Tag: cooking

  • ಸಿಂಪಲ್ ಆಗಿ ಮಸಾಲಾ ಬ್ರೆಡ್ ಮಾಡುವ ವಿಧಾನ

    ಸಿಂಪಲ್ ಆಗಿ ಮಸಾಲಾ ಬ್ರೆಡ್ ಮಾಡುವ ವಿಧಾನ

    ಈಗಂತೂ ತುಂಬಾ ಚಳಿ ಸಂಜೆ ಏನಾದರೂ ಬಿಸಿಬಿಸಿ, ಖಾರ ಖಾರವಾಗಿ ತಿನ್ನೋಣ ಎನ್ನಿಸುತ್ತದೆ. ಮನೆಯಲ್ಲಿ ಬ್ರೆಡ್ ಇದ್ದರೆ ಸಿಂಪಲ್ ಆಗಿ ಮಸಾಲ ಬ್ರೆಡ್ ಮಾಡಲು ಇಲ್ಲಿದೆ ಸುಲಭ ವಿಧಾನ.

    ಬೇಕಾಗುವ ಸಾಮಾಗ್ರಿಗಳು
    1. ಕಡ್ಲೆಹಿಟ್ಟು – ಒಂದೂವರೆ ಕಪ್
    2. ಅಕ್ಕಿಹಿಟ್ಟು – 1 ಕಪ್
    3. ಖಾರದ ಪುಡಿ – 2 ಚಮಚ
    4. ಉಪ್ಪು – ರುಚಿಗೆ ತಕ್ಕಷ್ಟು
    5 ಕೊತ್ತಂಬರಿ ಸೊಪ್ಪು- ಸ್ವಲ್ಪ
    6. ಎಳ್ಳು – 2 ಚಮಚ
    7. ಎಣ್ಣೆ- ಕರಿಯಲು
    8. ಬ್ರೆಡ್ ಸ್ಲೈಸ್ – 6

    ಮಾಡುವ ವಿಧಾನ
    * ಒಂದು ಬೌಲ್‍ಗೆ ಜರಡಿ ಹಿಡಿದ ಕಡ್ಲೆಹಿಟ್ಟು, ಅಕ್ಕಿ ಹಿಟ್ಟು, ಉಪ್ಪು, ಖಾರದ ಪುಡಿ, ಕೊತ್ತಂಬರಿ ಸೊಪ್ಪು, ಎಳ್ಳು, 2 ಚಮಚ ಎಣ್ಣೆ ಮತ್ತು ನೀರು ಹಾಕಿ ಬೊಂಡಾ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
    * ಹಿಟ್ಟು ತೀರಾ ತೆಳುವಾಗಿರಬಾರದು, ಸ್ವಲ್ಪ ಗಟ್ಟಿಯಾಗಿರುವಂತೆ ಕಲಸಿ.
    * ನಂತರ ಬ್ರೆಡ್ ಸ್ಲೈಸ್‍ನ 2 ಭಾಗಕ್ಕೆ ಕಲಸಿದ ಹಿಟ್ಟನ್ನು ಸ್ವಲ್ಪ ಹಾಕಿ.
    * ನಂತರ ಅದನ್ನು ಎಣ್ಣೆಯಲ್ಲಿ ಹಾಕಿ ಕಂದು ಬಣ್ಣ ಬರುವವರೆಗೆ ಕರಿಯಿರಿ.
    * ಸಾಸ್ ಅಥವಾ ಕೆಚಪ್ ಜೊತೆ ಸವಿಯಿರಿ.
    * ಬೇಕಿದ್ದರೆ ಕಲಸಿದ ಹಿಟ್ಟಿಗೆ ಬೇಯಿಸಿದ ಆಲೂಗಡ್ಡೆ ಮ್ಯಾಶ್ ಮಾಡಿ ಮಿಕ್ಸ್ ಮಾಡಿಕೊಳ್ಳಬಹುದು. ಜೊತೆಗೆ ತುರಿದ ಕ್ಯಾರೆಟ್, ಬೇಯಿಸಿದ ಬಟಾಣಿ,ಸಣ್ಣಗೆ ಹೆಚ್ಚಿದ ಎಲೆಕೋಸು, ಕ್ಯಾಪ್ಸಿಕಮ್ ಇತರೆ ತರಕಾರಿಗಳನ್ನು ಮಿಕ್ಸ್ ಮಾಡಿಕೊಳ್ಳಬಹುದು.

  • ಇಲ್ಲಿದೆ ರವಾ ಜಾಮೂನು ಮಾಡುವ ಸಿಂಪಲ್ ವಿಧಾನ

    ಇಲ್ಲಿದೆ ರವಾ ಜಾಮೂನು ಮಾಡುವ ಸಿಂಪಲ್ ವಿಧಾನ

    ಮನೆಯಲ್ಲಿ ಜಾಮೂನು ಮಾಡಬೇಕೆಂದ್ರೆ ರೆಡಿ ಜಾಮುನು ಮಿಕ್ಸ್ ತರಬೇಕು. ಅದರ ಬದಲು ರವೆಯಲ್ಲಿ ಕೂಡ ಜಾಮೂನು ಮಾಡಬಹುದು ಗೊತ್ತಾ? ಅದಕ್ಕಾಗಿ ಇಲ್ಲಿದೆ ಸುಲಭ ವಿಧಾನ

    ಬೇಕಾಗುವ ಸಾಮಾಗ್ರಿಗಳು
    1. ರವೆ – 1 ಕಪ್
    2. ಸಕ್ಕರೆ – 1.5 ಕಪ್
    3. ಹಾಲು – 1.5 ಕಪ್
    4. ನೀರು – 1 ಕಪ್
    5. ತುಪ್ಪ – 1 ಸ್ಪೋನ್
    6. ಕರಿಯಲು ಎಣ್ಣೆ
    7. ಏಲಕಿ ಪುಡಿ- ಸ್ವಲ್ಪ

    ಮಾಡುವ ವಿಧಾನ
    * ಪ್ಯಾನ್‍ಗೆ 1.5 ಕಪ್ ಸಕ್ಕರೆ, 1 ಕಪ್ ನೀರು ಹಾಕಿ ಕುದಿಯಲು ಬಿಡಿ.
    * ಸಕ್ಕರೆ ಕರಗಿ ಒಂದೆಳೆ ಪಾಕ ಬರೋವರೆಗೂ ಕೈಯಾಡಿಸುತ್ತಿರಿ. ನಂತರ ಏಲಕ್ಕಿ ಪೌಡರ್ ಹಾಕಿ.
    * ಮತ್ತೊಂದು ಪ್ಯಾನ್‍ಗೆ 1 ಕಪ್ ರವೆ ಹಾಕಿ ಸಣ್ಣ ಉರಿಯಲ್ಲಿ ಹುರಿಯಿರಿ.
    * ರವೆ ಸ್ವಲ್ಪ ಕೆಂಪಾದ ಬಳಿಕ ಅದಕ್ಕೆ 1.5 ಕಪ್ ಹಾಲು ಹಾಕಿ ಕೈಯಾಡಿಸುತ್ತಿರಿ.
    * ನಂತರ ಸ್ವಲ್ಪ ಗಟ್ಟಿಯಾದ ಬಳಿಕ 1 ಚಮಚ ತುಪ್ಪ ಹಾಕಿ ಕಲಸಿ ಕೆಳಗಿಳಿಸಿ.
    * ನಂತರ ಅದನ್ನು ತಣ್ಣಗಾಗಲು ಬಿಡಿ. ತಣ್ಣಗಾದ ಬಳಿಕ ಹಿಟ್ಟು ಮೃದುವಾಗುವವರೆಗೆ ಕೈಯಲ್ಲಿ ಕಲಸಿ.
    * ಬಳಿಕ ಚಿಕ್ಕ ಚಿಕ್ಕ ಉಂಡೆಗಳಾಗಿ ಮಾಡಿಕೊಳ್ಳಿ.
    * ಬಾಣಲೆಗೆ ಎಣ್ಣೆ ಹಾಕಿ ಬಿಸಿಗಿಟ್ಟು ಸಣ್ಣ ಉರಿಯಲ್ಲಿ ಜಾಮೂನನ್ನು ಎಣ್ಣೆಗೆ ಹಾಕಿ ಕಂದು ಬಣ್ಣ ಬರುವ ತನಕ ಕರಿಯಿರಿ.
    * ಎಣ್ಣೆಯಿಂದ ತೆಗೆದ ಬಂತರ ಸಕ್ಕರೆ ಪಾಕಕ್ಕೆ ಹಾಕಿ, 2 ನಿಮಿಷ ಕುದಿಸಿ, ಆರಲು ಬಿಡಿ.

  • ಸಂಕ್ರಾಂತಿ ಸ್ಪೆಷಲ್- ಇಲ್ಲಿದೆ ಸಿಹಿ ಪೊಂಗಲ್, ಖಾರ ಪೊಂಗಲ್ ಮಾಡೋ ಸುಲಭ ವಿಧಾನ

    ಸಂಕ್ರಾಂತಿ ಸ್ಪೆಷಲ್- ಇಲ್ಲಿದೆ ಸಿಹಿ ಪೊಂಗಲ್, ಖಾರ ಪೊಂಗಲ್ ಮಾಡೋ ಸುಲಭ ವಿಧಾನ

    ಸುಗ್ಗಿ ಹಬ್ಬವಾದ ಸಂಕ್ರಾಂತಿಯನ್ನು ಕರ್ನಾಟಕದಲ್ಲಷ್ಟೇ ಅಲ್ಲದೆ ಕೇರಳ, ತಮಿಳುನಾಡು ಮತ್ತು ದೇಶದ ಹಲವೆಡೆ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಈ ಹಬ್ಬದ ವಿಶೇಷ ಅಡುಗೆ ಪೊಂಗಲ್. ಸಿಹಿ ಪೊಂಗಲ್ ಮತ್ತು ಖಾರ ಪೊಂಗಲ್ ಮಾಡುವ ಸುಲಭ ವಿಧಾನ ಇಲ್ಲಿದೆ. ಎಳ್ಳು ಬೆಲ್ಲದ ಜೊತೆಗೆ ಒಂದಿಷ್ಟು ಸಿಹಿ ಮತ್ತು ಖಾರ ಪೊಂಗಲ್ ತಯಾರಿಸಿ ಹಬ್ಬವನ್ನು ಆಚರಿಸಿ.

    ಸಿಹಿ ಪೊಂಗಲ್
    ಬೇಕಾಗುವ ಸಾಮಗ್ರಿಗಳು:
    1. ಹೆಸರುಬೇಳೆ- 1 ಕಪ್
    2. ಅಕ್ಕಿ- 1 ಕಪ್
    3. ಪುಡಿ ಮಾಡಿದ ಬೆಲ್ಲ/ ಸಕ್ಕರೆ – 1 ಕಪ್
    4. ಏಲಕ್ಕಿ – 4
    5. ದ್ರಾಕ್ಷಿ ,ಗೋಡಂಬಿ- 50 ಗ್ರಾಂ
    6. ತುಪ್ಪ- 4 ಚಮಚ

    ಮಾಡುವ ವಿಧಾನ:
    * ಮೊದಲಿಗೆ ಒಂದು ಬಾಣಲೆಯಲ್ಲಿ ಹೆಸರುಬೇಳೆಯನ್ನು ಹಾಕಿ ಅದು ಕೆಂಪಾಗುವ ತನಕ ಕಡಿಮೆ ಉರಿಯಲ್ಲಿ ಹುರಿಯಿರಿ.
    * ಕುಕ್ಕರ್ ನಲ್ಲಿ ತೊಳೆದ ಅಕ್ಕಿ ಮತ್ತು ಹುರಿದ ಹೆಸರುಬೇಳೆ ಹಾಕಿ 4 ಕಪ್ ನೀರು ಹಾಕಿ ಒಂದು ವಿಷಲ್ ಬರುವ ತನಕ ಬೇಯಿಸಿ.
    * ಮತ್ತೊಂದು ಪ್ಯಾನ್ ನಲ್ಲಿ ಪುಡಿಮಾಡಿದ ಬೆಲ್ಲ ಹಾಕಿ ಕರಗಿಸಿ.(ಒಂದು ವೇಳೆ ಬೆಲ್ಲದಲ್ಲಿ ಕಲ್ಮಶವಿದ್ದರೆ ಒಮ್ಮೆ ಶೋಧಿಸಿಕೊಳ್ಳಿ)
    * ಬೆಂದ ಅಕ್ಕಿ ಮತ್ತು ಹೆಸರುಬೇಳೆಯಲ್ಲಿ ಅರ್ಧ ಭಾಗವನ್ನು ತೆಗೆದು ಅದಕ್ಕೆ ಬೆಲ್ಲದ ಪಾಕ ಹಾಕಿ ಚೆನ್ನಾಗಿ ತಿರುವಿ.
    * ನಂತರ ಪುಡಿ ಮಾಡಿದ ಏಲಕ್ಕಿ, ತುಪ್ಪದಲ್ಲಿ ಕರಿದ ದ್ರಾಕ್ಷಿ ಗೋಡಂಬಿ ಹಾಕಿ ಒಲೆಯಿಂದ ಇಳಿಸಿ.
    (ಇದಕ್ಕೆ ಬೇಕಿದ್ದಲ್ಲಿ ಸ್ವಲ್ಪ ಪಚ್ಚ ಕರ್ಪೂರ ಮತ್ತು ಒಂದು ಚಿಟಿಕೆ ಲವಂಗದ ಪುಡಿಯನ್ನು ಸೇರಿಸಬಹುದು)

    ಖಾರ ಪೊಂಗಲ್
    ಬೇಕಾಗುವ ಸಾಮಗ್ರಿಗಳು:
    1. ಹೆಸರುಬೇಳೆ- 1 ಕಪ್
    2. ಅಕ್ಕಿ- 1 ಕಪ್
    3. ಜೀರಿಗೆ – ಅರ್ಧ ಚಮಚ
    4 ಕಾಳುಮೆಣಸು – ಅರ್ಧ ಚಮಚ
    5. ಕರಿಬೇವಿನಸೊಪ್ಪು – ಸ್ವಲ್ಪ
    6. ಹಸಿಮೆಣಸಿನಕಾಯಿ – 2 ರಿಂದ 3
    7 ತುಪ್ಪ – 1 ಚಮಚ
    8. ಅರಿಶಿನ- ಒಂದು ಚಿಟಿಕೆ
    9. ಉಪ್ಪು – ರುಚಿಗೆ ತಕ್ಕಷ್ಟು
    10 ಗೋಡಂಬಿ – 10

    ಮಾಡುವ ವಿಧಾನ:
    * ಬೇಯಿಸಿದ ಅಕ್ಕಿ ಮತ್ತು ಹೆಸರುಬೇಳೆಯ ಉಳಿದ ಅರ್ಧ ಭಾಗದಲ್ಲಿ ಖಾರ ಪೊಂಗಲ್ ಮಾಡಿಕೊಳ್ಳಬಹುದು.
    * ಒಂದು ಬಾಣಲೆಯಲ್ಲಿ ಸ್ವಲ್ಪ ತುಪ್ಪ ಬಿಸಿ ಮಾಡಿ ಅದಕ್ಕೆ ಕರಿಬೇವಿನಸೊಪ್ಪು, ಜೀರಿಗೆ, ಕಾಳುಮೆಣಸು, ಅರಿಶಿನ, ಗೋಡಂಬಿ ಮತ್ತು ಕತ್ತರಿಸಿದ ಹಸಿಮೆಣಸಿನಕಾಯಿ ಹಾಕಿ ಬಾಡಿಸಿ.
    * ಇದನ್ನು ಬೇಯಿಸಿದ ಅಕ್ಕಿ ಮತ್ತು ಹೆಸರುಬೇಳೆಗೆ ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿ 5 ನಿಮಿಷ ಬೇಯಲು ಬಿಡಿ.
    * ಕೊನೆಗೆ ಒಂದು ಚಮಚ ತುಪ್ಪ ಸೇರಿಸಿ ಒಲೆಯಿಂದ ಕೆಳಗಿಳಿಸಿದರೆ ಖಾರ ಪೊಂಗಲ್ ಸವಿಯಲು ಸಿದ್ಧ.

  • ಮೀನುಗಾರರ ಬೋಟ್‍ನಲ್ಲಿ ಅಡುಗೆ ಮಾಡುವಾಗ ಬೆಂಕಿ ಅವಘಡ

    ಮೀನುಗಾರರ ಬೋಟ್‍ನಲ್ಲಿ ಅಡುಗೆ ಮಾಡುವಾಗ ಬೆಂಕಿ ಅವಘಡ

    ಉಡುಪಿ: ಮಲ್ಪೆ ಬಂದರಿನಲ್ಲಿ ಲಂಗರು ಹಾಕಿದ್ದ ಬೋಟ್‍ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

    ಹಿಮಾಲಯ ಎಂಬ ಹೆಸರಿನ ಪರ್ಸಿನ್ ಬೋಟು ಬೆಂಕಿಗಾಹುತಿಯಾಗಿದೆ. ಅನ್ವರ್ ಸಾಹೇಬ್ ಎಂಬವರಿಗೆ ಸೇರಿದ ಮೀನುಗಾರಿಕಾ ಬೋಟ್ ಇದಾಗಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕದಳದ ಸಿಬ್ಬಂದಿ ಬೆಂಕಿ ಆರಿಸಿದ್ದಾರೆ.

    ಬೋಟ್ ವೆಚ್ಚ ಹಾಗೂ ಒಳಗಿದ್ದ ಸಾಮಾಗ್ರಿಗಳು ಸೇರಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಬೋಟ್‍ನಲ್ಲಿದ್ದ ಮೀನುಗಾರರು ಅಡುಗೆ ಮಾಡುವ ಸಂದರ್ಭದಲ್ಲಿ ಬೆಂಕಿ ಹೊತ್ತಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

    ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಡುಗೆಯಲ್ಲಿ ಎಣ್ಣೆ ಜಾಸ್ತಿಯಾಗಿದ್ದಕ್ಕೆ ಪತ್ನಿಗೆ ಬೆಂಕಿ ಹಚ್ಚಿದ ಪ್ರಕರಣ- ಚಿಕಿತ್ಸೆ ಫಲಿಸದೇ ಮಹಿಳೆ ಸಾವು

    ಅಡುಗೆಯಲ್ಲಿ ಎಣ್ಣೆ ಜಾಸ್ತಿಯಾಗಿದ್ದಕ್ಕೆ ಪತ್ನಿಗೆ ಬೆಂಕಿ ಹಚ್ಚಿದ ಪ್ರಕರಣ- ಚಿಕಿತ್ಸೆ ಫಲಿಸದೇ ಮಹಿಳೆ ಸಾವು

    ಕಲಬುರಗಿ: ಅಡುಗೆಯಲ್ಲಿ ಎಣ್ಣೆ ಜಾಸ್ತಿ ಬಳಸಿದ ಕಾರಣಕ್ಕೆ ಪತ್ನಿ ಮೇಲೆ ಕುದಿಯುವ ಎಣ್ಣೆ ಎರಚಿದ ಹಿನ್ನೆಲೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಕಲಬುರಗಿಯ ನೆಲೋಗಿ ಗ್ರಾಮದ ಪ್ರಿಯಾಂಕ ಚಿಕಿತ್ಸೆ ಫಲಕಾರಿಯಾಗದೇ ಕಲಬುರಗಿಯ ಬಸವೇಶ್ವರ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ.

    ನವೆಂಬರ್ 26 ರಂದು ಅಡುಗೆ ಮಾಡುವಾಗ ಒಗ್ಗರಣೆಗೆ ಎಣ್ಣೆ ಜಾಸ್ತಿ ಬಳಸಿದ್ದರು ಎಂಬ ಕ್ಷುಲಕ ಕಾರಣಕ್ಕೆ ಆಕೆಯ ಪತಿ ಭೀಮಾಶಂಕರ್ ಪತ್ನಿಯ ಮುಖಕ್ಕೆ ಎಣ್ಣೆ ಎರಚಿ ನಂತರ ಸೀಮೆ ಎಣ್ಣೆ ಸುರಿದು ಕೊಲೆಗೆ ಯತ್ನಿಸಿದ್ದ. ಘಟನೆಯಲ್ಲಿ ಪ್ರಿಯಾಂಕ ಅವರ ದೇಹ ಶೇಕಡಾ 70ರಷ್ಟು ಸುಟ್ಟ ಪರಿಣಾಮ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಪ್ರಿಯಾಂಕ ಸಾವನಪ್ಪಿದ್ದಾರೆ. ಈ ಸುದ್ದಿ ತಿಳಿದ ಕೂಡಲೇ ಪ್ರಿಯಾಂಕ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಆರೋಪಿ ಭೀಮಾಶಂಕರ್ ನನ್ನು ನೆಲೋಗಿ ಪೊಲೀಸರು ಘಟನೆ ನಡೆದ ದಿನವೇ ವಶಕ್ಕೆ ಪಡೆದಿದ್ದಾರೆ.

  • ಪಾಠ ಮಾಡೋ ಜಾಗದಲ್ಲೇ ಅಡುಗೆ- ಗದಗ ಹೆದ್ದಾರಿಯಲ್ಲೊಂದು ಡೇಂಜರಸ್ ಅಂಗನವಾಡಿ

    ಪಾಠ ಮಾಡೋ ಜಾಗದಲ್ಲೇ ಅಡುಗೆ- ಗದಗ ಹೆದ್ದಾರಿಯಲ್ಲೊಂದು ಡೇಂಜರಸ್ ಅಂಗನವಾಡಿ

    ಗದಗ: ಜಿಲ್ಲೆಯ ಬೆಟಗೇರಿಯ ಟರ್ನಲ್ ಪೇಟೆಯಲ್ಲಿ ಅಂಗನವಾಡಿಯಿದೆ. ಕಲಿಯೋಕೆ ನಲಿಯೋಕೆ ಎಂದು ಈ ಅಂಗನವಾಡಿಗೆ ಸುಮಾರು 30ಕ್ಕೂ ಹೆಚ್ಚು ಮಕ್ಕಳು ಬರುತ್ತಿದ್ದಾರೆ. ಆದರೆ ಇದರ ಸ್ಥಿತಿ ಆ ದೇವರಿಗೆ ಪ್ರೀತಿ.

    ಈ ಅಂಗನವಾಡಿಯಲ್ಲಿ ಮಕ್ಕಳಿಗೆ ಕೂರಕ್ಕೆ ಜಾಗ ಸಾಕಾಗಲ್ಲ ಅಂತಾದರಲ್ಲಿ ಅಲ್ಲೇ ಅಡುಗೆ ಕೂಡ ಮಾಡುತ್ತಾರೆ. ಸಿಲಿಂಡರ್ ಅಲ್ಲಿಯೇ ಇರೋದರಿಂದ ಅಗ್ನಿ ಅವಘಡ ಸಂಭವಿಸೋ ಸಾಧ್ಯತೆ ಹೆಚ್ಚಿದೆ. ಅಲ್ಲದೆ ಪಾಲಾ ಬದಾಮಿ ರಾಜ್ಯ ಹೆದ್ದಾರಿ ಪಕ್ಕದಲ್ಲೇ ಈ ಅಂಗನವಾಡಿ ಇರೋದ್ರಿಂದ ವಾಹನ ಸಂಚಾರ ಕೂಡ ಯಥೇಚ್ಚವಾಗಿದೆ.

    ಡೇಂಜರ್ ಝೋನ್ ನಲ್ಲಿರುವ ಈ ಅಂಗನವಾಡಿ ಕೇಂದ್ರವನ್ನು ಸ್ಥಳಾಂತರಿಸಿ, ಮಕ್ಕಳ ಜೀವ ಕಾಪಾಡಿ ಎಂದು ಸಿಡಿಪಿಒ ಸೇರಿದಂತೆ ಹಲವು ಅಧಿಕಾರಿಗಳಿಗೆ ಇಲ್ಲಿನ ಸಾರ್ವಜನಿಕರು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ನಾವು ಮಕ್ಕಳನ್ನು ಅಂಗನವಾಡಿಗೆ ಕಳಿಸೋಕೆ ಹಿಂದು-ಮುಂದು ನೋಡುವಂತಾಗಿದೆ ಎಂದು ಪೋಷಕರು ಹೇಳುತ್ತಾರೆ.

    ಇನ್ನು ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಈ ಕುರಿತು ಸಿಡಿಪಿಓ ಅವರಿಗೆ ತಿಳಿಸಿದ್ದೇನೆ. ಶೀಘ್ರದಲ್ಲಿ ನಾನು ಭೇಟಿ ನೀಡಿ ಪರಿಶೀಲಿಸಿ ಒಂದು ವಾರದಲ್ಲಿ ಈ ಅಂಗನವಾಡಿ ಕೇಂದ್ರವನ್ನ ಸ್ಥಳಾಂತರ ಮಾಡಿಸುತ್ತೀವಿ ಎಂದು ಹೇಳುತ್ತಾರೆ.


  • ರಾಗಿ ರೊಟ್ಟಿ ಮಾಡೋಕೆ ಇಲ್ಲಿದೆ ಸಿಂಪಲ್ ವಿಧಾನ

    ರಾಗಿ ರೊಟ್ಟಿ ಮಾಡೋಕೆ ಇಲ್ಲಿದೆ ಸಿಂಪಲ್ ವಿಧಾನ

    ಯ್ಯೋ ರಾಗಿ ರೊಟ್ಟಿ ಮಾಡೋಕೆ ನಮಗೆ ಗೊತ್ತಿಲ್ವಾ? ಅದನ್ನ ನೀವೇ ಹೇಳಿಕೊಡ್ಬೇಕಾ ಅಂತೆಲ್ಲಾ ಕೇಳ್ಬೇಡಿ. ಸಾಮಾನ್ಯವಾಗಿ ಕರ್ನಾಟಕದ ಪ್ರತಿ ಮನೆಗಳಲ್ಲೂ ರಾಗಿ ರೊಟ್ಟಿ ಮಾಡೇ ಮಾಡಿರ್ತಾರೆ. ಆದ್ರೆ ರೊಟ್ಟಿ ಮಾಡೋ ವಿಧಾನಗಳು ಮಾತ್ರ ಬೇರೆ. ನಾವು ಇಲ್ಲಿ ಹೇಳಿರೋದು ಸಖತ್ ಸುಲಭವಾದ ವಿಧಾನ.

    ಬೇಕಾಗುವ ಸಾಮಗ್ರಿಗಳು: 
    1. ರಾಗಿ ಹಿಟ್ಟು- 1 ಕಪ್
    2. ಈರುಳ್ಳಿ- 1 ಮಧ್ಯಮ ಗಾತ್ರದ್ದು
    3. ಹಸಿಮೆಣಸಿನಕಾಯಿ- 1
    4. ಕರಿಬೇವಿನಸೊಪ್ಪು- 5 ಎಸಳು
    5. ಉಪ್ಪು- ರುಚಿಗೆ ತಕ್ಕಷ್ಟು
    6. ನೀರು- ಅಗತ್ಯಕ್ಕೆ ತಕ್ಕಷ್ಟು
    7. ಎಣ್ಣೆ- 4 ಚಮಚ

    ಮಾಡುವ ವಿಧಾನ: 

    * ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಕರಿಬೇವಿನಸೊಪ್ಪನ್ನು ಸಣ್ಣಗೆ ಕಟ್ ಮಾಡಿಕೊಳ್ಳಿ.
    * ಒಂದು ಪಾತ್ರೆಯಲ್ಲಿ ರಾಗಿ ಹಿಟ್ಟು, ಕಟ್ ಮಾಡಿದ ಈರುಳ್ಳಿ, ಹಸಿಮೆಣಸಿಕನಾಯಿ, ಕರಿಬೇವಿನಸೊಪ್ಪು, ಅಗತ್ಯಕ್ಕೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ.
    * ನಂತರ ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಹಿಟ್ಟು ಕಲಸಿಕೊಳ್ಳಿ.


    * ಸ್ವಲ್ಪ ಹಿಟ್ಟು ತೆಗೆದುಕೊಂಡು ಉಂಡೆ ಮಾಡಿಕೊಳ್ಳಿ
    * ಮಣೆಯ ಮೇಲೆ ಒಂದು ಪ್ಲಾಸ್ಟಿಕ್ ಕವರ್ ಹಾಕಿ ಅದರ ಮೇಲೆ ಸ್ವಲ್ಪ ಎಣ್ಣೆ ಸವರಿ ಹಿಟ್ಟನ್ನು ನಿಧಾನವಾಗಿ ತಟ್ಟಿಕೊಳ್ಳಿ.
    * ಒಲೆ ಮೇಲೆ ಪ್ಯಾನ್ ಇಟ್ಟು, ಅದು ಬಿಸಿಯಾದ ನಂತರ ಸ್ವಲ್ಪ ಎಣ್ಣೆ ಹಾಕಿ.
    * ತಟ್ಟಿಕೊಂಡ ರೊಟ್ಟಿಯನ್ನ ನಿಧಾನವಾಗಿ ತವಾ ಮೇಲೆ ಹಾಕಿ.
    * ಒಂದು ಬದಿ ಬೆಂದ ನಂತರ ಅದನ್ನ ತಿರುಗಿಸಿ, ಎಣ್ಣೆ ಹಾಕಿ ಎರಡೂ ಕಡೆ ಕೆಂಪಾಗುವಂತೆ ಬೇಯಿಸಿ.
    * ಹಿಟ್ಟು ಸಾಧ್ಯವಾದಷ್ಟು ತೆಳುವಾಗಿರಬೇಕು. ತುಂಬಾ ಗಟ್ಟಿಯಾದ್ರೆ ರೊಟ್ಟಿ ಚೂರಾಗುತ್ತದೆ.

  • ಬಾಯಲ್ಲಿ ನಿರೂರಿಸುವಂತಹ ಖಾಜು ಬರ್ಫಿ ಮಾಡೋ ಸುಲಭ ವಿಧಾನ

    ಬಾಯಲ್ಲಿ ನಿರೂರಿಸುವಂತಹ ಖಾಜು ಬರ್ಫಿ ಮಾಡೋ ಸುಲಭ ವಿಧಾನ

    ಅಂಗಡಿಯಲ್ಲಿ ಸಿಗೋ ಬರ್ಫಿಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ಖಾಜು ಬರ್ಫಿ ಹೇಸರು ಕೇಳಿದ್ರೆನೇ ಬಾಯಲ್ಲಿ ನೀರು ಬರುತ್ತೆ. ಇಂತಹ ಖಾಜು ಬರ್ಫಿಯನ್ನು ಮನೆಯಲ್ಲಿ ತಯಾರಿಸಬಹುದು. ಅದನ್ನು ತಯಾರಿಸೋ ಸುಲಭ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು:

    * ಗೋಡಂಬಿ- 1 ಕಪ್
    * ಸಕ್ಕರೆ- ಅರ್ಧ ಕಪ್
    * ನೀರು- ಅರ್ಧ ಕಪ್
    * ತುಪ್ಪ- 1 ಚಮಚ
    * ರೋಸ್ ವಾಟರ್ ಅಥವಾ ಕೇಸರಿ- 1 ಚಮಚ

    ಮಾಡುವ ವಿಧಾನ:
    * ಗೋಡಂಬಿಯನ್ನು ನೀರಿನಿಂದ ಚೆನ್ನಾಗಿ ತೊಳೆದುಕೊಂಡು ಒಣಗಿಸಿಕೊಳ್ಳಿ.
    * ನಂತ್ರ ಒಣಗಿದ ಬಳಿಕ ನೀರಿನ ಪಸೆ ಇಲ್ಲದ ಮಿಕ್ಸರ್ ನಲ್ಲಿ ಪುಡಿ ಮಾಡಿಕೊಳ್ಳಿ.
    * ಒಂದು ಪ್ಯಾನ್ ನಲ್ಲಿ ನೀರು ಮತ್ತು ಸಕ್ಕರೆ ಹಾಕಿ ಸಣ್ಣ ಉರಿಯಲ್ಲಿ ಕುದಿಸುತ್ತಿರಿ. ಸಕ್ಕರೆ ಪೂರ್ತಿಯಾಗಿ ನೀರಿನಲ್ಲಿ ಕರಗಿ ದಪ್ಪಗಾಗುವವರೆಗೆ ಕುದಿಸಿರಿ.
    * ನಂತರ ಗೋಡಂಬಿ ಪೌಡರ್ ನ್ನು ಅದಕ್ಕೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. (ಬೇಕೆಂದಲ್ಲಿ ಏಲಕ್ಕಿ ಪುಡಿಯನ್ನು ಸೇರಿಸಿಕೊಳ್ಳಬಹುದು).
    * ಸುಮಾರು 5ರಿಂದ 10 ನಿಮಿಷಗಳವರೆಗೆ ಗೋಡಂಬಿ ಪುಡಿಯನ್ನು ಸಣ್ಣ ಉರಿಯಲ್ಲಿ ನಿಧಾನವಾಗಿ ಕದಡುತ್ತಾ ಇರಿ. ಆಗ ಅದು ನಿಧಾನವಾಗಿ ದಪ್ಪಗಾಗುತ್ತಾ ಬರುತ್ತದೆ. ನಂತ್ರ ಸ್ಟೌವ್ ನಿಂದ ಕೆಳಗಿಳಿಸಿ ತಣ್ಣಗಾಗಲು ಬಿಡಿ.
    * ಇನ್ನೊಂದು ಕಡೆ ಒಂದು ಪ್ಲೇಟ್ ಗೆ ಸ್ವಲ್ಪ ತುಪ್ಪ ಸವರಿ ಇಟ್ಟುಕೊಳ್ಳಿ. ಈಗ ಪ್ಯಾನ್ ನಿಂದ ಗೋಡಂಬಿ ಮಿಕ್ಸರ್ ನ್ನು ಇಳಿಸಿ.
    * ಒಂದು ಪಾತ್ರೆಗೆ ಹಾಕಿ ಅದರ ಮೇಲೆ ಸ್ವಲ್ಪ ತುಪ್ಪ, ರೋಸ್ ವಾಟರ್ ಅಥವಾ ಕೇಸರಿ ಹಾಕಿ, ಸ್ವಲ್ಪ ತಣ್ಣಗಾದ ಮೇಲೆ ಈ ಗೋಡಂಬಿ ಹಿಟ್ಟನ್ನು ಚೆನ್ನಾಗಿ ನಾದಿ.
    * ನಾದಿದ ಗೋಡಂಬಿ ಹಿಟ್ಟನ್ನು ತುಪ್ಪ ಸವರಿದ ಪ್ಲೇಟ್ ಗೆ ಸಮತಟ್ಟಾಗಿ ಹಾಕಬೇಕು. ನಂತರ ಲಟ್ಟಣಿಗೆಯಲ್ಲಿ ನಿಧಾನವಾಗಿ ಹಿಟ್ಟಿನ ಮೇಲೆ ಸ್ವಲ್ಪ ದಪ್ಪ ಬರುವವರೆಗೆ ರೋಲ್ ಮಾಡಿ.
    * ನಂತರ ಒಂದು ಹರಿತವಾದ ಚಾಕುವಿನಿಂದ ವಜ್ರಾಕೃತಿಯ ಆಕಾರಕ್ಕೆ ಕತ್ತರಿಸಿ, ಸಂಪೂರ್ಣವಾಗಿ ತಣ್ಣಗಾಗಲು ಬಿಡಿ.
    * ಈಗ ರುಚಿರುಚಿಯಾದ ಖಾಜು ಬರ್ಫಿ ಯನ್ನು ಸವಿಯಲು ರೆಡಿಯಾಗಿದ್ದು, ಇನ್ನು ತಯಾರು ಮಾಡಿದ 5 ಅಥವಾ 6 ದಿನದೊಳಗೆ ಸವಿಯಬಹುದು. ಒಂದು ವೇಳೆ ನೀವು ಅದನ್ನು ಫ್ರಿಡ್ಜ್ ನಲ್ಲಿಟ್ಟರೆ ಸುಮಾರು 1 ತಿಂಗಳು ತಿನ್ನಬಹುದು.

     

  • ಉತ್ತರ ಕರ್ನಾಟಕ ಸ್ಪೆಷಲ್ ಗಿರ್ಮಿಟ್ ಮಾಡಿ ನೋಡಿ

    ಉತ್ತರ ಕರ್ನಾಟಕ ಸ್ಪೆಷಲ್ ಗಿರ್ಮಿಟ್ ಮಾಡಿ ನೋಡಿ

    ಈಗಂತೂ ಪ್ರತಿದಿನ ಮಳೆ. ಇಂಥ ವೆದರ್‍ನಲ್ಲಿ ಬಿಸಿಬಿಸಿಯಾಗಿ ಏನಾದ್ರೂ ತಿನ್ನಬೇಕು ಅನ್ನಿಸುತ್ತದೆ. ಆದರೆ ಹೊರಗೆ ಹೋಗೋಣ ಅಂದರೆ ಮಳೆ. ಮನೆಯಲ್ಲಿ ಮಾಡೋಣ ಅಂದರೆ ಗೊತ್ತಿರೊ ತಿಂಡಿ ಮಾಡಿ ತಿಂದು ಬೇಜಾರು. ಹಾಗಾದರೆ ಇಲ್ಲಿದೆ ನೋಡಿ ಸಿಂಪಲ್ ಮತ್ತು ಸ್ಪೈಸಿ ಗಿರ್ಮಿಟ್ ಮಾಡೋ ವಿಧಾನ.

    ಬೇಕಾಗಿರುವ ಸಾಮಾಗ್ರಿಗಳು:
    1 ಮಂಡಕ್ಕಿ/ಕಡಲೆಪುರಿ – 3 ಕಪ್
    2 ಹುಣಸೆ ರಸ – 1/4 ಕಪ್
    3 ಟೊಮೇಟೊ – 1
    4 ಈರುಳ್ಳಿ – 2
    5 ಕೊತ್ತಂಬರಿ ಸೊಪ್ಪು – ಸ್ವಲ್ಪ
    6 ಹುರಿಗಡಲೆ ಪುಡಿ – 2 ಚಮಚ
    7 ಹಸಿರು ಮೆಣಸಿನಕಾಯಿ – 3
    8 ಎಣ್ಣೆ – 2 ಚಮಚ
    9 ಜೀರಿಗೆ – 2 ಚಮಚ
    10 ಸಾಸಿವೆ – 2 ಚಮಚ
    11 ಬೆಲ್ಲ- 2 ಚಮಚ
    12 ಉಪ್ಪು- ರುಚಿಗೆ ತಕ್ಕಷ್ಟು
    13 ಕರಿಬೇವು- ಸ್ವಲ್ಪ
    14 ಅರಿಶಿಣ ಪುಡಿ – 1/4 ಚಮಚ
    15 ಸೇವ್/ಖಾರ ಬೂಂದಿ

    ಮಾಡುವ ವಿಧಾನ:
    * ಒಂದು ಬಾಣಲೆಗೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಮೇಲೆ ಒಗ್ಗರಣೆಗೆ ಸಾಸಿವೆ, ಜೀರಿಗೆ ಹಾಕಿ.
    * ನಂತರ ಸಣ್ಣಗೆ ಹಚ್ಚಿದ ಹಸಿರು ಮೆಣಸಿನಕಾಯಿ, ಕರಿಬೇವು ಹಾಕಿ ಸ್ವಲ್ಪ ಫ್ರೈ ಮಾಡಿ.
    * ನಂತರ ಅರಿಶಿಣ ಮತ್ತು ಸಣ್ಣಗೆ ಹಚ್ಚಿದ ಈರುಳ್ಳಿಯಲ್ಲಿ ಮುಕ್ಕಾಲು ಭಾಗದಷ್ಟು ಹಾಕಿ 2 ನಿಮಿಷ ಫ್ರೈ ಮಾಡಿ.
    * ಸ್ವಲ್ಪ ಹುಣಸೆರಸ ಮತ್ತು ಬೆಲ್ಲ ಹಾಕಿ ಮಿಕ್ಸ್ ಮಾಡಿ.
    * ರುಚಿಗೆ ತಕ್ಕಂತೆ ಉಪ್ಪು ಹಾಕಿ 2 ನಿಮಿಷ ಕುದಿಸಿ, ಸ್ವಲ್ಪ ಗಟ್ಟಿಯಾದ ನಂತರ ಒಲೆಯಿಂದ ಕೆಳಗಿಳಿಸಿದ್ರೆ ಗಿರ್ಮಿಟ್ ಮಸಾಲಾ ರೆಡಿ.
    * ಮತ್ತೊಂದು ಪಾತ್ರೆಯಲ್ಲಿ ಮಂಡಕ್ಕಿ ಹಾಕಿ ಅದಕ್ಕೆ ಗಿರ್ಮಿಟ್ ಮಸಾಲಾ, ಸಣ್ಣಗೆ ಕತ್ತರಿಸಿದ ಟೊಮೆಟೊ, ಉಳಿದಿರೋ ಈರುಳ್ಳಿ, 2 ಚಮಚ ಹುರಿಗಡಲೆ ಪುಡಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ.
    * ಕೊನೆಯಲ್ಲಿ ಸ್ವಲ್ಪ ಸೇವ್/ ಖಾರ ಬೂಂದಿ ಉದುರಿಸಿ ಮಿರ್ಚಿ ಬಜ್ಜಿ ಜೊತೆಗೆ ಸವಿಯಲು ಕೊಡಿ.

     

  • ರುಚಿಯಾದ ಅಕ್ಕಿ ಪಾಯಸ ಮಾಡೋ ವಿಧಾನ

    ರುಚಿಯಾದ ಅಕ್ಕಿ ಪಾಯಸ ಮಾಡೋ ವಿಧಾನ

    ಪಾಯಸ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ. ದಕ್ಷಿಣ ಭಾರತದಲ್ಲಿ ಅಕ್ಕಿ ಪಾಯಸ ತುಂಬಾ ಫೇಮಸ್. ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ಅಕ್ಕಿ ಪಾಯಸವನ್ನು ಮಾಡ್ತಾರೆ. ಬಲು ಬೇಗನೆ ಅಕ್ಕಿ ಪಾಯಸ ಮಾಡೋ ಸುಲಭ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು:

    * ಕೆನೆಭರಿತ ಹಾಲು- 1 ಲೀಟರ್
    * ನೆನೆಸಿದ ಬಾಸುಮತಿ ಅಕ್ಕಿ- 1/4 ಬೌಲ್
    * ಸಕ್ಕರೆ- 7 ಚಮಚ
    * ಸಣ್ಣಗೆ ಕಟ್ ಮಾಡಿದ ಬಾದಾಮಿ- 2 ಚಮಚ
    * ಕೇಸರಿ ಎಳೆಗಳು- 6(ನೆನೆಸಿಟ್ಟುಕೊಳ್ಳಿ)
    * ಏಲಕ್ಕಿ ಪಡಿ- ಸ್ವಲ್ಪ

    ಮಾಡುವ ವಿಧಾನ:
    * ಒಂದು ಪಾತ್ರೆಯಲ್ಲಿ ಹಾಲು ಹಾಕಿ ಸ್ಟೌವ್ ಮೇಲೆ ಕುದಿಯಲು ಬಿಡಿ.
    * ಹಾಲು ಕುದಿಯುತ್ತಿದ್ದಂತೆಯೇ ನೆನೆಸಿದ ಅಕ್ಕಿಯನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. (ಬೇಯಿಸಿದ ಅನ್ನವಿದ್ದರೆ ಅದನ್ನು ಬಳಸಬಹುದು)
    * ಅಕ್ಕಿ ಬೇಯುತ್ತಾ ಬಂದಂತೆ ಬೆಂಕಿಯ ಉರಿಯನ್ನು ಕಡಿಮೆ ಮಾಡಿ. ಯಾಕಂದ್ರೆ ಇದರಿಂದ ಅಕ್ಕಿ ತಳ ಹಿಡಿಯುವುದು ತಪ್ಪುತ್ತೆ.
    * ಅಕ್ಕಿ ಬೆಯುತ್ತಿದ್ದಂತೆಯೇ ಹಾಲಿನ ಪ್ರಮಾಣ ಕಡಿಮೆಯಾಗುತ್ತಾ ಬರುತ್ತದೆ. ಈ ವೇಳೆ ಅದಕ್ಕೆ ಸಕ್ಕರೆ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ 2 ನಿಮಿಷಗಳ ಕಾಲ ಕುದಿಯಲು ಬಿಡಿ.
    * ಅಕ್ಕಿ ಚೆನ್ನಾಗಿ ಬೆಂದ ಬಳಿಕ ಏಲಕ್ಕಿ ಪುಡಿ, ಕಟ್ ಮಾಡಿಟ್ಟುಕೊಂಡ ಬಾದಾಮಿ ಹಾಗೂ ನೆನೆಸಿಕೊಂಡ ಕೇಸರಿ ಎಳೆಗಳನ್ನು ಸೇರಿಸಿ.
    * ನಂತ್ರ ಸ್ಟೌವ್ ಆಫ್ ಮಾಡಿ ಪಾತ್ರೆಯನ್ನು ಕೆಳಗಿಳಿಟ್ಟು ಪಾಯಸವನ್ನು ಇನ್ನೊಂದು ಪಾತ್ರೆಗೆ ಹಾಕಿ ರುಚಿಯಾದ ಪಾಯಸವನ್ನು ಸವಿಯಿರಿ.