Tag: Corona Warriors

  • ಅವ್ಯವಸ್ಥೆ ಪ್ರಶ್ನಿಸಿದ್ದಕ್ಕೆ ಆರು ಮಂದಿ ಕೊರೊನಾ ವಾರಿಯರ್ಸ್ ಅಮಾನತು

    ಅವ್ಯವಸ್ಥೆ ಪ್ರಶ್ನಿಸಿದ್ದಕ್ಕೆ ಆರು ಮಂದಿ ಕೊರೊನಾ ವಾರಿಯರ್ಸ್ ಅಮಾನತು

    ಶಿವಮೊಗ್ಗ: ಕೊರೊನಾ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ ತಮಗೆ ನೀಡಿರುವ ವಸತಿ ವ್ಯವಸ್ಥೆ ಸರಿಯಿಲ್ಲ ಹಾಗೂ ಕಳಪೆ ಊಟ ವಿತರಿಸುತ್ತಿದ್ದಾರೆ ಎಂದು ಆರೋಪಿಸಿ ವಿಡಿಯೋ ಮಾಡಿ, ವಾಟ್ಸಪ್ ಗ್ರೂಪ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದರು. ಅಧಿಕಾರಿಗಳ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಇದೀಗ ಈ ಆರು ಮಂದಿಯನ್ನು ಸಿಮ್ಸ್ ನಿರ್ದೇಶಕ ಡಾ. ಗುರುಪಾದಸ್ವಾಮಿ ಅಮಾನತುಗೊಳಿಸಿ ಆದೇಶಿಸಿದ್ದಾರೆ.

    ಖಾಯಂ ಶುಶ್ರೂಷಕಿಯಾದ ಚೇತನಾಕುಮಾರಿ, ಹೊರಗುತ್ತಿಗೆ ಶುಶ್ರೂಷಕಿ ಭುವನೇಶ್ವರಿ, ಹೊರಗುತ್ತಿಗೆ ಸಿಬ್ಬಂದಿ ಅಟೆಂಡರ್ ಅರುಣ್ ಕುಮಾರ್, ಪದ್ಮರಾಜ್, ಸ್ವೀಪರ್ ಅನಿತಾ, ಲಕ್ಷ್ಮಿದೇವಿ ಅವರನ್ನು ಅಮಾನತು ಗೊಳಿಸಲಾಗಿದೆ.

    ಶಿವಮೊಗ್ಗದಲ್ಲಿ ಕಳೆದ ಎರಡು ದಿನದ ಹಿಂದೆ ಅಹಮದಾಬಾದ್‍ನಿಂದ ವಾಪಸ್ ಬಂದಿದ್ದ 8 ಮಂದಿ ತಬ್ಲಿಘಿಗಳಲ್ಲಿ ಕೊರೊನಾ ಪಾಸಿಟಿವ್ ವರದಿಯಾಗಿದೆ. ಹೀಗಾಗಿ ಸೋಂಕಿತರನ್ನು ಮೆಗ್ಗಾನ್ ಭೋಧನಾ ಆಸ್ಪತ್ರೆಯಲ್ಲಿ ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಇವರಿಗೆ ಚಿಕಿತ್ಸೆ ನೀಡಲು ಹಲವು ಸಿಬ್ಬಂದಿಯನ್ನು ಮೂರು ಪಾಳಿಯಲ್ಲಿ ನೇಮಿಸಲಾಗಿದೆ. ಅಲ್ಲದೇ ಕೋವಿಡ್-19 ಆಸ್ಪತ್ರೆಯಲ್ಲಿ ಪಾಸಿಟಿವ್ ಇರುವವರಿಗೆ ಚಿಕಿತ್ಸೆ ನೀಡುವವರು ಮನೆಗೆ ಹೋಗುವಂತಿಲ್ಲ. ಆ ಎಲ್ಲಾ ಸಿಬ್ಬಂದಿಗೆ ಜಿಲ್ಲಾಡಳಿತ ಊಟ, ವಸತಿ ವ್ಯವಸ್ಥೆ ಕಲ್ಪಿಸಿದೆ. ಆದರೆ ಶುಶ್ರೂಷಕರು ಸೇರಿದಂತೆ ಇತರೆ ಸಿಬ್ಬಂದಿಗೆ ಶುಶ್ರೂಷಕರ ತರಬೇತಿ ವಸತಿ ನಿಲಯದಲ್ಲಿ ವ್ಯವಸ್ಥೆ ಮಾಡಿದ್ದಾರೆ.

    ಆದರೆ ಈ ವಸತಿ ನಿಲಯದಲ್ಲಿ ಸರಿಯಾದ ಮೂಲಭೂತ ಸೌಲಭ್ಯ ಇಲ್ಲ. ಊಟದ ವ್ಯವಸ್ಥೆ ಸರಿಯಿಲ್ಲ ಎಂದು ಸಿಬ್ಬಂದಿ ಆರೋಪಿಸಿದ್ದರು. ಅಲ್ಲದೇ ಇದರ ವಿರುದ್ಧ ವಿಡಿಯೋ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಅವ್ಯವಸ್ಥೆ ಪ್ರಶ್ನಿಸಿದ್ದಕ್ಕೆ ಇದೀಗ ಕೊರೊನಾ ವಾರಿಯರ್ಸ್‍ಗೆ ಅಮಾನತು ಶಿಕ್ಷೆ ವಿಧಿಸಲಾಗಿದೆ. ಅಲ್ಲದೇ ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿರುವ ಆರೋಗ್ಯ ಇಲಾಖೆ ನೌಕರರ ಸಂಘ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘ ಅಮಾನತು ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು ಇಲ್ಲದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

  • ಕೊರೊನಾ ವಾರಿಯರ್ಸ್‍ಗೆ ಪಾದ ಪೂಜೆ ಮಾಡಿ ದಾದಿಯರ ದಿನಾಚರಣೆ

    ಕೊರೊನಾ ವಾರಿಯರ್ಸ್‍ಗೆ ಪಾದ ಪೂಜೆ ಮಾಡಿ ದಾದಿಯರ ದಿನಾಚರಣೆ

    ಹಾವೇರಿ: ಕೊರೊನಾ ವಿರುದ್ಧ ಹೋರಾಟ ಮಾಡುತ್ತಿರುವ ವಾರಿಯರ್ಸ್ ಕಾಲು ತೊಳೆದು, ಕುಂಕುಮ ಹಚ್ಚಿ, ಪೂಜೆ ಮಾಡಿದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಅಕ್ಕಿಆಲೂರು ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ನಾಲ್ವರು ದಾದಿಯರಿಗೆ ಗ್ರಾಮದ ವಿಶ್ವನಾಥ ಹಿರೇಮಠ ಮತ್ತು ಕೃಷ್ಣ ಈಳಿಗೇರ ಸ್ನೇಹ ಬಳಗದ ವತಿಯಿಂದ ಪಾದ ಪೂಜೆ ನೆರವೇರಿಸಲಾಗಿದೆ. ಈ ಮೂಲಕ ಸ್ನೇಹ ಬಳಗದ ಸದಸ್ಯರು ಕೊರೊನಾ ವಾರಿಯರ್ಸ್ ಕಾರ್ಯಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

    ಕೊರೊನಾ ವಿರುದ್ಧ ಹೋರಾಟ ಮಾಡುತ್ತಿರುವ ದಾದಿಯರ ಕಾರ್ಯವನ್ನು ಶ್ಲಾಘಿಸಿ ನಾಲ್ವರಿಗೂ ಸೀರೆಯನ್ನು ಉಡುಗೊರೆಯಾಗಿ ನೀಡಿ ಗೌರವ ಸಲ್ಲಿಸಿದ್ದಾರೆ. ದಾದಿಯರ ದಿನವಾದ ಇಂದು ತಮ್ಮ ಕೆಲಸವನ್ನ ಗುರ್ತಿಸಿ ಈ ರೀತಿ ಗೌರವ ಸಲ್ಲಿಸಿದ್ದಕ್ಕೆ ಕೊರೊನಾ ವಾರಿಯರ್ಸ್ ಸಹ ಸ್ನೇಹ ಬಳಗದ ಸದಸ್ಯರಿಗೆ ಧನ್ಯವಾದ ತಿಳಿಸಿದ್ದಾರೆ.

  • ತುಂಬು ಗರ್ಭಿಣಿಯಾದ್ರೂ ಹಗಲಿರುಳು ಕೆಲಸ – ಸೀಮಂತ ಮೂಲಕ ಕೃತಜ್ಞತೆ

    ತುಂಬು ಗರ್ಭಿಣಿಯಾದ್ರೂ ಹಗಲಿರುಳು ಕೆಲಸ – ಸೀಮಂತ ಮೂಲಕ ಕೃತಜ್ಞತೆ

    ತುಮಕೂರು: ದೇಶಾದ್ಯಂತ ಕೊರೊನಾ ವಾರಿಯರ್ಸ್‌ಗೆ ಅನೇಕ ರೀತಿಯಲ್ಲಿ ಸನ್ಮಾನ ಮಾಡಲಾಗುತ್ತಿದೆ. ಇದೀಗ ತುಮಕೂರು ಗ್ರಾಮಾಂತರದ ಕೊರೊನಾ ವಾರಿಯರ್ಸ್‌ಗೆ ವಿಶೇಷವಾಗಿ ಸನ್ಮಾನಿಸಿ ಅಭಿನಂದಿಸಲಾಗಿದೆ. ತುಂಬು ಗರ್ಬಿಣಿಯಾದರೂ ಹಗಲಿರುಳು ದುಡಿಯುತ್ತಿದ್ದ ಆಶಾ ಕಾರ್ಯಕರ್ತೆಗೆ ಸೀಮಂತ ಮಾಡಿ ಕೃತಜ್ಞತೆ ಸಲ್ಲಿಸಲಾಗಿದೆ.

    ಗ್ರಾಮಾಂತರ ಶಾಸಕ ಗೌರಿಶಂಕರ ನೇತೃತ್ವದಲ್ಲಿ ಈ ಅಭಿನಂದನಾ ಕಾರ್ಯಕ್ರಮ ನೆರವೇರಿದೆ. ಆಶಾ ಕಾರ್ಯಕರ್ತೆಯರು ತಮ್ಮ ಜೀವದ ಹಂಗು ತೊರೆದು ಮನೆ ಮನೆಗೂ ತೆರಳಿ ಕೊರೊನಾ ತಡೆಗಟ್ಟುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ಅಂತವರ ಸೇವೆಯನ್ನು ಗುರುತಿಸಿ ಸುಮಾರು 300 ಜನ ಆಶಾಕಾರ್ಯಕರ್ತೆಯರಿಗೆ ವಿಶೇಷ ಸನ್ಮಾನವನ್ನು ಏರ್ಪಡಿಸಲಾಗಿತ್ತು.

    ತುಮಕೂರು ಗ್ರಾಮಾಂತರದ ಗೂಳೂರಿನಲ್ಲಿ ಜೆಡಿಎಸ್ ಶಾಸಕ ಡಿ.ಸಿ ಗೌರಿಶಂಕರ್ 300 ಜನ ಆಶಾ ಕಾರ್ಯಕರ್ತೆಯರಿಗೆ ಸೀರೆ, ಅರಿಶಿಣ, ಕುಂಕುಮ, ಹೂ, ಬಳೆ ಆಹಾರ ಕಿಟ್, ತರಕಾರಿ ನೀಡಿ ಸನ್ಮಾಸಿಲಾಯಿತು. ಪ್ರತಿಯೊಬ್ಬ ಅಶಾ ಕಾರ್ಯಕರ್ತೆಗೂ ಹೂಮಳೆ ಸುರಿಸುವುದರ ಮೂಲಕ ಅವರ ಕೆಲಸವನ್ನು ಶ್ಲಾಘಿಸಿದರು.

    ಆಶಾ ಕಾರ್ಯಕರ್ತೆಯರ ತಾಲೂಕು ಮೇಲ್ವಿಚಾರಕಿ ಭಾರತಿ ಗರ್ಭಿಣಿಯಾಗಿದ್ದು, ಅವರ ಸೀಮಂತ ಕಾರ್ಯಕ್ರಮವನ್ನು ಮಾಡುವುದರ ಮೂಲಕ ಅವರಿಗೆ ಆತ್ಮ ಸ್ಥೈರ್ಯ ತುಂಬಿದರು. ಈ ವೇಳೆ ಮಾತನಾಡಿದ ಭಾರತಿ, ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ನಾನೆಂದು ಜೊತೆಗಿರುತ್ತೇನೆ. ಸರ್ಕಾರ ಆದಷ್ಟು ಬೇಗ ಆಶಾ ಕಾರ್ಯಕರ್ತೆಯರ ತಿಂಗಳ ವೇತನವನ್ನು 10 ಸಾವಿರ ರೂ.ಗಳಿಗೆ ಹೆಚ್ಚಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.

    ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡರು, ಜೆಡಿಎಸ್ ಮಹಿಳಾ ಘಟಕ, ಪದಾಧಿಕಾರಿಗಳು ಭಾಗವಹಿಸಿದ್ದರು.

  • ಉತ್ತಮ ಆಹಾರ, ಊಳಿದುಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲದೆ ಕೊರೊನಾ ವಾರಿಯರ್ಸ್ ಆಕ್ರೋಶ

    ಉತ್ತಮ ಆಹಾರ, ಊಳಿದುಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲದೆ ಕೊರೊನಾ ವಾರಿಯರ್ಸ್ ಆಕ್ರೋಶ

    ಶಿವಮೊಗ್ಗ: ಕೊರೊನಾ ಕಾಣಿಸಿಕೊಂಡ ದಿನದಿಂದಲೂ ಹಗಲು ರಾತ್ರಿ ಎನ್ನದೇ, ಮನೆಗೂ ಹೋಗದೆ ನರ್ಸ್ ಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಅವರಿಗೆ ಊಟ ಹಾಗೂ ಸೂಕ್ತ ವ್ಯವಸ್ಥೆ ಕಲ್ಪಿಸದೆ ಗೋಳಾಡುವಂತೆ ಮಾಡಲಾಗಿದೆ.

    ಶಿವಮೊಗ್ಗದ ಮೆಗ್ಗಾನ್ ಭೋಧನಾ ಆಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ. ಇಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳು ಮನೆಗೆ ಹೋಗುವಂತಿಲ್ಲ. ಕೊರೊನಾ ವಾರಿಯರ್ ಗಳು ಉಳಿದುಕೊಳ್ಳಲು ಜಿಲ್ಲಾಡಳಿತ ನಗರದ ವಿವಿಧ ಹೋಟೆಲ್ ಗಳಲ್ಲಿ ವ್ಯವಸ್ಥೆ ಮಾಡಿದೆ. ಆದರೆ ಹೋಟೆಲ್ ನಲ್ಲಿ ಕೊಠಡಿಗಳು ಸರಿಯಿಲ್ಲ, ಅಲ್ಲಿ ಯಾವುದೇ ಸರಿಯಾದ ವ್ಯವಸ್ಥೆ ಇಲ್ಲ. ಜೊತೆಗೆ ಉತ್ತಮ ಗುಣಮಟ್ಟದ ಊಟವನ್ನು ಹೋಟೆಲ್ ನವರು ನೀಡುತ್ತಿಲ್ಲ ಎಂದು ನರ್ಸ್ ಗಳು ಆರೋಪಿಸಿದ್ದಾರೆ. ಅಲ್ಲದೆ ಉತ್ತಮ ಹೋಟೆಲ್ ನಲ್ಲಿ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.

    ಹೋಟೆಲ್‍ನಲ್ಲಿ ಊಟ, ತಿಂಡಿ ಸರಿ ಇಲ್ಲ. ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಆರೋಪಿಸಿ ನರ್ಸ್ ಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನರ್ಸ್ ಗಳು ಹೋಟೆಲ್ ಬಳಿ ಅಸಮಾಧಾನಗೊಂಡಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಠಾರೆ, ಕೊರೊನಾ ವಾರಿಯರ್ ಗಳಿಗೆ ಉತ್ತಮವಾದ ಹೋಟೆಲ್ ನಲ್ಲಿಯೇ ವ್ಯವಸ್ಥೆ ಮಾಡಿದ್ದೇವೆ. ಯಾವುದೇ ಸಮಸ್ಯೆಯಿಲ್ಲ. ಆದರೂ ನರ್ಸ್ ಗಳು ಉಳಿದುಕೊಂಡಿರುವ ಹೋಟೆಲ್ ಬೇಡ ಬದಲಾಯಿಸಿಕೊಡಿ ಅಂದರೆ ಬದಲಾಯಿಸುತ್ತೇವೆ ಎಂದು ಸಮಜಾಯಿಷಿ ನೀಡಿದ್ದಾರೆ.

  • ಮೊದಲ ಇನ್ನಿಂಗ್ಸ್‌ನಲ್ಲಿ ಲೀಡ್ ಪಡೆದಿದ್ದು, ಟೆಸ್ಟ್ ಪಂದ್ಯವನ್ನು ಗೆಲ್ಲಬೇಕಿದೆ: ಕುಂಬ್ಳೆ

    ಮೊದಲ ಇನ್ನಿಂಗ್ಸ್‌ನಲ್ಲಿ ಲೀಡ್ ಪಡೆದಿದ್ದು, ಟೆಸ್ಟ್ ಪಂದ್ಯವನ್ನು ಗೆಲ್ಲಬೇಕಿದೆ: ಕುಂಬ್ಳೆ

    – ನಿಸ್ವಾರ್ಥ ಸೇವೆ ಮಾಡುತ್ತಿರುವ ಕೊರೊನಾ ವಾರಿಯರ್ಸ್‍ಗೆ ಸೆಲ್ಯೂಟ್
    – ನಾವೆಲ್ಲರೂ ನಿಮ್ಮ ಜೊತೆ ಇದ್ದೇವೆ, ಕೊರೊನಾ ವಿರುದ್ಧ ಗೆಲ್ಲೋಣ

    ಬೆಂಗಳೂರು: ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಕೊರೊನಾ ವಾರಿಯರ್ಸ್ ಅವರಿಗೆ ಮಾಜಿ ಕ್ರಿಕೆಟಿಗ ಕನ್ನಡಿಗ ಅನಿಲ್ ಕುಂಬ್ಳೆಯವರು ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ನಾವೆಲ್ಲ ನಿಮ್ಮ ಜೊತೆ ಇದ್ದೇವೆ ಎಂದು ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

    ಕೊರೊನಾ ವಾರಿಯರ್ಸ್‍ಗೆ ಧನ್ಯವಾದ ತಿಳಿಸುವ ವಿಚಾರವಾಗಿ ಸಂಸದೆ ಸುಮಲತಾ ಅವರು ಅನಿಲ್ ಕುಂಬ್ಳೆ ಅವರನ್ನು ನಾಮೀನೇಟ್ ಮಾಡಿದ್ದು, ಈ ವಿಚಾರವಾಗಿ ಟ್ವಿಟ್ಟರ್ ನಲ್ಲಿ ವಿಡಿಯೋ ಶೇರ್ ಮಾಡಿರುವ ಕುಂಬ್ಳೆ ಅವರು, ಕೊರೊನಾ ವಿರುದ್ಧದ ಹೋರಾಟವನ್ನು ಟೆಸ್ಟ್ ಕ್ರಿಕೆಟ್‍ಗೆ ಹೋಲಿಸಿದ್ದಾರೆ. ಜೊತೆಗೆ ನಾವು ಮೊದಲ ಇನ್ನಿಂಗ್ಸ್ ನಲ್ಲಿ ಲೀಡ್ ಪಡೆದಿದ್ದೇವೆ ಎಂದು ಹೇಳಿದ್ದಾರೆ.

    ತಾವು ಮಾತನಾಡಿರುವ ವಿಡಿಯೋವನ್ನು ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿರುವ ಅನಿಲ್ ಕುಂಬ್ಳೆ, ನನ್ನನ್ನು ಇದಕ್ಕೆ ನಾಮೀನೇಟ್ ಮಾಡಿದ ಸುಮಲತಾ ಮೇಡಂಗೆ ಧನ್ಯವಾದಗಳು, ಈ ಸಮಯದಲ್ಲಿ ನಾನು, ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ, ಆಸ್ಪತ್ರೆ ಸಿಬ್ಬಂದಿಗೆ, ಪೌರ ಕಾರ್ಮಿಕರಿಗೆ, ಸ್ವಯಂ ಸೇವಕರಿಗೆ, ಪೊಲೀಸರು ಸೇರಿದಂತೆ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ನೀವು ಎಲ್ಲರೂ ಅದ್ಭುತವಾದ ಕೆಲಸ ಮಾಡುತ್ತಿದ್ದೀರಾ ಎಂದು ಹೇಳಿದ್ದಾರೆ.

    ನಾವೆಲ್ಲ ಒಟ್ಟಿಗೆ ಸೇರಿ ಒಗಟ್ಟಿನಿಂದ ಈ ಸೋಂಕಿನ ವಿರುದ್ಧ ಹೋರಾಡಬೇಕಿದೆ. ಈ ಹೋರಾಟ ಟೆಸ್ಟ್ ಪಂದ್ಯದ ರೀತಿ, ಕ್ರಿಕೆಟ್ ಟೆಸ್ಟ್ ಮ್ಯಾಚ್ ಕೇವಲ ಐದು ದಿನ ಇರುತ್ತದೆ. ಆದರೆ ಕೊರೊನಾ ಬಹಳ ದಿನ ಇರುವಂತದ್ದು, ಕ್ರಿಕೆಟ್‍ನಲ್ಲಿ ಎರಡು ಇನ್ನಿಂಗ್ಸ್ ಇದ್ದರೆ, ಇದರಲ್ಲಿ ಜಾಸ್ತಿ ಇರುತ್ತದೆ. ಆದರೆ ನಾವು ಮೊದಲ ಇನ್ನಿಂಗ್ಸ್ ನಲ್ಲಿ ಲೀಡ್ ಪಡೆದಿದ್ದೇವೆ. ಆದರೆ ಎರಡನೇ ಇನ್ನಿಂಗ್ಸ್ ಸ್ವಲ್ಪ ಕಠಿಣವಾಗಿ ಇರುತ್ತದೆ ಎಂದು ಅನಿಲ್ ಕುಂಬ್ಳೆ ತಿಳಿಸಿದ್ದಾರೆ.

    ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ನಾವು ಪಣತೊಡಬೇಕು. ಸರ್ಕಾರ ನಿಯಮಗಳನ್ನು ಪಾಲಿಸಬೇಕು. ಜೊತೆಗೆ ನಾವು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ನಾವು ಹೀಗಿದ್ದಾಗ ಕೊರೊನಾ ಸೋಂಕಿಗೆ ಭಯಪಡುವ ಅವಶ್ಯಕತೆ ಇರುವುದಿಲ್ಲ. ಕೊರೊನಾ ವಾರಿಯರ್ಸ್ ನಮಗಾಗಿ ಅವರ ಕುಟುಂಬವನ್ನು ತ್ಯಾಗ ಮಾಡಿ ಬಹಳ ರಿಸ್ಕ್‍ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರಿಗೂ ಧನ್ಯವಾದ ನಾವು ನಿಮ್ಮ ಜೊತೆ ಇದ್ದೇವೆ. ನಾವೆಲ್ಲ ಸೇರಿ ಕೊರೊನಾ ವಿರುದ್ಧ ಹೋರಾಡೋಣ ಎಂದು ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.

    ಟ್ವಿಟ್ಟರ್ ನಲ್ಲಿ ಕೊರೊನಾ ವಾರಿಯರ್ಸ್ ಧನ್ಯವಾದ ತಿಳಿಸಿದ್ದ ಸಮಲತಾ, ಈ ವಿಡಿಯೋದಲ್ಲಿ ಅನಿಲ್ ಕುಂಬ್ಳೆ, ದರ್ಶನ್, ಯಶ್ ಮತ್ತು ಅಥ್ಲೆಟ್ ಅಶ್ವಿನಿ ನಾಚಪ್ಪ ಅವರನ್ನು ನಾಮಿನೇಟ್ ಮಾಡಿದ್ದರು. ಈಗ ಇದಕ್ಕೆ ಅನಿಲ್ ಕುಂಬ್ಳೆ ಅವರು ಉತ್ತರ ನೀಡಿದ್ದಾರೆ. ಇದಕ್ಕೆ ರೀಪ್ಲೇ ಕೊಟ್ಟಿರುವ ಸುಮಲತಾ ಅವರು ಥ್ಯಾಂಕ್ಯೂ ಅನಿಲ್ ಕುಂಬ್ಳೆ, ನೀವು ನಮ್ಮ ಕರ್ನಾಟಕದ ಹೆಮ್ಮೆ ಎಂದು ತಿಳಿಸಿದ್ದಾರೆ.

  • 9 ತಿಂಗಳ ತುಂಬು ಗರ್ಭಿಣಿಯಾಗಿದ್ದರೂ ಕೊರೊನಾ ವಾರಿಯರ್

    9 ತಿಂಗಳ ತುಂಬು ಗರ್ಭಿಣಿಯಾಗಿದ್ದರೂ ಕೊರೊನಾ ವಾರಿಯರ್

    ಶಿವಮೊಗ್ಗ: 9 ತಿಂಗಳ ತುಂಬು ಗರ್ಭಿಣಿಯಾಗಿದ್ದರೂ ಕೊರೊನಾ ಎಂಬ ಸಂಕಷ್ಟದ ಕಾಲದಲ್ಲಿ ತಮ್ಮ ಕಷ್ಟದ ದಿನಗಳನ್ನು ಕೂಡ ಲೆಕ್ಕಿಸದೇ, ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿಯ ಕೆಲಸ ಮಾಡುವ ಇವರ ಹೆರಸು ರೂಪಾ, ಕೊರೊನಾದಂತಹ ವಿಷಮ ಪರಿಸ್ಥಿತಿಯಲ್ಲಿಯೂ ಕೂಡ ಸೇವೆಯಿಂದ ವಿಮುಖರಾಗದೇ, ಮಾತೃತ್ವದ ರಜೆ ಕೂಡ ತೆಗೆದುಕೊಳ್ಳದೇ ಕೊರೊನಾ ವಾರಿಯರ್ ಅಂದ್ರೆ ಏನು ಎಂಬುದು ತೋರಿಸಿಕೊಟ್ಟಿದ್ದಾರೆ.

    ಇಡೀ ವಿಶ್ವವೇ ಕೊರೊನಾ ಎಂಬ ಮಹಾಮಾರಿಯಿಂದ ತತ್ತರಿಸಿ ಹೋಗಿದೆ. ಕಣ್ಣಿಗೆ ಕಾಣದ ಒಂದು ವೈರಸ್ ನಿಂದ ಜನರು ಬಳಲುವಂತಾಗಿದ್ದು, ಯಾವಾಗಪ್ಪ ಇದು ಮುಗಿಯುತ್ತೇ ಎಂದು ಚಾತಕ ಪಕ್ಷಿಯಂತೆ ಜನರು ಕಾಯುತ್ತಿದ್ದಾರೆ. ಸಾರ್ವಜನಿಕರು ಮನೆಯಲ್ಲಿಯೇ ಇದ್ದು ಕೊರೊನಾ ಸೋಂಕಿನಿಂದ ದೂರವಿರಬೇಕೆಂದು ಲಾಕ್‍ಡೌನ್ ಘೋಷಿಸಿದ್ದು ಒಂದು ಕಡೆಯಾದರೆ, ಮತ್ತೊಂದು ಕಡೆ ಜೀವದ ಹಂಗನ್ನು ತೊರೆದು ಕೊರೊನಾ ವಾರಿಯರ್ಸ್ ಹೆಸರಿನಲ್ಲಿ ಆಶಾ ಮತ್ತು ಅಂಗನವಾಡಿ ಹಾಗೂ ವೈದ್ಯಕೀಯ ಸಿಬ್ಬಂದಿ ಹಗಲಿರುಳು ಜನರ ಸೇವೆ ಮಾಡುತ್ತಿದ್ದಾರೆ.

    ಅಂತಹದರಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಶ್ರೀ ಜಯಚಾಮರಾಜೇಂದ್ರ ತಾಲೂಕು ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿಯೊಬ್ಬರು ರೋಗಿಗಳ ಆರೈಕೆ ಮಾಡುತ್ತಿದ್ದಾರೆ. ಇದರಲ್ಲೇನು ವಿಶೇಷತೆ ಅಂತಿರಾ? ವಿಶೇಷವಿದೆ. ಇವರು ಕೇವಲ ಒಬ್ಬ ವೈದ್ಯಕೀಯ ಸಿಬ್ಬಂದಿಯಾಗಿದ್ರೆ ಬೇರೆ ಮಾತು. ಆದರೆ ಈ ಮಹಿಳೆ ನಿಜವಾಗಿಯೂ ಗಟ್ಟಿಗಿತ್ತಿ. ಯಾಕೆಂದರೆ ಇವರು 9 ತಿಂಗಳ ತುಂಬು ಗರ್ಭಿಣಿ. ಈ ಕೊರೊನಾ ಎಂಬ ಸಂಕಷ್ಟದ ಸಮಯದಲ್ಲಿ ತಮ್ಮ ಸಂಕಷ್ಟವನ್ನೆಲ್ಲ ಮರೆತು ರೋಗಿಗಳ ಸೇವೆ ಮತ್ತು ಅವರ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ.

    ಜನರು ರಸ್ತೆಗಿಳಿಯಲು ಅದರಲ್ಲೂ ವಿನಾಕಾರಣ ಆಸ್ಪತ್ರೆ ಒಳಗಡೆ ಅಲ್ಲ ಅದರ ಆವರಣಕ್ಕೂ ಹೋಗಲು ಹಿಂಜರಿಯುತ್ತಿರುವ ವೇಳೆಯಲ್ಲಿ ಈ ಕೊರೊನಾ ವಾರಿಯರ್ ರೂಪರವರು, ತಾವು ತುಂಬು ಗರ್ಭಿಣಿ ಎಂಬುದನ್ನು ಮರೆತು ತಮಗಾಗುವ ಆಯಾಸವನ್ನೆಲ್ಲಾ ಬದಿಗಿಟ್ಟು, ಸೇವೆಗೆ ಮುಂದಾಗಿದ್ದಾರೆ. ಪ್ರತಿದಿನ ಇಲ್ಲಿನ ತಾಲೂಕು ಆಸ್ಪತ್ರೆಗೆ ಬರುವ ರೋಗಿಗಳಿಗೆ ಮತ್ತು ಪ್ರಸೂತಿ ವಿಭಾಗದಲ್ಲಿ ದಾಖಲಾದವರ ಆರೈಕೆಯಲ್ಲಿ ತೊಡಗಿಕೊಂಡು ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ. ರೆಸ್ಟ್ ಎಂಬ ಹೆಸರಿನಲ್ಲಿ ಮನೆಯಲ್ಲಿರಲು ಇವರಿಗೆ ಇಷ್ಟವಾಗುವುದಿಲ್ಲವಂತೆ. ಕಳೆದ 8-9 ವರ್ಷಗಳಿಂದ ನಿರಂತರವಾಗಿ ಆಸ್ಪತ್ರೆಯಲ್ಲಿ ಸೇವೆ ಮಾಡಿಕೊಂಡು ಬಂದಿರುವ ವೈದ್ಯಕೀಯ ಸಿಬ್ಬಂದಿ ರೂಪಾರವರು ಇತರೇ ಸಿಬ್ಬಂದಿಗೆ ಮಾದರಿಯಾಗಿದ್ದಾರೆ.

    ಶಿವಮೊಗ್ಗದ ಗಾಜನೂರು ಗ್ರಾಮದಿಂದ ಸುಮಾರು 60 ಕಿ.ಮೀ. ದೂರವಿರುವ ತೀರ್ಥಹಳ್ಳಿ ಪಟ್ಟಣಕ್ಕೆ ಪ್ರತಿದಿನ ಬಸ್ಸಿನಲ್ಲೇ ಪಯಾಣಿಸಿ, ಸೇವೆ ಮಾಡುತ್ತಿದ್ದಾರೆ. ಪ್ರತಿದಿನ ಸುಮಾರು 120 ಕಿ.ಮೀ. ಪ್ರಯಾಣ ಮಾಡುವ ಇವರು ಬಳಲದೇ ಲವಲವಿಕೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತೀರ್ಥಹಳ್ಳಿಯ ಜನರು ಸುತ್ತಮುತ್ತಲ ಗ್ರಾಮಸ್ಥರು ಆರೋಗ್ಯ ಸೇವೆಗೆ ನಮ್ಮನ್ನು ನಂಬಿಕೊಂಡು ಬರುತ್ತಾರೆ. ಕೊರೊನಾ ಲಾಕ್‍ಡೌನ್ ಮಧ್ಯೆ ಜನರ ಸೇವೆ ಮಾಡುವುದು ಮುಖ್ಯ ಎಂದು ಭಾವಿಸಿ ಆಸ್ಪತ್ರೆಗೆ ಬರುತ್ತಿದ್ದಾರೆ.

    ಅಷ್ಟಕ್ಕೂ ತಮ್ಮ ಚೊಚ್ಚಲ ಹೆರಿಗೆಯ ಬೆರಳೆಣಿಕೆ ದಿನಗಳನ್ನು ಎಣಿಸುತ್ತಿರುವ ವಾರಿಯರ್ ರೂಪಾರವರು ಈ ರೀತಿ ನಿಸ್ವಾರ್ಥ ಸೇವೆಗೆ ಮುಂದಾಗಿರುವುದು ಆಸ್ಪತ್ರೆಯ ಇತರೇ ಸಿಬ್ಬಂದಿ ಮತ್ತು ಇಲ್ಲಿನ ವೈದ್ಯಾಧಿಕಾರಿಗಳಿಗೆ ಹೆಮ್ಮೆಯ ವಿಷಯವಾಗಿದೆ. ಅಲ್ಲದೇ ಆಸ್ಪತ್ರೆಯವರು 7 ತಿಂಗಳಾಗುತ್ತಿದ್ದಂತೆ ರಜೆ ತಗೆದುಕೊಳ್ಳಿ ಎಂದಿದ್ದರು ಕೂಡ ರೂಪಾರವರು ಇಲ್ಲ ನಾನು ಇಲ್ಲಿಯೇ ಕರ್ತವ್ಯ ನಿರ್ವಹಿಸುತ್ತೇನೆ. ನನಗೆ ರಜೆ ಬೇಡ ಎಂದಿದ್ದಾರಂತೆ. 9 ತಿಂಗಳ ನೋವು ಸಂಕಟವನ್ನೇಲ್ಲಾ ಅಸ್ಪತ್ರೆಯಲ್ಲಿ ಬರುವ ರೋಗಿಗಳ ಸೇವೆ ಮಾಡುತ್ತಾ ಮರೆತು ಆಸ್ಪತ್ರೆಯಲ್ಲಿ ಖುಷಿ, ಖುಷಿಯಾಗಿ, ಲವಲವಿಕೆಯಿಂದ ಓಡಾಡಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೊದಮೊದಲು ತಮ್ಮ ಕುಟುಂಬದವರಿಗೆ ಇದು ಇಷ್ಟವಿಲ್ಲದೇ ಇದ್ದರೂ ಕೂಡ ಅವರ ಮನವೊಲಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇವರಿಗೆ ಮಾತೃತ್ವ ರಜೆ ತೆಗೆದುಕೊಳ್ಳುವ ಅವಕಾಶವಿದ್ದರೂ ಕೂಡ ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ಮನೆಯಲ್ಲಿ ಸುಮ್ಮನೇ ಕುಳಿತುಕೊಳ್ಳದೇ ಜನರ ಸೇವೆಗೆ ಮುಂದಾಗಿರುವುದಕ್ಕೆ ರೂಪಾರನ್ನು ಆಸ್ಪತ್ರೆ ಸಿಬ್ಬಂದಿ ಮತ್ತು ವೈದ್ಯಾಧಿಕಾರಿಗಳು ಶ್ಲಾಘಿಸಿದ್ದಾರೆ.

    ಒಟ್ಟಾರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮತ್ತು ಆರೈಕೆ ಮಾಡುವ ವೈದ್ಯಕೀಯ ಸಿಬ್ಬಂದಿಯನ್ನು ದೇವರು ಎಂದು ಜನರು ಭಾವಿಸಿ ಬರುತ್ತಾರೆ. ಹೀಗಾಗಿ ಇಂತಹ ಸಂಕಷ್ಟದ ಸಮಯದಲ್ಲೂ ವಿರಮಿಸದೇ ಅವರ ಸೇವೆ ಮಾಡುವುದೇ ಮುಖ್ಯ ಎಂಬದು ರೂಪಾರವರ ತೀರ್ಮಾನ. ಏನೇ ಆಗಲಿ ಕೊರೊನಾ ವಾರಿಯರ್ ಆಗಿ ಇಂತಹ ಸಮಯದಲ್ಲಿಯೂ ಸೇವೆ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿ ರೂಪಾರವರಿಗೆ ಹ್ಯಾಟ್ಸ್ ಆಫ್ ಹೇಳಲೇ ಬೇಕು.

  • ಕೊರೊನಾ ವಾರಿಯರ್ಸ್‍ಗೆ ಆಹಾರ ಹಂಚಿ ಅಪ್ಪ-ಅಮ್ಮನ ಮದ್ವೆ ವಾರ್ಷಿಕೋತ್ಸವ ಆಚರಿಸಿದ ರಾಗಿಣಿ

    ಕೊರೊನಾ ವಾರಿಯರ್ಸ್‍ಗೆ ಆಹಾರ ಹಂಚಿ ಅಪ್ಪ-ಅಮ್ಮನ ಮದ್ವೆ ವಾರ್ಷಿಕೋತ್ಸವ ಆಚರಿಸಿದ ರಾಗಿಣಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ, ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಲಾಕ್‍ಡೌನ್ ಅವಧಿಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಮಂದಿಗೆ ಸಹಾಯ ಹಸ್ತ ಚಾಚಿದ್ದಾರೆ. ಆದ್ರೆ ಇದೀಗ ತಮ್ಮ ಅಪ್ಪ-ಅಮ್ಮ ಮದುವೆ ವಾರ್ಷಿಕೋತ್ಸವದ ವಿಶೇಷ ದಿನವನ್ನು ಕೊರೊನಾ ವಾರಿಯರ್ಸ್‍ಗೆ ಆಹಾರ ಹಂಚುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದ್ದಾರೆ.

    ವೈದ್ಯರು, ನರ್ಸ್, ವೈದ್ಯಕೀಯ ಸಿಬ್ಬಂದಿ ಹಗಲು ರಾತ್ರಿಯನ್ನದೆ ರೋಗಿಗಳ ಸೇವೆಯಲ್ಲಿ ತೊಡಗಿ ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ರಾಗಿಣಿ ತಮ್ಮ ತಂಡದೊಂದಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿರುವ 300ಕ್ಕೂ ಹೆಚ್ಚು ಸಿಬ್ಬಂದಿಗೆ ಆಹಾರ ಹಂಚಿದ್ದಾರೆ. ಈ ಮೂಲಕ ಅಪ್ಪ-ಅಮ್ಮನ ವಿವಾಹ ವಾರ್ಷಿಕೋತ್ಸವ ಆಚರಿಸಿ, ಹೆತ್ತವರಿಗೆ ಒಂದೊಳ್ಳೆ ಉಡುಗೊರೆ ನೀಡಿದ್ದಾರೆ.

    ಈ ಬಗ್ಗೆ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ರಾಗಿಣಿ, ಆರ್‌ಡಿ ವೆಲ್‍ಫೇರ್ ವತಿಯಿಂದ 300ಕ್ಕೂ ಹೆಚ್ಚು ಮಂದಿ ಸರ್ಕಾರಿ ಆಸ್ಪತ್ರೆಯ ಕೊರೊನಾ ವಾರಿಯರ್ಸ್‍ಗೆ ಊಟ, ಸಿಹಿ ಹಂಚಿದ್ದೇವೆ. ನಮಗೆ ಹೀಗೆ ಬೆಂಬಲ ನೀಡುತ್ತಿರಿ ಎಂದು ಬರೆದು ಊಟ ನೀಡುತ್ತಿರುವ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ.

    https://twitter.com/raginidwivedi24/status/1258067253234298880

    ಕಳೆದ ಕೆಲವು ದಿನಗಳ ಹಿಂದೆ ವಿಕ್ಟೋರಿಯಾ ಆಸ್ಪತ್ರೆಯ 150 ವೈದ್ಯಕೀಯ ಸಿಬ್ಬಂಧಿಗಳಿಗೆ ಮನೆಯಲ್ಲಿ ಅಡುಗೆ ತಯಾರಿಸಿ ಕಳುಹಿಸಿದ್ದರು. ಅಷ್ಟೇ ಅಲ್ಲದೇ ತಮ್ಮ ಆರ್‌ಡಿ(ರಾಗಿಣಿ ದ್ವಿವೇದಿ) ಫೌಂಡೇಶನ್ ವತಿಯಿಂದ ರಾಗಿಣಿ ಅವರು ಸಿನಿಮಾ ರಂಗದ ಕೂಲಿ ಕಾರ್ಮಿಕರಿಗೆ, ತಂತ್ರಜ್ಞರಿಗೆ ನೆರವು ನೀಡಿದ್ದರು. ಹಾಗೆಯೇ ನೂರು ಡ್ಯಾನ್ಸರ್ಸ್, 40 ಸ್ಲಮ್ ಏರಿಯಾಗಳಲ್ಲಿರುವ ಬಡವರಿಗೆ ದವಸ-ಧಾನ್ಯ ವಿತರಣೆ ಮಾಡಿದ್ದರು. ಮಾಜಿ ಮೇಯರ್ ಪದ್ಮಾವತಿ ಜೊತೆ ಸೇರಿ ಅನ್ನದಾಸೋಹ ಮತ್ತು ಕಾರ್ಮಿಕರಿಗೆ ಅಗತ್ಯ ವಸ್ತುಗಳನ್ನು ಸಹ ವಿತರಣೆ ಮಾಡಿದ್ದರು.

    ರಾಗಿಣಿ ಅವರು ಲಾಕ್‍ಡೌನ್ ಸಂಕಷ್ಟದಲ್ಲಿ ಬಡವರು, ಸಿನಿಮಾ ರಂಗದ ಕಾರ್ಮಿಕರಿಗೆ ಸಹಾಯ ಮಾಡುತ್ತಿರುವುದಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಂಕಷ್ಟದ ಪರಿಸ್ಥಿತಿಯಲ್ಲಿ ರಾಗಿಣಿ ಅವರು ಸಾಮಾಜಿಕ ಜವಾಬ್ದಾರಿ ಮೆರೆಯುತ್ತಿರುವುದು ಎಲ್ಲರ ಮನಗೆದ್ದಿದೆ.

  • ಅಸಹಾಯಕರಿಗೆ ನೆರವಾಗಿ: ಪ್ರಧಾನಿ ಮೋದಿ ಸಂದೇಶ

    ಅಸಹಾಯಕರಿಗೆ ನೆರವಾಗಿ: ಪ್ರಧಾನಿ ಮೋದಿ ಸಂದೇಶ

    ನವದೆಹಲಿ: ಇವತ್ತು ಬುದ್ಧ ಪೂರ್ಣಿಮಾ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೊರೊನಾ ವಾರಿಯರ್ಸ್ ಉದ್ದೇಶಿಸಿ ಮಾತನಾಡಿದ್ದು, ದೇಶದ ಕಷ್ಟದ ಪರಿಸ್ಥಿತಿಯಲ್ಲಿದೆ. ಭಾರತ ಇಡೀ ವಿಶ್ವಕ್ಕೆ ತನ್ನ ಮಾರ್ಗ ತೋರಿಸಿದೆ. ಸಂಘಟಿತ ಪ್ರಯತ್ನದಿಂದ ಮಾನವಕುಲ ಉಳಿದಿದೆ ಎಂದರು.

    ದೇಶದ ಎಲ್ಲ ಜನತಗೆ ಬುದ್ಧ ಪೂರ್ಣಿಮಾದ ಶುಭಾಶಯಗಳು. 2015 ಮತ್ತು 2018ರಂದು ದೆಹಲಿಯಲ್ಲಿ ಹಾಗೂ 2017ರಲ್ಲಿ ಕೊಲೊಂಬೋದಲ್ಲಿ ನಿಮ್ಮ ಜೊತೆಯಲ್ಲಿದ್ದೆ. ಆದರೆ ಇಂದು ಬದಲಾದ ದಿನಗಳಲ್ಲಿ ನೇರವಾಗಿ ನಿಮ್ಮ ಜೊತೆ ಮಾತನಾಡಲು ಸಾಧ್ಯವಿಲ್ಲ. ಹಾಗಾಗಿ ಟೆಕ್ನಾಲಜಿ ಮೂಲಕ ನಿಮ್ಮ ಜೊತೆಗೆ ಬಂದಿದ್ದೇನೆ. ನಿಮ್ಮ ಜೊತೆಯಲ್ಲಿರೋದು ನನಗೆ ಖುಷಿಯ ವಿಚಾರ. ವಿಶ್ವದ ಹಲವು ಪ್ರದೇಶಗಳಲ್ಲಿ ಬುದ್ಧ ಪೂರ್ಣಿಮಾ ಆಚರಣೆ ನೇರಪ್ರಸಾರ ಆಗುತ್ತಿರೋದು ಗಮನಿಸಿದ್ರೆ ಸಂತೋಷವಾಗುತ್ತದೆ.

    ಎಲ್ಲ ಆರೋಗ್ಯ ಸಿಬ್ಬಂದಿ ಮತ್ತು ಕೊರೊನಾ ವಾರಿಯರ್ಸ್ ಗಾಗಿ ನಿಮ್ಮೆಲ್ಲರ ಪ್ರಾರ್ಥನೆ ಅಗತ್ಯವಿದೆ. ಸಂಘಟಿತ ಪ್ರಯತ್ನದಿಂದ ಮಾನವಕುಲ ಕೊರೊನಾದ ವಿರುದ್ಧದ ಹೋರಾಟದಲ್ಲಿ ಗೆಲ್ಲಬಹುದಾಗಿದೆ. ಭಾರತೀಯ ಸಂಸ್ಕøತಿ, ಜೀವನಶೈಲಿ ಇತರೆ ದೇಶಗಳಿಗೆ ಮಾದರಿಯಾಗಿದ್ದು, ನಮ್ಮ ಸಂಪ್ರದಾಯಗಳನ್ನು ಆಚರಿಸುತ್ತಿದ್ದಾರೆ. ಇಂದು ಸಮಾಜ, ವ್ಯವಸ್ಥೆ, ಜನ ಎಲ್ಲವೂ ಬದಲಾಗಿದೆ. ಆದ್ರೆ ಬುದ್ಧನ ಸಂದೇಶಗಳು ಇಂದಿಗೂ ನಮ್ಮ ಜೊತೆಯಲ್ಲಿವೆ. ಬುದ್ಧ ಅಂದ್ರೆ ತ್ಯಾಗ ಮತ್ತು ಸಮರ್ಪಣೆ, ಪವಿತ್ರ ಎಂದರ್ಥ.

    ಕೊರೊನಾ ವಾರಿಯರ್ಸ್ 24 ಗಂಟೆಯೂ ಕೆಲಸ ಮಾಡುತ್ತಿದ್ದಾರೆ. ನಾವೆಲ್ಲರೂ ಅವರನ್ನು ಗೌರವಿಸಬೇಕು. ಇಡೀ ವಿಶ್ವದಲ್ಲಿ ಹತಾಶೆ, ದುಃಖ, ಸೋಲು ಕಾಣುತ್ತಿದೆ. ಇವೆಲ್ಲವೂಗಳಿಂದ ಹೊರ ಬಂದ್ರೆ ಮಾತ್ರ ಯಶಸ್ಸು ನಮ್ಮದಾಗುತ್ತದೆ. ನಾವು ಸಹ ಬದಲಾದ ಜೀವನಕ್ಕೆ ಹೊಂದಿಕೊಳ್ಳಬೇಕು. ಬುದ್ಧ ಹೇಳಿದಂತೆ ದಯೆ, ಕರುಣೆ, ಸುಖದುಃಖ, ಮೂಲ ರೂಪದಲ್ಲಿರೋದನ್ನು ಸ್ವೀಕರಿಸೋದನ್ನು ನಾವು ಕಲಿಯೋಣ.

    ಇಂದು ಭಾರತ ನಿಸ್ವಾರ್ಥ ಮತ್ತು ಯಾರನ್ನು ವಿಂಗಡಿಸದೇ ಎಲ್ಲರ ಜೊತೆಯಲ್ಲಿ ನಿಂತಿದೆ. ನಿಮ್ಮ ಶಕ್ತಿಗನುಸಾರವಾಗಿ ದೇಶಕ್ಕಾಗಿ ಸಹಾಯ ಮಾಡಿ. ಭಾರತ ಪ್ರತಿ ನಿವಾಸಿ ಜೀವ ಉಳಿಸಲು ಪ್ರಯತ್ನಿಸುತ್ತಿದೆ. ವಿಶ್ವಮಹಾಮಾರಿಯನ್ನು ಸೋಲಿಸಲು ಭಾರತ ನಿರಂತರವಾಗಿ ಶ್ರಮಿಸುತ್ತಿದೆ. ಇಂತಹ ಕಠಿಣ ದಿನಗಳು ನಮ್ಮನ್ನು ಸದೃಢ ಮಾಡುತ್ತವೆ. ನಾವು ಶೀಘ್ರದಲ್ಲಿಯೇ ಎಲ್ಲ ಕಷ್ಟಗಳಿಂದ ಹೊರ ಬರಲಿದ್ದೇವೆ. ಬುದ್ಧ ಸಂದೇಶಗಳನ್ನು ಕಷ್ಟದ ಸಮಯದಲ್ಲಿ ನಮ್ಮನ್ನು ಮಾರ್ಗದರ್ಶನದ ಮೂಲಕ ಉತ್ತೇಜನಗೊಳಿಸುತ್ತವೆ.

  • 5 ಸಾವಿರ ಕೊರೊನಾ ಸೇನಾನಿಗಳಿಗೆ ಗೌರವ- ಸಿದ್ದರಾಮಯ್ಯರಿಂದ ದಿನಸಿ ಕಿಟ್ ವಿತರಣೆ

    5 ಸಾವಿರ ಕೊರೊನಾ ಸೇನಾನಿಗಳಿಗೆ ಗೌರವ- ಸಿದ್ದರಾಮಯ್ಯರಿಂದ ದಿನಸಿ ಕಿಟ್ ವಿತರಣೆ

    ಕೋಲಾರ: ಕೊರೊನಾ ವಿರುದ್ಧ ಹೋರಾಡುತ್ತಿರುವ ಸುಮಾರು 5 ಸಾವಿರ ಜನ ವಾರಿಯರ್ಸ್‍ಗೆ ದಿನಸಿ ಕಿಟ್ ಜೊತೆಗೆ ಮಡಿಲು ತುಂಬಿ ಗೌರವಿಸುವ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.

    ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೊಮ್ಮನಹಳ್ಳಿಯಲ್ಲಿ ಮಾಲೂರು ಶಾಸಕ ನಂಜೇಗೌಡ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಹಗಲಿರುಳು ದುಡಿಯುತ್ತಿರುವ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ದಿನಸಿ ಕಿಟ್ ವಿತರಿಸಿದರು. ಅಲ್ಲದೆ ಶಾಸಕರ ಕುಟುಂಬಸ್ಥರು ಅರಿಶಿನ ಕುಂಕುಮ ನೀಡಿ ಮಡಿಲು ತುಂಬಿದರು.

    ಮಾಲೂರು ತಾಲೂಕಿನ 5 ಸಾವಿರ ಅಂಗನವಾಡಿ, ಆಶಾ ಕಾರ್ಯಕರ್ತರು, ಗ್ರಾಮ ಪಂಚಾಯಿತಿ ನೌಕರರು, ಪೌರಕಾರ್ಮಿಕರರಿಗೆ ಗೌರವ ಸಲ್ಲಿಸಲಾಯಿತು. ಬಂದಿದ್ದ ಮಹಿಳೆಯರಿಗೆ ಸೀರೆ, ಅರಿಶಿನ-ಕುಂಕುಮ ಜೊತೆಗೆ ಆಹಾರ ಕಿಟ್‍ನ್ನು ನೀಡಲಾಯಿತು.

    ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ರೈತರಿಗೆ ಘೋಷಣೆ ಮಾಡಿರುವ ಪ್ಯಾಕೇಜ್ ಒಂದು ಎಕರೆಗೆ ಒಂದು ಬಾರಿ ಔಷಧ ಹೊಡೆಯಲು ಸಾಕಾಗುವುದಿಲ್ಲ. ಸಂಪ್ರದಾಯ ವೃತ್ತಿ ಮಾಡುವವರ ಸಭೆ ಕರೆಸಿದ್ದು ಎಲ್ಲ ಕರ ಕುಶಲ ಕಾರ್ಮಿಕರೊಂದಿಗೆ ಸಭೆ ಮಾಡಿ ಅಭಿಪ್ರಾಯ ಪಡೆದುಕೊಂಡಿದ್ದೆ. ಅದರಂತೆ ಸವಿತ ಸಮಾಜ, ಅಟೋ, ಟ್ಯಾಕ್ಸಿ, ಮಡಿವಾಳ ಸಮಾಜ, ನೇಕಾರರಿಗೆ 5 ಸಾವಿರ ಕೊಡುವುದು ಸರಿ. ಆದರೆ ಸಾಕಷ್ಟು ಜನರನ್ನು ಪ್ಯಾಕೇಜ್ ನಿಂದ ಕೈ ಬಿಟ್ಟಿದ್ದಾರೆ, ಅವರಿಗೂ ಕೂಡ ಆರ್ಥಿಕ ಸಹಾಯ ಮಾಡಬೇಕೆಂದು ಆಗ್ರಹಿಸಿದರು.

    ಮಾಲೂರು ಶಾಸಕ ನಂಜೇಗೌಡ ಮಾತನಾಡಿ, ನಮ್ಮ ಕುಟುಂಬ ವರ್ಗದವರೆಲ್ಲರೂ ಸೇರಿ ಕೊರೊನಾ ವಿರುದ್ಧ ಹೋರಾಡಲು ಶ್ರಮಿಸುತ್ತಿರುವ 5 ಸಾವಿರ ಮಂದಿಗೆ ಮಾಜಿ ಸಿಎಂ ಸಿದ್ದು ಅವರಿಂದ ಸೀರೆ, ಅರಿಶಿನ-ಕುಂಕುಮ, ದಿನಸಿ ಕಿಟ್ ವಿತರಣೆ ಮಾಡಲಾಗುತ್ತಿದೆ. ಈ ಹಿಂದೆ ಡಿ.ಕೆ.ಶಿವಕುಮಾರ್ ಅವರನ್ನ ಕರೆಸಿ ತಾಲೂಕಿನ 56 ಸಾವಿರ ಕುಟುಂಬಗಳಿಗೆ ದಿನಸಿ, ತರಕಾರಿ ವಿತರಣೆ ಮಾಡಿದ್ದೆವು. ಮುಂದೆಯೂ ತಾಲೂಕಿನಲ್ಲಿ ಇದೆ ರೀತಿ ಸೇವೆ ಮುಂದುವರೆಯಲಿದೆ ಎಂದರು.

    3 ಗಂಟೆ ಸುಮಾರಿಗೆ ಅನೇಕಲ್ ಸೇರಿದಂತೆ ಜಿಲ್ಲೆಯ ಹಲವೆಡೆ ನಷ್ಟಕ್ಕೊಳಗಾದ ಬೆಳೆಗಳನ್ನು ವೀಕ್ಷಣೆ ಮಾಡಿ ಕೊಮ್ಮನಹಳ್ಳಿಗೆ ಆಗಮಿಸಿದ್ದರು. ಕೊಮ್ಮನಹಳ್ಳಿ ಚನ್ನಬೈರವೇಶ್ವರ ದೇವಾಲಯದಲ್ಲಿ ಪೂಜೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಹೋರಗಿನಿಂದಲೇ ಕೈ ಮುಗಿದು ಸಿದ್ದರಾಮಯ್ಯ ವಾಪಸ್ ಆದರು. ಇದೆ ವೇಳೆ ಶಾಸಕ ಬೈರತಿ ಸುರೇಶ್, ಮಾಜಿ ಸಂಸದ ಕೆ.ಎಚ್.ಮುನಿಯಪ್ಪ, ವಿ.ಆರ್.ಸುದರ್ಶನ್ ಕೂಡ ದೇವಸ್ಥಾನದ ಮುಂಭಾಗದಲ್ಲಿ ಕೈ ಮುಗಿದು ವಾಪಸ್ ಆದರು. ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಎಡವಟ್ಟು ಮಾಡಿದ್ದಾರೆ.

  • ಕೊರೊನಾ ವಾರಿಯರ್ಸ್‍ಗಾಗಿ ಪಿಪಿಇ ಕಿಟ್, ಮಾಸ್ಕ್ ತಯಾರಿಸ್ತಿದ್ದಾರೆ ಮಹಿಳೆಯರು

    ಕೊರೊನಾ ವಾರಿಯರ್ಸ್‍ಗಾಗಿ ಪಿಪಿಇ ಕಿಟ್, ಮಾಸ್ಕ್ ತಯಾರಿಸ್ತಿದ್ದಾರೆ ಮಹಿಳೆಯರು

    ಬೆಂಗಳೂರು: ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ಹಾಗೆ ಮಹಿಳೆಯರೆಲ್ಲಾ ಸೇರಿ ಕೌಶಲ್ಯ ಪಡೆದು ಇಡೀ ಕುಟುಂಬದ ಆರ್ಥಿಕ ಮಟ್ಟ ಸುಧಾರಿಸಿ, ಮಾರಾಣಾಂತಿಕ ಕೋವಿಡ್-19 ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್‍ಗೆ ಅಗತ್ಯವಾದ ಪಿಪಿಇ ಕಿಟ್ ತಯಾರಿಸಿ ನೆರವಾಗುತ್ತಿದ್ದಾರೆ.

    ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರ ಸಮೀಪ ಬ್ಲಾಕ್ ಸ್ತ್ರೀ ಶಕ್ತಿ ಸೊಸೈಟಿ ಅಡಿಯಲ್ಲಿ ಮಹಿಳೆಯರು ಕೋವಿಡ್ 19 ವಾರಿಯರ್ಸ್‍ಗೆ ತಮ್ಮ ಅಳಿಲು ಸೇವೆ ಮಾಡಿ, ಕೊರೊನಾ ಸಂದರ್ಭದಲ್ಲಿ ನೆರವಾಗಿ ಸಾರ್ಥಕತೆ ಮೆರೆಯುತ್ತಿದ್ದಾರೆ.

    ಈ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಡಿಯಲ್ಲಿ ಸ್ತ್ರೀ ಶಕ್ತಿ ಸಂಘಗಳನ್ನು ರಚಿಸಿಕೊಂಡು, ಕೌಶಲ್ಯ ತರಬೇತಿಯಲ್ಲಿ ಪಾಲ್ಗೊಂಡು, ವಿದ್ಯುತ್ ಚಾಲಿತ ಹೋಲಿಗೆ ಯಂತ್ರಗಳಲ್ಲಿ ಕೆಲಸ ಮಾಡುವ ವಿಧಾನ ಕಲಿತಿದ್ದಾರೆ. ಕೊರೊನಾ ವಾರಿಯರ್ಸ್‍ಗಳಾದ ವೈದ್ಯರು, ಪೊಲೀಸರು, ಬೆಂಗಳೂರು ಹಾಲು ಒಕ್ಕೂಟಕ್ಕೆ ಅಗತ್ಯವಿರುವ ಮುಖಕವಚ, ಮಾಸ್ಕ್, ಪಿಪಿಇ ಕಿಟ್‍ಗಳ ಸಾಮಾಗ್ರಿಗಳಾದ ಕೋಟ್, ಗ್ಲೌಸ್, ಕಾಲು ಚೀಲ, ದೇಹ ರಕ್ಷಕಗಳನ್ನು ಹೊಲಿಗೆ ಮಾಡಿ ದೇಶ ಸೇವೆಯಲ್ಲಿ ಪಾಲ್ಗೊಂಡಿದ್ದಾರೆ.

    ಬೆಳಗ್ಗೆ 9 ಗಂಟೆಯಿಂದ ಸಂಜೆ 6ರವರೆಗೆ ಕಡಿಮೆ ಬೆಲೆಯಲ್ಲಿ ಮಾಸ್ಕ್, ಸರ್ಜಿಕಲ್ ಮಾಸ್ಕ್, ಇನ್ನಿತರೆ ವಸ್ತುಗಳನ್ನು ಹೋಲಿಯುತ್ತಿದ್ದು, ಲಾಕ್‍ಡೌನ್ ವೇಳೆಯಲ್ಲಿ ಸ್ವಾವಲಂಬಿಯಾಗುತ್ತಿದ್ದಾರೆ. ಸುಮಾರು 30ರಿಂದ 40 ಮಹಿಳೆಯರು ದಿನನಿತ್ಯ ಕೆಲಸ ಮಾಡಿ ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಬಡ ಕುಟುಂಬದಿಂದ ಬಂದಂತಹ ಮಹಿಳೆಯರ ಸ್ವಾವಲಂಬಿಗಳಾಗಿ ಮಾಸ್ಕ್, ಮತ್ತು ಪಿಪಿಇ ಕಿಡ್ ತಯಾರಿಸಲು ಮುಂದಾಗಿದ್ದಾರೆ.

    ಈ ಬಗ್ಗೆ ಚಿಕ್ಕಬಾಣಾವರ ಸ್ತ್ರೀ ಶಕ್ತಿ ಒಕ್ಕೂಟದ ಕಾರ್ಯಾಧ್ಯಕ್ಷೆ ಭಾಗ್ಯಮ್ಮ ಅವರು ಮಾತನಾಡಿ, ಇವರೇಲ್ಲರಿಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಗತ್ಯ ತರಬೇತಿ ನೀಡಿದ್ದು, ಈ ಮಹಿಳೆಯರು ದಾಸರಹಳ್ಳಿ, ಪೀಣ್ಯ ಪೊಲೀಸ್ ಠಾಣೆಗೂ ರಿಯಾಯಿತಿ ದರದಲ್ಲಿ ಮಾಸ್ಕ್ ನೀಡುತ್ತಿದ್ದಾರೆ. ಕೆಲಸಕ್ಕೆ ಆದ್ಯತೆ ನೀಡಿ, ತರಬೇತಿ ಕೊಡಿಸಿ ನಮ್ಮಲ್ಲೇ ಮಹಿಳೆಯರು ಆರ್ಥಿಕವಾಗಿ ಸದೃಢರಾಗಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.