Tag: Controversial Statements

  • ಪುಲ್ವಾಮಾ ದಾಳಿ ಬಿಜೆಪಿಯ ಕೃಪಾ ಪೋಷಿತ ನಾಟಕ: ಪರಮೇಶ್ವರ್ ನಾಯ್ಕ್

    ಪುಲ್ವಾಮಾ ದಾಳಿ ಬಿಜೆಪಿಯ ಕೃಪಾ ಪೋಷಿತ ನಾಟಕ: ಪರಮೇಶ್ವರ್ ನಾಯ್ಕ್

    ಬಳ್ಳಾರಿ: ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿ ಬಿಜೆಪಿಯ ಕುತಂತ್ರ. 4 ವರ್ಷ 9 ತಿಂಗಳ ಇಲ್ಲದ ದಾಳಿ ಇದೀಗ ಏಕಾಏಕಿ ನಡೆದಿದೆ. ಇದೆಲ್ಲಾ ಬಿಜೆಪಿ ನಾಟಕ ಎಂದು ಸಚಿವ ಪರಮೇಶ್ವರ್ ನಾಯ್ಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಸಚಿವರು, ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಕುಸಿದಿದೆ. ಇತ್ತೀಚೆಗೆ ನಡೆದ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಢ, ತೆಲಂಗಾಣ ಹಾಗೂ ಮಿಜೋರಾಂ ಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗವಾಗಿತ್ತು. ಹೀಗಾಗಿ ಪುಲ್ವಾಮಾ ದಾಳಿ ನಾಟಕ ನಡೆಯಿತು ಎಂದು ಆರೋಪಿಸಿದರು.

    ಪುಲ್ವಾಮಾ ದಾಳಿಯು ಬಿಜೆಪಿಯ ಕೃಪಾ ಪೋಷಿತ ನಾಟಕವಾಗಿದೆ. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ನಾಟಕವನ್ನು ಜನರ ಮುಂದೆ ತೆರೆದಿಡುವ ಕೆಲಸ ಮಾಡುತ್ತೇವೆ. ಹೀಗಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಪ್ರಧಾನಿಯಾಗಿಸಲು ನಾವೆಲ್ಲರೂ ಶ್ರಮಿಸಬೇಕಿದೆ ಎಂದರು.

    ಭಾರತೀಯ ವಾಯು ಪಡೆಯ ಪೈಲಟ್ ಅಭಿನಂದನ್ ಅವರನ್ನು ಪಾಕಿಸ್ತಾನ ಬಂಧನದಿಂದ ಬಿಡಿಸಿಕೊಂಡು ಬಂದಿದದ್ದನ್ನು ಸ್ವಾಗತಿಸುತ್ತೇನೆ. ಆದರೆ ಸುಮಾರು ವರ್ಷಗಳಿಂದ ಪಾಕಿಸ್ತಾನದ ಬಂಧನದಲ್ಲಿರುವ ಕುಲಭೂಷಣ್ ಜಾಧವ್ ಅವರನ್ನು ಯಾಕೆ ಬಿಡಿಸಿಕೊಂಡು ಬಂದಿಲ್ಲ ಎಂದು ಪ್ರಧಾನಿ ನರೇಂದ್ರ ಅವರನ್ನು ಪ್ರಶ್ನಿಸಿದರು.

    ಬಿಜೆಪಿಯ ನಾಯಕರು 2014ರ ಲೋಕಸಭಾ ಚುನಾವಣೆಯಲ್ಲಿ ಅನೇಕ ಭರಸೆಗಳನ್ನು ನೀಡಿದ್ದರು. ಕಾಂಗ್ರೆಸ್ ನಾಯಕರು ಸ್ವೀಸ್ ಬ್ಯಾಂಕ್‍ನಲ್ಲಿ ಹಣ ಇಟ್ಟಿದ್ದಾರೆ. ಆ ಕಪ್ಪು ಹಣವನ್ನು ಭಾರತಕ್ಕೆ ವಾಪಾಸ್ ತರುತ್ತೇವೆ. ಸಾರ್ವಜನಿಕರ ಖಾತೆಗೆ ಹಣ ಹಾಕುವ ಭರವಸೆ ನೀಡಿದ್ದರು. ಆದರೆ ಯಾರಿಗೂ ಒಂದು ರೂಪಾಯಿ ಕೂಡ ಹಾಕಲಿಲ್ಲ ಎಂದು ವಾಗ್ದಾಳಿ ನಡೆಸಿದರು.

    ದೇಶದಲ್ಲಿ ಉದ್ಯೋಗ ಸೃಷ್ಟಿ, ಮಹಿಳೆಯರು ಹಾಗೂ ರೈತರ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡಲಿಲ್ಲ. ಬರಗಾಲ ಎದುರಿಸುತ್ತಿದ್ದ ಜಿಲ್ಲೆಗಳಿಗೆ ಪ್ರಧಾನಿ ಮೋದಿ ಭೇಟಿ ನೀಡಲಿಲ್ಲ. ರೈತರ ಸಮಸ್ಯೆ ಕೇಳಲಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಸಹಕಾರಿ ಸಂಘಗಳ ರೈತರ ಸಾಲವನ್ನು ಮನ್ನಾ ಮಾಡಿದೆ. ಅಷ್ಟೇ ಅಲ್ಲದೆ ಸಿಎಂ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರವು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿರುವ ರೈತರ ಸಾಲಮನ್ನಾ ಮಾಡುತ್ತಿದೆ ಎಂದರು.