Tag: Corona Awareness

  • ಗುರಿ ಈಡೇರಿಸಿಕೊಳ್ಳುವ ಕಡೆಗೆ ಪ್ರಯತ್ನ ನಿರಂತರವಾಗಿರಲಿ: ಎಸ್.ಟಿ.ಸೋಮಶೇಖರ್

    ಗುರಿ ಈಡೇರಿಸಿಕೊಳ್ಳುವ ಕಡೆಗೆ ಪ್ರಯತ್ನ ನಿರಂತರವಾಗಿರಲಿ: ಎಸ್.ಟಿ.ಸೋಮಶೇಖರ್

    ಮೈಸೂರು: ಗುರಿ ಈಡೇರಿಸಿಕೊಳ್ಳುವ ಕಡೆಗೆ ಪ್ರಯತ್ನ ನಿರಂತರವಾಗಿರಲಿ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ್ದಾರೆ.

    ಕೋವಿಡ್ ಹಿನ್ನೆಲೆಯಲ್ಲಿ ದೀರ್ಘಕಾಲದ ನಂತರ 9, 10ನೇ ತರಗತಿ ಹಾಗೂ ಪದವಿ ಪೂರ್ವ ಕಾಲೇಜು ಭೌತಿಕ ತರಗತಿಗಳು ಆರಂಭವಾಗಿವೆ. ಈ ಹಿನ್ನೆಲೆಯಲ್ಲಿ ಎಸ್.ಟಿ.ಸೋಮಶೇಖರ್ ಅವರು ಬುಧವಾರ ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿ ಶುಭಕೋರಿದರು. ಇದನ್ನೂ ಓದಿ: ಮೈಸೂರಲ್ಲಿ ನಡೆದ ಗ್ಯಾಂಗ್‍ರೇಪ್ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು: ಸಿ.ಟಿ ರವಿ

    ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಮಹಾರಾಣಿ ಸಂಯುಕ್ತ ಕಾಲೇಜಿಗೆ ಭೇಟಿ ನೀಡಿದಾಗ, ಭೌತಿಕ ತರಗತಿಗಳು ಆರಂಭವಾಗಿರುವುದು ಖುಷಿ ತಂದಿದೆ ಎಂದು ವಿದ್ಯಾರ್ಥಿನಿಯರು ಸಚಿವರಿಗೆ ಹೇಳಿದರು.

    ಕುವೆಂಪುನಗರದ ಕರ್ನಾಟಕ ಪಬ್ಲಿಕ್ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಶೈಕ್ಷಣಿಕ ಆಶೋತ್ತರಗಳ ಬಗ್ಗೆ ಸಚಿವರು ವಿಚಾರಿಸಿದರು. ರಾಜಕಾರಣಿ ಆಗುವ ಬಯಕೆ ಯಾರಿಗಾದರೂ ಇದಿಯ ಎಂದು ಸಚಿವರು ಕೇಳಿದಾಗ ವಿದ್ಯಾರ್ಥಿಗಳು ನಕ್ಕು ಅಸಮ್ಮತಿ ತೋರಿದರು. ಇಂಜಿನಿಯರ್, ವೈದ್ಯ, ಐ.ಎ.ಎಸ್, ಐ.ಪಿ.ಎಸ್ ಆಗುವ ಬಗ್ಗೆ ಕೇಳಿದಾಗ ಹಲವರು ಕೈ ಮೇಲೆ ಎತ್ತಿ ತಮ್ಮ ಗುರಿ, ಬಯಕೆ ವ್ಯಕ್ತಪಡಿಸಿದರು. ತಮ್ಮ ಗುರಿ ಈಡೇರಿಸಿಕೊಳ್ಳುವ ಕಡೆಗೆ ತಮ್ಮ ಪ್ರಯತ್ನ ನಿರಂತರವಾಗಿರಲಿ ಎಂದು ಸಚಿವರು ಹಾರೈಸಿದರು.

    ಈ ಸಂದರ್ಭದಲ್ಲಿ ಶಾಸಕ ಎಸ್.ಎ. ರಾಮದಾಸ್, ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್. ನಾಗೇಂದ್ರ, ಜಿಲ್ಲಾ ಪಂಚಾಯಿತಿ ಸಿಇಒ ಎ.ಎಂ.ಯೋಗೀಶ್, ಮತ್ತಿತರರು ಉಪಸ್ಥಿತರಿದ್ದರು.

  • ಲಸಿಕೆ ಜೊತೆಗೆ ಆಹಾರ, ಜೀವನ ಪದ್ಧತಿ ಬದಲಿಸಿಕೊಳ್ಳಿ: ಲಕ್ಷ್ಮಿ ಹೆಬ್ಬಾಳ್ಕರ್

    ಲಸಿಕೆ ಜೊತೆಗೆ ಆಹಾರ, ಜೀವನ ಪದ್ಧತಿ ಬದಲಿಸಿಕೊಳ್ಳಿ: ಲಕ್ಷ್ಮಿ ಹೆಬ್ಬಾಳ್ಕರ್

    ಬೆಳಗಾವಿ: ಲಸಿಕೆ ಜೊತೆಗೆ ಆಹಾರ ಮತ್ತು ಜೀವನ ಪದ್ಧತಿ ಬದಲಿಸಿಕೊಳ್ಳಿ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕರೆ ನೀಡಿದ್ದಾರೆ.

    ಮಣ್ಣೂರು ಗ್ರಾಮದಲ್ಲಿ ಕೋವಿಡ್ ಲಸಿಕೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡಿದ ಅವರು, ಕೊರೊನಾ ಹೊಡೆದೋಡಿಸಲು ಲಸಿಕೆ ಹಾಕಿಸಿಕೊಳ್ಳುವ ಜೊತೆಗೆ ಮುಂದಿನ ದಿನಗಳಲ್ಲಿ ನಾವು ನಮ್ಮ ಆಹಾರ ಮತ್ತು ಜೀವನ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳುಬೇಕು. ನಿರಂತರವಾಗಿ ರೋಗಗಳ ವಿರುದ್ಧ ಹೋರಾಡುವಂತೆ ನಮ್ಮ ದೇಹವನ್ನು ಸಿದ್ಧಪಡಿಸಿಕೊಳ್ಳಬೇಕು ಎಂದಿದ್ದಾರೆ. ಇದನ್ನೂ ಓದಿ:  ನಿಕ್‍ಗೆ ಸಾರ್ವಜನಿಕ ಸ್ಥಳದಲ್ಲಿಯೇ ಕಿಸ್ ಕೊಟ್ಟ ಪ್ರಿಯಾಂಕಾ

    ಕೋವಿಡ್ ಲಸಿಕೆ ಇಂದು ಪ್ರತಿಯೊಬ್ಬರಿಗೂ ಅಗತ್ಯವಾಗಿದೆ. ಸಧ್ಯದ ಪರಿಸ್ಥಿತಿಯಲ್ಲಿ ಕೊರೊನಾ ವಿರುದ್ಧದ ಹೋರಾಟಕ್ಕೆ ಬೇರೆ ದಾರಿ ಇಲ್ಲ. ಹೀಗಾಗಿ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಬೇಕು. ಜೊತೆಗೆ ಮುಂದಿನ ದಿನಗಳಲ್ಲಿ ನಾವು ತಜ್ಞರ ಸಲಹೆ ಪಡೆದುಕೊಂಡು ನಮ್ಮ ಜೀವನ ಶೈಲಿಯನ್ನೇ ಬದಲಾಯಿಸಿಕೊಳ್ಳಬೇಕು. ಆಹಾರ ಪದ್ಧತಿಯಲ್ಲೂ ಸುಧಾರಣೆ ಮಾಡಿಕೊಳ್ಳಬೇಕು. ಎಂದು ಸಲಹೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಸ್ಥಳೀಯ ಜನ ಪ್ರತಿನಿಧಿಗಳು, ಮೃಣಾಲ ಲಕ್ಷ್ಮಿ ಹೆಬ್ಬಾಳ್ಕರ್, ಪಕ್ಷದ ಕಾರ್ಯಕರ್ತರು, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

  • ಮಾಸ್ಕ್ ಹಾಕಿಕೊಳ್ಳಿ ಎಂದು ಕೊರೊನಾ ಜಾಗೃತಿ ಮೂಡಿಸಿದ ಸುಮಲತಾ ಅಂಬರೀಶ್

    ಮಾಸ್ಕ್ ಹಾಕಿಕೊಳ್ಳಿ ಎಂದು ಕೊರೊನಾ ಜಾಗೃತಿ ಮೂಡಿಸಿದ ಸುಮಲತಾ ಅಂಬರೀಶ್

    ಮಂಡ್ಯ: ಮಾಸ್ಕ್ ಹಾಕಿಕೊಳ್ಳದ ಜನರನ್ನು ಮಾಸ್ಕ್ ಹಾಕಿಕೊಳ್ಳುವಂತೆ ಹೇಳಿ ಜನರಿಗೆ ಸಂಸದೆ ಸುಮಲತಾ ಅಂಬರೀಶ್ ಕೊರೊನಾ ಜಾಗೃತಿ ಮೂಡಿಸಿದ್ದಾರೆ.

    ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮಾರಸಿಂಗನಹಳ್ಳಿಯ ಕದಗಾರ್ ಗೂಳೇಶ್ವರಸ್ವಾಮಿ ದೇವಸ್ಥಾನದ ಕಳಶ ಪ್ರತಿಷ್ಠಾಪನ ಕಾರ್ಯಕ್ರಮಕ್ಕೆ ಸಂಸದೆ ಸುಮಲತಾ ಅಂಬರೀಶ್ ಅವರು ಆಗಮಿಸಿದ್ದರು. ದೇವಸ್ಥಾನದಲ್ಲಿ ದೇವರಿಗೆ ಪೂಜೆ ಸಲ್ಲಿಸುವ ವೇಳೆ ವೇಳೆ ಮಹಿಳೆಯರು ಸೇರಿದಂತೆ ಹಲವರು ಮಾಸ್ಕ್ ಹಾಕಿಕೊಂಡಿರಲಿಲ್ಲ. ಇದನ್ನು ಕಂಡ ಸಂಸದೆ ಸುಮಲತಾ ಅಂಬರೀಶ್ ಎಲ್ಲರೂ ದಯವಿಟ್ಟು ಮಾಸ್ಕ್ ಹಾಕಿಕೊಳ್ಳಿ ಈಗಾಗಲೇ ಸಾಕಷ್ಟು ಸಮಸ್ಯೆಗಳು ಬಂದಿವೆ ಎಂದು ಎಲ್ಲರಿಗೂ ಮಾಸ್ಕ್ ಹಾಕಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ:  ಜೆಸಿಬಿಯಿಂದ ನರೇಗಾ ಕಾಮಗಾರಿ ಮಾಡುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇನೆ: ಈಶ್ವರಪ್ಪ

    ಪೂಜೆಯ ಬಳಿಕ ದೇವಸ್ಥಾನದಿಂದ ಹೊರ ಭಾಗಕ್ಕೆ ಬಂದ ಸುಮಲತಾ ಅಂಬರೀಶ್ ಅವರನ್ನು ದೇವಸ್ಥಾನದ ಪಕ್ಕದ ಗಿಡಕ್ಕೆ ನೀರು ಹಾಕಲು ಗ್ರಾಮಸ್ಥರು ಕರೆದುಕೊಂಡು ಹೋದರು. ಈ ವೇಳೆ ಆರು ವರ್ಷದ ಹೆಣ್ಣು ಮಗು ಮಾಸ್ಕ್ ಹಾಕಿಕೊಳ್ಳದೆ ಸುಮಲತಾ ಅವರ ಬಳಿ ನಿಂತಿದ್ದಳು. ಆಗ ಸಂಸದೆ ಸುಮಲತಾ ಅವರು ಮಾಸ್ಕ್ ಹಾಕಿಕೊಳ್ಳಮ್ಮ ಎಂದು, ಮಗು ಕೈಯಲ್ಲಿ ಇದ್ದ ಮಾಸ್ಕ್ ತೆಗೆದುಕೊಂಡು ಸ್ವತಹ ಸುಮಲತಾ ಅವರೇ ಮಗುವಿಗೆ ಮಾಸ್ಕ್ ಹಾಕಿದರು.

  • 3 ಲಕ್ಷ ಮಾತ್ರೆ, 10 ಸಾವಿರ ಮಾಸ್ಕ್, 2 ಸಾವಿರ ಸ್ಯಾನಿಟೈಸರ್ ಬಳಸಿ ಸಾಯಿಬಾಬಾ ದೇವಸ್ಥಾನಕ್ಕೆ ವಿಶೇಷ ಅಲಂಕಾರ

    3 ಲಕ್ಷ ಮಾತ್ರೆ, 10 ಸಾವಿರ ಮಾಸ್ಕ್, 2 ಸಾವಿರ ಸ್ಯಾನಿಟೈಸರ್ ಬಳಸಿ ಸಾಯಿಬಾಬಾ ದೇವಸ್ಥಾನಕ್ಕೆ ವಿಶೇಷ ಅಲಂಕಾರ

    – ಗುರುಪೂರ್ಣಿಮೆ ಅಂಗವಾಗಿ ಜೆಪಿನಗರದ ಶ್ರೀ ಸತ್ಯ ಸಾಯಿ ಗಣಪತಿ ದೇವಸ್ಥಾನದಲ್ಲಿ ವಿಶೇಷ ಅಲಂಕಾರ
    – ಭಕ್ತಾದಿಗಳಿಗೆ ವಿಶೇಷ ಸುರಕ್ಷೆ ನೀಡಲು ಕರೋನಾ ಕಿಲ್ಲರ್ ಯಂತ್ರ ಅಳವಡಿಕೆ
    – ಒಂದು ವಾರದ ಬಳಿಕ ಒಂದು ಲಕ್ಷ ಕುಟುಂಬಕ್ಕೆ ಹಂಚುವ ನಿರ್ಧಾರ
    – ಸಂಸದ ತೇಜಸ್ವೀ ಸೂರ್ಯ ಅವರಿಂದ ಶ್ಲಾಘನೆ

    ಬೆಂಗಳೂರು: ಗುರುಪೂರ್ಣಿಮೆ ಅಂಗವಾಗಿ ಇಂದು ಜೆಪಿ ನಗರದ ಶ್ರೀ ಸತ್ಯ ಸಾಯಿ ಗಣಪತಿ ದೇವಸ್ಥಾನದಲ್ಲಿ 3 ಲಕ್ಷ ಮಾತ್ರೆ, 10 ಸಾವಿರ ಮಾಸ್ಕ್, 2 ಸಾವಿರ ಸ್ಯಾನಿಟೈಸರ್ ಬಳಸಿ ವಿಶೇಷ ಅಲಂಕಾರ ಮಾಡಿರುವುದನ್ನ ಕಂಡು ಭಕ್ತಾದಿಗಳು ಪುಳಕಿತರಾದರು.

    ಕೊರೊನಾ ಮೂರನೇ ಅಲೆಯ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವುದು ಹಾಗೂ ವಿಶೇಷ ವಾದ ಆಲಂಕಾರದಿಂದ ಜನರಿಗೆ ಉಪಯೋಗವಾಗಬೇಕು ಎನ್ನುವ ಉದ್ದೇಶದಿಂದ ಮಾತ್ರೆಗಳನ್ನು ಬಳಸಿಕ ಆಲಂಕಾರ ಮಾಡುವ ಯೋಜನೆಯನ್ನು ಕೈಗೆತ್ತುಕೊಳ್ಳಲಾಯಿತು. 3 ಲಕ್ಷ ಮಾತ್ರೆ, 10 ಸಾವಿರ ಮಾಸ್ಕ್, 2 ಸಾವಿರ ಸ್ಯಾನಿಟೈಸರ್ ಹಾಗೂ ರೇಷನ್ ಕಿಟ್ ನಲ್ಲಿ ಇರುವಂತಹ ಪದಾರ್ಥಗಳಿಂದ ಆಲಂಕಾರ ಮಾಡಿದ್ದೇವೆ. ಸುಮಾರು 4 ದಿನಗಳ ಕಾಲ ತಯಾರಿ ನಡೆಸಿದ್ದು, ಒಂದು ವಾರಗಳ ನಂತರ ಇಲ್ಲಿ ಬಳಸಲಾಗಿರುವ ಎಲ್ಲಾ ರೀತಿಯ ವಸ್ತುಗಳನ್ನು ಅಗತ್ಯವಿರುವ ಜನರಿಗೆ ನೀಡಲಿದ್ದೇವೆ ಎಂದು ಕಾರ್ಯಕ್ರಮದ ವ್ಯವಸ್ಥಾಪಕರು ಹಾಗೂ ಶ್ರೀ ಸತ್ಯ ಸಾಯಿ ಗಣಪತಿ ದೇವಸ್ಥಾನದ ಟ್ರಸ್ಟಿ ರಾಮ ಮೋಹನ ರಾಜ್ ತಿಳಿಸಿದರು.

    ಈ ವಿಶೇಷ ಅಲಂಕಾರವನ್ನು ಕಂಡು ಸಂಸದ ತೇಜಸ್ವೀ ಸೂರ್ಯ ಶ್ಲಾಘಿಸಿದರು. ಲಕ್ಷಾಂತರ ರೂಪಾಯಿಗಳನ್ನು ಖರ್ಚುಗೊಳಿಸಿ ಹಾಳಾಗುವಂತಹ ವಸ್ತುಗಳನ್ನು ಬಳಸಿ ಆಲಂಕಾರ ಮಾಡಿದರೆ ಅದರಿಂದ ಉಪಯೋಗವಾಗುವುದಿಲ್ಲ. ಇಂತಹ ವಿಭಿನ್ನ ಆಲೋಚನೆಯಿಂದಾಗಿ ಆಲಂಕಾರವೂ ಆಗುತ್ತದೆ ಹಾಗೆಯೇ ನಂತರ ಅದರ ಸದುಯೋಗವೂ ಆಗುತ್ತದೆ. ಈ ನಿಟ್ಟಿನಲ್ಲಿ ವಿಭಿನ್ನ ಆಲೋಚನೆ ಮಾಡಿರುವ ಮಾಜಿ ಉಪಮಹಾಪೌರರಾದ ರಾಮ ಮೋಹನ ರಾಜ್ ಅವರ ಕಾರ್ಯ ಶ್ಲಾಘನೀಯ ಎಂದರು. ಇದನ್ನೂ ಓದಿ: ದೊಡ್ಮನೆಯಲ್ಲಿ ಮತ್ತೊಮ್ಮೆ ಅರವಿಂದ್‍ಗೆ ಸಿಕ್ತು ಬಿಗ್‍ಬಾಸ್ ಪಟ್ಟ

    ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತೆ ಕವಿತಾ ಮಾತನಾಡಿ, ಲಾಕ್‍ಡೌನ್ ನಲ್ಲಿ ಮನೆಯಿಂದ ಹೊರಗೆ ಹೋಗದೆ ಬಹಳಷ್ಟು ಬೇಸರಕ್ಕೀಡಾಗಿದ್ದೇವು. ಲಾಕ್‍ಡೌನ್ ಸಡಲಿಕೆಗೊಂಡ ನಂತರ ಇಂತಹ ವಿಭಿನ್ನ ಆಲೋಚನೆಯ ಆಲಂಕಾರ ಮಾಡಿರುವ ದೇವಸ್ಥಾನಕ್ಕೆ ಭೇಟಿ ನೀಡದ್ದು ಸಂತಸವಾಯಿತು ಎಂದು ಹೇಳಿದರು. ಇದನ್ನೂ ಓದಿ: RRR ಆಡಿಯೋ ರೈಟ್ಸ್ ಲಹರಿ ಪಾಲು

  • ಕೊರೊನಾ ಜಾಗೃತಿ – ಪವರ್ ಸ್ಟಾರ್ ಹೇಳಿದ 5 ಸೂತ್ರಗಳ್ಯಾವುದು ಗೊತ್ತಾ?

    ಕೊರೊನಾ ಜಾಗೃತಿ – ಪವರ್ ಸ್ಟಾರ್ ಹೇಳಿದ 5 ಸೂತ್ರಗಳ್ಯಾವುದು ಗೊತ್ತಾ?

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಕೊರೊನಾದಿಂದ ನಮ್ಮನ್ನು ನಾವು ಹೇಗೆ ರಕ್ಷಿಸಿಕೊಳ್ಳಬಹುದು ಎಂಬುವುದಕ್ಕೆ 5 ಸಲಹೆ ನೀಡಿದ್ದಾರೆ.

    ಕೊರೊನಾ ಎರಡನೇ ಅಲೆಯಿಂದಾಗಿ ಅನೇಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಲವರು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ರಾಜ್ಯದಲ್ಲಿ ಕೊರೊನಾ ಲಾಕ್‍ಡೌನ್ ಘೋಷಿಸಿದ್ದರೂ, ದಿನದಿಂದ ದಿನ ಅತೀ ವೇಗವಾಗಿ ಹರಡುತ್ತಿರುವ ಕೊರೊನಾದಿಂದ ಮುಕ್ತಿ ಪಡೆಯಲು ಜನರು ಕೆಲವು ನಿಯಮಗಳನ್ನು ಪಾಲಿಸಬೇಕು ಎಂದು ನಟ ಪುನೀತ್ ರಾಜ್ ಕುಮಾರ್ ವೀಡಿಯೋವೊಂದನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಮನವಿ ಮಾಡಿದ್ದಾರೆ. ಜೊತೆಗೆ ಕೊರೊನಾ ಎರಡನೆ ಅಲೆಯು ಎಲ್ಲರ ಮೇಲೂ ಪರಿಣಾಮ ಬೀರುತ್ತಿದೆ. ಈ ಮಾರಕ ವೈರಸ್ ವಿರುದ್ಧ ಹೋರಾಡಲು ನಾವೆಲ್ಲರೂ ಒಟ್ಟಾಗಿ ಸೇರಬೇಕಾಗಿದೆ. ನಾವು ಸುರಕ್ಷಿತವಾಗಿರೋಣ ಮತ್ತು ನಮ್ಮ ಸುತ್ತಲಿರುವವರನ್ನು ಸುರಕ್ಷಿತವಾಗಿರಿಸೋಣ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    ಕೊರೊನಾ ಜಾಗೃತಿ ಅಭಿಯಾನಕ್ಕೆ ಕೈ ಜೋಡಿಸಿರುವ ಪುನೀತ್ ರಾಜ್ ಕುಮಾರ್‍ರವರು ಕೆಲವು ಸಾಕ್ಷ್ಯ ಚಿತ್ರಗಳ ಮೂಲಕ 5 ಸೂತ್ರಗಳನ್ನು ತಿಳಿಸಿದ್ದಾರೆ. ವೀಡಿಯೋದಲ್ಲಿ, ಕೊರೊನಾ ಟೆಸ್ಟ್ ರಿಪೋರ್ಟ್‍ಗಾಗಿ ಕಾಯುತ್ತಿದ್ದೀರಾ ಅಥವಾ ಕೊರೊನಾ ಇರುವುದು ದೃಢವಾಗಿದ್ಯಾ? ಹಾಗಾದರೆ ಪ್ರತಿ ಮನೆಯಲ್ಲಿಯೂ ಜೊತೆಯಾಗಿ ಕೊರೊನಾ ಗೆಲ್ಲಿ ಎಂದಿದ್ದಾರೆ. ಈ ವೇಳೆ ಇಬ್ಬರು ಮಕ್ಕಳನ್ನು ಸಂಯಮ ಹಾಗೂ ಎಚ್ಚರದ ಮಾತಿನಂತೆ ಬಿಂಬಿಸಿ 5 ಸೂತ್ರಗಳನ್ನು ತಿಳಿಸಿದ್ದಾರೆ.

    *ಜಾಗರೂಕತೆಯಿಂದ ಒಂದು ಪ್ರತ್ಯೇಕ ಕೊಠಡಿಯಲ್ಲಿ ಕನಿಷ್ಠ ಪಕ್ಷ ಒಬ್ಬರೇ ಉಳಿದು ಬಿಡಿ.
    *ಸ್ವತಃ ಚಿಕಿತ್ಸೆ ಮಾಡಿಕೊಳ್ಳದೇ ವೈದ್ಯರನ್ನು ಸಂಪರ್ಕಿಸಿ.
    *ಮನೆಯಲ್ಲಿರುವವರು ಕಾಲಕಾಲಕ್ಕೆ ಸೋಪಿನಿಂದ ಕೈ ತೋಳಿಯುವಂತೆ ನೋಡಿಕೊಳ್ಳಿ.
    *ನೀವು ಕೊರೊನಾ ಸೋಂಕಿತರನ್ನು ಮನೆಯಲ್ಲಿಯೇ ನೋಡಿಕೊಳ್ಳುತ್ತಿದ್ದರೆ, ಮಾಸ್ಕ್‍ನನ್ನು ಮೂಗು ಹಾಗೂ ಬಾಯಿಯನ್ನು ಮುಚ್ಚುವಂತೆ ಸರಿಯಾಗಿ ಧರಿಸಿ.
    *ಮುಂದಿನ ಕೆಲವು ದಿನಗಳಲ್ಲಿ ಜ್ವರ ಕಡಿಮೆಯಾಗದಿದ್ದರೆ ಹಾಗೂ ಉಸಿರಾಟದ ತೊಂದರೆಯಾಗುತ್ತಿದ್ದರೆ, ನಿಮ್ಮ ವೈದ್ಯರನ್ನು ಸಂಪರ್ಕಿಸಿ, ವೈದ್ಯರು ಸೂಚಿಸಿದರೆ ಮಾತ್ರ ಹತ್ತಿರ ಆಸ್ಪತ್ರೆಯನ್ನು ಸಂಪರ್ಕಿಸಿ.

    ಹೀಗೆ ಸಂಯಮ ಹಾಗೂ ಎಚ್ಚರವನ್ನು ತಿಳಿಸುತ್ತಿರುವ ಈ 5 ಸೂತ್ರಗಳನ್ನು ಪಾಲಿಸಿದರೆ ನಾವು ಖಂಡಿತ ಕೊರೊನಾವನ್ನು ಸೋಲಿಸಬಹುದು. ಪ್ರತಿ ಮನೆಯು ಪಣ ತೊಟ್ಟಿದೆ ಎಂದ ಮೇಲೆ ಕೊರೊನಾ ಖಂಡಿತ ಸೋಲುತ್ತದೆ ಎಂದಿದ್ದಾರೆ.

     

  • ಚಿತ್ರ ಕಲೆಯ ಮೂಲಕ ಕೊರೊನಾ ಜಾಗೃತಿ ಮೂಡಿಸುತ್ತಿದ್ದಾರೆ ಕೊಡಗಿನ ಯುವಕರು

    ಚಿತ್ರ ಕಲೆಯ ಮೂಲಕ ಕೊರೊನಾ ಜಾಗೃತಿ ಮೂಡಿಸುತ್ತಿದ್ದಾರೆ ಕೊಡಗಿನ ಯುವಕರು

    ಮಡಿಕೇರಿ: ಕೊಡಗು ಜಿಲ್ಲೆಯ ಯುವಕರಿಬ್ಬರು ರಸ್ತೆಯಲ್ಲಿ ಚಿತ್ರ ಬರೆದು ಸಾರ್ವಜನಿಕರಿಗೆ ಕೊರೊನಾ ಜಾಗೃತಿ ಮೂಡಿಸುತ್ತಿದ್ದಾನೆ.

    ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಿದೆ. ನಗರ ಪ್ರದೇಶ ಅಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿಯೂ ಕೊರೊನಾ ಮಾಹಾಮಾರಿ ಹೆಚ್ಚುತ್ತಿದ್ದು, ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಈ ಮಧ್ಯೆ ಚಿತ್ರ ಕಲಾವಿದರಿಬ್ಬರು ತನ್ನ ಸ್ವಂತ ಖರ್ಚಿನಲ್ಲಿ ಕೊಡಗು ಜಿಲ್ಲೆಯ ವಿವಿಧೆಡೆ ಹೋಗಿ ರಸ್ತೆಯಲ್ಲಿ ಚಿತ್ರ ಬರೆದು ಸಾರ್ವಜನಿಕರಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಕಾಯಕದಲ್ಲಿ ತೊಡಗಿದ್ದಾನೆ.

    ಕೊಡಗು ಜಿಲ್ಲೆಯ ಪೊನ್ನಂಪೇಟೆ ಕಲಾವಿದರಾದ ಗಣಿ ಆಟ್ಸ್ ತಂಡದಿಂದ ಕೊಡಗಿನ ಮಡಿಕೇರಿ, ಗೋಣಿಕೋಪ್ಪ, ಪೊನ್ನಂಪೇಟೆ ಮೂರ್ನಾಡ್ ಸೇರಿದಂತೆ ವಿವಿಧೆಡೆ ಹೋಗಿ ಕೊರೊನಾದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

    ಇಂದು ಕೋಡ ಮಡಿಕೇರಿ ನಗರದ ಜನರಲ್ ತಿಮ್ಮಯ್ಯ ವೃತ್ತದ ರಸ್ತೆಯಲ್ಲಿ ಚಿತ್ರವನ್ನು ಬರೆದು ಜನರು ಮಾಸ್ಕ್ ಹಾಕಿ ಕೊರೊನಾ ಓಡಿಸಿ. ನನ್ನ ಮಾಸ್ಕ್ ನನ್ನ ಲಸಿಕೆ ಸಂದೇಶಗಳ ಚಿತ್ರವನ್ನು ಬರೆದು ಜಾಗೃತಿ ಮೂಡಿಸುತ್ತಿದ್ದಾರೆ. ಈ ಯುವಕರ ಸಾಮಾಜಿಕ ಸೇವೆಗೆ ಮಡಿಕೇರಿ ನಗರದ ಟ್ರಾಫಿಕ್ ಪೊಲೀಸರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

  • ಮನೆ ಮನೆಗೆ ತೆರಳಿ ಪಾಠದ ಜೊತೆ ಕೊರೊನಾ ಜಾಗೃತಿ ಮೂಡಿಸ್ತಿರೋ ಶಿಕ್ಷಕರು

    ಮನೆ ಮನೆಗೆ ತೆರಳಿ ಪಾಠದ ಜೊತೆ ಕೊರೊನಾ ಜಾಗೃತಿ ಮೂಡಿಸ್ತಿರೋ ಶಿಕ್ಷಕರು

    ರಾಯಚೂರು: ಕೋವಿಡ್ 19 ಅಟ್ಟಹಾಸದಿಂದ ಜನಜೀವನವೇ ಬದಲಾಗಿದೆ. ಶಾಲಾ ಕಾಲೇಜುಗಳು ಯಾವಾಗ ಆರಂಭವಾಗುತ್ತವೆ ಅನ್ನೋ ಸ್ಪಷ್ಟತೆ ಇನ್ನೂ ಮೂಡಿಲ್ಲ. ಹೀಗಾಗಿ ಮಕ್ಕಳ ಅಕ್ಷರಭ್ಯಾಸ ತಪ್ಪಬಾರದು ಅಂತ ಶಾಲೆಗೆ ಬೀಗ ಹಾಕಿದ್ರೂ ರಾಯಚೂರಿನ ಲಿಂಗಸುಗೂರಿನಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಮನೆ ಬಾಗಿಲಿಗೆ ತೆರಳಿ ಪಾಠ ಮಾಡುತ್ತಿದ್ದಾರೆ.

    ತಾಲೂಕಿನ ಪುಟ್ಟಹಳ್ಳಿ ಕೆಸರಟ್ಟಿ ಗ್ರಾಮದ ಮುಖ್ಯೋಪಾಧ್ಯಾಯ ಚಂದ್ರಶೇಖರಪ್ಪ ಹಾಗೂ ಸಹ ಶಿಕ್ಷಕರು ಮಧ್ಯಾಹ್ನದವರೆಗೆ ವಿದ್ಯಾರ್ಥಿಗಳ ಮನೆಗೆ ತೆರಳಿ ಪಾಠ ಹೇಳುತ್ತಿದ್ದಾರೆ. ಹೋಂ ವರ್ಕ್ ಕೊಟ್ಟು ಮರುದಿನ ಬಂದು ಪರಿಶೀಲಿಸುತ್ತಿದ್ದಾರೆ. ಪಾಠದ ಜೊತೆಗೆ ಮಕ್ಕಳು ಹಾಗೂ ಪೋಷಕರಿಗೆ ಕೊರೊನಾ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

    ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಪಾಠ ಮಾಡುತ್ತಾರೆ. ಮಕ್ಕಳಿಗೆ ನೀಡಿದ ಹೋಂ ವರ್ಕ್‍ನ್ನ ಮಾಡಿಸುವಂತೆ ಪೋಷಕರಿಗೆ ಸೂಚನೆ ನೀಡುತ್ತಿದ್ದಾರೆ. ಮಕ್ಕಳ ಶಿಕ್ಷಣದಲ್ಲಿ ಪೋಷಕರ ಪಾತ್ರ, ಗ್ರಾಮದ ಸ್ವಚ್ಛತೆ ಬಗ್ಗೆಯೂ ಅರಿವು ಮೂಡಿಸುತ್ತಿದ್ದಾರೆ. ಶಿಕ್ಷಕರ ನಡೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಕೊರೊನಾ ಜಾಗೃತಿ ಮೂಡಿಸುತ್ತಾ ತರಕಾರಿ ವ್ಯಾಪಾರ- ವಿಡಿಯೋ ನೋಡಿ

    ಕೊರೊನಾ ಜಾಗೃತಿ ಮೂಡಿಸುತ್ತಾ ತರಕಾರಿ ವ್ಯಾಪಾರ- ವಿಡಿಯೋ ನೋಡಿ

    -ಮೂರ್ನಾಲ್ಕು ಭಾಷೆಗಳಲ್ಲಿ ವ್ಯಾಪಾರ

    ಕೋಲಾರ: ಇಡೀ ವಿಶ್ವವನ್ನೇ ಹೆಮ್ಮಾರಿ ಕೊರೊನಾ ವೈರಸ್ ಭಾದಿಸುತ್ತಿದ್ದು, ಎಲ್ಲಿ ಹೋದ್ರೆ ಏನಾಗುತ್ತೊ, ಏನ್ ತಿಂದ್ರೆ ಏನ್ ಬರುತ್ತೊ ಅಂತಾ ಜನ ಭಯಭೀತರಾಗಿದ್ದಾರೆ. ಈ ನಡುವೆ ಕೋಲಾರದ ರೈತ ತಾನು ಬೆಳೆದ ತರಕಾರಿಯನ್ನ ಬೈಕ್ ನಲ್ಲಿ ಇಟ್ಟುಕೊಂಡು ಊರೂರು ಸುತ್ತಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಾ ಮಾರಾಟ ಮಾಡುತ್ತಿದ್ದಾರೆ.

    ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ರಾಜೇನಹಳ್ಳಿಯ ರೈತ ಯಲ್ಲಪ್ಪ ಮೂರ್ನಾಲ್ಕು ಭಾಷೆಗಳಲ್ಲಿ ಜೋರಾಗಿ ಕೂಗುತ್ತಾ ಸೊಪ್ಪು ತರಕಾರಿ ಮಾರುತ್ತಿದ್ದಾರೆ. ಜಾದೂಗಾರನಂತೆ ಮೂರ್ನಾಲ್ಕು ಭಾಷೆಗಳಲ್ಲಿ ಸೊಪ್ಪು, ತರಕಾರಿ ಹೆಸರು ಹೇಳುವ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಕೊರೊನಾ ಆತಂಕದ ನಡುವೆ ತರಕಾರಿ ವ್ಯಾಪಾರಿ ವಿಭಿನ್ನ ಪ್ರಯತ್ನ, ವಿವಿಧ ಭಾಷೆಯಲ್ಲಿ ಮಾತನಾಡುತ್ತ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಕನ್ನಡ, ತೆಲುಗು, ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುತ್ತಾ ತರಕಾರಿ ಮಾರುತ್ತಾರೆ.

    ಯಲ್ಲಪ್ಪ ತರಕಾರಿ ಮಾರುವ ಶೈಲಿಗೆ ಜನರು ಫಿದಾ ಆಗಿದ್ದಾರೆ. ರೈತ ಯಲ್ಲಪ್ಪ ತರಕಾರಿ ಮಾರುವ ವಿಡಿಯೋಗಳು ಸ್ಥಳೀಯ ಮಟ್ಟದಲ್ಲಿ ವೈರಲ್ ಆಗಿದೆ.

  • ರಾಯಚೂರು ಪೊಲೀಸರಿಂದ ಬೀದಿನಾಟಕ-ಯಮನ ವೇಷ ಧರಿಸಿ ಜನ ಜಾಗೃತಿ

    ರಾಯಚೂರು ಪೊಲೀಸರಿಂದ ಬೀದಿನಾಟಕ-ಯಮನ ವೇಷ ಧರಿಸಿ ಜನ ಜಾಗೃತಿ

    ರಾಯಚೂರು: ಯಮನ ವೇಷ ಧರಿಸಿ ಪೊಲೀಸ್ ಸಿಬ್ಬಂದಿ ಜನರನ್ನ ಚದುರಿಸುವ ಮೂಲಕ ರಾಯಚೂರಿನಲ್ಲಿ ಕೊರೊನಾ ಜಾಗೃತಿ ಮೂಡಿಸಿದರು. ಲಾಕ್‍ಡೌನ್ ಸಡಿಲಿಕೆ ಹಾಗೂ ಮದ್ಯದಂಗಡಿ ಆರಂಭ ಹಿನ್ನೆಲೆ ಜನರ ಓಡಾಟ ಹೆಚ್ಚಾಗಿದ್ದು, ಪೊಲೀಸ್ ಇಲಾಖೆ ಜನ ಜಾಗೃತಿಗೆ ಮುಂದಾಗಿದೆ.

    ಪೊಲೀಸ್ ಸಿಬ್ಬಂದಿಗಳೇ ವೇಷ ಹಾಕಿಕೊಂಡು ಬೀದಿನಾಟಕ ಮಾಡಿದರು. ನೂರಾರು ಜನ ಪೊಲೀಸರು ನಗರದ ವಿವಿಧ ರಸ್ತೆಗಳಲ್ಲಿ ಪರೇಡ್ ಮಾಡುವ ಮೂಲಕ ಜನರಲ್ಲಿ ಕೊರೊನಾ ಬಗ್ಗೆ ತಿಳುವಳಿಕೆ ಮೂಡಿಸಿದರು. ಪೊಲೀಸರಿಗೆ ಚಪ್ಪಾಳೆ ಮೂಲಕ ರಸ್ತೆಗಳಲ್ಲಿ ಸ್ವಾಗತಿಸಿದ ಸಾರ್ವಜನಿಕರು ವ್ಯಾಪಾರಿಗಳು ಹೂವಿನ ಹಾರ ಹಾಕಿ ಸನ್ಮಾನಿಸಿದರು.

    ಲಾಕ್‍ಡೌನ್ ನಲ್ಲಿ ಬಹುತೇಕ ವಿನಾಯಿತಿ ಸಿಕ್ಕಿರುವುದರಿಂದ ಜನ ಎಗ್ಗಿಲ್ಲದೆ ಅನಾವಶ್ಯಕವಾಗಿ ಓಡಾಡುತ್ತಿದ್ದಾರೆ. ಇದರಿಂದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ. ಹೀಗಾಗಿ ಈಗಲೇ ಲಾಕ್‍ಡೌನ್ ಮುಗಿದಿಲ್ಲ. ಮೇ 17 ರ ವರೆಗೆ ಲಾಕ್‍ಡೌನ್ ಮುಂದುವರಿಯುತ್ತೆ. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು, ಸಾಮಾಜಿಕ ಅಂತರ ಕಾಪಾಡಬೇಕು ಅಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಪರೇಡ್ ವೇಳೆ ಹೇಳಿದ್ದಾರೆ.

  • ‘ಲಾಕ್‍ಡೌನ್ ಪಾಲಿಸಿ ಗೋಲ್ಡ್, ಫ್ರಿಡ್ಜ್, ವಾಷಿಂಗ್‍ ಮಿಷನ್ ಬಹುಮಾನವಾಗಿ ಪಡೆಯಿರಿ’

    ‘ಲಾಕ್‍ಡೌನ್ ಪಾಲಿಸಿ ಗೋಲ್ಡ್, ಫ್ರಿಡ್ಜ್, ವಾಷಿಂಗ್‍ ಮಿಷನ್ ಬಹುಮಾನವಾಗಿ ಪಡೆಯಿರಿ’

    – ಗ್ರಾಮ ಪಂಚಾಯಿತಿಯಿಂದ ವಿನೂತನ ಕ್ರಮ

    ತಿರುವನಂತಪುರ: ಕೊರೊನಾ ವೈರಸ್ ಹರಡುವುದನ್ನು ತಡೆಯಲು ಸರ್ಕಾರ ಲಾಕ್‍ಡಾನ್ ಜಾರಿ ಮಾಡಿದೆ. ಜನರಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸಿ ಮನೆಯಲ್ಲೇ ಉಳಿಯುವಂತೆ ಮಾಡಲು ಪೊಲೀಸರು, ಅಧಿಕಾರಿಗಳು ಹರ ಸಾಹಸ ಮಾಡುತ್ತಿದ್ದಾರೆ. ಆದರೆ ಕೇರಳದ ಗ್ರಾಮ ಪಂಚಾಯತಿಯೊಂದು ವಿಶೇಷ ಸ್ಪರ್ಧೆ ಏರ್ಪಡಿಸುವ ಮೂಲಕ ಜನರಲ್ಲಿ ಲಾಕ್‍ಡೌನ್ ನಿಯಮಗಳನ್ನು ಪಾಲನೆ ಮಾಡುವಂತೆ ಮನವಿ ಮಾಡಿದೆ.

    ಕೇರಳದ ಮಲಪ್ಪುರಂ ಜಿಲ್ಲೆಯ ತಜ್ಹೆಕ್ಕೊಡ್ ಗ್ರಾಮ ಪಂಚಾಯಿತಿ ತನ್ನ ವ್ಯಾಪ್ತಿಯ ನಿವಾಸಿಗಳಿಗೆ ಲಾಕ್‍ಡೌನ್ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಲು ಮನವಿ ಮಾಡಿದೆ. ಅಲ್ಲದೇ ಯಾರು ಸರ್ಕಾರದ ನಿಯಮಗಳನ್ನು ಪಾಲನೆ ಮಾಡುತ್ತಾರೋ ಅಂತಹವರಿಗೆ ಮೊದಲ ಮೂರು ಬಹುಮಾನಗಳಾಗಿ ಗೋಲ್ಡ್, ಫ್ರೀಡ್ಜ್ ಹಾಗೂ ವಾರ್ಷಿಂಗ್ ಮಿಷನ್ ನೀಡುವುದಾಗಿ ಹೇಳಿದೆ. ಅಲ್ಲದೇ ಇತರೇ 50 ಬಹುಮಾನಗಳನ್ನು ಕೂಡ ನೀಡುವುದಾಗಿ ತಿಳಿಸಿದೆ.

    ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಪಂಚಾಯತ್ ಅಧ್ಯಕ್ಷ ಎಕೆ ನಸಾರ್, ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ 10 ಸಾವಿರ ಕುಟುಂಗಳಿವೆ. ಕೆಲ ಮಂದಿಯನ್ನು ಲಾಕ್‍ಡೌನ್ ನಿಯಮಗಳನ್ನು ಪಾಲನೆ ಮಾಡುತ್ತಿರುವ ಬಗ್ಗೆ ಮಾಹಿತಿ ದಾಖಲಿಸಿಕೊಳ್ಳಲು ಸೂಚನೆ ನೀಡಿದ್ದೇವೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಸ್ವಯಂ ಸೇವಕರನ್ನು ಸ್ಪರ್ಧೆಯಿಂದ ಹೊರಗಿಡಲಾಗಿದೆ ಎಂದು ತಿಳಿಸಿದ್ದಾರೆ.

    ಮೇ 3ರ ಬಳಿಕ ಲಾಕ್‍ಡೌನ್ ಅಂತ್ಯವಾಗುವ ಸೂಚನೆ ಇದೆ. ಆ ವೇಳೆಗೆ ಸ್ವಯಂ ಸೇವಕರಿಂದ ಮಾಹಿತಿ ಸಂಗ್ರಹಿಸಿ ಮನೆಯಿಂದ ಯಾರು ಹೊರಹೋಗಿಲ್ಲ ಎಂದು ಹೇಳುವ ಎಲ್ಲರಿಗೂ ಅಫಿಡವಿಡ್ ಕೇಳುತ್ತೇವೆ. ಅಂತಹ ಎಲ್ಲಾ ಕುಟುಂಗಳಿಗೂ ಕೂಪನ್ ನೀಡಿ ಲಕ್ಕಿ ಡ್ರಾ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಗುವುದು ಎಂದಿದ್ದಾರೆ.

    ದೇಶದಾದ್ಯಂತ ಎಲ್ಲಾ ರಾಜ್ಯಗಳಲ್ಲೂ ಪೊಲೀಸರು ಹಾಗೂ ಆರೋಗ್ಯ ಅಧಿಕಾರಿಗಳು ಕೊರೊನಾ ಕುರಿತು ಜಾಗೃತಿ ಮೂಡಿಸಲು ವಿಭಿನ್ನ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ರಸ್ತೆ ಮೇಲೆ ಕೊರೊನಾ ಜಾಗೃತಿ ಚಿತ್ರ, ಟ್ರಾಫಿಕ್ ಸಿಗ್ನಲ್‍ಗಳಲ್ಲಿ ಕೊರೊನಾದಂತೆ ವೇಷ ಧರಿಸಿ ಜಾಗೃತಿ ಮೂಡಿಸುತ್ತಿರುವ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಆದರೂ ಸಾಕಷ್ಟು ಮಂದಿ ನಿಯಮಗಳನ್ನು ಉಲ್ಲಂಘಿಸುತ್ತಿರುವ ಕಾರಣ ಕೇರಳದ ಗ್ರಾಮಪಂಚಾಯಿತಿ ಹೊಸ ಕಾರ್ಯಕ್ರಮಕ್ಕೆ ಮುಂದಾಗಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.