Tag: cooking

  • ಕೆಲವೇ ನಿಮಿಷಗಳಲ್ಲಿ ಮಾಡಿ ಕಡ್ಲೆಬೇಳೆ ಖಾರ ಫ್ರೈ

    ಕೆಲವೇ ನಿಮಿಷಗಳಲ್ಲಿ ಮಾಡಿ ಕಡ್ಲೆಬೇಳೆ ಖಾರ ಫ್ರೈ

    ಕೊರೊನಾ ಭೀತಿಯಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಹೀಗಾಗಿ ದಿನಪೂರ್ತಿ ಮನೆಯಲ್ಲಿಯೇ ಇರಬೇಕು. ಬೇಸರವಾದಾಗ ಹೊರಗೆ ಹೋಗಿ ಏನಾದರೂ ತಿಂದುಕೊಂಡು ಬರೋಣ ಎಂದರೂ ಆಗುವುದಿಲ್ಲ. ಇತ್ತ ಮನೆಯಲ್ಲಿ ಮಕ್ಕಳು ಸೇರಿದಂತೆ ಎಲ್ಲರೂ ಇರುವುದರಿಂದ ತಿನ್ನಲೂ ಏನಾದರೂ ಕೇಳುತ್ತಿರುತ್ತಾರೆ…ಅವರಿಗಾಗಿ ಏನ್ ಮಾಡೋದು ಎಂದು ಯೋಚನೆ ಮಾಡುತ್ತಿರುತ್ತೀರಾ. ಆದ್ದರಿಂದ ನಿಮಗಾಗಿ ಕೆಲವೇ ನಿಮಿಷಗಳಲ್ಲಿ ರೆಡಿಯಾಗುವ ಕಡ್ಲೆಬೇಳೆ ಖಾರ ಫ್ರೈ ಮಾಡುವ ವಿಧಾನ ಇಲ್ಲಿದೆ…..

    ಬೇಕಾಗುವ ಸಾಮಗ್ರಿಗಳು
    1. ಕಡ್ಲೆಬೇಳೆ – 1/4 ಕೆಜಿ
    2. ಖಾರದ ಪುಡಿ – ರುಚಿಗೆ ತಕ್ಕಷ್ಟು
    3. ಉಪ್ಪು – ರುಚಿಗೆ ತಕ್ಕಷ್ಟು
    4. ಎಣ್ಣೆ – ಕರಿಯಲು

    ಮಾಡುವ ವಿಧಾನ
    * ಮೊದಲು 4-5 ಗಂಟೆಗಳ ಕಾಲ ಕಡ್ಲೆಬೇಳೆಯನ್ನು ನೀರಿನಲ್ಲಿ ನೆನೆಸಿ ಸೋಸಿಕೊಳ್ಳಿ.
    * ಈಗ ಒಂದು ಬಾಣಲೆಗೆ ಎಣ್ಣೆ ಹಾಕಿ ಕಾಯಲು ಬಿಡಿ.
    * ಎಣ್ಣೆ ಕಾದ ಮೇಲೆ ಸಣ್ಣ ಸಣ್ಣ ತೂತಿರುವ ಜಾಲರಿಯೊಳಗೆ ಕಡ್ಲೆಬೇಳೆಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ.
    * ಬೇಳೆ ನಿಂದಿರುವ ಕಾರಣ 2-3 ನಿಮಿಷಗಳ ಕಾಲ ಬೇಯಿಸಿದರೆ ಗರಿಗರಿ ಎನ್ನುತ್ತೆ. ಹೀಗೆ ಎಲ್ಲಾ ಬೇಳೆಯನ್ನು ಫ್ರೈ ಮಾಡಿಕೊಳ್ಳಿ.
    * ಈಗ ಒಂದು ಮಿಕ್ಸಿಂಗ್ ಬೌಲ್‍ಗೆ ಫ್ರೈ ಮಾಡಿದ ಕಡ್ಲೆಬೇಳೆ ಹಾಕಿಕೊಂಡು ಉಪ್ಪು ಖಾರವನ್ನು ಮಿಕ್ಸ್ ಮಾಡಿ.
    (ನಿಮಗೆ ಉಪ್ಪು, ಖಾರ ತಿಂದು ಬೇಜರಾಗಿದ್ರೆ, ಗರಂ ಮಸಾಲ, ಮ್ಯಾಗಿ ಮಸಾಲ, ಪೆಪ್ಪರ್ ಪೌಡರ್ ಮಸಾಲವನ್ನು ಸಹ ಬಳಸಬಹುದು. ಟೇಸ್ಟೂ ಚೆನ್ನಾಗಿರುತ್ತದೆ)

    ಈ ರೀತಿ ಕಡ್ಲೆಬೇಳೆ ಖಾರ ಫ್ರೈ ಮಾಡಿದರೆ ಇದನ್ನು ಕೆಲದಿನಗಳ ಕಾಲ ಇಟ್ಟುಕೊಂಡು ತಿನ್ನಬಹುದು.

  • ಚಾಟ್ಸ್ ತಿನ್ನೋಕೆ ಆಗ್ತಿಲ್ಲ, ಮನೆಯಲ್ಲೇ ಮಾಡಿ ಗರಿಗರಿ ಅವಲಕ್ಕಿ

    ಚಾಟ್ಸ್ ತಿನ್ನೋಕೆ ಆಗ್ತಿಲ್ಲ, ಮನೆಯಲ್ಲೇ ಮಾಡಿ ಗರಿಗರಿ ಅವಲಕ್ಕಿ

    ಕೊರೊನಾ ವೈರಸ್‍ನಿಂದ ಇಡೀ ದೇಶವೇ 21 ದಿನ ಲಾಕ್ ಆಗಿದೆ. ಹೊರಗಡೆ ಹೋಗಿ ಸುತ್ತಾಡಿಕೊಂಡು ಟೈಂ ಪಾಸ್ ಮಾಡೋಣ ಎಂದರೆ ಅದು ಸಾಧ್ಯವಿಲ್ಲ. ಸಂಜೆಯಾದರೆ ಚಾಟ್ಸ್ ಇಲ್ಲ, ಟೀ ಟೈಂನಲ್ಲಿ ತಿನ್ನಲು ಚುರುಮುರಿ, ಚೌಚೌನೂ ಸಿಗುತ್ತಿಲ್ಲ. ಇದೆಲ್ಲರ ನಡುವೆ ಹೇಗಪ್ಪ ಮನೆಯಲ್ಲಿ ಟೈಂ ಪಾಸ್ ಮಾಡೋದು ಅಂತ ಬೇಸರದಲ್ಲಿದ್ದೀರಾ?. ಹೀಗಾಗಿ ನಾವು ನಿಮಗೆ ಚುರುಮುರಿ ಮಾಡುವುದನ್ನು ಹೇಳಿಕೊಡುತ್ತೇವೆ. ದಿನಸಿ ಅಂಗಡಿಯನ್ನು ಸರ್ಕಾರ ಬಂದ್ ಮಾಡಿಲ್ಲ. ಹೀಗಾಗಿ ನಿಮ್ಮ ಮನೆಯಿಂದ ಯಾರಾದರೂ ಒಬ್ಬರೂ ಮಾಸ್ಕ್ ಧರಿಸಿಕೊಂಡು ದಿನಸಿ ಅಂಗಡಿಗೆ ಹೋಗಿ, ಸಾಮಾಜಿಕ ಅಂತರ ಕಾಯ್ದುಕೊಂಡು ಅವಲಕ್ಕಿ, ಕಡಲೆಹಿಟ್ಟು, ಕಡಲೆಬೇಳೆ, ಹೆಸರು ಬೇಳೆ, ಬಟಾಣಿ, ಕಡ್ಲೆಬೀಜ, ಕಡ್ಲೆಕಾಳನ್ನು ತೆಗೆದುಕೊಂಡು ಬನ್ನಿ. ನಿಮಗಾಗಿ ಗರಿಗರಿ ಅವಲಕ್ಕಿ ಮಾಡುವ ವಿಧಾನ ಇಲ್ಲಿದೆ…

    ಬೇಕಾಗುವ ಸಾಮಾಗ್ರಿಗಳು
    1. ಗಟ್ಟಿ ಅವಲಕ್ಕಿ – ಕಾಲು ಕೆ.ಜಿ
    2. ಎಣ್ಣೆ – ಕರಿಯಲು

    ಒಗ್ಗರಣೆಗೆ
    1. ಎಣ್ಣೆ – 2-3 ಚಮಚ
    2. ಸಾಸಿವೆ – ಸ್ವಲ್ಪ
    3. ಕೆಂಪು ಮೆಣಸಿನಕಾಯಿ – 6-7
    4. ಕಡ್ಲೆಕಾಯಿ ಬೀಜ – 50 ಗ್ರಾಂ
    5. ಹುರಿಗಡಲೆ – 50 ಗ್ರಾಂ
    6. ಉಪ್ಪು – ರುಚಿಗೆ ತಕ್ಕಷ್ಟು
    7. ಇಂಗು – ಚಿಟಿಕೆ
    8. ಬೆಳ್ಳುಳ್ಳಿ -2-3 ಎಸಳು
    9. ಕರಿಬೇವು – ಸ್ವಲ್ಪ

    ಮಾಡುವ ವಿಧಾನ
    * ಒಂದು ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆ ಕಾಯಲು ಬಿಡಿ.
    * ಈಗ ಕ್ಲೀನ್ ಮಾಡಿದ ಅವಲಕ್ಕಿಯನ್ನು ಹಾಕಿ ಫ್ರೈ ಮಾಡಿಕೊಳ್ಳಿ.
    * ಸಣ್ಣ ಸಣ್ಣ ತೂತಿರುವ ಜಾಲರಿ ಬಳಸಿದರೆ ಅವಲಕ್ಕಿ ಫ್ರೈಗೆ ಉತ್ತಮ.
    * ಹೆಚ್ಚು ಹೊತ್ತು ಬಿಡಬೇಡಿ. ಕೇವಲ ಸೆಕೆಂಡ್‍ಗಳಲ್ಲಿ ಅವಲಕ್ಕಿ ಫ್ರೈ ಆಗುತ್ತದೆ. ಹೀಗೆ ಎಲ್ಲಾ ಅವಲಕ್ಕಿಯನ್ನು ಫ್ರೈ ಮಾಡಿಕೊಳ್ಳಿ.
    * ಈಗ ಒಗ್ಗರಣೆಗೆ ರೆಡಿ ಮಾಡಿಕೊಳ್ಳಿ.
    * ಒಂದು ಬಾಣಲೆಗೆ ಎಣ್ಣೆ ಹಾಕಿ ಕಾಯಲು ಬಿಡಿ
    * ಈಗ ಸಾಸಿವೆ, ಕರಿಬೇವು, ಕೆಂಪು ಮೆಣಸಿನಕಾಯಿ, ಜಜ್ಜಿದ ಬೆಳ್ಳುಳ್ಳಿ ಹಾಕಿ.
    * ನಂತರ ಕಡ್ಲೆಕಾಯಿ ಬೀಜ, ಹುರಿಗಡಲೆ ಹಾಕಿ ಫ್ರೈ ಮಾಡಿ ಸ್ಟೌ ಆರಿಸಿ.
    * ಒಗ್ಗರಣೆಗೆ ಫ್ರೈ ಮಾಡಿಕೊಂಡ ಅವಲಕ್ಕಿಯನ್ನು ಸೇರಿಸಿ ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿದರೆ ಫಟಾಫಟ್ ಅಂತ ಗರಿಗರಿ ಅವಲಕ್ಕಿ ಸವಿಯಲು ರೆಡಿ.

    ಈ ಲಾಕ್‍ಡೌನ್ ದಿನದಲ್ಲಿ ಸ್ವಲ್ಪ ಜಾಸ್ತಿನೇ ಮಾಡಿಕೊಂಡು ಟೈಂ ಪಾಸ್ ಮಾಡಿ. ಇದನ್ನು ಒಂದು ವಾರಗಳ ಕಾಲ ಇಟ್ಟುಕೊಂಡು ತಿನ್ನಬಹುದು.

  • ರುಚಿಯಾದ ಸೋಯಾ ಬೀನ್ ಕುರ್ಮಾ ಮಾಡೋ ವಿಧಾನ

    ರುಚಿಯಾದ ಸೋಯಾ ಬೀನ್ ಕುರ್ಮಾ ಮಾಡೋ ವಿಧಾನ

    ನಾವು ತಿನ್ನುವ ಅನೇಕ ಪದಾರ್ಥಗಳಲ್ಲಿ ವಿಟಮಿನ್ ಇರುತ್ತವೆ. ಅದರಲ್ಲಿ ಸೋಯಾ ಬೀನ್ ಕೂಡ ಒಂದಾಗಿದ್ದು, ಮಕ್ಕಳಿಗೆ-ವೃದ್ಧರಿಗೆ ಎಲ್ಲರಿಗೂ ಮಾಡಿಕೊಡಬಹುದು. ಇದೊಂದು ಆರೋಗ್ಯಕರವಾದ ಅಡುಗೆಯಾಗಿದೆ. ಪ್ರತಿ ಸಂಡೇ ಬಂದರೆ ನಾನ್‍ವೆಜ್ ಅಡುಗೆ ಮಾಡಲು ಸಾಧ್ಯವಿಲ್ಲ. ಆದರೆ ಮಕ್ಕಳು ರುಚಿಯಾಗಿ ತಿನ್ನಲು ಕೇಳುತ್ತಿರುತ್ತಾರೆ. ಹೀಗಾಗಿ ನಿಮಗಾಗಿ ಸೋಯಾ ಬೀನ್ ಕುರ್ಮಾ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    1. ಸೋಯಾ ಬೀನ್ – ಅರ್ಧ ಕಪ್
    2. ಹಸಿ ಬಟಾಣಿ – ಅರ್ಧ ಕಪ್
    3. ಈರುಳ್ಳಿ – 2
    4. ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
    5. ಮೆಣಸಿನ ಪುಡಿ – 1/2 ಚಮಚ
    6. ಗರಂ ಮಸಾಲ – 1/2 ಚಮಚ
    7. ಅರಿಶಿಣ – 1/4 ಟೀ ಸ್ಪೂನ್
    8. ದನಿಯಾ ಪುಡಿ – 1/2 ಚಮಚ
    9. ಕೊತ್ತಂಬರಿ ಸೊಪ್ಪು – ಸ್ವಲ್ಪ
    10. ತೆಂಗಿನ ಕಾಯಿ ಪೀಸ್ – 3 ಚಮಚ
    11. ಏಲಕ್ಕಿ – 2
    12. ಜೀರಿಗೆ – 1 ಚಮಚ
    13. ಟೊಮೆಟೊ – 3
    14. ಉಪ್ಪು – ರುಚಿಗೆ ತಕ್ಕಷ್ಟು
    15. ಎಣ್ಣೆ – 3 ಚಮಚ
    16. ಗೋಡಂಬಿ – 8-10
    17. ಗಸಗಸೆ – 1 ಟೀ ಚಮಚ

    ಮಾಡುವ ವಿಧಾನ
    * ಮೊದಲಿಗೆ ಬಿಸಿ ನೀರಿಗೆ ಸ್ವಲ್ಪ ಉಪ್ಪು ಹಾಕಿ ಸೋಯಾ ಬೀನ್ ಹಾಕಿ 5 ನಿಮಿಷ ನೆನೆಸಿರಬೇಕು.
    * ಈಗ ಮಿಕ್ಸ್ ಜಾರಿಗೆ ಗೋಡಂಬಿ, ಗಸಗಸೆ, ತೆಂಗಿನ ಕಾಯಿ ಪೀಸ್ ಹಾಕಿಕೊಂಡು ರುಬ್ಬಿಕೊಳ್ಳಿ.
    * ಬಾಣಲೆಗೆ 3 ಚಮಚ ಎಣ್ಣೆ ಹಾಕಿ, ಕಾದ ನಂತರ ಜೀರಿಗೆ, ಏಲಕ್ಕಿ, ಪಲಾವ್ ಎಲೆ, ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ.
    * ನಂತರ ಬಟಾಣಿ, ಖಾರದ ಪುಡಿ, ಅರಿಶಿಣ, ದನಿಯಾ ಪುಡಿ ಹಾಕಿ ಫ್ರೈ ಮಾಡಿಕೊಳ್ಳಿ.
    * ಈಗ ರುಬ್ಬಿದ ಟಮೋಟೋ ಪೇಸ್ಟ್, ಸ್ವಲ್ಪ ಉಪ್ಪು, ಮೊದಲೇ ರುಬ್ಬಿಕೊಂಡಿದ್ದ ಗೋಡಂಬಿ ಪೇಸ್ಟ್ ಹಾಕಿ ಫ್ರೈ ಮಾಡಿಕೊಳ್ಳಿ, ಸ್ವಲ್ಪ ನೀರು ಹಾಕಿ 5 ನಿಮಿಷ ಬೇಯಿಸಿ.
    * ನೆನೆಸಿಟ್ಟ ಸೋಯಾ ಬೀನ್, ಗರಂ ಮಸಲಾ ಹಾಕಿ ಮಿಕ್ಸ್ ಮಾಡಿ. ರುಚಿ ನೋಡಿಕೊಂಡು ಉಪ್ಪು ಹಾಕಿ 5 ನಿಮಿಷ ಬೇಯಿಸಬೇಕು.
    * ನಂತರ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿದರೆ ರುಚಿಯಾದ ಸೋಯಾ ಬೀನ್ ಕುರ್ಮಾ ಸವಿಯಲು ಸಿದ್ಧ

    ಇದನ್ನು ಅನ್ನ, ದೋಸೆ, ಚಪಾತಿ ಯಾವುದಕ್ಕಾದರೂ ಹಾಕಿಕೊಂಡು ಸವಿಯಬಹುದು.

  • ಖಾರ ಪೊಂಗಲ್ ಮಾಡುವ ಸರಳ ವಿಧಾನ

    ಖಾರ ಪೊಂಗಲ್ ಮಾಡುವ ಸರಳ ವಿಧಾನ

    ಹೊಸ ವರ್ಷದ ಮೊದಲ ಹಬ್ಬವನ್ನು ಜನರು ಸಂತೋಷದಿಂದ ಬರ ಮಾಡಿಕೊಳ್ಳುತ್ತಿದ್ದು, ಹಬ್ಬಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ. ಸುಗ್ಗಿ ಹಬ್ಬವಾದ ಸಂಕ್ರಾಂತಿಯನ್ನು ಕರ್ನಾಟಕದಲ್ಲಷ್ಟೇ ಅಲ್ಲದೆ ಕೇರಳ, ತಮಿಳುನಾಡು ಮತ್ತು ದೇಶದ ಹಲವೆಡೆ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಈ ಹಬ್ಬದ ವಿಶೇಷ ಅಡುಗೆ ಪೊಂಗಲ್. ಅದಕ್ಕಾಗಿ ಖಾರ ಪೊಂಗಲ್ ಮಾಡುವ ಸುಲಭ ವಿಧಾನ ಇಲ್ಲಿದೆ… ಎಳ್ಳು ಬೆಲ್ಲದ ಜೊತೆಗೆ ಒಂದಿಷ್ಟು ಖಾರ ಪೊಂಗಲ್ ತಯಾರಿಸಿ ಹಬ್ಬವನ್ನು ಆಚರಿಸಿ.

    ಬೇಕಾಗುವ ಸಾಮಗ್ರಿಗಳು:
    1. ಹೆಸರುಬೇಳೆ- 1 ಕಪ್
    2. ಅಕ್ಕಿ- 1 ಕಪ್
    3. ಜೀರಿಗೆ – ಅರ್ಧ ಚಮಚ
    4 ಕಾಳುಮೆಣಸು – ಅರ್ಧ ಚಮಚ
    5. ಕರಿಬೇವಿನಸೊಪ್ಪು – ಸ್ವಲ್ಪ
    6. ಹಸಿಮೆಣಸಿನಕಾಯಿ – 2 ರಿಂದ 3
    7 ತುಪ್ಪ – 1 ಚಮಚ
    8. ಅರಿಶಿನ- ಒಂದು ಚಿಟಿಕೆ
    9. ಉಪ್ಪು – ರುಚಿಗೆ ತಕ್ಕಷ್ಟು
    10 ಗೋಡಂಬಿ – 10

    ಮಾಡುವ ವಿಧಾನ:
    * ಮೊದಲಿಗೆ ಒಂದು ಬಾಣಲೆಯಲ್ಲಿ ಹೆಸರುಬೇಳೆಯನ್ನು ಹಾಕಿ ಅದು ಕೆಂಪಾಗುವ ತನಕ ಕಡಿಮೆ ಉರಿಯಲ್ಲಿ ಹುರಿಯಿರಿ.
    * ಬಳಿಕ ಕುಕ್ಕರ್ ನಲ್ಲಿ ತೊಳೆದ ಅಕ್ಕಿ ಮತ್ತು ಹುರಿದ ಹೆಸರುಬೇಳೆ ಹಾಕಿ 4 ಕಪ್ ನೀರು ಹಾಕಿ ಒಂದು ವಿಷಲ್ ಬರುವ ತನಕ ಬೇಯಿಸಿ.
    * ಒಂದು ಬಾಣಲೆಯಲ್ಲಿ ಸ್ವಲ್ಪ ತುಪ್ಪ ಬಿಸಿ ಮಾಡಿ ಅದಕ್ಕೆ ಕರಿಬೇವಿನಸೊಪ್ಪು, ಜೀರಿಗೆ, ಕಾಳುಮೆಣಸು, ಅರಿಶಿನ, ಗೋಡಂಬಿ ಮತ್ತು ಕತ್ತರಿಸಿದ ಹಸಿಮೆಣಸಿನಕಾಯಿ ಹಾಕಿ ಬಾಡಿಸಿ.
    * ಇದನ್ನು ಬೇಯಿಸಿದ ಅಕ್ಕಿ ಮತ್ತು ಹೆಸರುಬೇಳೆಗೆ ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿ 5 ನಿಮಿಷ ಬೇಯಲು ಬಿಡಿ.
    * ಕೊನೆಗೆ ಒಂದು ಚಮಚ ತುಪ್ಪ ಸೇರಿಸಿ ಒಲೆಯಿಂದ ಕೆಳಗಿಳಿಸಿದರೆ ಖಾರ ಪೊಂಗಲ್ ಸವಿಯಲು ಸಿದ್ಧ.

    ಇದನ್ನೂ ಓದಿ: ಸಂಕ್ರಾಂತಿಗೆ ಸಿಹಿ ಪೊಂಗಲ್ ಮಾಡುವ ಸರಳ ವಿಧಾನ

    ಇದನ್ನೂ ಓದಿ: ಸಂಕ್ರಾಂತಿ ಸ್ಪೆಷಲ್ – ಎಳ್ಳು, ಬೆಲ್ಲ ಮಾಡುವ ವಿಧಾನ

    ಇದನ್ನೂ ಓದಿ: ಸಂಕ್ರಾಂತಿ ಯಾಕೆ ಮಾಡ್ತಾರೆ? ಈ ದಿನ ಎಳ್ಳಿಗೆ ಮಹತ್ವ ಯಾಕೆ?

    ಇದನ್ನೂ ಓದಿ: ಮಕರ ಸಂಕ್ರಾಂತಿಗೆ ಗಾಳಿಪಟ ಹಾರಿಸೋದೇಕೆ? ವಿಶೇಷತೆ ಏನು?

    ಇದನ್ನೂ ಓದಿ:  ಸಂಕ್ರಾಂತಿಗೆ ಚಟಾಪಟ್ ಅಂತಾ ಮಾಡಿ ಸಕ್ಕರೆ ಅಚ್ಚು

    ಇದನ್ನೂ ಓದಿ:  ಸಂಕ್ರಾಂತಿಗೆ ನಿಮ್ಮ ಮನೆಯಲ್ಲಿರಲಿ ಅವಲಕ್ಕಿ ಸಿಹಿ ಪೊಂಗಲ್

  • ಸಂಕ್ರಾಂತಿಗೆ ಸಿಹಿ ಪೊಂಗಲ್ ಮಾಡುವ ಸರಳ ವಿಧಾನ

    ಸಂಕ್ರಾಂತಿಗೆ ಸಿಹಿ ಪೊಂಗಲ್ ಮಾಡುವ ಸರಳ ವಿಧಾನ

    ಸುಗ್ಗಿ ಹಬ್ಬವಾದ ಸಂಕ್ರಾಂತಿಯನ್ನು ಕರ್ನಾಟಕದಲ್ಲಷ್ಟೇ ಅಲ್ಲದೆ ಕೇರಳ, ತಮಿಳುನಾಡು ಮತ್ತು ದೇಶದ ಹಲವೆಡೆ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಈ ಹಬ್ಬದ ವಿಶೇಷ ಅಡುಗೆ ಪೊಂಗಲ್. ಆದ್ದರಿಂದ ನಿಮಗಾಗಿ ಸಿಹಿ ಪೊಂಗಲ್ ಮಾಡುವ ವಿಧಾನ ಇಲ್ಲಿದೆ…

    ಬೇಕಾಗುವ ಸಾಮಗ್ರಿಗಳು:
    1. ಹೆಸರುಬೇಳೆ – 1 ಕಪ್
    2. ಅಕ್ಕಿ – 1 ಕಪ್
    3. ಪುಡಿ ಮಾಡಿದ ಬೆಲ್ಲ/ ಸಕ್ಕರೆ – 1 ಕಪ್
    4. ಏಲಕ್ಕಿ – 4
    5. ದ್ರಾಕ್ಷಿ ,ಗೋಡಂಬಿ- 50 ಗ್ರಾಂ
    6. ತುಪ್ಪ – 4 ಚಮಚ

    ಮಾಡುವ ವಿಧಾನ:
    * ಮೊದಲಿಗೆ ಒಂದು ಬಾಣಲೆಯಲ್ಲಿ ಹೆಸರುಬೇಳೆಯನ್ನು ಹಾಕಿ ಅದು ಕೆಂಪಾಗುವ ತನಕ ಕಡಿಮೆ ಉರಿಯಲ್ಲಿ ಹುರಿಯಿರಿ.
    * ಕುಕ್ಕರ್ ನಲ್ಲಿ ತೊಳೆದ ಅಕ್ಕಿ ಮತ್ತು ಹುರಿದ ಹೆಸರುಬೇಳೆ ಹಾಕಿ 4 ಕಪ್ ನೀರು ಹಾಕಿ ಒಂದು ವಿಷಲ್ ಬರುವ ತನಕ ಬೇಯಿಸಿ.
    * ಮತ್ತೊಂದು ಪ್ಯಾನ್ ನಲ್ಲಿ ಪುಡಿಮಾಡಿದ ಬೆಲ್ಲ ಹಾಕಿ ಕರಗಿಸಿ.(ಒಂದು ವೇಳೆ ಬೆಲ್ಲದಲ್ಲಿ ಕಲ್ಮಶವಿದ್ದರೆ ಒಮ್ಮೆ ಶೋಧಿಸಿಕೊಳ್ಳಿ)
    * ಈಗ ಬೆಂದ ಅಕ್ಕಿ ಮತ್ತು ಬೇಳೆಗೆ ಬೆಲ್ಲದ ಪಾಕ ಹಾಕಿ ಚೆನ್ನಾಗಿ ತಿರುವಿ.
    * ನಂತರ ಪುಡಿ ಮಾಡಿದ ಏಲಕ್ಕಿ, ತುಪ್ಪದಲ್ಲಿ ಕರಿದ ದ್ರಾಕ್ಷಿ ಗೋಡಂಬಿ ಹಾಕಿ ಒಲೆಯಿಂದ ಇಳಿಸಿ.
    (ಇದಕ್ಕೆ ಬೇಕಿದ್ದಲ್ಲಿ ಸ್ವಲ್ಪ ಪಚ್ಚ ಕರ್ಪೂರ ಮತ್ತು ಒಂದು ಚಿಟಿಕೆ ಲವಂಗದ ಪುಡಿಯನ್ನು ಸೇರಿಸಬಹುದು)

    ಇದನ್ನೂ ಓದಿ: ಸಂಕ್ರಾಂತಿ ಸ್ಪೆಷಲ್ – ಎಳ್ಳು, ಬೆಲ್ಲ ಮಾಡುವ ವಿಧಾನ

    ಇದನ್ನೂ ಓದಿ: ಸಂಕ್ರಾಂತಿ ಯಾಕೆ ಮಾಡ್ತಾರೆ? ಈ ದಿನ ಎಳ್ಳಿಗೆ ಮಹತ್ವ ಯಾಕೆ?

    ಇದನ್ನೂ ಓದಿ: ಮಕರ ಸಂಕ್ರಾಂತಿಗೆ ಗಾಳಿಪಟ ಹಾರಿಸೋದೇಕೆ? ವಿಶೇಷತೆ ಏನು?

    ಇದನ್ನೂ ಓದಿ:  ಸಂಕ್ರಾಂತಿಗೆ ಚಟಾಪಟ್ ಅಂತಾ ಮಾಡಿ ಸಕ್ಕರೆ ಅಚ್ಚು

    ಇದನ್ನೂ ಓದಿ:  ಸಂಕ್ರಾಂತಿಗೆ ನಿಮ್ಮ ಮನೆಯಲ್ಲಿರಲಿ ಅವಲಕ್ಕಿ ಸಿಹಿ ಪೊಂಗಲ್

  • ಸಂಕ್ರಾಂತಿ ಸ್ಪೆಷಲ್ – ಎಳ್ಳು, ಬೆಲ್ಲ ಮಾಡುವ ವಿಧಾನ

    ಸಂಕ್ರಾಂತಿ ಸ್ಪೆಷಲ್ – ಎಳ್ಳು, ಬೆಲ್ಲ ಮಾಡುವ ವಿಧಾನ

    ‘ಎಳ್ಳು ಬೆಲ್ಲ ತಿಂದು, ಒಳ್ಳೆಯ ಮಾತನಾಡಿ’ ಎಂಬ ಗಾದೆ ಇದೆ. ಅದರಂತೆಯೇ ಸಂಕ್ರಾಂತಿ ಹಬ್ಬದಂದು ಎಲ್ಲರೂ ಎಳ್ಳು ಬೆಲ್ಲ ತಿಂದು ಹೊಸ ವರ್ಷದ ಮೊದಲ ಹಬ್ಬವನ್ನು ಸಿಹಿಯಾಗಿ ಬರಮಾಡಿಕೊಳ್ಳುತ್ತಾರೆ. ಆದ್ದರಿಂದ ಹಬ್ಬಕ್ಕಾಗಿ ಅಂಗಡಿಯಿಂದ ತಂದು ಮಾಡುವ ಬದಲು ಮನೆಯಲ್ಲಿಯೇ ಸುಲಭವಾಗಿ ತಯಾರು ಮಾಡಿ. ನಿಮಗಾಗಿ ಎಳ್ಳು-ಬೆಲ್ಲ ತಯಾರು ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    1. ಬಿಳಿ ಎಳ್ಳು – 200 ಗ್ರಾಂ
    2. ಅಚ್ಚು ಬೆಲ್ಲ – 2
    3. ಕೊಬ್ಬರಿ – 2 ಓಳು
    4. ಹುರಿಗಡಲೆ – 1 ಕಪ್
    5. ಕಡ್ಲೆಕಾಯಿಬೀಜ – 1 ಕಪ್
    6. ಜೀರಿಗೆ ಪೆಪ್ಪರ್ ಮೆಂಟ್ – 100 ಗ್ರಾಂ
    7. ಬಿಳಿ ಬತಾಸು – 100 ಗ್ರಾಂ

    ಮಾಡುವ ವಿಧಾನ
    * ಕಡ್ಲೆಕಾಯಿ ಬೀಜವನ್ನು ಚೆನ್ನಾಗಿ ಹುರಿದು ಸಿಪ್ಪೆ ತೆಗೆದು ಬಿಡಿ ಬಿಡಿ ಮಾಡಿಕೊಳ್ಳಿ.
    * ಎಳ್ಳನ್ನು ಸ್ವಲ್ಪ ಹುರಿದುಕೊಳ್ಳಿ.
    * ಅಚ್ಚು ಬೆಲ್ಲವನ್ನು ಚಾಕುವಿನಿಂದ ಸಣ್ಣ ಸಣ್ಣದಾಗಿ ಕಟ್ ಮಾಡಿ.
    * ಕೊಬ್ಬರಿ ಕಪ್ಪು ಭಾಗವನ್ನು ತೆಗೆದು ಚಿಕ್ಕದಾಗಿ ಕಟ್ ಮಾಡಿ.
    * ಹುರಿಗಡಲೆಯನ್ನು ಬೆಚ್ಚಗಾಗುವಷ್ಟು ಹುರಿದುಕೊಳ್ಳಿ.
    * ಈಗ ಒಂದು ಮಿಕ್ಸಿಂಗ್ ಬೌಲ್‍ಗೆ ಎಳ್ಳು, ಕಡ್ಲೆಕಾಯಿಬೀಜ, ಹುರಿಗಡಲೆ, ಸಣ್ಣಗೆ ತುಂಡರಿಸಿದ ಬೆಲ್ಲ, ಕೊಬ್ಬರಿ, ಜೀರಿಗೆ ಪೆಪ್ಪರ್ ಮೆಂಟ್, ಬಿಳಿ ಬತಾಸು ಸೇರಿಸಿ ಮಿಕ್ಸ್ ಮಾಡಿ.
    * ಒಂದು ಏರ್ ಟೈಟ್ ಜಾರ್ ಗೆ  ಶೇಖರಿಸಿಟ್ಟರೆ ತಿಂಗಳುಗಳ ಕಾಲ ತಿನ್ನಲು ಯೋಗ್ಯವಾಗಿರುತ್ತದೆ.
    * ಅಂಗಡಿಯಲ್ಲಿ ಸಿಗುವ ರೆಡಿ ಮಿಕ್ಸ್ ಗಿಂತ ಮನೆಯಲ್ಲೇ ಮಾಡಿ ಪ್ರೆಶ್ ಆಗಿ ತಿನ್ನಿರಿ.

    ಇದನ್ನೂ ಓದಿ: ಸಂಕ್ರಾಂತಿ ಯಾಕೆ ಮಾಡ್ತಾರೆ? ಈ ದಿನ ಎಳ್ಳಿಗೆ ಮಹತ್ವ ಯಾಕೆ?

    ಇದನ್ನೂ ಓದಿ: ಮಕರ ಸಂಕ್ರಾಂತಿಗೆ ಗಾಳಿಪಟ ಹಾರಿಸೋದೇಕೆ? ವಿಶೇಷತೆ ಏನು?

    ಇದನ್ನೂ ಓದಿ:  ಸಂಕ್ರಾಂತಿಗೆ ಚಟಾಪಟ್ ಅಂತಾ ಮಾಡಿ ಸಕ್ಕರೆ ಅಚ್ಚು

    ಇದನ್ನೂ ಓದಿ:  ಸಂಕ್ರಾಂತಿಗೆ ನಿಮ್ಮ ಮನೆಯಲ್ಲಿರಲಿ ಅವಲಕ್ಕಿ ಸಿಹಿ ಪೊಂಗಲ್

  • ಸಂಕ್ರಾಂತಿಗೆ ಚಟಾಪಟ್ ಅಂತಾ ಮಾಡಿ ಸಕ್ಕರೆ ಅಚ್ಚು

    ಸಂಕ್ರಾಂತಿಗೆ ಚಟಾಪಟ್ ಅಂತಾ ಮಾಡಿ ಸಕ್ಕರೆ ಅಚ್ಚು

    ಕರ ಸಂಕ್ರಾಂತಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಉಳಿದುಕೊಂಡಿದೆ. ದೊಡ್ಡವರಿಗೆ ಪೂಜೆ ಪುನಸ್ಕಾರ ಮಾಡೋದರ ಚಿಂತೆಯಾದ್ರೆ, ಮಕ್ಕಳಿಗೆ ಸಕ್ಕರೆ ಅಚ್ಚು ತಿನ್ನುವ ಆಸೆ. ಸಂಕ್ರಾಂತಿ ಸಮೀಪಿಸುತ್ತಿದ್ದಂತೆ ಬಣ್ಣ ಬಣ್ಣದ ಸಕ್ಕರೆ ಅಚ್ಚುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತೇವೆ. ಖರೀದಿ ವೇಳೆ ಯಾವ ಸಕ್ಕರೆ ಅಚ್ಚು ಮಿಠಾಯಿ ಒಳ್ಳೆಯದು? ಗುಣಮಟ್ಟ ಹೇಗಿರುತ್ತೆ ಎಂಬ ಪ್ರಶ್ನೆ ಗ್ರಾಹಕರಲ್ಲಿ ಹುಟ್ಟಿಕೊಳ್ಳುತ್ತವೆ. ಈ ಎಲ್ಲ ಟೆನ್ಷನ್ ಬದಿಗಿಟ್ಟು ಮನೆಯಲ್ಲಿ ಸಕ್ಕರೆ ಅಚ್ಚು ಮಾಡಿ ಆರೋಗ್ಯಕರ ಸಂಕ್ರಾಂತಿ ಆಚರಿಸಿ.

    ಬೇಕಾಗುವ ಸಾಮಾಗ್ರಿಗಳು
    1. ಸಕ್ಕರೆ – ಅರ್ಧ ಕೆಜಿ
    2. ಹಾಲು – ಕಾಲು ಕಪ್
    3. ನೀರು – ಕಾಲು ಕಪ್
    4. ಮೊಸರು – ಕಾಲು ಕಪ್
    5. ಸಕ್ಕರೆ ಅಚ್ಚು ಮಾಡುವ ಮರದ ಮೌಲ್ಡ್ ಅಥವಾ ಪ್ಲಾಸ್ಟಿಕ್
    6. ಫುಡ್ ಕಲರ್ – ಬೇಕಿದ್ದಲ್ಲಿ

    ಮಾಡುವ ವಿಧಾನ
    * ಮೊದಲಿಗೆ ನೀವು ಸಕ್ಕರೆ ಅಚ್ಚು ಮಾಡಲು ಮರದ ಮೌಲ್ಡ್ ಬಳಸುತ್ತಿದ್ದರೆ, ಅದನ್ನು 3 – 4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಸಕ್ಕರೆ ಪಾಕ ಮಾಡುವಾಗ ನೀರಿನಿಂದ ತೆಗೆದು ಒಣಗಿದ ಬಟ್ಟೆಯಲ್ಲಿ ಒರೆಸಿಡಿ. ಪ್ಲಾಸ್ಟಿಕ್ ಅಥವಾ ಫೈಬರ್ ಮೌಲ್ಡ್ ಆಗಿದ್ರೆ ಡೈರೆಕ್ಟ್ ಆಗೇ ಹಾಕಬಹುದು.
    * ಸಕ್ಕರೆ ಪಾಕ ತಯಾರಿಸಲು ಗಟ್ಟಿ ತಳದ ಪಾತ್ರೆ ಬಳಸಿ.
    * ಪಾತ್ರೆಗೆ ಸಕ್ಕರೆ ಹಾಕಿ ಅದಕ್ಕೆ ಕಾಲು ಕಪ್ ನೀರು ಹಾಕಿ ಕುದಿಸಿ. (ಸಕ್ಕರೆಯನ್ನು ನೀರಿನಲ್ಲಿ ಕರಗಿಸಿಯೂ ಬಳಸಬಹುದು)


    * ಸಕ್ಕರೆ ಕರಗಿದ ಮೇಲೆ ಅದಕ್ಕೆ ಕಾಲು ಕಪ್ ಹಾಲು ಹಾಕಿ 2-3 ನಿಮಿಷ ಕುದಿಸಿ.
    * ಬಳಿಕ ಮಿಶ್ರಣಕ್ಕೆ ಕಾಲು ಕಪ್ ಮೊಸರು ಹಾಕಿ 2-3 ನಿಮಿಷ ಕುದಿಸಿ. ಪಾಕ ಹಾಲು ಒಡೆದಂತೆ ಆಗುತ್ತದೆ. (ಹಾಲು, ಮೊಸರು ಬಳಸುವುದರಿಂದ ಅಚ್ಚು ಮೃದುವಾಗಿರುತ್ತದೆ)
    * ಈಗ ಸಕ್ಕರೆ ಪಾಕದ ಮಿಶ್ರಣವನ್ನು ಮತ್ತೊಂದು ಪಾತ್ರೆಗೆ ಸೋಸಿಕೊಳ್ಳಿ.
    * ಈಗ ಮರದ ಮೌಲ್ಡ್‍ಗೆ ಎರಡು ಕಡೆ ರಬ್ಬರ್ ಬ್ಯಾಂಡ್ ಹಾಕಿಡಿ. ಏಕೆಂದರೆ ಪಾಕ ಮಾಡಿ ರಬ್ಬರ್ ಬ್ಯಾಂಡ್ ಹಾಕುವಷ್ಟರಲ್ಲಿ ಪಾಕ ಗಟ್ಟಿ ಆಗಿರುತ್ತದೆ.
    * ಈಗ ಸೋಸಿಕೊಂಡ ಪಾಕವನ್ನು ಮತ್ತೆ ಒಲೆಯ ಮೇಲಿಟ್ಟು. ಚೆನ್ನಾಗಿ ಕುದಿಸಿ… ಚೆನ್ನಾಗಿ ಬಬಲ್ಸ್ ಬರುತ್ತದೆ.(ಕಡಿಮೆ ಉರಿಯಲ್ಲಿ ಕುದಿಸಿ).

    * ಪಾಕ್ ಥಿಕ್‍ನೆಸ್ ಬಂದಮೇಲೆ ಡೈರೆಕ್ಟ್ ಅಚ್ಚಿನ ಮೌಲ್ಡ್‍ಗೆ ಹಾಕಿ.. 10-15 ನಿಮಿಷ ಬಿಟ್ಟು ಮೌಲ್ಡ್‍ನಿಂದ ತೆಗೆದರೆ ಸಕ್ಕರೆ ಅಚ್ಚು ರೆಡಿ.
    ( ಸಕ್ಕರೆ ಅಚ್ಚು ಕಲರ್ ಕಲರ್ ಬೇಕಿದ್ದಲ್ಲಿ ಪಾಕ್ ಥಿಕ್‍ನೆಸ್ ಬರೋವಾಗ ಫುಡ್ ಕಲರ್ ಸೇರಿಸಿಕೊಳ್ಳಿ)
    * ಅಚ್ಚು ತೆಗೆಯುವಾಗ ಮುರಿದು ಹೋದ್ರೆ.. ಮತ್ತೆ ಪಾತ್ರೆಗೆ ಹಾಕಿ ಒಲೆಯ ಮೇಲಿಟ್ಟು ಬಿಸಿ ಮಾಡಿ ಅಚ್ಚು ಮಾಡಬಹುದು.

  • ವಾಂಗಿಬಾತ್, ಚಿತ್ರಾನ್ನಕ್ಕಾಗಿ ಚಂದನ್-ದೀಪಿಕಾ ನಡ್ವೆ ಗಲಾಟೆ

    ವಾಂಗಿಬಾತ್, ಚಿತ್ರಾನ್ನಕ್ಕಾಗಿ ಚಂದನ್-ದೀಪಿಕಾ ನಡ್ವೆ ಗಲಾಟೆ

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ರಲ್ಲಿ ವಾಂಗಿಬಾತ್ ಮತ್ತು ಚಿತ್ರಾನ್ನಕ್ಕಾಗಿ ಚಂದನ್ ಆಚಾರ್ ಮತ್ತು ದೀಪಿಕಾ ದಾಸ್ ಮಧ್ಯೆ ಗಲಾಟೆ ನಡೆದಿದೆ.

    ದೀಪಿಕಾ ಮತ್ತು ಚಂದನ್ ಸೇರಿದಂತೆ  ಮನೆಯ ಸದಸ್ಯರು ಸೇರಿಕೊಂಡು ಅಡುಗೆ ಮಾಡುತ್ತಿದ್ದರು. ಈ ವೇಳೆ ದೀಪಿಕಾ ದಾಸ್ ಮತ್ತು ಚಂದನ್ ಆಚಾರ್ ಮಧ್ಯೆ ಅಡುಗೆ ಮಾಡುವ ವಿಚಾರಕ್ಕೆ ವಾಗ್ವಾದ ನಡೆದಿದೆ. ಚಂದನ್, ನಾಳೆ ನೀವು ಮಾಡಿ, ನಾಳಿದ್ದು ನಾನು ಅಡುಗೆ ಮಾಡುತ್ತೀನಿ ಎಂದು ಹೇಳಿದ್ದಾರೆ. ಆಗ ದೀಪಿಕಾ ನಾಳೆ ವಾಂಗಿಬಾತ್ ಮಾಡುತ್ತೀನಿ ಎಂದರು. ಚಂದನ್ ನಾಳಿದ್ದು ನಾನು ಚಿತ್ರಾನ್ನ ಮಾಡುತ್ತೇನೆ ಎಂದು ಇಬ್ಬರು ಚರ್ಚಿಸುತ್ತಿದ್ದರು. ಕೊನೆಗೆ ಚಿತ್ರಾನ್ನ ಮಾಡೋದಾ, ವಾಂಗಿಬಾತ್ ಮಾಡೋದಾ ಎಂಬ ಕಾರಣಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆಯಿತು.

    ಆಗ ಕೋಪಗೊಂಡು ದೀಪಿಕಾ, ಚಂದನ್ ನೀವು ನನಗೆ ತುಂಬಾ ಇರಿಟೇಟ್ ಮಾಡುತ್ತಿದ್ದೀರಾ. ಎಲ್ಲರೂ ಇಲ್ಲಿ ಬೇರೆ ಬೇರೆ ಮನಸ್ಥಿತಿಯಲ್ಲಿ ಇದ್ದಾರೆ. ನಿಮ್ಮ ತರ ಯಾರೂ ಇಲ್ಲ, ಬೇರೆಯವರ ಬಗ್ಗೆ ಮಾತನಾಡಿಬೇಡಿ. ನಿಮ್ಮ ಮನಸ್ಥಿತಿ ಬಗ್ಗೆ ತಿಳಿದುಕೊಳ್ಳಿ ಎಂದು ಗರಂ ಆದರು. ಆಗ ಚಂದನ್, ನಾವೇನು ಇಲ್ಲಿ ಸುಮ್ಮನೆ ತಿಂದುಕೊಂಡು ಹೋಗಬೇಕಾ. ನನ್ನದೇ ನಡಿಯಬೇಕು, ನನ್ನದೇ ಆಗಬೇಕು. ನಿಮ್ಮ ತರಹದ ಮನಸ್ಥಿತಿ ನನ್ನಲಿಲ್ಲ ಎಂದು ವಾದ ಮಾಡಿದರು.

    ಬೇರೆಯವರ ಬಗ್ಗೆ ಬೆರಳು ತೋರಿಸಬೇಡಿ. ಸಣ್ಣ ಮನಸ್ಥಿತಿ ಬಿಡಿ, ನನ್ನ ಹತ್ತಿರ ವಾದ ಮಾಡಕ್ಕೆ ಬರಬೇಡಿ ಎಂದು ದೀಪಿಕಾ ಹೇಳಿದರೆ, ಚಂದನ್, ಡಬಲ್ ಗೇಮ್ ಆಡಬೇಡಿ, ನನ್ನ ಮನಸ್ಥಿತಿ ನನಗೆ ಗೊತ್ತು, ನಾಲಿಗೆ ಮೇಲೆ ಒಂದು ವಿಚಾರ ಇರಲಿ ಎಂದು ಒಬ್ಬರಿಗೊಬ್ಬರು ಕಿತ್ತಾಡಿದರು. ಕೊನೆಗೆ ದೀಪಿಕಾ ಬೇಸರಗೊಂಡು ಅಡುಗೆ ಮನೆಯಿಂದ ಹೊರ ಹೋದರು.

    ಇತ್ತ ಚಂದನ್, ಕ್ಯಾಪ್ಟನ್ ಕಿಶನ್ ಜೊತೆಯೂ ವಾದ ಮಾಡಿದ್ದಾರೆ. ನನ್ನದೇ ನಡಿಯಬೇಕು ಅಂತಿದೆಯಲ್ಲಾ ಅದನ್ನು ಮನೆಯಲ್ಲಿ ಇಟ್ಟುಕೊಳ್ಳಲಿ ಎಂದು ದೀಪಿಕಾ ಬಗ್ಗೆ ಹೇಳಿದ್ದಾರೆ. ಏನಾದರೂ ಆದರೆ ಚಂದನ್ ಎಂದು ಮನೆಯವರೆಲ್ಲಾ ಹೇಳುತ್ತಾರೆ. ಇದೊಂದು ಸಣ್ಣ ವಿಚಾರ, ಇದನ್ನೂ ಇಷ್ಟೊಂದು ಕಾಂಪ್ಲಿಕೇಟ್ ಮಾಡಬಾರದಿತ್ತು. ನಮ್ಮನ್ನು ಮಾತಾಡಕ್ಕೂ ಬಿಡಲ್ಲ, ಅಡುಗೆ ಮಾಡಕ್ಕೂ ಬಿಡಲ್ಲ, ಮೇಲೊಂದು ಹಿಂದೊಂದು ಮಾತನಾಡಕ್ಕೆ ಬರಲ್ಲ ಎಂದು ಚಂದನ್ ವಾದ ಮಾಡಿದರು.

  • ಮನೆಯಲ್ಲೇ ಕೇಕ್ ತಯಾರಿಸಿ ನ್ಯೂ ಇಯರ್ ಸೆಲೆಬ್ರೇಟ್ ಮಾಡಿ

    ಮನೆಯಲ್ಲೇ ಕೇಕ್ ತಯಾರಿಸಿ ನ್ಯೂ ಇಯರ್ ಸೆಲೆಬ್ರೇಟ್ ಮಾಡಿ

    ನ್ಯೂ ಇಯರ್‌ಗೆ ಈಗಾಗಲೇ ಸಲಕ ಸಿದ್ಧತೆ ನಡೆಯುತ್ತಿದೆ. ಇನ್ನೂ ಒಂದು ದಿನದಲ್ಲಿ ಹೊಸ ವರ್ಷ ಶುರುವಾಗುತ್ತೆ. ನ್ಯೂ ಇಯರ್ ದಿನ ಎಲ್ಲರೂ ಕೇಕ್ ಕಟ್ ಮಾಡಿ ವರ್ಷ ಪೂರ್ತಿ ತಮ್ಮ ಜೀವನ ಸಿಹಿಯಾಗಿರಲಿ ಎಂದು ಸಂಭ್ರಮಿಸುತ್ತಾರೆ. ಕೆಲವರು ಬೇಕರಿಯಿಂದ ಕೇಕ್ ತಂದು ನ್ಯೂ ಇಯರ್ ಸೆಲೆಬ್ರೇಷನ್ ಮಾಡುತ್ತಾರೆ. ಹೊಸ ವರ್ಷ ಎಂದರೆ ಹೊಸದಾಗಿಯೇ ವರ್ಷವನ್ನು ಆರಂಭಿಸಬೇಕು. ಹೀಗಾಗಿ ನೀವೇ ಮನೆಯಲ್ಲಿ ಸಿಂಪಲ್ ಆಗಿ ಕೇಕ್ ಮಾಡಿ, ನ್ಯೂ ಇಯರ್ ಆಚರಣೆ ಮಾಡಿ. ಆದ್ದರಿಂದ ನಿಮಗೆ ಎಗ್‍ಲೆಸ್ ಕೇಕ್ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    1. ಮೈದಾ – 1 ಬಟ್ಟಲು
    2. ಸಕ್ಕರೆ ಪುಡಿ – 1 ಬಟ್ಟಲು
    3. ಎಣ್ಣೆ – 4-5 ಚಮಚ
    4. ಅಡುಗೆ ಸೋಡಾ – ಚಿಟಿಕೆ
    5. ಹಾಲು – ಕಾಲು ಕಪ್
    6. ವೆನಿಲ್ಲಾ ಎಸೆನ್ಸ್ – 1 ಚಮಚ
    7. ಉಪ್ಪು – ಚಿಟಿಕೆ
    8. ತುಪ್ಪ – 1 ಚಮಚ

    ಮಾಡುವ ವಿಧಾನ
    * ಮೊದಲಿಗೆ ಕೇಕ್ ಪ್ಯಾನ್‍ಗೆ ತುಪ್ಪ ಸವರಿ ಕೇಕ್ ಪೇಪರ್ ಹಾಕಿ ಇಡಿ.
    * ಈಗ ಒಂದು ಮಿಕ್ಸಿಂಗ್ ಬೌಲ್‍ಗೆ ಸಕ್ಕರೆ ಪುಡಿ, ಎಣ್ಣೆ ಸೇರಿಸಿ ಚೆನ್ನಾಗಿ ಗಂಟುಗಳಿಲ್ಲದಂತೆ ಮಿಕ್ಸ್ ಮಾಡಿ.
    * ಅದೇ ಮಿಶ್ರಣಕ್ಕೆ ಮೈದಾ ಹಿಟ್ಟು, ಚಿಟಿಕೆ ಉಪ್ಪು, ಅಡುಗೆ ಸೋಡಾ ಸೇರಿಸಿ ಕಲಸಿ.
    * ಈಗ ಹಾಲು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ಚೆನ್ನಾಗಿ ಗಂಟುಗಳು ಇಲ್ಲದಂತೆ ಮಿಕ್ಸ್ ಮಾಡಿ.
    * ಬಳಿಕ ವೆನಿಲಾ ಎಸೆನ್ಸ್ ಸೇರಿಸಿ ಚೆನ್ನಾಗಿ ಕಲಸಿ. ಗಂಟುಗಳು ಇಲ್ಲದಂತೆ ನಯವಾದ ಮಿಶ್ರಣ ರೆಡಿ ಮಾಡಬೇಕು.
    (ಬೇಕಿದ್ದರೆ ಬೇರೆ ಫ್ಲೇವರ್‍ನ ಎಸೆನ್ಸ್ ಅನ್ನು ಬಳಸಿಕೊಳ್ಳಬಹುದು)
    * ಈಗ ಮಿಶ್ರಣವನ್ನು ತುಪ್ಪ ಸವರಿ ಕೇಕ್ ಪೇಪರ್ ಹಾಕಿಟ್ಟಿದ್ದ ಕೇಕ್ ಪ್ಯಾನ್‍ಗೆ ಹಾಕಿ. ಬಬಲ್ಸ್ ಬರದಂತೆ ನೋಡಿಕೊಳ್ಳಿ.
    * ಒಂದು ಕುಕ್ಕರ್‌ಗೆ ಅರ್ಧ ಇಂಚಿನಷ್ಟು ಮರಳು ಹಾಕಿ 5 ನಿಮಿಷ ಕಾದ ಮೇಲೆ ಪ್ಯಾನ್ ಸ್ಟಾಂಡ್ ಇಟ್ಟು ಮಿಶ್ರಣ ಹಾಕಿದ ಪ್ಯಾನ್ ಅನ್ನು ಇಡಿ.
    * ಕುಕ್ಕರ್‌ಗೆ ವಿಶಲ್ ಹಾಕದೇ 10-15 ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿ..
    * ಎಗ್‍ಲೆಸ್ ವೆನಿಲಾ ಕೇಕ್ ಸವಿಯಲು ರೆಡಿ.

  • ಲೇಸ್ ಆಮ್ಲೆಟ್ ತಯಾರಿಸಿದ ರಾಗಿಣಿಗೆ ನೆಟ್ಟಿಗರಿಂದ ತರಾಟೆ

    ಲೇಸ್ ಆಮ್ಲೆಟ್ ತಯಾರಿಸಿದ ರಾಗಿಣಿಗೆ ನೆಟ್ಟಿಗರಿಂದ ತರಾಟೆ

    ಬೆಂಗಳೂರು: ಸ್ಯಾಂಡಲ್‍ವುಡ್ ತುಪ್ಪದ ಬೆಡಗಿ ನಟಿ ರಾಗಿಣಿ ದ್ವಿವೇದಿ ಲೇಸ್‍ನಲ್ಲಿ ಆಮ್ಲೆಟ್ ತಯಾರಿಸಿದ್ದಕ್ಕೆ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ.

    ಇತ್ತೀಚೆಗೆ ರಾಗಿಣಿ ತಮ್ಮ ಮನೆಯಲ್ಲಿ ಹೊಸ ರೆಸಿಪಿಯನ್ನು ತಯಾರಿಸಿದ್ದರು. ಅಡುಗೆ ಮಾಡುತ್ತಿರುವ ವಿಡಿಯೋವನ್ನು ರಾಗಿಣಿ ತಮ್ಮ ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ರಾಗಿಣಿ ಅವರನ್ನು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.

    ವಿಡಿಯೋದಲ್ಲಿ ರಾಗಿಣಿ ‘ಲೇಸ್ ಆಮ್ಲೆಟ್’ ಎನ್ನುವ ಹೊಸ ರೆಸಿಪಿ ಮಾಡಿದ್ದಾರೆ. ಮೊದಲಿಗೆ ನಾಲ್ಕು ಮೊಟ್ಟೆಯನ್ನು ಒಂದು ಬೌಲ್‍ಗೆ ಹಾಕಿಕೊಂಡು, ಅದಕ್ಕೆ ಈರುಳ್ಳಿ, ಮಸಾಲೆ ಪುಡಿ, ಮೆಣಸಿನ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿದ್ದಾರೆ. ನಂತರ ಅದನ್ನು ಲೇಸ್ ಚಿಪ್ಸ್ ಪಾಕೆಟ್‍ಗೆ ಸ್ವಲ್ಪ ಹಾಕಿ ಕುದಿಯುತ್ತಿರುವ ನೀರಿನೊಳಗೆ ಇಟ್ಟು ಬೇಯಿಸಿದ್ದಾರೆ.

    ಈ ವಿಡಿಯೋ ನೋಡಿದ ಅಭಿಮಾನಿಗಳು ರಾಗಿಣಿ ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ. ಈ ರೀತಿ ಪ್ಲಾಸ್ಟಿಕ್‍ನೊಳಗೆ ಬೇಯಿಸಿದ ಆಹಾರ ತಿನ್ನಬಾರದು, ಇದು ವಿಷ. ನಿಮ್ಮನ್ನು ಫಾಲೋ ಮಾಡುವ ಅಭಿಮಾನಿಗಳಿಗೆ ಇದೇನಾ ನೀವು ಹೇಳುವ ಸಂದೇಶ ಎಂದು ರಾಗಿಣಿ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ರಾಗಿಣಿ ತಯಾರಿಸಿದ ಈ ಹೊಸ ರೆಸಿಪಿಯ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿ ಕೆಲವರು, ರೆಪಿಸಿ ತುಂಬಾ ಚೆನ್ನಾಗಿದೆ ನಾವು ಮನೆಯಲ್ಲಿ ಟ್ರೈ ಮಾಡುತ್ತೇವೆ ಎಂದು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.