Tag: Corona Free

  • ಕೊರೊನಾ ಮುಕ್ತವಾಗಿದ್ದ ಹಾವೇರಿಯಲ್ಲಿ ಮತ್ತೆರಡು ಪ್ರಕರಣ

    ಕೊರೊನಾ ಮುಕ್ತವಾಗಿದ್ದ ಹಾವೇರಿಯಲ್ಲಿ ಮತ್ತೆರಡು ಪ್ರಕರಣ

    – ಸಂಬಂಧಿಕರನ್ನು ಕರೆ ತರಲು ಹೋಗಿದ್ದ ಯುವಕನಿಗೆ ಸೋಂಕು

    ಹಾವೇರಿ: ಜಿಲ್ಲೆ ನಿನ್ನೆಯಷ್ಟೆ ಕೊರೊನಾ ಮುಕ್ತವಾಗಿತ್ತು. ಆದರೆ ಇಂದು ಮತ್ತೆ ಇಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

    ಹಾವೇರಿ ತಾಲೂಕಿನ ಕೋಳೂರು ಗ್ರಾಮದ ನಿವಾಸಿ 23 ವರ್ಷದ ಯುವಕ ರೋಗಿ ನಂ.6517ಗೆ ಸೋಂಕು ದೃಢಪಟ್ಟಿದೆ. ಸೋಂಕಿತ ಯುವಕ ಮಾರ್ಚ್‍ನಲ್ಲಿ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿದ್ದ ಸಂಬಂಧಿಕರನ್ನು ಕರೆ ತರಲು ಹೋಗಿದ್ದ. ಆದರೆ ಅಷ್ಟರಲ್ಲಾಗಲೇ ಲಾಕ್‍ಡೌನ್ ಘೋಷಣೆಯಾಗಿದ್ದರಿಂದ ಮರಳಿ ಬರಲಾಗದೆ ಅಲ್ಲಿಯೇ ಲಾಕ್ ಆಗಿದ್ದ.

    ಲಾಕ್‍ಡೌನ್ ಸಡಿಲಿಕೆ ನಂತರ ಜೂನ್ 3ರಂದು ಮಹಾರಾಷ್ಟ್ರದಿಂದ ಗದಗಗೆ ರೈಲಿನಲ್ಲಿ ಬಂದಿಳಿದು, ಅಲ್ಲಿಂದ ಬಸ್ ಮೂಲಕ ಹಾವೇರಿಗೆ ಬಂದು ಸಾಂಸ್ಥಿಕ ಕ್ವಾರಂಟೈನ್ ಆಗಿದ್ದ. ಅಲ್ಲದೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಪತಿಯೊಂದಿಗೆ ವಾಸವಾಗಿದ್ದ ಹಾವೇರಿ ನಗರದ ನಿವಾಸಿ 34 ವರ್ಷದ ಮಹಿಳೆಗೂ ಇಂದು ಸೋಂಕು ದೃಢಪಟ್ಟಿದೆ. ಸೋಂಕಿತ ಮಹಿಳೆ ಸಹ ಲಾಕ್‍ಡೌನ್ ನಂತರ ಜೂನ್ 3ರಂದು ಮಹಾರಾಷ್ಟ್ರದಿಂದ ಗದಗಗೆ ರೈಲಿನ ಮೂಲಕ ಆಗಮಿಸಿ, ನಂತರ ಬಸ್ ಮೂಲಕ ಹಾವೇರಿಗೆ ಬಂದು ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದರು.

    ಜೂನ್ 10ರಂದು ಇಬ್ಬರ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಲಾಗಿತ್ತು. ಇಂದು ಇಬ್ಬರಲ್ಲೂ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ನಿನ್ನೆಯವರೆಗೆ ಶೂನ್ಯವಾಗಿದ್ದ ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆ ಈಗ ಮತ್ತೆ ಎರಡಕ್ಕೆ ಏರಿದೆ. ಜಿಲ್ಲೆಯಿಂದ ಕೊರೊನಾ ತೊಲಗಿತು ಎನ್ನುವಷ್ಟರಲ್ಲಿ ಮತ್ತೆ ಎರಡು ಪ್ರಕರಣಗಳು ಪತ್ತೆಯಾಗಿರುವುದು ಜಿಲ್ಲೆಯ ಜನರಲ್ಲಿ ಬೇಸರ ಮೂಡಿಸಿದೆ.

  • ಇಂದು 7 ಜನ ಡಿಸ್ಚಾರ್ಜ್- ಹಾವೇರಿ ಜಿಲ್ಲೆ ಕೊರೊನಾ ಮುಕ್ತ

    ಇಂದು 7 ಜನ ಡಿಸ್ಚಾರ್ಜ್- ಹಾವೇರಿ ಜಿಲ್ಲೆ ಕೊರೊನಾ ಮುಕ್ತ

    – ಸೋಂಕಿತರೆಲ್ಲರೂ ಗುಣಮುಖ

    ಹಾವೇರಿ: ಜಿಲ್ಲೆಯಲ್ಲಿ ಸೋಂಕಿತರೆಲ್ಲರೂ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಈ ಮೂಲಕ ಏಲಕ್ಕಿ ಕಂಪಿನ ಹಾವೇರಿ ಜಿಲ್ಲೆ ಕೊರೊನಾ ಮುಕ್ತವಾಗಿದೆ.

    ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ ಶೂನ್ಯಕ್ಕೆ ತಲುಪಿದ್ದು, ಮೇ 4ರಂದು ಮೊದಲ ಕೊರೊನಾ ಪ್ರಕರಣ ಪತ್ತೆಯಾಗಿತ್ತು. ಈ ವರೆಗೆ 21 ಸಕ್ರಿಯ ಪ್ರಕರಣಗಳಿದ್ದವು. ಇದರಲ್ಲಿ ನಿನ್ನೆಯವರೆಗೆ 14ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದರು. ಇಂದು ಉಳಿದ ಏಳು ಜನ ಸೋಂಕಿತರ ವರದಿಗಳು ಸಹ ನೆಗೆಟಿವ್ ಬಂದಿವೆ. ಹೀಗಾಗಿ ಉಳಿದ 7 ಜನರನ್ನು ಕೋವಿಡ್-19 ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆ ಶೂನ್ಯಕ್ಕೆ ಜಾರಿದೆ.

    ಏಳು ಜನರನ್ನು ಜಿಲ್ಲಾಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ.ಸುರೇಶ್ ಪೂಜಾರ್ ನೇತೃತ್ವದಲ್ಲಿ ಹೂವು ನೀಡಿ, ಚಪ್ಪಾಳೆ ತಟ್ಟಿ ಬಿಡುಗಡೆ ಮಾಡಲಾಯಿತು. ಅಲ್ಲದೆ ಅಂಬುಲೆನ್ಸ್ ಮೂಲಕ ಅವರ ಮನೆಗೆ ತಲುಪಿಸಲಾಯಿತು. ಕೋವಿಡ್-19 ಆಸ್ಪತ್ರೆಯಿಂದ ಎಲ್ಲ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದರಿಂದ ಹಾವೇರಿಯ ಕೋವಿಡ್-19 ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಸಂತಸ ವ್ಯಕ್ತಪಡಿಸಿದರು.