Tag: Coronavirus

  • ಐಪಿಎಲ್ ದಿನಾಂಕ ಮುಂದೂಡಿಕೆ – ಏ.15ಕ್ಕೆ ಟೂರ್ನಿ ಆರಂಭ

    ಐಪಿಎಲ್ ದಿನಾಂಕ ಮುಂದೂಡಿಕೆ – ಏ.15ಕ್ಕೆ ಟೂರ್ನಿ ಆರಂಭ

    ಮುಂಬೈ: ಮಹಾಮಾರಿ ಕೊರೊನಾ ವೈರಸ್‍ನಿಂದಾಗಿ ಜಾಗತಿಕ ಕಾಳಜಿಯ ಹಿನ್ನೆಲೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‍ನ 13ನೇ ಆವೃತ್ತಿಯನ್ನು ಏಪ್ರಿಲ್ 15ಕ್ಕೆ ಮುಂದೂಡಲಾಗಿದೆ.

    ಚೆನ್ನೈನಲ್ಲಿ ಮಾರ್ಚ್ 29ರಂದು ಆರಂಭವಾಗಬೇಕಿದ್ದ ಐಪಿಎಲ್ ಟೂರ್ನಿಯನ್ನು ಮುಂದೂಡಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜೇ ಶಾ ಹಾಗೂ ಐಪಿಎಲ್‍ನ ಉನ್ನತ ಆಡಳಿತ ಮಂಡಳಿ ನಿರ್ಧಾರ ಪ್ರಕಟಿಸಿದೆ. ಇದನ್ನೂ ಓದಿ: 1 ವಾರ ಕರ್ನಾಟಕ ಲಾಕ್ ಡೌನ್- ಮಾಲ್, ಕಾಲೇಜುಗಳಿಗೆ ರಜೆ, ಜಾತ್ರೆ ರದ್ದು

    ಬಿಸಿಸಿಐ ಅಧಿಕಾರಿಗಳು ಐಪಿಎಲ್‍ನ ಎಲ್ಲಾ ಎಂಟು ಫ್ರಾಂಚೈಸಿಗಳೊಂದಿಗೆ ಇಂದು ಚರ್ಚೆ ನಡೆಸಿದ್ದಾರೆ. ಜೊತೆಗೆ ಎಲ್ಲಾ ತಂಡದ ಮಾಲೀಕರನ್ನು ಮುಂಬೈನಲ್ಲಿ ಶನಿವಾರ ಖುದ್ದಾಗಿ ಭೇಟಿಯಾಗಲಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಕೊರೊನಾ ಎಫೆಕ್ಟ್ – ರೈಲು ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆ

    ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ 15ರವರೆಗೆ ರಾಜತಾಂತ್ರಿಕ, ಸರ್ಕಾರದ ಕೆಲ ವಿಭಾಗಗಳನ್ನು ಹೊರತುಪಡಿಸಿ ಅಸ್ತಿತ್ವದಲ್ಲಿರುವ ಎಲ್ಲಾ ವಿದೇಶಿ ವೀಸಾಗಳನ್ನು ರದ್ದುಗೊಳಿಸುವಂತೆ ಆದೇಶ ನೀಡಲಾಗಿದೆ. ಇದುವರೆಗೂ ನೀಡಲಾಗಿರುವ ವೀಸಾಗಳನ್ನ ರದ್ದುಗೊಳಿಸುವಂತೆ ಆದೇಶಿಸಲಾಗಿದೆ. ದಕ್ಷಿಣ ಕೊರಿಯಾ, ಇಟಲಿಗೆ ಏರ್ ಇಂಡಿಯಾ ವಿಮಾನ ಹಾರಾಟ ರದ್ದು ಮಾಡಲಾಗಿದ್ದು, ಅಮೆರಿಕಕ್ಕೆ ಯುರೋಪ್ (ಬ್ರಿಟನ್ ಹೊರತುಪಡಿಸಿ) ನಾಗರಿಕರು ಪ್ರವೇಶಕ್ಕೆ ಸರ್ಕಾರ ನಿರ್ಬಂಧ ಹೇರಿದೆ.

    ಸರ್ಕಾರ ವಿದೇಶಿ ಪ್ರಯಾಣಿಕರ ವೀಸಾಗಳ ಮೇಲೆ ನಿರ್ಬಂಧ ವಿಧಿಸಿದ್ದರಿಂದ ಏಪ್ರಿಲ್ 15ರವರೆಗೂ ಐಪಿಎಲ್‍ಗೆ ಯಾವುದೇ ವಿದೇಶಿ ಆಟಗಾರರು ಲಭ್ಯವಾಗುತ್ತಿರಲಿಲ್ಲ. ಹೀಗಾಗಿ ತಂಡದಲ್ಲಿ ಆಟಗಾರರ ಕೊರತೆ ಕಾಡುತ್ತಿತ್ತು. ಅಷ್ಟೇ ಅಲ್ಲದೆ ಖಾಲಿ ಮೈದಾನದಲ್ಲಿ ಪಂದ್ಯಗಳನ್ನು ನಡೆಸಿದ್ದರೆ ಭಾರೀ ನಷ್ಟವಾಗುತ್ತಿತ್ತು. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಂಡು ಬಿಸಿಸಿಐ ಟೂರ್ನಿಯನ್ನು ಮುಂದೂಡಿದೆ.

    ಇದಕ್ಕೂ ಮುನ್ನ ದೆಹಲಿಯಲ್ಲಿ ಆಯೋಜನೆಗೊಂಡಿದ್ದ ಎಲ್ಲ ಐಪಿಎಲ್ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಮುಂಜಾಗೃತಾ ಕ್ರಮವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ತಿಳಿಸಿದ್ದರು.

    ಕ್ರಿಕೆಟ್ ವೀಕ್ಷಿಸಲು ಸಾವಿರಾರು ಮಂದಿ ಕ್ರೀಡಾಂಗಣಕ್ಕೆ ಬರುತ್ತಾರೆ. ಯಾರು ಬರುತ್ತಾರೆ? ಅವರು ಎಲ್ಲಿಂದ ಬರುತ್ತಿದ್ದಾರೆ ಎನ್ನುವುದು ತಿಳಿಯುವುದು ಅಸಾಧ್ಯ. ಒಬ್ಬ ವ್ಯಕ್ತಿ ಬಂದರೂ ಹಲವು ಮಂದಿಗೆ ಕೊರೊನಾ ಹರಡುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಐಪಿಎಲ್ ಸೇರಿದಂತೆ ಎಲ್ಲ ಕ್ರೀಡಾ ಕಾರ್ಯಕ್ರಮವನ್ನು ರದ್ದುಪಡಿಸುತ್ತಿದ್ದೇವೆ ಎಂದು ಹೇಳಿದ್ದರು.

    ಈಗಾಗಲೇ ದೆಹಲಿ ಸರ್ಕಾರ ಸಾರ್ವಜನಿಕವಾಗಿ 200ಕ್ಕೂ ಹೆಚ್ಚು ಜನ ಪಾಲ್ಗೊಳ್ಳುವ ಸಮಾರಂಭವನ್ನು ನಿಷೇಧಿಸಿದ್ದು, ಶಾಲಾ, ಕಾಲೇಜು, ಸಿನಿಮಾ ಮಂದಿರಗಳು ಮಾರ್ಚ್ 31ರವರೆಗೆ ಮುಚ್ಚುವಂತೆ ಆದೇಶಿಸಿದೆ.

  • 127 ರಾಷ್ಟ್ರ, ಪ್ರಾಂತ್ಯಗಳ ಮೇಲೆ ಕೊರೊನಾ ಕರಿ ನೆರಳು – ಸೋಂಕಿಗೆ ಬಲಿಯಾದವರೆಷ್ಟು? ಚೇತರಿಸಿಕೊಂಡವರೆಷ್ಟು?

    127 ರಾಷ್ಟ್ರ, ಪ್ರಾಂತ್ಯಗಳ ಮೇಲೆ ಕೊರೊನಾ ಕರಿ ನೆರಳು – ಸೋಂಕಿಗೆ ಬಲಿಯಾದವರೆಷ್ಟು? ಚೇತರಿಸಿಕೊಂಡವರೆಷ್ಟು?

    ನವದೆಹಲಿ: ವಿಶ್ವದಾದ್ಯಂತ ಹರಡುತ್ತಿರುವ ಮಹಾಮಾರಿ ಕೊರೊನಾ ವೈರಸ್‍ಗೆ 127 ರಾಷ್ಟ್ರ ಹಾಗೂ ಪ್ರಾಂತ್ಯಗಳು ತುತ್ತಾಗಿವೆ. ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ಈಗ ವಿಶ್ವದೆಲ್ಲೆಡೆ ಹರುಡುತ್ತಿದ್ದು, ಈವರೆಗೆ 4,986 ಮಂದಿಯನ್ನು ಬಲಿಪಡೆದಿದೆ. ಹೀಗೆ ಎಲ್ಲೆಡೆ ತನ್ನ ಕರಿನೆರಳು ಬೀರುತ್ತಿರುವ ಕೊರೊನಾ ಜನರಲ್ಲಿ ಭಯ ಹುಟ್ಟಿಸಿದೆ.

    ಒಟ್ಟು 127 ರಾಷ್ಟ್ರ ಹಾಗೂ ಪ್ರಾಂತ್ಯಗಳಲ್ಲಿ ಕೊರೊನಾ ವೈರಸ್ ಹರಡಿದ್ದು, ಈವರೆಗೆ ಸುಮಾರು 1,34,769 ಮಂದಿಗೆ ಸೋಂಕು ತಗುಲಿದೆ ಎಂದು ವರದಿಯಾಗಿದೆ. ಅಲ್ಲದೇ ಚೀನಾದಲ್ಲಿ 3,117 ಮಂದಿ ಸೇರಿದಂತೆ ವಿಶ್ವದೆಲ್ಲೆಡೆ ಒಟ್ಟು 4,983 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸುಮಾರು 70,388 ಮಂದಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಪ್ರಸ್ತುತ 59,398 ಮಂದಿ ಸೋಂಕಿನಿಂದ ಬಳಲುತ್ತಿದ್ದು, ಅವರಲ್ಲಿ 5,757 ಮಂದಿ ಸ್ಥಿತಿ ಚಿಂತಾಜನಕವಾಗಿದೆ. ಇದನ್ನೂ ಓದಿ: ಬೀ ಕೇರ್ ಫುಲ್: ಕೊರೊನಾ ಲಕ್ಷಣ ಏನು? ಹೇಗೆ ಹರಡುತ್ತದೆ? ಮುಂಜಾಗೃತ ಕ್ರಮ ಏನು?

    ಎಷ್ಟು ಸಾವು? ಎಷ್ಟು ಚೇತರಿಕೆ?
    ಚೀನಾ, ಇಟಲಿ, ಇರಾನ್, ದಕ್ಷಿಣ ಕೊರಿಯಾ, ಸ್ಪೇನ್, ಫ್ರಾನ್ಸ್, ಜರ್ಮನಿ, ಅಮೆರಿಕದಲ್ಲಿ ಕೊರೊನಾ ವ್ಯಾಪಕವಾಗಿ ಹರಡಿದೆ. ಈ ರಾಷ್ಟ್ರಗಳಲ್ಲಿ ಸೋಂಕಿತರ ಸಂಖ್ಯೆ ಸಾವಿರ ಗಡಿಯನ್ನು ದಾಟಿದೆ.

    1. ಚೀನಾ – ಈವರೆಗೆ ಕೊರೊನಾ ಸೋಂಕಿಗೆ 80,814 ಮಂದಿ ತುತ್ತಾಗಿದ್ದಾರೆ. ಅವರಲ್ಲಿ 64,118 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, 3,117 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ 13,519 ಮಂದಿ ಕೊರೊನಾದಿಂದ ಬಳಲುತ್ತಿದ್ದು, 4,020 ರೋಗಿಗಳ ಸ್ಥಿತಿ ಗಂಭಿರವಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಕೊರೊನಾ ಎಫೆಕ್ಟ್ – 1 ರಿಂದ 6ನೇ ತರಗತಿವರೆಗಿನ ಪರೀಕ್ಷೆ ರದ್ದು

    2. ಇಟಲಿ – ಸೋಂಕಿಗೆ ಈವರೆಗೆ ಇಟಲಿಯಲ್ಲಿ ಸುಮಾರು 15,113 ಮಂದಿ ತುತ್ತಾಗಿದ್ದು, ಅವರಲ್ಲಿ 1,258 ಮಂದಿ ಚೇತರಿಸಿಕೊಂಡಿದ್ದಾರೆ. 1,016 ಮಂದಿ ಮೃತಪಟ್ಟಿದ್ದು, ಪ್ರಸ್ತುತ 12,839 ಮಂದಿ ಕೊರೊನಾದಿಂದ ಬಳಲುತ್ತಿದ್ದರೆ ಹಾಗೂ 1,153 ರೋಗಿಗಳ ಸ್ಥಿತಿ ಚಿಂತಾಜನಕವಾಗಿದೆ.

    3. ಇರಾನ್ – 10,075 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಅವರಲ್ಲಿ 3,276 ಮಂದಿ ಸೊಂಕಿನಿಂದ ಚೇತರಿಸಿಕೊಂಡಿದ್ದಾರೆ. ಸದ್ಯ 6,370 ರೋಗಿಗಳು ಸೋಂಕಿನಿಂದ ಬಳಲುತ್ತಿದ್ದು, 429 ಸೋಂಕಿತರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಫಸ್ಟ್ ಟೈಂ, ಚೀನಾದ ಹುಬೆ ಪ್ರಾಂತ್ಯದಲ್ಲಿ ಸಿಂಗಲ್ ಡಿಜಿಟ್‍ಗೆ ಕೊರೊನಾ ಕೇಸ್ ಇಳಿಕೆ

    4. ದಕ್ಷಿಣ ಕೊರಿಯಾ – 7,979 ಮಂದಿಗೆ ಸೋಂಕು ತಗುಲಿತ್ತು. ಆದರೆ ಅವರಲ್ಲಿ 510 ರೋಗಿಗಳು ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. 67 ಮಂದಿ ಕೊರೊನಾಗೆ ಬಲಿಯಾಗಿದ್ದರೆ, 93 ಮಂದಿ ಸೋಂಕಿತರ ಸ್ಥಿತಿ ಚಿಂತಾಜನಕವಾಗಿದೆ. ಪ್ರಸ್ತುತ 7,402 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.

    5. ಸ್ಪೇನ್ – 3,146 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಅವರಲ್ಲಿ 189 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ 2,871 ರೋಗಿಗಳು ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, 190 ಮಂದಿ ಸ್ಥಿತಿ ಗಂಭಿರವಾಗಿದೆ ಹಾಗೂ 86 ಮಂದಿ ಬಲಿಯಾಗಿದ್ದಾರೆ. ಇದನ್ನೂ ಓದಿ: ಡೆಡ್ಲಿ ಕೊರೊನಾಗೂ ‘ಎಣ್ಣೆ’ನೇ ಮದ್ದು- ಕೈಗೂ, ಹೊಟ್ಟೆಗೂ ಎಣ್ಣೆ ಬಿದ್ರೆ ಫುಲ್ ಸೇಫ್ ಅಂತೆ!

    6. ಫ್ರಾನ್ಸ್ – 2,876 ಮಂದಿ ಕೊರೊನಾಗೆ ತುತ್ತಾಗಿದ್ದರು. ಅವರಲ್ಲಿ 12 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದರೆ, 129 ರೋಗಿಗಳ ಸ್ಥಿತಿ ಗಂಭಿರವಾಗಿದೆ. ಸದ್ಯ 2,803 ಮಂದಿ ಸೋಂಕಿನಿಂದ ಬಳಲುತ್ತಿದ್ದು, 61 ಮಂದಿ ಜೀವ ಕಳೆದುಕೊಂಡಿದ್ದಾರೆ.

    7. ಜರ್ಮನಿ – 2,745 ಮಂದಿಯಲ್ಲಿ ಕಾಣಿಕೊಂಡ ಕೊರೊನಾ ಸೋಂಕಿನಿಂದ 25 ರೋಗಿಗಳು ಚೇತರಿಸಿಕೊಂಡಿದ್ದಾರೆ. ಸದ್ಯ 6 ಮಂದಿ ಬಲಿಯಾಗಿದ್ದು, 9 ಮಂದಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಪ್ರಸ್ತುತ 2,714 ರೋಗಿಗಳು ಕೊರೊನಾದಿಂದ ಬಳಲುತ್ತಿದ್ದಾರೆ.

    8. ಅಮೆರಿಕ – ಯುಎಸ್‍ಎನಲ್ಲಿ ಕೊರೊನಾಗೆ 41 ಮಂದಿ ಬಲಿಯಾಗಿದ್ದಾರೆ. 1,762 ಮಂದಿಯಲ್ಲಿ ಕಾಣಿಸಿಕೊಂಡ ಸೋಂಕಿನಿಂದ 31 ಮಂದಿ ಗುಣಮುಖರಾಗಿದ್ದಾರೆ. ಸದ್ಯ 1,690 ರೋಗಿಗಳು ಸೋಂಕಿನಿಂದ ಬಳಲುತ್ತಿದ್ದರೆ, 10 ಮಂದಿ ಸ್ಥಿತಿ ಗಂಭಿರವಾಗಿದೆ.

    9. ಭಾರತ – ದೇಶಕ್ಕೆ ಕಾಲಿಟ್ಟಿರುವ ಕೊರೊನಾ ವೈರಸ್‍ಗೆ ಈವರೆಗೆ 75 ಮಂದಿ ತುತ್ತಾಗಿದ್ದು, 4 ಮಂದಿ ಗುಣಮುಖರಾಗಿದ್ದಾರೆ. ಈಗಾಗಲೇ ಕೊರೊನಾಗೆ ಕರ್ನಾಟಕದ ಕಲಬುರ್ಗಿಯ ವೃದ್ಧರೊಬ್ಬರು ಬಲಿಯಾಗಿದ್ದಾರೆ.

    10. ಪಾಕಿಸ್ತಾನ – ಭಾರತದ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿಯೂ ಕೊರೊನಾ ವೈರಸ್ ಹರಡಿದೆ. ಈವರೆಗೆ 21 ಮಂದಿ ಸೋಂಕಿಗೆ ತುತ್ತಾಗಿದ್ದು, ಇಬ್ಬರು ಚೇತರಿಸಿಕೊಂಡಿದ್ದಾರೆ.

    ಇತ್ತ ಕೊರೊನಾ ಪೀಡಿತ ದೇಶಗಳಲ್ಲಿ ಇರುವ ಭಾರತೀಯರನ್ನು ರಾಷ್ಟ್ರಕ್ಕೆ ವಾಪಸ್ ಕರೆತರುವ ಕಾರ್ಯ ಕೂಡ ಭರದಿಂದ ನಡೆಯುತ್ತಿದ್ದು, ಹೀಗೆ ಭಾರತಕ್ಕೆ ಬಂದವರ ಮೇಲೆ ನಿಗಾವಹಿಸಿ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಶಾಲೆಗಳಿಗೆ ರಜೆಯನ್ನು ಕೂಡ ಘೋಷಿಸಲಾಗಿದೆ. ಹಾಗೆಯೇ ಐಟಿ ಕಂಪನಿಗಳ ಸಾಕಷ್ಟು ಮಂದಿ ಉದ್ಯೋಗಿಗಳು ಕೊರೊನಾ ಭೀತಿಯಿಂದ ‘ವರ್ಕ್ ಫ್ರಮ್ ಹೋಮ್’ ವ್ಯವಸ್ಥೆ ಮೊರೆಹೋಗುತ್ತಿದ್ದು, ಕಂಪನಿ, ಆಫೀಸ್, ಸಾರ್ವಜನಿಕ ಸ್ಥಳಗಳಲ್ಲಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

  • ಅಮೆರಿಕದ ಮಿಲಿಟರಿ ವುಹಾನ್‍ನಲ್ಲಿ ಕೊರೊನಾ ವೈರಸ್ ತಂದಿರಬಹುದು – ಚೀನಾ

    ಅಮೆರಿಕದ ಮಿಲಿಟರಿ ವುಹಾನ್‍ನಲ್ಲಿ ಕೊರೊನಾ ವೈರಸ್ ತಂದಿರಬಹುದು – ಚೀನಾ

    – ಕೊರೊನಾ ವಿಚಾರದಲ್ಲಿ ಅಮೆರಿಕ, ಚೀನಾ ಕಿತ್ತಾಟ
    – ಪ್ರತಿಯೊಂದಕ್ಕೂ ನಮ್ಮನ್ನು ದೂರಬೇಡಿ
    – ಅಮೆರಿಕದಿಂದ ಬೇಜವಾಬ್ದಾರಿ ಹೇಳಿಕೆ
    – ಕೊರನಾ ಮೊದಲು ಸೃಷ್ಟಿಯಾಗಿದ್ದು ಅಮೆರಿಕದಲ್ಲಿ

    ಬೀಜಿಂಗ್: ಹುಬೆ ಪ್ರಾಂತ್ಯದ ವುಹಾನ್ ನಲ್ಲಿ ಕೊರೊನಾ ವೈರಸ್ ಹಬ್ಬಲು ಅಮೆರಿಕ ಸೇನೆ ಕಾರಣವಾಗಿರಬಹುದು ಎಂದು ಚೀನಾ ಶಾಕಿಂಗ್ ಹೇಳಿಕೆ ನೀಡಿದೆ. ಕಳೆದ ವರ್ಷ ವ್ಯಾಪಾರ ಸಮರ ಆರಂಭಿಸಿದ್ದ ಅಮೆರಿಕ ಮತ್ತು ಚೀನಾ ಈಗ ಕೊರೊನಾ ವಿಚಾರದಲ್ಲೂ ಆರೋಪ ಪ್ರತ್ಯರೋಪ ನಡೆಸಲು ಆರಂಭಿಸಿದ್ದು ಚರ್ಚೆಗೆ ಗ್ರಾಸವಾಗಿದೆ.

    ಅಮೆರಿಕದ ಭದ್ರತಾ ಸಲಹೆಗಾರ ರಾಬರ್ಟ್ ಒಬ್ರಿಯಾನ್, ಕೊರೊನಾ ವೈರಸ್ ವಿಚಾರದಲ್ಲಿ ಚೀನಾ ತಡವಾಗಿ ಎಚ್ಚೆತ್ತ ಕಾರಣ ಈಗ ವಿಶ್ವವೇ ಇದಕ್ಕೆ ಬೆಲೆ ತೆರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿಕೆ ನೀಡಿದ್ದರು. ಇದನ್ನು ಓದಿ: ಕೊರೊನಾ ವಿರುದ್ಧದ ಹೋರಾಟದಲ್ಲಿ ನಾವು ಗೆದ್ದಿದ್ದೇವೆ – ವುಹಾನ್‍ನಲ್ಲಿ ವೈದ್ಯರ ಸಂಭ್ರಮ

    ಈ ವಿಚಾರಕ್ಕೆ ಗರಂ ಆದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಹೊ ಲಿಜಿಯನ್ ಅವರು ಅಮೆರಿಕ್ಕೆ ಖಾರವಾದ ಪ್ರಶ್ನೆಗಳನ್ನು ಕೇಳಿದ್ದಾರೆ.

    ಅಮೆರಿಕದಲ್ಲಿ ಎಷ್ಟು ಮಂದಿ ಕೊರೊನಾ ಪೀಡಿತರಿದ್ದಾರೆ? ಯಾವ ಆಸ್ಪತ್ರೆಯಲ್ಲಿ ಪೀಡಿತರು ದಾಖಲಾಗಿದ್ದಾರೆ. ಅಮೆರಿಕದ ಸೈನಿಕರು ವುಹಾನ್ ನಲ್ಲಿ ಈ ಮಾರಣಾಂತಿಕ ವೈರಸ್ ತಂದಿರಬಹುದು. ಈ ವಿಚಾರದಲ್ಲಿ ನೀವು ಪಾರದರ್ಶಕವಾಗಿ ನಡೆದುಕೊಳ್ಳಿ. ಸಾರ್ವಜನಿಕವಾಗಿ ಡೇಟಾವನ್ನು ಬಿಡುಗಡೆ ಮಾಡಿ. ನಾವು ಮಾಹಿತಿಗಳನ್ನು ತಿಳಿಸಿದಂತೆ ನೀವು ಯಾಕೆ ತಿಳಿಸುತ್ತಿಲ್ಲ ಎಂದು ಗಂಭೀರವಾದ ಪ್ರಶ್ನೆಗಳನ್ನು ಕೇಳಿದ್ದಾರೆ. ಇದನ್ನೂ ಓದಿ: ಫಸ್ಟ್ ಟೈಂ, ಚೀನಾದ ಹುಬೆ ಪ್ರಾಂತ್ಯದಲ್ಲಿ ಸಿಂಗಲ್ ಡಿಜಿಟ್‍ಗೆ ಕೊರೊನಾ ಕೇಸ್ ಇಳಿಕೆ

    ಅಮೆರಿಕ ಚೀನಾವನ್ನು ದೂರುವ ಬದಲು ಕೊರೊನಾ ವೈರಸ್ ತಡೆಗಟ್ಟಲು ಕ್ರಮಕೈಗೊಳ್ಳಲಿ. ನಮ್ಮನ್ನು ದೂರುವುದರಿಂದ ಅಮೆರಿಕದಲ್ಲಿ ಕೊರೊನಾ ಹಾವಳಿ ಕಡಿಮೆಯಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

    ಕೊರೊನಾ ವಿಶ್ವವ್ಯಾಪಿಯಾಗಿ ಹರಡಲು ಆರಂಭಗೊಳ್ಳುತ್ತಿದ್ದಂತೆ ಸಿಂಗಾಪುರ ಮತ್ತು ದಕ್ಷಿಣ ಕೊರಿಯಾಗಳು ಬಿಗಿಯಾದ ಕ್ರಮಗಳನ್ನು ಅನುಸರಿಸಿದ ಪರಿಣಾಮ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ. ಪ್ರತಿಯೊಂದು ವಿಚಾರಕ್ಕೆ ಅಮೆರಿಕ ಚೀನಾವನ್ನು ದೂರುವುದನ್ನು ಮೊದಲು ನಿಲ್ಲಿಸಲಿ ಎಂದು ಅವರು ಟ್ವೀಟ್ ಮಾಡಿದ್ದಾರೆ.

    ಝಹೊ ಲಿಜಿಯನ್ ಅವರು ಈ ವೈರಸ್ ಚೀನಾದಲ್ಲಿ ಮೊದಲು ಸೃಷ್ಟಿಯಾಗಿಲ್ಲ ಮೊದಲು ಅಮೆರಿಕದಲ್ಲಿ ಸೃಷ್ಟಿಯಾಗಿದೆ ಎಂದು ತಿಳಿಸಲು ಕೆಲವೊಂದು ಸಂಶೋಧನಾ ವರದಿಯನ್ನು ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಇದು ಅಮೆರಿಕ ಸೇನೆಯ ಲ್ಯಾಬ್ ಒಂದು ಮುಚ್ಚಲ್ಪಟ್ಟಿತ್ತು. ಅಪಾಯಕಾರಿ ವಸ್ತುಗಳು ಇದೆ ಎನ್ನುವ ಕಾರಣಕ್ಕೆ ಅಮರಿಕ  ಲ್ಯಾಬ್ ಅನ್ನು ಸ್ಥಗಿತಗೊಳಿಸಿತ್ತು ಎನ್ನುವ ಸಂಶೋಧನಾ ವರದಿಯನ್ನು ಟ್ವೀಟ್ ಮಾಡಿದ್ದಾರೆ.

    ಅಮೆರಿಕದ ಅಧಿಕಾರಿಗಳು ಅನೈತಿಕ ಮತ್ತು ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಿ ಕೊರೊನಾ ತಡೆಗಟ್ಟಲು ನೆರವಾಗಲಿ ಎಂದು ಚೀನಾದ ವಿದೇಶಾಂಗ ಇಲಾಖೆ ಖಾರವಾಗಿ ಪ್ರತಿಕ್ರಿಯಿಸಿದೆ.

  • ಇಂದಿನಿಂದ ರಾಷ್ಟ್ರಪತಿ ಭವನಕ್ಕೆ ಪ್ರವಾಸಿಗರಿಗೆ ನೋ ಎಂಟ್ರಿ

    ಇಂದಿನಿಂದ ರಾಷ್ಟ್ರಪತಿ ಭವನಕ್ಕೆ ಪ್ರವಾಸಿಗರಿಗೆ ನೋ ಎಂಟ್ರಿ

    ನವದೆಹಲಿ: ಭಾರತದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಈವರೆಗೆ ದೇಶದಲ್ಲಿ 75 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಈ ಹಿನ್ನೆಲೆ ಮುಜಾಗ್ರತಾ ಕ್ರಮವಾಗಿ ರಾಷ್ಟ್ರಪತಿ ಭವನಕ್ಕೆ ಪ್ರವಾಸಿಗರ ಪ್ರವೇಶವನ್ನು ರದ್ದುಗೊಳಿಸಲಾಗಿದೆ.

    ಕೊರೊನಾ ಭೀತಿಯಿಂದ ಈಗಾಗಲೇ ದೇಶಾದ್ಯಂತ ಬಹುತೇಕ ರಾಜ್ಯಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರದಂತೆ ಸೂಚಿಸಿ ರಾಜ್ಯ ಸರ್ಕಾರಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಇದೇ ಬೆನ್ನಲ್ಲೇ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ಟೀಟ್ ಮಾಡಿ, ಇಂದಿನಿಂದ ರಾಷ್ಟ್ರಪತಿ ಭವನಕ್ಕೆ ಪ್ರವಾಸಿಗರ ಭೇಟಿಗೆ ಅವಕಾಶವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

    ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಕಾರಣ ರಾಷ್ಟ್ರಪತಿ ಭವನಕ್ಕೆ ಪ್ರವಾಸಿಗರ ಭೇಟಿ ಅವಕಾಶ ನಿರಾಕರಿಸಲಾಗಿದೆ. ವಿದೇಶಿ ಪ್ರಯಾಣಿಕರ ಭೇಟಿಯನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ರಾಷ್ಟ್ರಪತಿಗಳು ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಇನ್ನೊಂದು ಟ್ವೀಟ್‍ನಲ್ಲಿ, ರಾಷ್ಟ್ರಪತಿ ಭವನದ ಮ್ಯೂಸಿಯಂ ಕಾಂಪ್ಲೆಕ್ಸ್ ಹಾಗೂ ಗಾರ್ಡ್ ಸಮಾರಂಭ ಬದಲಾವಣೆಗೆ ಕೂಡ ಸಾರ್ವಜನಿಕರ ಭೇಟಿಯನ್ನು ಮುಂದಿನ ಆದೇಶದವರೆಗೆ ನಿಷೇಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ರಾಷ್ಟ್ರ ರಾಜಧಾನಿ ದೆಹಲಿಯನ್ನು ಕೊರೊನಾ ವೈರಸ್ ಸೋಂಕು ಜನರಲ್ಲಿ ಆತಂಕ ಸೃಷ್ಟಿಸಿದೆ. ಈವರೆಗೆ 6 ಕೊರೊನಾ ಸೋಂಕಿತ ಪ್ರಕರಣಗಳು ದೆಹಲಿಯಲ್ಲಿ ವರದಿಯಾಗಿದ್ದು, ಇದರಿಂದ ಎಚ್ಚೆತ್ತ ದೆಹಲಿ ಸರ್ಕಾರ 5ನೇ ತರಗತಿವರೆಗೆ ಪ್ರಾಥಮಿಕಾ ಶಾಲೆಗಳಿಗೆ ರಜೆ ಘೋಷಿಸಿದೆ. ಸರ್ಕಾರಿ ನೌಕರರ ಬಯೋ ಮೆಟ್ರಿಕ್ ಹಾಜರಾತಿ ಕೂಡ ರದ್ದುಗೊಳಿಸಿದೆ.

    ಇತ್ತ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಮಹಾಮಾರಿ ಕೊರೊನಾ ಹರಡುತ್ತಿರುವ ಹಿನ್ನೆಲೆ ಶಿಕ್ಷಣ ಇಲಾಖೆ ಬಿಬಿಎಂಪಿ, ಬೆಂಗಳೂರು ಗ್ರಾಮಾಂತರ, ದಕ್ಷಿಣ, ಉತ್ತರ, ನಗರ ಭಾಗದ ಶಾಲೆಗಳಲ್ಲಿ 1ರಿಂದ 6ನೇ ತರಗತಿವರೆಗೆ ಪರೀಕ್ಷೆಯನ್ನು ರದ್ದುಗೊಳಿಸಿದೆ.

    ಶಿಕ್ಷಣ ಇಲಾಖೆ ಹೊರಡಿಸಿದ ಸುತ್ತೋಲೆಯಲ್ಲಿ, 1ರಿಂದ 6ನೇ ತರಗತಿವರೆಗೆ ಪರೀಕ್ಷೆ ಇಲ್ಲ. 7ರಿಂದ 9ನೇ ತರಗತಿವರೆಗೆ ಮಾರ್ಚ್ 23 ಒಳಗೆ ಪರೀಕ್ಷೆ ನಡೆಸಬೇಕು. ಆ ಬಳಿಕ ವಿದ್ಯಾರ್ಥಿಗಳಿಗೆ ರಜೆ ನೀಡಬೇಕು. ಹಾಗೆಯೇ 10ನೇ ತರಗತಿ ವಿದ್ಯಾರ್ಥಿಗಳಿಗೆ ಈಗಾಗಲೇ ನಿಗದಿಗೊಳಿಸಿರುವ ದಿನಾಂಕದಂದೆ ಪರೀಕ್ಷೆ ನಡೆಸಲಾಗುವುದು. ಅಲ್ಲದೇ ವಿದ್ಯಾರ್ಥಿಗಳು ನಿಗದಿತ ಪರೀಕ್ಷೆಯ ದಿನ ಮಾತ್ರ ಶಾಲೆಗೆ ಬಂದು ಪರೀಕ್ಷೆ ಬರೆಯಬೇಕು ಎಂದು ಶಿಕ್ಷಣ ಇಲಾಖೆ ಸೂಚಿಸಿದೆ.

  • ಕಲಬುರಗಿಯ ಶ್ರೀ ಶರಣಬವೇಶ್ವರ ಜಾತ್ರೆ ರದ್ದು

    ಕಲಬುರಗಿಯ ಶ್ರೀ ಶರಣಬವೇಶ್ವರ ಜಾತ್ರೆ ರದ್ದು

    ಕಲಬುರಗಿ: ಕೊರೊನಾ ಸೋಂಕಿನಿಂದ 76 ವರ್ಷದ ವೃದ್ಧ ಮೃತಪಟ್ಟ ಹಿನ್ನೆಲೆಯಲ್ಲಿ ಶುಕ್ರವಾರ ನಡೆಯಬೇಕಿದ್ದ ಕಲ್ಯಾಣ ಕರ್ನಾಟಕದ ಸುಪ್ರಸಿದ್ಧ ಶ್ರೀ ಶರಣಬವೇಶ್ವರ ಜಾತ್ರೆಯನ್ನು ರದ್ದುಗೊಳಿಸಲಾಗಿದೆ.

    ಕೆಮ್ಮು, ಜ್ವರ ಇದ್ದರೆ ಶ್ರೀ ಶರಣಬಸವೇಶ್ವರ ಜಾತ್ರೆಗೆ ಬರಬೇಡಿ ಎಂದು ಕಲಬುರಗಿ ಜಿಲ್ಲಾಧಿಕಾರಿ ಬಿ.ಶರತ್ ಈ ಮೊದಲು ಹೇಳಿದ್ದರು. ಆದರೆ ವೃದ್ಧ ಮೃತಪಟ್ಟಿದ್ದು ಕೊರೊನಾ ವೈರಸ್‍ನಿಂದಲೇ ಎಂದು ಲ್ಯಾಬ್ ರಿಪೋರ್ಟ್ ಬರುತ್ತಿದ್ದಂತೆ ಜಿಲ್ಲೆಯಲ್ಲಿ ಹೈಲರ್ಟ್ ಗೆ ಜಿಲ್ಲಾಡಳಿತ ಮುಂದಾಗಿದೆ. ಈ ನಿಟ್ಟಿನಲ್ಲಿ ಜಾತ್ರೆಯ ಆಯೋಜಕರು ಕೂಡ ಜಾತ್ರೆಯನ್ನು ರದ್ದುಗೊಳಿಸಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಕೊರೊನಾಗೆ ಕರ್ನಾಟಕದಲ್ಲಿ ಮೊದಲ ಬಲಿ

    ಶರಣಬಸವೇಶ್ವರ ಜಾತ್ರೆ ಶುಕ್ರವಾರದಿಂದ ಪ್ರಾರಂಭವಾಗಿ 13 ದಿನಗಳ ಕಾಲ ನಡೆಯುತ್ತಿತ್ತು. ಈ ವೇಳೆ ಕನಿಷ್ಠ 4 ಲಕ್ಷಕ್ಕೂ ಹೆಚ್ಚು ಭಕ್ತರು ಇಲ್ಲಿಗೆ ಆಗಮಿಸಿ ಶರಣನ ದರ್ಶನ ಪಡೆಯುತ್ತಿದ್ದರು. ಹೀಗಾಗಿ ಅಷ್ಟು ಜನರ ಆರೋಗ್ಯದ ಜವಾಬ್ದಾರಿಯನ್ನು ಜಿಲ್ಲಾಡಳಿತ ಹೊತ್ತುಕೊಂಡಿತ್ತು. ಆದರೆ ವೃದ್ಧ ಮೃತಪಟ್ಟಿದ್ದು ಕೊರೊನಾ ಸೋಂಕಿನಿಂದಲೇ ಎಂಬ ವರದಿ ಸಿಗುತ್ತಿದ್ದಂತೆ ಜಾತ್ರೆಯ ಆಯೋಜಕರು ಅಲರ್ಟ್ ಆಗಿದ್ದಾರೆ. ಈ ಮೂಲಕ ಜಾತ್ರೆಯನ್ನು ರದ್ದುಗೊಳಿಸಿ ಪ್ರಕಟಣೆ ಹೊರಡಿಸಿದ್ದಾರೆ. ಇದನ್ನೂ ಓದಿ: 154 ಮಂದಿ ಉದ್ಯೋಗಿಗಳಿರುವ ಕಚೇರಿಗೆ ಹಾಜರಾಗಿ ತೆರಳಿದ್ದ ಕೊರೊನಾ ಪೀಡಿತ

    ಇದಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿದ್ದ ಡಿಸಿ ಬಿ.ಶರತ್ ಅವರು, ಕೆಮ್ಮು, ಜ್ವರ, ಶೀತದಿಂದ ಬಳಲುತ್ತಿರುವ ಭಕ್ತರು ಜಾತ್ರೆಗೆ ಬರಬೇಡಿ. ಯಾರಿಗಾದರೂ ಸೋಂಕು ಇದ್ದಲಿ ಅದು ಬೇರೆಯವರಿಗೆ ಹರಡದಿರಲ್ಲಿ ಎಂಬ ಕಾರಣಕ್ಕೆ ಈ ಕ್ರಮ ಜರುಗಿಸಿರುವುದ್ದಾಗಿ ಹೇಳಿದ್ದರು. ಅಷ್ಟೇ ಅಲ್ಲದೆ ಕಲ್ಯಾಣ ಕರ್ನಾಟಕದ ಸುಪ್ರಸಿದ್ಧ ಜಾತ್ರೆಗಳಲ್ಲಿ ಕಲಬುರಗಿಯ ಶ್ರೀ ಶರಣಬಸವೇಶ್ವರ ಜಾತ್ರೆ ಪ್ರತಿ ವರ್ಷ ಅದ್ಧೂರಿಯಾಗಿ ನಡೆಯುತ್ತಿದೆ. ಈ ಜಾತ್ರೆಗೆ 1 ಲಕ್ಷಕ್ಕೂ ಹೆಚ್ಚು ಭಕ್ತರು ತೇರು ಏಳೆಯಲು ಆಗಮಿಸುತ್ತಾರೆ. ಆದರೆ ಹೀಗೆ ಆಗಮಿಸುವ ಭಕ್ತರಿಗೆ ಇದೀಗ ಚೀನಾದ ಮಹಾಮಾರಿ ಕೊರೊನಾ ಕರಿನೆರಳು ಆವರಿಸಿದೆ. ಹೀಗಾಗಿ ಜಾತ್ರೆಗೆ ಬರುವ ಭಕ್ತರು ಒಂದಿಷ್ಟು ಮುಂಜಾಗೃತೆ ವಹಿಸಿಕೊಳ್ಳಲು ಆರೋಗ್ಯ ಇಲಾಖೆ ಸೂಚಿಸಿತ್ತು. ಇದನ್ನೂ ಓದಿ: ‘ಗೋಮೂತ್ರದಿಂದ ಕೊರೊನಾ ವಾಸಿ ಟ್ವೀಟ್’- ಪೊಲೀಸ್ ಆಯುಕ್ತರಿಗೆ ಶ್ರೀರಾಮಲು ದೂರು

  • ಭಾರತದಲ್ಲಿ ಕೊರೊನಾಗೆ ಕರ್ನಾಟಕದಲ್ಲಿ ಮೊದಲ ಬಲಿ

    ಭಾರತದಲ್ಲಿ ಕೊರೊನಾಗೆ ಕರ್ನಾಟಕದಲ್ಲಿ ಮೊದಲ ಬಲಿ

    – ಕಲಬುರಗಿಯ ವೃದ್ಧನಿಗೆ ಸೋಂಕು ತಗಲಿದ್ದು ಖಚಿತ
    – ಕೊನೆಗೂ ಬಂತು ಕೊರೊನಾ ಸೋಂಕಿನ ವರದಿ

    ಕಲಬುರಗಿ: ಕಲಬುರಗಿಯ 76 ವರ್ಷದ ವೃದ್ಧ ಸಾವನ್ನಪ್ಪಿದ್ದು ಕೊರೊನಾ ವೈರಸ್‍ನಿಂದಲೇ ಎಂದು ಖಚಿತವಾಗಿದೆ. ಈ ಮೂಲಕ ಭಾರತದಲ್ಲಿ ಕೊರೊನಾ ಮೊದಲ ಬಲಿ ಪಡೆದಂತಾಗಿದೆ.

    ಕಲಬುರಗಿ ವೃದ್ಧನ ಲ್ಯಾಬ್ ರಿಪೋರ್ಟ್ ಈಗಷ್ಟೇ ನಮ್ಮ ಕೈಸೇರಿದೆ. ವರದಿಯಲ್ಲಿ ಕೊರೊನಾ ವೈರಸ್‍ನಿಂದಲೇ ಸಾವನ್ನಪ್ಪಿದ್ದಾರೆ ಎನ್ನುವುದು ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರು ಪಬ್ಲಿಕ್ ಟಿವಿಗೆ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವೃದ್ಧನ ಸಾವನ್ನು ಖಚಿತಪಡಿಸಿದ್ದಾರೆ.  ಕಲಬುರ್ಗಿಯಲ್ಲಿ ಮೊನ್ನೆ ಮೃತಪಟ್ಟ 76 ವರ್ಷದ ವೃದ್ಧರಿಗೆ ಕೊರೊನಾ ಸೋಂಕು ತಗಲಿದ್ದು ಖಚಿತವಾಗಿದೆ. ಇವರೊಂದಿಗೆ ಸಂಪರ್ಕ ಹೊಂದಿದ್ದ ವ್ಯಕ್ತಿಗಳನ್ನು ಗುರುತಿಸಿ ಪ್ರತ್ಯೇಕವಾಗಿರಿಸಿ ನಿಗಾವಹಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 154 ಮಂದಿ ಉದ್ಯೋಗಿಗಳಿರುವ ಕಚೇರಿಗೆ ಹಾಜರಾಗಿ ತೆರಳಿದ್ದ ಕೊರೊನಾ ಪೀಡಿತ

    ಫೆಬ್ರವರಿ 29ರಂದು ಸೌದಿಯಿಂದ ಕಲಬುರಗಿ ನಗರಕ್ಕೆ ವೃದ್ಧ ಆಗಮಿಸಿದ್ದರು ಬಂದಿದ್ದರು. ಮಾರ್ಚ್ 5ರಂದು ಜ್ವರ ಮತ್ತು ಕೆಮ್ಮು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ವಿಶೇಷ ವಾರ್ಡ್ ನಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು. ಇದನ್ನೂ ಓದಿ: ‘ಗೋಮೂತ್ರದಿಂದ ಕೊರೊನಾ ವಾಸಿ ಟ್ವೀಟ್’- ಪೊಲೀಸ್ ಆಯುಕ್ತರಿಗೆ ಶ್ರೀರಾಮಲು ದೂರು

    ಸಿದ್ದಿಕಿ ಅವರ ಗಂಟಲು ದ್ರವ ಸಂಗ್ರಹಿಸಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆ ಲ್ಯಾಬ್‍ಗೆ ಕಳಿಸಲಾಗಿತ್ತು. ಆದರೆ ವರದಿಗೂ ಮುನ್ನವೇ ಹೆಚ್ಚಿನ ಚಿಕಿತ್ಸೆಗಾಗಿ ಕುಟುಂಬಸ್ಥರು ಅವರನ್ನು ಹೈದರಾಬಾದ್ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದರು. ವೃದ್ಧ ಸಾವನ್ನಪ್ಪಿರುವ ಬೆನ್ನಲ್ಲೇ ಅಧಿಕಾರಿಗಳು ಕುಟುಂಬಸ್ಥರ ಆರೋಗ್ಯದ ಮೇಲೆ ನಿಗಾ ಇರಿಸಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡದಂತೆ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ.

    ಕೊರೊನಾ ವೈರಸ್‍ನಿಂದ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆ ಮುಗಿಯುವವರೆಗೂ ಕಲಬುರಗಿ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ಶರಣಬಸಪ್ಪ ಕ್ಯಾತನಾಳ ಹಾಗೂ ಅವರ ತಂಡ ಉಸ್ತುವಾರಿ ವಹಿಸಿಕೊಂಡು ಎಲ್ಲಾ ರೀತಿಯ ಮುಂಜಾಗ್ರತಾ ಮತ್ತು ನಿಯಂತ್ರಣ ಕ್ರಮ ಕೈಗೊಳ್ಳುವುದಾಗಿ ಕಲಬುರಗಿ ಜಿಲ್ಲಾಧಿಕಾರಿ ಅಧಿಕೃತ ಜ್ಞಾಪನಾ ಪತ್ರದಲ್ಲಿ ಉಲ್ಲೇಖಿಸಿದ್ದರು. ಇದನ್ನೂ ಓದಿ: ಹನಿಮೂನಿಗೆ ಗ್ರೀಸ್‍ಗೆ ತೆರಳಿದ್ದ ಬೆಂಗ್ಳೂರು ದಂಪತಿ – ಪತಿಗೆ ಈಗ ಕೊರೊನಾ ಸೋಂಕು

    ಭಾರತದಲ್ಲಿ ಕೊರೊನಾ ಪೀಡಿತರ ಸಂಖ್ಯೆ 61ಕ್ಕೆ ಹೆಚ್ಚಳವಾಗಿದೆ. ಈಗಾಗಲೇ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಬ್ರಿಟನ್ ನಲ್ಲಿ ಮೃತಪಟ್ಟಿದ್ದಾರೆ. ಇತ್ತ ಪುಣೆಯಲ್ಲಿ ಮತ್ತೆ ಮೂರು ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಕೇರಳದಲ್ಲಿ 12 ಜನಕ್ಕೆ ತಗುಲಿದ್ದ ಕೊರೊನಾ ಒಂದೇ ದಿನದಲ್ಲಿ 19ಕ್ಕೆ ಹೆಚ್ಚಾಗಿದೆ. ನಿನ್ನೆಯಷ್ಟೇ ಸಿಎಂ ಪಿಣರಾಯಿ ವಿಜಯನ್ ಅವರು ಸಭೆ ನಡೆಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿ, 7ನೇ ತರಗತಿವರೆಗೆ ಎಲ್ಲ ಶಾಲೆಗಳಿಗೆ ರಜೆ ಘೋಷಿಸಿದ್ದರು. ಅಲ್ಲದೆ ಮಾ.31ರ ವರೆಗೆ ಚಿತ್ರಮಂದಿರಗಳನ್ನು ಬಂದ್ ಮಾಡುವ ಕುರಿತು ಕೂಡ ಸರ್ಕಾರ ನಿರ್ಧಾರ ಕೈಗೊಂಡಿದೆ.

  • ಹನಿಮೂನಿಗೆ ಗ್ರೀಸ್‍ಗೆ ತೆರಳಿದ್ದ ಬೆಂಗ್ಳೂರು ದಂಪತಿ – ಪತಿಗೆ ಈಗ ಕೊರೊನಾ ಸೋಂಕು

    ಹನಿಮೂನಿಗೆ ಗ್ರೀಸ್‍ಗೆ ತೆರಳಿದ್ದ ಬೆಂಗ್ಳೂರು ದಂಪತಿ – ಪತಿಗೆ ಈಗ ಕೊರೊನಾ ಸೋಂಕು

    ಬೆಂಗಳೂರು: ಗ್ರೀಸ್ ದೇಶಕ್ಕೆ ಹನಿಮೂನಿಗೆ ತೆರಳಿದ ಬೆಂಗಳೂರಿನ ದಂಪತಿ ಪೈಕಿ ಪತಿಗೆ ಕೊರೊನಾ ವೈರಸ್ ತಗುಲಿದೆ. ಈ ಮೂಲಕ ಕರ್ನಾಟಕದಲ್ಲಿ 4 ಇದ್ದ ಕೊರೊನಾ ಪಾಸಿಟಿವ್ ಕೇಸ್ ಇಂದು 5ಕ್ಕೇರಿದೆ.

    ಗ್ರೀಸ್‍ನಿಂದ ಬೆಂಗಳೂರಿಗೆ ಬಂದ 26 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಸದ್ಯ ಜಯನಗರ ಸರ್ಕಾರಿ ಆಸ್ಪತ್ರೆಯ ಐಸೋಲೇಷನ್ ವಾರ್ಡಿನಲ್ಲಿ ವ್ಯಕ್ತಿಯನ್ನು ದಾಖಲಿಸಲಾಗಿದ್ದು, ಕಿತ್ಸೆ ನೀಡಲಾಗ್ತಿದ್ದು, ವ್ಯಕ್ತಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ವ್ಯಕ್ತಿಯ ಸಂಪರ್ಕದಲ್ಲಿದ್ದವರಿಗೆ ಮನೆಯಲ್ಲೇ ಪ್ರತ್ಯೇಕಿಸಿ ಚಿಕಿತ್ಸೆ ನೀಡಲಾಗ್ತಿದೆ.

    ಫೆಬ್ರವರಿ 23ರಂದು ದಂಪತಿ ಹನಿಮೂನ್‍ಗೆಂದು ಗ್ರೀಸ್‍ಗೆ ತೆರಳಿದ್ದರು. ಮಾರ್ಚ್ 6ರಂದು ಮುಂಬೈಗೆ ಈ ದಂಪತಿ ವಾಪಸ್ ಆಗಿದ್ದರು. ಮಾರ್ಚ್ 8ರಂದು ಬೆಂಗಳೂರಿಗೆ ಪತಿ ಒಬ್ಬನೇ ಬಂದಿದ್ದಾನೆ. ಪತ್ನಿ ಮುಂಬೈನಿಂದ ನೇರವಾಗಿ ಆಗ್ರಾಗೆ ತೆರಳಿದ್ದಾಳೆ. ಈ ವಿಚಾರವನ್ನು ಅಲ್ಲಿ ಉತ್ತರ ಪ್ರದೇಶ ಸರ್ಕಾರದ ಜೊತೆ ಮಾಹಿತಿಯನ್ನು ರಾಜ್ಯ ಸರ್ಕಾರ ಹಂಚಿಕೊಂಡಿದೆ.

    ಮಾರ್ಚ್ 9ರಂದು ಕಚೇರಿಗೆ ಸೋಂಕಿತ ವ್ಯಕ್ತಿ ಕಚೇರಿಗೆ ಹೋಗಿದ್ದ. ಕಚೇರಿಯಲ್ಲಿ 154 ಉದ್ಯೋಗಿಗಳಿದ್ದರೂ, ನಾಲ್ವರ ಜೊತೆ ಮಾತ್ರ ಸಂಪರ್ಕದಲ್ಲಿದ್ದ. ಮಾರ್ಚ್ 10 ರಂದು ಸಂಕಿತ ವ್ಯಕ್ತಿಗೆ ಅನಾರೋಗ್ಯ ಕಂಡು ಬಂದಿದ್ದು ಆಸ್ಪತ್ರೆಗೆ ದಾಖಲಾಗಿದ್ದಾನೆ. ಸೋಂಕಿತನ ತಂದೆ, ತಾಯಿ, ಸಹೋದರ ಸೇರಿ 7 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, ಸೋಂಕಿತ ಪಯಣಿಸಿದ್ದ ಇಂಡಿಗೋ ವಿಮಾನದ ಸಹ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಲು ಸಿದ್ಧತೆ ನಡೆದಿದೆ. ಬೆಂಗಳೂರಿನಲ್ಲಿ ರಿಕ್ಷಾದಲ್ಲಿ ಸೋಂಕಿತ ವ್ಯಕ್ತಿ ಸಂಚರಿಸಿದ್ದು ರಿಕ್ಷಾ ಚಾಲಕನ ಮನೆಯಲ್ಲಿ ಮೂವರು ಸದಸ್ಯರಿದ್ದಾರೆ.

    ಇವತ್ತು ಫ್ರಾನ್ಸಿನಿಂದ ಬೆಂಗಳೂರಿಗೆ ಬಂದಿದ್ದ ಮಹಿಳೆಯೊಬ್ಬರಿಗೆ ಸೋಂಕು ಶಂಕೆ ಹಿನ್ನೆಲೆಯಲ್ಲಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮೂಲಕ ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ಬೆಂಗಳೂರಿನ 12 ಮಂದಿ, ಹಾಸನದಲ್ಲಿ ಇಬ್ಬರು ಮತ್ತು ದಕ್ಷಿಣ ಕನ್ನಡದಲ್ಲಿ ಮೂವರು ಮತ್ತು ಬಳ್ಳಾರಿಯಲ್ಲಿ ಒಬ್ಬರ ಮೇಲೆ ನಿಗಾ ಇಡಲಾಗಿದೆ.

  • 154 ಮಂದಿ ಉದ್ಯೋಗಿಗಳಿರುವ ಕಚೇರಿಗೆ ಹಾಜರಾಗಿ ತೆರಳಿದ್ದ ಕೊರೊನಾ ಪೀಡಿತ

    154 ಮಂದಿ ಉದ್ಯೋಗಿಗಳಿರುವ ಕಚೇರಿಗೆ ಹಾಜರಾಗಿ ತೆರಳಿದ್ದ ಕೊರೊನಾ ಪೀಡಿತ

    – ಬೆಂಗ್ಳೂರಿನಲ್ಲಿ 5ಕ್ಕೆ ಏರಿತು ಕೊರೊನಾ ಕೇಸ್
    – ನಗರಕ್ಕೆ ಮರಳಿದ ದಿನವೇ ಆಸ್ಪತ್ರೆಗೆ ದಾಖಲು

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಕೊರೊನಾ ವೈರಸ್ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ನಗರದಲ್ಲಿ ಕೊರೊನಾ ಪೀಡಿತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.

    ಕೊರೊನಾ ವೈರಸ್ ಪತ್ತೆಯಾಗಿರುವ ವ್ಯಕ್ತಿಯನ್ನು ಪ್ರತ್ಯೇಕ ವಾರ್ಡ್ ನಲ್ಲಿಟ್ಟು ಚಿಕಿತ್ಸೆ ಕೊಡಲಾಗುತ್ತದೆ. ಈ ವ್ಯಕ್ತಿಯು ಮೂಲತಃ ಮುಂಬೈ ನಿವಾಸಿಯಾಗಿದ್ದು, ಗ್ರೀಸ್‍ನಿಂದ ಮುಂಬೈಗೆ ಮಾರ್ಚ್ 6 ರಂದು ಬಂದಿದ್ದ. ಅಲ್ಲಿಂದ ಮಾರ್ಚ್ 8ರಂದು ಬೆಂಗಳೂರಿಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ. ಅಷ್ಟೇ ಅಲ್ಲದೇ ಮಾರ್ಚ್ 9ಕ್ಕೆ ಆತ ಕಚೇರಿಗೆ ಹೋಗಿದ್ದ. ಆಗ ಆತ ಕೇವಲ 4 ಜನ ಆತ್ಮೀಯ ಸ್ನೇಹಿತರನ್ನು ಮಾತನಾಡಿಸಿ ಮನೆಗೆ ವಾಪಸ್ ತೆರಳಿದ್ದ. ಇದನ್ನೂ ಓದಿ: ಕೋಳಿಯಿಂದ ಕೊರೊನಾ ಬರಲ್ಲ ಅಂತಿದಾರೆ, ಆದರೂ ಬೆಲೆ ಕಡಿಮೆಯಾಗಿದೆ- ಈಶ್ವರಪ್ಪ

    ಕೊರೊನಾ ವೈರಸ್ ಪತ್ತೆಯಾದ ವ್ಯಕ್ತಿಯ ಕಚೇರಿಯಲ್ಲಿ 154 ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಆದರೆ ಆತ ಯಾರ ಸಂಪರ್ಕಕ್ಕೂ ಸಿಗದೇ ಕೆಲವೇ ಗಂಟೆಯಲ್ಲಿ ವಾಪಸ್ ಬಂದಿದ್ದ ಎನ್ನುವ ವಿಚಾರ ಈಗ ಲಭ್ಯವಾಗಿದೆ.

    ಮನೆಗೆ ಮರಳಿದ ದಿನವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನ ಸೋದರ ಮಾತ್ರ ಬೆಂಗಳೂರಿನಲ್ಲಿ ಇದ್ದು ಜೊತೆಯಲ್ಲಿ ವಾಸ ಮಾಡುತ್ತಿದ್ದಾನೆ. ಪತ್ನಿ, ತಂದೆ, ತಾಯಿ ಎಲ್ಲರೂ ಮುಂಬೈನಲ್ಲಿ ನೆಲೆಸಿದ್ದಾರೆ.

    ಆತ ಬೆಂಗಳೂರಿಗೆ ಬಂದಾಗ ಆಟೋ ಮೂಲಕ ಸಂಚರಿಸಿದ್ದ. ಆ ಆಟೋ ಡ್ರೈವರ್ ಮನೆಯಲ್ಲಿ ಮೂವರು ಸದಸ್ಯರಿದ್ದಾರೆ. ಹೀಗಾಗಿ ಎಲ್ಲಾ ರೀತಿಯ ಮಾಹಿತಿ ಕಲೆ ಹಾಕಿ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದ್ದಾರೆ.

  • ಏ.15ರವರೆಗೆ ವಿದೇಶಿ ಆಟಗಾರರು ಐಪಿಎಲ್ ಆಡಲ್ಲ

    ಏ.15ರವರೆಗೆ ವಿದೇಶಿ ಆಟಗಾರರು ಐಪಿಎಲ್ ಆಡಲ್ಲ

    – ಮಾರ್ಚ್ 14ರಂದು ಐಪಿಎಲ್ ಭವಿಷ್ಯ ನಿರ್ಧಾರ

    ಮುಂಬೈ: ಮಹಾಮಾರಿ ಕೊರಾನಾ ವೈರಸ್‍ನಿಂದಾಗಿ ಸರ್ಕಾರ ವಿದೇಶಿ ಪ್ರಯಾಣಿಕರ ವೀಸಾಗಳ ಮೇಲೆ ನಿರ್ಬಂಧ ವಿಧಿಸಿದೆ. ಇದರಿಂದಾಗಿ ಏಪ್ರಿಲ್ 15ರವರೆಗೂ ಐಪಿಎಲ್‍ಗೆ ಯಾವುದೇ ವಿದೇಶಿ ಆಟಗಾರರು ಲಭ್ಯವಿರುವುದಿಲ್ಲ ಎಂದು ಬಿಸಿಸಿಐನ ಉನ್ನತ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

    ಐಪಿಎಲ್‍ನಲ್ಲಿ ಆಡುವ ವಿದೇಶಿ ಆಟಗಾರರು ಬಿಸಿನೆಸ್ ವೀಸಾ ವಿಭಾಗದಲ್ಲಿ ಬರುತ್ತಾರೆ. ಹೀಗಾಗಿ ಸರ್ಕಾರದ ನಿರ್ದೇಶನದಂತೆ ಅವರು ಏಪ್ರಿಲ್ 15ರವರೆಗೆ ಬರಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸಲು ಬಂದಿದ್ದ ಅಭಿಮಾನಿಗೆ ಕೊರೊನಾ

    ಏಪ್ರಿಲ್ 15ರವರೆಗೆ ವಿದೇಶಿ ಪ್ರವಾಸಿಗರಿಗೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದೆ. ಇದುವರೆಗೂ ನೀಡಲಾಗಿರುವ ವೀಸಾಗಳನ್ನ ರದ್ದುಗೊಳಿಸುವಂತೆ ಆದೇಶಿಸಲಾಗಿದೆ. ದಕ್ಷಿಣ ಕೊರಿಯಾ, ಇಟಲಿಗೆ ಏರ್ ಇಂಡಿಯಾ ವಿಮಾನ ಹಾರಾಟ ರದ್ದು ಮಾಡಲಾಗಿದ್ದು, ಅಮೆರಿಕಕ್ಕೆ ಯುರೋಪ್ (ಬ್ರಿಟನ್ ಹೊರತುಪಡಿಸಿ) ನಾಗರಿಕರು ಪ್ರವೇಶಕ್ಕೆ ಸರ್ಕಾರ ನಿರ್ಬಂಧ ಹೇರಿದೆ.

    ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ 15 ರವರೆಗೆ ರಾಜತಾಂತ್ರಿಕ, ಸರ್ಕಾರದ ಕೆಲ ವಿಭಾಗಗಳನ್ನು ಹೊರತುಪಡಿಸಿ ಅಸ್ತಿತ್ವದಲ್ಲಿರುವ ಎಲ್ಲಾ ವಿದೇಶಿ ವೀಸಾಗಳನ್ನು ರದ್ದುಗೊಳಿಸುವಂತೆ ಆದೇಶ ನೀಡಲಾಗಿದೆ. ಇದನ್ನೂ ಓದಿ: ಕೊರೊನಾ ಎಫೆಕ್ಟ್-ಮಹಾರಾಷ್ಟ್ರದಲ್ಲಿ ಐಪಿಎಲ್ ಟಿಕೆಟ್ ಮಾರಾಟ ನಿಷೇಧ

    ಖಾಲಿ ಮೈದಾನದಲ್ಲಿ ಐಪಿಎಲ್:
    ಬಿಸಿಸಿಐ ಆಡಳಿದ ಮಂಡಳಿ ಮಾರ್ಚ್ 14ರಂದು ಮುಂಬೈನಲ್ಲಿ ಸಭೆ ನಡೆಸಲಿದ್ದು, ಈ ವೇಳೆ ಐಪಿಎಲ್ ಭವಿಷ್ಯವು ನಿರ್ಧರಿಸಲಾಗುತ್ತದೆ. ಅಷ್ಟೇ ಅಲ್ಲದೆ ಮಾರ್ಚ್ 29ರಿಂದ ಐಪಿಎಲ್ ನಡೆದರೂ ಖಾಲಿ ಕ್ರೀಡಾಂಗಣಗಳಲ್ಲಿ ಆಡುವುದು ಒಂದು ಆಯ್ಕೆಯಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.

  • ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸಲು ಬಂದಿದ್ದ ಅಭಿಮಾನಿಗೆ ಕೊರೊನಾ

    ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸಲು ಬಂದಿದ್ದ ಅಭಿಮಾನಿಗೆ ಕೊರೊನಾ

    ಮೆಲ್ಬರ್ನ್: ಇತಿಹಾಸ ಸೃಷ್ಟಿಸಿದ್ದ ಈ ಬಾರಿಯ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯ ಈಗ ಅಪಖ್ಯಾತಿಗೆ ಗುರಿಯಾಗಿದೆ.

    ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯ ಮಾರ್ಚ್ 8ರಂದು ಮೆಲ್ಬರ್ನ್ ನಲ್ಲಿ ನಡೆದಿತ್ತು. ಈ ವೇಳೆ ಪಂದ್ಯ ನೋಡಲು ಬಂದಿದ್ದ ಓರ್ವ ಕ್ರಿಕೆಟ್ ಅಭಿಮಾನಿಯಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ.

    ಮೆಲ್ಬರ್ನ್ ಸ್ಟೇಡಿಯಂನ ಉತ್ತರ ಭಾಗದ 2ನೇ ಹಂತದ ಸ್ಟ್ಯಾಂಡ್‍ನ ಎನ್ 42 ಸೀಟ್‍ನಲ್ಲಿ ಕುಳಿತಿದ್ದ ವ್ಯಕ್ತಿಗೆ ಕೊರೊನಾ ವೈರಸ್ ಇರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆ (ಡಿಎಚ್‍ಹೆಚ್‍ಎಸ್)ಯು ಪಂದ್ಯ ವೀಕ್ಷಣೆಗೆ ಆಗಮಿಸಿದ್ದ ಪ್ರೇಕ್ಷಕರು ದಯವಿಟ್ಟು ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ವಿನಂತಿಸಿಕೊಂಡಿದೆ ಎಂದು ವರದಿಯಾಗಿದೆ.

    ಮೆಲ್ಬರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ಪಂದ್ಯ ವೀಕ್ಷಿಸಲು 86,174 ಮಂದಿ ಆಗಮಿಸಿದ್ದರು. ಈ ಮೂಲಕ ಅತಿ ಹೆಚ್ಚು ಮಂದಿ ವೀಕ್ಷಿಸಿದ ಮಹಿಳಾ ಕ್ರಿಕೆಟ್ ಪಂದ್ಯ ಎಂಬ ದಾಖಲೆಯನ್ನು ಬರೆದಿದೆ. ಇದರ ಜೊತೆಗೆ ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ಅಭಿಮಾನಿಗಳು ವೀಕ್ಷಿಸಿದ ಮಹಿಳಾ ಪಂದ್ಯ ಎಂಬ ಮತ್ತೊಂದು ದಾಖಲೆಯನ್ನು ಬರೆದಿದೆ.

    ಮೆಲ್ಬರ್ನ್ ಸ್ಟೇಡಿಯಂ 1,00,024 ಆಸನ ಸಾಮರ್ಥ್ಯ ಹೊಂದಿದ್ದು ಇಲ್ಲಿಯವರೆಗೆ ವಿಶ್ವದ ಅತಿ ದೊಡ್ಡ ಸ್ಟೇಡಿಯಂ ಎಂಬ ಹೆಗ್ಗಳಿಕೆ ಪಡೆದುಕೊಂಡಿತ್ತು. ಈಗ ಗುಜರಾತಿನ ಅಹಮದಾಬಾದಿನ ಮೊಟೆರಾ ಸ್ಟೇಡಿಯಂ ವಿಶ್ವದ ನಂಬರ್ ಒನ್ ಸ್ಟೇಡಿಯಂ ಆಗಿದ್ದು, 1.10 ಲಕ್ಷ ಮಂದಿ ಕುಳಿತು ಪಂದ್ಯ ವೀಕ್ಷಿಸಬಹುದಾಗಿದೆ.

    185 ರನ್ ಗಳ ಗುರಿಯನ್ನು ಬೆನ್ನಟ್ಟಿದ ಭಾರತ 19.1 ಓವರಿನಲ್ಲಿ 99 ರನ್‍ಗಳಿಗೆ ಸರ್ವಪತನ ಕಂಡಿತು. 85 ರನ್ ಗಳಿಂದ ಗೆಲ್ಲುವ ಮೂಲಕ ಆಸ್ಟ್ರೇಲಿಯಾ 5ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ ಭಾರತ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು.