Tag: cooking

  • ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ

    ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ

    ಕೊರೊನಾ ಲಾಕ್‍ಡೌನ್ ಇರುವುದರಿಂದ ಹೋಟೆಲ್‍ಗಳಿಗೆ ಹೋಗಿ ತಿನ್ನಲು ಸಾಧ್ಯವಿಲ್ಲ, ಪಾರ್ಸೆಲ್ ತರಿಸಬಹುದು ಆದರೆ ಹಣ ತುಂಬಾ ವ್ಯಹಿಸಬೇಕಾಗುತ್ತದೆ. ಹೀಗಾಗಿ ನೀವು ಮನೆಯಲ್ಲಿಯೇ ಮಂಗಳೂರು ಶೈಲಿಯ ಚಿಕನ್ ಸುಕ್ಕಾವನ್ನು ಮಾಡಿ ಸವಿಯ ಬಹುದಾಗಿದೆ.

    ಬೇಕಾಗುವ ಸಾಮಾಗ್ರಿಗಳು:
    * ಚಿಕನ್- 1 ಕೆ,ಜಿ
    * ಈರುಳ್ಳಿ- 2
    * ಏಲಕ್ಕಿ- 2 ಟೀ ಸ್ಪೂನ್
    * ಅಡುಗೆ ಎಣ್ಣೆ -1 ಕಪ್
    * ತೆಂಗಿನ ಕಾಯಿ ತುರಿ- 1/2 ಕಪ್
    * ಕೊತ್ತಂಬರಿಕಾಳು – 1 ಟೀ ಸ್ಪೂನ್
    * ಸಾಸಿವೆ -1/4 ಟೀ ಸ್ಪೂನ್
    * ಕಾಳು ಮೆಣಸು- 1/4 ಟೀ ಸ್ಪೂನ್
    * ಲವಂಗ-4
    * ಜೀರಿಗೆ- 1 ಟೀ ಸ್ಪೂನ್
    * ಒಣಮೆಣಸಿನಕಾಯಿ- 1/4
    * ಅರಿಶಿಣ – 1ಟೀ ಸ್ಪೂನ್
    * ಬೆಳ್ಳುಳ್ಳಿ – 1
    * ಶುಂಠಿ- ಚಿಕ್ಕ ತುಂಡು
    * ಉಪ್ಪು- ರುಚಿಗೆತಕ್ಕಷ್ಟು
    * ಹುಣಸೆಹಣ್ಣು – ಸ್ವಲ್ಪ

    ಮಾಡುವ ವಿಧಾನ:

    * ಮೊದಲಿಗೆ ಗ್ಯಾಸ್ ಮೇಲೆ ಬಾಣಲೆ ಇಟ್ಟು ಅದಕ್ಕೆ ತುಸು ಎಣ್ಣೆ ಹಾಕಿ ಕೊತ್ತಂಬರಿಕಾಳು, ಜೀರಿಗೆ , ಸಾಸಿವೆ, ಕಾಳುಮೆಣಸು, ಲವಂಗ, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಎಲ್ಲವನ್ನು ಹಾಕಿ ಪರಿಮಳ ಬರುವವರೆಗೆ ಹುರಿದುಕೊಳ್ಳಬೇಕು. ಇದನ್ನೂ ಓದಿ:  ಘಮ ಘಮಿಸುವ ಮಸಾಲ ಚಿಕನ್ ಫ್ರೈ

    * ಹುರಿದು ಮಸಾಲೆಯನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ ಚಿಟಿಕೆ ಅರಿಶಿಣ, ಹುಣಸೆಹಣ್ಣು, ತೆಂಗಿನತುರಿ ಹಾಗೂ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಬೇಕು.

    * ಅಗಲವಾದ ಪಾತ್ರೆ ಇಟ್ಟುಕೊಂಡು ಅದಕ್ಕೆ ಎಣ್ಣೆ ಹಾಕಿ ನಂತರ ಸಾಸಿವೆ, ಇರುಳ್ಳಿ, ಏಲಕ್ಕಿ ಹಾಕಿ ಚೆನ್ನಾಗಿ ಪ್ರೈ ಮಾಡಬೇಕು.

    * ಚಿಕನ್ ಸೇರಿಸಿ ನಂತರ ಉಪ್ಪು ಸೇರಿಸಿ ಬೇಯಲು ಬಿಡಬೇಕು. ಚಿಕನ್ ನೀರು ಬಿಟ್ಟುಕೊಳ್ಳುತ್ತಿದ್ದಂತೆ ರುಬ್ಬಿಕೊಂಡ ಮಸಾಲೆ ಸೇರಿಸಿ ರುಚುಗೆ ತಕ್ಕಷ್ಟು ಉಪ್ಪು ಸೇರಿಸಿದರೆ ರುಚಿಕರವಾದ ಚಿಕನ್ ಸುಕ್ಕಾ ಸವಿಯಲು ಸಿದ್ಧವಾಗುತ್ತದೆ.

  • ತಂಪಾದ ಸೌತೆಕಾಯಿ ಮಜ್ಜಿಗೆ ಹುಳಿ ಮಾಡುವ ಸುಲಭ ವಿಧಾನ

    ತಂಪಾದ ಸೌತೆಕಾಯಿ ಮಜ್ಜಿಗೆ ಹುಳಿ ಮಾಡುವ ಸುಲಭ ವಿಧಾನ

    ಬಿಸಿಲ ಬೇಗೆಗೆ ತಂಪಾದ ಆಹಾರವನ್ನು ಸೇವಿಸಬೇಕು ಎನ್ನಿಸುತ್ತದೆ. ಮಧ್ಯಾಹ್ನದ ವೇಳೆ ಬಿಸಿಲು ಹೆಚ್ಚಾಗಿರುತ್ತದೆ. ಈ ವೇಳೆ ರೈಸ್ ಜೊತೆಗೆ ಏನು ಮಾಡುವುದು ಎಂದು ಯೋಚಿಸುವವರಿಗೆ ತುಂಬಾ ಸುಲಭವಾಗಿ ಆರೋಗ್ಯಕರವಾದ ಮತ್ತು ತಂಪಾದ ಸೌತೆಕಾಯಿ ಮಜ್ಜಿಗೆ ಹುಳಿ ಮಾಡುವ ಸುಲಭ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಗ್ರಿಗಳು:
    * ಸೌತೆಕಾಯಿ-2
    * ಮೊಸರು- 1 ಕಪ್
    * ತೆಂಗಿನಕಾಯಿ-1ಕಪ್
    * ಹಸಿಮೆಣಸಿನಕಾಯಿ-4 ರಿಂದ 5
    * ಕೊತ್ತಂಬರಿ
    * ಕರಿಬೇವು
    * ಸಾಸಿವೆ -1 ಸ್ಪೂನ್
    * ಅಡುಗೆ ಎಣ್ಣೆ- 4 ಸ್ಪೂನ್
    * ನೆನಸಿಟ್ಟ ಕಡ್ಲೆಬೆಳೆ – 2ಟೀ ಸ್ಪೂನ್
    * ಅರಿಶಿಣ- 1 ಸ್ಪೂನ್
    * ಜೀರಿಗೆ- 1 ಸ್ಪೂನ್
    * ಇಂಗು -ಚಿಟಿಕೆ
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:

    * ಒಂದು ಪಾತ್ರೆಯಲ್ಲಿ ನೀರು ಸೌತೆಕಾಯಿ ಹಾಕಿ ಚೆನ್ನಾಗಿ ಬೇಯಲು ಬಿಡಬೇಕು.
    * ನಂತರ ಒಂದು ಮಿಕ್ಸಿ ಜಾರಿಗೆ ತೆಂಗಿನಕಾಯಿ, ಹಸಿಮೆಣಸಿನಕಾಯಿ, ನೆನೆಸಿಟ್ಟ ಕಡ್ಲೆಬೇಳೆ, ಜೀರಿಗೆ, ಅರಿಶಿಣ, ಕೊತ್ತಂಬರಿಯನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.

    * ನಂತರ ಒಂದು ಪಾತ್ರೆಗೆ ಅಡುಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಬೇಕು. ಬಿಸಿಯಾದ ಎಣ್ಣೆಗೆ ಸಾಸಿವೆ ಮತ್ತು ಕರಿಬೇವು, ಇಂಗು ಹಾಕಿ ಪ್ರೈ ಮಾಡಬೇಕು.
    * ಈ ಬಾಣಲೆಗೆ ಈಗಾಗಲೇ ರುಬ್ಬಿ ತಯಾರಿಸಿರುವ ಮಸಾಲೆಯನ್ನು ಹಾಕಬೇಕು. ಹಸಿವಾಸನೆ ಹೋಗುವವರೆಗೆ ಪ್ರೈ ಮಾಡಬೇಕು.

    * ಈ ಒಗ್ಗರಣೆ ಪಾತ್ರೆಗೆ ಈ ಮೊದಲೇ ಬೇಯಿಸಿದ ಸೌತೆಕಾಯಿಯನ್ನು ಹಾಕಿ ಮಸಾಲೆಯೊಂದಿಗೆ ಚೆನ್ನಾಗಿ ಮಿಶ್ರಣ ಮಾಡಬೇಕು.
    * ಸಾಂಬಾರ್ ಚೆನ್ನಾಗಿ ಬೇಯಿಸಿದ ನಂತರ ಇದಕ್ಕೆ ಮೊಸರನ್ನು ಹಾಕಿ ಮಿಶ್ರಣ ಮಾಡಿ ಬೇಕಾದಷ್ಟು ಉಪ್ಪನ್ನು ಹಾಕಬೇಕು. ಈಗ ರುಚಿಯಾದ ಮತ್ತು ತಂಪಾದ ಸೌತೆಕಾಯಿ ಹುಳಿ ಸಿದ್ಧವಾಗುತ್ತದೆ.

  • ಮಂಗಳೂರು ಸ್ಟೈಲ್ ಸ್ಪೆಷಲ್ ಫಿಶ್ ಪುಳಿಮುಂಚಿ ಮಾಡುವ ವಿಧಾನ

    ಮಂಗಳೂರು ಸ್ಟೈಲ್ ಸ್ಪೆಷಲ್ ಫಿಶ್ ಪುಳಿಮುಂಚಿ ಮಾಡುವ ವಿಧಾನ

    ವೀಕೆಂಡ್ ಬಂದ್ರೆ ಸಾಕು ಜನ ನಾನ್ ವೆಜ್ ಮೊರೆ ಹೋಗುತ್ತಾರೆ. ಅಂತೆಯೇ ಪ್ರತಿನಿತ್ಯ ಚಿಕನ್, ಮಟನ್ ತಿಂದು ತಿಂದು ಬೇಜಾರಾಗಿರುತ್ತೆ. ಹೀಗಾಗಿ ಈ ಬಾರಿ ಮಂಗಳೂರು ಸ್ಟೈಲ್ ನ ಸ್ಪೆಷಲ್ ಫಿಶ್ ಪುಳಿಮುಂಚಿ ಮಾಡಿ ಸವಿಯಿರಿ.

    ಬೇಕಾಗುವ ಸಾಮಗ್ರಿಗಳು:
    * ಮೀನು- 1 ಕೆ.ಜಿ
    * ಅಡುಗೆ ಎಣ್ಣೆ – 1 ಕಪ್
    * ಒಣಮೆಣಸಿನಕಾಯಿ – 10 ರಿಂದ 12
    * ಗುಂಟೂರು ಮೆಣಸು – 10
    * ಕೊತ್ತಂಬರಿ ಬೀಜ – 2 ರಿಂದ 3 ಟೀ ಸ್ಪೂನ್
    * ಜೀರಿಗೆ – 1 ಟೀ ಸ್ಪೂನ್
    * ಮೆಂತೆ – 2 ಚಮಚ
    * ಹುಣೆಸೆ ಹಣ್ಣು – ಸ್ವಲ್ಪ
    * ಅರಿಶಿಣ- ಚಿಟಿಕೆ
    * ಟೊಮೆಟೋ- 2
    * ಈರುಳ್ಳಿ -2
    * ಹಸಿಮೆಣಸಿನಕಾಯಿ- 3 ರಿಂದ 4
    * ಶುಂಠಿ- ಒಂದು ಇಂಚು
    * ಉಪ್ಪು ರುಚಿಗೆ ತಕ್ಕಷ್ಟು

    ಮಾಡುವ ವಿಧಾನ:
    * ಮೊದಲು ಕಟ್ ಮಾಡಿಟ್ಟುಕೊಂಡಿರುವ ಮೀನನ್ನು ಅರಿಶಿಣ ಮತ್ತು ಉಪ್ಪು ಹಾಕಿ 5 ನಿಮಿಷಗಳ ಕಾಲ ಇಟ್ಟು ನಂತರ ಚೆನ್ನಾಗಿ ತೊಳೆಯಬೇಕು.
    * ನಂತರ ಮಸಾಲೆಗೆ ಬೇಕಾದ ಒಣ ಮೆಣಸು, ಕೊತ್ತಂಬರಿ ಬೀಜ, ಜೀರಿಗೆ, ಗುಂಟೂರು ಮೆಣಸು, ಮೆಂತೆಯನ್ನು ಪ್ರತ್ಯೇಕವಾಗಿ ಹುರಿದು ಇಟ್ಟುಕೊಳ್ಳಬೇಕು.
    * ಹುರಿದ ಮಸಾಲೆಯೊಂದಿಗೆ ಹುಣಸೆಹಣ್ಣು ಸೇರಿಸಿ ರುಬ್ಬಿಕೊಂಡು ಮಸಾಲೆಯನ್ನು ತಯಾರಿಸಿಟ್ಟುಕೊಳ್ಳಬೇಕು.
    * ಟೊಮೆಟೋ, ಈರುಳ್ಳಿ, ಹಸಿಮೆಣಸಿನಕಾಯಿ, ಶುಂಠಿಯನ್ನು ಸಣ್ಣದಾಗಿ ಕತ್ತರಿಸಿ ಒಂದು ಕಡೆ ಎತ್ತಿಟ್ಟುಕೊಳ್ಳಬೇಕು.


    * ನಂತರ ಒಂದು ಪಾತ್ರೆಯನ್ನು ಸ್ಟೌ ಮೇಲೆ ಇಟ್ಟು 4 ರಿಂದ 5 ಚಮಚ ಎಣ್ಣೆಯನ್ನು ಹಾಕಿ ಬಿಸಿ ಮಾಡಬೇಕು.
    * ಎಣ್ಣೆ ಬಿಸಿಯಾದ ನಂತರ ಈ ಮೊದಲು ಕತ್ತರಿಸಿಟ್ಟ ಟೊಮೆಟೋ, ಈರುಳ್ಳಿ, ಹಸಿಮೆಣಸಿನಕಾಯಿ, ಶುಂಠಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಬೇಕು.
    * ನಂತರ ನಾವು ಈ ಮೊದಲೇ ತಯಾರಿಸಿಟ್ಟ ಮಸಾಲೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
    * ಮಸಾಲೆಯ ಹಸಿ ಅಂಶ ಹೋಗುವವರೆಗೆ ಪ್ರೈ ಮಾಡಿಕೊಳ್ಳಬೇಕು. ನಂತರ 2 ಗ್ಲಾಸ್ ನೀರು ಸೇರಿಸಿ ಚೆನ್ನಾಗಿ ಕುದಿಸಬೇಕು
    * ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಈ ಮೊದಲೇ ತೊಳೆದಿಟ್ಟ ಮೀನನ್ನು ಹಾಕಿ ಚೆನ್ನಾಗಿ ಕುದಿಸಿದರೆ ರುಚಿಯಾದ ಫಿಶ್ ಪುಳಿಮುಂಚಿ ಸವಿಯಲು ಸಿದ್ಧವಾಗುತ್ತದೆ.

  • ರುಚಿಯಾಗಿ ಸಿಂಪಲ್ ಎಗ್ ಬಿರಿಯಾನಿ ಮಾಡೋ ವಿಧಾನ

    ರುಚಿಯಾಗಿ ಸಿಂಪಲ್ ಎಗ್ ಬಿರಿಯಾನಿ ಮಾಡೋ ವಿಧಾನ

    ನಾಳೆ ಭಾನುವಾರ ಹೀಗಾಗಿ ಎಲ್ಲರೂ ಮನೆಯಲ್ಲಿರುತ್ತೀರ. ಅನೇಕರು ಮನೆಯಲ್ಲಿ ಚಿಕನ್, ಮಟನ್ ಅಡುಗೆ ಮಾಡುತ್ತೀರಿ. ಆದರೆ ಪ್ರತಿ ಬಾರಿಯೂ ಚಿಕನ್ ಬಿರಿಯಾನಿ, ಕಬಾಬ್, ಮಟನ್ ತಿಂದು ಬೇಸರವಾಗಿರುತ್ತದೆ. ಹೊಸದಾಗಿ ಏನಾದರೂ ಮಾಡೋಣ ಎಂದು ಪ್ಲಾನ್ ಮಾಡುತ್ತಿರುತ್ತೀರಿ. ಮೊಟ್ಟೆ ಅಂದರೆ ಎಲ್ಲರಿಗೂ ಇಷ್ಟ. ಮೊಟ್ಟೆಯಲ್ಲಿ ಅನೇಕ ಅಡುಗೆಯನ್ನು ತಯಾರಿಸಬಹುದು. ಆದ್ದರಿಂದ ನಿಮಗಾಗಿ ಸ್ಪೈಸಿ ಆದ ಎಗ್ ಬಿರಿಯಾನಿ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಗ್ರಿಗಳು
    1. ಮೊಟ್ಟೆ – 5
    2. ಅಕ್ಕಿ – ಒಂದು ಗ್ಲಾಸ್
    3. ಈರುಳ್ಳಿ – 2
    4. ಟೊಮೆಟೊ – 3
    5. ಹಸಿರು ಮೆಣಸಿನಕಾಯಿ – 3
    6. ಖಾರದ ಪುಡಿ- 1.5 ಚಮಚ
    7. ಗರಂ ಮಸಾಲ – 1.5 ಚಮಚ
    8. ದನಿಯಾ ಪುಡಿ – 1.5 ಚಮಚ
    9. ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 2 ಚಮಚ


    10. ಎಣ್ಣೆ – 3 ಚಮಚ
    11. ಉಪ್ಪು – ರುಚಿಗೆ ತಕ್ಕಷ್ಟು
    12. ಪುದಿನ, ಕೊತ್ತಂಬರಿ ಸೊಪ್ಪು
    13. ಲವಂಗ, ಚಕ್ಕೆ, ಸ್ಟಾರ್ ಹೂ – 2
    14. ಏಲಕ್ಕಿ, ಪಲವ್ ಎಲೆ – 2
    15. ಅರಿಶಿಣ – 1 ಚಮಚ

    ಮಾಡುವ ವಿಧಾನ
    * ಮೊದಲಿಗೆ 5 ಮೊಟ್ಟೆಯನ್ನು ಬೇಯಿಸಿ ಇಟ್ಟುಕೊಳ್ಳಬೇಕು.
    * ಸ್ಟೌವ್ ಮೇಲೆ ಒಂದು ಕುಕ್ಕರ್ ಇಟ್ಟು ಒಂದು ಚಮಚ ಎಣ್ಣೆ ಹಾಕಿ. ಅದಕ್ಕೆ ಅರ್ಧ ಚಮಚ ಖಾರದ ಪುಡಿ, ಅರಿಶಿಣ ಪುಡಿ, ಗರಂ ಮಸಲಾ, ಸ್ವಲ್ಪ ಉಪ್ಪು ಹಾಕಿ ಫ್ರೈ ಮಾಡಿಕೊಳ್ಳಿ.
    * ಅದಕ್ಕೆ ಬೇಯಿಸಿ ಇಟ್ಟುಕೊಂಡಿದ್ದ ಮೊಟ್ಟೆ ಹಾಕಿ ಚೆನ್ನಾಗಿ ಫ್ರೈ ಮಾಡಿ ಒಂದು ಬೌಲ್‍ಗೆ ಎತ್ತಿಟ್ಟುಕೊಳ್ಳಿ.
    * ಈಗ ಅದೇ ಕುಕ್ಕರ್‌ಗೆ 2 ಚಮಚ ಎಣ್ಣೆ ಹಾಕಿ ಅದಕ್ಕೆ ಲವಂಗ, ಚಕ್ಕೆ, ಸ್ಟಾರ್ ಹೂ, ಏಲಕ್ಕಿ ಮತ್ತು ಪಲಾವ್ ಎಲೆ ಹಾಕಿ ಚೆನ್ನಾಗಿ ಫ್ರೈ ಮಾಡಿ.
    * ನಂತರ ಹಸಿರು ಮೆಣಸಿನ ಕಾಯಿ, ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ.
    * ಬಳಿಕ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿ.


    * ನಂತರ ಟೊಮೆಟೋ ಹಾಕಿ ಚೆನ್ನಾಗಿ ಫ್ರೈ ಮಾಡಿ (ಸಣ್ಣದಾಗಿ ಕಟ್ ಮಾಡಿರಬೇಕು)
    * ಈಗ ಪುದಿನ, ಕೊತ್ತಂಬರಿ ಸೊಪ್ಪು ಸ್ವಲ್ಪ ಹಾಕಿ. ದನಿಯಾ, ಗರಂ ಮಸಲಾ, ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಫ್ರೈ ಮಾಡಿ.
    * ಅದಕ್ಕೆ ಒಂದು ಗ್ಲಾಸ್ ಅಕ್ಕಿ ತೆಗೆದುಕೊಂಡಿದ್ದರೆ ಅದಕ್ಕೆ 2 ಗ್ಲಾಸ್ ನೀರು ಹಾಕಿ. (ನೀವು ಅಕ್ಕಿ ತೆಗೆದುಕೊಳ್ಳುವುದರ ಮೇಲೆ ನೀರು ಹಾಕಿಕೊಳ್ಳಬೇಕು.)
    * ಮತ್ತೆ ಸ್ವಲ್ಪ ಪುದಿನ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕುದಿಸಿ.
    * ಕೊನೆಯಲ್ಲಿ ಬೇಯಿಸಿದ ಮೊಟ್ಟೆ ಹಾಕಿ ಕುಕ್ಕರ್ ಮುಚ್ಚಿ 2 ವಿಷಲ್ ಕೂಗಿಸಿದರೆ ರುಚಿಯಾದ ಎಗ್ ಬಿರಿಯಾನಿ ಸವಿಯಲು ಸಿದ್ಧ

  • ಒಲೆ ಪಕ್ಕದಿಂದ ಎದ್ದಿಲ್ಲವೆಂದು ಸೌದೆಯಿಂದ ಹೊಡೆದ ಮಗ – ಊಟ ಮಾಡಿ ಮಲಗಿದ್ದ ತಂದೆ ಬೆಳಗ್ಗೆ ಸಾವು

    ಒಲೆ ಪಕ್ಕದಿಂದ ಎದ್ದಿಲ್ಲವೆಂದು ಸೌದೆಯಿಂದ ಹೊಡೆದ ಮಗ – ಊಟ ಮಾಡಿ ಮಲಗಿದ್ದ ತಂದೆ ಬೆಳಗ್ಗೆ ಸಾವು

    ಚಿಕ್ಕಮಗಳೂರು: ಅಡುಗೆ ಮಾಡುವ ಒಲೆ ಪಕ್ಕ ಮಲಗಿದ್ದ ಅಪ್ಪ ಹೇಳಿದ ಕೂಡಲೇ ಎದ್ದೇಳಲಿಲ್ಲ ಎಂದು ಒಲೆಯಲ್ಲಿ ಉರಿಯುತ್ತಿದ್ದ ಸೌದೆಯನ್ನ ತೆಗೆದು ಅಪ್ಪನಿಗೆ ಹೊಡೆದು ಮಗನೇ ಕೊಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಬೆಳಗೋಡು ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಬಸಯ್ಯ (63) ಎಂದು ಗುರುತಿಸಲಾಗಿದೆ. 33 ವರ್ಷದ ಮಂಜುನಾಥ್ ಅಪ್ಪನನ್ನೇ ಕೊಲೆಗೈದಿರುವ ಪುತ್ರ.

    ಮೃತ ಬಸಯ್ಯನಿಗೆ ಇಬ್ಬರು ಪುತ್ರರು. ಹಿರಿಯ ಮಗ ಮದುವೆಯಾಗಿ ಬಣಕಲ್ ಬಳಿ ಹಳ್ಳಿಯೊಂದರಲ್ಲಿ ಬೇರೆ ವಾಸವಿದ್ದಾನೆ. ಕಿರಿಯ ಮಗ ಮಂಜುನಾಥ್‍ಗೆ ಮದುವೆಯಾಗಿಲ್ಲ. ಬಸಯ್ಯನ ಪತ್ನಿಗೆ ಕಳೆದೊಂದು ವರ್ಷದಿಂದ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಆದ್ದರಿಂದ ಅಪ್ಪ-ಮಗನೇ ಅಡುಗೆ ಮಾಡಿಕೊಂಡು ಊಟ ಮಾಡುತ್ತಿದ್ದರು. ಗುರುವಾರ ಸಂಜೆ ಇಬ್ಬರು ಕೂಲಿ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದಾರೆ.

    ಬಸಯ್ಯ ಅಡುಗೆ ಮಾಡುವ ಒಲೆ ಪಕ್ಕದಲ್ಲಿ ಮಲಗಿದ್ದರು. ತಡವಾಗಿ ಮನೆಗೆ ಬಂದ ಮಗ ಅಪ್ಪನನ್ನ ಅಡುಗೆ ಮಾಡಬೇಕು ಎದ್ದೇಳು ಎಂದು ಹೇಳಿದ್ದಾನೆ. ಆದರೆ ಅಪ್ಪ ಬಸಯ್ಯ ಎದ್ದೇಳಿಲ್ಲ. ಕೂಡಲೇ ಕುಡಿದ ಅಮಲಿನಲ್ಲಿದ್ದ ಮಗ ಒಲೆಯಲ್ಲಿ ಉರಿಯುತ್ತಿದ್ದ ಸೌದೆಯಲ್ಲಿ ಅಪ್ಪನ ಮೇಲೆ ಹಲ್ಲೆ ಮಾಡಿದ್ದಾನೆ. ಆಗ ಅಪ್ಪ ಎದ್ದು ಹೋಗಿದ್ದಾರೆ. ಆದರೆ ರಾತ್ರಿ ಬಸಯ್ಯಗೆ ಏನು ಆಗಿರಲ್ಲ, ಚೆನ್ನಾಗಿದ್ದರು. ಬಳಿಕ ಮಗನೇ ಅಡುಗೆ ಮಾಡಿ ಅಪ್ಪನಿಗೆ ಊಟ ಹಾಕಿ ಮಲಗಿಸಿದ್ದಾನೆ.

    ಶುಕ್ರವಾರ ಬೆಳಗ್ಗೆ ಎದ್ದು ನೋಡಿದಾಗ ಅಪ್ಪ ಬಸಯ್ಯನ ತಲೆಯಲ್ಲಿ ರಕ್ತಸ್ರಾವವಾಗಿ ಸಾವನ್ನಪ್ಪಿದ್ದ. ಬಳಿಕ ಮಗನೇ ನಡೆದ ಘಟನೆಯ ಬಗ್ಗೆ ಗ್ರಾಮದ ಜನರಿಗೆ ತಿಳಿಸಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಬಂದು ಆರೋಪಿ ಮಂಜುನಾಥ್‍ನನ್ನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • 4 ತಿಂಗಳ ಹಿಂದೆ ಮದ್ವೆ- ಪತ್ನಿಗೆ ಅಡುಗೆ ಮಾಡಲು ಬರದ್ದಕ್ಕೆ ನವವಿವಾಹಿತ ನೇಣಿಗೆ ಶರಣು

    4 ತಿಂಗಳ ಹಿಂದೆ ಮದ್ವೆ- ಪತ್ನಿಗೆ ಅಡುಗೆ ಮಾಡಲು ಬರದ್ದಕ್ಕೆ ನವವಿವಾಹಿತ ನೇಣಿಗೆ ಶರಣು

    ಬಳ್ಳಾರಿ: ಪತ್ನಿಗೆ ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲ ಎಂದು ನವ ವಿವಾಹಿತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ನಡೆದಿದೆ.

    ಹುರುಳಿಹಾಳ್ ಗ್ರಾಮದ ನಿವಾಸಿ ಶರಣೇಶ್ (29) ಆತ್ಮಹತ್ಯೆ ಮಾಡಿಕೊಂಡ ನವ ವಿವಾಹಿತ. ಮೃತ ಶರಣೇಶ್ ನಾಲ್ಕು ತಿಂಗಳ ಹಿಂದೆಯಷ್ಟೆ ಕುಟುಂಬದವರು ನಿಶ್ಚಯಿಸಿದ್ದ ಯುವತಿಯೊಂದಿಗೆ ವಿವಾಹವಾಗಿದ್ದನು. ಪತ್ನಿಗೆ ಗಂಡನ ಮನೆಗೆ ಬಂದಾಗಿನಿಂದಲೂ ಸರಿಯಾಗಿ ಅಡುಗೆ ಮಾಡಲು ಬರುತ್ತಿರಲಿಲ್ಲ. ಹೀಗಾಗಿ ಇಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು.

    ಇದರಿಂದ ಮನನೊಂದ ಶರಣೇಶ್ ಗ್ರಾಮದ ಹೊರವಲಯದಲ್ಲಿರುವ ಹೊಲಕ್ಕೆ ಹೋಗಿದ್ದು, ಅಲ್ಲಿದ್ದ ಮರಕ್ಕೆ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಮೃತನ ಪತ್ನಿ ಲಿಖಿತ ದೂರಿನ ಮೂಲಕ ಪೊಲೀಸರಿಗೆ ತಿಳಿಸಿದ್ದಾಳೆ.

    ಈ ಕುರಿತು ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಡುಗೆ ಭಟ್ಟನಿಗೆ ಕೊರೊನಾ- ಬೆಳಗ್ಗೆ ಮದುವೆ, ಸಂಜೆ ನವಜೋಡಿ ಕ್ವಾರಂಟೈನ್

    ಅಡುಗೆ ಭಟ್ಟನಿಗೆ ಕೊರೊನಾ- ಬೆಳಗ್ಗೆ ಮದುವೆ, ಸಂಜೆ ನವಜೋಡಿ ಕ್ವಾರಂಟೈನ್

    ತುಮಕೂರು: ದಿನೇ ದಿನೇ ಕೊರೊನಾ ತನ್ನ ಅಟ್ಟಹಾಸ ಮಿತಿಮೀರುತ್ತಿದೆ. ಮದುವೆ ಮನೆ ಅಡುಗೆ ಭಟ್ಟನಿಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಮದುವೆಗೆ ಬಂದವರೆಲ್ಲಾ ಕ್ವಾರಂಟೈನ್ ಆಗಿದ್ದಾರೆ. ಬೆಳಗ್ಗೆ ತಾನೇ ಮದುವೆ ಮುಗಿಸಿದ ನವಜೋಡಿ ಕೊರೊನಾದಿಂದ ಸಂಜೆ ವೇಳೆಗೆ ಕ್ವಾರಂಟೈನ್‍ನಲ್ಲಿ ಲಾಕ್ ಆಗಿದ್ದಾರೆ.

    ಈ ಕೊರೊನಾ ಜಿಲ್ಲೆಯ ಗುಬ್ಬಿಯ ಹೇರೂರಿನ ನವ ಜೋಡಿಯೊಂದು ಕ್ವಾರಂಟೈನ್ ಸೇರುವಂತೆ ಮಾಡಿದೆ. ವಧುವರರಿಗೆ ಕೊರೊನಾ ಬಂದಿಲ್ಲ. ಬದಲಾಗಿ ಮದುವೆ ಮನೆಯಲ್ಲಿ ಅಡುಗೆ ಮಾಡಿದ್ದ ಅಡುಗೆ ಭಟ್ಟನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹೀಗಾಗಿ ನವ ಜೋಡಿ ಸೇರಿದಂತೆ ಮದುವೆಗೆ ಬಂದವರೆಲ್ಲಾ ಕ್ವಾರಂಟೈನ್ ಆಗಿದ್ದಾರೆ.

    ಹೇರೂರಿನ ವರ ಗಿರೀಶ್‍ಗೆ ಕಾಟೇನಹಳ್ಳಿಯ ವಧು ಮೀನಾಕ್ಷಿಯ ಜೊತೆ ವಿವಾಹವಾಗಿತ್ತು. ಹುಡುಗನ ಮನೆ ಆವರಣದಲ್ಲೇ ಮದುವೆ ನಡೆದಿದೆ. ಈ ಮದುವೆಗೆ ಅಡುಗೆ ಮಾಡಲು ಬಂದ ಭಟ್ಟ ಚಿಟ್ಟದ ಕುಪ್ಪೆ ನಿವಾಸಿ 50 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಜೂನ್ 14 ರಂದು ಈತ ಸ್ವಾಬ್ ಕೊಟ್ಟು ಬಂದಿದ್ದ. ರಿಪೋರ್ಟ್ ಬರುವವರೆಗೂ ಈತನನ್ನು ಅಧಿಕಾರಿಗಳು ಕ್ವಾರಂಟೈನ್‍ನಲ್ಲಿ ಇಡಬೇಕಿತ್ತು. ಆದರೆ ಈತ ಎಲ್ಲಾ ಕಡೆ ಓಡಾಡಿಕೊಂಡು ಅಡುಗೆ ಕೆಲಸ ಮಾಡಿಕೊಂಡಿದ್ದ.

    ಜೂನ್ 18 ರಂದು ಅಡುಗೆ ಭಟ್ಟನ ಪಾಸಿಟಿವ್ ರಿಪೋರ್ಟ್ ಬಂದಿದೆ. ತಕ್ಷಣ ಎಚ್ಚೆತ್ತುಕೊಂಡ ಅಧಿಕಾರಿಗಳು ಅಡುಗೆ ಭಟ್ಟ ಇದ್ದ ಮದುವೆ ಮನೆಗೆ ದಾಳಿ ಮಾಡಿದ್ದಾರೆ. ಅಡುಗೆ ಭಟ್ಟ, ವಧುವರರು, ಕ್ಯಾಮೆರಾಮನ್, ವಧು ಮತ್ತು ವರನ ಹತ್ತಿರ ಸಂಪರ್ಕ ಇದ್ದವರು ಸೇರಿ ಒಟ್ಟು 56 ಜನರನ್ನು ಕ್ವಾರಂಟೈನ್ ಮಾಡಿದ್ದಾರೆ ಎಂದು ವರನ ಸಂಬಂಧಿ ಪಾತರಾಜು ಹೇಳಿದ್ದಾರೆ.

    ಅಂದಹಾಗೆ ಸೋಂಕಿತ ಅಡುಗೆ ಭಟ್ಟನ ಟ್ರಾವೆಲ್ ಹಿಸ್ಟರಿ ಏನೂ ಇಲ್ಲ. ಟಿ.ಬಿ ಹಾಗೂ ಹೃದಯ ಸಂಬಂಧಿ ಕಾಯಿಲೆ ಇದ್ದ ಈತ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿಂದ ಸೋಂಕು ಈತನಿಗೆ ಹರಡಿರಬಹುದು ಎಂದು ಶಂಕಿಸಲಾಗಿದೆ.

  • ರಂಜಾನ್ ಸ್ಪೆಷಲ್ – ಚಿಕನ್ ಬಿರಿಯಾನಿ ಮಾಡೋ ವಿಧಾನ

    ರಂಜಾನ್ ಸ್ಪೆಷಲ್ – ಚಿಕನ್ ಬಿರಿಯಾನಿ ಮಾಡೋ ವಿಧಾನ

    ಸೋಮವಾರ ರಂಜಾನ್ ಹಬ್ಬ ಇದೆ. ಸಾಮಾನ್ಯವಾಗಿ ಮುಸ್ಲಿಂ ಬಾಂಧವರ ಮನೆಯಲ್ಲಿ ಬಿರಿಯಾನಿ ಮಾಡೋದು ಫಿಕ್ಸ್. ಕೆಲವರು ಹಬ್ಬಕ್ಕಾಗಿ ಸ್ಪೆಷಲ್ ಬಿರಿಯಾನಿಯ ಮೊರೆ ಹೋಗುತ್ತಾರೆ. ನಿಮಗಾಗಿ ರುಚಿಯಾದ ಚಿಕನ್ ಬಿರಿಯಾನಿ ಮಾಡುವ ವಿಧಾನ ಇಲ್ಲಿದೆ…

    ಬೇಕಾಗುವ ಸಾಮಗ್ರಿಗಳು
    1. ಅಕ್ಕಿ – 1/2 ಕೆ.ಜಿ
    2. ಚಿಕನ್ – 1/2 ಕೆ.ಜಿ
    3. ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 2 ಚಮಚ
    4. ಎಣ್ಣೆ – 5 ಚಮಚ
    5. ಚಕ್ಕೆ – 3-4
    6. ಲವಂಗ- 10
    7. ಏಲಕ್ಕಿ – 5
    8. ಮರಾಠಿ ಮೊಗ್ಗು – 4
    9. ತುಪ್ಪ- 2 ಚಮಚ
    10. ಗರಂ ಮಸಾಲ – 2 ಚಮಚ

    11. ಖಾರದ ಪುಡಿ – 1 ಚಮಚ
    12. ಅರಿಶಿಣ – 1/2 ಚಮಚ
    13. ದನಿಯಾ ಪುಡಿ – 1 ಚಮಚ
    14. ಈರುಳ್ಳಿ – 2
    15. ಮೊಸರು – ಅರ್ಧ ಕಪ್
    16. ಟೊಮೆಟೊ – 4
    17. ಕೊತ್ತಂಬರಿ ಸೊಪ್ಪು, ಪುದಿನ – ಸ್ವಲ್ಪ
    18. ಉಪ್ಪು – ರುಚಿಗೆ ತಕ್ಕಷ್ಟು
    19. ಹಸಿರು ಮೆಣಸಿನ ಕಾಯಿ – 8

    ಮಾಡುವ ವಿಧಾನ
    * ಮೊದಲಿಗೆ ಸ್ಟೌವ್ ಮೇಲೆ ಕುಕ್ಕರ್ ಇಟ್ಟು ಎಣ್ಣೆ ಮತ್ತು ತುಪ್ಪ ಹಾಕಿ. ಬಿಸಿಯಾಗುತ್ತಿದ್ದಂತೆ ಚಕ್ಕೆ, ಲವಂಗ, ಏಲಕ್ಕಿ, ಮರಾಠಿ ಮೊಗ್ಗು ಹಾಕಿ ಚೆನ್ನಾಗಿ ಫ್ರೈ ಮಾಡಿ.
    * ನಂತರ ಈರುಳ್ಳಿ, ಹಸಿರು ಮೆಣಸಿಕಾಯಿ ಹಾಕಿ ಫ್ರೈ ಮಾಡಿ
    * ಈಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ, ಹಸಿ ವಾಸನೆ ಹೋಗುವರೆಗೂ ಫ್ರೈ ಮಾಡಿ
    * ಬಳಿಕ ಖಾದರ ಪುಡಿ, ಅರಿಶಿಣ, ಟೊಮೆಟೊ ಹಾಕಿ ಚೆನ್ನಾಗಿ ಮೇಯಿಸಿ.
    * ಈಗ ತೊಳೆದ ಚಿಕನ್, ಮೊಸರು, ಕೊತ್ತಂಬರಿ, ಪುದಿನ ಸೊಪ್ಪು ಹಾಕಿ ಎಲ್ಲವನ್ನೂ ಮಿಕ್ಸ್ ಮಾಡಿ.
    * ದನಿಯಾ ಪುಡಿ, ಗರಂ ಮಸಲಾ ಹಾಕಿ ಪ್ಲೇಟ್ ಮುಚ್ಚಿ 15 ನಿಮಿಷ ಚೆನ್ನಾಗಿ ಬೇಯಿಸಿ. (ಕಡಿಮೆ ಉರಿಯಲ್ಲಿ ಬೇಯಿಸಿ)
    * ಈಗ ನಾಲ್ಕು ಲೋಟ ನೀರು ಹಾಕಿ ಚೆನ್ನಾಗಿ ಕುದಿಸಿ, ನೀರು ಕುದಿಯುತ್ತಿದ್ದಂತೆ ಅಕ್ಕಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುಕ್ಕರ್ ಮುಚ್ಚಿ.
    * ನಂತರ ಕುಕ್ಕರ್ 2 ವಿಶಲ್ ಬಂದರೆ ಚಿಕನ್ ಬಿರಿಯಾನಿ ಸವಿಯಲು ರೆಡಿ

  • ಸಂಡೇ ಸ್ಪೆಷಲ್ ಸ್ಪೈಸಿ ಎಗ್ ಪೆಪ್ಪರ್ ಫ್ರೈ

    ಸಂಡೇ ಸ್ಪೆಷಲ್ ಸ್ಪೈಸಿ ಎಗ್ ಪೆಪ್ಪರ್ ಫ್ರೈ

    ಕೊರೊನಾ ಲಾಕ್‍ಡೌನ್‍ಯಿಂದ ಎಲ್ಲರೂ ಮನೆಯಲ್ಲಿದ್ದೀರಿ. ಅದರಲ್ಲೂ ಇಂದು ಭಾನುವಾರ ಹೀಗಾಗಿ ಅನೇಕರು ಮನೆಯಲ್ಲಿ ಚಿಕನ್, ಮಟನ್ ಅಡುಗೆ ಮಾಡುತ್ತೀರಿ. ಚಿಕನ್ ಬಿರಿಯಾನಿ, ಕಬಾಬ್, ಮಟನ್ ಯಾವುದೇ ಇರಲಿ ಜೊತೆಗೆ ಸ್ಪೈಸಿ ಆದ ಎಗ್ ಪೆಪ್ಪರ್ ಫ್ರೈ ಮಾಡಿ. ಸಿಂಪಲ್ ಎಗ್ ಪೆಪ್ಪರ್ ಫ್ರೈ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು:
    1. ಮೊಟ್ಟೆ – 6
    2. ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1 ಚಮಚ
    3. ಈರುಳ್ಳಿ – 1
    4. ಕಾಳು ಮೆಣಸು – 2 ಚಮಚ
    5. ಅರಿಶಿನ – ಚಿಟಿಕೆ
    6. ಎಣ್ಣೆ – 2ರಿಂದ 3 ಚಮಚ
    7. ಕೊತ್ತಂಬರಿ ಸೊಪ್ಪು – ಸ್ವಲ್ಪ
    8. ಉಪ್ಪು – ರುಚಿಗೆ ತಕ್ಕಷ್ಟು

    ಮಾಡುವ ವಿಧಾನ:
    * ಮೊದಲಿಗೆ ನಾಲ್ಕು ಮೊಟ್ಟೆಗಳನ್ನು ಪಾತ್ರೆಯಲ್ಲಿ ಉಪ್ಪು, ನೀರು ಹಾಕಿ ಬೇಯಿಸಿಕೊಳ್ಳಿ.
    * ಮೊಟ್ಟೆ ಬೆಂದ ಮೇಲೆ ಅದರ ಸಿಪ್ಪೆ ಬಿಡಿಸಿ, ಒಂದು ಮೊಟ್ಟೆಯನ್ನು ಎರಡು ಭಾಗ ಮಾಡಿ ಕಟ್ ಮಾಡಿಕೊಳ್ಳಿ.
    * ಬಳಿಕ ಒಂದು ಪ್ಯಾನ್ ಗೆ ಎರಡು ಚಮಚ ಎಣ್ಣೆ ಹಾಕಿ, ಅದು ಬಿಸಿ ಆದ ಮೇಲೆ ಕಟ್ ಮಾಡಿದ್ದ ಮೊಟ್ಟೆಯನ್ನು ಇಟ್ಟು 1 ನಿಮಿಷ ಫ್ರೈ ಮಾಡಿ.
    * ನಂತರ ಮೊಟ್ಟೆಯನ್ನು ಉಲ್ಟಾ ಮಾಡಿ ಸ್ವಲ್ಪ ಬ್ರೌನ್ ಬಣ್ಣ ಬರುವರೆಗೆ ಫ್ರೈ ಮಾಡಿ, ಮೊಟ್ಟೆಯನ್ನು ಒಂದು ಪ್ಲೇಟ್ ನಲ್ಲಿ ಎತ್ತಿಟ್ಟುಕೊಳ್ಳಿ.

    * ಈಗ ಅದೇ ಬಾಣಲೆಗೆ ಹೆಚ್ಚಿದ ಈರುಳ್ಳಿ ಹಾಕಿ ಫ್ರೈ ಮಾಡಿ, ಅದಕ್ಕೆ ಉಪ್ಪು, ಚಿಟಿಕೆ ಅರಿಶಿಣ ಉದುರುಸಿ.
    * ನಂತರ 1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಿಕ್ಸ್ ಮಾಡಿ.
    * ಬಳಿಕ ಕಾಳು ಮೆಣಸಿನ ಪುಡಿ ಹಾಕಿ ಮಿಕ್ಸ್ ಮಾಡಿ, ಅದಕ್ಕೆ ಫ್ರೈ ಮಾಡಿಟ್ಟುಕೊಂಡ ಮೊಟ್ಟೆ ಹಾಕಿ, ಮೆಣಸಿನ ಪುಡಿ ಹಾಕಿ ಫ್ರೈ ಮಾಡಿ.
    * ಕೊನೆಗೆ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ಸ್ಪೈಸಿ ಎಗ್ ಪೆಪ್ಪರ್ ಫ್ರೈ ತಿನ್ನಲು ಸಿದ್ಧ.

  • ದಿಢೀರನೇ ಎಗ್ ಮಲೈ ಕರ್ರಿ ಮಾಡೋ ವಿಧಾನ

    ದಿಢೀರನೇ ಎಗ್ ಮಲೈ ಕರ್ರಿ ಮಾಡೋ ವಿಧಾನ

    ಕೊರೊನಾದಿಂದ ಮೂರನೇ ಬಾರಿ ಲಾಕ್‍ಡೌನ್ ಆಗಿದ್ದು, ಎಲ್ಲರೂ ಮನೆಯಲ್ಲಿದ್ದೀರಿ. ಅದರಲ್ಲೂ ಇಂದು ಭಾನುವಾರ ಹೀಗಾಗಿ ಅನೇಕರು ಮನೆಯಲ್ಲಿ ಚಿಕನ್, ಮಟನ್ ಅಡುಗೆ ಮಾಡುತ್ತೀರಿ. ಚಿಕನ್ ಬಿರಿಯಾನಿ, ಕಬಾಬ್, ಮಟನ್ ಯಾವುದೇ ಇರಲಿ ಜೊತೆಗೆ ಗರಂಗರಂ ಆದ ಎಗ್ ಕರ್ರಿ ಮಾಡಿ. ದಿಢೀರನೇ ಎಗ್ ಮಲೈ ಕರ್ರಿ ಮಾಡುವ ವಿಧಾನ ಇಲ್ಲಿದೆ…..

    ಬೇಕಾಗುವ ಸಾಮಗ್ರಿಗಳು
    1. ಮೊಟ್ಟೆ – 4
    2. ಹಾಲು – ಒಂದೂವರೆ ಕಪ್
    3. ತುಪ್ಪ – 1 ಟೀ ಸ್ಪೂನ್
    4. ಈರುಳ್ಳಿ – 2
    5. ಹಸಿ ಮೆಣಸಿನಕಾಯಿ- 2 ರಿಂದ 3
    6. ಬೆಳ್ಳುಳ್ಳಿ – 4 ರಿಂದ 5


    7. ಹಸಿ ಶುಂಠಿ – 1 ಇಂಚು
    8. ಜೀರಿಗೆ ಪೌಡರ್ – 1 ಟೀ ಸ್ಪೂನ್
    9. ದನಿಯಾ ಪೌಡರ್ – 1/2 ಟೀ ಸ್ಪೂನ್
    10. ಪೆಪ್ಪರ್ – 1/2 ಟೀ ಸ್ಪೂನ್
    11. ಗರಂ ಮಸಾಲ – 1/2 ಟೀ ಸ್ಪೂನ್
    12. ಅರಿಶಿಣ – ಚಿಟಿಕೆ
    13. ಉಪ್ಪು – ರುಚಿಗೆ ತಕ್ಕಷ್ಟು
    14. ಕೋತ್ತಂಬರಿ ಸೊಪ್ಪು
    15. ಎಣ್ಣೆ

    ಮಾಡುವ ವಿಧಾನ
    * ಮೊದಲಿಗೆ ನಾಲ್ಕು ಮೊಟ್ಟೆಗಳನ್ನು ಕುದಿಸಿ, ಎರಡು ಭಾಗಗಳಾಗಿ ಪೀಸ್ ಮಾಡಿಟ್ಟುಕೊಳ್ಳಿ.
    * ಮಿಕ್ಸಿ ಜಾರಿಗೆ ಕತ್ತರಿಸಿದ ಈರುಳ್ಳಿ, ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ಶುಂಠಿ ಹಾಕಿ ನೀರು ಹಾಕದೆ ರುಬ್ಬಿಕೊಳ್ಳಿ.
    * ಒಂದು ಪ್ಯಾನ್ ಸ್ಟೌವ್ ಮೇಲಿಟ್ಟುಕೊಂಡು ಎಣ್ಣೆ ಹಾಕಿ. ಎಣ್ಣೆ ಬಿಸಿಯಾಗ್ತಿದ್ದಂತೆ ರುಬ್ಬಿಕೊಂಡಿರುವ ಮಿಶ್ರಣ ಸೇರಿಸಿ ಎರಡರಿಂದ ಮೂರು ನಿಮಿಷ ಫ್ರೈ ಮಾಡಿ.
    * ಫ್ರೈ ಮಾಡಿದ ಮಿಶ್ರಣಕ್ಕೆ ಜೀರಿಗೆ ಪೌಡರ್, ದನಿಯಾ ಪಡಿ, ಪೆಪ್ಪರ್, ಗರಂ ಮಸಾಲ ಮತ್ತು ಎರಡರಿಂದ ಮೂರು ಟೀ ಸ್ಪೂನ್ ನೀರು ಸೇರಿಸಿ ಚೆನ್ನಾಗಿ ಫ್ರೈ ಮಾಡಿ.


    * ಮಸಾಲಾ ಫ್ರೈ ಆಗ್ತಿದ್ದಂತೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕುದಿಸಿದ ನಂತರ ಒಂದೂವರೆ ಕಪ್ ಹಾಲು ಹಾಕಿ ಮುಚ್ಚಳ ಮುಚ್ಚಿ ಕಡಿಮೆ ಉರಿಯಲ್ಲಿ ಬೇಯಿಸಿ.
    * ಎರಡು ನಿಮಿಷದ ಬಳಿಕ ಮೊಟ್ಟೆಯ ಪೀಸ್‍ಗಳನ್ನು ಒಂದೊಂದಾಗಿ ಸೇರಿಸಿ ಮತ್ತೆ ಕುದಿಸಿ. ಎರಡು ನಿಮಿಷದ ಬಳಿಕ ಮೊಟ್ಟೆಯನ್ನು ಉಲ್ಟ್ ಮಾಡಿಕೊಂಡು ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿ. ಕೊನೆಗೆ ಒಂದು ಟೀ ಸ್ಪೂನ್ ತುಪ್ಪ ಹಾಕಿದ್ರೆ ಘಮ ಘಮಿಸುವ ಎಗ್ ಮಲೈ ಕರ್ರಿ ರೆಡಿ.