Tag: cops

  • ಆಸ್ಪತ್ರೆ ಸೇರಿದ್ದ ತಾಯಿಗಾಗಿ ಹಣ ಹಾಕಲು ಹೊರಟಿದ್ದವನಿಗೆ ಚಾಕು ತೋರಿಸಿ ದರೋಡೆ

    ಆಸ್ಪತ್ರೆ ಸೇರಿದ್ದ ತಾಯಿಗಾಗಿ ಹಣ ಹಾಕಲು ಹೊರಟಿದ್ದವನಿಗೆ ಚಾಕು ತೋರಿಸಿ ದರೋಡೆ

    – ತಾಯಿ ಆಸ್ಪತ್ರೆ ವೆಚ್ಚಕ್ಕಾಗಿ ಬ್ಯಾಂಕ್ ಖಾತೆಗೆ ಹಣ ಹಾಕಲು ಹೊರಟಿದ್ದ

    ಬೆಂಗಳೂರು: ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ತಾಯಿಯ ವೈದ್ಯಕೀಯ ನೆರವಿಗಾಗಿ ಬ್ಯಾಂಕ್ ಖಾತೆಗೆ ಹಣ ಹಾಕಲು ಹೋಗುತ್ತಿದ್ದ ಯುವಕನನ್ನು ಗುರಿಯಾಗಿಸಿಕೊಂಡು ಬಂದು, ಹಣ ದರೋಡೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಭಾರತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅ.17 ರಂದು ಈ ಘಟನೆ ನಡೆದಿದೆ. ಪತ್ರಾಸ್ ಗುರಿಯಾ ಹಣ ಕಳೆದುಕೊಂಡ ಯುವಕ. ಚಾಕು ತೋರಿಸಿ ಈತನಿಂದ 27 ಸಾವಿರ ರೂ. ಹಣ ದರೋಡೆ ಮಾಡಲಾಗಿದೆ.

    ಅಸ್ಸಾಂ ಮೂಲದ ಪತ್ರಾಸ್ ಗುರಿಯಾ, 2012ರಲ್ಲಿ ಬೆಂಗಳೂರಿಗೆ ಬಂದು ಹೊಟ್ಟೆ ಪಾಡಿಗಾಗಿ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದ. ಅವಿವಾಹಿತನಾಗಿದ್ದ ಈತ ಕೋಲ್ಸ್ ಪಾರ್ಕ್ ಬಳಿಯ ಅಪಾರ್ಟ್ ಮೆಂಟ್ ವೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಅಸ್ಸಾಂನಲ್ಲಿರುವ ಈತನ ತಾಯಿ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವೈದ್ಯಕೀಯ ಚಿಕಿತ್ಸೆಗೆ ತಗುಲುವ ಹಣ ಹೊಂದಿಸುತ್ತಿದ್ದ ಈತ ಹಲವು ತಿಂಗಳಿಂದ ಕೂಡಿಟ್ಟ 27 ಸಾವಿರ ಹಣ ಜೇಬಿನಲ್ಲಿಟ್ಟುಕೊಂಡು ಇದೇ ತಿಂಗಳು ತಾಯಿಯ ಬ್ಯಾಂಕ್ ಖಾತೆ ಹಣ ಹಾಕಲು ನಿರ್ಧರಿಸಿದ್ದ.

    ಬ್ಯಾಂಕಿಗೆ ಹೋಗಲು ಅಪಾರ್ಟ್ ಮೆಂಟ್ ಮಾಲೀಕರೊಬ್ಬರ ಸೂಟ್ಕರ್ ಪಡೆದಿದ್ದಾರೆ. 27 ಸಾವಿರ ರೂ. ಹಣವನ್ನು ಪ್ಯಾಂಟ್ ಜೇಬಿನಲ್ಲಿಟ್ಟುಕೊಂಡು ಬ್ಯಾಂಕ್ ನತ್ತ ಪ್ರಯಾಣ ಬೆಳೆಸಿದ್ದ. ಯುವಕನ ಬಳಿ ಹಣ ಇರುವುದನ್ನು ಅರಿತ ದರೋಡೆಕೋರರು ಬೈಕ್ ಹಿಂಬಾಲಿಸಿದ್ದಾರೆ. ಬಳಿಕ ಪ್ರೇಜರ್ ಟೌನ್ ನ ಐಟಿಸಿ ಬಳಿ ಪ್ರತಾಸ್ ಗುರಿಯಾ ಬೈಕ್‍ನನ್ನು ಅಡ್ಡಗಟ್ಟಿ ಚಾಕು ತೋರಿಸಿ ಜೇಬಿನಲಿದ್ದ 27 ಸಾವಿರ ಹಣ ಡರೋಡೆ ಮಾಡಿ ಪರಾರಿಯಾಗಿದ್ದಾರೆ. ಈ ಸಂಬಂಧ ಭಾರತಿ ನಗರ ಪೊಲೀಸ್ ಠಾಣೆಗೆ ಹೋಗಿ ನಡೆದ ವಿಷಯ ಹೇಳಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಕೃತ್ಯ ಸೆರೆಯಾಗಿರುವ ಸಿಸಿಟಿವಿ ದೃಶ್ಯಾವಳಿ ಆಧರಿಸಿ ದರೋಡೆಕೋರರ ಪತ್ತೆಗೆ ಶೋಧ ಕಾರ್ಯ ನಡೆಸಿದ್ದಾರೆ.

  • ಸಾರಿ ಅಮ್ಮ ಮುಂದಿನ ಜನ್ಮದಲ್ಲಿ ನಿಮ್ಮ ಋಣ ತೀರಿಸ್ತೇನೆ- ಸೆಲ್ಫಿ ವಿಡಿಯೋ ಮಾಡಿ ಪ್ರೇಮಿಗಳು ಆತ್ಮಹತ್ಯೆ

    ಸಾರಿ ಅಮ್ಮ ಮುಂದಿನ ಜನ್ಮದಲ್ಲಿ ನಿಮ್ಮ ಋಣ ತೀರಿಸ್ತೇನೆ- ಸೆಲ್ಫಿ ವಿಡಿಯೋ ಮಾಡಿ ಪ್ರೇಮಿಗಳು ಆತ್ಮಹತ್ಯೆ

    – ಎಲ್ಲರನ್ನ ಬಿಟ್ಟು ಹೋಗ್ತಿದ್ದೀನಿ, ಮಿಸ್ ಯು
    – ವಿಡಿಯೋದಲ್ಲಿ ಬಿಕ್ಕಿ ಬಿಕ್ಕಿ ಅತ್ತ ಜೋಡಿ

    ಯಾದಗಿರಿ: ಅಂತರ್ ಜಾತಿ ಹಿನ್ನೆಲೆ ಮನೆಯಲ್ಲಿ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಪ್ರೇಮಿಗಳಿಬ್ಬರು ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಯಾದಗಿರಿ ಜಿಲ್ಲೆಯಲ್ಲಿ ಘಟನೆ ನಡೆದಿದೆ.

    ಯಾದಗಿರಿ ತಾಲೂಕಿನ ಗೊಂದಡಗಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಪ್ರೀತಿಗೆ ಪೋಷಕರು ಅಡ್ಡಿಪಡಿಸಿದ್ದರಿಂದ ಪ್ರೇಮಿಗಳು ಗ್ರಾಮದ ಕಲ್ಯಾಣಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹನುಮಂತಪ್ಪ(21), ಮಹಾದೇವಿ (17) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಹನುಮಂತ ಮತ್ತು ಮಹಾದೇವಿ ಕಳೆದ ಎರಡು ವರ್ಷಗಳಿಂದ ಗಾಢವಾಗಿ ಪ್ರೀತಿಸುತ್ತಿದ್ದರು. ಅನ್ಯ ಜಾತಿಯವರಾಗಿದ್ದರಿಂದ, ಹುಡುಗಿಯ ಮನೆಯಲ್ಲಿ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು.

    ಒಂದು ವಾರದ ಹಿಂದೆ ಮಾಹಾದೇವಿಯ ಮನೆಯವರಿಗೆ ಇವರ ಪ್ರೀತಿಯ ವಿಷಯ ತಿಳಿದಿತ್ತು. ಪೋಷಕರು ಹನುಮಂತನನ್ನು ಪ್ರೀತಿ ಮಾಡುವುದನ್ನು ನಿಲ್ಲಿಸುವಂತೆ ಮಹಾದೇವಿಗೆ ಒತ್ತಾಯ ಮಾಡಿದ್ದರು. ಹೀಗಾಗಿ ಬುಧವಾರ ಗ್ರಾಮದ ಹೊರ ವಲಯದಲ್ಲಿರುವ ಕಲ್ಯಾಣಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ವೇಳೆ ಪ್ರೇಮಿಗಳು ತಮ್ಮ ಕುಟುಂಬ ಹಾಗೂ ತಂದೆ, ತಾಯಿಯರ ಕ್ಷಮೆ ಕೇಳಿದ್ದಾರೆ.

    ಇಂದು ಇಬ್ಬರ ಮೃತದೇಹಗಳು ನೀರಿನಲ್ಲಿ ಮೇಲೆ ತೇಲಿದಾಗ ಆತ್ಮಹತ್ಯೆ ವಿಚಾರ ಬಹಿರಂಗವಾಗಿದೆ. ಸೈದಾಪುರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ವಿಡಿಯೋದಲ್ಲಿ ಹೇಳಿರುವುದೇನು?
    ವಿಡಿಯೋದಲ್ಲಿ ಮಾತನಾಡಿರುವ ಪ್ರೇಮಿಗಳು, ಸಾರಿ ಅಮ್ಮ ಮುಂದಿನ ಜನ್ಮದಲ್ಲಿ ನಿನ್ನ ಋಣ ತೀರಿಸುತ್ತೇನೆ. ಸಾರಿ ನನ್ನಿಂದ ತಪ್ಪಾಗಿದೆ, ಐ ಮಿಸ್ ಯು ಅಣ್ಣ. ಎಲ್ಲರನ್ನೂ ಬಿಟ್ಟು ಹೊರಟಿದ್ದೇನೆ ಎಂದು ವಿಡಿಯೋದಲ್ಲಿ ಹುಡುಗ ಹೇಳಿದ್ದಾನೆ. ವಿಡಿಯೋದಲ್ಲಿ ಪ್ರೇಮಿಗಳಿಬ್ಬರೂ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

  • ಕೊಲೆ ಆರೋಪಿಗಳ ಸುಳಿವು ನೀಡಿದ ಎಟಿಎಂ ಕಾರ್ಡ್

    ಕೊಲೆ ಆರೋಪಿಗಳ ಸುಳಿವು ನೀಡಿದ ಎಟಿಎಂ ಕಾರ್ಡ್

    – ಡಬಲ್ ಮರ್ಡರ್ ಮಾಡಿದ್ದ 6 ಆರೋಪಿಗಳು ಅಂದರ್

    ಹಾಸನ: ತೋಟದ ಮನೆಯಲ್ಲಿ ವೃದ್ಧ ದಂಪತಿಯ ಜೋಡಿ ಕೊಲೆ ಪ್ರಕರಣರಣಕ್ಕೆ ಸಂಬಂಧಿಸಿದಂತೆ ಆರು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಜಿಲ್ಲೆಯ ಚನ್ನರಾಯಪಟ್ಟಣ ಪೊಲೀಸರು 6 ಜನ ಆರೋಪಿಗಳನ್ನು ಬಂಧಿಸಿದ್ದು, ಮಂಜಶೆಟ್ಟಿ(23), ಪ್ರಸಾದ್(25), ನಂದನ್ ಕುಮಾರ್(33), ಯೋಗಾನಂದ(29), ಭರತ್(24), ಮಧು(25) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಸುಮಾರು 15 ಲಕ್ಷ ಮೌಲ್ಯದ 316 ಗ್ರಾಂ ಚಿನ್ನ, ಎರಡು ಕೆಜಿ 250 ಗ್ರಾಂ ಬೆಳ್ಳಿ, ಸುಮಾರು 25 ಸಾವಿರ ನಗದು, ಮೂರು ಮೊಬೈಲ್ ಫೋನ್, ಒಂದು ಕಾರು, ಮೂರು ಬೈಕ್ ವಶಕ್ಕೆ ಪಡೆಯಲಾಗಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆಯೇ ಇಬ್ಬರು ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು ಅವರ ಮಾಹಿತಿ ಮೇರೆಗೆ ಉಳಿದ ನಾಲ್ವರನ್ನು ಬಂಧಿಸಿದ್ದಾರೆ. ಆರೋಪಿಗಳು ದಂಪತಿಯ ಎಟಿಎಂ ಕಾರ್ಡ್‍ನಿಂದ ಹಣ ಪಡೆಯಲು ಹೋಗಿದ್ದರಿಂದ ಆರೋಪಿಗಳ ಹುಡುಕಾಟದಲ್ಲಿದ್ದ ಪೊಲೀಸರಿಗೆ ಸುಳಿವು ಸಿಕ್ಕಿದ್ದು, ಎಟಿಎಂ ಮೂಲಕ ಎಲ್ಲರನ್ನೂ ಬಂಧಿಸಲು ಸಾಧ್ಯವಾಗಿದೆ.

    ಈ ಕುರಿತು ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳೆಲ್ಲ ಪೊಲೀಸರ ವಶವಾಗಿದ್ದು, ತನಿಖಾ ತಂಡಕ್ಕೆ ಎಸ್‍ಪಿ ಶ್ರೀನಿವಾಸ್‍ಗೌಡ ಅಭಿನಂದನೆ ಸಲ್ಲಿಸಿದ್ದಾರೆ. ಆಗಸ್ಟ್ 29 ರಂದು ಚನ್ನರಾಯಪಟ್ಟಣ ತಾಲೂಕಿನ, ಆಲಗೊಂಡನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ಮುರಳೀಧರ್ ಮತ್ತು ಉಮಾದೇವಿ ದಂಪತಿಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು.

  • ಪ್ರೀತಿಸಿ ಮದುವೆಯಾದ ಜೋಡಿ- ಯುವಕನಿಗೆ ಯುವತಿ ತಂದೆಯಿಂದ ಜೀವ ಬೆದರಿಕೆ

    ಪ್ರೀತಿಸಿ ಮದುವೆಯಾದ ಜೋಡಿ- ಯುವಕನಿಗೆ ಯುವತಿ ತಂದೆಯಿಂದ ಜೀವ ಬೆದರಿಕೆ

    – ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಮಾಡುವುದಾಗಿ ಬೆದರಿಕೆ

    ಬೀದರ್: ಹುಡುಗ ಬಡವ ಎನ್ನುವ ಕಾರಣಕ್ಕೆ ವಿವಾಹಿತ ಪ್ರೇಮಿಗಳಿಗೆ ಯುವತಿಯ ತಂದೆ ಜೀವ ಬೆದರಿಕೆ ಹಾಕಿರುವ ಘಟನೆ ಬೀದರ್ ನಲ್ಲಿ ನಡೆದಿದೆ.

    ಬೀದರ್ ತಾಲೂಕಿನ ಅಣದೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಔತಣಕೂಟದಲ್ಲಿ ಹುಡುಗಿ ತಂದೆಯ ಕಡೆಯಿಂದ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಲಾಗಿದೆ. ಅಲ್ಲದೆ ಗುಂಡು ಹಾರಿಸಿ ಯುವಕನ ಕುಟುಂಬಸ್ಥರನ್ನು ಕೊಲೆ ಮಾಡುವುದಾಗಿ ಯುವತಿಯ ತಂದೆ ಮಗಳಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ.

    ಹಲವು ವರ್ಷಗಳಿಂದ ಪ್ರೀತಿಸಿ, ಕಳೆದ ಫೆಬ್ರವರಿಯಲ್ಲಿ ರಿಜಿಸ್ಟರ್ ಮದುವೆಯಾಗುವ ಮೂಲಕ ಪ್ರೇಮಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಇದೀಗ ಹುಡುಗ ಬಡವನೆಂದು ತಿಳಿದ ಯುವತಿಯ ತಂದೆ ವಿಶ್ವನಾಥ್, ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಮಾಡುವುದಾಗಿ ಫೋನ್ ನಲ್ಲಿ ಬೆದರಿಕೆ ಹಾಕಿದ್ದಾನೆ. ಯಶವಂತ್ ಹಾಗೂ ಸ್ನೇಹ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ನಂತರ ರಿಜಿಸ್ಟರ್ ಮದುವೆಯಾಗಿದ್ದಾರೆ. ಹುಡುಗಿ ತಂದೆ ವಿಶ್ವನಾಥ್ ಸರ್ಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕನಾಗಿದ್ದು, ರಾಜಕೀಯವಾಗಿ ಗುರುತಿಸಿಕೊಂಡಿದ್ದಾನೆ. ಹೀಗಾಗಿ ಬೆದರಿಕೆ ಹಾಕುತ್ತಿದ್ದಾನೆ.

    ಬೀದರ್ ತಾಲೂಕಿನ ಅಣದೂರು ಗ್ರಾಮದಲ್ಲಿ ದಂಪತಿ ಔತಣಕೂಟ ನೀಡುವಾಗ ಹುಡುಗಿ ತಂದೆಯ ಕಡೆಯ ಹತ್ತಾರು ಪುಂಡರ ಗುಂಪೊಂದು ಹುಡುಗನ ಕುಟುಂಬಸ್ಥರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದೆ. ಹೀಗಾಗಿ ನಮಗೆ ಜೀವ ಭಯವಿದೆ ರಕ್ಷಣೆ ನೀಡಿ ಎಂದು ಎಸ್‍ಪಿ ಗೆ ದೂರು ನೀಡಲು ಪ್ರೇಮಿಗಳು ನಿರ್ಧಾರ ಮಾಡಿದ್ದಾರೆ. ಈಗಾಗಲೇ ಅಪಹರಣ, ಗಲಭೆ, ಜೀವ ಬೆದರಿಕೆ ಸೇರಿದಂತೆ ಸಂಬಂಧಿಸಿದ ಕಾಯ್ದೆಯಡಿ ಜನವಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಎಸ್‍ಪಿ ಡಿ.ಎಲ್.ನಾಗೇಶ್ ಮಾಹಿತಿ ನೀಡಿದ್ದಾರೆ.

  • ಒಂದೇ ವಾರದಲ್ಲಿ 10 ಕಡೆ ದರೋಡೆ, ಯುವಕನ ಕೊಲೆ- ಜನರಲ್ಲಿ ಆತಂಕ

    ಒಂದೇ ವಾರದಲ್ಲಿ 10 ಕಡೆ ದರೋಡೆ, ಯುವಕನ ಕೊಲೆ- ಜನರಲ್ಲಿ ಆತಂಕ

    ಬೆಂಗಳೂರು: ನಗರದ ಹೊರವಲಯ ಆನೇಕಲ್ ಪಟ್ಟಣದಲ್ಲಿ ದಿನನಿತ್ಯ ಒಂದಲ್ಲ ಒಂದು ಕಡೆ ಕಳ್ಳರು ತಮ್ಮ ಕೈ ಚಳಕ ತೋರುತ್ತಲೇ ಇದ್ದಾರೆ. ಜೊತೆಗೆ ಕೊಲೆ ಬೇರೆ ನಡೆದಿದೆ. ಇಷ್ಟೆಲ್ಲ ಅಪರಾಧ ಪ್ರಕರಣಗಳು ನಡೆಯುತ್ತಿದ್ದರೂ ಪಟ್ಟಣದ ಪೊಲೀಸರು ಮಾತ್ರ ಅಪರಾಧಿಗಳನ್ನ ಮಟ್ಟ ಹಾಕಲು ಮುಂದಾಗುತ್ತಿಲ್ಲ. ಈ ಹಿನ್ನೆಲೆ ಪಟ್ಟಣದಲ್ಲಿ ಅಪಾರ ಪ್ರಕರಣಗಳು ಹೆಚ್ಚಾಗುತ್ತಿದ್ದು ಅಲ್ಲಿನ ಸಾರ್ವಜನಿಕರಲ್ಲಿ ಆತಂಕ ಎದುರಾಗಿದೆ.

    ಆನೇಕಲ್ ಪಟ್ಟಣದಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ ಯುವಕನೊರ್ವನ ಕೊಲೆ ನಡೆದಿತ್ತು. ಜೊತೆಗೆ ಕಳ್ಳರು ಹಾಡಹಗಲೇ ಮನೆಯೊಂದರ ಬೀಗ ಮುರಿದು ಹಣ ಒಡವೆ ಕದ್ದು ಪರಾರಿಯಾಗಿದ್ದರು. ಇದೆಲ್ಲ ನೋಡಿದ ಜನತೆ ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದೆಯೇ ಅನ್ನೋ ಆತಂಕದಲ್ಲಿ ಇದ್ದಾರೆ.

    ಒಂದೆಡೆ ಕೊಲೆ ಪ್ರಕರಣ ನಡೆದಿದ್ದರೆ ಮತ್ತೊಂದೆಡೆ ಪಟ್ಟಣದ ಮಾರುತಿ ಬಡಾವಣೆಯಲ್ಲಿ ಹಾಡಹಗಲೇ ರಮೇಶ್ ಎಂಬವರ ಮನೆಯಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ಮನೆಯವರು ಹೊರಹೋಗೋದನ್ನೇ ಗಮನಿಸಿ ಕೇವಲ 10 ನಿಮಿಷದಲ್ಲಿ ಮನೆ ಬೀಗ ಮುರಿದು ಮನೆಯಲ್ಲಿದ್ದ 400 ಗ್ರಾಂ ಚಿನ್ನ, 40 ಸಾವಿರ ನಗದನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಅಕ್ಕಪಕ್ಕ ನೂರಾರು ಮನೆಗಳಿದ್ರೂ ಯಾರಿಗೂ ಅನುಮಾನ ಬರದಂತೆ ಕಳ್ಳರು ತಮ್ಮ ಚಲಾಕಿತನ ಮೆರೆದಿರುವುದು ಜನತೆಯಲ್ಲಿ ಆತಂಕಕ್ಕೆ ಕಾರಣವಾಗಿದೆ.

    ಇನ್ನೂ ಆನೇಕಲ್ ಪಟ್ಟಣದ ಮುಟ್ಟಕಟ್ಟಿ ಬಳಿ ರಾತ್ರಿ ಪಾರ್ಟಿ ಮಾಡಲು ಬಂದ ಯುವಕರ ಗುಂಪೊಂದು ಮದ್ಯದ ಅಮಲಿನಲ್ಲಿ ಜೊತೆಯಲ್ಲಿ ಬಂದಿದ್ದ ಗುಮ್ಮಳಪುರದ ಲೋಕೆಶ್(30)ನನ್ನು ಮದ್ಯದ ಬಾಟಲಿಯಿಂದ ಹೊಡೆದು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆಮಾಡಿ ಪರಾರಿಯಾಗಿದ್ದಾರೆ. ಕೊಲೆಯಾದ ಜಾಗದಲ್ಲಿ ಕೆಎ.51ಎಚ್.ಎಫ್.9207 ಹೋಂಡಾ ಡಿಯೋ ಬೈಕ್ ಪತ್ತೆಯಾಗಿದೆ. ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

    ಇತ್ತೀಚೆಗೆ ಆನೇಕಲ್ ಪಟ್ಟಣದ ಹೊರಭಾಗದಲ್ಲಿ ರಾತ್ರಿ ವೇಳೆ ತೋಪುಗಳ ಬಳಿ ಖಾಲಿ ಬಡಾವಣೆಗಳಲ್ಲಿ ಯುವಕರು ಪಾರ್ಟಿ ನಡೆಸುವುದು ಹೆಚ್ಚಾಗಿದ್ದು, ಪೊಲೀಸರು ರಾತ್ರಿ ವೇಳೆ ಗಸ್ತು ತಿರುಗುವುದು ಕಡಿಮೆಯಾಗಿರುವುದೇ ಈ ರೀತಿಯ ಪ್ರಕರಣಗಳು ಹೆಚ್ಚಾಗಲು ಕಾರಣ ಎಂಬುದು ಸಾರ್ವಜನಿಕರ ಆರೋಪವಾಗಿದೆ.

    ಆನೇಕಲ್ ಪಟ್ಟಣದಲ್ಲಿ ಸುಮಾರು 15 ದಿನಗಳಲ್ಲಿ ಅಂಗಡಿ ಮನೆಗಳಲ್ಲಿ ಕಳ್ಳರು ತಮ್ಮ ಕರಾಮತ್ತು ತೋರಿದ್ದು, ಸುಮಾರು 20ಕ್ಕೂ ಹೆಚ್ಚು ಕಳ್ಳತನ ನಡೆದಿದೆ. ಕೆಲವೊಂದು ಕಡೆ ಕಳ್ಳತನ ಮಾಡುತ್ತಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದುವರೆಗೂ ಯಾವೊಬ್ಬ ಕಳ್ಳನನ್ನ ಆನೇಕಲ್ ಪೊಲೀಸರು ಬಂಧಿಸದಿರುವುದು ಪಟ್ಟಣದಲ್ಲಿ ಕಳ್ಳರು ಪುಂಡ ಪೋಕರಿಗಳಿಗೆ ಪೊಲೀಸರ ಭಯವಿಲ್ಲದಂತ ವಾತಾವರಣ ಉಂಟಾಗಿದೆ. ಇಷ್ಟೆಲ್ಲ ಪ್ರಕರಣ ವರದಿಯಾಗಿದ್ರು ಪೊಲೀಸರು ಇದೂವರೆಗೆ ಒಂದೇ ಒಂದು ಪ್ರಕರಣವನ್ನು ಪತ್ತೆಹಚ್ಚದಿರುವುದು ಪಟ್ಟಣದ ಜನತೆಯ ಸಿಟ್ಟು, ಆತಂಕಕ್ಕೆ ಕಾರಣವಾಗಿದೆ ಎಂದು ಮನೆಯ ಮಾಲೀಕರಾದ ಶುಭಾ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನನ್ನ ಮದ್ವೆ ನಿಲ್ಲಿಸಲು ಸಹಾಯ ಮಾಡಿ: ಪೊಲೀಸ್ ಠಾಣೆಯ ಮೆಟ್ಟಿಲೇರಿದ 12ರ ಬಾಲೆ

    ನನ್ನ ಮದ್ವೆ ನಿಲ್ಲಿಸಲು ಸಹಾಯ ಮಾಡಿ: ಪೊಲೀಸ್ ಠಾಣೆಯ ಮೆಟ್ಟಿಲೇರಿದ 12ರ ಬಾಲೆ

    ಕೋಲ್ಕತ್ತ: 13 ವರ್ಷದ ಬಾಲಕಿಯೊಬ್ಬಳು ಶಾಲಾ ಉಡುಪಿನಲ್ಲೇ ನನ್ನ ಮದುವೆ ನಿಲ್ಲಿಸಲು ಸಹಾಯ ಮಾಡಿ, ನಾನಿನ್ನು ಓದಬೇಕು ಎಂದು ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.

    ನನ್ನ ತಂದೆ ನನಗೆ ಮದುವೆ ಮಾಡಲು ಸಿದ್ಧತೆ ನಡೆಸಿದ್ದಾರೆ. ನನಗೆ ಈ ಮದುವೆ ಇಷ್ಟವಿಲ್ಲ. ನಾನು ಓದಬೇಕು ಎಂದು ಓಸಿ ಸುಭಾಷ್ ಚಂದ್ರ ಘೋಷ್ ಅವರ ಬಳಿ 6ನೇ ತರಗತಿ ಓದುತ್ತಿದ್ದ ಬಾಲಕಿ ಕಣ್ಣೀರು ಹಾಕಿದ್ದಾಳೆ. ಬಾಲಕಿಯ ಅಕ್ರಂದನವನ್ನು ಆಲಿಸಿದ ಪೊಲೀಸರು, ಈಗ ಮದುವೆ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ಪೋಷಕರಿಗೆ ಬುದ್ಧಿವಾದ ಹೇಳಿಸಿ ಮದುವೆಯನ್ನು ನಿಲ್ಲಿಸಿದ್ದಾರೆ.

    ಏನಿದು ಘಟನೆ?
    ಬಾಲಕಿಯ ತಂದೆ ಮದುವೆ ಮಾಡಲು 6 ತಿಂಗಳಿಂದ ವರನನ್ನು ಹುಡುಕುತ್ತಿದ್ದರು. ಕೊನೆಗೆ ಪೋಷಕರು ಬಾಂಗರ್ ನಲ್ಲಿದ್ದ ಚಂದ್ರನೇಶ್ವರ ಹಳ್ಳಿಯಲ್ಲಿ ವರನನ್ನು ಹುಡುಕಿ ಮದುವೆ ಮಾಡಲು ಸಿದ್ಧತೆ ನಡೆಸುತ್ತಿದ್ದರು. ಬಾಲಕಿ ನಾನು ಮದುವೆ ಆಗುವುದಿಲ್ಲ ಎಂದು ಎಷ್ಟೇ ಹಠ ಮಾಡಿದರೂ ತಂದೆ ಮದುವೆ ಮಾಡಿಸಿಯೇ ಸಿದ್ಧ ಎಂದು ಹೇಳುತ್ತಿದ್ದ.

    ತನ್ನ ಕಷ್ಟವನ್ನು ಸ್ನೇಹಿತೆಯ ಜೊತೆ ಹೇಳಿ ಠಾಣೆಗೆ ಬರುವಂತೆ ಕೇಳಿಕೊಳ್ಳುತ್ತಾಳೆ. ಆದರೆ ಆ ಸ್ನೇಹಿತೆ ಭಯಗೊಂಡು ನಾನು ಠಾಣೆಗೆ ಬರುವುದಿಲ್ಲ ಎಂದು ಹೇಳುತ್ತಾಳೆ. ಕೊನೆಗೆ ಶನಿವಾರ ಧೈರ್ಯದಿಂದ ತಾನೊಬ್ಬಳೇ ಹೋಗುವುದಾಗಿ ನಿರ್ಧರಿಸಿ 2.5 ಕಿ.ಮೀ ನಡೆದುಕೊಂಡು ಪೊಲೀಸ್ ಠಾಣೆಗೆ ಬಂದು ಓಸಿ ಅವರನ್ನು ಭೇಟಿ ಮಾಡಿ ತನ್ನ ಸಮಸ್ಯೆಯನ್ನು ಹೇಳಿಕೊಂಡು ದಯಮಾಡಿ ಮದುವೆಯನ್ನು ನಿಲ್ಲಿಸಿ ಎಂದು ಬೇಡಿಕೊಂಡಿದ್ದಾಳೆ.

    ಬಾಲಕಿಯ ಅಳಲನ್ನು ಕೇಳಿದ ಓಸಿ, ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿಯನ್ನು ಬಾಲಕಿಯ ಮನೆಗೆ ಕಳುಹಿಸಿದ್ದಾರೆ. ಸಿಬ್ಬಂದಿ ಮನೆಗೆ ಬಂದು ಮದುವೆ ನಿಲ್ಲಿಸಲು ಹೇಳಿದಾಗ ಬಾಲಕಿಯ ತಂದೆ ಒಪ್ಪಿಕೊಳ್ಳುವುದಿಲ್ಲ. ಈ ವೇಳೆ ಬಾಲಕಿಯನ್ನು ಮದುವೆ ಮಾಡಿದರೆ ನಿಮ್ಮ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ನಂತರ ತಂದೆ 18 ವರ್ಷದವರೆಗೂ ನಾನು ಆಕೆಯನ್ನು ಮದುವೆ ಮಾಡಿ ಕೊಡುವುದಿಲ್ಲ ಎಂದು ಪತ್ರದಲ್ಲಿ ಬರೆದು ಸಹಿ ಹಾಕಿ ಕೊಟ್ಟಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಮದ್ವೆಯಾದ ಒಂದೇ ತಿಂಗಳಿಗೆ 3 ಲಕ್ಷ ಹಣ, ಚಿನ್ನದೊಂದಿಗೆ ನವವಧು ಎಸ್ಕೇಪ್!

    ಮದ್ವೆಯಾದ ಒಂದೇ ತಿಂಗಳಿಗೆ 3 ಲಕ್ಷ ಹಣ, ಚಿನ್ನದೊಂದಿಗೆ ನವವಧು ಎಸ್ಕೇಪ್!

    ಚೆನ್ನೈ: ಮದುವೆಯಾಗಿ 35 ದಿನಗಳ ನಂತರ ಪತ್ನಿ 3 ಲಕ್ಷ ನಗದು ಹಾಗೂ ಒಡವೆಯನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ಚೆನ್ನೈನ ಸಾಹುಕಾರ ಪೇಟೆಯಲ್ಲಿ ನಡೆದಿದೆ.

    ಜಯಶ್ರೀ ಎಂಬಾಕೆ ಹಣದೊಂದಿಗೆ ಪರಾರಿಯಾದ ಪತ್ನಿ. ಒಂದು ತಿಂಗಳ ಹಿಂದೆ ಸಾಹುಕಾರ ಪೇಟೆಯಲ್ಲಿ ಪಾನ್ ಅಂಗಡಿ ನಡೆಸುತ್ತಿದ್ದ 45 ವರ್ಷದ ಆನಂದ್ ಆರ್.ಜೈನ್ ಎಂಬವರ ಜೊತೆ ಜಯಶ್ರೀ ಮದುವೆ ಆಗಿತ್ತು. ಮ್ಯಾಟ್ರಿಮೋನಿಯಾ ನಡೆಸುತ್ತಿದ್ದ ಲಕ್ಷ್ಮಿ ಎಂಬ ಮಹಿಳೆ ತೋರಿಸಿದ ಜಯಶ್ರೀ ಎಂಬಾಕೆಯನ್ನು ಮದುವೆ ಆಗಿದ್ದರು. ಆರಂಭದಲ್ಲಿ ಲಕ್ಷ್ಮಿ ಹೆಣ್ಣು ಹುಡುಕಿ ಕೊಡಲು 2.5 ಲಕ್ಷ ರೂ. ಹಣ ನೀಡಬೇಕೆಂದು ಷರತ್ತು ವಿಧಿಸಿದ್ದಳು.

    ಲಕ್ಷ್ಮಿ ಷರತ್ತು ಒಪ್ಪಿದ ಆನಂದ್ 1.25 ಲಕ್ಷ ರೂ. ನೀಡಿ ಜಯಶ್ರೀಯನ್ನು ಮದುವೆ ಆಗಿದ್ದರು. ಆಗಸ್ಟ್ 15ರಂದು ಎನ್‍ಎಸ್‍ಸಿ ಬೋಸ್ ರಸ್ತೆ ಬಳಿಯ ದೇವಸ್ಥಾನದಲ್ಲಿ ಇಬ್ಬರ ಮದುವೆ ನಡೆದಿತ್ತು. ಮದುವೆಯಾದ 35 ನೇ ದಿನಕ್ಕೆ ಗುರುವಾರ ಆನಂದ್ ಕೆಲಸ ಮುಗಿಸಿ ಮನೆಗೆ ಬಂದಾಗ ಲಕ್ಷ್ಮಿ ನಾಪತ್ತೆಯಾಗಿದ್ದಳು. ಪತ್ನಿ ಕಾಣದೇ ಇದ್ದಾಗ ಆನಂದ್ ಫೋನ್ ಮಾಡಿದ್ದಾರೆ. ಆದ್ರೆ ಮೊಬೈಲ್ ಸ್ವಿಚ್ಛ್ ಆಫ್ ಆಗಿತ್ತು. ಸ್ವಲ್ಪ ಸಮಯದ ಬಳಿಕ ಮನೆಯಲ್ಲಿ 3 ಲಕ್ಷ ನಗದು, ಚಿನ್ನಾಭರಣ ಸಹ ನಾಪತ್ತೆ ಆಗಿರೋದು ಆನಂದ್ ಗಮನಕ್ಕೆ ಬಂದಿದೆ.

    ಮನೆಯಲ್ಲಿ ಚಿನ್ನಾಭರಣ ನಾಪತ್ತೆಯಾದ ಕೂಡಲೇ ಮದುವೆ ಮಾಡಿಸಿದ್ದ ಜಯಶ್ರೀಗೂ ಕರೆ ಮಾಡಿದ್ರೆ, ಆಕೆಯ ಫೋನ್ ಕೂಡ ಸ್ವಿಚ್ಛ್ ಆಫ್ ಆಗಿದೆ. ಅನುಮಾನಗೊಂಡ ಆನಂದ್ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ನಾಪತ್ತೆಯಾಗಿರುವ ಜಯಶ್ರೀ ಮತ್ತು ಲಕ್ಷ್ಮಿ ಬಂಧನಕ್ಕಾಗಿ ವಿಶೇಷ ಜಾಲ ಬೀಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಬೆಂಗ್ಳೂರಲ್ಲಿದ್ದ ಐನಾತಿ ಕಳ್ಳಿಯರಿಬ್ಬರ ಬಂಧನ

    ಬೆಂಗ್ಳೂರಲ್ಲಿದ್ದ ಐನಾತಿ ಕಳ್ಳಿಯರಿಬ್ಬರ ಬಂಧನ

    ಬೆಂಗಳೂರು: ನಗರದ ಕಳ್ಳತನ ಮಾಡುತ್ತಿದ್ದ ಇಬ್ಬರು ಖರ್ತಾನಕ್ ಕಳ್ಳಿಯರನ್ನು ಪೊಲೀಸರು ಬಂಧಿಸಿದ್ದಾರೆ.

    ಉಷಾವಾಣಿ ಹಾಗೂ ಮೀನಾಕ್ಷಿ ಎಂಬ ಆರೋಪಿಗಳು ಬಸ್‍ನ ಪ್ರಯಾಣಿಕರನ್ನೇ ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದರು. ಈ ಅಕ್ಕ-ತಂಗಿಯರ ಬೇಟೆಗೆ ಆರ್ ಎಂ ಸಿ ಯಾರ್ಡ್ ಪೊಲೀಸ್ ತಂಡ ತಿಂಗಳು ಕಟ್ಟಲೆ ಕಾದು ಕುಳಿತ್ತಿತ್ತು. ಪೊಲೀಸರ ಸತತ ಪ್ರಯತ್ನಕ್ಕೆ ಕೊನೆಗೆ ಆರೋಪಿಗಳಾದ ಉಷಾವಾಣಿ ಹಾಗೂ ಮೀನಾಕ್ಷಿ ಸಿಕ್ಕಿಬಿದ್ದಿದ್ದಾರೆ.

    ಸತತ ಎರಡು ತಿಂಗಳುಗಳ ಕಾಲ ಆರ್ ಎಂ ಸಿ ಯಾರ್ಡ್ ಪೊಲೀಸರು ಬಸ್ ನಿಲ್ದಾಣದಲ್ಲೇ ಠಿಕಾಣಿ ಹೂಡಿ ಮಫ್ತಿಯಲ್ಲೇ ನಿಂತು ಆರೋಪಿಗಳ ಭೇಟೆಯಾಡಿದ್ದಾರೆ. ಪೊಲೀಸರು ಕಳ್ಳಿಯರನ್ನ ವಾಚ್ ಮಾಡಿ ಹಿಡಿದಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

  • ಒಂದೊಂದರಂತೆ 35 ಹುಂಜಗಳನ್ನು ಹೊತ್ತೊಯ್ದ ಪೊಲೀಸ್ರು-ಕಾರಣ ಕೇಳಿದ್ರೆ ಹೀಗೂ ಉಂಟಾ ಅಂತೀರಿ!

    ಒಂದೊಂದರಂತೆ 35 ಹುಂಜಗಳನ್ನು ಹೊತ್ತೊಯ್ದ ಪೊಲೀಸ್ರು-ಕಾರಣ ಕೇಳಿದ್ರೆ ಹೀಗೂ ಉಂಟಾ ಅಂತೀರಿ!

    ರಾಯ್‍ಪುರ: ಜನರ ರಕ್ಷಣೆ ಮಾಡಬೇಕಾದ ಪೊಲೀಸರೇ ಸಾರ್ವಜನಿಕರನ್ನು ಸುಲಿಗೆ ಮಾಡಲು ನಿಂತಿರುವ ಪ್ರಕರಣವೊಂದು ಛತ್ತೀಸ್‍ಗಢದಲ್ಲಿ ಬೆಳಕಿಗೆ ಬಂದಿದೆ.

    ಜಗದಲ್‍ಪುರ ಜಿಲ್ಲೆಯ ಸಂಭಾಗ ವಿಭಾಗದ ಗ್ರಾಮವೊಂದರಲ್ಲಿ ಪೊಲೀಸರು ಬಡವರಿಂದ ಹಣ ಸುಲಿಗೆಗೆ ನಿಂತಿದ್ದಾರೆ ಎನ್ನುವ ಆರೋಪ ಈಗ ಕೇಳಿ ಬಂದಿದೆ.

    ಹೋಳಿ ಹಬ್ಬದ ಮೊದಲು ಬಡ ರೈತರೊಬ್ಬರು 35 ಹುಂಜ ಮತ್ತು ಕೋಳಿಗಳನ್ನು ತಮ್ಮ ಸೈಕಲ್ ಮೇಲೆ ಹಾಕಿಕೊಂಡು ಮಾರಲು ಸಂಭಾಗ ಮಾರುಕಟ್ಟೆ ಬರುತ್ತಿದ್ದರು. ಮಾರ್ಗ ಮಧ್ಯೆ ಇಂದ್ರಾವತಿ ನದಿಯ ಸೇತುವೆ ಬಳಿ ಪೊಲೀಸ್ ಅಧಿಕಾರಿಯೊಬ್ಬರು ಅಡ್ಡಗಟ್ಟಿ ಎಲ್ಲ ಹುಂಜ ಮತ್ತು ಕೋಳಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಸಾಂದರ್ಭಿಕ ಚಿತ್ರ

    ಹುಂಜಗಳನ್ನು ವಶಕ್ಕೆ ಪಡೆದಿದ್ದು ಯಾಕೆ?: ಪೊಲೀಸರು ತನ್ನ ಎಲ್ಲ ಕೋಳಿ ಮತ್ತು ಹುಂಜಗಳನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಂತೆ ರೈತ ಪ್ರಶ್ನೆ ಮಾಡಿದ್ದಾರೆ. ಕೋಳಿಗಳನ್ನು ಸೈಕಲ್ ನಲ್ಲಿ ತಲೆ ಕೆಳಗಾಗಿ ಕಟ್ಟಿಕೊಂಡು ಬಂದಿದ್ದರಿಂದ ವಶಕ್ಕೆ ಪಡೆಯಲಾಗಿದೆ ಅಂತಾ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಈ ಸಂಬಂಧ ರೈತನನ್ನು ಸಹ ವಶಕ್ಕೆ ಪಡೆದ ಪೊಲೀಸ್ ಕೆಲಹೊತ್ತು ಠಾಣೆಯಲ್ಲಿ ಕೂರಿಸಿ, ಬರಿಗೈಯಲ್ಲಿ ಕಳುಹಿಸಿದ್ದಾರೆ.

    ಹಣ ಕೊಡಲಿಲ್ಲ: ಸದ್ಯ ಮಾರುಕಟ್ಟೆ ಕೋಳಿ ಮಾಂಸಕ್ಕೆ 300 ರಿಂದ 350 ರೂ.ವರೆಗೆ ಸಿಗುತ್ತದೆ. ಪೊಲೀಸರು ತನ್ನ 35 ಕೋಳಿಗಳನ್ನು ವಶ ಪಡೆದಿರುವುದರಿಂದ ಅಂದಾಜು 15 ಸಾವಿರ ರೂ. ನಷ್ಟವಾಗಿದೆ. ಠಾಣೆಗೆ ಕೋಳಿಗಳನ್ನು ತರುತ್ತಿದ್ದಂತೆ ಎಲ್ಲ ಪೊಲೀಸ್ ಸಿಬ್ಬಂದಿ ಒಂದು, ಎರಡು ಲೆಕ್ಕದಂತೆ ಮನೆಗೆ ತೆಗೆದುಕೊಂಡು ಹೋದ್ರು. ಆದ್ರೆ ಒಬ್ಬರೂ ಹಣ ನೀಡಲಿಲ್ಲ ಅಂತಾ ರೈತ ಹೇಳಿಕೊಂಡಿದ್ದಾರೆ.

    ಸ್ಥಳೀಯರ ಪ್ರಕಾರ, ಸಂಭಾಗನಲ್ಲಿ ಭಾನುವಾರದಂದು ನಡೆಯುವ ಸಂತೆಯಲ್ಲಿ ಇಂತಹ ಘಟನೆಗಳನ್ನು ಈ ಹಿಂದೆಯೂ ನಡೆದಿದೆ. ಪೊಲೀಸರು ಹಣ ನೀಡದೇ ಕೋಳಿಗಳನ್ನು ತೆಗೆದುಕೊಂಡು ಹೋಗಿ ಭರ್ಜರಿಯಾಗಿ ಹೋಳಿ ಹಬ್ಬ ಆಚರಣೆ ಮಾಡಿದ್ದಾರೆ. ಕೆಲವು ಬಾರಿ ಪೊಲೀಸರು ಜನರಿಂದ ಹಣ ಸಹ ವಸೂಲಿ ಮಾಡಿದ್ದಾರೆ ಅಂತಾ ಸಾರ್ವಜನಿಕರು ಆರೋಪಿಸಿದ್ದಾರೆ.

    ಸಾಂದರ್ಭಿಕ ಚಿತ್ರ

    ಈ ತರಹದ ಘಟನೆಗಳು ನಡೆಯಲು ಸಾಧ್ಯವೇ ಇಲ್ಲ. ಒಂದು ವೇಳೆ ಯಾವುದೇ ಪೊಲೀಸ್ ಅಧಿಕಾರಿ ಜನರಿಂದ ಹಣ ವಸೂಲಿ ಮಾಡಿದ್ದರೆ ಸಂಬಂಧಪಟ್ಟ ಠಾಣೆಯಲ್ಲಿ ದೂರು ದಾಖಲಿಸಬಹುದು. ಇದೂವರೆಗೂ ಅಂತಹ ದೂರುಗಳು ದಾಖಲಾಗಿಲ್ಲ, ಆದ್ರೂ ಈ ಬಗ್ಗೆ ತನಿಖೆ ನಡೆಸಲಾಗುವುದು ಅಂತಾ ಕೋತವಾಲಿ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಖಾದೀರ್ ಖಾನ್ ತಿಳಿಸಿದ್ದಾರೆ.