Tag: Coronavirus Virus

  • ಕೊರೊನಾ ಮೂರನೇ ಅಲೆ ತಡೆಗೆ ಅಗತ್ಯ ವೈದ್ಯಕೀಯ ಸೌಲಭ್ಯ: ಅಶೋಕ್

    ಕೊರೊನಾ ಮೂರನೇ ಅಲೆ ತಡೆಗೆ ಅಗತ್ಯ ವೈದ್ಯಕೀಯ ಸೌಲಭ್ಯ: ಅಶೋಕ್

    ಹಾಸನ: ಕೊರೊನಾ ಮೂರನೇ ಅಲೆ ಮಕ್ಕಳನ್ನು ಹೆಚ್ಚು ಕಾಡುವ ಹಿನ್ನೆಲೆ ಅಗತ್ಯ ವೆಂಟಿಲೇಟರ್ ಸೌಲಭ್ಯದ ಬೆಡ್ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ಹಳ್ಳಿಯ ಕಡೆ ಮಕ್ಕಳ ತಜ್ಞರ ನಡೆ ಎಂಬ ಯೋಜನೆ ಆರಂಭಿಸಲಾಗಿದೆ ಎಂದು ಆರ್.ಅಶೋಕ್ ತಿಳಿಸಿದರು.

    ಜಿಲ್ಲಾ ಪಂಚಾಯತಿ ಹೊಯ್ಸಳ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹಾಗೂ ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಕೋವಿಡ್ ನಿಯಂತ್ರಣ ಕುರಿತು ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಕೊರೊನಾ ಮೂರನೇ ಅಲೆ ಮಕ್ಕಳಿಗೆ ಹೆಚ್ಚು ಬಾಧಿಸುವುದರಿಂದ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ ಯೋಜನೆ ಮೂಲಕ ಮಕ್ಕಳಿಗೆ ಅರ್ಧ ಕೆ.ಜಿ. ಹಾಲಿನ ಪುಡಿ, 200 ಗ್ರಾಂ. ಬಾದಾಮಿ, ಮೊಟ್ಟೆ ಸೇರಿದಂತೆ ಮಲ್ಟಿವಿಟಮಿನ್ ಸಿರಪ್ ಮತ್ತು ಸಾಬೂನನ್ನು ನೀಡುವ ಯೋಜನೆ ಇದಾಗಿದ್ದು, ರಾಜ್ಯಾದ್ಯಂತ ಜಾರಿಗೆ ಬರಲಿದೆ. ಆರೋಗ್ಯ ರಕ್ಷಣೆಗೆ ಅಗತ್ಯ ಹಣಕಾಸು ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.

    ಕೊರೊನಾ ಮೂರನೇ ಅಲೆ ಕುರಿತು ಶಾಸಕರೆಲ್ಲರೂ ಸಲಹೆ ನೀಡಿದ್ದಾರೆ. ಮಕ್ಕಳ ತಜ್ಞರ ಕೊರತೆ ದೇಶದಲ್ಲೇ ಇದೆ. ಮುಂದಿನ 10 ದಿನದಲ್ಲಿ ಎಲ್ಲ ವೈದ್ಯರಿಗೆ ತರಬೇತಿ ನೀಡಿ, ಮಕ್ಕಳಿಗೆ ಹೇಗೆ ಚಿಕಿತ್ಸೆ ನೀಡಬೇಕು ಎಂದು ಅಗತ್ಯ ಮಾಹಿತಿ ನೀಡಲಾಗುವುದು. ಮಕ್ಕಳ ತಜ್ಞರನ್ನು ಕೂಡಲೇ ಒದಗಿಸಲಾಗದು, ಶಿಕ್ಷಣ ಪಡೆದು ಹೊರಬರಲು ಇನ್ನೂ 7 ವರ್ಷ ಬೇಕಿದೆ. ಆದ್ದರಿಂದ ಇರುವ ವೈದ್ಯರಿಗೆ ಮಕ್ಕಳ ಚಿಕಿತ್ಸೆ ಬಗ್ಗೆ ತರಬೇತಿ ನೀಡುವುದು ಒಂದೇ ಮಾರ್ಗ ಎಂದರು.

    ಮೂರನೇ ಅಲೆ ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಮಕ್ಕಳಲ್ಲಿ ಆರೋಗ್ಯ ಸಮಸ್ಯೆ, ಅಪೌಷ್ಟಿಕತೆಯ ಬಗ್ಗೆ ಮಾಹಿತಿ ಪಡೆದು ಸೂಕ್ತ ಚಿಕಿತ್ಸೆ ನೀಡಬೇಕಿದೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಅಗತ್ಯ ಪೌಷ್ಠಿಕಾಂಶದ ಆಹಾರ ನೀಡಬೇಕು ಎಂದು ಸೂಚನೆ ನೀಡಿದರು.

    ಬೇಲೂರು ತಾಲೂಕಿನ ಆರೋಗ್ಯ ಕೇಂದ್ರಗಳಲ್ಲಿ ಮಕ್ಕಳ ತಜ್ಞರ ಕೊರತೆಯಿದೆ. ಆದ್ದರಿಂದ ಅಗತ್ಯ ವೈದ್ಯರ ನೇಮಕಾತಿ ಮಾಡುವಂತೆ ಹಾಗೂ ಮಕ್ಕಳಿಗೆ ಪ್ರತ್ಯೇಕವಾಗಿ ಬೆಡ್ ಗಳನ್ನು ಒದಗಿಸುವಂತೆ ಶಾಸಕ ಲಿಂಗೇಶ್ ಒತ್ತಾಯಿಸಿದರು.

    ಅರಸೀಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಕ್ಕಳ ವೈದ್ಯರ ಕೊರತೆಯಿದೆ ಹಿಂದಿನ ಪಂಚಾಯಿತಿ ಸಭೆಯಲ್ಲಿ ವೈದ್ಯರ ಕೊರತೆ ಬಗ್ಗೆ ಗಮನಕ್ಕೆ ತರಲಾಗಿತ್ತು. ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಭೆಯ ಗಮನಕ್ಕೆ ತಂದರು. ಕೋವಿಡ್ ಸಾವಿನ ಸಂಖ್ಯೆ ಕಡಿಮೆ ಮಾಡಲು ತಾಲೂಕಿನಲ್ಲಿ ಕೊರೊನಾದಿಂದ ಸಾವಿಗೀಡಾದವರ ಬಗ್ಗೆ ಅಗತ್ಯ ಮಾಹಿತಿ ಪಡೆಯಬೇಕು. ಯಾವ ಕಾರಣಕ್ಕೆ ಸಾವು ನಡೆದಿದೆ ಎಂದು ಮಾಹಿತಿ ಕಲೆಹಾಕೋದು ಸೂಕ್ತ. ಇದರಿಂದ ಅವರ ಕುಟುಂಬ ಸದಸ್ಯರಿಗೆ ಬೇರೆ ಯಾವ ಖಾಯಿಲೆ ಇದೆ ಹಾಗೂ ಕೊರೊನಾ ಸೋಂಕಿನಿಂದಲೇ ಸಾವಾಯಿತೆ ಎಂಬ ಮಾಹಿತಿ ಹಾಗೂ ಉತ್ತಮ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ ಎಂದು ಶಾಸಕ ಶಿವಲಿಂಗೇಗೌಡ ಒತ್ತಾಯಿಸಿದರು.

    ಶಾಸಕ ಬಾಲಕೃಷ್ಣ ಮಾತನಾಡಿ, ವೈದ್ಯರ ನಡೆ ಹಳ್ಳಿಯ ಕಡೆ ಪರಿಣಾಮಕಾರಿಯಾಗಿದೆ. ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ತೊಂದರೆಯಾಗಲಿದೆ ಎಂಬ ಮಾಹಿತಿಯಂತೆ ಅಗತ್ಯ ಚಿಕಿತ್ಸೆಗೆ ಕ್ರಮ ಅವಶ್ಯವಿದೆ. ಹೋಬಳಿ ಕೇಂದ್ರದಲ್ಲಿ ಅಗತ್ಯ ಕೊರೊನಾ ಪರೀಕ್ಷಾ ಕೇಂದ್ರ ತೆರೆದರೆ ಜಿಲ್ಲಾ ಕೇಂದ್ರಕ್ಕೆ ಅಲೆಯುವುದು ತಪ್ಪುತ್ತದೆ ಎಂದರು.

    ಮಾಜಿ ಸಚಿವ ಎಚ್.ಡಿ.ರೇವಣ್ಣ ಮಾತನಾಡಿ, ಕೆಲ ದಿನಗಳಿಂದ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ, ಪಾಸಿಟಿವಿಟಿ ದರವೂ ಕಡೆಮೆಯಾಗಿದೆ. ಮೂರನೇ ಅಲೆ ಸಮರ್ಥವಾಗಿ ನಿಭಾಯಿಸಲು ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಕಾರ್ಯನಿರ್ವಹಣೆ ಮಾಡುವ ಅಗತ್ಯವಿದೆ. ನಮ್ಮ ಕ್ಷೇತ್ರದಲ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ 15 ಮಕ್ಕಳ ಬೆಡ್ ಅವಶ್ಯಕತೆ ಇದೆ, ತುರ್ತಾಗಿ ಬೇಕಿದೆ ಎಂದರು. ಈಗಾಗಲೇ 18 ವೆಂಟಿಲೇಟರ್ 2.32 ಕೋಟಿ ವೆಚ್ಚದಲ್ಲಿ ಜಿಲ್ಲಾ ಆಸ್ಪತ್ರೆಗೆ ವಿತರಣೆಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಅಶೋಕ್ ಉತ್ತರಿಸಿದರು.

    ಸಭೆಯಲ್ಲಿ ಡಿಸಿ ಗಿರೀಶ್, ಸಿಇಒ ಪರಮೇಶ್, ಎಸ್‍ಪಿ ಶ್ರೀನಿವಾಸ್ ಗೌಡ, ಶಾಸಕರಾದ ಸಿ.ಎನ್.ಬಾಲಕೃಷ್ಣ, ಪ್ರೀತಮ್.ಜೆ.ಗೌಡ ಸೇರಿದಂತೆ ಜಿಲ್ಲೆಯ ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

  • ಪ್ರತಿದಿನ 1 ಕೋಟಿ ಜನರಿಗೆ ಲಸಿಕೆ ನೀಡುವಂತೆ ಕೇಂದ್ರಕ್ಕೆ ಸೂಚಿಸಿ- ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಕಾಂಗ್ರೆಸ್ ಮನವಿ

    ಪ್ರತಿದಿನ 1 ಕೋಟಿ ಜನರಿಗೆ ಲಸಿಕೆ ನೀಡುವಂತೆ ಕೇಂದ್ರಕ್ಕೆ ಸೂಚಿಸಿ- ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಕಾಂಗ್ರೆಸ್ ಮನವಿ

    ಮಂಗಳೂರು: ದೇಶದಲ್ಲಿ ಪ್ರತಿ ದಿನ ಒಂದು ಕೋಟಿ ಜನರಿಗೆ ಕೋವಿಡ್ ಲಸಿಕೆಯನ್ನು ಸಂಪೂರ್ಣ ಉಚಿತವಾಗಿ ನೀಡಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿ ಎಂದು ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಮನವಿ ಮಾಡಿದೆ.

    ದೇಶದಲ್ಲಿ ಸದ್ಯ ಪ್ರತಿದಿನ ಕೇವಲ 16 ಲಕ್ಷ ಮಂದಿಗೆ ಮಾತ್ರ ಲಸಿಕೆ ನೀಡಲಾಗುತ್ತಿದೆ. ಈ ವೇಗದಲ್ಲಿ ಲಸಿಕೆ ನೀಡುತ್ತಾ ಹೋದರೆ ಎಲ್ಲರಿಗೂ ಲಸಿಕೆ ದೊರೆಯುವುದು ತುಂಬಾ ವಿಳಂಬ ಆಗುತ್ತದೆ. ಹೀಗಾಗಿ ಕೇಂದ್ರ ಸರ್ಕಾರ ಉಚಿತ ಲಸಿಕೆ ನೀಡುವ ದಿನದ ಗುರಿಯನ್ನು ಒಂದು ಕೋಟಿಗೆ ನಿಗದಿ ಮಾಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಯವರಿಗೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನಿಯೋಗ ಮನವಿ ಮಾಡಿದೆ. ಇದನ್ನೂ ಓದಿ: ದಿನಕ್ಕೆ ಕೋಟಿ ಜನರಿಗೆ ಕೋವಿಡ್‌ ಲಸಿಕೆ ಕೊಡಿ: ರಾಜ್ಯಪಾಲರಿಗೆ ಕೈ ನಾಯಕರ ಮನವಿ

    ಕಾಂಗ್ರೆಸ್ ನಿಯೋಗದಲ್ಲಿ ಡಿಸಿಸಿ ಅಧ್ಯಕ್ಷರೂ ಆದ ವಿಧಾನಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್, ಮಾಜಿ ಸಚಿವರಾದ ಬಿ.ರಮಾನಾಥ್ ರೈ ಮತ್ತು ಅಭಯಚಂದ್ರ ಜೈನ್, ಶಾಸಕ ಯು.ಟಿ.ಖಾದರ್, ಮಾಜಿ ಶಾಸಕರಾದ ಶಕುಂತಲಾ ಶೆಟ್ಟಿ, ಜೆ.ಆರ್.ಲೋಬೊ, ಮೊಯ್ದೀನ್ ಬಾವ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರು ಮತ್ತಿತರರು ಉಪಸ್ಥಿತರಿದ್ದರು.

    ದೇಶದಲ್ಲಿ ಕಳೆದ ಮೇ 31ರ ವರೆಗೆ 21.31 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಅಂದರೆ ಕೇವಲ 4.45 ಕೋಟಿ ಜನರಿಗೆ ಲಸಿಕೆ ನೀಡಿದಂತಾಗುತ್ತದೆ. ಇದು ಭಾರತದ ಜನಸಂಖ್ಯೆಯ ಕೇವಲ ಶೇ.3.17 ಮಾತ್ರ. ಕಳೆದ 134 ದಿನಗಳಲ್ಲಿ ಪ್ರತಿ ದಿನ ಸರಾಸರಿ ಕೇವಲ 16 ಲಕ್ಷ ಡೋಸ್ ಲಸಿಕೆ ಮಾತ್ರ ನೀಡಲಾಗುತ್ತಿದೆ. ಈ ರೀತಿಯಲ್ಲಿ ಲಸಿಕಾ ಕಾರ್ಯಕ್ರಮ ನಡೆದರೆ ಎಲ್ಲ ವಯಸ್ಕ ಜನರಿಗೆ ಲಸಿಕೆ ನೀಡುವುದು ವಿಳಂಬ ಆಗಲಿದ್ದು, ಮೂರನೇ ಅಲೆಗೆ ಮುನ್ನ ನಮ್ಮ ದೇಶದ ಜನರ ರಕ್ಷಣೆ ಹೇಗೆ ಸಾಧ್ಯ ಎಂದು ನರೇಂದ್ರ ಮೋದಿ ಸರ್ಕಾರ ಉತ್ತರಿಸಬೇಕಾಗಿದೆ ಎಂದು ಕಾಂಗ್ರೆಸ್ ಹರಿಹಾಯ್ದಿದೆ.

    ಕೇಂದ್ರ ಸರ್ಕಾರ ಲಸಿಕೆಗಳನ್ನು ಖರೀದಿಸಿ ಉಚಿತವಾಗಿ ರಾಜ್ಯ ಸರ್ಕಾರಗಳಿಗೆ ನೀಡಬೇಕಾಗಿರುವುದು ಇಂದಿನ ಅಗತ್ಯ. ಡಿಸೆಂಬರ್ ಅಂತ್ಯದ ವೇಳೆಗೆ ಹದಿನೆಂಟು ಮತ್ತು ಹೆಚ್ಚಿನ ವಯೋಮಾನದವರಿಗೆ ಉಚಿತ ಲಸಿಕೆ ಹಾಕಬೇಕಾಗುತ್ತದೆ. ಕೇಂದ್ರ ಸರ್ಕಾರ ಮೂರು ರೀತಿಯ ದರ ನಿಗದಿ ಮಾಡಿರುವುದು ನ್ಯಾಯಯುತವಾಗಿಲ್ಲ. ಇಂದು ಖಾಸಗಿ ಆಸ್ಪತ್ರೆಗಳಲ್ಲಿ 600 ರೂ.ನಿಂದ 1,500 ರೂಪಾಯಿ ದರದಲ್ಲಿ ಜನರಿಗೆ ಲಸಿಕೆ ನೀಡಲಾಗುತ್ತಿದೆ. ಸಂಕಷ್ಟ ಕಾಲದಲ್ಲಿ ಮೋದಿ ಸರ್ಕಾರ ಕೆಲವು ಮಂದಿಗೆ ಲಾಭ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ಕಾಂಗ್ರೆಸ್ ಮನವಿಯಲ್ಲಿ ಹೇಳಿದೆ.

  • ದೆಹಲಿ ಸಮಾವೇಶಕ್ಕೆ ಉಡುಪಿಯ ಲಿಂಕ್ – ಪ್ರವಾಸ ಮಾಡಿದ್ದವರಿಗೆ ಹೈ ರಿಸ್ಕ್ ಕ್ವಾರಂಟೈನ್ ಎಂದ ಡಿಸಿ

    ದೆಹಲಿ ಸಮಾವೇಶಕ್ಕೆ ಉಡುಪಿಯ ಲಿಂಕ್ – ಪ್ರವಾಸ ಮಾಡಿದ್ದವರಿಗೆ ಹೈ ರಿಸ್ಕ್ ಕ್ವಾರಂಟೈನ್ ಎಂದ ಡಿಸಿ

    ಉಡುಪಿ: ಕೊರೊನಾ ಹಾಟ್ ಸ್ಪಾಟ್ ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಉಡುಪಿ ಜಿಲ್ಲೆಯಿಂದ 16 ಮಂದಿ ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ ಎಂಬ ಮಾಹಿತಿಯಿದೆ. ಉಡುಪಿ, ಕುಂದಾಪುರ- ಬೈಂದೂರು, ಕಾರ್ಕಳ, ಪಡುಬಿದ್ರೆ ವ್ಯಾಪ್ತಿಯ ಯುವಕರು ಮತ್ತು ಮಧ್ಯವಯಸ್ಕರು ಜಮಾತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆಂಬ ಮಾಹಿತಿ ರಾಜ್ಯದಿಂದ ಜಿಲ್ಲೆಗೆ ರವಾನೆಯಾಗಿದೆ.

    ಮಂಗಳವಾರ ರಾತ್ರಿ ಈ ಮಾಹಿತಿ ಬಂದಿದ್ದು, ಆಯಾ ಪೊಲೀಸ್ ಠಾಣೆಯ ಮೂಲಕ ಶಿಬಿರಾರ್ಥಿಗಳನ್ನು ಹಾಗೂ ಶಿಬಿರಾರ್ಥಿಗಳ ಸಂಪರ್ಕಕ್ಕೆ ಬಂದವರನ್ನು ಗುರುತಿಸುವ ಕೆಲಸ ನಡೆದಿದೆ. 16 ಮಂದಿಯನ್ನು ಕೂಡ ಸಂಪೂರ್ಣವಾಗಿ ಕ್ವಾರಂಟೈನ್ ಮಾಡಬೇಕು ಎಂದು ಕೇಂದ್ರದಿಂದ ಖಡಕ್ ಆದೇಶ ಪ್ರತಿ ಜಿಲ್ಲೆಗಳಿಗೆ ಬಂದಿದೆ. ಹೀಗಾಗಿ 16 ಮಂದಿಯನ್ನು ಹೋಂ ಕ್ವಾರಂಟೈನ್ ಮಾಡಲಾಗುವುದು ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

    ಆದರೆ ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಈ ಮಾಹಿತಿಯನ್ನು ಅಲ್ಲಗಳೆದಿದ್ದಾರೆ. ದೆಹಲಿಯ ಜಮಾತ್ ಸಮಾವೇಶಕ್ಕೆ ಉಡುಪಿ ಜಿಲ್ಲೆಯಿಂದ ಯಾರೂ ಪಾಲ್ಗೊಂಡಿಲ್ಲ. ಸಾರ್ವಜನಿಕರು ಆತಂಕ ಪಡುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ. ಪ್ರವಾಸ ಮಾಡಿದವರೆಲ್ಲರ ಮಾಹಿತಿ ಸಿಕ್ಕಿದೆ. ನಿಜಾಮುದ್ದೀನ್‍ನಿಂದ ಬಂದವರ ಜೊತೆ ಪ್ರಯಾಣಿಸಿದ ಸಂದರ್ಭದಲ್ಲಿ ರೈಲು, ವಿಮಾನದಲ್ಲಿ ಓಡಾಡಿದವರ ತಪಾಸಣೆಗೆ ಆದೇಶಿಸಲಾಗಿದೆ. ರೈಲಿನಲ್ಲಿ ಸಂಚಾರ ಮಾಡಿದವರ ಮಾಹಿತಿಯ ಮೇರೆಗೆ ಹೈ ರಿಸ್ಕ್ ಪಟ್ಟಿ ಬಿಡುಗಡೆ ಮಾಡಿದ್ದು, ಅವರ ಮೇಲೂ ನಿಗಾ ಇಡಲಾಗಿದೆ ಎಂದರು.

  • ಉತ್ತರ ಕನ್ನಡದಲ್ಲಿ ಮನೆಗೇ ಬರುತ್ತಿದೆ ಅಗತ್ಯ ವಸ್ತುಗಳು – ಸುಮ್ನೇ ಓಡಾಡಿದ್ರೆ ಲೈಸೆನ್ಸ್ ಕ್ಯಾನ್ಸಲ್

    ಉತ್ತರ ಕನ್ನಡದಲ್ಲಿ ಮನೆಗೇ ಬರುತ್ತಿದೆ ಅಗತ್ಯ ವಸ್ತುಗಳು – ಸುಮ್ನೇ ಓಡಾಡಿದ್ರೆ ಲೈಸೆನ್ಸ್ ಕ್ಯಾನ್ಸಲ್

    ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಜನರು ಅನಾವಶ್ಯಕವಾಗಿ ಮನೆಯಿಂದ ಹೊರ ಬಂದು ಓಡಾಟ ನಡೆಸುವುದನ್ನ ತಪ್ಪಿಸಲು ಜಿಲ್ಲಾಡಳಿತ ಕ್ರಮ ತಗೆದುಕೊಂಡಿದೆ. ಮನೆ ಬಾಗಿಲಿಗೆ ವಸ್ತುಗಳನ್ನ ಕೊಡುವ ಕ್ರಮಕ್ಕೆ ಜಿಲ್ಲಾಡಳಿತ ಇಂದಿನಿಂದಲೇ ಚಾಲನೆ ನೀಡಿದೆ.

    ರಾಜ್ಯದಲ್ಲಿಯೇ ಪ್ರಥಮ ಪ್ರಯತ್ನ ಎನ್ನುವಂತೆ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಿದ್ದು ಈಗಾಗಲೇ ಅಗತ್ಯ ವಸ್ತುಗಳ ಮಾರಾಟಗಾರರಿಗೆ ಸ್ಥಳೀಯ ಸಂಸ್ಥೆಗಳ ಮೂಲಕ ಪಾಸ್ ವಿತರಣೆ ಮಾಡಿದೆ. ಕೊರೊನಾ ವೈರಸ್ ಹರಡುವುದನ್ನು ತಡೆಯಲು ದೇಶಾದ್ಯಂತ ಲಾಕ್‍ಡೌನ್ ಮಾಡಿದ್ದರೂ ಅಗತ್ಯ ವಸ್ತುಗಳ ಖರೀದಿ ನೆಪ ಹೇಳಿ ಹಲವರು ಜಿಲ್ಲೆಯಲ್ಲಿ ಅನವಶ್ಯಕವಾಗಿ ಮನೆ ಬಿಟ್ಟು ಹೊರ ಬರುತ್ತಿದ್ದಾರೆ.

    ಜನರು ಗುಂಪು ಗುಂಪಾಗಿ ಸೇರುತ್ತಿರುವುದರಿಂದ ವೈರಸ್ ಹರಡುವ ಸಾಧ್ಯತೆ ಹೆಚ್ಚಾಗಿರುವುದರಿಂದ ಮನೆ ಮನೆಗೆ ಅಗತ್ಯ ವಸ್ತುಗಳನ್ನು ಜಿಲ್ಲಾಡಳಿತ ಇಂದಿನಿಂದಲೇ ವಿತರಣೆ ಮಾಡುತ್ತಿದೆ. ಅಗತ್ಯ ವಸ್ತುಗಳಾದ ದಿನಸಿ, ಹಾಲು, ತರಕಾರಿ, ಮೊಟ್ಟೆ, ಸೀಲ್ಡ್ ನೀರನ್ನ ವ್ಯಾಪಾರಸ್ಥರ ಮೂಲಕ ಮನೆಗಳ ಬಳಿಯೇ ಬಂದು ವಿತರಣೆ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರತ್ಯೇಕ ವಾರ್ಡುಗಳಿಗೆ ವ್ಯಾಪಾರಸ್ಥರನ್ನ ವಿಂಗಡಿಸಿ ವಸ್ತುಗಳ ವಿತರಣೆ ಮಾಡಲಾಗುತಿದ್ದು, ಈ ಮೂಲಕ ಜನರು ಹೊರ ಹೋಗುವುದನ್ನು ತಪ್ಪಿಸಲು ಕ್ರಮ ತೆಗೆದುಕೊಳ್ಳಲಾಗಿದೆ.

    ಸುಮ್ಮ ಸುಮ್ಮನೆ ಓಡಾಡುವವರಿಗೆ ಶಿಕ್ಷೆ ಏನು ಗೊತ್ತಾ?
    ಜಿಲ್ಲಾಡಳಿತದ ಆದೇಶ ಮೀರುವವರ ವಿರುದ್ಧ ಇನ್ನು ಖಡಕ್ ಆ್ಯಕ್ಷನ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಜಿಲ್ಲಾಡಳಿತ ಬಂದಿದೆ. ಆದೇಶ ಉಲ್ಲಂಘಿಸಿ ರಸ್ತೆಯಲ್ಲಿ ತಿರುಗುವವರನ್ನು ಇನ್ನು ಸುಮ್ಮನೇ ಬಿಡುವ ಮಾತಿಲ್ಲ. ಗಂಭೀರ ಸ್ಥಿತಿಯ ಬಗ್ಗೆ ನಿರ್ಲಕ್ಷ್ಯ ಮಾಡುವವರನ್ನು ಸಾರ್ವಜನಿಕವಾಗಿಯೇ ತೋರಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದು, ಇದು ಶುಕ್ರವಾರದಿಂದ ಚಾಲ್ತಿಗೆ ಬರಲಿದೆ.

    ಪ್ರಥಮ ಬಾರಿ ನಿಯಮ ಉಲ್ಲಂಘಿಸಿದಲ್ಲಿ ಕೈ ಮೇಲೆ ಅಳಿಸಲಾಗದ ಇಂಕ್ ಸೀಲ್ ಹಾಕಲಾಗುತ್ತದೆ. ಎರಡನೇ ಬಾರಿ ನಿಯಮ ಉಲ್ಲಂಘಿಸಿದಲ್ಲಿ ಸಾರ್ವಜನಿಕವಾಗಿ ಹಾಗೂ ವ್ಯಕ್ತಿಯ ಮನೆಯ ಬಳಿ ಆತನ ಹೆಸರನ್ನು ಮೈಕ್ ಮೂಲಕ ಘೋಷಣೆ ಮಾಡಿ ಮಾನ ಹರಾಜು ಹಾಕಲಾಗುತ್ತೆ. ಇದಕ್ಕೂ ಮೀರಿ ಮೂರನೇ ಬಾರಿ ನಿಯಮ ಉಲ್ಲಂಘಿಸಿದಲ್ಲಿ ವ್ಯಕ್ತಿಯ ಫೋಟೋ ಜಿಲ್ಲಾಡಳಿತದ ವೆಬ್‍ಸೈಟ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟ್ ಮಾಡಲಾಗುತ್ತದೆ. ಅಷ್ಟೇ ಅಲ್ಲದೇ ನಿಯಮ ಉಲ್ಲಂಘಿಸುವವರ ವಾಹನದ ರಿಜಿಸ್ಟ್ರೇಶನ್ ಹಾಗೂ ಲೈಸೆನ್ಸ್ ರದ್ದುಗೊಳಿಸುವುದಾಗಿ ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

    ಜನರು ಮನೆಯಲ್ಲೇ ಇರಿ, ಯಾವುದಕ್ಕೂ ಭಯಪಡುವ ಅಗತ್ಯವಿಲ್ಲ. ದಿನನಿತ್ಯದ ಅಗತ್ಯ ಸಾಮಾನುಗಳನ್ನು ಮನೆಬಾಗಿಲಿಗೇ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಜನರು ನಿಯಮ ಉಲ್ಲಂಘಿಸುವುದನ್ನು ಸರಿಮಾಡಲು ಸಮಯ ವ್ಯರ್ಥವಾಗುತ್ತಿದೆ, ಜನರು ನಿಯಮ ಪಾಲಿಸಿ ಜಿಲ್ಲಾಡಳಿತದೊಂದಿಗೆ ಸಾಥ್ ನೀಡಿದಲ್ಲಿ ಜನರಿಗೆ ಎಲ್ಲಾ ಅಗತ್ಯ ವಸ್ತುಗಳ ವ್ಯವಸ್ಥೆ ಕಲ್ಪಿಸುವ ಕೆಲಸ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಹೇಳಿದ್ದಾರೆ.