Tag: Corona Virus In Karnataka

  • 21 ದಿನ ಭಾರತ ಲಾಕ್‍ಡೌನ್- ಏನಿರುತ್ತೆ? ಏನಿರಲ್ಲ?

    21 ದಿನ ಭಾರತ ಲಾಕ್‍ಡೌನ್- ಏನಿರುತ್ತೆ? ಏನಿರಲ್ಲ?

    ನವದೆಹಲಿ: ಕೊರೊನಾ ವಿರುದ್ಧದ ಯುದ್ಧಕ್ಕೆ ಪ್ರಧಾನಿ ನರೇಂದ್ರ ಮೋದಿ ರಣಕಹಳೆ ಮೊಳಗಿಸಿದ್ದು, ಮುಂದಿನ ಮೂರು ವಾರ ಸಂಪೂರ್ಣ ಲಾಕ್‍ಡೌನ್ ಆಗಲಿದೆ. ಇಂದು ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಏಪ್ರಿಲ್ 14ರವರೆಗೆ ನಿಮಗೆ ನೀವು ಲಕ್ಷ್ಮಣ ರೇಖೆ ಹಾಕಿಕೊಂಡು ಮನೆಯಿಂದ ಹೊರ ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದರು. ಜೊತೆಗೆ ಲಾಕ್‍ಡೌನ್ ಆದ್ರೂ ಅಗತ್ಯ ಸೇವೆಗಳು ಲಭ್ಯವಿರಲಿದೆ ಎಂದು ತಿಳಿಸಿದ್ದಾರೆ.

    ಮುಂದಿನ 21 ದಿನ ದೇಶದಲ್ಲಿ ಏನಿರುತ್ತೆ? ಏನಿರಲ್ಲ? ಸರ್ಕಾರ ಸೂಚಿಸಿರುವ ಮಾರ್ಗಸೂಚಿಗಳನ್ನು ಪಾಲಿಸದಿದ್ರೆ ಕಾನೂನಾತ್ಮಕ ಕ್ರಮಗಳನ್ನು ಜರುಗಿಸಲಾಗುತ್ತದೆ.

    ಏನಿರುತ್ತೆ:
    1. ಸರ್ಕಾರಿ ಕಚೇರಿಗಳು ತೆರೆದಿರುತ್ತವೆ. ಡಿಫೆನ್ಸ್, ಸೆಂಟ್ರಲ್ ಆರ್ಮಡ್ ಪೊಲೀಸ್ ಫೋರ್ಸ್, ಅಗತ್ಯ ಸೇವೆಗಳು (ಪೆಟ್ರೋಲಿಯಂ, ಸಿಎನ್‍ಜಿ, ಎಲ್‍ಪಿಜಿ ಮತ್ತು ಪಿಎನ್‍ಜಿ), ವಿಪತ್ತು ನಿರ್ವಹಣೆ, ವಿದ್ಯುತ್ ಪ್ರಸರಣ ಕೇಂದ್ರಗಳು, ಅಂಚೆ ಕಚೇರಿಗಳು ತೆರೆದಿರುತ್ತವೆ.
    2. ರಾಜ್ಯ ಸರ್ಕಾರದ ಅಧೀನಕ್ಕೆ ಒಳಪಡುವ ಕಚೇರಿಗಳು. ಪೊಲೀಸ್, ಹೋಮ್ ಗಾರ್ಡ್ಸ್ , ವಿದ್ಯುತ್ ಪ್ರಸರಣ, ಜಲ ಮಂಡಳಿ ಸೇರಿದಂತೆ ಅಗತ್ಯ ಸೇವೆಗಳು ಲಭ್ಯ .


    3. ಆಸ್ಪತ್ರೆ ಮತ್ತು ವೈದ್ಯಕೀಯ ಸೇವೆ (ಖಾಸಗಿ ಮತ್ತು ಸರ್ಕಾರಿ), ಅಂಬುಲೆನ್ಸ್, ಮೆಡಿಕಲ್, ಲ್ಯಾಬ್, ಕ್ಲಿನಿಕ್, ನರ್ಸಿಂಗ್ ಹೋಮ್
    4. ಪ್ರಾವಿಸನ್ ಸ್ಟೋರ್, ಹಾಲು, ಹಣ್ಣು, ತರಕಾರಿ, ಮಾಂಸ, ಮೀನು, ಪ್ರಾಣಿಗಳ ಆಹಾರ
    5. ಬ್ಯಾಂಕ್, ವಿಮೆ ಕಚೇರಿಗಳು ಮತ್ತು ಎಟಿಎಂ
    6. ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮ
    7. ಇ-ಕಾಮರ್ಸ್ ನಲ್ಲಿ ಆಹಾರ, ಮೆಡಿಸಿನ್ ಮತ್ತು ಔಷಧ ಉತ್ಪನ್ನಗಳು
    8. ಪೆಟ್ರೋಲ್ ಪಂಪ್, ಎಲ್‍ಪಿಜಿ ಸೇರಿದಂತೆ ಇಂಧನ ಲಭ್ಯ
    9. ಶೀತಘಟಕ (ಕೋಲ್ಡ್ ಸ್ಟೋರೇಜ್)
    10. ಖಾಸಗಿ ಭದ್ರತೆ ಸೇವೆ
    11. ಅಗತ್ಯ ವಸ್ತುಗಳ ಉತ್ಪಾದನ ಘಟಕಗಳು
    12. ರಾಜ್ಯ ಸರ್ಕಾರದಿಂದ ಅನುಮತಿ ಪಡೆದ ಸಂಸ್ಥೆಗಳು
    13. ಅಗತ್ಯ ವಸ್ತು ಮತ್ತು ತುರ್ತು ಸೇವೆಗಳಿಗೆ ಮಾತ್ರ ವಾಹನ ಸೌಲಭ್ಯ
    14. ಪ್ರವಾಸಿ ಸ್ಥಳದಲ್ಲಿರುವ ಹೋಟೆಲ್, ಮಾರ್ಗ ಮಧ್ಯೆ ಸಿಲುಕಿದ ಪ್ರವಾಸಿಗರಿಗಾಗಿ ಲಾಡ್ಜ್, ಹೋಂ ಸ್ಟೇ ಸೌಲಭ್ಯ
    15. ಅಂತ್ಯಕ್ರಿಯೆಗಳಲ್ಲಿ 20ಕ್ಕಿಂತ ಜನರು ಸೇರುವಂತಿಲ್ಲ.

    ಏನೇನು ಬಂದ್ ಆಗಲಿವೆ?
    1. ಎಲ್ಲ ವಾಣಿಜ್ಯ ಹಾಗೂ ಖಾಸಗಿ ಸಂಸ್ಥೆಗಳು
    2. ವಿನಾಯಿತಿ ಪಡೆದ ಹಾಗೂ ವರ್ಕ್ ಫ್ರಮ್ ಹೋಮ್ ಬಿಟ್ಟು ಎಲ್ಲ ಸಂಸ್ಥೆಗಳು
    3. ಕೈಗಾರಿಕಾ ಸಂಸ್ಥೆಗಳು
    4. ವಿಮಾನ, ರೈಲು, ರಸ್ತೆ ಸಾರಿಗೆ ಸೇರಿ ಎಲ್ಲ ಸಾರಿಗೆ ಸೌಲಭ್ಯ
    5. ಶಿಕ್ಷಣ ಸಂಸ್ಥೆಗಳು
    6. ಸಾಮೂಹಿಕ ಪೂಜಾ ಕೈಂಕರ್ಯ, ಧಾರ್ಮಿಕ ಕಾರ್ಯಕ್ರಮ, ಸಭೆಗಳಿಗೆ ನಿರ್ಬಂಧ
    7. ಎಲ್ಲ ಸಾಮಾಜಿಕ, ರಾಜಕೀಯ, ಕ್ರೀಡಾ, ಮನರಂಜನೆ, ಶೈಕ್ಷಣಿಕ, ಸಾಂಸ್ಕøತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ.

    ಮಾರ್ಗಸೂಚಿಗಳನ್ನು ಪಾಲಿಸದಿದ್ದಲ್ಲಿ ಏನಾಗುತ್ತೆ?
    * ಅಧಿಕೃತ ವ್ಯಕ್ತಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಒಂದು ವರ್ಷ ಜೈಲು ಅಥವಾ ದಂಡ ಇಲ್ಲವೇ ಎರಡೂ ಶಿಕ್ಷೆ ವಿಧಿಸಲಾಗುವುದು.
    * ಲಾಕ್‍ಡೌನ್ ಉಲ್ಲಂಘಿಸಿ ಸುಳ್ಳು ಮಾಹಿತಿ ನೀಡಿದರೆ 2 ವರ್ಷಳವರೆಗೆ ಜೈಲು ಮತ್ತು ದಂಡ ವಿಧಿಸಬಹುದು.
    * ಕೃತಕ ಬೆಲೆ ಏರಿಕೆಯಲ್ಲಿ ಭಾಗಿಯಾದರೆ, ಪರಿಹಾರ ಸಾಮಗ್ರಿಗಳ ಬೆಲೆ ಹೆಚ್ಚಿಸಿದರೆ 2 ವರ್ಷ ಜೈಲು ಹಾಗೂ ದಂಡ
    * ಸುಳ್ಳು ಸುದ್ದಿ ಹಬ್ಬಿಸಿ ಭಯ ಹುಟ್ಟಿಸಿದರೆ ಒಂದು ವರ್ಷ ಜೈಲು ಶಿಕ್ಷೆ ಅಥವಾ ದಂಡ ವಿಧಿಸಲಾಗುವುದು.

  • ಕೊರೊನಾಗೆ 10ನೇ ಬಲಿ- 69 ವರ್ಷದ ವೃದ್ಧ ಸಾವು

    ಕೊರೊನಾಗೆ 10ನೇ ಬಲಿ- 69 ವರ್ಷದ ವೃದ್ಧ ಸಾವು

    ನವದೆಹಲಿ: ಕೊರೊನಾ ವೈರಸ್ ಮಾಹಾಮಾರಿ ಇಂದು ಭಾರತದಲ್ಲಿ ಮೂರನೇ ಬಲಿ ಪಡೆದುಕೊಂಡಿದೆ. ದೇಶದಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

    ಹಿಮಾಚಲ ಪ್ರದೇಶದ 69 ವರ್ಷದ ವೃದ್ಧ ಸಾವನ್ನಪ್ಪಿದ ವ್ಯಕ್ತಿ. ಮಾರ್ಚ್ 15ರಂದು ಯುಎಸ್ ನಿಂದ ಹಿಂದಿರುಗಿದ್ದ ವೃದ್ಧನನ್ನು ಟಂಡಾ ಆಸ್ಪತ್ರಯಲ್ಲಿ ಚಿಕಿತ್ಸೆ ನೀಡಲಾಗುತ್ತಿತು. ಇಂದು ಮಧ್ಯಾಹ್ನ ಪಶ್ಚಿಮ ಬಂಗಾಳದಲ್ಲಿ ಇಟಲಿ ಪ್ರವಾಸದಿಂದ ಬಂದಿದ್ದ ವ್ಯಕ್ತಿ ಮತ್ತು ಮಹಾರಾಷ್ಟ್ರದಲ್ಲಿ ಓರ್ವ ಸಾವನ್ನಪ್ಪಿದ್ದರು. ನೆರೆಯ ಕೇರಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 98ಕ್ಕೆ ಏರಿಕೆಯಾಗಿದೆ. ಇನ್ನು ಕರ್ನಾಟಕದಲ್ಲಿ ಏಳು ಸೋಂಕಿತರು ಪತ್ತೆಯಾಗಿದ್ದು, ಆತಂಕಕ್ಕೊಳಗಾದ ಜನರು ಬೆಂಗಳೂರು ತೊರೆಯುತ್ತಿದ್ದಾರೆ.

    ಜಗತ್ತಿನಾದ್ಯಂತ ಲಂಗುಲಗಾಮಿಲ್ಲದೇ ರೌದ್ರತಾಂಡವವಾಡ್ತಿರುವ ಕೊರೋನಾ ಹೆಮ್ಮಾರಿಗೆ ಇಲ್ಲಿವರೆಗೆ 15,306 ಮಂದಿ ಬಲಿಯಾಗಿದ್ದಾರೆ. 3.50 ಲಕ್ಷ ಮಂದಿ ಸೋಂಕಿತರಾಗಿದ್ದಾರೆ. ಅಮೆರಿಕಾದಲ್ಲಿ ಕೊರೋನಾಗೆ ನಿನ್ನೆ ಒಂದೇ ದಿನ 100 ಮಂದಿ ಮೃತಪಟ್ಟಿದ್ದು, ಒಟ್ಟಾರೆ 458 ಮಂದಿ ಬಲಿಯಾಗಿದ್ದಾರೆ. ಸೋಂಕಿತರ ಸಂಖ್ಯೆ 34 ಸಾವಿರ ದಾಟಿದೆ.

    ಚೀನಾ ಇಟಲಿ ಬಳಿಕ ಹೆಚ್ಚಿನ ಸಂಖ್ಯೆ ವೈರಸ್ ಬಾಧಿತರು ಇರೋದು ಅಮೆರಿಕಾದಲ್ಲಿ ಎಂದು ವರದಿಯಾಗಿದೆ. ಇಟಲಿಯಲ್ಲಿ ಎರಡು ದಿನಕ್ಕೆ ಹೋಲಿಸಿದ್ರೆ ನಿನ್ನೆ ಮೃತರ ಸಂಖ್ಯೆ ಕಡಿಮೆಯಾಗಿದೆ. ನಿನ್ನೆ 651 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 5500ಕ್ಕೆ ಏರಿಕೆಯಾಗಿದೆ. ಸ್ಪೇನ್‍ನಲ್ಲಿ 2182, ಇರಾನ್‍ನಲ್ಲಿ 1812, ಫ್ರಾನ್ಸ್ 674, ಬ್ರಿಟನ್ 281, ನೆದರ್ ಲೆಂಡ್‍ನಲ್ಲಿ 179, ಜರ್ಮನಿಯಲ್ಲಿ 111 ಮಂದಿ ಸಾವನ್ನಪ್ಪಿದ್ದಾರೆ. ಜರ್ಮನಿ ಚಾನ್ಸಲರ್ ಏಂಜೆಲಾ ಮಾರ್ಕೆಲ್‍ರಲ್ಲಿ ಸೋಂಕು ಲಕ್ಷಣ ಕಂಡು ಬಂದಿದ್ದು, ಕ್ವಾರಂಟೇನ್‍ನಲ್ಲಿ ಇರಿಸಲಾಗಿದೆ. ನ್ಯೂಯಾರ್ಕ್ ನಗರದ ಜೈಲುಗಳಲ್ಲಿ 38 ಮಂದಿಗೆ ಕೊರೋನಾ ಸೋಂಕು ಕಂಡು ಬಂದಿದೆ

  • ಕೊರೊನಾ ಆತಂಕ: ಬೆಂಗ್ಳೂರು ತೊರೆಯುತ್ತಿರುವ ಜನತೆ

    ಕೊರೊನಾ ಆತಂಕ: ಬೆಂಗ್ಳೂರು ತೊರೆಯುತ್ತಿರುವ ಜನತೆ

    ಬೆಂಗಳೂರು: ಕೊರೊನಾ ವೈರಸ್ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಇಂದು ಒಂದೇ ದಿನ ಏಳು ಪ್ರಕರಣಗಳು ಸಹ ಪತ್ತೆಯಾಗಿದ್ದು, ಕೊರೊನಾ ಸೋಂಕಿತರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಜನರು ಬೆಂಗಳೂರು ತೊರೆಯುತ್ತಿದ್ದಾರೆ. ಏಕಕಾಲದಲ್ಲಿ ಜನರು ನಗರದಿಂದ ಹೊರ ಹೋಗುತ್ತಿರುವದರಿಂದ ಸಿಟಿ ಹೊರ ವಲಯದ ಟೋಲ್ ಗೇಟ್ ಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.

    ಇಂದು ಸಾರಿಗೆ ಮತ್ತು ಖಾಸಗಿ ವಾಹನಗಳು ಬಂದ್ ಆದರೂ ಜನರು ತಮ್ಮ ಸ್ವಂತ ವೆಹಿಕಲ್ ಗಳಲ್ಲಿ ಪ್ರಯಾಣ ಬೆಳೆಸುತ್ತಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಜಾಸ್ ಟೋಲ್ ಬಳಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಕಿಲೋಮೀಟರ್ ದೂರ ಟ್ರಾಫಿಕ್ ಜಾಮ್ ಸಂಭವಿಸಿದೆ. ಸರ್ಕಾರ ಸಾರಿಗೆ ವ್ಯವಸ್ಥೆಯನ್ನ ಬಂದ್ ಮಾಡಿದೆ ಹಿನ್ನೆಲೆಯಲ್ಲಿ ತಮ್ಮ ತಮ್ಮ ಕಾರು, ಬೈಕ್ ಗಳಲ್ಲಿ ತಮ್ಮ ಊರುಗಳನ್ನು ತಲುಪುತ್ತಿದ್ದಾರೆ.

    ಇಂದು ಮಧ್ಯರಾತ್ರಿಯಿಂದಲೇ ಬೆಂಗಳೂರು ಲಾಕ್‍ಡೌನ್ ಆಗಿದೆ. ಹಾಗಾಗಿ ಜನರು ಇಂದು ಮಧ್ಯಾಹ್ನದಿಂದಲೇ ಬೆಂಗಳೂರಿಗೆ ಬೈ ಹೇಳುತ್ತಿದ್ದಾರೆ.

  • ಕೊರೊನಾಗೆ ದೇಶದಲ್ಲಿ ಮತ್ತೊಂದು ಬಲಿ-ಸಾವಿನ ಸಂಖ್ಯೆ 9ಕ್ಕೆ ಏರಿಕೆ

    ಕೊರೊನಾಗೆ ದೇಶದಲ್ಲಿ ಮತ್ತೊಂದು ಬಲಿ-ಸಾವಿನ ಸಂಖ್ಯೆ 9ಕ್ಕೆ ಏರಿಕೆ

    ಕೋಲ್ಕತ್ತಾ: ಕೊರೊನಾ ವೈರಸ್ ಕೋಲ್ಕತ್ತಾದಲ್ಲಿ ಮತ್ತೋರ್ವನನ್ನು ಬಲಿ ಪಡೆದುಕೊಂಡಿದೆ. ದೇಶದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.

    57 ವರ್ಷ ಇಟಲಿ ಪ್ರವಾಸಿಗ ಸಾವನ್ನಪ್ಪಿದ ವ್ಯಕ್ತಿ. ಕೋಲ್ಕತ್ತಾ ಡಂಡಂನಲ್ಲಿ ವ್ಯಕ್ತಿ ಕೊರೊನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿರೋದು ದೃಢಪಟ್ಟಿದೆ. ಸಾವನ್ನಪ್ಪಿದ ವ್ಯಕ್ತಿ ಮತ್ತು ಕುಟುಂಬಸ್ಥರು ಇಟಲಿಯಿಂದ ಭಾರತಕ್ಕೆ ಬಂದಿದ್ದರು.

    ಇಂದು ಬೆಳಗ್ಗೆ ಮಹಾರಾಷ್ಟ್ರದ ಮುಂಬೈನಲ್ಲಿಯೂ ಓರ್ವ ಸಾವನ್ನಪ್ಪಿದ್ದಾರೆ. ಇತ್ತ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 27ಕ್ಕೆ ಏರಿಕೆ ಕಂಡಿದೆ. ನಾಳೆಯಿಂದ ಕರ್ನಾಟಕದಲ್ಲಿ ಕರ್ಫ್ಯೂ ಜಾರಿಗೆ ತರಲು ಸರ್ಕಾರ ನಿರ್ಧರಿಸಿದ್ದು, ಅಧಿಕೃತ ಪ್ರಕಟನೆ ಹೊರಬೀಳಬೇಕಿದೆ.

  • ಕೊಡಗಿನಲ್ಲಿ ಮೊದಲ ಕೊರೊನಾ ದೃಢ-ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 15ಕ್ಕೆ ಏರಿಕೆ

    ಕೊಡಗಿನಲ್ಲಿ ಮೊದಲ ಕೊರೊನಾ ದೃಢ-ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 15ಕ್ಕೆ ಏರಿಕೆ

    ಬೆಂಗಳೂರು: ಕೊಡಗಿನಲ್ಲಿ ಮೊದಲ ಕೊರೊನಾ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.

    ಈ ಕುರಿತು ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಶ್ರೀರಾಮುಲು, ಇಂದು ಕೊಡಗಿನಲ್ಲಿ ಮೊದಲ #ಕೋವಿಡ್19 ಸೋಂಕು ದೃಢಪಟ್ಟಿದ್ದು, ಈ ವ್ಯಕ್ತಿಯು ಸೌದಿ ಅರೇಬಿಯಾ ಪ್ರವಾಸದಿಂದ ಹಿಂದಿರುಗಿದ್ದರು. ಇವರನ್ನು ಪ್ರತ್ಯೇಕಿಸಲ್ಪಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಿ ನಿಗಾವಹಿಸಲಾಗಿದೆ. ಇದು ಕರ್ನಾಟಕದ 15ನೇ #ಕೋವಿಡ್19 ಪ್ರಕರಣವಾಗಿದೆ ಎಂದು ತಿಳಿಸಿದ್ದಾರೆ.

    ಬುಧವಾರ ಒಟ್ಟು 37 ಮಂದಿ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಈ ಪೈಕಿ ಬೆಂಗಳೂರಿನಲ್ಲಿ 25, ಉತ್ತರ ಕನ್ನಡ ಮತ್ತು ಕಲಬುರಗಿಯಲ್ಲಿ 3, ದಕ್ಷಿಣ ಕನ್ನಡ ಮತ್ತು ಕೊಡಗಿನಲ್ಲಿ 2, ಬಳ್ಳಾರಿ, ಚಿಕ್ಕಮಗಳೂರಿನಲ್ಲಿ ತಲಾ ಒಬ್ಬೊಬ್ಬರು ದಾಖಲಾಗಿದ್ದಾರೆ. ಒಟ್ಟು ರಾಜ್ಯದಲ್ಲಿ 80 ಮಂದಿ ಆಸ್ಪತ್ರೆಯ ನಿಗಾದಲ್ಲಿದ್ದಾರೆ.

    https://twitter.com/sriramulubjp/status/1240500845092823040

    15 ಕೊರೊನಾ ಪೀಡಿತರ ಪೈಕಿ ಈಗಾಗಲೇ ಮೊದಲ ರೋಗಿಯಾಗಿ ದಾಖಲಾಗಿದ್ದ ಟೆಕ್ಕಿ, ಟೆಕ್ಕಿಯ ಪತ್ನಿ, ಮಗಳು ಗುಣಮುಖರಾಗಿದ್ದಾರೆ. ಕಲಬುರಗಿಯ ವ್ಯಕ್ತಿ ಮೃತಪಟ್ಟಿದ್ದಾರೆ. ಹೀಗಾಗಿ ಒಟ್ಟು ರಾಜ್ಯದಲ್ಲಿ 11 ಮಂದಿ ಕೊರೊನಾ ಪೀಡಿತರಿದ್ದು ಬೆಂಗಳೂರಿನಲ್ಲಿ 8 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರೆ ಕಲಬುರಗಿಯಲ್ಲಿ ಇಬ್ಬರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೊಡಗಿಲ್ಲಿ ಒಬ್ಬರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

    11 ಮಂದಿ ಯಾರೆಲ್ಲ?
    1. ಮೈಂಡ್ ಟ್ರೀ ಕಂಪನಿಯ ಟೆಕ್ಕಿ
    2. ಗೂಗಲ್ ಕಂಪನಿಯ ಟೆಕ್ಕಿ
    3. ಕೊರೊನಾದಿಂದ ಮೃತಪಟ್ಟ ಕಲಬುರಗಿ ವ್ಯಕ್ತಿಯ ಮಗಳು
    4. ಮೈಂಡ್ ಟ್ರೀ ಕಂಪನಿಯ ಟೆಕ್ಕಿ ಜೊತೆ ಪ್ರಯಾಣಿಸಿದ ಸಹೋದ್ಯೋಗಿ
    5. ಯುಕೆ ಪ್ರವಾಸದಿಂದ ಹಿಂದಿರುಗಿದ ವಿದ್ಯಾರ್ಥಿನಿ
    6. ಕೊರೊನಾದಿಂದ ಮೃತಪಟ್ಟ ಕಲಬುರಗಿ ವ್ಯಕ್ತಿಯ ಜೊತೆ ಸಂಪರ್ಕದಲ್ಲಿದ್ದ ವೈದ್ಯ
    7. ದುಬೈನಿಂದ ಮರಳಿದ್ದ 67 ವರ್ಷದ ಮಹಿಳೆ
    8. ಅಮೆರಿಕದಿಂದ ಮರಳಿದ್ದ 56 ವರ್ಷದ ವ್ಯಕ್ತಿ
    9. ಸ್ಪೇನ್ ದೇಶದಿಂದ ಮರಳಿದ್ದ 25 ವರ್ಷದ ಮಹಿಳೆ
    10. ಅಮೆರಿಕದಿಂದ ಬಂದ 35 ವರ್ಷದ ಮಹಿಳೆ
    11. ಸೌದಿ ಅರೇಬಿಯಾ ಪ್ರವಾಸದಿಂದ ಬಂದ ಕೊಡಗು ಮೂಲದ ವ್ಯಕ್ತಿ

  • ಯೋಧನಿಗೆ ತಗುಲಿದ ಕೊರೊನಾ ವೈರಸ್

    ಯೋಧನಿಗೆ ತಗುಲಿದ ಕೊರೊನಾ ವೈರಸ್

    ನವದೆಹಲಿ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧನಿಗೆ ಕೊರೊನಾ ವೈರಸ್ ತಗುಲಿರೋದು ದೃಢಪಟ್ಟಿದೆ. ಲೇಹ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯೋಧನಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದವು.

    ಕೂಡಲೇ ಯೋಧನನ್ನು ಪರೀಕ್ಷೆಗೆ ಒಳಪಡಿಸಿ ಗಂಟಲಿನ ದ್ರವವನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಪ್ರಯೋಗಾಲಯದ ವರದಿ ಪಾಸಿಟಿವ್ ಬಂದಿದೆ. ಸೈನಿಕನ ತಂದೆ ಫೆಬ್ರವರಿ 25 ರಿಂದ ಮಾರ್ಚ್ 1ರವರೆಗೆ ಇರಾನ್ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿ ಹಿಂದಿರುಗಿದ್ದರು. ತಂದೆಯಿಂದಲೇ ಯೋಧನಿಗೆ ಕೊರೊನಾ ತಗುಲಿದರ ಬಗ್ಗೆ ವರದಿಯಾಗಿವೆ.

    ದೇಶದಲ್ಲಿ ಈಗಾಗಲೇ ಕೊರೊನಾದಿಂದಾಗಿ ಮೂವರು ಸಾವನ್ನಪ್ಪಿದ್ದಾರೆ. 137 ಮಂದಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಭಾರತ ಕೊರೊನಾ ಎರಡನೇ ಸ್ಟೇಜ್ ನಲ್ಲಿದೆ ಎಂದು ಐಸಿಎಂಆರ್ ಸ್ಪಷ್ಟಪಡಿಸಿದೆ. ಕೊರೊನಾ ತಡೆಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಟೊಂಕ ಕಟ್ಟಿ ನಿಂತು ಕೆಲಸ ಮಾಡುತ್ತಿವೆ.

     

  • ಶಕ್ತಿಸೌಧದಲ್ಲಿ ಇಲ್ಲ ಕೊರೊನಾ ಮುಂಜಾಗ್ರತಾ ಕ್ರಮ

    ಶಕ್ತಿಸೌಧದಲ್ಲಿ ಇಲ್ಲ ಕೊರೊನಾ ಮುಂಜಾಗ್ರತಾ ಕ್ರಮ

    ಬೆಂಗಳೂರು: ಮಾರಕ ಕೊರೊನಾ ವೈರಸ್ ದಿನೇ ದಿನೇ ಕರ್ನಾಟಕದಲ್ಲಿ ಹರಡುತ್ತಲೇ ಇದೆ. ಈಗಾಗಲೇ 10 ಪಾಸಿಟಿವ್ ಕೇಸ್ ಗಳು ಕರ್ನಾಟಕದಲ್ಲಿ ಪತ್ತೆಯಾಗಿವೆ. ಇತ್ತ ಕೊರೊನಾ ತಡೆಗೆ ಸರ್ಕಾರ ಕೂಡಾ ಅನೇಕ ಕ್ರಮಗಳನ್ನ ತೆಗೆದುಕೊಳ್ಳುವ ಕೆಲಸ ಮಾಡುತ್ತಿದೆ. ಆದ್ರೆ ಈ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳೊದರಲ್ಲಿ ಸರ್ಕಾರ ಮೈಮರೆಯುತ್ತಿದೆ ಅಂತ ಅನ್ನಿಸುತ್ತಿದೆ. ರಾಜ್ಯಾದ್ಯಂತ ಕೊರೊನಾ ಬಗ್ಗೆ ಎಚ್ಚರವಹಿಸಿರೋ ಸರ್ಕಾರ ಶಕ್ತಿಸೌಧ ವಿಧಾನಸೌಧದಲ್ಲಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವುದನ್ನ ಮರೆತು ಹೋಗಿದೆ.

    ಈಗಾಗಲೇ ರಾಜ್ಯಾದ್ಯಂತ ಶಾಲಾ-ಕಾಲೇಜ್, ಬಾರ್, ಪಬ್, ಮಾಲ್ ಎಲ್ಲವನ್ನೂ ಬಂದ್ ಮಾಡಲಾಗಿದೆ. ಮದುವೆ, ಜಾತ್ರೆ ಎಲ್ಲದ್ದಕ್ಕೂ ಕಡಿವಾಣ ಹಾಕಿದೆ. ಜನ ಸಂದಣಿ ಸೇರುವ ಜಾಗದ ಮೇಲೆ ನಿಗಾವಹಿಸಲಾಗಿದೆ. ಆದರೆ ವಿಧಾನಸೌಧದಲ್ಲಿ ಮಾತ್ರ ಇನ್ನು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳೊದರಲ್ಲಿ ಸರ್ಕಾರ ವಿಫಲವಾಗಿದೆ. ವಿಧಾನಸೌಧಕ್ಕೆ ನಿತ್ಯ ಸಾವಿರಾರು ಜನರು ಬರ್ತಾರೆ. ಸಿಬ್ಬಂದಿ ಕೆಲಸಕ್ಕೆ ಹಾಜರಾಗ್ತಾರೆ. ಆದ್ರೆ ಅವರಿಗೆಲ್ಲ ತಪಾಸಣೆ ಮಾಡೋ ಕೆಲಸ ಮಾತ್ರ ನಡೆಯುತ್ತಿಲ್ಲ. ಸದ್ಯ ವಿಧಾನ ಮಂಡಲದ ಅಧಿವೇಶನ ನಡೆಯುತ್ತಿದ್ದು, ಅಧಿವೇಶನ ವೀಕ್ಷಣೆಗೆ ಬರೋ ಸಾರ್ವಜನಿಕರಿಗೆ ಕೊರೊನಾ ತಪಾಸಣೆ ಕೂಡಾ ಮಾಡುತ್ತಿಲ್ಲ. ಇದನ್ನೂ ಓದಿ: 162 ರಾಷ್ಟ್ರ, ಪ್ರಾಂತ್ಯಗಳಿಗೆ ಹರಡಿದ ಮಹಾಮಾರಿ ಕೊರೊನಾ – ಭಾರತದಲ್ಲಿ 114 ಮಂದಿಗೆ ಸೋಂಕು

    ವಿಧಾನಸಭೆ ಸಭಾಂಗಣದಲ್ಲಿ ಅಲ್ಪಸ್ವಲ್ಪ ಕ್ರಮಗಳನ್ನ ತೆಗೆದುಕೊಳ್ಳಲಾಗಿದೆ. ಆದ್ರೆ ವಿಧಾನಸೌಧದ ಹೊರಗೆ ಮಾತ್ರ ಯಾವುದೇ ಕ್ರಮಗಳನ್ನ ಆರೋಗ್ಯ ಇಲಾಖೆ ತೆಗೆದುಕೊಂಡಿಲ್ಲ. ಹೊರಗಡೆಯಿಂದ ಬರುವವರನ್ನ ಥರ್ಮಲ್ ಸ್ಕ್ಯಾನ್ ಮೂಲಕ ತಪಾಸಣೆ ಮಾಡೋದಾಗಿ ಆರೋಗ್ಯ ಇಲಾಖೆ ಹೇಳಿತ್ತು. ಈವರೆಗೂ ವಿಧಾನಸೌಧದ 4 ದಿಕ್ಕಿಗೂ ಥರ್ಮಲ್ ಸ್ಕ್ಯಾನರ್ ಅಳವಡಿಸುವ ಕೆಲಸ ಆಗಿಲ್ಲ. ಶಾಸಕರು ಓಡಾಡುವ ಬಾಗಿಲಲ್ಲೂ ಥರ್ಮಲ್ ಸ್ಕ್ಯಾನರ್ ಅಳವಡಿಕೆ ಮಾಡಿಲ್ಲ. ಹೀಗಾಗಿ ಕೊರೊನಾ ಪತ್ತೆ ಹೇಗೆ ಅನ್ನೊ ಪ್ರಶ್ನೆ ಕಾಡ್ತಿದೆ. ಇದನ್ನೂ ಓದಿ: ಕೊಲ್ಲೂರಮ್ಮನಿಗೆ ಮನೆಯಲ್ಲೇ ಪ್ರಾರ್ಥಿಸಿ- ದೇವಸ್ಥಾನಕ್ಕೆ ಬರಬೇಡಿ

    ಇದಲ್ಲದೆ ಹೊರಗಡೆಯಿಂದ ಬರುವವರಿಗೆ ಸ್ಯಾನಿಟರೈಸರ್ ಕೂಡಾ ವ್ಯವಸ್ಥೆ ಮಾಡಿಲ್ಲ. ಮಾಸ್ಕ್ ಗಳ ಸೌಲಭ್ಯಗಳನ್ನು ಒದಗಿಸಿಲ್ಲ. ಇದನ್ನ ನೋಡಿದ್ರೆ ಸರ್ಕಾರ ಕೊರೊನಾವನ್ನ ಎಷ್ಟು ಗಂಭೀರವಾಗಿ ಪರಿಗಣಿಸಿದೆ ಅಂತ ಗೊತ್ತಾಗುತ್ತೆ. ಇನ್ನು ಸಚಿವರಾದ ಶ್ರೀರಾಮುಲು, ಡಾ.ಸುಧಾಕರ್ ಸರ್ಕಾರ ಎಲ್ಲಾ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದೆ ಯಾರು ಆತಂಕ ಪಡಬೇಡಿ ಅಂತ ಹೇಳ್ತಾರೆ. ಆದ್ರೆ ಶಕ್ತಿಸೌಧದ ಶಾಸಕರಿಗೆ ಅಗತ್ಯ ಕ್ರಮ ತೆಗೆದುಕೊಳ್ಳೊದರಲ್ಲಿ ಸರ್ಕಾರ ಎಡವಿದಂತೆ ಕಾಣಿಸುತ್ತಿದೆ. ಇದನ್ನೂ ಓದಿ: ಕಲಬುರಗಿ ವೈದ್ಯರಿಗೆ ಕೊರೊನಾ- ಸೋಂಕಿತರ ಸಂಖ್ಯೆ 11ಕ್ಕೆ ಏರಿಕೆ

  • ರಾಜ್ಯದಲ್ಲಿ ಮತ್ತೆರಡು ಕೊರೊನಾ ಪ್ರಕರಣ- ಸೋಂಕಿತರ ಸಂಖ್ಯೆ 10ಕ್ಕೆ ಏರಿಕೆ

    ರಾಜ್ಯದಲ್ಲಿ ಮತ್ತೆರಡು ಕೊರೊನಾ ಪ್ರಕರಣ- ಸೋಂಕಿತರ ಸಂಖ್ಯೆ 10ಕ್ಕೆ ಏರಿಕೆ

    ಬೆಂಗಳೂರು: ರಾಜ್ಯದಲ್ಲಿ ಮತ್ತೆರಡು ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇಬ್ಬರು ಸೇರಿದಂತೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಈ ಕುರಿತು ಟ್ವೀಟ್ ಮೂಲಕ ಆರೋಗ್ಯ ಸಚಿವ ಶ್ರೀರಾಮುಲು ಮಾಹಿತಿ ನೀಡಿದ್ದಾರೆ.

    ರಾಜ್ಯದಲ್ಲಿ ಮತ್ತೆರಡು ಕೋವಿಡ್- 19 ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆಯಾಗಿ ಸೋಂಕಿತರ ಸಂಖ್ಯೆ ಹತ್ತಕ್ಕೆರಿದೆ. ಬೆಂಗಳೂರಿನಲ್ಲಿ ಯುಕೆ ಪ್ರವಾಸದಿಂದ ಹಿಂದಿರುಗಿದ ವ್ಯಕ್ತಿಯೊಬ್ಬರಿಗೆ ಹಾಗೂ ಕಲಬುರಗಿಯಲ್ಲಿ (ಈ ಮೊದಲೇ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಸಂಪರ್ಕದಲ್ಲಿದ) 60 ವರ್ಷದ ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟಿದೆ. ಇವರಿಬ್ಬರು ಈಗಾಗಲೇ ಪ್ರತ್ಯೇಕಿಸಲ್ಪಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ, ಶೀಘ್ರ ಗುಣಮುಖರಾಗಲಿದ್ದಾರೆ ಎಂದು ವಿಶ್ವಾಸ ಹೊಂದಿದ್ದೇನೆ ಎಂದು ಶ್ರೀರಾಮುಲು ತಿಳಿಸಿದ್ದಾರೆ.

    ಸೋಮವಾರ ಸುದ್ದಿಗೋಷ್ಠಿ ನಡೆಸಿದ್ದ ವೈದ್ಯಕೀಯ ಸಚಿವ ಕೆ.ಸುಧಾಕರ್, ಅಮೆರಿಕದಿಂದ ಆಗಮಿಸಿದ ಟೆಕ್ಕಿಯ ಸಹೋದ್ಯೋಗಿಯಲ್ಲಿ ಕೊರೊನಾ ಇರುವುದು ಪತ್ತೆಯಾಗಿದೆ. ಶಂಕಿತ 244 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಹೆಚ್ಚಿನ ಮಾಹಿತಿಯನ್ನು ಮಂಗಳವಾರ ನೀಡಲಾಗುವುದು ಎಂದು ಹೇಳಿದ್ದರು.

    10 ಮಂದಿ ಯಾರೆಲ್ಲ?
    1. ಡೆಲ್ ಕಂಪನಿಯ ಟೆಕ್ಕಿ, ಆತನ ಪತ್ನಿ, ಮಗಳು
    2. ಮೈಂಡ್ ಟ್ರೀ ಕಂಪನಿಯ ಟೆಕ್ಕಿ
    3. ಕಲಬುರಗಿ ವ್ಯಕ್ತಿ(ಕೊರೊನಾದಿಂದ ನಿಧನ)
    4. ಗೂಗಲ್ ಕಂಪನಿಯ ಟೆಕ್ಕಿ
    5. ಕೊರೊನಾದಿಂದ ಮೃತಪಟ್ಟ ಕಲಬುರಗಿ ವ್ಯಕ್ತಿಯ ಮಗಳು
    6. ಮೈಂಡ್ ಟ್ರೀ ಕಂಪನಿಯ ಟೆಕ್ಕಿ ಜೊತೆ ಪ್ರಯಾಣಿಸಿದ ಸಹೋದ್ಯೋಗಿ
    7. ಯುಕೆ ಪ್ರವಾಸದಿಂದ ಹಿಂದಿರುಗಿದ ವ್ಯಕ್ತಿ
    8. ಕೊರೊನಾದಿಂದ ಮೃತಪಟ್ಟ ಕಲಬುರಗಿ ವ್ಯಕ್ತಿಯ ಜೊತೆ ಸಂಪರ್ಕದಲ್ಲಿದ್ದ ವ್ಯಕ್ತಿ

  • ಕೊರೊನಾಗೆ ಭಾಗಶಃ ಸ್ತಬ್ಧವಾದ ಕರುನಾಡು- ಯಾವ ಜಿಲ್ಲೆಯಲ್ಲಿ ಹೇಗಿದೆ ವಾತಾವರಣ?

    ಕೊರೊನಾಗೆ ಭಾಗಶಃ ಸ್ತಬ್ಧವಾದ ಕರುನಾಡು- ಯಾವ ಜಿಲ್ಲೆಯಲ್ಲಿ ಹೇಗಿದೆ ವಾತಾವರಣ?

    -ಕಲಬುರಗಿ ಬಸ್ ನಿಲ್ದಾಣ ಖಾಲಿ ಖಾಲಿ
    -ಧಾರವಾಡದಿಂದ 15 ಸಾವಿರ ವಿದ್ಯಾರ್ಥಿಗಳು ಊರಿಗೆ ಪ್ರಯಾಣ

    ಬೆಂಗಳೂರು: ಕೊರೊನಾ ವೈರಸ್ ಮಹಾಮಾರಿ ಇಡೀ ಕರುನಾಡು ಭಾಗರ್ಶ ಸ್ತಬ್ಧವಾಗಿದೆ. ಕಲಬುರಗಿ ಮತ್ತೋರ್ವನಿಗೆ ಕೊರೊನಾ ದೃಢಪಡುತ್ತಿದ್ದಂತೆ ಜನತೆ ಆತಂಕದಲ್ಲಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಸೆಕ್ಷನ್ 133 ಜಾರಿಯಾಗಿದ್ದು, ಜನರಿಗೆ ಮನೆಯಿಂದ ಹೊರ ಬರದಂತೆ ಜಿಲ್ಲಾಧಿಕಾರಿ ಬಿ.ಶರತ್ ಮನವಿ ಮಾಡಿಕೊಂಡಿದ್ದಾರೆ.

    ಕಲಬುರಗಿ: ಜಿಲ್ಲಾಡಳಿತದ ಕಟ್ಟು ನಿಟ್ಟಿನ ಆದೇಶಕ್ಕೆ ತಲೆ ಬಾಗಿದ ಕಲಬುರಗಿ ಜನತೆ ಮನೆಯಿಂದ ಹೊರ ಬರುತ್ತಿಲ್ಲ. ಹೀಗಾಗಿ ನಗರ ಸ್ತಬ್ಧವಾಗಿದೆ. ಅಲ್ಲದೆ ನಗರಕ್ಕೆ ಸದ್ಯ ಯಾರು ಬರಬೇಡಿ ಮತ್ತು ಹೊರಗಡೆ ಹೋಗಬೇಡಿ ಅಂತ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಹೀಗಾಗಿ ನಗರದಲ್ಲಿ ಬಸ್ ಸಂಚಾರ ತೀರಾ ಕಡಿಮೆ ಮಾಡಲಾಗಿದೆ. ಇನ್ನೂ ಬೇರೆ ಕಡೆಯಿಂದ ಜಿಲ್ಲೆಗೆ ಬರುತ್ತಿರುವ ಬಸ್ ಗಳನ್ನು ಹೊರತುಪಡಿಸಿ, ಬೇರೆ ಯಾವ ಬಸ್ ಗಳು ಸಹ ಸಂಚಾರ ಮಾಡುತ್ತಿಲ್ಲ. ಹೀಗಾಗಿ ಕೇಂದ್ರದ ಬಸ್ ನಿಲ್ದಾಣ ಬಿಕೋ ಎನ್ನುತ್ತಿದೆ.

    ಕಲಬುರಗಿ ನಗರದಿಂದ ಬೇರೆ ಪ್ರದೇಶಗಳಿಗೆ ತೆರಳುವ ರೈಲುಗಳ ಸಂಖ್ಯೆಗಳನ್ನು ತಗ್ಗಿಸುವ ಚಿಂತನೆ ಸಹ ಮಾಡಲಾಗುತ್ತಿದೆ. ಇದರ ಮಧ್ಯೆ ಪ್ರಯಾಣಿಕರ ಸಂಖ್ಯೆ ಸಹ ಕುಸಿತ ಕಂಡಿದೆ. ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಬರುವ ಪ್ರಯಾಣಿಕರ ಸ್ಕ್ರೀನ್ ಮಾಡಲಾಗುತ್ತಿದೆ.

    ಧಾರವಾಡ: ಕೊರೊನಾ ಭಯಕ್ಕೆ ಧಾರವಾಡದ ಹಾಸ್ಟೇಲ್ ವಿದ್ಯಾರ್ಥಿಗಳು ಜಾಗ ಖಾಲಿ ಮಾಡಿದ್ದಾರೆ. ಧಾರವಾಡ ನಗರದ ಸಪ್ತಾಪೂರದಲ್ಲಿ ಬಹುತೇಕ ಕೋಚಿಂಗ್ ಕ್ಲಾಸ್‍ಗಳಿವೆ. ಆದರೆ ಆ ಕ್ಲಾಸ್ ಗಳೆಲ್ಲವೂ ಈಗ ಬಂದ್ ಮಾಡಲಾಗಿದ್ದು, ಸದ್ಯ ವಿದ್ಯಾರ್ಥಿಗಳು ತಮ್ಮ ತಮ್ಮ ಊರಿಗೆ ವಾಪಸ್ ಆಗುತ್ತಿದ್ದಾರೆ. ಮಹಾಮಾರಿ ಕೊರೊನಾ ಭಯದಿಂದ ಎಲ್ಲ ಕೋಚಿಂಗ್ ಕ್ಲಾಸಿನ ಮಾಲೀಕರು ವಿದ್ಯಾರ್ಥಿಗಳಿಗೆ ತಮ್ಮ ಊರಿಗೆ ವಾಪಸ್ ಆಗಲು ಹೇಳಿದ್ದಾರೆ. ಎರಡೇ ದಿನಗಳಲ್ಲಿ ಸಪ್ತಾಪೂರ ಬಡಾವಣೆಯಿಂದ 15 ಸಾವಿರ ವಿದ್ಯಾರ್ಥಿಗಳು ಕಾಲ್ಕಿತ್ತಿದ್ದಾರೆ. ಇನ್ನೂ ಕೆಲವು ವಿದ್ಯಾರ್ಥಿಗಳು ಇಂದು ಹಾಗೂ ನಾಳೆ ನಗರದಿಂದ ತೆರಳಲಿದ್ದಾರೆ.

    ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಚೆಕ್ ಪೋಸ್ಟ್ ನಲ್ಲಿ ಹೊರರಾಜ್ಯದಿಂದ ಬರುವ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಆದರಲ್ಲೂ ಕೇರಳ, ತಮಿಳುನಾಡಿನಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ವಹಿಸಿದ್ದು ಕಾರು, ಬಸ್ಸು, ಬೈಕಿನಿಂದ ಬರುವ ವ್ಯಕ್ತಿಗಳ ತಪಾಸಣೆ ನಡೆಸ್ತಿದ್ದಾರೆ. ಇದರ ಜೊತೆಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಜಾಗೃತಿ ಕಾರ್ಯದಲ್ಲಿ ಆರೋಗ್ಯ ಇಲಾಖೆ ಜೊತೆಗೆ ಪೊಲೀಸ್ ಇಲಾಖೆ ಕೂಡ ಕೈ ಜೋಡಿಸಿದೆ.

    ಮೈಸೂರು: ನಗರದ ಪ್ರಮುಖ ವಾಯು ವಿಹಾರ ಕೇಂದ್ರವಾದ ಲಿಂಗಾಂಬುದಿ ಪಾಳ್ಯ ಕೆರೆ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಸರ್ಕಾರದ ನಿರ್ದೇಶನದಂತೆ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿದ್ದು, ಇನ್ನೂ ಒಂದು ವಾರ ಕಾಲ ಕೆರೆ ಏರಿ ಮೇಲೆ ಯಾರು ವಾಕಿಂಗ್ ಮಾಡುವಂತಿಲ್ಲ. ಹೀಗಾಗಿ ವಾಯುವಿಹಾರಿಗಳಿಗೂ ಕೊರೋನಾದ ಏಫೆಕ್ಟ್ ತಟ್ಟಿದೆ. ಕಳೆದ ಕೆಲ ದಿನಗಳಿಂದ ಮೈಸೂರಿನ ಪ್ರವಾಸೋದ್ಯಮಕ್ಕೆ ಭಾರೀ ಹೊಡೆತ ಬಿದ್ದಿದ್ದು, ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ.

    ಬೀದರ್: ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಉದ್ಯಾನವನ ಸೇರಿದಂತೆ ಹೆಚ್ಚು ಜನರು ಸೇರುವ ಪ್ರದೇಶಗಳನ್ನು ಬಂದ್ ಮಾಡಿದೆ. ಆದ್ರೆ ಬೀದರ್ ನಗರದ ಬರಿದ್ ಶಾಹಿ ಉದ್ಯಾನವನದಲ್ಲಿ ಪ್ರತಿದಿನ ಸಾವಿರಾರು ಜನ ಸೇರುತ್ತಿದ್ದರು. ಇಂದು ಸಹ ಸರ್ಕಾರ ಆದೇಶಕ್ಕೆ ಗೌರವ ನೀಡದೇ ಎಂದಿನಂತೆ ವ್ಯಾಯಾಮ ಮತ್ತು ಯೋಗಾಸನಗಳಲ್ಲಿ ತೊಡಗಿಕೊಂಡಿದ್ದಾರೆ. ಉದ್ಯಾನವನ ಮುಂದೆ ನಾಮಫಲಕ ಹಾಕಿ ಬಂದ್ ಮಾಡಿದ್ರೂ, ಯಾವುದನ್ನ ಲೆಕ್ಕಿಸದ ಸಾರ್ವಜನಿಕರು ಒಂದೆಡೆ ಸೇರಿ ವ್ಯಾಯಾಮ ಮಾಡುತ್ತಿದ್ದಾರೆ.

    ಶಿವಮೊಗ್ಗ: ಪ್ರತಿದಿನ ಭಾರೀ ಸಂಖ್ಯೆಯಲ್ಲಿ ಪ್ರಯಾಣಿಕರು ಸಾರಿಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. ಆದರೆ ಕೊರೊನಾ ಭೀತಿಯಿಂದಾಗಿ ಶಿವಮೊಗ್ಗದ ಬಸ್ ನಿಲ್ದಾಣ ಖಾಲಿ ಖಾಲಿಯಾಗಿದೆ. ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿದೆ. ಪ್ರಯಾಣಿಕರಿಲ್ಲದಿದ್ದರೂ ಸಾರಿಗೆ ಇಲಾಖೆ ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ. ಬಸ್ ಗಳು ಎಂದಿನಂತೆ ಖಾಲಿ ಖಾಲಿಯಾಗಿಯೇ ಸಂಚರಿಸುತ್ತಿವೆ.

    ಇದೇ ರೀತಿ ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ವಿಜಯಪುರ, ಬಾಗಲಕೋಟೆ, ಉತ್ತರ ಕನ್ನಡ ಹೀಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಬಂದ್ ವಾತಾವರಣ ನಿರ್ಮಾಣವಾಗಿದೆ. ಕೊರೊನಾ ಭೀತಿಯಿಂದ ಜನತೆ ಆತಂಕಕ್ಕೊಳಗಾಗಿದ್ದಾರೆ.