Tag: cooking

  • ಸುಲಭವಾಗಿ ಮ್ಯಾಂಗೋ ಬರ್ಫಿ ಮಾಡುವ ವಿಧಾನ

    ಸುಲಭವಾಗಿ ಮ್ಯಾಂಗೋ ಬರ್ಫಿ ಮಾಡುವ ವಿಧಾನ

    ಹಣ್ಣಿನ ರಾಜ ಮಾವಿನ ಹಣ್ಣಿನ ಕಾಲವು ಆರಂಭವಾಗಿದೆ. ಹೀಗಾಗಿ ಮಾರುಕಟ್ಟೆಗೆ ಈಗಾಗಲೇ ಸಿಹಿ ಸಿಹಿಯಾದ ಮಾವಿನ ಹಣ್ಣುಗಳು ಲಗ್ಗೆ ಇಟ್ಟಿದೆ. ಆದ್ದರಿಂದ ಪ್ರತಿಯೊಬ್ಬರ ಮನೆಯಲ್ಲೂ ಮಾವಿನ ಹಣ್ಣು ಇದ್ದೆ ಇರುತ್ತದೆ. ಕೆಲವರು ಹಣ್ಣನ್ನು ಕಟ್ ಮಾಡಿಕೊಂಡು ಸವಿಯುತ್ತಾರೆ. ಇನ್ನೂ ಕೆಲವರು ಜ್ಯೂಸ್ ಮಾಡಿಕೊಂಡು ಕೊಡಿಯುತ್ತಾರೆ. ಮಾವಿನ ಹಣ್ಣಿನಲ್ಲೂ ಸ್ವೀಟ್ ಮಾಡಿಕೊಂಡು ತಿನ್ನಬಹುದು. ನಿಮಗಾಗಿ ಸುಲಭವಾಗಿ ಮ್ಯಾಂಗೋ ಬರ್ಫಿ ಮಾಡುವ ವಿಧಾನ ಇಲ್ಲಿದೆ…

    ಬೇಕಾಗುವ ಸಾಮಾಗ್ರಿಗಳು
    * ಕಾಯಿ ತುರಿ – 2 ಬಟ್ಟಲು
    * ಸಕ್ಕರೆ – 1 ಅಥವಾ 1.5 ಕಪ್ (ಸಿಹಿಗೆ ತಕ್ಕಷ್ಟು)
    * ಮಾವಿನಹಣ್ಣಿನ ಪಲ್ಪ್ – ಅರ್ಧ ಬಟ್ಟಲು
    * ತುಪ್ಪ – ಒಂದು ಚಮಚ


    ಮಾಡುವ ವಿಧಾನ
    * ಒಂದು ಪ್ಯಾನ್ ಬಿಸಿಗಿಟ್ಟು ಅದಕ್ಕೆ ಕಾಯಿ ತುರಿ ಹಾಕಿ ಹಸಿ ವಾಸನೆ ಹೋಗುವವರೆಗೂ ಫ್ರೈ ಮಾಡಿ.
    * ಈಗ ಅದಕ್ಕೆ ಸಿಹಿಗೆ ತಕ್ಕಷ್ಟು ಸಕ್ಕರೆ, ಮಾವಿನಹಣ್ಣಿನ ಪಲ್ಪ್(ಕತ್ತರಿಸಿದ ಮಾವಿನ ತುಂಡುಗಳು) ಹಾಕಿ ಫ್ರೈ ಮಾಡಿ.
    * ಎಲ್ಲವೂ ಚೆನ್ನಾಗಿ ಮಿಕ್ಸ್ ಆಗಬೇಕು.
    * ಮಿಶ್ರಣ ಗಟ್ಟಿಯಾಗುತ್ತಾ ಬರುತ್ತದೆ. ಕೈಯಾಡಿಸುತ್ತಲೇ ಇರಿ.
    * ಈಗ ಒಂದು ಬಟ್ಟಲಿನ ಆಕಾರದ ಪಾತ್ರೆಗೆ ತುಪ್ಪ ಸವರಿ ಮಿಶ್ರಣವನ್ನು ಹರಡಿ.
    * ಮಿಶ್ರಣ ತಣ್ಣಗಾದ ಮೇಲೆ ಬೇಕಾದ ಆಕಾರದಲ್ಲಿ ಕಟ್ ಮಾಡಿದರೆ ಸಿಹಿಯಾದ ಮ್ಯಾಂಗೋ ಬರ್ಫಿ ಸವಿಯಲಿ ಸಿದ್ಧ.

  • ಸೆಹ್ರಿ, ಇಫ್ತಾರ್ ಸಮಯದಲ್ಲಿರಲಿ ಎನರ್ಜಿ ಡ್ರಿಂಕ್ ಕೋಲ್ಡ್ ಸೋಂಪು ಶರಬತ್ತು

    ಸೆಹ್ರಿ, ಇಫ್ತಾರ್ ಸಮಯದಲ್ಲಿರಲಿ ಎನರ್ಜಿ ಡ್ರಿಂಕ್ ಕೋಲ್ಡ್ ಸೋಂಪು ಶರಬತ್ತು

    ಮುಸ್ಲಿಂರ ಪವಿತ್ರ ರಂಜಾನ್ ಮಾಸ ಆರಂಭವಾಗಿದೆ. ಮುಸ್ಲಿಂ ಬಾಂಧವರು ತಮ್ಮ ಸಂಪ್ರದಾಯದಂತೆ ಉಪವಾಸ ಆಚರಣೆಯಲ್ಲಿ ತೊಡಗಿಕೊಂಡು ಅಲ್ಲಾಹನ ಧ್ಯಾನದಲ್ಲಿ ಮಗ್ನರಾಗಿದ್ದಾರೆ. ಈ ಬಾರಿ ರಂಜಾನ್ ಮಾಸ ಬೇಸಿಗೆಯಲ್ಲಿ ಬಂದಿದ್ದು, ಉಪವಾಸ ನಿರತರಿಗೆ ದಣಿವಾಗುವುದು ಸಾಮಾನ್ಯ. ಹಾಗಾಗಿ ಸೆಹ್ರಿ ಮತ್ತು ಇಫ್ತಾರ್ ಸಮಯದಲ್ಲಿ ತಂಪಾದ ಪಾನೀಯ (ಎನರ್ಜಿ ಡ್ರಿಂಕ್)ಗಳನ್ನು ಕುಡಿಯುದರಿಂದ ದೇಹವನ್ನು ಕೂಲ್ ಆಗಿ ಇಟ್ಟುಕೊಳ್ಳಬಹುದು. ಹಾಗಾಗಿ ನಿಮಗಾಗಿ ಕೋಲ್ಡ್ ಸೋಂಪು ಶರಬತ್ತು ಮಾಡುವ ವಿಧಾನವನ್ನು ಇಲ್ಲಿ ನೀಡಲಾಗಿದೆ.

    ಬೇಕಾಗುವ ಸಾಮಾಗ್ರಿಗಳು
    1. ಸಕ್ಕರೆ – 2 ಕಪ್
    2. ಸೋಂಪು – ಒಂದು ಕಪ್
    3. ಏಲಕ್ಕಿ – 35
    4. ಗಸಗಸೆ -2 ಚಮಚ

    ಮಾಡುವ ವಿಧಾನ
    * ಮೊದಲಿಗೆ ಸೋಂಪು, ಒಂದು ಕಪ್ ಸಕ್ಕರೆ, ಏಲಕ್ಕಿ ಮತ್ತು ಗಸಗಸೆ ಎಲ್ಲವನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಿ.
    * ರುಬ್ಬಿದ ಪುಡಿಯನ್ನು ಜರಡಿ ಹಿಡಿಯಿರಿ. ಮತ್ತೆ ಉಳಿದ ತರಿಯನ್ನು ಮಿಕ್ಸಿಗೆ ಹಾಕಿ ಅದಕ್ಕೆ ಮತ್ತೆ ಒಂದು ಕಪ್ ಸಕ್ಕರೆ ಹಾಕಿ ರುಬ್ಬಿಕೊಳ್ಳಿ.
    * ಈಗ ಒಂದು ಗ್ಲಾಸ್‍ಗೆ ಎರಡು ಚಮಚ ರುಬ್ಬಿದ ಪುಡಿ ಹಾಕಿ, ಅದಕ್ಕೆ ಒಂದು ಗ್ಲಾಸ್ ನೀರು, 2 ಐಸ್ ಕ್ಯೂಬ್ ಹಾಕಿ ಮಿಕ್ಸ್ ಮಾಡಿದರೆ ಸೋಂಪು ಶರಬತ್ತು ಸಿದ್ಧ
    * ಇನ್ನೊಂದು ಗ್ಲಾಸ್‍ಗೂ ಎರಡು ಚಮಚ ಪುಡಿ ಹಾಕಿ ಅದಕ್ಕೆ ಒಂದು ಗ್ಲಾಸ್ ಹಾಲು, 2 ಐಸ್ ಕ್ಯೂಬ್ ಹಾಕಿ ಮಿಕ್ಸ್ ಮಾಡಿದರೆ ಕುಡಿಯಲು ಪಾನೀಯ ರೆಡಿ.
    * ಒಮ್ಮೆ ಹೆಚ್ಚು ಈ ರೀತಿ ಪೌಡರ್ ಮಾಡಿಟ್ಟುಕೊಂಡರೆ ಪ್ರತಿ ದಿನ ಶರಬತ್ತು ಮಾಡಿಕೊಳ್ಳಲು ಸಹಾಯವಾಗುತ್ತದೆ.

  • ಅವಳಿ ಮಕ್ಕಳಿಗಾಗಿ ಹೋಟೆಲ್‍ನಲ್ಲಿ ಸೌಟು ಹಿಡಿದ ಸನ್ನಿ

    ಅವಳಿ ಮಕ್ಕಳಿಗಾಗಿ ಹೋಟೆಲ್‍ನಲ್ಲಿ ಸೌಟು ಹಿಡಿದ ಸನ್ನಿ

    ಮುಂಬೈ: ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ತನ್ನ ಅವಳಿ ಮಕ್ಕಳಿಗಾಗಿ ಹೋಟೆಲ್‍ವೊಂದರಲ್ಲಿ ಅಡುಗೆ ಮಾಡಿದ್ದಾರೆ. ತಾವು ಅಡುಗೆ ಮಾಡುತ್ತಿರುವ ಫೋಟೋವನ್ನು ಸ್ವತಃ ಸನ್ನಿ ಲಿಯೋನ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    ಸನ್ನಿ ಲಿಯೋನ್ ಖಾಸಗಿ ವಾಹಿನಿಯ ಪ್ರಸಾರವಾಗುವ ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿದ್ದಾರೆ. ಈ ಶೂಟಿಂಗ್‍ಗಾಗಿ ಸನ್ನಿ ಲಿಯೋನ್ ತಮ್ಮ ಅವಳಿ ಮಕ್ಕಳಾದ ನೋಹಾ ಹಾಗೂ ಅಶ್‍ಹರ್ ರನ್ನು ಕರೆದುಕೊಂಡು ಹೋಗಿದ್ದಾರೆ.

    ಈ ರಿಯಾಲಿಟಿ ಶೋಗಾಗಿ ಸನ್ನಿ ಲಿಯೋನ್ ತಮ್ಮ ಮಕ್ಕಳ ಜೊತೆ ಹೋಟೆಲಿನಲ್ಲಿ ತಂಗಿದ್ದಾರೆ. ಈ ವೇಳೆ ಅವರು ಅಲ್ಲಿನ ಹೋಟೆಲ್‍ನಲ್ಲಿ ತಮ್ಮ ಮಕ್ಕಳಿಗಾಗಿ ಅಡುಗೆ ಮಾಡಿದ್ದಾರೆ. ಸನ್ನಿ ಅಡುಗೆ ಮಾಡುತ್ತಿರುವ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    ಸನ್ನಿ ಫೋಟೋ ಹಾಕಿ ಅದಕ್ಕೆ, “ನಾನು ನನ್ನ ಮಕ್ಕಳಾದ ನೋಹಾ ಹಾಗೂ ಅಶ್‍ಹರ್ ಗಾಗಿ ಬನಾನಾ ವೀಟ್ ಪ್ಯಾನ್‍ಕೇಕ್ ಹಾಗೂ ಆ್ಯಪಲ್ ಸಾಸ್ ತಯಾರಿಸುತ್ತಿದ್ದೇನೆ. ತಾಯಿಯ ಜೀವನ ಎಂದು ಹ್ಯಾಶ್‍ಟ್ಯಾಗ್ ಬಳಸಿ ಇಲ್ಲಿನ ಸಿಬ್ಬಂದಿ ಮಕ್ಕಳಿಗಾಗಿ ಅಡುಗೆ ಮಾಡಲು ನನಗೆ ಅನುಮತಿ ನೀಡಿದ್ದಾರೆ” ಎಂದು ಪೋಸ್ಟ್ ಮಾಡಿದ್ದಾರೆ.

    ಕಳೆದ ವರ್ಷ ಬಾಡಿಗೆ ತಾಯಿ ಮೂಲಕ ಸನ್ನಿ ಲಿಯೋನ್ ಹಾಗೂ ಅವರ ಪತಿ ಡೇನಿಯಲ್ ವೆಬರ್ ಇಬ್ಬರು ಅವಳಿ ಗಂಡು ಮಕ್ಕಳನ್ನು ಪಡೆದಿದ್ದರು. ಅಲ್ಲದೆ ಸನ್ನಿ 2017ರಲ್ಲಿ ಮಹಾರಾಷ್ಟ್ರದ ಲಾತೂರಿನಲ್ಲಿ ನಿಶಾಳನ್ನು ದತ್ತು ಪಡೆದುಕೊಂಡಿದ್ದರು.

  • ಸಿಂಪಲ್ ಆಗಿ ಗ್ರೀನ್‍ಚಿಲ್ಲಿ ಚಿಕನ್ ಮಾಡುವ ವಿಧಾನ

    ಸಿಂಪಲ್ ಆಗಿ ಗ್ರೀನ್‍ಚಿಲ್ಲಿ ಚಿಕನ್ ಮಾಡುವ ವಿಧಾನ

    ಕೆಲವು ದಿನಗಳಿಂದ ಮಳೆಯಾಗುತ್ತಿದ್ದು, ಬೆಚ್ಚನೆಯ ವಾತಾವರಣವಿದೆ. ಇಂದು ಭಾನುವಾರ ರಜೆಯ ಕಾರಣ ಎಲ್ಲರು ಮನೆಯಲ್ಲಿ ಇರುತ್ತಾರೆ. ಈ ವಾತಾವರಣದಲ್ಲಿ ಏನಾದರೂ ಚಿಲ್ ಆಗಿ ಮಾಡಿಕೊಂಡು ತಿನ್ನೋಣ ಅಂದುಕೊಂಡಿರುತ್ತೀರಿ. ಹೀಗಾಗಿ ಸುಲಭವಾಗಿ ಗ್ರೀನ್‍ಚಿಲ್ಲಿ ಚಿಕನ್ ಮಾಡುವ ವಿಧಾನ ನಿಮಗಾಗಿ ಇಲ್ಲಿ ನೀಡಲಾಗಿದೆ.

    ಬೇಕಾಗುವ ಸಾಮಾಗ್ರಿಗಳು
    1. ಬೋನ್‍ಲೆಸ್ ಚಿಕನ್ – ಅರ್ಧ ಕೆ.ಜಿ
    2. ಈರುಳ್ಳಿ – ಒಂದು
    3. ಕೊತ್ತಂಬರಿ ಸೊಪ್ಪು – ಸ್ವಲ್ಪ
    4. ಪುದಿನಾ – ಸ್ವಲ್ಪ
    5. ಮೊಸರು – ಅರ್ಧ ಕಪ್
    6. ಒಣಗಿದ ಮೆಂತ್ಯೆ ಎಲೆ ಪುಡಿ – ಒಂದು ಚಮಚ
    7. ಹಸಿರು ಮೆಣಸಿನಕಾಯಿ – 10
    8. ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 2 ಚಮಚ
    9. ಚಕ್ಕೆ – 1
    10. ಗರಂ ಮಸಾಲ ಪುಡಿ – 1 ಚಮಚ
    11. ದನಿಯಾ ಪುಡಿ – 1 ಚಮಚ
    12. ಜೀರಿಗೆ ಪುಡಿ – 1 ಚಮಚ
    13. ಚಿಲ್ಲಿ ಪುಡಿ – ಅರ್ಧ ಚಮಚ
    14. ಎಣ್ಣೆ -3-4 ಚಮಚ
    15. ಉಪ್ಪು – ರುಚಿಗೆ ತಕ್ಕಷ್ಟು

    ಮಾಡುವ ವಿಧಾನ
    * ಒಂದು ಮಿಕ್ಸಿ ಜಾರಿಗೆ ಪುದಿನಾ, ಕೊತ್ತಂಬರಿ ಸೊಪ್ಪು, ಹಸಿರು ಮೆಣಸಿಕಾಯಿ, ಮೊಸರು ಹಾಕಿ ರುಬ್ಬಿಕೊಳ್ಳಿ.
    * ಈಗ ಒಂದು ಬೌಲ್ ಎಣ್ಣೆ ಹಾಕಿ ಬಿಸಿಯಾದ ಮೇಲೆ ಅದಕ್ಕೆ ಸಣ್ಣದಾಗಿ ಕತ್ತರಿಸಿದ್ದ ಚಕ್ಕೆ ಮತ್ತು ಈರುಳ್ಳಿ ಹಾಕಿ ಫ್ರೈ ಮಾಡಿ.
    * ನಂತರ ತೊಳೆದ ಚಿಕನ್ ಹಾಕಿ ಗೋಲ್ಡನ್ ಬಣ್ಣ ಬರುವವರೆಗೂ ಫ್ರೈ ಮಾಡಿ.
    * ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲ, ದನಿಯಾ, ಜೀರಿಗೆ ಮತ್ತು ಚಿಲ್ಲಿ ಪುಡಿ ಹಾಕಿ ಚೆನ್ನಾಗಿ ಫ್ರೈ ಮಾಡಿ.
    * ರುಬ್ಬಿದ ಮಸಲಾ, ಸ್ವಲ್ಪ ನೀರು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ 4-5ರಿಂದ ನಿಮಿಷ ಪ್ಲೇಟ್ ಮುಚ್ಚಿ ಬೇಯಿಸಿ.
    * ಈಗ ಒಣಗಿದ ಮೆಂತ್ಯೆ ಎಲೆ ಪುಡಿ ಹಾಕಿದರೆ ಗ್ರೀನ್ ಚಿಕನ್ ಫ್ರೈ ಸವಿಯಲು ಸಿದ್ಧ.

  • ಕೆಲವೇ ಕ್ಷಣಗಳಲ್ಲಿ ಮಾಡಿ ಆರು ವಿಧದ ತಂಪು ಪಾನೀಯ

    ಕೆಲವೇ ಕ್ಷಣಗಳಲ್ಲಿ ಮಾಡಿ ಆರು ವಿಧದ ತಂಪು ಪಾನೀಯ

    ಬೇಸಿಗೆ ಕಾಲದಲ್ಲಿ ಎಲ್ಲರೂ ತಂಪು ಪಾನೀಯಗಳ ಮೊರೆ ಹೋಗುತ್ತಾರೆ. ಆದರೆ ಬೇಸಿಗೆ ಕಾಲದಲ್ಲಿ ಲಾಭ ಅಧಿಕ ಮಾಡಿಕೊಳ್ಳೋಣ ಎಂದು ಅಂಗಡಿ ಮಾಲೀಕರು ಎಲ್ಲ ಜ್ಯೂಸ್‍ಗಳ ಬೆಲೆಯನ್ನು ಏರಿಸಿರುತ್ತಾರೆ. ಬಿಸಿಲಿನ ತಾಪ ತಡೆಯಲಾರದೆ ಅಧಿಕ ಹಣವನ್ನು ಕೊಟ್ಟು ಪಾನೀಯ ಕುಡಿಯುತ್ತೀವಿ. ಆದರೆ ಕಡಿಮೆ ಖರ್ಚಿನಲ್ಲಿ ಮನೆಯಲ್ಲಿಯೇ ಆರೋಗ್ಯಕರವಾದ ತಂಪು ಪಾನೀಯ ಮಾಡಿಕೊಳ್ಳಬಹುದು. ಇದರಿಂದ ಕೂಲ್ ಕೂಲ್ ಆಗಿ ಇರಬಹುದು. ಜೊತೆಗೆ ಹಣವನ್ನು ಉಳಿತಾಯ ಮಾಡಬಹುದು. ಹೀಗೆ ಕಡಿಮೆ ಖರ್ಚು ಹಾಗೂ ಸಮಯದಲ್ಲಿ ಜ್ಯೂಸ್ ಮಾಡುವ ವಿಧಾನ ಇಲ್ಲಿವೆ….

    1. ಕೂಲ್ ಪುದಿನಾ ಜ್ಯೂಸ್:

    ಬೇಕಾಗುವ ಸಾಮಾಗ್ರಿಗಳು
    1. ಸಕ್ಕರೆ – 2 ರಿಂದ 3 ಚಮಚ
    2. ನೀರು- 3-4 ಚಮಚ
    3. ನಿಂಬೆ ಹಣ್ಣು – 1
    4. ಪುದಿನಾ – 10 ಎಲೆ
    5. ಸೋಡ
    6. ಐಸ್ ಕ್ಯೂಬ್

    ಮಾಡುವ ವಿಧಾನ:
    * ಮೊದಲಿಗೆ ಒಂದು ಬೌಲ್‍ಗೆ ಸಕ್ಕರೆ ಮತ್ತು ನೀರನ್ನು ಹಾಕಿ ಸಕ್ಕರೆ ಕರಗುವರೆಗೂ ಮಿಕ್ಸ್ ಮಾಡಿಕೊಳ್ಳಿ.
    * ಬಳಿಕ ಒಂದು ಗ್ಲಾಸ್‍ಗೆ 8-10 ಪುದಿನ ಎಲೆ ಮತ್ತು ಸಣ್ಣಗೆ ಪೀಸ್ ಮಾಡಿದ್ದ ಒಂದು ನಿಂಬೆಹಣ್ಣು ಹಾಕಿ. ನಿಂಬೆ ರಸ ಬರೋವರೆಗೂ ಗ್ಲಾಸ್ ನಲ್ಲಿಯೇ ಜಜ್ಜಿ.
    * ನಂತರ ಅದಕ್ಕೆ ಮಿಕ್ಸ್ ಮಾಡಿಕೊಂಡಿದ್ದ ಸಕ್ಕರೆ ನೀರನ್ನು 3 ಚಮಚ ಹಾಕಿ.
    * ಈಗ 5-6 ಐಸ್ ಕ್ಯೂಬ್ ಹಾಕಿ, ಗ್ಲಾಸ್ ತುಂಬ ಸೋಡ ಹಾಕಿದರೆ ತಣ್ಣೆಗೆ ಕುಡಿಯಲು ಕೂಲ್ ಪುದಿನಾ ಪಾನೀಯ ಸಿದ್ಧ.

    2. ಮ್ಯಾಂಗೋ ಜ್ಯೂಸ್:

    ಬೇಕಾಗುವ ಸಾಮಾಗ್ರಿಗಳು
    1. ಮಾವಿನ ಕಾಯಿ – 2
    2. ಪುದಿನ ಎಲೆ -5
    3. ಸಕ್ಕರೆ – 3 ಚಮಚ
    4. ಬ್ಲಾಕ್ ಸಾಲ್ಟ್- ಚಿಟಿಕೆ
    5. ಜೀರಿಗೆ ಪುಡಿ – ಅರ್ಧ ಚಮಚ
    6. ಐಸ್ ಕ್ಯೂಬ್

    ಮಾಡುವ ವಿಧಾನ
    * ಎರಡು ಮಾವಿನ ಕಾಯಿ ತೆಗೆದುಕೊಂಡು ಅದರ ಸಿಪ್ಪೆಯನ್ನು ತೆಗೆದು ಹಾಕಿರಿ.
    * ಕುಕ್ಕರ್ ಗೆ  ಅರ್ಧ ಕಪ್ ನೀರು, ಸಿಪ್ಪೆ ತೆಗೆದ ಮಾವಿನ ಕಾಯಿ ಹಾಕಿ 3-4 ವಿಶಲ್ ಕೂಗಿಸಿಕೊಳ್ಳಿ.
    * ಈಗ ಬೇಯಸಿದ ಮಾವಿನ ಕಾಯಿಯಲ್ಲಿನ ಬೀಜ ತೆಗೆದು ಸ್ಮ್ಯಾಶ್ ಮಾಡಿಕೊಳ್ಳಿ. ಅದಕ್ಕೆ 5 ಎಲೆ ಪುದಿನ, 3 ಚಮಚ ಸಕ್ಕರೆ, ಚಿಟಿಕೆ ಉಪ್ಪು ಹಾಕಿ, ನೀರು ಹಾಕದೆ ರುಬ್ಬಿಕೊಳ್ಳಿ.
    * ಈಗ ಒಂದು ಗ್ಲಾಸ್‍ಗೆ 3-4 ಐಸ್ ಕ್ಯೂಬ್, ಅರ್ಧ ಚಮಚ ಜೀರಿಗೆ ಪುಡಿ, ಚಿಟಿಕೆ ಬ್ಲಾಕ್ ಸಾಲ್ಟ್ ಹಾಕಿ ಬಳಿಕ ರುಬ್ಬಿಕೊಂಡಿದ್ದ 3 ಚಮಚ ಮ್ಯಾಂಗೋ ಪೇಸ್ಟ್ ಹಾಕಿ ನೀರು ಹಾಕಿದರೆ ಜ್ಯೂಸ್ ಸಿದ್ಧ.

    3. ಜೀರಾ ಸೋಡ:

    ಬೇಕಾಗುವ ಸಾಮಾಗ್ರಿಗಳು
    1. ಜಲ್ಜೀರ ಪುಡಿ -ಕಾಲು ಚಮಚ
    2. ಐಸ್ ಕ್ಯೂಬ್
    3. ಬ್ಲಾಕ್ ಸಾಲ್ಟ್ – ಕಾಲು ಚಮಚ

    ಮಾಡುವ ವಿಧಾನ

    * ಮೊದಲಿಗೆ ಒಂದು ಗ್ಲಾಸ್‍ಗೆ ಒಂದು ಬೌಲ್ ಐಸ್ ಕ್ಯೂಬ್ ಹಾಕಿ. ಅದಕ್ಕೆ ಕಾಲು ಚಮಚ ಜಲ್ಜೀರ ಪುಡಿ, ಬ್ಲ್ಯಾಕ್ ಸಾಲ್ಟ್ ಹಾಕಿ.
    * ಇದಕ್ಕೆ ಸ್ಪ್ರೈಟ್ ಅಥವಾ 7 ಅಪ್ ಮಿಕ್ಸ್ ಮಾಡುವ ಮೂಲಕ ಜ್ಯೂಸ್ ಮಾಡಿಕೊಳ್ಳಿ.

    4. ಕಲ್ಲಂಗಡಿ ಜ್ಯೂಸ್:

    ಬೇಕಾಗುವ ಸಾಮಾಗ್ರಿಗಳು
    1. ಕಲ್ಲಂಗಡಿ – ಒಂದು ಬೌಲ್
    2. ಪುದಿನ – 5 ಎಲೆ
    3. ಸಕ್ಕರೆ – 2 ಚಮಚ
    4. ಚಾಟ್ ಮಸಾಲ
    5. ಬ್ಲಾಕ್ ಸಾಲ್ಟ್

    ಮಾಡುವ ವಿಧಾನ
    * ಕಟ್ ಮಾಡಿದ್ದ ಕಲ್ಲಂಗಡಿ, 5 ಪುದಿನ ಎಲೆ, 2 ಚಮಚ ಸಕ್ಕರೆ, ಅರ್ಧ ಚಮಚ ಚಾಟ್ ಮಸಾಲ, ಬ್ಲಾಕ್ ಸಾಲ್ಟ್ ಹಾಕಿ ರುಬ್ಬಿಕೊಳ್ಳಿ. (ನೀರು ಹಾಕಿಕೊಳ್ಳಬೇಡಿ)
    * ಈಗ ಅದನ್ನು ಸೋಸಿಕೊಂಡು, ಒಂದು ಗ್ಲಾಸ್‍ಗೆ 4-5 ಐಸ್ ಕ್ಯೂಬ್ ಹಾಕಿ ಸ್ವಲ್ಪ ಚಾಟ್ ಮಸಾಲ ಹಾಕಿ ಸೋಸಿಕೊಂಡ ರಸವನ್ನು ಮಿಕ್ಸ್ ಮಾಡಿ.

    5. ಲೆಮನ್ ಜ್ಯೂಸ್:

    ಬೇಕಾಗುವ ಸಾಮಾಗ್ರಿಗಳು
    1. ಐಸ್ ಕ್ಯೂಬ್ -4-5
    2. ನಿಂಬೆ ರಸ – 2 ಚಮಚ
    3. ಸಕ್ಕರೆ – 3 ಚಮಚ
    4. ಜೀರಾ ಪುಡಿ -ಅರ್ಧ ಚಮಚ
    5. ಬ್ಲಾಕ್ ಸಾಲ್ಟ್ -ಚಿಟಿಕೆ
    6. ಉಪ್ಪು -ಚಿಟಿಕೆ

    ಮಾಡುವ ವಿಧಾನ
    * ಐಸ್ ಕ್ಯೂಬ್, 2 ಚಮಚ ನಿಂಬೆ ರಸ, 3 ಚಮಚ ಸಕ್ಕರೆ, ಅರ್ಧ ಚಮಚ ಜೀರಾ ಪುಡಿ, ಚಿಟಿಕೆ ಬ್ಲಾಕ್ ಸಾಲ್ಟ್ ಮತ್ತು ಉಪ್ಪು ಹಾಕಿ.
    * ಈಗ ಒಂದು ಕಪ್ ನೀರು ಹಾಕಿಕೊಂಡು ರುಬ್ಬಿಕೊಳ್ಳಿ.
    * ಒಂದು ಗ್ಲಾಸ್‍ಗೆ ಐಸ್ ಕ್ಯೂಬ್, ಸಣ್ಣಗೆ ಕತ್ತರಿಸಿದ 4 ಪೀಸ್ ನಿಂಬೆ ಹಣ್ಣು, 3 ಎಲೆ ಪುದೀನ ಹಾಕಿ, ಅದಕ್ಕೆ ರುಬ್ಬಿದ ರಸವನ್ನು ಹಾಕಿದರೆ ನಿಂಬು ಜ್ಯೂಸ್ ರೆಡಿ.

    6. ಮಸಾಲ ತಮ್ ಸಪ್:

    ಬೇಕಾಗುವ ಸಾಮಾಗ್ರಿಗಳು
    1. ಐಸ್ ಕ್ಯೂಬ್ -5-6
    2. ನಿಂಬೆ ರಸ – 1 ಚಮಚ
    3. ಬ್ಲಾಕ್ ಸಾಲ್ಟ್ -ಅರ್ಧ ಚಮಚ
    4. ಜೀರಾ ಪುಡಿ – ಅರ್ಧ ಚಮಚ
    5. ಚಾಟ್ ಮಸಾಲ – ಅರ್ಧ ಚಮಚ

    ಮಾಡುವ ವಿಧಾನ
    * ಒಂದು ಗ್ಲಾಸ್‍ಗೆ 5-6 ಐಸ್ ಕ್ಯೂಬ್, 1 ಚಮಚ ನಿಂಬೆ ರಸ, ಬ್ಲಾಕ್ ಸಾಲ್ಟ್, ಜೀರಾ ಪೌಡರ್, ಚಾಟ್ ಮಸಾಲ ಹಾಕಿ ಅದಕ್ಕೆ ತಮ್ ಸಪ್ ಮಿಕ್ಸ್ ಮಾಡಿದರೆ ಮಸಾಲ ತಮ್ ಸಪ್ ಕುಡಿಯಲು ಸಿದ್ಧ.

  • ರಾಗಿ ಅಂಬಲಿ ಕುಡಿಯಿರಿ ದೇಹವನ್ನು ಕೂಲ್ ಆಗಿಟ್ಟುಕೊಳ್ಳಿ – ಅಂಬಲಿ ಮಾಡೋ ಸುಲಭ ವಿಧಾನ ಓದಿ

    ರಾಗಿ ಅಂಬಲಿ ಕುಡಿಯಿರಿ ದೇಹವನ್ನು ಕೂಲ್ ಆಗಿಟ್ಟುಕೊಳ್ಳಿ – ಅಂಬಲಿ ಮಾಡೋ ಸುಲಭ ವಿಧಾನ ಓದಿ

    ಗಾಗಲೇ ಬಿಸಿಲು ಹೆಚ್ಚಾಗುತ್ತಿದ್ದು, ಜನ ಬಿಸಿಲಿನ ಶಾಖದಿಂದ ದೇಹವನ್ನು ತಂಪಾಗಿಡಲು ಅಧಿಕ ನೀರು, ಎಳನೀರು ಜ್ಯೂಸ್ ಮೊರೆ ಹೋಗಿದ್ದಾರೆ. ಜ್ಯೂಸ್, ಎಳನೀರು ಸ್ವಲ್ಪ ದುಬಾರಿಯಾದ ಹಿನ್ನೆಲೆಯಲ್ಲಿ ನೀವು ಮನೆಯಲ್ಲೇ ಕುಳಿತು ರಾಗಿ ಅಂಬಲಿ ತಯಾರಿಸಿದರೆ ಕಡಿಮೆ ಖರ್ಚಿನಲ್ಲಿ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ದೇಹವನ್ನು ತಂಪಾಗಿ ಇಡಬಹುದು. ‘ರಾಗಿ ತಿಂದರೆ ರೋಗವಿಲ್ಲ’ ಎನ್ನುವ ಗಾದೆ ಮಾತಿನಂತೆ ಬೇಸಿಗೆಯಲ್ಲಿ ರಾಗಿ ಅಂಬಲಿ ಮಾಡಿ ಕುಡಿದರೆ ದೇಹದ ತಾಪಮಾನ ಕಡಿಮೆಯಾಗುತ್ತದೆ. ಹೀಗಾಗಿ ಇಲ್ಲಿ ನಿಮಗಾಗಿ ಸುಲಭವಾಗಿ ಚೆನ್ನಾಗಿ ರಾಗಿ ಅಂಬಲಿ ಮಾಡುವ ವಿಧಾನವನ್ನು ತಿಳಿಸಲಾಗಿದೆ. ಇಲ್ಲಿ ತಿಳಿಸಿದಂತೆ ಪಾಕ ಮಾಡಿ ಅಂಬಲಿ ಸಿದ್ಧಪಡಿಸಿ ನಿಮ್ಮ ದೇಹವನ್ನು ಕೂಲಾಗಿ ಇಡಿ.


    ಬೇಕಾಗುವ ಸಾಮಾಗ್ರಿಗಳು
    1. ರಾಗಿ ಹಿಟ್ಟು – ಅರ್ಧ ಕಪ್
    2. ಕತ್ತರಿಸಿದ ಈರುಳ್ಳಿ – ಅರ್ಧ ಕಪ್
    3. ಕತ್ತರಿಸಿದ ಹಸಿ ಮೆಣಸಿನಕಾಯಿ – ಒಂದು ಚಮಚ
    4. ಕತ್ತರಿಸಿದ ಕೊತ್ತಂಬರಿ ಸೊಪ್ಪು – ಎರಡು ಚಮಚ
    5. ಉಪ್ಪು – ರುಚಿಗೆ ಬೇಕಾದಷ್ಟು
    6. ಜೀರಿಗೆ ಪುಡಿ – ಒಂದು ಚಮಚ
    7. ಕರಿಬೇವು – 6 ಎಲೆಗಳು,
    8. ಮಜ್ಜಿಗೆ – ಎರಡು ಕಪ್
    9. ನಿಂಬೆಹಣ್ಣು – ಒಂದು
    10. ನೀರು – ಅರ್ಧ ಲೀಟರ್

    ಮಾಡುವ ವಿಧಾನ
    * ಮೊದಲಿಗೆ ಒಂದು ಕಪ್ ನೀರಿನಲ್ಲಿ ಅರ್ಧ ಕಪ್ ರಾಗಿ ಹಿಟ್ಟನ್ನು ಹಾಕಿ, ಗಂಟು ಬರದಂತೆ ಮಿಕ್ಸ್ ಮಾಡಿ ಇಟ್ಟುಕೊಳ್ಳಿ.
    * ಅರ್ಧ ಲೀಟರ್ ನೀರನ್ನು ಕುದಿಸಿ ಅದರಲ್ಲಿ ನಾವು ಮೊದಲು ತಯಾರಿ ಮಾಡಿಕೊಂಡ ರಾಗಿ ಮಿಶ್ರಣವನ್ನು ಇದರಲ್ಲಿ ಹಾಕಿ.
    * ಸುಮಾರು 7 ನಿಮಿಷಗಳ ಕಾಲ ಚೆನ್ನಾಗಿ ಉಂಡೆ ಬಾರದಂತೆ ಕುದಿಸಿರಿ.
    * ಬಳಿಕ ಅದು ತಣ್ಣಗಾದ ಮೇಲೆ ಅದಕ್ಕೆ ಮಜ್ಜಿಗೆ, ಕತ್ತರಿಸಿದ ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿಸೊಪ್ಪು, ಕರಿಬೇವು, ರುಚಿಗೆ ಬೇಕಾದಷ್ಟು ಉಪ್ಪು, ಜೀರಿಗೆ ಪುಡಿ ಹಾಕಿ ಮಿಕ್ಸ್ ಮಾಡಿ.
    * ಈಗ ಅದಕ್ಕೆ ಸ್ವಲ್ಪ ನಿಂಬೆ ಹಣ್ಣಿನ ರಸವನ್ನು ಬೆರೆಸಿ ರಾಗಿ ಅಂಬಲಿ ಸವಿಯಿರಿ.

  • ದಿಢೀರ್ ಫಿಶ್ ಫ್ರೈ ಮಾಡುವ ವಿಧಾನ

    ದಿಢೀರ್ ಫಿಶ್ ಫ್ರೈ ಮಾಡುವ ವಿಧಾನ

    ಮೀನು ಎಲ್ಲರಿಗೂ ಆರೋಗ್ಯಕರವಾದ ಆಹಾರವಾಗಿದೆ. ಹೀಗಾಗಿ ಕೆಲ ಮಂದಿ ಪ್ರತಿವಾರ ಸಂಡೇ ಬಂದರೆ ಚಿಕನ್, ಮಟನ್, ಮಾಡಿ ತಿನ್ನುತ್ತಿರುತ್ತಾರೆ. ಇಲ್ಲಿ ಎರಡು ಬಗೆಯ ಮೀನಿನ ಖಾದ್ಯವನ್ನು ತಯಾರಿಸುವ ವಿಧಾನದ ಮಾಹಿತಿಯನ್ನು ನೀಡಲಾಗಿದೆ.

    ಬೇಕಾಗುವ ಸಾಮಾಗ್ರಿಗಳು
    1. ಕ್ಲೀನ್ ಮಾಡಿ ಸ್ಲೈಸ್ ಮಾಡಿದ ಫಿಶ್ – ಅರ್ಧ ಕೆಜಿ
    2. ಖಾರದ ಪುಡಿ – 1 ಚಮಚ
    3. ದನಿಯಾ ಪುಡಿ – 1 ಚಮಚ
    4. ಅರಿಶಿಣ ಪುಡಿ – ಚಿಟಿಕೆ
    5. ಕಾಳು ಮೆಣಸಿನ ಪುಡಿ – 1 ಚಮಚ
    6. ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಚಮಚ
    7. ಉಪ್ಪು – ರುಚಿಗೆ ತಕ್ಕಷ್ಟು
    8. ಕರಿಬೇವಿನ ಸೊಪ್ಪು
    9. ನಿಂಬೆಹಣ್ಣು – ಅರ್ಧ ಹೋಳು
    10. ನೀರು – 1 ಚಮಚ
    11. ಎಣ್ಣೆ – 3-4 ಚಮಚ

    ಮಾಡುವ ವಿಧಾನ
    * ಒಂದು ಬೌಲ್‍ಗೆ ಖಾರದಪುಡಿ, ದನಿಯಾ ಪುಡಿ, ಅರಿಶಿಣ ಪುಡಿ, ಕಾಳು ಮೆಣಸಿನ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಕರಿಬೇವಿನ ಸೊಪ್ಪು ಸಣ್ಣಗೆ ಹೆಚ್ಚಿದ್ದು, ಅರ್ಧ ನಿಂಬೆಹಣ್ಣು ಹಿಂಡಿ 1 ಚಮಚ ನೀರು ಸೇರಿಸಿ ಮೀನಿಗೆ ಲೇಪಿಸುವಷ್ಟು ಗಟ್ಟಿ ಇರುವಂತೆ ಕಲಸಿಕೊಳ್ಳಿ. ತುಂಬಾ ನೀರು ಮಾಡಿಕೊಳ್ಳಬೇಡಿ.
    * ಬಳಿಕ ಮೀನಿನ 2 ಭಾಗಕ್ಕೆ ಮಿಶ್ರಣ ಲೇಪಿಸಿ ಅರ್ಧ ಗಂಟೆ ಕಾಲ ಇಟ್ಟುಬಿಡಿ. ನೆನಸಿಡಿ.
    * ಬಳಿಕ ಒಂದು ಪ್ಯಾನ್‍ಗೆ 3-4 ಚಮಚ ಎಣ್ಣೆ ಹಾಕಿ ಬಿಸಿಯಾದ ಮೇಲೆ ಮಸಾಲೆ ಹಾಕಿದ್ದ ಫಿಶ್ ಹಾಕಿ 2 ಕಡೆ ಚೆನ್ನಾಗಿ ಫ್ರೈ ಮಾಡಿ. ಈರುಳ್ಳಿ, ನಿಂಬೆಹಣ್ಣಿನ ಜೊತೆಗ ಸವಿಯಿರಿ..

    ಈ ಫಿಶ್ ಫ್ರೈ ಅನ್ನು ಮತ್ತೊಂದು ವಿಧಾನದಲ್ಲೂ ಮಾಡಬಹುದು
    * ಮೊದಲಿಗೆ ಚೆನ್ನಾಗಿ ಕ್ಲೀನ್ ಮಾಡಿದ ಸ್ಲೈಸ್ ಕಟ್ ಮಾಡಿದ ಮೀನಿಗೆ ಅರಿಶಿಣ ಸ್ವಲ್ಪ, ಉಪ್ಪು ಸೇರಿಸಿ ಎರಡೂ ಕಡೆ ಲೇಪಿಸಿ 10ರಿಂದ 15 ನಿಮಿಷ ಇಡಿ.
    * ಹೀಗೆ ಮಾಡುವುದರಿಂದ ಫಿಶ್‍ನಲ್ಲಿನ ವಾಸನೆ ಕಡಿಮೆ ಆಗುತ್ತದೆ ಜೊತೆಗೆ ರುಚಿಯೂ ಹೆಚ್ಚಿರುತ್ತದೆ.
    * ಈಗ ಒಂದು ಬೌಲ್‍ಗೆ ಖಾರದಪುಡಿ, ಧನಿಯಾ ಪುಡಿ, ಅರಿಶಿಣ ಪುಡಿ, ಕಾಳು ಮೆಣಸಿನ ಪುಡಿ, ಶುಂಠಿ – ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಕರಿಬೇವಿನ ಸೊಪ್ಪು ಸಣ್ಣಗೆ ಹೆಚ್ಚಿದ್ದು, ಅರ್ಧ ನಿಂಬೆಹಣ್ಣು ಹಿಂಡಿ 1 ಚಮಚ ನೀರು ಸೇರಿಸಿ ಮೀನಿಗೆ ಲೇಪಿಸುವಷ್ಟು ಗಟ್ಟಿ ಇರುವಂತೆ ಕಲಸಿಕೊಳ್ಳಿ. (ಈ ಮೊದಲೇ ಫಿಶ್‍ಗೂ ಉಪ್ಪು ಹಾಕಿರುವುದರಿಂದ ನೋಡಿಕೊಂಡು ಉಪ್ಪು ಸೇರಿಸಿ)
    * ಬಳಿಕ ಮೊದಲೇ ಅರಿಶಿಣ ಉಪ್ಪು ಹಚ್ಚಿಟ್ಟಿದ್ದ ಮೀನಿನ 2 ಭಾಗಕ್ಕೆ ಮಿಶ್ರಣ ಲೇಪಿಸಿ 5 ರಿಂದ 10 ನಿಮಿಷಗಳ ಕಾಲ ಮ್ಯಾರಿನೇಟ್ ಮಾಡಿ. ನೆನಸಿಡಿ.
    * ಬಳಿಕ ಒಂದು ಪ್ಯಾನ್‍ಗೆ 3-4 ಚಮಚ ಎಣ್ಣೆ ಹಾಕಿ ಬಿಸಿಯಾದ ಮೇಲೆ ಮ್ಯಾರಿನೇಟ್ ಮಾಡಿದ ಫಿಶ್ ಹಾಕಿ 2 ಕಡೆ ಚೆನ್ನಾಗಿ ಫ್ರೈ ಮಾಡಿ. ಈರುಳ್ಳಿ, ನಿಂಬೆಹಣ್ಣಿನ ಜೊತೆಗ ಸವಿಯಿರಿ.
    * ಇದು ಫಿಶ್ ಫ್ರೈ ಅನ್ನು ಸೈಡ್ ಡಿಶ್ ಆಗಿಯೂ ಬಳಸಬಹುದು..

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸಿಂಪಲ್ ಕಾಲು ಸೂಪ್ ಮಾಡುವ 2 ವಿಧಾನ

    ಸಿಂಪಲ್ ಕಾಲು ಸೂಪ್ ಮಾಡುವ 2 ವಿಧಾನ

    ಇಂದು ಭಾನುವಾರ ಮನೆಯಲ್ಲಿ ನಾನ್‍ವೆಜ್ ಮಾಡುತ್ತೀರ. ಪ್ರತಿ ಸಂಡೇ, ಚಿಕನ್, ಮಟನ್, ಫಿಶ್ ತಿನ್ನುತ್ತೀರಾ. ಹೀಗಾಗಿ ಈ ವಾರ ಆರೋಗ್ಯಕ್ಕೆ ಉತ್ತಮವಾದ ಕಾಲ್ ಸೂಪ್ ಮಾಡಿ ಸವಿಯಿರಿ. ಮಕ್ಕಳಿಂದ ವೃದ್ಧರವೆಗೂ ಕಾಲ್ ಸೂಪನ್ನು ಕುಡಿಯುತ್ತಾರೆ. ಆದರೆ ಮಕ್ಕಳು ಕುಡಿಯಲು ಇಷ್ಟಪಡುವುದಿಲ್ಲ. ಅದಕ್ಕೆ ಮಸಲಾ ಹಾಕಿ ರುಚಿಕರವಾಗಿ ಮಾಡಿಕೊಟ್ಟರೆ ಕುಡಿಯುತ್ತಾರೆ. ಆದ್ದರಿಂದ ಎರಡು ವಿಧಾನದಲ್ಲಿ ಕಾಲ್ ಸೂಪ್ ಮಾಡುವ ವಿಧಾನ ನಿಮಗಾಗಿ…

    ಬೇಕಾಗುವ ಸಾಮಾಗ್ರಿಗಳು
    1. ಮೇಕೆ ಕಾಲು – 2
    2. ಈರುಳ್ಳಿ – ಮೀಡಿಯಂ
    3. ಬೆಳ್ಳುಳ್ಳಿ – 2-3 ಎಸಳು
    4. ಶುಂಠಿ – ಸ್ವಲ್ಪ
    5. ಚಕ್ಕೆ – ಸ್ವಲ್ಪ
    6. ಲವಂಗ – 2-3
    7. ದನಿಯಾ ಪುಡಿ – ಅರ್ಧ ಚಮಚ
    8. ಕೆಂಪು ಮೆಣಸಿನಕಾಯಿ – ಖಾರಕ್ಕೆ ಬೇಕಾದಷ್ಟು
    9. ಕೊತ್ತಂಬರಿ ಸೊಪ್ಪು – ಸ್ವಲ್ಪ
    10. ಉಪ್ಪು – ರುಚಿಗೆ ತಕ್ಕಷ್ಟು
    11. ಎಣ್ಣೆ – 2 ಚಮಚ
    12. ಅರಿಶಿಣ – ಚಿಟಿಕೆ

    ಮಾಡುವ ವಿಧಾನ
    * ಮೊದಲಿಗೆ ಅಂಗಡಿಯಿಂದ ಸುಟ್ಟು ತಂದ ಕಾಲನ್ನು ಚೆನ್ನಾಗಿ 2 ರಿಂದ 3 ಬಾರಿ ಶುದ್ಧ ನೀರಿನಲ್ಲಿ ತೊಳೆಯಬೇಕು.
    * ಒಂದು ಪ್ಯಾನ್‍ಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಚಕ್ಕೆ, ಲವಂಗ, ಕೊತ್ತಂಬರಿ ಸೊಪ್ಪು, ಕೆಂಪು ಮೆಣಸಿನಕಾಯಿ ಸೇರಿಸಿ ಫ್ರೈ ಮಾಡಿ.
    * ತಣ್ಣಗೆ ಆದ ಮೇಲೆ ಒಂದು ಮಿಕ್ಸರ್ ಜಾರ್‍ಗೆ ಹಾಕಿ ಫ್ರೈ ಮಾಡಿದ ಪದಾರ್ಥಗಳನ್ನು ಹಾಕಿ ಜೊತೆಗೆ ಧನಿಯಾ, ಅರಿಶಿಣ ಪುಡಿ ಸೇರಿಸಿ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
    * ಈಗ ಒಂದು ಕುಕ್ಕರ್ ಬಿಸಿಗಿಟ್ಟು, ಎಣ್ಣೆ ಹಾಕಿ ಬಿಸಿಯಾದ ಮೇಲೆ ತೊಳೆದ ಕಾಲುಗಳನ್ನು ಹಾಕಿ. 2 ನಿಮಿಷ ಫ್ರೈ ಮಾಡಿ.
    * ಈಗ ಅದಕ್ಕೆ ರುಬ್ಬಿದ ಮಿಶ್ರಣವನ್ನು ಸೇರಿಸಿ ಉಪ್ಪು ಸೇರಿಸಿ, ಜಾಸ್ತಿ ನೀರು ಹಾಕಿ 3-5 ಕೂಗು ಕೂಗಿಸಿ.
    * ಸೂಪ್ ನೀರಿನಂತೆ ಇದ್ದರೆ ಕುಡಿಯಲು ಚೆನ್ನಾಗಿರುತ್ತದೆ. ಹೀಗಾಗಿ ಜಾಸ್ತಿ ನೀರು ಹಾಕಿ ಚೆನ್ನಾಗಿ ಕೂಗಿಸಬೇಕು.
    * ಕುಕ್ಕರ್ ಪ್ರೆಶರ್ ಇಳಿದ ಮೇಲೆ ಕಾಲನ್ನು ಬೇರ್ಪಡಿಸಿ, ಸೂಪನ್ನು ಪ್ರತ್ಯೇಕಿಸಿ.
    * ಸರ್ವ್ ಮಾಡುವಾಗ ಸೂಪ್‍ಗೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ ಸರ್ವ್ ಮಾಡಿ. ಕುಡಿಯಲು ಚೆನ್ನಾಗಿರುತ್ತದೆ.
    * ಸೂಪ್‍ನೊಂದಿಗೆ ಕಾಲನ್ನು ಸೇವಿಸಬಹುದು ಅಥವಾ ಅದೇ ಕಾಲನ್ನು ಮೇಲೆ ತಿಳಿಸಿದ ಮಸಾಲೆ ಪದಾರ್ಥಗಳನ್ನು ಸೇರಿಸಿ ಸಾರು ಮಾಡಿಕೊಂಡು ಸೇವಿಸಬಹುದು.

    ಮತ್ತೊಂದು ವಿಧಾನ
    * ಕಾಲು ಸೂಪಿಗೆ ಮಸಾಲೆ ಇಲ್ಲದೆಯೂ ಸೂಪ ತಯಾರಿಸಬಹುದು.
    * ಕುಕ್ಕರ್ ಬಿಸಿಗಿಟ್ಟು ಚೆನ್ನಾಗಿ ತೊಳೆದ ಕಾಲು, ನೀರು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 3-4 ಕೂಗು ಕೂಗಿಸಿ.
    * ಆರಿದ ಬಳಿಕ ಸೂಪಿಗೆ ಕಾಳು ಮೆಣಸಿನ ಪುಡಿ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಕುಡಿಯಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಿಕನ್ ಪೆಪ್ಪರ್ ಫ್ರೈ ಮಾಡುವ ವಿಧಾನ

    ಚಿಕನ್ ಪೆಪ್ಪರ್ ಫ್ರೈ ಮಾಡುವ ವಿಧಾನ

    ಭಾನುವಾರ ರಜಾ ದಿನವಾದ್ದರಿಂದ ಎಲ್ರೂ ಮನೆಯಲ್ಲಿರುತ್ತಾರೆ. ಇಂದು ಮನೆಗೆ ಅತಿಥಿಗಳು ಕೂಡ ಬರಬಹುದು, ಆದರೆ ಪ್ರತಿಬಾರಿಯೂ ಚಿಕನ್ ಕಬಾಬ್, ಸಾಂಬಾರ್, ಗ್ರೇವಿ ಮಾಡುತ್ತಿರುತ್ತೀರಾ. ಹೀಗಾಗಿ ನಿಮಗಾಗಿ ಚಿಕನ್ ಪೆಪ್ಪರ್ ಫ್ರೈ ಮಾಡುವ ವಿಧಾನ ಇಲ್ಲಿದೆ..

    ಬೇಕಾಗುವ ಸಾಮಾಗ್ರಿಗಳು
    1. ಬೋನ್‍ಲೆಸ್ ಚಿಕನ್ – 500 ಗ್ರಾಂ
    2. ಈರುಳ್ಳಿ – 1 ಮೀಡಿಯಂ ಸೈಜ್
    3. ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
    4. ಪೆಪ್ಪರ್ ಪೌಡರ್ – 1.5 ಚಮಚ
    5. ಹಸಿ ಮೆಣಸಿನಕಾಯಿ – 2-3
    6. ಕರಿಬೇವು – 10-15 ಎಲೆಗಳು
    7. ಉಪ್ಪು – ರುಚಿಗೆ ತಕ್ಕಷ್ಟು
    8. ನಿಂಬೆಹಣ್ಣು – ಅರ್ಧ ಹೋಳು
    9. ಅರಿಶಿಣ – ಚಿಟಿಕೆ
    10. ಬೆಳ್ಳುಳ್ಳಿ ಎಸಳು – 5-6
    11. ಎಣ್ಣೆ – 3-4 ಚಮಚ
    12. ಕೊತ್ತಂಬರಿ ಸೊಪ್ಪು – ಸಣ್ಣಗೆ ಹೆಚ್ಚಿದ್ದು ಸ್ವಲ್ಪ

    ಮಾಡುವ ವಿಧಾನ:
    ಪೆಪ್ಪರ್ ಚಿಕನ್ ಅನ್ನು 2 ರೀತಿಯಲ್ಲಿ ಮಾಡಬಹುದು. ನಿಮಗೆ ಯಾವುದು ಸುಲಭವೋ ಅದನ್ನು ಟ್ರೈ ಮಾಡಿ..
    -ಮೊದಲ ವಿಧಾನ
    * ಮೊದಲಿಗೆ ಒಂದು ಬೌಲ್‍ಗೆ ತೊಳೆದ ಚಿಕನ್ ಹಾಕಿ ಅದಕ್ಕೆ ಚಿಟಿಕೆ ಅರಿಶಿಣ, ಸ್ವಲ್ಪ ಕರಿಮೆಣಸಿನ ಪುಡಿ, ಉಪ್ಪು ಸೇರಿಸಿ ಕಲಸಿ ಅರ್ಧ ಮುಕ್ಕಾಲು ಗಂಟೆ ಮ್ಯಾರಿನೇಟ್ ಮಾಡಿ ನೆನಸಿಡಿ.
    * ಒಂದು ಪ್ಯಾನ್ ಅನ್ನು ಬಿಸಿಗಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಬಿಸಿಯಾದ ಮೇಲೆ ಈರುಳ್ಳಿ, ಹಸಿ ಮೆಣಸಿನ ಕಾಯಿ, ಬೆಳ್ಳುಳ್ಳಿ ಎಸಳು, ಕರಿಬೇವು ಒಂದಾದ ಮೇಲೆ ಒಂದು ಹಾಕಿ ಫ್ರೈ ಮಾಡಿ.
    * ಬಳಿಕ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಳಿದ ಕರಿಮೆಣಸಿನ ಪುಡಿ ಹಾಕಿ ಫ್ರೈ ಮಾಡಿ.
    * ಈಗ ಮ್ಯಾರಿನೇಟ್ ಮಾಡಿಟ್ಟಿದ್ದ ಚಿಕನ್ ಅನ್ನು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು, ಬೇಯಲು ಅಗತ್ಯವಿರುವಷ್ಟು ನೀರು ಸೇರಿಸಿ ಲಿಡ್ ಮುಚ್ಚಿ ಬೇಯಿಸಿ.
    * ಕೊನೆಗೆ ಚಿಕನ್ ಎಲ್ಲಾ ಫ್ರೈ ಆದ ಮೇಲೆ ಕೆಳಗಿಳಿಸುವಾಗ ನಿಂಬೆ ಹಣ್ಣಿನ ರಸ ಹಿಂಡಿ. ಅದರ ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿ.
    * ನೀರು ಬಳಸುವಾಗ ಆದಷ್ಟು ಕಡಿಮೆ ಮಾಡಿ. ಇಲ್ಲವಾದಲ್ಲಿ ಚಿಕನ್ ಫ್ರೈ ಹೋಗಿ ಗ್ರೇವಿ ಆಗುತ್ತದೆ.

    ಇನ್ನೊಂದು ವಿಧಾನ
    * ಒಂದು ಪ್ಯಾನ್ ಅನ್ನು ಬಿಸಿಗಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಬಿಸಿಯಾದ ಮೇಲೆ ಈರುಳ್ಳಿ, ಹಸಿ ಮೆಣಸಿನ ಕಾಯಿ, ಬೆಳ್ಳುಳ್ಳಿ ಎಸಳು, ಕರಿಬೇವು ಒಂದಾದ ಮೇಲೆ ಒಂದು ಹಾಕಿ ಫ್ರೈ ಮಾಡಿ.
    * ಬಳಿಕ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಮೆಣಸಿನ ಪುಡಿ, ಅರಿಶಿಣ ಹಾಕಿ ಫ್ರೈ ಮಾಡಿ.
    * ಈಗ ತೊಳೆದ ಚಿಕನ್, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 2-3 ನಿಮಿಷ ಫ್ರೈ ಮಾಡಿ.
    * ಈಗ ಬೇಯಲು ಅಗತ್ಯವಿರುವಷ್ಟು ನೀರು ಸೇರಿಸಿ ಲಿಡ್ ಮುಚ್ಚಿ ಬೇಯಿಸಿ.
    * ಕೊನೆಗೆ ಚಿಕನ್ ಎಲ್ಲಾ ಫ್ರೈ ಆದ್ಮೇಲೆ ಕೆಳಗಿಳಿಸುವಾಗ ನಿಂಬೆ ಹಣ್ಣಿನ ರಸ ಹಿಂಡಿ, ಅದರ ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿ.
    * ನೀರು ಬಳಸುವಾಗ ಆದಷ್ಟು ಕಡಿಮೆ ಮಾಡಿ. ಇಲ್ಲವಾದಲ್ಲಿ ಚಿಕನ್ ಪೆಪ್ಪರ್ ಫ್ರೈ ಹೋಗಿ ಗ್ರೇವಿ ಆಗುತ್ತೆ.
    * ಈ ರೆಸಿಪಿಯಲ್ಲಿ ಖಾರಕ್ಕೆ ಕರಿಮೆಣಸಿನ ಪುಡಿಯನ್ನೇ ಬಳಸುವುದರಿಂದ ಖಾರವನ್ನು ರುಚಿ ನೋಡಿಕೊಂಡು ಬಳಸಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಗುವಿಗೆ ಹಾಲು ಕುಡಿಸ್ತಿದ್ದ ಸೊಸೆಯ ಬೆರಳುಗಳನ್ನೆ ಕತ್ತರಿಸಿದ ಅತ್ತೆ

    ಮಗುವಿಗೆ ಹಾಲು ಕುಡಿಸ್ತಿದ್ದ ಸೊಸೆಯ ಬೆರಳುಗಳನ್ನೆ ಕತ್ತರಿಸಿದ ಅತ್ತೆ

    ಲಕ್ನೋ: ಅಡುಗೆ ಮಾಡುವುದನ್ನು ತಡ ಮಾಡಿದ್ದಕ್ಕೆ ಅತ್ತೆಯೊಬ್ಬಳು ಸೊಸೆಯ ಬೆರಳುಗಳನ್ನು ಕತ್ತರಿಸಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆ ಹರಗೋವಿಂದ್ ನಗರದಲ್ಲಿ ಶನಿವಾರ ನಡೆದಿದ್ದು, ಆರೋಪಿ 65 ವರ್ಷದ ಸುಶೀಲಾ ದೇವಿ ಅತ್ತೆ, ಪ್ರೀತಿ ಬೆರಳುಗಳನ್ನು ಕತ್ತರಿಸಿದ್ದಾಳೆ. ಈ ಘಟನೆಯ ನಂತರ ಆರೋಪಿ ಸುಶೀಲಾ ದೇವಿ ನಾಪತ್ತೆಯಾಗಿದ್ದಾಳೆ.

    ಸೊಸೆ ಪ್ರೀತಿ ತನ್ನ ಮಗುವಿಗೆ ಹಾಲು ಕುಡಿಸುತ್ತಿದ್ದರು. ಇದೇ ವೇಳೆ ಅತ್ತೆ ಬಂದು ಅಡುಗೆ ಮಾಡುವಂತೆ ಸೊಸೆಗೆ ಹೇಳಿದ್ದಾಳೆ. ಆಗ ಸೊಸೆ ಮಗುವಿಗೆ ಹಾಲು ಕುಡಿಸಿದ ನಂತರ ಅಡುಗೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಇಷ್ಟಕ್ಕೆ ಕೋಪಗೊಂಡ ಅತ್ತೆ ಮಾನವೀಯತೆ ಇಲ್ಲದೇ ಚಾಕು ತೆಗೆದುಕೊಂಡು ಸೊಸೆಯ ಬಲಗೈ ಬೆರಳುಗಳನ್ನು ಕತ್ತರಿಸಿದ್ದಾಳೆ ಎಂದು ಪೊಲೀಸ್ ಅಧಿಕಾರಿ ಉಪೇಂದ್ರ ಸಿಂಗ್ ಹೇಳಿದ್ದಾರೆ.

    ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಹೋಗಿದ್ದಾರೆ. ಆದರೆ ಆರೋಪಿ ಮಹಿಳೆ ಅಲ್ಲಿಂದ ತಪ್ಪಿಸಿಕೊಂಡಿದ್ದಳು. ಸದ್ಯಕ್ಕೆ ಪೊಲೀಸರು ಆರೋಪಿ ಅತ್ತೆ ವಿರುದ್ಧ ಐಪಿಸಿ 323 ಮತ್ತು 504 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇತ್ತ ನೋವಿನಂದ ನರಳುತ್ತಿದ್ದ ಸೊಸೆ ಪ್ರೀತಿಯನ್ನು ಪೊಲೀಸರು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv