Tag: cooking

  • ಸುಲಭವಾಗಿ ಅಕ್ಕಿ ರೊಟ್ಟಿ ಮಾಡುವ ವಿಧಾನ

    ಸುಲಭವಾಗಿ ಅಕ್ಕಿ ರೊಟ್ಟಿ ಮಾಡುವ ವಿಧಾನ

    ಪ್ರತಿದಿನ ದೋಸೆ, ಇಡ್ಲಿ ಸೇರಿದಂತೆ ಅನೇಕ ತಿಂಡಿಗಳನ್ನು ಮಾಡಿ ಬೇಸರವಾಗಿರುತ್ತದೆ. ಮನೆಯಲ್ಲಿ ಏನಾದರು ಸ್ಟೆಷಲ್ ಆಗಿ ಹೊಸ ತಿಂಡಿ ಮಾಡು ಎಂದು ಕೇಳುತ್ತಿರುತ್ತಾರೆ. ಆದ್ದರಿಂದ ನಿಮಗಾಗಿ ಅಕ್ಕಿ ರೊಟ್ಟಿ ಮಾಡುವ ವಿಧಾನ ಇಲ್ಲಿದೆ..

    ಬೇಕಾಗುವ ಸಾಮಾಗ್ರಿಗಳು
    1. ಅಕ್ಕಿ ಹಿಟ್ಟು – 1 ಕಪ್
    2. ಕೊತ್ತಂಬರಿ ಸೊಪ್ಪು -ಸ್ವಲ್ಪ
    3. ಈರಳ್ಳಿ – 1
    4. ಎಣ್ಣೆ
    5. ಉಪ್ಪು – ರುಚಿಗೆ ತಕ್ಕಷ್ಟು
    6. ಹಸಿರು ಮೆಣಸಿನ ಕಾಯಿ – 3-4

    ಮಾಡುವ ವಿಧಾನ
    * ಮೊದಲು ಒಂದು ಬೌಲ್ ಗೆ ಅಕ್ಕಿ ಹಿಟ್ಟು, ಸಣ್ಣಗೆ ಕತ್ತರಿಸಿದ ಈರುಳ್ಳಿ, ಮೆಣಸಿನ ಕಾಯಿ ಮತ್ತು ಉಪ್ಪು ಹಾಕಿ ಕಲಿಸಿ.
    * ಸ್ವಲ್ಪ ಸ್ವಲ್ಪ ನೀರು ಹಾಕಿ ಚೆನ್ನಾಗಿ ಗಟ್ಟಿಯಾಗಿ ಕಲಸಿರಿ.
    * ಬಳಿಕ ಅದಕ್ಕೆ ಸಣ್ಣಗೆ ಕಟ್ ಮಾಡಿರುವ ಕೊತ್ತಂಬರಿ ಸೊಪ್ಪು ಹಾಕಿ ಕಲಸಿ, ಉಂಡೆ ಮಾಡಿಕೊಳ್ಳಿ.
    * ನಂತರ ತವದ ಮೇಲೆ ಒಂದು ಚಮಚ ಎಣ್ಣೆ ಹಾಕಿ ಉಂಡೆಯನ್ನು ತವದ ತುಂಬಾ ಹರಡುವಂತೆ ತೆಳ್ಳಗೆ ಕೈಯಿಂದ ತಟ್ಟಿ.
    * ಬಳಿಕ ಸ್ಟವ್ ಆನ್ ಮಾಡಿ, ಮತ್ತೆ ರೊಟ್ಟಿಯ ಮೇಲೆ ಒಂದು ಚಮಚ ಎಣ್ಣೆ ಹಾಕಿ ಬೇಯಿಸಿ.
    * ಎರಡು ಬದಿ ಚೆನ್ನಾಗಿ ಬೇಯಿಸಿದರೆ, ಬಿಸಿ ಬಿಸಿ ಅಕ್ಕಿ ರೊಟ್ಟಿ ಸವಿಯಲು ಸಿದ್ಧ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಣೇಶನಿಗಾಗಿ ಪಂಚಕಜ್ಜಾಯ ಪ್ರಸಾದ

    ಗಣೇಶನಿಗಾಗಿ ಪಂಚಕಜ್ಜಾಯ ಪ್ರಸಾದ

    ಸಮಸ್ತ ಕನ್ನಡ ನಾಡಿನ ಜನತೆಗೆ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು. ಗಣೇಶ ಹಬ್ಬದಲ್ಲಿ ಮನೆಯಲ್ಲಿಯೇ ಗಣಪನ ಮೂರ್ತಿ ಪ್ರತಿಷ್ಠಾಪನೆ ಮಾಡಿದರೆ ಮೂರು ದಿನ ಒಂದೊಂದು ನೈವೇದ್ಯ ಮಾಡಬೇಕಾಗುತ್ತದೆ. ಹೀಗಾಗಿ ಗಣೇಶನಿಗೆ ಇಷ್ಟವಾಗುವ ಪಂಚಕಜ್ಜಾಯ ನೈವೇದ್ಯ ಮಾಡುವ ವಿಧಾನ ಇಲ್ಲಿದೆ..

    ಬೇಕಾಗುವ ಸಾಮಾಗ್ರಿಗಳು
    1. ಕಡ್ಲೆ ಬೇಳೆ – 1/4 ಕಪ್
    2. ಪುಡಿ ಮಾಡಿದ ಬೆಲ್ಲ – 1/4 ಕಪ್
    3. ಒಣ ಕೊಬ್ಬರಿ ತುರಿ – 1/4 ಕಪ್
    4. ಕರಿ ಎಳ್ಳು – 1 ಚಮಚ
    5. ತುಪ್ಪ – 4 ಚಮಚ
    6. ಬಾದಾಮಿ – 5
    7. ಗೋಡಂಬಿ – 10
    8. ದ್ರಾಕ್ಷಿ – 5
    9. ಏಲಕ್ಕಿ – ಎರಡು ಚಿಟಿಕೆ

    ಇದನ್ನೂ ಓದಿ: ಗಣೇಶ ಚತುರ್ಥಿಗೆ ಸಂಬಂಧಿಸಿದ ಸುದ್ದಿ ಓದಲು ಕ್ಲಿಕ್ ಮಾಡಿ

    ಮಾಡುವ ವಿಧಾನ
    * ಮೊದಲಿಗೆ ಒಂದು ಬಾಣಲೆಗೆ ಕಡ್ಲೆ ಬೇಳೆ ಹಾಕಿ ಸಣ್ಣ ಉರಿಯಲ್ಲಿ ಕೆಂಪು ಬಣ್ಣ ಬರುವವರೆಗೆ ಡ್ರೈ ಫ್ರೈ ಮಾಡಿ.
    * ಬಳಿಕ ಅದನ್ನು ಒಂದು ತಟ್ಟೆಗೆ ಹಾಕಿಕೊಳ್ಳಿ, ಅದೇ ರೀತಿ ಎಳ್ಳು, ಕೊಬ್ಬರಿಯನ್ನು ಫ್ರೈ ಮಾಡಿಟ್ಟುಕೊಳ್ಳಿ.
    * ಇನ್ನೊಂದು ಸಣ್ಣ ಬಾಣಲೆ ಇಟ್ಟು 2 ಚಮಚ ತುಪ್ಪ ಹಾಕಿ ಅದಕ್ಕೆ ದ್ರಾಕ್ಷಿ, ಗೋಡಂಬಿ, ಬಾದಾಮಿ ಹಾಕಿ ಫ್ರೈ ಮಾಡಿಟ್ಟುಕೊಳ್ಳಿ.
    * ಉರಿದ ಕಡ್ಲೆ ಬೇಳೆಯನ್ನು ಮಿಕ್ಸ್ ಜಾರಿಗೆ ಹಾಕಿ ರುಬ್ಬಿಕೊಂಡು ಪುಡಿ ಮಾಡಿಕೊಳ್ಳಿ.
    * ಬಾಣಲೆಗೆ 2 ಚಮಚ ತುಪ್ಪ ಹಾಕಿ ಕಾದ ನಂತರ ಬೆಲ್ಲ ಹಾಕಿ ಕರಗುವತನಕ ಮಿಕ್ಸ್ ಮಾಡಿ.
    * ಬಳಿಕ ಅದಕ್ಕೆ ಕಡ್ಲೆ ಹಿಟ್ಟು, ಕೊಬ್ಬರಿ, ಎಳ್ಳು, ಫ್ರೈ ಮಾಡಿಟ್ಟಿದ್ದ ಬಾದಾಮಿ, ದ್ರಾಕ್ಷಿ, ಗೋಡಂಬಿಯನ್ನು ಹಾಕಿ ಸಣ್ಣ ಉರಿಯಲ್ಲಿ ಫ್ರೈ ಮಾಡಿ.
    * ನಂತರ ಸ್ಟವ್ ಆಫ್ ಮಾಡಿ ಅದಕ್ಕೆ ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಫ್ರೈ ಮಾಡಿದರೆ ಗಣೇಶನಿಗಾಗಿ ನೈವೇದ್ಯ ರೆಡಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಬ್ಬಕ್ಕಾಗಿ ಸಿಹಿಯಾದ ಬೆಸಾನ್ ಲಾಡು ಮಾಡುವ ವಿಧಾನ

    ಹಬ್ಬಕ್ಕಾಗಿ ಸಿಹಿಯಾದ ಬೆಸಾನ್ ಲಾಡು ಮಾಡುವ ವಿಧಾನ

    ಭಾರತದಾದ್ಯಂತ ಗೌರಿ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಮನೆಯಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದವರು ಪ್ರತಿದಿನ ಗಣಪನಿಗೆ ಇಷ್ಟವಾಗುವ ನೈವೇದ್ಯ ಮಾಡಬೇಕು. ಗಣೇಶ ಮೋದಕ, ಲಾಡು ಪ್ರಿಯಾ. ಆದ್ದರಿಂದ ಸುಲಭವಾಗಿ ಬೆಸಾನ್ ಲಾಡು(ಕಡ್ಲೆಹಿಟ್ಟಿನ ಲಾಡು) ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು:
    1. ಕಡ್ಲೆಹಿಟ್ಟು -ಅರ್ಧ ಕೆಜಿ
    2. ಸಕ್ಕರೆ – 250 ಗ್ರಾಂ
    3. ಏಲಕ್ಕಿ ಪುಡಿ – ಸ್ವಲ್ಪ
    4. ಗೋಡಂಬಿ, ಬಾದಾಮಿ – (ಪುಡಿ ಮಾಡಿದ್ದು)
    5. ತುಪ್ಪ – 100 ಗ್ರಾಂ

    ಮಾಡುವ ವಿಧಾನ
    * ಒಂದು ಪ್ಯಾನ್‍ಗೆ ತುಪ್ಪವನ್ನು ಹಾಕಿ ಕಾದ ಮೇಲೆ ಕಡ್ಲೆಹಿಟ್ಟನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ.
    * ಕಡ್ಲೆಹಿಟ್ಟು ಬಣ್ಣ ಬದಲಿಸುವವರೆಗೂ ಚೆನ್ನಾಗಿ ಫ್ರೈ ಮಾಡಿ. ಗಂಟುಗಳು ಇಲ್ಲದಂತೆ ಕೈಆಡಿಸುತ್ತಿರಿ. ಕಡ್ಲೆಹಿಟ್ಟು ಪೇಸ್ಟ್ ನ ರೀತಿ ಆಗುತ್ತದೆ.
    * ಆಮೇಲೆ ಒಂದು ಬಟ್ಟಲಿಗೆ ತೆಗೆದಿಟ್ಟುಕೊಳ್ಳಿ, ತಣ್ಣಗಾಗಲು ಬಿಡಿ.
    * ಕಡ್ಲೆಹಿಟ್ಟು ತಣ್ಣಗಾದ ಮೇಲೆ ಅದಕ್ಕೆ ಪುಡಿ ಮಾಡಿದ ಸಕ್ಕರೆ, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
    * ಗಂಟುಗಳು ಇಲ್ಲದಂತೆ ಚೆನ್ನಾಗಿ ಮಿಶ್ರಣ ಮಾಡಿ ಉಂಡೆ ಕಟ್ಟಿ
    * ಬಳಿಕ ಉಂಡೆಯನ್ನು ಗೋಡಂಬಿ, ಬಾದಾಮಿ ಪುಡಿಯಲ್ಲಿ ಹೊರಳಿಸಿ.
    * ಈಗ ಸಿಹಿಸಿಹಿಯಾದ ಬೆಸಾನ್ ಅಥವಾ ಕಡ್ಲೆ ಹಿಟ್ಟಿನ ಲಾಡು ಸಿದ್ಧ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಣಪನಿಗಾಗಿ ಸ್ಪೆಷಲ್ ಮೋದಕ ಮಾಡುವ ವಿಧಾನ

    ಗಣಪನಿಗಾಗಿ ಸ್ಪೆಷಲ್ ಮೋದಕ ಮಾಡುವ ವಿಧಾನ

    ಗೌರಿ ಗಣೇಶ ಹಬ್ಬ ಬರುತ್ತಿದೆ. ಹಬ್ಬಗಳು ಬಂದರೆ ಸಾಕು ಸಿಹಿ ತಿನಿಸುಗಳನ್ನು ಮಾಡಬೇಕು. ಅದರಲ್ಲೂ ಗಣೇಶ ಹಬ್ಬವೆಂದರೆ ಮುಂಚಿತವಾಗಿ ಗಣಪನಿಗೆ ಇಷ್ಟವಾಗುವ ತಿಂಡಿ-ತಿನಿಸುಗಳನ್ನು ಮಾಡಿ ಸಿದ್ಧ ಮಾಡಿಕೊಳ್ಳಬೇಕು. ಗಣೇಶ ಮೋದಕ ಪ್ರಿಯ ಎಂದು ಎಲ್ಲರಿಗೂ ತಿಳಿದಿದೆ. ಆದ್ದರಿಂದ ನಿಮಗಾಗಿ ಗಣಪನಿಗೆ ಪ್ರಿಯಾವಾದ ಮೋದಕ ಸಿಹಿ ಮಾಡುವ ವಿಧಾನ ಇಲ್ಲಿದೆ…

    ಬೇಕಾಗುವ ಸಾಮಾಗ್ರಿಗಳು
    1. ಮೈದಾ ಹಿಟ್ಟು – 1 ಕಪ್
    2. ಚಿರೋಟಿ ರವೆ – 1/4 ಕಪ್
    3. ಉಪ್ಪು – ಚಿಟಿಕೆ
    4. ಬೆಲ್ಲ – 1 ಅಚ್ಚು
    5. ಕೊಬ್ಬರಿ ತುರಿ – 1 ಕಪ್
    6. ಏಲಕ್ಕಿ ಪುಡಿ
    7. ಗಸಗಸೆ – 1 ಚಮಚ
    8. ಎಳ್ಳು -ಸ್ವಲ್ಪ
    9. ಗೋಡಂಬಿ, ಬಾದಾಮಿ – 3-4 ಚಮಚ
    1. ಎಣ್ಣೆ – ಕರಿಯಲು

    ಮಾಡುವ ವಿಧಾನ
    * ಮೊದಲಿಗೆ ಒಂದು ಬಟ್ಟಲಿಗೆ ಚಿರೋಟಿ ರವೆ, ಮೈದಾ ಹಿಟ್ಟು, ಉಪ್ಪು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಂಡು ತಟ್ಟೆ ಮುಚ್ಚಿಡಿ.
    * ನಂತರ ಒಂದು ಪ್ಯಾನ್ ಅನ್ನು ಒಲೆಯ ಮೇಲಿಟ್ಟು ಅದಕ್ಕೆ ಸೋಸಿಕೊಂಡ ಬೆಲ್ಲದ ನೀರು, ಕೊಬ್ಬರಿ ತುರಿಯನ್ನು ಹಾಕಿ ಫ್ರೈ ಮಾಡಿರಿ.
    * ಹೂರಣ ಸ್ವಲ್ಪ ಗಟ್ಟಿಯಾದಂತೆ ಅದಕ್ಕೆ ಏಲಕ್ಕಿ ಪುಡಿ, ಹುರಿದ ಗಸಗಸೆ, ಪುಡಿ ಮಾಡಿದ ಎಳ್ಳು, ಹುರಿದು ಸಣ್ಣಗೆ ಹೆಚ್ಚಿದ ಗೋಡಂಬಿ, ಬಾದಾಮಿಯನ್ನು ಸೇರಿಸಿ ಮಿಕ್ಸ್ ಮಾಡಿರಿ, ತಣ್ಣಗಾಗಲು ಬಿಡಿ.
    * ಈಗ ಹಿಟ್ಟನ್ನು ತೆಗೆದುಕೊಂಡು ಪೂರಿ ಆಕಾರಕ್ಕಿಂತ ಸ್ವಲ್ಪ ಕಡಿಮೆ ಲಟ್ಟಿಸಿ ಅದರೊಳಗೆ 1/2 ಚಮಚ ಹೂರಣ ಸೇರಿಸಿ ಮಧ್ಯಕ್ಕೆ ಮಡಚಿ
    * ಮೋದಕ ರೀತಿಯಲ್ಲಿ ಅಂದರೆ ಬೆಳ್ಳುಳ್ಳಿ ಆಕಾರದಲ್ಲಿ ಮಡಚಿ. ಹೂರಣ ಆಚೆ ಬಾರದಂತೆ ನೋಡಿಕೊಳ್ಳಿ.
    * ಈಗ ಮಾಡಿಟ್ಟುಕೊಂಡ ಹಲವು ಮೋದಕಗಳನ್ನು ಕಾದ ಎಣ್ಣೆಯಲ್ಲಿ ಹಾಕಿ ಕರಿಯಿರಿ.
    ( ಡ್ರೈಫ್ರೂಟ್ಸ್, ಎಳ್ಳು ಬೇಕಿದ್ದಲ್ಲಿ ಮಾತ್ರ ಬಳಸಬಹುದು ಅದಕ್ಕೆ ಬದಲಾಗಿ ಹುರಿಗಡಲೆ ಪುಡಿ ಬಳಸಬಹುದು)

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭಾನುವಾರದ ಚಿಕನ್ ಸ್ಪೆಷಲ್ ಮಾಡುವ ವಿಧಾನ

    ಭಾನುವಾರದ ಚಿಕನ್ ಸ್ಪೆಷಲ್ ಮಾಡುವ ವಿಧಾನ

    ರಜೆ ದಿನ ಬಂದರೆ ಸಾಕು ಮನೆಯಲ್ಲಿ ನಾನ್ ವೆಜ್ ಮಾಡಿ ಬಿಸಿಬಿಸಿಯಾಗಿ ಊಟ ಮಾಡಬೇಕು ಅನ್ನಿಸುತ್ತದೆ. ಆದರೆ ಬಿರಿಯಾನಿ, ಚಿಕನ್ ಸಾಂಬಾರ್, ಕಬಾಬ್ ಮಾಡಿ ಬೇಸರವಾಗಿರುತ್ತದೆ. ಮನೆಯಲ್ಲಿ ಮಕ್ಕಳು ಸೇರಿದಂತೆ ಎಲ್ಲರು ರುಚಿಯಾಗಿ, ಖಾರವಾಗಿ ವಿಶೇಷವಾದ ಏನಾದರೂ ನಾನ್ ವೆಜ್ ಅಡುಗೆ ಮಾಡಿ ಎಂದು ಹೇಳುತ್ತಾರೆ. ಆದ್ದರಿಂದ ನಿಮಗಾಗಿ ಚಿಕನ್ ಸ್ಪೆಷಲ್ ಮಾಡುವ ವಿಧಾನ ಇಲ್ಲಿದೆ..

    ಬೇಕಾಗುವ ಸಾಮಾಗ್ರಿಗಳು
    1. ಚಿಕನ್ – 1 ಕೆಜಿ
    2. ಈರುಳ್ಳಿ – 1 ದೊಡ್ಡದು
    3. ಕೊತ್ತಂಬರಿ + ಪುದೀನಾ – 1 ಬಟ್ಟಲು
    4. ಹಸಿಮೆಣಸಿಕಾಯಿ – ರುಚಿಗೆ ತಕ್ಕಷ್ಟು
    5. ಚಕ್ಕೆ – ಚಿಕ್ಕದು
    6. ಪಲಾವ್ ಎಲೆ – 1 ದೊಡ್ಡದು
    7. ಏಲಕ್ಕಿ – 1-2
    8. ಶುಂಠಿ, ಬೆಳ್ಳುಳ್ಳಿ – ಪೇಸ್ಟ್ ಒಂದೂವರೆ ಚಮಚ
    9. ಮೊಸರು – 1 ಕಪ್
    10. ಕಸುರಿ ಮೇತಿ – ಚಿಟಿಕೆ
    11. ಗರಂ ಮಸಾಲ – 1 ಚಮಚ
    12. ಕೆಂಪು ಮೆಣಸಿನಕಾಯಿ ಪುಡಿ (ಚಿಲ್ಲಿ ಪೌಡರ್) – 1 ಚಮಚ (ರುಚಿಗೆ ತಕ್ಕಷ್ಟು)
    13. ಜೀರಿಗೆ ಪುಡಿ – 1 ಚಮಚ
    14. ದನಿಯಾಪುಡಿ – 1 ಚಮಚ
    15. ಉಪ್ಪು – ರುಚಿಗೆ ತಕ್ಕಷ್ಟು
    16. ತುಪ್ಪ – 4-5 ಚಮಚ

    ಮಾಡುವ ವಿಧಾನ
    * ಮೊದಲಿಗೆ ತೊಳೆದ ಕೊತ್ತಂಬರಿ, ಪುದೀನಾ, ಹಸಿಮೆಣಸಿಕಾಯಿಯನ್ನು ಮಿಕ್ಸಿ ಜಾರ್ ಗೆ ಹಾಕಿ ಪೇಸ್ಟ್ ಮಾಡಿಟ್ಟಿಕೊಳ್ಳಿ.
    * ಫ್ರೈ ಮಾಡುವ ಪ್ಯಾನ್‍ ಗೆ ತುಪ್ಪ ಹಾಕಿ, ಬಿಸಿಯಾದ ಮೇಲೆ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಫ್ರೈ ಮಾಡಿ.
    * ಈಗ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಚಕ್ಕೆ, ಏಲಕ್ಕಿ, ಪಲಾವ್ ಎಲೆಯನ್ನು ಹಾಕಿ ಹಸಿ ವಾಸನೆ ಹೋಗೋ ತನಕ ಫ್ರೈ ಮಾಡಿ.
    * ಮಿಶ್ರಣಕ್ಕೆ ಚೆನ್ನಾಗಿ ತೊಳೆದ ಚಿಕನ್, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಬೇಯುವ ತನಕ ಮುಚ್ಚಲ ಮುಚ್ಚಿ ಬೇಯಿಸಿ. (ನೀರು ಹಾಕಬೇಡಿ)
    * ಈಗ ಅದಕ್ಕೆ ಗಟ್ಟಿ ಮೊಸರು, ಕಸೂರಿ ಮೇತಿ, ರುಬ್ಬಿದ ಕೊತ್ತಂಬರಿ, ಪುದೀನಾ, ಮೆಣಸಿನಕಾಯಿ ಮಿಶ್ರಣ ಸೇರಿಸಿ, ನೀರು ಸೇರಿಸಿ ಬೇಯಿಸಿ.
    * 2 ನಿಮಿಷ ಬೆಂದ ನಂತ್ರ ಗರಂ ಮಸಾಲ, ಜೀರಾ ಪುಡಿ, ಚಿಲ್ಲಿ ಪೌಡರ್, ದನಿಯಾಪುಡಿ ಸೇರಿಸಿ ನೀರು ಬೇಕಿದ್ದಲ್ಲಿ ಸೇರಿಸಿ ಮುಚ್ಚಲ ಮುಚ್ಚಿ ಬೇಯಿಸಿ. (ರುಚಿ ಕಡಿಮೆ ಇದ್ದರೆ ಟೇಸ್ಟ್ ನೋಡಿ ಸ್ವಲ್ಪ ಹಾಕಿಕೊಳ್ಳಿ)
    * ಪ್ಯಾನ್ ಬದಿಯಲ್ಲಿ ಎಣ್ಣೆ ಬಿಟ್ಟುಕೊಂಡ ನಂತ್ರ ಒಮ್ಮೆ ತಿರುಗಿಸಿ ಕೆಳಗಿಳಿಸಿ.
    * ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಮೇಲೆ ಉದುರಿಸಿ ಸರ್ವ್ ಮಾಡಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೃಷ್ಣನಿಗಾಗಿ ಸಿಹಿ ಕರ್ಜಿಕಾಯಿ ಮಾಡುವ ವಿಧಾನ

    ಕೃಷ್ಣನಿಗಾಗಿ ಸಿಹಿ ಕರ್ಜಿಕಾಯಿ ಮಾಡುವ ವಿಧಾನ

    ಇಂದು ಕೃಷ್ಣ ಜನ್ಮಾಷ್ಟಮಿ. ಕೃಷ್ಣನ ಆರಾಧಕರು ದೇವಾಲಯಕ್ಕೆ ಹೋಗಿ ಪೂಜೆ ಮಾಡುತ್ತಾರೆ. ಕೆಲವರು ಮನೆಯಲ್ಲಿಯೇ ಕೃಷ್ಣನ ವಿಗ್ರಹಕ್ಕೆ ಪೂಜೆ ಮಾಡುತ್ತಾರೆ. ಆದರೆ ಪೂಜೆ ಮಾಡುವ ಮುನ್ನಾ ಕೃಷ್ಣನಿಗಾಗಿ ಸಿಹಿ ಪ್ರಸಾದ ಮಾಡಿ ನೈವೆದ್ಯವನ್ನು ಇಡಬೇಕು. ಪ್ರತಿ ಹಬ್ಬಕ್ಕೂ ಕೇಸರಿ ಬಾತ್, ಪಾಯಸ ಅದೇ ಸಿಹಿ ತಿಂಡಿ ಮಾಡಿ ಬೇಸರವಾಗಿರುತ್ತದೆ. ಈ ಬಾರಿ ಕೃಷ್ಣನಿಗಾಗಿ ಏನಾದರೂ ವಿಶೇಷ ಸಿಹಿತಿಂಡಿ ಮಾಡಬೇಕು ಅಂದುಕೊಂಡಿರುತ್ತೀರಾ.. ಆದ್ದರಿಂದ ನಿಮಗಾಗಿ ಬೇಗ ಹಾಗೂ ಸುಲಭವಾಗಿ ಸಿಹಿ ಕರ್ಜಿಕಾಯಿ ಮಾಡುವ ವಿಧಾನ ಇಲ್ಲಿದೆ..

    ಬೇಕಾಗುವ ಸಾಮಾಗ್ರಿಗಳು
    1. ಮೈದಾ ಹಿಟ್ಟು – ಅರ್ಧ ಕೆಜಿ
    2. ಉಪ್ಪು – ಚಿಟಿಕೆ
    3. ಎಣ್ಣೆ – ಕರಿಯಲು
    4. ಕೊಬ್ಬರಿ – 1/2 ಕೆಜಿ
    5. ಸಕ್ಕರೆ – 1/4 ಕೆಜಿ
    6. ಏಲಕ್ಕಿ ಪುಡಿ – ಸ್ವಲ್ಪ

    ಮಾಡುವ ವಿಧಾನ
    * ಮೈದಾ ಹಿಟ್ಟನ್ನು ಜರಡಿ ಅದಕ್ಕೆ ಚಿಟಿಕೆ ಉಪ್ಪು ಹಾಕಿ ನೀರು ಹಾಕಿಕೊಂಡು ಚಪಾತಿ ಹಿಟ್ಟಿನ ಹದಕ್ಕೆ ಕಲಸಿಡಿ.
    * ಕೊಬ್ಬರಿಯನ್ನು ತುರಿದು ಅದಕ್ಕೆ ಪುಡಿ ಮಾಡಿದ ಸಕ್ಕರೆ, ಏಲಕ್ಕಿ ಪುಡಿಯನ್ನು ಬೆರೆಸಿಡಿ.
    * ಇತ್ತ ಚೆನ್ನಾಗಿ ನಾದಿದ ಮೈದಾ ಹಿಟ್ಟನ್ನು ಸಣ್ಣ ಉಂಡೆಯನ್ನಾಗಿ ಮಾಡಿ ಪೂರಿ ಸೈಜ್‍ನಲ್ಲಿ ಲಟ್ಟಿಸಿ.
    * ಹೀಗೆ ಲಟ್ಟಿಸಿದ ಪೂರಿ ಸೈಜ್‍ನ ಒಳಗೆ ಕೊಬ್ಬರಿ ಮಿಶ್ರಿತ ಊರ್ಣವನ್ನು ತುಂಬಿ ಮಧ್ಯಕ್ಕೆ ಮಡಚಿ ಸೀಲ್ ಮಾಡಿ. (ಮಾರ್ಕೆಟ್‍ ನಲ್ಲಿ ಕರ್ಜಿಕಾಯಿ ಮಾಡುವ ಮೌಲ್ಡ್ ಸಿಗುತ್ತೆ ಅದನ್ನು ಬಳಸಿಯೂ ಮಾಡಬಹುದು)
    * ಈ ರೀತಿ ಎಲ್ಲವನ್ನೂ ಮಾಡಿಟ್ಟುಕೊಂಡ ನಂತರ ಕಾದ ಎಣ್ಣೆಗೆ ಹಾಕಿ ಗೋಲ್ಡನ್ ಬಣ್ಣಕ್ಕೆ ಬರುವವರೆಗೂ ಕರಿಯಿರಿ.
    * ಕರಿದ ಬಳಿಕ ಎಣ್ಣೆಯಿಂದ ತೆಗೆದು ಒಂದು ಪಾತ್ರೆಗೆ ಹಾಕಿ. ಗರಿ ಗರಿಯಾದ ಕರ್ಜಿಕಾಯಿಯನ್ನು ಹಲವು ದಿನಗಳ ಕಾಲ ಸ್ಟೋರ್ ಮಾಡಿ ತಿನ್ನಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಕ್ರೀದ್ ಹಬ್ಬಕ್ಕಾಗಿ ಮಟನ್ ಲಿವರ್ ಫ್ರೈ ಮಾಡುವ ವಿಧಾನ

    ಬಕ್ರೀದ್ ಹಬ್ಬಕ್ಕಾಗಿ ಮಟನ್ ಲಿವರ್ ಫ್ರೈ ಮಾಡುವ ವಿಧಾನ

    ಪ್ರತಿ ವರ್ಷ ಬಕ್ರೀದ್ ಹಬ್ಬಕ್ಕಾಗಿ ಚಿಕನ್ ಫ್ರೈ, ಕಬಾಬ್ ಮಾಡುತ್ತೀರಿ. ಈ ವರ್ಷ ಬಕ್ರೀದ್ ಹಬ್ಬಕ್ಕಾಗಿ ಏನಾದರೂ ವಿಶೇಷವಾದ ಅಡುಗೆ ಮಾಡಬೇಕು ಎಂದುಕೊಂಡಿರುತ್ತೀರಾ. ಆದ್ದರಿಂದ ನಿಮಗಾಗಿ ಸ್ಪೆಷಲ್ ಮಟನ್ ಲಿವರ್ ಫ್ರೈ ಮಾಡುವ ವಿಧಾನ ಇಲ್ಲಿದೆ..

    ಬೇಕಾಗುವ ಸಾಮಾಗ್ರಿಗಳು
    1. ಮಟನ್ ಲಿವರ್ – 1/4 ಕೆಜಿ
    2. ಈರುಳ್ಳಿ – 1 ದಪ್ಪದು
    3. ಎಣ್ಣೆ – ಕೊತ್ತಂಬರಿ
    4. ಬ್ಲಾಕ್ ಪೆಪ್ಪರ್ ಪುಡಿ – ಒಂದೂವರೆ ಚಮಚ
    5. ಅರಿಶಿನ ಪುಡಿ – ಚಿಟಿಕೆ
    6. ಖಾರದ ಪುಡಿ – 1 ಚಮಚ
    7. ನಿಂಬೆ ರಸ – 1 ಹಣ್ಣಿನ ರಸ
    8. ಶುಂಠಿ – ಬೆಳ್ಳುಳ್ಳಿ ಪೇಸ್ಟ್
    9. ಉಪ್ಪು – ರುಚಿಗೆ ತಕ್ಕಷ್ಟು

    ಮಾಡುವ ವಿಧಾನ
    * ನಾನ್ ಸ್ಟಿಕ್ ಪ್ಯಾನ್‍ಗೆ ಎಣ್ಣೆ ಹಾಕಿ. ಬಿಸಿಯಾದ ಮೇಲೆ ಅದಕ್ಕೆ ಉದ್ದುದ್ದಕ್ಕೆ ಹೆಚ್ಚಿದ ಈರುಳ್ಳಿಯನ್ನು ಹಾಕಿ ಈರುಳ್ಳಿ ಗೋಲ್ಡನ್ ಬ್ರೌನ್ ಬರುವ ತನಕ ಫ್ರೈ ಮಾಡಿರಿ.
    * ಅದಕ್ಕೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವ ತನಕ ಕೈಯಾಡಿಸಿ.
    * ನಂತರ ತೊಳೆದ ಮಟನ್ ಲಿವರ್ ಸೇರಿಸಿ. ಬಣ್ಣ ಬದಲಾಗುವವರೆಗೆ ಫ್ರೈ ಮಾಡಿರಿ.
    * ಲಿವರ್ ಬಣ್ಣ ಬದಲಾದ ಮೇಲೆ ಅದಕ್ಕೆ ಅರಿಶಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಖಾರದ ಪುಡಿ, ಬ್ಲಾಕ್ ಪೆಪ್ಪರ್ ಪುಡಿ ಸೇರಿಸಿ ಮಿಕ್ಸ್ ಮಾಡಿರಿ.
    * 3-4 ನಿಮಿಷ ಕಡಿಮೆ ಉರಿಯಲ್ಲಿ ಲಿಡ್ ಮುಚ್ಚಿ ಬೇಯಲು ಬಿಡಿ.
    * ಮಿಶ್ರಣದೊಂದಿಗೆ ಲಿವರ್ ಬೆಂದ ಬಳಿಕ. ಅದಕ್ಕೆ ಕೊತ್ತಂಬರಿ ಸೊಪ್ಪು, ನಿಂಬೆ ಹಣ್ಣಿನ ರಸ ಸೇರಿಸಿ ಕೆಳಗಿಳಿಸಿರಿ.
    ( ಬೇಕಿದ್ದಲ್ಲಿ ಚೆನ್ನಾಗಿ ಬಲಿತ ಕರಿಬೇವನ್ನು ಎಣ್ಣೆಯಲ್ಲಿ ಫ್ರೈ ಮಾಡಿ ಸೇರಿಸಬಹುದು)

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಕ್ರೀದ್ ಸ್ಪೆಷಲ್ – ಮಟನ್ ಬಿರಿಯಾನಿ ಮಾಡೋ ವಿಧಾನ ಇಲ್ಲಿದೆ

    ಬಕ್ರೀದ್ ಸ್ಪೆಷಲ್ – ಮಟನ್ ಬಿರಿಯಾನಿ ಮಾಡೋ ವಿಧಾನ ಇಲ್ಲಿದೆ

    ಸಾಲುಸಾಲಾಗಿ ಹಬ್ಬಗಳು ಬರುತ್ತಿರುತ್ತವೆ. ಹಬ್ಬಗಳು ಬಂದರೆ ಹಬ್ಬಕ್ಕೆ ವಿಶೇಷ ಅಡುಗೆ ಮಾಡಬೇಕು ಅಂದುಕೊಳ್ಳುತ್ತೀರಾ. ಬಕ್ರೀದ್ ಹಬ್ಬಕ್ಕಾಗಿ ವಿಶೇಷವಾಗಿ ಅಡುಗೆ ಮಾಡಬೇಕು. ಬಕ್ರೀದ್ ಹಬ್ಬಕ್ಕೆ ಮಾಂಸ ಊಟವೇ ವಿಶೇಷ. ಪ್ರತಿ ವರ್ಷ, ಚಿಕನ್ ಬಿರಿಯಾನಿ, ಕಬಾಬ್, ಚಿಕನ್ ಪ್ರೈ ಇವುಗಳನ್ನೇ ಮಾಡಿರುತ್ತೀರಾ. ಈ ವರ್ಷ ಏನಾದರೂ ಬೇರೆ ರೀತಿ ಮಾಡಬೇಕು ಅಂದುಕೊಳ್ಳುತ್ತೀರಾ. ಆದ್ದರಿಂದ ನಿಮಗಾಗಿ ಸ್ಪೆಷಲ್ ಮಟನ್ ಬಿರಿಯಾನಿ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    1. ಬಾಸುಮತಿ ಅಕ್ಕಿ – 1 ಪಾವು
    2. ಮಟನ್ – ಅರ್ಧ ಕೆಜಿ
    3. ಧನಿಯಾ ಪುಡಿ – 1 ಚಮಚ
    4. ಗರಂ ಮಸಾಲ ಪುಡಿ – 1 ಚಮಚ
    5. ಬಿರಿಯಾನಿ ಮಸಾಲ ಪುಡಿ – 1.5 ಚಮಚ
    6. ಖಾರದ ಪುಡಿ – 1 ಚಮಚ
    7. ಕೊತ್ತಂಬರಿ ಮತ್ತು ಪುದೀನ – 1 ಬಟ್ಟಲು
    8. ಉಪ್ಪು – ರುಚಿಗೆ ತಕ್ಕಷ್ಟು
    9. ಮೊಸರು – 4-5 ಚಮಚ
    10. ಎಣ್ಣೆ+ತುಪ್ಪ – 2-4 ಚಮಚ
    11. ಅರಿಶಿನ ಪುಡಿ – ಚಿಟಿಕೆ
    12. ನಿಂಬೆ ರಸ – 1 ನಿಂಬೆಹಣ್ಣು
    13. ಈರುಳ್ಳಿ – 1 ದೊಡ್ಡದು
    14. ಶುಂಠಿ+ಬೆಳ್ಳುಳ್ಲಿ ಪೇಸ್ಟ್ – 1 ಚಮಚ
    15. ಟೊಮೋಟೋ – 1

    ಮಾಡುವ ವಿಧಾನ
    * ಮೊದಲಿಗೆ ಬಾಸುಮತಿ ಅಕ್ಕಿಯನ್ನು ಅರ್ಧ ಗಂಟೆ ನೀರಿನಲ್ಲಿ ನೆನೆಸಿ ಅನ್ನ ಮಾಡಿಟ್ಟುಕೊಳ್ಳಿ.
    * ನಂತರ ಒಂದು ಪ್ಯಾನ್‍ಗೆ ತುಪ್ಪ ಸ್ವಲ್ಪ ಎಣ್ಣೆ ಹಾಕಿ. ಬಿಸಿಯಾದ ಮೇಲೆ ಅದಕ್ಕೆ ಈರುಳ್ಳಿ ಹಾಕಿ ಫ್ರೈ ಮಾಡಿರಿ.
    * ಬಳಿಕ ಅದಕ್ಕೆ ಬೆಳ್ಳುಳ್ಳಿ, ಶುಂಠಿ ಪೇಸ್ಟ್ ಸೇರಿಸಿ ಫ್ರೈ ಮಾಡಿರಿ.
    * ಎಲ್ಲವೂ ಫ್ರೈ ಆದ ಮೇಲೆ ಅದಕ್ಕೆ ತೊಳೆದ ಮಟನ್, ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ ಪುಡಿ ಹಾಕಿ 2 ನಿಮಿಷ ಮುಚ್ಚಳ ಮುಚ್ಚಿ ಬೇಯಿಸಿರಿ.
    * ಬಳಿಕ ಅದಕ್ಕೆ ಧನಿಯಾ ಪುಡಿ, ಖಾರದ ಪುಡಿ, ಗರಂ ಮಸಾಲ, ಬಿರಿಯಾನಿ ಮಸಾಲ ಪುಡಿ ಸೇರಿಸಿ ಮಿಕ್ಸ್ ಮಾಡಿ ಫ್ರೈ ಮಾಡಿರಿ.
    * ಈಗ ಸಣ್ಣಗೆ ಹೆಚ್ಚಿದ ಕೊತ್ತಂಬರಿ, ಪುದಿನಾ, ಟೋಮೊಟೋ, ಸ್ವಲ್ಪ ಮೊಸರು ಸೇರಿಸಿ ಮುಚ್ಚಳ ಮುಚ್ಚಿ ಚೆನ್ನಾಗಿ ಬೇಯಿಸಿರಿ.
    (ಕುಕ್ಕರ್‍ನಲ್ಲಿ ಮಾಡುವುದಾದರೆ 2 -3 ಕೂಗು ಕೂಗಿಸಿ)
    * ಮಟನ್ ಚೆನ್ನಾಗಿ ಬೆಂದ ಬಳಿಕ ಆ ಮಿಶ್ರಣವನ್ನು ಪಾತ್ರೆಗೆ ಹಾಕಿ. ಮಾಡಿಟ್ಟುಕೊಂಡ ಅನ್ನವನ್ನು ಮಿಕ್ಸ್ ಮಾಡಿರಿ.
    * ಕೊನೆಯದಾಗಿ ನಿಂಬೆರಸ ಸೇರಿಸಿ ಮುಚ್ಚಳ ಮುಚ್ಚಿ ದಮ್ ಕಟ್ಟಿ 2-3 ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿರಿ.
    * ಕೊನೆಗೆ ಮುಚ್ಚಳ ತೆಗೆದು ಬಿಸಿಬಿಸಿಯಾಗಿ ರುಚಿಯಾದ ಮಟನ್ ಬಿರಿಯಾನಿ ಸರ್ವ್ ಮಾಡಿ.
    (ಈರುಳ್ಳಿಯನ್ನು ಉದ್ದುದ್ದ ಹೆಚ್ಚಿ, ಎಣ್ಣೆಯಲ್ಲಿ ಗೋಲ್ಡನ್ ಬ್ರೌನ್ ಆಗೋವರೆಗೆ ಫ್ರೈ ಮಾಡಿ ಕೊನೆಯಲ್ಲಿ ಮಿಕ್ಸ್ ಮಾಡಿಕೊಳ್ಳಬಹುದು)

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿಂಪಲ್ ಆಗಿ ಎಗ್ ರೈಸ್ ಮಾಡುವ ವಿಧಾನ

    ಸಿಂಪಲ್ ಆಗಿ ಎಗ್ ರೈಸ್ ಮಾಡುವ ವಿಧಾನ

    ಇಂದು ಭಾನುವಾರ ರಜೆಯಾಗಿರುವುದರಿಂದ ಮನೆಯಲ್ಲಿಯೇ ಎಲ್ಲರು ಇರುತ್ತಾರೆ. ಮಕ್ಕಳು, ಮನೆಯ್ಲಲಿರುವವರು ಖಾರಖಾರವಾಗಿ ಬಿಸಿಬಿಸಿಯಾಗಿ ಏನಾದರೂ ತಿನ್ನಬೇಕು ಅಂದುಕೊಂಡಿರುತ್ತಾರೆ. ಹೊರಗಡೆ ಹೋಗೋಣ ಎಂದರೆ ಮೋಡ ಮುಸುಕಿದ ವಾತಾವರಣ. ಆದ್ದರಿಂದ ಮನೆಯಲ್ಲಿಯೇ ಸಿಂಪಲ್ ಆಗಿ ಎಗ್ ರೈಸ್ ಮಾಡುವ ವಿಧಾನ ನಿಮಗಾಗಿ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    1. ಮೊಟ್ಟೆ – 2-3
    2. ಅನ್ನ – 1 ಬಟ್ಟಲು
    3. ದಪ್ಪ ಈರುಳ್ಳಿ – 1, ಸಣ್ಣಗೆ ಹೆಚ್ಚಿದ್ದು
    4. ಹಸಿ ಮೆಣಸಿನಕಾಯಿ – 5ರಿಂದ6
    (ಖಾರದ ಪುಡಿ ಬೇಕಾದ್ರೆ ಬಳಸಬಹುದು)
    5. ಬೆಳ್ಳುಳ್ಳಿ, ಶುಂಠಿ ಪೇಸ್ಟ್ – 1 ಚಮಚ
    6. ಗರಂ ಮಸಾಲ – ಒಂದೂವರೆ ಚಮಚ
    7. ಕಡ್ಲೆಬೇಳೆ – 1-2 ಚಮಚ
    8. ನಿಂಬೆಹಣ್ಣು – ಅರ್ಧ ಹೋಳು
    9. ಕೊತ್ತಂಬರಿ ಸೊಪ್ಪು – ಸ್ವಲ್ಪ
    10. ಅರಿಶಿನ ಪುಡಿ – ಚಿಟಿಕೆ
    11. ಜೀರಿಗೆ+ಸಾಸಿವೆ – ಅರ್ಧ ಚಮಚ
    12. ಉಪ್ಪು – ರುಚಿಗೆ ತಕ್ಕಷ್ಟು
    13. ಎಣ್ಣೆ – 3-4 ಚಮಚ

    ಮಾಡುವ ವಿಧಾನ
    * ಮೊದಲಿಗೆ ಒಂದು ಪ್ಯಾನ್‍ಗೆ ಎಣ್ಣೆ ಹಾಕಿ ಜೀರಿಗೆ, ಸಾಸಿವೆ, ಕಡ್ಲೆಬೇಳೆ ಹಾಕಿ ಫ್ರೈ ಮಾಡಿರಿ.
    * ಬಳಿಕ ಅದಕ್ಕೆ ಈರುಳ್ಳಿ, ಹಸಿ ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅರಿಶಿನ ಪುಡಿ ಸೇರಿಸಿ ಹಸಿ ವಾಸನೆ ಹೋಗೋ ತನಕ ಫ್ರೈ ಮಾಡಿ.
    * ಎಲ್ಲವೂ ಫ್ರೈ ಆದ ಮೇಲೆ ಅದಕ್ಕೆ ಮೊಟ್ಟೆ ಒಡೆದು ಹಾಕಿ ಕಲಸಿರಿ.
    * ಬಳಿಕ ಅದನ್ನು 2 ನಿಮಿಷ ಬಿಡಿ.
    * ಮೊಟ್ಟೆ ಫ್ರೈ ಆದ ಮೇಲೆ ಅದಕ್ಕೆ ಬೇಯಿಸಿದ ಅನ್ನ, ಗರಂ ಮಸಾಲ, ಉಪ್ಪು, ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿರಿ.
    * ಕೆಳಗಿಳಿಸುವಾಗ ನಿಂಬೆಹಣ್ಣು ಹಿಂಡಿ ಮತ್ತೊಮ್ಮೆ ತಿರುಗಿಸಿ.
    * ಬಿಸಿಬಿಸಿಯಾಗಿ ರುಚಿರುಚಿಯಾದ ಎಗ್ ರೈಸ್ ಸವಿಯಲು ಸಿದ್ಧ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಟ್ರೈಕಲರ್ ಸ್ವೀಟ್ – ಮೂರು ಬಣ್ಣದ ಮಿಲ್ಕ್ ಬರ್ಫಿ ಮಾಡುವ ವಿಧಾನ

    ಟ್ರೈಕಲರ್ ಸ್ವೀಟ್ – ಮೂರು ಬಣ್ಣದ ಮಿಲ್ಕ್ ಬರ್ಫಿ ಮಾಡುವ ವಿಧಾನ

    ಇಂದು ಭಾರತದಾದ್ಯಂತ ಸ್ವಾತಂತ್ರ್ಯ ದಿನಾಚರಣೆ. ಪ್ರತಿಯೊಬ್ಬರು ಆಚರಿಸಿ ಸಂಭ್ರಮಿಸುವ ಶುದಿನವಾಗಿದೆ. ಆದ್ದರಿಂದ ಪ್ರತಿ ಮನೆಯಲ್ಲೂ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮನೆಯಲ್ಲಿ ಸಿಹಿ ತಿಂಡಿ ಮಾಡುತ್ತಾರೆ. ಆ ತಿಂಡಿಯಲ್ಲೂ ತ್ರಿವರ್ಣದ ಸಿಹಿ ಖಾದ್ಯ ಮಾಡಿ ನಿಮ್ಮ ಮಕ್ಕಳಿಗೆ ಕೊಡಿ. ನಿಮ್ಮ ಮಕ್ಕಳು ಎಷ್ಟು ಖುಷಿಯಿಂದ ಈ ಸಿಹಿಯನ್ನು ತಿಂತಾರೆ ನೋಡಿ. ಮೂರು ಬಣ್ಣದ ಮಿಲ್ಕಿ ಬರ್ಫಿ ಮಾಡುವ ವಿಧಾನ ನಿಮಗಾಗಿ..

    ಬೇಕಾಗುವ ಸಾಮಾಗ್ರಿಗಳು:
    1. ಹಾಲು – 1/4 ಲೀಟರ್
    2. ಹಾಲಿನ ಪೌಡರ್ – 1/4 ಕೆಜಿ
    3. ತುಪ್ಪ – 3-4 ಚಮಚ
    4. ಸಕ್ಕರೆ – 1/4 ಕಪ್
    5. ಪಿಸ್ತಾ
    6. ಕೊಬ್ಬರಿ ತುರಿ
    7. ಕೇಸರಿ – ಚಿಟಿಕೆ
    (ಬಣ್ಣಕ್ಕೆ ಫುಡ್ ಕಲರ್ ಸಹ ಬಳಸಬಹುದು)

    ಮಾಡುವ ವಿಧಾನ:
    * ಒಂದು ನಾನ್‍ಸ್ಟಿಕ್ ಪ್ಯಾನ್‍ಗೆ ಹಾಲು ಹಾಕಿ ಕುದಿಸಿ, ಅದಕ್ಕೆ 3 ಚಮಚ ತುಪ್ಪ ಸೇರಿಸಿರಿ.
    * ಬಳಿಕ ಅದಕ್ಕೆ ಹಾಲಿನ ಪೌಡರ್ ಹಾಕಿ ಗಂಟು ಕಟ್ಟದಂತೆ ತಿರುಗಿಸಿ.
    * ಹಾಲು – ತುಪ್ಪದೊಂದಿಗೆ ಪೌಡರ್ ಮಿಕ್ಸ್ ಆಗುವ ತನಕ ಕೈ ಬಿಡದೆ ತಿರುಗಿಸಿ.
    * ನಂತರ ಸಕ್ಕರೆ ಸೇರಿಸಿ ತಳ ಬಿಡುವ ತನಕ ಕುದಿಸಿರಿ. (ಸೌಟಿನಿಂದ ತಿರುಗಿಸಿ)
    * ಎಲ್ಲಾ ಮಿಶ್ರಣ ಗಟ್ಟಿಯಾದ ಬಳಿಕ ಕೆಳಗಿಳಿಸಿರಿ.
    * ಬಳಿಕ ಗಟ್ಟಿಯಾದ ಮಿಶ್ರಣವನ್ನು ಮೂರು ಭಾಗ ಮಾಡಿ ಒಂದು ಸಣ್ಣ ಬೌಲ್‍ಗೆ ಹಾಕಿರಿ.
    * ಒಂದು ಭಾಗಕ್ಕೆ ಹಾಲಿನೊಂದಿಗೆ ಸೇರಿಸಿದ ಕೇಸರಿ ಸೇರಿಸಿ ಮಿಕ್ಸ್ ಮಾಡಿ – ಕೇಸರಿ ಬಣ್ಣವಾಗುತ್ತದೆ.
    * ಇನ್ನೊಂದು ಭಾಗಕ್ಕೆ ಸಿಪ್ಪೆ ತೆಗೆದು ಬೇಯಿಸಿ ರುಬ್ಬಿದ ಪಿಸ್ತಾವನ್ನು ಮಿಕ್ಸ್ ಮಾಡಿ – ಹಸಿರು ಬಣ್ಣವಾಗುತ್ತದೆ.
    * ಇನ್ನೊಂದು ಭಾಗಕ್ಕೆ ಬಿಳಿ ಕೊಬ್ಬರಿ ತುರಿಯ ಪೇಸ್ಟ್ ಅನ್ನು ಮಿಕ್ಸ್ ಮಾಡಿ – ಬಿಳಿ ಬಣ್ಣವಾಗುತ್ತದೆ.
    (ಬಣ್ಣಕ್ಕೆ ಫುಡ್ ಕಲರ್ ಸಹ ಬಳಸಬಹುದು)
    * ಈಗ ಒಂದು ತಟ್ಟೆಗೆ ತುಪ್ಪ ಸವರಿ. ಕೇಸರಿ, ಬಿಳಿ, ಹಸಿರು ಬಣ್ಣದ ಮಿಶ್ರಣವನ್ನು ಒಂದರ ಮೇಲೊಂದರಂತೆ ಹಾಕಿ. ಬೇಕಾದ ಆಕೃತಿಗೆ ಕಟ್ ಮಾಡಿ..
    * ತಣ್ಣಗಾದ ಮೇಲೆ ತಟ್ಟೆಯಿಂದ ತೆಗೆದು ಸೇವಿಸಿರಿ.

    ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೆ ನಿಮ್ಮ ಮನೆಯಲ್ಲಿ ತಯಾರಿಸಿದ ತ್ರಿವರ್ಣದ ಸಿಹಿ ತಿನಿಸು ಸವಿಯಲು ಸಿದ್ಧ.