Tag: Corona Warrior

  • ಕೊರೊನಾ ವಾರಿಯರ್​​​ಗಳಿಗೆ ಆಹಾರ ಕಿಟ್ ವಿತರಿಸಿದ ನಿಖಿಲ್ ಕುಮಾರಸ್ವಾಮಿ

    ಕೊರೊನಾ ವಾರಿಯರ್​​​ಗಳಿಗೆ ಆಹಾರ ಕಿಟ್ ವಿತರಿಸಿದ ನಿಖಿಲ್ ಕುಮಾರಸ್ವಾಮಿ

    ರಾಮನಗರ: ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಇಂದು ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ, ಕುದೂರು ಹೋಬಳಿ ಮತ್ತು ತಿಪ್ಪಸಂದ್ರ ಹೋಬಳಿಯಲ್ಲಿ ಕೋವಿಡ್ ವಾರಿಯರ್ ಗಳಿಗೆ ಆಹಾರ ಕಿಟ್ ವಿತರಿಸಿದರು.

    ಕೊರೊನಾ ವಾರಿಯರ್ ಗಳಾದ ಅಂಗನವಾಡಿ ಶಿಕ್ಷಕಿಯರು ಮತ್ತು ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಶುಶ್ರೂಷಕಿಯರು ಹಾಗೂ ಮಾಗಡಿ ತಾಲ್ಲೂಕಿನ ಎಲ್ಲಾ ಬಸ್ ಚಾಲಕರು, ನಿರ್ವಾಹಕರಿಗೆ ಆಹಾರ ಕಿಟ್ ವಿತರಣೆ ಮಾಡಲಾಯ್ತು.

    ಈ ವೇಳೆ ನಿಖಿಲ್ ಕುಮಾರಸ್ವಾಮಿಯವರಿಗೆ ಶಾಸಕ ಎ. ಮಂಜುನಾಥ್ ಹಾಗೂ ಸಮಾಜ ಸೇವಕ ಮಹದೇವ್ ಶಾಸ್ತ್ರಿ ಸಾಥ್ ನೀಡಿದರು.

  • ಕಾಫಿನಾಡಲ್ಲಿ ಕೋವಿಡ್‍ಗೆ ಕೊರೊನಾ ವಾರಿಯರ್ ಮೊದಲ ಬಲಿ

    ಕಾಫಿನಾಡಲ್ಲಿ ಕೋವಿಡ್‍ಗೆ ಕೊರೊನಾ ವಾರಿಯರ್ ಮೊದಲ ಬಲಿ

    ಚಿಕ್ಕಮಗಳೂರು: ಜಗತ್ತಿಗೆ ಮಾರಕವಾಗಿರುವ ಹೆಮ್ಮಾರಿ ಕೊರೊನಾಗೆ ಜಿಲ್ಲೆಯಲ್ಲಿ ಈವರೆಗೆ 136 ಜನ ಸಾವನ್ನಪ್ಪಿದ್ದಾರೆ. ಅದರಲ್ಲಿ ಶಿಕ್ಷಕರು, ಪೊಲೀಸರು ಸೇರಿದಂತೆ ವಿವಿಧ ವರ್ಗದ ಜನರಿದ್ದರು. ಸದ್ಯ ಜಿಲ್ಲೆಯ ಎನ್.ಆರ್.ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಡಿ ದರ್ಜೆ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದ ಮಹಿಳೆಯೊಬ್ಬರು ಹೆಮ್ಮಾರಿ ಕೊರೊನಾಗೆ ಬಲಿಯಾಗಿದ್ದಾರೆ.

    ಮೃತ ಮಹಿಳೆಯನ್ನು 53 ವರ್ಷದ ಧನಲಕ್ಷ್ಮಿ ಎಂದು ಗುರುತಿಸಲಾಗಿದೆ. ಕಳೆದ 15 ವರ್ಷಗಳಿಂದ ಎನ್.ಆರ್.ಪುರದ ಸರ್ಕಾರಿ ಆಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಧನಲಕ್ಷ್ಮಿಗೆ ಅವರಿಗೆ ಆರೋಗ್ಯ ತೀವ್ರ ಹದಗೆಟ್ಟಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಕೊರೊನಾ ಪರೀಕ್ಷೆ ನಡೆಸಿದಾಗ ಪಾಸಿಟಿವ್ ದೃಡಪಟ್ಟು ಚಿಕಿತ್ಸೆ ಮುಂದುವರಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಮಗಳೂರಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದ ಧನಲಕ್ಷ್ಮಿ ಅವರು ನಿನ್ನೆ ಬೆಳಗ್ಗೆ ಸಾವನ್ನಪ್ಪಿದ್ದಾರೆ. ಕಳೆದ ಆರೇಳು ತಿಂಗಳಿಂದ ಕೊರೊನಾ ವಾರಿಯರ್ ಆಗಿ ಕೆಲಸ ಮಾಡುತ್ತಿದ್ದ ಧನಲಕ್ಷ್ಮಿ ಅವರು ಸೋಂಕಿಗೆ ಬಲಿಯಾಗಿದ್ದು, ಜಿಲ್ಲೆಯಲ್ಲಿ ಆಸ್ಪತ್ರೆ ಸಿಬ್ಬಂದಿ ಕೊರೊನಾಗೆ ಬಲಿಯಾದ ಮೊದಲ ಪ್ರಕರಣ ಇದಾಗಿದೆ.

  • ಕ್ವಾರಂಟೈನ್ ಆಗಿ ಎಂದಿದ್ದೆ ತಪಾಯ್ತು, ನರ್ಸ್ ಮೇಲೆ ಕುಟುಂಬಸ್ಥರಿಂದ ಹಲ್ಲೆ

    ಕ್ವಾರಂಟೈನ್ ಆಗಿ ಎಂದಿದ್ದೆ ತಪಾಯ್ತು, ನರ್ಸ್ ಮೇಲೆ ಕುಟುಂಬಸ್ಥರಿಂದ ಹಲ್ಲೆ

    – ಗಾಯಗೊಂಡ ಕೊರೊನಾ ವಾರಿಯರ್ ಆಸ್ಪತ್ರೆಯಲ್ಲಿ ನರಳಾಟ

    ಬಾಗಲಕೋಟೆ: ಕ್ವಾರಂಟೈನ್ ಆಗಿ ಎಂದು ಹೇಳಿದ್ದ ಕೊರೊನಾ ವಾರಿಯರ್ ನರ್ಸ್ ಒಬ್ಬರ ಮೇಲೆ ಕುಟುಂಬಸ್ಥರು ಹಲ್ಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಹೊಸಕೋಟೆ ನಡೆದಿದೆ.

    ಹಲ್ಲೆಗೊಳಗಾದ ನರ್ಸ್ ಅವರನ್ನು ರಾಜೇಶ್ವರಿ ಮ್ಯಾಗಿನಮನಿ (47) ಎಂದು ಗುರುತಿಸಲಾಗಿದೆ. ಇಂದ್ರವ್ವ ಅರಹುಣಶಿ, ಪರಶುರಾಮ ನಾಯ್ಕರ್, ದೇವಕೆವ್ವ ನಾಯ್ಕರ್, ಗೋಪಾಲ ನಾಯ್ಕರ್ ಎಂಬವರು ಹಲ್ಲೆ ಮಾಡಿದ್ದಾರೆ. ಕೊರೊನಾ ಲಕ್ಷಣಗಳಿವೆ ಕ್ವಾರಂಟೈನ್ ಆಗಿರಿ ಮನೆ ಬಿಟ್ಟು ಬರಬೇಡಿ ಎಂದು ಸೂಚಿಸಿದ್ದಕ್ಕೆ, ನಮಗೆ ಊರಲ್ಲಿ ಅವಮಾನ ಮಾಡಿದೆ ಎಂದು ಗುಂಪು ಕಟ್ಟಿಕೊಂಡು ಬಂದು ಹಲ್ಲೆ ಮಾಡಲಾಗಿದೆ.

    ಕೆರೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸರ್ಕಾರಿ ಮಹಿಳಾ ಕಿರಿಯ ಆರೋಗ್ಯ ಸಹಾಯಕಿಯಾಗಿ ರಾಜೇಶ್ವರಿಯವರು ಕೆಲಸ ಮಾಡುತ್ತಿದ್ದಾರೆ. ಇವರು ಇಂದ್ರವ್ವ ಅರಹುಣಶಿವರಗೆ ಕೊರೊನಾ ಲಕ್ಷಣ ಇರುವ ಕಾರಣ ಕ್ವಾರಂಟೈನ್ ಆಗಿದ್ದು, ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸೂಚಿಸಿದ್ದರು. ಆದರೆ ತಪಾಸಣೆ ವೇಳೆ ವರದಿ ನೆಗೆಟಿವ್ ಬಂದಿತ್ತು. ಈ ಕಾರಣದಿಂದ ಸುಮ್ಮನೆ ನಮ್ಮ ಮರ್ಯಾದೆ ಹಾಳು ಮಾಡಿದೆ ಎಂದು ಅವರ ಕುಟುಂಬಸ್ಥರು ಹಲ್ಲೆ ಮಾಡಿದ್ದಾರೆ.

    ಸದ್ಯ ಗಾಯಗೊಂಡ ಕೊರೊನಾ ವಾರಿಯರ್ ರಾಜೇಶ್ವರಿ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಜೊತೆಗೆ ಹಲ್ಲೆ ಮಾಡಿದವರ ವಿರುದ್ಧ ಕೆರೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ನಾಲ್ವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

  • ಮಂಗಳೂರು ದಸರಾಕ್ಕೆ ವಿದ್ಯುಕ್ತ ಚಾಲನೆ ನೀಡಿದ ಕೊರೊನಾ ವಾರಿಯರ್

    ಮಂಗಳೂರು ದಸರಾಕ್ಕೆ ವಿದ್ಯುಕ್ತ ಚಾಲನೆ ನೀಡಿದ ಕೊರೊನಾ ವಾರಿಯರ್

    ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಮಂಗಳೂರು ದಸರಾಕ್ಕೆ ಇಂದು ವಿದ್ಯುಕ್ತವಾಗಿ ಚಾಲನೆ ದೊರೆಯಿತು.

    ಕೊರೊನಾ ವಾರಿಯರ್ ಎನ್.ಆರ್.ಐ ಫೋರಂನ ಮಾಜಿ ಉಪಾಧ್ಯಕ್ಷೆ, ಚಿಕ್ಕಮಗಳೂರು ಮೂಲದ ಡಾ.ಆರತಿ ಕೃಷ್ಣ ಈ ಬಾರಿಯ ಮಂಗಳೂರು ದಸರಾಕ್ಕೆ ಚಾಲನೆ ನೀಡಿದರು. ಶ್ರೀ ಕ್ಷೇತ್ರದಲ್ಲಿ ಗಣಪತಿ, ಶಾರದಾ ಮಾತೆ, ನವದುರ್ಗೆಯರು ಹಾಗೂ ಆದಿಶಕ್ತಿಯ ಮಣ್ಣಿನ ಮೂರ್ತಿಗಳನ್ನು ಏಕಕಾಲದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.

    ಕ್ಷೇತ್ರದ ಅಭಿವೃದ್ಧಿಯ ರೂವಾರಿ ಜನಾರ್ದನ ಪೂಜಾರಿಯವರ ಆಶಯದಂತೆ ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ನಮ್ಮ ದಸರಾ-ನಮ್ಮ ಸುರಕ್ಷೆ ಎಂಬ ಘೋಷ ವಾಕ್ಯದೊಂದಿಗೆ ಇಂದಿನಿಂದ 10 ದಿನಗಳ ಕಾಲ ನಡೆಯಲಿದೆ. ಅಕ್ಟೋಬರ್ 26 ರಂದು ದಸರಾ ವಿಸರ್ಜನಾ ಪೂಜೆ ನಡೆದು ಬಳಿಕ ಕ್ಷೇತ್ರದ ಆವರಣದಲ್ಲೇ ಮೂರ್ತಿಗಳ ಮೆರವಣಿಗೆ ನಡೆಸಿ ಕ್ಷೇತ್ರದ ಪುಷ್ಕರಣಿಯಲ್ಲಿ ವಿಸರ್ಜಿಸಲಾಗುವುದು.

  • ಕೋವಿಡ್‍ಗೆ ಕೊರೊನಾ ವಾರಿಯರ್ ಬಲಿ – ಸಹ ಸಿಬ್ಬಂದಿ ಕಣ್ಣೀರು

    ಕೋವಿಡ್‍ಗೆ ಕೊರೊನಾ ವಾರಿಯರ್ ಬಲಿ – ಸಹ ಸಿಬ್ಬಂದಿ ಕಣ್ಣೀರು

    – ಆರೋಗ್ಯ ಸಚಿವ ಶ್ರೀರಾಮುಲುರಿಂದ ಸಂತಾಪ

    ಯಾದಗಿರಿ: ಒಂದು ಕಡೆ ಕೊರೊನಾ ವಾರಿಯರ್ಸ್ ಜೀವದ ಹಂಗು ತೊರೆದು ಕೊವೀಡ್ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಈ ವೇಳೆಯಲ್ಲಿ ಕೊರೊನಾ ಚಿಕಿತ್ಸೆ ಫಲಕಾರಿಯಾಗದೆ ನರ್ಸ್ ಒಬ್ಬರು ಬಲಿಯಾಗಿದ್ದಾರೆ. ಸಹೋದ್ಯೋಗಿ ಮೃತ ದೇಹಕಂಡು ಯಾದಗಿರಿ ಆರೋಗ್ಯ ಇಲಾಖೆಯ ಸಿಬ್ಬಂದಿ ಕಣ್ಣೀರು ಹಾಕಿದ್ದಾರೆ.

    ಯಾದಗಿರಿ ತಾಲೂಕಿನ ಕೌಳ್ಳೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ, 12 ವರ್ಷದಿಂದ ಸ್ಟಾಫ್ ನರ್ಸ್ ಆಗಿದ್ದ 34 ವರ್ಷದ ಗೀತಾ ಮೃತಪಟ್ಟಿರುವ ಕೊರೊನಾ ವಾರಿಯರ್. ಗೀತಾ ಅವರಿಗೆ ಕಳೆದ ಸೆಪ್ಟೆಂಬರ್ 19ರಂದು ಕೊರೊನಾ ದೃಢವಾಗಿತ್ತು. ಹೀಗಾಗಿ ಗೀತಾ ಅವರನ್ನು ಯಾದಗಿರಿ ಹೊರವಲಯದಲ್ಲಿರುವ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಮೊದಲ ಬಾರಿಗೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದ ಗೀತಾ ಆಸ್ಪತ್ರೆಯಿಂದ ಬಹು ಬೇಗನೆ ಬಿಡುಗಡೆಯಾಗಿದ್ದರು. ಆದರೆ ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ಗೀತಾ ಅವರಿಗೆ ಮತ್ತೆ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡಿದ್ದವು. ಈ ಹಿನ್ನೆಲೆ ಸೆಪ್ಟೆಂಬರ್ 29ರಂದು ಎರಡನೇ ಬಾರಿಗೆ ಕೊರೊನಾ ದೃಢವಾಗಿತ್ತು. ಮತ್ತೆ ಯಾದಗಿರಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗೀತಾ ಅವರಿಗೆ ತೀವ್ರ ಉಸಿರಾಟದ ತೊಂದರೆ ಇದ್ದ ಕಾರಣ, ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

    ಮೃತ ಗೀತಾ ಅವರ ಗಂಡನ ಜೊತೆ ಯಾದಗಿರಿ ನಗರದ ನಜರಾತ್ ಕಾಲೋನಿಯಲ್ಲಿ ವಾಸವಾಗಿದ್ದರು. ಕೊರೊನಾ ವಾರಿಯರ್ ಗೀತಾ ಸಾವಿಗೆ ಆರೋಗ್ಯ ಸಚಿವ ಶ್ರೀರಾಮುಲು ಸಂತಾಪ ಸೂಚಿಸಿದ್ದಾರೆ. ಗೀತಾ ಸಾವಿನ ಬಗ್ಗೆ ಟ್ವೀಟ್ ಮಾಡಿರುವ ಶ್ರೀರಾಮುಲು, ಗೀತಾ ಅವರ ಕುಟುಂಬಕ್ಕೆ ಆರೋಗ್ಯ ಇಲಾಖೆಯಿಂದ, ಸಿಗುವ ಸೌಲಭ್ಯಗಳನ್ನು ಶೀಘ್ರವಾಗಿ ಒದಗಿಸುವ ಭರವಸೆ ನೀಡಿದ್ದಾರೆ.

  • ಕೊರೊನಾ ಪಾಸಿಟಿವ್ ವರದಿ ನೀಡಿದ ವಾರಿಯರ್‌ಗೆ ಸೋಂಕಿತನಿಂದ ಹಲ್ಲೆ

    ಕೊರೊನಾ ಪಾಸಿಟಿವ್ ವರದಿ ನೀಡಿದ ವಾರಿಯರ್‌ಗೆ ಸೋಂಕಿತನಿಂದ ಹಲ್ಲೆ

    – ದುಡ್ಡಿಗಾಗಿ ಪಾಸಿಟಿವ್ ವರದಿ ನೀಡ್ತೀರಿ
    – ವಾರಿಯರ್ಸ್‍ಗೆ ಈಗ ಜೀವ ಭಯ

    ಹಾಸನ: ಸರ್ಕಾರ ಕೊರೊನಾ ಹೆಸರಲ್ಲಿ ಕೋಟಿ ಕೋಟಿ ಹಣ ಲೂಟಿ ಮಾಡುತ್ತಿದೆ ಎಂಬ ಆರೋಪ ಈ ಹಿಂದೆ ಕೇಳಿಬಂದಿತ್ತು. ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ, ಕುಮಾರಸ್ವಾಮಿ ಸೇರಿದಂತೆ ಹಲವಾರು ಜನ ವಿರೋಧ ಪಕ್ಷದ ಶಾಸಕರು ಕೂಡ ಈ ಬಗ್ಗೆ ಗಂಭೀರ ಆರೋಪ ಮಾಡಿದ್ದರು.

    ಈ ಆರೋಪವೇ ಈಗ ಹಾಸನದಲ್ಲಿ ಮನೆಮನೆಗೆ ಹೋಗಿ ಹಗಲು ರಾತ್ರಿಯೆನ್ನದೆ ಕೊರೊನಾ ವಿರುದ್ಧ ಹೋರಾಡುತ್ತಿರುವ ನರ್ಸ್‍ಗಳಿಗೆ, ಆಶಾಕಾರ್ಯಕರ್ತೆಯರಿಗೆ, ವೈದ್ಯಕೀಯ ಸಿಬ್ಬಂದಿಗೆ ಸಂಕಷ್ಟವಾಗಿ ಪರಿಣಮಿಸಿದೆ. ಸರ್ಕಾರದ ವಿರುದ್ಧ ಕೇಳಿ ಬಂದ ಆರೋಪಕ್ಕೆ ಪ್ರತಿಯಾಗಿ ಮನೆ ಮನೆಗೆ ಹೋಗಿ ಕೊರೊನಾ ಪರೀಕ್ಷೆ ಮಾಡುತ್ತಾ, ಕೊರೊನಾ ಜಾಗೃತಿ ಮೂಡಿಸುತ್ತಿರುವ ವಾರಿಯರ್ಸ್ ಗೆ ಜೀವ ಭಯ ಶುರುವಾಗಿದೆ.

    ನೀವು ಹಣ ದೋಚುವ ಉದ್ದೇಶದಿಂದ ನಮಗೆ ಕೊರೊನಾ ಇಲ್ಲದಿದ್ದರೂ ಕೊರೊನಾ ಪಾಸಿಟಿವ್ ಎಂದು ವರದಿ ಕೊಡುತ್ತಿದ್ದೀರ. ನೀವು ಕೊರೊನಾ ಪಾಸಿಟಿವ್ ಎಂದು ಹೆಚ್ಚು ಹೆಚ್ಚು ವರದಿ ಕೊಟ್ಟಷ್ಟು, ನಿಮಗೆ ಹೆಚ್ಚು ಹೆಚ್ಚು ಕಮಿಷನ್ ಬರುತ್ತಿದೆ. ಹೀಗಾಗಿ ನಮಗೆ ಕೊರೊನಾನೂ ಇಲ್ಲ ಏನೂ ಇಲ್ಲ. ಇದೆಲ್ಲ ನಿಮ್ಮ ಸುಳ್ಳು ರಿಪೋರ್ಟ್ ಎಂದು ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಈ ಬಗ್ಗೆ ಕೊರೊನಾ ವಾರಿಯರ್ಸ್ ಗಳೇ ಆತಂಕ ತೋಡಿಕೊಂಡಿದ್ದು, ನಮಗೆ ಜೀವ ಭಯವಿದೆ. ದಯವಿಟ್ಟು ರಕ್ಷಣೆ ಕೊಡಿ ಅಂತಿದ್ದಾರೆ.

    ಈ ಮೇಲಿನ ಹೇಳಿಕೆಗೆ ಪುಷ್ಟಿ ನೀಡುವಂತೆ ಸೆಪ್ಟೆಂಬರ್ 17ರಂದು ಹಾಸನ ಜಿಲ್ಲೆ, ಅರಸೀಕೆರೆ ತಾಲೂಕಿನ ದೊಡ್ಡ ಮೇಟಿಕುರ್ಕಿ ಗ್ರಾಮದಲ್ಲಿ ಆತಂಕಕಾರಿ ಘಟನೆ ನಡೆದಿದೆ. ಗ್ರಾಮದ ಮಂಜುನಾಥ್‍ಗೆ ಕೊರೊನಾ ಪಾಸಿಟಿವ್ ಬಂದಿದ್ದು, ಆತನ ಸ್ಲ್ಯಾಬ್ ಟೆಸ್ಟ್ ಮಾಡಿದ್ದ ಲ್ಯಾಬ್ ಟೆಕ್ನೀಷಿಯನ್ ಮೇಲೆ ಮಂಜುನಾಥ್ ಗಂಭೀರ ಹಲ್ಲೆ ಮಾಡಿದ್ದಾನೆ. ನನಗೆ ಕೊರೊನಾ ಇಲ್ಲದಿದ್ದರೂ ಹಣ ದೋಚಲು ಪಾಸಿಟಿವ್ ಅಂತಾ ವರದಿ ಬರುವ ಹಾಗೆ ಮಾಡಿದ್ದೀಯಾ ಎಂದು ಹಲ್ಲೆ ಮಾಡಿದ್ದಾನೆ. ಇದೀಗ ಕೊರೊನಾ ವಾರಿಯರ್ಸ್ ಜೀವ ಭಯದಲ್ಲಿ ಕೆಲಸ ಮಾಡುವಂತಾಗಿದೆ.

    ಸದ್ಯ ಹಲ್ಲೆ ಮಾಡಿದವರ ಮೇಲೆ ಈಗಾಗಲೇ ಕೇಸ್ ದಾಖಲಾಗಿದೆ. ಒಂದು ಕಡೆ ರಾಜಕಾರಣಿಗಳು ಹಲ್ಲೆ ಮಾಡಿದವರನ್ನು ತಮ್ಮ ಪ್ರಭಾವ ಬಳಸಿ ರಕ್ಷಿಸಲು ಮುಂದಾಗುತ್ತಿರುವುದು ಕೂಡ ವಾರಿಯರ್ಸ್ ನೋವಿಗೆ ಕಾರಣವಾಗಿದೆ. ಮತ್ತೊಂದೆಡೆ ಸರ್ಕಾರದ ಮೇಲೆ ಬಂದ ಕೊರೊನಾ ಹಗರಣದ ಆರೋಪದಿಂದಾಗಿ ಫೀಲ್ಡ್ ನಲ್ಲಿ ಕೆಲಸ ಮಾಡುವ ನರ್ಸ್, ಆಶಾಕಾರ್ಯಕರ್ತೆಯಂತವರು ಜನಸೇವೆ ಮಾಡುವುದರ ಜೊತೆಗೆ ಜೀವ ಭಯದಲ್ಲೂ ಕೆಲಸ ಮಾಡುವಂತಾಗಿದೆ.

  • ಕೊರೊನಾ ವಾರಿಯರ್ಸ್‍ಗೆ ಸಿಗುತ್ತಿಲ್ಲ ಸೂಕ್ತ ಚಿಕಿತ್ಸೆ- ವಿಡಿಯೋ ಮಾಡಿ ಅಳಲು

    ಕೊರೊನಾ ವಾರಿಯರ್ಸ್‍ಗೆ ಸಿಗುತ್ತಿಲ್ಲ ಸೂಕ್ತ ಚಿಕಿತ್ಸೆ- ವಿಡಿಯೋ ಮಾಡಿ ಅಳಲು

    – ಕೊರೊನಾ ವರದಿ ವಿಳಂಬ, ಚಿಕಿತ್ಸೆ ನಿರ್ಲಕ್ಷದ ಬಗ್ಗೆ ಕಿಡಿ

    ಚಿತ್ರದುರ್ಗ: ಇಷ್ಟು ದಿನ ಜನ ಸಾಮಾನ್ಯರು ಕೋವಿಡ್ ಕೇಂದ್ರಗಳಲ್ಲಿ ಹಾಗೂ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ, ವ್ಯವಸ್ಥೆ ಸರಿ ಎಲ್ಲ ಎಂದು ವಿಡಿಯೋ ಹರಿಬಿಟ್ಟು ಅಳಲು ತೋಡಿಕೊಂಡಿರುವುದನ್ನು ನೋಡಿದ್ದೇವೆ. ಆದರೆ ಇದೀಗ ಕೊರೊನಾ ವಾರಿಯರ್ಸ್‍ಗೂ ಇದೇ ರೀತಿ ಸಮಸ್ಯೆಯಾಗುತ್ತಿದ್ದು, ಇದೀಗ ಜೀವ ಉಳಿಸುವ ಕೆಲಸ ಮಾಡುವರಿಗೇ ಜೀವ ಭಯ ಶುರುವಾಗಿದೆ.

    ಚಿತ್ರದುರ್ಗ ತಾಲೂಕಿನ ಹಿರೇಗುಂಟನೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಹಿರೇಗುಂಟನೂರು ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕ ವಿಡಿಯೋ ಮಾಡಿ ಅವ್ಯವಸ್ಥೆ ಕುರಿತು ಅಳಲು ತೋಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ರೋಗಿಗಳ ಬಗ್ಗೆ ನಿರ್ಲಕ್ಷ ವಹಿಸುತ್ತಿದ್ದು, ಚಿಕಿತ್ಸೆ ಹಾಗೂ ವಾರ್ಡ್‍ಗಳಲ್ಲಿ ಯಾವುದೇ ರೀತಿಯ ವ್ಯವಸ್ಥೆಗಳು ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಕೇವಲ ಜನ ಸಾಮಾನ್ಯರಿಗೆ ಮಾತ್ರವಲ್ಲ ನಮ್ಮಂಥ ಕೊರೊನಾ ವಾರಿಯರ್ಸ್‍ಗೂ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ತೀರ್ವ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಕೊರೊನಾ ಟೆಸ್ಟ್ ವರದಿ ವಿಳಂಬ, ಚಿಕಿತ್ಸೆಯಲ್ಲಿಯೂ ನಿರ್ಲಕ್ಷದ ವಹಿಸುತ್ತಿರುವ ಬಗ್ಗೆ ಕಿಡಿ ಕಾರಿದ್ದಾರೆ. ಅಲ್ಲದೆ ಕೋವಿಡ್ ವಾರ್ಡ್ ಅವ್ಯವಸ್ಥೆ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸೋಂಕಿತ ಆರೋಗ್ಯ ಇಲಾಖೆ ಸಿಬ್ಬಂದಿಗಾಗಿ ಪ್ರತ್ಯೇಕ ವ್ಯವಸ್ಥೆಗೆ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.

  • ಮೈಸೂರಿನಲ್ಲಿ ಮತ್ತೊಬ್ಬ ಕೊರೊನಾ ವಾರಿಯರ್ ಸಾವು

    ಮೈಸೂರಿನಲ್ಲಿ ಮತ್ತೊಬ್ಬ ಕೊರೊನಾ ವಾರಿಯರ್ ಸಾವು

    ಮೈಸೂರು: ಜಿಲ್ಲೆಯಲ್ಲಿ ಒಂದರ ಮೇಲೊಂದು ಕೊರೊನಾ ವಾರಿಯರ್ಸ್ ಗಳ ಸಾವಾಗುತ್ತಿದೆ. ಇಂದು ಕೂಡ ಓರ್ವ ಆರೋಗ್ಯಾಧಿಕಾರಿ ಮೈಸೂರಿನಲ್ಲಿ ಸಾವನ್ನಪ್ಪಿದ್ದಾರೆ.

    ಸಾವನ್ನಪ್ಪಿದ ಕೊರೊನಾ ವಾರಿಯರ್ ಅನ್ನು ಮೈಸೂರು ಜಿಲ್ಲೆಯ ಟಿ. ನರಸೀಪುರ ಪಟ್ಟಣದ ನಿವಾಸಿ ಚಂದ್ರಶೇಖರ್ (32) ಎಂದು ಗುರುತಿಸಲಾಗಿದೆ. ಇವರು ಸಮುದಾಯ ಆರೋಗ್ಯಾಧಿಕಾರಿಯಾಗಿದ್ದು, ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

    ಕೊರೊನಾ ರೋಗಿಗಳನ್ನು ಪತ್ತೆ ಮಾಡುವ ತಂಡದಲ್ಲಿ ಚಂದ್ರಶೇಖರ್ ಕೆಲಸ ಮಾಡುತ್ತಿದ್ದರು. ಆದರೆ ನೆನ್ನೆ ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳಿದ್ದ ಚಂದ್ರಶೇಖರ್, ಮನೆಯಲ್ಲಿ ದಿಢೀರನೇ ಅಸ್ವಸ್ಥರಾಗಿದ್ದರು. ತಕ್ಷಣ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಮಾರ್ಗ ಮಧ್ಯೆದಲ್ಲೇ ಚಂದ್ರಶೇಖರ್ ಸಾವನ್ನಪ್ಪಿದ್ದಾರೆ. ಕೊರೊನಾ ಟೆಸ್ಟ್ ನಂತರ ಮೃತರ ಅಂತ್ಯಕ್ರಿಯೆ ನಡೆಯಲಿದೆ.

  • ಸತ್ಯ ಹೇಳಿದ್ದೆ ತಪ್ಪಾಯ್ತು – ಕೆಲ್ಸದಿಂದ ಕೊರೊನಾ ವಾರಿಯರ್ ಔಟ್

    ಸತ್ಯ ಹೇಳಿದ್ದೆ ತಪ್ಪಾಯ್ತು – ಕೆಲ್ಸದಿಂದ ಕೊರೊನಾ ವಾರಿಯರ್ ಔಟ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಕಂಟ್ರೋಲ್ ರೂಂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಪಬ್ಲಿಕ್ ಟಿವಿಗೆ ಹೇಳಿಕೆ ನೀಡಿದ್ದ ಮಹಿಳಾ ಕೊರೊನಾ ವಾರಿಯರ್ ಒಬ್ಬರನ್ನು ಬಿಬಿಎಂಪಿ ಕೆಲಸದಿಂದ ಅಮಾನತು ಮಾಡಿದೆ.

    ಕೊರೊನಾ ಕಂಟ್ರೋಲ್ ರೂಂ ನಿರ್ವಹಣೆ ಮಾಡುತ್ತಿದ್ದ ಖಾಸಗಿ ಏಜೆನ್ಸಿಯ ಮಹಿಳಾ ಅಧಿಕಾರಿಯೊಬ್ಬರು, ಕೊರೊನಾ ರೋಗಿಗಳು ಕೈಕಾಲು ಹಿಡಿಯುತ್ತೇವೆ ಬೆಡ್ ವ್ಯವಸ್ಥೆ ಮಾಡಿ. ಒಂದು ಬೆಡ್ ಬ್ಲಾಕ್ ಮಾಡಿ ಅಂತಾರೆ. ಆದರೆ ಕಂಟ್ರೋಲ್ ರೂಂ ನಲ್ಲಿರುವ ನನಗೆ ಬೆಡ್ ಬ್ಲಾಕ್ ಮಾಡೋದಕ್ಕೆ ಅವಕಾಶ ಕೊಡಲ್ಲ. ಸೆಂಟ್ರಲ್ ವಾರ್ ರೂಂ ಟೀಮ್‍ಗೆ ರಿಪೋರ್ಟ್ ಮಾಡಿದರೆ ಅಲ್ಲಿ ಅವರು ರೋಗಿಗಳಿಗೆ ಸ್ಪಂದಿಸುವುದೇ ಇಲ್ಲ. ನಮಗೆ ಮತ್ತೆ ವಾಪಸ್ ರೋಗಿಗಳು ಕರೆ ಮಾಡಿ ಅಳಲು ತೋಡಿಕೊಳುತ್ತಾರೆ ಎಂದು ಹೇಳಿಕೆ ನೀಡಿದ್ದರು.

    ಜೊತೆಗೆ ನಾಲ್ಕು ಅಂಬುಲೆನ್ಸ್ ನನ್ನ ವಾರ್ಡ್‍ಗೆ ಕೊಟ್ಟಿದ್ದಾರೆ. ಆದರೆ ರೋಗಿಗಳು ತುರ್ತಾಗಿ ಕರೆ ಮಾಡಿ ಅಂಬುಲೆನ್ಸ್ ಬೇಕು ಕಳುಹಿಸಿ ಎಂದು ಕೇಳುತ್ತಾರೆ. ಆಗ ನಾವು ಹಿರಿಯ ಅಧಿಕಾರಿಗಳಿಗೆ ಕೇಳಿದರೆ, ನೀವು ಇಲ್ಲಿರುವ ಅಂಬುಲೆನ್ಸ್ ಕಳಿಸಬೇಡಿ ಅಂತಾರೆ. ಒಂದು ತಿಂಗಳಿಂದ ಹಾಗೆ ಬಿದ್ದಿದೆ. ಹೋಂ ಐಸೊಲೇಷನ್‍ನಲ್ಲಿರುವವರ ಆರೋಗ್ಯ ಏರುಪೇರಾದರೂ ಅವರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿಸುವುದಕ್ಕೆ ಅವಕಾಶ ಕೊಡಲ್ಲ ಎಂದು ಮಹಿಳಾ ಅಧಿಕಾರಿ ದೂರಿದ್ದರು.

    ವೆಂಟಿಲೇಟರ್ ನಲ್ಲಿರುವ ರೋಗಿಯನ್ನು ಏಳು ದಿನ ಆಯ್ತು ಎಂದು ಡೈರೆಕ್ಟ್ ಡಿಸ್ಚಾರ್ಜ್ ಮಾಡಿದ್ದಾರೆ. ಆಸ್ಪತ್ರೆಯ ವಿರುದ್ಧ ಅಧಿಕಾರಿಗಳ ಗಮನಕ್ಕೆ ತಂದರೆ ಯಾವುದೇ ಪ್ರಯೋಜನವಾಗಿಲ್ಲ. ಜನರಿಗೆ ಸಹಾಯ ಮಾಡೋಕೆ ಆಗಲ್ಲ. ಕೈಕಟ್ಟಿ ಹಾಕುತ್ತಾರೆ ಅಂದರೆ ಯಾಕೆ ಬೇಕು ಈ ವ್ಯವಸ್ಥೆ ಎಂದು ಮಹಿಳಾ ಅಧಿಕಾರಿ ಬೇಸರ ವ್ಯಕ್ತಪಡಿಸಿದ್ದರು. ಈ ಅಧಿಕಾರಿಯನ್ನು ಈಗ ಬಿಬಿಎಂಪಿ ಅಧಿಕಾರಿಗಳು ಕೆಲಸದಿಂದ ತೆಗೆದು ಹಾಕಿದ್ದಾರೆ. ಜೊತೆಗೆ ಎಫ್‍ಐಆರ್ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ.

    ಇಂದರಿಂದ ಭಯಗೊಂಡ ಮಹಿಳಾ ಅಧಿಕಾರಿ ವಿಡಿಯೋ ಮಾಡಿ ಅಳಲನ್ನು ತೋಡಿಕೊಂಡಿದ್ದು, ಸತ್ಯ ಹೇಳಿದ್ದೇ ತಪ್ಪಾಗಿದೆ. ನನ್ನನ್ನು ಕೆಲಸದಿಂದ ತೆಗದು ಹಾಕಿದ್ದಾರೆ. ಜೊತೆಗೆ ಎಫ್‍ಐಆರ್ ದಾಖಲಿಸಿ ಮನೆಯ ಹತ್ತಿರ ಪೊಲೀಸ್ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಮಹಿಳಾ ಅಧಿಕಾರಿ ಒತ್ತಾಯ ಮಾಡಿದ್ದಾರೆ.

  • ಆರೋಗ್ಯಾಧಿಕಾರಿ ಆತ್ಮಹತ್ಯೆ- ಕೊರೊನಾ ವಾರಿಯರ್ಸ್‍ಗಳಲ್ಲಿ ಸುಧಾಕರ್ ಮನವಿ

    ಆರೋಗ್ಯಾಧಿಕಾರಿ ಆತ್ಮಹತ್ಯೆ- ಕೊರೊನಾ ವಾರಿಯರ್ಸ್‍ಗಳಲ್ಲಿ ಸುಧಾಕರ್ ಮನವಿ

    ಬೆಂಗಳೂರು/ಮೈಸೂರು: ಅರಮನೆ ನಗರಿಯಲ್ಲಿ ಕೊರೊನಾ ವಾರಿಯರ್ ಆಗಿದ್ದ ನಂಜನಗೂಡು ತಾಲೂಕು ಆರೋಗ್ಯಾಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು ಕೊರೊನಾ ವಾರಿಯರ್ಸ್ ಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಆರೋಗ್ಯಾಧಿಕಾರಿಯನ್ನು ನಾಗೇಂದ್ರ ಎಂದು ಗುರುತಿಸಲಾಗಿದ್ದು, ಇವರು ಮೈಸೂರಿನ ಆಲನಹಳ್ಳಿ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾರೆ. ನಾಗೇಂದ್ರ ಅವರು ಕಳೆದ ಒಂದು ವರ್ಷದಿಂದ ನಂಜನಗೂಡಿನಲ್ಲಿ ತಾಲೂಕು ಆರೋಗ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗುತ್ತಿದೆ.

    ಸುಧಾಕರ್ ಮನವಿ:
    ಕೊರೊನಾ ವಾರಿಯರ್ ಆತ್ಮಹತ್ಯೆ ಮಾಡಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಸುಧಾಕರ್ ಅವರು ಟ್ವೀಟ್ ಮಾಡಿ, ಮೈಸೂರಿನ ನಂಜನಗೂಡು ತಾಲೂಕು ಕೋವಿಡ್ ವಾರಿಯರ್ ಆರೋಗ್ಯಾಧಿಕಾರಿ ನಾಗೇಂದ್ರ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿಯಿತು. ಅವರ ಸಾವು ನನಗೆ ಅತ್ಯಂತ ಬೇಸರ ತಂದಿದೆ. ಪ್ರೀತಿಯ ಕೊರೊನಾ ವಾರಿಯರ್ಸ್ ಗಳಿಗೆ ನನ್ನದೊಂದು ಮನವಿ. ನಿಮಗೆ ಎಷ್ಟೇ ಒತ್ತಡಗಳಿದ್ದರೂ ನಿಮ್ಮ ಮೇಲಾಧಿಕಾರಿಗಳ ಜೊತೆ ಹೇಳಿಕೊಳ್ಳಿ. ನಿಮ್ಮ ಕಷ್ಟಗಳಿಗೆ ಸರ್ಕಾರ ಯಾವತ್ತೂ ಜೊತೆಗಿದೆ ಎಂದು ಬರೆದುಕೊಂಡಿದ್ದಾರೆ.

    ಆತ್ಮಹತ್ಯೆ ಕುರಿತಂತೆ ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿ, ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಡಾ. ನಾಗೇಂದ್ರ ಅವರು ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ನನ್ನ ಗಮನಕ್ಕೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಪೂರ್ಣ ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ. ಕೂಡಲೇ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಯಾರೂ ಕೂಡ ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಂದಿದ್ದಾರೆ.