Tag: Coronavirus

  • ಪುಣ್ಯಕ್ಷೇತ್ರ ಕುಕ್ಕೆ, ಧರ್ಮಸ್ಥಳಕ್ಕೆ ತಟ್ಟದ ಕೊರೊನಾ ಎಫೆಕ್ಟ್

    ಪುಣ್ಯಕ್ಷೇತ್ರ ಕುಕ್ಕೆ, ಧರ್ಮಸ್ಥಳಕ್ಕೆ ತಟ್ಟದ ಕೊರೊನಾ ಎಫೆಕ್ಟ್

    ಮಂಗಳೂರು: ಕೊರೊನಾ ಎಫೆಕ್ಟ್ ರಾಜ್ಯದ ಪ್ರಮುಖ ದೇವಸ್ಥಾನಗಳಿಗೆ ತಟ್ಟಿಲ್ಲ. ಕುಕ್ಕೆ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳದಲ್ಲಿ ಎಂದಿನಂತೆ ಭಕ್ತರ ದಟ್ಟಣೆ ಕಂಡುಬಂದಿದೆ.

    ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರ ಸಂಖ್ಯೆ ಎಂದಿಗಿಂತ ಹೆಚ್ಚಿದ್ದು, ದೇವಸ್ಥಾನದ ರಥಬೀದಿ ಭಕ್ತರಿಂದ ತುಂಬಿ ಹೋಗಿದೆ. ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಉರಿ ಬಿಸಿಲಿನಲ್ಲಿಯೂ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದಿದ್ದಾರೆ. ಕೊರೊನಾ ಹಿನ್ನೆಲೆ ರಜೆ ಸಿಕ್ಕ ಕಾರಣ ಭಕ್ತರು ತೀರ್ಥ ಕ್ಷೇತ್ರಗಳ ಪರ್ಯಟನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ನಾವು ಇಟಲಿಗೆ ಹೋಗಿಲ್ಲ, ಪ್ಯಾರಿಸ್ ಪ್ರವಾಸ ರದ್ದು ಮಾಡಿದ್ದೇವೆ: ಚಂದನ್

    ಮಂಗಳೂರಿನಲ್ಲಿ ಶಾಲಾ, ಕಾಲೇಜುಗಳು ಪೂರ್ತಿಯಾಗಿ ಬಂದ್ ಆಗಿವೆ. ಮಾಲ್, ರೆಸ್ಟೋರೆಂಟ್ ಕೂಡ ಸರ್ಕಾರದ ಆದೇಶದಂತೆ ಬಂದ್ ಆಗಿವೆ. ಬೆಳಗ್ಗೆ ಜಿಲ್ಲಾಡಳಿತದ ಸೂಚನೆ ಬಂದಿಲ್ಲವೆಂದು ಮಾಲ್ ಓಪನ್ ಮಾಡಲು ತಯಾರಿ ನಡೆದಿತ್ತು. ಬಳಿಕ ಎಚ್ಚೆತ್ತ ಜಿಲ್ಲಾಧಿಕಾರಿ ನೋಟೀಸ್ ಜಾರಿ ಮಾಡಿ ಬಂದ್ ಮಾಡಿಸಿದರು. ಇದನ್ನೂ ಓದಿ: ಇಟಲಿ, ಡೆನ್ಮಾರ್ಕ್ ಬಳಿಕ ಕುವೈತ್ ಸಂಪೂರ್ಣ ಬಂದ್

    ಈ ನಡುವೆ ಸರ್ಕಾರ ಆದೇಶ ಇದ್ದರೂ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯೊಂದು ತೆರೆದಿದ್ದು ಕಂಡುಬಂತು. ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸಿದ್ದರಿಂದ ಶಾಲೆ ನಡೆಸಬೇಕಾಯಿತು ಅಂತ ಶಿಕ್ಷಕರು ಸಮಜಾಯಿಷಿ ನೀಡಿದರು. ಮಾಧ್ಯಮದವರು ಶಾಲೆಗೆ ಬಂದಿದ್ದನ್ನು ನೋಡಿ, ಮಕ್ಕಳನ್ನು ಮನೆಗೆ ಕಳಿಸಿದ ಘಟನೆ ನಡೆಯಿತು.

  • ಬೌಂಡರಿ ದಾಟಿದ ಬಾಲ್ ಕೊಡುವವರೇ ಇಲ್ಲ- ಆಟಗಾರರು ಸುಸ್ತೋ ಸುಸ್ತು

    ಬೌಂಡರಿ ದಾಟಿದ ಬಾಲ್ ಕೊಡುವವರೇ ಇಲ್ಲ- ಆಟಗಾರರು ಸುಸ್ತೋ ಸುಸ್ತು

    – ಕೊನೆಗೆ ಕಿವೀಸ್, ಆಸೀಸ್ ಸರಣಿ ರದ್ದು
    – ಕೊರೊನಾ ಎಫೆಕ್ಟ್: ಖಾಲಿ ಮೈದಾನದಲ್ಲಿ ನಡೆದ ಪಂದ್ಯ
    – ಆಸೀಸ್‍ಗೆ 71 ರನ್‍ಗಳಿಂದ ಜಯ

    ಸಿಡ್ನಿ: ಮಹಾಮಾರಿ ಕೊರೊನಾವೈರಸ್ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ 3 ಏಕದಿನ ಸರಣಿಯನ್ನು ರದ್ದುಗೊಳಿಸಲಾಗಿದೆ.

    ಸಿಡ್ನಿಯ ಖಾಲಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ 71 ರನ್‍ಗಳಿಂದ ಜಯ ಸಾಧಿಸಿತು. ಕೊರೊನಾ ವೈರಸ್ ಎಫೆಕ್ಟ್ ನಿಂದಾಗಿ ಇಂದು ಖಾಲಿ ಮೈದಾನದಲ್ಲಿ ಏಕದಿನ ಸರಣಿಯ ಮೊದಲ ಪಂದ್ಯ ನಡೆಯಿತು. ಆದರೆ ಬೌಂಡರಿ ಹಾಗೂ ಸಿಕ್ಸ್ ದಾಟಿದ ಬಾಲ್ ಕೊಡುವವರೆ ಇರಲಿಲ್ಲ. ಇದರಿಂದಾಗಿ ಆಟಗಾರರು ಭಾರೀ ಫಜೀತಿಗೆ ಸಿಲುಕಿದರು. ಪರಿಣಾಮ ಕೊನೆಗೆ ಸರಣಿಯನ್ನೇ ರದ್ದುಗೊಳಿಸಲಾಯಿತು.

    https://twitter.com/kickstarkiran/status/1238342029744025602

    ಸರಣಿ ರದ್ದಾದ ನಂತರ ಕಿವಿ ತಂಡವು ತಮ್ಮ ದೇಶಕ್ಕೆ ಮರಳಿತು. ಸಿಡ್ನಿ ಮೈದಾನದಲ್ಲಿ ನ್ಯೂಜಿಲೆಂಡ್ ತಂಡವು ಸತತ ಆರನೇ ಏಕದಿನ ಪಂದ್ಯವನ್ನು ಕಳೆದುಕೊಂಡಿತು. ಮತ್ತೊಂದೆಡೆ, ಸತತ 5 ಏಕದಿನ ಪಂದ್ಯಗಳನ್ನು ಸೋತ ನಂತರ ಆಸ್ಟ್ರೇಲಿಯಾ ಪಂದ್ಯವನ್ನು ಗೆದ್ದುಕೊಂಡಿತು.

    ಸಿಡ್ನಿ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 7 ವಿಕೆಟ್‍ಗೆ 258 ರನ್ ಗಳಿಸಿತು. ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡವು 187 ರನ್‍ಗೆ ಸರ್ವಪತನ ಕಂಡಿತು. ಆಸೀಸ್ ವೇಗದ ಬೌಲರ್ ಮಿಚೆಲ್ ಮಾರ್ಷ್ 7 ಓವರ್ ಬೌಲಿಂಗ್ ಮಾಡಿ 27 ರನ್ ನೀಡಿ 3 ವಿಕೆಟ್ ಪಡೆದು ಪಂದ್ಯ ಶ್ರೇಷ್ಠಕ್ಕೆ ಭಾಜನರಾದರು.

    ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ 67 ರನ್ (88 ಎಸೆತ, 9 ಬೌಂಡರಿ) ಮತ್ತು ಆರನ್ ಫಿಂಚ್ 60 ರನ್ (75 ಎಸೆತ, 3 ಬೌಂಡರಿ, 2 ಸಿಕ್ಸರ್) ಚಚ್ಚಿದರು. ಆದರೆ ಇವರ ಬಳಿಕ ಬಂದ ಇಬ್ಬರು ಬ್ಯಾಟ್ಸ್‍ಮನ್‍ಗಳು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಹೀಗಾಗಿ ನಾಲ್ಕನೇ ವಿಕೆಟ್‍ಗಳಿಗೆ ಆಸೀಸ್ 165 ರನ್ ಗಳಿಸಿತು. ಬಳಿಕ ಮಾರ್ನಸ್ ಲ್ಯಾಬುಸ್ಚಾಗ್ನೆ 56 ರನ್ ಮತ್ತು ಮಿಚೆಲ್ ಮಾರ್ಷ್ 27 ರನ್ ಗಳಿಸಿ ತಂಡದ ರನ್ ಮೊತ್ತವನ್ನು ಹೆಚ್ಚಿಸಿದರು.

    ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ಬಹಳ ನಿಧಾನವಾಗಿ ಆಟ ಆರಂಭಿಸಿತು. ತಂಡವು ಮೊದಲ 10 ಓವರ್ ಗಳಲ್ಲಿ ಕೇವಲ 28 ರನ್ ಗಳಿಸಿ ಒಂದು ವಿಕೆಟ್ ಕಳೆದುಕೊಂಡಿತು. ಮಾರ್ಟಿನ್ ಗುಪ್ಟಿಲ್ 40 ರನ್ (73 ಎಸೆತ, 1 ಸಿಕ್ಸ್, 1 ಬೌಂಡರಿ) ಗಳಿಸಿ ವಿಕೆಟ್ ಒಪ್ಪಿಸಿದರು. 96 ರನ್‍ಗಳಿಗೆ ಐದು ವಿಕೆಟ್‍ಗಳನ್ನು ಕಳೆದುಕೊಂಡಿದ್ದ ಕಿವೀಸ್ ಪಡೆಗೆ ಲಾಥಮ್ ಮತ್ತು ಗ್ರ್ಯಾಂಡ್‍ಹೋಮ್ ಆಸರೆಯಾದರು. ಈ ಜೋಡಿಯು ವಿಕೆಟ್‍ಗೆ 51 ರನ್ ಪೇರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿತು.

    ಲಾಥಮ್ 38 ರನ್ ಹಾಗೂ ಗ್ರ್ಯಾಂಡ್‍ಹೋಮ್ 25 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಆಟಗಾರರು ಬಹುಬೇಗ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ಮರಳಿದರು. ಪರಿಣಾಮ ನ್ಯೂಜಿಲೆಂಡ್ 41 ಓವರ್ ಗಳಲ್ಲಿ 187 ರನ್‍ಗಳಿಗೆ ಸರ್ವಪತನ ಕಂಡಿತು.

  • ಕೇರಳ ಆಸ್ಪತ್ರೆಯಿಂದ ಓಡಿ ಹೋಗಿದ್ದ ಅಮೆರಿಕ ದಂಪತಿ ಕೊನೆಗೂ ಪತ್ತೆ

    ಕೇರಳ ಆಸ್ಪತ್ರೆಯಿಂದ ಓಡಿ ಹೋಗಿದ್ದ ಅಮೆರಿಕ ದಂಪತಿ ಕೊನೆಗೂ ಪತ್ತೆ

    – ಅಲೆಪ್ಪಿ ಆಸ್ಪತ್ರೆಯಿಂದ ಶುಕ್ರವಾರ ಪರಾರಿ
    – ದಂಪತಿಗಾಗಿ ಶೋಧ ಕಾರ್ಯ ನಡೆಸಿದ್ದ ಪೊಲೀಸರು

    ತಿರುವನಂತಪುರಂ: ಆಸ್ಪತ್ರೆಗೆ ದಾಖಲಾದ ಬಳಿಕ ಪರಾರಿಯಾಗಿದ್ದ ಅಮೆರಿಕ ಪ್ರಜೆಗಳು ಕೊನೆಗೂ ಪತ್ತೆಯಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಅಮೆರಿಕದ ಮೂಲದ ದಂಪತಿ ದೋಹಾ ಮೂಲಕ ಮಾರ್ಚ್ 9 ರಂದು ಕೇರಳದ ಕೊಚ್ಚಿಗೆ ಬಂದಿದ್ದರು. ದಂಪತಿ ಪೈಕಿ ಒಬ್ಬರಲ್ಲಿ ಕೊರೊನಾ ಲಕ್ಷಣದ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಲೆಪ್ಪಿ ಮೆಡಿಕಲ್ ಕಾಲೇಜಿಗೆ ದಾಖಲಾಗಿದ್ದರು.

    ಆಸ್ಪತ್ರೆ ದಾಖಲಾಗುವಾಗ ನಾವು ಅಮೆರಿಕದ ಪ್ರಜೆಗಳು, ಕಳೆದ ಮೂರು ವರ್ಷಗಳಿಂದ ಲಂಡನ್ ನಲ್ಲಿ ನೆಲೆಸಿದ್ದೇವೆ ಎಂದು ತಿಳಿಸಿದ್ದರು. ಆಸ್ಪತ್ರೆಯ ಸಿಬ್ಬಂದಿ ನಿಮ್ಮನ್ನು  ಕೊರೊನಾ ಪರೀಕ್ಷೆಗೆ ಒಳಪಡಿಸಬೇಕು. ಪ್ರತ್ಯೇಕ ನಿಗಾದಲ್ಲಿರಬೇಕು ಎಂದು ಸೂಚಿಸಿದ್ದರು. ಅದರೆ ದಂಪತಿ ಕೊರೊನಾ ಪರೀಕ್ಷೆ ನಡೆಸಲು ಅನುಮತಿ ನೀಡಿರಲಿಲ್ಲ.

    ಈ ಸಂಬಂಧ ಪೊಲೀಸರು ಮಾಹಿತಿ ನೀಡಿ ಆಸ್ಪತ್ರೆ ಸಿಬ್ಬಂದಿ ಹೆಚ್ಚಿನ ಪರೀಕ್ಷೆಗೆ ವೈರಾಲಜಿ ಆಸ್ಪತ್ರೆಗೆ ದಾಖಲಾಗಬೇಕು, ಪ್ರತ್ಯೇಕ ನಿಗಾದಲ್ಲಿರಬೇಕು ಎಂದು ಸೂಚಿಸಿದ್ದರು. ಈ ಮಧ್ಯೆ ದಂಪತಿ ಯಾರಿಗೂ ತಿಳಿಸದೇ ಶುಕ್ರವಾರ ಆಸ್ಪತ್ರೆಯಿಂದ ಪರಾರಿಯಾಗಿದ್ದರು. ನಾಪತ್ತೆಯಾದ ಈ ದಂಪತಿ ಪತ್ತೆ ಹಚ್ಚಲು ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದರು.

    ಇಂದು ಬೆಳಗ್ಗೆ ಈ ದಂಪತಿಯನ್ನು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಪತ್ತೆ ಮಾಡಲಾಗಿದ್ದು, ಈಗ ಆಸ್ಪತ್ರೆಗೆ ದಾಖಲಿಸಿ ನಿಗಾ ಇಡಲಾಗಿದೆ. ದಂಪತಿ ಕ್ಯಾಬ್ ಮೂಲಕ ಪ್ರಯಾಣಿಸಿದ್ದು ಕ್ಯಾಬ್ ಚಾಲಕನನ್ನು ಸಹ ದಾಖಲಿಸಿ ನಿಗಾ ಇಡಲಾಗಿದೆ.

    ಕೇರಳದಲ್ಲಿ 19 ಮಂದಿ ಕೊರೊನಾ ಪೀಡಿತರಿದ್ದಾರೆ. ಶುಕ್ರವಾರ ಒಂದು ಕೇಸ್ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸಂಖ್ಯೆ 19ಕ್ಕೆ ಏರಿಕೆ ಆಗಿತ್ತು.

  • ಬೆಂಗ್ಳೂರಿನ ಇನ್ಫೋಸಿಸ್ ಸಿಬ್ಬಂದಿಗೆ ಕೊರೊನಾ ಬಂದಿಲ್ಲ

    ಬೆಂಗ್ಳೂರಿನ ಇನ್ಫೋಸಿಸ್ ಸಿಬ್ಬಂದಿಗೆ ಕೊರೊನಾ ಬಂದಿಲ್ಲ

    ಬೆಂಗಳೂರು: ಭಾರತದ ಐಟಿ ದಿಗ್ಗಜ ಇನ್ಫೋಸಿಸ್ ಕಂಪನಿಯ ಓರ್ವ ಉದ್ಯೋಗಿಗೆ ಕೊರೊನಾ ಬಂದಿದ್ದ ಶಂಕೆ ವ್ಯಕ್ತವಾಗಿತ್ತು. ಆದರೆ ಫಲಿತಾಂಶ ನಗೆಟಿವ್ ಬಂದಿದ್ದು ಯಾರು ಯಾವುದೇ ಸಿಬ್ಬಂದಿ ಭಯಪಡಬೇಕಾದ ಅಗತ್ಯವಿಲ್ಲ.

    ಕೊರೊನಾ ಪೀಡಿತ ವ್ಯಕ್ತಿಯ ಜೊತೆ ಇನ್ಫೋಸಿಸ್ ಸಿಬ್ಬಂದಿಯೊಬ್ಬರು ಸಂಪರ್ಕಕ್ಕೆ ಬಂದಿದ್ದರು. ಆದರೆ ರಕ್ತದ ಫಲಿತಾಂಶದಲ್ಲಿ ನೆಗೆಟಿವ್ ಬಂದಿದೆ ಎನ್ನುವ ವಿಚಾರ ಈಗ ಲಭ್ಯವಾಗಿದೆ.

    ಕರ್ನಾಟಕ ಸರ್ಕಾರ ಈಗಾಗಲೇ ಐಟಿ ಕಂಪನಿಗಳಿಗೆ ಮನೆಯಿಂದಲೇ ಉದ್ಯೋಗಿಗಳಿಗೆ ಕೆಲಸ ಮಾಡಿಸುವಂತೆ ಮನವಿ ಮಾಡಿಕೊಂಡಿದೆ. ಕರ್ನಾಟಕದಲ್ಲಿ ಕಲಬುರಗಿಯ ಮೃತ ವ್ಯಕ್ತಿ ಸೇರಿ 6 ಮಂದಿ ಕೊರೊನಾ ವೈರಸ್ ಬಂದಿದೆ. ಈ ಪೈಕಿ ಬೆಂಗಳೂರಿನ 5 ಮಂದಿ ಆಸ್ಪತ್ರೆಯಲ್ಲಿ ಪ್ರತ್ಯೇಕ ನಿಗಾದಲ್ಲಿದ್ದಾರೆ.

    ಆರಂಭದಲ್ಲಿ ಡೆಲ್ ಕಂಪನಿಯ ಉದ್ಯೋಗಿಗೆ ಕೊರೊನಾ ಬಂದಿತ್ತು. ನಂತರ ಆತನ ಪತ್ನಿ ಮತ್ತು ಮಗಳಿಗೆ ನಡೆಸಿದ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿತ್ತು. ಮೈಂಡ್ ಟ್ರೀ ಕಂಪನಿಯ ಉದ್ಯೋಗಿಯದ್ದು ಎರಡನೇ ಕೇಸ್ ಆಗಿದ್ದರೆ ಗುರುವಾರ ಗೂಗಲ್ ಕಂಪನಿಯ ಉದ್ಯೋಗಿಗೆ ಕೊರೊನಾ ಬಂದಿರುವುದು ದೃಢಟ್ಟಿತ್ತು.

    ಕರ್ನಾಟಕದಲ್ಲಿ ಕೊರೊನಾ ಶಂಕಿತರ ಸಂಖ್ಯೆ 32ಕ್ಕೆ ಏರಿದ್ದು, ಶುಕ್ರವಾರ ಒಂದೇ ದಿನ 19 ಮಂದಿ ದಾಖಲಾಗಿದ್ದಾರೆ. ಗುರುವಾರ ಮೃತಪಟ್ಟ ವ್ಯಕ್ತಿ ಸೇರಿದಂತೆ ಒಟ್ಟು 6 ಮಂದಿಗೆ ಕೊರೊನಾ ಬಂದಿದ್ದು, ಶುಕ್ರವಾರ ಹೊಸದಾಗಿ ಯಾವುದೇ ಕೇಸ್ ಪತ್ತೆಯಾಗಿಲ್ಲ. 5 ಮಂದಿ ಕೊರೊನಾ ಪೀಡಿತರ ಆರೋಗ್ಯ ಸ್ಥಿರವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

    ಕಲಬುರಗಿ, ದಕ್ಷಿಣ ಕನ್ನಡ, ಹಾಸನದಲ್ಲಿ ನಾಲ್ಕು ಮಂದಿ, ಬೆಂಗಳೂರಿನಲ್ಲಿ 3, ಉಡುಪಿಯಲ್ಲಿ 2, ಚಿಕ್ಕಮಗಳೂರು ಮತ್ತು ಕೊಡಗಿನಲ್ಲಿ ತಲಾ ಒಬ್ಬರು ದಾಖಲಾಗಿದ್ದಾರೆ. ಈ ಪೈಕಿ ಬೆಂಗಳೂರಿನಲ್ಲಿ 3 ಮಂದಿ ಹಾಸನದಲ್ಲಿ ಇಬ್ಬರು ಡಿಸ್ಚಾರ್ಜ್ ಆಗಿದ್ದಾರೆ.

    ಒಟ್ಟು ಬೆಂಗಳೂರು ಮತ್ತು ದಕ್ಷಿಣ ಕನ್ನಡದಲ್ಲಿ 7 ಮಂದಿ, ಉಡುಪಿಯಲ್ಲಿ 5, ಹಾಸನ ಮತ್ತು ಕಲಬುರಗಿಯಲ್ಲಿ 4 ಮಂದಿ ಮೇಲೆ ನಿಗಾ ಇಡಲಾಗಿದೆ. ಕಲಬುರಗಿಯಲ್ಲಿ ಮೃತ ವ್ಯಕ್ತಿ ಹಲವು ಜನರನ್ನು ಸಂಪರ್ಕಿಸಿದ್ದ. ಈ ಪೈಕಿ 30 ಮಂದಿ ಖಾಸಗಿ ಆಸ್ಪತ್ರೆಯಲ್ಲಿದ್ದಾರೆ. 30 ಜನರಲ್ಲಿ 4 ಮಂದಿ ಮೇಲೆ ಪ್ರತ್ಯೇಕ ನಿಗಾ ವಹಿಸಲಾಗಿದ್ದು ರಕ್ತದ ಮಾದರಿಯನ್ನು ಸಂಗ್ರಹಿಸಿದ್ದು, ಫಲಿತಾಂಶ ಬರಬೇಕಿದೆ.

  • ಚೀನಾದಿಂದ ಭಾರತಕ್ಕೆ ಬಂದು ರೋಗ ಹರಡಲು ಇಷ್ಟವಿಲ್ಲ- ಕಾಳಜಿ ಮೆರೆದ ಕನ್ನಡಿಗ

    ಚೀನಾದಿಂದ ಭಾರತಕ್ಕೆ ಬಂದು ರೋಗ ಹರಡಲು ಇಷ್ಟವಿಲ್ಲ- ಕಾಳಜಿ ಮೆರೆದ ಕನ್ನಡಿಗ

    – ಚೀನಾದಲ್ಲಿ ಮೆಡಿಕಲ್ ಓದುತ್ತಿರುವ ತುಮಕೂರಿನ ಯುವಕ

    ತುಮಕೂರು: ಚೀನಾದಿಂದ ಭಾರತಕ್ಕೆ ಬಂದು ರೋಗ ಹರಡುಲು ನನಗೆ ಇಷ್ಟವಿಲ್ಲ. ನಾನು ಇಲ್ಲೇ ಇರುತ್ತೇನೆ ಎಂದು ತುಮಕೂರಿನ ಯುವಕನೋರ್ವ ಕಾಳಜಿ ಮೆರೆದಿದ್ದಾರೆ.

    ತುಮಕೂರಿನ ಶಿಕ್ಷಕ ಹೊಸಕೆರೆ ರಿಜ್ವಾನ್ ಭಾಷಾ ಅವರ ಕಿರಿಯ ಪುತ್ರ ಸಾಹಿಲ್ ಹುಸೇನ್ ಕಳೆದ ಮೂರು ವರ್ಷಗಳಿಂದ ಚೀನಾದ ವಾನ್ಲಿ ಜಿಲ್ಲೆಯಲ್ಲಿ ಉಳಿದುಕೊಂಡಿದ್ದಾರೆ. ಅಲ್ಲಿನ ನಾಚಂಗ್ ಸಿಟಿಯ ‘ಜಿಯಾಂಗ್ಸಿ ಯೂನಿವರ್ಸಿಟಿ ಆಫ್ ಟ್ರಡಿಷನಲ್ ಅಂಡ್ ಚೈನೀಸ್ ಮೆಡಿಸಿನ್ಸ್’ ವಿಶ್ವವಿದ್ಯಾಲಯದಲ್ಲಿ ಸಾಹಿಲ್ 3ನೇ ವರ್ಷದ ಎಂಬಿಬಿಎಸ್ ಕಲಿಯುತ್ತಿದ್ದಾರೆ. ಇದನ್ನೂ ಓದಿ: ಕೊರೊನಾ ವೈರಸ್‍ಗೆ ದೇಶದಲ್ಲಿ ಎರಡನೇ ಬಲಿ

    ಕೊರೊನಾ ವೈರಸ್ ಭೀತಿಯಿಂದಾಗಿ ಅವರು ಓದುತ್ತಿರುವ ವಿಶ್ವವಿದ್ಯಾನಿಲಯದ ಎಲ್ಲಾ 1,000ಕ್ಕೂ ಅಧಿಕ ವಿದ್ಯಾರ್ಥಿಗಳು ವಿವಿ ತ್ಯಜಿಸಿದ್ದು, ತಮ್ಮ ತಮ್ಮ ದೇಶಗಳಿಗೆ ಹಿಂತಿರುಗಿದ್ದಾರೆ. ಸ್ಥಳೀಯ ಕೇವಲ ಐವತ್ತು ವಿದ್ಯಾರ್ಥಿಗಳು ಹಾಗೂ ವಿವಿ ಸಿಬ್ಬಂದಿ ಮಾತ್ರ ಅಲ್ಲಿ ಉಳಿದುಕೊಂಡಿದ್ದು, ವಿವಿ ಶೇ.90ರಷ್ಟು ಖಾಲಿಯಾಗಿದೆ. ಆದರೆ ಭಾರತದ ಸಾಹಿಲ್ ಹುಸೇನ್ ಮಾತ್ರ ಸ್ವದೇಶಕ್ಕೆ ಮರಳಲು ನಿರಾಕರಿಸಿ, ಕೊರೊನಾಗೆ ಸೆಡ್ಡು ಹೊಡೆದು ವಿವಿಯಲ್ಲೇ ವಾಸ್ತವ್ಯ ಮುಂದುವರಿಸಿದ್ದಾರೆ. ಇದನ್ನೂ ಓದಿ: ಸಿದ್ದಗಂಗಾ ಮಠದ ಮೇಲೂ ಕೊರೊನಾ ಎಫೆಕ್ಟ್- ಶಿವಕುಮಾರ ಶ್ರೀಗಳ ಜಯಂತಿ ರದ್ದು

    ಭಾರತಕ್ಕೆ ಬರಲ್ಲ ಎಂದ ಪುತ್ರ:
    ಚೀನಾದಲ್ಲಿ ಕೊರೊನಾ ವೈರಸ್ ಹರಡುತ್ತಿದ್ದಂತೆ ಪುತ್ರನಿಗೆ ಕರೆ ಮಾಡಿದ ತಂದೆ ರಿಜ್ವಾನ್ ಭಾಷಾ, ತಕ್ಷಣವೇ ಭಾರತಕ್ಕೆ ಮರಳುವಂತೆ ತಿಳಿಸಿದ್ದರು. ತಂದೆಯ ಆಹ್ವಾನವನ್ನು ನಯವಾಗಿ ನಿರಾಕರಿಸಿದ ಪುತ್ರ ಸಾಹಿಲ್ ಹುಸೇನ್, ‘ಸದ್ಯಕ್ಕೆ ನಾನಿಲ್ಲಿ ಕ್ಷೇಮವಾಗಿದ್ದೇನೆ. ನಾನು ಭಾರತಕ್ಕೆ ಪ್ರಯಾಣಿಸುವ ವೇಳೆಯೇ ಕೊರೊನಾ ವೈರಸ್ ತಗುಲಿ, ಅದು ತನ್ನ ಮೂಲಕ ಭಾರತವನ್ನು ಪ್ರವೇಶಿಸಬಹುದು. ಇದರಿಂದ ಕ್ಷೇಮವಾಗಿರುವ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ವೈರಸ್ ಹರಡುವ ಸಾಧ್ಯತೆಗಳಿರುತ್ತವೆ. ಹೀಗಾಗಿ ನಾನು ಚೀನಾದಲ್ಲೇ ಉಳಿಯುತ್ತೇನೆ. ನನ್ನಿಂದಾಗಿ ನನ್ನ ದೇಶದ ಜನರು ಅಪಾಯ ಎದುರಿಸುವುದು ಬೇಡ’ ಎಂದು ತಿಳಿಸಿದ್ದಾರೆ.

    ಭಾರತಕ್ಕೆ ಮರಳುವಂತೆ ಪೋಷಕರು ಹಾಗೂ ಸ್ನೇಹಿತರಿಂದ ಒತ್ತಾಯ ಹೆಚ್ಚಾದ ಬಳಿಕ ಸಾಹಿಲ್ ಹುಸೇನ್, 14 ನಿಮಿಷಗಳ ವಿಡಿಯೋ ಮಾಡಿ ಕಳುಹಿಸುವ ಮೂಲಕ ತನ್ನ ಕ್ಷೇಮ ಸಮಾಚಾರವನ್ನು ತಿಳಿಸಿದ್ದಾರೆ. ತಾನಿರುವ ಹಾಸ್ಟೆಲ್ ಕೊಠಡಿಯಿಂದ ಸರ್ಜಿಕಲ್ ಮಾಸ್ಕ್ ಧರಿಸಿ ಹೊರಡುವ ಸಾಹೀಲ್, ಇಡೀ ವಿಶ್ವವಿದ್ಯಾನಿಲಯದ ಆವರಣದಲ್ಲಿ ಸುತ್ತಾಡಿ ಅಲ್ಲಿನ ಪರಿಸ್ಥಿತಿಯನ್ನು ಪೋಷಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ವಿಡಿಯೋ ವೀಕ್ಷಿಸಿದ ಬಳಿಕ ಪೋಷಕರು ಸಮ್ಮತಿಸಿದ್ದು, ಪುತ್ರನ ನಿರ್ಧಾರಕ್ಕೆ ಹೆಮ್ಮೆ ಪಟ್ಟಿದ್ದಾರೆ.

    ತಲೆದೂಗಿದ ಚೀನಾ:
    ಸಾಹಿಲ್ ಹುಸೇನ್ ಮಾಡಿರುವ ವಿಡಿಯೋದಲ್ಲಿ ಕೊರೊನಾ ವೈರಸ್ ಹರಡದಂತೆ ಚೀನಾ ಸರ್ಕಾರ ತೆಗೆದುಕೊಂಡಿರುವ ಕ್ರಮಗಳನ್ನು ವಿಡಿಯೋದಲ್ಲಿ ವಿವರಿಸಿದ್ದಾರೆ. ಈ ವಿಡಿಯೋ ಅಲ್ಲಿನ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು,  ಚೀನಾದ ದೃಶ್ಯ ಮಾಧ್ಯಮಗಳಲ್ಲಿ ಕೂಡ ಪ್ರಸಾರವಾಗಿದೆ.

    ಚೀನಾದಿಂದ ಕರ್ನಾಟಕಕ್ಕೆ ನೇರ ವಿಮಾನ ಸೌಲಭ್ಯವಿಲ್ಲ. ಮೂರು ವಿಮಾನ ಬದಲಾಯಿಸಿ ಬರಬೇಕು. ಹೀಗಾಗಿ ಪ್ರಯಾಣದ ವೇಳೆ ನನಗೆ ಕೊರೋನಾ ವೈರಸ್ ತಗುಲಿ ನನ್ನ ದೇಶಕ್ಕೂ ಹರಡಿದರೆ ಸಮಸ್ಯೆಯಾಗುತ್ತದೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಭಾರತಕ್ಕೆ ಮರಳುವುದಿಲ್ಲ ಅಂತ ನನ್ನ ಮಗ ಸಾಹಿಲ್ ತಿಳಿಸಿದ್ದಾನೆ. ಮಗನ ತೀರ್ಮಾನದ ಬಗ್ಗೆ ನಮಗೆ ಆತಂಕದ ಜೊತೆಗೆ ಹೆಮ್ಮೆಯೂ ಇದೆ. ಅವನೊಂದಿಗಿದ್ದ ಬೆಂಗಳೂರಿನ ಅರುಣ್ ಕುಮಾರ್ ಮತ್ತು ಲೋಕೇಶ್ ಪೋಷಕರ ಒತ್ತಾಯಕ್ಕಾಗಿ ಮರಳಿದ್ದಾರೆ ಎಂದು ಹೊಸಕೆರೆ ರಿಜ್ವಾನ್ ಭಾಷಾ ತಿಳಿಸಿದ್ದಾರೆ.

  • ಮಣಿಪಾಲ ವಿವಿಯ ಇಬ್ಬರು ವಿದ್ಯಾರ್ಥಿಗಳಿಗೆ ಕೊರೊನಾ ಇಲ್ಲ- ವೈದ್ಯಕೀಯ ವರದಿಯಲ್ಲಿ ಧೃಡ

    ಮಣಿಪಾಲ ವಿವಿಯ ಇಬ್ಬರು ವಿದ್ಯಾರ್ಥಿಗಳಿಗೆ ಕೊರೊನಾ ಇಲ್ಲ- ವೈದ್ಯಕೀಯ ವರದಿಯಲ್ಲಿ ಧೃಡ

    ಉಡುಪಿ: ಅಮೆರಿಕ ಹಾಗೂ ಕುವೈತ್‍ನಿಂದ ಬಂದಿರುವ ಉಡುಪಿಯ ಮಣಿಪಾಲ ವಿಶ್ವವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳ ಕೊರೊನಾದ ವೈದ್ಯಕೀಯ ವರದಿ ನೆಗೆಟಿವ್ ಬಂದಿದೆ. ಆತಂಕದಲ್ಲಿದ್ದ ಮಣಿಪಾಲ ವಿವಿ ಸದ್ಯ ನಿರಾಳವಾಗಿದೆ.

    ಶಂಕಿತ ಕೊರೊನಾ ವೈರಸ್ ಸೋಂಕಿನ ಪರೀಕ್ಷೆಗಾಗಿ ಮಣಿಪಾಲದ ಕೆಎಂಸಿಯ ಪ್ರತ್ಯೇಕಿತ ವಾರ್ಡ್ ಗೆ ದಾಖಲಾಗಿದ್ದ ಮಣಿಪಾಲ ಕೆಎಂಸಿಯ ಇಬ್ಬರು ವಿದ್ಯಾರ್ಥಿಗಳಲ್ಲಿ ಸೋಂಕು ಕಂಡುಬಂದಿಲ್ಲ. ಆ ಇಬ್ಬರು ಆಂಧ್ರ ಪ್ರದೇಶ ಹಾಗೂ ಕೇರಳ ಮೂಲದವರಾಗಿದ್ದು, ಅಮೆರಿಕ ಹಾಗೂ ಕುವೈಟ್ ಪ್ರವಾಸ ಮಾಡಿ ಬಂದಿದ್ದಾಗ ಜ್ವರ, ಶೀತ ಕಾಣಿಸಿಕೊಂಡಿತ್ತು. ಇದನ್ನೂ ಓದಿ: ಕೊರೊನಾ ವೈರಸ್‍ಗೆ ದೇಶದಲ್ಲಿ ಎರಡನೇ ಬಲಿ

    ಕೊರೊನಾದ ಪ್ರಾಥಮಿಕ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಶಿವಮೊಗ್ಗಕ್ಕೆ ಕಳುಹಿಸಲಾದ ಅವರ ಗಂಟಲಿನ ದ್ರವ ಹಾಗೂ ರಕ್ತದ ಮಾದರಿಯ ಪರೀಕ್ಷೆ ಇಂದು ಕೈಸೇರಿದ್ದು, ಅದರಲ್ಲಿ ಸೋಂಕು ಇಲ್ಲ ಎಂದು ಖಚಿತವಾಗಿದೆ ಅಂತ ಡಿಎಚ್‍ಒ ಡಾ.ಸುಧೀರ್‍ಚಂದ್ರ ಸೂಡ ತಿಳಿಸಿದರು. ಇದನ್ನೂ ಓದಿ: ಜಪಾನ್ ಹಡಗಿನಲ್ಲಿದ್ದ ವ್ಯಕ್ತಿಗೆ ಕೊರೊನಾ ಶಂಕೆ- ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲು

    ಇಂದು ದಾಖಲಾದ ಮತ್ತೊಬ್ಬ ಕೆಎಂಸಿಯ ವಿದ್ಯಾರ್ಥಿ ಮೂಲತಃ ದುಬೈನವ. ಆತ ಮಲೇಷ್ಯಾಕ್ಕೆ ಹೋಗಿ ಮಣಿಪಾಲಕ್ಕೆ ಬಂದಿದ್ದ. ಆತನ ಮಾದರಿಗಳನ್ನು ಪರೀಕ್ಷೆಗಾಗಿ ಇಂದು ಕಳುಹಿಸಲಾಗಿದ್ದು ವರದಿ ನಾಳೆ ಬರಲಿದೆ. ವಿವಿಯಲ್ಲಿ 60 ದೇಶದ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಸೋಂಕು ಇತರರಿಗೂ ಹರಡುವ ಸಾಧ್ಯತೆ ಬಗ್ಗೆ ವಿವಿಗೆ ಆತಂಕವಾಗಿತ್ತು. ಇಬ್ಬರು ವಿದ್ಯಾರ್ಥಿಗಳ ವರದಿ ನೆಗೆಟಿವ್ ಬಂದಿರುವುದರಿಂದ ವಿವಿ ವಿದ್ಯಾರ್ಥಿಗಳು, ಆಡಳಿತ ವಿಭಾಗ ನೆಮ್ಮದಿಯಾಗಿದೆ.

  • ಕೊರೊನಾ ವೈರಸ್‍ಗೆ ದೇಶದಲ್ಲಿ ಎರಡನೇ ಬಲಿ

    ಕೊರೊನಾ ವೈರಸ್‍ಗೆ ದೇಶದಲ್ಲಿ ಎರಡನೇ ಬಲಿ

    ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ದೇಶದಲ್ಲಿ ಎರಡನೇ ಬಲಿ ಪಡೆದುಕೊಂಡಿದೆ. ಜೊತೆಗೆ ದೆಹಲಿಯಲ್ಲಿ ಕೊರೊನಾಗೆ ಮೊದಲ ಸಾವು ದಾಖಲಾಗಿದೆ.

    ದೆಹಲಿಯ 68 ವರ್ಷದ ಮಹಿಳೆಗೆ ವಿದೇಶದಿಂದ ಮರಳಿದ್ದ ಪುತ್ರನಿಂದ ಕೊರೊನಾ ಸೋಂಕು ಹರಡಿತ್ತು. ಅವರನ್ನು ದೆಹಲಿಯ ರಾಮ್ ಮನೋಹರ್ ಲೋಹಿಯಾ (ಆರ್‌ಎಂಎಲ್‌) ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ ಇಂದು ವೃದ್ಧೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿಮಾಡಿವೆ.

    ಕಲಬುರಗಿಯಲ್ಲಿ ಮಾರ್ಚ್ 11ರಂದು ಮೃತಪಟ್ಟ 76 ವರ್ಷದ ವೃದ್ಧರಿಗೆ ಕೊರೊನಾ ಸೋಂಕು ತಗಲಿದ್ದನ್ನು ಗುರುವಾರ ರಾತ್ರಿ ಆರೋಗ್ಯ ಸಚಿವ ಶ್ರೀರಾಮುಲು ಖಚಿತಪಡಿಸಿದ್ದರು. ಈ ಮೂಲಕ ಭಾರತದಲ್ಲಿ ಕೊರೊನಾ ಮೊದಲ ಬಲಿ ಪಡೆದಂತಾಗಿತ್ತು.

    ಈ ಕುರಿತು ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ್ದ ಸಚಿವರು, ಕಲಬುರಗಿ ವೃದ್ಧನ ಲ್ಯಾಬ್ ರಿಪೋರ್ಟ್ ಈಗಷ್ಟೇ ನಮ್ಮ ಕೈಸೇರಿದೆ. ವರದಿಯಲ್ಲಿ ಕೊರೊನಾ ವೈರಸ್‍ನಿಂದಲೇ ಸಾವನ್ನಪ್ಪಿದ್ದಾರೆ ಎನ್ನುವುದು ದೃಢಪಟ್ಟಿದೆ ಎಂದು ಸ್ಪಷ್ಟಪಡಿಸಿದ್ದರು. ಅಲ್ಲದೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವೃದ್ಧನ ಸಾವನ್ನು ಖಚಿತಪಡಿಸಿದ್ದರು.

    ಕಲಬುರಗಿಯ ಬೆನ್ನಲ್ಲೇ ದೆಹಲಿಯಲ್ಲಿ ಕೊರೊನಾ ಬಲಿ ಪಡೆದಿದೆ. ಕರ್ನಾಟಕದಲ್ಲಿ ಕೊರೊನಾ ಶಂಕಿತರ ಸಂಖ್ಯೆ 32ಕ್ಕೆ ಏರಿದ್ದು, ಇಂದು ಒಂದೇ ದಿನ 19 ಮಂದಿ ದಾಖಲಾಗಿದ್ದಾರೆ. ಗುರುವಾರ ಮೃತಪಟ್ಟ ವ್ಯಕ್ತಿ ಸೇರಿದಂತೆ ಒಟ್ಟು 6 ಮಂದಿಗೆ ಕೊರೊನಾ ಬಂದಿದ್ದು, ಇಂದು ಹೊಸದಾಗಿ ಯಾವುದೇ ಕೇಸ್ ಪತ್ತೆಯಾಗಿಲ್ಲ. 5 ಮಂದಿ ಕೊರೊನಾ ಪೀಡಿತರ ಆರೋಗ್ಯ ಸ್ಥಿರವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

    ಕಲಬುರಗಿ, ದಕ್ಷಿಣ ಕನ್ನಡ, ಹಾಸನದಲ್ಲಿ ನಾಲ್ಕು ಮಂದಿ, ಬೆಂಗಳೂರಿನಲ್ಲಿ 3, ಉಡುಪಿಯಲ್ಲಿ 2, ಚಿಕ್ಕಮಗಳೂರು ಮತ್ತು ಕೊಡಗಿನಲ್ಲಿ ತಲಾ ಒಬ್ಬರು ದಾಖಲಾಗಿದ್ದಾರೆ. ಈ ಪೈಕಿ ಬೆಂಗಳೂರಿನಲ್ಲಿ 3 ಮಂದಿ ಹಾಸನದಲ್ಲಿ ಇಬ್ಬರು ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು ಬೆಂಗಳೂರು ಮತ್ತು ದಕ್ಷಿಣ ಕನ್ನಡದಲ್ಲಿ 7 ಮಂದಿ, ಉಡುಪಿಯಲ್ಲಿ 5, ಹಾಸನ ಮತ್ತು ಕಲಬುರಗಿಯಲ್ಲಿ 4 ಮಂದಿ ಮೇಲೆ ನಿಗಾ ಇಡಲಾಗಿದೆ.

    ಕಲಬುರಗಿಯಲ್ಲಿ ಮೃತ ವ್ಯಕ್ತಿ ಹಲವು ಜನರನ್ನು ಸಂಪರ್ಕಿಸಿದ್ದ. ಈ ಪೈಕಿ 30 ಮಂದಿ ಖಾಸಗಿ ಆಸ್ಪತ್ರೆಯಲ್ಲಿದ್ದಾರೆ. 30 ಜನರಲ್ಲಿ 4 ಮಂದಿ ಮೇಲೆ ಪ್ರತ್ಯೇಕ ನಿಗಾ ವಹಿಸಲಾಗಿದ್ದು ರಕ್ತದ ಮಾದರಿಯನ್ನು ಸಂಗ್ರಹಿಸಿದ್ದು, ಫಲಿತಾಂಶ ಬರಬೇಕಿದೆ.

  • ಕೊರೊನಾ ಎಫೆಕ್ಟ್- ಭಾರತ, ದ.ಆಫ್ರಿಕಾ ನಡುವನ ಸರಣಿ ರದ್ದು

    ಕೊರೊನಾ ಎಫೆಕ್ಟ್- ಭಾರತ, ದ.ಆಫ್ರಿಕಾ ನಡುವನ ಸರಣಿ ರದ್ದು

    ಮುಂಬೈ: ಕೊರೊನಾ ವೈರಸ್ ಕರಿನೆರಳು ಕ್ರಿಕೆಟ್ ಅಂಗಳಕ್ಕೂ ತಟ್ಟಿದೆ. ಬಿಸಿಸಿಐಗೆ ಭಾರೀ ಆದಾಯ ತಂದುಕೊಂಡುವ ಐಪಿಎಲ್ ದಿನಾಂಕ ಮುಂದೂಡಿದ ಬೆನ್ನಲ್ಲೇ ಭಾರತ, ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿ ರದ್ದುಗೊಳಿಸಲಾಗಿದೆ.

    ಈಗಾಗಲೇ ಆರಂಭವಾಗಿರುವ ದಕ್ಷಿಣ ಆಫ್ರಿಕಾ ಹಾಗೂ ಭಾರತದ ನಡುವಿನ ಮೂರು ಏಕದಿನ ಪಂದ್ಯಗಳ ಮೊದಲ ಪಂದ್ಯವು ಮಳೆಯಿಂದಾಗಿ ರದ್ದಾಗಿದೆ. ಆದರೆ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಉಳಿದ ಎರಡು ಪಂದ್ಯಗಳನ್ನು ಖಾಲಿ ಮೈದಾನದಲ್ಲಿ ನಡೆಸಲು ಬಿಸಿಸಿಐ ನಿರ್ಧರಿಸಿತ್ತು. ಆದರೆ ಈಗ ಸರಣಿಯನ್ನು ರದ್ದುಗೊಳಿಸಲಾಗಿದೆ ಎಂದು ಬಿಸಿಸಿಐ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದೆ.

    ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಎರಡನೇ ಏಕದಿನ ಪಂದ್ಯವು ಲಕ್ನೋದಲ್ಲಿ ಮಾರ್ಚ್ 15ರಂದು ಹಾಗೂ ಮೂರನೇ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್‍ನಲ್ಲಿ ಮಾರ್ಚ್ 18 ರಂದು ನಡೆಯಬೇಕಿತ್ತು. ಬಿಸಿಸಿಐ ಸರಣಿಯನ್ನು ರದ್ದುಗೊಳಿಸಿದ್ದರಿಂದ ಹರಿಣರು ತಮ್ಮ ತಾಯ್ನಾಡಿಗೆ ಮರಳಲಿದ್ದಾರೆ.

    ದೇಶದಲ್ಲಿ ಮಹಾಮಾರಿ ಕೊರೊನಾ ಹೆಚ್ಚಾಗುತ್ತಿದೆ. ಹೀಗಾಗಿ ಐಪಿಎಲ್ ಟೂರ್ನಿಯನ್ನು ಮುಂದೂಡಬೇಕು. ಇಲ್ಲವೇ ರದ್ದುಗೊಳಿಸಬೇಕು ಎಂಬ ಕೂಗು ಕೇಳಿ ಬಂದಿತ್ತು. ಇದರಿಂದಾಗಿ ಬಿಸಿಸಿಐ ಜಾಗತಿಕ ಕಾಳಜಿಯ ಹಿನ್ನೆಲೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‍ನ 13ನೇ ಆವೃತ್ತಿಯನ್ನು ಏಪ್ರಿಲ್ 15ಕ್ಕೆ ಮುಂದೂಡಿದೆ. ಚೆನ್ನೈನಲ್ಲಿ ಮಾರ್ಚ್ 29ರಂದು ಆರಂಭವಾಗಬೇಕಿದ್ದ ಐಪಿಎಲ್ ಟೂರ್ನಿಯನ್ನು ಮುಂದೂಡಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜೇ ಶಾ ಹಾಗೂ ಐಪಿಎಲ್‍ನ ಉನ್ನತ ಆಡಳಿತ ಮಂಡಳಿ ನಿರ್ಧಾರ ಪ್ರಕಟಿಸಿದೆ.

    ಇದಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿದ್ದ ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ, ಕ್ರಿಕೆಟ್ ವೀಕ್ಷಿಸಲು ಸಾವಿರಾರು ಮಂದಿ ಕ್ರೀಡಾಂಗಣಕ್ಕೆ ಬರುತ್ತಾರೆ. ಯಾರು ಬರುತ್ತಾರೆ? ಅವರು ಎಲ್ಲಿಂದ ಬರುತ್ತಿದ್ದಾರೆ ಎನ್ನುವುದು ತಿಳಿಯುವುದು ಅಸಾಧ್ಯ. ಒಬ್ಬ ವ್ಯಕ್ತಿ ಬಂದರೂ ಹಲವು ಮಂದಿಗೆ ಕೊರೊನಾ ಹರಡುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಐಪಿಎಲ್ ಸೇರಿದಂತೆ ಎಲ್ಲ ಕ್ರೀಡಾ ಕಾರ್ಯಕ್ರಮವನ್ನು ರದ್ದುಪಡಿಸುತ್ತಿದ್ದೇವೆ ಎಂದು ಹೇಳಿದ್ದರು.

  • ಮದ್ವೆ ನಿಗದಿಯಾಗಿದ್ರೆ ಏನು ಕಥೆ? ಯಾವುದೆಲ್ಲ ಬಂದ್? ಇಲ್ಲಿದೆ ಪೂರ್ಣ ವಿವರ

    ಮದ್ವೆ ನಿಗದಿಯಾಗಿದ್ರೆ ಏನು ಕಥೆ? ಯಾವುದೆಲ್ಲ ಬಂದ್? ಇಲ್ಲಿದೆ ಪೂರ್ಣ ವಿವರ

    ಬೆಂಗಳೂರು: ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಕೆಲವು ಮುಂಜಾಗೃತಾ ಕ್ರಮವನ್ನು ತೆಗೆದುಕೊಂಡಿದ್ದು, ಒಂದು ವಾರ ಕಾಲ ಅದ್ಧೂರಿ ಮದುವೆಗೆ ಬ್ರೇಕ್ ಹಾಕಿದೆ.

    ಸರ್ಕಾರ ಅದ್ಧೂರಿ ಮದುವೆಯನ್ನು ನಿರ್ಬಂಧಿಸಿದ್ದರೂ ಸರಳವಾಗಿ ಕಾರ್ಯಕ್ರಮ ನಡೆಸಬಹುದು. ಈಗಾಗಲೇ ನಿಗದಿಯಾಗಿರುವ ಗರಿಷ್ಟ 100 ಮಂದಿ ಮಾತ್ರ ಪಾಲ್ಗೊಳ್ಳುವ ಮದುವೆ ಸಮಾರಂಭಕ್ಕೆ ಸರ್ಕಾರ ಅನುಮತಿ ನೀಡಿದೆ.

    ಯಾವುದು ಇರಲ್ಲ?
    ಮಾಲ್, ಸಿನಿಮಾ ಥಿಯೇಟರ್ ಬಂದ್ ಆಗಲಿದ್ದು, ನೈಟ್ ಕ್ಲಬ್, ಪಬ್ ತೆರೆಯಲು ಅನುಮತಿ ನೀಡಿಲ್ಲ. ಅದ್ಧೂರಿ ಮದುವೆ, ಹುಟ್ಟುಹಬ್ಬ, ನಾಮಕರಣ ಬಂದ್ ಆಗಲಿದ್ದು ಸಭೆ-ಸಮಾರಂಭಗಳಿಗೆ ಬ್ರೇಕ್ ಬೀಳಲಿದೆ.

    ಉದ್ಯಾನವನ, ಸ್ವಿಮ್ಮಿಂಗ್ ಪೂಲ್ ಬಂದ್ ಆಗಲಿದ್ದು, ಯಾರೂ ಸಮ್ಮರ್ ಕ್ಯಾಂಪ್ ಮಾಡದಂತೆ ಸೂಚಿಸಲಾಗಿದೆ. ಶಾಲಾ, ಕಾಲೇಜ್, ಎಲ್ಲಾ ವಿವಿಗಳು ಬಂದ್ ಆಗಲಿದೆ. ಆದರೆ ಪಿಯುಸಿ ಸೇರಿದಂತೆ ಈಗಾಗಲೇ ನಿಗದಿಯಾದ ಪರೀಕ್ಷೆಗಳು ಎಂದಿನಂತೆ ನಡೆಯಲಿದೆ. ಅಧಿವೇಶನ ಮತ್ತು ಸರ್ಕಾರಿ ಕಚೇರಿಗಳು ಎಂದಿನಂತೆ ನಡೆಯಲಿದ್ದು, ಜಾತ್ರೆಗಳು ಮತ್ತು ಕ್ರೀಡಾ ಚಟುವಟಿಕೆ ಮಾಡದಂತೆ ಸೂಚಿಸಲಾಗಿದೆ.

    15 ದಿನ ರಜೆ:  ಕೊರೊನಾ ಸಾಂಕ್ರಾಮಿಕ ರೋಗ ಎಂಬುದಾಗಿ ಸರ್ಕಾರ ಘೋಷಿಸಿದ್ದು 15 ದಿನಗಳ ಕಾಲ ಎಲ್ಲ ಸರ್ಕಾರಿ, ಖಾಸಗಿ  ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ.

    ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ತುರ್ತು ಸಭೆ ನಡೆಯಿತು. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ಇಂದು ತೆಗೆದುಕೊಂಡ ನಿರ್ಧಾರ ಇಡಿ ರಾಜ್ಯಕ್ಕೆ ಅನ್ವಯವಾಗಲಿದೆ. ಸಾರ್ವಜನಿಕ ಹಿತ ದೃಷ್ಟಿಯಿಂದ ಈ ತೀರ್ಮಾನವನ್ನು ಕೈಗೊಂಡಿದ್ದೇವೆ ಎಂದು ತಿಳಿಸಿದರು.

    ಸಾಧ್ಯವಾದಷ್ಟು ಕಂಪನಿಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಆದೇಶ ನೀಡಬೇಕು. ಈಗಾಗಲೇ ನಿಗದಿಯಾಗಿದ್ದ ಪ್ರವಾಸವನ್ನು ಜನರು ರದ್ದು ಮಾಡಬೇಕು ಎಂದು ಸಿಎಂ ಕೇಳಿಕೊಂಡರು.

  • ಬೆಳಗ್ಗೆ 4 ಗಂಟೆಯಿಂದ ಮಧ್ಯಾಹ್ನ 2ರವರೆಗೆ ಅಂಬುಲೆನ್ಸ್‌ನಲ್ಲೇ ಅಡ್ಡಾಡಿದ್ದೇವೆ: ಕೊರೊನಾ ಸೋಂಕಿತ ಮೃತನ ಮಗ

    ಬೆಳಗ್ಗೆ 4 ಗಂಟೆಯಿಂದ ಮಧ್ಯಾಹ್ನ 2ರವರೆಗೆ ಅಂಬುಲೆನ್ಸ್‌ನಲ್ಲೇ ಅಡ್ಡಾಡಿದ್ದೇವೆ: ಕೊರೊನಾ ಸೋಂಕಿತ ಮೃತನ ಮಗ

    ಕಲಬುರಗಿ: ಬೆಳಗಿನ ಜಾವ ನಾಲ್ಕು ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಅಂಬುಲೆನ್ಸ್‌ನಲ್ಲಿಯೇ ಅಡ್ಡಾಡಿದ್ದೇವೆ. ಮೂರ್ನಾಲ್ಕು ಆಸ್ಪತ್ರೆಗಳಿಗೆ ತೆರಳಿದರೂ ಯಾರೂ ತಂದೆಯನ್ನು ದಾಖಲಿಸಿಕೊಂಡಿಲ್ಲ. ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಿದ್ದರೆ ಅವರು ಉಳಿಯುತ್ತಿದ್ದರು ಎಂದು ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಮಗ ಅಳಲನ್ನು ತೋಡಿಕೊಂಡಿದ್ದಾರೆ.

    ಮಾರ್ಚ್ 9ರಂದು ನಮ್ಮ ತಂದೆಗೆ ಜ್ವರ ಹೆಚ್ಚಾದಾಗ ಅನೇಕ ಆಸ್ಪತ್ರೆಗಳಿಗೆ ಹೋಗಿದ್ದೆವು. ಬಹುತೇಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಿದರು. ಕೊನೆಗೆ ಒಂದು ಖಾಸಗಿ ಆಸ್ಪತ್ರೆಯವರು ದಾಖಲಿಸಿಕೊಂಡರು. ಆದರೆ ಅವರು ಕೂಡ ಕೆಲ ಹೊತ್ತಿನ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‍ಗೆ ಕರೆದುಕೊಂಡು ಹೋಗುವಂತೆ ಒತ್ತಾಯಿಸಿದರು. ಆಗ ನಮಗೆ ಜಿಲ್ಲಾ ಆರೋಗ್ಯ ಇಲಾಖೆ ಸಿಬ್ಬಂದಿ ಕೊರೊನಾ ವೈರಸ್‍ಗಾಗಿ ಪ್ರತ್ಯೇಕ ವಾರ್ಡ್ ಮಾಡಿದ್ದನ್ನು ಹೇಳಲಿಲ್ಲ. ಹೀಗಾಗಿ ನಾವು ಮಾರ್ಚ್ 10ರಂದು ನಸುಕಿನ ಜಾವ 4 ಗಂಟೆಗೆ ಹೈದರಾಬಾದ್‍ಗೆ ಕರೆದುಕೊಂಡು ಹೋದೆವು. ಅಲ್ಲಿ ಮೂರ್ನಾಲ್ಕು ಆಸ್ಪತ್ರೆಯಲ್ಲಿ ತಂದೆಗೆ ಚಿಕಿತ್ಸೆಗೆ ನೀಡುವಂತೆ ಕೇಳಿಕೊಂಡರೂ ಅವರು ದಾಖಲಿಸಿಕೊಳ್ಳಲಿಲ್ಲ. ಆದ್ದರಿಂದ ತಂದೆಯನ್ನು ಕರೆದುಕೊಂಡು ಬೆಳಗ್ಗೆ ನಾಲ್ಕು ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಅಂಬುಲೆನ್ಸ್‌ನಲ್ಲಿಯೇ ಅಡ್ಡಾಡಿದ್ದೇವೆ. ವೈದ್ಯರು ಪ್ರಾಣಿಗಿಂತ ಕಡೆಯಾಗಿ ನಮ್ಮೊಂದಿಗೆ ವರ್ತಿಸಿದ್ದರು ಎಂದು ಮೃತ ವ್ಯಕ್ತಿಯ ಮಗ ತಿಳಿಸಿದರು.

    ಹೈದರಾಬಾದ್‍ನಿಂದ ವಾಪಸ್ ಅವರನ್ನು ಕಲಬುರಗಿ ನಗರಕ್ಕೆ ಕರೆದುಕೊಂಡು ಬರುತ್ತಿದ್ದೆವು. ಆಗ ಮಾರ್ಗ ಮಧ್ಯೆಯೇ ನಮ್ಮ ತಂದೆ ಮೃತಪಟ್ಟಿದ್ದಾರೆ. ಕಲಬುರಗಿಯ ಆರೋಗ್ಯ ಇಲಾಖೆ ಎಚ್ಚತ್ತುಕೊಂಡಿದ್ದರೆ ನಮ್ಮ ತಂದೆ ಬದುಕಿ ಉಳಿಯುತ್ತಿದ್ದರು ಎಂದು ಕಲಬುರಗಿ ಆರೋಗ್ಯ ಇಲಾಖೆ ಮೇಲೆ ಮೃತನ ಮಗ ಅಸಮಾಧಾನ ವ್ಯಕ್ತಪಡಿಸಿದರು.

    ಸೂಕ್ತ ಚಿಕಿತ್ಸೆ ನೀಡಿದ್ದರೆ ವೃದ್ಧ ಬದುಕುಳಿಯುತ್ತಿದ್ದರಾ? ವೈದ್ಯರು ಮತ್ತು ಜಿಲ್ಲಾ ಆರೋಗ್ಯ ಇಲಾಖೆ ನಿರ್ಲಕ್ಷ್ಯವೇ ವೃದ್ಧನ ಸಾವಿಗೆ ಕಾರಣವಾಯ್ತಾ ಎಂಬ ಪ್ರಶ್ನೆಗಳು ಮೃತನ ಮಗನ ಹೇಳಿಕೆಯಿಂದ ಹುಟ್ಟುಕೊಂಡಿದೆ. ಇತ್ತ ಆರೋಗ್ಯ ಇಲಾಖೆ ನಿರ್ಲಕ್ಷ ಮತ್ತು ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದಿರುವುದು ತಂದೆಯ ಸಾವಿಗೆ ಕಾರಣ ಎಂದು ಮೃತನ ಮಗ ಆರೋಪಿಸಿದ್ದಾರೆ.