Tag: cooking

  • ಕೆಲವೇ ನಿಮಿಷಗಳಲ್ಲಿ ಮಾಡಿ ಗೊಜ್ಜವಲಕ್ಕಿ

    ಕೆಲವೇ ನಿಮಿಷಗಳಲ್ಲಿ ಮಾಡಿ ಗೊಜ್ಜವಲಕ್ಕಿ

    ಭಾನುವಾರ ಬಂತೆಂದರೆ ಎಲ್ಲರೂ ಮನೆಯಲ್ಲಿ ಇರುತ್ತಾರೆ. ಆಗಾಗ ಮಕ್ಕಳಂತೂ ರುಚಿ ರುಚಿಯಾದ ತಿಂಡಿ ತಿನ್ನಲು ಏನಾದರೂ ಕೇಳುತ್ತಿರುತ್ತಾರೆ. ಹೀಗಾಗಿ ಎಲ್ಲರಿಗೂ ಇಷ್ಟವಾಗುವ ಏನಾದರೂ ಸ್ಪಷಲ್ ಮಾಡಬೇಕು ಅಂದುಕೊಳ್ತೋರಾ. ಮನೆಯಲ್ಲಿ ಯಾವಾಗಲೂ ಅವಲಕ್ಕಿ ಇರುತ್ತೆ. ಆದರೆ ಪ್ರತಿ ಬಾರಿಯೂ ಅವಲಕ್ಕಿ ಫ್ರೈ ಮಾಡಿ, ಮಾಡಿ ಬೇಸರವಾಗಿರುತ್ತದೆ. ಮತ್ತೆ ಅದೇ ತಿಂಡಿ ಮಾಡಿದರೂ ಮನೆಯಲ್ಲಿ ಅಷ್ಟಾಗಿ ಇಷ್ಟಪಡಲ್ಲ. ಹೀಗಾಗಿ ಅವಲಕ್ಕಿಯಲ್ಲಿ ಬೇರೆ ಏನು ಮಾಡಬಹುದು ಎಂದು ಯೋಚನೆ ಮಾಡುತ್ತಿರುತ್ತೀರಾ. ಆದ್ದರಿಂದ ನಿಮಗಾಗಿ ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದಾದ ಗೊಜ್ಜವಲಕ್ಕಿ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಪದಾರ್ಥಗಳು
    1. ದಪ್ಪ ಅವಲಕ್ಕಿ (ನೆನೆಸಿದ್ದು ) – 1 ಕಪ್
    2. ಸಾಂಬಾರು ಪುಡಿ – 2 ಚಮಚ
    3. ಬೆಲ್ಲ -4 ಚಮಚ
    4. ಸಾಸಿವೆ – 1 ಚಮಚ
    5. ಉದ್ದಿನ ಬೇಳೆ -ಅರ್ಧ ಚಮಚ
    6. ಕರಿಬೇವಿನಸೊಪ್ಪು – 3-4 ದಳ
    7. ಹುಣಸೇಹಣ್ಣಿನ ರಸ – 6 ಚಮಚ
    8. ಕಡಲೆ ಬೀಜ ಮತ್ತು ಗೋಡಂಬಿ
    9. ಉಪ್ಪು – ರುಚಿಗೆ ತಕ್ಕಷ್ಟು

    ಮಾಡುವ ವಿಧಾನ
    * ಮೊದಲು ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿಕೊಳ್ಳಿ ಅದಕ್ಕೆ ಉದ್ದಿನಬೇಳೆ, ಸಾಸಿವೆ, ಕಡಲೆ ಬೀಜ, ಗೋಡಂಬಿ ಮತ್ತು ಕರಿಬೇವಿನಸೊಪ್ಪು ಹಾಕಿ ಹುರಿದುಕೊಳ್ಳಿ.
    * ಬಳಿಕ ಅದಕ್ಕೆ ಹುಣಸೇ ರಸ, ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು, ಸಾಂಬಾರುಪುಡಿ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ.
    * ಅದಕ್ಕೆ ನೆನೆಸಿಟ್ಟುಕೊಂಡಿರುವ ಅವಲಕ್ಕಿಯನ್ನು ಹಾಕಿ ಮಿಕ್ಸ್ ಮಾಡಿದರೆ ಗೊಜ್ಜವಲಕ್ಕಿ ಸವಿಯಲು ಸಿದ್ಧ.

  • ನೂರಾನಿ ಖೀರ್ ಮಾಡುವ ವಿಧಾನ

    ನೂರಾನಿ ಖೀರ್ ಮಾಡುವ ವಿಧಾನ

    ಇಂದು ಮುಸ್ಲಿಮರಿಗೆ ಈದ್ ಮಿಲಾದ್ ಹಬ್ಬದ ಸಂಭ್ರಮ. ಈ ದಿನವನ್ನು ಪ್ರವಾದಿ ಮೊಹಮ್ಮದರ ಜನ್ಮ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಇದನ್ನು ಕೆಲವರು ಜನ್ಮ ದಿನವಾಗಿ ಸಂತೋಷ ಸಂಭ್ರಮದಿಂದ ಆಚರಣೆ ಮಾಡಿದ್ರೆ, ಕೆಲವರು ಪ್ರವಚನ, ದಾನ ಧರ್ಮ, ಉಪವಾಸ ಮಾಡುವ ಮೂಲಕ ಆಚರಿಸುತ್ತಾರೆ. ಹೀಗಾಗಿ ಈದ್ ಮಿಲಾದ್ ವಿಶೇಷವಾಗಿ ಸಿಹಿಯಾಗಿ ನೂರಾನಿ ಖೀರ್ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    * ಹಾಲು – ಮುಕ್ಕಾಲು ಲೀಟರ್
    * ಅಕ್ಕಿ ಹಿಟ್ಟು – 3-4 ಟೀ ಚಮಚ
    * ಸಕ್ಕರೆ – 3-4 ಚಮಚ
    * ಬದಾಮಿ ಪೌಡರ್ – 4 ಚಮಚ
    * ಪಿಸ್ತಾ- 1 ಟಿ ಚಮಚ
    * ಏಲಕ್ಕಿ ಪೌಡರ್ – ಚಿಟಿಕೆ
    * ಕಂಡೆನ್ಸಡ್ ಮಿಲ್ಕ್ – ಅರ್ಧ ಕಪ್
    * ಡ್ರೈಫ್ರೂಟ್ಸ್
    * ಟೂಟಿಫ್ರೂಟಿ

    ಮಾಡುವ ವಿಧಾನ
    * ಒಂದು ಬೌಲ್‍ಗೆ ಅಕ್ಕಿಹಿಟ್ಟು, ಬದಾಮಿ ಪೌಡರ್ ಅನ್ನು ಮಿಕ್ಸ್ ಮಾಡಿ ಅದಕ್ಕೆ ಸ್ವಲ್ಪ ನೀರು ಸೇರಿಸಿ 30 ನಿಮಿಷ ತೆಗೆದಿಡಿ..
    * ಅರ್ಧಗಂಟೆ ಬಳಿಕ ನಿಮ್ಮ ಮಿಶ್ರಣ ನೀರಿನಲ್ಲಿ ಮೆದು ಆಗಿರುತ್ತದೆ. ಈ ಮಿಶ್ರಣವನ್ನು ಕಾಯಿಸಿ ಆರಿಸಿದ ಹಾಲಿನಲ್ಲಿ ಮಿಕ್ಸ್ ಮಾಡಿ ಎರಡೂ ಬೆರೆತುಕೊಳ್ಳುವಂತೆ ಮಂದ ಉಷ್ಣಾಂಶದಲ್ಲಿ ಕುದಿಸಿರಿ. ಮಿಶ್ರಣ ಪಾತ್ರೆ ತಳಕ್ಕೆ ಹತ್ತಿಕೊಳ್ಳದಂತೆ ಚಮಚದಿಂದ ತಿರುಗುಸುತ್ತಿರಿ. ಹೀಗೆ 15 ನಿಮಿಷ ಈ ಮಿಶ್ರಣವನ್ನು ಕುದಿಸಬೇಕು.
    * 15 ನಿಮಿಷದ ಬಳಿಕ ಈ ಮಿಶ್ರಣಕ್ಕೆ ಕಂಡೆನ್ಸಡ್ ಮಿಲ್ಕ್ ಸೇರಿಸಬೇಕು. ನಂತರ ಮತ್ತೆ ಕುದಿಸಬೇಕು. (ಹಾಲು ಕುದಿಯುವಾಗ ಉಕ್ಕದಂತೆ ಮತ್ತು ಪಾತ್ರೆಗೆ ಅಂಟಿಕೊಳ್ಳದಂತೆ ನೋಡಿಕೊಳ್ಳಬೇಕು). ಕುದಿಸಿದ ಹಾಲನ್ನು ಒಂದು ಬೌಲ್ ನಲ್ಲಿ ತೆಗೆದಿಟ್ಟುಕೊಳ್ಳಿ.
    * ಬಳಿಕ ಮತ್ತೊಂದು ಪ್ಯಾನ್‍ನಲ್ಲಿ ಸಕ್ಕರೆಯನ್ನು ಹಾಕಿಕೊಳ್ಳಿ. ಸ್ವಲ್ಪ ನೀರು ಹಾಕಿಕೊಂಡು ಬೇಯಿಸಿ. ನೀರಿನಲ್ಲಿ ಸಕ್ಕರೆ ಸಂಪೂರ್ಣ ಕರಗಿದ ನಂತರ ಗೋಲ್ಡನ್ ಬ್ರೌನ್ ಪಾಕದಂತೆ ಬರುತ್ತದೆ. ಅದನ್ನು ತೆಗೆದಿರಿಸಿದ ಹಾಲಿನ ಮಿಶ್ರಣದ ಮೇಲೆ ಉದುರಿಸಿ. ಡ್ರೈಫ್ರೂಟ್ಸ್, ಟೂಟಿ ಫ್ರೂಟಿ ಹಾಕಿ ಅಲಂಕರಿಸಿ ಸರ್ವ್ ಮಾಡಿ..

  • ಹಬ್ಬಕ್ಕೆ ಬಿಸಿಬಿಸಿ ಸಿಹಿ ಕಜ್ಜಾಯ ಮಾಡೋ ವಿಧಾನ

    ಹಬ್ಬಕ್ಕೆ ಬಿಸಿಬಿಸಿ ಸಿಹಿ ಕಜ್ಜಾಯ ಮಾಡೋ ವಿಧಾನ

    ನಾಳೆಯಿಂದ ದೀಪಾವಳಿ ಹಬ್ಬ ಆಚರಿಸಲಾಗುತ್ತದೆ. ಹೀಗಾಗಿ ಮನೆಯಲ್ಲಿ ಹಬ್ಬವನ್ನು ಯಾವ ರೀತಿ ಆಚರಣೆ ಮಾಡಬೇಕು ಎಂಬುದರ ಜೊತೆ ಯಾವ ಸಿಹಿತಿನಿಸು ಮಾಡುವುದು ಎಂದು ಸಾಮಾನ್ಯವಾಗಿ ಹೆಂಗಸರು ತಲೆಕೆಡಿಸಿಕೊಂಡಿರುತ್ತಾರೆ. ಅವರಿಗಾಗಿ ಇಲ್ಲಿ ಸುಲಭ ಹಾಗೂ ಅತೀ ಬೇಗನೆ ಬಿಸಿ ಬಿಸಿ ಸಿಹಿ ಕಜ್ಜಾಯ ಮಾಡುವ ವಿಧಾನವನ್ನು ತಿಳಿಸಲಾಗಿದೆ.

    ಬೇಕಾಗುವ ಸಾಮಾಗ್ರಿಗಳು:
    1. ಅಕ್ಕಿ – ಒಂದೂವರೆ ಕಪ್
    2. ಬೆಲ್ಲ – 1 ಕಪ್
    3. ಎಳ್ಳು – 2 ಚಮಚ
    4. ಗಸಗಸೆ – 1 ಚಮಚ
    5. ಏಲಕ್ಕಿ – 2 ಚಮಚ
    6. ಎಣ್ಣೆ – ಕರಿಯಲು

    ಮಾಡುವ ವಿಧಾನ
    * ಮೊದಲು ಅಕ್ಕಿಯನ್ನು ಎರಡು ಗಂಟೆ ನೀರಿನಲ್ಲಿ ನೆನೆಸಿಡಿ.
    * ನಂತರ ನೀರು ಬಸಿದು ಅಕ್ಕಿ ತೆಗೆದು ಒಣಗಿಸಿ, ಒಣಗಿದ ಅಕ್ಕಿಯನ್ನು ಪುಡಿ ಮಾಡಿಕೊಳ್ಳಿ.
    * ಈಗ ಒಲೆ ಮೇಲೆ ಬಾಣಲೆ ಇಟ್ಟು, ಅರ್ಧ ಕಪ್ ನೀರು ಮತ್ತು ಬೆಲ್ಲ ಹಾಕಿ, ಪಾಕ ಬರುವವರೆಗೂ ಕುದಿಸಿ.
    * ನಂತರ ಒಲೆ ಉರಿಯನ್ನು ಕಡಿಮೆ ಮಾಡಿ, ಅದಕ್ಕೆ ಅಕ್ಕಿ ಪುಡಿ, ಎಳ್ಳು, ಗಸಗಸೆ, ಏಲಕ್ಕಿ ಮಿಕ್ಸ್ ಮಾಡಿ.
    * ಗಂಟು ಬಾರದ ರೀತಿಯಲ್ಲಿ ಸ್ವಲ್ಪ ಗಟ್ಟಿಯಾಗುವರೆಗೂ ಮಿಕ್ಸ್ ಮಾಡಿ, ನಂತರ ಒಲೆಯಿಂದ ಕೆಳಗಿಳಿಸಿ.


    * ಈಗ ಕರಿಯಲು ಎಣ್ಣೆ ಬಿಸಿಗಿಡಿ.
    * ಸಿದ್ಧ ಮಾಡಿದ ಹಿಟ್ಟನ್ನು ಸ್ವಲ್ಪ ತೆಗೆದು ಒಂದು ಪ್ಲೇಟ್ ನಲ್ಲಿ ಸಣ್ಣದಾಗಿ ಒಬ್ಬಟ್ಟಿನ ರೀತಿಯಲ್ಲಿ ತಟ್ಟಿಕೊಳ್ಳಿ.
    * ಈಗ ತಟ್ಟಿದ ಹಿಟ್ಟನ್ನು ಕಾದ ಎಣ್ಣೆಗೆ ಹಾಕಿ ಕಂದು ಬಣ್ಣ ಬರುವವರೆಗೂ ಕರಿದರೆ, ಬಿಸಿಬಿಸಿ ಕಜ್ಜಾಯ ತಯಾರಾಗುತ್ತದೆ.

  • ಡಯಾಬಿಟಿಸ್ ನಿಯಂತ್ರಣಕ್ಕೆ ಸೇವಿಸಿ ಬೆಂಡೇಕಾಯಿ ಗೊಜ್ಜುಹುಳಿ

    ಡಯಾಬಿಟಿಸ್ ನಿಯಂತ್ರಣಕ್ಕೆ ಸೇವಿಸಿ ಬೆಂಡೇಕಾಯಿ ಗೊಜ್ಜುಹುಳಿ

    ಶನಿವಾರ-ಭಾನುವಾರ ಬಂದರೆ ಅನೇಕರು ಚಿಕನ್ ಮಾಡುತ್ತಾರೆ. ಆದರೆ ರಜೆ ದಿನ ಬಂದಾಗೆಲ್ಲಾ ನಾನ್‍ವೆಜ್ ಮಾಡಲು ಸಾಧ್ಯವಿಲ್ಲ. ಆರೋಗ್ಯ ಕಾಪಾಡಿಕೊಳ್ಳಲು ತರಕಾರಿಗಳ ಸೇವನೆ ಕೂಡ ಮುಖ್ಯವಾಗುತ್ತದೆ. ಮಕ್ಕಳಂತೂ ತರಕಾರಿಯನ್ನು ತಿನ್ನಲ್ಲ. ಆದರೆ ಬೆಂಡೇಕಾಯಿ ಇದು ಡಯಾಬಿಟಿಸ್ ನಿಯಂತ್ರಣಕ್ಕೆ ತುಂಬಾ ಉಪಯುಕ್ತ. ಆದರೆ ಕೆಲವರಿಗೆ ಬೆಂಡೇಕಾಯಿ ಸಾಂಬಾರ್ ಎಂದರೆ ಇಷ್ಟನೇ ಇರುವುದಿಲ್ಲ. ಹೀಗಾಗಿ ರುಚಿ ಜೊತೆ ಹುಳಿಯಾಗಿ ಬೆಂಡೇಕಾಯಿ ಗೊಜ್ಜು ಹುಳಿ ಮಾಡುವ ಸುಲಭ ವಿಧಾನ ಇಲ್ಲಿದೆ.

    ಬೇಕಾಗುವ ಪದಾರ್ಥಗಳು
    1. ಹೆಚ್ಚಿದ ಬೆಂಡೇಕಾಯಿ – 2 ಕಪ್
    2. ಕೊಬ್ಬರಿ ತುರಿ -1 ಕಪ್
    3. ಒಣಮೆಣಸಿನಕಾಯಿ -6 ರಿಂದ 7
    4. ಕೊತ್ತಂಬರಿ – 2 ಚಮಚ
    5. ಕಡಲೇಬೇಳೆ – 1 ಚಮಚ
    6. ಉದ್ದಿನಬೇಳೆ -1 ಚಮಚ
    7. ಕರಿಬೇವಿನಸೊಪ್ಪು – 6 ರಿಂದ 7 ಎಸಳು
    8. ಬೆಲ್ಲ -ಕಾಲು ಕಪ್
    9. ಹುಣಸೇಹಣ್ಣಿನ ರಸ – ಕಾಲು ಕಪ್
    10. ಎಣ್ಣೆ – 3 ಚಮಚ
    11. ಉಪ್ಪು – ರುಚಿಗೆ ತಕ್ಕಷ್ಟು

    ಮಾಡುವ ವಿಧಾನ
    * ಮೊದಲು ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಕೊತ್ತಂಬರಿ ಬೀಜ, ಮೆಣಸಿನಕಾಯಿ, ಕಡಲೇಬೇಳೆ, ಉದ್ದಿನಬೇಳೆ, ಕರಿಬೇವಿನಸೊಪ್ಪು ಹಾಕಿ ಹುರಿದುಕೊಳ್ಳಿ.
    * ಬಳಿಕ ಅದನ್ನು ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ ಕೊಬ್ಬರಿ ತುರಿ ಸೇರಿಸಿ ರುಬ್ಬಿಕೊಳ್ಳಿ.
    * ಮತ್ತೊಂದೆಡೆ ಬಾಣಲೆಗೆ ಎಣ್ಣೆ ಹಾಕಿ ಹೆಚ್ಚಿದ ಬೆಂಡೇಕಾಯಿಯನ್ನು ಹಾಕಿ ಸಣ್ಣ ಉರಿಯಲ್ಲಿ 10 ನಿಮಿಷ ಹುರಿದುಕೊಳ್ಳಿ.
    * ಅದಕ್ಕೆ ಸ್ವಲ್ಪ ಬಿಸಿನೀರನ್ನು ಸೇರಿಸಿ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಯಲು ಬಿಡಿ. ಬಳಿಕ ಬೆಂಡೇಕಾಯಿಗೆ ರುಬ್ಬಿದ ಮಿಶ್ರಣವನ್ನು ಸೇರಿಸಿ.
    * ಕೊನೆಗೆ ಹುಣಸೇಹಣ್ಣಿನ ರಸವನ್ನು ಸೇರಿಸಿ ಸ್ವಲ್ಪ ಸಮಯ ಕುದಿಸಿದರೆ ಬೆಂಡೇಕಾಯಿ ಗೊಜ್ಜುಹುಳಿ ಸವಿಯಲು ಸಿದ್ಧ.

  • ಚಿಕನ್ ಪೆಪ್ಪರ್ ಡ್ರೈ ಮಾಡುವ ಸುಲಭ ವಿಧಾನ

    ಚಿಕನ್ ಪೆಪ್ಪರ್ ಡ್ರೈ ಮಾಡುವ ಸುಲಭ ವಿಧಾನ

    ಚಿಕನ್ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಅದಕ್ಕೆ ರಜೆ ಇದ್ದಾಗೆಲ್ಲ ಮನೆಯಲ್ಲಿ ಚಿಕನ್ ಮಾಡಿ ಎಂದು ಹೇಳುತ್ತಾರೆ. ಆದರೆ ಯಾವಗಲೂ ಒಂದೇ ರೀತಿಯ ಟೇಸ್ಟ್ ಮಾಡಿದರೆ ಬೇಜಾರಾಗುತ್ತದೆ. ಹೀಗಾಗಿ ಮನೆಯಲ್ಲಿ ಕೂತು ಏನಪ್ಪಾ ಸ್ಟೆಷಲ್ ಮಾಡೋದು ಅನ್ನೋರಿಗೆ ಚಿಕನ್ ಪೆಪ್ಪರ್ ಡ್ರೈ ಅತ್ಯಂತ ಸರಳವಾಗಿ ಮಾಡುವಂತಹ ರೆಸಿಪಿಯಾಗಿದೆ. ಚಿಕನ್‍ನಲ್ಲೇ ವಿಭಿನ್ನವಾಗಿ ರೆಸಿಪಿ ಮಾಡುವ ಆಲೋಚನೆ ಮಾಡುವವರಿಗೆ ಚಿಕನ್ ಪೆಪ್ಪರ್ ಡ್ರೈ ತುಂಬಾ ಸುಲಭ ವಿಧಾನವಾಗಿದೆ. ನಿಮಗಾಗಿ ಚಿಕನ್ ಪೆಪ್ಪರ್ ಡ್ರೈ ಮಾಡುವ ವಿಧಾನ ಇಲ್ಲಿದೆ…

    ಬೇಕಾಗುವ ಸಾಮಾಗ್ರಿಗಳು:
    1. ಚಿಕನ್- ಅರ್ಧ ಕೆ.ಜಿ
    2. ಕಾಳು ಮೆಣಸಿನಪುಡಿ- 1 ಚಮಚ
    3. ಕೊತ್ತಂಬರಿ ಪುಡಿ- 2 ಚಮಚ
    4. ಉಪ್ಪು- ರುಚಿಗೆ ತಕ್ಕಷ್ಟು
    5. ಸ್ವಲ್ಪ ಕರಿಬೇವು
    6. ಸಾಸಿವೆ- ಒಗ್ಗರಣೆಗೆ
    7. ಅರಿಶಿಣ ಪುಡಿ
    8. ಅಡುಗೆ ಎಣ್ಣೆ
    9. ಈರುಳ್ಳಿ – 2
    10. ಹಸಿ ಮೆಣಸಿನಕಾಯಿ -3
    11. ಸ್ವಲ್ಲ ಬೆಳ್ಳುಳ್ಳಿ
    12. ಶುಂಠಿ ಪೇಸ್ಟ್ – ಅರ್ಧ ಚಮಚ
    13. ಜೀರಿಗೆ ಪುಡಿ – ಅರ್ಧ ಚಮಚ
    14. ಕಾನ್ ಫ್ಲವರ್ ಹಿಟ್ಟು

    ಮಾಡುವ ವಿಧಾನ:
    * ಮೊದಲು ಚಿಕನ್ ಚೆನ್ನಾಗಿ ತೊಳೆದು ಕಾನ್‍ಫ್ಲವರ್ ಹಿಟ್ಟಿನಲ್ಲಿ ಚಿಕನ್ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಕಾದ ಎಣ್ಣೆಯ ಬಾಣಲೆಯಲ್ಲಿ ಫ್ರೈ ಮಾಡಿಕೊಳ್ಳಬೇಕು.
    * ಕಾಳು ಮೆಣಸು, ಅರಿಶಿಣ ಹಾಗೂ ಜೀರಿಗೆಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ.
    * ನಂತರ ಪ್ಯಾನ್ ಬಿಸಿ ಮಾಡಿ ಅದಕ್ಕೆ ಎರಡು ಚಮಚ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ, ಕರಿಬೇವಿನ ಎಲೆ ಹಾಕಿ ಸ್ವಲ್ಪ ಫ್ರೈ ಮಾಡಿಕೊಳ್ಳಿ. ಬಳಿಕ ಈರುಳ್ಳಿ, ಹಸಿ ಮೆಣಸಿನ ಕಾಯಿ, ಬೆಳ್ಳುಳ್ಳಿ, ಶುಂಠಿ ಪೇಸ್ಟ್  ಹಾಕಿ ಕಂದು ಬಣ್ಣ ಬರುವರೆಗೂ ಫ್ರೈ ಮಾಡಿ.
    * ಕಾನ್‍ಫ್ಲವರ್ ನಲ್ಲಿ ಕೋಟ್ ಮಾಡಿಟ್ಟ ಚಿಕನ್ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಇತ್ತ ಮಿಶ್ರಣ ಮಾಡಿಕೊಂಡ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಫ್ರೈ ಮಾಡಿ.
    * ಸ್ವಲ್ಪ ನಿಂಬೆ ರಸ ಹಾಕಿ ಫ್ರೈ ಮಾಡಿದರೆ ಚಿಕನ್ ಪೆಪ್ಪರ್ ಡ್ರೈ ರೆಡಿ.

  • ಕಡಿಮೆ ಸಮಯದಲ್ಲಿ ಭಾಂಗ್ ಪೇಡ ಮಾಡುವ ವಿಧಾನ

    ಕಡಿಮೆ ಸಮಯದಲ್ಲಿ ಭಾಂಗ್ ಪೇಡ ಮಾಡುವ ವಿಧಾನ

    ಪೇಡ ಅಂದಾಕ್ಷಣ ನಮಗೆ ನೆನಪಾಗುವುದೇ ಧಾರವಾಡ ಪೇಡ. ಮನೆಯಲ್ಲಿ ಯಾವುದೇ ಹಬ್ಬ ಬರಲಿ, ಎಲ್ಲರ ಮನೆಯಲ್ಲಿ ಸಿಹಿ ಪದಾರ್ಥ ಮಾಡುತ್ತಾರೆ. ಪ್ರತಿ ಹಬ್ಬಕ್ಕೂ ಒಂದೇ ರೀತಿಯ ಸ್ವೀಟ್ ಮಾಡಿದರೆ ಮನೆಯರಿಗೂ ಇಷ್ಟವಾಗುವುದಿಲ್ಲ. ಅದರಲ್ಲೂ ಈಗ ದಸರಾ ಹಬ್ಬ ಬೇರೆ. ಹೀಗಾಗಿ ಕಡಿಮೆ ಸಮಯದಲ್ಲಿ ಭಾಂಗ್ ಪೇಡ ಮಾಡಬಹುದು. ಭಾಂಗ್ ಪೇಡದ ಸಿಹಿಯೊಂದಿಗೆ ನಿಮ್ಮ ಹಬ್ಬದ ಸಂತೋಷದ ಕ್ಷಣಗಳನ್ನು ಆನಂದಿಸಿ. ನಿಮಗಾಗಿ ಭಾಂಗ್ ಪೇಡ ಮಾಡುವ ವಿಧಾನ ಇಲ್ಲಿದೆ..

    ಬೇಕಾಗುವ ಪದಾರ್ಥಗಳು:
    1. ಭಾಂಗ್ ಪುಡಿ- 2 ಚಮಚ
    2. ಮವಾ ಪುಡಿ- 1 ಕಪ್
    3. ಸಕ್ಕರೆ- ಅರ್ಧ ಕಪ್
    4. ಪಿಸ್ತಾ- 2 ಚಮಚ
    5. ತುಪ್ಪ_ ಅರ್ಧ ಕಪ್

    ಮಾಡುವ ವಿಧಾನ:
    * ಒಂದು ಪಾತ್ರೆಯಲ್ಲಿ ತುಪ್ಪವನ್ನು ಬಿಸಿಮಾಡಿಕೊಂಡು ಮವಾ ಮತ್ತು ಸಕ್ಕರೆಯನ್ನು ಮಿಶ್ರಣ ಮಾಡಬೇಕು.
    * ಸಕ್ಕರೆ ಸಂಪೂರ್ಣ ಮಿಶ್ರಣವಾಗುವಂತೆ ನೆನೆಸಬೇಕು.
    * ಸಕ್ಕರೆಯ ಜೊತೆ ಭಾಂಗ್ ಪೌಡರ್ ಮತ್ತು ಪಿಸ್ತಾವನ್ನು ಮಿಶ್ರಣ ಮಾಡಿ ತಣ್ಣಗಾಗುವ ತನಕ ಬಿಡಬೇಕು.
    * ತಣ್ಣಗಾದ ನಂತರ ದುಂಡನೆ ಆಕಾರದಲ್ಲಿ ಪೇಡವನ್ನು ಸಿದ್ಧಪಡಿಸಿ ಸವಿಯಬಹುದು.

  • ಸಿಹಿಯಾದ ಮೈಸೂರ್ ಪಾಕ್ ಮಾಡೋ ಮೂಲಕ ದಸರಾ ಆರಂಭಿಸಿ

    ಸಿಹಿಯಾದ ಮೈಸೂರ್ ಪಾಕ್ ಮಾಡೋ ಮೂಲಕ ದಸರಾ ಆರಂಭಿಸಿ

    ಇಂದಿನಿಂದ ಹತ್ತು ದಿನಗಳ ಕಾಲ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಕ್ಷರಶಃ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಮನರಂಜನೆ ಪೂರಿತ ವಾತಾವರಣ ನಿರ್ಮಾಣವಾಗಲಿದೆ. ಇದಕ್ಕೆ ಕಾರಣ ಇಂದಿನಿಂದ ದಸರಾ ಮಹೋತ್ಸವ ಆರಂಭವಾಗಿದೆ. ದಸರಾ ಅಂದರೆ ನವರಾತ್ರಿ, ಒಂಬತ್ತು ದಿನ ನವದುರ್ಗೆಯರನ್ನು ಪೂಜಿಸಲಾಗುತ್ತದೆ. ಪ್ರತಿದಿನ ಮನೆಯಲ್ಲಿ ಸಿಹಿ ಮಾಡಬೇಕಾಗುತ್ತದೆ. ಹೀಗಾಗಿ ದಸರಾ ಹಬ್ಬಕ್ಕಾಗಿ ಮೈಸೂರು ಪಾಕ್ ಮಾಡುವ ಸುಲಭ ವಿಧಾನ ಇಲ್ಲಿದೆ….

    ಬೇಕಾಗುವ ಸಾಮಾಗ್ರಿಗಳು
    1. ಕಡಲೆ ಹಿಟ್ಟು – ಅರ್ಧ ಕೆಜಿ
    2. ತುಪ್ಪ – 1 ಬಟ್ಟಲು
    3. ಎಣ್ಣೆ – 1 ಬಟ್ಟಲು
    4. ಸಕ್ಕರೆ – ಮುಕ್ಕಾಲು ಕೆಜಿ
    5. ನೀರು – 1 ಲೋಟ

    ಮಾಡುವ ವಿಧಾನ
    * ಒಂದು ಪ್ಯಾನ್‍ಗೆ ತುಪ್ಪ ಮತ್ತು ಎಣ್ಣೆಯನ್ನು ಹಾಕಿ ಕುದಿಸಿಡಿ.
    * ಈಗ ಒಂದು ಪ್ಯಾನ್‍ಗೆ ಸಕ್ಕರೆ, 1 ಲೋಟ ನೀರು ಹಾಕಿ ಕುದಿಸಿ.
    * ಒಂದು ಎಳೆ ಪಾಕ ಬಂದ ಮೇಲೆ ಅದಕ್ಕೆ(ಪಾಕ) ಸ್ವಲ್ಪ ಸ್ವಲ್ಪವೇ ಕಡಲೆಹಿಟ್ಟನ್ನು ಹಾಕಿಕೊಳ್ಳುತ್ತಾ ಸೌಟಿನಿಂದ ತಿರುಗಿಸುತ್ತೀರಿ.
    * ಕಡಲೆಹಿಟ್ಟು ಗಂಟುಗಳಿಲ್ಲದಂತೆ ಸಂಪೂರ್ಣವಾಗಿ ಸಕ್ಕರೆ ಪಾಕದೊಂದಿಗೆ ಮಿಕ್ಸ್ ಮಾಡಿ.
    * ಈಗ ಸ್ವಲ್ಪ ಸ್ವಲ್ಪವೇ ತುಪ್ಪ ಮತ್ತು ಎಣ್ಣೆ ಮಿಕ್ಸ್ ಅನ್ನು ಸೇರಿಸಿ ಕೈಯಾಡಿಸುತ್ತಿರಿ.
    * ಕಡಲೆಹಿಟ್ಟು ಈಗ ತುಪ್ಪ ಮತ್ತು ಎಣ್ಣೆಯನ್ನು ಹೀರಿಕೊಂಡು ಗಟ್ಟಿಯಾಗುತ್ತಾ ಬರುತ್ತದೆ.
    * ನಂತರ ತುಪ್ಪ ಸವರಿದ ಟ್ರೇಗೆ ಬಿಸಿ ಇರುವಾಗಲೇ ಕಡಲೆಹಿಟ್ಟು ಗಟ್ಟಿಯನ್ನು ಹಾಕಿ ಬೇಕಾದ ಶೇಪ್‍ಗೆ ಕತ್ತರಿಸಿ.
    * ಬಿಸಿ ಆರಿದ ಮೇಲೆ ಸ್ಲೈಸ್ ಗಳನ್ನು ಟ್ರೇನಿಂದ ಸಪರೇಟ್ ಮಾಡಿ ಸವಿಯಿರಿ..

  • ಬ್ಯಾಚುಲರ್ಸ್ ಕೂಡ ಮಾಡಬಹುದಾದ ಸಿಂಪಲ್ ರವೆ ದೋಸೆ

    ಬ್ಯಾಚುಲರ್ಸ್ ಕೂಡ ಮಾಡಬಹುದಾದ ಸಿಂಪಲ್ ರವೆ ದೋಸೆ

    ಬ್ಯಾಚುಲರ್ಸ್ ಇದ್ದರೆ ಅವರಿಗೆ ತಿಂಡಿ, ಅಡುಗೆ ಮಾಡುವುದು ತುಂಬಾ ಕಷ್ಟ. ಹೀಗಾಗಿ ಅವರು ಸಿಂಪಲ್ ಆಗಿ ಬರುವ ಅಡುಗೆ ಮಾಡಿಕೊಂಡು ತಿನ್ನುತ್ತಾರೆ. ಆದರೆ ಪ್ರತಿದಿನ ಅದೇ ತಿಂಡಿ ತಿನ್ನಲು ಬೇಸರವಾಗುತ್ತದೆ. ಬೇರೆ ಏನಾದರೂ ಸುಲಭವಾಗಿ ಅಡುಗೆ ಮಾಡೋಣ ಎಂದರೆ ಏನು ಮಾಡುವುದು ಎಂದು ತಿಳಿದಿರುವುದಿಲ್ಲ. ಹೀಗಾಗಿ ಕೆಲವೇ ಸಾಮಾಗ್ರಿಗಳಲ್ಲಿ ದಿಡೀರ್ ಆಗಿ ರವೆ ದೋಸೆ ಮಾಡುವ ವಿಧಾನ ಇಲ್ಲಿದೆ….

    ಬೇಕಾಗುವ ಸಾಮಾಗ್ರಿಗಳು
    1. ರವೆ – 1 ಕಪ್
    2. ಗಟ್ಟಿ ಮೊಸರು – 1/2 ಕಪ್
    3. ಜೀರಿಗೆ – 2 ಚಮಚ
    4. ಉಪ್ಪು – ರುಚಿಗೆ ತಕ್ಕಷ್ಟು
    5. ಎಣ್ಣೆ

    ಮಾಡುವ ವಿಧಾನ
    * ಒಂದು ಮಿಕ್ಸಿಂಗ್ ಬೌಲ್‍ಗೆ ರವೆ, ಜೀರಿಗೆ, ಗಟ್ಟಿ ಮೊಸರು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ನೀರು ದೋಸೆ ಹಿಟ್ಟಿನ ಹದಕ್ಕೆ ಮಿಕ್ಸ್ ಮಾಡಿ.
    * ಅರ್ಧ ಗಂಟೆಗಳ ಕಾಲ ನೆನೆಯಲು ಬಿಡಿ.
    * ಈಗ ದೋಸೆ ತವಾಗೆ ಮೇಲೆ ನೀರು ದೋಸೆ ಮಾಡುವ ರೀತಿ ದೋಸೆ ಉಯ್ದು ಎಣ್ಣೆ ಚುಮುಕಿಸಿ. ಲಿಡ್ ಮುಚ್ಚಿ.
    * 2 ನಿಮಿಷ ಚೆನ್ನಾಗಿ ಎರಡು ಬದಿ ಬೇಯಿಸಿದರೆ ಸಿಂಪಲ್ ರವೆ ದೋಸೆ ಸವಿಯಲು ಸಿದ್ಧ.

  • ಮತ್ತೆ ಮತ್ತೆ ತಿನ್ನಬೇಕೆನಿಸುವ ಮಟನ್ ಮಸಾಲ ಚಾಪ್ಸ್

    ಮತ್ತೆ ಮತ್ತೆ ತಿನ್ನಬೇಕೆನಿಸುವ ಮಟನ್ ಮಸಾಲ ಚಾಪ್ಸ್

    ನಾನ್ ವೆಜ್ ಪ್ರಿಯರಿಗೆ ಸಾಮಾನ್ಯವಾಗಿ ಮಾಂಸದ ಅಡುಗೆ ಅಂದರೆ ಇಷ್ಟಾನೆ ಆಗುತ್ತದೆ. ಭಾನುವಾರ ಬಂತು ಅಂದರೆ ಸಾಕು ಏನಾದರೂ ಸ್ಪೆಷಲ್ ಮಾಡಬೇಕು ಅಂದುಕೊಳ್ಳುತ್ತಾರೆ. ಆದ್ದರಿಂದ ಅತ್ಯಂತ ಸುಲಭವಾಗಿ ಮಟನ್ ಮಸಾಲ ಚಾಪ್ಸ್ ಮಾಡುವ ವಿಧಾನ ಇಲ್ಲಿದೆ…

    ಬೇಕಾಗುವ ಸಾಮಾಗ್ರಿಗಳು
    1. ಮಟನ್ ಚಾಪ್ಸ್ – 750 ಗ್ರಾಂ (ಕತ್ತರಿಸಿಕೊಳ್ಳಬೇಕು)
    2. ಈರುಳ್ಳಿ – 2
    3. ಟಮೋಟೊ -2
    4. ಅಡುಗೆ ಎಣ್ಣೆ
    5. ಗಟ್ಟಿ ಮೊಸರು – ಅರ್ಧ ಚಮಚ
    6. ಮೆಣಸಿನ ಪುಡಿ – 1 ಚಮಚ
    7. ಪೆಪ್ಪರ್ – ಅರ್ಧ ಚಮಚ
    8. ದನಿಯ ಪುಡಿ – 1 ಚಮಚ
    9. ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 2 ಚಮಚ
    10. ಅರಿಶಿಣ ಪುಡಿ – ಅರ್ಧ ಚಮಚ
    11. ಜೀರಿಗೆ ಪುಡಿ -ಅರ್ಧ ಚಮಚ
    12. ಕೊತ್ತಂಬರಿ ಸೊಪ್ಪು -ಸ್ವಲ್ಪ
    13. ಉಪ್ಪು -ರುಚಿಗೆ ತಕ್ಕಷ್ಟು

    ಮಾಡುವ ವಿಧಾನ
    * ಮೊದಲಿಗೆ ಮಟನ್ ಚಾಪ್ಸ್ ಅನ್ನು ಚೆನ್ನಾಗಿ ತೊಳೆದುಕೊಂಡು ಇಟ್ಟುಕೊಳ್ಳಿ.
    * ಒಂದು ಮಿಕ್ಸಿ ಜಾರಿಗೆ ಟೊಮೆಟೋ, ಈರುಳ್ಳಿ, ಬೆಳ್ಳುಳ್ಳಿ, ಮೆಣಸಿನ ಪುಡಿ, ಜೀರಿಗೆ ಪುಡಿ, ಪೆಪ್ಪರ್ ಪುಡಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
    * ಈಗ ಒಂದು ಕುಕ್ಕರ್‌ಗೆ ಮಟನ್ ಚಾಪ್ಸ್, ಅರಿಶಿಣ ಪುಡಿ, ಸ್ವಲ್ಪ ಹಾಕಿ ಚೆನ್ನಾಗಿ ಕಂದು ಬಣ್ಣ ಬರುವವರೆಗೂ ಬೇಯಿಸಿಕೊಳ್ಳಿ. ಬೇಯಿಸಿಕೊಂಡ ಬಳಿಕ ಅದಕ್ಕೆ ಕೊತ್ತಂಬರಿ ಸೊಪ್ಪು ಹಾಕಿ ಎರಡು ನಿಮಿಷ ಬೇಯಿಸಿ ಕೆಳಗಿಳಿಸಿ.
    * ಬಳಿಕ ಒಂದು ಪ್ಯಾನ್‍ಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿಯಾದ ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಮೊಸರು ಹಾಕಿ 1 ನಿಮಿಷ ಫ್ರೈ ಮಾಡಿಕೊಳ್ಳಿ.
    * ನಂತರ ಈಗಾಗಲೇ ರಬ್ಬಿಕೊಳ್ಳಲಾದ ಮಾಸಾಲ, ದನಿಯ ಪುಡಿ ಹಾಕಿ 10 ನಿಮಿಷ ಚೆನ್ನಾಗಿ ಫ್ರೈ ಮಾಡಿ.
    * ಈತ ಬೇಯಿಸಿಕೊಂಡಿರುವ ಮಟನ್ ಚಾಪ್ಸ್, ರುಚಿಗೆ ತಕ್ಕಷ್ಟು ಉಪ್ಪು ಹಾಕಿ, 5 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿದರೆ ಮಾಸಾಲಾ ಮಟನ್ ಚಾಪ್ಸ್ ಸವಿಯಲು ರೆಡಿ.

  • ಗಣೇಶನಿಗೆ ಪ್ರಿಯವಾದ ಮೋದಕ ಮಾಡುವ ವಿಧಾನ

    ಗಣೇಶನಿಗೆ ಪ್ರಿಯವಾದ ಮೋದಕ ಮಾಡುವ ವಿಧಾನ

    ಗಣಪನಿಗೆ ಇಷ್ಟವಾಗುವ ತಿಂಡಿಗಳಲ್ಲಿ ಮೋದಕವೂ ಒಂದು. ಗಣೇಶನನ್ನು ಮೋದಕ ಪ್ರಿಯ ಎಂದು ಕೂಡ ಕರೆಯುತ್ತಾರೆ. ಆದ್ದರಿಂದ ನಿಮಗಾಗಿ ಗಣಪನಿಗೆ ಪ್ರಿಯವಾದ ಮೋದಕ ಸಿಹಿ ಮಾಡುವ ವಿಧಾನ ಇಲ್ಲಿದೆ…

    ಬೇಕಾಗುವ ಸಾಮಾಗ್ರಿಗಳು
    1. ಮೈದಾ ಹಿಟ್ಟು – 1 ಕಪ್
    2. ಚಿರೋಟಿ ರವೆ – 1/4 ಕಪ್
    3. ಉಪ್ಪು – ಚಿಟಿಕೆ
    4. ಬೆಲ್ಲ – 1 ಅಚ್ಚು
    5. ಕೊಬ್ಬರಿ ತುರಿ – 1 ಕಪ್
    6. ಏಲಕ್ಕಿ ಪುಡಿ
    7. ಗಸಗಸೆ – 1 ಚಮಚ
    8. ಎಳ್ಳು -ಸ್ವಲ್ಪ
    9. ಗೋಡಂಬಿ, ಬಾದಾಮಿ – 3-4 ಚಮಚ
    1. ಎಣ್ಣೆ – ಕರಿಯಲು

    ಮಾಡುವ ವಿಧಾನ
    * ಮೊದಲಿಗೆ ಒಂದು ಬೌಲ್‍ಗೆ ಚಿರೋಟಿ ರವೆ, ಮೈದಾ ಹಿಟ್ಟು, ಉಪ್ಪು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಂಡು ತಟ್ಟೆ ಮುಚ್ಚಿಡಿ.
    * ನಂತರ ಒಂದು ಪ್ಯಾನ್ ಅನ್ನು ಒಲೆಯ ಮೇಲಿಟ್ಟು ಅದಕ್ಕೆ ಸೋಸಿಕೊಂಡ ಬೆಲ್ಲದ ನೀರು, ಕೊಬ್ಬರಿ ತುರಿಯನ್ನು ಹಾಕಿ ಫ್ರೈ ಮಾಡಿರಿ.
    * ಊರ್ಣ ಸ್ವಲ್ಪ ಗಟ್ಟಿಯಾದಂತೆ ಅದಕ್ಕೆ ಏಲಕ್ಕಿ ಪುಡಿ, ಹುರಿದ ಗಸಗಸೆ, ಪುಡಿ ಮಾಡಿದ ಎಳ್ಳು, ಹುರಿದು ಸಣ್ಣಗೆ ಹೆಚ್ಚಿದ ಗೋಡಂಬಿ, ಬಾದಾಮಿಯನ್ನು ಸೇರಿಸಿ ಮಿಕ್ಸ್ ಮಾಡಿರಿ, ತಣ್ಣಗಾಗಲು ಬಿಡಿ.
    * ಈಗ ಹಿಟ್ಟನ್ನು ತೆಗೆದುಕೊಂಡು ಪೂರಿ ಆಕಾರಕ್ಕಿಂತ ಸ್ವಲ್ಪ ಕಡಿಮೆ ಲಟ್ಟಿಸಿ ಅದರೊಳಗೆ 1/2 ಚಮಚ ಊರ್ಣ ಸೇರಿಸಿ ಮಧ್ಯಕ್ಕೆ ಮಡಚಿ
    * ಮೋದಕ ರೀತಿಯಲ್ಲಿ ಅಂದರೆ ಬೆಳ್ಳುಳ್ಳಿ ಆಕಾರದಲ್ಲಿ ಮಡಚಿ. ಊರ್ಣ ಆಚೆ ಬಾರದಂತೆ ನೋಡಿಕೊಳ್ಳಿ.
    * ಈಗ ಮಾಡಿಟ್ಟುಕೊಂಡ ಹಲವು ಮೋದಕಗಳನ್ನು ಕಾದ ಎಣ್ಣೆಯಲ್ಲಿ ಹಾಕಿ ಕರಿಯಿರಿ.
    ( ಡ್ರೈಫ್ರೂಟ್ಸ್, ಎಳ್ಳು ಬೇಕಿದ್ದಲ್ಲಿ ಮಾತ್ರ ಬಳಸಬಹುದು ಅದಕ್ಕೆ ಬದಲಾಗಿ ಹುರಿಗಡಲೆ ಪುಡಿ ಬಳಸಬಹುದು)