Tag: Corona Patients

  • ವಿಮಾನ ನಿಲ್ದಾಣದಲ್ಲಿ ಸೋಂಕಿತರಿಬ್ಬರು ಎಸ್ಕೇಪ್ ಆಗಲು ಯತ್ನ- ಹಿಡಿದು ಆಸ್ಪತ್ರೆಗೆ ಸೇರಿಸಿದ ಪೊಲೀಸರು!

    ವಿಮಾನ ನಿಲ್ದಾಣದಲ್ಲಿ ಸೋಂಕಿತರಿಬ್ಬರು ಎಸ್ಕೇಪ್ ಆಗಲು ಯತ್ನ- ಹಿಡಿದು ಆಸ್ಪತ್ರೆಗೆ ಸೇರಿಸಿದ ಪೊಲೀಸರು!

    ಬೆಂಗಳೂರು: ಇಲ್ಲಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪರಾರಿಯಾಗಲು ಯತ್ನಿಸಿದ ಇಬ್ಬರು ಸೋಂಕಿತರನ್ನು ಹಿಡಿದು ಆಸ್ಪತ್ರೆಗೆ ದಾಖಲಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಬೆಂಗಳೂರಿನಲ್ಲಿ ನಿನ್ನೆ ಒಮಿಕ್ರಾನ್ ಬ್ಲಾಸ್ಟ್ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಅಂತರಾಷ್ಟ್ರೀಯ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣಿಟ್ಟು ಪ್ರತಿಯೊಬ್ಬರಿಗೂ ಕಡ್ಡಾಯ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಕೋವಿಡ್ ಟೆಸ್ಟ್‌ನಲ್ಲಿ ನೆಗಟಿವ್ ಬಂದವ್ರಿಗೆ ಮಾತ್ರ ಹೊರ ಬರಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಕೋವಿಡ್ ಟೆಸ್ಟ್‌ನಲ್ಲಿ ಪಾಸಿಟಿವ್ ಕಂಡುಬಂದರೆ ಕೂಡಲೇ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ 8ಕ್ಕೇರಿದ ಓಮಿಕ್ರಾನ್- ಸೋಂಕಿತರ ಟ್ರಾವೆಲ್ ಹಿಸ್ಟರಿ ಇಂತಿದೆ

    ವಿಮಾನ ನಿಲ್ದಾಣದ ಒಳಭಾಗದಲ್ಲಿ ಖಾಸಗಿ ಲ್ಯಾಬೋರೇಟರಿಯಿಂದ ಕೋವಿಡ್ ಟೆಸ್ಟ್ ನಡೆಯುತ್ತಿದೆ. ಪಾಸಿಟಿವ್ ಬಂದವರನ್ನು ಪ್ರತ್ಯೇಕವಾಗಿ ಹೊರಭಾಗಕ್ಕೆ ಕರೆದೊಯ್ದು ಸ್ಯಾನಿಟೈಸ್ ಮಾಡುತ್ತಾ, ಹೊರ ಕರೆದುಕೊಂಡು ಬರಲಾಗುತ್ತೆ. ಈ ವೇಳೆ ಆರೋಗ್ಯ ಸಿಬ್ಬಂದಿ ಎಕ್ಸಿಟ್ ಆಗುವ ಪ್ರಯಾಣಿಕರನ್ನ ತಡೆದು ಸೋಂಕಿತರನ್ನ ಆಸ್ಪತ್ರೆಗೆ ಶಿಫ್ಟ್ ಮಾಡುತ್ತಿದ್ದಾರೆ.

    ಅಂತೆಯೇ ಈಗಾಗಲೇ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಾಲ್ವರಲ್ಲಿ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿದೆ. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಅಂಬುಲೆನ್ಸ್ ಕೂಡ ಬಂದಿತ್ತು. ಈ ವೇಳೆ ಇಬ್ಬರು ಸೋಂಕಿತರು ಅಲ್ಲಿಂದ ಎಸ್ಕೇಪ್ ಆಗಲು ಯತ್ನಿಸಿದ್ದರು. ಪರಿಣಾಮ ಈ ಇಬ್ಬರನ್ನು ಹಿಡಿಯಲು ಪೊಲೀಸರು ಹರಸಾಹಸ ಪಟ್ಟರು. ಇದನ್ನೂ ಓದಿ: ಭಾರತದ ಸ್ಪರ್ಧಿ ಸೇರಿ 17 ಮಂದಿಗೆ ಕೊರೊನಾ- Miss World 2021 ಫೈನಲ್‌ ಮುಂದೂಡಿಕೆ

    ಇಬ್ಬರು ಸೋಂಕಿತರಿಂದಾಗಿ ಏರ್ ಪೋರ್ಟ್‌ನಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಸೋಂಕಿತರನ್ನು ಹಿಡಿಯಲು ಪೊಲೀಸರು ಸರ್ಕಸ್ ಮಾಡಿದರು. ಕೊನೆಗೆ ಇಬ್ಬರನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾದರು. ನಂತರ ನಾಲ್ವರನ್ನು ಕೂಡ ಬೌರಿಂಗ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು.

  • ಕೋವಿಡ್ ಕೇಂದ್ರದಲ್ಲಿ ಯೋಗ ಟೀಚರ್ ಆದ ರೇಣುಕಾಚಾರ್ಯ

    ಕೋವಿಡ್ ಕೇಂದ್ರದಲ್ಲಿ ಯೋಗ ಟೀಚರ್ ಆದ ರೇಣುಕಾಚಾರ್ಯ

    ದಾವಣಗೆರೆ: ಕೋವಿಡ್ ಕೇರ್ ಸೆಂಟರ್‌ನಲ್ಲಿರುವ ಕೊರೊನಾ ಸೋಂಕಿತರಿಗೆ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹೊನ್ನಾಳಿ ಶಾಸಕ ರೇಣುಕಾಚಾರ್ಯರವರು ಯೋಗ ಹೇಳಿಕೊಟ್ಟಿದ್ದಾರೆ.

    ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಎಚ್ ಕಡದಕಟ್ಟೆ ಗ್ರಾಮದಲ್ಲಿರುವ ಕೋವಿಡ್ ಕೇರ್ ಸೆಂಟರ್ ನಲ್ಲಿರುವ ಸೋಂಕಿತರಿಗೆ ರೇಣುಕಾಚಾರ್ಯ ವಿವಿಧ ಯೋಗಾಸನಗಳನ್ನು ಹೇಳಿಕೊಟ್ಟಿದ್ದಾರೆ.

    ಇಂದು ಬೆಳಗ್ಗೆ ಕೋವಿಡ್ ಕೇರ್ ಸೆಂಟರ್‌ಗೆ ಆಗಮಿಸಿದ ಶಾಸಕರು ಸೋಂಕಿತರೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಸೂರ್ಯ ನಮಸ್ಕಾರ ಸೇರಿದಂತೆ ವಿವಿಧ ಯೋಗಾಸನ ಹೇಳಿಕೊಟ್ಟರು. ಯೋಗಾಸನದ ಮೂಲಕ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿದ ರೇಣುಕಾಚಾರ್ಯರವರು ಯೋಗಾಸನದ ವಿವಿಧ ಬಂಗಿಗಳನ್ನು ಸೋಂಕಿತರ ಮುಂದೆ ಮಾಡಿ ತೋರಿಸಿದರು.

    ಕಳೆದ ಹಲವು ದಿನಗಳಿಂದ ಸೋಂಕಿತರ ಜೊತೆ ಸೇರಿ ರೇಣುಕಾಚಾರ್ಯ ಒಂದಲ್ಲ ಒಂದು ಕೆಲಸದಲ್ಲಿ ನಿರತರಾಗಿದ್ದಾರೆ. ಮೃತ ಸೋಂಕಿತನ ಶವ ಹೊತ್ತು ಅಂಬುಲೆನ್ಸ್ ಚಾಲನೆ ಮಾಡುತ್ತ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗುವ ಮೂಲಕ ಸಮಾಜ ಮುಖಿ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಇದೀಗ ಕೋವಿಡ್ ಕೇರ್ ಸೆಂಟರ್ ನಲ್ಲಿರುವ ಸೋಂಕಿತರಿಗೆ ಶಾಸಕ ಎಂಪಿ ರೇಣುಕಾಚಾರ್ಯ ಯೋಗ ಹೇಳಿಕೊಟ್ಟು ಆತ್ಮಸ್ಥೈರ್ಯ ತುಂಬಿದ್ದಾರೆ. ಇದನ್ನು ಓದಿ: ಕೋವಿಡ್ ಕೇರ್ ಸೆಂಟರ್ ಅವ್ಯವಸ್ಥೆ ವಿರುದ್ಧ ಸೋಂಕಿತರ ಆಕ್ರೋಶ

  • ಸತ್ತವರು, ಸೋಂಕಿತರು, ಸಂಬಂಧಿಕರು ಒಂದೇ ಕಡೆ – ಆಸ್ಪತ್ರೆ ವಿರುದ್ಧ ಸ್ಥಳೀಯರು ಆಕ್ರೋಶ

    ಸತ್ತವರು, ಸೋಂಕಿತರು, ಸಂಬಂಧಿಕರು ಒಂದೇ ಕಡೆ – ಆಸ್ಪತ್ರೆ ವಿರುದ್ಧ ಸ್ಥಳೀಯರು ಆಕ್ರೋಶ

    ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ಮೃತದೇಹ, ಸೋಂಕಿತರು, ಸೋಂಕಿತರ ಸಂಬಂಧಿಕರನ್ನು ಒಂದೇ ಕಡೆ ಇರಿಸಲಾಗಿದೆ ಎಂದು ಅಲ್ಲಿನ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಾಫಿನಾಡಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದರೆ, ಸರ್ಕಾರಿ ಆಸ್ಪತ್ರೆಯಲ್ಲಿನ ಪರಿಸ್ಥಿತಿ ಹೀಗಿದ್ದರೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗದೇ ಇನ್ನೇನು ಕಡಿಮೆಯಾಗುತ್ತಾ ಎಂದು ಜಿಲ್ಲಾಸ್ಪತ್ರೆ ವಿರುದ್ಧ ಜನರು ಅಸಮಾಧಾನ ಹೊರಹಾಕಿದ್ದಾರೆ.

    ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಮೃತದೇಹ, ಸೋಂಕಿತರು, ಸೋಂಕಿತರ ಸಂಬಂಧಿಕರು ಎಲ್ಲರೂ ಒಂದೇ ಜಾಗದಲ್ಲಿ ಅಕ್ಕಪಕ್ಕದ ಬೆಡ್‍ನಲ್ಲಿ ಇರಿಸಲಾಗಿದೆ. ಸೋಂಕಿತರನ್ನ ಸಂಬಂಧಿಗಳೇ ಉಪಚರಿಸುತ್ತಿದ್ದಾರೆ. ಸಾಮಾಜಿಕ ಅಂತರ, ಪಿಪಿಇ ಕಿಟ್ ಧರಿಸದೇ ಸೋಂಕಿತರಿಗೆ ಊಟ-ತಿಂಡಿ ಮಾಡಿಸುವ ಸಂಬಂಧಿಕರು ಸಂಜೆ ಮನೆಗೆ ಬಂದು ಮಾಮೂಲಿಯಂತೆ ಇದ್ದಾರೆ. ಇದರಿಂದ ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ಸಾರ್ವಜನಿಕರು ಆಸ್ಪತ್ರೆ ವ್ಯವಸ್ಥೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದನ್ನು ಓದಿ: ಮುದ್ದು ಕಂದಮ್ಮನ ಮುಖ ನೋಡುವ ಮುನ್ನವೇ ಕೊರೊನಾಗೆ ಬಲಿಯಾದ ಪವರ್ ಮ್ಯಾನ್

    ಜಿಲ್ಲಾಸ್ಪತ್ರೆಯ ಕೋವಿಡ್ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳು, ರೋಗಿಗಳ ಜೊತೆ ಸಂಬಂಧಿಕರು, ಮೃತದೇಹಗಳು ಅಲ್ಲೆ ಇವೆ. ಸೋಂಕಿತರ ಊಟ-ತಿಂಡಿಯೂ ಅಲ್ಲೆ ನಡೆಯುತ್ತಿದೆ. ಹೀಗೆ ಒಂದೇ ಜಾಗದಲ್ಲಿ ಎಲ್ಲರೂ ಹೀಗಿದ್ದರೆ ಕೊರೊನಾ ಹೆಚ್ಚಾಗದೆ ಕಡಿಮೆ ಹೇಗಾಗುತ್ತೆ ಎನ್ನುವ ಪ್ರಶ್ನೆ ಮೂಡಿದೆ ಎಂದು ಆಸ್ಪತ್ರೆಗೆ ಭೇಟಿ ನೀಡುತ್ತಿರುವ ಕೊರೊನಾ ಸೋಂಕಿತರ ಸಂಬಂಧಿಕರು ಕಿಡಿಕಾರಿದ್ದಾರೆ.

    ಈಗಾಗಲೇ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿಯಂತ್ರಣಕ್ಕೆ ಬರುತ್ತಿಲ್ಲ. ಜಿಲ್ಲೆಯ ಪಾಸಿಟಿವಿಟಿ ರೇಟ್ ಕೂಡ 21ರಷ್ಟಿದೆ. ಹಳ್ಳಿಗಳಲ್ಲಿ ಕೊರೊನಾ ಅಬ್ಬರ ಜೋರಿದೆ. ಹಳ್ಳಿಗರು ಪರೀಕ್ಷೆಗೆ ಬರುತ್ತಿಲ್ಲ. ಮನೆಮದ್ದಿಗೆ ಆದ್ಯತೆ ನೀಡಿ ಸೋಂಕು ಹೆಚ್ಚಿಸುತ್ತಿದ್ದಾರೆ. ಇನ್ನೂ ಆಸ್ಪತ್ರೆಯಲ್ಲಿ ಈ ರೀತಿ ಪರಿಸ್ಥಿತಿ ಕಂಡ ಜಿಲ್ಲೆಯ ಜನ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

  • ಅಮೇಥಿಗೆ 10,000 ಮೆಡಿಕಲ್ ಕಿಟ್ ಕಳುಹಿಸಿಕೊಟ್ಟ ರಾಹುಲ್ ಗಾಂಧಿ

    ಅಮೇಥಿಗೆ 10,000 ಮೆಡಿಕಲ್ ಕಿಟ್ ಕಳುಹಿಸಿಕೊಟ್ಟ ರಾಹುಲ್ ಗಾಂಧಿ

    ಲಕ್ನೋ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ತಮ್ಮ ಹಿಂದಿನ ಲೋಕಸಭಾ ಕ್ಷೇತ್ರವಾದ ಅಮೆಥಿಯಲ್ಲಿ ಹೋಂ ಐಸೋಲೇಷನ್‍ನಲ್ಲಿರುವ ಕೋವಿಡ್-19 ಸೋಂಕಿತರಿಗೆ ಅಗತ್ಯವಿರುವ ಮೆಡಿಕಲ್ ಕಿಟ್‍ನನ್ನು ಕಳುಹಿಸಿಕೊಟ್ಟಿದ್ದಾರೆ ಎಂದು ಪಕ್ಷದ ಮುಖಂಡರೊಬ್ಬರು ಶನಿವಾರ ತಿಳಿಸಿದ್ದಾರೆ.

    ಪಕ್ಷದ ಸೇವಾ ಸತ್ಯಾಗ್ರಹ ಕಾರ್ಯಕ್ರಮದಡಿ ಸುಮಾರು 10,000 ಮೆಡಿಕಲ್ ಕಿಟ್‍ಗಳು ಬಂದಿದ್ದು, ಅವುಗಳನ್ನು ಅಗತ್ಯವಿರುವ ಜನರಿಗೆ ನೀಡಲಾಗುತ್ತದೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಮುಖ್ಯಸ್ಥ ಪ್ರದೀಪ್ ಸಿಂಘಾಲ್ ತಿಳಿಸಿದ್ದಾರೆ.

    ಅಮೆಥಿಯ ಮಾಜಿ ಲೋಕಸಭಾ ಸಂಸದರಾಗಿರುವ ರಾಹುಲ್ ಗಾಂಧಿಯವರು ಈ ಮುನ್ನ 20 ಆಮ್ಲಜನಕ ಸಾಂದ್ರಕ ಮತ್ತು ಆಕ್ಸಿಜನ್ ಸಿಲಿಂಡರ್‌ಗಳನ್ನು ಕಳುಹಿಸಿಕೊಟ್ಟಿದ್ದರು. ಸದ್ಯ ರಾಹುಲ್ ಗಾಂಧಿಯವರು ಕೇರಳದ ವಯನಾಡುವಿನ ಲೋಕಸಭಾ ಸಂಸದರಾಗಿದ್ದಾರೆ. ಇದನ್ನು ಓದಿ: ಪತಿಯ ಸಮ್ಮುಖದಲ್ಲಿಯೇ ಪ್ರೇಮಿಯ ಜೊತೆ ಪತ್ನಿಯ ಮದುವೆ

  • ಮಹಾರಾಷ್ಟ್ರದಲ್ಲಿ ಮತ್ತೊಂದು ಅಗ್ನಿ ದುರಂತ – ಐಸಿಯುನಲ್ಲಿದ್ದ 12 ಕೊರೊನಾ ರೋಗಿಗಳ ಸಾವು

    ಮಹಾರಾಷ್ಟ್ರದಲ್ಲಿ ಮತ್ತೊಂದು ಅಗ್ನಿ ದುರಂತ – ಐಸಿಯುನಲ್ಲಿದ್ದ 12 ಕೊರೊನಾ ರೋಗಿಗಳ ಸಾವು

    ಮುಂಬೈ: ನಾಸಿಕ್ ಆಸ್ಪತ್ರೆಯ ದುರಂತ ಮಾಸುವ ಮುನ್ನವೇ ಮುಂಬೈನ ವಿಜಯ್ ವಲ್ಲಭ್ ಆಸ್ಪತ್ರೆಯ ಅಗ್ನಿ ಅವಘಡದಲ್ಲಿ 12 ರೋಗಿಗಳು ಸಾವನ್ನಪ್ಪಿದ್ದಾರೆ.

    ಮಹಾರಾಷ್ಟ್ರದ ವಿರಾರ್ ನಲಿಯ ವಿಜಯ್ ವಲ್ಲಭ್ ಆಸ್ಪತ್ರೆಯ ಐಸಿಯು ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಬೆಡ್ ಮೇಲಿದ್ದ ರೋಗಿಗಳು ಹೊರ ಬರಲಾರದೇ ವಾರ್ಡ್ ನಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಐಸಿಯುನಲ್ಲಿ ಒಟ್ಟು 17 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.

    ಎಸಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಳಗಿನ ಜಾವ ಮೂರು ಗಂಟೆಗೆ ಐಸಿಯುನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಆಸ್ಪತ್ರೆಯ ಸಿಬ್ಬಂದಿ ಹೇಳಿದ್ದಾರೆ. ಮೃತ 12 ಜನರೆಲ್ಲರೂ ಕೊರೊನಾ ಸೋಂಕಿತರು ಆಗಿದ್ದಾರೆ. ಇನ್ನುಳಿದ ರೋಗಿಗಳ ಹತ್ತಿರ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯಚರಣೆಯಲ್ಲಿ ತೊಡಗಿಕೊಂಡಿದ್ದಾರೆ.

    ಸಾಂದರ್ಭಿಕ ಚಿತ್ರ

    ಏಪ್ರಿಲ್ 21ರಂದು ನಾಸಿಕ್ ನಗರದ ಜಾಕೀರ್ ಹುಸೇನ್ ಆಸ್ಪತ್ರೆ ಮುಂದೆ ಟ್ಯಾಂಕರ್ ನಿಂದ ಆಕ್ಸಿಜನ್ ಸೋರಿಕೆಯಾದ ಪರಿಣಾಮ, ರೋಗಿಗಳಿಗೆ ಪ್ರಾಣವಾಯು ಸರಬರಾಜು ನಿಂತುಹೋಗಿ ಮೃತ್ಯು ರಣಕೇಕೆ ಹಾಕಿತ್ತು. 22 ಮಂದಿ ರೋಗಿಗಳು ಆಕ್ಸಿಜನ್ ಸಿಗದೇ ಉಸಿರು ಚೆಲ್ಲಿದ್ದರು. ಆಸ್ಪತ್ರೆಯಲ್ಲಿ 700 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. 170 ಮಂದಿಗೆ ವೆಂಟಿಲೇಟರ್ ಬೆಡ್, ಆಕ್ಸಿಜನ್ ಪೂರೈಕೆ ಇದ್ದ ಬೆಡ್‍ಗಳಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು.

    ಸಾಂದರ್ಭಿಕ ಚಿತ್ರ

    ಆದರೆ ಇದ್ದಕ್ಕಿದ್ದಂತೆ ಟ್ಯಾಂಕರ್‍ನಿಂದ ಆಕ್ಸಿಜನ್ ಲೀಕ್ ಆಗಿ, ಸುಮಾರು ಅರ್ಧಗಂಟೆ ಪ್ರಾಣವಾಯು ಪೂರೈಕೆ ಸ್ಥಗಿತಗೊಂಡಿತ್ತು. ಈ ವೇಳೆ ವೆಂಟಿಲೇಟರ್‍ನಲ್ಲಿದ್ದ 22 ಮಂದಿ ಪ್ರಾಣ ಕಳೆದುಕೊಂಡಿದ್ದರು. ಉಳಿದ ರೋಗಿಗಳನ್ನು ತುರ್ತಾಗಿ ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿರತ್ತು.

  • ಮೆಗ್ಗಾನ್ ಆಸ್ಪತ್ರೆಯ ಕೊರೊನಾ ವಾರ್ಡ್‌ನಲ್ಲಿ ಕಾಣಿಸಿಕೊಂಡ ಹೊಗೆ

    ಮೆಗ್ಗಾನ್ ಆಸ್ಪತ್ರೆಯ ಕೊರೊನಾ ವಾರ್ಡ್‌ನಲ್ಲಿ ಕಾಣಿಸಿಕೊಂಡ ಹೊಗೆ

    – ರೋಗಿಗಳು ಇಲ್ಲದ್ದರಿಂದ ತಪ್ಪಿತು ಅನಾಹುತ

    ಶಿವಮೊಗ್ಗ: ನಗರದ ಮೆಗ್ಗಾನ್ ಭೋಧನಾ ಆಸ್ಪತ್ರೆಯ ಕೋವಿಡ್-19 ವಾರ್ಡ್ ನಲ್ಲಿ ಹೊಗೆ ಕಾಣಿಸಿಕೊಂಡ ಪರಿಣಾಮ ಕೆಲ ಕಾಲ ಆಸ್ಪತ್ರೆ ಆವರಣದಲ್ಲಿ ಆತಂಕ ಉಂಟಾಗಿತ್ತು.

    ಕೋವಿಡ್ ವಾರ್ಡ್ ಗೆ ಆಕ್ಸಿಜನ್ ಪೂರೈಕೆ ಮಾಡುವ ಹೆಚ್‍ಎಫ್‍ಎನ್‍ಸಿ ಯಂತ್ರ 24 ಗಂಟೆಗಳ ಕಾಲ ಸತತವಾಗಿ ಕಾರ್ಯ ನಿರ್ವಹಿಸುತ್ತದೆ. ಹೀಗಾಗಿ ಯಂತ್ರದಲ್ಲಿ ಹೆಚ್ಚು ಶಾಖ ಉಂಟಾದ ಪರಿಣಾಮ ಹೊಗೆ ಕಾಣಿಸಿಕೊಂಡಿದೆ ಎಂದು ಅಂದಾಜಿಸಲಾಗಿದೆ. ಆದರೆ ಈ ವೇಳೆ ವಾರ್ಡ್ ನಲ್ಲಿ ಯಾವುದೇ ರೋಗಿಗಳು ಇಲ್ಲದಿದ್ದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ.

    ಆತಂಕಪಡುವ ಅಗತ್ಯವಿಲ್ಲ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಇನ್ನು ಆಸ್ಪತ್ರೆಯಲ್ಲಿ ಹೊಗೆ ಕಾಣಿಸಿಕೊಂಡ ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ವಾರ್ಡ್ ನಲ್ಲಿ ಆವರಿಸಿಕೊಂಡಿದ್ದ ಹೊಗೆಯನ್ನು ಮುಕ್ತಗೊಳಿಸಿದರು. ಇದೀಗ ಪರಿಣಿತರ ತಂಡ ಈ ಕುರಿತು ಪರಿಶೀಲನೆ ನಡೆಸುತ್ತಿದೆ.