Tag: Corona Curfew

  • ಸೋಂಕು ಕಡಿಮೆ ಇದ್ದಾಗ ಕರ್ಫ್ಯೂ ವಿಧಿಸಿ, ಹೆಚ್ಚಾದಾಗ ಕರ್ಫ್ಯೂ ಹಿಂಪಡೆದಿದ್ದಾರೆ: ಡಿಕೆಶಿ

    ಸೋಂಕು ಕಡಿಮೆ ಇದ್ದಾಗ ಕರ್ಫ್ಯೂ ವಿಧಿಸಿ, ಹೆಚ್ಚಾದಾಗ ಕರ್ಫ್ಯೂ ಹಿಂಪಡೆದಿದ್ದಾರೆ: ಡಿಕೆಶಿ

    ಬೆಂಗಳೂರು: ಇದು ಬಿಜೆಪಿ ಕರ್ಫ್ಯೂ. ಅವರಿಗೆ ಬೇಕಾದಾಗ ವಿಧಿಸುತ್ತಾರೆ, ಬೇಡವಾದಾಗ ತೆರವುಗೊಳಿಸುತ್ತಾರೆ ಎಂದು ನಾನು ಈ ಹಿಂದೆಯೇ ಹೇಳಿದ್ದೆ. ನಾವು ಪಾದಯಾತ್ರೆ ಮಾಡುತ್ತೇವೆ ಎಂಬ ಕಾರಣಕ್ಕೆ ಜನರಿಗೆ ಕೊಡಬಾರದ ಕಷ್ಟ ಕೊಟ್ಟರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆರೋಪಿಸಿದ್ದಾರೆ.

    ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಸೋಂಕು ಪ್ರಮಾಣ ಕಡಿಮೆ ಇದ್ದಾಗ ಕರ್ಫ್ಯೂ ವಿಧಿಸಿದ್ದವರು, ಸೋಂಕು ಪ್ರಮಾಣ ಹೆಚ್ಚಾದಾಗ ಕರ್ಫ್ಯೂ ಹಿಂಪಡೆದಿದ್ದಾರೆ. ರಾಜಕೀಯ ಕಾರಣಕ್ಕೆ ಅವರು ಈ ರೀತಿ ಮಾಡುತ್ತಿದ್ದಾರೆ ಎಂದರು. ಕರ್ಫ್ಯೂ ವಿಧಿಸಿದ್ದರಿಂದ ಜನರಿಗೆ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿದೆ. ಹಣ್ಣು, ತರಕಾರಿ ಬೆಳೆಯುವವರ, ಮಾರುವವರ ಪರಿಸ್ಥಿತಿ ಏನಾಗಿದೆ ಎಂದು ನೋಡಿದ್ದೀರಿ. ಕೆಎಸ್ಆರ್‌ಟಿಸಿ, ಮೆಟ್ರೋದಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರಯಾಣ ಮಾಡಬಹುದು, ವಿಮಾನಗಳಲ್ಲಿಯೂ ಪೂರ್ಣ ಪ್ರಮಾಣದಲ್ಲಿ ಪ್ರಯಾಣ ಮಾಡಬಹುದು. ಬಡವರು, ಹೊಟೇಲ್ ನವರು, ಚಿತ್ರಮಂದಿರಗಳವರು ಹಾಗೂ ಇತರರು ಶೇ.50 ರಷ್ಟು ಮಾತ್ರ ವ್ಯಾಪಾರ ಮಾಡಬೇಕಂತೆ. ಕುಟುಂಬ ಸದಸ್ಯರು ವಾಹನಗಳಲ್ಲಿ ಸಂಚಾರ ಮಾಡುವಾಗ ಶೇ.50ರಷ್ಟು ನಿಯಮ ಪಾಲನೆ ಮಾಡಲು ಸಾಧ್ಯವೇ? ಸರ್ಕಾರ ಪ್ರಾಯೋಗಿಕವಾಗಿ ಯೋಚಿಸಬೇಕು. ಈ ಸರ್ಕಾರ ಆ ರೀತಿ ಯೋಚಿಸುತ್ತಿಲ್ಲ ಎಂದು ಆರೋಪಿಸಿದರು. ಇದನ್ನೂ ಓದಿ: ಪ್ರಿಯತಮೆ ಕೈಕೊಟ್ಟಿದ್ದಕ್ಕೆ ಆಕೆಯ ಸಹೋದರನನ್ನೇ ಕಿಡ್ನಾಪ್ ಮಾಡಿದ ಭೂಪ

    ಬೇರೆಲ್ಲೂ ಇಲ್ಲದ ನಿಯಮ ಇಲ್ಲಿ ಯಾಕೆ?: ಔಷಧಿ ನೀಡಿ, ಸಹಾಯ ಮಾಡಿ, ಆರೋಗ್ಯ ಕಾಪಾಡಿ ಸರ್ಕಾರ ಜನರಿಗೆ ಮಾನಸಿಕವಾಗಿ ಧೈರ್ಯ ತುಂಬಬೇಕು. ಆದರೆ ಈ ಸರ್ಕಾರ ಅವೈಜ್ಞಾನಿಕವಾಗಿ ನಿಯಮಗಳನ್ನು ಜಾರಿ ಮಾಡುತ್ತಿದೆ. ಸರ್ಕಾರಗಳು ರಾಜ್ಯ ಹಾಗೂ ದೇಶದ ಆರ್ಥಿಕತೆ ನೋಡಬೇಕು. ಆಂಧ್ರ, ತೆಲಂಗಾಣ ಹಾಗೂ ಬೇರೆ ರಾಜ್ಯಗಳಲ್ಲಿ ಇಲ್ಲದ ನಿಯಮ ಇಲ್ಲಿ ಯಾಕೆ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದರು. ಇದನ್ನೂ ಓದಿ: ಮೊದ್ಲು ಜನ್ರಿಗೆ ಆದಾಯ ಬರುವಂತೆ ಮಾಡಿ, ಆಮೇಲೆ ದರ ಏರಿಕೆ ಮಾಡಿ: ಡಿಕೆಶಿ

    ವಿದ್ಯುತ್ ದರ ಏರಿಕೆ ಪ್ರಸ್ತಾಪದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಅವರು, ಜನಸಾಮಾನ್ಯರ ಆದಾಯ ಖಾತರಿ ಮತ್ತು ಹೆಚ್ಚಳಕ್ಕೆ ಸರ್ಕಾರ ಮೊದಲು ಕ್ರಮ ಕೈಗೊಳ್ಳಲಿ. ಅವರಿಗೆ ಆದಾಯ ಬಂದ ಮೇಲೆ ವಿದ್ಯುತ್ ದರ ಏರಿಕೆ ಮಾಡಲಿ. ಹಾಲಿನ ದರ, ವಿದ್ಯುತ್ ದರ ಹೆಚ್ಚಿಸುತ್ತಿದ್ದಾರೆ. ರೈತನಿಗೆ ತೊಂದರೆ ಆದಾಗ ಅವನ ರಕ್ಷಣೆಗೆ ಸರ್ಕಾರ ಯಾಕೆ ನಿಲ್ಲಲಿಲ್ಲ? ಬೆಳೆ ದರ ಏಕೆ ಹೆಚ್ಚಿಸಲಿಲ್ಲ? ಬೆಂಬಲ ಬೆಲೆ ಯಾಕೆ ನೀಡಲಿಲ್ಲ. ಏರಿಕೆಯಾಗಿರುವ ಕಬ್ಬಿಣ, ಸಿಮೆಂಟ್ ದರ ಕಡಿಮೆ ಮಾಡಲು ಕ್ರಮ ಕೈಗೊಳ್ಳಲಿಲ್ಲ. ಈಗ ವಿದ್ಯುತ್ ದರ ಬಾಕಿ ಕೊಡಬೇಕು ಎನ್ನುತ್ತಿದ್ದಾರೆ. ವಿದ್ಯುತ್ ಕಂಪನಿಗಳ ಪರಿಸ್ಥಿತಿ ಹೇಗಿದೆ ಎಂದು ನಮಗೆ ಗೊತ್ತಿದೆ. ಸರ್ಕಾರ ಸಾರ್ವಜನಿಕರಿಗೆ ಅನುಕೂಲವಾಗುವ ಕ್ರಮ ಕೈಗೊಳ್ಳಬೇಕು ಎಂದರು. ಇದನ್ನೂ ಓದಿ: ಕೋವಿಡ್‌ ಯಾರನ್ನೂ ಬಿಟ್ಟಿಲ್ಲ, ದೇವೇಗೌಡರಿಗೆ ಕೊರೊನಾ ತೀವ್ರತೆ ಇಲ್ಲ: ಬೊಮ್ಮಾಯಿ

    ತಮಿಳುನಾಡು ಆರಂಭಿಸಲಿರುವ ಹೊಗೇನಕಲ್ ಯೋಜನೆ ಬಗ್ಗೆ ಮಾತನಾಡಿದ ಅವರು, ಈ ವಿಚಾರವಾಗಿ ಈಗ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಸರ್ಕಾರ ಏನೆಲ್ಲಾ ಹೇಳಿಕೆ ನೀಡುತ್ತದೆಯೋ ನೀಡಲಿ. ನಂತರ ಮಾತನಾಡುತ್ತೇನೆ ಎಂದರು.

    ಕಾಂಗ್ರೆಸ್‌ ಸದಸ್ಯತ್ವಕ್ಕೆ ಆನ್‌ಲೈನ್‌ ನೋಂದಣಿ!: ನಾವು ಆನ್‌ಲೈನ್ ಹಾಗೂ ಆಫ್‌ಲೈನ್‌ ಸದಸ್ಯತ್ವ ನೋಂದಣಿ ಮಾಡುತ್ತಿದ್ದೇವೆ. ಪ್ರತಿಯೊಬ್ಬರಿಗೂ ಆನ್‌ಲೈನ್ ಸದಸ್ಯತ್ವ ಅವಕಾಶ ನೀಡಲಾಗಿದೆ. ಮಾರ್ಚ್‌ವರೆಗೂ ಸದಸ್ಯತ್ವ ನೋಂದಣಿ ಅಭಿಯಾನ ನಡೆಯಲಿದೆ. ನಂತರವೂ ಸದಸ್ಯತ್ವ ನೀಡುತ್ತೇವೆ. ಆದರೆ ಪಕ್ಷದ ಆಂತರಿಕ ಚುನಾವಣೆಗಳಲ್ಲಿ ಮತದಾನದ ಹಕ್ಕು ಪಡೆಯಬೇಕಾದರೆ ಈ ಅಭಿಯಾನದ ಕಾಲಾವಧಿಯಲ್ಲಿಯೇ ಸದಸ್ಯತ್ವ ನೋಂದಣಿ ಮಾಡಿಸಿಕೊಳ್ಳಬೇಕು. ಪ್ರತಿ ಬೂತ್‌ಗೆ ಇಬ್ಬರು ಕಾರ್ಯಕರ್ತರ ನೇಮಕಕ್ಕೆ ಸೂಚನೆ ನೀಡಲಾಗಿದೆ. ಆನ್‌ಲೈನ್ ಸದಸ್ಯತ್ವ ಹೇಗೆ ಮಾಡಬೇಕು ಎಂಬುದಕ್ಕೆ ಈಗ ತರಬೇತಿ ನೀಡಲಾಗುತ್ತಿದೆ ಎಂದರು.

  • 8 ನಗರಗಳಲ್ಲಿ ನೈಟ್‍ಕರ್ಫ್ಯೂ ಮೊದಲ ದಿನ ಅಂತ್ಯ – ಕಂಡಕಂಡಲ್ಲಿ ಬ್ಯಾರಿಕೇಡ್, ಖಾಕಿ ಗಸ್ತು

    8 ನಗರಗಳಲ್ಲಿ ನೈಟ್‍ಕರ್ಫ್ಯೂ ಮೊದಲ ದಿನ ಅಂತ್ಯ – ಕಂಡಕಂಡಲ್ಲಿ ಬ್ಯಾರಿಕೇಡ್, ಖಾಕಿ ಗಸ್ತು

    – ದಂಡ, ಲಾಠಿ ಏಟು, ವಾಹನ ಸೀಜ್

    ಬೆಂಗಳೂರು: ರಾಜ್ಯದ 7 ಜಿಲ್ಲೆಗಳ 8 ನಗರಗಳಲ್ಲಿ ಮೊದಲ ದಿನದ ನೈಟ್‍ಕರ್ಫ್ಯೂ ಮುಕ್ತಾಯವಾಗಿದ್ದು, ಇನ್ನೂ 9 ದಿನ ನೈಟ್‍ಕರ್ಫ್ಯೂ ಇರಲಿದೆ. ಬೆಂಗಳೂರು ನಗರ, ಮೈಸೂರು, ಮಂಗಳೂರು, ತುಮಕೂರು, ಕಲಬುರಗಿ, ಬೀದರ್, ಉಡುಪಿ, ಮಣಿಪಾಲದಲ್ಲಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ನೈಟ್‍ಕರ್ಫ್ಯೂ ಜಾರಿಯಲ್ಲಿದೆ. ಏಪ್ರಿಲ್ 20ರವರೆಗೆ ನೈಟ್‍ಕರ್ಫ್ಯೂ ಇರಲಿದೆ.

    ನೈಟ್‍ಕರ್ಫ್ಯೂ ಹಿನ್ನೆಲೆಯಲ್ಲಿ ರಾತ್ರಿ 10 ಗಂಟೆಗೆ ಎಲ್ಲ ವಾಣಿಜ್ಯ ಚಟುವಟಿಕೆಗಳು ಬಂದ್ ಆಗಿದ್ದವು. ಹೋಟೆಲ್, ಬೀದಿಬದಿ ಹೋಟೆಲ್‍ಗಳು, ಅಂಗಡಿ ಮುಂಗಟ್ಟುಗಳು, ಬಾರ್, ಪಬ್, ಕ್ಲಬ್, ರೆಸ್ಟೋರೆಂಟ್, ಮಾಲ್, ಥಿಯೇಟರ್ ಎಲ್ಲವೂ 10 ಗಂಟೆಯಷ್ಟೊತ್ತಿಗೆ ಬಾಗಿಲು ಹಾಕಿದ್ದವು. ನೈಟ್‍ಕರ್ಫ್ಯೂ ಹೇರಿಕೆ ಆಗಿರುವ ನಗರಗಳಲ್ಲಿ ಪೊಲೀಸರು ಪ್ರಮುಖ ರಸ್ತೆಗಳಲ್ಲಿ ಪೊಲೀಸರು ನಾಕಾಬಂಧಿ ಹಾಕಿದ್ದರು. ಮುಖ್ಯರಸ್ತೆ, ಫ್ಲೈಓವರ್ ಗಳನ್ನು ಬಂದ್ ಮಾಡಿದ್ದರು. ಆದರೆ ಖಾಸಗಿ ಕಂಪನಿಗಳಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರು ಐಡಿ ಕಾರ್ಡ್ ತೋರಿಸಿದರೆ ಓಡಾಡಲು ಅವಕಾಶ ಇದೆ. ಝೊಮ್ಯಾಟೋ, ಸ್ವಿಗ್ಗಿ ಸೇರಿದಂತೆ ಆನ್‍ಲೈನ್ ಹೋಂ ಡೆಲಿವರಿ ಸೇವೆ, ಆಸ್ಪತ್ರೆ, ಔಷಧಿ ಅಂಗಡಿಗಳಿಗೆ ರಾತ್ರಿ ಕರ್ಫ್ಯೂನಿಂದ ವಿನಾಯಿತಿ ನೀಡಲಾಗಿದೆ.

    ಬೆಂಗಳೂರು: ನೈಟ್‍ಕರ್ಫ್ಯೂ ಹಿನ್ನೆಲೆಯಲ್ಲಿ ರಾತ್ರಿ 10 ಗಂಟೆಯ ಬಳಿಕ ಬೆಂಗಳೂರು ನಗರ ಬಹುತೇಕ ಬಿಕೋ ಎನ್ನುತ್ತಿತ್ತು. ರಾಜಧಾನಿಯ ಪ್ರಮುಖ ಫ್ಲೈಓವರ್ ಗಳು, ಮುಖ್ಯರಸ್ತೆಗಳನ್ನು ಪೊಲೀಸರು ಬ್ಯಾರಿಕೇಡ್ ಹಾಕಿ ಬಂದ್ ಮಾಡಿದರು. 10 ಗಂಟೆ ಬಳಿಕವೂ ಓಡಾಡ್ತಿದ್ದ ವಾಹನ ಸವಾರರನ್ನು ತಪಾಸಣೆ ಬಿಗಿ ಆಗಿತ್ತು. ಯಶವಂತಪರದಲ್ಲಿ ಮಾಸ್ಕ್ ಹಾಕದೇ ಒಂದೇ ಕಾರಲ್ಲಿ ಪ್ರಯಾಣಿಸ್ತಿದ್ದ ನಾಲ್ವರಿಗೆ ಪೊಲೀಸರು ದಂಡ ವಿಧಿಸಿದರು. ನೈಟ್‍ಪಾರ್ಟಿಯ ಹಾಟ್‍ಸ್ಪಾಟ್ ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್‍ಸ್ಟ್ರೀಟ್, ಇಂದಿರಾ ನಗರದಲ್ಲಿ ರಾತ್ರಿ 10 ಗಂಟೆಯ ಬಳಿಕ ಎಲ್ಲವೂ ಬಂದ್ ಆಗಿತ್ತು. ಬನ್ನೇರುಘಟ್ಟದಲ್ಲಿ ಪೊಲೀಸರು ಬೈಕ್‍ಗಳನ್ನು ವಶಕ್ಕೆ ಪಡೆದು ದಂಡ ಹಾಕಿದರು.

    ಕಲಬುರಗಿ: ಕಲಬುರಗಿ ನಗರದಲ್ಲೂ ನೈಟ್‍ಕರ್ಫ್ಯೂ ಬಿಗಿಯಾಗಿತ್ತು. ನೈಟ್‍ಕರ್ಫ್ಯೂ ವೇಳೆಯೂ ಸಂಚರಿಸ್ತಿದ್ದ ಬೈಕ್ ಸವಾರನಿಗೆ ಪೊಲೀಸ್ ಅಧಿಕಾರಿಯೊಬ್ಬರು ಲಾಠಿಯಿಂದ ಬಾರಿಸಿದರು. ರಾತ್ರಿ 11 ಗಂಟೆ ವೇಳೆಗೆ ಶಾಸಕ ಜಮೀರ್ ಅಹ್ಮದ್ ಖಾನ್ ನೈಟ್‍ಕರ್ಫ್ಯೂ ನಡುವೆಯೂ ಓಡಾಡಿದರು. ಆದರೆ ಅವರ ವಾಹನವನ್ನು ಪೊಲೀಸರು ತಡೆಯಲಿಲ್ಲ. ಬಸವಕಲ್ಯಾಣದಲ್ಲಿ ಉಪ ಚುನಾವಣೆ ಪ್ರಚಾರ ಮುಗಿಸಿಕೊಂಡು ಖಾಸಗಿ ಕಾರ್ಯಕ್ರಮಕ್ಕಾಗಿ ಜಮೀರ್ ಕಲಬುರಗಿಗೆ ಬಂದಿದ್ದರು.

    ಮಂಗಳೂರು: ನೈಟ್‍ಕರ್ಫ್ಯೂ ವೇಳೆ ಮಂಗಳೂರಲ್ಲಿ ಪೊಲೀಸ್ ಜೀಪ್ ಮೇಲೆ ದುಷ್ಕರ್ಮಿಯೊಬ್ಬ ಕಲ್ಲು ತೂರಾಟ ನಡೆಸಿದ. ತೊಕ್ಕೊಟ್ಟು ಫ್ಲೈಓವರ್ ಕೆಳಗೆ ನಿಲ್ಲಿಸಿದ ಪೊಲೀಸ್ ಜೀಪ್‍ಗೆ ಕಲ್ಲು ಎಸೆದು ಬಳಿಕ ಪಕ್ಕದಲ್ಲೇ ಇದ್ದ ದೇವಸ್ಥಾನಕ್ಕೆ ನುಗ್ಗಿದ. ಆತನನ್ನು ಹಿಡಿದ ಸ್ಥಳೀಯರು ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದರು. ನೈಟ್‍ಕರ್ಫ್ಯೂ ಹಿನ್ನೆಲೆಯಲ್ಲಿ ಖುದ್ದು ಪೊಲೀಸ್ ಆಯುಕ್ತ ಶಶಿಕುಮಾರ್ ಗಸ್ತು ಕೈಗೊಂಡರು. ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ನಾಕಾಬಂಧಿ, ತಪಾಸಣೆಯನ್ನು ಬಿಗಿಗೊಳಿಸಿದ್ದರು. ಈ ವೇಳೆ ಯುವಕನೊಬ್ಬ ತನ್ನನ್ನು ಬಿಡುವಂತೆ ಪೊಲೀಸರ ಜೊತೆಗೆ ವಾಗ್ವಾದಕ್ಕಿಳಿದ ಘಟನೆಯೂ ನಡೆಯಿತು.

    ಮೈಸೂರು: ಮೈಸೂರು ನಗರದಲ್ಲಿ ನೈಟ್‍ಕರ್ಫ್ಯೂ ಬಿಗಿ ಆಗಿತ್ತು. ರಾತ್ರಿ 10 ಗಂಟೆ ಬಳಿಕ ಜನರ ಓಡಾಟ ಸ್ತಬ್ಧವಾಗಿತ್ತು. ನಗರ ಪೊಲೀಸ್ ಆಯುಕ್ತ ಡಾ ಚಂದ್ರಗುಪ್ತ ನೇತೃತ್ವದಲ್ಲಿ ಅಶ್ವಾರೋಹಿ ದಳ ಗಸ್ತು ತಿರುಗಿತು. ನಗರದಲ್ಲಿ ನೈಟ್‍ಕರ್ಫ್ಯೂ ಜಾರಿಗಾಗಿಯೇ 1,200 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ. ನಗರ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ನಾಕಾಬಂಧಿ, ತಪಾಸಣೆ ಎಲ್ಲವೂ ಬಿಗಿ ಆಗಿತ್ತು.

    ಬೀದರ್: ಬೀದರ್ ನಗರದಲ್ಲೂ ನೈಟ್‍ಕರ್ಫ್ಯೂ ಜಾರಿ ಬಿಗಿ ಆಗಿತ್ತು. ನೈಟ್‍ಕರ್ಫ್ಯೂ ಉಲ್ಲಂಘಿಸಿ ಓಡಾಡ್ತಿದ್ದವರಿಗೆ ಪೊಲೀಸರು ದಂಡ ಹಾಕಿದರು. ಕೆಲವರಿಗೆ ಎಚ್ಚರಿಕೆಯನ್ನೂ ನೀಡಿದರು. ನಗರದ ಬಸವೇಶ್ವರ ವೃತ, ಅಂಬೇಡ್ಕರ್ ವೃತ, ಹರಳಯ್ಯ ವೃತ, ಚೌಬಾರ್, ಗವಾನ್ ಚೌಕ್, ಬೊಮ್ಮಗೊಂಡೆಶ್ವರ ವೃತದಲ್ಲಿ ಪೊಲೀಸರ ತಪಾಸಣೆ ಹೆಚ್ಚಿತ್ತು.

    ಉಡುಪಿ: ಉಡುಪಿ, ಮಣಿಪಾಲದಲ್ಲೂ ಮೊದಲ ದಿನ ನೈಟ್‍ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿ ಆಗಿತ್ತು. ವಿದೇಶಿ, ಹೊರರಾಜ್ಯದ ವಿದ್ಯಾರ್ಥಿಗಳೇ ಹೆಚ್ಚಿರುವ ಮಣಿಪಾಲ ತಡರಾತ್ರಿವರೆಗೂ ಗಿಜಿಗುಡುವ ನಗರ. ಆದ್ರೆ ನೈಟ್‍ಕರ್ಫ್ಯೂ ಹಿನ್ನೆಲೆಯಲ್ಲಿ ರಾತ್ರಿ 10 ಗಂಟೆಗೆ ಎಲ್ಲವೂ ಸ್ತಬ್ಧ ಆಗಿತ್ತು. ಖುದ್ದು ಜಿಲ್ಲಾಧಿಕಾರಿ ಜಗದೀಶ್ ನೈಟ್‍ಕರ್ಫ್ಯೂ ಉಲ್ಲಂಘಿಸಿ ಓಡಾಡ್ತಿದ್ದವರಿಗೆ ಎಚ್ಚರಿಕೆ ನೀಡಿದರು.

  • ಇಂದಿನಿಂದ ಏಪ್ರಿಲ್ 20 ರವರೆಗೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೊರೊನಾ ಕರ್ಫ್ಯೂ

    ಇಂದಿನಿಂದ ಏಪ್ರಿಲ್ 20 ರವರೆಗೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೊರೊನಾ ಕರ್ಫ್ಯೂ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಎಲ್ಲಾ ಅವಶ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಪ್ರಸ್ತುತ ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹರಡುವಿಕೆ ಉಲ್ಬಣವಾಗಿದೆ. ನಿಯಂತ್ರಣ ಕಾರ್ಯ ಅವಶ್ಯಕವಾಗಿರುವುದರಿಂದ ರಾಜ್ಯ ಸರ್ಕಾರವು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಏ. 10 ರಿಂದ 20 ರ ವರೆಗೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5ಗಂಟೆಯವರೆಗೆ ಮುಂದಿನ ಆದೇಶದವರೆಗೆ ಕೊರೊನಾ ಕರ್ಫ್ಯೂ ಜಾರಿಗೊಳಿಸಿ ಆದೇಶಿಸಿದೆ. ಈ ಸಂದರ್ಭದಲ್ಲಿ ಕೆಳಕಂಡ ಅತ್ಯವಶ್ಯಕ ಸೇವೆಗಳಿಗೆ ಮಾತ್ರ ಅನುಮತಿಸಿ, ಉಳಿದಂತೆ ಎಲ್ಲಾ ಸೇವೆಗಳನ್ನು, ಸಂಚಾರಗಳನ್ನು ನಿಷೇಧಿಸಿ ಈ ಕೆಳಕಂಡಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ರಾಜೇಂದ್ರ ಕೆ.ವಿ ಆದೇಶ ಹೊರಡಿಸಿರುತ್ತಾರೆ.

    ವಿವಿಧ ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಮತ್ತು ಅವರ ಸಹಾಯಕರಿಗೆ ವೈದ್ಯಕೀಯ ಸೇವೆಗಾಗಿ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸುವಂತಹಎಲ್ಲಾ ಕಾರ್ಖಾನೆಗಳು/ಕಂಪನಿಗಳು /ಸಂಸ್ಥೆಗಳು ಯಥಾ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗಿದೆ. ಆದರೆ ಸಂಬಂಧಿಸಿದ ಕಾರ್ಮಿಕರು /ನೌಕರರು ಕರ್ಫ್ಯೂ ಅವಧಿಗೆ ಮುನ್ನವೇಕರ್ತವ್ಯದಲ್ಲಿ ಹಾಜರಿರಬೇಕು.

    ದೂರಸಂಪರ್ಕ ಮತ್ತು ಅಂತರ್ಜಾಲ ಸೇವಾ ಸಂಸ್ಥೆಗಳು ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಆಧಾರಿತ ಸಂಸ್ಥೆಗಳ ಸಿಬ್ಬಂದಿಗಳು ರಾತ್ರಿ ಪಾಳಿಯಲ್ಲಿ ಅಧಿಕೃತ ಕಚೇರಿ ಗುರುತಿನ ಚೀಟಿ ಹೊಂದಿ ಸಂಚರಿಸಲು ಅನುಮತಿ ನೀಡಲಾಗಿದೆ.

    ವೈದ್ಯಕೀಯ ಸೇವೆ ಮತ್ತು ತುರ್ತುಚಟುವಟಿಕೆಗೆ ಮಾತ್ರ ಅನುಮತಿ ನೀಡಲಾಗಿದ್ದು, ಇನ್ನುಳಿದಂತೆ ಎಲ್ಲಾ ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ಅತ್ಯವಶ್ಯಕ ಸೇವೆಗಳನ್ನು ಒದಗಿಸುವಂತಹ ವಾಹನಗಳು, ಸರಕು ಸಾಗಣಿಕೆ ವಾಹನಗಳು, ಹೋಮ್‍ಡೆಲಿವರಿ, ಇ-ಕಾಮರ್ಸ್ ಮತ್ತು ಖಾಲಿ ವಾಹನಗಳ ಸಂಚಾರಕ್ಕೆ ಮಾತ್ರಅನುಮತಿ ನೀಡಲಾಗಿದೆ. ರಾತ್ರಿ ವೇಳೆಯಲ್ಲಿನ ಬಸ್ಸು, ರೈಲು ಹಾಗೂ ವಿಮಾನದದೂರ ಪ್ರಯಾಣಕ್ಕೆ ಅನುಮತಿ ನೀಡಲಾಗಿದ್ದು, ಪ್ರಯಾಣಿಕರು ಮನೆಯಿಂದ ನಿಲ್ದಾಣಗಳಿಗೆ ಮತ್ತು ನಿಲ್ದಾಣಗಳಿಂದ ಮನೆಗೆ ಅಧಿಕೃತ ಟಿಕೆಟ್‍ಗಳ ಆಧಾರದ ಮೇಲೆ ಆಟೋ/ ಕ್ಯಾಬ್ ಇತ್ಯಾದಿಗಳ ಮೂಲಕ ಸಂಚರಿಸಬಹುದು.

    ಮೇಲಿನ ಆದೇಶಗಳನ್ನು ಪಾಲಿಸದೇ ಇರುವವರ ವಿರುದ್ಧ ವಿಪತ್ತು ನಿರ್ವಹಣಾಕಾಯ್ದೆ 2005, ಭಾರತೀಯ ದಂಡ ಸಂಹಿತೆ ಹಾಗೂ ಅನ್ವಯವಾಗಬಹುದಾದ ಇತರ ಕಾನೂನು ಉಪಬಂಧಗಳ ಅನುಸಾರ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

  • ಕೊರೊನಾ ಕರ್ಫ್ಯೂ ಮಾರ್ಗಸೂಚಿ ಪ್ರಕಟ -ಏನು ಇರುತ್ತೆ? ಏನು ಇರಲ್ಲ?

    ಕೊರೊನಾ ಕರ್ಫ್ಯೂ ಮಾರ್ಗಸೂಚಿ ಪ್ರಕಟ -ಏನು ಇರುತ್ತೆ? ಏನು ಇರಲ್ಲ?

    ಬೆಂಗಳೂರು: 7 ಜಿಲ್ಲೆಗಳ 8 ನಗರದಲ್ಲಿ ನೈಟ್ ಕರ್ಫ್ಯೂ ಶನಿವಾರ ರಾತ್ರಿಯಿಂದ ಜಾರಿಯಾಗಲಿದ್ದು ರಾಜ್ಯ ಸರ್ಕಾರ ಇಂದು ಮಾರ್ಗಸೂಚಿಯನ್ನು ಪ್ರಕಟಿಸಿದೆ.

    ಏ.10 ರಿಂದ ಏ.20ರವರೆಗೆ ಬೆಂಗಳೂರು ನಗರ, ಮೈಸೂರು, ಮಂಗಳೂರು, ಉಡುಪಿ, ಮಣಿಪಾಲ್, ಬೀದರ್, ಕಲಬುರಗಿ, ತುಮಕೂರಿನಲ್ಲಿ ಕೊರೊನಾ ಕರ್ಫ್ಯೂ ಜಾರಿಯಾಗಲಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಯಾವುದಕ್ಕೆ ಅನುಮತಿ ನೀಡಲಾಗಿದೆ ಎಂಬುದನ್ನು ಈ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

    ಈ ಮಾರ್ಗಸೂಚಿಯನ್ನು ಉಲ್ಲಂಘಿಸುವ ವ್ಯಕ್ತಿಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 51 ರಿಂದ 60, ಭಾರತೀಯ ದಂಡ ಸಂಹಿತೆ(ಐಪಿಸಿ) ಹಾಗೂ ಅನ್ವಯವಾಗುವ ಇತರ ಕಾನೂನುಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ.

    ಮಾರ್ಗಸೂಚಿಯಲ್ಲಿ ಏನಿದೆ?
    – ಅನಾರೋಗ್ಯದಿಂದ ಬಳಲುವರರಿಗೆ, ಅವರ ಸಹಾಯಕರಿಗೆ ಸಂಚಾರಕ್ಕೆ ಅವಕಾಶ.
    – ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸುವಂತಹ ಎಲ್ಲಾ ಕಾರ್ಖಾನೆಗಳು / ಕಂಪನಿಗಳು, ಸಂಸ್ಥೆಗಳು ಯಥಾರೀತಿ ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗಿದೆ. ಆದರೆ ಸಂಬಂಧಿಸಿದ ಕಾರ್ಮಿಕರು, ನೌಕರರು ಕೊರೊನಾ ಕರ್ಫ್ಯೂ ಅವಧಿಗೆ ಮುನ್ನವೇ ಕರ್ತವ್ಯದಲ್ಲಿ ಹಾಜರಿರತಕ್ಕದ್ದು.
    – ವೈದ್ಯಕೀಯ ಮತ್ತು ತುರ್ತು ಚಟುವಟಿಕೆಗಳಿಗೆ ಅವಕಾಶ.
    – ಎಲ್ಲ ವಾಣಿಜ್ಯ ಚಟುವಟಿಕೆಗಳು ಬಂದ್.


    – ಅವಶ್ಯಕ ಸೇವೆ ಒದಗಿಸುವ ವಾಹನಗಳು, ಸರಕು ಸಾಗಣೆ ವಾಹನಗಳು, ಹೋಂ ಡೆಲಿವರಿ ವಾಹನಗಳು, ಇ ಕಾಮರ್ಸ್ ಮತ್ತು ಖಾಲಿ ವಾಹನಗಳ ಸಂಚಾರಕ್ಕೆ ಮಾತ್ರ ಅನುಮತಿ.
    – ಬಸ್ಸು, ರೈಲು, ವಿಮಾನಗಳ ದೂರ ಪ್ರಯಾಣಕ್ಕೆ ಅವಕಾಶ.
    – ಬಸ್ ನಿಲ್ದಾಣ, ರೈಲು ನಿಕ್ದಾಣ, ವಿಮಾನ ನಿಲ್ದಾಣಗಳಿಗೆ ಹೋಗಲು ಅಧಿಕೃತ ಟಿಕೆಟ್‍ಗಳ ಆಧಾರದ ಮೇಲೆ ಆಟೋ, ಕ್ಯಾಬ್ ಬಳಕೆಗೆ ಅವಕಾಶ

  • 8 ನಗರಗಳಲ್ಲಿ ಏಪ್ರಿಲ್ 10 ರಿಂದ 20ರವರೆಗೆ ಕೊರೊನಾ ಕರ್ಫ್ಯೂ: ಸಿಎಂ ಬಿಎಸ್‍ವೈ

    8 ನಗರಗಳಲ್ಲಿ ಏಪ್ರಿಲ್ 10 ರಿಂದ 20ರವರೆಗೆ ಕೊರೊನಾ ಕರ್ಫ್ಯೂ: ಸಿಎಂ ಬಿಎಸ್‍ವೈ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಸಭೆ ಬಳಿಕ ಸಿಎಂ ಬಿ.ಎಸ್.ಯಡಿಯೂರಪ್ಪ, ರಾಜ್ಯದಲ್ಲಿ ಕೊರೊನಾ ಕರ್ಫ್ಯೂ ಘೋಷಣೆ ಮಾಡಿದ್ದಾರೆ. ಏಪ್ರಿಲ್ 10 ರಿಂದ 20ರವರೆಗೆ ಕೊರೊನಾ ಕರ್ಫ್ಯೂ ಜಾರಿಗೆ ಬರಲಿದೆ.

    ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬಿಎಸ್‍ವೈ, ಬೆಂಗಳೂರು, ಮೈಸೂರು, ಕಲಬುರಗಿ,  ಮಣಿಪಾಲ, ತುಮಕೂರು, ಬೀದರ್, ಉಡುಪಿ, ಮಂಗಳೂರು ನಗರಗಳಲ್ಲಿ ಪ್ರಾಯೋಗಿಕವಾಗಿ ಕೊರೊನಾ ಕರ್ಫ್ಯೂ ಬರಲಿದೆ. ಅಗತ್ಯ ಸೇವೆಗಳನ್ನ ಹೊರತುಪಡಿಸಿ ಎಲ್ಲ ಕಮರ್ಷಿಯಲ್ ಚಟುವಟಿಕೆಗಳ ಮೇಲೆ ನಿರ್ಬಂಧ ಹಾಕಲಾಗ್ತಿದೆ. ಲಾಕ್‍ಡೌನ್ ಬೇಡ ಅಂದ್ರೆ ಜನರು ಕೊರೊನಾ ನಿಯಮಗಳನ್ನ ಪಾಲಿಸಬೇಕು. ನಾಳೆಯಿಂದ ಮಾಸ್ಕ್ ಧರಿಸದಿದ್ದರೆ ದಂಡಾಸ್ತ್ರ ಪ್ರಯೋಗಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

    ಇದೇ ವೇಳೆ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್, ಕರ್ಫ್ಯೂ ಅಭಾದಿತ ಆಗಿರುತ್ತೆ. ವಾಹನ ಸಂಚಾರ ಇರಲಿದೆ. ಜನರಿಗೆ ಯಾವುದೇ ತೊಂದರೆ ಆಗದಂತೆ ನಿಯಮಗಳನ್ನ ತರಲಾಗುತ್ತದೆ. ಕೊರೊನಾ ಹೆಚ್ಚಳವಾಗಿರುವ ನಗರಗಳಲ್ಲಿ ಕೊರೊನಾ ಕರ್ಫ್ಯೂ ಜಾರಿಗೆ ಬರಲಿದೆ ಎಂದರು.

    ಎಂಟಯ ನಗರಗಳಲ್ಲಿ 10 ದಿನ ಪ್ರಾಯೋಗಿಕವಾಗಿ ಕೊರೊನಾ ಕರ್ಫ್ಯೂವನ್ನ ಸರ್ಕಾರ ಘೋಷಣೆ ಮಾಡಿದೆ. ಕರ್ಫ್ಯೂ ಅವಧಿ ವೇಳೆ ಹೊಟೇಲ್, ಬಾರ್, ಪಬ್, ನೈಟ್ ಪಾರ್ಟಿ, ರೆಸ್ಟೋರೆಂಟ್, ಸಿನಿಮಾಗಳು ಬಂದ್ ಆಗಲಿವೆ ಎನ್ನಲಾಗಿದೆ.