ಅರ್ಜಿಯಲ್ಲಿ ಏನಿದೆ?:
    ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ವೆಬ್‍ಸೈಟ್‍ನ ಪ್ರಕಾರ ಕೊರೊನಾ ವೈರಸ್‍ಗೆ ಇನ್ನೂ ಯಾವುದೇ ಔಷಧಿಯನ್ನು ಸಂಶೋಧಿಸಿಲ್ಲ. ಜೊತೆಗೆ ಅದನ್ನು ತಡೆಯಲು ಯಾವುದೇ ಮಾರ್ಗಗಳಿಲ್ಲ. ಇದು ವಿಶ್ವಾದ್ಯಂತ ವೇಗವಾಗಿ ಹರಡುತ್ತಿದ್ದು, ಭಾರೀ ಅನಾಹುತ ಸೃಷ್ಟಿಸಿದೆ. ಇಟಲಿ ಫುಟ್ಬಾಲ್ ಫೆಡರೇಶನ್ ಲೀಗ್‍ಗೂ ಸಹ ಕೊರೊನಾ ವೈರಸ್ ಬಿಸಿ ತಟ್ಟಿದೆ. ಹೀಗಾಗಿ ಫುಟ್ಬಾಲ್ ಟೂರ್ನಿಯನ್ನು ಏಪ್ರಿಲ್‍ನಲ್ಲಿ ನಡೆಸಲು ಸರ್ಕಾರ ನಿರ್ಧರಿಸಿದೆ. ಐಪಿಎಲ್‍ಗೆ ಸಂಬಂಧಿಸಿದಂತೆ ನಾವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ವಕೀಲ ಜಿ.ಅಲೆಕ್ಸ್ ಬೆಂಜಿಗರ್ ಮನವಿ ಮಾಡಿಕೊಂಡಿದ್ದಾರೆ.

    ಮದ್ರಾಸ್ ಹೈಕೋರ್ಟಿನ ನ್ಯಾಯಾಧೀಶರಾದ ಎಂ.ಎಂ.ಸುಂದ್ರೇಶ್ ಹಾಗೂ ಕೃಷ್ಣನ್ ರಾಮಸ್ವಾಮಿ ಅವರ ನೇತೃತ್ವದ ನ್ಯಾಯಪೀಠವು ಮಾರ್ಚ್ 12ರಂದು ಪ್ರಕರಣದ ವಿಚಾರಣೆ ನಡೆಸಲಿದೆ. ಭಾರತದಲ್ಲಿ ಬುಧವಾರದವರೆಗೆ ಒಟ್ಟು 61 ಕೊರೊನ ವೈರಸ್ ಪ್ರಕರಣಗಳು ವರದಿಯಾಗಿವೆ. ಕೊರೊನಾ ಸೋಂಕನ್ನು ತಡೆಗಟ್ಟಲು ಸರ್ಕಾರ ಮತ್ತು ಆರೋಗ್ಯ ಸಂಸ್ಥೆಗಳು ಪ್ರಯತ್ನಿಸುತ್ತಿವೆ. ಮಂಗಳವಾರ ದೇಶಾದ್ಯಂತ 14 ಹೊಸ ಪ್ರಕರಣಗಳು ವರದಿಯಾಗಿವೆ. ಇವುಗಳಲ್ಲಿ ಕೇರಳ 8 ಪ್ರಕರಣ, ಪುಣೆ ಹಾಗೂ ಕರ್ನಾಟಕದಲ್ಲಿ ತಲಾ ಮೂರು ಪ್ರಕರಣಗಳು ವರದಿಯಾಗಿವೆ.

    ಜಿ.ಅಲೆಕ್ಸ್ ಬೆಂಜಿಗರ್ ಅವರು ಈ ಹಿಂದೆ ಐಪಿಎಲ್ ನಡೆಸದಂತೆ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದಿದ್ದರು. ಆದರೆ ಅಧಿಕಾರಿಗಳಿಂದ ಅವರಿಗೆ ಯಾವುದೇ ರೀತಿಯ ಉತ್ತರ ಸಿಗಲಿಲ್ಲ. ಹೀಗಾಗಿ ಅವರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದರು. ಆದರೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇತ್ತೀಚೆಗಷ್ಟೇ ಮಾತನಾಡಿ, ಐಪಿಎಲ್ ರದ್ದು ಅಥವಾ ಮುಂದೂಡುವುದನ್ನು ತಳ್ಳಿಹಾಕಿದ್ದಾರೆ. ಕೊರೊನಾ ವೈರಸ್ ಐಪಿಎಲ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅವರು ಹೇಳಿದ್ದಾರೆ.

  • ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 61ಕ್ಕೆ ಏರಿಕೆ

    ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 61ಕ್ಕೆ ಏರಿಕೆ

    -ಚೀನಾದಲ್ಲಿ 3,158 ಮಂದಿ ಸಾವು

    ನವದೆಹಲಿ: ವಿಶ್ವದೆಲ್ಲೆಡೆ ಆತಂಕ ಸೃಷ್ಟಿಸಿರುವ ಮಹಾಮಾರಿ ಕೊರೊನಾ ವೈರಸ್ ಭಾರತದಲ್ಲಿ 61 ಮಂದಿಗೆ ತಗುಲಿದ್ದು, ಚೀನಾದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 3,158ಕ್ಕೆ ಏರಿಕೆಯಾಗಿದೆ.

    ಚೀನಾದಲ್ಲಿ ಸುಮಾರು 80,778 ಮಂದಿ ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ಭಾರತದಲ್ಲಿ ಸುಮಾರು 61 ಮಂದಿಗೆ ಕೊರೊನಾ ತಗುಲಿದ್ದು, ಕರ್ನಾಟಕದಲ್ಲಿ 4 ಮಂದಿ ಕೊರೊನಾ ತುತ್ತಾಗಿರುವುದು ಧೃಡಪಟ್ಟಿದೆ. ಇತ್ತ ಕರ್ನಾಟಕ ಮತ್ತು ಮಹಾರಾಷ್ಟ್ರ ಸೇರಿ ಒಟ್ಟು 14 ಹೊಸ ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿದೆ.

    ಇತ್ತ ಇರಾನ್‍ನಲ್ಲಿ ಕೂಡ ಕೊರೊನಾ ಮರಣಮೃದಂಗ ಬಾರಿಸುತ್ತಿದೆ. 291 ಮಂದಿ ಮಹಾಮಾರಿ ಕೊರೊನಾಗೆ ಬಲಿಯಾಗಿದ್ದು, 8,042 ಮಂದಿಗೆ ಸೋಂಕು ತಗುಲಿದೆ. ಈ ಮಧ್ಯೆ ಇರಾನ್‍ನಲ್ಲಿ ಇದ್ದ 58 ಭಾರತೀಯರನ್ನು ಭಾರತೀಯ ವಾಯುಪಡೆ ತಾಯ್ನಾಡಿಗೆ ವಾಪಸ್ ಕರೆತಂದಿದೆ.

    ಮಹಾಮಾರಿ ಕೊರೊನಾಗೆ ಭಾರತೀಯರೊಬ್ಬರು ಸಾವನ್ನಪ್ಪಿದ್ದಾರೆ. ಭಾರತೀಯ ಮೂಲದ ಬ್ರಿಟನ್‍ನಲ್ಲಿದ್ದ ಮನೋಹರ್ ಕೃಷ್ಣ ಪ್ರಭು(80) ಸಾವನ್ನಪ್ಪಿದ ವ್ಯಕ್ತಿ. ಇವರು ವ್ಯಾಟ್‍ಫೋರ್ಡ್ ಜನರಲ್ ಆಸ್ಪತ್ರೆಯಲ್ಲಿ ಸೋಮವಾರ ಮೃತಪಟ್ಟಿದ್ದಾರೆ ಎಂದು ವೈದ್ಯರು ಖಚಿತ ಪಡಿಸಿದ್ದಾರೆ.

    ಈ ಮೂಲಕ ಪ್ರಭು ಅವರು ಕೊರೊನಾ ವೈರಸ್‍ನಿಂದ ಸಾವನ್ನಪ್ಪಿದ ಆರನೇ ವ್ಯಕ್ತಿ ಯಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇವರು ಕೃಷ್ಣನ ಭಕ್ತರಾಗಿದ್ದು, ವ್ಯಾಟ್‍ಫೋರ್ಡ್‍ನಲ್ಲಿರುವ ಭಕ್ತವೇದಾಂತಕ್ಕೆ ಯಾವಾಗಲೂ ಭೇಟಿ ನೀಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

  • ಉತ್ತರ ಕನ್ನಡದಲ್ಲಿ ಕೊರೊನಾ ಪತ್ತೆಗೆ ಥರ್ಮಲ್ ಸ್ಕ್ಯಾನರ್ ಬಳಕೆ- ಪರೀಕ್ಷೆ ಹೇಗೆ ಮಾಡ್ತಾರೆ?

    ಉತ್ತರ ಕನ್ನಡದಲ್ಲಿ ಕೊರೊನಾ ಪತ್ತೆಗೆ ಥರ್ಮಲ್ ಸ್ಕ್ಯಾನರ್ ಬಳಕೆ- ಪರೀಕ್ಷೆ ಹೇಗೆ ಮಾಡ್ತಾರೆ?

    ಕಾರವಾರ: ಕೊರೊನಾ ವೈರಸ್ ಆತಂಕ ಹಿನ್ನೆಲೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಸಂಪೂರ್ಣ ಮುಂಜಾಗ್ರತಾ ಕ್ರಮ ವಹಿಸಿದೆ.

    ಜಿಲ್ಲೆಗೆ ನೆರೆಯ ಗೋವಾ, ಹೊರ ರಾಜ್ಯಗಳಿಂದಲೂ ಪ್ರವಾಸಿಗರು ಕರಾವಳಿ ಹಾಗೂ ಮಲೆನಾಡು ಭಾಗಗಳಿಗೆ ಪ್ರವಾಸಕ್ಕೆ ಬರುತ್ತಾರೆ. ಇದರ ಜೊತೆಗೆ ಕಾರವಾರದ ವಾಣಿಜ್ಯ ಬಂದರುಗಳಿಗೆ ವಿದೇಶದ ಹಡಗುಗಳು ಬರುವುದರಿಂದ ಜಿಲ್ಲೆಯ ಪ್ರಮುಖ ಸ್ಥಳಗಳಿಗೆ ಥರ್ಮಲ್ ಸ್ಕ್ಯಾನರ್ ಅನ್ನು ಆರೋಗ್ಯ ಇಲಾಖೆ ನೀಡಿದೆ.

    ಎಲ್ಲೆಲ್ಲಿ ಥರ್ಮಲ್ ಸ್ಕ್ಯಾನರ್?:
    ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ಸ್ಥಳವಾದ ಕಾರವಾರ, ಗೋಕರ್ಣ, ಮುರುಡೇಶ್ವರ, ದಾಂಡೇಲಿ, ಶಿರಸಿ, ಮುಂಡಗೋಡಿನ ಟಿಬೆಟಿಯನ್ ಕಾಲೋನಿಗೆ ಪ್ರಥಮ ಹಂತದಲ್ಲಿ ಎಂಟು ಥರ್ಮಲ್ ಸ್ಕ್ಯಾನರ್ ಗಳನ್ನು ನೀಡಲಾಗಿದೆ. ಇನ್ನೆರೆಡು ದಿನದಲ್ಲಿ ಜಿಲ್ಲೆಯ ಪ್ರತಿ ತಾಲೂಕುಗಳಿಗೂ  ಥರ್ಮಲ್ ಸ್ಕ್ಯಾನರ್ ಗಳನ್ನು ಆರೋಗ್ಯ ಇಲಾಖೆ ನೀಡಲಿದೆ.

    ಏನಿದು ಥರ್ಮಲ್ ಸ್ಕ್ಯಾನರ್?:
    ಥರ್ಮಲ್ ಸ್ಕ್ಯಾನರ್ ಮನುಷ್ಯನ ದೇಹದ ತಾಪಮಾನವನ್ನು ಅಳೆಯುವ ಸಾಧನ. ಮನುಷ್ಯನ ದೇಹದ ತಾಪಮಾನ ತುಸು ಹೆಚ್ಚುಕಡಿಮೆ 98.6 ಡಿಗ್ರಿ ಫ್ಯಾರನ್‍ಹೀಟ್ ಅಥವಾ 37 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಆದರೆ ಥರ್ಮಲ್ ಸ್ಕ್ಯಾನರ್ ನಿಂದ ತಪಾಸಣೆಗೆ ಒಳಪಟ್ಟ ವ್ಯಕ್ತಿಯ ದೇಹದ ತಾಪಮಾನ 98.6 ಡಿಗ್ರಿ ಫ್ಯಾರನ್‍ಹೀಟ್‍ಗಿಂತ ಅಧಿಕವಾಗಿದ್ದರೆ ಅವರನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಲಾಗುತ್ತದೆ.

    ಥರ್ಮಲ್ ಸ್ಕ್ಯಾನರ್ ಯಾಕೆ?
    ಕೊರೊನಾ ವೈರಸ್ ಇರುವವರಿಗೆ ಜ್ವರ, ಕೆಮ್ಮು ಪ್ರಮುಖ ಲಕ್ಷಣಗಳಾಗಿವೆ. ಇಂತಹ ಸಂದರ್ಭದಲ್ಲಿ ಹಲವರು ತಮಗೆ ಜ್ವರ ಇರುವ ಕುರಿತು ಮಾಹಿತಿ ಕೊಡಲು ಹಿಂಜರಿಯುತ್ತಾರೆ. ಇದಲ್ಲದೇ ಈಗಿರುವ ಹಳೆಯ ತಂತ್ರಜ್ಞಾನ ಬಳಸಿ ಸಾವಿರಾರು ಜನರನ್ನು ಪರೀಕ್ಷೆ ಮಾಡಲು ವೈದ್ಯರಿಗೆ ಕಷ್ಟಸಾಧ್ಯ. ಹೀಗಾಗಿ ತಕ್ಷಣ ಪರೀಕ್ಷಿಸಲು ಜ್ವರದ ತೀವ್ರತೆ ತಿಳಿದುಕೊಳ್ಳಲು ಥರ್ಮಲ್ ಸ್ಕ್ಯಾನರ್ ತಕ್ಷಣದಲ್ಲಿ ಉಪಯೋಗಕ್ಕೆ ಬರುತ್ತದೆ. ಈ ಕಾರಣದಿಂದ ಇದರ ಬಳಕೆ ವೈದ್ಯರಿಗೆ ರೋಗಿಯ ದೇಹಸ್ಥಿತಿ ಅರಿಯಲು ಸಹಕಾರಿಯಾಗುತ್ತದೆ.

    ಜಿಲ್ಲೆಯ ಗೋಕರ್ಣದಲ್ಲಿ ಒಂದರಲ್ಲಿಯೇ ಆರೋಗ್ಯ ಇಲಾಖೆ ಒಂದು ದಿನದಲ್ಲಿ ದೇಶ ವಿದೇಶದಿಂದ ಬಂದ ಏಳು ಸಾವಿರ ಜನರನ್ನು ಪರೀಕ್ಷೆ ಮಾಡಿತ್ತು. ಥರ್ಮಲ್ ಸ್ಕ್ಯಾನರ್ ದಿಂದಲೇ ಅತಿ ಬೇಗ ಜ್ವರ ಪತ್ತೆಹಚ್ಚುವಲ್ಲಿ ಸಹಕಾರಿಯಾಗಿತ್ತು.

    ಜಿಲ್ಲೆಯಲ್ಲಿ ಕಟ್ಟೆಚ್ಚರ ಮುಂದುವರಿಕೆ:
    ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿ ತಾಲೂಕಿಗೂ ವೈದ್ಯರ ತಂಡ ರಚಿಸಿ ಸರ್ವೆ ಕಾರ್ಯ ಮಾಡಲಾಗುತ್ತಿದೆ. ಪ್ರವಾಸಿಗರ ಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಹೋಟೆಲ್, ರೆಸಾರ್ಟ್ ಗಳಲ್ಲಿ ನೋಂದಾಯಿತ ಅತಿಥಿಗಳ ಮಾಹಿತಿ ಮೇಲೆ ಸರ್ವೆ ಕಾರ್ಯ ಮಾಡಲಾಗುತ್ತಿದ್ದು, ಇದರ ಜೊತೆಗೆ ವಿದೇಶಿ ಪ್ರವಾಸಿಗರ ಮಾಹಿತಿಯನ್ನು ಪೊಲೀಸ್ ಇಲಾಖೆ ಮೂಲಕ ಪಡೆದು ಅವರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.

    ಜಿಲ್ಲೆಯಲ್ಲಿ ಈವರೆಗೂ ಕೊರೊನಾ ವೈರಸ್ ಸೊಂಕಿತರ ಪತ್ತೆಯಾಗಿಲ್ಲ. ಸೋಮವಾರ ಕೂಡ ವಿದೇಶಕ್ಕೆ ಹೋಗಿಬಂದ ಹಾಗೂ ವಿದೇಶಿಗರ 62 ಜನರನ್ನು ಪರೀಕ್ಷೆ ಮಾಡಲಾಗಿದೆ. ಯಾರಲ್ಲೂ ಯಾವುದೇ ತೊಂದರೆ ಇಲ್ಲ. ಆದರೂ ಜಿಲ್ಲೆಯ ಜನರು ಎಚ್ಚರಿಕೆಯಿಂದ ಇರಬೇಕು. ಸ್ವಚ್ಛತೆ ಜೊತೆಗೆ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಬೇಕು. ಇಲಾಖೆಯಲ್ಲಿ ವೈರಸ್‍ನೊಂದಿಗೆ ಹೋರಾಡಲು ಬೇಕಾದ ಎಲ್ಲಾ ಸಾಧನಗಳು ಇವೆ. ಮಾಸ್ಕ್, ಔಷಧಿ ಸಂಗ್ರಹವಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಶೋಕಕುಮಾರ್ ಮಾಹಿತಿ ನೀಡಿದ್ದಾರೆ.

  • ಕರ್ನಾಟಕದಲ್ಲಿ 4 ಕೊರೊನಾ ಪಾಸಿಟಿವ್ ಕೇಸ್: ಶ್ರೀರಾಮುಲು ಸ್ಪಷ್ಟನೆ

    ಕರ್ನಾಟಕದಲ್ಲಿ 4 ಕೊರೊನಾ ಪಾಸಿಟಿವ್ ಕೇಸ್: ಶ್ರೀರಾಮುಲು ಸ್ಪಷ್ಟನೆ

    -ಬೆಂಗ್ಳೂರಿನಲ್ಲಿ ಮೂರು ಕೊರೊನಾ ಕೇಸ್

    ಬೆಂಗಳೂರು: ಕರ್ನಾಟಕದಲ್ಲಿ 4 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರು ಸ್ಪಷ್ಟನೆ ನೀಡಿದ್ದಾರೆ.

    ಆರೋಗ್ಯ ಸಚಿವ ಶ್ರೀರಾಮುಲು ಅವರು ಟ್ವೀಟ್ ಮಾಡಿ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಕರ್ನಾಟಕದಲ್ಲಿ ಇದುವರೆಗೆ 4 ವ್ಯಕ್ತಿಗಳಲ್ಲಿ #COVID19 ಸೋಂಕು ದೃಢಪಟ್ಟಿದ್ದು, ಅವರನ್ನು ಹಾಗೂ ಅವರ ಕುಟುಂಬ ಸದಸ್ಯರನ್ನು ಪ್ರತ್ಯೇಕವಾಗಿರಿಸಿ ಅವರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ. ನಾಗರಿಕರು ಮುಂಜಾಗೃತ ಕ್ರಮ ವಹಿಸಿ ಸೋಂಕು ಹರಡದಂತೆ ಸಹಕರಿಸಬೇಕು ಎಂದು ಕೋರುತ್ತೇನೆ ಎಂದು ಸಚಿವರು ತಿಳಿಸಿದ್ದಾರೆ.

    ಇತ್ತ ಬೆಂಗಳೂರಿನಲ್ಲಿ ಮೂರು ಕೊರೊನಾ ಪಾಸಿಟಿವ್ ಕೇಸ್‍ಗಳು ವರದಿಯಾಗಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.

    ಸೋಮವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಧ್ಯಮ ಹೇಳಿಕೆ ಬಿಡುಗಡೆ ಮಾಡಿತ್ತು. ಮಾರ್ಚ್ 1ರಂದು ಅಮೆರಿಕದಿಂದ ಆಗಮಿಸಿದ ವ್ಯಕ್ತಿಯನ್ನು ಪರೀಕ್ಷೆಗೆ ಒಳಪಡಿಸಿದ್ದು ಪಾಸಿಟಿವ್ ಫಲಿತಾಂಶ ಬಂದಿದೆ ಎಂದು ತಿಳಿಸಿತ್ತು.

    ಸಾಫ್ಟ್ ವೇರ್ ಎಂಜಿನಿಯರ್, ಪತ್ನಿ, ಮಗಳ ಜೊತೆ ಚಾಲಕನನ್ನು ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿಯವರೆಗೆ 982 ಮಂದಿ ಮೇಲೆ ನಿಗಾ ಇರಿಸಲಾಗಿದೆ. ಈ ಪೈಕಿ ಕಳೆ 28 ದಿನಗಳಿಂದ 266 ಮಂದಿ ಮೇಲೆ ನಿಗಾ ಇಟ್ಟಿದ್ದರೆ 700 ಮಂದಿ ಮನೆಯಲ್ಲೇ ಪ್ರತ್ಯೇಕವಾಗಿ ನಿಗಾ ಇರಿಸಲಾಗಿದೆ. ಅಲ್ಲದೇ ಸೋಮವಾರ 12 ಮಂದಿ ವಿವಿಧ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇಲ್ಲಿಯವರೆಗೆ 432 ಮಂದಿಯ ರಕ್ತದ ಮಾದರಿಯನ್ನು ಲ್ಯಾಬ್‍ಗೆ ಕಳುಹಿಸಲಾಗಿದ್ದು 364 ಮಂದಿ ಫಲಿತಾಂಶ ನೆಗೆಟಿವ್ ಬಂದಿದೆ. 68 ಮಂದಿಯ ಫಲಿತಾಂಶ ಲಭ್ಯವಾಗಬೇಕಿದೆ. ಬೆಂಗಳೂರಿನಲ್ಲಿ 8, ಮಂಗಳೂರಿನಲ್ಲಿ 2, ಬಾಗಲಕೋಟೆ ಮತ್ತು ಹಾಸನದಲ್ಲಿ ತಲಾ ಒಂದೊಂದು ಮಂದಿಯನ್ನು ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿತ್ತು.

    ಇಲ್ಲಿಯವರೆಗೆ ಒಟ್ಟು 91,911 ಮಂದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಪರೀಕ್ಷೆ ಮಾಡಲಾಗಿದೆ. ಈ ಪೈಕಿ ಬೆಂಗಳೂರಿನಲ್ಲಿ 61,585 ಮಂದಿ, ಮಂಗಳೂರಿನಲ್ಲಿ 25,003 ಮಂದಿಯನ್ನು ಸ್ಕ್ರೀನಿಂಗ್ ಪರೀಕ್ಷೆಗೆ ಒಳಪಡಿಸಲಾಗಿದೆ. ಕಾರವಾರ ಮತ್ತು ಮಂಗಳೂರು ಬಂದರಿನಲ್ಲಿ ಒಟ್ಟು 5,323 ಮಂದಿಯನ್ನು ಸ್ಕ್ರೀನಿಂಗ್ ಮಾಡಲಾಗಿದೆ ಎಂದು ತಿಳಿಸಿತ್ತು.

  • ಭಾರತದಲ್ಲಿ ಕೊರೊನಾ ಜ್ವರಕ್ಕೆ ಇಬ್ಬರು ಸಾವನ್ನಪ್ಪಿರುವ ವರದಿ – ಬೆಂಗ್ಳೂರಲ್ಲಿ ನರ್ಸರಿ ಶಾಲೆಗಳಿಗೆ ರಜೆ

    ಭಾರತದಲ್ಲಿ ಕೊರೊನಾ ಜ್ವರಕ್ಕೆ ಇಬ್ಬರು ಸಾವನ್ನಪ್ಪಿರುವ ವರದಿ – ಬೆಂಗ್ಳೂರಲ್ಲಿ ನರ್ಸರಿ ಶಾಲೆಗಳಿಗೆ ರಜೆ

    ಬೆಂಗಳೂರು: ಚೀನಾದಲ್ಲಿ ಮರಣ ಮೃದಂಗ ಬಾರಿಸಿದ್ದ ಕೊರೊನಾ ವೈರಸ್ ಇದೀಗ ಭಾರತದಲ್ಲಿ ಮರಣ ಮೃದಂಗ ಆರಂಭಿಸಿತೇ ಎನ್ನುವ ಆತಂಕ ಜನರಲ್ಲಿ ಶುರುವಾಗಿದೆ.

    ಕೊರೊನಾ ಜ್ವರದ ಹಿನ್ನೆಲೆಯಲ್ಲಿ ಭಾರತದಲ್ಲಿ ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪಶ್ಚಿಮ ಬಂಗಾಳದಲ್ಲಿ ಮತ್ತು ಲಡಾಕ್‍ನಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಕೊರೊನಾ ಜ್ವರ ಶಂಕೆ ಹಿನ್ನೆಲೆಯಲ್ಲಿ ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿತ್ತು. ಇದನ್ನೂ ಓದಿ: ಬೆಂಗ್ಳೂರಿನ ಎಲ್‍ಕೆಜಿ, ಯುಕೆಜಿ ಶಾಲೆಗಳಿಗೆ ರಜೆ ಘೋಷಣೆ

    ದುಬೈನಿಂದ ಮರಳಿದ್ದ ಪಶ್ಚಿಮ ಬಂಗಾಳದ ವ್ಯಕ್ತಿ ಸಾವನ್ನಪ್ಪಿರುವುದು. ಮುರ್ಷಿದಾಬಾದ್ ಜಿಲ್ಲೆಯ ಆ ವ್ಯಕ್ತಿಗೆ ಡಯಾಬಿಟಿಸ್ ಕೂಡ ಇತ್ತು. ಇರಾನ್‍ನಿಂದ ಮರಳಿದ್ದ ಲಡಾಕ್ ವ್ಯಕ್ತಿಗೂ ಕೊರೊನಾ ಚಿಕಿತ್ಸೆ ನೀಡಲಾಗುತ್ತಿತ್ತು. ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಿ ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಇಬ್ಬರು ಮೃತಪಟ್ಟಿದ್ದಾರೆ. ಹೀಗಾಗಿ ಭಾರತದಲ್ಲಿ ಇದು ಮೊದಲ ಕೊರೊನಾ ಶಂಕಿತರ ಸಾವಿನ ಪ್ರಕರಣ ಎನ್ನಲಾಗಿದೆ.

    ಇದುವರೆಗೂ ಜಗತ್ತಿನಾದ್ಯಂತ ಕೊರೊನಾ ಸಾವಿನ ಸಂಖ್ಯೆ 3,556ಕ್ಕೆ ಏರಿಕೆ ಆಗಿದೆ. ರಾಜ್ಯದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಕೊರೊನಾ ವೈರಸ್ ಭೀತಿ ಹೆಚ್ಚಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಎಲ್‍ಕೆಜಿ, ಯುಕೆಜಿ ಶಾಲೆಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, ಆರೋಗ್ಯ ಆಯುಕ್ತರ ಸಲಹೆ ಮೇರೆಗೆ ಬೆಂಗಳೂರು ಉತ್ತರ, ದಕ್ಷಿಣ ಮತ್ತು ಗ್ರಾಮಾಂತರ ಜಿಲ್ಲೆಗಳ ಯುಕೆಜಿ, ಎಲ್‍ಕೆಜಿ ಶಾಲೆಗಳಿಗೆ ಇಂದಿನಿಂದ ರಜೆ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.

    ಇನ್ನೂ ಹೈದರಾಬಾದ್ ಮೂಲದ ಬೆಂಗಳೂರು ಟೆಕ್ಕಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಮೇಲೆ ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿತ್ತು. ಜೊತೆಗೆ ಕರೆ ಮಾಡಿ ಕೊರೊನಾ ವೈರಸ್ ಬಗ್ಗೆ ಮಾಹಿತಿ ಪಡೆಯುವವರ ಸಂಖ್ಯೆಯೂ ಜಾಸ್ತಿಯಾಗಿತ್ತು. ವಿದೇಶದಿಂದ ಬಂದ ನೂರಾರು ಮಂದಿಯ ಕೊರೊನಾ ವೈರಸ್ ಸೊಂಕು ಪರೀಕ್ಷೆ ಮಾಡಲಾಗಿದೆ.

  • ಬೆಂಗ್ಳೂರಿನ ಎಲ್‍ಕೆಜಿ, ಯುಕೆಜಿ ಶಾಲೆಗಳಿಗೆ ರಜೆ ಘೋಷಣೆ

    ಬೆಂಗ್ಳೂರಿನ ಎಲ್‍ಕೆಜಿ, ಯುಕೆಜಿ ಶಾಲೆಗಳಿಗೆ ರಜೆ ಘೋಷಣೆ

    ಬೆಂಗಳೂರು: ರಾಜ್ಯದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಕೊರೊನಾ ವೈರಸ್ ಭೀತಿ ಹೆಚ್ಚಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಎಲ್‍ಕೆಜಿ, ಯುಕೆಜಿ ಶಾಲೆಗಳಿಗೆ ನಾಳೆಯಿಂದ ರಜೆ ಘೋಷಣೆ ಮಾಡಲಾಗಿದೆ.

    ಈ ಕುರಿತು ಟ್ವೀಟ್ ಮಾಡಿರುವ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, ಆರೋಗ್ಯ ಆಯುಕ್ತರ ಸಲಹೆ ಮೇರೆಗೆ ಬೆಂಗಳೂರು ಉತ್ತರ, ದಕ್ಷಿಣ ಮತ್ತು ಗ್ರಾಮಾಂತರ ಜಿಲ್ಲೆಗಳ ಯುಕೆಜಿ, ಎಲ್‍ಕೆಜಿ ಶಾಲೆಗಳಿಗೆ ನಾಳೆಯಿಂದ ರಜೆ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.

    ಚೀನಾದ ವುಹಾ ನಗರದಲ್ಲಿ ಕೊರೊನಾ ವೈರಸ್ ಏಕಾಏಕಿ ವಿವಿಧ ದೇಶಗಳಲ್ಲಿ ಹರಡಿದೆ. ಅಲ್ಲಿ ಕೊಕೊನಾ ವೈರಸ್ ಪ್ರಕರಣ ಪತ್ತೆಯಾಗಿರುವುದು ದೃಢಪಟ್ಟಿರುವುದು ವರದಿಯಾಗಿದೆ. ಕೇರಳ, ತೆಲಂಗಾಣ ಮತ್ತು ತಮಿಳುನಾಡಿನ ನೆರೆ ರಾಜ್ಯಗಳಲ್ಲಿ ಸಹ ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿವೆ. ಹೀಗಾಗಿ ಬಿಬಿಎಂಪಿ ಮತ್ತು ಬೆಂಗಳೂರು ನಗರ ವ್ಯಾಪ್ತಿ ಪ್ರಿ-ಎಲ್‍ಕೆಜಿ, ಎಲ್‍ಕೆಜಿ ಹಾಗೂ ಯುಕೆಜಿ ಶಾಲೆಗಳಿಗೆ ರಜೆ ಘೋಷಿಸಿ, ತಕ್ಷಣದಿಂದ ಜಾರಿಗೆ ತರಬೇಕು. ಕೊರೊನಾ ವೈರಸ್ ಹರಡುವುದನ್ನು ತಡೆಯಲು ಈ ಕ್ರಮಕೈಗೊಳ್ಳಬೇಕು ಎಂದು ರಾಜ್ಯ ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ತಿಳಿಸಿದ್ದಾರೆ.

    ರಾಜ್ಯ ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಅವರ ಸಲಹೆ ಮೇರೆಗೆ ಸಚಿವರು ಈ ಸುತ್ತೋಲೆ ಹೊರಡಿಸಿದ್ದಾರೆ.