Tag: Corona Unlock

  • ಘಾಟಿ ದೇವಾಲಯ ಓಪನ್ – ಸುಬ್ರಹ್ಮಣ್ಯೇಶ್ವರ ದರ್ಶನ ಪಡೆಯಲು ಭಕ್ತಾದಿಗಳ ದಂಡು

    ಘಾಟಿ ದೇವಾಲಯ ಓಪನ್ – ಸುಬ್ರಹ್ಮಣ್ಯೇಶ್ವರ ದರ್ಶನ ಪಡೆಯಲು ಭಕ್ತಾದಿಗಳ ದಂಡು

    ಚಿಕ್ಕಬಳ್ಳಾಪುರ: ಕೊರೊನಾ ಲಾಕ್ ಡೌನ್‍ನಿಂದಾಗಿ ದೇವಾಲಯಗಳಿಗೆ ಭಕ್ತರ ಪ್ರವೇಶವನ್ನು ನಿಷೇಧಿಸಿದ್ದ ಸರ್ಕಾರ ಇದೀಗ ಅನ್‍ಲಾಕ್ ಗೊಳಿಸಿ ಸೋಮವಾರದಿಂದ ದೇವಾಲಯಗಳನ್ನು ತೆರೆಯಲು ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಪುರಾತನಾ ನಾಗಾರಾಧನಾ ಕ್ಷೇತ್ರವಾದ ಶ್ರೀ ಘಾಟಿ ಸುಬ್ರಮಣ್ಯ ದೇವಾಲಯದ ಬಾಗಿಲು ತೆರೆಯಲಾಗಿದೆ.

    ಬೆಳ್ಳಂಬೆಳಗ್ಗೆ ವಿಶೇಷ ಪೂಜಾ ಕೈಂಕರ್ಯ ಜರುಗಿಸಿ ಅರ್ಚಕರು ಪುರೋಹಿತರು ದೇವಾಲಯದ ಬಾಗಿಲು ತೆರೆಯಲಾಗಿದ್ದು, ಭಕ್ತರು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ. ದೇವಾಯಯಕ್ಕೆ ಬರುವ ಭಕ್ತರಿಗೆ ಪ್ರಮುಖ ದ್ವಾರದ ಆರಂಭದಲ್ಲೇ ಮಾಸ್ಕ್ ಕಡ್ಡಾಯಗೊಳಿಸಲಾಗಿದ್ದು, ಸ್ಯಾನಿಟೈಸರ್ ಹಾಗೂ ಥರ್ಮಲ್ ಚೆಕ್ ಆಪ್ ಮಾಡಲಾಗುತ್ತಿದೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ದೇವರ ದರ್ಶನ ಪಡೆಯಬಹುದಾಗಿದೆ.

    ದೇವಾಲಯದಲ್ಲಿ ಯಾವುದೇ ರೀತಿ ತೀರ್ಥ ಪ್ರಸಾದ ವಿತರಣೆ ಇಲ್ಲ. ಸೋಮವಾರವಾದ ಇಂದು ಭಕ್ತರ ಸಂಖ್ಯೆ ಕಡಿಮೆ ಇದೆ. ಸಹಜವಾಗಿ ಮಂಗಳವಾರ ಈ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಸದ್ಯ ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದ್ದು, ಭಕ್ತರ ಮನ ತಣಿಸುವಂತಿದೆ. ದೇವಾಲಯಕ್ಕೆ ಬಂದ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗೆ ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ದಾರೆ.

    ಇನ್ಮುಂದೆ ದೇವರ ದರ್ಶನ ಪಡೆಯಲಷ್ಟೇ ಭಕ್ತರಿಗೆ ಅವಕಾಶ ನೀಡಲಾಗಿದ್ದು, ನಾಗಾರಾಧನೆ ಪ್ರತಿಷ್ಠಾಪನೆ, ಅಭಿಷೇಕ, ಅರ್ಚನೆ ಸಹ ಮಾಡುವುದಿಲ್ಲ. ಭಕ್ತರು ಕೋವಿಡ್ ನಿಯಮಗಳನ್ನು ಪಾಲನೆ ಮಾಡಿಕೊಂಡು ದೇವರ ದರ್ಶನ ಪಡೆಯಬೇಕು ಎಂದು ದೇವಾಲಯದ ಆಡಳಿತಾಧಿಕಾರಿ ಎನ್ ಕೃಷ್ಣಪ್ಪ ತಿಳಿಸಿದ್ದಾರೆ. ಇದನ್ನೂ ಓದಿ:ಅನಂತೇಶ್ವರ, ಕೊಲ್ಲೂರಿನಲ್ಲಿ ಭಕ್ತರ ದಂಡು – ಕಠಿಣ ನಿಯಮ ಜಾರಿಗೊಳಿಸಿರುವ ದೇವಸ್ಥಾನಗಳು