Tag: cooking

  • ರುಚಿಯಾದ ಮಟರ್ ಪನ್ನೀರ್ ತಯಾರಿಸುವ ವಿಧಾನ

    ರುಚಿಯಾದ ಮಟರ್ ಪನ್ನೀರ್ ತಯಾರಿಸುವ ವಿಧಾನ

    ಹಾಲಿನ ಉತ್ಪನ್ನವಾದ ಪನ್ನೀರ್ ಉತ್ತರ ಭಾರತದ ಪ್ರಮುಖ ಆಹಾರ ಪದಾರ್ಥಗಳಲ್ಲಿ ಒಂದು. ಪನ್ನೀರ್‍ನಿಂದ ಬಗೆಬಗೆಯ ಖಾದ್ಯಗಳನ್ನು ತಯಾರಿಸಬಹುದು. ಅದರಲ್ಲೂ ಪಂಜಾಬಿ ಡಾಬಾಗಳಲ್ಲಿ ಸಿಗುವ ರುಚಿಯಾದ ಮಟರ್ ಪನ್ನೀರ್ ಎಲ್ಲರಿಗೂ ಇಷ್ಟವಾಗುತ್ತದೆ. ಅದನ್ನು ತಯಾರಿಸುವುದು ಹೇಗೆ ಎಂದು ತಿಳಿದುಕೊಂಡು, ಮನೆಯಲ್ಲಿ ನೀವೇ ಮಟರ್ ಪನ್ನೀರ್ ಮಾಡಿ ನೋಡಿ.

    ಬೇಕಾಗುವ ಸಾಮಗ್ರಿಗಳು:
    1. ಪನ್ನೀರ್ – 250 ಗ್ರಾಂ
    2. ಹಸಿ ಬಟಾಣಿ- 2 ಕಪ್
    3. ತುಪ್ಪ- 4 ಚಮಚ
    4. ಶುಂಠಿ ಬೆಳ್ಳುಳ್ಳಿ ಪೇಸ್ಟ್- 3 ಚಮಚ
    5. ಈರುಳ್ಳಿ-1 ಕಪ್
    6. ಟಮೋಟೊ- 2 ಕಪ್
    7 ಅರಿಶಿಣ- 1 ಚಮಚ
    8. ಗರಂ ಮಸಾಲಾ- 1/2 ಚಮಚ
    9. ಖಾರದಪುಡಿ- 2 ಚಮಚ
    10. ಕೊತ್ತಂಬರಿ ಸೊಪ್ಪು- ಸ್ವಲ್ಪ
    11. ಉಪ್ಪು- ರುಚಿಗೆ ತಕ್ಕಷ್ಟು
    12. ಹಾಲಿನ ಕೆನೆ- 3 ಚಮಚ

    ಮಾಡುವ ವಿಧಾನ :
    * ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಚೌಕಾಕಾರದಲ್ಲಿ ಕತ್ತರಿಸಿದ ಪನ್ನೀರನ್ನು ಅದರಲ್ಲಿ ಹಾಕಿ ಹೊಂಬಣ್ಣ ಬರುವ ತನಕ ಫ್ರೈ ಮಾಡಿ ತೆಗೆದಿಡಿ.
    * ಅದೇ ಬಾಣಲೆಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಈರುಳ್ಳಿ ಹಾಕಿ ಚೆನ್ನಾಗಿ ಬಾಡಿಸಿ.
    * ನಂತರ ಅದಕ್ಕೆ ಅರಿಶಿಣ, ಖಾರದಪುಡಿ, ಗರಂಮಸಾಲಾ, ಟಮೋಟೊ ಹಾಕಿ, ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಕುದಿಸಿ.
    * ಅನಂತರ ಬಟಾಣಿಯನ್ನು ಹಾಕಿ 3 ನಿಮಿಷದವರೆಗೆ ಬೇಯಿಸಿ, ಕರಿದ ಪನೀರ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಚ್ಚಳವನ್ನು ಮುಚ್ಚಿ.
    * 10 ನಿಮಿಷದ ನಂತರ ಬಾಣಲೆಯನ್ನು ಕೆಳಗಿಳಿಸಿ ಹಾಲಿನ ಕೆನೆಯನ್ನು ಸೇರಿಸಿ ಚಪಾತಿ ಅಥವಾ ರೋಟಿಯೊಂದಿಗೆ ಸವಿಯಲು ಕೊಡಿ

  • ಬಾಯಲ್ಲಿ ನಿರೂರಿಸುವಂತಹ ಮಾವಿನ ಹಣ್ಣಿನ ಪಾಯಸ ಮಾಡೋ ವಿಧಾನ

    ಬಾಯಲ್ಲಿ ನಿರೂರಿಸುವಂತಹ ಮಾವಿನ ಹಣ್ಣಿನ ಪಾಯಸ ಮಾಡೋ ವಿಧಾನ

    ಮಾವಿನ ಹಣ್ಣು ಅಂದ್ರೆ ಎಲ್ಲರ ಬಾಯಲ್ಲೂ ನೀರೂರಿಸುತ್ತೆ. ಈಗಂತೂ ಮಾವಿನ ಹಣ್ಣಿನ ಸೀಜನ್. ಮಾವಿನ ಹಣ್ಣಿನ ಜ್ಯೂಸ್, ಮಿಲ್ಕ್ ಶೇಕ್ ಮಾಡಿ ಸವಿದಿರುತ್ತೀರಿ. ಹೊಸದೇನಾದ್ರೂ ಮಾಡ್ಬೇಕು ಅಂತಿದ್ರೆ ಅದಕ್ಕಾಗಿ ಮಾವಿನ ಹಣ್ಣಿನ ಪಾಯಸ ಮಾಡೋ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು:
    1. ಮಾವಿನ ಹಣ್ಣು – 1
    2. ಬಾಸ್ಮತಿ ಅಕ್ಕಿ – 2 ಚಮಚ
    3. ಕೆನೆಭರಿತ ಹಾಲು – ಎರಡೂವರೆ ಕಪ್
    4. ಸಕ್ಕರೆ – 3 ಚಮಚ
    5. ಬಾದಾಮಿ – 5
    6. ಕೇಸರಿ – ಸ್ವಲ್ಪ
    7. ಪಿಸ್ತಾ – 1 ಚಮಚ (ಸಣ್ಣಗೆ ತುಂಡರಿಸಿದ್ದು)

    ಮಾಡುವ ವಿಧಾನ:
    * ಎರಡು ಪ್ರತ್ಯೇಕ ಕಪ್‍ಗಳಲ್ಲಿ ಬಾದಾಮಿ ಮತ್ತು ಅಕ್ಕಿಯನ್ನು ಹಾಕಿ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಕೆಲ ನಿಮಿಷಗಳ ಕಾಲ ನೆನೆಸಿಡಿ.
    * ಒಂದು ಕಪ್ ನಲ್ಲಿ 4 ಚಮಚದಷ್ಟು ಬೆಚ್ಚಗಿನ ಹಾಲು ತೆಗೆದುಕೊಂಡಿ ಅದಕ್ಕೆ ಕೇಸರಿ ಎಲೆಗಳನ್ನು ಹಾಕಿಡಿ.
    * ಬಾದಾಮಿ ಮೇಲಿನ ಸಿಪ್ಪೆಯನ್ನು ತೆಗೆದಿಟ್ಟುಕೊಳ್ಳಿ.
    * ಮಿಕ್ಸಿ ಜಾರಿಗೆ ಅಕ್ಕಿ, ಬಾದಾಮಿ ಮತ್ತು ಸ್ವಲ್ಪ ಹಾಲು ಹಾಕಿ ಚೆನ್ನಾಗಿ ಗ್ರೈಂಡ್ ಮಾಡಿಕೊಳ್ಳಿ.
    * ಒಂದು ಪಾತ್ರೆಯಲ್ಲಿ ಹಾಲನ್ನು ಕೆನೆ ಬರುವವರೆಗೆ ಕುದಿಸಿ ನಂತರ ಅದಕ್ಕೆ ಗ್ರೈಂಡ್ ಮಾಡಿರೋ ಅಕ್ಕಿ ಮತ್ತು ಬಾದಾಮಿ ಪೇಸ್ಟ್ ಹಾಕಿ ಮಿಕ್ಸ್ ಮಾಡಿ ಚೆನ್ನಾಗಿ ಕುದಿಸಿ.
    * ಹಾಲು ಗಟ್ಟಿಯಾಗುವ ಹಂತಕ್ಕೆ ಬಂದಾಗ ಸಕ್ಕರೆ ಬೆರೆಸಿ.
    * ನಂತರ ಕೇಸರಿ ಹಾಕಿರೋ ಹಾಲನ್ನ ಅದಕ್ಕೆ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ.
    * ಮಾವಿನ ಹಣ್ಣಿನ ಸಿಪ್ಪೆ ತೆಗೆದು ಅದನ್ನು ಸಣ್ಣದಾಗಿ ಕಟ್ ಮಾಡಿಕೊಂಡು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.
    * ಕುದಿಯುತ್ತಿರುವ ಪಾಯಸಕ್ಕೆ ಮಾವಿನ ಹಣ್ಣಿನ ಪೇಸ್ಟ್ ಹಾಕಿ, ಮತ್ತೆ ಸ್ವಲ್ಪ ಹಾಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
    * ಕೊನೆಗೆ ಪಾಯಸವನ್ನ ಒಲೆಯಿಂದ ಕೆಳಗಿಳಿಸಿ, ಸರ್ವಿಂಗ್ ಗ್ಲಾಸ್/ಕಪ್‍ಗೆ ಹಾಕಿ ಅದರ ಮೇಲೆ ಸಣ್ಣಗೆ ಕಟ್ ಮಾಡಿದ ಬಾದಾಮಿ, ಪಿಸ್ತಾ ಹಾಕಿದ್ರೆ ಮಾವಿನ ಹಣ್ಣಿನ ಪಾಯಸ ಸವಿಯಲು ಸಿದ್ಧ.

  • ಯುಗಾದಿ ವಿಶೇಷ: ಬೇಳೆ ಒಬ್ಬಟ್ಟು ಮಾಡೋಕೆ ಸಿಂಪಲ್ ರೆಸಿಪಿ ಇಲ್ಲಿದೆ

    ಯುಗಾದಿ ವಿಶೇಷ: ಬೇಳೆ ಒಬ್ಬಟ್ಟು ಮಾಡೋಕೆ ಸಿಂಪಲ್ ರೆಸಿಪಿ ಇಲ್ಲಿದೆ

    ಯುಗಾದಿ ಹಬ್ಬದಂದು ಪ್ರತಿಯೊಬ್ಬರ ಮನೆಯಲ್ಲೂ ಒಬ್ಬಟ್ಟಿನ ಘಮ ಇರಲೇಬೇಕು. ತೆಂಗಿನ ಕಾಯಿ ಹೋಳಿಗೆ, ತೊಗರಿಬೇಳೆ ಒಬ್ಬಟ್ಟು ಅಥವಾ ಕಡಲೆಬೇಳೆಯನ್ನ ಬಳಸಿಯೂ ಒಬ್ಬಟ್ಟು ಮಾಡ್ತಾರೆ. ಬೇಳೆ ಒಬ್ಬಟ್ಟು ಮಾಡೋಕೆ ಸಖತ್ ಸುಲಭವಾದ ವಿಧಾನ ಇಲ್ಲಿದೆ.

    ಬೇಗಾಗುವ ಸಾಮಾಗ್ರಿಗಳು:
    1. ತೊಗರಿ ಬೇಳೆ – 1/2 ಕೆಜಿ
    2. ಚಿರೋಟಿ ರವೆ – ಕಾಲು ಕಪ್
    3. ಮೈದಾಹಿಟ್ಟು – 2 ಬಟ್ಟಲು
    4. ಬೆಲ್ಲ – 1/2 ಕೆಜಿ ಅಥವಾ ನಿಮಗೆ ಎಷ್ಟು ಸಿಹಿ ಬೇಕೋ ಅದಕ್ಕೆ ಅನುಗುಣವಾಗಿ ಬಳಸಿ
    5. ತೆಂಗಿನಕಾಯಿ ತುರಿ – ಒಂದು ಬಟ್ಟಲು
    6. ಏಲಕ್ಕಿ ಪುಡಿ – ಸ್ವಲ್ಪ
    7. ತುಪ್ಪ – ಎರಡು ಚಮಚ
    8. ಎಣ್ಣೆ – 1 ಕಪ್
    9. ಉಪ್ಪು – 1 ಚಿಟಿಕೆ
    10. ಅರಿಸಿನ – 1 ಚಿಟಿಕೆ

    ಮಾಡುವ ವಿಧಾನ:
    * ಒಂದು ಪಾತ್ರೆಯಲ್ಲಿ ಮೈದಾಹಿಟ್ಟು, ಚಿರೋಟಿ ರವೆ, ಅರಿಶಿನ, ಒಂದು ಚಿಟಿಕೆ ಉಪ್ಪು ಮತ್ತು ತುಪ್ಪ ಹಾಕಿ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಚಪಾತಿ ಹಿಟ್ಟಿಗಿಂತ ತುಂಬಾ ಮೃದುವಾಗಿ ಕಲಸಿಕೊಳ್ಳಿ. ನಂತರ ಇದಕ್ಕೆ 1/2 ಕಪ್ ಎಣ್ಣೆ ಹಾಕಿ ಚೆನ್ನಾಗಿ ನಾದಿಕೊಂಡು 30 ನಿಮಿಷ ನೆನೆಯಲು ಬಿಡಿ.
    * ಬೆಲ್ಲವನ್ನು ಪುಡಿ ಮಾಡಿಟ್ಟುಕೊಳ್ಳಿ.
    * ಒಂದು ಪಾತ್ರೆಯಲ್ಲಿ ತೊಗರಿಬೇಳೆ, ಚಿಟಿಕೆ ಅರಿಶಿನ ಮತ್ತು ಒಂದು ಚಮಚ ಎಣ್ಣೆ ಹಾಗೂ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಬೇಯಿಸಿಕೊಳ್ಳಿ.
    * ಬೇಳೆ ನುಣ್ಣಗಾಗುವಂತೆ ಬೇಯಿಸಬೇಡಿ. ಸ್ವಲ್ಪ ಗಟ್ಟಿಯಿರುವಾಗಲೇ ಇದಕ್ಕೆ ಪುಡಿ ಮಾಡಿದ ಬೆಲ್ಲ, ತೆಂಗಿನಕಾಯಿ ತುರಿ, ಮತ್ತು ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ ಒಲೆಯಿಂದ ಇಳಿಸಿ.
    * ಈ ಮಿಶ್ರಣ ತಣ್ಣಗಾದ ನಂತರ ನುಣ್ಣಗೆ ರುಬ್ಬಿಕೊಳ್ಳಬೇಕು(ನೀರು ಸೇರಿಸಬರದು).
    * ಹೀಗೆ ನುಣ್ಣಗೆ ರುಬ್ಬಿದ ಮಿಶ್ರಣವನ್ನ ಸಣ್ಣ ಸಣ್ಣ ಉಂಡೆಗಳಾಗಿ ಮಾಡಿಕೊಳ್ಳಿ.

    ಹೋಳಿಗೆ ಮಾಡುವುದು:
    * ಕಲಸಿಟ್ಟ ಮೈದಾ ಮಿಶ್ರಣವನ್ನು ತೆಗೆದುಕೊಂಡು ಮತ್ತೊಮ್ಮೆ ಚೆನ್ನಾಗಿ ನಾದಿಕೊಳ್ಳಿ.
    * ಒಂದು ಮಣೆ ಮೇಲೆ ಬಾಳೆ ಎಲೆ/ ಪ್ಲಾಸ್ಟಿಕ್ ಕವರ್ ಹಾಕಿ ಅದರ ಮೇಲೆ ಸ್ವಲ್ಪ ಎಣ್ಣೆ ಸವರಿ, ಸ್ವಲ್ಪ ಮೈದಾ ಮಿಶ್ರಣವನ್ನು ತೆಗೆದುಕೊಂಡು ಅದರ ಮೇಲೆ ತಟ್ಟಿಕೊಳ್ಳಿ.
    * ಇದರ ಮಧ್ಯೆ ಹೂರಣದ ಉಂಡೆಯನ್ನು ಇಟ್ಟು ಎಲ್ಲಾ ಬದಿಯಿಂದ ಮೇಲ್ಮುಖವಾಗಿ ಮೈದಾ ಹಿಟ್ಟಿನಿಂದ ಹೂರಣವನ್ನು ಮುಚ್ಚಿ.


    * ಹೂರಣವನ್ನು ಮುಚ್ಚಿದ ತುದಿಯನ್ನು ಕೆಳಭಾಗಕ್ಕೆ ತಿರುಗಿಸಿ ಕೈಗೆ ಎಣ್ಣೆ ಸವರಿಕೊಂಡು ಲಘುವಾಗಿ ತಟ್ಟಿಕೊಳ್ಳಿ.
    * ಒಬ್ಬಟ್ಟು ತಟ್ಟುವಾಗಿ ತೀರಾ ತೆಳ್ಳಗೆ ತಟ್ಟಿದರೆ ಬೇಯಿಸುವಾಗ ಮುರಿದು ಹೋಗುತ್ತದೆ. ಆದ್ದರಿಂದ ತೀರಾ ತೆಳ್ಳಗೂ ಅಲ್ಲದೆ ದಪ್ಪವೂ ಅಲ್ಲದೆ ಮಧ್ಯಮ ಗಾತ್ರದಲ್ಲಿ ತಟ್ಟಿಕೊಳ್ಳಿ.

         
    * ಒಲೆ ಮೇಲೆ ತವಾ ಇಟ್ಟು ಸ್ವಲ್ಪ ಎಣ್ಣೆ ಅಥವಾ ತುಪ್ಪ ಸವರಿ. ತವಾ ಬಿಸಿಯಾದ ನಂತರ ಅದರ ಮೇಲೆ ತಟ್ಟಿಕೊಂಡ ಒಬ್ಬಟ್ಟು ಹಾಕಿ ಎರಡೂ ಬದಿ ಹದವಾಗಿ ಬೇಯಿಸಿದ್ರೆ ಬೇಳೆ ಒಬ್ಬಟ್ಟು ರೆಡಿ.
    * ಇದನ್ನು ಬಿಸಿ ಇರುವಾಗಲೇ ತುಪ್ಪ ಅಥವಾ ಬಿಸಿ ಮಾಡಿದ ಹಾಲಿನೊಂದಿಗೆ ಸವಿಯಬಹುದು.

  • ಹಿತ್ಕವರೆ ಕಾಳಿನ ಸಾಂಬಾರ್ ಮಾಡೋಕೆ ಇಲ್ಲಿದೆ ಸಖತ್ ಸಿಂಪಲ್ ರೆಸಿಪಿ

    ಹಿತ್ಕವರೆ ಕಾಳಿನ ಸಾಂಬಾರ್ ಮಾಡೋಕೆ ಇಲ್ಲಿದೆ ಸಖತ್ ಸಿಂಪಲ್ ರೆಸಿಪಿ

    ಕರ್ನಾಟಕದ ಫೇಮಸ್ ಡಿಶ್‍ಗಳಲ್ಲಿ ಹಿತ್ಕವರೆ ಕಾಳಿನ ಸಾಂಬಾರು ಕೂಡ ಒಂದು. ಅವರೆಕಾಯಿ ಸೀಸನ್‍ಲ್ಲಿ ಹೆಚ್ಚಾಗಿ ಇದನ್ನ ಮಾಡ್ತಾರೆ. ಹಲವು ವಿಧಾನಗಳಲ್ಲಿ ಈ ಸಾಂಬಾರು ಮಾಡ್ತಾರೆ. ಅವುಗಳಲ್ಲಿ ಒಂದು ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು:

    ಹಿತ್ಕವರೆ ಕಾಳು- 2 ಕಪ್
    ಕೊತ್ತಂಬರಿ ಬೀಜ – 1 ಚಮಚ
    ಜೀರಿಗೆ – 1 ಚಮಚ
    ಉದ್ದಿನ ಬೇಳೆ – ಅರ್ಧ ಚಮಚ
    ಕಡ್ಲೆ ಬೇಳೆ – 1 ಚಮಚ
    ಮೆಂತೆ – ಕಾಲು ಚಮಚ
    ಸಾಸಿವೆ – ಕಾಲು ಚಮಚ
    ಚಕ್ಕೆ – ಅರ್ಧ ಇಂಚು
    ಇಂಗು – ದೊಡ್ಡ ಚಿಟಿಕೆ
    ಲವಂಗ – 3
    ಶುಂಠಿ – ಅರ್ಧ ಇಂಚು
    ಬೆಳ್ಳುಳ್ಳಿ – 2 ಎಸಳು
    ಒಣಮೆಣಸಿನಕಾಯಿ – 5,6
    ತೆಂಗಿನ ತುರಿ – ಅರ್ಧ ಕಪ್
    ಬೆಳ್ಳುಳ್ಳಿ – 1(ಚಿಕ್ಕದು) ಕಟ್ ಮಾಡಿಕೊಳ್ಳಿ
    ಕರಿಬೇವಿನ ಎಲೆ – 8 ರಿಂದ 10
    ಬೆಲ್ಲ – 2 ಚಮಚ(ಇಷ್ಟವಿದ್ದಲ್ಲಿ ಬಳಸಿ)
    ಉಪ್ಪು – ರುಚಿಗೆ ತಕ್ಕಷ್ಟು
    ಹುಣಸೆಹಣ್ಣಿನ ರಸ – 1 ಚಮಚ

    ಮಾಡುವ ವಿಧಾನ:

    * ಸಿಪ್ಪೆತೆಗೆದು ಹಿದುಕಿದ ಅವರೆಕಾಳಿಗೆ ಅಂದಾಜು 1 ಕಪ್ ನೀರು ಹಾಗೂ 1 ಚಿಟಿಕೆ ಉಪ್ಪು ಹಾಕಿ ಬೇಯಲು ಇಡಿ.

    * ಬಾಣಲೆಯಲ್ಲಿ ಕೊತ್ತಂಬರಿ ಬೀಜ, ಜೀರಿಗೆ, ಉದ್ದಿನ ಬೇಳೆ, ಕಡ್ಲೆ ಬೇಳೆ, ಸಾಸಿವೆ, ಮೆಂತ್ಯೆ, ಚೆಕ್ಕೆ, ಲವಂಗ ಇಂಗು, ಒಣಮೆಣಸಿನಕಾಯಿ ಹಾಕಿ ಅದರ ಮೇಲೆ ಸ್ವಲ್ಪ ಎಣ್ಣೆ ಹಾಕಿ 2 ರಿಂದ 3 ನಿಮಿಷ ಚೆನ್ನಾಗಿ ಫೈ ಮಾಡಿ ಬಳಿಕ ಪ್ಲೇಟಿಗೆ ಹಾಕಿ.

    * ನಂತರ ಅದೇ ಬಾಣಲೆಗೆ ಅರ್ಧ ಚಮಚ ಎಣ್ಣೆ ಹಾಕಿ ಬೆಳ್ಳುಳ್ಳಿ, ಶುಂಠಿ, ಕಟ್ ಮಾಡಿದ ಈರುಳ್ಳಿ ಹಾಕಿ ಕೆಂಪಗಾಗುವವರೆಗೆ ಹುರಿಯಿರಿ.

    * ಬಳಿಕ ಇವುಗಳನ್ನೆಲ್ಲಾ ಒಂದು ಮಿಕ್ಸಿಯಲ್ಲಿ ಹಾಕಿ, ಅದಕ್ಕೆ ತುರಿದ ತೆಂಗಿನ ಕಾಯಿ, ಹುಣಸೆ ಹಣ್ಣನ್ನು ಬೆರೆಸಿ ಅರ್ಧ ಕಪ್ ನೀರು ಹಾಕಿ ರುಬ್ಬಿಕೊಳ್ಳಿ.

    * ಇತ್ತ ಬೆಂದ ಅವರೆಕಾಳಿಗೆ ಬೆಲ್ಲ, ಸ್ವಲ್ಪ ಉಪ್ಪು ಹಾಗೂ, ರುಬ್ಬಿದ ಮಸಾಲೆಯನ್ನು ಹಾಕಿ ಚೆನ್ನಾಗಿ ಕುದಿಸಿ. ನಂತರ ಒಗ್ಗರಣೆ ಹಾಕಿದ್ರೆ ಹಿತ್ಕವರೆ ಕಾಳಿನ ಸಾಂಬಾರ್ ಸವಿಯೋದಕ್ಕೆ ಸಿದ್ಧ.

     

  • ಮಲೆನಾಡು ಸ್ಪೆಷಲ್ ಪತ್ರೊಡೆ ಮಾಡೋ ವಿಧಾನ

    ಮಲೆನಾಡು ಸ್ಪೆಷಲ್ ಪತ್ರೊಡೆ ಮಾಡೋ ವಿಧಾನ

    ಲೆನಾಡಿನ ಸಾಂಪ್ರಾದಾಯಿಕ ರೆಸಿಪಿಗಳಲ್ಲಿ ಪತ್ರೊಡೆಯೂ ಒಂದು. ಮಳೆಗಾಲದಲ್ಲಿ ಹಳ್ಳಿ ಕಡೆ ಸಿಗುವ ಕೆಸುವಿನ ಎಲೆಯಿಂದ ಇದನ್ನು ಹೆಚ್ಚಾಗಿ ತಯಾರು ಮಾಡ್ತಾರೆ. ಕೆಸುವಿನ ಎಲೆಯಲ್ಲಿ ಕಬ್ಬಿಣಾಂಶ ಹೆಚ್ಚಾಗಿದ್ದು, ಆರೋಗ್ಯಕ್ಕೆ ಒಳ್ಳೆಯದು. ಪತ್ರೋಡೆ ತಯಾರು ಮಾಡೋದು ಹೇಗೆ ಅನ್ನೋದಕ್ಕೆ ಇಲ್ಲಿದೆ ಸಿಂಪಲ್ ರೆಸಿಪಿ

    ಬೇಕಾಗುವ ಸಾಮಾಗ್ರಿಗಳು:
    1. ಕೆಸುವಿನ ಎಲೆ – 15-20
    2. ಅಕ್ಕಿ – ಮುಕ್ಕಾಲು ಕಪ್
    3. ತೊಗರಿಬೇಳೆ – ಅರ್ಧ ಕಪ್
    4. ಕಡಲೆಬೇಳೆ – ಅರ್ಧ ಕಪ್
    5. ಹುಣಸೆಹಣ್ಣು – ಅರ್ಧ ಕಪ್ (ಕನಿಷ್ಟ 15-20 ನಿಮಿಷ ನೀರಿನಲ್ಲಿ ನೆನೆಯಲು ಬಿಡಿ)
    6. ಒಣಮೆಣಸಿನಕಾಯಿ- 10-15 (ಮೆಣಸಿನ ಪುಡಿಯೂ ಬಳಸಬಹುದು. ಖಾರಕ್ಕೆ ತಕ್ಕ ಹಾಗೆ ಬಳಸಿ)
    7. ತೆಂಗಿನ ತುರಿ – ಅರ್ಧ ಕಪ್
    8. ಕೊತ್ತಂಬರಿ ಬೀಜ/ ಧನಿಯಾ – 2 ಚಮಚ
    9. ಜೀರಿಗೆ – 1 ಚಮಚ
    10. ಬೆಲ್ಲ – 3 ಚಮಚ
    11. ಇಂಗು – 2 ಚಿಟಿಕೆ

    ಮಾಡುವ ವಿಧಾನ:

    * ಮೊದಲು ತೊಗರಿಬೇಳೆ, ಅಕ್ಕಿ, ಕಡಲೆಬೇಳೆ, ಜೀರಿಗೆ ಹಾಗೂ ಕೊತ್ತಂಬರಿ ಬೀಜವನ್ನು ನೀರಿನಲ್ಲಿ ಹಾಕಿ 2-3 ಗಂಟೆ ನೆನೆಯಲು ಬಿಡಿ.

    * ಬಳಿಕ ಇದರ ಜೊತೆಗೆ ತೆಂಗಿನ ತುರಿ, ಹುಣಸೆಹಣ್ಣು, ಬೆಲ್ಲ ಮತ್ತು ಒಣಮೆಣಸಿನ ಕಾಯಿ ಹಾಕಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿ.

    * ರುಬ್ಬಿದ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಗೂ 2 ಚಿಟಿಕೆ ಇಂಗು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

    * ಒಂದು ದೊಡ್ಡ ಕೆಸುವಿನ ಎಲೆಯನ್ನು (ತೊಳೆದಿದ್ದು, ದಂಟು ತೆಗೆದುಕೊಳ್ಳಬೇಕು) ಉಲ್ಟಾ ಇಟ್ಟುಕೊಳ್ಳಿ. ಅದರ ಮೇಲೆ ತೆಳುವಾಗಿ ಹಿಟ್ಟನ್ನು ಹಚ್ಚಿ. ಎಲೆಗೆ ಪೂರ್ತಿಯಾಗಿ ಹಿಟ್ಟು ಹಚ್ಚಿದ ನಂತರ ಅದರ ಮೇಲೆ ಇನ್ನೊಂದು ಅದಕ್ಕಿಂತ ಸಣ್ಣ ಎಲೆಯನ್ನು ಹಾಗೆ ಉಲ್ಟಾ ಇಟ್ಟು, ಅದರ ಮೇಲೆಯೂ ತೆಳುವಾಗಿ ಹಿಟ್ಟನ್ನು ಹಚ್ಚಿ. ಹೀಗೆ 5 ಎಲೆಗಳನ್ನು ಒಂದರ ಮೇಲೊಂದರಂತೆ ಇಟ್ಟು ಹಿಟ್ಟನ್ನು ಹಚ್ಚಿ ಇಡಿ.

    * ಬಳಿಕ ದೊಡ್ಡ ಎಲೆಯನ್ನು ಒಂದು ಸೈಡಿನಿಂದ ಮಧ್ಯಕ್ಕೆ ಮಡಚಿ. ಇನ್ನೊಂದು ಬದಿಯನ್ನು ಕೂಡ ಮಧ್ಯಕ್ಕೆ ಮಡಚಿ. ಮಡಚಿದ ಎರಡೂ ಭಾಗಕ್ಕೆ ಹಿಟ್ಟನ್ನು ಹಚ್ಚಿ. ಬಳಿಕ ತುದಿಯಿಂದ ನಿಧಾನಕ್ಕೆ ಟೈಟಾಗಿ ರೋಲ್ ಮಾಡಿ. ಈ ರೋಲ್ ಮೇಲೆಯೂ ಹಿಟ್ಟು ಹಚ್ಚಿ. ಇದೇ ರೀತಿ ನೀವೆಷ್ಟು ಎಲೆಯನ್ನ ತೆಗೆದುಕೊಂಡಿದ್ದೀರೋ ಅಷ್ಟನ್ನ ರೋಲ್ ಮಾಡಿಕೊಳ್ಳಿ.

    * ಒಂದು ಇಡ್ಲಿ ಕುಕ್ಕರ್‍ನಲ್ಲಿ 6-7 ಕಪ್ ನೀರು ಹಾಕಿ, ಸ್ವಲ್ಪ ಬಿಸಿಯಾದ ನಂತರ ಇಡ್ಲಿ ಪ್ಲೇಟ್ ಇಟ್ಟು ಅದರ ಮೇಲೆ ಈ ರೋಲ್ಸ್‍ನ್ನು ಇಟ್ಟು ಹಬೆಯಲ್ಲಿ ಬೇಯಿಸಿ. ಇದನ್ನ ಕುಕ್ಕರ್‍ನಲ್ಲೂ ಬೇಯಿಸಬಹುದು. ಆದ್ರೆ ವಿಶಲ್ ಹಾಕ್ಬೇಡಿ. ವಿಶಲ್ ಬದಲಾಗಿ ಕುಕ್ಕರ್ ಮೇಲೆ ಒಂದು ಲೋಟವನ್ನು ಉಲ್ಟಾ ಹಾಕಿ.

    * ಹೀಗೆ ಕನಿಷ್ಟ 20ರಿಂದ 30 ನಿಮಿಷ ಬೇಯಿಸಿ. ಬೆಂದ ಬಳಿಕ ಒಲೆಯಿಂದ ತೆಗೆದು ಪೂರ್ತಿ ತಣ್ಣಗಾದ ನಂತ್ರ ಸಣ್ಣಗೆ ಕಟ್ ಮಾಡಿ ಒಗ್ಗರಣೆ ಹಾಕಿ ಸವಿಯಬಹುದು.