Tag: Corona Infected

  • ಇದೇ ಮೊದಲ ಬಾರಿಗೆ ಕೋವಿಡ್ ವಾರ್ಡಿನಲ್ಲಿ ಗ್ರಂಥಾಲಯದ ಸೌಲಭ್ಯ

    ಇದೇ ಮೊದಲ ಬಾರಿಗೆ ಕೋವಿಡ್ ವಾರ್ಡಿನಲ್ಲಿ ಗ್ರಂಥಾಲಯದ ಸೌಲಭ್ಯ

    – ಸಾಗರದಲ್ಲಿ ವಿಶಿಷ್ಟ ಪ್ರಯೋಗ

    ಶಿವಮೊಗ್ಗ: ಕೊರೊನಾ ಸೋಂಕಿತರು ಮಾನಸಿಕ ಖಿನ್ನತೆ ಹಾಗೂ ಒಂಟಿತನದಿಂದ ಹೊರ ಬರುವ ಸಲುವಾಗಿ ಶಿವಮೊಗ್ಗ ಜಿಲ್ಲೆ ಸಾಗರದ ಕೋವಿಡ್ ವಾರ್ಡಿನಲ್ಲಿ ಆರೋಗ್ಯ ಸಿಬ್ಬಂದಿ ಸೋಂಕಿತರಿಗಾಗಿ ಗ್ರಂಥಾಲಯ ತೆರೆದಿದ್ದಾರೆ.

    ಕೊರೊನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಹಲವು ಮಂದಿ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಕೊರೊನಾ ತುತ್ತಾಗಿ ಚಿಕಿತ್ಸೆ ಪಡೆಯಬೇಕಾದರೆ ತಮ್ಮವರಿಂದ ದೂರವಿದ್ದು ಚಿಕಿತ್ಸೆ ಪಡೆಯುವ ಅನಿವಾರ್ಯತೆ ಇದೆ. ಹೀಗಾಗಿ ಸೋಂಕಿತರಿಗೆ ಒಂಟಿತನ ಕಾಡುತ್ತಿದೆ.

    ಈ ಮಾನಸಿಕ ಖಿನ್ನತೆ ಹಾಗೂ ಒಂಟಿತನದಿಂದ ಸೋಂಕಿತರು ಹೊರ ಬರುವ ಸಲುವಾಗಿ ಗ್ರಂಥಾಲಯ ತೆರೆಯಲಾಗಿದೆ. ಈ ಗ್ರಂಥಾಲಯದಲ್ಲಿ ದಿನಪತ್ರಿಕೆಗಳು, ಮಾಸಿಕಗಳು ಜೊತೆಗೆ ದೊಡ್ಡ ದೊಡ್ಡ ಲೇಖಕರ ಜನಪ್ರಿಯ ಕಾದಂಬರಿಗಳನ್ನು ಸಹ ಇಡಲಾಗಿದೆ.

    ಸದ್ಯ 500 ಪುಸ್ತಕಗಳನ್ನು ಕೋವಿಡ್ ವಾರ್ಡ್ ನಲ್ಲಿ ಇಟ್ಟಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಪುಸ್ತಕಗಳನ್ನು ಖರೀದಿಸಲಾಗುವುದು ಎಂದಿದ್ದಾರೆ. ಜೊತೆಗೆ ಸಾಹಿತಿಗಳು ಹಾಗೂ ಲೇಖಕರು ಯಾರಾದರೂ ಉಚಿತವಾಗಿ ತಾವು ಬರೆದಿರುವ ಪುಸ್ತಕವನ್ನು ನೀಡುವುದಾದರೆ ನೀಡಬಹುದು ಎಂಬ ಮನವಿಯನ್ನು ಸಹ ಮಾಡಿದ್ದಾರೆ.

    ಅಲ್ಲದೇ ರಾಜ್ಯದಲ್ಲಿಯೇ ಇದೇ ಪ್ರಥಮವಾದ ಕೋವಿಡ್ ವಾರ್ಡ್ ನಲ್ಲಿ ತೆರೆದಿರುವ ಗ್ರಂಥಾಲಯ ಇದಾಗಿದ್ದು, ಜಿಲ್ಲಾ ಕೇಂದ್ರದ ಮೆಗ್ಗಾನ್ ಆಸ್ಪತ್ರೆಯ ಕೋವಿಡ್ ವಾರ್ಡ್ ನಲ್ಲಿ ಸಹ ಗ್ರಂಥಾಲಯ ತೆರೆಯಲು ಆರೋಗ್ಯ ಸಿಬ್ಬಂದಿ ಚಿಂತನೆ ನಡೆಸಿದ್ದಾರೆ.

  • ವೈದ್ಯರ ನಿರ್ಲಕ್ಷ್ಯಕ್ಕೆ ಸೋಂಕಿತ ಸಾವು – ಡಿಸಿ ಕಚೇರಿ ಮುಂದೆ ಕುಟುಂಬಸ್ಥರ ಆಕ್ರೋಶ

    ವೈದ್ಯರ ನಿರ್ಲಕ್ಷ್ಯಕ್ಕೆ ಸೋಂಕಿತ ಸಾವು – ಡಿಸಿ ಕಚೇರಿ ಮುಂದೆ ಕುಟುಂಬಸ್ಥರ ಆಕ್ರೋಶ

    ಹಾಸನ: ಚೆನ್ನಾಗಿದ್ದ ರೋಗಿಗೆ ಕೊರೊನಾ ಎಂದು ಹೇಳಿ ವೈದ್ಯರು ತುರ್ತು ಘಟಕದಲ್ಲಿಟ್ಟು ಒಂದು ಜೀವ ಬಲಿ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಹಾಸನದಲ್ಲಿ ನಡೆದಿದೆ.

    ಚನ್ನರಾಯಪಟ್ಟಣ ತಾಲೂಕಿನ ಎ. ಚೋಳನಹಳ್ಳಿಯಲ್ಲಿ ನಿವಾಸಿಯಾಗಿರುವ ಮಹೇಶ್ (50) ಕಳೆದ 8 ದಿನಗಳ ಹಿಂದೆ, ಹಾಸನ ಜಿಲ್ಲಾಸ್ಪತ್ರೆಗೆ ಕೊರೊನಾ ಚಿಕಿತ್ಸೆಗಾಗಿ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಹೇಶ್ ಮೃತಪಟ್ಟಿದ್ದಾರೆ. ಮಹೇಶ್ ಚೆನ್ನಾಗಿಯೇ ಇದ್ದರು. ಕೊನೆಯಲ್ಲಿ ಕೊರೊನಾ ಇದೆ ಎಂದು ಹೇಳಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

    ಅವರ ಜೊತೆ ನಾವುಗಳು ಆರು ಜನರು ಸಂಪರ್ಕದಲ್ಲಿದ್ದೇವೆ. ನಮಗೆ ಯಾವ ಪಾಸಿಟಿವ್ ಇಲ್ಲದಿದ್ದರೂ ಅವರಿಗೊಬ್ಬರಿಗೆ ಮಾತ್ರ ಪಾಸಿಟಿವ್ ಬಂದಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಇಲ್ಲಿ ಆಗದಿದ್ದರೇ ವಾಪಸ್ ಕಳುಹಿಸಿ ನಾವು ಬೆಂಗಳೂರಿನಲ್ಲಿ ಚಿಕಿತ್ಸೆ ಕೊಡಿರುವುದಾಗಿ ಮನವಿ ಮಾಡಲಾಯಿತು. ಆದರೂ ಬಲವಂತವಾಗಿ ಐಸಿಯುಗೆ ಹಾಕಿ ಈಗ ಒಂದು ಪ್ರಾಣದ ಜೊತೆ ಆಟವಾಡಿದ್ದಾರೆ ಎಂದು ಕುಟುಂಬಸ್ಥರು ದೂರಿದ್ದಾರೆ.

    ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್ ಮತ್ತು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಸರ್ಜನ್ ಕೃಷ್ಣಮೂರ್ತಿ ಸೂಕ್ತ ತನಿಖೆ ಮಾಡಿಸಿ ನ್ಯಾಯಕೊಡಿಸುವುದಾಗಿ ಭರವಸೆ ನೀಡಿದ ನಂತರ ಕುಟುಂಬಸ್ಥರು ಪ್ರತಿಭಟನೆ ಹಿಂಪಡೆದಿದ್ದಾರೆ.

  • ಅಂಬುಲೆನ್ಸ್ ಪಲ್ಟಿ- ಕೊರೊನಾ ಸೋಂಕಿತ, ಬೈಕ್ ಸವಾರ ಸಾವು

    ಅಂಬುಲೆನ್ಸ್ ಪಲ್ಟಿ- ಕೊರೊನಾ ಸೋಂಕಿತ, ಬೈಕ್ ಸವಾರ ಸಾವು

    – ಬೈಕ್‍ಗೆ ಡಿಕ್ಕಿ ಸಂಭವಿಸಿ ಅಪಘಾತ

    ಚಿಕ್ಕೋಡಿ/ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿ ಬೈಕ್‍ಗೆ ಡಿಕ್ಕಿ ಹೊಡೆದು ಅಂಬುಲೆನ್ಸ್ ಪಲ್ಟಿಯಾಗಿದ್ದು, ಬೈಕ್ ಹಿಂಬದಿ ಸವಾರ ಹಾಗೂ ಅಂಬುಲೆನ್ಸ್‍ನಲ್ಲಿದ್ದ ಕೊರೊನಾ ಸೋಂಕಿತ ವ್ಯಕ್ತಿ ಸಾವನ್ನಪ್ಪಿದ್ದಾರೆ.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹೊರವಲಯದ ಬೆಲ್ಲದ ಬಾಗೇವಾಡಿ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಅಥಣಿ ಖಾಸಗಿ ಆಸ್ಪತ್ರೆಯಿಂದ ಬೆಳಗಾವಿಗೆ ಹೊರಟಿದ್ದ ಅಂಬುಲೆನ್ಸ್ ಪಲ್ಟಿಯಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಬೈಕ್‍ಗೆ ಡಿಕ್ಕಿ ಹೊಡೆದು ಅಂಬುಲೆನ್ಸ್ ಪಲ್ಟಿಯಾಗಿದ್ದು, ಅಂಬುಲೆನ್ಸ್ ನಲ್ಲಿದ್ದ ಕೊರೊನಾ ಸೋಂಕಿತ ವ್ಯಕ್ತಿ ಹಾಗೂ ಬೈಕ್ ಹಿಂಬದಿ ಸವಾರ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರ ಮೂಲದ 51 ವರ್ಷದ ಕೊರೊನಾ ಸೋಂಕಿತ ಹಾಗೂ ರಬಕವಿ ಮೂಲದ ಬೈಕ್ ಹಿಂಬದಿ ಸವಾರ ಸಾವನ್ನಪ್ಪಿದ್ದಾರೆ.

    ಅಪಘಾತ ಸಂಭವಿಸಿದ ತಕ್ಷಣ ಚಿಕಿತ್ಸೆಗಾಗಿ ಹುಕ್ಕೇರಿ ತಾಲೂಕು ಆಸ್ಪತ್ರೆಗೆ ಕರೆತರಲಾಗಿದ್ದು, ಆಸ್ಪತ್ರೆಯಲ್ಲಿ ಇಬ್ಬರೂ ಸಾವನ್ನಪ್ಪಿದ್ದಾರೆ. ಮೃತ ಸೋಂಕಿತ ಮಹಾರಾಷ್ಟ್ರದ ಜತ್ತ ತಾಲೂಕಿನ ಸಿಂಧೂರ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ. ಅಥಣಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೋಂಕಿತ ದಾಖಲಾಗಿದ್ದ. ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಗೆ ಕರೆದೊಯ್ಯುತ್ತಿದ್ದ ವೇಳೆ ಅಂಬುಲೆನ್ಸ್ ಪಲ್ಟಿಯಾಗಿದೆ. ಉಳಿದ ಇಬ್ಬರು ಗಾಯಾಳುಗಳಿಗೆ ಹುಕ್ಕೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನಾನು ಬರಲ್ಲ ಅಂದ್ರೆ ಬರಲ್ಲ, ಏನು ಮಾಡ್ತೀರಾ ಮಾಡ್ಕೊಳ್ಳಿ: ಸೋಂಕಿತ ರಂಪಾಟ

    ನಾನು ಬರಲ್ಲ ಅಂದ್ರೆ ಬರಲ್ಲ, ಏನು ಮಾಡ್ತೀರಾ ಮಾಡ್ಕೊಳ್ಳಿ: ಸೋಂಕಿತ ರಂಪಾಟ

    ಬೆಂಗಳೂರು: ಕೊರೊನಾ ಸೋಂಕು ತಗುಲಿದ್ದರೂ ನಾನು ಆಸ್ಪತ್ರೆಗೆ ಬರಲ್ಲ ಎಂದು ಸೋಂಕಿತನೊಬ್ಬ ರಂಪಾಟ ಮಾಡಿರುವ ಘಟನೆ ಬೆಂಗಳೂರಿನ ಹೊರವಲಯದಲ್ಲಿ ನಡೆದಿದೆ.

    ಕೊರೊನಾ ಸೋಂಕಿತ ಕೆ.ಎಸ್.ಆರ್.ಟಿ.ಸಿ ಡ್ರೈವರ್ ಆಗಿದ್ದು, ಅಗಸ್ಟ್ 21ರಂದು ಬಂದ ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಇಂದು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಬರಲು ಬಿನ್ನಿಪೇಟೆಯಲ್ಲಿರುವ ಆತನ ಮನೆಗೆ ಅಧಿಕಾರಿಗಳು ಹೋಗಿದ್ದಾರೆ. ಈ ವೇಳೆ ಬೆಂಗಳೂರಿನ ಮಾಗಡಿ ರಸ್ತೆಯ ಕೆಪಿ ಅಗ್ರಹಾರದ ಬಿಬಿಎಂಪಿ ಮೆಡಿಕಲ್ ಆಫೀಸರ್ ಜೊತೆ ಸೋಂಕಿತ ಜಗಳವಾಡಿ ಕಿರಿಕ್ ಮಾಡಿದ್ದಾನೆ. ಇದನ್ನು ಓದಿ: ದೇವರು ಬಂದಿದೆ, ಪೊಲೀಸರು ಕಾಲಿಗೆ ಬೀಳ್ಬೇಕು – ಸೋಂಕಿತೆಯ ಹೈಡ್ರಾಮ

    ಸದ್ಯ ಕರ್ತವ್ಯದಲ್ಲಿರುವ ಚಾಲಕ, ಹಲವರ ಸಂಪರ್ಕಕ್ಕೆ ಬಂದಿದ್ದಾನೆ. ಹೀಗಾಗಿ ಕೂಡಲೇ ಆಸ್ಪತ್ರೆಗೆ ಬನ್ನಿ ಎಂದು ಆರೋಗ್ಯಾಧಿಕಾರಿಗಳು ಮನೆ ಬಳಿ ಹೋಗಿದ್ದಾರೆ. ಈ ವೇಳೆ ಆತ ನನಗೆ ಏನು ಆಗಿಲ್ಲ. ನಾನು ಬರುವುದಿಲ್ಲ. ಇನ್ನೊಮ್ಮೆ ಟೆಸ್ಟ್ ಮಾಡಿ ಎಂದು ಕಿರಿಕ್ ಮಾಡಿದ್ದಾನೆ. ಜೊತೆಗೆ ನಾನು ಬರಲ್ಲ ಅಂದರೆ ಬರಲ್ಲ. ಏನು ಮಾಡ್ತೀರಾ ಮಾಡಿಕೊಳ್ಳಿ ಎಂದು ಅವಾಜ್ ಹಾಕಿದ್ದಾನೆ.

  • ಅನ್ನ, ನೀರು ಸಿಗದೆ ನರಳಿ ಪ್ರಾಣ ಬಿಟ್ಟ ಕೊರೊನಾ ಸೋಂಕಿತ

    ಅನ್ನ, ನೀರು ಸಿಗದೆ ನರಳಿ ಪ್ರಾಣ ಬಿಟ್ಟ ಕೊರೊನಾ ಸೋಂಕಿತ

    ಬಳ್ಳಾರಿ: ಹೋಂ ಐಸೊಲೇಷನ್‍ನಲ್ಲಿದ್ದ ಕೊರೊನಾ ಸೋಂಕಿತ ಹಸಿವಿನಿಂದ ಸಾವನ್ನಪ್ಪಿರುವ ದಾರುಣ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

    ಬಳ್ಳಾರಿಯ ಬಿ ಬೆಳಗಲ್ಲು ಗ್ರಾಮದಲ್ಲಿ ಈ ಘಟನೆ ಕಳೆದ ಮೂರು ದಿನಗಳ ಹಿಂದೆ ನಡೆದಿದ್ದು, ಮನೆಯಲ್ಲೇ ಪ್ರತ್ಯೇಕವಾಗಿದ್ದ ಕೊರೊನಾ ಸೋಂಕಿತ ವೃದ್ಧ ವ್ಯಕ್ತಿ ಊಟ ಸಿಗದೇ ಸಾವನ್ನಪ್ಪಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಬಳ್ಳಾರಿ ಜಿಲ್ಲಾಡಳಿತ ಆದೇಶ ನೀಡಿದೆ.

    ಮೂಲಗಳ ಪ್ರಕಾರ ಬಳ್ಳಾರಿಯ ಟಿ ಬೆಳಗಲ್ಲು ಗ್ರಾಮದ ವೃದ್ಧ ವ್ಯಕ್ತಿಗೆ ಸೋಂಕು ತಗುಲಿರುವ ವಿಚಾರ ತಿಳಿಯುತ್ತಲೇ ಅವರನ್ನು ಕುಟುಂಬಸ್ಥರು ಮನೆಯಲ್ಲೇ ಬಿಟ್ಟು ಪ್ರತ್ಯೇಕವಾಗಿ ಹೊರಟು ಹೋಗಿದ್ದಾರೆ. ಮನೆಯಲ್ಲೇ ಇದ್ದ ಸೋಂಕಿತ ವೃದ್ಧ ಕೋವಿಡ್ ಸಹಾಯವಾಣಿಗೆ ನಿರಂತರವಾಗಿ ಕರೆ ಮಾಡಿದರೂ ಯಾವುದೇ ರೀತಿಯ ಪ್ರಯೋಜನವಾಗಿರಲಿಲ್ಲ.

    ಹೀಗಾಗಿ ಅನ್ನ ನೀರು, ಸೂಕ್ತ ಚಿಕಿತ್ಸೆ ಸಿಗದೇ ವೃದ್ಧ ಮನೆಯಲ್ಲೇ ನರಳಿ ನರಳಿ ಪ್ರಾಣ ಬಿಟ್ಟಿದ್ದಾರೆ. ಸದ್ಯ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ ತನಿಖೆಗೆ ಆದೇಶ ಮಾಡಿದ್ದಾರೆ.

  • ಅಂಬುಲೆನ್ಸ್ ಬರದಕ್ಕೆ ಪಿಪಿಇ ಕಿಟ್ ಧರಿಸಿ ಬೈಕ್ ಏರಿ ಬಂದ ಸೋಂಕಿತ

    ಅಂಬುಲೆನ್ಸ್ ಬರದಕ್ಕೆ ಪಿಪಿಇ ಕಿಟ್ ಧರಿಸಿ ಬೈಕ್ ಏರಿ ಬಂದ ಸೋಂಕಿತ

    – ವಿಡಿಯೋ ವೈರಲ್ ಬಳಿಕ ಎಚ್ಚೆತ್ತ ಅಧಿಕಾರಿಗಳು

    ಭೋಪಾಲ್: ಅಂಬುಲೆನ್ಸ್ ಬರದಕ್ಕೆ ಕೊರೊನಾ ಸೋಂಕಿತ ಪಿಪಿಇ ಕಿಟ್ ಧರಿಸಿ ಬೈಕ್ ಮೇಲೆ ಕೋವಿಡ್ ಕೇರ್ ಸೆಂಟರ್ ಗೆ ಬಂದಿರುವ ಘಟನೆ ಮಧ್ಯಪ್ರದೇಶದ ಹೋಶಂಗಾಬಾದ್ ಜಿಲ್ಲೆಯ ಬುಧ್ನಿಯಲ್ಲಿ ನಡೆದಿದೆ.

    ಬುಧ್ನಿಯ ಆನಂದ ನಗರದ ಯವಕನೋರ್ವ ಭಾನುವಾರ ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು. ಮಂಗಳವಾರ ಯುವಕನಿಗೆ ಕೊರೊನಾ ಸೋಂಕು ತಗುಲಿರೋದು ಖಚಿತವಾಗಿದೆ. ಮಂಗಳವಾರ ಯುವಕನಿಗೆ ಕರೆ ಮಾಡಿದ ಅಧಿಕಾರಿಗಳು ಆಸ್ಪತ್ರೆಗೆ ಬಂದು ರಿಪೋರ್ಟ್ ಕಲೆಕ್ಟ್ ಮಾಡಿಕೊಳ್ಳಲು ಸೂಚಿಸಿದ್ದಾರೆ.

    ಬುಧ್ನಿಯ ಆರೋಗ್ಯ ಕೇಂದ್ರಕ್ಕೆ ಬಂದ ಸೋಂಕಿತನಿಗೆ ಪಾಸಿಟಿವ್ ರಿಪೋರ್ಟ್ ಜೊತೆ ಪಿಪಿಇ ಕಿಟ್ ಸಹ ನೀಡಿದ್ದಾರೆ. ಅಂಬುಲೆನ್ಸ್ ಬರಲು ತಡವಾದ ಹಿನ್ನೆಲೆಯಲ್ಲಿ ಯುವಕ ಪಿಪಿಇ ಕಿಟ್ ಧರಿಸಿ ಕೋವಿಡ್ ಕೇರ್ ಸೆಂಟರ್ ತಲುಪಿದ್ದಾನೆ.

    ಸೋಂಕಿತ ಬೈಕ್ ಮೇಲೆ ಹೋಗುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಆಡಳಿತ ವರ್ಗದ ನಿರ್ಲಕ್ಷ್ಯಕ್ಕೆ ಇದೊಂದು ಉದಾಹರಣೆ ಎಂದು ಕಿಡಿಕಾರಿದ್ದಾರೆ. ವಿಡಿಯೋ ವೈರಲ್ ಆಗುತ್ತಲೇ ಎಚ್ಚೆತ್ತ ಜಿಲ್ಲಾ ಪಂಚಾಯ್ತಿ ಸಿಇಓ ಮನೋಜ್ ಕುಮಾರ್, ಆಸ್ಪತ್ರೆಗೆ ಶೋಕಾಸ್ ನೋಟಿಸ್ ನೀಡಿದ್ದಾರೆ.

  • ಸಿಇಟಿ ಪರೀಕ್ಷೆ – ಬಳ್ಳಾರಿಯಲ್ಲಿ 6 ಜನ ಸೋಂಕಿತ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆ

    ಸಿಇಟಿ ಪರೀಕ್ಷೆ – ಬಳ್ಳಾರಿಯಲ್ಲಿ 6 ಜನ ಸೋಂಕಿತ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆ

    ಬಳ್ಳಾರಿ: ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ನಡೆಸಲಾಗುವ ಸಿಇಟಿ ಪರೀಕ್ಷೆ ಇಂದಿನಿಂದ ಎರಡು ನಗಳ ಕಾಲ ನಡೆಯುತ್ತಿದ್ದು, ಗಣಿ ನಾಡು ಬಳ್ಳಾರಿಯಲ್ಲಿ ಅಗತ್ಯ ಸಿದ್ಧತೆಗಳೊಂದಿಗೆ ಪರೀಕ್ಷೆ ಆರಂಭವಾಗಿವೆ.

    ಕೊರೊನಾ ಸೋಂಕಿತ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಿದ್ದು, ಕೊರೊನಾ ವೈರಸ್ ದೃಢಪಟ್ಟಂತಹ ವಿದ್ಯಾರ್ಥಿಗಳಿಗೆ ಸಿ.ಇ.ಟಿ. ಪರೀಕ್ಷೆ ಬರೆಯಲು ಬಳ್ಳಾರಿಯ ಡೆಂಟಲ್ ಕಾಲೇಜ್ ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಬಳ್ಳಾರಿ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಪದವಿಪೂರ್ವ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ವ್ಯವಸ್ಥೆ ಮಾಡಿದೆ.

    ಬಳ್ಳಾರಿ, ಸಿರಗುಪ್ಲ ಹಾಗೂ ಹಡಗಲಿಯ ತಲಾ ಇಬ್ಬರು ಕೊರೊನಾ ಸೋಂಕಿತ ವಿದ್ಯಾರ್ಥಿಗಳು ಸೇರಿದಂತೆ 6 ಜನ ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆಸಲು ಜಿಲ್ಲಾಡಳಿತವು ವ್ಯವಸ್ಥೆ ಮಾಡಿದೆ. ಪಿಪಿಇ ಕಿಟ್, ಮಾಸ್ಕ್ ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಕರೆತಂದು ಅತ್ಯಂತ ಸುರಕ್ಷಿತವಾಗಿ ಸೋಂಕಿತ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

  • ಸೋಂಕಿತರಿಂದ ಸುಲಿಗೆ- ಖಾಸಗಿ ಆಸ್ಪತ್ರೆಗಳ ಮೇಲೆ ಅಧಿಕಾರಿಗಳ ದಾಳಿ

    ಸೋಂಕಿತರಿಂದ ಸುಲಿಗೆ- ಖಾಸಗಿ ಆಸ್ಪತ್ರೆಗಳ ಮೇಲೆ ಅಧಿಕಾರಿಗಳ ದಾಳಿ

    – ಸೋಂಕಿತರಿಂದ 5 ಲಕ್ಷ ಪಡೆದಿರುವ ಬಗ್ಗೆ ಮಾಹಿತಿ
    – ಹಣ ಮರಳಿಸುವಂತೆ ತಾಕೀತು

    ಬೆಂಗಳೂರು: ಕೊರೊನಾ ಸೋಂಕಿತರಿಂದ ಸರ್ಕಾರ ನಿಗದಿ ಮಾಡಿದ್ದಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಿದ್ದ ಆಸ್ಪತ್ರೆಗಳ ಮೇಲೆ ಅಧಿಕಾರಿಗಳು ದಾಳಿ ಮುಂದುವರಿಸಿದ್ದು, ಇಂದೂ ಸಹ ಹಲವು ಆಸ್ಪತ್ರೆಗಳ ಮೇಲೆ ದಾಳಿ ನಡೆಸಿದ್ದಾರೆ.

    ಎಡಿಜಿಪಿ ಸುನೀಲ್ ಅಗರ್‍ವಾಲ್, ಐಎಎಸ್ ಉಮಾ ಮಹಾದೇವನ್ ತಂಡದಿಂದ ಪರಿಶೀಲನೆ ನಡೆಸಲಾಗಿದ್ದು, ಸರ್ಜಾಪುರ ರಸ್ತೆಯ ಕೊಲಂಬಿಯಾ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಂದ ಹೆಚ್ಚುವರಿ ಹಣ ಪಡೆದಿರುವುದು ಪತ್ತೆಯಾಗಿದೆ. 14 ಸೋಂಕಿತರಿಂದ 5,02,245 ರೂ.ಗಳನ್ನ ಪಡೆದಿದ್ದು, ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚು ಹಣ ಪಡೆದಿರುವುದು ದಾಳಿ ವೇಳೆ ಪತ್ತೆಯಾಗಿದೆ. ಹೆಚ್ಚುವರಿಯಾಗಿ ಪಡೆದಿರುವ ಹಣವನ್ನು ಸೋಂಕಿತ ಬ್ಯಾಂಕ್ ಖಾತೆಗೆ ಮರಳಿ ಜಮೆ ಮಾಡುವಂತೆ ಅಧಿಕಾರಿಗಳು ಆಸ್ಪತ್ರೆಗೆ ಸೂಚಿಸಿದ್ದಾರೆ. ಅಲ್ಲದೆ ಸೋಂಕಿತರಿಂದ ಹೆಚ್ಚುವರಿ ಹಣ ವಸೂಲಿ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.

    ಖಾಸಗಿ ಆಸ್ಪತ್ರೆಯಲ್ಲಿ ಬೆಡ್ ಲಭ್ಯವಿರುವ ಬಗ್ಗೆ ಡಿಸ್ ಪ್ಲೇ ಬೊರ್ಡ್ ಖಡ್ಡಾಯವಾಗಿ ಅಳವಡಿಸುವಂತೆ ಇದೇ ವೇಳೆ ಸೂಚನೆ ನೀಡಿದ್ದಾರೆ. ತಂಡ ಇನ್ನೂ ನಾಲ್ಕು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದು, ಮಾರತ್ ಹಳ್ಳಿಯ ಸರ್ಕಾರಿ ಆಸ್ಪತ್ರೆ, ಯಶೋಮತಿ, ವೈಟ್‍ಫೀಲ್ಡ್ ನ ಕೋಲಂಬಿಯಾ ಏಷ್ಯಾ, ವೈದೇಹಿ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿದ್ದಾರೆ. ನಾಲ್ಕು ಆಸ್ಪತ್ರೆಗಳ ಬಿಲ್ ಪರಿಶೀಲನೆ ನಡೆಸಿದ್ದು ಹೆಚ್ಚು ಹಣ ಪಡೆಯದಂತೆ ವಾರ್ನ್ ಮಾಡಿದ್ದಾರೆ.

  • ತಪಾಸಣೆ ವೇಳೆ ಡಿಸಿ ನಂಬರ್ ಕೊಟ್ಟ ಸೋಂಕಿತ – ಕರೆ ಸ್ವೀಕರಿಸಿ ದಂಗಾದ ಜಿಲ್ಲಾಧಿಕಾರಿ

    ತಪಾಸಣೆ ವೇಳೆ ಡಿಸಿ ನಂಬರ್ ಕೊಟ್ಟ ಸೋಂಕಿತ – ಕರೆ ಸ್ವೀಕರಿಸಿ ದಂಗಾದ ಜಿಲ್ಲಾಧಿಕಾರಿ

    ಮೈಸೂರು: ತಪಾಸಣೆ ವೇಳೆ ಮೈಸೂರು ಜಿಲ್ಲಾಧಿಕಾರಿ ನಂಬರ್ ಕೊಟ್ಟು ಕೊರೊನಾ ಸೋಂಕಿತನೊಬ್ಬ ಕಿತಾಪತಿ ಮಾಡಿರುವ ಘಟನೆ ಮೈಸೂರಿನ ಹೆಬ್ಬಾಳ ಬಡಾವಣೆಯಲ್ಲಿ ನಡೆದಿದೆ.

    ಕೊರೊನಾ ತಪಾಸಣೆಗೆ ಬಂದ ವ್ಯಕ್ತಿಯೋರ್ವ ಪರೀಕ್ಷೆ ವೇಳೆ ತನ್ನ ನಂಬರ್ ಬದಲಿಗೆ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಅವರ ನಂಬರ್ ಅನ್ನು ಜಿಲ್ಲಾಡಳಿತಕ್ಕೆ ಕೊಟ್ಟು ಯಾಮಾರಿಸಿದ್ದಾನೆ. ಇದಾದ ಬಳಿಕ ಆ ವ್ಯಕ್ತಿಯ ಕೊರೊನಾ ವರದಿ ಬಂದಿದ್ದು, ಆತನಿಗೆ ಕೊರೊನಾ ಇರುವುದು ದೃಢಪಟ್ಟಿದೆ.

    ಕೊರೊನಾ ದೃಢಪಟ್ಟ ವ್ಯಕ್ತಿ ನೀಡಿದ ನಂಬರ್ ಗೆ ಮೈಸೂರು ಜಿಲ್ಲಾಡಳಿತದ ಕೊರೊನಾ ಕಂಟ್ರೋಲ್ ರೂಂನಿಂದ ಕರೆ ಮಾಡಿದ್ದಾರೆ. ನಿಮಗೆ ಪಾಸಿಟಿವ್ ಬಂದಿದೆ ಎಲ್ಲಿದ್ದೀರಾ ಎಂದು ಕೇಳಿದ್ದಾರೆ. ಈ ಮಾತುಗಳನ್ನು ಕೇಳಿ ಒಮ್ಮೆ ಗಾಬರಿಯಾದ ಡಿಸಿಯವರು, ನನಗೆ ಕೊರೊನಾ ಇದ್ಯಾ ಎಂದು ಭಾವಿಸಿ ನಾನ್ ರೀ ಜಿಲ್ಲಾಧಿಕಾರಿ ಮಾತಾನಾಡುತ್ತಿದ್ದೇನೆ ಎಂದು ಡಿಸಿ ಅಭಿರಾಮ್ ಅವರು ಹೇಳಿದ್ದಾರೆ.

    ಆಗ ಜಿಲ್ಲಾಡಳಿತದವರು ನಂಬರ್ ನೋಡಿ ಚೆಕ್ ಮಾಡಿದಾಗ ಕೊರೊನಾ ಸೋಂಕಿತ ಪರೀಕ್ಷೆ ವೇಳೆ ಆತನ ನಂಬರ್ ಬದಲು ಡಿಸಿ ಅವರ ನಂಬರ್ ಕೊಟ್ಟಿರುವುದು ಬೆಳಕಿಗೆ ಬಂದಿದೆ. ಸದ್ಯ ತಪ್ಪು ನಂಬರ್ ಕೊಟ್ಟು ಕೊರೊನಾ ಸೋಂಕಿತ ಎಸ್ಕೇಪ್ ಆಗಿದ್ದು, ಸೋಂಕಿತನಿಗಾಗಿ ಅಧಿಕಾರಿಗಳು ಹುಡುಕಾಟ ಶುರು ಮಾಡಿದ್ದಾರೆ.

    ಈ ವಿಚಾರವಾಗಿ ಬೇಸರದಿಂದ ಈ ರೀತಿ ಕಿತಾಪತಿ ಕೆಲಸ ಮಾಡಿದ ವ್ಯಕ್ತಿಗೆ ಸಲಹೆ ನೀಡಿರುವ ಜಿಲ್ಲಾಧಿಕಾರಿ ಅಭಿರಾಮ್ ಅವರು, ಈ ರೀತಿ ಮಾಡಿದರೆ ಕೊರೊನಾ ಸಮಸ್ಯೆ ಜಿಲ್ಲೆಯಲ್ಲಿ ಮತ್ತಷ್ಟು ಉಲ್ಬಣ ಆಗಲಿದೆ. ಸಾರ್ವಜನಿಕರು ಕೊರೊನಾ ಕಂಟ್ರೋಲ್ ರೂಂಗೆ ಸರಿಯಾಗಿ ಸಹಕರಿಸುವಂತೆ ಮನವಿ ಮಾಡಿದ್ದಾರೆ.

  • ಸೋಂಕಿತ ಸತ್ತಿದ್ದಕ್ಕೆ ಅಂಬುಲೆನ್ಸ್‌ಗೆ ಬೆಂಕಿ, ಕಲ್ಲು ತೂರಾಟ – ವೈದ್ಯರ ಪಿಪಿಇ ಕಿಟ್, ಬಟ್ಟೆ ಹರಿದ ಕಿಡಿಗೇಡಿಗಳು

    ಸೋಂಕಿತ ಸತ್ತಿದ್ದಕ್ಕೆ ಅಂಬುಲೆನ್ಸ್‌ಗೆ ಬೆಂಕಿ, ಕಲ್ಲು ತೂರಾಟ – ವೈದ್ಯರ ಪಿಪಿಇ ಕಿಟ್, ಬಟ್ಟೆ ಹರಿದ ಕಿಡಿಗೇಡಿಗಳು

    – ಇದು ಪೂರ್ವ ನಿಯೋಜಿತ ಕೃತ್ಯ
    – ಚಿಕಿತ್ಸೆ ನೀಡಿದ ವೈದ್ಯರನ್ನು ತೋರಿಸಿ
    – ಪಟ್ಟು ಹಿಡಿದಿದ್ದ ಮೃತನ‌ ಸಂಬಂಧಿಕರು

    ಬೆಳಗಾವಿ: ಜಿಲ್ಲೆಯ ಬಿಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ರೋಗಿ ಸತ್ತಿದ್ದಕ್ಕೆ ಆತನ ಸಂಬಂಧಿಕರು ಅಂಬುಲೆನ್ಸ್‌ಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ಮಾಡಿದ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಬುಧವಾರ ರಾತ್ರಿ ಬಿಮ್ಸ್ ಆಸ್ಪತ್ರೆಯ ಐಸಿಯು ವಾರ್ಡಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೊನಾ ಸೋಂಕಿತ ಸಾವನ್ನಪ್ಪಿದ್ದ. ಇದರಿಂದ ರೊಚ್ಚಿಗೆದ್ದ ಆತನ ಸಂಬಂಧಿಕರು ಆಸ್ಪತ್ರೆ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿ, ಆಸ್ಪತ್ರೆ ಮುಂದೆ ನಿಂತಿದ್ದ ಅಂಬುಲೆನ್ಸ್ ಗೆ ಬೆಂಕಿ ಹಚ್ಚಿದ್ದರು. ಅಲ್ಲದೇ ಆಸ್ಪತ್ರೆ ಮುಂಭಾಗ ಕಲ್ಲು ತೂರಾಟ ಮಾಡಿದ್ದರು.

    ಈ ಘಟನೆ ಸಂಬಂಧಿಸಿದಂತೆ ಬಿಮ್ಸ್ ಆಸ್ಪತ್ರೆ ವೈದ್ಯರು ದೂರು ನೀಡಿದ್ದು, ಈಗ ಮೃತನ 8 ಸಂಬಂಧಿಕರು ಸೇರಿ ಇತರೆ 15 ಜನರ ವಿರುದ್ಧ ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಜೊತೆಗೆ ಘಟನೆಯನ್ನು ಖಂಡಿಸಿ ಆಸ್ಪತ್ರೆ ಸಿಬ್ಬಂದಿ ಪ್ರತಿಭಟನೆ ಮಾಡುತ್ತಿದ್ದು, ನಾವು ನಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕೆಲಸ ಮಾಡುತ್ತೇವೆ. ಆದರೆ ನಮ್ಮ ಮೇಲೆ ಹಲ್ಲೆ ಮಾಡಲು ಕೆಲವರು ಮುಂದಾಗಿದ್ದಾರೆ. ಅವರಿಗೆ ಶಿಕ್ಷೆ ಆಗಬೇಕು. ಇಲ್ಲವಾದರೆ ನಾವು ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಪಟ್ಟು ಹಿಡಿದ್ದಾರೆ.

    ನಿನ್ನೆ ರಾತ್ರಿ ಸೋಂಕಿತ ಮೃತಪಡುತ್ತಿದಂತೆ ಆಸ್ಪತ್ರೆಗೆ ಬಂದ ಸಂಬಂಧಿಕರು, ನಮಗೆ ಚಿಕಿತ್ಸೆ ಮಾಡಿದ ವೈದ್ಯರನ್ನು ತೋರಿಸಿ, ಆತ ನಮಗೆ ಬೇಕು ಎಂದು ಗಲಾಟೆ ಮಾಡಿದ್ದಾರೆ. ಜೊತೆಗೆ ಮೂವರು ವೈದ್ಯರು, ಇಬ್ಬರು ನರ್ಸ್ ಸೇರಿ ಐದು ಜನರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಜೊತೆಗೆ ಪಿಪಿಇ ಕಿಟ್, ಬಟ್ಟೆ ಹರಿದು ವೈದ್ಯರ ಮೇಲೆ ಹಲ್ಲೆ ಮಾಡಿದ್ದಾರೆ. ಜೀವ ಉಳಿಸಿಕೊಳ್ಳಲು ಕೊರೊನಾ ವಾರಿಯರ್ಸ್ ಓಡಿ ಹೋಗಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ, ಜುಲೈ 19ರಂದು ರೋಗಿ ಆಸ್ಪತ್ರೆಗೆ ಆಡ್ಮಿಟ್ ಆಗಿದ್ದರು. ನಿನ್ನೆ ಹೆಚ್ಚಿನ ಚಿಕಿತ್ಸೆಗೆಂದು ಐಸಿಯುಗೆ ಶಿಫ್ಟ್ ಮಾಡಿದಾಗ ರೋಗಿ ಸಾವನ್ನಪ್ಪಿದ್ದಾರೆ. ಜೀವದ ಹಂಗು ತೊರೆದು ಡಾಕ್ಟರ್ ಮತ್ತು ನರ್ಸ್ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಈ ರೀತಿ ಕೃತ್ಯಕ್ಕೆ ಯಾರು ಇಳಿಯಬಾರದು. ವೈದ್ಯರು ಹೆದರಿಬಿಟ್ಟಿದ್ದರು ಅವರನ್ನು ಕರೆದು ಮಾತಾಡಿದ್ದೇನೆ. ಡಿಎಚ್‍ಓ ಕೇಸ್ ದಾಖಲಿಸುತ್ತಿದ್ದಾರೆ. ಕೃತ್ಯ ಎಸಗಿದವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಜೊತೆಗೆ ಆಸ್ಪತ್ರೆಯ ಸುತ್ತಮುತ್ತ 144 ಸೆಕ್ಷನ್ ಅನ್ನು ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಜಾರಿ ಮಾಡುತ್ತೇವೆ ಎಂದಿದ್ದಾರೆ.

    ನಿನ್ನೆ ರಾತ್ರಿ ನಡೆದ ಕೃತ್ಯ ಪೂರ್ವನಿಯೋಜಿತವಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಮೃತ ರೋಗಿಯ ಸಂಬಂಧಿಕರು ಗಲಾಟೆ ಮಾಡಬೇಕು ಎಂದೇ ಜನರನ್ನು ಕರೆದುಕೊಂಡು ಬಂದಿದ್ದರು ಎನ್ನಲಾಗಿದೆ. ಈ ಘಟನೆಯಲ್ಲಿ ಒಂದು ಕೊರೊನಾ ಅಂಬುಲೆನ್ಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಜೊತೆಗೆ ಜೈಲು ವಾಹನ ಸೇರಿ 5ಕ್ಕೂ ಹೆಚ್ಚು ವಾಹನಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದೆ.