Tag: Corona Warriors

  • ಕೊರೊನಾ ವಾರಿಯರ್ಸ್‍ಗೆ ಶ್ರೀ ಸಾಯಿ ಫೌಂಡೇಶನ್ ನೆರವು

    ಕೊರೊನಾ ವಾರಿಯರ್ಸ್‍ಗೆ ಶ್ರೀ ಸಾಯಿ ಫೌಂಡೇಶನ್ ನೆರವು

    ಬೆಂಗಳೂರು: ಸತತ ಎರಡು ತಿಂಗಳಿನಿಂದ ಹಗಲು ಇರುಳೆನ್ನದೆ ಮನೆ, ಮಕ್ಕಳು, ಕುಟುಂಬ ಬಿಟ್ಟು ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಹೋಮ್ ಗಾರ್ಡ್ ಸಿಬ್ಬಂದಿಗೆ ಬೆಂಗಳೂರು ಹೊರವಲಯ ಟಿ.ದಾಸರಹಳ್ಳಿಯ ಶೆಟ್ಟಿಹಳ್ಳಿಯಲ್ಲಿ ಶ್ರೀ ಸಾಯಿ ಫೌಂಡೇಶನ್ ಸಂಸ್ಥಾಪಕ ಬಿ. ಸುರೇಶ್ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.

    ಪೀಣ್ಯ, ಬಾಗಲಗುಂಟೆ ಹಾಗೂ ಪೀಣ್ಯ ಸಂಚಾರಿಯ ಹೋಮ್ ಗಾರ್ಡ್ ಸಿಬ್ಬಂದಿಗೆ ಆಹಾರದ ದಿನಸಿ ಕಿಟ್ ನೀಡಿ ಶ್ರೀ ಸಾಯಿ ಫೌಂಡೇಶನ್ ನೆರವಿಗೆ ದಾವಿಸಿದ್ದಾರೆ. ಈ ವೇಳೆ ಮಾತನಾಡಿದ ಫೌಂಡೇಶನ್ ಸಂಸ್ಥಾಪಕ ಬಿ.ಸುರೇಶ್, ಈ ಕೊರೊನಾ ವೈರಸ್ ಮಹಾಮಾರಿ ಸಾಕಷ್ಟು ರೀತಿಯಲ್ಲಿ ನಮ್ಮ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಆತಂಕ ಸೃಷ್ಟಿಮಾಡುತ್ತಲೇ ಇದೆ. ಲಾಕ್‍ಡೌನ್ ವೇಳೆ ಸರ್ಕಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮದೇ ರೀತಿಯಲ್ಲಿ ಕೆಲಸ ನಿರ್ವಹಿಸಿ ಯಶಸ್ವಿಯಾಗಿದ್ದಾರೆ ಎಂದು ಶ್ಲಾಘಿಸಿದರು.

    ಪೊಲೀಸ್ ಇಲಾಖೆಯ ಜೊತೆಗೆ ಹೋಮ್ ಗಾರ್ಡ್ ಸಿಬ್ಬಂದಿ ಸಹ ತಮ್ಮ ಕಾರ್ಯವನ್ನ ಈ ರಾಜ್ಯದ ಜನತೆಗೆ ನೀಡಿದ್ದು, ಅವರ ಕುಟುಂಬಕ್ಕೆ ನಮ್ಮ ಫೌಂಡೇಶನ್ ವತಿಯಿಂದ ಸಣ್ಣ ಪ್ರಮಾಣದ ಸಹಾಯ ಮಾಡುವ ಉದ್ದೇಶದಿಂದ ದಿನಸಿ ಕಿಟ್ ನೀಡಿದ್ದು ಸಂತಸ ತಂದಿದೆ ಬಿ.ಸುರೇಶ್ ಎಂದರು. ಈ ವೇಳೆ ಪೀಣ್ಯ ಸಂಚಾರಿ ಪೊಲೀಸ್ ಸಿಪಿಐ ರಾಜು, ಶ್ರೀ ಸಾಯಿ ಫೌಂಡೇಶನ್‍ನ ಬಿ.ಸುರೇಶ್, ಕೃಷ್ಣ ಮತ್ತಿತರು ಉಪಸ್ಥಿತರಿದ್ದರು.

  • ಮತ್ತೊಂದು ಪಾದರಾಯನಪುರ ಆಯ್ತಾ ಯಾದಗಿರಿ?

    ಮತ್ತೊಂದು ಪಾದರಾಯನಪುರ ಆಯ್ತಾ ಯಾದಗಿರಿ?

    – ಹೋಮ್ ಗಾರ್ಡ್ಸ್ ಗಳ ಮೇಲೆ ಡೆಡ್ಲಿ ಅಟ್ಯಾಕ್

    ಯಾದಗಿರಿ: ಬೆಂಗಳೂರಿನಲ್ಲಿ ಕೊರೊನಾ ವಾರಿಯರ್ಸ್ ಮೇಲೆ ಪುಂಡರು ಹಲ್ಲೆ ನಡೆಸಿದ್ದು ಗೊತ್ತೆಯಿದೆ. ಇದರ ಬೆನ್ನಲ್ಲೇ ಯಾದಗಿರಿ ಮತ್ತೊಂದು ಪಾದರಾಯನಪುರವಾಗಿ ಬಿಟ್ಟಿದಿಯಾ ಅನ್ನೋ ಅನುಮಾನ ಮೂಡಿದೆ. ಯಾದಗಿರಿ ಜಿಲ್ಲೆಯ ಪಿಕೆ ತಾಂಡದಲ್ಲಿ ಎಎಸ್‍ಐ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೆ ಚೆಕ್ ಪೋಸ್ಟ್ ಬಳಿ ಹೋಮ್ ಗಾರ್ಡ್ ಗಳ ಮೇಲೆ ಹಲ್ಲೆಗೆ ಯತ್ನ ನಡೆದಿದೆ.

    ಮಹಾರಾಷ್ಟ್ರದಿಂದ ಕಾರ್ ನಲ್ಲಿ ಜಿಲ್ಲೆಗೆ ಬರಲು ಯತ್ನಿಸಿದ ಕುಟುಂಬವೊಂದನ್ನು ಹೋಮ್ ಗಾರ್ಡ್ ಗಳು ಯರಗೋಳ ಚೇಕ್ ಪೋಸ್ಟ್ ಬಳಿ ತಡೆದಿದ್ದಾರೆ. ಕಾರ್ ನಲ್ಲಿ ಓರ್ವ ಮಹಿಳೆ ತೀವ್ರ ಅನಾರೋಗ್ಯದಿಂದ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

    ಜಿಲ್ಲಾಡಳಿತದಿಂದ ಅಂಬುಲೆನ್ಸ್ ಅಥವಾ ಸರ್ಕಾರಿ ಬಸ್ ಬರೋವರೆಗೆ ನೀವು ಜಿಲ್ಲೆಗೆ ಪ್ರವೇಶಿಸುವಂತಿಲ್ಲ ಅಂತ ಹೋಮ್ ಗಾರ್ಡ್ ಗಳು ತಡೆದಿದ್ದಾರೆ. ಇದರಿಂದ ಕೋಪಗೊಂಡ ಮೃತ ಮಹಿಳೆಯ ಸಂಬಂಧಿಕರು ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯುತ್ತಿದ್ದ ಬಾಲಕನ ಮೇಲೆಯೂ ಹಲ್ಲೆ ನಡೆಸಿದ್ದಾರೆ.

  • ಕೊರೊನಾ ವಾರಿಯರ್ಸ್ ಲಿಸ್ಟ್‌ಗೆ ಸಾರಿಗೆ ಸಿಬ್ಬಂದಿ- ಸೋಂಕಿನಿಂದ ಮೃತಪಟ್ಟರೆ 30 ಲಕ್ಷ ರೂ. ಪರಿಹಾರ

    ಕೊರೊನಾ ವಾರಿಯರ್ಸ್ ಲಿಸ್ಟ್‌ಗೆ ಸಾರಿಗೆ ಸಿಬ್ಬಂದಿ- ಸೋಂಕಿನಿಂದ ಮೃತಪಟ್ಟರೆ 30 ಲಕ್ಷ ರೂ. ಪರಿಹಾರ

    ಬೆಂಗಳೂರು: ಕೊರೊನಾ ವಿರುದ್ಧ ನಡೆಯುತ್ತಿದ್ದ ಯುದ್ಧದಲ್ಲಿ ವೈದ್ಯರು, ಆಸ್ಪತ್ರೆ ಸಿಬ್ಬಂದಿ, ಪೌರಕಾರ್ಮಿಕರು, ಪೊಲೀಸರು, ಮಾಧ್ಯಮಗಳು ನಿರಂತರವಾಗಿ ದುಡಿಯುತ್ತಿದ್ದು, ಸದ್ಯ ಈ ಪಟ್ಟಿಗೆ ಸಾರಿಗೆ ಸಿಬ್ಬಂದಿಯನ್ನು ರಾಜ್ಯ ಸರ್ಕಾರ ಸೇರ್ಪಡೆ ಮಾಡಿದೆ. ರಾಜ್ಯ ಸರ್ಕಾರಿ ಸಾರಿಗೆ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವ ಚಾಲಕರು, ನಿರ್ವಾಹಕರು ಮೃತಪಟ್ಟರೆ ಕುಟುಂಬಸ್ಥರಿಗೆ 30 ಲಕ್ಷ ಪರಿಹಾರ ನೀಡುವ ಮಹತ್ವದ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿದೆ.

    ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಈ ಕುರಿತು ಮಾಧ್ಯಮ ಪ್ರಕಟಣೆಯನ್ನು ಹೊರಡಿಸಿ ಮಾಹಿತಿ ನೀಡಿದ್ದು, ಸರ್ಕಾರಿ ಸಾರಿಗೆ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವ ಚಾಲಕರು ಮತ್ತು ನಿರ್ವಾಹಕರು ಕರ್ತವ್ಯದ ಮೇಲಿದ್ದಾಗ ಕೋವಿಡ್-19 ಪಿಡುಗಿಗೆ ತುತ್ತಾಗಿ ಮೃತಪಟ್ಟಲ್ಲಿ ಅವರ ಕುಟುಂಬಕ್ಕೆ 30 ಲಕ್ಷ ರೂಪಾಯಿಗಳನ್ನು ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.

    ಈ ಪರಿಹಾರವನ್ನು ಸಾರಿಗೆ ಇಲಾಖೆಯಿಂದ ನೀಡಲು ನಿರ್ಧರಿಸಲಾಗಿದೆ. ಮೇ 19 ರಿಂದ ಸಾರಿಗೆ ಸಂಸ್ಥೆಗಳ ಬಸ್ಸುಗಳು ಕಾರ್ಯನಿರ್ವಹಿಸಲಿದ್ದು, ಈ ಸಂದರ್ಭದಲ್ಲಿ ಚಾಲಕರಿಗೆ ಮತ್ತು ನಿರ್ವಾಹಕರಿಗೆ ಸ್ಯಾನಿಟೈಸರ್ ಮತ್ತು ಮಾಸ್ಕ್ ಗಳನ್ನು ಒದಗಿಸಲು ಕ್ರಮಕೈಗೊಳ್ಳಾಗಿದೆ. ಇವುಗಳನ್ನು ಸದ್ಬಳಕೆ ಮಾಡಿಕೊಳ್ಳುವುದರೊಂದಿಗೆ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಾರಿಗೆ ಸಂಸ್ಥೆಗಳ ಎಲ್ಲಾ ಚಾಲಕರು, ನಿರ್ವಾಹಕರು ಮತ್ತು ಸಿಬ್ಬಂದಿಗಳು ಗಮನಹರಿಸುವ ಮೂಲಕ ಕೋವಿಡ್-19 ರೋಗವನ್ನು ತಡಗಟ್ಟಲು ಸಹಕರಿಸಬೇಕೆಂದು ಸಚಿವ ಲಕ್ಷ್ಮಣ ಸವದಿ ಅವರು ಮನವಿ ಮಾಡಿಕೊಂಡಿದ್ದಾರೆ.

    ಪ್ರಯಾಣಿಕರು ಕೂಡ ಬಸ್ಸುಗಳಲ್ಲಿ ಸಂಚರಿಸುವಾಗ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಈ ಮುಂತಾದ ಮುಂಜಾಗ್ರತೆ ವಹಿಸುವ ನಿಟ್ಟಿನಲ್ಲಿ ಸಹಕಾರ ನೀಡುವಂತೆ ಸಚಿವರು ಮನವಿ ಮಾಡಿದ್ದಾರೆ.

  • ಕೊರೊನಾ ವಾರಿಯರ್ಸ್‍ಗಳ ಪಾದ ತೊಳೆದ ಶಾಸಕ – ಪಾದ ಪೂಜೆಗೆ ಸಿದ್ದಲಿಂಗ ಶ್ರೀಗಳು ಸಾನಿದ್ಯ

    ಕೊರೊನಾ ವಾರಿಯರ್ಸ್‍ಗಳ ಪಾದ ತೊಳೆದ ಶಾಸಕ – ಪಾದ ಪೂಜೆಗೆ ಸಿದ್ದಲಿಂಗ ಶ್ರೀಗಳು ಸಾನಿದ್ಯ

    ತುಮಕೂರು: ಕೊರೊನಾ ಸೋಂಕಿಗೆ ಸಿಲುಕಿ ದೇಶವೇ ನಲುಗಿ ಹೋಗಿದೆ. ಇಂಥಾ ಸಮಯದಲ್ಲಿ ಗಂಡ, ಮನೆ, ಮಕ್ಕಳನ್ನ ಬಿಟ್ಟು ಮನೆ ಮನೆಗೆ ತೆರಳಿ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ನರ್ಸ್‍ಗಳು ಶ್ರಮಿಸುತ್ತಿದ್ದಾರೆ. ಈ ಕೊರೊನಾ ವಾರಿಯರ್ಸ್‍ಗಳ ಪಾದ ತೊಳೆದು ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ಕೃತಜ್ಞತೆ ಸಲ್ಲಿಸಿದ್ದಾರೆ.

    ಸಿದ್ದಗಂಗಾ ಶ್ರೀಗಳ ದಿವ್ಯ ಸಾನ್ನಿದ್ಯದೊಂದಿಗೆ ನೂರಾರು ಕೊರೊನಾ ವಾರಿಯರ್ಸ್‍ಗಳಿಗೆ ತುಮಕೂರಿನ ಕೈದಾಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾದ ಪೂಜೆ ನೆರವೇರಿಸಿ ಶಾಸಕ ಗೌರಿಶಂಕರ್ ಅಭಿನಂದನೆ ಸಲ್ಲಿಸಿದ್ದಾರೆ. ಸ್ವತಃ ಶಾಸಕ ಗೌರಿಶಂಕರ್ ಅವರೇ ಅಂಗನವಾಡಿ ಕಾರ್ಯಕರ್ತೆಯರ ಕಾಲು ತೊಳೆದು, ಅರಿಶಿನ-ಕುಂಕುಮ, ಹೂಗಳನ್ನ ಹಾಕಿ ಸತ್ಕರಿಸಿದ್ದಾರೆ. ಈ ವೇಳೆ ಮಾತನಾಡಿದ ಶಾಸಕ ಗೌರಿಶಂಕರ್, ನನ್ನ ಜೀವನ ಇರೋವರೆಗೂ ನಿಮ್ಮ ಸೇವೆಗೆ ಸಿದ್ಧ. ಯಾರಿಗೆ ಏನೇ ಸಮಸ್ಯೆಯಿದ್ದರೂ ನನ್ನ ಬಳಿ ಹೇಳಿಕೊಳ್ಳಿ. ಕೊರೊನಾದಿಂದ ಯಾರಿಗೂ ಸಾವು ಬರದಿರಲಿ ಎಂದು ಆಶಿಸಿದರು.

    ಈ ಅಪರೂಪದ ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಉಪಸ್ಥಿತರಿದ್ದರು. ಸಿದ್ಧಲಿಂಗ ಸ್ವಾಮೀಜಿಗೆ ಪಾದ ಪೂಜೆ ಮಾಡೋ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶ್ರೀಗಳು ಹಾಗೂ ಶಾಸಕರು ಜೊತೆಯಾಗಿ ಅಂಗನಾವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಪೊಲೀಸರು, ವೈದ್ಯರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

    ಈ ಬಗ್ಗೆ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಗೌರಿಶಂಕರ್ ಕುಟುಂಬ ಜನರ ಸೇವೆಗಾಗಿಯೇ ಹುಟ್ಟಿದೆ. ಅವರ ಸೇವೆಯಲ್ಲಿ ಎಲ್ಲೂ ಯಾವ ಸ್ವಾರ್ಥವಿಲ್ಲ. ಇವರ ತಂದೆ ಚೆನ್ನಿಗಪ್ಪ ಅವರು ಶ್ರೀ ಮಠಕ್ಕೆ ಮೊದಲಿನಿಂದಲೂ ಭಕ್ತರು, ಅವರ ಪುತ್ರನಾಗಿ ಅವರ ಹಾದಿಯಲ್ಲೇ ನಡೆಯುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

  • 15 ತಿಂಗ್ಳ ಮಗುವನ್ನ ಮನೆಯಲ್ಲೇ ಬಿಟ್ಟು ಹೆಮ್ಮಾರಿ ವಿರುದ್ಧ ಹೋರಾಟ

    15 ತಿಂಗ್ಳ ಮಗುವನ್ನ ಮನೆಯಲ್ಲೇ ಬಿಟ್ಟು ಹೆಮ್ಮಾರಿ ವಿರುದ್ಧ ಹೋರಾಟ

    – ಒಂದು ತಿಂಗಳಿಂದ ಮನೆಗೆ ಹೋಗದೇ ನರ್ಸ್ ಕೆಲಸ

    ವಿಜಯಪುರ: ಮಹಾಮಾರಿ ಕೊರೊನಾ  ವೈರಸ್ ವಿರುದ್ಧ ಜೀವಗಳನ್ನು ರಕ್ಷಿಸಲು ಕೊರೊನಾ ವಾರಿಯರ್ಸ್ ತಮ್ಮ ಜೀವವನ್ನೇ ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ. ಇದೀಗ ನರ್ಸ್ 15 ತಿಂಗಳ ಮಗುವನ್ನು ಮನೆಯಲ್ಲೇ ಬಿಟ್ಟು ಹೆಮ್ಮಾರಿ ವಿರುದ್ಧ ಹೋರಾಟ ಮಾಡುತ್ತಿದ್ದಾರೆ.

    ವಿಜಯಪುರ ನಗರದ ಶಕ್ತಿ ನಗರ ನಿವಾಸಿ ಸವಿತಾರಾಣಿ ನಗರದ ಕೋವಿಡ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಈವರೆಗೆ ಮನೆಗೆ ಹೋಗಿಲ್ಲ, 15 ತಿಂಗಳ ಹೆಣ್ಣು ಮಗು ಹಾಗೂ 3 ವರ್ಷದ ಗಂಡು ಮಗುವನ್ನ ಅಜ್ಜಿ ಮನೆಯಲ್ಲಿ ಬಿಟ್ಟು ಕೆಲಸ ಮಾಡುತ್ತಿದ್ದಾರೆ.

    ಹೀಗಾಗಿ ಸವಿತಾರಾಣಿ ಪತಿ ಚಂದ್ರಶೇಖರ್ ಮಕ್ಕಳನ್ನು ಭೇಟಿ ಮಾಡಸಲೆಂದು ಹೆರಿಟೇಜ್ ಹೋಟೆಲ್‌ಗೆ ಬಂದಿದ್ದಾರೆ. ಆದರೆ ತಾಯಿಯನ್ನ ಕಂಡ ಮಕ್ಕಳು ಅಮ್ಮನಿಗಾಗಿ ಅಳಲಾರಂಭಿಸಿವೆ. ಇತ್ತ ಅಮ್ಮ ಸವಿತಾರಾಣಿ ಕೂಡ ಮಕ್ಕಳನ್ನು ಕಂಡು ಅಪ್ಪಿಕೊಂಡು ಮುದ್ದಾಡಲಾರದೆ ಕಣ್ಣೀರು ಹಾಕಿದ್ದಾರೆ.

    ಕಳೆದ ಒಂದು ತಿಂಗಳಿನಿಂದ ಅಜ್ಜಿ ಮನೆಯಲ್ಲಿರುವ ಮಗು ಅಮ್ಮನ ನೆನಪಾಗಿ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಾಳೆ. ರಾತ್ರಿ ಎದ್ದು ಒಬ್ಬಳೆ ಮನೆ ತುಂಬಾ ಅಡ್ಡಾಡಿ ಅಮ್ಮನಿಗಾಗಿ ಹುಡುಕಾಡುತ್ತಾಳೆ. ಹೀಗಾಗಿ ಮಗುವಿನ ಆರೋಗ್ಯದಲ್ಲೂ ಏರುಪೇರಾಗುತ್ತಿದೆ ಎಂದು ತಂದೆ ಹೇಳಿದ್ದಾರೆ.

    3 ವರ್ಷದ ಮಗನೂ ಕೂಡ ಅಮ್ಮನಿಗಾಗಿ ಮನೆಯಲ್ಲಿ ಗಲಾಟೆ ಮಾಡುತ್ತಿದ್ದಾನೆ. ಈ ವಿಚಾರವನ್ನು ಫೋನ್ ಮೂಲಕ ತಿಳಿದು ಇತ್ತ ತಾಯಿ ಸವಿತಾರಾಣಿಯು ಕಣ್ಣೀರು ಹಾಕುತ್ತಲೇ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಈ ವೇಳೆ ಮಾತನಾಡಿದ ನರ್ಸ್, ಇಂತಹ ಪರಿಸ್ಥಿತಿ ಯಾವ ತಾಯಿಗೂ ಬರುವುದು ಬೇಡ ಎಂದು ಭಾವುಕರಾಗಿದ್ದಾರೆ.

     

  • ಕೊರೊನಾ ವಾರಿಯರ್ಸ್‍ಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಚ್ಯವನ್ ಪ್ರಾಶ್ ವಿತರಣೆ

    ಕೊರೊನಾ ವಾರಿಯರ್ಸ್‍ಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಚ್ಯವನ್ ಪ್ರಾಶ್ ವಿತರಣೆ

    – ಮೈಸೂರು, ಕೊಳ್ಳೆಗಾಲ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಆಗ್ರಹ

    ಚಾಮರಾಜನಗರ: ಕೊರೊನಾ ವಾರಿಯರ್ಸ್ ಆಶಾ ಕಾರ್ಯಕರ್ತೆಯರಿಗೆ ಮೂರು ಸಾವಿರ ರೂಪಾಯಿ ಪ್ರೋತ್ಸಾಹ ಧನ ಘೋಷಣೆ ಬೆನ್ನಲ್ಲೆ ಆಯುಷ್ಯ ಇಲಾಖೆಯಿಂದ ಮತ್ತೊಂದು ಕೊಡುಗೆ ನೀಡಲಾಗುತ್ತಿದೆ. ಇತ್ತ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ರಾಜ್ಯದ ಎಲ್ಲಾ ಆಶಾ ಕಾರ್ಯಕರ್ತೆಯರಿಗೂ ಚ್ಯವನ್ ಪ್ರಾಶ್ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.

    ರಾಜ್ಯದ 40 ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಇದರ ಪ್ರಯೋಜನ ಪಡೆಯಲಿದ್ದಾರೆ. ಆಯುಷ್ಯ ಇಲಾಖೆಯಿಂದ ಚ್ಯವನ್ ಪ್ರಾಶ್ ಖರೀದಿಸಿ ಈಗಾಗಲೇ ಎಲ್ಲಾ ಜಿಲ್ಲೆಗಳಿಗು ಸರಬರಾಜು ಮಾಡಲಾಗಿದ್ದು, ಶೀಘ್ರದಲ್ಲೇ ಆಶಾ ಕಾರ್ಯಕರ್ತೆಯರಿಗೆ ವಿತರಣೆ ಆಗಲಿದೆ. ಗಡಿ ಜಿಲ್ಲೆ ಚಾಮರಾಜನಗರಕ್ಕೂ ಚ್ಯವನ್ ಪ್ರಾಶ್ ಸರಬರಾಜು ಮಾಡಲಾಗಿದ್ದು, ಆಶಾ ಕಾರ್ಯಕರ್ತೆಯರಿಗೆ ಸದ್ಯದಲ್ಲೇ ವಿತರಣೆ ಮಾಡಲಾಗುವುದು ಎಂದು ಜಿಲ್ಲಾ ಆಯುಷ್ಯ ಅಧಿಕಾರಿ ಡಾ.ರಾಚಯ್ಯ ತಿಳಿಸಿದ್ದಾರೆ.

    ಇತ್ತ ಮೈಸೂರು ಜಿಲ್ಲೆ ಕೊರೊನಾ ಮುಕ್ತವಾದ ಬೆನ್ನಲ್ಲೇ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ಕ್ಷೇತ್ರದ ಶಾಸಕ ಎನ್. ಮಹೇಶ್ ಮೈಸೂರು ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿದ್ದಾರೆ. ಚಾಮರಾಜನಗರ ಕೂಡ ಗ್ರೀನ್ ಝೋನ್‍ನಲ್ಲಿದೆ, ಇದೀಗ ಮೈಸೂರು ಕೂಡ ಕೊರೊನಾ ಮುಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕೊಳ್ಳೆಗಾಲದ ಬಹುತೇಕ ವ್ಯವಹಾರ, ವ್ಯಾಪಾರ, ವಹಿವಾಟು ಮೈಸೂರನ್ನು ಅವಲಂಬಿಸಿದೆ. ಇದರಿಂದ ಮೈಸೂರು ಹಾಗೂ ಕೊಳ್ಳೆಗಾಲ ನಡುವಿನ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ಆಗ್ರಹಿಸಿದ್ದಾರೆ.

    ಸಂಚಾರದ ಕುರಿತು ಸಚಿವ ಸುರೇಶ್ ಕುಮಾರ್ ಜೊತೆ ಮಾತನಾಡಿದ್ದೇನೆ. ಅವರು ಮೈಸೂರು ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಜೊತೆ ಚರ್ಚೆ ನಡೆಸಿ ಸಂಚಾರ ವ್ಯವಸ್ಥೆ ಕಲ್ಪಿಸುವ ಕುರಿತು ಮಾತನಾಡ್ತೀನಿ ಎಂದು ಹೇಳಿದ್ದಾರೆ. ಕೊಳ್ಳೆಗಾಲ ಹಾಗೂ ಮೈಸೂರು ಸಂಚಾರ ಆರಂಭವಾಗಲೇ ಬೇಕು, ಯಾಕಂದ್ರೆ ಬಹುತೇಕ ಜನರು ಮೈಸೂರಿನಿಂದ ತಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಿಕೊಂಡು ಕೊಳ್ಳೆಗಾಲಕ್ಕೆ ಬಂದು ಮಾರಾಟ ಮಾಡ್ತಾರೆ. ಇದರಿಂದ ಕೂಡಲೇ ಇತ್ತ ಸಚಿವರು ಗಮನಹರಿಸಿ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಶಾಸಕರು ಆಗ್ರಹಿಸಿದ್ದಾರೆ.

  • ರಶ್ಮಿಕಾರಿಂದ ಕೊರೊನಾ ವಾರಿಯರ್ಸ್‌ಗೆ ಪ್ರತಿದಿನ ಊಟದ ವ್ಯವಸ್ಥೆ

    ರಶ್ಮಿಕಾರಿಂದ ಕೊರೊನಾ ವಾರಿಯರ್ಸ್‌ಗೆ ಪ್ರತಿದಿನ ಊಟದ ವ್ಯವಸ್ಥೆ

    ಮಡಿಕೇರಿ: ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲು ವೈದ್ಯರು, ನರ್ಸ್ ಹಾಗೂ ಪೊಲೀಸರು ಸೇರಿದಂತೆ ಸಾಕಷ್ಟು ಜನರು ಹಗಲಿರುಳು ದುಡಿಯುತ್ತಿದ್ದಾರೆ. ಇವರ ಸೇವೆಯನ್ನು ಗಮನಿಸಿದ ಕಿರಿಕ್ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಕೊರೊನಾ ವಾರಿಯರ್ಸ್‌ ರ ಹಸಿವು ನೀಗಿಸುತ್ತಿದ್ದಾರೆ.

    ಕೊಡಗು ಜಿಲ್ಲೆ ವಿರಾಜಪೇಟೆಯಲ್ಲಿ ಕೊರೊನಾ ವಿರುದ್ಧ ಹೋರಾಡುತ್ತಿರುವ ವಾರಿಯರ್ಸ್‌ಗೆ ನಟಿ ರಶ್ಮಿಕಾ ಮಂದಣ್ಣ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ವೈದ್ಯರು, ನರ್ಸ್, ಪೊಲೀಸ್ ಮತ್ತು ಹೋಂ ಗಾರ್ಡ್ ಸೇರಿದಂತೆ ಒಟ್ಟು 150 ಜನ ಕೊರೊನಾ ವಾರಿಯರ್ಸ್‌ಗೆ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.

    ತಮ್ಮ ಒಡೆತನದ ಸೆರೆನಿಟಿ ಹಾಲ್‍ನಲ್ಲೇ ಅಡುಗೆ ಮಾಡಿಸಿ ಕೊರೊರಾ ವಾರಿಯರ್ಸ್‌ಗೆ ಪ್ರತಿದಿನ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ಕಳೆದ ಏಪ್ರಿಲ್ 7 ರಿಂದ ಇಷ್ಟು ಜನರಿಗೂ ಊಟದ ವ್ಯವಸ್ಥೆ ಮಾಡುತ್ತಿದ್ದು, ಲಾಕ್‍ಡೌನ್ ಮುಗಿಯುವರೆಗೆ ಕೊರೊನಾ ವಿರುದ್ಧ ಹೋರಾಡುತ್ತಿರುವ ವಾರಿಯರ್ಸ್‌ಗೆ ಊಟದ ವ್ಯವಸ್ಥೆ ಮುಂದುವರಿಯಲಿದೆ.

    ಬಿಸಿಲಿನಲ್ಲಿ ನಿಂತು ಕೆಲಸ ಮಾಡುತ್ತಿದ್ದ ಪೊಲೀಸರನ್ನು ಕಂಡು ರಶ್ಮಿಕಾ ಮಂದಣ್ಣ ಅವರಿಗೆಲ್ಲರಿಗೂ ನಿರಂತರವಾಗಿ ಊಟದ ವ್ಯವಸ್ಥೆ ಮಾಡುವಂತೆ ತಮ್ಮ ತಂದೆಯ ಬಳಿ ಹೇಳಿದ್ದರು. ಹೀಗಾಗಿ ಅಂದಿನಿಂದ ಊಟದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸೆರೆನಿಟಿ ಹಾಲ್ ಮ್ಯಾನೇಜರ್ ತಿಳಿಸಿದರು.

  • ಪರಿಶೀಲಿಸಲು ಬೈಕ್ ತಡೆದಿದ್ದಕ್ಕೆ ಆಂಧ್ರ ಯುವಕರಿಂದ ರಾಜ್ಯ ಪೊಲೀಸರ ಮೇಲೆ ಹಲ್ಲೆ

    ಪರಿಶೀಲಿಸಲು ಬೈಕ್ ತಡೆದಿದ್ದಕ್ಕೆ ಆಂಧ್ರ ಯುವಕರಿಂದ ರಾಜ್ಯ ಪೊಲೀಸರ ಮೇಲೆ ಹಲ್ಲೆ

    ಚಿತ್ರದುರ್ಗ: ಕೋವಿಡ್-19 ಸೋಂಕಿನಿಂದ ಜನರನ್ನು ಸಂರಕ್ಷಿಸಲು ಅರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಹಾಗೂ ಆಶಾ ಕಾರ್ಯಕರ್ತೆರು ಹಗಲು ಇರುಳು ಎನ್ನದೇ ಶ್ರಮಿಸುತಿದ್ದಾರೆ.

    ಆಂಧ್ರದಿಂದ ಬಂದಿದ್ದ ಬೈಕ್ ಸವಾರರನ್ನು ತಡೆದು ಪರಿಶೀಲನೆ ನಡೆಸಿದ ಪರಿಣಾಮ ಕರ್ತವ್ಯನಿರತ ಕೊರೊನಾ ವಾರಿಯರ್ಸ್ ಎನಿಸಿರುವ ಪೊಲೀಸ್ ಪೇದೆ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

    ಶುಕ್ರವಾರ ಸಂಜೆ ಚಳ್ಳಕೆರೆ ತಾಲೂಕಿನ ಪಾತಪ್ಪನಗುಡಿ ಚೆಕ್ ಪೋಸ್ಟ್ ಬಳಿ ಪರಶುರಾಂಪುರ ಠಾಣೆಯ ಕರ್ತವ್ಯ ನಿರತ ಪೊಲೀಸ್ ಪೇದೆ ಶಿವಣ್ಣ ಅವರು ಆಂಧ್ರಪ್ರದೇಶ ರಾಜ್ಯದ ಶೆಟ್ಟೂರು ಗ್ರಾಮದಿಂದ ಬೈಕ್‍ನಲ್ಲಿ ಬಂದಿದ್ದ ಮೂವರನ್ನು ತಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆಕ್ರೋಶಗೊಂಡ ಮಂಜು ಎಂಬ ಕಿಡಿಗೇಡಿಯು ಕುಡಿದ ಅಮಲಿನಲ್ಲಿ ಪೇದೆ ಶಿವಣ್ಣ ಅವರ ಹಲ್ಲೆ ನಡೆಸಿದ್ದಾನೆ.

    ಅಲ್ಲದೇ ಅಸಭ್ಯ ವರ್ತನೆ ತೋರಿಸುತ್ತಾ, ಅವಾಚ್ಯ ಶಬ್ದಗಳನ್ನು ನಿಂದಿಸಿದ್ದಾರೆ. ಬೈಕಿನಲ್ಲಿ ಬರುತ್ತಿದ್ದವರನ್ನು ಕಂಡು ಸ್ಥಳೀಯರು ಸಹ ಬುದ್ಧಿ ಹೇಳಿದ್ದಕ್ಕೆ ಸಾರ್ವಜನಿಕರ ಮೇಲೆಯೂ ಈ ಕಿಡಿಗೇಡಿಗಳು ಹಲ್ಲೆಗೆ ಮುಂದಾಗಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಪರಶುರಾಂಪುರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹಾಗೆಯೇ ಪೊಲೀಸ್ ಪೇದೆ ಮೇಲೆ ಕಿಡಿಗೇಡಿಗಳ ಹಲ್ಲೆಯ ದೃಶ್ಯ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದೆ.

  • ಕೊರೊನಾ ವಾರಿಯರ್ಸ್‍ಗೂ ಡೆಡ್ಲಿ ಸೋಂಕು

    ಕೊರೊನಾ ವಾರಿಯರ್ಸ್‍ಗೂ ಡೆಡ್ಲಿ ಸೋಂಕು

    ದಾವಣಗೆರೆ: ಜಿಲ್ಲೆಯಲ್ಲಿ ಇಂದು ಮೂರು ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಟ್ರಾಫಿಕ್ ಪೊಲೀಸ್ ಪೇದೆ, ಬೆಳ್ಳುಳ್ಳಿ ವ್ಯಾಪಾರಿ ಸೇರಿ ಮೂವರಿಗೆ ಸೋಂಕು ತಗಲಿರುವುದು ವರದಿಯಲ್ಲಿ ದೃಢಪಟ್ಟಿದೆ.

    ಕಳೆದ 15 ದಿನಗಳಿಂದ ದಾವಣಗೆರೆ ಜಿಲ್ಲೆಗೆ ಬಿಟ್ಟು ಬಿಡದೆ ಕಾಡುತ್ತಿರುವ ಕೊರೊನಾ ಪಾಸಿಟಿವ್ ಪ್ರಕರಣಗಳ ಪೈಕಿ ಇಂದು ಕೊರೊನಾ ವಾರಿಯರ್‍ಗೂ ಕಂಟಕ ಎದುರಾಗಿದೆ. ರೋಗಿಯ ಸಂಖ್ಯೆ 975, 34 ವರ್ಷದ ಟ್ರಾಫಿಕ್ ಪೇದೆಗೆ ಸೋಂಕು ದೃಢಪಟ್ಟಿದೆ. ಕಂಟೇನ್‍ಮೆಂಟ್ ಏರಿಯಾದಲ್ಲಿ ಕೆಲಸ ನಿರ್ವಹಿದ್ದ ಇವರಿಗೆ ಅಲ್ಲಿಂದಲೇ ಸೋಂಕು ಹರಡಿದೆ ಎನ್ನಲಾಗುತ್ತಿದೆ. ಸೋಂಕಿತ ಸಂಪರ್ಕದಲ್ಲಿ ಪೊಲೀಸರನ್ನು ಹಾಗೂ ಕುಟುಂಬಸ್ಥರನ್ನು ಈಗಾಗಲೇ ಆರೋಗ್ಯ ಅಧಿಕಾರಿಗಳು ತಪಾಸಣೆ ನಡೆಸಿ ಕ್ವಾರಂಟೈನ್ ಮಾಡಿದ್ದಾರೆ. ಇತ್ತ ಪೊಲೀಸ್ ಪೇದೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ರೋಗಿ ಸಂಖ್ಯೆ 976, 32 ವರ್ಷದ ಬೆಳ್ಳುಳ್ಳಿ ವ್ಯಾಪಾರಿಗೂ ಸೋಂಕು ಪತ್ತೆಯಾಗಿದೆ. ಕಳೆದ ಒಂದು ವಾರದಿಂದ ವ್ಯಾಪಾರಿ ತನ್ನ ಕಾರ್ಯವನ್ನು ನಿಲ್ಲಿಸಿದ್ದ ಎನ್ನಲಾಗುತ್ತಿದೆ. ಅನಾರೋಗ್ಯದ ಕಾರಣ ದಾಖಲಾಗಿದ್ದ ವ್ಯಕ್ತಿಗೆ ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ಪಾಸಿಟಿವ್ ಇರುವುದು ದೃಢಪಟ್ಟಿದೆ. ಕಂಟೇನ್‍ಮೆಂಟ್ ಸೋಂಕಿತ ರೋಗಿ ಸಂಖ್ಯೆ 852 ಸೋಂಕಿತ ಮಹಿಳೆಯಿಂದ ರೋಗಿ ಸಂಖ್ಯೆ 960 ವ್ಯಕ್ತಿಗೆ (40 ವರ್ಷ) ಸೋಂಕು ಹರಡಿದೆ. ಸೋಂಕಿತ ವ್ಯಕ್ತಿ ಕಂಟೇನ್‍ಮೆಂಟ್ ಝೋನ್ ಜಾಲಿನಗರದವರು ಎನ್ನಲಾಗಿದೆ.

    ಹೆಚ್ಚಿದ ಪಾಸಿಟಿವ್ ಕೇಸ್: ದಾವಣಗೆರೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ ಪಾಸಿಟಿವ್ ನಡುವೆಯೂ ಆರ್ಥಿಕ ಚಟುವಟಿಕೆಗೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. ಇದರಿಂದ ಜನರಲ್ಲಿ ಇನ್ನಷ್ಟು ಆತಂಕ ಮೂಡಿಸಿದೆ. ಕಳೆದ ತಿಂಗಳು ಏಪ್ರಿಲ್ 29 ರಂದು ಗ್ರೀನ್ ಝೋನ್‍ನಲ್ಲಿದ್ದ ದಾವಣಗೆರೆಯ ಬಾಷಾನಗರದ ನರ್ಸ್‍ಗೆ ಸೋಂಕು ಇರುವುದು ಖಚಿತವಾಗಿತ್ತು.

    ಆ ಬಳಿಕ ಜಾಲಿನಗರ ವೃದ್ಧನನಿಗೆ ಕೊರೊನಾ ಪಾಸಿಟಿವ್ ವರದಿ ಬಂದಿತ್ತು. ಈ ಎರಡು ಪ್ರಕರಣ ನಂತರ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಪ್ರಕರಣ ಹೆಚ್ಚುತ್ತಾಲೇ ಸಾಗಿದೆ. ಇದೀಗ ದಾವಣಗೆರೆ ಜಿಲ್ಲೆ ರೆಡ್‍ಝೋನ್‍ಗೆ ಬಂದಿದೆ. ಸೋಂಕಿತರ ಸಂಖ್ಯೆ 88ಕ್ಕೆ ಏರಿಕೆಯಾಗಿದೆ. ಜಾಲಿನಗರ ಒಂದರಲ್ಲಿಯೇ 50 ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 88 ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, 4 ಸೋಂಕಿತರು ಮೃತಪಟ್ಟಿದ್ದಾರೆ. ಇಬ್ಬರು ಗುಣಮುಖರಾಗಿದ್ದಾರೆ. ಇನ್ನು 82 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿದೆ.

  • ಜೀವನಕ್ಕೆ ಬೇಕಾದ ಸೌಲಭ್ಯ ಕೊಡಿ – ಕಪ್ಪುಪಟ್ಟಿ ಧರಿಸಿ ಬಂದ ಕೊರೊನಾ ವಾರಿಯರ್ಸ್

    ಜೀವನಕ್ಕೆ ಬೇಕಾದ ಸೌಲಭ್ಯ ಕೊಡಿ – ಕಪ್ಪುಪಟ್ಟಿ ಧರಿಸಿ ಬಂದ ಕೊರೊನಾ ವಾರಿಯರ್ಸ್

    ಯಾದಗಿರಿ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಕಪ್ಪು ಪಟ್ಟಿ ಧರಿಸಿ ಕೆಲಸಕ್ಕೆ ಹಾಜರಾಗಿದ್ದಾರೆ.

    ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 560 ನೌಕರರು ರಾಜ್ಯ ಆರೋಗ್ಯ ಮತ್ತು ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ವಿವಿಧ ತಾಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಕೊರೊನಾ ಕ್ವಾರಂಟೈನ್ ಕೇಂದ್ರಗಳಲ್ಲಿ ಇವರ ಸೇವೆ ಅತ್ಯಗತ್ಯವಾಗಿದೆ.

    ಹೀಗಿದ್ದರೂ ಈ ನೌಕರರ ಜೀವನಕ್ಕೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ವಿಫಲವಾಗಿದೆ. ಈ ನೌಕರರು ಕೊರೊನಾ ವಾರಿಯರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು, ಕೇಂದ್ರ ಸರ್ಕಾರದ ಆರೋಗ್ಯ ಸಿಬ್ಬಂದಿಗೆ ನೀಡಿರುವ ಯೋಜನೆಗಳು ಮತ್ತು ಸೌಲಭ್ಯಗಳು ಈ ವರ್ಗದ ನೌಕರರಿಗೆ ಅನ್ವಯವಾಗುವುದಿಲ್ಲ ಎಂಬುವುದು ಈ ನೌಕರರ ಆರೋಪವಾಗಿದೆ. ಹೀಗಾಗಿ ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕಪ್ಪು ಪಟ್ಟಿ ಧರಿಸಿ ಕೆಲಸಕ್ಕೆ ಹಾಜರಾಗಿದ್ದಾರೆ.